‘ಉಜ್‌ಲುಜೀಯದಷ್‌’ ಒಂದು ಪೋರ್ಚುಗೀಸ್‌ ಮಹಾಕಾವ್ಯ. ಯೂರೋಪಿನಲ್ಲಿ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಸಾಹಿತ್ಯಾಸಕ್ತರು ಲುಜೀಯದಷ್‌ ಕಾವ್ಯವನ್ನು ಒದಲೆಂದೇ ಪೋರ್ಚುಗೀಸ್‌ ಭಾಷೆಯನ್ನು ಕಲಿಯುತ್ತಾರಂತೆ. ವಿಲಿಯಂ ಸಿ. ಅಟ್‌ಕಿನ್‌ಸನ್‌ರವರು ವಿಸ್ತಾರವಾದ ಮುನ್ನುಡಿಯೊಂದಿಗೆ ಅದರ ಗದ್ಯಾನುವಾದವನ್ನು ನೀಡಿದ್ದಾರೆ.[1] ಈ ಪ್ರಬಂಧ ಆ ಗದ್ಯಾನುವಾದವನ್ನು ಅವಲಂಬಿಸಿದೆ.

ಕವಿ

‘ಉಜ್‌ಲುಜೀಯದಷ್‌’ ವೀರಕಾವ್ಯವನ್ನು ರಚಿಸಿದ ಕವಿ ಲುವಿಝ್ ದೆ ಕಮೋಯೆಂಷ್‌. ಅವನು ಜನಿಸಿದ್ದು ಸುಮಾರು ೧೫೨೪ರಲ್ಲಿ. ಅವನ ಕಾವ್ಯದ ನಾಯಕ ಎನ್ನಬಹುದಾದ ವಾಸ್ಕೋಡ ಗಾಮ ಸತ್ತಿದ್ದು ಅದೇ ವರ್ಷದಲ್ಲಿ ಕಮೋಯೆಂಷ್‌ನ ಕ್ಯಾಪ್ಟನ್‌ಆಗಿ ಭಾರತಕ್ಕೆ ಎಂದು ಹೋಗಿ ಗೋವದ ಸಮೀಪದಲ್ಲಿ ಹಡಗು ಒಡೆದು, ಹಲಗೆ ಹಿಡಿದು ಈಜಿ ಗೋವಾ ಸೇರಿದ. ಅಲ್ಲೆಸತ್ತ ಹೀಗೆ ಕವಿಗೂ ಭಾರತಕ್ಕೂ ಒಂದು ರೀತಿಯ ಸಂಬಂಧ ಮೊದಲೇ ಬೆಳೆದಿತ್ತು.

ಕಮೋಯೆಂಷ್‌ಅಂದಿಗೆ ತುಂಬ ಖ್ಯಾತಿ ಪಡೆದಿದ್ದ ಕೊಯಿಂಬ್ರಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ. ಮಾಂಡೆಗೋ ಅಂದಿಗೆ ವಿದ್ಯಾಕೇಂದ್ರವಾಗಿದ್ದದ್ದು ಮಾತ್ರವಲ್ಲದೆ ಕಾವ್ಯಕನ್ಯೆಯ ವಾಸಸ್ಥಾನವೂ ಆಗಿತ್ತು. ಯೂರೋಪಿನ ಇತರ ಕಡೆಗಳಲ್ಲಿ ಹೇಗೋ ಹಾಗೆ ಪೋರ್ಚುಗಲ್ಲಿನಲ್ಲಿಯೂ ರಿಸೈಸಾನ್ಸ್‌ಯುಗದ ಸುಂದರ ಪ್ರಾತಃಕಾಲ ಅದು. ಗ್ರೀಕ್‌ಭಾಷೆಯಲ್ಲಿ ತಕ್ಕ ಮಟ್ಟಿಗೆ, ಲ್ಯಾಟಿನ್‌ನಲ್ಲಿ ಆಳವಾಗಿ ಕಮೋಯೆಂಷ್‌ಪರಿಶ್ರಮ ಪಡೆದ. ಸ್ಟ್ಯಾನಿಷ್‌ಭಾಷೆಯಲ್ಲಿ ಕೂಡ ಕಾವ್ಯರಚನೆ ಮಾಡುವಷ್ಟು ಶಕ್ತಿಯನ್ನು ಸಂಪಾದಿಸಿದ.

೧೫೪೪ರಲ್ಲಿ ಕಮೋಯೆಂಷ್‌ಲಿಸಬನಿಗೆ ಹಿಂದಿರುಗಿದ. ರಾಜರ ಆಸ್ಥಾನಕ್ಕೂ ಶ್ರೀಮಂತರ ಮನೆಗಳಿಗೂ ಆತ ಹೋಗಿ ಬರುತ್ತಿದ್ದ. ಕಾವ್ಯ ಮತ್ತು ವೈನೋದಿಕಗಳ ರಚನೆ ಅವನಿಗೆ ಪ್ರಿಯವಾಗಿತ್ತು. ಎರಡು ವರ್ಷಗಳು ಸುಖವಾಗಿ ಉರುಳಿದುವು. ಆಗ ಅವನಿಗೆ ಪ್ರೇಮಪ್ರಕರಣವೊಂದು ಒದಗಿಬಂದು ತೊಂದರೆ ತಂದಿಟ್ಟಿತು. ಅವನು ದೇಶಭ್ರಷ್ಟನಾಗಬೇಕಾಯಿತು. ೧೫೪೭ರಲ್ಲಿ ಆತ ಸಾಮಾನ್ಯ ನಾವಿಕನಾಗಿ ಸೆಊಟಾಕ್ಕೆ ಪ್ರಯಾಣ ಮಾಡಿದ. ಅವನ ನಿಜವಾದ ಜೀವನ ಅಲ್ಲಿ ಪ್ರಾರಂಭವಾಯಿತು ಎನ್ನಬೇಕು. ಅಪಾರವಾದ ಲೋಕಾನುಭವ ಅವನಿಗೆ ಅಲ್ಲಿ ದೊರೆಯಿತು. ಅವನ ಬಲಗಣ್ಣು ಹೋಯಿತು. ಒಂದಾದ ಮೇಲೊಂದರಂತೆ ಕಷ್ಟಗಳು ಪ್ರಾಪ್ತವಾದುವು. ಆದರೆ ಜ್ಞಾನ ವಿಸ್ತಾರವಾಯಿತು. ಸಾಮ್ರಾಜ್ಯ ಎಂದರೆ ಏನು ಎಂಬುದರ ಸರಿಯಾದ ಕಲ್ಪನೆ ಅವನಿಗೆ ದೊರೆಯಿತು.

ಸಾಮ್ರಾಜ್ಯ ಎಂಬುದು ಅ-ವ್ಯಕ್ತಿಗತ, ಭೌಗೋಳಿಕ ರಾಜಕೀಯ ಪ್ರದೇಶ ಅಲ್ಲ, ಅದು ವ್ಯಕ್ತಿಗತವಾದದ್ದು ವ್ಯಕ್ತಿಗಳ ಚಾರಿತ್ರ್ಯ, ಶೌರ್ಯ, ದೇಶಭಕ್ತಿಗಳೇ ಅದರ ಅಡಿಗಲ್ಲು. ಅವು ನಾಶವಾದಾಗ ಸಾಮ್ರಾಜ್ಯವೂ ನಾಶವಾಗುತ್ತದೆ ಎಂಬ ಅರಿವು ಅವನಿಗೆ ದೊರಕಿತು. ಅದನ್ನೇ ಅವನು ಮುಂದೆ ತನ್ನ ಮಹಾಕಾವ್ಯದಲ್ಲಿ ಕಾವ್ಯಮಯವಾಗಿ ಪ್ರತಿಪಾದಿಸಿದ.

೧೫೪೯ರಲ್ಲಿ ಕಮೋಎಂಷ್‌ಲಿಸಬನ್‌ಗೆ ಹಿಂದುರುಗಿದ. ಒಂದು ಬೀದಿಯ ಜಗಳದಲ್ಲಿ ಅರಮನೆಯ ಅಧಿಕಾರಿಯೊಬ್ಬನನ್ನು ಗಾಯಗೊಳಿಸಿದ್ದಕ್ಕಾಗಿ ಅವನಿಗೆ ಸೆರೆ ಮನೆಯ ವಾಸ ಪ್ರಾಪ್ತವಾಯಿತು. ಒಂಬತ್ತು ತಿಂಗಳ ಅನಂತರ, ಭಾರತದಲ್ಲಿ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವನಿಗೆ ಬಿಡುಗಡೆ ದೊರಕಿತು. ೧೫೫೩ರಲ್ಲಿ ಆತ ಭಾರತಕ್ಕೆ ಹೊರಟ. ಗೋವಾಕ್ಕೆ ಹೊರಟ ನಾಲ್ಕು ಹಡಗುಗಳಲ್ಲಿ ಅವನದೊಂದೇ ಮುಳುಗದೆ ದಡ ಕಂಡದ್ದು. ಅಂದಿಗೆ ಗೋವಾ “ಪ್ರಾಮಾಣಿಕ ಬಡತನಕ್ಕೆ ಗೋರಿ” ಎಂದು ಹೆಸರು ಪಡೆದಿತ್ತು. ಕಮೋಯೆಂಷ್‌ನ ಪಾಲಿಗೆ ಅದೂ ಸುಳ್ಳಾಯಿತು. ಭ್ರಮೆ ನಿರಸನಗೊಂಡು ಅವನು ಗೋವೆಯನ್ನು “ಪ್ರಾಮಾಣಿಕ ವ್ಯಕ್ತಿಗಳ ಮಲತಾಯಿ” ಎಂದು ಕರೆದ. ಮುಂದೆ ಜೆಂಬಿಯ ರಾಜನೊಂದಿಗೆ ನಡೆದ ಯುದ್ಧದಲ್ಲಿ ಸೈನಿಕನಾಗಿ ಕಾದಾಡಿದ. ಇನ್ನೂ ಕೆಲವು ಕದನಗಳಲ್ಲಿ ಭಾಗವಹಿಸಿದ ಎಂದೂ ಪ್ರತೀತಿಯಿದೆ. ಇದೇ ಸಮಯದಲ್ಲಿ ಅವನು ಭಾರತದಲ್ಲಿನ ಕ್ರೈಸ್ತರ, ಜೊತೆಗೆ ಹಿಂದೂಗಳ ಜೀವನ ಧರ್ಮಗಳನ್ನು ಅಧ್ಯಯನ ಮಾಡಿದ. ಈ ದೇಶದ ಚರಿತ್ರೆ, ಭೂಗೋಳಗಳ ನಿಕಟವಾದ ಪರಿಚಯ ಪಡೆದ. ಅವನಲ್ಲಿನ ಕವಿಯೂ ವಿಕಾಸಗೊಳ್ಳುತ್ತಿದ್ದ. ಕೆಲವು ವಿಡಂಬನೆಗಳು ರಚಿತವಾದುವು. ಮಹಾಕಾವ್ಯದ ರಚನೆಯನ್ನೂ ಪ್ರಾರಂಭಿಸಿದ್ದ. ಆದರೆ ವಿಧಿ ಅವನ ವಿಷಯಕ್ಕೆ ಅತ್ಯಂತ ಕ್ರೂರವಾಗಿತ್ತು. ಯಾವುದೋ ಹುದ್ದೆ ಕೊಟ್ಟು ಅವನ ಅಧಿಕಾರಿಗಳು ಅವನನ್ನು ಮಕೌಗೆ ಕಳುಹಿಸಿದರು. ಇಂದಿಗೂ ಅಲ್ಲಿನ ಅವನ ಹೆಸರನ್ನು ಹೊತ್ತ ಅವನ ಕೃತಕ ಗುಹೆ ಇದೆ. ಮಕೌನಲ್ಲಿ ಅವನು ಅಧಿಕಾರ ನಿಮಿತ್ತ ಸ್ಥಳೀಯರೊಂದಿಗೆ ಜಗಳ ಕಾಯಬೇಕಾದ ಪ್ರಸಂಗ ಬಂತು. ಆದರೆ ಅವನ ಕೆಲಸ ಹೋಯಿತು. ಕೋಳ ತೊಡಿಸಿ ಹಡಗಿಗೆ ಹಾಕಿ ಅವನನ್ನು ಗೋವಾಕ್ಕೆ ರವಾನಿಸಲಾಯಿತು. ಮೆಕಾಂಗ್‌ನದೀ ಮುಖದ ಸಮೀಪದಲ್ಲಿ ಅವನ ಹಡಗು ಒಡೆದುಹೋಯಿತು. ಅವನು ತನ್ನ ಅಪೂರ್ಣ ಮಹಾಕಾವ್ಯದ ಹಸ್ತಪ್ರತಿಯನ್ನು ಬಲವಾಗಿ ಅಪ್ಪಿಕೊಂಡು ಈಜಿ ಪಾರಾದ. ಮಕೌನಲ್ಲಿ ಅವನು ಗಳಿಸಿದ್ದಿರಬಹುದಾದ ಹಣವೆಲ್ಲ ಸಮುದ್ರ ತಳವನ್ನು ಸೇರಿತು. ಕ್ರಿ. ಶ. ೧೫೬೧ರಲ್ಲಿ ಅವನು ಗೋವಾ ತಲುಪಿದ. ಆರು ವರ್ಷಗಳ ಕಾಲ ಭಾರತದಲ್ಲಿದ್ದು ಬೇಕಾದಷ್ಟು ಗಳಿಸಿದ. ಮಧ್ಯೆ ಮಧ್ಯೆ ಜೈಲಿಗೂ ಹೋಗಿಬರುತ್ತಿದ್ದ ಕೊನೆಗೆ ಸ್ವದೇಶ ಮೇಲಿನ ಪ್ರೇಮದಿಂದ ಹಿಂದಕ್ಕೆ ಯಾನ ಮಾಡಿದ. ದಾರಿಯಲ್ಲೂ ಹೇಳತೀರದಷ್ಟು ಕಷ್ಟಗಳು ಪ್ರಾಪ್ತವಾದವು. ಈ ಮಧ್ಯೆ ಅವನು ಬರೆದ ‘ಪಾರ್ನಾಸೋ’ ಎಂಬ ಕಾವ್ಯ ಕಳೆದುಹೋಯಿತು.

ಅವನು ಲಿಸಬನ್‌ಗೆ ಹಿಂದಿರುಗಿದಾಗ ಅವನ ದೇಶ ದುಃಸ್ಥಿತಿಯಲ್ಲಿತ್ತು. ಪ್ಲೇಗ್‌ರೋಗ ಹಾವಳಿ ನಡೆಸಿತ್ತು. ಕವಿಯೂ ದುಃಸ್ಥಿತಿಯಲ್ಲೇ ಇದ್ದ. ಆದರೂ ಎದೆಗುಂದದೆ ತನ್ನ ಮಹಾಕಾವ್ಯವನ್ನು ಮುಗಿಸಿದ. ಅದು ಅವನಿಗೆ ಹಣವನ್ನಾಗಲೀ, ಕೀರ್ತಿಯನ್ನಾಗಲೀ ತರಲಿಲ್ಲ. ೧೫೮೦ರ ಜೂನ್ ೧೦ ರಂದು ಕಮೋಯೆಂಷ್‌ತೀರಿಕೊಂಡ. ಅದು ಪೋರ್ಚುಗಲ್‌ನ ಇತಿಹಾಸದಲ್ಲಿ ಅತ್ಯಂತ ದುರಂತದ ವರ್ಷ. ಏಕೆಂದರೆ ಸ್ಟೆಯಿನ್ ಪೋರ್ಚುಗಲ್ಲನ್ನು ಅದೇ ವರ್ಷ ಆಕ್ರಮಿಸಿಕೊಂಡಿತು. ಎರಡನೆಯ ಫಿಲಿಪ್‌ಲಿಸಬನ್‌ಗೆ ಬಂದು ದರ್ಬಾರು ನಡೆಸುವ ಮುನ್ನ ಕಮೋಯೆಂಷ್‌ಲುಮೇಗೊಂಡ ಕ್ಯಾಫ್ಟನ್‌ಜನರಲ್‌ನಿಗೆ ಹೀಗೆ ಬರೆದ : “ನ್ನನ ದೇಶ ನನಗೆ ಎಷ್ಟು ಪ್ರಿಯವಾಗಿತ್ತು ಎಂದರೆ ನಾನು ಇಲ್ಲಿ ಮಾತ್ರವಲ್ಲ, ಇದರೊಂದಿಗೇ ಸತ್ತು ತೃಪ್ತಿಯನ್ನು ಪಡೆಯುತ್ತಿದ್ದೇನೆ ಎಂಬುದನ್ನು ಎಲ್ಲರೂ ನೋಡುತ್ತೀರಿ.”[2]

ಉಜ್ಲುಜೀಯದಷ್ಕಾವ್ಯ

ಈ ಮಹಾಕಾವ್ಯವನ್ನು ಚರ್ಚಿಸಿರುವ ಸಿ. ಎಂ. ಬೌರ ಹೇಳುತ್ತಾರೆ.“ತನ್ನ ವೈಭವ, ವಿಶ್ವಸಾಮಾನ್ಯತೆಗಳ ದೃಷ್ಟಿಯಿಂದ ಆಧುನಿಕ ಜಗತ್ತಿನ ಸಹೃದಯರನ್ನುದ್ದೇಶಿಸಿ ರಚಿತವಾದ ಮೊದಲ ಮಹಾಕಾವ್ಯ ಇದು; ಪೋರ್ಚುಗೀಸ್‌ಮಹಾಕವಿಯೊಬ್ಬ ಇಂಥದೊಂದು ಕಾವ್ಯವನ್ನು ರಚಿಸಿದ್ದು ಸಹಜವಾಗಿಯೇ ಇದೆ.”[3] ಈ ಭೂಮಿಯ ಅರ್ಧಗೋಳದ ಮೇಲೆ ಮೊದಲು ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದ್ದು ಪೋರ್ಚುಗಲ್‌. ಅದರ ಸಮುದ್ರಸಾಹಸದ ಕಥೆ ಈ ಮಹಾಕಾವ್ಯದ ವಸ್ತು. ಇದು ರಚಿತವಾದ ಕಾಲಕ್ಕೆ ಪೋರ್ಚುಗೀಸರ ಸಂಖ್ಯೆ ಒಂದೂಕಾಲು ಮಿಲಿಯ. ಒಂದೂಕಾಲು ಶತಮಾನದ ಅವಧಿಯಲ್ಲಿ ಪೋರ್ಚುಗೀಸರು ಅದ್ಭುತವಾದ ಸಾಹಸಕಾರ್ಯಗಳನ್ನು ಮಾಡಿ ತೋರಿಸಿದರು. ತಮ್ಮ ದೇಶದ ಧ್ವಜವನ್ನು ತಾವು ಅವಲಂಬಿಸಿದ್ದ ಕ್ರೈಸ್ತ ಧರ್ಮವನ್ನು ಇತ್ತ ಬ್ರೆಜಿಲ್‌ನಿಂದ ಅತ್ತ ಜಪಾನ್‌ದವರೆಗೆ ಹೆಮ್ಮೆಯಿಂದ ಕೊಂಡೊಯ್ದರು. ಹೊಸ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಅದಕ್ಕಿಂತ ಹೆಚ್ಚಾಗಿ ಸಾಗರ ಮಾರ್ಗಗಳನ್ನು ಅವಲಂಬಿಸಿದ ಸಾಮ್ರಾಜ್ಯದ ಕಲ್ಪನೆಯನ್ನು ರೂಪಿಸಿದರು. ಮುಂದೆ ಹದಿನೇಳನೇ ಶತಮಾನದಲ್ಲಿ ಆಂಟೋನಿಯೋ ವಿಯಿರಾ ಎಂಬಾತ ಹೇಳಿದ : “ದೇವರು ಪೋರ್ಚುಈಸರಿಗೆ ಪುಟ್ಟ ತೊಟ್ಟಿಲಂಥ ದೇಶ ಕೊಟ್ಟ ಆದರೆ ಇಡೀ ಜಗದಗಲದ ಮಸಣವನ್ನು ಕೊಟ್ಟ.”[4]

‘ಉಜ್‌ಲುಜೀಯದಷ್‌’ ಕಾವ್ಯ ಈ ಜನರ ಸಾಹಸದ ಕಥೆ ಮಾತ್ರವಲ್ಲ, ಅದರ ಕಾವ್ಯಮಯವಾದ ವ್ಯಾಖ್ಯಾನವೂ ಹೌದು. ಒಮ್ಮೆ ಶಾಂತವಾದ, ಮತ್ತೊಮ್ಮೆ ಭೋರ್ಗರೆಯುವ, ಒಮ್ಮೆ ತನ್ನ ಎದೆಯಾಳದ ಮುತ್ತುಗಳನ್ನು ತೆರೆದು ತೋರಿಸುವ, ಮತ್ತೊಮ್ಮೆ ನೂರಾರು ಸಾಹಸಿಗಳ ಜಲಸಮಾಧಿಯ ರುದ್ರಕ್ರಿಯೆಯನ್ನು ನಡೆಸುವ, ಒಮ್ಮೆ ಕಾಣದ ದೂರ ದೇಶಗಳ ವೈಭವ, ಸಂಪತ್ತುಗಳತ್ತ ಕೈ ತೋರಿಸುವ, ಮತ್ತೊಮ್ಮೆ ಅದೇ ಕೈಗಳಿಂದ ಹಡುಗಳ ಪಡೆ ಪಡೆಗಳನ್ನೇ ಮೈಲಿ ಮೈಲಿ ಹಿಂದಕ್ಕೆ ನೂಕುವ ಕಡಲು ಪಶ್ಚಿಮದ ಜನರಿಗೆ ಎಂದೆಂದೂ ಅದಮ್ಯವಾದ ಆಕರ್ಷಣೆಯ ಸವಾಲಾಗಿದೆ. ಈ ಸವಾಲನ್ನು ಸಂತೋಷದಿಂದ ಸ್ವೀಕರಿಸಿದ ಪ್ರಾಚೀನ ಜನಾಂಗಗಳಲ್ಲಿ ಪೋರ್ಚುಗೀಸರದೂ ಒಂದು. ಅವರ ಸಾಹಸದ ಕಥೆ ಈ ಕಾವ್ಯದ ವಸ್ತು.

ನಮಗೆ ತಿಳಿದಿರುವಂತೆ ಸತ್ಯಸತ್ಯವಾದ ಇತಿಹಾಸವನ್ನು ಯಥಾವತ್ತಾಗಿ ಕಾವ್ಯ ಮಾಡಿ ಹಾಡಿರುವ ಏಕೈಕ ಮಹಾಕಾವ್ಯ ‘ಉಜ್‌ಲುಜೀಯದಷ್‌’. ಆದರೆ ಬರಿಯ ಚರಿತ್ರೆ ನೀರಸವಾದೀತೆಂದು ಕವಿ ಕಮೋಯೆಂಷ್‌ಅದಕ್ಕೆ ಪುರಾಣದ ಹಿನ್ನೆಲೆಯನ್ನು, ತತ್ವದ ಚಿಂತನೆಯ ಚೌಕಟ್ಟನ್ನು ಹಿತವಾದ ರೀತಿಯಲ್ಲಿ ಒದಗಿಸಿದ್ದಾನೆ. ಇದರಲ್ಲಿ ಅವೆಲ್ಲ ಬಿಡಿಸಲಾರದಂತೆ ಹಾಸುಹೊಕ್ಕಾಗಿಲ್ಲ. ಬೇಕಾದಾಗ ತೆಗೆದಿಟ್ಟು ಬರಿಯ ನಿಜವಾದ ಚಿತ್ರವನ್ನೇ ನೋಡಬಹುದಾದಷ್ಟು ಬೇರೆಯಾಗಿ ಉಳಿದಿವೆ. ಹಾಗಿದ್ದೂ ಕಲೆಗೆ ಊನ ಬಾರದಂತೆ ನಿರ್ವಹಿಸಿರುವುದೇ ಕವಿಯ ಕೌಶಲದ ಒಂದು ಪ್ರಧಾನಾಂಶವಾಗಿದೆ.

ಈ ಕಾವ್ಯವನ್ನು ಪೂರ್ಣವಾಗಿ ಆಸ್ವಾದಿಸುವುದಕ್ಕೆ ಸ್ವಲ್ಪಮಟ್ಟಿನ ಇತಿಹಾಸಜ್ಞಾನ ಅಗತ್ಯ. ಕ್ರಿ. ಶ. ೧೩೮೬ರ ವಿಂಡ್‌ಸರ್‌ಕೌಲು ಇಂಗ್ಲೆಂಡ್‌ಮತ್ತು ಪೋರ್ಚುಗಲ್‌ಗಳ ನಡುವೆ ಸ್ನೇಹದ ಬೆಸುಗೆಯನ್ನು ಹಾಕಿತು. ಮರುವರ್ಷ ಇಂಗ್ಲೆಂಡಿನ ಫಿಲಿಸ್ಟ ಸಾಹಸಿಗಳ ವಂಶದ ತಾಯಿಯೂ ಆದಳು. ಅಲ್ಲಿಂದ ಪೋರ್ಚುಗೀಸರ ಸಮುದ್ರ ಸಾಹಸ ಪ್ರಾರಂಭವಾಯಿತು. ಅವರಿಗೆ ಬೇಕಾಗಿದ್ದದ್ದು ಪೂರ್ವ ದೇಶಗಳಿಗೆ-ಅದರಲ್ಲೂ ಭಾರತಕ್ಕೆ –ಸಮುದ್ರ ಮಾರ್ಗ. ಪೂರ್ವ ದೇಶಗಳು ಸಂಬಾರ ಪದಾರ್ಥಗಳ ಕಣಜ. ತಮ್ಮ ಧರ್ಮ ಬಂಧುಗಳು ಭಾರತದಲ್ಲಿದ್ದಾರೆ ಎಂಬ ಅರಿವೂ ಅವರ ಸಾಹಸಕ್ಕೆ ಗಟ್ಟಿಯಾದ ಹಾಯಿಪಟವಾಯಿತು.

೧೪೮೭ರಲ್ಲಿ ಎರಡನೆಯ ಜಾಒ ಎರಡು ಸಾಹಸಯಾತ್ರೆಗಳನ್ನು ವ್ಯವಸ್ಥೆಗೊಳಿಸಿದ. ಎರಡರ ಉದ್ದೇಶವೂ ಒಂದೇ-ಭಾರತವನ್ನು ತಲುಪುವುದು. ಮೊದಲನೆಯದಾಗಿ ಪೆರೋದ ಕೋವಿಲ್ಹಾ ಮೆಡಿಟರೇನಿಯನ್‌ಮತ್ತು ಕೆಂಪು ಸಮುದ್ರಗಳ ಮಾರ್ಗವಾಗಿ ಪೂರ್ವದೇಶಗಳಿಗೆ ಹೊರಟ. ಏಡನ್‌ನಲ್ಲಿ ಕೊವಿಲ್ಹಾ “ಮೆಕ್ಕ ಹಡಗೊಂ”ದನ್ನು ಹತ್ತಿದ. ಅದು ಒಂದು ತಿಂಗಳ ಪ್ರಯಾಣದ ಬಳಿಕ ಅವನನ್ನು ಕಣ್ಣಾನೂರು ತಲುಪಿತು. ಇದು ನಡೆದದ್ದು ೧೪೮೮ರಲ್ಲಿ. ಭಾರತವನ್ನು ತಲುಪಿದ ಮೊದಲ ಪೋರ್ಚುಗೀಸ ಈತನೆ-ಪೆರೋದ ಕೋವಿಲ್ಹಾ. ಅಲ್ಲಿಂದ ಆತ ಕಲ್ಲಿಕೋಟೆಗೆ ಹೋದ. ಪಶ್ಚಿಮದೊಡನೆ ವ್ಯಾಪಾರ ಸಂಬಂಧಕ್ಕೆ ದೊಡ್ಡ ಕೇಂದ್ರವಾಗಿದ್ದದ್ದು ಕೋಟೆಗೆ ಹೋದ. ಪಶ್ಚಿಮದೊಡನೆ ವ್ಯಾಪಾರ ಸಂಬಂಧಕ್ಕೆ ದೊಡ್ಡ ಕೇಂದ್ರವಾಗಿದ್ದದ್ದು ಅದೇ. ಅಲ್ಲಿಂದ ಗೋವೆಗೆ ಹೋದ. ಅದು ಅರಬ್ಬೀ ಕುದುರೆಗಳನ್ನು ಆಮದು ಮಾಡುತ್ತಿದ್ದ ಕೇಂದ್ರ. ಈ ಮಧ್ಯೆ ಆತ ತನ್ನ ಪ್ರವಾಸದ ವರದಿಯನ್ನು ಪೋರ್ಚುಗಲ್ಲಿಗೆ ರವಾನಿಸುತ್ತಿದ್ದ.

ಎರಡನೆಯ ಮಹಾ ಸಾಹಸಯಾತ್ರೆ ಬಾರ್ಟುಲೂಮಿಯೂ ಡಿಯಸ್‌ನದು. ಆಫ್ರಿಕದ ದಕ್ಷಿಣದ ತುದಿಯಲ್ಲಿ ತಿರುಗಿ ಪೂರ್ವದೇಶಗಳನ್ನು ತಲುಪಬಹುದು ಎಂಬ ಪೋರ್ಚುಗೀಸರ ಲೆಕ್ಕಾಚಾರವನ್ನು ನಿಜಗೊಳಿಸಿದವನು ಬಾರ್ಟುಲೂಮಿಯೂ. ಅವನು ಗುಡ್‌ಹೋಪ್‌ಭೂಶಿರವನ್ನು ದಾಟಿದ. ಆದರೆ ಭಾರತವನ್ನು ತಲುಪಲು ಆಗಲಿಲ್ಲ. ಈ ವೇಳೆಗೆ ತುಂಬ ಬಳಲಿದ್ದ ನಾವಿಕರ ಬಲಾತ್ಕಾರದಿಂದಾಗಿ ಅವನು ಹಿಂದಿರುಗಿ ಬರಬೇಕಾಯಿತು.

೧೪೯೫ರಲ್ಲಿ ಪಟ್ಟಕ್ಕೆ ಬಂದ ಮನೋಲ್‌ಅದೃಷ್ಟಶಾಲಿ ಎಂಬ ಅಡ್ಡ ಹೆಸರು ಅವನಿಗೆ ಅಂಟಿಕೊಂಡಿತು. ವಾಸ್ಕೋ ಡ ಗಾಮನನ್ನು ಮತ್ತೊಂದು ಅದ್ಭುತವಾದ ಸಮುದ್ರ ಸಾಹಸಕ್ಕೆ ಪ್ರೇರೇಪಿಸಿದ. ದೊಡ್ಡ ಹಡಗುಗಳ ಒಂದು ಪಡೆಯೇ ಸಿದ್ಧವಾಯಿತು. ಇಪ್ಪತ್ತು ಭಾರೀ ಫಿರಂಗಿಗಳು, ಬೇಕಾದಷ್ಟು ಇತರ ಯುದ್ಧಗಳು ಹಡಗುಗಳನ್ನು ತುಂಬಿದುವು. ೧೭೦ ಜನ ಮಹಾ ಸಾಗಸಿಗರಾದ ನಾವಿಕರು ಒಟ್ಟಾದರು. ಈ ನೌಕಾಪಡೆ ೧೪೯೭ರ ಜುಲೈ ೮ನೆಯ ತಾರೀಖು ಭಾರತದ ನೆಲವನ್ನು ಕಂಡುಹಿಡಿಯುವ ದೃಢ ನಿರ್ಧಾರದಿಂದ ಹೊರಟಿತು.

ಮಂಜು, ಹಿ, ಬಿರುಗಾಳಿ, ಪ್ರತಿಕೂಲ ಮಾರುತ ಇವು ನಾವಿಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದುವು. ಕೇಪ್‌ವರ್ಡಿಸ್‌ಬಿಟ್ಟ ನಂತರ ತೊಂಬತ್ತಾರು ದಿನಗಳು ಅವರು ನೆಲವನ್ನೇ ಕಾಣಲಿಲ್ಲ. ಕಂಡಮೇಲೂ ಅವರನ್ನು ಸ್ವಾಗತಿಸಿದ್ದು ಸುಖವಲ್ಲ.ಮೊಜಾಂಬಿನ್‌ಮತ್ತು ಮೊಂಬಾಸಾಗಳಲ್ಲಿ ಅವರು ಮುಸ್ಲಿಮರ ದ್ರೋಹ, ಪಿತೂರಿಗಳನ್ನು ಎದುರಿಸಬೇಕಾಯಿತು. ಕೇವಲ ಅದೃಷ್ಟದಿಂದ ಅವರು ಅವುಗಳಿಂದ ಪಾರಾದರು. ಮಲಿಂದಿಯಲ್ಲಿ ಮಾತ್ರ ಅವರಿಗೆ ಆದರದ ಸ್ವಾಗತ ದೊರೆಯಿತು. ಆದರೆ ಆ ವೇಳೆಗೆ ಬೇಕಾದಷ್ಟು ಪಾಠ ಕಲಿತಿದ್ದ ಡ ಗಾಮ ಮಲಿಂದಿ ನೆಲದ ಮೇಲೆ ಕಾಲಿಡಲಿಲ್ಲ. ಅವನಿಗೆ ಅತ್ಯಗತ್ಯವಾಗಿ ಬೇಕಾಗಿದ್ದವನು ನಾವಿಕ-ಮಾರ್ಗದರ್ಶಿ. ಏಕೆಂದರೆ ಮುಂದೆ ಅವನ ಹಡಗು ಪಡೆ ಹೋಗಬೇಕಾದದ್ದು ಹಿಂದೂ ಸಾಗರದಲ್ಲಿ. ಅದುವರೆಗೂ ಯಾವುದೇ ಪಶ್ಚಿಮದ ಹಡಗೂ ಅಲ್ಲಿ ಪ್ರಯಾಣ ಮಾಡಿರಲಿಲ್ಲ. ಅಂಥ ಒಬ್ಬ ನುರಿತ ನಾವಿಕ ಮಾರ್ಗದರ್ಶಿ ಅವನಿಗೆ ದೊರೆತ. ಆಫ್ರಿಕದ ನೆಲ ಕಾಣಿಸಿತು. ೧೪೯೮ನೆಯ ಮೇ ೨೦ನೆಯ ತಾರೀಖು ಅವರು ಕಲ್ಲಿಕೋಟೆ ತಲುಪಿದರು. ಹತ್ತೂವರೆ ತಿಂಗಳು ಸಮುದ್ರಯಾನ ಮಾಡಿ ಡ ಗಾಮ ಮತ್ತು ಅವನ ಜೊತೆಯವರು ಭಾರತದ ನೆಲವನ್ನು ಮುಟ್ಟಿದ್ದರು. ಇತಿಹಾಸದಲ್ಲಿ ಪೂರ್ವ ಪಶ್ಚಿಮಗಳ ಸಮಾಗಮದ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು.

ಈ ದಿಗ್ವಿಜಯವು ಪೋರ್ಚುಗಲ್ಲಿನ ಆ ಅತ್ಯಂತ ಮಹತ್ವಪೂರ್ಣವಾದ ಸ್ಥಾನವನ್ನು ತಂದುಕೊಟ್ಟಿತು. ಇದುವರೆಗೂ ಪೂರ್ವದ ಅಪೂರ್ವ ವಸ್ತುಗಳ ಮಾರಾಟಕೇಂದ್ರವಾಗಿದ್ದ ವೆನಿಸ್‌ಈಗ ನಿರ್ನಾಮವಾಯಿತು. ಮೆಡಿಟರೇನಿಯನ್‌ಸಾಗರದ ಸ್ಥಾನವನ್ನು ಕಳೆದುಕೊಂಡು ಕಾಲುವೊಳೆಯಾಯಿತು. ವಿಸ್ತೀರ್ಣ ಮತ್ತು ಜನಸಂಖ್ಯೆಗಳೆರಡರ ದೃಷ್ಟಿಯಿಂದಲೂ ಗೌಣಸ್ಥಾನದಲ್ಲಿದ್ದ ಪೋರ್ಚುಗಲ್‌ಈಗ ಯೂರೋಪಿನಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರವಾಯಿತು. ಇದುವರೆಗೂ ಯೂರೋಪಿಗೆ ತಿಳಿಯದಿದ್ದ ಎರಡು ಖಂಡಗಳು – ಆಫ್ರಿಕಾ ಮತ್ತು ಏಷ್ಯಾ-ಪೋರ್ಚುಗಲ್ಲಿಗೆ ಅಂಗೈ ನೆಲ್ಲಿಗಳಾದುವು. ಸಮುದ್ರ ಮಾರ್ಗದ ಅರಿವು ಮಹಾಶಕ್ತಿಯಾಗಿ ಮೊದಲು ಪೋರ್ಚುಗಲ್ಲನ್ನು ಅನಂತರ ಹಾಲೆಂಡ್‌ಅನಂತರ ಇಂಗ್ಲೆಂಡ್‌ಗಳನ್ನು ಇತಿಹಾಸದ ಪ್ರಸಿದ್ಧಿಗೆ ತಂದಿತು.

ಹತ್ತು ಆಶ್ವಾಸಗಳಲ್ಲಿರುವ ಅದರ ಕಥೆಯನ್ನು ಅತ್ಯಂತ ಸಂಕ್ಷೇಪವಾಗಿ ಹೀಗೆ ಹೇಳಬಹುದು:

ಆಶ್ವಾಸ ೧ : ಕವಿ ತನ್ನ ಕಾವ್ಯ ವಸ್ತು ಯಾವುದು ಎಂಬುದನ್ನು ಹೇಳುತ್ತಾನೆ. ಕಾವ್ಯದ ಅಧಿದೇವಿಯರ ಆವಾಹನೆ. ರಾಜ ಸಬಾಗ್ವಿಯೋಗೆ ಕಾವ್ಯದ ಅರ್ಪಣೆ. ಒಲಿಂಪಸ್‌ಪರ್ವತದ ಮೇಲೆ ದೇವತೆಗಳ ಸಭೆ. ಬ್ಯಾಕನ್‌ದೇವತೆ ಪೋರ್ಚುಗೀಸರನ್ನು ವಿರೋಧಿಸುತ್ತಾನೆ. ವೀನಸ್‌ಮತ್ತು ಮಾರ್ಸ್‌ಪೋರ್ಚುಗೀಸರ ಪರವಾಗಿ ವಾದಿಸುತ್ತಾರೆ. ವಾಸ್ಕೋ ಡ ಗಾಮನ ಹಡಗುಗಳು ಆಫ್ರಿಕದ ಪೂರ್ವತೀರದಲ್ಲಿ ಮುಂದುವರಿಯುತ್ತಿರುವುದು ಕಾಣುತ್ತದೆ. ಮೊಜಾಂಬಿನ್‌ತಲುಪಿದ ಆ ಹಡುಗುಗಳು ಮುಸ್ಲಿಮರ ದ್ರೋಹದ ಸಂಚಿನಿಂದ ಅದಕ್ಕೆ – ಪ್ರೇರಕ ಬ್ಯಾಕನ್‌ಸ್ವಲ್ಪದರಲ್ಲಿ ಪಾರಾಗುತ್ತದೆ. ಅವು ಮೊಂಬಾಸಾ ತಲುಪುತ್ತವೆ. ಕವಿ ಬದುಕಿನ ಅನಿಶ್ಚಿತತೆಯನ್ನು ಕುರಿತು ಚಿಂತನೆ ನಡೆಸುತ್ತಾನೆ.

ಆಶ್ವಾಸ ೨ : ಬ್ಯಾಕನ್‌ಮತ್ತು ಈ ಹಡಗುಗಳನ್ನು ನಾಶಗೊಳಿಸಲು ಸಂಚು ಹೂಡುತ್ತಾನೆ. ವೀನಸ್‌ಮತ್ಸ್ಯಕನ್ಯೆಯರ ನೆರವು ಪಡೆದು ತಕ್ಷಣ ಅಪಾಯವನ್ನು ದೂರಮಾಡುತ್ತಾಳೆ. ಅನಂತರ ವೀನಸ್‌ಜುಟಪಿರ್‌ನ ಬಳಿಗೆ ಧಾವಿಸುತ್ತಾಳೆ. ಜುಪಿಟರ್‌ವೀನಸಳನ್ನು ಸಂತೈಸಿ ಪೋರ್ಚುಗೀಸರಿಗೆ ಪೂರ್ವ ದೇಶಗಳಲ್ಲಿ ಕಾದಿರುವ ವಿಜಯಗಳನ್ನು ತಿಳಿಸುತ್ತಾನೆ. ಮಲಿಂದಿಯಲ್ಲಿ ಈ ನಾವಿಕರಿಗೆ ಸ್ನೇಹದ ಸ್ವಾಗತಕ್ಕೆ ಏರ್ಪಾಡು ಮಾಡಲು ಆತ ಮರ್ಕ್ಯುರಿಯನ್ನು ಕಳುಹಿಸುತ್ತಾನೆ. ಮಲಿಂದಿಯ ರಾಜ ಹಡಗಿಗೇ ಬಂದು ವಾಸ್ಕೋ ಡ ಗಾಮನನ್ನು ಕಂಡು ಅವನ ದೇಶದ ಬಗ್ಗೆ ವಿಚಾರಿಸುತ್ತಾನೆ.

ಆಶ್ವಾಸ ೩ : ಮಹಾಕಾವ್ಯದ ಅಧಿವೇವತೆಗೆ ಪ್ರಾರ್ಥನೆ. ಯೂರೋಪಿನ ಭೌಗೋಳಿಕ ವರ್ಣನೆ. ಉಸಿಚಾನಿಯಾದ ಸ್ಥಾಪಕ ಲೂಸನ್‌. ಪೌರಾಣಿಕ ವ್ಯಕ್ತಿಯ ವರ್ಣನೆ. ಪೋರ್ಚುಗಲ್‌ರಾಜಕೀಯವಾಗಿ ಬೆಳೆದದ್ದು. ಅದರ ರಾಜರುಗಳ ವರ್ಣನೆ.

ಆಶ್ವಾಸ ೪ : ಅಲಿಜುಬರೋಟಾ ಯುದ್ಧದ ವರ್ಣನೆ. ಉತ್ತರ ಆಫ್ರಿಕಾದ ಸ್ವಾಧೀನ. ಮೆಡಿಟರೇನಿಯನ್‌ಮಾರ್ಗವಾಗಿ ಕೊವಿಲ್ಹಾನನ್ನು ಎರಡನೆಯ ಜಾಓ ಭಾರತಕ್ಕೆ ಕಳುಹಿಸಿದ್ದು ಗಂಗಾ ಮತ್ತು ಸಿಂಧೂ ನದಿಗಳು ಮೊದಲನೆಯ ಮನೋಲ್‌ನಿಗೆ ಕನಸಿನಲ್ಲಿ ಕಾಣಿಸಿಕೊಂಡಿದ್ದು. ಅವನು ಗುಡ್‌ಹೋಪ್‌ಭೂಶಿರದ ಮಾರ್ಗವಾಗಿ ವಾಸ್ಕೋಡ ಗಾಮನನ್ನು ಕಳುಹಿಸಿದ್ದು.

ಆಶ್ವಾಸ ೫ : ಮಲಿಂದಿಯವರೆಗೆ ಪ್ರಯಾಣದ ವರ್ಣನೆ. ಹಿಂದೆ ಕಂಡುಹಿಡಿದಿದ್ದ ಪ್ರದೇಶಗಳು ಹೊಸ ನೈಸರ್ಗಿಕ ಘಟನೆಳು: ದಿ ಸದರ್ನ್‌ಕ್ರಾಸ್‌, ಸೆಯಿಂಟ್‌ಹೆಲ್ಮೋಸ್‌ಫೈರ್‌. ವಾಟಕಿ ಸ್ಪಾಟ್‌. ಮುಂದಿನ ಪ್ರಯಾಣ. ತನ್ನ ಅದ್ಭುತ. ಸಾಧನೆಯನ್ನು ಡ ಗಾಮ ನಿರೂಪಿಸುವುದು. ಅದನ್ನು ಕೇಳಿದ ನಾವಿಕರ ಉತ್ಸಾಹ. ವೀರರು ತಮ್ಮ ಕೀರ್ತಿಯನ್ನು ಶಾಶ್ವತಗೊಳಿಸಲು ಕಾರಣವಾದ ಕಾವ್ಯಕ್ಕೆ ಎಷ್ಟು ಋಣಿಗಳು ಎಂಬುದನ್ನು ಕವಿ ನಡೆಸುವ ಚಿಂತನೆ.

ಆಶ್ವಾಸ ೬ : ಮಲಿಂದಿಯ ರಾಜ ನೀಡಿದ ಭವ್ಯ ಸ್ವಾಗತ. ಅವನು ನಾವಿಕರಿಗೆ ಮಾರ್ಗದರ್ಶಿಯನ್ನು ಒದಗಿಸಿದ್ದರು. ನಾವಿಕರು ಹಿಂದೂಸಾಗರದಲ್ಲಿ ಪ್ರಯಾಣ ಬೆಳೆಸಿದ್ದು. ನೆಪ್ಟನನ ಸಮುದ್ರ ತಳದ ಅರಮನೆಗೆ ಬ್ಯಾಕನ್ ಬಂದು ಪೋರ್ಚುಗೀಸರ ವಿರುದ್ಧ ದ್ವೇಷವನ್ನು ಬಿತ್ತಲು ಪ್ರಯತ್ನಿಸಿದ್ದು. ಇಯೇಲನ್‌ಅವರ ವಿರುದ್ಧ ಬಿರುಗಾಳಿಗಳನ್ನು ಬಿಡುವಂತೆ ಪ್ರೇರೇಪಿಸಿದ್ದು. ಭಯಂಕರ ಬಿರುಗಾಳಿ ಬೀಸಿ ಇನ್ನೇನು ಹಡಗುಗಳೆಲ್ಲ ನಾಶವಾಗಬೇಕು. ಅಷ್ಟರಲ್ಲಿ ವಾಸ್ಕೋಡ ಗಾಮ ಪ್ರಾರ್ಥಿಸಿದ್ದು. ವೀನಸ್‌ಸಮುದ್ರಕನ್ಯಯರೊಂದಿಗೆ ಬಂದು ಬಿರುಗಾಳಿಯನ್ನು ಶಮನಗೊಳಿಸುತ್ತಾಳೆ. ಅರುಣೋದಯವಾಗುತ್ತಿದ್ದಂತೆ ಭಾರತದ ನೆಲದ ದರ್ಶನ. ನಿಜವಾದ ಶೌರ್ಯ ಎಂದರೇನು ಎಂಬುದನ್ನು ಕುರಿತು ಕವಿ ನಡೆಸುವ ಚಿಂತನೆ.

ಆಶ್ವಾಸ ೭ : ಪೋರ್ಚುಗೀಸರು ಕ್ರೈಸ್ತಧರ್ಮಕ್ಕೆ ಸಲ್ಲಿಸಿದ ಸೇವೆಗಾಗಿ ಅವರ ಸ್ತುತಿ. ಜರ್ಮನಿ, ಇಂಗ್ಲೆಂಡ್‌, ಫ್ರಾನ್ಸ್‌, ಇಟಲಿಗಳು ಕ್ರೈಸ್ತ ಜಗತ್ತನ್ನು ಛಿದ್ರ ಗೊಳಿಸಲು ಪ್ರಯತ್ನಿಸಿದ್ದಕ್ಕಾಗಿ ಅವುಗಳ ಬರ್ತ್ಸನೆ. ಪ್ರಥಮ ಬಾರಿಗೆ ಭಾರತದ ವರ್ಣನೆ. ಡ. ಗಾಮನ ಭಾರತ ಪ್ರವೇಶ. ಅರಸ ಸಮೋರಿನ್‌ನ ಭೇಟಿ.

ಆಶ್ವಾಸ ೮ : ಪೋರ್ಚುಗೀಸ್‌ಧ್ವಜಗಳ ವರ್ಣನೆ. ಹಿಂದಿನ ರಾಷ್ಟ್ರವೀರರ ಇತಿಹಾಸ ನಿರೂಪಣೆ. ಕೀರ್ತಿ ಮತ್ತು ಮಹತ್ತುಗಳನ್ನು ಕುರಿತಂತೆ ಕವಿಯ ಚಿಂತನೆ. ಸಮೋರಿನ್‌ನ ಮನಸ್ಸಿಗೆ ಅವನ ಜ್ಯೋತಿಷಿಗಳು ವಿಷ ಸುರಿದದ್ದು. ಬ್ಯಾಕನ್‌ಮತ್ತು ಮುಸ್ಲಿಮರೊಂದಿಗೆ ಒಳಸಂಚು ನಡೆಸಿ ಪೋರ್ಚುಗೀಸರನ್ನು ನಾಶಗೊಳಿಸಲು ಪ್ರಯತ್ನಿಸಿದ್ದು. ಡ ಗಾಮ ಸಮೋರಿನ್‌ನ ಮನಸ್ಸಿನ ಸಂಶಯಗಳನ್ನು ನಿವಾರಿಸಿದ್ದು. ಸಮೋರಿನ್‌ಡ ಗಾಮನಿಗೆ ಹಡಗಿನಿಂದ ಸಾಮಾನುಗಳನ್ನು ದಡಕ್ಕೆ ತರಲು ಅಪ್ಪಣೆ ನೀಡಿದ್ದು. ಡ ಗಾಮನ ಬಂಧನ. ಗಾಮ ಹಣ ತೆತ್ತು ಬಿಡುಗಡೆ ಪಡೆದದ್ದು. ಹಣದ ಶಕ್ತಿಯನ್ನು ಕುರಿತು ಕವಿ ನಡೆಸುವ ಚಿಂತನೆ.

ಆಶ್ವಾಸ ೯ : ಪೋರ್ಚುಗೀಸ್‌ವರ್ತಕರನ್ನು ಸೆರೆಹಿಡಿದದ್ದು. ಮೊಕ್ಕದ ಹಡಗು ಪಡೆ. ವಾಸ್ಕೋ ಡ ಗಾಮ ಮುಸ್ಲಿಂ ವರ್ತಕರನ್ನು ಸೆರೆಹಿಡಿದು ಅವರಿಗೆ ಬದಲಾಗಿ ತನ್ನವರನ್ನು ಹಿಂದಕ್ಕೆ ಪಡೆದದ್ದು. ಡ ಗಾಮ ತನ್ನ ಹಡಗಿನಲ್ಲಿ ಕೆಲವು ಭಾರತೀಯರನ್ನು ಸಂಬಾರ ಪದಾರ್ಥಗಳನ್ನು ತುಂಬಿಕೊಂಡು ಪ್ರಯಾಣ ಹೊರಟಿದ್ದು. ನಾವಿಕರು ಪಟ್ಟ ಕಷ್ಟಕ್ಕೆ ಪ್ರತಿಯಾಗಿ ಅವರಿಗೆ ಆಮೋದಪ್ರಮೋದಗಳನ್ನು ನೀಡಲು ವೀನಸ್‌ದೇವತೆ “ಪ್ರೇಮ ದ್ವೀಪ”ವನ್ನು ಸೃಷ್ಟಿಸಿದ್ದು. ಕ್ಯುಪಿಡ್‌ನ ನೆರವನ್ನು ವೀನಸ್‌ಬೇಡಿದ್ದು. ತಪ್ಪು ವಸ್ತು-ವ್ಯಕ್ತಿಗಳ ಮೇಲೆ ಪ್ರೇಮವನ್ನು ತೋರಿಸಿದ್ದಕ್ಕೆ ಮನುಷ್ಯ ಕುಲದ ಮೇಲೆ ಕ್ಯುಪಿಡ್‌ಶಿಕ್ಷೆಗಳನ್ನು ಹೇರಿದ್ದರ ವರ್ಣನೆ. ಬಿಥಿಸ್‌ಮತ್ತು ಅವಳ ಸಾಗರ ಕನ್ಯೆಯರ ಬಳಗ ನಾವಿಕರನ್ನು ಮೋಹಿಸಿ ಪ್ರೇಮದ್ವೀಪಕ್ಕೆ ಬಂದದ್ದು. ಕವಿ ಆ ದ್ವೀಪದಸಂಕೇತ ಏನು ಎಂಬುದನ್ನು ವರ್ಣಿಸುವುದು.

ಆಶ್ವಾಸ ೧೦ : ನಾವಿಕರು ಮತ್ತು ಸಮುದ್ರ ಕನ್ಯೆಯರು ನಡಸಿದ ಔತಣಕೂಟ. ಡ ಗಾಮನನ್ನು ಬಿಥಿಸಳು ಒಂದು ಪರ್ವತ ಶಿಖರಕ್ಕೆ ಕರೆದೊಯ್ದು ವಿಶ್ವದ ರಚನೆಯನ್ನು ವಿವರಿಸಿದ್ದು. ಪೃಥ್ವಿ ವಿಶ್ವದ ಕೇಂದ್ರ-ಆಫ್ರಿಕ, ಏಷ್ಯಾ ಮತ್ತು ಓಷಿಯಾನಾಗಳನ್ನೂ ಅವುಗಳ ದ್ವೀಪಗಳನ್ನೂ ಪೋರ್ಚುಗೀಸರು ಕಂಡಂತೆ, ಇನ್ನೂ ಕಾಲಣಲಿರುವಂತೆ ವರ್ಣಿಸಿರುವುದು, ನೌಕಾಪಡೆ ಪೋರ್ಚುಗಲ್ಲಿಗೆ ಹಿಂದಿರುಗುವುದು. ತನ್ನ ತಾಯ್ನಾಡಿನಲ್ಲಿ ಶೌರ್ಯ ಪ್ರವೃತ್ತಿ ಕುಗ್ಗಿ ಹೋಗಿರುವುದನ್ನು ಕುರಿತು ಕವಿ ನಡೆಸುವ ಚಿಂತನೆ. ದೂರ ದೇಶಗಳಲ್ಲಿ ಇದ್ದುಕೊಂಡು ತನಗೆ ಸೇವೆ ಸಲ್ಲಿಸುತ್ತಿರುವವರಿಗೆ ಹೆಚ್ಚಿನ ಗೌರವ ತೋರಿಸಬೇಕೆಂದು ರಾಜ ಸನ್ಯಾಸಿಯೋರ್ವನು ಕವಿ ಪ್ರಾರ್ಥಿಸುವುದು. ನಿಜವಾದ ಶಕ್ತಿ ಇರುವವವರನ್ನು ಪ್ರೋತ್ಸಾಹಿಸಿ ಅನುಭವಿಗಳಿಂದ ಮಾತ್ರ ಸಲಹೆಗಳನ್ನು ಪಡೆಯಬೇಕೆಂದು ಕವಿ ಕೋರುವುದು.

ಕಾವ್ಯದ ಮೌಲ್ಯಮಾಪನ

ಕಮೋಯೆಂಷ್‌ವರ್ಜಿಲನ ‘ಈನಿಯಡ್‌’ ಕಾವ್ಯವನ್ನು ಅನುಸರಿಸ ಹೊರಟಿದ್ದಾನೆ. ವಾಸ್ತವವಾಗಿ ವರ್ಜಿಲನೊಡನೆ ಸ್ಪರ್ಧಿಸಲೂ ಹೊರಟಿದ್ದಾನೆ. ಹೀಗೆ ಮಾಡುವಾಗ ಅವನು ವರ್ಜಿಲನ ಸಮಸಮಕ್ಕೆ ನಿಂತಿದ್ದಾನೆ ಎಂಬುದು ಸಿ.ಎಂ. ಬೌರಾರಂಥ ಪ್ರಬುದ್ಧ ವಿಮರ್ಶಕರ ಅಭಿಪ್ರಾಯ. ಇವನು ಬರೆದಿರುವುದು ಒಟ್ಟಾವ ರೈಮ () (ಅಷ್ಟಪದಿ) ಛಂದಸ್ಸಿನಲ್ಲಿ. ವರ್ಜಿಲ್‌ಬಳಸಿದ ಛಂದಸ್ಸಿಗಿಂತ ಇದು ಸಂಪೂರ್ಣವಾಗಿ ಬೇರೆಯಾದದ್ದು. ವರ್ಜಿಲ್‌ನನ್ನು ಓದದೇ ಇರುವವರು ಈತನ ಕಾವ್ಯ ಶ್ರೇಷ್ಠವಾದ ಸ್ವತಂತ್ರ ಕೃತಿ ಎಂದು ಭಾವಿಸುವುದು ಹಾಗಿರಲಿ, ವರ್ಜಿಲನನ್ನು ಚೆನ್ನಾಗಿ ಬಲ್ಲವರು ಕೂಡ ವರ್ಜಿಲನ ಛಾಯೆಯಿದ್ದೂ ಈ ಕವಿಯ ಸ್ವತಂತ್ರ ಪ್ರತಿಭೆಯನ್ನು ಕಂಡು ಆಶ್ಚರ್ಯಪಡುತ್ತಾರೆ. ‘ಈನಿಯಡ್‌’ ಒಬ್ಬ ವ್ಯಕ್ತಿಯನ್ನು ಕುರಿತದ್ದು. ಈ ಕಾವ್ಯವಾದರೋ ಒಂದು ಇಡೀ ಜನಾಂಗವನ್ನು ಕುರಿತದ್ದು. ಇವನ ಪ್ರಧಾನಪಾತ್ರವಾದ ವಾಸ್ಕೋಡ ಗಾಮ ಆ ಜನಾಂಗದ ಪ್ರತಿನಿಧಿ ಈಗಾಗಲೇ ಹೇಳಿರುವಂತೆ ಇತಿಹಾಸವನ್ನು ಕವಿ ರಮ್ಯವಾದ ಕಾವ್ಯವಾಗಿ ಮಾಡಿದ್ದಾನೆ. ಅದರ ಹತ್ತು ಆಶ್ವಾಸಗಳಲ್ಲಿ ಮೂರನೇ ಎರಡು ಭಾಗ ಗಾಮನ ಸಮುದ್ರಯಾನ, ಸಾಹಸ ಮತ್ತು ಭಾರತದರ್ಶನಗಳಿಗೆ ಮೀಸಲಾಗಿದೆ. ಪೋರ್ಚುಗಲ್ಲಿನ ಇತಿಹಾಸ ಅವನ ಕಾವ್ಯದ ಇನ್ನುಳಿದ ಭಾಗವನ್ನು ತುಂಬುತ್ತದೆ. ಚರಿತ್ರೆಗೆ ಚೂರೂ ಲೋಪ ಬರದಂತೆ, ಚರಿತ್ರೆ ಕಾವ್ಯವನ್ನು ಬರಡುಗೊಳಿಸದಂತೆ ನಿರ್ವಹಿಸಿರುವುದು ಕವಿಯ ವಿಶಿಷ್ಟ ಕಾವ್ಯಶಕ್ತಿಗೆ ಸಾಕ್ಷಿಯಾಗಿದೆ. ತಾನು ವರ್ಣಿಸುತ್ತಿರುವ ಇತಿಹಾಸದಲ್ಲಿ ತಾನೇ ಭಾಗಿ ಆಗಿರುವುದು ಕವಿಗೆ ದೊಡ್ಡ ಅನುಕೂಲ. ಬೇರೆ ಕಾವ್ಯಗಳಿಂದಲೋ ಬೇರೆಯವರ ಬಾಯಿಂದಲೋ ಅಥವಾ ಬೇರೆ ದಾಖಲೆಗಳಿಂದಲೋ ಯುದ್ಧದ ವರ್ಣನೆಗಳನ್ನು ಅವನು ಪಡೆಯಬೇಕಾಗಲಿಲ್ಲ, ಯುದ್ಧಗಳಲ್ಲಿ ತಾನೇ ಭಾಗವಹಿಸಿ ಅವುಗಳನ್ನು ಅವನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾನೆ. ಹೀಗಾಗಿ ವಾಸ್ತವಿಕತೆ ಕಾವ್ಯವನ್ನೆಲ್ಲ ವ್ಯಾಪಿಸಿದೆ. ಮೂರನೆಯ ಆಶ್ವಾಸದಲ್ಲಿ ಬರುವ ಒಂದು ವರ್ಣನೆ ಹೀಗಿದೆ :

“ರುಂಡಗಳು ಮುಂಡಗಳಿಂದ ಸಿಡಿದು ಯುದ್ಧಭೂಮಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದೆ. ಕೈಗಳೂ ಕಾಲುಗಳೂ ಒಡೆಯನಿಲ್ಲದೆ ಪ್ರಜ್ಞೆಯಿಲ್ಲದೆ ಎಲ್ಲೆಂದರಲ್ಲಿ ಎಲ್ಲ ಕಡೆಯೂ ಹಾರಾಡುತ್ತಿವೆ. ಕೆಲವರು ಕರುಳು ಹರಿದು ರಕ್ತವಿಲ್ಲದೆ ಕೆನ್ನೆಗಳುಳ್ಳವರು, ಕಣ್ಣುಗಳಲ್ಲಿ ಮೃತ್ಯುವುಳ್ಳವರು ನೆಲದಲ್ಲಿ ತೆವಳುತ್ತಿದ್ದಾರೆ.” (ದ್ಯಾನುವಾದ)[5]

ಹೆಚ್ಚು ಕಡಿಮೆ ಪ್ರತಿಯೊಂದು ಆಶ್ವಾಸದ ಕೊನೆಯಲ್ಲಿಯೂ ಕವಿ ಬದುಕಿನ ಘಟನೆಗಳನ್ನು ಕುರಿತು ತನ್ನ ಚಿಂತನೆಗಳನ್ನು ನೀಡಿದ್ದಾನೆ ಎಂದು ಹೇಳಿದ್ದೇವಷ್ಟೆ. ಮೊದಲನೆಯ ಆಶ್ವಾಸದ ಕೊನೆಯಲ್ಲಿ ಬರುವ ಅಂಥದೊಂದು ಚಿಂತನೆಯನ್ನು ನಿದರ್ಶನವಾಗಿ ನೀಡಬಹುದು:

“ಅನಿಶ್ಚಿತವಾಗಿ ಈ ಬದುಕಿನಲ್ಲಿ ಸಾಗುತ್ತಿರುವಾಗ ನಾವು ಎದುರಿಸಬೇಕಾಗಿ ಬರುವ ಅಪಾಯಗಳು ಅನೇಕ ಹಾಗೂ ಭೀಕರ. ಒಬ್ಬನನ್ನು ನಂಬುತ್ತೇವೆ. ಆದರೆ ಅವನು ನಮ್ಮನ್ನು ಕೊಲ್ಲಲು ಸಂಚು ಮಾಡುತ್ತಿದ್ದಾನೆ! ಸಮುದ್ರದಲ್ಲಿ ಎಂಥ ಬಿರುಗಾಳಿಗಳು, ಮೃತ್ಯುಭೀತಿ. ಹಾಗೆಂದು ಬದುಕಿ ದಡವನ್ನು ಸೇರಿದರೆ ಎಂಥ ಮೋಸ, ಎಂಥ ದ್ವೇಷ! ದುರ್ಬಲನಾದ ಮಾನವ ಆಶ್ರಯಕ್ಕೆಂದು ಎತ್ತ ಕಡೆ ತಾನೆ ತಿರುಗುವುದು.”

‘ಉಜ್‌ಲುಜೀಯದಷ್‌’ ಕಾವ್ಯವನ್ನು ವರ್ಜಿಲನ ‘ಈನಿಯಡ್‌’ ಕಾವ್ಯದೊಡನೆ ಹೋಲಿಸಿದಾಗ ಲುಜೀಯದಷ್‌ಕಾವ್ಯದ ಕವಿಗೆ ಹೆಚ್ಚಿನ ಅನುಕೂಲತೆಗಳು ದೊರೆತವು ಎಂಬುದು ಗೊತ್ತಾಗುತ್ತದೆ. ಮೊದಲನೆಯದಾಗಿ ವರ್ಜಿಲನು ರೋಮಿನ ಇತಿಹಾಸಕ್ಕೆ ನೀಡಿದ್ದಾನೆ. ಹೀಗಾದದ್ದರಿಂದ ‘ಲುಜೀಯದಷ್‌’ ‘ಈನಿಯಡ್‌’ಗಿಂತ ಹೆಚ್ಚಿನ ರಾಷ್ಟ್ರೀಯ ಕಾವ್ಯವಾಯಿತು. ಅಲ್ಲದೆ ಈ ಕಾವ್ಯದ ವ್ಯಾಪ್ತಿ ಅನೇಕ ಶತಮಾನಗಳಿಗೂ ಅನೇಕ ದೇಶಗಳಿಗೂ ಹರಡಿರುವುದರಿಂದ ಇಲ್ಲಿ ಹೆಚ್ಚಿನ ವೈವಿಧ್ಯ ಬರುವುದು ಸಾಧ್ಯವಾಯಿತು.

ಕಮೋಯೆಂಷ್‌ನ ನಾಯಕ ಅಕಿಲಿಸ್‌ನ ರೀತಿಯವನು ಅಲ್ಲ. ಈನಿಯಸ್‌ನ ರೀತಿಯವನೂ ಅಲ್ಲ. ನಿಜವಾಗಿಯೂ ಸಾಮಾನ್ಯ. ಕಷ್ಟಸಹಿಷ್ಣುತೆ, ತನಗೆ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುವಿಕೆ-ಇವು ಅವನ ಗುಣಗಳು. ಇವೂ ಅಂಥ ಅಸಾಧಾರಣ ಗುಣಗಳಲ್ಲ. ಇಂಥ ವ್ಯಕ್ತಿಯನ್ನು ಪೋರ್ಚುಗೀಸರ ನಿಜವಾದ ಪ್ರತಿನಿಧಿಯನ್ನು ನಾಯಕನನ್ನಾಗಿ ಮಾಡಿಕೊಂಡು ಕಾವ್ಯವನ್ನು ನಿರ್ವಹಿಸಿದ್ದು, ಅದರ ಆಕರ್ಷಣೆ ಕುಂದದಂತೆ ನೋಡಿಕೊಂಡಿದ್ದು ಕವಿಯ ಪ್ರತಿಭೆಗೆ ಸಾಕ್ಷಿಯಾಗಿದೆ.

ಗಾಮನ ಚಿತ್ರಣದಲ್ಲಿ ಕವಿ ಎಚ್ಚರಿಕೆ ವಹಿಸಿ ಅದು ಇತಿಹಾಸಕ್ಕೆ ಕೂದಲೆಳೆಯಷ್ಟೂ ಅಪಚಾರವಾಗದಂತೆ ನೋಡಿಕೊಂಡಿದ್ದಾನೆ. ಗಾಮ ಭಾರತಕ್ಕೆ ಹೋದ ಎಂದು ಕವಿ ವರ್ಣಿಸಿರುವ ಸಮುದ್ರ ಮಾರ್ಗವೂ ಸ್ವತಃ ಕವಿ ಕಂಡದ್ದೇ ಆಗಿದೆ.[6] ಗಾಮ ವಹಿಸಿದ ಪಾತ್ರವನ್ನು ಕೂಡ ಕವಿ ಉತ್ಪ್ರೇಕ್ಷಿಸುವುದಿಲ್ಲ. ಸತ್ಯ ಕಲ್ಪನೆಯಷ್ಟೆ ಸ್ವಾರಸ್ಯವಾದದ್ದು ಎಂದು ಕವಿ ಗ್ರಹಿಸಿಟ್ಟಿರುವ ಇಂಥ ಪಾತ್ರಚಿತ್ರಣ ಸಾಧ್ಯವಾಯಿತು.

[1] Camoens : The Lusiads, A New Translation by William C. Atkinson, The Penguin Classics, 1952.

[2] “All will se that so dear to me was my country that I was content to die not only in it but with it.”

[3] “The first epic poem which in its grandeur and its unjversality speaks for the modern world was written by a Portugese. And this is right.”- C. M. Bowra. From Virgil to Milton : Camoes and the Epic of Protugal, p. 86. Macmillan & Co. 1948.

[4] “Good gave the Portugese a small country as cradle but all the world as their grave.”

[5] “Heads from the shoulders leap about the field; Arms, legs, without or sense or master, fly-Others their panting entrails trailing, wheel’d, Earth in their eye.” (Fanshawe)

[6] ಭಾರತದ ವರ್ಣನೆ : ಆಶ್ವಾಸ ೭ರಲ್ಲಿ :

ನೆಲ ಕಂಡಂತೆ ಮೀನು ಹಿಡಿಯುವ ಸಣ್ಣ ದೋಣಿಗಳು ಹೊರಬರುವುದು ಕಾಣಿಸಿತು. ಅವು ಬಂದದ್ದು ಕಲ್ಲಿಕೋಟೆಯಿಂದ : ಮಲಬಾರಿನ ಸುಂದರ ನಗರಗಳಲ್ಲೆಲ್ಲ ಅತ್ಯಂತ ಸುಂದರವಾದದ್ದು ಅದು. ಇಡೀ ದೇಶವನ್ನು ಆಳುತ್ತಿದ್ದ ರಾಜ ಇದ್ದದ್ದು ಅಲ್ಲೇ.

ಸಿಂಧೂ ನದಿಯ ಆಚೆ, ಅದರ ಮತ್ತು ಗಂಗಾ ನದಿಗಳ ನಡುವೆ ವಿಸ್ತಾರವಾದ ಪ್ರದೇಶವಿದೆ. ಕೀರ್ತಿ ಅದಕ್ಕೇನೂ ಹೊಸದಲ್ಲ. ಅದರ ದಕ್ಷಿಣದ ಎಲ್ಲೆ ಕಡಲನ್ನು ಮುಟ್ಟುತ್ತದೆ. ಅದರ ಉತ್ತರದ ಎಲ್ಲೆ ಗಡಿಗಳು ತುಂಬಿದ ಹಿಮಾಲಯ. ವಿವಿಧ ರಾಜರು ಆ ದೇಶವನ್ನುಆಳುತ್ತಾರೆ. ಆದ್ದರಿಂದ ವಿವಿಧ ರೀತಿಯ ಧರ್ಮಗಳು ಅಲ್ಲಿವೆ. ಕೆಲವರು ಕ್ರೈಸ್ತಧರ್ಮ ವಿರೋಧಿ ಮಹಮ್ಮದನನ್ನು ಪೂಜಿಸಿದರೆ ಕೆಲವರು ವಿಗ್ರಹಗಳಿಗೆ ನಮಸ್ಕಾರ ಮಾಡುತ್ತಾರೆ. ಕೆಲವರು ಅಲ್ಲಿನ ಪ್ರಾಣಿಗಳನ್ನು ಪೂಜಿಸುತ್ತಾರೆ. ಇಡೀ ಒಂದು ಖಂಡವನ್ನೇ ವಿಭಜಿಸುವ ಏಕೆಂದರೆ ಅದು ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳನ್ನು ಹೊಂದಿ ಇಡೀ ಏಷ್ಯಾ ಖಂಡಾದ್ಯಂತ ಮಹಾಸಾಗರಕ್ಕೆ ಅಪಾರವಾದ ಜಲರಾಶಿಯನ್ನು ಸುರಿಸುತ್ತದೆ.