ತಪಸ್ಸು ಮೌನವಾಗಿ ನಡೆಯುವ ಒಂದು ಕ್ರಿಯೆ. ಅದು ಮನಸ್ಸಿನ ವ್ಯಾಪಾರ ಆರಾಧಕ ಮತ್ತು ಆರಾಧ್ಯ ವಸ್ತುವಿನ ನಡುವಣ ಆ ವ್ಯವಹಾರದಲ್ಲಿ ಮಾತಿಗೆ ಏನೇನೂ ಕೆಲಸವಿಲ್ಲ. ಜಗತ್ತಿನಲ್ಲಿ ಅನೇಕ ಕೋಲಾಹಲಗಳಿಂಗೆ ಕಾರಣವಾದ ಮಾತು ತಪಸ್ಸಿನಲ್ಲಿ ನಿಷ್ಕ್ರೀಯವಾಗುತ್ತದೆ, ಆಗಬೇಕು. ಮಾತಿನಾಚೆಗಿರುವ ಏನೋ ಒಂದು ಎಂದು ಪರವಸ್ತುವನ್ನು ವರ್ಣಿಸಲಾಗಿದೆ. ಆದ್ದರಿಂದ ಮಾತು ಅಲ್ಲಿ ಮೌನವಾಗಬೇಕು. ‘ಶಬ್ದದೊಳಗಣ ನಿಶ್ಯಬ್ದ’ ಎಂದು ಅಲ್ಲಮಪ್ರಭು ಗುಹೇಶ್ವರ-ಶರಣ ಸಂಬಂಧವನ್ನು ಉಲ್ಲೇಖಿಸಿ ಮಾತು ತಾನಾಗಿಯೇ ಮೌನವ್ರತವನ್ನು ತಳೆಯುವಂತೆ ಮಾಡಿದ. ತನ್ನಲ್ಲಿ ಪವಡಿಸಿರುವ ಪರವಸ್ತು ಮೈಮುರಿದು ಏಳಬೇಕಾದರೆ, ಎದ್ದು ಬೆಳಕನ್ನು ಚಿಮ್ಮಿಸಬೇಕಾದರೆ ಮಾತು ಸದ್ದಡಗಿ ತಟಸ್ಥವಾಗಬೇಕು. ಮಾತು ಸದ್ದಡಗಿ, ಚಲನೆಯಿಡುಗಿ ತಿಳಿಜಲವಾದಾಗ ಅರಿವು ಮೀನಿನಂತೆ ಮೇಲಕ್ಕೆ ಈಸಿ ಬಂದು ವಿಹರಿಸುವುದು ಕಾಣುತ್ತದೆ.

ಇಬ್ಬರು ವ್ಯಕ್ತಿಗಳು ಪಕ್ಕಪಕ್ಕದಲ್ಲೇ ಬಹುದೀರ್ಘಕಾಲ ಇದ್ದೂ ಮೌನವಾಗಿರುವ ಒಂದು ಅಪರೂಪದ ಪ್ರಸಂಗ ಹರಿಹರನ ಗಿರಿಜಾ ಕಲ್ಯಾಣದಲ್ಲಿದೆ. ತಪಸ್ವಿಗಳ ಒಡೆಯನಾದ ಶಿವ ಒಬ್ಬ ಅವನನ್ನು ಒಲಿಸಲು ಸರ್ವ ಪ್ರಯತ್ನಗಳನ್ನೂ ನಡೆಸುತ್ತಿರುವ ಗಿರಿಜೆ ಮತ್ತೊಬ್ಬಳು.

ಶಿವ ತಪಸ್ಸಿನಲ್ಲಿ ಮಗ್ನನಾಗಿ ಹೋಗಿದ್ದಾನೆ. ಅವನನ್ನೇ ವರಿಸುತ್ತೇನೆ ಎಂದು ಹಟತೊಟ್ಟಿರುವ ತನ್ನ ಮಗಳು ಪಾರ್ವತಿಯನ್ನು ಕರೆದುಕೊಂಡು ಪರ್ವತರಾಜ ಹೇಮಕೂಟಕ್ಕೆ ಬರುತ್ತಾನೆ. ಕೋಮಲೆಯಾದ ಮಗಳ ಸೇವೆಗಿರಲಿ ಎಂದು ಆತ ಜಯವಿಜಯೆ ಎಂಬ ಸಖಿಯರನ್ನೂ ಕರೆದು ತಂದಿದ್ದಾನೆ. ತಪೋಮಯವಾದ ಆ ಆವರಣವನ್ನು ಪ್ರವೇಶಿಸುವಾಗಲೇ ಅಲ್ಲಿ ಮೌನ ದಟ್ಟವಾಗಿ ಹೆಪ್ಪುಕಟ್ಟಿರುವುದನ್ನು ಕವಿ ಸೂಚಿಸುತ್ತಾನೆ. ಹೇಮಕೂಟ ಪರ್ವತದ ಮರಗಿಡಗಳಡಿಯಲ್ಲ, ಗುಹೆಗಳಲ್ಲಿ “ಶಿವಧ್ಯಾನ ನಾನಾ ತಪೋಭರಭರಿತವಾದ” ಮನುಮುನಿಗಳು ತಪಸ್ಸಿಗೆ ಕುಳಿತಿದ್ದಾರೆ. ಅವರಲ್ಲಂತೂ ಮಾತಿನ ಸೋಂಕಿಲ್ಲ. ಹಕ್ಕಿಗಳ ಧ್ವನಿಯೋ, ಗಾಳಿ ಬೀಸುವ ಶಬ್ದವೋ ಕೇಳುವುದಿಲ್ಲವೇ ಎಂದರೆ ಅದೂ ಇಲ್ಲ.

ಕರೆಯವು ಕೋಗಿಲೆ ಮಧುಪಂ
ಮೊರೆಯವು ಇಳಿ ಗಳಪವನಿಲನಲ್ಲಾಡಂ ಪೆರ್
ಮರನಂ ಗಿಡುವಂ ಲತೆಯಂ
ಗುರು ಶರ್ವ ಸಮಾಧಿ ಭೀತಿಯಿಂದಾ ನಗದೊಳ್

ಕೋಗಿಲೆಗಳು ಕೂಗುತ್ತಿಲ್ಲ, ತುಂಬಿಗಳು ಮೊರೆಯುತ್ತಿಲ್ಲ, ಗಿಳಿಗಳು ಹರಟುತ್ತಿಲ್ಲ, ದೊಡ್ಡಮರಗಳನ್ನಾಗಲೀ, ಗಿಡಗಳನ್ನಾಗಲೀ, ಕೊನೆಗೆ ಬಳ್ಳಿಗಳನ್ನೇ ಆಗಲಿ ಗಾಲಿಯು ಅಲ್ಲಾಡಿಸುತ್ತಿಲ್ಲ. ಕಾರಣ ಗುರು ಶರ್ವನ ಸಮಾಧಿ(ಯನ್ನು ಎಲ್ಲಿ ಕಲುಕುತ್ತೇವೆಯೋ ಎಂಬ) ಭೀತಿಯಿಂದ! ಈ ಮೌನವನ್ನು ಕಲಕಿಯೂ ಕಲಕದಂತೆ ಕೇಳಿಸಿದ ಒಂದೇ ಒಂದು ಪಿಸುಮಾತು ನಂದಿ (ಬಹುಶಃ) ಹೇಳಿದ “ತಾಯೆ, ದೇವಿ, ಶಾಂತೆ, ಅನಂತ ಗುಣಾಭರಣೆ, ಕರುಣೆ, ಶರಣು” ಅವನು ಬಾಯಿಬಿಟ್ಟು ಹೇಳಿರಲಾರ. ಸಂಜ್ಞೆಯನ್ನೂ ಮಾಡಿದಂತಿಲ್ಲ. ಏಕೆಂದರೆ ಗಿರಿಜೆ ಅದಕ್ಕೆ ಯಾವ ಉತ್ತರವನ್ನೂ ಎಂಬುದು ಇದನ್ನೂ ಅವನು ಬಾಯಿಬಿಟ್ಟು ಹೇಳಿರಲಾರ. ಸಂಜ್ಞೆಯನ್ನೂ ಮಾಡಿದಂತಿಲ್ಲ. ಏಕೆಂದರೆ ಗಿರಿಜೆ ಅದಕ್ಕೆ ಯಾವ ಉತ್ತರವನ್ನೂ ಹೇಳಲಿಲ್ಲ. ಬದಲಾಗಿ

ತೊಳಗುವ ಶಾರದ ನೀರದ
ದೊಳಗಿಂ ಮಿಂಚಿಳಿವ ತೆರೆದೆ ಗಿರಿಸುತೆ ಶಶಿಯಂ
ಡಳದಧಿದೇವತೆ ಧರಣಿ
ತಳಕ್ಕೆ ಬರ್ಪಂತೆ ಪುಷ್ಪಕದಿನಿಳಿತಂದಳ್‌||

ಇಲ್ಲಿ ಹರಿಹರನ ಪ್ರತಿಭೆ ಸೊಗಸಾಗಿ ಕೆಲಸ ಮಾಡಿದೆ. ಪಾರ್ವತಿ ಪುಷ್ಪಕದಿಂದ ಇಳಿಯಬೇಕು, ಅವಳು ಇರುವುದು ಮುಗಿಲಿನ ಎತ್ತರದಲ್ಲಿ. ಅವಳು ಇದ್ದದ್ದು ಚಂದ್ರಮಂಡಲದ ಅಧಿದೇವತೆಯಂತೆ. ಚಂದ್ರಮಂಡಲವೇ ಶುಭ್ರ, ಶ್ವೇತ, ಸುಂದರ. ಇನ್ನು ಅದಕ್ಕೆ ಒಬ್ಬಳು ಅಧಿದೇವತೆ ಇದ್ದರೆ- ಎಂದರೆ ಚಂದ್ರಮಂಡಲಕ್ಕೆ ಶುಭ್ರತೆ, ಬಿಳುಪು, ಸೌಂದರ್ಯಗಳನ್ನು ನೀಡುವ ದೇವಿ ಇದ್ದರೆ ಅವಳಂತೆ ಪಾರ್ವತಿ ಇದ್ದಾಳೆ. ಪುಷ್ಪಕದಿಂದ ಇಳಿದದ್ದೂ- ಹೊಳೆಯುತ್ತಿರುವ ಶರತ್ಕಾಲದ ಮೋಡದೊಳಗಿಂದ ಮಿಂಚು ಇಳಿಯುವಂತೆ. ಇಳಿದದ್ದೇನೋ ಸರಿ-ಆದರೆ ಪರಿಸ್ಥಿತಿಯ ಗಾಂಭೀರ್ಯ ತಿಳಿಯದ ಅವಳ ಕಾಲಂದುಗೆ ನಗ (=ಬೆಟ್ಟ)ವನ್ನೂ ಜಗವನ್ನೂ ತುಂಬುವಂತಹ ಮಧುರವಾದ ಧ್ವನಿಯನ್ನು ಹೊಮ್ಮಿಸುತ್ತದೆ: ಪುಟ್ಟ ಪಾದದ ಅಂದುಗೆಯ ಧ್ವನಿಯಾದುದರಿಂದಲೂ ಅದು ನಗವನ್ನೂ ಜಗವನ್ನೂ ತುಂಬ ಬೇಕಾದಷ್ಟಾದ್ದರಿಂದಲೂ ತಪಸ್ವಿ ಮಹಾದೇವನ ಮನಸ್ಸಿನ ಅಂಚನ್ನೂ ಅದು ಮುಟ್ಟಿರಲಾರದು!

ಆ ನಗವನ್ನೂ ಜಗವನ್ನೂ ತುಂಬಿದ್ದದ್ದು ದಿಕ್ಕುಗಳನ್ನೆಲ್ಲ ನಿರ್ಮಲಗೊಳಿಸಿದ್ದ ವಿರೂಪಾಕ್ಷನ ಪ್ರಭಾಮಂಡಲ. ಆ ಪ್ರಭಾಮಂಡಲದಲ್ಲಿ ತಪೋವೇಷದಿಂದ ತಪಸ್ವಿಯಾದ ಈಶ ತನ್ನಲ್ಲಿ ತಾನು ಮಗ್ನನಾಗಿ ಕುಳಿತಿದ್ದ ಅಂತಹವನನ್ನು ತೋರಿಸಿ. ಬಹುಶಃ ಸನ್ನೆಯಿಂದಲೇ, ಇವನ್ನು ಪ್ರೀತಿಯಿಂದ ಪೂಜಿಸು ಎಂದು ಪರ್ವತರಾಜ ಮಗಳಿಗೆ ಹೇಳಿದ.

ಶಿವನನ್ನು ನೋಡುತ್ತಲೇ ಅವಳಲ್ಲಿ ಹತ್ತು ತೆರೆದ ಭಾವನೆಗಳು. ನಾನು ಹೀಗಿರುವಾಗ ತಪಸ್ಸು ಏಕೆ ಎಂಬ ಅಹಂಕಾರ ; ನೀನೇ ಗತಿ ದಯೆಯನ್ನು ನೀಡು ಎಂಬ ಕಾರ್ಪಣ್ಯ, ಧೈನ್ಯ : ತನಗೆ ತಾನೇ ಆನಂದಮಯನಾಗಿರುವವನು ಇನ್ನು ನನ್ನನ್ನು ಏಕೆ ಗಮನಿಸುತ್ತಾನೆ ಎಂಬ ನಿರ್ವೇದ, ನಾನಾ ವಿಧವಾದ ಭೋಗಗಳಿಂದ ಇವನನ್ನು ಎಂದು ಕೂಡಿಯೇನು ಎಂಬ ಆಸೆ. ಇಷ್ಟು ಭಾವನೆಗಳನ್ನು ಮನಸ್ಸಿನಲ್ಲಿ ತಳೆದು ಅವಳು ಶಿವನನ್ನು ನೋಡಿದಳು. “ಈತ ಶಿವ, ನನ್ನ ವಲ್ಲಭ, ಇವನನ್ನು ಅರ್ಚಿಸಿ ನಾನು ಸುಖದಿಂದ ಇರುತ್ತೇನೆ” ಎಂಬ ಭರವಸೆಯನ್ನು ತಂದೆಗೆ ನೀಡಿ ಅವನು ಹೋಗಬಹುದು ಎಂಬುದನ್ನು ಸೂಚಿಸಿದಳು. ಆತ ಹೊರಟ. ಹತ್ತು ಹೆಜ್ಜೆಗಳನ್ನೂ ಇಟ್ಟ ಆದರೆ ಮಗಳ ಮೇಲಣ ಮೋಹ ಬಾಧಿಸಿತು. ಮತ್ತೆ ಹಿಂದಕ್ಕೆ ಬಂದ. “ಹೋಗುತ್ತೇನೆ” ಎಂದು ಹೇಳಿ ಮತ್ತೆ ಮತ್ತೆ ಮಗಳನ್ನು ಅಪ್ಪಿ ಹರಸಿ ಹಿಂದಕ್ಕೆ ಹೋದ.”

ಮುಂದಿನ ಪೂಜಾಕ್ರಿಯೆಗಳೆಲ್ಲಾ ಪೂರ್ಣವಾಗಿ ಮೌನದಲ್ಲೇ ನಡೆಯುತ್ತವೆ, ಉಮೆ ತನ್ನ ಸಖಿಯರಿಗೆ ತನ್ನ ತಪೋನಿಶ್ಚಯವನ್ನು ತಿಳಿಸುವ ಕೆಲವು ಮಾತುಗಳನ್ನು ಬಿಟ್ಟು ಹೂವುಗಳನ್ನು ಸಂಗ್ರಹಿಸುತ್ತಾಳೆ. ಬಗೆಬಗೆಯ ಹೂವುಗಳನ್ನು ತಿರಿದು ‘ಪರಿಮಳದ ಅಧಿದೇವತೆ ಎಂಬಂತೆ, ಕುಮುದದ ಜೊತೆಯಲ್ಲೇ ಬಂದ ಚಂದ್ರಕಳೆ ಎಂಬಂತೆ ಕಮಲದ ಮಧ್ಯದಿಂದ ಎದ್ದು ಬಂದ ಲಕ್ಷ್ಮೀ ಎಂಬಂತೆ’ ದೇವಿ ಹೂಗಳನ್ನು ಪೋಣಿಸಿ ಮಾಲೆ ಕಟ್ಟಿದಳು. ಹತ್ತು ರೀತಿಯ ಮಾಲೆಗಳನ್ನು ಕಟ್ಟಿ ದಣಿಯದಾದಳು. ತಾನು ಮಿಂದು ಅಲಂಕರಿಸಿಕೊಂಡುಚಂದ್ರಕಲೆ ಕಣ್ಣು ತೆರೆದಂತೆ ಚಂದ್ರಧರನ’ ಮುಂದೆ ಬಂದು ನಿಂತಳು. ಮುಂದಿನದೆಲ್ಲ ಮೌನವಾಗಿ ನಡೆಯುವ ಪೂಜಾಕ್ರಿಯೆಯ ವರ್ಣನೆ ಹಗಲೂ ರಾತ್ರಿಯೂ ಕಾಮನು ಎಳೆದು ಎಳೆದು ಬಿಡುತ್ತಿರುವ ಹೂವಿನ ಬಾಣಗಳು ಎಂಬಂತೆ ಅವನ ಪಾದಗಳಿಗೆ ಪುಷ್ಪಾಂಜಲಿಯನ್ನು ಸಮರ್ಪಿಸಿದಳು. ತನ್ನ ಆನಂದಾಶ್ರುಗಳಿಂದ ಶಶಿಮೌಳಿಯ ಚರಣಗಳನ್ನು ತೊಳೆದಳು. ಶಿವನ ಕತ್ತಿಗೆ ಹಾರವನ್ನು ಹಾಕುವ ನೆಪದಲ್ಲಿ ಅವನನ್ನು ‘ಮುಟ್ಟಿ ಮುಟ್ಟಿ ಪುಳಕಿಸಿದಳು!’ ಶಿವನ ಇಡೀ ದೇಹವನ್ನು ಅವಳು ಕ್ರಮಕ್ರಮವಾಗಿ ನೋಡಿದ ರೀತಿ ಹರಿಹರನ ಮತ್ತೊಂದು ಪ್ರತಿಭಾ ಸೃಷ್ಟಿ :

ಪೊಸ ಜಡೆಯೊಳ್ತೊಡಕಿ ನೊಶಲೊಳ್ನಡೆಪಾಡಿ ಕಪೋಲಭಾಗದೊಳ್
ಪಸರಿಸಿ ಲೋಚನಂಗಳೊಳಮರ್ಚಿ ತದಾಸ್ಯದೊಳೊಂದಿ ಕಂಠದೊಳ್
ಮಿಸುಗೆ ಭುಜಾಗ್ರದೊಳ್ತೊಳಗಿ ವಕ್ಷದೊಳಾಳ್ದುಕರಂಗಳೊಳ್ವಿರಾ
ಜಿಸಿ ಪದದಲ್ಲಿ ಬಿಲ್ದುವು ಭವಾನಿಯ ಮಾನಿಯ ದೈನ್ಯದೃಷ್ಟಿಗಳ್‌||

ಅವಳು ಭವಾನಿ, ಶಿವನ ಅರ್ಧಾಂಗಿಯಾಗಿದ್ದವಳು. ಈಗ ಮರುಜನ್ಮ ಪಡದು ಮತ್ತೆ ಶಿವನನ್ನೇ ಪಡೆಯಲು ತಪಸ್ಸಿನಲ್ಲಿ ನಿರತಳಾಗಿರುವವಳು. ಆದುದರಿಂದ ಅವಳು ತನ್ನ ಇಷ್ಟದೈವವನ್ನು ಪೂಜಾಮೂರ್ತಿಯನ್ನು ನೋಡಬಹುದು. ಆದರೆ ಮಾನಿ! ಅವಳು ಅಭಿಮಾನವುಳ್ಳವಳು, ಶಿವನೂ ಇಷ್ಟಪಟ್ಟು ತನ್ನನ್ನು ವರಿಸಿದ ಮೇಲೆ ಅವನನ್ನು ಕಣ್ಣುತುಂಬ ನೋಡುವ ಹಕ್ಕನ್ನು ಪಡೆಯಬೇಕಾದವಳು. ಆದ್ದರಿಂದ ಅವನನ್ನು ಪೂರ್ತಿಯಾಗಿ ಒಮ್ಮೆಲೇ ನೋಡುವಂತೆಯೂ ಇಲ್ಲ!- ಅದೂ ತನ್ನನ್ನು ಗಮನಿಸುತ್ತಿರುವ ಸಖಿಯರ ಮುಂದೆ. ಆದ್ದರಿಂದ, ಮೌನವಾಗಿ, ಯಾರು ಕಂಡರೂ ತಾನು ಶಿವನನ್ನೇನೂ ನುಂಗುವಂತೆ ನೋಡುತ್ತಿಲ್ಲ ಎಂಬುದನ್ನು ತೋರಿಸಿಕೊಳ್ಳುವಂತೆ, ಶಿವನನ್ನು ಅಂಶಂಶವಾಗಿ ನೋಡುತ್ತಿದ್ದಾಳೆ. ಆ ಮಾನಿನಿಯ ದೃಷ್ಟಿಗಳು ಶಿವನ ಸಿರೋಭಾಗದಲ್ಲಿ ನೆಲೆಸಲು ಹೋದಾಗ ಅವನ ಜಟೆಯಲ್ಲಿ ತೊಡರಿಕೊಂಡವಂತೆ. ಹರಿಹರನ ಪ್ರತಿಭಾಸೃಷ್ಟಿ ಇದು ಎಂದು ಹೇಳಿದ್ದಕ್ಕೆ ಕಾರಣ ಇಲ್ಲಿದೆ: ಕೂದಲು ಸಿಕ್ಕುಸಿಕ್ಕಾಗಿ ಜಟೆಯಾಗಿದೆಯಷ್ಟೆ ಉಮೆಯ ದೃಷ್ಟಿಗಳು ಜಟಾಭಾಗದಲ್ಲಿ ಹರಿದಾಟಲು ಹೊರಟಾಗ ಅಲ್ಲಿ ತೊಡರಿಕೊಂಡಿವ. ಅಲ್ಲಿಂದ ಹೇಗೋ ಬಿಡಿಸಿಕೊಂಡು ಹಣೆಯ ಭಾಗಕ್ಕೆ ಬಂದುವು. ಅಲ್ಲಿ ಅವು ಧಾರಾಳವಾಗಿ ಓಡಾಡಿದುವಂತೆ. ಏಕೆಂದರೆ ಶಿವನ ವಿಶಾಲವಾದ ಲಲಾಟ ಅದು. ಅಲ್ಲಿಂದ ಕಪೋಲಭಾಗದಲ್ಲಿ ದೃಷ್ಟಿಗಳು ಹರಿಡಿಕೊಂಡವು. ಮುಂದೆ ಕಣ್ಣುಗಳು ಭಾಗಕ್ಕೆ ಬಂದರೆ- ಅವು ಮುಚ್ಚಿಕೊಂಡಿವೆ. ಆದ್ದರಿಂದ ಅಲ್ಲೇ ಇವಳ ದೃಷ್ಟಿಗಳು ಮೆತ್ತಿಕೊಂಡುವು. ಶಿವನ ಕಣ್ಣುಗಳು ತೆರೆದಿದ್ದರೆ ಇವಳ ದೃಷ್ಟಿಗಳು ಅಲ್ಲಿ ನಿಲ್ಲುವ ಸಂಭವವೇ ಇಲ್ಲ, ಏಕೆಂದರೆ ಅವಳು ಮಾನಿ! ಮುಖದಲ್ಲೂ- ಬಾಯಭಾಗದಲ್ಲೂ ಅವು ಕೀಲಿಸಿ ನಿಂತುವು! ಶಿವನ ಕಂಠದಲ್ಲಿ ನೆಲೆಸಿದ ಕೂಡಲೇ ಇವಳ ದೃಷ್ಟಿಗಳು ಹೊಳೆದುವಂತೆ- ಸಹಜವೇ. ಏಕೆಂದರೆ ಸಿವನ ಕಂಠವು ಕಪ್ಪಾಗಿದೆ, ಅಲ್ಲಿ ನೆಲೆಸಿದ ವಿಷದಿಂದಾಗಿ! ಅಲ್ಲಿ ಬಿದ್ದ ಇವಳ ದೃಷ್ಟಿಗಳು ಹೊಳೆಯುತ್ತಿವೆ! ಭುಜ ಪ್ರದೇಶದಲ್ಲೂ ಅವು ಹೊಳೆದುವು. ಅವನ ಎದೆಯ ಭಾಗಕ್ಕೆ ಹೋದಕೂಡಲೇ ಇವಳ ದೃಷ್ಟಿಗಳು ಮುಳುಗಿಯೇ ಹೋದುವು. ಪದ್ಮಾಸೀನನಾಗಿ ಕುಳಿದ ಭಗವಾನ್‌ಚಂದ್ರಮೌಳಿಯು ತನ್ನ ಕೈಗಳನ್ನು ಧ್ಯಾನಮುದ್ರೆಯಲ್ಲಿ ಇಟ್ಟುಕೊಂಡಿದ್ದಾನೆ. ಅವುಗಳ ಮೇಲೆ ಬಿದ್ದ ಭವಾನಿಯ ದೃಷ್ಟಿಗಳು ಮತ್ತೆ ಹೊಳೆದುವು. ಕೊನೆಯದಂತೂ ಅತ್ಯಂತ ಉಚಿತವಾದ ನಿರೂಪಣೆ. ಶಿವನ ಪಾದಗಳನ್ನು ಕಂಡಕೂಡಲೇ ಅಲ್ಲಿ ಅವನ ದೃಷ್ಟಿಗಳು “ಬಿದ್ದುವು” ಅದರಾಚೆಗೆ ಗಮನವಿಲ್ಲ. ಸಮರ್ಪಣೆಯ ಭಾವ ಪೂರ್ಣವಾಯಿತು.

ಮುಂದಿನ ಅವಳ ಕ್ರಿಯೆಗಳೂ ಕುತೂಹಲಕಾರಿಯಾದುವೆ. ಶರ್ವನ ಸರ್ವಾಂಗದಲ್ಲೂ ಅವಳ ದೃಷ್ಟಿ ಪ್ರಸರಿಸಿದ ಮೇಲೆ ಮುಂದೇನು! ಕ್ರಿಯಾಪದಗಳ ಸರಮಾಲೆಯಿಂದ ಅವಳ ಭಾವವೈವಿಧ್ಯವನ್ನು ಕವಿ ಸೂಚಿಸಿದ್ದಾನೆ :

ಬೆಮರ್ದಳೆ ಬೆರ್ಚುವಳು ರ್ಸಿವ
ಳಮರ್ದಳ್ಪೆಱಸರ್ವಳಂಜಿ ನಿಲ್ವಳ ಸೋಂಕಲ್
ನಿಮಿರ್ವಳ್ನೆನೆವಳ್ಮುನಿವಳ್
ಸಮಸಲ್ವಳ್ಗಿರಿಜೆ ಸೆಡೆದು ಸುಯ್ವಳ್ಕಾಯ್ವಳ್

ಉತ್ಸಾಹ, ಭಯ, ಸಂಕೋಚ, (ತನ್ನ ಬಗೆಗೇ?) ಕೋಪ-ಕೊನೆಗೆ ನಿಟ್ಟುಸಿರು ತಾಪ-ಇವು ಅವಳನ್ನು ಹಿಡಿದು ಬಿಟ್ಟು ಹಿಡಿದು ಬಿಟ್ಟು ಮಾಡುತ್ತಿವೆ. ಮುಂದಿನ ಒಂದು ಕಂದಪದ್ಯದಲ್ಲಿ ಪಾರ್ವತಿಯ ಮಸ್ಥಿತಿಯ ಎರಡು ಅತಿರೇಕಗಳನ್ನು ವರ್ಣಿಸಿದ್ದಾನೆ. ಹರಿಹರ. ಶಿವನ ಸುಂದರವಾದ, ಕಾಂತಿಮಯವಾದ, ಸುಕುಮಾರವಾದ ಅವಯವಗಳನ್ನು ನಿರೀಕ್ಷಿಸಿ (ಅವನಲ್ಲಿ ಅನುರಕ್ತಳಾಗಿ ಬಂದಿರುವ ಗಿರಿಜೆ) ನಲಿಯುತ್ತಾಳೆ. ಆದರೆ ಸಂತೋಷದ ಅಧಿಕ್ಯ ಚಿರಾಯುವಾದದ್ದು. ಏಕೆಂದರೆ ಶಿವನ ವೈರಾಗ್ಯ ಬೆಟ್ಟದಂತೆ ಅಚಲವಾದದ್ದು. ಅದನ್ನು ನೆನೆದು, ಭಯದಿಂದ ನಡುಗಿ, ಆಕೆ ಸಿಡಿಮಿಡಿಗೊಂಡಳು! ಶಿವನನ್ನು ಹರಿಹರ ನಿರ್ದೇಶಿಸುವ ಪದವನ್ನು ಗಮನಿಸಿ- “ತಾರಾಚಳನಾಥ” ಬೆಳ್ಳಿಯ ಬೆಟ್ಟದ ಒಡೆಯ ಅವನು. ಅವನ ವೈರಾಗ್ಯವೂ ಅಚಲವಾದದ್ದು- ‘ತಾರಾಚಳನಾಥನ ಘನ ವೈರಾಗ್ಯ’.

ಮುಂದೆಯೂ ಮಾತಿಲ್ಲ. ನಗೆ, ಕಣ್ಣೀರು, ಬಳಲಿಕೆ, ಇವೇ ಕ್ರಿಯಾರವಾಗಿರುವುವು-ಇವೆಲ್ಲಾ ತೀರಿದಾಗ ಗಿರಿಜೆ ಹೊಸ ಹೊಸ ಹೂಗಳನ್ನು ತಂದು ತನ್ನ ಆರಾಧ್ಯಮೂರ್ತಿಯನ್ನು ಪೂಜಿಸುತ್ತಾಳೆ. ಆ ತಪೋಮೂರ್ತಿಯೇ ಕುಳಿತಿದ್ದಾನೆ. ನಿಶ್ಚಲನಾಗಿ, ಏಕಕಾಲದಲ್ಲಿ ಚಂದ್ರಸೂರ್ಯರಂತೆ!”

ತಪಸ್ಸಿಗೆ ಬೇಕಾದದ್ದು ಮೌನದ ಆವರಣ. ಅದನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ ಹರಿಹರ. ಸಾಮಾನ್ಯವಾಗಿ ಭಕ್ತಿ, ಪೂಜೆಗಳ ಸಂದರ್ಭದಲ್ಲಿ ತನ್ನನ್ನು ತಾನು ಮರೆತು ಹೆಚ್ಚು ಎನ್ನುವಷ್ಟು ಮಾತಿನ ಭರವನ್ನು ತೋರಿಸುವ ಈ ಕವಿ ಜಗದೀಶ್ವರನನ್ನು ಒಲಿಸಲು ಜಗನ್ಮಾತೆ ತಾನು ಪೂಜಾನಿರತಳಾಗಿರುವುದನ್ನು ವರ್ಣಿಸುವ ಸಂದರ್ಭದಲ್ಲಿ ತನಗೆ ತಾನೇ ಸಂಯಮದ ವ್ರತವನ್ನು ನೀಡಿಕೊಂಡು ಅಭಿನಂದನೀಯವಾದ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದ್ದಾನೆ.