ಶ್ರೀ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯಕ್ಕೆ ತಾನು ಇತ್ತೀಚೆಗಷ್ಟೆ ಸ್ಥಾಪಿಸಿರುವ “ಪಂಪ ಪ್ರಶಸ್ತಿ”ಯನ್ನು ನೀರಿವುದಾಗಿ ಕರ್ನಾಟಕ ಸರ್ಕಾರವು ಪ್ರಕಟಿಸಿದೆ. ಸದ್ಯಕ್ಕೆ ಭಾರತದಲ್ಲಿ ಒಂದು ಸಾಹಿತ್ಯ ಕೃತಿಯು ಪಡೆಯಬಹುದಾದ ಅತಿ ಹೆಚ್ಚಿನ ಮೊತ್ತವೆಂದರೆ ಜ್ಞಾನಪೀಠ ಪ್ರತಿಷ್ಠಾನವು ನೀಡುವ ಒಂದೂವರೆ ಲಕ್ಷ ರೂಪಾಯಿ ಅದನ್ನು ಬಿಟ್ಟರೆ ಕರ್ನಾಟಕದಲ್ಲಿ ಒಂದು ಸಾಹಿತ್ಯ ಕೃತಿಗೆ ದೊರಕಬಹುದಾದ ಅತಿ ಹೆಚ್ಚಿನ ಮೊತ್ತವೆಂದರೆ ಕರ್ನಾಟಕ ಸರ್ಕಾರವು “ಪಂಪ ಪ್ರಶಸ್ತಿ”ಯ ಜೊತೆಯಲ್ಲಿ ನೀಡುತ್ತೇನೆ ಎಂದು ಘೋಷಿಸಿರುವ ಒಂದು ಲಕ್ಷ ರೂಪಾಯಿ.

ಮೊದಲ “ಪಂಪ ಪ್ರಶಸ್ತಿ”ಯನ್ನು ಪಡೆಯುತ್ತಿರುವ “ಶ್ರೀರಾಮಾಯಣ ದರ್ಶನಂ” ಅನೇಕ ದೃಷ್ಟಿಗಳಿಂದ ಕನ್ನಡದ ಗೌರವವನ್ನು ಹಿಮಾಲಯದೆತ್ತರಕ್ಕೆ ಏರಿಸಿರುವ ಕೃತಿ. ಕನ್ನಡಕ್ಕೆ ಮೊದಲ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ತಂದುಕೊಟ್ಟ ಕೃತಿ ಅದು. (೧೯೫೫). ಹಾಗೆಯೇ ಕನ್ನಡಕ್ಕೆ ಮೊದಲ ಬಾರಿಗೆ “ಜ್ಞಾನಪೀಠ ಪ್ರಶಸ್ತಿ”ಯನ್ನು ತಂದುಕೊಟ್ಟ ಕೃತಿ ಕೂಡ ಅದೆ (೧೯೬೮). ಭರತಖಂಡದ ಎಲ್ಲ ಭಾಷೆಗಳಲ್ಲಿ ಪ್ರಕಟವಾಗುವ ಸಾಹಿತ್ಯ ಕೃತಿಗಳನ್ನೂ ತೂಗಿ ನೋಡಿ ಅವುಗಳಲ್ಲಿ ಅತ್ಯುತ್ತಮ ಎಂದು ವಿದ್ವಾಂಸರು ಒಪ್ಪುವ ಕೃತಿಯನ್ನು ಆರಿಸಿ ಅದಕ್ಕೆ ನೀಡಲಾಗುವ ಗೌರವ “ಜ್ಞಾನಪೀಠ ಪ್ರಶಸ್ತಿ”.

ವಿಶಿಷ್ಟ

ಪ್ರಪ್ರಥಮ “ಪಂಪ ಪ್ರಶಸ್ತಿ”ಯೂ ವಿಶಿಷ್ಟವಾದದ್ದೇ. ಅದನ್ನು ನೀಡಲು ಸರ್ಕಾರವು ಅನುಸರಿಸಿರುವ ವಿಧಾನವನ್ನು ಸ್ಥೂಲವಾಗಿ ಪರಿಶೀಲಿಸಿದರೂ ಅದು ಸ್ಪಷ್ಟವಾಗುತ್ತದೆ. ೧೯೮೭ರ ಮೊದಲ ಬಹುಮಾನವನ್ನು ೧೯೮೮ರಲ್ಲಿ ನೀಡಲಾಗುತ್ತದೆ ಎಂದೂ, ೧೯೪೭ ಆಗಸ್ಟ್‌೧೫ ರಿಂದ ೧೯೬೬ ಡಿಸೆಂಬರ್‌೩೧ರವರೆಗಿನ ಅವಧಿಯಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟಿಸಿದ ಒಂದು ಅತ್ಯುತ್ತಮ ಸೃಜನಶೀಲ ಕೃತಿಗೆ ಈ ಬಹುಮಾನವನ್ನು ನೀಡಲಾಗುವುದು ಎಂದೂ ಸರ್ಕಾರವು ಪ್ರಕಟಿಸಿತು. ಕೃತಿಯ ಆಯ್ಕೆ ಅತ್ಯಂತ ವೈಜ್ಞಾನಿಕವೂ ತರ್ಕಸಮ್ಮತವೂ ಆದ ನಿಯಮಾವಳಿಗಳನ್ನು ಸರ್ಕಾರವು ರೂಪಿಸಿತು. ಬಹುಮಾನಕ್ಕಾಗಿ ಪುಸ್ತಕವನ್ನು ಆಯ್ಕೆ ಮಾಡಲು ಒಂದು ಸಮಿತಿ ರಚಿತವಾಯಿತು.

ರಾಷ್ಟ್ರಖ್ಯಾತಿಯ ಸಾಹಿತಿ-ವಿಮರ್ಶಕ-ವಿದ್ವಾಂಸ ಡಾ. ವಿ. ಕೃ. ಗೋಕಾಕರು ಸಮಿತಿಯ ಅಧ್ಯಕ್ಷರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ. ಎಸ್‌. ಶಿವರುದ್ರಪ್ಪನವರ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿನಿಧಿಯಾಗಿ ಪ್ರಖ್ಯಾತ ಕಾದಂಬರಿಕಾರ ಡಾ. ಎಸ್‌. ಎಲ್‌. ಭೈರಪ್ಪನವರ, ಸುಪ್ರಸಿದ್ಧ ಸಾಹಿತಿಗಳೂ ವಿಮರ್ಶಕರೂ ಆಗಿರುವ ಡಾ. ಸಿದ್ದಯ್ಯ ಪುರಾಣಿಕರು, ಡಾ. ಜಿ. ಎಸ್‌. ಆಮೂರರು, ಡಾ. ಹಾ. ಮಾ. ನಾಯಕರು ಮತ್ತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು ಈ ಸಮಿತಿಯ ಸದಸ್ಯರು.

ಕರ್ನಾಟಕದಲ್ಲಿ ತಮ್ಮ ಕೃತಿಗಳಿಂದಲೂ ವಿದ್ವತ್ತಿನಿಂದಲೂ ಸ್ಥಾನಮಾನಗಳನ್ನು ಗಳಿಸರುವ ಇಪ್ಪತ್ತೈದು ಜನ ಸಾಹಿತಿಗಳು ಪಂಪ ಪ್ರಶಸ್ತಿಗಾಗಿ ಶಿಫಾರಸ್ಸುಗಳನ್ನು ಕಳುಹಿಸುವಂತೆ ಕೋರಲಾಯಿತು. ಅವರ ಶಿಫಾರಸುಗಳ ಆಧಾರದ ಮೇಲೆ ೧೯೪೭ರ ಆಗಸ್ಟ್‌೧೫ರ ಅನಂತರ ಎರಡು ದಶಕಗಳಲ್ಲಿ ಪ್ರಥಮ ಬಾರಿಗೆ ಪ್ರಕಟವಾದ ಸರ್ವಶ್ರೇಷ್ಠ ಕೃತಿ ಶ್ರೀ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ” ಎಂದು ತೀರ್ಮಾನವಾಗಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಮಹತ್ವದ ನಿರ್ಣಯ

೧೯೮೮ರ ಮಾರ್ಚ್‌ತಿಂಗಳಲ್ಲಿ ಎಂದರೆ ಒಂದು ವರ್ಷದ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯವರಿಂದ ಕುವೆಂಪು ಅವರಿಗೆ ಒಂದು ಪತ್ರ ಬಂದಿತು. ಅದರ ಒಕ್ಕಣೆ ಹೀಗಿದೆ. “ಸಾಹಿತ್ಯ ಅಕಾಡೆಮಿಯು ಪ್ರತಿವರ್ಷವೂ ನೊಬೆಲ್‌ಬಹುಮಾನಕ್ಕಾಗಿ ಶಿಫಾರಸ್ಸುಗಳನ್ನು ಕಳುಹಿಸಬೇಕೆಂದು ತೀರ್ಮಾನಿಸಿದೆ. ಅಕಾಡೆಮಿಯ ಕಾರ್ಯಕಾರಿ ಸಮಿತಿಯು ೧೯೮೮ರ ಮಾರ್ಚ್‌೧೨ ರಂದು ನಡೆದ ಸಭೆಯಲ್ಲಿ ೧೯೮೯ರ ನೊಬೆಲ್‌ಬಹುಮಾನಕ್ಕೆ ತಮ್ಮ ಹೆಸರನ್ನು ಶಿಫಾರಸ್ಸು ಮಾಡಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಿದೆ.”

ಭಾರತದ ಎಲ್ಲ ಪ್ರಮುಖ ಭಾಷಾ ಸಾಹಿತ್ಯಗಳ ಹೆಸರಾಂತ ಸಾಹಿತಿಗಳು, ವಿದ್ವಾಂಸರು ಕೇಂದ್ರ ಸಾಹಿತ್ಯ ಅಕಾಡೆಮಿಯ ಸಮಿತಿಯ ಸದಸ್ಯರು ಎಂಬುದು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದುದರಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯು ನೊಬೆಲ್ ಪ್ರಶಸ್ತಿಗೆ ಭಾರತದಿಂದ ಒಬ್ಬ ಸಾಹಿತಿಯನ್ನು ನಾಮಕರಣ ಮಾಡುವ ಅವಕಾಶ ಮೊದಲ ಬಾರಿಗೆ ದೊರೆತಾಗ ಕನ್ನಡದ ಸಾಹಿತಿಯೊಬ್ಬರನ್ನು ಸರ್ವಾನುಮತದಿಂದ ಆರಿಸಿದ್ದು ಅನೇಕ ದೃಷ್ಟಿಗಳಿಂದ ಅತ್ಯಂತ ಮಹತ್ವಪೂರ್ಣವಾದ ವಿಷಯ. ಯಾವ ಯಾವ ಅಂಶಗಳು ಸೇರಿ ಈ ಮಹತ್ವಪೂರ್ಣವಾದ ನಿರ್ಣಯವನ್ನು ಸಾಧ್ಯಗೊಳಿಸಿದುವು ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ಪ್ರಯೋಜನಕಾರಿಯಾದದ್ದು ಎಂಬುದು ನನ್ನ ನಂಬಿಕೆ.

ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಇಪ್ಪತ್ತಮೂರು ಜನ ಭಾರತೀಯ ಸಾಹಿತಿಗಳಲ್ಲಿ ಕವಿಗಳಿದ್ದಾರೆ. ನಾಟಕಕಾರರಿದ್ದಾರೆ, ಕಾದಂಬರಿಕಾರರಿಂದ್ದಾರೆ. ಅವರಲ್ಲಿ ಅನೇಕರು ಸಾಹಿತ್ಯದ ಒಂದು ಅಥವಾ ಎರಡು ಪ್ರಕಾರಗಳಲ್ಲಿ ಉದ್ಧಾಮವಾದ ಕೃತಿಗಳನ್ನು ರಚಿಸಿದ್ದಾರೆ. ಆದರೆ ಕುವೆಂಪುರವರಾದರೋ ಭಾವಗೀತೆ, ಮಹಾಕಾವ್ಯ, ನಾಟಕ, ಕಾದಂಬರಿ, ಸಾಹಿತ್ಯ, ವಿಮರ್ಶೆ, ಜೀವನ ಚರಿತ್ರೆ- ಈ ಒಂದೊಂದು ಪ್ರಕಾರದಲ್ಲಿಯೂ ಶಾಶ್ವತವಾಗಿ ನಿಲ್ಲಬಲ್ಲ ಆಚಾರ್ಯ ಕೃತಿಗಳನ್ನು ರಚಿಸಿದ್ದಾರೆ.

ಮೇಲೆ ಹೇಳಿದ ಯಾವುದೇ ಒಂದು ಪ್ರಕಾರದಲ್ಲಿ ಅವರು ರಚಿಸಿರುವ ಕೃತಿಗಳು. ಅವರಿಗೆ ಕನ್ನಡದಲ್ಲಿ ಪಂಪ-ಕುಮಾರವ್ಯಾಸರ, ಟಾಲ್‌ಸ್ಟಾಯ್‌ಡಾಸ್ಟೋವ್‌ಸ್ಕಿಯವರ, ವರ್ಡ್ಸ್‌ವರ್ತ್‌, ಷೆಲ್ಲಿಯವರ, ಬಾಸ್‌ವೆಲ್‌ಅವರ ಸ್ಥಾನವನ್ನು ದೊರಕಿಸಿಕೊಡುವುದರಲ್ಲಿ ಸಮರ್ಥವಾಗಿ ನಿಂತಿವೆ.

ಹೋಮರ್‌ವರ್ಜಿಲ್‌ಡಾಂಟೆ, ಮಿಲ್ಟನ್‌ಮುಂತಾದವರು ಮಹಾಕಾವ್ಯಗಳನ್ನು ಬರೆದು ಕೀರ್ತಿಯನ್ನು ಸ್ಥಾಪಿಸಿದವರು. ಕಾಳಿದಾಸ ಮಹಾಕಾವ್ಯಗಳ ಜೊತೆಗೆ ನಾಟಕಗಳನ್ನು ಬರೆದು ಶಾಶ್ವತವಾದ ಕೀರ್ತಿಯನ್ನು ಪಡೆದವನು. ಷೇಕ್ಸ್‌ಪಿಯರ್‌ನಾಟಕಗಳನ್ನೂ ಸಾನೆಟ್‌ಗಳನ್ನೂ ಬರೆದು ಯಶಸ್ಸನ್ನು ಪಡೆದವನು. ವರ್ಡ್ಸ್‌ವರ್ತ್‌, ಷೆಲ್ಲಿಕೀಟ್ಸ್‌ಮುಂತಾದವರು ಭಾವಗೀತೆಯ ಜಗತ್ತಿನ ಸಾರ್ವಭೌಮರು. ಆಧುನಿಕ ಯುಗದಲ್ಲಂತೂ ಮಹಾಕಾವ್ಯಗಳನ್ನು ಅದರಲ್ಲಿಯೂ ಸತ್ವಪೂರ್ಣವಾದ ಮಹಾಕಾವ್ಯಗಳನ್ನು ಬರೆದವರು ತೀರ ವಿರಳ.

ಬಹುಭಾಷಾ ಪಂಡಿತರೂ, ಸ್ವಯಂ ಸಾಹಿತಿಗಳೂ ಆಗಿದ್ದ ದಿವಂಗತ ಮಂಜೇಶ್ವರ ಗೋವಿಂದ ಪೈಅವರು ನನಗೊಮ್ಮೆ ಹೇಳಿದರು: ಮಿಲ್ಟನ್‌ಕವಿಯ ಪ್ಯಾರಡೈಸ್‌ಲಾಸ್ಟ್‌ಮತ್ತು ಪ್ಯಾರಡೈಸ್‌ರಿಗೆಯ್ನ್‌ಮಹಾಕಾವ್ಯಗಳ ಅನಂತರ ಜಗತ್ತಿನ ಯಾವುದೇ ಭಾಷೆಯಲ್ಲಿ “ರಾಮಾಯಣ ದರ್ಶನಂ” ಮಹಾಕಾವ್ಯದ ಪ್ರಮಾಣದ ಮಹಾಕಾವ್ಯ ರಚಿತವಾದದ್ದು ನನಗೆ ತಿಳಿದಿಲ್ಲ.” ದಿವಂಗತ ಗೋವಿಂದ ಪೈ ಅವರ ಮಾತಿನ ಸತ್ಯವನ್ನಾಗಲೀ, ಅವರ ಪಾಂಡಿತ್ಯದ ಆಳ, ವಿಸ್ತಾರಗಳನ್ನಾಗಲೀ ಪ್ರಶ್ನಿಸುವ ಅವಶ್ಯಕತೆ ಉದ್ಭವಿವುದಿಲ್ಲ.

ಜಗತ್ತಿನ ಎಲ್ಲ ಮಹಾಕಾವ್ಯಗಳ, ಪೂರ್ವ ಪಶ್ಚಿಮ ದೇಶಗಳ ಎಲ್ಲ ದರ್ಶನಗಳ ಸಾರವನ್ನು ಮೈಗೂಡಿಸಿಕೊಂಡಿರುವುದು ಈ ರಾಮಾಯಣ ದರ್ಶನಂ ಮಹಾಕಾವ್ಯದ ಒಂದು ವಿಶಿಷ್ಟ ಲಕ್ಷಣ. ಸರ್ವಧರ್ಮ ಸಮನ್ವಯಾಚಾರ್ಯರಾದ ಶ್ರೀ ರಾಮಕೃಷ್ಣ ಪರಮಹಂಸರ, ಪಾಂಡಿಚೇರಿಯ ಪೂರ್ಣಯೋಗಿ ಶ್ರೀ ಅರವಿಂದ ಮಹರ್ಷಿಗಳ ದರ್ಶನ ಸಮಸ್ತವೂ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಅತ್ಯಂತ ಕಾವ್ಯಮಯವಾಗಿ ಅಭಿವ್ಯಕ್ತಗೊಂಡಿದೆ. ಅದರ ಜೊತೆಗೆ ಆಧುನಿಕ ವಿಜ್ಞಾನ ತಂತ್ರಜ್ಞಾನಗಳೂ ಮನಶಾಸ್ತ್ರ ಸಮಾಜಶಾಸ್ತ್ರಗಳೂ, ಗಾಂಧೀಜಿಯವರ ಅಹಿಂಸೆ, ವಿನೋಬಾರವರ ಸರ್ವೋದಯ ಮುಂತಾದ ಮಂತ್ರಗಳೂ ಈ ಕಾವ್ಯಕ್ಕೆ ಉಪಮೆ ಮಹೋಪಮೆ, ವಸ್ತು ಮುಂತಾದ ಅನೇಕ ರೂಪಗಳಲ್ಲಿ ಶಕ್ತಿದಾನ ಮಾಡಿವೆ. ಸ್ವಯಂ ಋಷಿಸದೃಶರಾದ ಮಹಾಚೇತನವೊಂದು ಹತ್ತು ವರ್ಷಗಳ ಕಾಲ ಅಖಂಡವಾದ ಕಾವ್ಯ ತಪೋಮಗ್ನವಾಗಿದ್ದು ತಾನು ಪಡೆದ ದರ್ಶನವನ್ನು ಪ್ರತಿಮೀಕರಿಸಿರುವ ಮಹಾಕೃತಿ ಇದು.

ಇನ್ನು ಕುವೆಂಪುರವರ ಎರಡು ಮಹಾ ಕಾದಂಬರಿಗಳು ಕನ್ನಡ ಕಾದಂಬರೀ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದಿರುವಂಥವು. ಮಲೆನಾಡಿನ ಪರ್ವತಾರಣ್ಯಗಳೂ ಪರ್ವತಾರಣ್ಯಗಿರಿಕಂದರ ಸಧೃಶವಾದ ಭಾವಜಟಿಲತೆಯಿಂದ ಕೂಡಿದ ಮಲೆನಾಡಿನ ಜನಜೀವನವೂ ರಸಸ್ಪಂದಿಯಾದಿ ಎರಡು ಕಾದಂಬರಿಗಳಾಗಿ ಮೈದಳೆದು ನಿಲ್ಲುವಂತೆ ಮಾಡಿವೆ. ಕುವೆಂಪುರವರ ಕಥಾಸಾಹಿತ್ಯ ಸೃಷ್ಟಿ ಶಕ್ತಿಯನ್ನು ಅವುಗಳಲ್ಲಿ ಕಾಣಬಹುದು.

ಹೀಗೆ ಸಾಹಿತ್ಯದ ಸಕಲ ಕ್ಷೇತ್ರಗಳಲ್ಲಿಯೂ ಮೇರು ಕೃತಿಗಳನ್ನು ರಚಿಸಿರುವ ಮತ್ತೊಬ್ಬ ಲೇಖಕ ಇಲ್ಲದಿರುವುದರಿಂದ ಪ್ರಪ್ರಥಮ ಬಾರಿಗೆ ನೊಬೆಲ್‌ಬಹುಮಾನಕ್ಕೆ ಕುವೆಂಪುರವರನ್ನು ನಾಮಕರಣ ಮಾಡುವುದು ಕೇಂದ್ರ ಸಾಹಿತ್ಯ ಅಕಾಡೆಮಿ ಅನಿವಾರ್ಯವಾದಂತೆಯೇ ಅತ್ಯಂತ ಪ್ರಿಯವೂ ಆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೇಷ್ಠ ಸಾಹಿತಿಗಳ ಗುಣಗ್ರಹಣ ಶಕ್ತಿಯನ್ನು ನಿರ್ಮತ್ಸರ ಮನೋಭಾವವನ್ನು ಉತ್ತರ-ದಕ್ಷಿಣ, ಹಿಂದಿ-ಹಿಂದಿಯೇತರ ಎಂಬ ಕೃತಕ ಮತ್ತು ಕ್ಷುಲ್ಲಕ ಪೂರ್ವಗ್ರಹಗಳನ್ನು ಮೀರಿ ನಿಂತ ಔದಾರ್ಯವನ್ನೂ ಎಲ್ಲರೂ, ಅದರಲ್ಲೂ ವಿಶೇಷತಃ ಕನ್ನಡಿಗರು ಖಂಡಿತವಾಗಿಯೂ ಕೃತಜ್ಞತೆಯಿಂದ ಸ್ಮರಿಸಬೇಕು.

ಕುವೆಂಪು ಎಲ್ಲ ವಿಧದಿಂದಲೂ ನೊಬೆಲ್‌ಪ್ರಶಸ್ತಿಗೆ ಅರ್ಹರಾದ ಕವಿ ಹೌದು. ಆದರೆ ಏಷ್ಯಾದವನೊಬ್ಬನಿಗೆ ಭಾರತೀಯನೊಬ್ಬನಿಗೆ, ಅದೂ ಒಬ್ಬ ಕನ್ನಡ ಸಾಹಿತಿಗೆ ನೊಬೆಲ್‌ಪ್ರಶಸ್ತಿ ದೊರಕುತ್ತದೆಯೆ?

ಈ ಸಂದರ್ಭದಲ್ಲಿ ಜಪಾನಿನ ಡೈಲಿ ನ್ಯೂಸ್‌(Mainichi Daily News) ಎಂಬ ಪತ್ರಿಕೆಯು ತನ್ನ ೬.೨.೮೮ರ ಸಂಚಿಕೆಯಲ್ಲಿ ಪ್ರಕಟಿಸಿದೆ. ಬರೆದವರು ಬ್ಯಾಂಕಾಕ್‌, ಟೋಕ್ಯೋದ ಕಚಿ ಶ್ರೀಕಾಂತ (ಸಾಚಿ ಕೂಡ ಆಗಿರಬಹುದು). ಅವರು ಪ್ರಸ್ತಾಪಿಸಿರುವುದು ವಿಜ್ಞಾನದಲ್ಲಿ ನೊಬೆಲ್‌ಪ್ರಶಸ್ತಿಗಳ ನೀಡಿಕೆ ಕುರಿತು. ೧೯೮೭ರಲ್ಲಿ ಇ. ಕ್ರಾಫರ್ಡ್‌, ಜೆ. ಎಲ್‌. ಹೆಯ್ನ್‌ಬಾರ್ನ್‌ಮತ್ತು ಆರ್‌. ಎಲ್ರಿಕ್ ಅವರು ಬರೆದ “ದಿ ನೊಬೆಲ್‌ಪಾಪ್ಯುಲೇಷನ್‌೧೯೦೧-೧೯೩೭ ಎಂಬ ಪುಸ್ತಕದಲ್ಲಿರುವ ಅಂಕಿ-ಅಂಶಗಳನ್ನು ಆಧರಿಸಿ ಶಚಿ (ಸಾಚಿ) ಅವರು ಕೆಲವು ಆಶ್ಚರ್ಯಕರ ಸಂಗತಿಗಳನ್ನು ಓದುಗರ ಗಮನಕ್ಕೆ ತಂದಿದ್ದಾರೆ.

೧೯೦೧ ರಿಂದ ೧೯೩೭ರ ಅವಧಿಯಲ್ಲಿ ಭೌತ ಮತ್ತು ರಸಾಯನ ಶಾಸ್ತ್ರಗಳ ವಿಭಾಗದಲ್ಲಿ ಕೇವಲ ಮೂರು ಜನ ಜಪಾನೀ ವಿಜ್ಞಾನಿಗಳನ್ನು ಮಾತ್ರ ನೊಬೆಲ್‌ಬಹುಮಾನಕ್ಕೆ ನಾಮಕರಣ ಮಾಡಲಾಯಿತು. ಅದೇ ಅವಧಿಯಲ್ಲಿ ಯೂರೋಪು ಮತ್ತು ಅಮೆರಿಕದಿಂದ ೯೦೦ ವಿಜ್ಞಾನಿಗಳು ೩೪೦೦ ಜನ ವಿಜ್ಞಾನಿಗಳನ್ನು ನೊಬೆಲ್‌ಬಹುಮಾನಕ್ಕೆ ನಾಮಕರಣ ಮಾಡಿದರು! ಪರಿಣಾಮ ಆ ೩೪೦೦ ಜನರಲ್ಲಿ ೪೪ ಭೌತವಿಜ್ಞಾನದಲ್ಲೂ ೩೭ ಜನ ರಸಾಯನ ವಿಜ್ಞಾನದಲ್ಲೂ ನೊಬೆಲ್‌ಪ್ರಶಸ್ತಿ ಪಡೆದರು! (ಇವರಲ್ಲಿ ಹಿಂದೆ ಆಗಲೇ ಒಮ್ಮೆ ಭೌತಶಾಸ್ತ್ರದ ಭಾಗದಲ್ಲಿ ನೊಬೆಲ್‌ಪ್ರಶಸ್ತಿ ಪಡೆದ ಮೇರಿ ಕ್ಯೂರಿ ಕೂಡ ಸೇರಿದ್ದಾರೆ) ಆ ಮೂವತ್ತಾರು ವರ್ಷಗಳ ಅವಧಿಯಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮತ್ತು ನೊಬೆಲ್‌ಪ್ರಶಸ್ತಿ ಪಡೆದ ಏಕೈಕ ಅ-ಪಶ್ಚಿಮ ವಿಜ್ಞಾನಿಯೆಂದರೆ ಸಿ. ವಿ. ರಾಮನ್‌.

ಸಾಹಿತ್ಯ ಕ್ಷೇತ್ರದಲ್ಲಿ ವಸ್ತುಸ್ಥಿತಿ ಇನ್ನೂ ಜಟಿಲವಾಗಿದೆ. ಒಬ್ಬ ಸಾಹಿತಿ, ಅದರಲ್ಲೂ ಕವಿ ತನ್ನ ಶಕ್ತಿ ಸಮಸ್ತವನ್ನು ಬಳಸಿ ತನ್ನ ಅನುಭವ ಸಮಸ್ತಕ್ಕೂ ಅಭಿವ್ಯಕ್ತಿ ನೀಡುವುದಕ್ಕೆ ಸಾಧ್ಯವಾಗುವುದು ತನ್ನ ಮಾತೃ ಭಾಷೆಯ ಮೂಲಕವೇ. ಕುವೆಂಪು, ಬೇಂದ್ರೆ, ಕಾರಂತ, ತಕಳಿ ಶಿವಶಂಕರ ಪಿಳ್ಳೆ, ಭವಾನಿ ಭಟ್ಟಾಚಾರ್ಯ, ಗೋಪಿನಾಥ ಮಹಂತಿ, ಖಾಂಡೇಕರ್‌ಯಾವುದೇ ಭಾರತೀಯ ಮಹಾಸಾಹಿತಿಯ ವಿಷಯಕ್ಕೂ ಈ ಮಾತು ಸತ್ಯ ಇವರೆಲ್ಲರೂ ನೊಬೆಲ್‌ಬಹುಮಾನಕ್ಕೆ ಸರ್ವಥಾ ಅರ್ಹರು.

ಸಂದೇಹವಿಲ್ಲ

ಒಬ್ಬ ಸಾಹಿತಿಯಾಗಿ ನೊಬೆಲ್‌ಬಹುಮಾನ ಬರಬೇಕಾದರೆ ಅವನ ಅತ್ಯುತ್ತಮ ಕೃತಿಗಳು ಇಂಗ್ಲಿಷ್‌ಭಾಷೆಯಲ್ಲಿ ಅನುವಾದಿತವಾಗಿ ದೊರಕಬೇಕಾಗಿರುವುದು ಅಗತ್ಯ. ಅವುಗಳನ್ನು ಓದಿದ ಬಹುಮಂದಿ ನೊಬೆಲ್‌ಪ್ರಶಸ್ತಿ ವಿಜೇತರು ಅವನ ಹೆಸರನ್ನು ಪ್ರಸಕ್ತ ವರ್ಷದ ಬಹುಮಾನಕ್ಕೆ ನಾಮಕರಣ ಮಾಡಬೇಕು. ಈಗ ಶ್ರೀ ಕುವೆಂಪು ಅವರ ಶ್ರೀ ರಾಮಾಯಣ ದಶನಂ ಮಹಾಕಾವ್ಯದ ಇಂಗ್ಲಿಷ್‌ಅನುವಾದದ ಬೆರಳಚ್ಚು ಪ್ರತಿಗಳನ್ನು ಈ ಸಲದ ನೊಬೆಲ್‌ಬಹುಮಾನಕ್ಕಾಗಿ ಕಳುಹಿಸಲಾಗಿದೆ.

ಪ್ರಸ್ತುತ ಲೇಖಕನೂ ಕುವೆಂಪು ಅವರ ‘ಬೆರಳ್‌ಗೆ-ಕೊರಳ್‌’ ‘ಶ್ಮಶಾನ ಕುರುಕ್ಷೇತ್ರ’ ಮತ್ತು‘ಶೂದ್ರ ತಪಸ್ವಿ’ ನಾಟಕಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾನೆ. ಕರ್ನಾಟಕ ಸರ್ಕಾರ ಅವನ್ನು ಪ್ರಕಟಿಸಿದೆ. ಈ ನಾಟಕಗಳ ಅನುವಾದವನ್ನು ಇದೇ ಲೇಖಕನೇ ಇಂಗ್ಲಿಷಿಗೆ ಅನುವಾದಿಸಿರುವ “ಮಲೆಗಳಲ್ಲಿ ಮದುಮಗಳು” ಕಾದಂಬರಿಯ ಒಂದು ಭಾಗವನ್ನೂ ಕೆಲವು ಸಣ್ಣಕತೆಗಳು, ‘ಕಿರಾಣಿ’ಯ ಒಂದು ಭಾಗ-ಇಷ್ಟನ್ನೂ ಕಳುಹಿಸಲಾಗಿದೆ. ಇವನ್ನು ತಾಳ್ಮೆಯಿಂದ ವಿಮರ್ಶಕ ಸಮಿತಿಯ ಸದಸ್ಯರು ಓದಿದರೆ ಕುವೆಂಪು ೧೯೮೯ರ ನೊಬೆಲ್‌ಪ್ರಶಸ್ತಿ ವಿಜೇತರಾಗುವುದರಲ್ಲಿ ಸಂದೇಹವಿರುವುದಿಲ್ಲ.

ಆದರೆ ಇಷ್ಟನ್ನೆಲ್ಲ ಅದೂ ಹೊರಗಿನ ಸಂಸ್ಕೃತಿಯ ಆವರಣದಲ್ಲಿ ರಚಿತವಾದ, ಶ್ರೀ ಸಾಮಾನ್ಯನನ್ನು ಮಹಾಮಾನ್ಯತೆಗೇರಿಸಿರುವ, ವಿಶ್ವಮಾನವ ಸಂದೇಶವನ್ನು ಸಾರುವ, ಸಾಹಿತ್ಯ ರಾಶಿಯನ್ನು ತಾಳ್ಮೆಯಿಂದ ಓದುವವರಾರೂ? ಅಂತರಾಷ್ಟ್ರೀಯ ಖ್ಯಾತಿ ಗಳಿಸಿರುವ ಕನ್ನಡಿಗರಾದ ನಿವೃತ್ತ ಇಂಗ್ಲಿಷ್‌ಪ್ರಾಧ್ಯಾಪಕರೊಬ್ಬರು ಕನ್ನಡವನ್ನು ಕನ್ನಡ ಸಾಹಿತ್ಯವನ್ನೂ ಎಡಗೈ ಕಿರುಬೆರಳಿನಿಂದಲೂ ಮುಟ್ಟಿಲ್ಲ! ಕನ್ನಡದ ಪ್ರಸಿದ್ಧ ಬರಹಗಾರರೂ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ನಿವೃತ್ತ ಇಂಗ್ಲಿಷ್‌ಪ್ರಾಧ್ಯಾಪಕರೊಬ್ಬರು ತಾವು ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಓದಿಲ್ಲ ಎಂದು ಹೇಳಿದರು!

ಸಿರಿಗನ್ನಡಂ ಗೆಲ್ಗೆ!