ನಮಗೆ ನಗುವುದನ್ನು ಕಲಿಸಿದ ಹಾಸ್ಯಲೇಖಕರಲ್ಲಿ ಕಸ್ತೂರಿಯವರು ಮೊದಲ ಸಾಲಿನವರು. ಅವರ ಹಿರಿಮೆಗಳು ಅನೇಕ. ಈ ಶತಮಾನದ ಮೂವತ್ತರ ದಶಕಗಳಲ್ಲಿ ಎಂದು ತೋರುತ್ತದೆ, ಕೇರಳದವರಾದ ಅವರು ಉದ್ಯೋಗಕ್ಕೆ ಎಂದು ಮೈಸೂರಿಗೆ ಬಂದರು. ಹಾಗೆ ಬಂದವರು ಸ್ವಂತ ಇಚ್ಛೆಯಿಂದ ಕನ್ನಡ ಕಲಿತರು. ಬರೀ ಮಾತನಾಡುವ, ಓದುವ, ಅಷ್ಟೋ ಇಷ್ಟೋ ಬರೆಯುವ ಕನ್ನಡ ಅಲ್ಲ ಅವರು ಕಲಿತದ್ದು ; ಪಂಪ, ನಾರಾಣಪ್ಪ, ಸರ್ವಜ್ಞ, ಮುದ್ದಣ, ವಚನಕಾರರು, ದಾಸರು-ಇವರ ಕೃತಿಗಳನ್ನು ಮೂಲದಲ್ಲಿ ಓದಿ ಅರ್ಥಮಾಡಿಕೊಳ್ಳುವಷ್ಟು ಕನ್ನಡ ಕಲಿತರು. ಕುವೆಂಪು ಅವರಂತಹ ಕವಿಗಳಿಗೆ ಸ್ಫೂರ್ತಿ ನೀಡುವಷ್ಟು ಕನ್ನಡ ಕಲಿತರು. ಕನ್ನಡದಲ್ಲಿ ಉತ್ತಮ ಮಟ್ಟದ ಹಾಸ್ಯಪತ್ರಿಕೆ ಎಂದು ಖ್ಯಾತಿ ಪಡೆದ ‘ಕೊರವಂಜಿಗೆ’ಗೆ ನಿರಂತರವಾಗಿ ಬರಹವನ್ನು ನಾನಾ ಹೆಸರುಗಳಲ್ಲಿ ಒದಗಿಸಿ ಅದರ ಸ್ಥಾಪಕ ಸಂಪಾದಕರಾದ ಡಾಕ್ಟರ್‌ಎಂ. ಶಿವರಾಂ ಅವರಿಗೆ ಒತ್ತಾಸೆಯಾಗಿ ನಿಲ್ಲಲು ಬೇಕಾದಷ್ಟು ಕನ್ನಡ ಕಲಿತರು. ಜೊತೆಗೆ ತಮ್ಮ ಅನುಭವಗಳನ್ನು ಸೊಗಸಾಗಿ, ಅನನ್ಯವಾಗಿ, ತಮ್ಮದೇ ಎಂಬ ವಿಶಿಷ್ಟ ಶೈಲಿಯಲ್ಲಿ ನಿರೂಪಿಸುವ ಕನ್ನಡ ಕಲಿತರು.ಕನ್ನಡದ ಆಡುಮಾತನ್ನು, ಅನುಭವದ ಸೂಕ್ತಿಗಳನ್ನು, ಭಾವಭಾಔನೆಗಳಿಗೆ ಪುಷ್ಟಿಕೊಡುವ ಗಾದೆಗಳನ್ನು ತಮ್ಮದನ್ನಾಗಿ ಮಾಡಿಕೊಂಡರು. ಅವುಗಳಿಗೆ ಅಲ್ಲಲ್ಲಿ ತಿರುವು ನೀಡಿ ಅವುಗಳಿಂದ ಹಾಸ್ಯವನ್ನು ಹೊಮ್ಮಿಸುವುದರ ಜೊತೆಗೆ ಕನ್ನಡ ಮಾತುಗಳ ಶಕ್ತಿಯೆಷ್ಟು ಎಂಬುದನ್ನು ಕನ್ನಡಿಗರೆದುರಿಗೆ ತೆರೆದು ಹರವಿ ತೋರಿಸಿದರು. ತಮ್ಮ ಬರಹಗಳಿಂದ, ಅದರಲ್ಲೂ ವರ್ಷದಲ್ಲಿ ಹಲವಾರು ಬಾರಿ, ಹಲವಾರು ಊರುಗಳಲ್ಲಿ ಅಭಿನಯಗೊಳ್ಳುತ್ತಿದ್ದ ನಾಟಕಗಳಿಂದ ನಾ. ಕಸ್ತೂರಿಯವರು ಕನ್ನಡ ನಾಡಿನಲ್ಲಿ ಮನೆಮಾತಾಗಿದ್ದರು. ಅಕ್ಷರಸ್ಥರ ಸಂಖ್ಯೆ ಹೆಚ್ಚಿ ಓದುಗರ, ಶುದ್ಧ ಸಾಹಿತ್ಯದ ಓದುಗರ ಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಕೈಲಾಸಂ, ಕಸ್ತೂರಿ, ಮೂರ್ತಿರಾವ್‌, ಪರಮೇಶ್ವರ ಭಟ್ಟ ಇವರ ಬರವಣಿಗೆಗಳ ಸೊಗಸು ನಮ್ಮ ಜನಕ್ಕೆ ತಿಳಿಯದೇ ಹೋಗುತ್ತಿದೆ. ಇತರ ಶ್ರೇಷ್ಠ ಲೇಖಕರು ಇದೇ ರೀತಿ ಮರವೆಯ ಮಹಾಸಮುದ್ರದಲ್ಲಿ ಮುಳುಗಿದರೆ ಏನೂ ಆಶ್ಚರ್ಯವಿಲ್ಲ.

‘ಚಕ್ರದೃಷ್ಟಿ’ ಕನ್ನಡದಲ್ಲಿ ಒಂದು ಹೊಸ ಬಗೆಯ ಸಾಹಿತ್ಯಸೃಷ್ಟಿ. ಇದೊಂದು ಕಾದಂಬರಿ ಎಂದು ಕರೆಯಬಹುದು. ಇದರ ಕೇಂದ್ರ ಪಾತ್ರ –ಗುಮಾಸ್ತ, ಹೆಡ್‌ಗುಮಾಸ್ತ ಗುಂಡಪ್ಪ, ಬಿ.ಎ. ಅವನ ಬದುಕನ್ನು ಕಸ್ತೂರಿಯವರು ಗುಂಡಪ್ಪನನ್ನು ಬಲ್ಲ ಹನ್ನೊಂದು ಜನರ ದೃಷ್ಟಿಯಿಂದ ನೋಡಿದ್ದಾರೆ. ಇಲ್ಲಿ ಗುಂಡಪ್ಪ ನೇರವಾದ ಪಾತ್ರ ಅಲ್ಲ, ನೇರವಾಗಿ ಮಾತನಾಡುವುದಿಲ್ಲ. ಮಾತನಾಡುವುದೆಲ್ಲ ಸುತ್ತಣ ಹನ್ನೊಂದು ಜನರೇ. ಅವರ ದೃಷ್ಟಿಯಲ್ಲಿ ಗುಂಡಪ್ಪ ಏನು ಎಂಬುದು ಇಲ್ಲಿನ ಪ್ರಧಾನ ನಿರೂಪಣೆ. ಆದ್ದರಿಂದಲೇ ಈ ಪುಸ್ತಕಕ್ಕೆ ‘ಚಕ್ರದೃಷ್ಟಿ’ ಎಂಬ ಸಾರ್ಥಕ ನಾಮಧೇಯ.

ಕಳೆದ ಶತಮಾನದಲ್ಲಿ ರಾಬರ್ಟ್‌ಬ್ರೌನಿಂಗ್‌ಎಂಬ ಇಂಗ್ಲಿಷ್‌ಕವಿ ‘ದಿ ರಿಂಗ್ ಎಂಡ್‌ದಿ ಬುಕ್‌’ ಎಂಬ (The Ring and The Book –ಉಂಗುರ ಮತ್ತು ಪುಸ್ತಕ) ಎಂಬ ದೀರ್ಘ ಕಾವ್ಯವನ್ನು ರಚಿಸಿದ್ದಾನೆ. ಅದು ಇಪ್ಪುತ್ತು ಸಾವಿರ ಪಂಕ್ತಿಗಳ ಕಾವ್ಯ. ಹದಿನೇಳನೆಯ ಶತಮಾನದಲ್ಲಿ ನಡೆಯಿತು. ಎಂದು ವರದಿಯಾಗಿರುವ ರೋಮನ್‌ಕೊಲೆಯ ಕಥೆ ಅದರ ವಸ್ತು. ಆ ಕೊಲೆಯನ್ನು ಬೇರೆಬೇರೆಯವರ ದೃಷ್ಟಿಯಿಂದ ನೋಡುವ ಪ್ರಯತ್ನವನ್ನು ಬ್ರೌನಿಂಗ್‌ಕವಿ ಮಾಡಿದ್ದಾನೆ. ಆ ಕಾವ್ಯವನ್ನು ಕಸ್ತೂರಿಯವರು ನೋಡಿದ್ದರು ಎನ್ನುವುದಕ್ಕೆ ಯಾವ ದಾಖಲೆಯೂ ಈ ಕೃತಿಯಲ್ಲಿ ‘ಚಕ್ರದೃಷ್ಟಿಯಲ್ಲಿ ಇಲ್ಲ. ಆದ್ದರಿಂದ ಇದು ಕಸ್ತೂರಿಯವರ ಸಹಜವಾದ ಪ್ರತಿಭೆಯಿಂದ ಮೂಡಿದ ಸ್ವತಂತ್ರ ಕೃತಿ ಎನ್ನಬಹುದು.

ಈ ಕೃತಿಯಲ್ಲಿ ಇಪ್ಪತ್ತನೆಯ ಶತಮಾನದ ನಾಲ್ವತ್ತರ ದಶಕದಲ್ಲಿದ್ದ ಮಧ್ಯಮ ವರ್ಗದ, ಕೆಳಮಧ್ಯಮ ವರ್ಗದ, ಜೀವನದ ಅನೇಕ ಮುಖಗಳ ವರ್ಣನೆಯಿದೆ. ಕೇರಳದಿಂದ ಬಂದ ಕಸ್ತೂರಿಯವರು ಕನ್ನಡವನ್ನು ಕಲಿತದ್ದು ಮಾತ್ರವಲ್ಲದೆ ಕನ್ನಡಿಗರ ಬದುಕನ್ನು ಚೆನ್ನಾಗಿ ಅಧ್ಯಯನ ಮಾಡಿದರು. ಇಲ್ಲಿಗೇ ವಿಶೇಷವಾದ ವಾರಾನ್ನಪದ್ಧತಿ, ಆಡಳಿತ ವೈಖರಿಗಳೂ ಸೇರಿದಂತೆ ಹಳೆಯ ಮೈಸೂರು ಪ್ರಾಂತದ ಜೀವನದ ವಿವಿಧ ಪದರಗಳನ್ನು ಆತ್ಮೀಯವಾಗಿ ಪರಿಚಯ ಮಾಡಿಸಿಕೊಟ್ಟಿದ್ದಾರೆ.

ಗುಮಾಸ್ತ ಗುಂಡಪ್ಪ ಇಲ್ಲಿನ ಕೇಂದ್ರ ಪಾತ್ರ ಎಂದು ಹೇಳಿದೆ. ಅವನ ಬದುಕನ್ನು ನೋಡಿರುವುದು ಅವನಿಗೆ ಸಂಬಂಧಿಸಿದ ಹನ್ನೊಂದು ಜನರ ದೃಷ್ಟಿಯಿಂದ. ಆ ಹನ್ನೊಂದು ಜನ ಮೇಲಾಧಿಕಾರಿ, ಸಹೋದ್ಯೋಗಿ, ಆಳು, ತಾಯಿ, ಗೆಳೆಯ, ಗುರು, ನೆರೆಯಾತ, ಎದುರಂಗಡಿಯಾತ, ಇತ್ತೀಚಿನ ಗೆಳೆಯ, ಭಾವನ ತಮ್ಮ ಮತ್ತು ಸತಿ. ಅವರಲ್ಲಿ ಒಬ್ಬೊಬ್ಬರ ಹೇಳಿಕೆಗೆ ಲೇಖಕರು ಒಂದೊಂದು ಅಧ್ಯಾಯವನ್ನು ಮೀಸಲಾಗಿಟ್ಟಿದ್ದಾರೆ. ಆ ಅಧ್ಯಾಯಗಳಿಗೆ ಕೊಟ್ಟಿರುವುದು ಹನ್ನೊಂದು ರಾಗಗಳ ಹೆಸರು-ಸೂಕ್ತ ಮಾರ್ಪಾಟಿನೊಂದಿಗೆ. ಅವು ಕ್ರಮವಾಗಿ ಹೀಗಿವೆ : ಕರಕರಪ್ರಿಯ (ಖರಹರಪ್ರಿಯ), ಕದನ ಕುತೂಹಲ, ಈರವಾಣಿ (ಕೀರವಾಣಿ), ಶುದ್ಧ ಸಾವೇರಿ, ಸ್ನೇಹಪ್ರಭಾ, ಮಾಯಾಮಾನವ ಗೌಳ (ಮಾಯಾಮಾಳವ ಗೌಳ), ಹಿಂಸಧ್ವನಿ (ಹಂಸಧ್ವನಿ), ನೀತಿ ಗೌಡ (ನೀತಿ ಗೌಳ), ತೋಡಿ, ಪಠಾಣ (ಅಠಾಣ) ಮತ್ತು ಸಹನ (ಸಹಾನ). ಆ ಮಾರ್ಪಾಟುಗಳು ಅತ್ಯಂತ ಉಚಿತವಾಗಿದೆ ಎಂಬುದು ಆಯಾ ಅಧ್ಯಾಯಗಳನ್ನು ಓದಿದಾಗ ತಿಳಿಯುತ್ತದೆ.

ಈ ಕಾದಂಬರಿಯ ಉದ್ದಕ್ಕೂ ಎರಡು ಪ್ರವಾಹಗಳು ಹರಿಯುತ್ತಿವೆ. ಒಂದು ಕಾಣದ ಗುಪ್ತಗಂಗೆ-ದುಃಖ ; ಬಡತನ, ಅಸೂಯೆ, ಅಸಹನೆ, ಅನುಕಂಪೆಯ ಅಭಾವ, ಪೀಡನೆಯ ಪ್ರವೃತ್ತಿ ಇವುಗಳಿಂದ ಹುಟ್ಟಿದ ದುಃಖ. ಇನ್ನೊಂದು ಮೇಲ್ಪದರದಲ್ಲಿ ಹರಿಯುತ್ತಿರುವ ಪ್ರವಾಹ – – ಹಾಸ್ಯ. ವೃತ್ತಿಗಳನ್ನೂ ಪ್ರವೃತ್ತಿಗಳನ್ನೂ ಹಾಸ್ಯದ ತೆರೆಯ ಮೂಲಕ ನೋಡಿ, ಬದುಕಿನ ಕಷ್ಟನಷ್ಟಗಳನ್ನು ನಗುವಾಗಿ ಪರಿವರ್ತಿಸುವ ವಿಶೇಷ ಕೈಚಳಕ ಕಸ್ತೂರಿಯವರಿಗಿದೆ. ಅದು ಉದ್ದಕ್ಕೂ ಕಾಣುತ್ತಾ ಹೋಗುತ್ತದೆ. ವೃತ್ತಿಯನ್ನು ನಗೆಯ ಕಣ್ಣುಗಳಿಂದ ನೋಡಿರುವುದಕ್ಕೆ ಉದಾಹರಣೆ ಗುಂಡಪ್ಪನ ಮತ್ತು ಅವನ ಸಹೋದ್ಯೋಗಿ ಕಾಶೀಪತಿಯ ಹಿರಿಯರ ಬದಿಕಿನ ವ್ಯವಸಾಯದ ವರ್ಣನೆಯನ್ನು ನೋಡಬಹುದು. ಗುಂಡಪ್ಪನ ತಂದೆ ವೈದ್ಯರು, ಆಯುರ್ವೇದ ಪಂಡಿತರು. ಅವನ ತಾತ ವೈದ್ಯರಾದದ್ದೂ ಆಯುರ್ವೇದ ಓದಿ ಅಲ್ಲ. ಆದದ್ದು ಹೀಗೆ;

“ಗುಂಡಪ್ಪನ ತಾತ ನಿತ್ಯಯಾತ್ರೆಯಲ್ಲಿ ನಿರತನಾದ. ತುಳಸೀದಳ, ತುಂಬೆಸೊಪ್ಪು, ನೆಗಡಿ ಕೆಮ್ಮಲು ಅಂತ ಅಲ್ಲಿ ಇಲ್ಲಿ ಅಜ್ಜಮ್ಮನವರು ಅಂದದ್ದನ್ನು ಕಿವಿಗೆ ಹಾಕಿಕೊಂಡು, ಬಸುರಿ ಲೇಹ, ಬಾಣಂತಿ ಕಷಾಯ, ಕಸ್ತೂರಿ ಕಷಾಯ, ಕೇಸರೀಭಾತ್, ಸೋಮಾರಿ ಘತೃ., ತರತಲಾಮಲಕ ತೈಲ, ರಾಸ್ನಾದಿ, ಬುನಾದಿ, ಗುಳಾದಿ, ಸುಳಾದಿ, ಅಂತ ಆಯುರ್ವೇದದ ಅಷ್ಟಾಂಗಹೃದಯವನ್ನೇ ಹಿಡಿದುಬಿಟ್ಟ! ಅವನ ಔಷಧಿ ಕುಡಿದು ಯಾರೂ ಕೈಕೊಡಲಿಲ್ಲವಾದ್ದರಿಂದ ಕೈಗುಣ ಚೆನ್ನ ಅಂತ ಬೇರೆ ಹೆಸರು ಗಳಿಸಿದೆ!”

“ಗುಂಡಪ್ಪನ ತಂದೆಗೂ ಅದೇ ಆಯುರ್ವೇದವೇ ಆಸರೆ. ಅದೇ ಸೀಸಗಳನ್ನೇ ಕರೆದು ತೊಳೆದು, ಗುಳಿಗೆಗಳನ್ನೆಲ್ಲ ಚೂರ್ಣಮಾಡಿ, ಚೂರ್ಣಗಳನ್ನೆಲ್ಲ ಘೃತಗಳನ್ನೆಲ್ಲ ತೈಲ ಮಾಡಿ, ಬಹಳ ವರ್ಷ ವೈದ್ಯ ಮಾಡಿದ. ಕೈತುಂಬ ಕಾಸನ್ನೂ ಕಂಡ.”

ಪಕ್ಕದ ಮನೆಯ ಶ್ರೀಕಂಠಯ್ಯನ ಹಿರಿಯರು ವೈದ್ಯರು. ಆತ ಹೇಳುತ್ತಾನೆ: ““ದೊಡ್ಡವರ ಕಾಲವಾದ ಮೇಲೆ ಆಚೆ ಮನೆಯವರು ಆಯುರ್ವೇದಕ್ಕೆ ಕೈಹಾಕಿದರು. ನಮ್ಮ ತಾತಂದಿರು ಸಂಗೀತಕ್ಕೆ ಬಾಯಿಬಿಟ್ಟರು. ಅವರು ನಾಡಿ ಹಿಡಿದರು; ನಮ್ಮವರು ಗಂಟಲು ಸರಿಪಡಿಸಿದರು. ಆಕಡೆ ವಾತ ಪಿತ್ತ ಕಫ! ಈಕಡೆ ರಾಗ ತಾಳ ಲಯ! ಬೆಳಗಾದರೆ ಅವನ ಮನೆಯಲ್ಲಿ ಶೀತ ಕೆಮ್ಮಲು ರೋಗಗಳು ಕೂಗು! ನಮ್ಮ ಮನೆಯಲ್ಲಿ ಶ್ರುತಿ ಪಲ್ಲವಿ ರಾಗಗಳ ಸೋಗು! ಅಲ್ಲಿ ಶರೀರದ ಚಿಕಿತ್ಸೆ; ಇಲ್ಲಿ ಶಾರೀರದ ಚಿಕಿತ್ಸೆ!”

ಎಷ್ಟೊಂದು ಜನರ ಸ್ವಭಾವವನ್ನು ಎಷ್ಟು ಆಕರ್ಷಕವಾದ ರೀತಿಯಲ್ಲಿ ಚಿತ್ರಿಸಿದ್ದಾರೆ. ಕಸ್ತೂರಿಯವರು ! ಅಧಿಕಾರಿಗಳ ಸ್ವಭಾವಕ್ಕೆ ಒಂದು ಉದಾಹರಣೆ. ಗುಂಡಪ್ಪನ ಮೇಲಧಿಕಾರಿಗಳ ಭೇಟಿಗೆ ಹೋಗಿದ್ದಾರೆ ಲೇಖಕರು. ಅವರಿಗೋ ಇವರನ್ನು ಮಾತಾಡಿಸಲು ಇಷ್ಟ ಇಲ್ಲ. ಆ ಸಂದರ್ಭದಲ್ಲಿ ಅವರ ಎರಡು ಮುಖಗಳ ಪರಿಚಯವಾಗುತ್ತದೆ, ಅವರು ಆಳಿನ ಜೊತೆ ಆಡುವ ಮಾತಿನ ಮೂಲಕ : ನಿನ್ನೆ ಹಾಗೆಯೇ ಕೂಡ ಪುರಸತ್ತಿಲ್ಲ ಅಂತ ಹೇಳಿಲ್ಲವೇನೋ?.. ಕೂತೇ ಇದಾರೆಯೇ ಇನ್ನೂ? ನಿನ್ನೆ ಬಂದವರೆಲ್ಲವೇನೋ? ಕೂತಿರಲಿ, ನಿನಗೇನು? ಕುರ್ಚಿ ಧೂಳಾದರೂ ಹೋಗುತ್ತೆ. ‘ಟ್ರಿಂಗ್… ಟ್ರಿಂಗ್‌‌… ಟ್ರಿಂಗ್‌…ಯಾರೋ ಇಲ್ಲಿ ! ಯಾರದು ಹೊರಗೆ ಕೆಮ್ಮುವುದು? ಕ್ಷಯಾಸ್ಪತ್ರೆಗೆ ಸಾಗಿಸೋ ಅವರನ್ನ…. ಏನು? ನಿನ್ನ ಬಂದಿದ್ದವರೇ? ಸರಿ! ಒಳಕ್ಕೆ ಬಿಡು ಪ್ರಾಣೀನ. ಹಾಳಾಗಿ ಹೋಗಲಿ… ದೂರ ಇಡು ಕುರ್ಚೀನ ದೂರ… ಅಲ್ಲೇ ಕುಕ್ಕರಿಸಲಿ…ಓ ! ಬನ್ನಿ ! ಬನ್ನಿ ! ಕೂತುಕೊಳ್ಳಿ ! ತಾವು ನಿನ್ನೆ ಕೂಡ ಬಂದಿದ್ದರಂತೆ… ಗೊತ್ತಾಗಲಿಲ್ಲ. ತಾವು ಇಲ್ಲಿಂದ ಪಾದ ಬೆಳೆಸಿದ ಮೇಲೆ ಹೇಳಿದ ಹಾಳುಜವಾನ” (ಪು.೧). ಈ ಅಧಿಕಾರಿಗೆ ಗುಂಡಪ್ಪನ ಮೇಲೆ ಕೋಪ. ಆತ ಇವರನ್ನು ಸ್ವಾಗತಿಸಲು ಬಸ್‌ಸ್ಟ್ಯಾಂಡಿಗೆ ಬರಲಿಲ್ಲ ಅನ್ನುವುದು ಒಂದಾದರೆ ಸ್ವಚ್ಛವಾದ ಬಟ್ಟೆ ಹಾಕಿದ್ದು, ನೆಟ್ಟಗೆ ಆಫೀಸರ ಕುರ್ಚಿ ಹತ್ತಿರವೇ ಬಂದು ನಿಂತದ್ದು, ಇವನ ಬೈಗುಳು ಸಹಿಸದೇ ಇದ್ದದ್ದು ಇತ್ಯಾದಿ ಅನೇಕ. ಅವರು ಸಂಕ್ಷೇಪವಾಗಿ ಹೇಳುತ್ತಾರೆ: “ಮುಖ್ಯ ನಿಮ್ಮ ಗುಂಡಪ್ಪನಿಗೆ ಬದುಕುವ ದಾರಿ ಗೊತ್ತಿಲ್ಲ; ವ್ಯವಹಾರಜ್ಞಾನ ಸಾಲದು. ಮೂಗಿನ ತುದಿಗೇ ಮಮಕಾರವನ್ನು ಹಚ್ಚಿಕೊಂಡು, ಅದನ್ನೇ ದಿಟ್ಟಿಸಿ ಮೂರು ಹೊತ್ತೂ ಧ್ಯಾನಮಾಡುತ್ತಿರುತ್ತಾನೆ. ನಮ್ಮ ಕೆಳಗಿನವರು ತಾವು ತಿಳಿದೂ ತಿಳಿದೂ ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕಾದುದೇ ಧರ್ಮ ಎಂಬುದು ಇಂತಹ ಅಧಿಕಾರಿಗಳ ಸಿದ್ಧಾಂತ. ಅವರು ಹೇಳುತ್ತಾರೆ : “ನನ್ನಿಂದ ಎರಡು ಮಾತು ಬಿಸಿಬಿಸಿಯಾಗಿ ಕಿವಿಗೆ ಸುರುದುಕೊಂಡರೆ ಇವನಿಗೇನು ಮಹಾನಷ್ಟ ; ನನ್ನಂತಹವರಿಗೆ ಎಷ್ಟೋ ಆಪ್ಯಾಯಮಾನ ಅದು” (ಪು.೬). “ಇಷ್ಟಕ್ಕೂ ನನ್ನಿಣದ ಇವನಿಗೆ ಕಿರುಕುಳ ಏನು ಮಹಾ ಆಗುತ್ತಿರುವುದು ? ಗುಮಾಸ್ತೆ ಆದಮೇಲೆ ಮುಸುಕಿನೊಳಗಿನ ಗುದ್ದುಗಳಿದ್ದೇ ಇರುತ್ತವೆ. ಅಂಥ ಸನಾತನ ಸಂಕಟಗಳಲ್ಲದೆ ನಾನೇನಾದರೂ ವಿಶೇಷವಾಗಿ ಇವನಿಗೋಸ್ಕರ ಸೃಷ್ಟಿಮಾಡಿದೆನೇ? ಇಲ್ಲ.”

ಜವಾನರ ಸ್ವಭಾವವನ್ನು ಕಸ್ತೂರಿಯವರು ಈರ ಎಂಬ ಒಂದೇ ಒಂದು ಪಾತ್ರದ ಮೂಲಕ ಸೊಗಸಾಗಿ ಚಿತ್ರಿಸಿದ್ದಾರೆ. ಅಂಥ ಚಿತ್ರಣವನ್ನು ಬೇರೆಲ್ಲೂ ನೋಡುವ ಸಾಧ್ಯತೆಯಿಲ್ಲ. ‘ಈರವಾಣಿ’ ಸಾರುತ್ತದೆ:

“ಒಂದು ಮಾತು ಹೇಳುತ್ತೇನೆ, ಬುದ್ಧಿ, ರೇಗಬೇಡಿ ನೀವು. ನಿಮ್ಮಂಥ ದೊಡ್ಡ ಮನುಷ್ಯರ ಮಾನಮರ್ಯಾದೆ ಎಲ್ಲಾನು ಉಫ್‌ಅಂತ ಹಾರಿ ಹೋಗೋದು ನನ್ನಂಥ ಹತ್ತುರೂಪಾಯಿ ಹದ್ದುಗಳಿಂದ. ಸಾಹೇಬರ ಮನೆಗೆ ಏಕಾದಶಿ ದಿನ ಈರುಳ್ಳಿ ತರಿಸಿದರು: ದೀಪಾವಳಿ ದಿನ ಅಳಿಯ ಕೋಪಿಸಿಕೊಂಡು ಎಣ್ಣೆ ಸ್ನಾನಾನೆ ಮಾಡಲಿಲ್ಲ: ವರಲಕ್ಷ್ಮಿ ಪೂಜ ದಿನ ದಕ್ಷಿಣೆ ಸಾಲದು ಅಂತ ಪುರೋಹಿತರು ಮಧ್ಯೆ ಎದ್ದು ಹೋದರು: ಈ ತಿಂಗಳು ಸಾಹೇಬರು ಹನ್ನೆರಡು ಬಾಟ್ಲಿ ತರಿಸಿದರು; ಖಾಲಿ ಸೀಸೆಗಳನ್ನು ಅಮ್ಮಾವರು ಇವತ್ತು ಮಧ್ಯಾಹ್ನ ಮಾರಿದರು; ಹೀಗೆ ಜವಾನರ ಬಾಯಿಂದ ಜವಾನರ ಕಿವಿಗೆ ಬಿದ್ದಯ ಅವರು ತಮ್ಮ ತಮ್ಮ ಚಾಕರಿಯ ಮನೆಗಳಿಗೆ ಪ್ರಚಾರ ಮಾಡುತ್ತಾರೆ. ಆ ಹೆಂಗಸರೋ ಈ ಕಡೆ ಕಿವಿಯಲ್ಲಿ ಆ ಕಡೆ ಕಿವಿಯಿಂದ ಬಿಡೋದಿಲ್ಲ. ಅದಕ್ಕೆ ಕಸೂತಿ ಕೆಲಸ ಮಾಡಿ ಅದನ್ನು ಬಣ್ಣದಲ್ಲದ್ದಿ, ಮಣಿ ಪೋಣಿಸಿ, ಹಾಗಂತೆ, ಹೀಗಂತ, ಏನ್ರಿ ಇದು, ಹೀಗೂ ಆಗಬಹುದೆ, ಅಂತ ಅರಿಶಿನ ಕುಂಕುಮದ ನೆಪದಲ್ಲಿ ಎಲ್ಲರ ಕಿವಿಗೂ ಇರುಕಿಬಿಡುತ್ತಾರೆ. ಅದೂ ಅಲ್ಲದೆ ನಮ್ಮ ಜವಾನರದ್ದೂ ತಪ್ಪಿಲ್ಲ ಅನ್ನಿ! ಸಾಹೇಬರ ಮನೆಗಳಲ್ಲಿ ಚಿಳ್ಳೆಪಿಳ್ಳೆಯಿಂದ ಹಿಡಿದು ಸಾಹೇಬರ ತಾಯಿ ತನಕ ಎಲ್ಲರೂವೆ ಗೋಳು ಹೇಳಿಕೊಳ್ಳೋದು ಜವಾನರ ಹತ್ತಿರವೇ! ಇದೊಂದು ಕೆಟ್ಟ ಚಾಳಿ ಬುದ್ಧಿ. ನಾವೇನು ಮಾಡೋದು?”

ಜವಾನರಿಗೆ ಸಾಹೇಬರಿಂದ ಅವರದೇ ಉಡುಪು, ಹಳೆಯದು, ಸಿಕ್ಕುತ್ತಿತ್ತು ಈ ಪುಸ್ತಕ ಬರದೆ ಕಾಲಕ್ಕೆ. ಅದನ್ನು ಈರ ಹೇಳುವ ರೀತಿ ನೋಡಿ : “ಈಚಿನವರು (ಸಾಹೇಬರು) ದಪ್ಪನೆಯವರು; ಹಿಂದಿನವರು ನನ್ನ ಸೈಜಿನವರೇ ಇದ್ದರು. ನನಗೆ ಖುಷಿಯಾಗಿತ್ತು. ಅವರು ಅಂಗಿ ಷರಾಯಿ ಕೊಟ್ರೆ ನಾನೇ ಹೊಲಿಸಿಕೊಂಡ ಹಾಗಿರುವುದು, ಬುದ್ಧೀ! ಸರ್ಕಾರದವರು ಆಫೀಸರುಗಳನ್ನು ವರ್ಗಮಾಡೋವಾಗ ಆಯಾ ಕಡೆ ಇರುವ ಜವಾನರ ಸೈಜುವಾರು ಚುನಾಯಿಸಿ ಉಪಕಾರ ಮಾಡಬಾರದಾ, ಅಂತೀನಿ?” (ಪು.೨೯)

ಒಂದು ಕಾಲಕ್ಕೆ ವಾರಾನ್ನ ಮಾಡಿಕೊಂಡು ನೂರಾರು ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದ ಪದ್ಧತಿ ಇತ್ತು. ವಾರದ ಊಟ ಕೇಳುವುದಕ್ಕೆ ಬರುವವರಲ್ಲಿ ವಿಚಿತ್ರ ಸ್ವಭಾವದವರು ಇರುತ್ತಿದ ಹಾಗೆಯೇ ವಾರಾನ್ನ ಹಾಕಲು ಒಪ್ಪುತ್ತಿದ್ದವರಲ್ಲಿಯೂ ವಿಚಿತ್ರ ಸ್ವಭಾದವರು ಇರುತ್ತಿದ್ದರು ; ವಿಚಿತ್ರವಾದ ಕಾರಣಗಳಿಗೆ ವಾರ ಕೊಡುತ್ತಿದ್ದರು. ಅವರಲ್ಲಿ ಕೆಲವರ ಸ್ವಭಾವವನ್ನು ಕಸ್ತೂರಿಯವರು ವರ್ಣಿಸಿರುವುದು ಅವರಿಗೇ ವಿಶಿಷ್ಟವಾದ ರೀತಿಯಲ್ಲಿ ವಾರಾನ್ನ ಕೇಳಲು ಹೋದರೆ ಹುಡುಗರನ್ನು ಕೂಡಿಸಿ ಭೈರಿಗೆ ಹೊಡೆದು ಕೊನೆಗೆ ‘ಇಲ್ಲ’ ಎನ್ನುವ ವರ್ಗ. ಗುಂಡಪ್ಪನೂ ಅವನ ಸಹಯಾಚಕನೂ ಒಬ್ಬರು ‘ಮಹಾನುಭಾವ’ರ ಮನೆಗೆ ಹೋದಾಗ ಆದ ಅನುಭವ :

“ನಮಗೆ ಅವರು ಆಸನ ಕೊಟ್ಟು ಉಪಚರಿಸಲೇ ಇಲ್ಲ. ನಮ್ಮನ್ನು ಕಂಡ ಕೂಡಲೇ ಅವರ ಮುಖದಲ್ಲಿ ಸಂತೋಷದ ಸುಳಿಗಾಳಿ ಬೀಸಿತು. ಆಳವಾದ ಒಂದು ಕೊಳದ ಮೇಲೆ ಕಿರುದೆರೆಗಳೇಳುವಂತೆ ಅವರ ಮುಖದಲ್ಲೂ ಹರ್ಷದ ಚಿಹ್ನೆಗಳು ಮಿನುಮಿನುಗಿದುವು. “ಇಬ್ಬರೂ ಅಂಗಿ ಬಿಚ್ಚಿ ತೋರಿಸಿ’ ಅಂದರು. ಹೊಟ್ಟೆಯ ಅಳತೆಯನ್ನು ಅಂದಾಜು ಮಾಡಿ ಉಗ್ರಾಣಕ್ಕೆ ತಿಳಿಸುವುದಕ್ಕಿರಬೇಕು ಅಂತ ನಾವು ನಲಿನಲಿಯುತ್ತಾ ಅಂಗಿ ಕಳಚಿದೆವು. ಆದರೆ ಅವರು ನೋಡಿದ್ದು ಬೆನ್ನು ಬೈಸೆಪ್ಸು!… ಅನಂತರ ಅವರು ಬಹಳ ಹೊತ್ತು ಗಾಢವಾದ ಮೌನದಲ್ಲೇ ಮುಳುಗಿದ್ದರು. ಕಡೆಗೆ, ವಾರಕ್ಕೆ ಮೂರು ದಿನ ಇಲ್ಲಿ ಊಟ ಮಾಡಬಹುದು, ಎರಡು ಹೊತ್ತು. ಆದರೆ… ಉಳಿದ ನಾಲ್ಕು ದಿನಗಳೂ ನೀವು ಇಲ್ಲಿಗೆ ಬಂದು ಹೋಗಬೇಕಾಗುತ್ತದೆ” ಅಂದರು. “ಫಳಾರಕ್ಕೋ ?” ಅಂದ ಗುಂಡಪ್ಪ. ಆತನ ಕಿವಿಗಳು ಅದನ್ನು ಗ್ರಹಿಸಲೇ ಇಲ್ಲ. ನಾಲ್ಕು ದಿನವೂ ಕಾಲೇಜು ಮುಗಿದ ಕೂಡಲೇ ನೀವು ಬಂದು (ನಿಮ್ಮ ವೇಳಾಪತ್ರಿಕೆಯನ್ನು ನಾನು ಕಾಲೇನಿಜಿಂದ ತರಿಸಿಕೊಳ್ಳುತ್ತೇನೆ)ಕಾಯಿಪಲ್ಯಗಳಿಗೆ ನೀರು ಹಾಕುವುದು, ನಮ್ಮ ಮನೆ ಆಳುಗಳು ಸೀಳಲು ಸಾಧ್ಯವಿಲ್ಲವೆಂದು ಒತ್ತಟ್ಟಿಗಿಟ್ಟಿರುವ ಕೊರಡುಗಳನ್ನು ಒಡೆಯುವುದು (ಕೊಡಲಿ ಕೊಡುತ್ತೇನೆ… ನಿಮ್ಮ ಬೈಸೆಪ್ಸುಗಳೂ ಕೂಡ ಬಲವಾಗಿಯೇ ಇವೆ.)ಮಕ್ಕಳನ್ನು ಪಾರ್ಕಿಗೆ ಎತ್ತಿಕೊಂಡುಹೋ ಗಿ ಕೂರಿಸಿಕೊಳ್ಳುವುದು. ಮನೆ ನಾಯಿಯನ್ನು ನೀರಿಗೆ ಹಾಕಿ ಓಡಿಸಿಕೊಂಡು ಬರುವುದು ಇಷ್ಟು ಕೆಲಸ ಮಾಡಬೇಕಾಗುತ್ತದೆ. ಅನ್ನದ ಋಣ ತೀರುತ್ತದೆ; ದಂಡಪಿಂಡ ಹಾಕಿದ ಅಂತ ನನ್ನನ್ನು ಯಾರೂ ದೂರುವುದಿಲ್ಲ” ಅಂದರು. ನಾನು ಗುಂಡಪ್ಪನ ಮುಖ ನೋಡಿದೆ. ಅವನು ನನ್ನ ಮುಖ ನೋಡಿದ. ನಮ್ಮ ನಾಲಗೆಗಳು ಬಾಯ ಬಿಲದಲ್ಲಿ ಎಲ್ಲೋ ಉಡುಗಿ ಹೋಗಿದ್ದುವು. ಮೊದಲು ಅದನ್ನು ಪತ್ತೆ ಹಚ್ಚಿ ಉಪಯೋಗಿಸಿದ್ದು ಗುಂಡ. “ನಾವು ಇಲ್ಲಿ ಪಿಂಡಕ್ಕೆ ಬರುವ ದಿನವೇ ದಂಡಾ ಹಾಕಿಬಿಡಿ” ಅಂದ. “ಪ್ರತಿ ಒಬ್ಬರೂ ಅದನ್ನೇ ಕೇಳುತ್ತಾರೆ. ಆದರೆ ನಾನು ಪ್ರತಿ ಒಬ್ಬರಿಗೂ ಕೊಡುವುದು ಒಂದೇ ನಕಾರ. ಕಟ್ಟಿಗೆ ಕಡಿದ ದಿನ ನಿಮ್ಮ ಹೊಟ್ಟೆಗೆ ಆಹಾರ ಪೂರೈಸುತ್ತಾ ಬಂದರೆ ನನ್ನ ಗತಿ ಏನು? ಉಳಿದ ನಾಲ್ಕು ದಿನ, ಇಲ್ಲಿ ದುಡಿತ ; ಇನ್ನೆಲ್ಲೋ ಹೊಡೆತ. ನಾನು ಹಾಕುವ ಮೂರು ದಿನ ಮಾತ್ರ ಬೆಳಿಗ್ಗೆ ಏಳು ಗಂಟೆಗೆ ಸಂಜೆ ಆರು ಗಂಟೆಗೆ ಬನ್ನಿ! ನಮ್ಮ ಮನೆಯಲ್ಲಿ ಕೂತು ಯಾವುದಾದರೂ ಪುಸ್ತಕ ಓದುತ್ತಿರಿ ಅಂದರು. ಗುಂಡಪ್ಪ ನನ್ನ ಮುಖ ನೋಡಿದ ; ನಾನು ಅವನ ಮುಖ ನೋಡಿದೆ. “ಘಾಟಿ” ಅಂತ ಕಣ್ಣುಸನ್ನೆಯಲ್ಲೇ ಹೇಳಿಕೊಂಡೆವು. ಕಳಚಿ ಇರಿಸಿದ್ದ ಅಂಗಿಗಳನ್ನು ಪುನಃ ಧರಿಸಿದೆವು. ಹೊಟ್ಟೆಗಳೆರಡೂ “ಬೇಕು! ಹಾಕು !” ಬೇಕು!” ಅಂತ ತಾಳ ಹಾಕಿದುವು. “ಆಗಲಿ ಸ್ವಾಮಿ” ಅಂತ ಹೇಳಿ ಅವರು ಬರೆದಿರಿಸಿರುವ ಅನಾಥಗಳ ಪಟ್ಟಿಯಲ್ಲಿ ನಮ್ಮ ಹೆಸರುಗಳನ್ನೂ ಸೇರಿಸಿ ಪರಾರಿಯಾದೆವು.”

ಇಲ್ಲಿನ ಮೂಲ ರಸ ಕರುಣೆ. “ಅನಾಥ”ಗಳ ದುಸ್ಥಿತಿಯನ್ನೂ ಗೆಯ್ದು ಸಂಪಾದಿಸಿದ ಅನ್ನವಾದರೂ “ವಾರಾನ್ನ”ದ ಅಗುಳು ಅಗುಳ ಮೇಲೂ ಬರೆದಿರುವುದನ್ನೂ ಅವು ಓದುತ್ತಾ ತಿನ್ನುವುದನ್ನೂ ಕಸ್ತೂರಿಯವರು ವರ್ಣಿಸಿದ್ದಾರೆ. ಆದರೆ ಅವರು ವರ್ಣನೆಗೆ ಹಾಸ್ಯದ ಲೇಪ ಕೊಟ್ಟಿದ್ದಾರೆ. ಓದುವಾಗ ನಗುವು ಬರುತ್ತದೆ. ಕರುಳೂ ಚುರುಕ್‌ಎನ್ನುತ್ತದೆ.

ಭಾರತದಲ್ಲಿ ತಲೆಮಾರುಗಳಿಂದ ಬಂದಿರುವ ಅತ್ತೆ-ಸೊಸೆಯರ ದ್ವೇಷ, ಒಬ್ಬರ ಮೇಲಿನ ಸೇಡನ್ನು ಮತ್ತೊಬ್ಬರು ಪರಂಪರಾಗತವಾದ ರೀತಿಗಳಿಂದಲೇ ತೀರಿಸಿಕೊಳ್ಳುವುದು, ಇದನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಗುಂಡಪ್ಪನ ಮನೆಯಲ್ಲಿ ಮೂವರು ಮಹಿಳೆಯರು-ಒಬ್ಬಳು ಸೊಸೆ, ಇಬ್ಬರು ಅತ್ತೆಯರು. ಗುಂಡಪ್ಪನ ಹೆಂಡತಿ ಸೊಸೆಯಾದರೆ ಗುಂಡಪ್ಪನ ತಾಯಿ ಮತ್ತು ಅವನ ತಂದೆಯ ತಾಯಿ ಇನ್ನಿಬ್ಬರು ಅತ್ತೆಯರು. ಇನ್ನು ಅವನ ಜೀವ ಸುಖವಾಗಿರುವುದು ಹೇಗೆ? ಅತ್ತೆ ಸೊಸೆಯರ ಬಾಂಧವ್ಯ ಮೀಮಾಂಸೆ ಹೀಗೆ ನಡೆದಿದೆ:

(ಗುಂಡಪ್ಪನ ಹೆಂಡತಿಯ ತಂದೆ ತಾಯಿ ಕಷ್ಟಕ್ಕೆ ಸಿಕ್ಕಿಕೊಂಡು ತಂದೆ ಪಂಡರಾಪುರಕ್ಕೂ ತಾಯಿ ಬೂದಿಹಾಳಿಗೂ ಸೇರಿಕೊಂಡರು). “ಅವಳ ಅಸಹಾಯಕತೆಯನ್ನು ಮತ್ತೆ ಮತ್ತೆ ಮುದ್ರಿಸುವುದಕ್ಕಾಗಿಯೇ ಅಂತೆ ಅವಳ ಅತ್ತೆ ದೇವರ ಸ್ತೋತ್ರಗಳನ್ನು ಸದಾ ಹೇಳುತ್ತಿದ್ದದ್ದಂತೆ. “ವಿಟ್ಠಲ, ವಿಟ್ಠಲ” ಎಂದು ಹೇಳಿದಾಗಲೆಲ್ಲ ಸೊಸೆಯ ಹೃದಯವನ್ನು ಕುಟ್ಟಿದ ಹಾಗಾಗತ್ತಲ್ಲ ಎಂಬುದೇ ಆಕೆಗೆ ತೃಪ್ತಿ! ಅಡಿಗೆಮನೆ ಬಚ್ಚಲುಮನೆಗಳಿಂದ ದಿನವೂ ಸೊಸೆಯ ಕೈಯಿಂದಲೇ ಬೂದಿತೆಗಿಸಿ ಹೊರಕ್ಕೆ ಸುರಿಸುವಳಂತೆ, ಅತ್ತೆ ; ನೋಡಿ ! ದಂಡಿಸುವುದರಲ್ಲಿಯೂ ಆಕೆಯಲ್ಲಿ ಒಂದು ಹೊಸ ರೀತಿಯ ಚತುರತೆ ಇತ್ತು!”

ಪಾರ್ಶ್ವವಾಸಿ ಶ್ರೀಕಂಠಯ್ಯನ ಮನೆಯವರು ಹಾಡಿ ಹಿಂಸಿಸುವರಷ್ಟೆ ಅವರ ತಾಯಿ ಸೊಸೆಯನ್ನು ಬೈಯುತ್ತಿದ್ದುದು ಸಂಗೀತದ ಭಾಷೆಯಲ್ಲೇ. “ಕಾವೇರಿ ಎಂಬ ಹೆಸರಿಗೆ ಬದಲಾಗಿ ಸಂಗೀತವೇ ಸರ್ವಸ್ವವಾದ ನಮ್ಮ ಮನೆಗೆ ಹೆಚ್ಚು ಸಮಂಜಸವೆನಿಸಿದ ಸಾವೇರಿ ಅಂತಲೇ ಅವಳಿಗೆ ನಾಮಕರಣ ಮಾಡಿದಳು. ಎತ್ತ ತಿರುಗಿದರೂ ಅತ್ತೆಯ ಒತ್ತಡವೇ! ‘ನನ್ನ ಶ್ರುತಿಯೇನು ಸೀದು ಹೋಗಿಲ್ಲ, ಸಾವೇರಿ! ನನ್ನ ಹಾಡಿಗೆ ತಕ್ಕ ಹಾಗೆ ನೀನು ತಾಳ ಹಾಕಬೇಕೇ ಹೊರತು, ನೀನು ತಾಳ ಹಾಕಿದ್ದಕ್ಕೆ ಸರಿಯಾಗಿ ನಾನು ಹಾಡುವುದಿಲ್ಲ, ತಿಳಿಯಿತೇ?” ನೀನು ಯಾರೆ, ಮಧ್ಯ ಬಂದು ಮಧ್ಯಮಾವತಿ ಅನ್ನುವುದಕ್ಕೆ ? ಹೋಗೆ ! ನಿನ್ನ ಬೇಗಡೆ ನನ್ನ ಹತ್ತಿರ ಬೇಯುವುದಿಲ್ಲ, ಜ್ಞಾಪಕವಿರಲಿ,’ ‘ನನ್ನ ಹಿಂದೋಳ ಮಾಡುವುದಕ್ಕೆ ನಿನ್ನ ಉಪಾಯ ಇದು.’ ‘ಎಂದಾದರೊಂದು ದಿನ ಅವನ ತಲೆ ಬೋಳಿಸಿ ಧನ್ಯಾಸಿ ಮಾಡುತ್ತಿಯೆ ನೀನು ನಿನ್ನ ದರ್ಬಾರಿನಲ್ಲಿ !’ ಹೀಗೆ ನ್ನನ ತಾಯಿ ಆಕೆಯನ್ನು ದೂಷಿಸಿ ದೂರವಿರಿಸಲು ಮೊದಲು ಮಾಡಿದರು. ‘ಹೆಣ್ಣಿನ ಬಾಳು ಕಣ್ಣೀರು, ತಣ್ಣಗಿರು’ ಅಂತ ನಾನು ಎಷ್ಟು ಕಣ್ಣೊರೆಸಿದರೂ ಆಕೆ ಕೇಳುವುದು ಒಂದೇ ಪ್ರಶ್ನೆ: ‘ನಿಮ್ಮ ತಾಯಿನೂ ಹೆಣ್ಣು ತಾನೆ’ ಕಸ್ತೂರಿಯವರು ತಮ್ಮ ಹೊಸ ಕಾಲದ ಘಟನೆಗಳನ್ನೂ ಅನುಭವಗಳನ್ನೂ ನಿರೂಪಿಸುವಾಗ ಪುರಾಣಗಳನ್ನು ಹಳೆಯ ಕಾವ್ಯಗಳನ್ನು ಉಚಿತವಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಮಕ್ಕಳು ಒಂದೂ ಉಳಿಯದಾದಾಗ ಗುಂಡಪ್ಪನ ತಾಯಿ ಬೇಕಾದಷ್ಟ ಹರಕೆ ಹೊತ್ತರು, ಅದೂ ತೀರಿಸಲು ಸಾಧ್ಯವಾಗದ ಹರಕೆಗಳು. ಆಕೆಯೇ ಹೇಳುತ್ತಾರೆ : “ಅಷ್ಟು ಹರಕೇನ ಯಾವ ಮಹಾರಾಜರೂ ಪೂರೈಸುತ್ತಿರಲಿಲ್ಲ. ಆ ದೇವರುಗಳು ಅದನ್ನೆಲ್ಲ ಹೇಗೆ ನಂಬಿದರೋ! ಎಲ್ಲರೂ ತೇರಿಗೆ ಹೋಗುತ್ತೇನೆ ಅಂತ ಹರಕೆ ಹೊತ್ತರೆ ನಾನು ಬೆಳ್ಳಿ ತೇರನ್ನೇ ಮಾಡಿಸಿಕೊಡುತ್ತೇನೆ ಅಂದೆ!… ತುಲಾಭಾರ ಎಂಬುದಕ್ಕೆ ಬದಲು ತಕ್ಕಡೀನೆ ಕೊಡುತ್ತೇನೆ ಎಂದೆ!” ಆದರೆ ಯಾವ ಹರಕೆಗಳನ್ನೂ ತೀರಿಸಲಿಲ್ಲ. ಈ ಸಂದರ್ಭದಲ್ಲಿ ಕಸ್ತೂರಿಯವರು ಪುರಾಣವನ್ನು ಬಳಸಿ ಆಕೆಯ ಬಾಯಲ್ಲಿ ಹೇಳಿಸುತ್ತಾರೆ : “ದೇವರಷ್ಟು ತಡೆದಾರೆಯೇ? ಮನ್ಮಥ ಮೈಮೇಲೆ ಐದು ಹೂವುಗಳನ್ನು ಕೊಂಚ ಜೋರಿನಿಂದ ಎಸೆದ ಮಾತ್ರಕ್ಕೇನೆ ಉರಿಗಣ್ಣು ತೆರೆದು ಶಿವ ಆತನನ್ನು ಸುಟ್ಟೇಬಿಟ್ಟನಲ್ಲಾ! ಅಂಥಾದ್ದರಲ್ಲಿ ಎಸೆಯುತ್ತೇನೆ ಅಂದ ಹೂವನ್ನು ಎಸೆಯದೇ ಹೋದರೆ ಅವನಿಗೆ ಎಷ್ಟು ಕೋಪ ಬರಬೇಡ!… ಸರಿ ! ಒಂದು ಎರಡು ಮೂರು ನಾಲ್ಕು ಅಂತ ಕಿತ್ತುಕೊಂಡು ಹೋದ ಕಂದಗಳನ್ನ.”

ಚಾಮರಸ ‘ಪ್ರಭುಲಿಂಗಲೀಲೇ’ಯಲ್ಲಿ ತನ್ನ ಕಾವ್ಯ ‘ಹಾದರದ ಕಥೆಯಲ್ಲ, ಸೋದರರ ವಧೆಯಲ್ಲ’ ಎಂದು ಹೇಳಿಕೊಂಡಿದ್ದನಷ್ಟೇ? ಕಸ್ತೂರಿಯವರು ಅದನ್ನ ನೆನಪು ಮಾಡಿಕೊಂಡು ‘ಹೆಣ್ಣು ಮಕ್ಕಳಿಗೆ ವಿದ್ಯೆ ಬೇಡ’ ಎನ್ನುವುದಕ್ಕೆ ಗುಂಡಪ್ಪನ ಮಾವ ಕೊಡುವ ಕಾರಣವಾಗಿ ಅದನ್ನು ಬಳಸಿಕೊಂಡಿದ್ದಾರೆ. ಗುಂಡಪ್ಪನ ತಾಯಿ ಹೇಳುತ್ತಾರೆ : ‘ಓದುಬರಹ ಹೆಣ್ಣು ಮಕ್ಕಳು ಕಲಿಯಬಾರದು ಅನ್ನೋದೇ ನಮ್ಮಪ್ಪನ ಹಠ. ಹಾದರದ ಕಥೆ ಸೋದರರ ವಧೆ, ಕೈಹಿಡಿದವಳನ್ನ ಬೆಂಕಿಗೆ ತಳ್ಳುವುದು, ಕಾಡಿಗೆಟ್ಟುವುದು, ಅಪ್ಪ ಮಕ್ಕಳು ಜಗಳ ಆಡುವುದು ಇವೆಲ್ಲ ಓದದೇ ಹೋದರೆ ಏನೂ ನಷ್ಟ ಇಲ್ಲ ಅನ್ನುವರು.”

ಇನ್ನು ಶುದ್ಧ ಹಾಸ್ಯಕ್ಕೆ ಎಷ್ಟು ಉದಾಹರಣೆಗಳು ಬೇಕು ಈ ಪುಸ್ತಕದಲ್ಲಿ? ನನ್ನ ಅಂತಸ್ತಿಗಾಗಿ ಹೊಡೆದಾಡುವ ಹೆಡ್‌ಗುಮಾಸ್ತೆಯನ್ನು ಕುರಿತು ಅಧಿಕಾರಿ ಹೇಳುತ್ತಾನೆ : “ಆ ವ್ಯಾಸರಾಯನೂ ಅಷ್ಟೆ ಅಂತಸ್ತು, ಸ್ಥಾನಮಾನ ಅಂತ ಸದಾ ವಾಗ್ವಾದ ಹೂಡುತ್ತಿದ್ದ ದಿನಬೆಳಗಾದರೆ ತನ್ನ ಮೇಜಿನ ಮೇಲೆ ಬಟ್ಟೆ ಹರಕನ್ನು ಹೊಲಿಸಬೇಕು. ತನ್ನ ತಾಯಿ ಕುಡಿಕೆಗೆ ಹೆಚ್ಚು ನೀರು ಬಿಡಿಸಬೇಕು, ತನ್ನ ಕುರ್ಚಿಗೆ ನಾಲ್ಕು ಕಾಲು ಸಾಲದು ಅಂತ ಅರ್ಜಿ ಬರೆದು ನನ್ನ ಮುಂದಿಡುತ್ತಿದ್ದ.”

ಗುಂಡಪ್ಪನ ತಂದೆಗೂ ಕಾಶೀಪತಿಯ ತಂದೆಗೂ ಹತ್ತಿದ ಮಾರಾಮಾರಿ ಮಕ್ಕಳನ್ನೂ ಅಮರಿಕೊಂಡಿತು. “ಹಿರಿಯೂರು ಕೂಗಿದ ಕಹಳೆಗೆ ಕಿರಿಯರು ನಾವೂ ಪ್ರತಿಧ್ವನಿ ಗೂಡಿಸಿದೆವು.’ ‘ಕೋಳಿ ಎಂಬುದು ಸ್ತ್ರೀಲಿಂಗ’ ಅಂತ ಅವನು, ಪುಲ್ಲಿಂಗ ಅಂತ ನಾನು. ಉತ್ತಮ ಪುರುಷ ಅಂದರೆ ನಾನು ಅಂತ ಅವನು, ನಾನು ಅಂತ ನಾನು! ನಾನು ಅವನನ್ನ ‘ಭೋಗಂಧ ರಾಯಣ’ (ಯೋಗಂಧರಾಯಣದ ರೂಪಾಂತರ!) ಅಂತ ಕರೆದರೆ ಅವನು, ನನ್ನನ್ನು ‘ಭೋಜನ ರಾಜ’ (ಭೋಜನರಾಜ!) ಅಂದ. ಶಾಕುಂತಲ ನಾಟಕ ಬರೆದವರು ಯಾರೋ ಅಂತ ಮೇಷ್ಟರು ಕೇಳಿದರೆ ನಾನಲ್ಲ ಅಂತ ಅವನು ! ಅವನಲ್ಲ ಅಂತ ನಾನು!”

ಕರೆಸ್ಪಾಂಡೆನ್ಸ್‌ಕೋರ್ಸಿನಿಂದ ಬಿ. ಎ. ಪದವಿ ತರಿಸುತ್ತೇನೆ ಎಂದದ್ದಕ್ಕೆ ಕಾಶೀಪತಿಯ ಅಪ್ಪ ಒಪ್ಪಲಿಲ್ಲ. ಅಮೆರಿಕ ದೇಶದ ಪ್ರಸಿದ್ಧ ಗೋವಧಾ ಕೇಂದ್ರವಾದ ಚಿಕಾಗೋ ನಗರದಲ್ಲಿರುವ ಓರಿಯೆಂಟಲ್‌ಯೂನಿರ್ವಸಿಟಿಯಿಂದ ಟಪಾಲ ಮೂಲಕ ಕೇವಲ ನೂರೈವತ್ತು ರೂಪಾಯಿ ಖರ್ಚಿನಲ್ಲೇ ಒಂದು ಬಿ. ಎ. ತರಿಸುತ್ತೇನೆ ಎಂದು ಅಂಗಲಾಚಿದ. ಅವರು ಒಪ್ಪಲಿಲ್ಲ. ‘ಸಮುದ್ರದಾಚೆಯಿದ್ದ ಸೀತಾದೇವಿಯನ್ನು ತನ್ನ ಮನೋ ಸಂಕಲ್ಪ ಬಲದಿಂದ ಹಾಗೆಯೇ ತರಿಸಲು ಶ್ರೀರಾಮಚಂದ್ರಮೂರ್ತಿ ಅಶಕ್ತನಾಗಿದ್ದನೆ? ಆದರೂ ಕೋಡಗಗಳನ್ನು ಕರೆಸಿ ಸೇತುವೆ ಕಟ್ಟಿ ಧಾಳಿ ಮಾಡಿ ಕದನ ಹೂಡಿ ಲಗ್ಗೆ ಹತ್ತಿದ್ದೇಕೆ? ಕನ್ನ ಹಾಕಿ, ಕೈಕಾಲು ಕಟ್ಟಿ, ಕೈ ನೀಡಿ ಕಂಡವರು ಕೊಡುವ ಕದನ್ನ ತಿಂದರೆ ಗೌರವವೇ? ಕಾಸಿಗೆ ಮೂರು, ಕೊಸರಿಗೆ ನಾಲ್ಕು ಅಂತ ಬಿರುದುಗಳನ್ನು ಮಾರಿದರೆ ಕೊಂಡುಕೊಳ್ಳುವವನು ದಡ್ಡ ಅಷ್ಟೆ ಅಂತ ರೇಗಿದರು.”

ದೇವಾಲಯಗಳಲ್ಲಿ ಈ ವಿಗ್ರಹದಿಂದ ಇಂಥ ಲಾಭ ಎಂದು ಪ್ರಚಾರಮಾಡುವವರನ್ನೂ ಅದನ್ನು ನಂಬಿ ನಡೆದುಕೊಳ್ಳುವವರನ್ನೂ ವಿಡಂಬಿಸುವ ಈ ವಿವರಣೆ ನೋಡಿ : “ನಮ್ಮೂರಲ್ಲಿ ವರದರಾಜನ ದೇವಸ್ಥಾನ ಬೇರೆ ಇದೆ. ಜಕ್ಕಣಾಚಾರಿ ತಾತನೇ ಕಟ್ಟಿಸಿದ್ದಂತೆ. ಸುತ್ತ ಮುತ್ತ ನೂರು ಹಳ್ಳಿಗೆ ಅದೇ ಆಸ್ಪತ್ರೆ! ಅಷ್ಟು ಚಿತ್ರ ಬಿಡಿಸಿದಾನೆ ನೋಡಿ, ಆ ಮುದೀ ಆಚಾರಿ ಕಲ್ಲಿನಲ್ಲಿ. ಮಕ್ಕಳ ಹೊಕ್ಕಳು ಉಬ್ಬಿದರೆ, ಪ್ರಾಕಾರದಲ್ಲಿರುವ ದೊಡ್ಡ ಗಣೇಶನ ಹೊಕ್ಕುಳಿಗೆ ಮೇಣ ಮೆತ್ತಿದರೆ, ಕರಗಿ ಹೋಗುವುದು! ಹೆರಿಗೆ ತೊಂದರೆಯಾದರೆ ಉತ್ತರದ ಗೋಡೆಯಲ್ಲಿ ಕೆತ್ತಿರುವ ಬೆತ್ತಲೆ ಹೆಂಗಸಿಗೆ ಎಣ್ಣೆ ಅಭಿಷೇಕ ಮಾಡಿದರೆ ಸಾಕು! ತೋಳು ಉಳುಕಿದರೆ ಶಿಲಾಬಾಲಿಕೆ ಮುಂದೆ ಹೋಗಿ ಹಣ್ಣು ಕಾಯಿ ಒಪ್ಪಿಸಿದರೆ ಆಯಿತು. ಆನೆಕಾಲು ವಾಸಿಯಾಗಬೇಕಾದರೆ ಗಜಚರ್ಮಾಂಬರ ಮೂರ್ತಿಗೆ ಮೂವತ್ತು ನಮಸ್ಕಾರ ಹಾಕಿ ಊರಿನ ಬ್ರಾಹ್ಮಣರಿಗೆಲ್ಲ ಮೂರು ಮೂರಾಣೆ ದಕ್ಷಿಣೆ ಕೊಟ್ಟರಾಯಿತು. ಕೊಡಲಿ ಪೆಟ್ಟು ಬಿದ್ದರೆ ಪರಶುರಾಮನ ವಿಗ್ರಹ ಇದೆ; ಬೆಸ್ತರಿಗೇನಾದರೂ ಗಾಯವಾದರೆ ಮತ್ಸ್ಯಯಂತ್ರ ಭೇದಿಸುವುದನ್ನು ಬಿಡಿಸಿದಾರೆ…”

ಅತ್ತೆಯರು ಸೊಸೆಯರಿಗೆ ಹಿಂಸೆ ಕೊಡುವುದು ಸೀತಮ್ಮನವರಿಗೂ ಅನ್ವಯಿಸುವುದು ಸಾಧ್ಯ ಎಂಬುದನ್ನು ಕಸ್ತೂರಿಯವರು ತೋರಿಸಿದ್ದಾರೆ ; ಪಕ್ಕದ ಮನೆಯಾಕೆ ಗುಂಡಪ್ಪನ ಮನೆಯಾಕೆಗೆ ಉಪದೇಶ ಕೊಡುತ್ತಾರೆ : “ಇದೆಲ್ಲ ಕಾಲಮಹಿಮೆ ಕಣೆ! ನಿನಗೂ ಒಂದು ಗಂಡು ಚಿಣ್ಣ ಇದೆಯಲ್ಲಾ… ಅದನ್ನು ಸರಿಯಾಗಿ ನೋಡಿಕೊ… ಅದಕ್ಕೆ ಚೆನ್ನಾಗಿ ಪೋಷಣೆ ಮಾಡು. ಅವನಿಗೊಬ್ಬಳನ್ನು ತಂದರೆ ನೀನೂ ಇದೇ ರೀತಿ ಪೀಡಿಸಬಹುದು. ಮುಯ್ಯಿಗೆ ಮುಯ್ಯಿ ತೀರಿಸಿ ಋಣವಿಮುಕ್ತಳಾಗಬಹುದು” ಅನ್ನುವಳು. “ನೋಡೆ! ಅತ್ತೆ ಕಾಟ ಅನ್ನುವುದು ಯಾರಿಗೂ ತಪ್ಪಿದ್ದಲ್ಲ. ಸೀತಾದೇವಿ, ಪಾಪ, ದಂಡಕವನವಾಸ ಅಶೋಕವನವಾಸ ಅಗ್ನಿಪ್ರವೇಶ ಎಲ್ಲವನ್ನು ಮುಗಿಸಿ ಆಕಾಶಮಾರ್ಗವಾಗಿ ಅಯೋಧ್ಯೆಗೆ ಬಂದು ಶ್ರೀರಾಮನ ಪಟ್ಟದ ರಾಣಿ ಅಂತ ಅನ್ನಿಸಿಕೊಂಡಾಗ, ಅವಳ ಅತ್ತೆಯರು (ಒಬ್ಬರೇ, ಇಬ್ಬರೇ, ಮೂರು ಜನ ಅತ್ತೆಯರು!) ಅವಳ ಮೇಲೆ ಇಲ್ಲಸಲ್ಲದ ಪಿತೂರಿ ಹೂಡಿ ಅಗಸಗಿತ್ತಿ ಸಂಗಡ ಒಳಸಂಚು ಮಾಡಿ, ಅವಳನ್ನು ಮತ್ತೆ ಕಾಡಿಗೆ ಅಟ್ಟಿಸಲಿಲ್ಲವೆ?…ಅದಕ್ಕೆ ಅಂತ ಕಾಣುತ್ತೆ ಸೀತಾಮ್ಮನವರು ಅವುಳಿ ಜವುಳಿ ಹೆತ್ತದ್ದು, ಇಬ್ಬರು ಸೊಸೆಯರು ತನಗೂ ಸಿಕ್ಕಲಿ ಮುಂದಕ್ಕೆ ಅಂತ” ಅಂದಳು ಕಾವೇರಮ್ಮ. “ನನಗಿದು ಹೊಳದೇ ಇರಲಿಲ್ಲ ಅದುವರೆಗೂ.” ನಮಗೂ ಇದುವರೆಗೂ ಹೊಳೆದೇ ಇರದಿದ್ದ ಇಂಥ ಅನೇಕ ಸ್ವಂತಿಕೆಯ ತಿರುವುಗಳಿಂದ ಹಾಸ್ಯವನ್ನು ಸೃಷ್ಟಿಸಿ ಕಸ್ತೂರಿಯವರು ನಮ್ಮನ್ನು ಆಶ್ಚರ್ಯಗೊಳಿಸುತ್ತಾರೆ, ಸಂತೋಷಗೊಳಿಸುತ್ತಾರೆ.

ಅಲ್ಲದೆ ಕಸ್ತೂರಿಯವರು ಸಮಯೋಚಿತವಾಗಿ ಹಳೆಯ ಪದಗಳಿಗೆ ಹೊಸ ರೂಪಗಳನ್ನು ನೀಡಿ ಅರ್ಥಪುಷ್ಟಿಯನ್ನೂ ಹಾಸ್ಯಸೃಷ್ಟಿಯನ್ನೂ ಸಾಧಿಸುತ್ತಾರೆ. ಇವುಗಳನ್ನು ನೋಡಿ: ಹೇನು ಜೇನು (ಹಾಲು ಜೇನು ಇದ್ದಹಾಗೆ), ಅರಮನೆ, ಕೊಲಾಕೋವಿದರು, ಆಯುರ್ಭೇದ, ಜ್ವರದೃತು, ಚಾಡೀಪತಿರಾಯರು, ಶ್ಲೇಷ್ಮೃತು, ಗಾದಾಸಪ್ತಶತಿ, ಮುಸಾಲಿನಿ (ಮುಸಲೋನಿ, ಮುಸಾಲಿನಿ ಅಂದರೆ ಲಾಲಿನಿ ಪಾಲಿನಿ, ಮೃಣಾಳಿನಿ ಅಂದ ಹಾಗೆ ಒಬ್ಬಳು ಹೆಂಗಸು ತಾನೆ…? ಆ ! ಅಲ್ಲವೇನು?)ಶಿಶುವಿಕಾರ! ವರಹಂಕಾರ, ನಿರ್ಲಂಚ, ಕಾಲಸನ್ಯಾಸಿ, ಸಾರಾಯಾಂಶ, ವಾರ್ಮೋಡಗಳ, ಕೋಪಮಂಡೂಕಗಳು, ದ್ವಾಪರದ್ಯುಗ-ಇತ್ಯಾದಿ.

ಇನ್ನು ತಮ್ಮದೇ ಆದ ಗಾದೆಗಳನ್ನು ಸೃಷ್ಟಿಸಿದ್ದಾರೆ ಕಸ್ತೂರಿಯವರು : ವಂಚಕನಿಗೆ ಲಂಚಕ ಸಾಕ್ಷಿ, ಅಂತು ಇಂತು ಕುಂತ ಕಡೆಯಿಂದ ಏಳುವುದಿಲ್ಲ, ಬೆಲ್ಲದ ಗಣೇಶನಿಗೆ ಅಲ್ಲೇ ನೈವೇದ್ಯ, ಗೋವಿಂದ ಅನ್ನೋ ಗುಲಾಮ ಅಂದರೆ ಯಾವನೋ ಗೋಪಿಚಂದನ ಹಾಕಿಕೊಂಡು ಬರುತ್ತೇನೆ ಅಂದನಂತೆ, ಕಪ್ಪಗಿರೋದೆಲ್ಲ ಕಾಡಿಗೆ ಅಂತ, ತಂದುಕೊಟ್ಟಿದ್ದೆಲ್ಲ ಹೊಟ್ಟು ಮನೆಮಾಡಿ ಪರರಿಗೆ ಉಪಾಕಿರ ; ಉಕ್ಕವೇನು ಪಕ್ಕವೇನು ದಕ್ಕಿದ್ದೇ ಲಾಭ. ಹಳೇಗಾಣದ ಹಿಂಡಿಯೇ ಗತಿ. ಹೇನಿಗೆ ಉಪಾಕಿರ ; ಉಕ್ಕವೇನು ಪಕ್ಕವೇನು ದಕ್ಕಿದ್ದೇ ಲಾಭ. ಹಳೇಗಾಣದ ಹಿಂಡಿಯೇ ಗತಿ. ಹೇನಿಗೆ ಹೆದರಿ ಹಜಾಮನನ್ನು ಕರೆಸಿದಳಂತೆ – ಹೀಗೆ ಎಷ್ಟೋ.

ಸಾಹಿತ್ಯದ ಉದ್ದೇಶ ಮನಸ್ಸಿಗೆ ಸಂತೋಷ ಕೊಡುವುದು ತಾನೆ? ‘ಚಕ್ರದೃಷ್ಟಿ’ ಓದುಗರಿಗೆ ಬೇಕಾದಷ್ಟು ಸಂತೋಷ ಕೊಡುತ್ತದೆ. ಇಂಥ ಶುದ್ಧ ಹಾಸ್ಯವನ್ನು ನೀಡಿದ್ದಕ್ಕಾಗಿ ಕಸ್ತೂರಿಯವರಿಗೆ ಕನ್ನಡಿಗರು ಎಂದೆಂದೂ ಋಣಿಗಳು.