ಕುವೆಂಪು ಅವರು ಮಲೆನಾಡಿನ ಆವರಣವನ್ನು ಬಿಟ್ಟು ಮೈಸೂರಿಗೆ ಬಂದು ವೆಸ್ಲಿಯನ್‌ಮಿಷನ್‌ಹೈಸ್ಕೂಲಿಗೆ ಸೇರಿದ್ದು ೧೯೧೮ನೆಯ ಇಸವಿಯಲ್ಲಿ, ಎಂದರೆ ಅವರಿಗೆ ಸುಮಾರು ೧೪ ವರ್ಷ ವಯಸ್ಸಾಗಿದ್ದಾಗ. ಅಲ್ಲಿಯವರೆಗೆ ಅವರು ಓದಿದ್ದೆಲ್ಲ ಕನ್ನಡ, ನೋಡಿದ್ದೆಲ್ಲ ಮಲೆ, ಕಾನು, ಬಾನು, ತೊರೆ, ಅನಂತರ ಬಹುಬೇಗನೆ ಇಂಗ್ಲಿಷ್‌ಕವಿಗಳನ್ನು ಓದಬಲ್ಲವರಾದರು. ಅಷ್ಟೇ ಅಲ್ಲ ೧೯೨೨ರಲ್ಲಿ ಎಂದರೆ ನಾಲ್ಕೇ ವರ್ಷಗಳಲ್ಲಿ ಇಂಗ್ಲಿಷನಲ್ಲಿ ಸ್ವತಂತ್ರವಾದ ಕವನಗಳನ್ನು ರಚಿಸುವ ಶಕ್ತಿ ಪಡೆದರು. ಅವರ ಮೊಟ್ಟ ಮೊದಲ ಪುಸ್ತಕ – “The Beginner’s Muse”-ಇಂಗ್ಲಿಷ್‌ಕವನಗಳ ಸಂಕಲನ ಪ್ರಕಟವಾದದ್ದು ೧೯೨೨ರಲ್ಲಿ. ಈ ನಾಲ್ಕು ವರ್ಷಗಳಲ್ಲಿ ಅವರು ಅನೇಕ ಇಂಗ್ಲಿಷ್‌ಲೇಖಕರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಇಂಗ್ಲಿಷ್‌ಭಾಷೆಯ ಮೇಲೆ ಒಳ್ಳೆಯ ಪ್ರಭುತ್ವವನ್ನು ಅವರು ಗಳಿಸಿಕೊಂಡರು.

ಇಷ್ಟೇ ಇಷ್ಟು ಮಾಹಿತಿಯಿಂದ ಕುವೆಂಪು ಇಂಗ್ಲಿಷ್‌ಕವಿಗಳಿಂದ ಪ್ರಭಾವಿತರಾದವರು, ಅವರ ಕವನಗಳು, ಅಷ್ಟೇಕೆ ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯದ ಬಹುಪಾಲು ಪಂಕ್ತಿಗಳು ಇಂಗ್ಲಿಷ್‌ಕವಿಗಳ ಕೃತಿಗಳ ಅನುವಾದಗಳು ಅಥವಾ ರೂಪಾಂತರಗಳು ಎಂಬ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ. ಅಂಥ ಅಭಿಪ್ರಾಯಗಳು ಬರಹದಲ್ಲಿಯೂ ಅದಕ್ಕಿಂತ ಹೆಚ್ಚಾಗಿ ಬಾಯಿ ಮಾತಿನಲ್ಲಿಯೂ ಪ್ರಚಾರದಲ್ಲಿದೆ, ಆ ಎಲ್ಲ ಅಭಿಪ್ರಾಯಗಳೂ ಚರ್ಚೆಗೆ ಯೋಗ್ಯವಾದುದಲ್ಲ. ಸೃಜನಶೀಲನಾದ ಒಬ್ಬ ಲೇಖಕನು ತನ್ನ ಕೃತಿಯ ಕೃತಿಗಳ ವಸ್ತುವಿನ ಅಂಶಕ್ಕೆ ಇತರರಿಗೆ ಎಷ್ಟರಮಟ್ಟಿಗೆ ಋಣಿಯಾಗಿದ್ದಾನೆ, ಅವನ ಕಾವ್ಯ ಕ್ರಿಯೆಯಲ್ಲಿ ಹೊರಗಿನಿಂದ ಬಂದ ಪ್ರಭಾವಗಳು ಯಾವುವು ಮತ್ತು ಎಷ್ಟು ರೂಪಾಂಶಗಳು ಅವನ ಸೃಷ್ಟಿಯೇ ಅಥವಾ ಅವುಗಳನ್ನು ಇತರರಿಂದ ಪಡೆದಿದ್ದಾನೆಯೇ ಎಂಬುವು ವಿಚಾರಕ್ಕೆ ಅರ್ಹವಾದ ವಿಷಯಗಳು.

ಅವರ ಕವನಗಳ ರೂಪಾಂಶಗಳು, ಶ್ರೀರಾಮಾಯಣ ದರ್ಶನಂ ಕಾವ್ಯದ ಮಹಾಛಂದಸ್ಸು, ಸಣ್ಣಕಥೆ, ಪ್ರಬಂಧ ಮತ್ತು ಮಹಾಕಾದಂಬರಿಯ ರೂಪಾಂಶಗಳು,-ಎಲ್ಲವೂ ಪಶ್ಚಿಮದಿಂದ ಬಂದವು. ಆದರೆ ಅವುಗಳಲ್ಲಿ ಅತ್ಯಲ್ಪ ಭಾಗವನ್ನುಳಿದರೆ ಉಳಿದೆಲ್ಲ ಕುವೆಂಪುರವರ ಶೈಶವ ಬಾಲ್ಯಗಳ ಅನುಭವಗಳನ್ನು ವಸ್ತುವಾಗುಳ್ಳವು, ಅವರ ಪ್ರತಿಭಾ ಸೃಷ್ಟಿಯ ಪರಿಣಾಮಗಳು ಎಂದು ನಿರ್ಮಿವಾದವಾಗಿ ಸಾಧಿಸಿ ತೋರಿಸಬಹುದಾದವು.

ಪುನರುಕ್ತಿಯಾದರೂ ಚಿಂತೆಯಿಲ್ಲ, ಪ್ರಕೃತಕ್ಕೆ ಅತ್ಯಗತ್ಯವಾಗಿರುವುದರಿಂದ ಒತ್ತಿ ಹೇಳಬೇಕಾದ ಒಂದು ಅಂಶವುಂಟು. ಕುವೆಂಪು ತಮ್ಮ ಶೈಶವ ಬಾಲ್ಯಗಳನ್ನು ಮಲೆನಾಡಿನ ಮಲೆ, ನದಿ, ಕಾಡುಗಳ ನಡುವೆ ಕಳೆದವರು. ಅವರು ಪಶ್ಚಿಮದ ಕಾವ್ಯ ಜಗತ್ತನ್ನು ಪ್ರವೇಶಿಸಿದ್ದು ಆಮೇಲೆ ಎಷ್ಟೋ ವರ್ಷಗಳ ಮೇಲೆ. ಈಗ ಮುಖ್ಯವಾದ ಒಂದು ಪ್ರಶ್ನೆ ಎಂದರೆ ಕುವೆಂಪು ಪಶ್ಚಿಮದ, ಅದರಲ್ಲೂ ಇಂಗ್ಲೆಂಡಿನ ಕವಿಗಳನ್ನು ಓದಿದ ಮೇಲೆ ಕವಿಯಾದರೋ ಅಥವಾ ಅದಕ್ಕೂ ಮುಂಚೆಯೇ ಅವರಲ್ಲಿ ಕವಿ ಪ್ರತಿಭೆ ಮನೆ ಮಾಡಿತ್ತೋ ಎಂಬುದು. ಅದರೊಡನೆ ಹೆಣೆದುಕೊಂಡೇ ಇರುವ ಇನ್ನೊಂದು ಪ್ರಶ್ನೆ : ಕುವೆಂಪು ಮಲೆ ಬನ ಬಾನು ನೇಸರು ತಿಂಗಳು ಮಲೆಯ ಜನ-ಮನಗಳನ್ನು ಒಲಿದಿದದು, ಅವರ ಒಲವು ಆರಾಧನೆಯ ಮಟ್ಟಕ್ಕೆ ಏರಿದ್ದು, ಅವರು ಪಶ್ಚಿಮದ ಕವಿಗಳನ್ನು ಓದಿದ ಮೇಲೆಯೋ ಅಥವಾ ಅದಕ್ಕೂ ಮುಂಚೆಯೋ?

ಮೇಲಿನ ಎರಡೂ ಪ್ರಶ್ನೆಗಳಿಗೆ ಉತ್ತರಗಳು ಎರಡು ಮೂಲಗಳಲ್ಲಿ ದೊರಕುತ್ತವೆ. ಮೊದಲನೆಯ ಮೂಲ ಕವಿಯ ಮಾತುಗಳು. ಕವಿಯ ಮಾತುಗಳನ್ನು ನಂಬಬಹುದಾದರೆ ಅವರು ನೆನಪು ಮಾಡಿಕೊಳ್ಳಬಹುದಾದಷ್ಟು ಹಿಂದಿನ ಬಾಲ್ಯದಿಂದಲೂ ಅವರಿಗೆ ಪ್ರಕೃತಿಯ ಬಗೆಗೆ ಹುಚ್ಚು ಎನ್ನುವಷ್ಟರ ಮಟ್ಟಿಗೆ ಪ್ರೀತಿ. ಪ್ರಕೃತಿಯ ವಿವಿಧ ದಲಿತ-ರುದ್ರಮುಖಗಳನ್ನು ಅವರು ಬಾಲ್ಯದಿಂದಲೂ ಆಸ್ಥೆಯಿಂದ ಕಂಡವರು. ಆ ಎಲ್ಲ ಅನುಭವಗಳೂ ಅವರ ಪ್ರಜ್ಞೆಯಲ್ಲಿ ಸಂಚಿತವಾಗಿ ಉಳಿದು ಜೀವಮಾನ ಪರ್ಯಂತ ಅವರಿಗೆ ಕೃತಿ ರಚನೆಗೆ ಮೂಲ ಸಾಮಗ್ರಿಯನ್ನೂ ನೇರವಾಗಿ ಸ್ಮೃತಿಯ ನೆರವಿನಿಂದ ಪಡೆಯಬಹುದಾದ ರಸಾನುಭೂತಿಯನ್ನೂ ನೀಡಿದುವು.

ನಮಗೆ ಬೇಕಾಗಿರುವ ವಿವರಣೆಗಳಿಗೆ ಎರಡನೆಯ ಮೂಲ ಒಂದು ಜಿಜ್ಞಾಸೆ. ಅದು : ಕವಿಯ ಕಾವ್ಯ ಕ್ರಿಯೆಗೆ ಅವಶ್ಯಕವಾದ ಅನುಭವದ ಸಂಚಯ ನಡೆಯುವುದು ಬಾಲ್ಯದಲ್ಲಿಯೆ ಅಥವಾ ಬಾಲ್ಯಾವಸ್ಥೆ ಕಳೆದ ಮೇಲೂ ಹೌದೆ? ಕವಿಯು ತಾರುಣ್ಯವನ್ನೋ ಅದರ ಅನಂತರದ ಅವಸ್ಥೆಯನ್ನೋ ಮುಟ್ಟಿದ ಮೇಲೆ ತಾನು ಓದಿದ ಕಾವ್ಯಗಳ ಸ್ಫೂರ್ತಿಯಿಂದ ತನ್ನ ಬಾಲ್ಯದ ಪರಿಸರವನ್ನು ಮತ್ತೆ ನೆನಪಿಸಿಕೊಂಡು ಅದನ್ನು ಕಾವ್ಯಭಾಷೆಯಲ್ಲಿ ವ್ಯಾಖ್ಯಾನಿಸುವುದು ಸಾಧ್ಯವೆ ಎಂಬುದು ಇಂಥ ಜಿಜ್ಞಾಸೆಯಲ್ಲಿ ಪ್ರಾಣಪ್ರಾಯವಾದ ಪ್ರಶ್ನೆಯಾಗುತ್ತದೆ. ನಮ್ಮ ಪ್ರಶ್ನೆಯನ್ನು ಬೇರೆ ಮಾತುಗಳಲ್ಲಿ ಹೀಗೆ ರೂಪಿಸಬಹುದು : ಕುವೆಂಪು, ಷೆಲ್ಲಿ, ವರ್ಡ್ಸ್‌ವರ್ತ್‌, ಕಿಟ್ಸ್‌ಮುಂತಾದ ರೊಮಾಂಟಿಕರೆಂದು ಕರೆಯುಲ್ಪಡುವ ಕವಿಗಳನ್ನು ಅಧ್ಯಯನ ಮಾಡಿದ ಮೇಲೆ ತಮ್ಮ ಬಾಲ್ಯದ ಅನುಭವಗಳನ್ನು ನೆನಪುಮಾಡಿಕೊಂಡು ಆ ಅನುಭವಗಳಿಗೆ ಪ್ರಕೃತಿ ಪ್ರೇಮದ ಬಣ್ಣವನ್ನು ಬಳಿದರೋ?

ಶೈಶವ ಬಾಲ್ಯ ತಾರುಣ್ಯಗಳ ಅನುಭವಗಳನ್ನು ಸೃಜನಶೀಲ ಮನಸ್ಸು ಕೊನೆಯವರೆಗೂ ಬಳಸಿಕೊಳ್ಳುತ್ತದೆ ಎಂಬುದು ತರ್ಕಬದ್ಧವಾದ ವಿಶ್ಲೇಷಣೆಯಾಗುತ್ತದೆ. ಬದಲಿಗೆ ಅನಂತರದ ಓದು ಚಿತ್ರಿಸಿದ ವರ್ಣನೆಗಳಿಗೆ ಸಮಾನವಾದ ವರ್ಣನೆಗಳನ್ನು, ಬಾಲ್ಯ ಶೈಶವಗಳನ್ನು ಅವುಗಳಿಗೆ ಸದೃಶವಾದ ಅನುಭವಗಳನ್ನು ಪಡೆಯದಿದ್ದರೂ, ಕೃತಿರಚನೆಗೋಸ್ಕರವಾಗಿಯೇ ಒತ್ತಿ ತರುವುದು ಸಾಧ್ಯ ಎಂಬುದನ್ನು ತರ್ಕವು ಒಪ್ಪುವುದಿಲ್ಲ. ಅಂಥ ಸಾಧ್ಯತೆ ಸಂಪೂರ್ಣವಾಗಿ ಇಲ್ಲ ಎಂದೂ ಹೇಳುವಂತಿಲ್ಲ. ಮನಶಾಸ್ತ್ರವು ಈ ದಿಕ್ಕಿನಲ್ಲಿ ನಡೆಸಿರುವ ಸಂಶೋಧನೆಯ ಫಲವಾಗಿ ತಿಳಿದುಬಂದಿರುವ ಅಂಶವೊಂದಿದೆ. ಹೊಸದಾಗಿ ಆದ ಅನುಭವವೊಂದು ತನಗೆ ಮುಂಚೆ ಯಾವಾಗಲೋ ಆದದ್ದು ಎಂದು ಭ್ರಮಿಸುವ ಪ್ರಸಂಗಗಳು ಅನೇಕ. ಉದಾಹರಣೆಗೆ ಯಾವುದಾದರೂ ಒಂದು ಊರನ್ನು ಪ್ರಥಮ ಬಾರಿಗೆ ನೋಡುತ್ತಿರುವವನು ಅದನ್ನು ತಾನು ಹಿಂದೆ ಎಲ್ಲಿಯೋ ಯಾವಾಗಲೋ ನೋಡಿದ್ದೇನೆ ಎಂದುಕೊಳ್ಳುತ್ತಾನೆ. ಹೊಸದಾಗಿ ಆಗುತ್ತಿರುವ ಒಂದು ಅನುಭವಕ್ಕೆ ‘ಹಿಂದಿನ ತನ’ವನ್ನೋ ಪೂರ್ವ ಪರಿಚಯವನ್ನೋ ಆರೋಪಿಸುವ ನಮ್ಮ ಮನಸ್ಸಿನ ಈ ಕ್ರಿಯೆಯನ್ನು ‘ದೇಜ-ವು’ ಎಂದು ಕರೆದಿದ್ದಾರೆ. ಮೆದುಳಿನ ಒಂದು ವಲಯದಲ್ಲಿ ಯಾವುದಾದರೂ ಕೋಶಗಳು ಹಾನಿಗೊಂಡಿದ್ದರಿಂದ ಒಂದು ವಲಯದಿಂದ ಮತ್ತೊಂದು ವಲಯಕ್ಕೆ ವರ್ತಮಾನವು ವರ್ಗಾಯಿಸಲ್ಪಡುವುದರಲ್ಲಿ ಸ್ವಲ್ಪ ವಿಳಂಬವಾಗಬಹುದು. ನಮ್ಮ ಮನಸ್ಸಿನ ಒಳಕ್ಕೆ ಹರಿಯುವ ‘ಇಂದ್ರಿಯ ಜನ್ಯ’ ಅಂಕಿ ಅಂಶಗಳಿಗೆ ಹಿಂದಿನ ‘ಕಾಲಪಟ್ಟಿ’ಯನ್ನು ಅಂಟಿಸುವ ದೋಷ ಉಂಟಾಗುವುದು ಇದರಿಂದಲೇ ಅಂತೆ.’ (ನೋಡಿ : Orme : Time , Experience and Behaviour)

ಆದರೆ ಕುವೆಂಪು ಅವರ ಕಾವ್ಯರಾಶಿಯನ್ನು ಸಮಗ್ರವಾಗಿ ಪರಿಶೀಲಿಸಿದರೆ ಇಂಥ ದೇಜ-ವು ದೋಷವು ಅವರ ವರ್ಣನೆಗಳಿಗೆ ಕಾರಣವಲ್ಲ ಎಂದು ಧೈರ್ಯವಾಗಿ ಹೇಳಬಹುದು.

[1] ಈ ವಾರದ ಸಾರಾಂಶವೇನೆಂದರೆ ಕುವೆಂಪು ಅವರ ಪ್ರಜ್ಞಾ ಪ್ರಪಂಚದ ಅನುಭವ ಸಾಮಗ್ರಿಯಲ್ಲವೂ ಬಹಳ ಮಟ್ಟಿಗೆ ಕನ್ನಡ ನಾಡಿನ ಮಲೆನಾಡಿನವು. ಅದು ಅಪ್ಪಟ ದೇಶೀಯವಾದ ಮಾಲು. ಈ ಕೆಳಗಿನ ಕೆಲವು ನಿದರ್ಶನಗಳು ಈ ಹೇಳಿಕೆಗೆ ಪುಷ್ಟಿ ನೀಡುತ್ತದೆ.

ಅಲ್ಲಿ ತೆರೆತೆರೆಯದ್ರಿ ಪಂಕ್ತಿಗಳಲ್ಲೆ ಕಾಣದೊ ಹಬ್ಬಿವೆ;
ನಿಬಿಡ ಕಾನನ ರಾಜಿ ಗಿರಿಗಳನಪ್ಪಿ ಸುತ್ತಲು ತಬ್ಬಿವೆ ;
ದೆಸೆಯ ಬಸವನ ಹಿಣಿಲ ಹೋಲಿವೆ ; ಮುಗಿಲ ಚುಂಬನ ಗೈದಿವೆ,
ತುಂಬ ಶೃಂಗಗಳಲ್ಲಿ ದಿಕ್ತಟದಲ್ಲಿ ಸೊಂಡಿಲ ನೆಯ್ದಿವೆ.

ಚೈತ್ರ ಸಂಧ್ಯೆಯ ಮೊಗಕೆ ಮೆತ್ತುತೆ ಮುಗಿಲ ಕೂದಲ ಮಸಿಯನು.
ಮುಡಿಗೆದರಿ ಸಿಡಿಲೊದರಿ ಝಳಪಿಸಿ ಮಿಂಚಿನುಜ್ವಲ ಅಸಿಯನು
ಬಾನಕರೆಯಿಂ ನುಗ್ಗಿ ಬಹ ಮುಂಗಾರ ಕರಿ ರಕ್ಕಸಿಯನು
ಕಾಣುತುರ್ವರೆ ನವಿರು ನಿಮಿರುವಳೆಳೆಯ ಹಸುರಿನ ಸಸಿಯನು.
(
ಹೋಗುವೆನು ನಾ : ಪಕ್ಷಿಕಾಶಿ)

ಸಹ್ಯಾದ್ರಿಯ ಮಳೆ ನೀರ್ತುಂಬಿದ ಹೊಳೆ ಕಾವೇರಿ
ಕೆಳಗಿಳಿಯುವ ತೇರಿನೊಳಮ್ಮನ ತೊಡೆಯೇರಿ
ಕುಳಿತ ಗಣೇಶನ ಕಣ್ಣಿನಚ್ಚರಿಗೆ
ರಜತ ರೇಖೆಯೊಲು ತೋರಿ
ಹರಿಯುತ್ತಿರುವಳು ಕನ್ನಡ ತಾಯಿಯ
ತುಂಬೆದೆ ಸೂಸಿದ ಸುಕುಮಾರಿ
(
ಗಣೇಶ ಗಾಥಾ : ಅಗ್ನಿಹಂಸ)

ಹೊಂಬಳ್ಳಿಯು ಹೊಮ್ಮಿದವೊಲು
ಥಳ್ಳನೆ ಮುಗಿಲಂಚು
ಇರುಳಲ್ಲಿ ಹಗಲಿಣಿಕಿದವೊಲು
ಹಾವ್ನಾಲಗೆ ಮಿಂಚು
ನೆಕ್ಕುತಲಿದೆ ಕತ್ತಲೆಯನು;
ಕುಕ್ಕುತಲಿದೆ ಬುವಿಗಣ್ಣನು
ಮಿಂಚಹಕ್ಕಿಯ ಚಂಚು
ಆಕಾಶವೆ ನೀರಾಯ್ತೆನೆ
ಸುರಿಯುತ್ತಿದೆ ಭೋರ್ಭೋರನೆ
ಮುಂಗಾರ್ಮಳೆ ಧಾರೆ;
ಲಯ ಭೀಷಣ ಮಳೆ ಭೈರವ
ಮೈದೋರಲು ಮರೆಯಾಗಿವೆ
ಭಯದಲಿ ಶಶಿ ತಾರೆ
(
ವರ್ಷ ಭೈರವ : ಪಕ್ಷಿಕಾಶಿ)

ಶ್ರೀ ಕುವೆಂಪು ಅವರು ಪಶ್ಚಿಮದ ರೊಮಾಂಟಿಕ್ ಕವಿಗಳಿಂದ ಸ್ವಲ್ಪ ಮಟ್ಟಿಗೆ ಪ್ರಭಾವಿತರಾಗಿದ್ದಾರೆ ಎಂಬುದು ನಿರ್ವಿವಾದವಾದ ವಿಷಯ. ಅದರಲ್ಲಿಯೂ ವರ್ಡ್ಸ್‌ವರ್ತ್‌ಅವರ ಆರಾಧ್ಯ ಕವಿ ಎಂದೂ ಹೇಳಬಹುದು. ಅವನ ಪ್ರಕೃತಿ ಪ್ರೇಮ, ಆಧ್ಯಾತ್ಮಿಕ ಪ್ರವೃತ್ತಿಗಳೂ ಸಾಮಾನ್ಯ ಜನರ ಮರೆವಿಗೆ ಗುರಿಯಾಗಬಹುದಾಗಿದ್ದ ವಸ್ತು, ಸಂಗತಿಗಳು ಅವರ ಕಾವ್ಯ ವಸ್ತುಗಳಾದದ್ದೂ ಅವರು ವರ್ಡ್ಸ್‌ವರ್ತ್‌ಕವಿಯನ್ನು ಅಷ್ಟು ಎತ್ತರದಲ್ಲಿ ಕೂರಿಸಿ ಗೌರವಿಸಿದ್ದಕ್ಕೆ ಕಾರಣಗಳಾಗಿರಬಹುದು.

ವರ್ಡ್ಸ್‌ವರ್ತ್‌ಎಂಬ ಕವನದಲ್ಲಿ (ಸಾನೆಟ್‌ಕೃತ್ತಿಕೆ : ೫೩) ಕುವೆಂಪು ವರ್ಡ್ಸ್‌ವರ್ತ್‌ಕವಿಯನ್ನು ‘ಕಾವ್ಯರ್ಷಿ’ ಎಂದು ಕರೆದಿದ್ದಾರೆ. ಷೇಕ್ಷ್‌ಪಿಯರ್‌ ಕೂಡ ಸೇರಿದಂತೆ ಆಂಗ್ಲ ಕವಿಗಳಲ್ಲಿ ಅವನಂತೆ ತಮ್ಮ ಎದೆಯನ್ನು ಸೆಳೆದವರು ಯಾರೂ ಇಲ್ಲ ಎನ್ನುತ್ತಾರೆ. ಷೇಕ್ಸ್‌ಪಿಯರ್‌ಸಂತೆಯಾದರೆ ವರ್ಡ್ಸ್‌ವರ್ತ್‌‘ಪರ್ಣಶಾಲೆ’ಯಂತೆ. ತಾವು ಷೇಕ್ಸ್‌ಪಿಯರನ ಎರಡು ಮಹಾನಾಟಕಗಳಿಂದ – ಹ್ಯಾಮ್ಲೆಟ್‌ಮತ್ತು ಟೆಂಪೆಸ್ಟ್‌(ಕನ್ನಡ ರೂಪಾಂತರಗಳು ‘ರಕ್ತಾಕ್ಷಿ’ ಮತ್ತು ‘ಬಿರುಗಾಳಿ’) ಕನ್ನಡ ನಾಟಕಕಾರ ಪಂಕ್ತಿಯಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆಯುತ್ತಾರೆ ಎಂಬುದನ್ನು ಮರೆತು-ಸಮಯ ಸಿಕ್ಕಿದಾಗಲೆಲ್ಲ ಕುವೆಂಪು ಜಗತ್ತಿನ ಅತಿಶ್ರೇಷ್ಠ ನಾಟಕಕಾರನಾದ ಷೇಕ್ಸ್‌ಪಿಯರನನ್ನು ಟೀಕಿಸುತ್ತಾರೆ. ಕಾವ್ಯ ಶಕ್ತಿಯಲ್ಲಿ ಷೇಕ್ಷ್‌ಪಿಯರ್‌ ಹಿಮಾಚಲವಾದರೆ ವರ್ಡ್ಸ್‌ವರ್ತ್‌ಕಿರುಗುಡ್ಡ ಆದರೆ ವರ್ಡ್ಸ್‌ವರ್ತ್‌:

ವನದ ಪಕ್ಷಿಯು ಹಾಡಿ
ಪ್ರಕೃತಿ ಸಂಸರ್ಗದಲಿ ದಿವ್ಯಭಾವವು ಮೂಡಿ
ಆತ್ಮವು ವಿರಾಟದಲಿ ನಿಂತು ವಿಹರಿಸುವಂತೆ
ಮಾಡುವುದೊ, ಕಾವ್ಯರ್ಷಿ, ನಿನ್ನ ವಾಣಿಯ ರೀತಿ
ಅಂತಿಹುದು.

ಅವನದು ‘ಋಷಿ ಜೀವನ’ ಎನ್ನುತ್ತಾರೆ.

ನಿನ್ನ ಋಷಿ ಜೀವನಕೆನಿನ್ನ ನಿರ್ಮಲ ರೀತಿ,
ಜನದೊಲ್ಮೆ, ಶಾಂತಿ, ಕನಿಕರ, ದಯೆಗೆಎಣೆಯಿಲ್ಲ.

ಕುವೆಂಪು ಅವರ ‘ಕೃತ್ತಿಕೆ’ ಕವನ ಸಂಕಲನ (೧೯೪೬)ದಲ್ಲಿ ಪ್ರಕಟವಾಗಿರುವ ಈ ಕವನವನ್ನು ಅವರು ಯಾವಾಗ ಬರೆದರೋ ತಿಳಿಯದು. ಅವರಿಗೆ ವರ್ಡ್ಸ್‌ವರ್ತ್‌ನ ಜೀವನ ಚರಿತ್ರೆಯ ವಿವರಗಳೆಲ್ಲ ತಿಳಿದಿದ್ದವೋ ಇಲ್ಲವೋ ಅದೂ ತಿಳಿಯದು.

ವರ್ಡ್ಸ್‌ವರ್ತ್‌ನನ್ನು ಕುರಿತು ಹರ್ಬರ್ಟ್‌ರೀಡ್‌ಬರೆದ ಪುಸ್ತಕದ (Wordsworth : Herbert Read, Faber and Faber Ltd., London) ಮೊದಲ ಆವೃತ್ತಿ ಪ್ರಕಟವಾದದ್ದು ೧೯೩೦ರಲ್ಲಿ. ಅದರಲ್ಲಿ ವರ್ಡ್ಸ್‌ವರ್ತ್‌ನಿಗೂ ಫ್ರೆಂಚ್‌ಮಹಿಳೆ ಆನ್‌ವೆಲಾ (Anne Velon)ಳಿಗೂ ಪರಿಚಯವಾದದ್ದರ, ಅನಂತರ ಅವಳಲ್ಲಿ ವರ್ಡ್ಸ್‌ವರ್ತ್‌ನಿಗೆ ೧೭೯೨ರ ಡಿಸೆಂಬರ್‌೧೫ ರಂದು ಒಬ್ಬಳು ಮಗಳು-ಆನ್‌ಕ್ಯಾರೊಲಿನ್‌ವರ್ಡ್ಸ್‌ವರ್ತ್‌ಬ್ಲುವ (Blois) ಎಂಬಲ್ಲಿ ಜನಿಸಿದಳು ಎಂಬ ವಿವರಗಳಿವೆ. ಮಗಳು ಹುಟ್ಟುವ ವೇಳೆಗೆ ರಸಋಷಿ ವರ್ಡ್ಸ್‌ವರ್ತ್‌ಪ್ಯಾರಿಸ್ಸಿಗೆ ಪಲಾಯನ ಮಾಡಿದ್ದ. ಮಗಳು ಹುಟ್ಟಿದ ವಾರ್ತೆಯನ್ನು ಕೇಳಿ ವರ್ಡ್ಸ್‌ವರ್ತ್‌ಇಂಗ್ಲೆಂಡಿಗೆ ಕಾಲುಕಿತ್ತ. ವರ್ಡ್ಸ್‌ವರ್ತ್‌ನೂ, ಇದನ್ನು ತಿಳಿದಿದ್ದ ಇತರ ಮಿತ್ರರೂ, ಅನಂತರದ ಅವನ ಜೀವನ ಚರಿತ್ರಕಾರರೂ ಈ ಘಟನೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟರು. ಹರ್ಬರ್ಟ್‌ರೀಡ್‌ವರ್ಡ್ಸ್‌ವರ್ತ್‌ನ ಪರಮ ಆರಾಧಕ. ಅಂಥವನೇ ಹೀಗೆನ್ನುತ್ತಾನೆ : “ಇದು ಮುಖ್ಯವಾದ ಘಟನೆ. ಅವನ ಬದುಕನ್ನು ಪರಿವರ್ತಿಸಿದ ಘಟನೆ. ಈ ತೀವ್ರ ಪ್ರೇಮ ಮತ್ತು ಅನಂತರದ ಮ್ಲಾನತೆ ವರ್ಡ್ಸ್‌ವರ್ತ್‌ನ ಬದುಕಿನ ಅತ್ಯಂತ ಆಳವಾದ ಅನುಭವ ಎಂಬುದು ನನ್ನ ಭಾವನೆ. ಈ ಭಾವ ಜಟಿಲತೆಯ ಮೂಲದಿಂದಲೇ ಅವನ ಅತ್ಯಂತ ಜಟಿಲವೂ ಅನಿಶ್ಚಿಯವೂ ಆದ ಮುಂದಿನ ಜೀವನವೆಲ್ಲ ಹರಿದು ಬಂದದ್ದು. ಈ ಅನುಭವ ಮರೆಮಾಚಿಬಿಡಲು ಯೋಗ್ಯವಾದದ್ದು, ಪೂರ್ಣವಾದ ರಹಸ್ಯದಲ್ಲಿ, ದೀರ್ಘಕಾಲ ಹೇಡಿತನದ ಮುಖವಾಡದ ಮರೆಯಲ್ಲಿ ಇಡಲು ಅರ್ಹವಾದದ್ದು ಎಂದು ವರ್ಡ್ಸ್‌ವರ್ತ್‌ಭಾವಿಸಿದ್ದ. ಬದುಕಿನಲ್ಲಿ ಅವನನ್ನು ಚೆನ್ನಾಗಿ ಬಲ್ಲ ಅವನ ಮಿತ್ರರು ಅವನಿಗೆ ಬೆಂಬಲವಾಗಿ ನಿಂತರು. ಅವನ ಮರಣಾಂತರವೂ ಅವನ ವಂಶಸ್ಥರೂ, ಅಧಿಕೃತ ಜೀವನಚರಿತ್ರೆಕಾರರೂ ಅವನನ್ನು ಬೆಂಬಲಿಸದರು.

ವರ್ಡ್ಸ್‌ವರ್ತ್‌ಕವಿಯ ಕಾವ್ಯದ ಮೇಲೆ ಈ ಘಟನೆ ತೀವ್ರವಾದ ಪರಿಣಾಮವನ್ನು ಉಂಟುಮಾಡಿದೆ ಎಂಬ ಕಾರಣಕ್ಕಾಗಿ ಇದಕ್ಕೆ ಇಷ್ಟು ಪ್ರಾಮುಖ್ಯ ದೊರಕಿತೇ ಹೊರತು ಕವಿಯ ಖಾಸಗೀ ಜೀವನವನ್ನು ಹೊಂಚು ಹಾಕಿ ನೋಡಬೇಕೆಂಬ ಉದ್ದೇಶ ವಿಮರ್ಶಕರಿಗೆ ಇರಲಿಲ್ಲ-ಹರ್ಬರ್ಟ್‌ರೀಡ್‌ಅವರಿಗಂತೂ ಇರಲಿಲ್ಲ.

ಇಲ್ಲಿ ನಮಗೆ ಸಂಗತವಾಗಿರುವ ಪ್ರಶ್ನೆ ಬೇರೆ ರೀತಿಯದು. ಒಂದು ಹೆಣ್ಣನ್ನು ಪ್ರೀತಿಸುವುದಾಗಲೀ ಅವಳಿಂದ ಮಗುವನ್ನು ಪಡೆಯವುದಾಗಲೀ, ಅನಂತರ ಅವಳನ್ನು ಮರೆಯುವುದಾಗಲಿ, ಆ ಇಡೀ ಘಟನೆಯನ್ನೇ ಮುಚ್ಚಿಡುವುದಾಗಲೀ ನೈತಿಕವಾಗಿ ಸರಿಯೇ ತಪ್ಪೇ ಎಂಬ ಪ್ರಶ್ನೆ ಮುಖ್ಯವಲ್ಲ. ಮುಖ್ಯವಾದದ್ದು ಕುವೆಂಪು ಇಂಥದೊಂದು ಘಟನೆಗೆ ಕಾರಣವಾದ ವರ್ಡ್ಸ್‌ವರ್ತ್‌ಕವಿಯನ್ನು ಹೇಗೆ ನೋಡುತ್ತಿದ್ದರು ಎಂಬುದು. ಕುವೆಂಪು ಶುದ್ಧವಾದ ಬದುಕನ್ನು ನಡೆಸುತ್ತಾ ಬಂದವರು, ಮಾತ್ರವಲ್ಲದೆ ಶುದ್ಧವಾದ ಬದುಕನ್ನು ತುಂಬ ಮೆಚ್ಚಿರುವವರು. ‘ಮಡಿಯಾಗಿರಲಿ ಬಾಳ್ವೆ’ ಎಂಬುದು ಅವರ ಪ್ರಾರ್ಥನೆ ಹೋಮರನ ನಾಯಕಿ ಹೆಲೆನ್‌ಇನ್ನೊಬ್ಬನ ಜೊತೆ ಓಡಿಹೋದಳು ಎಂಬ ಕಾರಣಕ್ಕೆ ಕುವೆಂಪು ಅವರಿಗೆ ಅವನ ಕಾವ್ಯ ಪ್ರಿಯವಾಗಲಿಲ್ಲ; “ಸೀತೆಯ ಶುಚಿಗೆ ರಾಮಾಯಣವನೊರೆದನಾದಿ ಕವಿ ವಾಲ್ಮೀಕಿ. ಆ ಶುಚಿಯ ಗಂಗೆಯೊಳೆ ಮಿಂದೆನಗೆ ಸಹಿಸದಯ್‌ಕೆಸರಿನೋಕುಳಿಯ ನಿನ್ನದ್ಭುತ ರಣಕ್ರೀಡೆ” (ಹೋಮರ್‌: ಕೃತ್ತಿಕೆ)

ಕುವೆಂಪು ಅವರ ಮನಸ್ಸಿನ ಮೇಲೆ ವರ್ಡ್ಸ್‌ವರ್ತ್‌ತುಂಬ ಗಾಢವಾದ ಪ್ರಭಾವವನ್ನು ಬೀರಿದ್ದಾನೆ. ಅವನಂತೆ ಭೂಮಾನುಭೂತಿಯ ಕಡೆಗೂ ಸದಾ ಒಲವನ್ನು ಬೆಳೆಸಿಕೊಂಡಿರುವ ಕುವೆಂಪು ಅವರಿಗೆ ವರ್ಡ್ಸ್‌ವರ್ತ್‌ಉಳಿದ ಪಾಶ್ಚಾತ್ಯ ಕವಿಗಳಿಗೆ ಹೋಲಿಸಿದರೆ ಅತ್ಯಂತ ಎತ್ತರದಲ್ಲಿ ನಿಂತಂತೆ ಕಾಣಿಸಿದ್ದರಲ್ಲಿ ಏನೇನೊ ಆಶ್ಚರ್ಯವಿಲ್ಲ; ಅವರು ಹೇಳುತ್ತಾರೆ :

ಮಿಲ್ಟನ್ನಿನಂತೆ ಪ್ರಧಾನವಾಗಿ ಉದ್ದಾಮ ವಿಷಯಗಳನ್ನೆ ಆರಿಸಿಕೊಂಡು ವಸ್ತುಕಾವ್ಯಗಳನ್ನು ರಚಿಸದೆ ಅಲ್ಪವ್ಯಕ್ತಿಗಳ ಸಾಮಾನ್ಯ ಜೀವನದ ಸಾಧಾರಣ ವಿಷಯಗಳನ್ನೆ ಆರಿಸಿಕೊಂಡು ಪ್ರಧಾನವಾಗಿ ಭಾವಗೀತೆಯನ್ನೆ ನಿರ್ಮಿಸಿದ ವರ್ಡ್ಸ್‌ವರ್ತ್‌ತನ್ನ ಅಪರೋಕ್ಷ ಭೂಮಾನುಭೂತಿಯಿಂದಲೆ ಭವ್ಯತೆಯನ್ನು ಸೃಷ್ಟಿಸಿದ್ದಾನೆ. ಅವನು ವಿಶೇಷವಾಗಿ ಪ್ರಯೋಗಿಸುವ ‘the visionary power’ `silence’ `solitude’ `immortality’ `eternal’ `sublimity’ ಮೊದಲಾದ ದರ್ಶನ ಧ್ವನಿಪೂರ್ಣವಾದ ಪದಗಳಲ್ಲಿ ತಾನು ‘ದರ್ಶನಕವಿ’ ಎಂಬುದನ್ನು ಮುಚ್ಚುಮರೆಮಾಡಿಲ್ಲ. ‘ಅಲ್ಪ’ದಲ್ಲಿ ‘ಭೂಮಾ’ದ ದರ್ಶನವೆ ವರ್ಡ್ಸ್‌ವರ್ತ್‌ಕವಿಯನ್ನು ಅಲ್ಪತೆಯಿಂದ ಪಾರುಮಾಡಿ ಮಹೋನ್ನತಿಗೇರಿಸಿದೆ.

“ನಿಸರ್ಗ ದೃಶ್ಯಗಳಲ್ಲಿ ಪ್ರಕೃತಿ ಸಾನ್ನಿಧ್ಯದಲ್ಲಿ, ನಿರ್ಜನ ಪ್ರದೇಶಗಳಲ್ಲಿ, ಪರ್ವತಾಗ್ರಗಳಲ್ಲಿ ಬಾನುಬಂಡೆ ಬೆಟ್ಟ ಝರಿ ಗಿರಿ ಕಂದರ ಕಾಡುಗಳ ರುದ್ರ ರಮಣೀಯ ವಿಜನ ಏಕಾಂತದ ಸಾಹಚರ್ಯದಲ್ಲಿ ದರ್ಶನಕವಿಯಾದ ವರ್ಡ್ಸ್‌ವರ್ತ್‌ಗೆ ಭೂಮದ ಅನುಭೂತಿ ಅನಿವಾರ್ಯವಾದ ಅನುಭವವಾಗಿ ಪರಿಣಮಿಸಿತ್ತು. ಆತನ ಚೈತನ್ಯದ ಸ್ವತಃಸಿದ್ಧವಾದ ಸ್ವಭಾವವೆ ಭೂಮಾಪರವಾಗಿದ್ದಂತೆ ತೋರುತ್ತದೆ. ಆತನ ಸುಪ್ರಸಿದ್ಧ ಮಹಾಭಾವಗೀತೆಯಲ್ಲಿಯೂ ಆತ್ಮಕಥನರೂಪದ ಸುದೀರ್ಘ ಮಹಾಕೃತಿಗಳಾದ Prelude ಮತ್ತು Excursion ಗಳಲ್ಲಿಯೂ ಭವ್ಯತೆಗೇರಿದ ಭೂಮಾನುಭೂತಿಯ ಪವಿತ್ರ ಪೂಜಾಸ್ಥಾನಗಳನ್ನು ಮತ್ತೆ ಮತ್ತೆ ಸಂದರ್ಶಿಸುತ್ತೇವೆ. ಆ ಕಾವ್ಯ ಲೋಕದಲ್ಲಿ ಯಾತ್ರಿಯಾಗುವ ಸಹೃದಯನು ಪುನಃ ಪುನಃ ಬ್ರಾಹ್ಮೀ ಪ್ರಜ್ಞೆಯ ಭವ್ಯಕ್ಷೇತ್ರಗಳನ್ನು ಪ್ರವೇಶಿಸಿ ಪುನೀತನಾಗುವ ಅನುಭವವನ್ನು ಪಡೆಯುವುದರಿಂದಲೇ ಬ್ರಾಡ್ಲೆಯ ವಿಮರ್ಶೆ ತುತ್ತ ತುದಿಯಲ್ಲಿ For me, I confess, all this is far from being `mere poetry’ ಎಂಬ ಗೌರವ ಪೂರ್ಣವಾದ ವಿನಯೋಕ್ತಿಯಲ್ಲಿ ಕೈ ಮುಗಿದು ಹಣೆಮಣಿದು ನಮಸ್ಕರಿಸಿ ಬಿಳ್ಕೊಂಡಿದೆ.”

ಆದರೆ ಇಂದಿಗೂ ಅತ್ಯಾಶ್ಚರ್ಯಕರ ಸಂಗತಿಯೆಂದರೆ ವರ್ಡ್ಸ್‌ವರ್ತ್‌ನ ಯಾವ ಪಂಕ್ತಿಗಳನ್ನು ಕುವೆಂಪು ‘(ಕವಿ)ತನಗಾದ ಭೂಮಾನುಭೂತಿಯನ್ನು ಭವ್ಯತೆಯ ಪರಾಕಾಷ್ಠೆಗೆ ನಿದರ್ಶನವೆಂಬಂತೆ ವರ್ಣಿಸಿದ್ದಾನ’ ಎಂದು ಹೇಳಿ ಉದ್ಧರಿಸುತ್ತಾರೋ ಅದರಲ್ಲಿ ಯಾವ ಭೂಮಾನುಭೂತಿಯೂ ನಮಗೆ ಉಂಟಾಗುವುದಿಲ್ಲ. ತಮ್ಮದೇ ಮಹಾಕಾವ್ಯದ ರಚನೆಯಾದ ಮೇಲೆ ಅಥವಾ ಭೂಮಾನುಭೂತಿಯ ವಿಷಯದಲ್ಲಿ ತಮ್ಮ ಅಭಿಪ್ರಾಯ ಈಗ ಬದಲಾಗಿದ್ದರೆ, ಅದರ ಪ್ರತಿಕ್ರಿಯೆ-ಇಂಥ ಕಾವ್ಯ ಭಾಗಗಳನ್ನು ಕುರಿತು – ಏನು ಎಂಬುದು ತಿಳಿದರೆ ಸ್ವಾರಸ್ಯವಾಗಿರುತ್ತದೆ. ಅವರು ವರ್ಡ್ಸ್‌ವರ್ತ್‌ಕವಿಯಿಂದ ಉದ್ಧರಿಸಿರುವ ಭಾಗ ಇದು :

“ಒಮ್ಮೆ ವರ್ಡ್ಸ್‌ವರ್ತ್‌ತನ್ನೊಬ್ಬ ಮಿತ್ರನೊಡನೆ ಒಂದು ಪರ್ವತ ಪ್ರದೇಶದಲ್ಲಿ ಸಂಚರಿಸುತ್ತಾ ಅದರ ಶಿಖರಸ್ಥಾನವನ್ನು ದಾಟಿ ಒಂದು ಅದ್ಭುತ ದರಿಕಂದರ ಸೀಮೆಯನ್ನು ದೃಷ್ಟಿಸಿದಾಗ ತನಗಾದ ಭೂಮಾನುಭೂತಿಯನ್ನು ಭವ್ಯತೆಯ ಪರಾಕಾಷ್ಠೆಗೆ ನಿದರ್ಶನವೆಂಬಂತೆ ವರ್ಣಿಸಿದ್ದಾನೆ.

“Downwards we hurried fast.
And with the hal-shaped road which we had missed,
Entered a narrow chasm. The brook and road
Were fellow-travellers in this gloomy strait,
And with them did we journey several hours
At a show pace. The immeasurable height
Of words decaying, never to be decayed,
The stationary blasts of waterfalls,
And in the narrow rent at every turn
Winds thwarting winds, bewildered and forlorn
The torrents shooting from the clear blue sky.
The rocks that muttered close upon our ears,
Block drizzling crags that spake by the wayside[2]
As if a voice were in them, the sick sight
And giddy prospect of the raving stream,
The unfettered clouds and region of the Heavens,
Tumult and peace, the darkness and the light-
Were all like working of one mind, the features
Of the same face, blossoms upon the tree;
Characters of the great Apocalypse,
The types and symbols of eternity,
Of first, and last, and midst and without end”

Immeasurable height or woods, decaying, never to be decayed (ನಶಿಸುತ್ತಿರುವ, ಆದರೆ ಆವಿನಾಶಿಯಾದ. ಕಾಡಿನ ಅಮೇಯ ಔನ್ನತ್ಯ), the unfettered clouds and region of the Heavens-ಅನಿರ್ಬಂಧಿತ ಮೋಡಗಳು-ಅಸೀಮ ಗಗನ, the types and symbols of eternity ಮುಂತಾದ ವಾಚ್ಯ ಶಬ್ದಗಳು ಮಾತ್ರವೇ ಕುವೆಂಪು ಅವರನ್ನು ದಾರಿ ತಪ್ಪಿಸಿದುವೋ ಅಥವಾ “ಇವು ಇಂಗ್ಲಿಷ್‌ಕಾವ್ಯದಲ್ಲಿ ಮಹೋನ್ನತವಾದ ಪಂಕ್ತಿಗಳು” (Some of the greatest lines in English poetry) ಎಂಬ ಬ್ರಾಡ್ಲೆಯ ಮಾತು (Oxford lectures on poetry, p. 138) ಎಂಬ ಬ್ರಾಡ್ಲೆಯ ಮಾತು (Oxford lectures on poetry, p.138)ಇವರನ್ನು ದಿಕ್ಕು ತಪ್ಪಿಸಿದುವೋ ತಿಳಿಯದು.

ಇದು ಮಾತ್ರವಲ್ಲದೆ, ಈ ಮೊದಲೇ ತಮಗೆ ಹೇಗೋ ಹಾಗೆ ವರ್ಡ್ಸ್‌ವರ್ತ್‌ನಿಗೆ ಪ್ರಕೃತಿಯ ವಿವರ ವಿವರಗಳು ಪ್ರಿಯವಾದವು ಎಂಬುದೂ ಅವರ ವರ್ಡ್ಸ್‌ವರ್ತ್‌ಆರಾಧನೆಗೆ ಕಾರಣವಾಗಿರಬಹುದು. ಅವರಿಬ್ಬರೂ ಸಮಾನವಾದ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಿರುವ ಪಂಕ್ತಿಗಳು ಇವು.

These forms of beauty have not been to me,
As is a landscape to a blindman’s eye ;
But oft, in lonely rooms, and mid the din
Of towns and cities, I have owned to them,
In hour of weariness, sensations sweet,
Felt in the blood, and felt along the heart,
And passing even in my purer mind,
With tranquil restoration…

ಪ್ರಕೃತಿಯ ವಿವಿಧ ಸುಂದರ ದೃಶ್ಯಗಳು ಕವಿಯ ಕಣ್ಣಿಗೆ, ಕುರುಡನ ಕಣ್ಣಿಗೆ ಎಂತೋ ಅಂತೆ ಅಲ್ಲ. ದೂರದಲ್ಲಿ ಏಕಾಂತವಾಗಿ ಕೊಠಡಿಯಲ್ಲಿ ಕುಳಿತಾಗಲೋ, ನಗರದ ಗಲಿಬಿಲಿಯ ನಡುವೆ ನಿಂತಾಗಲೋ, ಮನವು ತೀರ ಬಳಲಿದಾಗಲೋ ಈ ದೃಶ್ಯಗಳು ದಾನ ಮಾಡಿದ ಮಧುರಾನುಭಾವಗಳು ಮತ್ತೆ ತೇಲಿಬರುತ್ತವೆ. ತನ್ನ ನೆತ್ತರಿನಲ್ಲಿ ಈ ಅನುಭವಗಳು ಹರಿಯುವುದನ್ನು ಹೃದಯದಲ್ಲಿ ಅವು ಮನೆ ಮಾಡಿರುವುದನ್ನು ತನ್ನ ಶುದ್ಧ ಚೇತನದ ಆಳಕ್ಕೆ ಅವು ಅವತರಿಸುವುದನ್ನು, ಅಪೂರ್ವವಾದ ಶಾಂತಿಯನ್ನು ಅವು ತಂದೀಯುವುದನ್ನು ಅವನು ಅನುಭವಿಸುತ್ತಾನೆ. ಮೌನವಾಗಿ ಕೃತಜ್ಞತೆಯನ್ನು ಸೂಚಿಸುತ್ತಾನೆ. ಅಷ್ಟೇ ಅಲ್ಲ :

…I trust
To them I may have owed another gift
Of aspect more sublime ; that blessed mood,
In which the burthen of the mystery,
In which the heavy and the weary weight
Of all this unintelligible world,
Is lightened :- = that serene and blessed mood,
In which the affections gently lead us on-
Until, the breath of this corporeal frame
And even the motion of our human blooc
Almost suspended, we are laid asleep
In body, and become a living soul :
While with an eye made quiet by the power
Of harmony, and the deep power of joy,
We see into the life of things

ಇನ್ನೂ ಭವ್ಯತರವಾದ ಮುಖ ಅದಕ್ಕುಂಟು. ಆ ದಿವ್ಯಭಾವದಲ್ಲಿ ಈ ಜಗತ್ತಿನ ಒಗಟೆ ಬಗೆ ಹರಿಯುತ್ತದೆ. ಈ ಅಸ್ಪಷ್ಟ ಜಗತ್ತಿನ ಬಳಲಿಕೆಯ ಭಾರ ಕಳೆದು ಹಗುರತೆ ಮೈದೋರುತ್ತದೆ. ಅದು ಸೃಷ್ಟಿಸುವ ದಿವ್ಯಶಾಂತ ಸ್ಥಿತಿಯಲ್ಲಿ, ಕರುಣೆಯಿಂದ ಮೃಧುವಾಗಿ ನಮ್ಮನ್ನು ಕೈಹಿಡಿದು ನಡೆಸಿ ತಲುಪಿಸುವ ನಿಲುಗಡೆಯಲ್ಲಿ ದೇಹದ ಉಸಿರು ಇನ್ನೇನು ನಿಂತಿತೋ ಎನಿಸಿ, ರಕ್ತಚಲನೆ ಕೂಡ ವಿರಮಿಸಿತೋ ಎಂಬಂತೆ ಭಾಸವಾಗಿ, ದೇಹ ನಿದ್ರಿಸಿ ನಾವು ಉಸಿರಾಡುವ ಚೇತನವೇ ಆಗುತ್ತವೆ. ಆನಂದ ಸಮರಸತೆಗಳು ನೀಡಿದ ಶಕ್ತಿಯಿಂದ ಶಾಂತಿಯನ್ನು ಪಡೆದ ದೃಷ್ಟಿಯಿಂದ ವಸ್ತುಗಳ ಆತ್ಮವನ್ನೇ ಒಳಹೊಕ್ಕು ನೋಡಬಲ್ಲವರಾಗುತ್ತೇವೆ.

[1] Deja-Vu is the name given to the feeling of pastness of pastness or familiarity of some apparentiy new experience. For example. A person visiting a town for the first time may have the strong impression that he has been there before. It is an illusion of visual recognition in which a new situation is incorrectly regarded as a repelition of a previous experience.

Several neurological investigations indicate that perpection of temporal order of events are disturbed due to lesions (localized destroyed areas) in one of the hemispheres of the brain. It is suspected that a slight delay occurs in the transmission of information from one hemixsphere to the other on account of such a lesion. This may produce a defect in temporal analysis o events and in placing a `time-table’ upon incoming sensory data. The person may feel that things are happening twice.

[2] Love Joy : On the Discrimination of Romantics in English Romantic poets.