ಕೆ.ಎಸ್‌.ನಿಸಾರ್‌ ಅಹಮದ್‌ ಅವರ ಕಾವ್ಯಗಳಲ್ಲಿ ಬಹು ಭಾಗವನ್ನು ಅವರ ಬರವಣಿಗೆಯ ಮೊದಲ ದಿನಗಳಿಂದಲೂ ನಾನು ಇಷ್ಟಪಟ್ಟಿದ್ದೇನೆ. ಹಾಗೆಂದು ನಾನು ಕೆಲವು ಸಭೆಗಳಲ್ಲಿ ಹೇಳಿಯೂ ಇದ್ದೇನೆ. ಶ್ರೀ ರಾಮಕೃಷ್ಣಾಶ್ರಮಕ್ಕೆ ನಾನು ಹತ್ತಿರದವನಾಗಿರುವುದರಿಂದಲೂ ನನ್ನ ಬರವಣಿಗೆಗಳಲ್ಲಿ ಕೆಲವು ಅಧ್ಯಾತ್ಮದ ವಲಯವನ್ನು ಸ್ಪರ್ಶಿಸುತ್ತಿರುವುದರಿಂದಲೂ ಶ್ರೀನಿಸಾರ್‌ ಅಹಮದ್‌ರವರ ಅತಿ ಲೌಕಿಕ ಕವನಗಳನ್ನು ಕುರಿತು ಬರೆಯುವಂತೆ ನನ್ನನ್ನು ಕೇಳಲಾಗಿದೆ. ಅದರಂತೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಿಸಾರ್ ಅವರ ‘ಸಮಗ್ರ ಕವಿತೆಗಳು’ ಗ್ರಂಥದಲ್ಲಿನ ಕೆಲವು ಕವನಗಳನ್ನು ಆರಿಸಿಕೊಂಡು ಅವನ್ನು ವಿಶ್ಲೇಷಿಸುವುದು ನನ್ನ ಉದ್ದೇಶವಾಗಿದೆ.

ನಿಸಾರ್‌ ಅಹಮದ್‌ ಅವರು ನಮ್ಮ ಈ ಭೂಮಿ, ಅದರ ಮೇಲೆ ನಡೆದಾಡಿದ, ನಡೆದಾಡುತ್ತಿರುವ ಜನರನ್ನು ಕುರಿತು, ನಿಸರ್ಗವನ್ನು ಕುರಿತು, ಮಾನವ ಸಂಬಂಧಗಳನ್ನು ಕುರಿತು, ನಮ್ಮ ಹೃದಯಗಳಲ್ಲಿ ನೆಲೆಸಿದ್ದು ನಾನಾ ಪ್ರಮಾಣಗಳಲ್ಲಿ ಉಕ್ಕಿ ಹರಿಯುವ ರಾಗದ್ವೇಷಗಳನ್ನು ಕುರಿತು ನೂರಾರು ಕವನಗಳನ್ನು ರಚಿಸಿದ್ದಾರೆ. ಕನ್ನಡ ನಾಡಿನಾದ್ಯಂತ ಕೋಟ್ಯಂತರ ಜನರ ಕಿವಿಗಳಲ್ಲಿ ಅವರ ‘ಕುರಿಗಳು, ಸಾರ್‌ಕುರಿಗಳು’ ‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ’ ಕವನಗಳು ರಿಂಗಣಿಗುಣಿಯುತ್ತಿವೆ. ಅವರು ನಮ್ಮ ಮಣ್ಣಿನಿಂದ ಮೂಡಿದ, ನಮ್ಮ ಜನರ ಹೃದಯವನ್ನು ಸೂರೆಗೊಂಡ ನಮ್ಮ ಮಣ್ಣಿನ ಕವಿ. ಇಂಥವರು ಆಕಾಶದ ಕಡೆಗೆ, ಅಲ್ಲಿ ಮೆರವಣಿಗೆ ನಡೆಯುವ ಬಹುವರ್ಣಮಯ ಮೋಡಗಳನ್ನು ನೋಡಲು, ತಮ್ಮ ದೃಷ್ಟಿಯನ್ನು ಹರಿಸಿರುವುದು ಸಹಜವಾಗಿಯೇ ಇದೆ. ಆದರೆ ಅದರಾಚೆಗೂ ತಮ್ಮ ಕುತೂಹಲವನ್ನು ಯಾತ್ರೆ ಕಳುಹಿಸಿ, ಅದು ಅಲ್ಲಿಂದ ಹಿಂದಿರುಗಿ ಬಂದು ನೀಡಿರುವ ವಿಚಾರ ಮಿಶ್ರಿತ ಅನುಭವವನ್ನು ಕಾವ್ಯಗೊಳಿಸಿರುವುದು ಸಹೃದಯರಿಗೆ ಸಂತೋಷವನ್ನು ನೀಡಿರುವ ಸಂಗತಿಯಾಗಿದೆ.

ಈ ಲೋಕದ ಬದುಕಿಗೆ ಅಂಟಿಕೊಂಡು, ಅದಕ್ಕೆ ಹೊಂದಿಕೊಂಡು, ಅಥವಾ ಹೊಂದಕೊಳ್ಳಲಾರದೆ ಒದ್ದಾಡಿಕೊಂಡು, ಮನೆಯವರು, ನೆರೆಹೊರೆಯವರು ಶಾಸ್ತ್ರಗಳೆಂದು ತಿಳಿದಿರುವ ಗ್ರಂಥಗಳನ್ನು ನಂಬಿಕೊಂಡು, ಅವರ ದೇವರು ಅಥವಾ ದೇವರುಗಳನ್ನು ಹೊಗಳಿಕೊಂಡು, ಅವರ ಕೃಪೆಗೆ ಅಥವಾ ಅವರು ನೀಡಬಹುದಾದ ವರಗಳಿಗಾಗಿ ಹಂಬಲಿಸುತ್ತಾ, ಸುಖದುಃಖಗಳನ್ನು ಅನುಭವಿಸುತ್ತಾ ಬದುಕುವುದು ಒಂದು ದಾರಿ. ಅಂತಹವರಿಗೂ ತಾವು ನಡೆಯುತ್ತಿರುವ ದಾರಿ ಸರಿಯಾದದ್ದು ಹೌದೇ ಅಲ್ಲವೇ ಎಂಬ ಸಂದೇಹಗಳು ಕಾಡುತ್ತಲೇ ಇರುತ್ತವೆ. ನಮ್ಮ ನಂಬಿಕೆಗಳು ನಿಜವಾದವೇ, ಹುಸಿಯಾದವೇ ಎಂಬ ಜಿಜ್ಞಾಸೆ, ದೇವರು ಒಬ್ಬನೇ, ಮೂವತ್ತು ಮೂರು ಕೋಟಿಯೇ ಎಂಬ ಬುದ್ಧಿ ಕೋಲಾಹಲ, ದೇವರಿದ್ದರೆ ಈ ಜಗತ್ತಿನಲ್ಲಿ ಏಕೆ ಇಷ್ಟು ಕಷ್ಟ ಕಾರ್ಪಣ್ಯಗಳಿವೆ ಎಂಬ ಪ್ರಶ್ನೆಗಳು ಮಾನವತೆಯನ್ನು ಕಾಡುತ್ತಲೇ ಇವೆ. ಇಂತಹ ಸಂದೇಹಗಳು, ದುಃಖ ದಾರಿದ್ರ್ಯಗಳು ನೂರಾರು ದೇವಮಾನವರು, ವಿವಿಧ ಮತಾಚಾರ್ಯರು, ಸಾವಿರಾರು ಶಾಸ್ತ್ರಗಳು ಉದಿಸುವುದಕ್ಕೆ ಕಾರಣವಾಗಿವೆ. ತಾನು ನಂಬಿದ ದೇವರು ಅಥವಾ ಪ್ರವಾದಿ ತನ್ನ ಮತದವರು ಸೃಷ್ಟಿಸಿದ ಶಾಸ್ತ್ರಗಳ ಉಕ್ತಿಗಳು ಮಾತ್ರವೇ ಸತ್ಯ ಎಂಬ ನಂಬಿಕೆ ಇಂದಿಗೂ ನಿಲ್ಲದ ರಕ್ತಪಾತಕ್ಕೆ ಕಾರಣವಾಗಿದೆ. ಅಂತಹ ಪ್ರಶ್ನೆಗಳು ಅವುಗಳಿಗೆ ತತ್ಕಾಲಕ್ಕಾದರೂ ಸರಿ ಎಂದು ತೋರುವ ಉತ್ತರಗಳು ಸೂಕ್ಷ್ಮ ಮನಸ್ಸಿನ ನಿಸಾರರು ಅವುಗಳ ಬಗೆಗೆ ಚಿಂತಿಸುವಂತೆ ಮಾಡಿವೆ, ಅನಂತರ ಕವನಗಳಾಗಿ ಮೂಡಿದೆ. ಅವುಗಳಲ್ಲಿ ಒಂದು ಯಾಂತ್ರಿಕ!

ನಮ್ಮ ಬದುಕಿನ ಗುರಿ ದೂರದಲ್ಲಿ ಎಲ್ಲೋ ಇದೆ : ಇಲ್ಲವೇ, ಮೇಲೆ ಎಲ್ಲೋ ಇದೆ. ಅದು ಎಲ್ಲಿದ್ದರೂ ನಾವು ಇರುವಲ್ಲಿಂದ ಅಲ್ಲಿಗೆ ಹತ್ತಾರು ಲಕ್ಷ ಮೈಲುಗಳ ಅಂತರವಿದೆ ಎಂಬುದನ್ನು ಜೀವಿ ಯಾವಾಗಲೂ ಕಲ್ಪಿಸಿಕೊಂಡಿರುತ್ತಾನೆ. ಅಲ್ಲಿಗೆ ತಾನೊಬ್ಬನೇ ಹೋಗಬೇಕು, ಜೊತೆಗೆ ಯಾರನ್ನೂ ಕರೆದುಕೊಂಡು ಹೋಗುವಂತಿಲ್ಲ. ಜೀವಿ ಆ ದೂರ ದೂರಿನ ನೇರ ದಾರಿ’ಯನ್ನು ಹಿಡಿದ ಪಥಿಕನೇನೋ ಆಗುತ್ತಾನೆ. ಯಾವುದೇ ಧರ್ಮವಾಗಲಿ ಅದನ್ನು ಸ್ವರ್ಗ ಎಂದು ಬಣ್ಣಿಸುತ್ತದೆ. ಇಲ್ಲ, ತಾನು ಅಂತಿಮವಾಗಿ ಐಕ್ಯವಾಗಬೇಕಾದ ಬ್ರಹ್ಮ ಎಂದೋ ಏನೋ ತಿಳಿಸುತ್ತದೆ. ಆದರಿಂದಲೇ ಸಿಡಿದು ಬಂದಿರಬಹುದಾದ ಈ ಜೀವಿಯೇ ಅಲ್ಲಿಗೇ ತಲುಪುವ ಅದಮ್ಯವಾದ ಬಯಕೆ ಇದ್ದೇ ಇರುತ್ತದೆ. ಅಲ್ಲಿಗೆ ಯಾತ್ರೆ ಹೊರಟ ಜೀವಿ ನೇರವಾಗಿ, ಅತ್ತ ಇತ್ತ ನೋಡದೆ ಹೋಗುತ್ತಲೇ ಇದ್ದರೆ, ಇಂದಲ್ಲ ನಾಳೆ, ಜನ್ಮಾಂತರಗಳನ್ನು ಒಪ್ಪುವುದಾದರೆ ಅನೇಕ ಜನ್ಮಗಳ ಬಳಿಕ, ಅಲ್ಲಿಗೆ ತಲುಪಬಹುದು.

ಆದರೆ ಈ ಲೋಕ, ಈ ಸೃಷ್ಟಿ, ಅಗಣಿತವಾದ ವೈವಿಧ್ಯಗಳನ್ನು ಚೆಲುವಿನ ಕಣಿಗಳನ್ನೂ ತನ್ನ ಮೈಮೇಲೆ ಅರಳಿಸಿಕೊಂಡಿರುವ ಈ ಭೂಮಿ, ಪಥಿಕನು, ಕಣ್ಣುಕಟ್ಟಿದ ಕುದುರೆಯಂತೆ ಹಾಗೆ ಹೋಗಲು ಬಿಡುವುದಿಲ್ಲ. ಕವಿ ಕೇಳುತ್ತಾರೆ :

ನಡುವೆ ಮೂಡಿದ ಇಂದ್ರಜಾಲದ
ಬಣ್ಣವಾಯಿತೆ ಮೆಚ್ಚಿಗೆ?’

ಜೀವಮಾನವೆಲ್ಲ ತಪಸ್ಸು ಮಾಡಿ ಅರ್ಧ ದಾರಿಯನ್ನೋ ಮುಕ್ಕಾಲು ದಾರಿಯನ್ನೋ ಸವೆಸಿದ್ದಾರೆ ಎಂದು ನಾವು ಭಾವಿಸುವ ವ್ಯಾಸ, ವಿಶ್ವಾಮಿತ್ರರೇ ಆ ‘ಇಂದ್ರಜಾಲದ ಬಣ್ಣ’ದಿಂದ ಮೋಹಿತರಾಗಿ ಮಾರ್ಗ ಮಧ್ಯೆ ತಂಗಿದರು ಎಂದರೆ, ಸಾಮಾನ್ಯರ ಪಾಡು ಊಹಾತೀತ.

ಹೀಗೇಕಾಗುತ್ತದೆ ? ಬಹುಶಃ ಇದರ ವಿವರಗಳನ್ನು ತಾವು ಚಿಂತಿಸಿದ್ದರೂ ತತ್ವ ಪರಿಭಾಷೆಯಲ್ಲಿ ಹೇಳಲು ಒಪ್ಪದ ಕವಿ ಚೇತನ ಅವನ್ನು ಸಂಕ್ಷೇಪವಾದ ಆದರೆ ಸುಂದರವಾದ ಕಾವ್ಯ ಭಾಷೆಯಲ್ಲಿ ನಿರೂಪಿಸುತ್ತದೆ. ಇದು ಕವಿಯ ನಿಜವಾದ ಕಾವ್ಯ ಶಕ್ತಿಯ ಸ್ವರೂಪವನ್ನು ಸಹೃದಯರಿಗೆ ಪರಿಚಯಿಸುವ ಅನೇಕಾನೇಕ ರಸ ಸ್ಥಳಗಳಲ್ಲಿ ಒಂದು :

ಒಳಗೆ ನೆಲದೀ ಸ್ವಪ್ನ ಮಧುವನು
ಕುಡಿದ ಹಕ್ಕಿಯ ಜಾಗರ ;
ಕಾದು ಕುಳಿತಿದೆ ರಾಗ ತಲ್ಪದ
ಮೇಲೆ ಅಲ್ಲೇ ನಾಗರ.’ (ಯಾತ್ರಿಕ)

ಜೀವ, ಈ ಜಗತ್ತಿನ ಸುಖ ದುಃಖಗಳನ್ನು ಸ್ವಪ್ನದಂತೆ ಭಾವಿಸುವ ಒಂದು ಸ್ಥಿತಿ ಉಂಟು. ನಿಸಾರರು ಚಿಂತನೆಯಲ್ಲಿ ಸೆರೆ ಹಿಡಿದಿರುವ ಜೀವ, ಸ್ವಪ್ನದ ಮಧುವನ್ನು ಕುಡಿದು ನರ್ತಿಸುತ್ತಿರುವ ಹಕ್ಕಿ. ಅದು ನಮ್ಮ ಈ ನೆಲಕ್ಕೆ ಸಂಬಂಧಿಸಿದ, ಆದರೂ ಸ್ವಪ್ನದಂತಿರುವ ಸುಖವನ್ನು ಅನುಭವಿಸುತ್ತಿರುವ ಹಕ್ಕಿ. ಆದರೆ ಅಮಿಶ್ರಿತವಾದ ಸುಖ ಎಂಬುದಿಲ್ಲ. ಖಲೀಲ್‌ಜಿಬ್ರಾನನ ಹೇಳಿಕೆ ಇದು : ‘ಕೆಲವರು ಸುಖ ದೊಡ್ಡದು ಎನ್ನುತ್ತಾರೆ; ಮತ್ತೆ ಕೆಲವರು ದುಃಖ ದೊಡ್ಡದು ಎನ್ನುತ್ತಾರೆ. ಆದರೆ, ವಾಸ್ತವವಾಗಿ ಸುಖವು ನಿಮ್ಮೊಡನೆ ಊಟಕ್ಕೆ ಕುಳಿತಿರುವಾಗ ದುಃಖವು ನಿಮ್ಮ ಹಾಸಿಗೆಯ ಮೇಲೆ ಮಲಗಿರುತ್ತದೆ!’ ನಿಸಾರರ ಈ ಕವನ ಭಾಗವೂ ಅದನ್ನೇ ಹೇಳುತ್ತದೆ. ಇಲ್ಲಿ ಸ್ವಪ್ನ ಮಧುವನ್ನು ಕುಡಿದ ಜೀವವೆಂಬ ನವಿಲು ನರ್ತಿಸುತ್ತಿದ್ದರೆ, ಅಲ್ಲಿ, ಅತ್ತ, ಪ್ರೇಮದ ಹಾಸಿಗೆಯ ಮೇಲಿದೆ ನಾಗರ- ನಾಗರ ಹಾವು!

ಇಂಥ ಭಾವನೆಯನ್ನು ಬೆಳೆಸುತ್ತಲೇ ಹೋಗುತ್ತಿರುವ ಈ ಕವಿ, ಮುಂದೆ ಓದುಗ ಇವನ್ನೆಲ್ಲ ಗ್ರಹಿಸುತ್ತಾನೆಯೋ ಇಲ್ಲವೋ ಎಂಬುದನ್ನು ಸಂದೇಹಿಸಿ ತಮ್ಮ ತಾತ್ವಿಕ ತೀರ್ಪನ್ನು ವಾಚ್ಯಗೊಳಿಸುತ್ತಾನೆಯೋ ಇಲ್ಲವೋ ಎಂಬುದನ್ನು ಸಂದೇಹಿಸಿ ತಮ್ಮ ತಾತ್ವಿಕ ತೀರ್ಪನ್ನು ವಾಚ್ಯಗೊಳಿಸುತ್ತಾರೆ :

ಪಟ್ಟ ಅನುಭವ ಹೆಣೆದ ನೆನಪಿನ
ತೊಟ್ಟಿಲೋ ಬಾಳುವೆ!
ಇಲ್ಲಿ ನಿಟ್ಟುಸಿರಳಲ ಜೊತೆಯಲೆ
ಗೆಲವು ಸಂತಸ ತೂಗಿವೆ.’ (ಅದೇ

‘ಅಪಾರ ಪ್ರಭು, ನಿನ್ನ ಕರುಣೆ’ ಎಂಬ ಕವನದ ತಲೆಬರಹವನ್ನು ನೋಡಿ ಆಸ್ತಿಕ ಮಹಾಶಯರು ಹಿಗ್ಗಿ ಅದನ್ನು ಓದತೊಡಗಿದರೆ ಅವರಿಗೆ ಕಾದಿದೆ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುವ ಪಂಕ್ತಿಗಳು, ಸಾಲು ಸಾಲು. ಬದುಕಿನ ಜಾಡ್ಯ ಜಾಪತ್ತುಗಳು, ನೋವು ನಿರಾಶೆಗಳು, ದಿನದಿನದ ಘಟನೆಗಳು ಎತ್ತಿತೋರಿಸುತ್ತಿರುವ ಕ್ರೌರ್ಯ, ನಿಷ್ಕರುಣೆಗಳು ಸೂಕ್ಷ್ಮ ಹೃದಯದ ಕವಿಯಲ್ಲಿ ಜ್ವಾಲಾಮುಖಗಳನ್ನು ಸೃಷ್ಟಿಸುತ್ತವೆ, ರಾಶಿ ರಾಶಿ ವ್ಯಂಗ್ಯ ಪಂಕ್ತಿಗಳು ಅವನ ಲೇಖನಿಯಿಂದ ಹೊಮ್ಮುವಂತೆ ಮಾಡುತ್ತವೆ. ಕವನ ಆರಂಭವಾಗುವುದು ಹೀಗೆ :

ಅಪಾರವೋ ಪ್ರಭು ನಿನ್ನ ಕರುಣೆ :
ಮಸೀದಿಗೆ ಹೋಗದ ನನಗೆ ರೇಜರ್ಕೊಟ್ಟಂತೆ
ದಡ್ಡಮೌಲ್ವಿಗೆ ಕಿರಾತ ಗಡ್ಡಕೊಟ್ಟೆ ಅಲ್ಲೇಕೆ, ಇಲ್ಲೇ
ತೀರಿಸುತ್ತೇನೆ ತಾಳಿ, ನಿಮ್ಮ ಗೊಡ್ಡಾಚಾರಗಳ ಸಾಲವನೆಂದು
ರಕ್ತದೊತ್ತಡದ ಜೊತೆ ನನ್ನಂಥ ಅವಿಧೇಯ ಸುಪುತ್ರರ ಕೊಟ್ಟೆ
ನಿನ್ನ ನಾಮವನೊದರುವ ಆಸ್ತಿಕ ಮುಂಡೇವಕ್ಕೆ.’(ಅಪಾರ ಪ್ರಭು ನಿನ್ನ ಕರುಣೆ)

ಕಷ್ಟಗಳು ಕವಿದಾಗ, ದುಃಖ ಒತ್ತಿ ಬಂದಾಗ, ಭಕ್ತಿಯಿಂದ ಪ್ರಾರ್ಥಿಸಿದರೂ ನರಳುವುದನ್ನು ನೋಡಿದಾಗ ಸಾಮಾನ್ಯವಾಗಿ ನಾವು ಕೆರಳುತ್ತೇವಷ್ಟೇ? ಅಂಥದೇ ಮನಃಸ್ಥಿತಿಯಲ್ಲಿದ್ದಾರೆ ಕವಿ. ಅವರ ಈ ಮನಃಸ್ಥಿತಿ ಸ್ವಲ್ಪ ಹೊತ್ತಾದರೂ ಸ್ಥಾಯಿಯಾಗಿ ನಿಂತಿದೆ. ಭಗವಂತನ ಕರುಣೆ ಎಷ್ಟು ಸಮತಾವಾದಿಯಾದದ್ದು ಎಂಬುದನ್ನು ಹೇಳುತ್ತವೆ, ಮುಂದಿನ ಪಂಕ್ತಿಗಳು :

ಎಮ್ಮೆಯೊ, ಎರೆಹುಳುವೊ ಭೇದವೆ ನಿನಗೆ?
ಒಂದೇ ಟೈರಿಗೆ ಸಿಕ್ಕಿಸಿ ಬರಸೆಳೆದುಕೊಳುವೆ
ಒಂದಕ್ಕೆ ಹಲ್ಲು, ಮತ್ತೊಂದಕ್ಕೆ ಕೊಕ್ಕು ಕೊಟ್ಟರೂ
ಪಕ್ಷಪಾತವಿಲ್ಲ, ಮತ್ತೊಂದಕ್ಕೆ ಕೊಕ್ಕು ಕೊಟ್ಟರೂ
ಪಕ್ಷಪಾತವಿಲ್ಲ, ವೈವಿಧ್ಯವೆನಿಸಿದೆ ; ಸಾಕ್ಷಿಗೆಂಬಂತೆ
ಎರಡಕ್ಕೂ ತೋರಿಸಿದೆ ಸಮಾನತ್ವಮಾಂಸಾಹಾರಿತ್ವದಲ್ಲಿ,
ಹಾಗೆಯೇ, ಯೋಗ್ಯತಾನುಸಾರ ಇಲಿಗೆ ಬೋನಂತೆ
ಹುಲಿಗೆ ಜೋಡಿ ನಳಿಗೆಯ ದಯಪಾಲಿಸಿ ನ್ಯಾಯ
ಸಾರಿದವ’ (ಅದೇ)

ಇಲ್ಲಿಯವರೆಗೂ ವ್ಯಂಗ್ಯ ಮಿಶ್ರಿತ ಕ್ರೋಧವಾದದ್ದು ಈಗ ಶುದ್ಧ ಕ್ರೋಧ ವ್ಯಂಜಕವಾಗುತ್ತದೆ.

ತಪ್ಪಿದ್ದು ಇಲ್ಲಷ್ಟೆ : ನೀಡಿ
ಹೇಡಿಗೆ ಗ್ರೇನೇಡು, ಧೀರನಿಗೆ ಬರೀ ದುರಭಿಮಾನ.’

ಎಲ್ಲವನ್ನೂ ಕೊಡುವವನು, ಎಲ್ಲ ಪರಮಾತ್ಮನ ಇಚ್ಛೆ ಎನ್ನುವವರ ಪ್ರಕಾರ ಭಗವಂತನಷ್ಟೆ, ಅವನು ಎಲ್ಲ ಕಡೆಯೂ ಸಮಾನತೆ ಸಾಧಿಸಿದವನು ಇಲ್ಲಿ ಎಡವಿದ್ದಾನೆ, ತಪ್ಪಿದ್ದಾನೆ. ಹೇಡಿಯ ಕೈಗೆ, (ಉಗ್ರನು ಯಾವಾಗಲೂ ಹೇಡಿ ಎಂಬುದನ್ನು ಮರೆಯಬಾರದು.) ದಯಾಮಯನಾದ ಭಗವಂತ ಗ್ರೇನೇಡು ಕೊಟ್ಟಿದ್ದಾನೆ ; ಆದರೆ ಧೀರನಿಗೆ ಮಾತ್ರ ಬರೀ ದುರಭಿಮಾನವನ್ನು ಕೊಟ್ಟಿದ್ದಾನೆ!

ಮುಂದಿನ ಭಾಗದಲ್ಲಿ ಭಗವಂತನ ‘ಕರುಣೆ’ಯನ್ನು ವಿಶ್ಲೇಷಿಸಲಾಗಿದೆ. ‘ನಿನ್ನ ಕರುಣೆ ನೈತಿಕ’ವಾದದ್ದು ಎನ್ನುತ್ತಾರೆ. ಕವಿ. ಅದಕ್ಕೆ ಅವರು ಸಾಲು ಸಾಲು ಉದಾಹರಣೆಗಳನ್ನು ನೀಡುತ್ತಾರೆ. ಭೂಕಂಪವೋ, ಪ್ರವಾಹವೋ, ಇಲ್ಲವೇ ಧಾರ್ಮಿಕ ಕ್ರೌರ್ಯವೋ ಅನೇಕರನ್ನು ನಿರಾಶ್ರಿತರನ್ನಾಗಿಸುತ್ತದೆ. ಅವರು ಒಂದು ಕಡೆ ಬೀಡು ಬಿಡುತ್ತಾರೆ. ದೇಶ ವಿದೇಶಗಳಲ್ಲಿ ಕರುಣಾಳುಗಳು ಅವರಿಗಾಗಿ ಧಾನ್ಯ, ರಗ್ಗು, ಬಟ್ಟೆ ಬರೆ, ಪಾತ್ರೆ ಪಡಗ ಎಲ್ಲವನ್ನೂ ಕಳುಹಿಸುತ್ತಾರೆ. ಅವು ಹೆಲಿಕಾಪ್ಟರ್‌ತುಂಬ ಚೀಲಗಳಲ್ಲಿ ಬರುತ್ತವೆ. ಅವೇ, ಅವಘಡದಿಂದಲೋ ಏನೋ ಆ ಹಸಿದವರ ಮೇಲೆ ಬೀಳುತ್ತವೆ. ಅವರೆಲ್ಲ ಹೆಣಗಳಾಗುತ್ತಾರೆ. ಭಗವಂತನ ಕರುಣೆ ಎಂಥದು ಎನ್ನುತ್ತಾರೆ. ಕವಿ : ‘ಸಾರಿದೆ, ಹಸಿವಿನಲ್ಲೂ ಅತ್ಯಾಸೆ ಬೇಡವೆಂಬ ಉದಾತ್ತ ತತ್ವ’

ಇನ್ನು ದ್ರೌಪದಿಯ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಅವಳ ಪಾತಿವ್ರತ್ಯದ ಮಹಿಮೆಯನ್ನು ಸಾರುವುದು ಹೀಗೆ :

ದ್ರೌಪದಿಗೆ ಐವರ ನೀಡಿಯೂ ಆರನೆಯವನ ಆಸೆ
ತೀಡಿಯೂ ಪಾತಿವ್ರತ್ಯವುಳಿಸಿದೆ ; ಇಲ್ಲಿ, ಬೊಂಬಾಯಲ್ಲಿ
ಸಿನಿಮಾ ನಟನ ಚಿತ್ರಕ್ಕೆ ಕದ್ದು ಮುದ್ದಿಡುವವಳ
ಕೊರಳ ಹಿಚುಕಿಸಿದೆ ಪತಿಯ ಕೈಯಲ್ಲಿ

ಭಗವಂತನ ಲೀಲೆ ಹೀಗೇ ಎಂದು ಪತ್ತೆ ಹಚ್ಚಲು ಸಾಧ್ಯವೇ? ಎಂಬುದು ಕವಿಯ ಮುಂದಿನ ಪ್ರಶ್ನೆ ಏಕೆಂದರೆ ಹೀಗೆ ಪ್ರಶ್ನಿಸುವ ನಾವೂ ಅವನಿಂದ, ಎಂದರೆ ಭಗವಂತನಿಂದ ಸೃಷ್ಟಿಯಾದವರು ತಾನೆ? ನಾವಾದರೂ ಎಂಥವರು? ಸರಿ ರಾತ್ರಿ ಭಗವಂತನೇ ಬಂದು ಕದ ತಟ್ಟಿದರೂ ಹಾಗೆ ತಟ್ಟಿದವರು ನೆರೆಮನೆಯಾಕೆಯೇ ಎಂದು ಹಿಗ್ಗಿ ಅರಿಷಡ್ವೈರಿಗಳಿಂದ ಚಾಲಿತರಾಗಿ ಕುಪ್ಪಳಿಸುವ ಕಪ್ಪೆಗಳು!

ಇನ್ನು ಈ ಕವನ ಮುಕ್ತಾಯವಾಗುವುದು ವ್ಯಂಗ್ಯದ ಪರಮಾವಧಿಯ ಪರಮಾಶ್ಚರ್ಯದಲ್ಲಿ:

ನನ್ನ ಸತತ ಎಚ್ಚರದಲ್ಲಿ ಕರ್ಣಣಿಗೆ ಬಿದ್ದು
ನೀನು ಬದಲಾಗಬಹುದೆಂದು ಬೆದರಿ
ಅಂಟಿಸಿರುವೆ ನಿಶ್ಚಯಾನಿಶ್ಚಯದ ಜೋಡಿ ರೆಪ್ಪೆ
ಅಪಾರವಯ್ಯಾ ಪ್ರಭೋ, ನಿನ್ನ ಕಿಲಾಡಿ ಕರುಣೆ…’

ಕವಿ ವ್ಯಕ್ತಿ ಸದಾ ಎಚ್ಚರದಲ್ಲಿರುವುದರಿಂದ ಅವನ ಕಣ್ಣಿಗೆ ಬಿದ್ದು ತಾನು ಬದಲಾಗುವುದು ಎಂದು ಹೆದರಿ ದೇವರು ಇವನಿಗೆ ಎರಡು ರೆಪ್ಪೆಗಳನ್ನು ಅಂಟಿಸಿದ್ದಾನೆ. ಅವು ನಿಶ್ಚಯ ಅನಿಶ್ಚಯ ಎಂಬ ಎರಡು! ಆದ್ದರಿಂದ ಕವಿ, ಭಗವಂತನು ‘ಕಿಲಾಡಿ ಕರುಣೆ’ ಎನ್ನುತ್ತಾನೆ!

ಮೇಲಿನ ರೀತಿಯ ವೈಚಾರಿಕತೆ ಗತಾನುಗತಿಕವಾಗಿ ಬಂದದ್ದೇ, ತಾತ್ವಿಕರು ತತ್ವದ ಚೌಕಟ್ಟಿನಲ್ಲಿ ಇಂಥವನೆಲ್ಲ ವಿಶ್ಲೇಷಿಸಿ ತತ್ವಸೌಧಗಳನ್ನು ಕಟ್ಟಿದ್ದಾರಲ್ಲವೆ?

ದೈವವನ್ನು ಜೀವಾತ್ಮ-ಪರಮಾತ್ಮರ ಸಂಬಂಧವನ್ನು ದೇವರು ನೀಡಬಹುದಾದ ವರಗಳನ್ನು ವ್ಯಕ್ತಿ-ದೈವಗಳ ಸಂಬಂಧವನ್ನು ಬಿಟ್ಟು ತಾತ್ವಿಕ ಚಿಂತನೆಗೆ ಅವಲಂಬನವಾಗುವವರು ದೇವಮಾನವರು. ಅಂತಹವರನ್ನು ಕುರಿತೂ ಚಿಂತಿಸಿದ್ದಾರೆ. ನಿಸಾರ್‌ಅಹಮದ್‌ಅವರು. ಅಂತಹವರಲ್ಲಿ ಏಸುಕ್ರಿಸ್ತ, ಬಸವೇಶ್ವರರು, ಶ್ರೀರಾಮಕೃಷ್ಣ ಪರಮಹಂಸರು, ಶ್ರೀ ಶಾರದಾದೇವಿ ಎಂಬ ನಾಲ್ಕು ಕವನಗಳನ್ನು ಪರಿಚಯಿಸಿಕೊಳ್ಳಬಹುದು.

ಏಸುಕ್ರಿಸ್ತನನ್ನು ಕುರಿತ ಕವನದ ಶೀರ್ಷಿಕೆ ‘ಶಿಲುಬೆ ಏರಿದ್ದಾನೆ’ ಏಸು ತಾನೇ ನೊಂದವನು ತಾನು ನಂಬಿದ ಶಿಷ್ಯನಿಂದ ನಂಬಿಕೆಯ ದ್ರೋಹವನ್ನು ಅನುಭವಿಸಿದವನು. ನೂರಾರು, ಸಾವಿರಾರು, ಏಕೆ ಲಕ್ಷಾಂತರ ಜೀವಿಗಳಿಗೆ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಸಂತೈಕೆ ನೀಡಿದವನು. ಆದರೂ ಅವನ ನೆನಪು ಬಂದಾಗಲೆಲ್ಲ, ಅಥವಾ ಅವನನ್ನು ಕುರಿತು ಪ್ರಾರ್ಥನೆ ಸಲ್ಲಿಸುವಾಗಲೂ ನಾವು ಕಲ್ಪಸಿಕೊಳ್ಳುವುದು ಶಿಲುಬೆ ಏರಿದ ಏಸುವನ್ನು ಉದದನೆಯ ಬಲವಾದ ಮೊಳೆಗಳನ್ನು ಜಡಿಸಿಕೊಂಡ ಏಸು ಸ್ವಾಮಿ, ತಾನೇ ನಿರಂತರವಾಗಿ ದುಃಖದಲ್ಲಿ ಇರುವಂತಹ ಮುಖಭಾವವನ್ನು ತಾಳಿದವನು. ಆದರೆ ಆ ಮುಖದಲ್ಲಿ ಈ ಕವಿ ಕಾಣುವುದು ಬೇರೆಯದೇ ನೋಟ :

ಶಿಲುಬೆಯೇರಿದ್ದಾನೆ ಜೀಸಸ್ಗೋಡೆಯಲ್ಲಿ ;
ಬಾಗಿದ ಶಿರ
ಕುತ್ತಿಗೆಯಲಿ ಉಬ್ಬಿದೊಂದು ನರ,
ಯಾತನೆಗೂ ನಲ್ವಾತನೇ ನುಡಿವವ ಮುಖಮುದ್ರೆ ;
ತೆರೆದೆದೆ
ಎನ್ನುವಂತಿದೆ :
ಕೊಲೆಗಡುಕ ಬರಬ್ಬನ ವಕಾಲತ್ತು ನಡೆಸಿದವರೆ,
ಎಡಕ್ಕೊಬ್ಬ ಬಲಕ್ಕೊಬ್ಬ ಕರ್ಳಳನ ತೂಗಿ ಸನ್ಮಾನಿಸಿದವರೆ,
ಮನ್ನಿಸಲಿ ನಿಮ್ಮನ್ನ ದೇವರೆ! (ಶಿಲುಬೆ ಏರಿದ್ದಾನೆ)

ಏಸುವನ್ನು ಶಿಲುಬೆಗೇರಿಸಿದಾಗ ಬಳಸಿದ ಹಿಂಸಾ ಸಾಧನಗಳು, ರೋಮನರು ಬಡಿದ ಸುತ್ತಿಗೆಗಳು, ಮೊಳೆಗಳು, ಅವನ ತಲೆಗೇರಿಸಿದ ಕಿರೀಟದ ಮುಳ್ಳುಗಳು. ಅವರು ಹಬ್ಬಿಸಿದ ಸುಳ್ಳುಗಳು ಮತ್ತು –

ರೋಮನರ ಕಿವಿಡೆಬ್ಬಿಸುವ ಕೊಂಬುಗಳು
ಕಾಲರಾಯನ ಗುಜರಿ ಸೇರಿಲ್ಲ
ವೇಷ ಮರೆಸಿವೆ ಅಷ್ಟೆ, ಎಲ್ಲ ಕೇಡುಗಳು;
ರೈಫಲ್ಲು, ಟ್ಯಾಂಕು, ಬಾಂಬು, ಗ್ರೇನೇಡುಗಳು,
ಅವಕ್ಕೆ ಚಲನೆಯೊದಗಿಸಿವೆ.’ (ಅದೇ)

ಆದರೇನು, ‘ಬಂದೇ ತೀರುತ್ತದೆ ದೈವೀರಾಜ್ಯ ಎನ್ನುವಂತೆ ಏರಿದ್ದಾನೆ ಶಿಲುಬೆ’. ಅತ್ಯಂತ ಆಶಾವಾದಿಯಾದ ಈ ಕವಿ ತಮ್ಮ ಈ ಕವನವನ್ನು ಕೊನೆಗಾಣಿಸಿರುವುದು ಹೀಗೆ :

ದಿನನಿತ್ಯ ಶಿಲುಬೆಯೇರಿದ್ದಾನೆ ಜೀಸಸ್‌:
ಅಸಂಖ್ಯ ಕ್ರಿಸ್ಮಸ್ಸುಗಳ ಹರಸಿ,
ಶೋಷಿತರ ಕಂಬನಿಯನೊರಸಿ
ಸತ್ಯಕ್ಕೆ ಹೊಸ ಕವಲುಗಳ ತೆರೆಸಿ’ (ಅದೇ)

ನಿಸಾರರ ‘ಬಸವೇಶ್ವರ’, ಕನ್ನಡದಲ್ಲಿ ಬಸವಣ್ಣನವರನ್ನು ಕುರಿತಂತೆ, ಪ್ರಕಟವಾಗಿರುವ ಕವನಗಳಲ್ಲಿ ಅತ್ಯುತ್ತಮ ಎಂದು ಹೇಳಬಹುದಾದದ್ದು. ಬಸವಣ್ಣನವರ ಸಾಧನೆ-ಸಿದ್ಧಿಗಳನ್ನು ಅತ್ಯಂತ ಕಾವ್ಯಮಯವಾಗಿ ಶಿಲ್ಪಗೊಳಿಸಿದ್ದಾರೆ ಕವಿ ನಿಸಾರರು ಈ ಪಂಕ್ತಿಗಳನ್ನು ಗಮನಿಸಿ:

ಮಡುಗಟ್ಟಿ ಸಾರಿದ್ದ ಸಂಪ್ರದಾಯಕೆ ನಾಲೆ
ಬಿಡಿಸ, ಹೊಸ ಹಾದಿಗಳ ರಚಿಸಿದಾತ
ನಾಡ ಹಿರಿ ಬದುಕಿಗಂಟಿದ್ದ ಕಿಲುಬನ್ನು
ಉಜ್ಜುಜ್ಜಿ ಮತ್ತೊಮ್ಮೆ ಹೊಳೆಸಿದಾತ.
ಹತ್ತು ಮರ ಗಿಡದ ಒಕ್ಕೂಟವೀ ತೋಟ;
ಜೀವನವನಡಿಗಡಿಗೆ ಸೋಸಿ, ಅರಿವನ್ನರಸಿ
ಭಕ್ತಿಯನೆ ಬೆಂಬತ್ತಿ ಸಾಗಿದಾತ
ಅಶ್ವತ್ಥ ಮರದಂತೆ ನೆರೆಹೊರೆಯ ಶರಣರಿಗೆ
ತಂಪಾಗಿ ಕೊಡೆ ಹಿಡಿದು ನಿಂತ ಅಣ್ಣ.’ (ಬಸವೇಶ್ವರರು)

ಅವರ ಅನುಭಾವವನ್ನಾಗಲಿ-ಏಕೆಂದರೆ ಅನುಭಾವ ಎನ್ನುವುದು ಶಿಶು ಕಂಡ ಕನಸಿನಂತೆ-ಸಾಧನೆ, ಅನುಕಂಪ ಒಲವುಗಳನ್ನಾಗಲಿ ಬಡ ನುಡಿಯಲ್ಲಿ ಬಣ್ಣಿಸಲಾದೀತೆ?

ಬೆಳಗಿನೊಳಗಿನ ಬೆಳಗ ನಿಬ್ಬೆರಗಿನಾನಂದ
ದಕ್ಕುವುದೆ ಬಡನುಡಿಯ ತೆಕ್ಕೆಯಲ್ಲಿ?” (ಅದೇ)

ಇನ್ನು ಸರ್ವಧರ್ಮ ಸಮನ್ವಯಾಚಾರ್ಯ ಶ್ರೀ ರಾಮಕೃಷ್ಣ ಪರಮಹಂಸರನ್ನೂ ಅವರೇ ದೇವಿಯೆಂದು ಆರಾಧಿಸಿದ ಅವರ ಪತ್ನಿ ಶಾರದಾದೇವಿಯರನ್ನು ನಿಸಾರರು ಮುಕತ ಹೃದಯದಿಂದ ಸಹೃದಯರಿಗೆ ನಿವೇದಿಸಿದ್ದಾರೆ.

ಪರಮಹಂಸರನ್ನು ಆರಂಭದಲ್ಲೇ ಸಕಲ ಧರ್ಮ ಸಮ ವನ ಸಂಚಾರಿಯೆ ಎಂದು ಸಂಬೋಧಿಸಿದ್ದಾರೆ. ಕ್ಷಣಮಾತ್ರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸುತ್ತಿದ್ದ ಅವರನ್ನೂ, ಸರಳ ಸುಂದರ ಸಾಮ್ಯಗಳಿಂದ ಕೇಳುವವರ ಹೃದಯಗಳನ್ನು ಬೆಳಗುತ್ತಿದ್ದ ಅವರ ಉಪದೇಶ ವಿಧಾನವನ್ನೂ ನಾಲ್ಕು ಪುಟ್ಟ ಪಂಕ್ತಿಗಳಲ್ಲಿ ಪರಿಣಾಮಕಾರಿಯಾದ ರೀತಿಯಲ್ಲಿ ವರ್ಣಿಸಿದ್ದಾರೆ :

ಬಯಸಿದ ಚಣ ಅವಿಕಲ್ಪ ಸಮಾಧಿ
ನೀರಲಿ ಮುಳುಗುವ ತೆರ ಹಂಸ.
ಸಾಮತಿ ಸಾಮ್ಯದ ಸೂರ್ಯನ ಎದುರಲಿ
ಶಂಕಾ ತಿಮಿರವೋ ವಿಧ್ವಂಸ.’ (ಶ್ರೀರಾಮಕೃಷ್ಣ ಪರಮಹಂಸ)

ಅವರ ಸೂಕ್ತಿ ಸೌರಭವವನ್ನು ಸೊಗಸಾಗಿ ನಿರೂಪಿಸಿದ್ದಾರೆ :

ಬಾಳ್ವೆಯ ಹಲಸನು ಬಿಡಿಸಲು ಬೇಕು
ಧರ್ಮದ ಕೌಶಲ್ಯದ ತೈಲ
ಇನ್ನೆನಿತೋ ನುಡಿ ನಾಣ್ಯಗಳಿವೆ, ಗುರು ;
ಅಕ್ಷಯ ಸೂಕ್ತಿಯ ಕೈಚೀಲ.’ (ಅದೇ)

ಪರಮಹಂಸರ ತುಂಬ ಸುಂದರವಾದ ಹೇಳಿಕೆಯೊಂದುಂಟು-‘ನಾನು, ನನ್ನದು, ನಾನು ಮಾಡುತ್ತೇನೆ’ ಎನ್ನುವ ಅಹಂಕಾರ ಮಮಕಾರಗಳ ಟೊಳ್ಳುತನವನ್ನು ಸಾರುವ ಸಂದರ್ಭದಲ್ಲಿ ಅವರು ಹೇಳಿದ್ದು ಅದು. ನಿಸಾರರು ಅದಕ್ಕೆ ಕಾವ್ಯ ರೂಪವನ್ನು ಕೊಟ್ಟಿದ್ದಾರೆ :

ದೇವರು ನಗುವುದು ಎರಡೆ ಸಲ:
ಇದು ನನ್ನ ನೆಲ, ಅದು ನಿನ್ನ ನೆಲ
ಎನ್ನುತ ಸೋದರರಳೆಯುತ ಹೊಲಗಳ
ಗೆರೆಗಳನೆಳೆಯುವ ಪರಿಯಲ್ಲಿ,
ಸಾವಿಗು ರೋಗಿಗು ನಡೆದಿರೆ ಯುದ್ಧ
ಬದುಕಿಸುವೆನು ನಾಎನುತ ವೈದ್ಯ
ಸಂತೈಸುತಲಿರೆ ಮಡಿವನ ಮನವ
ದೇವರು ನಗುವನು ಮರೆಯಲ್ಲಿ’ (ದೇವರ ನಗು)

ಶ್ರೀಮಾತೆ ಶಾರದಾದೇವಿಯವರನ್ನು ಕುರಿತ ಕವನವೂ ಒಂದು ಸಾಣೆ ಹಿಡಿದ ರತ್ನ ಅಲ್ಲಿನ ಕೆಲವು ಪಂಕ್ತಿಗಳನ್ನು ನೋಡಿ:

ವಾರಣಾಸಿ ಜೊತೆ ಗಂಗೆ ಕೂಡ ಮನಸಲ್ಲಿ ಹೊಳೆಯುವಂತೆ
ದೇವರನ್ನು ಸ್ಮರಿಸಿರಲು ದೇಗುಲದ ಶುಭಚಿತ್ರ ಬೆಳೆಯುವಂತೆ
ಪರಮಹಂಸರನು ಮಹದ್ಭಕ್ತಿಯಲಿ ನೆನೆವ ಎಲ್ಲ ಸುಜನ
ತಮಗರಿಯದಂತೆ ಸಲ್ಲಿಸುತಲಿಹರು ನಿಮಗೂನು ದಿವ್ಯ ನಮನ.
ಕೃಷ್ಣರಾಜ ಸಾಗರಕೆ ಎಂತೊ ಬೃಂದಾವನವು ಅಂತೆ
ಅನವರತ ಗುರುವಿನ್ಯೋನ್ಯ ನೀವು, ರವೆಯಷ್ಟು ಇರದಂತೆ.
ಸಂಸಾರ ಕೂಪ ಮಂಡೂಕವಲ್ಲ, ಪತಿಯಲ್ಲ ಪರಕೆ ಕುರುಡ
ಹುಟ್ಟಿನಿಂದಲೇ ಬಾನ ಬಯಲು ಹೊಂಬೆಳಕಿಗೊಲಿದ ಗರುಡ.’ (ಶ್ರೀಶಾರದಾದೇವಿ)

ನಿಸಾರ್‌ಅಹಮದರ ಅತ್ಯುತ್ತಮ ರಚನೆ ಎಂದು ನಾನು ಭಾವಿಸಿ, ಪ್ರೀತಿಸುವ ಕವನ ‘ಪುರಂದರದಾಸರು’. ಚಿಂತನೆ, ಕಲ್ಪನೆ ಆರಾಧನೆಯಾದದ್ದು, ಅದು ನಮ್ಮ ಮನಸ್ಸನ್ನು ಸಳೆದದ್ದು, ತನ್ನನ್ನು ಮತ್ತೆ ಮತ್ತೆ ಪುನರುಚ್ಛಾರಗೊಳಿಸಿಕೊಳ್ಳಲು ಆಹ್ವಾನಿಸಿದ್ದು ಈ ಕವನ. ಇದರ ಆರಂಭ ಹೀಗೆ:

ದಾಸರೆಂದರೆ ನಮ್ಮವರ ಪುರಂದರರಯ್ಯ:
ಇದ್ದು ಇಲ್ಲೇ ಅಲ್ಲಿಗೇರಿದವರು.
ಸಹಜ ಮುಕ್ತಿಯ ನೌಕೆ ಬರುವವರೆಗೂ ಇಲ್ಲೆ
ಈಸಿದವರು, ಇದ್ದು ಜೈಸಿದವರು.’ (ಪುರಂದರದಾಸರು)

ನಾವು ಈ ಜಗತ್ತಿನಲ್ಲಿ ಬಾಳಬೇಕಾದದ್ದು ಹೇಗೆ ಎಂಬುದು ಎಲ್ಲ ಪ್ರಜ್ಞಾವಂತರನ್ನೂ ಶತಮಾನಗಳಿಂದಲೂ ಕಾಡುತ್ತ ಬಂದಿರುವ, ಇಂದಿಗೂ ಕಾಡುತ್ತಲೇ ಇರುವ ಪ್ರಶ್ನೆ. ಪುರಂದರದಾಸರು ಈ ಪ್ರಶ್ನೆಗೆ ಉತ್ತರಗಳನ್ನು ಕೊಟ್ಟಿದ್ದಾರೆ. ಆದರೆ ಅವರು ಕೊಟ್ಟಿರುವ ಉತ್ತರ ಒಂದಲ್ಲ, ಹಲವಾರು, ಅವರ ಅಂದಂದಿನ ಮನಃಸ್ಥಿತಿಗೆ, ಸಂಬಂಧಿಸಿದಂತೆ. ‘ಈಸಬೇಕು, ಇದ್ದು ಜೈಸಬೇಕು’ ಎಂದು ಒಂದು ಸಲ ಹೇಳಿದರೆ, ಮತ್ತೊಂದು ಮನಃಸ್ಥಿತಿಯಲ್ಲಿ, ‘ಹೇಸಿಗೆ ಸಂಸಾರವಿದು’ ಎನ್ನುತ್ತಾರೆ. ಆದ್ದರಿಂದ ನಿಖರವಾದ ಉತ್ತರ ಯಾವುದು? ಅದನ್ನು ಒಂದೊಂದು ಜೀವಿಯೂ ತಾನೇ ಕಂಡುಕೊಳ್ಳಬೇಕು. ನಿಸಾರರು ಮೆಚ್ಚಿರುವುದು ಇಹ ಜೀವನವನ್ನು ಕಡೆಗಣಿಸದೆ ಇಹದಾಚೆಯ ಬದುಕಿಗೆ ತುಡಿದವರನ್ನು, ಹಾಗೆ ತುಡಿದು ಉನ್ನತಿಯನ್ನು ಸಾಧಿಸಿದವರನ್ನು ಆದ್ದರಿಂದಲೇ ಅವರು ‘ದಾಸರೆಂದರೆ ನಮ್ಮ ವರ ಪುರಂದರಯ್ಯ’ ಎನ್ನುತ್ತಾರೆ. ಏಕೆಂದರೆ ಪುರಂದರರು ಇಲ್ಲೇ ಇದ್ದು, ಅಲ್ಲಿಗೆ ಎಂದರೆ ನಾವು ಅತ್ಯಂತ ಆನಂದಮಯವಾದದ್ದು ಎಂದು ಭಾವಿಸಿರುವ ಲೋಕಕ್ಕೆ ಏರಿದವರು. ಈ ಲೋಕ ಬೇಸರವಾಯಿತು ಎಂದು – ಮನುಜ ಶರೀರವಿದೇನು ಸುಖ ಎಂದು ಒಂದು ಮನಃಸ್ಥಿತಿಯಲ್ಲಿ ಹೇಳಿದ್ದಾರೆ ಎಂದಾದರೂ-ದೇಹತ್ಯಾಗದ ಮಾತನ್ನಾಡಲಿಲ್ಲ. ಬದಲಿಗೆ, ಸಹಜವಾಗಿ ಸಾವು ಬರುವವರೆಗೆ, ನಿಸಾರರು ಅದನ್ನು ‘ಸಹಜ ಮುಕ್ತಿಯ ನೌಕೆ’ ಎಂದಿದ್ದಾರೆ-ಇಲ್ಲೇ ಇದ್ದವರು, ಸಂಸಾರವೆಂಬ ಸಾಗರಲ್ಲಿ ಈಸಿದವರು, ಇದ್ದೂ ಜೈಸಿದವರು.

ನಮ್ಮೆಲ್ಲರ ಸಾಮಾನ್ಯತೆಯನ್ನು ಮೀರಿ ನಿಂತವರನ್ನು ‘The choosen ones’ ಎನ್ನುತ್ತೇವೆ-ಎಂದರೆ ಆರಿಸಲ್ಪಟ್ಟವರು ಎಂದು-ಅವರು ದೈವದಿಂದ ಆರಿಸಲ್ಪಟ್ಟವರು. ಶ್ರೀ ಅರವಿಂದ ಮಹರ್ಷಿಗಳ ಒಂದು ಮಾತಿದೆ : ‘He who choses the Divine, is choosen by the Divine.’ ‘ದಿವ್ಯತೆಯನ್ನು ಅರಸುತ್ತಿರುವವನು ದಿವ್ಯತೆಯಿಂದ ಆರಿಸಲ್ಪಟ್ಟಿದ್ದಾರೆ.’ ಜಗತ್ತಿನ ಐದು ನೂರು ಚಿಲ್ಲರೆ ಕೋಟಿ ಜನರೂ ದಿವ್ಯತೆಯನ್ನು, ಎಂದರೆ ಲೌಕಿಕವನ್ನು ಮೀರಿದ ಅಧ್ಯಾತ್ಮವನ್ನು ಆರಿಸಿಕೊಳ್ಳುತ್ತಿಲ್ಲ. ಅವರಲ್ಲಿ ಎಲ್ಲೋ ಕೆಲವರು ಕಾಮ, ಕಾಂಚನ, ಸಿದ್ಧಿ ಪ್ರಸಿದ್ಧಿಗಳಾಚೆಯ ಜೀವನವನ್ನು ಆರಿಸಿಕೊಳ್ಳುತ್ತಾರೆ. ಏಕೆಂದರೆ ದೈವ ಅಥವಾ ಅತೀತ ಶಕ್ತಿ ಅಂಥವರನ್ನು ಗುರುತಿಸಿ, ತನ್ನ ಕೃಪೆಯ ಮಳೆಗರೆಯಲು ಆರಿಸಿಕೊಳ್ಳುತ್ತದೆ. ಕವಿ ಅದನ್ನು ಸೊಗಸಾಗಿ ಹೇಳಿದ್ದಾರೆ:

ಬೀದಿ ತಿರುಕನ ಹಾಗೆ ದೈವ ಬಂದಾರಿಸಿತು;
ಸಾರಿಸಿತು ಇವರೆದೆಯ, ಹಾರಿಸಿತ್ತು;
ಒದ್ದೆ ಅರಿವೆಯ ಹಿಂಡಿ ರಾಗವನು ಅರಿವಂದ
ಆರಿಸಿತು : ದಾಸತ್ವಕೇರಿಸಿತ್ತು.’ (ಅದೇ)

ಪುರಂದರದಾಸರ ಪೂರ್ವಾಶ್ರಮದ ಮಾತು. ಇಹಲೋಕದ ಜೀವನ ಬೇಸರವಾಗಿ ಪರವನ್ನು ಹುಡುಕಿಕೊಂಡು, ದೇವರ ಮಹಿಮೆಯನ್ನು ಹಾಡುತ್ತಾ ಬೀದಿಗುಂಟ ಹೊರಟವರೆಲ್ಲ ಪುರಂದರರು. ಬದಲಿಗೆ ದೈವವೇ, ಬೀದಿ ತಿರುಕನಂತೆ ಹುಡುಕುತ್ತಾ ಹುಡುಕುತ್ತಾ ಬಂದು ಇವರನ್ನು ಕಂಡು ನಿಂತಿತು. ಇವರ ಎದೆಯನ್ನು ಸಾರಿಸಿ ಸಂಪೂರ್ಣವಾಗಿ ಶುದ್ಧಗೊಳಿಸಿತು. ಲೌಕಿಕವಾದ ಬದುಕಿನಿಂದ ಇವರನ್ನು ಆಧ್ಯಾತ್ಮಲೋಕಕ್ಕೆ ಹಾರಿಸಿಕೊಂಡು ಹೋಯಿತು. ಇವರ ದೇಹದ ಹಸಿತನವನ್ನು ಹಿಂಡಿ ತೆಗೆದು ರಾಗವನ್ನು ಆರಿಸಿ ದಾಸತ್ವಕ್ಕೆ ಏರಿಸಿತು.

ಇವರು ದಾಸತ್ವಕ್ಕೆ ಏರಿದ್ದರಲ್ಲಿ ಇವರ ಹೆಂಡತಿಯ ಪಾತ್ರವೇನು?

ನತ್ತು ಕೊಟ್ಟಳು ಹರಿಗೆ, ಅತ್ತುಬಿಟ್ಟಳು ಮರೆಗೆ
ಪತಿಯನಿತ್ತಳು ಕೊಡುಗೆ ದೇವನಡಿಗೆ.’ (ಅದೇ)

ಎಂಥ ಪಂಕ್ತಿಗಳು ! ಎಷ್ಟು ಸಂಕ್ಷೇಪವಾಗಿ ಇಡೀ ಕ್ರಿಯೆಯನ್ನು ವರ್ಣಿಸಿದ್ದಾರೆ. ಕವಿ. ಮಾರು ವೇಷದಲ್ಲಿ ಬಂದ ಹರಿಗೆ ಸತಿಯಾದವಳು ಮೂಗುತಿಯನ್ನು ಬಿಚ್ಚಿ ದಾನ ಮಾಡಿದರು. ತನ್ನ ಪತಿಯನ್ನು ದಾಸ್ಯತ್ವಕ್ಕಾಗಿ ಬೇಡ ಬಂದವನು ಹರಿ. ಇನ್ನು ಇವರಿಗೆ ಸಂಸಾರದಲ್ಲಿ ಆಸಕ್ತಿಯಿರುವುದಿಲ್ಲ ಎಂದು ತಿಳಿದ ಆ ಮಹಾ ಮಹಿಳೆ ತನ್ನ ಪತಿಯನ್ನೇ ದೇವರ ಆಡಿಗೆ ಕೊಡುಗೆಯಾಗಿ ಕೊಟ್ಟುಬಿಟ್ಟಳು!

ಈಗ ಹೇಳಿ, ‘ಹೆಣ್ಣು ಮಾಯೆಯ ನೆರಳೆ? ಹೆಣ್ಣು ಗಂಡಿನ ಮರುಳೆ? ಹೇಳಲೆದೆ ಉಂಟೇನು ಹಾಗಿವಳಿಗೆ ? ‘ಹೊನ್ನು, ಮಣ್ಣುಗಳ ಜೊತೆಗೆ ಹೆಣ್ಣನ್ನೂ ಮಾಯೆ ಎಂದು ಕರೆದವರುಂಟು ; ಗಂಡನ್ನು ಮರುಳು ಮಾಡುವವಳು ಎಂದೂ ಹೇಳಿದವರುಂಟು. ಕವಿ ಹೇಳುತ್ತಾರೆ- ಈ ಮಹಿಳೆಯನ್ನು ಹಾಗೆ ಕರೆಯಲು ಯಾರಿಗಾದರೂ ಎದೆ, ಧೈರ್ಯ ಉಂಟೇನು?

ಪುರಂದರರು ಮುಂದೇನು ಮಾಡಿದರು?
ಮೈಮರೆತು ಹರಿಸ್ಮರಣೆ ಮಾಡಿದರು, ಹಾಡಿದರು;
ಹತ್ತು ಜನ ಕೂಡಿದರೂ ಹರಿಭಕ್ತರು.
ಈವೊತ್ತು ಕೊಂಪೆ, ನಾಳೆ ದೂರದ ಹಂಪೆ
ಹರಿಯಿಂಪ, ನರುಗಂಪ ಹರಿಸಿದ್ದರು.’ (ಅದೇ)

ಅವರು ಕವಿಯಂತೆ ಮಾತನಾಡಿದರೆ, ಇಲ್ಲ. ‘ತಮ್ಮನ್ನೇ ಮಿಡಿಸಿದರು, ನುಡಿಸಿದರು ಪ್ರಾಣ ದುಡುಕಿ,’ ಹಾಡಿದರೆ? ‘ಅಲ್ಲಲ್ಲ ಭಕ್ತಿಯನೇ ಕಾಡಿದರು, ಮನವ ಜಾಲಾಡಿದರು ಹರಿಯ ಹುಡುಕಿ.’

ದೈವವನ್ನು ಧರ್ಮವನ್ನು ದೇವತಾಪುರುಷರನ್ನು ಕುರಿತು ನಿಸಾರ್‌ಅಹಮದ್‌ಅವರು ನಡೆಸಿದ ಚಿಂತನೆಗಳನ್ನು ಕಾವ್ಯಾತ್ಮಕವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಎಂದು ನನಗೆ ತೋರಿದ’ ಕೆಲವು ಕವನಗಳನ್ನು ಇಲ್ಲಿ ಸಹೃದಯರಿಗೆ ಪರಿಚಯಿಸಿದ್ದೇನೆ. ಅವರು ನಮ್ಮ ಕವಿ, ಅತ್ಯಂತ ಶಕ್ತಿಪೂರ್ಣವಾಗಿ ಭಾವ ಭಾವನೆಗಳಿಗೆ ಮಾತುಕೊಡಬಲ್ಲ ಕವಿ. ಕನ್ನಡ ಕಾವ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿದ ಕವಿ. ಕನ್ನಡಿಗರು ಸದಾ ಕೃತಜ್ಞತೆಯಿಂದ ನೆನೆಯಬೇಕಾದ ಕವಿ ಅವರಿಗೆ ಶುಭ ಕೋರುತ್ತಾನೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)