ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಮೊಟ್ಟಮೊದಲ ಬಾರಿಗೆ ಭಾರತೀಯ ಸಾಹಿತಿಯೊಬ್ಬರನ್ನು ನೊಬೆಲ್‌ಪಾರಿತೋಷಕಕ್ಕೆ ಶಿಫಾರಸ್ಸು ಮಾಡಬೇಕಾಗಿ ಬಂತು. ಆಗ ಪ್ರೊ. ವಿ. ಕೃ. ಗೋಕಾಕರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅವರು ಡಾ. ಹಾ. ಮಾ. ನಾಯಕರಿಗೆ ಪತ್ರ ಬರೆದ ವಿಷಯ ತಿಳಿಸಿ ಅವರ ನೆರವು ಕೋರಿದರು. ಆಗಿದ್ದುದು ಹೀಗೆ : ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಈ ವಿಷಯವಾಗಿ ವಿಸ್ತಾರವಾಗಿ ಚರ್ಚೆ ನಡೆದು ಯಾವ ಭಾರತೀಯ ಸಾಹಿತಿಯನ್ನು ನೊಬೆಲ್‌ಬಹುಮಾನಕ್ಕೆ ನಾಮಕರಣ ಮಾಡಬೇಕೆಂಬುದು ಇತ್ಯರ್ಥವಾಗದೆ ಹೋಯಿತು. ಆಗ ಅಂತಿಮ ತೀರ್ಮಾನವನ್ನು ಪ್ರೊ. ಗೋಕಾಕರಿಗೆ ಬಿಡಲಾಯಿತು. ಬೇರೆ ಬೇರೆ ಭಾಷೆಗಳಲ್ಲಿ ಪ್ರಥಮ ಶ್ರೇಣಿಯ ಕವಿಗಳಿದ್ದರು, ಕಾದಂಬರಿಕಾರರಿದ್ದರು, ನಾಟಕಕಾರರಿದ್ದರು, ಸಣ್ಣ ಕತೆಗಳನ್ನು ಬರೆದವರಿದ್ದರು. ಆಯಾ ಸಾಹಿತ್ಯ ಪ್ರಕಾರಗಳಲ್ಲಿ ಯಥೇಚ್ಛವಾಗಿ ಕೃತಿಗಳನ್ನು ರಚಿಸಿದವರಿದ್ದರು. ಆದರೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಎಲ್ಲ ಕಾಲಕ್ಕೂ ನಿಲ್ಲುವ ಆಚಾರ್ಯ ಕೃತಿಗಳನ್ನು ರಚಿಸಿದ ಒಬ್ಬ ಲೇಖಕನನ್ನ – ಕುವೆಂಪು ವಿನಾ ಯಾವುದೇ ಭಾರತೀಯ ಭಾಷೆಯಲ್ಲಿಯೂ ಹೆಸರಿಸುವ ಸಾಧ್ಯತೆಯೇ ಇರಲಿಲ್ಲ. ಇದನ್ನು ಮನಗಂಡ, ಬಹುಶ್ರುತರಾದ ಗೋಕಾಕರು, ನಾಮಕರಣ ಮಾಡುತ್ತಿರುವ ಸಾಹಿತಿಯ ಸರ್ವ ಸಾಧನೆಗಳನ್ನು ಯಥಾವತ್ತಾಗಿ ಮಂಡಿಸಿ ಮಹಾಕವಿ ಕುವೆಂಪುರವರ ಹೆಸರನ್ನು ಸೂಚಿಸಿದ್ದರು. ಅವರ ವಾದವನ್ನು ಒಪ್ಪಿದ ಸಾಹಿತ್ಯ ಅಕಾಡೆಮಿಯ ಕೇಂದ್ರ ಸಮಿತಿಯ ಸರ್ವಾನುಮತದಿಂದ ಅನುಮೋದಿಸಿ, ನೊಬೆಲ್ ಬಹುಮಾನಕ್ಕೆ ಸರ್ವವಿಧದಿಂದಲೂ ಅರ್ಹರಾದ ಭಾರತೀಯ ಸಾಹಿತಿಯೆಂದು ಕುವೆಂಪುರವರನ್ನು ನಾಮಕರಣ ಮಾಡಲು ತೀರ್ಮಾನಿಸಿತು.

ಪ್ರೊ. ವಿ. ಕೆ. ಗೋಕಾಕರು ಡಾ. ಹಾ. ಮಾ. ನಾಯಕರ ನೆರವನ್ನು ಕೋರಿದ್ದು ಈ ಹಿನ್ನೆಲೆಯಲ್ಲಿ, ಇದು ನಡೆದದ್ದು ೧೯೮೮ ರಲ್ಲಿ ಎಂದು ನನ್ನ ನೆನಪು. ಅನೇಕ ವಿಧವಾದ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ಡಾ. ನಾಯಕರು ನನಗೆ ಈ ವಿಷಯ ತಿಳಿಸಿ, ತಮ್ಮ ಎಂದಿನ ಸಹಜ, ಸುಸ್ಮಿತ ಶೈಲಿಯಲ್ಲಿ ಹೀಗೆ ಹೇಳಿದರು. “ನೋಡಿ ಸ್ವಾಮಿ, ನಿಮ್ಮ ಗುರುಗಳಿಗೆ ನೊಬೆಲ್‌ಬಹುಮಾನ ಬರಬೇಕೆಂಬುದು ನಿಮ್ಮ ಇಚ್ಛೆಯಾಗಿದ್ದರೆ ನೀವು ಇದಕ್ಕೆ ಸಂಬಂಧಪಟ್ಟ ಕೆಲಸ ಮಾಡಿಕೊಡುವ ಶ್ರಮವಹಿಸಿ.” ನಮ್ಮ ಗುರುಗಳಿಗೆ ತನ್ಮೂಲಕ ಕರ್ನಾಟಕಕ್ಕೆ. ಅಷ್ಟೇ ಏಕೆ ಇಡೀ ಭಾರತಕ್ಕೆ ಗೌರವ ಬರುವುದನ್ನು ಕಲ್ಪಿಸಿಕೊಂಡು, ನಾನು ಎಂದಿನ ಉತ್ಸಾಹದಿಂದ ಹುಂಬತನದಿಂದ ಎನ್ನಬೇಕೇನೋ-ಒಪ್ಪಿಕೊಂಡೆ. ಈ ಕಾರ್ಯ ಎಷ್ಟು ಗುರುತರವಾದದ್ದು ಎಂಬುದು ಆಗ ನನಗೆ ಹೊಳೆಯಲಿಲ್ಲ.

ಶ್ರೀ ಕುವೆಂಪು ಅವರನ್ನು ಕುರಿತು, ನೊಬೆಲ್‌ಬಹುಮಾನ ನೀಡುವ ಸಂಸ್ಥೆಯು ಕೋರಿದ್ದ ನಮೂನೆಯಲ್ಲಿ ಕುವೆಂಪುರವರ ಕೃತಿಸಮಸ್ತದ ಪರಿಚಯವನ್ನು ಮಾಡಿಕೊಡಬೇಕಾಗಿತ್ತು. ಅದೇ ಒಂದು ಪುಸ್ತಿಕೆಯಾಗುವಷ್ಟು ಬರವಣಿಗೆಯನ್ನು ಅಪೇಕ್ಷಿಸುವಂತಹ ಕೆಲಸ. ಜೊತೆಗೆ ಅವರ ಆದಷ್ಟು ಕೃತಿಗಳ ಇಂಗ್ಲಿಷ್‌ಅನುವಾದವನ್ನು ಸಿದ್ಧಗೊಳಿಸಿ ಕಳುಹಿಸಬೇಕಾಗಿತ್ತು. ಈಗಾಗಲೇ ನಾನು ಕುವೆಂಪುರವರ ಕೆಲವು ಕವನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದೆ, ಅಲ್ಲದೆ ಆಗಷ್ಟು ನಾನು ಅವರ “ಬೆರಳ್‌ಗೆ ಕೊರಳ್‌”, “ಸ್ಮಶಾನ ಕುರುಕ್ಷೇತ್ರ” ಮತ್ತು “ಶೂದ್ರ ತಪಸ್ವಿ” ನಾಟಕಗಳನ್ನು ಅನುವಾದ ಮಾಡಿದ್ದೆ. ಅವನ್ನು “Kuvempus Three Plays” ಎಂಬ ಹೆಸರಿನಲ್ಲಿ ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿತ್ತು. ಕುವೆಂಪು ಅವರ ಕೆಲವು ಸಣ್ಣ ಕತೆಗಳನ್ನು “ಮಲೆಗಳಲ್ಲಿ ಮದುಮಗಳು” ಕಾದಂಬರಿಯ ಸುಮಾರು ೨೫೦ ಪುಟಗಳಷ್ಟು ಭಾಗವನ್ನು ಅನುವಾದಿಸಿದೆ. ಇವೆಲ್ಲವನ್ನೂ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಸಮಗ್ರ ಅನುವಾದವನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿಗೆ, ಅವರು ಸೂಚಿಸಿದ್ದ ಅವಧಿಯೊಳಗಾಗಿ ಕಳುಹಿಸಿಕೊಡಲಾಯಿತು. ಆದರೆ ಕುವೆಂಪು ಅವರಿಗೆ ನೊಬೆಲ್‌ಬಹುಮಾನ ಬರಲಿಲ್ಲ. ಅದು ಬೇರೆಯ ಕತೆ. ಈಗ ನಾನು ಮಾಡಿದ ಕೆಲವು ಅನುವಾದಗಳಲ್ಲಿ ನನಗೆ ಎದುರಾದ ಕೆಲವು ಸಮಸ್ಯೆಗಳನ್ನು ಮಾತ್ರ ಪ್ರಸ್ತಾಪಿಸುತ್ತೇನೆ.

ಬೆರಳ್‌ಕೊರಳ್‌ನಾಟಕದ ಪ್ರಾರಂಭದಲ್ಲೇ ಏಕಲವ್ಯನು ಹೇಳುವ ಈ ಮಾತುಗಳಲ್ಲಿನ ಪ್ರಸಾಕ್ಷರಗಳನ್ನು ಗಮನಿಸಿ :

ಸುದಿನ ಬದುಕಿದುದಕೀ ಸುದಿನ ಮನ್ಕಂಡನ್‌;
ಇಂದು ಗುರುವೈತಪನೆನ್ನೀ ವನಸ್ಥಲಕೆ!

ಇದನ್ನು ಅನುವಾದ ಮಾಡುವಾಗ, ಇದಕ್ಕೆ ಸಂವಾದಿಯಾದ ಯಾವುದೇ ಪ್ರಾಸಪದಗಳೂ ಸಿಕ್ಕುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಹೀಗೆ ಅನುವಾದ ಮಾಡಬೇಕಾಗಿ ಬಂದಿತು.

It is good to have lived all these years
Now that I see this auspicious day!
My guru will arrive today at this great abode!

ಈಸು ದಿನ – ಎಂದರೆ ಇಷ್ಟು ದಿನ – ಬದುಕಿದ್ದುದಕ್ಕೆ ಈ ಸುದಿನ – ಒಳ್ಳೆಯ ದಿನವನ್ನು ಕಂಡೆ-ಎನ್ನುವುದು ಭಾವ. ಇಲ್ಲಿ “ಈಸು ದಿನ” ಎನ್ನುವುದು ಅನಿರ್ದಿಷ್ಟ ಕಾಲವಾಚಕ. ಅವು ದಿನಗಳಾದರೂ ಆಗಬಹುದು. ತಿಂಗಳುಗಳಾದರೂ ಆಗಬಹುದು. ವರ್ಷಗಳಾದರೂ ಆಗಬಹುದು. ಆದರೆ ಇಂಗ್ಲಿಷಿನಲ್ಲಿ “These days” ಎಂದು ಅನುವಾದ ಮಾಡಿದರೆ ಅದು ಪದಶಃ ಯಥಾವತ್ತಾದ ಅನುವಾದವಾಗಬಹುದು, ಆದರೆ ಮೂಲದ ಅರ್ಥದ ಸ್ಥಿತಿಸ್ಥಾಪಕತ್ವ (elasticity) ಅದಕ್ಕಿಲ್ಲ. ಆದ್ದರಿಂದಲೇ “Years” ಎಂಬುದನ್ನು ಬಳಸಲಾಗಿದೆ. ಈ ಕೃತಿಯಲ್ಲಿ ಏಕಲವ್ಯನು ಗುರುವಿಗಾಗಿ ಕಾದದ್ದು ವರ್ಷಗಳೇ ಆದುದರಿಂದ ನಾನು ಬಳಸಿರುವ ಪದ ಸರಿಹೋಗುತ್ತದೆಯಾದರೂ ಮೂಲದ ಸ್ಥಿತಿಸ್ಥಾಪಕತ್ವವನ್ನು ಸಾಧಿಸಿದಂತೆ ಆಗುವುದಿಲ್ಲ.

ಎರಡನೆಯದಾಗಿ “ವನಸ್ಥಲಕೆ” ಎಂಬ ಮಾತು. ಅದರ ಅನುವಾದ ಪದ “Forest abode”. ಇಲ್ಲಿ ಅದು ಸರಿ ಹೋಯಿತು. ಆದರೆ ಕವಿ ಸ್ವಲ್ಪ ಮುಂದೆ ಈ “ವನಸ್ಥಲ” ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ಪ್ರಾಸ ಪದವಾಗಿಯೂ, ಅರ್ಥವ್ಯಾಪ್ತಿಯನ್ನು ಸಾಧಿಸುವುದಕ್ಕಾಗಿಯೂ ಮತ್ತೊಂದು ಪದವನ್ನು ಬಳಸುತ್ತಾರೆ :

ದಿಟಂ, ದಲ್‌! ಇಂದು ಗುರು ಬಂದಿಪ್ಪನಾಗಳೆಯೆ
ನನ್ನೀ ಮನಃಸ್ಥಲಕೆ!
ಇದರ ಅನುವಾದ ಹೀಗಾಗಿದೆ :
Indeed, my Guru has already arrived
At the abode of my heart!

ಹಿಂದೆ “ವನಸ್ಥಲ” ಎಂಬುದನ್ನು “forest abode” ಎಂಬುದಾಗಿ ಅನುವಾದ ಮಾಡಿರುವುದನ್ನು ನೆನೆಯಬೇಕು. “heart” ಎಂಬುದಕ್ಕೆ “forest” ಎಂಬುದು ಪ್ರಾಸಪದವಾಗಬೇಕಾದರೆ “abode of forest” ಎಂದು ಅನುವಾದಿಸಬೇಕಾಗುತ್ತದೆ. ಆದರೆ ಅದು ಸೂಕ್ತವಾದ ಅನುವಾದವಾಗುವುದಿಲ್ಲ.

ಮತ್ತೊಂದು ಪ್ರಸಂಗ, ಅಶ್ವತ್ಥಾಮನು ತಂದೆಯಾದ ದ್ರೋಣನನ್ನು ಝಂಕಿಸಿ ನುಡಿಯುತ್ತಾನೆ :

ಅರಸು ಮಕ್ಕಳ ಕೂಳ್ಗೆ ಆಳಾಗಿ
ಬಾಳಗೋಣನೊಡ್ಡು ತಿರ್ದಿರಿ ನರಕ ನಕ್ರದ ಬಾಯ್ಗೆ!
Having become a servant to these princes,
just for the sake of a morsel of food
you are thrusting your head now
into the very jaws of that crocodile –Hell!

ಇದೇನೋ ಸರಿ. ಅದಕ್ಕೆ ಉತ್ತರವಾಗಿ ದ್ರೋಣರು ಹೇಳುವ ಮಾತುಗಳು ಅನುವಾದವನ್ನು ಕಷ್ಟತರಗೊಳಿಸುತ್ತವೆ :

ಬರಿಯ ಜೋಳದ ಪಾಳಿಯಲ್ತು, ವತ್ಸ,
ಕೂಳಮಿಣಿಯ ಪಿಡಿದಿರ್ಪುದಾ ಬಿದಿಯ ಕೈಯ!
ನೂಂಕುತಿಹುದನಿಬರಂ ತನ್ನ ಲೀಲಾರ್ಥಂ!

ಇದರ ಅನುವಾದ ಹೀಗಾಗಿದೆ :

It is not just the indebtedness for a morsel of food, my boy
It’s fate’s hand that holds the cruel strings.
And, for her sport, is driving us all relentlessly.

“ಜೋಳದ ಪಾಳಿ” ಎಂಬುದು ಒಂದು ನುಡಿಗಟ್ಟು ಅನ್ನದ ಋಣ ಎಂಬುದು ಅದರ ಅರ್ಥ. ಕುರುವಂಶದವರು ತನಗೆ ಅನ್ನ ಹಾಕಿದ್ದಾರೆ. ಅವರ ಋಣವನ್ನು ತೀರಿಸಲು ತಾನು ಅವರಿಗಾಗಿ ಎಂತಹ ಪಾಪಕಾರ್ಯವನ್ನಾದರೂ ಮಾಡಬೇಕಾಗಿದೆ. ಇದು ಒಂದು ಅರ್ಥದಲ್ಲಿ ನಿಜ. ಆದರೆ ಅದಕ್ಕೆ ಮೀರಿದ ಕಾರಣವೂ ಇದೆ. ಅಶ್ವತ್ಥಾಮನಾಗಲಿ, ಇತರರಾಗಲಿ ಕಾಣದ ಕಾರಣ ಅದು. ದ್ರೋಣನ ಒಳ ಮನಸ್ಸು ಅವನ್ನ ಅರಿತಿದೆ. ಇಷ್ಟನ್ನೂ ಮೇಲಿನ ಮಾತುಗಳಲ್ಲಿ ಕವಿ ವ್ಯಕ್ತಪಡಿಸಿದ್ದಾರೆ.

“ಜೋಳದ ಪಾಳಿ” ಎಂದರೆ, ಅನ್ನದ ಋಣ ಎಂಬ ಕಲ್ಪನೆ ಪಾಶ್ಚಾತ್ಯರಲ್ಲಿಲ್ಲ. Loyalty ಇತ್ಯಾದಿಗಳು ನುಡಿಗಟ್ಟಿನ ಸಂಪೂರ್ಣ ಅರ್ಥವನ್ನು ಒಳಗೊಳ್ಳುವುದಿಲ್ಲ. ಆದ್ದರಿಂದ ಅದನ್ನು ವಿಸ್ತರಿಸಿಯೇ ಅನುವಾದಿಸಬೇಕಾಗುತ್ತದೆ. ಆದ್ದರಿಂದಲೇ “indebtedness for a morsel of food” ಎಂದು ಹೇಳಬೇಕಾಯಿತು. ಈ ಮೂಲ ಕಲ್ಪನೆಯ ವಿಸ್ತೃತವಾದ ಮುಂದಿನದು : ವಿಧಿಯ ಹಸ್ತವು ಕೂಳ್‌ಮಿಣಿಯನ್ನು ಎಂದರೆ ಅನ್ನದ ಋಣದ ರೂಪದ ಹಗ್ಗವನ್ನು ಹಿಡಿದಿದೆ. ಏಕೆ ಎಂದರೆ ತನ್ನ ಲೀಲೆಗಾಗಿ. “ಕೂಳ್‌ಮಿಣಿಯನ್ನು” ಎಂಬುದನ್ನು ಅನುವಾದ ಮಾಡುವುದು ಅಸಾಧ್ಯ. ಅತ್ಯಂತ ಹತ್ತಿರದ್ದು ಎಂದರೆ – food string! ಎಷ್ಟು ಅಭಾಸದ ಅನುವಾದ ! ಆದ್ದರಿಂದ cruel strings ಎಂದು ಮಾಡಬೇಕಾಯಿತು. ಆದರೆ ಮೂಲದ ಶಕ್ತಿಯುತವಾದ ರೂಪಕವೊಂದು ಹೋಯಿತು!

ಏಕಲವ್ಯನ ತಾಯಿಯ ಶಾಪವು ಅತ್ಯಂತ ಶಕ್ತಿಪೂರ್ಣವಾದ ಮಾತುಗಳಲ್ಲಿ ಅಭಿವ್ಯಕ್ತಗೊಂಡಿದೆ :

ಆರ್ಗೊಬಲ ನನ್ನ ಕಂದನ ಬೆರಳ್
ಬಲಿಯಕ್ಕೆ ಪಾಪಿಯ ಕೊರಳ್‌!

ಈ ಎರಡು ಪಂಕ್ತಿಗಳಲ್ಲಿ ವ್ಯಕ್ತವಾಗಿರುವ ಭಾವವನ್ನು ಅಂತ್ಯಪ್ರಾಸವನ್ನು ತಕ್ಕ ಮಟ್ಟಿಗೆ ಉಳಿಸಿಕೊಂಡು, ಸ್ವಲ್ಪ ವಿಸ್ತೃತ ಎಂದು ತೋರುವುದಾದರೂ, ಮೂಲಕ್ಕೆ ಸಮೀಪ ಎನ್ನಬಹುದಾದ ರೀತಿಯಲ್ಲಿ ಅನುವಾದ ಮಾಡಲು ಶ್ರಮಿಸಲಾಗಿದೆ.

He who has as sacrifice, my son’s thumb extracted
Let that sinner’s head, as sacrifice similar, beserved!

ಇನ್ನು ಕುವೆಂಪುರವರ ಕೆಲವು ಕವನಗಳ ಅನುವಾದದ ಸಮಸ್ಯೆಗಳನ್ನು ಪರಿಶೀಲಿಸೋಣ. ಅವರ ಅತ್ಯಂತ ಶಕ್ತಿಪೂರ್ಣವಾದ ಕ್ರಾಂತಿ ಕವನಗಳಲ್ಲಿ ಅಗ್ರಸ್ಥಾನದಲ್ಲಿರುವುದು “ಕಲ್ಕಿ”. ಅದರ ಆರಂಭವೇ ಓದುಗನನ್ನು ಹಠಾತ್ತಾಗಿ ತನ್ನ ಒಳಕ್ಕೆ ಎಳೆದುಕೊಳ್ಳುವಂಥದು :

ನಿದ್ದೆಯ ಲೋಕದಿ ಕನಸಿನ ಬೀದಿ,
ತಿರುಗಿದೆ, ತೊಳಲಿದೆ, ತಪ್ಪಿತು ಹಾದಿ!

ಅದರ ಅನುವಾದ ಹೀಗಾಗಿದೆ :

the dream-street in the world of sleep
I trudged and toiled, but I lost my way!

ಲೋಕದಿ, ಬೀದಿ, ಹಾದಿ ಎಂಬುವುಗಳಲ್ಲಿರುವ ಅಂತ್ಯಾಕ್ಷರ ಪ್ರಾಸವನ್ನು ತರಲು ಸಾಧ್ಯವಾಗದಿದ್ದರೂ, dream-street ಎನ್ನುವ ಸಮಾಸ ಪದವು ನಮ್ಮನ್ನು ಕುತೂಹಲದ ಲೋಕಕ್ಕೆ ಒಯ್ಯಲು ಸಹಾಯ ಮಾಡುತ್ತದೆ.

ಕಲ್ಕಿಯ ಆಗಮನದ ದೃಶ್ಯ ; ಕಲ್ಲಿಯನ್ನು ವರ್ಣಿಸುತ್ತಾ :

ಬಲಗಡೆ ಕೈಯಲಿ ಮಿಂಚಿನ ಕತ್ತಿ !
ಎಡಗಡೆ ಕೈಯಲಿ ಸಿಡಿಲಿನ ಬುತ್ತಿ!

ಎನ್ನುತ್ತಾರೆ. ಅದರ ಅನುವಾದ :

In his right hand a sword flashing like lightning,
And in his left lightning itself!

“ಸಿಡಿಲಿನ ಬುತ್ತಿ” ಎನ್ನುವುದಕ್ಕೆ ಸಂವಾದಿಯಾದ ಇಂಗ್ಲಿಷ್‌ಪದ ದೊರೆಯುವುದಿಲ್ಲ. ಏಕೆಂದರೆ “ಬುತ್ತಿ”ಯ ಕಲ್ಪನೆ ಪಾಶ್ಚಾತ್ಯರಲ್ಲಿಲ್ಲ. ಅದನ್ನು ವಿಸ್ತರಿಸಿ food prepared to be carried for a journey ಎನ್ನಬೇಕು!

“ಸಿಡಿಲಿನ ಬುತ್ತಿ” ಎನ್ನುವುದಕ್ಕೆ ಸಂವಾದಿಯಾದ ಇಂಗ್ಲಿಷ್‌ಪದ ದೊರೆಯುವುದಿಲ್ಲ. ಏಕೆಂದರೆ “ಬುತ್ತಿ”ಯ ಕಲ್ಪನೆ ಪಾಶ್ಚಾತ್ಯರಲ್ಲಿಲ್ಲ. ಅದನ್ನು ವಿಸ್ತರಿಸಿ food prepared to be carried for a journey ಎನ್ನಬೇಕು!

ಇಡೀ ಕವನದ ಮೇಲೆ ಧ್ವನಿಯ ಪ್ರಕಾಶದ ಹೊನಲನ್ನು ಚಲ್ಲುವುದು ಆ ಪದ್ಯದ ಅಂತ್ಯದ ಈ ಪಂಕ್ತಿಗಳು :

ಕಲ್ಕೀ ! ಕಲ್ಕೀ! ಎನ್ನುತ ಚೀರಿ
ಕನಸಿನಿಂದೆದ್ದೆ!
ಇನ್ನೆಲ್ಲಿಯ ನಿದ್ದೆ?

ಅದರ ಅನುವಾದ :

“Kalki, O it’s Kalki” I screamed
The dream was broken,
And I was swake !
How cloud there be any more sleep?

“ಇನ್ನೆಲ್ಲಿಯ ನಿದ್ದೆ!” ಎಂಬ ಧ್ವನಿಯ ಗಣಿಯನ್ನು ಇಂಗ್ಲಿಷಿನಲ್ಲಿ ತರುವುದು ಎಷ್ಟು ಕಷ್ಟ ಸಾಧ್ಯ ಎಂಬುದನ್ನು ಸುಲಭವಾಗಿ ಊಹಿಸಬಹುದು.

ಕುವೆಂಪು ಅವರ ಇನ್ನೊಂದು ಪ್ರಖ್ಯಾತ ಕವನ “ಗೊಬ್ಬರ” ಐದು ಮಾತ್ರಗಳ ನಾಲ್ಕು ಗಣಗಳ ಪಂಕ್ತಿಗಳಲ್ಲಿ ನಿರ್ವಹಿಸಿರುವ ಈ ಕವನದ ಅನುವಾದ ಒಂದು ದೃಷ್ಟಿಯಿಂದ ಅಷ್ಟೇನೂ ಕಷ್ಟವಲ್ಲದ್ದು. ಈ ಸೌಲಭ್ಯಕ್ಕೆ ಕಾರಣ ಇದು ಭಾವ ಪ್ರಧಾನವಲ್ಲದೆ ಇರುವುದು. ವಾದ, ನಿರೂಪಣೆಗಳು ಅನುವಾದ ಕಾರ್ಯವನ್ನು ಹಗುರಗೊಳಿಸುತ್ತವೆ. ಈ ಕೆಳಗಿನ ಪಂಕ್ತಿಗಳನ್ನು ನೋಡಿ :

ಕವಿತೆ, ಭೂಪಾಲಕರ ಮನೆಯಲ್ಲಿ ಕೈಕೆಸರು
ಮಾಡಿಕೊಳದೆಯೆ ಮೊಸರನುಣುತಿರ್ದ ಪಂಡಿತರ
ದಿವ್ಯ ಜಿಹ್ವಾ ಲಸದ್ರಂಗದಲಿ ಕುಣಿದಾಡಿ
ಸುಳಿದಾಡಿ ನಲಿದಾಡಿದಾ ನೀನು, ಹಾ! ಇಂದು
ಕೊಳೆದು ನಾರುವ ರೈತನೊಡಗೂಡಿ ಒದ್ದಾಡಿ,
ಗಂಧ ಪುನುಗು ಜವಾಜಿ ಕಸ್ತೂರಿಗಳನುಳಿದು
ಸೆಗಣಿಗಂಪಾಘ್ರಣಿ ಪಂತಾಯ್ತೆ? ಕೋಕಿಲೆಯ
ಸ್ತೋತ್ರಗೈದಾ ನೀನು ಪಾಳುಗೂಬೆಯ ಕುರಿತು
ಪಾಡುವಂತಾಯ್ತೆ?

ಇದರ ಅನುವಾದ ಹೀಗಾಗಿದೆ :

“O poem, thou who didst freely move about,
Frisk and dance on the dancing stage
of the divine tongues of pundits
Who, without soiling their hands with mire,
Sat at banquets in the palaces of kings,
Alas ! that thou shouldst wallow today
In the company of the rotting, stinking peasant,
And relinquishing sandal paste,
Musk of the musk-ox, the musk-cat and the musk-deer,
shouldst perforce breathe the odour of cow-dung!

ಮೂಲದ ಯಾವುದೇ ಪದದ ಅನುವಾದವೂ ಇಲ್ಲಿ ಬಿಟ್ಟು ಹೋಗಿಲ್ಲ ಎಂಬುದನ್ನು ಗಮನಿಸಬಹುದು.

ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಅನುವಾದವು ಅಸಾಧ್ಯ ಎಂದು ನನಗೆ ತೋರಿದ ಕೆಲವು ಭಾಗಗಳಲ್ಲಿ ಈ ಕೆಳಗಿನದೂ ಒಂದು :

ಬ್ರಹ್ಮಕೃತಿಯೊಳ ಸಚ್ಚಿದಾನಂದಮಂ
ವ್ಯಕ್ತಗೊಳಿಪಂತುಟಾ ಅವ್ಯಕ್ತಪರಮ ತತ್ವಂ
ವರಕವಿಯ ಕಾವ್ಯ ಸತ್ತಯೊಳಾತ್ಮರಸ ಸತ್ಯಮಂ
ಪ್ರಕಟಿಸುವನೀ ಬ್ರಹ್ಮ ನನ್ಯವಿಧದಿಂದೆಮ್ಮ
ಮರ್ತ್ಯಪೃಥಿವೀ ತತ್ವದೊಳ ಪ್ರಕಟನಾ ಸಾಧ್ಯಮಂ,
ಅನಿರ್ವಚನ ಬೋಧ್ಯಮಂ. ಪ್ರತಿಭಾ ವಿಧಾನದಿಂ
ರಷಋಷಿ ರತಿಭಾನ ಮಾತ್ರ ಸಂವೇದ್ಯಮಂ

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯವರು ಪ್ರಕಟಿಸಿರುವ ನನ್ನ “ಕುವೆಂಪು” ಎಂಬ ಇಂಗ್ಲಿಷ್‌. ಪುಸ್ತಕದಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಕೆಲವು ಭಾಗಗಳನ್ನು ಅನುವಾದಿಸಿದ್ದೇನೆ. ಶ್ರೀಕುವೆಂಪು ಅವರು ಆ ಅನುವಾದವನ್ನು ಮೆಚ್ಚಿಕೊಂಡರು ಎಂದು ಸಂತೋಷದಿಂದ ಇಲ್ಲಿ ಹೇಳಬಹುದು.

ಶ್ರೀ ರಾಮಾಯಣ ದರ್ಶನಂ ಕೃತಿಯ ದರ್ಶನದ ಅಂಶಗಳಲ್ಲಿ ಒಂದನ್ನು ಸಾರುವ ಪಂಕ್ತಿಗಳು ಇವು :

ನೆಯ್ದಾಳುತಿದೆ ಜಗವನೊಂದತಿವಿರಾಣ್ ಮನಂ,
ಸೂಕ್ಷ್ಮಾತಿಸೂಕ್ಷ್ಮ ತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ್ಯ ಭಾವಮಂ
ನೀಡಿ. ಮಂಥರೆ ಸೀತೆ ರಾಮ ರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ವಿಧಿಯ ಹಸ್ತದಲಿ?

ಅದರ ಅನುವಾದ ಹೀಗೆ ಬಂದಿದೆ :

The cosmic mind hath woven creation’s web,
Pervadeth and ruleth it all ;
Ir bindeth all things, sentient and insentient
With the subtle strings ;
Yet hath made all beings feel
That they are perfectly free ! All, however, are
But puppets – Rama or Sita, Manthara or Ravanna-
Dancing to the tunes of the unseen puller!

ಮಾಣ್ಬುದು ನಿರಾಶೆಯಂ ಹೇ
ವಿಹಂಗಮ ತಪಸ್ವಿ. ದೈವಕೃಪೆಗೀ ಕ್ಲೇಶಮುಂ
ರೆಂಕೆಯಪ್ಪುದು ! ಶಂಕೆಯೇಕೆ? ಋಷಿವಾಣಿಯುಂ
ಪುಸಿವುದೇಂ? ಬಲಹೀನನಿಂದೇಂ ಮಹತ್ಕಾರ್ಯ
ಸಿದ್ಧಿಯೆಂದೇಕೆ ಸಂದೆಯ ಪಡುವೆ? ಶಿವಕೃಪೆಗೆ
ತೃಣಮೆ ಖಡ್ಗಂ ; ಪನಿ ಕಡಲ್‌, ಕಿಡಿ ಸಿಡಿಲ್‌, ಶ್ರದ್ಧೆ ತಾಂ
ಸಾಣೆಯಿರೆ, ತಾಳ್ಮೆಯ ತಪಂ ಧರ್ಮಶಕ್ತಿಯುಂ
ಯೋಗಗೊಂಡಿರೆ, ಕರ್ಮಿಯಯ್ಕಾಯ್ವಾತನುಂ, ಶಿಲ್ಪಿ
ಕೈಯಿಟ್ಟರಾ ಕಾಣ್ಬಕಾಡುಗಳಲ್ಲಿಂದುಣ್ಮದೇಂ
ಕಲಾ ಪ್ರತಿಮೆ? ನಿಶ್ಯಬ್ದಯೈ ಈಶ್ವರ ಕೃಪಾಬ್ಧಿ
ಬರ್ಪುದನರಿಯಲಾರವಂತೆಯ ಮಹತ್ಕೃತಿ ತಾಂ
ಮಹನ್ಮೌನಿ, ನೀರಿಯುವನಿತರೊಳೆ ನಿನ್ನಿಂದೆ
ಸಂಘಟಿಸಬಪ್ಪುದಘಟನ ಭಾವಿತಂ.”

ಇದರ ಅನುವಾದ ಹೀಗಿದೆ :

O thou Bird-Penitent, cease this thine despair ;
For even this affliction of thine can, by divine grace,
Grow thee thy wings, why dost thou doubt yet?
Could the voice of the sage ever utter falsehood?
What can a disabled one like me hope to achieve?
Thou fearest, dost thou not? Give up such fears.
The Lord’s grace can change a mere straw into a swrod,
A mere drop into an ocean, a mere spark into a lighting ;
Patience itself is penance, if faith doth give it edgbe;
Let waiting be mingled with righteousness, and then
He who but wits will still be a true doer. The merest touch
by the sculptor, and your rough rock doth assume
The form of an artistic image, doth it not? Silent, my friend
Is the Lord’s ocean of grace. It’s not given to us
To discern what’s to come. The greatest event, likewise,
Remains unproclaimed. Ere thourt aware,
What to the now seemeth impossible may become real.

ವಿಹಂಗಮ ತಪಸ್ವಿ ಎಂಬುದನ್ನು Bird-penitent ಎಂದು ಅನುವಾದ ಮಾಡಲಾಗಿದೆ. ಇಲ್ಲಿ ಸಂಪಾತಿಯು ಬರಿಯ ತಪಸ್ವಿಯಲ್ಲ. ಭಯಂಕರಾಕಾರದ ಸರ್ಪವನ್ನು ಹೊತ್ತು ಹಾರುತ್ತಿರಲು. ಆ ಸರ್ಪವು ಕಚ್ಚಿ ಹಿಡಿದಿದ್ದ ಪರ್ವತಾಕಾರದ ತಿಮಿಂಗಲವು ಕೆಳಕ್ಕೆ ಬಿದ್ದು ಮುನಿವರ ನಿಶಾಕರನ ಋಷ್ಯಾಶ್ರಮವನ್ನು ನುಚ್ಚುನೂರು ಮಾಡಿತು: ಋಷಿಯು ಸಂಪಾತಿಗೆ ಶಾಪ ಕೊಡಲಿಲ್ಲ. ಬದಲಿಗೆ ನಿನ್ನ ಕರ್ಮಕ್ಕೆ ತಕ್ಕ ಶಿಕ್ಷಾಫಲವು ಒದಗುತ್ತದೆ. ಎಂದಷ್ಟೇ ಹೇಳಿದ. ಅದರಂತೆ ಒಮ್ಮೆ ಸೂರ್ಯನನ್ನು ಸಮೀಪಿಸುತ್ತಿದ್ದ ಸಂಪಾತಿಯ ಗರಿಗಳು ಸುಟ್ಟು ಸೀದು ಈಗ ಅವನು ಚಲನೆಯನ್ನು ಕಳೆದುಕೊಂಡು ಕುಳಿತಿದ್ದಾನೆ. ಋಷಿಯ ಆಶ್ವಾಸನೆಯಂತೆ ತನಗೆ ಒಳ್ಳೆಯ ದಿನಗಳು ಬರುವುದನ್ನು ನಿರೀಕ್ಷಿಸುತ್ತಿದ್ದಾನೆ. ಆದುದರಿಂದ-ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಿರುವವನು ಎಂಬ ಅರ್ಥವಿರುವ ಎಂಬುದನ್ನು penitent ಬಳಸಲಾಗಿದೆ.

ಆದರೆ “ಶಿವಕೃಪೆಗೆ ತೃಣಮೆ ಖಡ್ಗಂ ; ಪನಿ ಕಡಲಂ, ಕಿಡಿ ಸಿಡಿಲ್‌” ಎಂಬ ಶಕ್ತಿ ಪೂರ್ಣವಾದ, ಮಂತ್ರ ಸದೃಶವಾದ ಮಾತುಗಳನ್ನು ಅನುವಾದ ಮಾಡುವಾಗ ಮೂಲದ ಅಡಕ ಗುಣವನ್ನು ತರುವುದು ಅಸಾಧ್ಯವಾಗಿ ಕಂಡು –The Lord’s grace can change a mere straw into a sword, a mere drop into an ocean and a mere spark into a lightning ಎಂದು ವಿಸ್ತೃತಾನುವಾದವನ್ನು ಮಾಡಲಾಗಿದೆ.

ಕೊನೆಯದಾಗಿ ಕುವೆಂಪುರವರ ಮಹಾಕಾದಂಬರಿ “ಮಲೆಗಳಲ್ಲಿ ಮದುಮಗಳು” ಅನುವಾದವನ್ನು ಕುರಿತು ಕೆಲವು ಟಿಪ್ಪಣಿಗಳು. ಆ ಕಾದಂಬರಿಯ ಮೊದಲ ೨೫೦ ಪುಟಗಳನ್ನು ಮಾತ್ರ ನಾನು ಅನುವಾದ ಮಾಡ್ಡಿದ್ದೇನೆ. ಕುವೆಂಪುರವರು ತಮ್ಮ ಕಾದಂಬರಿಯಲ್ಲಿ ಸಂಸ್ಕೃತ ಪದಗಳಿಂದ ತುಂಬಿದ ಶೈಲಿಯಿಂದ ಹಿಡಿದು ಮಲೆನಾಡಿನ ವಿವಿಧ ಸ್ತರಗಳ ಜನರ ಆಡುಭಾಷೆಯವರೆಗೂ ವಿಭಿನ್ನ ಶೈಗಳನ್ನು ಬಳಸುವುದರಿಂದ ಅನುವಾದದ ಕಷ್ಟವು ಎಷ್ಟೋ ಪಾಲು ಹೆಚ್ಚುತ್ತದೆ. ಕನ್ನಡದ ಆಡುಭಾಷೆಗೆ ಸಂವಾದಿಯಾದ ಇಂಗ್ಲಿಷ್‌ಆಡುಭಾಷೆ ಇಲ್ಲಿದಿರುವುದರಿಂದ, ಅನುವಾದವೆಲ್ಲವೂ ಶಿಷ್ಟಭಾಷೆಯ ಏಕತಾನದಲ್ಲೇ ಸಾಗುವುದು ಅನಿವಾರ್ಯವಾಗುತ್ತದೆ. ಅಲ್ಲದೆ ಕುವೆಂಪು ಬಳಸಿರುವ ಭಾಷೆಯ ಸೊಗಡನ್ನು ಇಂಗ್ಲಿಷಿನಲ್ಲಿ ತರುವುದು ಸಾಧ್ಯವಾಗದೆ. ಮೂಲಕ್ಕೆ ಅಪಚಾರವನ್ನು ಮಾಡುವುದು ಅನಿವಾರ್ಯವಾಗುತ್ತದೆ.

ನಿರೂಪಣೆಯಲ್ಲಿ ಕುವೆಂಪುರವರು ಶಿಷ್ಟಶೈಲಿಯನ್ನು ಬಳಸುತ್ತಾರೆ. ಒಂದು ಉದಾಹರಣೆಯನ್ನು ನೋಡಬಹುದು :

‘‘ಮುಪ್ಪಿಗೆ ಇರುಳೆಂದರೆ ಅನಿವಾರ್ಯವಾದ ಒಂದು ಮಹಾ ಈತಿಬಾಧೆ. ಸಾವಿನ ಅನಂತ ನಿದ್ರೆ ಬಳಿಸಾರಿರುವುದರಿಂದಲೋ ಏನೋ ಬಾಳೆಲ್ಲ ದುಃಸ್ವಪ್ನವೆಂಬಂತೆ ಆಯಾಸಕರಾಗಿ ಪರಿಣಮಿಸುತ್ತದೆ. ಇಷ್ಟವಿರಲಿ ಬಿಡಲಿ ಮರಣಕ್ಕೆ ಮುಳುಗಲೇಬೇಕಾಗುತ್ತದೆ ಎಂಬ ಅರಿವಿನಿಂದ ಮೈದೋರುವ ಆತ್ಮದ ಅಶಾಂತಿ ನಿರಾಕಾರವಾಗಿದ್ದರೂ ಸಾಂಸಾರಿಕವಾದ ನೂರಾರು ಕೋಟಲೆಗಳ ಆಕಾರ ತಾಳಿ ನಿದ್ದೆಯನ್ನೆಲ್ಲಾ ಕದಡಿಬಿಡುತ್ತದೆ.”

ಇದರ ಅನುವಾದ ಹೀಗಾಗಿದೆ :

“To old age night is an inevitable evil. Life, in its entirety, seems a nightmare and becomes tedious ; this is perhaps because the endless sleep o death is drawing near. The restlessness of the spirit, springing from the knowledge that, whether one likes it or not, one must sink to death, is a formless thing. Yet it takes the form of hundreds family troubles, and upsets sleep completely.”

ಆಡು ಮಾತಿನ ಸೊಗಡನ್ನು ತೋರಿಸಲು ಒಂದು ಸಂಭಾಷಣೆಯ ಭಾಗವನ್ನು ನೋಡೋಣ :

ಹೆಗ್ಗಡೆಯವರು ಅತ್ತ ನೋಡಿ “ನಿನ್ನೇನೆ ಬರ್ತಿನಿ ಅಂದಿದ್ದ. ಒಂದು ಹಂದಿಮರಿ ಬೇಕು ಅಂತಾ ಹೇಳಿದ್ವ, ಬಾ ಕೊಡ್ತೀನಿ ಅಂದಿದ್ದೆ.”

“ಯಾವುದನ್ನು ಕೊಡ್ತೀಯಾ ಅಪ್ಪಯ್ಯಾ?”

“ಯಾವುದ್ನಾದ್ರೂ ಕೊಡಾದಪ್ಪ. ಸುಮ್ಮನೆ ಬಡ್ಡೀಲಿಟ್ಟುಕೊಂಡು ಮಾಡುದೇನು? ಮದೇಮನೆ ಕುರ್ಚಿಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದ್ನೆಲ್ಲಾ ಕೊಟ್ಟುಬಿಡ್ತೀನಿ. ನನಗೂ ವಯಸ್ಸಾತು. ನೋಡಿಕೊಳ್ಳೊರೂ ಯಾರೂ ಇಲ್ಲ. ನಿನ್ನ ಅಣ್ಣ ಒಬ್ಬ ಇದಾನೆ ಕೂಳು ಕರ್ಚಿಗೆ ಎಷ್ಟು ನೀನಾದ್ರೂ ಇನ್ನೆಷ್ಟು ದಿನಾ ಅಂತ ಇಲ್ಲಿ….?”

“ಆ ದಡ್ಡಮರಿ ನನಗಿರಲಪ್ಪಯ್ಯಾ. ಸರಿಪಾಲಿಗೆ ಸಾಕಾಕೆ ಕೊಡ್ತೀನಿ. ಹೊಲೇರ ಗುತ್ತಿ ಸಾಕ್ತೀನಿ ಅಂದಾನೆ” ಮಂಜಮ್ಮ ಗೊಬ್ಬೆ ಸೆರಗು ಸರಿಮಾಡಿಕೊಳ್ಳುತ್ತಾ ನಾಚಿಕೆಯಿಂದಲೆಂಬಂತೆ ಮಾತಾಡಿದಳು.

Looking that way. Heggade said. “He’d promised to come yesterday. He wanted a pigling, I’d promosed to give him one and had asked him to come for it.”

“Which one are you going to give him. Daddy”?

“I’ll give him something or the other. What’s the use of keeping them in the sty? I’ll keep as many as are needed for the marriage, and give away te rest. I’m getting very old, and there’s no one to look after them. There’s your brother. But only to eat idle bread. As for you. How long are you going to remain here…?”

“Let me have that male piggy, daddy dear. I’ll give it to some one to breed it well. Gutti the Paraih has promised to do so,” said Manjamma shyly, adjusting the fold of her sari.

ಇವು, ಕುವೆಂಪುರವರ, ವೈವಿಧ್ಯಮಯವಾದ ಶೈಲಿಯಲ್ಲಿರುವ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಲು ಹೊರಡುವ ಭಾಷಾಂತರಕಾರನಿಗೆ ಒದಗುವ ಕಷ್ಟಗಳಲ್ಲಿ ಕೆಲವು ಮಾತ್ರ. ಯಾವುದೇ ಭಾರತೀಯ ಭಾಷೆಯಿಂದ ಯಾವುದೇ ಕೃತಿಯನ್ನಾಗಲೀ ಇಂಗ್ಲಿಷಿಗೆ ಅನುವಾದ ಮಾಡುವಾಗಲೂ ಈ ರೀತಿಯ ಕಷ್ಟಪರಂಪರೆಗಳನ್ನು ಅನುವಾದಕನು ಎದುರಿಸುವುದು ಅನಿವಾರ್ಯವಾಗುತ್ತದೆ.