ಶಿವಶರಣರನ್ನು ಕುರಿತು ‘ರಗಳೆ’ ಎಂಬ ಛಂದಸ್ಸಿನಲ್ಲಿ ಅನೇಕ ಕೃತಿಗಳನ್ನು ಕವಿ ಹರಿಹರ ರಚಿಸಿದ್ದಾನೆ. ಅವುಗಳಲ್ಲಿ ಒಂದು ‘ಪುಷ್ಪರಗಳೆ’ ಅವನ ಕಾವ್ಯರಾಶಿಯಲ್ಲಿ ಮಾತ್ರವಲ್ಲದೆ ಕನ್ನಡ ಸಾಹಿತ್ಯ ಪ್ರಪಂಚದಲ್ಲೇ ಒಂದು ಅತ್ಯಪೂರ್ವವಾದ ಕೃತಿ ಹರಿಹರನ ‘ಪುಷ್ಪರಗಳೆ’ ಹೂವುಗಳನ್ನು ಅಲ್ಲಲ್ಲಿ ವರ್ಣಿಸಿರುವ ಕವಿಗಳಿದ್ದಾರೆ. ಕಮಲ, ಗುಲಾಬಿ ಮುಂತಾದವುಗಳನ್ನು ಕುರಿತು ಕವನಗಳಿವೆ. ಆದರೆ, ಇಂಗ್ಲಿಷಿನಲ್ಲಾಗಲಿ, ಸಂಸ್ಕೃತದಲ್ಲಾಗಲಿ (ಇತರ ಭಾರತೀಯ ಭಾಷೆಗಳ ವಿಷಯ ನನಗೆ ತಿಳಿಯದು) ಕನ್ನಡದಲಾಗಲಿ, ಹೂವುಗಳಿಗಾಗಿ (ಅದೆಷ್ಟೇ ಚಿಕ್ಕದಾಗಿದ್ದರೂ) ವರ್ಣನಾತ್ಮಕವಾದ ಒಂದು ಕಾವ್ಯವೇ ರಚಿತವಾಗಿದ್ದರೆ ಅದು ನನಗೆ ತಿಳಿಯದ ವಿಷಯ. ಹೀಗೆ ಈ ‘ಪುಷ್ಪರಗಳೆ’ ಹೂವುಗಳನ್ನು ಕುರಿತ ಒಂದು ಪುಟ್ಟ ಕಾವ್ಯವಾಗಿರುವುದರಿಂದಲೇ ಇದನ್ನು ಅತ್ಯಪೂರ್ವವಾದ ಕೃತಿ ಎಂದು ಕರೆದದ್ದು.

ಹರಿಹರ ಭಕ್ತ ಕವಿ. ಅವನ ಪಾಲಿಗೆ ಕಾವ್ಯ ರಚನೆ ಇಷ್ಟದೇವತೆಯ ಸಾಕ್ಷಾತ್ಕಾರಕ್ಕೆ ಕವಿಯೂ ಆದ ಭಕ್ತನೊಬ್ಬ ಆರಿಸಿಕೊಂಡ ದಾರಿ. ಅವನು ಸಮರ್ಥನಾದ ಕವಿಯಾದುದರಿಂದ ಭಕ್ತಿಯ ಆವೇಶವನ್ನು ಕಾವ್ಯವಾಗಿ, ಅನೇಕ ಕಡೆಗಳಲ್ಲಿ ಸಹೃದಯರಿಗೆ ಮೆಚ್ಚುಗೆಯಾಗುವಂಥ ಕಾವ್ಯವಾಗಿ ಪರಿವರ್ತಿಸುವುದು ಸಾಧ್ಯವಾಯಿತು.

ಈ ಭಕ್ತಕವಿ ಒಂದು ದಿನ ಬೆಳಗಿನ ಜಾವಕ್ಕೇ ಎದ್ದು ದೇವರನ್ನು ಬೇಡುತ್ತಾನೆ. ಹೊಚ್ಚ ಹೊಸ ಹೂವುಗಳಿಂದ ನಿನ್ನನ್ನು ಪೂಜಿಸುವ (ವರವನ್ನು) ಆಶ್ಚರ್ಯಕರವಾದ ರೀತಿಯಲ್ಲಿ ಕರುಣಿಸಬೇಕು’ ಹೀಗಿ ಬೇಡಿದವನು ವಿಭೂತಿಯನ್ನು ಧರಿಸಿಕೊಳ್ಳುತ್ತಾನೆ. ಬಳಿಕ ಬುಟ್ಟಿಯನ್ನು ಸಿದ್ಧಮಾಡಿಕೊಳ್ಳುತ್ತಾನೆ. ಆಬುಟ್ಟಿ ಭದ್ರವಾಗಿರಬೇಕು, ಹೂವು ಒಂದಾದರೂ ಹೊರಗೆ ಬೀಳದಂತೆ ಅಲ್ಲ, ಹೂವಿನ ಪರಿಮಳವೂ ಹೊರಗೆ ಸೋರಿಹೋಗದಂತಿರಬೇಕು! ಹೂವಿನ ಸುಗಂಧ ಸಲ್ಲಬೇಕಾದದ್ದು ಶಿವನಿಗೆ, ಆದ್ದರಿಂದ ಅದು ದಾರಿಯಲ್ಲೇ ಸೋರಿಹೋಗಬಾರದು. ಹರಿಹರನ ಮನಸ್ಸು ಎಷ್ಟು ಸೂಕ್ಷ್ಮ ಎಂಬುದು ಇದರಿಂದ ತಿಳಿಯುತ್ತದೆ.

ಮುಂದಿನದು ಹೂದೋಟದ ವರ್ಣನೆ. ಆ ಹೂದೋಟಕ್ಕೆ ಸಮೀಪಿಸುವುದು ಹೇಗೆ? ಏನೇನೋ ಯೋಚನೆಗಳಲ್ಲಿ ಮುಳುಗಿ, ಹೂವನ್ನು ಮರೆತು ಯಾರಿಗಾಗಿ ಆ ಹೂವನ್ನು ತೆಗೆದುಕೊಂಡು ಹೋಗಬೇಕಾಗಿದೆಯೋ ಅಂತಹ ಶಿವನನ್ನು ಮರೆತು ಅಲ್ಲ, ಶಿವನ ಗೀತೆಗಳನ್ನೇ ಹರ್ಷದಿಂದ ಹಾಡುತ್ತಾ ಶಿವನ ಪದ್ಯಗಳನ್ನೇ ರೋಮಾಚನಗೊಂಡು ಓದುತ್ತಾ ಶಿವನ ಕೀರ್ತಿಯನ್ನೇ ಹೊಗಳುತ್ತಾ ಶಿವನ ಶ್ರೇಷ್ಠವಾದ ಮೂರ್ತಿಯನ್ನು ನೆನೆದು ಕರಗುತ್ತಾ ಹೂದೋಟವನ್ನು ಸಮೀಪಿಸುತ್ತಾನೆ.

ಆ ಹೂದೋಟ ಇದ್ದದ್ದು ಹೇಗೆ? ಪರಿಮಳದ ಸುಗ್ಗಿ, ಸೌರಭದ ಸಂದಣಿ ಆಮೋದದ ರಸಸಮುದ್ರ, ಶ್ರೇಷ್ಠವಾದ ಕಂಪಿನ ಪರಮ ಸೀಮೆ, ಕಲ್ಪವೃಕಸ್ಷದ ಸುಗಂಧದ ತವರು ಮನೆ! – ಇದರಾಚೆಗೆ ವರ್ಣನೆಯ ಇನ್ನೊಂದು ಮಾತನ್ನು ಸೇರಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತೆ ಕಂಪುದಟ್ಟೈ ಸಿರುವ ಹೂದೋಟವನ್ನು ವರ್ಣಿಸಿದ್ದಾಯಿತು. ಅಂತಹ ಹೂವಿನ ತೋಟವನ್ನು ದೂರದಿಂದ ನೋಡಿದೊಡನೆಯೇ ಹರಿಹರನಿಗೆ ಸಂತೋಷ ಉಕ್ಕಿ ಹರಿಯಿತು ಚೆಂಡಿನಂತೆ ಪುಟಿದೆದ್ದು ಡ್ಡಗಲಗಳೆಲ್ಲ್ಲ ಓಡಾಡಿಬಿಟ್ಟ: ನಾಟ್ಯ ಮಾಡುವವನಂತೆ ಗಟ್ಟಿಯಾಗಿ ಕೂಗಾಡಿ ಕುಣಿಕುಣಿದು ತೂಗಾಡಿದ. (ಈ ಕ್ರಿಯೆಗಳೆಲ್ಲಾ ಉತ್ಸಾಹದ ಬುಗ್ಗೆಯಾದ ಹರಿಹರನಿಗೆ ಸಾಮಾನ್ಯವಾದವು!)

ಈ ಸ್ಥಿತಿಯಲ್ಲಿ ಅವನಿಗೆ ಕಂಡದ್ದು ಬಗೆಬಗೆಯ ಪತ್ರೆ(ಎಲೆ)ಗಳು, ಬಿಲ್ವಪತ್ರೆ, ರುದ್ರಜಟೆ ಇತ್ಯಾದಿ ಹತ್ತಾರು ಪತ್ರಗಳ ಹೆಸರು ಹೇಳಿ ಅವಕ್ಕೆಲ್ಲ ನಮೋ ನಮೋ ಎಂದು ಹೇಳುತ್ತಾ ನಮಸ್ಕರಿಸುತ್ತಾನೆ.

ಮುಂದೆ ಹೂವುಗಳನ್ನು ನೋಡುತ್ತಾ ಆಶ್ಚರ್ಯಕರವಾದ ಒಂದು ಮಾತನ್ನು ತನ್ನ ಇಷ್ಟದೈವಕ್ಕೆ ಹೇಳುತ್ತಾನೆ: ‘ಎಲೆ ವಿರೂಪಾಕ್ಷ ಈ ಸುವಾಸನೆಯನ್ನು ಮೊದಲು ಮನಸ್ಸಿನಿಂದ ಸ್ವೀಕರಿಸು; ಆಮೇಲೆ ಉತ್ತಮವಾದ ಪುಷ್ಪಗಳನ್ನು ನಿನಗೆ ಕೋಡುತ್ತೇನೆ! ಎಂತಹ ಸೂಕ್ಷ್ಮಸಂವೇದಿಯಾದ ಭಾವನೆ ಈ ಕವಿಯದು!

ಅಲ್ಲಿ ಅವನು ಹೂವುಗಳನ್ನು ನೋಡಿದಾಗಲೂ ಅಷ್ಟೆ ಆ ಸಂತೋಷದಲ್ಲಿ ‘ಆಹಾ ವಿರೂಪಾಕ್ಷ’ ಎನ್ನುತ್ತಾನೆ. ತೂಗಾಡುತ್ತ ಒಲೆದಾಡುತ್ತ ‘ಆಹಾ ವಿರೂಪಾಕ್ಷ’”’ ಎನ್ನುತ್ತಾನೆ. ಓಹೋ – – ಇಷ್ಟು ಹೂವುಗಳನ್ನು ವಿರೂಪಾಕ್ಷನೇ ನನಗೆ ಕರುಣಿಸಿದ್ದಾನೆ ಎಂದುಕೊಳ್ಳುತ್ತಾನೆ. ಹಾಗೆ ಶಿವನೇ ಕೊಟ್ಟ ಹೂವುಗಳನ್ನು ಮತ್ತೆ ಶಿವನಿಗೆ ಅರ್ಪಿಸುವಾಗ ಅವು ಹೇಗಿರಬೇಕು? ಅವುಗಳನ್ನು ದುಃಖಿಗಳು ಮುಟ್ಟಿರಬಾರದು, ದುಃಖಿಗಳಿರಲಿ, ಗಾಳಿ ಕೂಡ ಅದನ್ನು ಅಲುಗಿಸಿರಿಕೂಡದು, ಸೂರ್ಯನ ಕಿರಣಗಳೂ ಸೋಕಿರುವಂತಿಲ್ಲ, ಅಂತಹ ಮೀಸಲು ಅಳಿಯದ ಪುಷ್ಪಗಳನ್ನು ಅವನು ಶಿವನಿಗೆ ಅರ್ಪಿಸಬೇಕು.

ನಮ್ಮ ಸಾಮಾನ್ಯ ಮಾತುಕತೆಗಳಲ್ಲಿ ‘ಹೂವನ್ನು ಕಿತ್ತುಕೊಂಡು ಬರುತ್ತೇನೆ’ ಎಂದು ಹೇಳುತ್ತೇವೆ. ಆಗೆಲ್ಲ ನನ್ನ ಮನಸ್ಸಿಗೆ ನೋವಾಗುತ್ತದೆ. ಕೆಲವರು, ಹಿಂದಿನ ಕಾಲದ ಸೂಕ್ಷ್ಮಸಂವೇದಿಗಳು ಹೂವನ್ನು ತಿರಿಯುವುದು ಎಂದು ಬಳಸಿದ್ದಾರೆ. ತಿರಿ ಎಂದರೆ ಯಾಚಿಸು, ಬೇಡು ಎಂದು. ಗಿಡದಿಂದ ಹೂವನ್ನು ಕೀಳುವುದು ತುಂಬ ಒರಟಾದ ಕ್ರಿಯೆ. ಗಿಡವನ್ನು ಯಾಚಿಸಬೇಕು, ಹೂವುಗಳನ್ನು ನೀಡು ಎಂದು ಬೇಡಬೇಕು. ಈಗಿನ ಸೂಕ್ಷ್ಮಹೃದಯಿಗಳು ಹೂವನ್ನು ಬಿಡಿಸಿಕೊಂಡು ಬರುತ್ತೇವೆ ಎನ್ನುತ್ತಾರೆ. ಹರಿಹರ ಹೂವಿನ ಗಿಡಗಳನ್ನು ಬೇಡುತ್ತಾನೆ, ಅವು ನಿರಾಕರಿಸಲು ಸಾಧ್ಯವೇ ಇಲ್ಲದಂತೆ, ಸೃಷ್ಟಿಯ ಸಾರ್ವಭೌಮನ ಹೆಸರನ್ನು ಹೇಳಿ ‘ಪರಮನಿಗೆ – – ಎಂದರೆ ಶಿವನಿಗೆ ಹೂವುಗಳನ್ನು ನೀಡಿ’ ಎನ್ನುತ್ತಾನೆ. ಸಂಪಗೆಯ ಹೂವನ್ನು ಪಡೆಯುವಾಗಲೂ ಅಷ್ಟೇ- ಸಂಪಗೆಯ ಮರದ ಹತ್ತಿರ ಬಂದು ಅದನ್ನು ಮಾತನಾಡಿಸುತ್ತಾನೆ.

ಏನವ್ವ ಸಂಪಗೆಯ ಶಿವನ ಸಿರಿಮುಡಿಗೆಂದು|
ನೀನೀಹ ಪೂಸ ಕುಸುಮಮಂ ನೀಡು ನೀಡೆಂದು

ಸಂಪಗೆಯನ್ನು ಸ್ತ್ರೀಯೆಂದು ಸಂಬೋಧಿಸಿ ಶಿವನ ಸಿರಿಮುಡಿಗೆ ನೀನು ಯಾವಾಗಲೂ ಕೊಡುವಂತೆ ಹೊಸ ಹೂವನ್ನು ನೀಡು ಎಂದು ಕೇಳುತ್ತಾನೆ.

ಹರಿಹರ ಭಕ್ತ-ಕವಿಯಷ್ಟೆ ಈ ಕಾವ್ಯದತುಂಬ ಅವನ ಭಕ್ತ ಮನಸ್ಸು ಹೆಚ್ಚಾಗಿ ಕೆಲಸ ಮಾಡುತ್ತಿದ್ದರೂ ಮಧ್ಯೆ ಮಧ್ಯೆ ಅವನ ಕವಿ ಮನಸ್ಸು ಶ್ಲೇಷೆಯನ್ನು ಬಳಸುವ ಚಪಲವನ್ನು ನಿವಾರಿಸಿಕೊಳ್ಳಲಾರದು! ಹೇಳುತ್ತಾನೆ :

ಅಳಿಮನದ ಪರಿಯೆಂದು ಬಗೆಯದಿರು ನೀನೆನುತೆ.

ಅಳಿಮನದ ಎಂಬುದಕ್ಕೆ ಎರಡು ಅರ್ಥಗಳುಂಟು. ಮೊದಲನೆಯದು ದುಂಬಿಯ ಪರವಾದದ್ದು ಅಳಿ ಎಂದರೆ ದುಂಬಿ. ದುಂಬಿಗೆ ಸಂಪಗೆಯನ್ನು ಕಂಡರಾಗದು. ಆ ಹೂವಿನ ವಾಸನೆ ತುಂಬ ಗಾಢವಾಗಿದ್ದು ಅದನ್ನು ದುಂಬಿ ಸಹಿಸಲಾರದು ಎಂಬ ಕವಿಸಮಯವನ್ನು ಕವಿ ಬಳಸಿ ನಾನು ಅಂತಹ ದುಂಬಿಯ ಮನಸ್ಸುಳ್ಳವನೆಂದು ತಿಳಿಯಬೇಡ ಎನ್ನುತ್ತಾನೆ. ಎರಡನೆಯದು ಅಳಿಮನ ಎಂದರೆ ದುರ್ಬಲವಾದ ಮನಸ್ಸು-ದುರ್ಬಲವಾದ ಮನಸ್ಸಿನವರು ಎಂದೂ ಅರ್ಥವುಂಟು. ಆ ಅರ್ಥದಲ್ಲಿ ನನ್ನನ್ನು ದುರ್ಬಲವಾದ ಮನಸ್ಸಿನವರ ರೀತಿಯಲ್ಲಿ ಕೇಳುತ್ತಿದ್ದೇನೆ ಎಂದು ಭಾವಿಸಬೇಡ ಎಂದೂ ಹೇಳುತ್ತಿದ್ದಾನೆ.

ಹರಿಹರ ಮುಂದೆ ಸೇವಂತಿಗೆಯ ಬಳಿಗೆ ಹೋಗುತ್ತಾನೆ. ಅವನ ಕಣ್ಣಿಗೆ ಅವು ಕುಂಕುಮದ ನಕ್ಷತ್ರಗಳಂತೆ ಕಾಣುತ್ತವೆ! ಮುಂದೆ ಕಾಣುವ ಮಲ್ಲಿಕಾ ಲತೆ, ಮಾಧವೀಲತೆಗಳನ್ನೂ ಅವನು ಹೂಗಳಿಗಾಗಿ ಬೇಡುತ್ತಾನೆ. ಮಾಧವಿಯನ್ನು ಅವನು ಬೇಡುವುದು ಹೀಗೆ : ತುಂಬಿ ನಿನ್ನನ್ನ ಮುಟ್ಟುವ ಮುಂಚೆ, ಅಥವಾ ಬಲತ್ಕಾರವಾಗಿ ನಿನ್ನ ಮಧುವನ್ನು ಸೆಳೆದುಕೊಳ್ಳುವ ಮುಂಚೆ ಆನಂದನಿಧಿಯಾದ ಶಿವನಿಗೆ ಪ್ರೀತಿಯಿಂದ ನೀನೆ ‘ಸುಖದ ಮೀಸಲು ಗಂಧವನ್ನು ನೀಡು! ಐದು ಮುಖಗಳುಳ್ಳ ಶಿವನಿಗೆ ನೀನು ಹಾಗೆ ನೀಡಿದರೆ ಬದುಕಿಕೊಳ್ಳುತ್ತಿಯೆ!’ ಇನ್ನು ಕಣಗಿಲೆಗಳು, ಅವು ಕವಿಯ ಕಣ್ಣಿಗೆ ನಕ್ಷತ್ರಗಳ ಮೊಳಕೆಗಳಂತೆ ಕಾಣುತ್ತದೆ.

ಇನ್ನು ಅನೇಕ ಹೂವುಗಳನ್ನು ವರ್ಣಿಸಿ, ಭಕ್ತಿಯಿಂದ ಸ್ವೀಕರಿಸಿ, ಅವನ್ನೆಲ್ಲ ಮಾಲೆ ಕಟ್ಟಲು ಕುಳಿತುಕೊಳ್ಳುತ್ತಾನೆ. ಈ ಪ್ರಕ್ರಿಯೆಯಲ್ಲಿ ಹರಿಹರನ ಪ್ರತಿಭೆಯೂ, ಅವನು ವರ್ಣಿಸಿದ ಹೂವುಗಳಂತೆ ಅರಳುತ್ತಾ ಹೋಗುತ್ತದೆ. ಅವನು ಕುಳಿತಿರುವುದು ಎಳೆಯ ಚಿಗುರುಗಳಿರುವ ಮಾವಿನ ಮರದ ಕೆಳಗೆ, ಅಲ್ಲಿ ಚಂದ್ರಕಾಂತ ಶಿಲೆ ಉಂಟು. ಅದರ ಮೇಲೆ ಬಾಳೆಯ ಎಲೆಗಳನ್ನು ಕಮಲದ ಎಲೆಗಳನ್ನು ಹಾಸಿ ಅವುಗಳ ಮೇಲೆ ತಾನು ತಂದಿರುವ ಹೂಗಳನ್ನು ಸುರಿಯುತ್ತಾನೆ. ಅವುಗಳನ್ನು ಮಾಲೆಕಟ್ಟಲು ಬೇಕಾದ ದಾರ ಎಂದರೆ ತಾವರೆಯ ನಾರು! ಅವನು ಕಟ್ಟುತ್ತಿರುವುದು ಹೇಗೆ? ಮುಟ್ಟಿದರೆ ಮೀಸಲು ಅಳಿಯುತ್ತದೆ. ಕೈ ಮುಟ್ಟಿಯೂ ಮುಟ್ಟದಂತೆ ನಿರ್ವಹಿಸಬೇಕು. ಹೇಗೆ? ಮನಸ್ಸನ್ನು ಮುಟ್ಟಿಸಿ, ಮನಸ್ಸಿನಿಂದಲೇ ಹೂಕಟ್ಟುವ ಕಾರ್ಯವನ್ನು ನಿರ್ವಹಿಸುತ್ತಾನೆ.

ಹೀಗೆ ಮುಂದುವರಿಯುತ್ತಾ ಸೂಕ್ಷ್ಮಾತಿಸೂಕ್ಷ್ಮವಾಗುತ್ತದೆ ಅವನ ಮನಸ್ಸು ಲಲಿತವಾದ ತಾವರೆಯ ನಾರನ್ನು ಹಿಡಿದು ಹೂಕಟ್ಟಲು ತೊಡಗಿದಾಗ ಆ ಹೂಗಳನ್ನು ಮುಟ್ಟಿತಾನೆ ಕಟ್ಟಬೇಕು? ಆದರೆ- ಅವನ್ನ ಕೈಯಿಂದ ಮುಟ್ಟಲು ಮನಸ್ಸೇ ಬರುವುದಿಲ್ಲ-

ಕೈಮುಟ್ಟಿ ಮುಟ್ಟದೆ ಮನಂ ಮುಟ್ಟಿಕಟ್ಟುತ್ತೆ
ಕೈಮರೆದು ಪೂ ಬೀಳೆ ಯಿಗೆಸತ್ತು ಪುಟ್ಟುತ್ತ
ನೋಡಿದೊಡೆ ಪೂ ಬಾಡುಗೆಂದು ಕಣ್ಮುಚ್ಚುತ್ತೆ
ನಾಡೆ ನೆನೆದಡೆ ಕಂದುಗಂದು ಮನ ಬೆಚ್ಚುತ್ತೆ

ಕೈಯಿಂದ ಮುಟ್ಟಿದರೆ ಏನೋ ಎಂತೋ ಎಂದು ಮನಸ್ಸನ್ನು ಹೂಕಟ್ಟಲು ಬಳಸಿದನಂತೆ! ಇನ್ನು ಮುಂದೆ ಹೋದರೆ ಆಶ್ಚರ್ಯ ಇನ್ನು ಹೆಚ್ಚುವಂತೆ ಮಾಡುತ್ತದೆ. ಅವನ ಆಗುಹೋಗುಗಳು- ಕೈತಪ್ಪಿ ಒಂದು ಹೂ ಕೆಳಗೆ ಬಿದ್ದರೆ ಸತ್ತುಮತ್ತೆ ಹುಟ್ಟಿದಂತೆ! ಹೂವುಗಳನ್ನು ನೋಡಿದರೆ ಅವು ಬಾಡಿಯೇ ಹೋಗುತ್ತವೆ ಎಂದು ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ. ಹೋಗಲಿ-ಮನಸ್ಸಿನಲ್ಲಾದರೂ ಅವನ್ನು ನೆನೆಯೋಣ ಎಂದರೆ-ನೆನೆದರೆ ಅವು ಕುಂದಿಹೋದರೆ ಹೇಗೆ ಎಂದು ಬೆಚ್ಚುತ್ತಾನೆ.

ಹೀಗೆಯೇ ಸೂಕ್ಷ್ಮ ಕ್ರಿಯೆಗಲು ಮಾಲೆಮಾಲೆಯಾಗಿ ನಡೆಯುತ್ತವೆ. ಹೂವುಗಳು ಅರಳುವ ಮುನ್ನ ಅವನ ಮನಸ್ಸೇ ಅರಳಿತಂತೆ! ಮೊಗ್ಗಿನಲ್ಲಿ ಶಿವನನ್ನೇ ಇರಿಸುವ ಬಯಕೆ ಬೆಳೆಯಿತಂತೆ! ಮುಂದಿನದೆಲ್ಲ ಹರಿಹರ ಶಿವನು ಏಳುವವರೆಗೂ ಕಾದಿದ್ದು ಶಿವನಿಗೆ ಸೇವೆ ಸಲ್ಲಿಸುವ ವೈಭವ.

ಭಕ್ತ-ಭಗವಂತನ ನಡುವೆ ಅನೇಕ ರೀತಿಯ ಸಂಬಂಧಗಳುಂಟು. ಅವೆಲ್ಲ ಭಕ್ತಿ ಮೀಮಾಂಸೆಯಲ್ಲಿ ನಿರೂಪಿತವಾಗಿರುಂಥವು. ಭಕ್ತಕವಿಯಾದ ಹರಿಹರನಿಗೂ ಅವನ ಆರಾಧ್ಯ ದೈವವಾದ ಹಂಪೆಯ ಪರಶಿವನಿಗೂ ಇಲ್ಲಿರುವ ಸಂಬಂಧ ಪರಿಮಳ ಮೂಲವಾದದ್ದು. ಭಕ್ತನಿಗೂ ಭಗವಂತನಿಗೂ ನಡುವೆ ಒಂದು ಸೇತುವೆ ನಿರ್ಮಾಣವಾಗಲಿದೆ- ಅದು ನಾದಸೇತು ಎಂಬುದೊಂದಿರುವಂತೆ ಸುಗಂಧಸೇತು ಎಂದು ಹೇಳಬಹುದಾದದ್ದು. ಆ ಸುಗಂಧತೆ ಆಕರವಾದ ಪುಷ್ಪಗಳನ್ನು ಅವನು ಬಾಣವಾಗಿ ಎಸೆದು ಶಿವನು ಮೈಮರೆತು ಆ ಸ್ಥಿತಿಯಲ್ಲಿ ತನಗೆ ವಶವಾಗುವಂತೆ ಮಾಡಿಕೊಂಡಿದ್ದಾನೆ. ಈ ‘ಪುಷ್ಪರಗಳೆ’ಯಲ್ಲೇ ನಾವು ಪರಿಬಾವಿಸಬೇಕಾದ ಒಂದು ಪಂಕ್ತಿ ಹೀಗಿದೆ:

ಉರವಣಿಸಿ ಬೆಳೆದ ಪರಿಮಳಕ ಗರಿ ಮೂಡಿತೋ!