ಕನ್ನಡಿಗರಿಗೆ ಅನೇಕ ‘ಮೊದಲು’ಗಳನ್ನು ನೀಡಿದ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಕನ್ನಡಿಗರಿಗೆ ಮೊದಲನೆಯ ಸಾಹಿತ್ಯ ಚರಿತ್ರೆಯನ್ನು ನೀಡಿದ್ದಾರೆ. ಅದು ಸ್ವಲ್ಪ ಭಾಗದವರೆಗೆ ಮಾತ್ರ ನಡೆಯಿತು ಎಂಬುದೇ ಬೇಸರದ ಸಂಗತಿ.

ಶ್ರೀಯುತರಿಗೆ ಮುಂಚೆ ಸಾಹಿತ್ಯ ಚರಿತ್ರೆಯ ರಚನೆಯ ಪ್ರಯತ್ನ ನಡೆದಿತ್ತು. ಕನ್ನಡಕ್ಕೆ ತುಂಬ ಸೇವೆ ಸಲ್ಲಿರುವ ಜರ್ಮನ್‌ವಿದ್ವಾಂಸರಾದ ರೆ. ಎಫ್‌. ಕಿಟ್ಟಲ್‌ರವರು ೧೮೭೫ರಲ್ಲಿ ನಾಗವರ್ಮನ ಛಂದೋಂಬುಧಿಯನ್ನು ಪ್ರಕಟಿಸಿದ್ದರಷ್ಟೆ ಆ ಗ್ರಂಥದ ಪೀಠಿಕೆಯಾಗಿ ಅದುವರೆಗೆ ತಮಗೆ ತಿಳಿದಿದ್ದ ಕವಿಗಳ ವಿಷಯವಾಗಿ ಒಂದು ಪ್ರಬಂಧವನ್ನು ಬರೆದಿದ್ದಾರೆ. ಶ್ರೀಯವರ ಮಾತಿನಲ್ಲಿ: “ಕನ್ನಡ ಸಾಹಿತ್ಯದ ಚರಿತ್ರೆಯನ್ನು ಸಾಧಿಸುವುದಕ್ಕೆ ಇದೇ ಮೊದಲು ಆಯುಧ ಪೂಜೆ.”

ಅನಂತರ ಲೂಯಿಸ್‌ರೈಸ್‌ಅವರು ಭಟ್ಟಾಕಳಂಕನ ಶಬ್ದಾನುಶಾಸನಕ್ಕೆ ಪೀಠಿಕೆಯಾಗಿ ೧೮೯೦ರಲ್ಲಿ ಒಂದು ಸಣ್ಣ ಸಾಹಿತ್ಯ ಚರಿತ್ರೆಯನ್ನು ರಚಿಸಿದರು. ಅಲ್ಲದೆ ಮೈಸೂರು ಗೆಜೆಟಿಯರ್‌ಪುಸ್ತಕದಲ್ಲಿ ಸಂಕ್ಷೇಪವಾಗಿ ಕನ್ನಡ ಭಾಷೆ, ಸಾಹಿತ್ಯಗಳ ವಿಷಯವಾಗಿ ಒಂದು ಅಧ್ಯಾಯವನ್ನು ಸೇರಿಸಿದರು.

ಮುಂದೆ, ಮತ್ತೆ ಶ್ರೀಯವರ ಮಾತಿನಲ್ಲಿ : “ಕಿಟೆಲ್‌ಮತ್ತು ರೈಸ್‌ಸಾಹೇಬರುಗಳು ಹಾಕಿದ ತಳಪಾಯದ ಮೇಲೆ ಎಸ್‌. ಜಿ. ನರಸಿಂಹಾಚಾರ್ಯರು ಮತ್ತು ಆರ್‌. ನರಸಿಂಹಾಚಾರ್ಯರು ಅನೇಕ ಹಸ್ತಪ್ರತಿಗಳ, ಶಾಸನಗಳ ರಾಜವಂಶಾವಳಿಗಳ ಮತ್ತು ಗುರು ಪರಂಪರೆಗಳ ಶೋಧನೆಗಳಿಂದ ಬಹು ಶ್ರಮಪಟ್ಟು ಬೇಕಾದಷ್ಟು ಹೊಸ ವಿಷಯಗಳನ್ನೂ ಎಷ್ಟೋ ಮಂದಿ ಹೊಸ ಕವಿಗಳನ್ನೂ ಕಂಡುಹಿಡಿದು ಕರ್ನಾಟಕ ಕವಿಚರಿತೆಯ ಮೊದಲನೆಯ ಭಾಗವನ್ನು (೧೯೦೭) ರಚಿಸಿದರು. ಈಚೆಗೆ ತಮ್ಮ ಸಹಕರ್ತೃಗಳು ಗತಿಸಿದ ಮೇಲೆ, ಆರ್‌. ನರಸಿಂಹಾಚಾರ್ಯರು ತಾವೊಬ್ಬರೇ ಕನ್ನಡದ ಮೇಲಿನ ಪ್ರೇಮದಿಂದ ಹಿಡಿದ ಕಾರ್ಯವನ್ನು ಬಿಡದೆ, ಎರಡನೆಯ ಭಾಗವನ್ನು (೧೯೧೯) ಪೂರೈಸಿ, ಮೂರನೆಯ ಭಾಗವನ್ನೂ ಪ್ರಕಟಿಸಿ ಕವಿಚರಿತೆಯನ್ನು ಪೂರ್ಣಗೊಳಿಸುವುದರಲ್ಲಿದ್ದಾರೆ. ಈ ಮಹನೀಯರ ಗ್ರಂಥದ ಬಲವಿಲ್ಲದೆ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕಾಲಿಡಲು ಯಾರಿಗೂ ಸಾಧ್ಯವಿಲ್ಲ. ಇವರ ಗ್ರಂಥದ ಆಧಾರದ ಮೇಲೆ ಲ್ಯೂಯಿಸ್‌ರೈಸ್‌ಸಾಹೇಬರ ತಮ್ಮಂದಿರಾದ ಇ. ಪಿ. ರೈಸ್‌ಸಾಹೇಬರು ಇಂಗ್ಲಿಷ್‌ನಲ್ಲಿ ಸೂಕ್ಷ್ಮವಾಗಿ ಆಯಾ ಮತ ವಿಷಯಗಳನ್ನೂ ಕಾಲಗುಣವನ್ನೂ ತಿಳಿಸಿ ಮುಖ್ಯ ಕವಿಗಳನ್ನು ನಿರ್ದೇಶಿಸಿ ಒಂದು ಸಣ್ಣ ಪುಸ್ತಕವನ್ನು ಬರೆದಿರುತ್ತಾರೆ. (೧೯೧೫, ೧೯೨೧). ಇನ್ನೂ ಕೆಲವು ಪಂಡಿತರು ಪರಿಷತ್ಪತ್ರಿಕೆ ಪ್ರಬುದ್ಧ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಕವಿಗಳ ಕಾವ್ಯ ಶೈಲಿ, ಯೋಗ್ಯತೆ ಮೊದಲಾದ ವಿಷಯಗಳನ್ನು ಕುರಿತು ವಿಮರ್ಶೆ ಮಾಡುತ್ತಾ ಇರುತ್ತಾರೆ.”

ಕಿಟ್ಟೆಲ್‌ಮತ್ತು ರೈಸ್‌ಸಹೋದರರ ಸಂಕ್ಷಿಪ್ತ ಸಾಹಿತ್ಯ ಚರಿತ್ರೆಗಳು ಇಂಗ್ಲಿಷ್‌ನಲ್ಲಿವೆ. ರಾ. ನರಸಿಂಹಾಚಾರ್ಯರ ಕೃತಿ-ಬೃಹತ್ಪ್ರಮಾಣವಾದ್ದರೂ-ಅದು ಕವಿ ಚರಿತ್ರೆಯೇ ಹೊರತು ಸಾಹಿತ್ಯ ಚರಿತ್ರೆಯಲ್ಲ. ಹೀಗಾಗಿ ಕನ್ನಡದಲ್ಲಿ ಕನ್ನಡ-ಸಾಹಿತ್ಯ ಚರಿತ್ರೆಯನ್ನು ರಚಿಸುವ ಮೊದಲ ಪ್ರಯತ್ನ ಶ್ರೀಯವರದ್ದೇ.

ಶ್ರೀಯವರು ತಮ್ಮ ಉದ್ದೇಶವನ್ನು ಸ್ಪಷ್ಪವಾದ ಮಾತುಗಳಲ್ಲಿ ಹೇಳಿದ್ದಾರೆ:

“ಈ ಭಾಷಾ ಪ್ರೇಮಿಗಳೆಲ್ಲರ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿ, ಈ ಸಣ್ಣ ಪುಸ್ತಕ ಭಾಗವನ್ನು ಬರೆಯಲಾಗಿದೆ. ಇದರಲ್ಲಿ ದೊಡ್ಡ ಗ್ರಂಥದಲ್ಲಿ ಹೇಳಬಹುದಾದ ಕವಿಗಳನ್ನೆಲ್ಲಾ ಹೇಳಲಾಗುವುದಿಲ್ಲ. ಕಾವ್ಯ, ಸಾಹಿತ್ಯ ಎಂಬ ಶಬ್ದಗಳ ಶ್ಲಾಘ್ಯವಾದ ಅರ್ಥದ ಮೇಲೆ ದೃಷ್ಟಿಯಿಟ್ಟು ವಿದ್ಯಾರ್ಥಿಗಳ ಪ್ರಥಮ ಪರಿಚಯಕ್ಕಾಗಿ, ಪ್ರಸಿದ್ಧರಾಗಿಯೂ, ಬೇರೆ ಬೇರೆ ಮತಗಳಿಗೆ ಪ್ರತಿನಿಧಿಗಳಾಗಿಯೂ ಯಾವುದಾದರೂ ಒಂದು ಕಾರಣದಿಂದ ಗಣ್ಯರಾಗಿಯೂ ಇರುವ ಕವಿಗಳನ್ನು ಮಾತ್ರ ಆಯ್ದುಕೊಂಡು, ಒಟ್ಟಿನ ಮೇಲೆ ಕನ್ನಡ ಸಾಹಿತ್ಯದ ಬೆಳವಣಿಗೆ, ವಿಭಾಗಗಳು, ಸ್ವರೂಪ, ಯೋಗ್ಯತೆ ಇವುಗಳನ್ನು ಸ್ಪಷ್ಟಪಡಿಸಬೇಕೆಂದು ಪ್ರಯತ್ನಪಟ್ಟಿರುತ್ತದೆ. ಕಾವ್ಯವಿಮರ್ಶೆಯ ಭಾಗದಲ್ಲಿ ವ್ಯವಸ್ಥೆಯಾಗಿ ಎಲ್ಲರೂ ಒಪ್ಪಬಹುದಾದ ಅಭಿಪ್ರಾಯಗಳು ಪ್ರಚಾರದಲ್ಲಿಲ್ಲವಾದ್ದರಿಂದಲೂ, ಹೊಸದಾಗಿ ಸಿಕ್ಕಿರುವ ನಿಕ್ಷೇಪವನ್ನು ಕನ್ನಡಿಗರು ಇನ್ನೂ ಆಶ್ಚರ್ಯವನ್ನು ಹೊಗಳಿಕೊಳ್ಳುವ ಸಂಭ್ರಮದಲ್ಲಿಯೇ ಇರುವುದರಿಂದಲೂ, ಪೂರ್ವದ ಸಂಪ್ರದಾಯವಾದ ಸಂಸ್ಕೃತ ಕಾವ್ಯಲಕ್ಷಣ ರುಚಿಗೂ ಈ ಕಾಲದ ಇಂಗ್ಲಿಷ್ ಕಾವ್ಯಾಭ್ಯಾಸದಿಂದ ಉಂಟಾಗಿರುವ ಹೊಸರುಚಿಗೂ ಬಹಳ ತಾರತಮ್ಯವಿರುವುದರಿಂದಲೂ ಈ ಭಾಗಕ್ಕೆ ಇಲ್ಲಿ ಹೆಚ್ಚಾಗಿ ಪ್ರವೇಶ ಮಾಡುವುದು ಸೂಕ್ತವಾಗಿ ಕಾಣಿಸಲಿಲ್ಲ.”

ಸಾಹಿತ್ಯ ಎಂದರೇನು? ಶ್ರೀಯವರ ಅಭಿಪ್ರಾಯದಲ್ಲಿ ‘ಸಾಹಿತ್ಯ’ ಎಂದು ಕರೆಯಿಸಿಕೊಳ್ಳಬಹುದಾದ ಬರವಣಿಗೆಯ ಲಕ್ಷನ ಇದು:

“ಒಂದು ಭಾಷೆಯಲ್ಲಿ ಬರೆದ ಬರವಣಿಗೆಯೆಲ್ಲಾ ಸಾಹಿತ್ಯವೆಂಬ ಹೆಸರಿಗೆ ಅರ್ಹವೆ? ಎಂದು ವಿಚಾರಮಾಡಿದರೆ, ಕೇವಲ ಜ್ಞಾನ ಪ್ರಸಾರಣೆಗಾಗಿ, ಪಾಂಡಿತ್ಯ ಪ್ರದರ್ಶನಕ್ಕಾಗಿ ಬರೆದ ಗ್ರಂಥಗಳಿಗಿಂತಲೂ, ವಿಷಯವೇನೆ ಆಗಿರಲಿ, ಸರಸ್ವತಿ ಪ್ರಸಾದವನ್ನು ಪಡೆದು ರಸೋತ್ಪಾದನಶಕ್ತಿ ಕಲ್ಪನಾಶಕ್ತಿಗಳಿಂದ ಕೂಡಿ, ತನ್ನದೇ ಒಂದು ಪ್ರತಿಭೆಯೂ ರೀತಿಯೂ ವ್ಯಕ್ತಿತ್ವವೂ ತನ್ನ ಕಾವ್ಯದಲ್ಲಿ ಉಕ್ಕುವಂತೆ ಮಾಡಿ, ಓದುವರ ಹೃದಯವನ್ನು ಹೊಕ್ಕು, ಅಲ್ಲಿ ಸೌಂದರ್ಯದ, ಆನಂದದ ; ಅನುಭವಗಳನ್ನುಂಟು ಮಾಡಬಲ್ಲ ಕವಿಗಳ ಆ ಗ್ರಂಥಗಳೇ ಸಾಹಿತ್ಯವೆನಿಸಿಕೊಳ್ಳುವುದಕ್ಕೆ ಯೋಗ್ಯವಾದವುಗಳೆಂದು ಹೇಳಬೇಕಾಗುತ್ತದೆ. ಇಂಥಾ ಕವಿಗಳು ಮಹಾಕವಿಗಳೇ ಆಗಿರಬೇಕೆಂಬ ನಿಯಮವಿಲ್ಲ; ಇಂಥ ಕಾವ್ಯಗಳು ಉತ್ಕೃಷ್ಟ ಕಾವ್ಯಗಳೇ ಆಗಿರಬೇಕೆಂಬ ನಿರ್ಬಂಧವಿಲ್ಲ. ಕವಿ ನಿಜವಾಗಿಯೂ ಕವಿಯಾಗಿದ್ದರೆ ಸರಿ ; ಕಾವ್ಯ ನಿಜವಾಗಿಯೂ ಕಾವ್ಯಜಾತಿಗೆ ಸೇರಿದ್ದರೆ ಸಾಕು. ಆದರೆ ಶುಷ್ಕಪಾಂಡಿತ್ಯವೂ ಭಾಷಾಡಂಬರವೂ, ಸಾಧಾರಣ ಭಾವಗಳೂ, ಬರಿಯ ತಿಳಿವಳಿಕೆಯ ಸಂಗತಿಗಳೂ, ಎಷ್ಟೇ ದೊಡ್ಡದಾದ ಗ್ರಂಥವನ್ನೂ ಸಾಹಿತ್ಯವೆನ್ನಿಸಲಾರವು.”

ಶಾಸ್ತ್ರ ವಿಷಯಗಳನ್ನು ಸ್ವಲ್ಪಮಟ್ಟಿಗೆ ಹೇಳುವುದಾಗಿ ಶ್ರೀಯವರು ಹೇಳಿದ್ದಾರೆ.

ಜೈನ, ವೀರಶೈವ ಮತ್ತು ವೈಷ್ಣವ ಧರ್ಮಗಳ ಪ್ರಾಧಾನ್ಯದಿಂದ ರಚಿತವಾದ ಸಾಹಿತ್ಯದ ಘಟ್ಟಗಳನ್ನು ಗುರುತಿಸಿ ನಾಲ್ಕನೆಯದಾದ ಪಾಶ್ಚಾತ್ಯರ ಸಾಹಿತ್ಯದ ಪ್ರಭಾವದಿಂದ ಹುಟ್ಟಿದ ಆಧುನಿಕ ಘಟ್ಟವನ್ನೂ ಅದಕ್ಕೆ ಸೇರಿಸಿ ಶ್ರೀಯವರು ತಮ್ಮ ಸಾಹಿತ್ಯ ವಿಭಜನೆಯ ಕ್ರಮವನ್ನು ಮುಕ್ತಾಯ ಮಾಡಿರುವ ರೀತಿ ಇದು :

“ಈ ನಾಲ್ಕು ಘಟ್ಟಗಳಲ್ಲಿ ಹರಿದುಬಂದಿರುವ ನಮ್ಮ ಕನ್ನಡ ಸಾಹಿತ್ಯವನ್ನು ನಮ್ಮ ಕನ್ನಡ ನಾಡಿನ ಏರುತಗ್ಗಿನ ಘಟ್ಟಗಳಲ್ಲಿ ನುಗ್ಗಿ ಬರುವ ಕಾವೇರಿ ನದಿಗೆ ಹೋಲಿಸಬಹುದು. ಅದರಂತೆಯೇ, ನಮ್ಮ ಸಾಹಿತ್ಯದ ಮೂಲವೂ ಕಾಡಿನಲ್ಲಿ ಅಡಗಿಹೋಗಿದೆ. ಆ ಬಳಿಕ ಉಪನದಿಗಳು ಒಂದೊಂದಾಗಿ ಸೇರುವಂತೆ, ಜೈನ ಸಾಹಿತ್ಯ ಪ್ರವಾಹವೂ, ವೀರಶೈವ ಸಾಹಿತ್ಯ ಪ್ರವಾಹವೂ, ಬ್ರಾಹ್ಮಣ ಸಾಹಿತ್ಯ ಪ್ರವಾಹವೂ, ಒಂದಾದಮೇಲೊಂದು, ಒಂದರ ಕೂಡ ಮತ್ತೊಂದು ಬಂದು ಮಿಳಿತವಾಗಿ ಮೂರು ಬಣ್ಣದ ನೀರುಳ್ಳ ದೊಡ್ಡ ಹೊಳೆಯಾಗಿದೆ. ಕಡೆಗೆ ಈಗ ಇಂಗ್ಲಿಷ್‌ಸಾಹಿತ್ಯ ದೃಷ್ಟಿಯಿಂದ ಹುಚ್ಚು ಹೊಳೆಯಾಗಿ ಮೊರೆಯುತ್ತ, ಬಂಡೆಗಳ ನಡುವೆ ನೂರು ಕವಲಾಗಿ ಒಡೆಯುತ್ತ, ಜನ್ಮಭೂಮಿಯ ಘಟ್ಟಗಳನ್ನು ತೊರೆದು ದಿವ್ಯ ವೇಗದೊಡನೆ ಕೆಳಕ್ಕೆ ಧುಮುಕಿ, ಸ್ವತಂತ್ರವಾಗಿ, ವಿಸ್ತಾರವಾಗಿ, ಬಯಲುನಾಡಿನಲ್ಲಿ ಪಯಿರ ಸಮೃದ್ಧಿಯನ್ನು ಪಡೆದು ವಿಹಾರಮಾಡಲು ತವಕಿಸುತ್ತದೆ.”

ಅವರದು ಕವಿ ಹೃದಯ. ಪಾಂಡಿತ್ಯದ ಪ್ರಭಾವ ಎಷ್ಟೇ ಇರಲಿ, ಶುದ್ಧ ಶಾಸ್ತ್ರ ಸೃಷ್ಟಿ ಅವರಿಂದ ಸಾಧ್ಯವೇ ಇರಲಿಲ್ಲ. ಮೇಲಿನ ಅವರ ಹೇಳಿಕೆಯಿಲ್ಲದೆ ಮುಂದಿನ ಅವರ ವಿಮರ್ಶಾ ವಿಧಾನವೂ ಈ ಹೇಳಿಕೆಯನ್ನೇ ಸಮರ್ಥಿಸುತ್ತದೆ.

ಪಂಪನನ್ನು ಕುರಿತು ಬರೆಯ ಹೊರಟವರೇ ಶಾಸ್ತ್ರದ ನಿಷ್ಕೃಷ್ಪ ಭಾಷೆಯನ್ನು ಕೈಬಿಟ್ಟು ಕಾವ್ಯದ ಉತ್ಸಾಹದ ಶೈಲಿಯನ್ನು ಅವಲಂಬಿಸುತ್ತಾರೆ:

“ಕನ್ನಡ ಕವಿಗಳಿಗೆಲ್ಲಾ ಆದಿಕವಿ. ಸಾಮ್ರಾಟ”, “ಪಸರಿಪ ಕನ್ನಡಕ್ಕೊಡೆಯ ನೊರ್ವನೆ ಪಂಪ.”, ಈತನನ್ನು ಹೆತ್ತು ಕನ್ನಡ ಮಾತೆ ಮಹಾಕವಿಮಾತೆಯಾದಳು. ಈತನ ಕಾವ್ಯಗಳು ಹಿಂದಿನ ಕಾವ್ಯಗಳನ್ನೆಲ್ಲಾ “ಇಕ್ಕಿ ಮೆಟ್ಟಿದುವು”- ಮುಂದಿನ ಕಾವ್ಯಗಳಿಗೆಲ್ಲಾ ಬಟ್ಟೆದೋರಿದುವು. (ಪುಟ ೪೩)

“ಒಂಬತ್ತು ತಿಂಗಳಲ್ಲಿ ಕನ್ನಡತಾಯಿ ಪಂಪಾಪತಿಯ ಪ್ರಸಾದದಿಂದ ಎಲ್ಲರ ಹೃದಯದಿಂದಲೂ ಹೊಮ್ಮುವ ಬಿರುದಿನ ಕವಿರತ್ನವನ್ನು ಕವಿಚಕ್ರವರ್ತಿಯನ್ನು ಹಡೆದಳು.” ಪಂಪನ ಕೆಲವು ಪದ್ಯಗಳನ್ನು ಉದ್ಧರಿಸಿ ಅವನ ವ್ಯಕ್ತಿತ್ವವನ್ನು ಚಿತ್ರಿಸುತ್ತಾರೆ:

ವ್ಯಾಸ ಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ; ಕವಿ
ವ್ಯಾಸನೆನೆಂ ಗರ್ವಮೆನಗಿಲ್ಲ. ಗುಣಾರ್ಣವನೊಳ್ಪುಮನ್ಮನೋ
ವಾಸಮನೆಯ್ದೆ ಪೇಳ್ದಪೆನದಲ್ಲದೆ, ಗರ್ವಮೆ ದೋಷವು. ಅಳ್ತಿಗಂ
ದೋಷಮೆ? ಕಾಣಿಸೆ, ಎನ್ನರಿವ ಮಾಲ್ಕೆಯೆ ಪೇಳ್ದೆನಿದಾವ ದೋಷವೋ

ಕವಿತೆಯೊಳಾಸೆಗೆಯ್ವ ಫಲಮಾವುದೊಪೂಜೆ ನೆಗೆಳ್ತೆ, ಲಾಭಮೆಂ
ಬಿವೆ ವಲಮ್‌: ಇಂದ್ರಪೂಜೆ, ಭುವನಸ್ತುತಮಪ್ಪ ನೆಗಳ್ತೆ, ಮುಕ್ತಿ ಸಂ
ಭವಿಸುವ ಲಾಭಮೆಂಬಿವೆ ಜಿನೇಂದ್ರಗುಣಸ್ತುತಿಯಿಂದೆ ತಾಮೆ ಸಾ
ರವರೆ? ಪೆಱರೀವುದೇಂ, ಪೆರರ ಮಾಡುವುದೆಂ, ಪೆರರಿಂದಮಪ್ಪುದೇಂ?

ಅದನ್ನು ಹೇಳಿ :

“ಇಷ್ಟು ಪದಗಳಲ್ಲಿಯೇ ಪಂಪನ ಗಂಭೀರ ಮೂರ್ತಿ ನಮ್ಮ ಕಣ್ಣೆದುರಿಗೆ ಎದ್ದು ನಿಲ್ಲುತ್ತದೆಯಲ್ಲವೆ? ಕರ್ನಾಟಕದ ಸ್ವರ್ಣಯುಗಕ್ಕೆ ತಕ್ಕ ಆತ್ಮ ಜ್ಯೋತಿ, ನಡೆ ನುಡಿ, ಆಕಾರ, ಕೆಚ್ಚು

ಇನ್ನು ವಿಕ್ರಮಾರ್ಜುನ ವಿಮರ್ಶೆ ಎಂಬ ತಲೆಬರಹವನ್ನು ಬರೆದು ಮುಗಿಸುವ ಮೊದಲೇ ಶ್ರೀಯವರಲ್ಲಿನ ವಿಮರ್ಶಕನಿಗಿಂತ ಮುಂದಾಗಿ ಕವಿ ಮೈಕೊಡವಿ ಎದ್ದು ನಿಲ್ಲುತ್ತಾನೆ. ಹಾಡ ತೊಡಗಿ ಶ್ರುತಿಗಾಗಿ ತಂಬೂರಿಯನ್ನು ಮಿಡಿಯುತ್ತಾನೆ :

“ಆದಿಪುರಾಣದಲ್ಲಿ ಮಾಣಿಕ, ಜಿನೇಂದ್ರ ಬಿಂಬವನ್ನು ಕಡೆದು, ದಿವ್ಯಚೈತ್ಯವನ್ನು ಕಟ್ಟಿ ಪಂಪನ ಕೈ ಸೋಲಲಿಲ್ಲ; ಒಡನೆಯೇ ಮಹಾಭಾರತದ ಗಾಂಡೀವವನ್ನು ಬಾಗಿಸಿ, ಕನ್ನಡ ಕಲಿಗಳ ಕ್ಷತ್ರೀಯ ತೇಜಸ್ಸನ್ನು ಕನ್ನಡ ರಾಯರ ಸದ್ಗುಣಾವಳಿಗಳನ್ನೂ ಕನ್ನಡ ನಾಡಿನ ಅಂದಚೆಂದಗಳನ್ನೂ ಅದರಲ್ಲಿ ಹೂಡಿ, ತಿಳಿಯಾದ, ಎಲ್ಲರೂ ತಿಳಿಯಬಹುದಾದ, ತಿರುಳು ಗನ್ನಡದಲ್ಲಿ ಭಾರತ ಭೂಮಿಯ ಅತ್ಯುತ್ತಮವಾದ ಇತಿಹಾಸವನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಒಪ್ಪಸಿದನು. ಜಿನಪಾದಪದ್ಮವನ್ನು ಹೃದಯದಲ್ಲಿಟ್ಟು ಸಂಸಾರ ಸಮುದ್ರದ ಹುಚ್ಚು ತೆರೆಗಳನ್ನು ಅಡಗಿಸಿ, ಮುಕ್ತಿಸೋಪಾನವನ್ನು ಏಕ ಮನಸ್ಕನಾಗಿ ಹತ್ತಿದನು- ಅಲ್ಲಿ; ಇಲ್ಲಿ, ಧರ್ಮಸಾಮ್ರಾಜ್ಯದಿಂದ ಒಂದು ಮೆಟ್ಟಿಲಿಳಿದು, ಸಂಸಾರವನ್ನು ಗಂಭೀರಧ್ವನಿಯಿಂದ ಲೋಕಕ್ಕೆ ಸಾರಿದನು. ತನ್ನ ರಾಜನ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಿ ಆತನ ಮನ್ನಣೆಯನ್ನು ಪಡೆದನು- ಉದ್ದೇಶದಿಂದಲ್ಲ; ಉಜ್ವಲ ಕರ್ನಾಟಕ ಭಕ್ತಿಯ ಅನುಷಂಗಿಕ ಫಲವಾಗಿ. ಆತನ ಕೆಚ್ಚನ್ನು ಆಗಲೇ ಬಲ್ಲೆವಲ್ಲವೆ?-’

ಪೆರರೀವುದೇನೆ? ಪೆರರ ಮಾಡುವುದೇನೆ? ಪೆರರಿಂದಮಪ್ಪುದೇನೆ?”

“ಅರಿಕೇಸರಿಯ ದಾಕ್ಷಿಣ್ಯದಲ್ಲಿ ಭಾರತದ ಕವಿ ಜಾರಿದನು: (ಕಣ್ಣು ಬಿಟ್ಟುಕೊಂಡೇ ಜಾರಿರುವನು.)” ಜಾರಿದವನು
ಪನಲ್ಲ, ಭಾರತದ ಪಂಪ ಮಾತ್ರ.

ಕರ್ಣನ ಪಾತ್ರವನ್ನು ಮೆಚ್ಚಿ ಹಾಡಿ ಹೊಗಳುತ್ತಾ ಈ ಪದ್ಯಗಳನ್ನು ಎತ್ತಿ ಹೇಳುತ್ತಾರೆ :

ಭಯಮುಂ ಲೋಭಮುಮೆಂಬ ತಮ್ಮುತೆರಡುಂ ಪಾಪಕ್ಕೆ ಪಕ್ಕಾಗೆ ಪಾ
ಳಿಯನೊಕ್ಕಾಳದನ ಗೆಯ್ದ ಸತ್ಕೃತಮುಮಂ ಪಿಂತಿಕ್ಕಿ ಜೋಳಕ್ಕೆ
ಪ್ಪಿಯುಮಿನೆ ಬಾಳ್ವುದೆ ಪೂಣ್ದು ನಿಲ್ಲದಿಕೆಯಿಂ ಬಾಳ್ವಂತು ವಿಖ್ಯಾತ ಕೀ
ರ್ತಿಯವೋಲೀಯೊಡಲಬ್ಬೆ ಪೇಳಿಮೆನಗೇಂ ಕಲ್ಪಾಂತರ ಸ್ಥಾಯಿಯೇ?

ಮೀಂಗುಲಿಗನೆನಾಗಿಯುಮಣ
ಮಾಂ ಗುಣನೆ ಬಿಸುಟೆನಿಲ್ಲ ನಿಮಗಂ ಮಗನಾ
ದಂಗೆನಗೆ ಬಿಸುಡಲಕ್ಕುಮೆ
ನೀಂ ಗಳ ಪಂಬಲನೆ ಬಿಸುಡಿಮಿನ್ನೆನ್ನೆಡೆಯೊಳೆ

ಅಳಿದೆಂ ನೆಟ್ಟನೆ ಬೆಟ್ಟನಿಂತು ನುಡಿವೈ ನೀಂ ಕಂದ ಪೋಗಿಂದೆ ಕೆ
ಟ್ಟಳಿದತ್ತಾಗದೆ ಸೋಮವಂಶಮೆನಗಿವೆ ಬಾಳ್ವಾಸ ಯಲ್ಲಿತ್ತೊ ಬಿ
ಟ್ಟುಳಿದೆಂ ಮತ್ತಿನ ಮಕ್ಕಳಾಸೆಯುಮನಾನೆಂದಳ್ಗೆ. ಶೋಕಾಗ್ನಿ ಪೊಂ
ಪುಳಿವೋಗುತ್ತಿರೆ ಕರ್ಣನೆಂದನಿನಿತೇನೆ ಪೋಳಬ್ಬೆ ಚಿಂತಾಂತರಂ.

ಪಿಡಿಯೆಂ ಪುರಿಗಣಿಯಂ ನರ
ನೆಡೆಗೊಂಡೊಡಮುಳಿದ ನಿನ್ನ ಮಕ್ಕಳನಿನ್ನೇ
ರ್ದೊಡಮಳಿಯೆಂ ಪೆರ್ಜಸಮನೆ
ಪಿಡಿದೆನ್ನನೆ ರಣದೊಳಲಿವೆನಿರದಡಿಯೆತ್ತಿಂ.

ಅನಂತರ ವಿಮರ್ಶೆ :

ಇದಲ್ಲವೆ ಮಹಾಕವಿಯ ಬರವಣಿಗೆ, ತಿಳಿಯಾದ ಕನ್ನಡ ಶೈಲಿ, ಗಂಭೀರಭಾವ ಪ್ರವಾಹ, ಒಂದು ಮಾತು ಹೆಚ್ಚಿಲ್ಲದ ವಾಕ್ಸಂಯಮ, ಸ್ವಾಭಾವಿಕತೆಯನ್ನು ಸ್ಪಷ್ಟವಾಗಿ ಕಂಡ ಕಲ್ಪನಾದೃಶ್ಯ; ಮೈತ್ರಿಯ, ಸ್ವಾಮಿಭಕ್ತಿಯ್ಯ, ಧರ್ಮನಿಷ್ಠೆಯ ಸ್ವಾರ್ಥತ್ಯಾಗದ ಪರಾಕಾಷ್ಠೆ-ಈ ಪಂಪನ ಕರ್ಣನ ಮುಂದೆ ವಿಕ್ರಮಾರ್ಜುನನೇನು? ಕಡೆ ಕೃಷ್ಣನೂ ಏನು? “ಕರ್ಣಂತನಗೆಂತುಮೊಡಂಬಡದುದಂ, ನಿರ್ಣಯಮಾಗರಿದು ಪೋದ ನಾರಾಯಣಂ” ಸ್ವಲ್ಪ ನಾಚಿಕೆಪಟ್ಟುಕೊಂಡು ಹೋಗಿರಬೇಕಲ್ಲವೆ?

ಸುಮಾರು ನೂರ ಎಂಬತ್ತೈದು ಪುಟಗಳ ಸಾಹಿತ್ಯ ಚರಿತ್ರೆಯಲ್ಲಿ ಪಂಪನಿಗೆ ೬೦ ಪುಟಗಳು ಮೀಸಲು. ಆದರೂ ತೃಪ್ತಿಯಿಲ್ಲ. ಹೇಳುತ್ತಾರೆ: “ಕೆಲವು ರತ್ನಗಳನ್ನು ಮಾತ್ರ ಪಂಪನ ಅಪಾರರತ್ನಾಕರರಿಂದ ತೆಗೆದಿಟ್ಟು ತೃಪ್ತನಾಗುತ್ತಾನೆ – ಹೆಚ್ಚು ಹೊರಟರೆ ಈ ಸಾಹಿತ್ಯ ಚರಿತ್ರೆಯೆಲ್ಲಾ ಪಂಪನೇ ಆದಾನು- ರನ್ನ ಕಾದಿದ್ದಾನೆ” (ಪುಟ ೬೯) ಉಳಿದ ಕವಿಗಳಿಗೆ ಅನ್ಯಾಯವಾಗಬಹುದು ಎಂಬ ಅಳುಕು ಅವರಿಗಿಲ್ಲ. ಪಂಪನ ಅನಂತರ ಅವರನ್ನು ಕೈಬೀಸಿ ಕರೆಯುತ್ತಿರುವವನು ರನ್ನನೇ.

ಪೊನ್ನನ ವಿಷಯದಲ್ಲಿ ಶ್ರೀಯವರಿಗೆ ಎಳ್ಳಷ್ಟೂ ಉತ್ಸಾಹವಿಲ್ಲ. ಅವರು ಸತ್ಕಾವ್ಯ ಪಕ್ಷಪಾತಿಗಳೇ ಹೊರತು ಸಾಹಿತ್ಯದ ಹೆಸರಿನಲ್ಲಿ ಸೃಷ್ಟಿಯಾಗಿರುವ ಎಲ್ಲ ಕಗ್ಗಕ್ಕೂ ಅವರ ಮನ್ನಣೆಯಿಲ್ಲ.

ರನ್ನನನ್ನು ಮುಟ್ಟುವುದಕ್ಕೆ ಓಡುವ ಭರದಲ್ಲಿ ರಮ್ಯ ಸುಂದರ ಕಾವ್ಯವಾದ ಕಾದಂಬರಿಗೆ ನ್ಯಾಯವಾಗಿ ಕೊಡಬೇಕಾದಷ್ಟು ಸ್ಥಳಾವಕಾಶವನ್ನು ಶ್ರೀಯವರು ಕೊಡಲಿಲ್ಲ. ಬಾಣ-ನಾಗವರ್ಮರ ಕೃತಿಭಾಗಗಳನ್ನು ಹೋಲಿಸಿ ಹೀಗೆ ಮುಕ್ತಾಯ ಹಾಡಿದ್ದಾರೆ:

“ಬಾಣಭಟ್ಟನೂ, ಆತನ ಮಗ ಭೂಷಣಭಟ್ಟನೂ ಇಜ್ಜೋಡಾಗಿ ಬರೆದ ಮೂಲವನ್ನು ಒಕ್ಕೈಯಾಗಿ ಒಂದೇ ವ್ಯಕ್ತಿತ್ವದಲ್ಲಿ ನಿರ್ಮಿಸಿದ್ದಾನೆ. ಸಂಸ್ಕೃತ ಸಾಹಿತ್ಯ, ಉಪನಿಷತ್ತು, ವ್ಯಾಸ ವಾಲ್ಮೀಕಿಗಳು, ಭಾಸ ಕಾಳಿದಾಸರ ರಸಪ್ರಧಾನತೆಯನ್ನೂ ಸರಳತೆಯನ್ನೂ ಹಿಂದಿಟ್ಟು ಚಮತ್ಕಾರ ಪ್ರೌಢಿಮೆ ಶಬ್ದಾರ್ಥಾಲಂಕಾರಗಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟ ಹೊಸರುಚಿಯ ಪ್ರತಿಬಿಂಬವಿದರಲ್ಲಿ ತಕ್ಕಷ್ಟು ಇದ್ದರೂ, ಕನ್ನಡಿಸುವಾಗ ಬಿಡುವುದು ಬಿಟ್ಟು ಇಟ್ಟದ್ದು ಎದ್ದು ನಿಂತು, ಎರಡು ಪ್ರೇಮ ಕಥೆಗಳ ಪಾತ್ರ ರಸಪೋಷಣೆಗಳು ಮುಂದಾಗಿ, ಕನ್ನಡದ ಸೌಲಭ್ಯದಲ್ಲಿ ಕಾದಂಬರಿ ನಾಗವರ್ಮನ ನುಡಿಬೆಡಗಿನಲ್ಲಿ ನಿರ್ದೋಷವೂ ಸೇವ್ಯವೂ ಆಗಿದೆ.”

ರನ್ನನನ್ನು ಸಮೀಪಿಸುತ್ತಲೇ ಅವರ ಉತ್ಸಾಹ ಗರಿಗೆದರುತ್ತದೆ. ಮೊದಲು ಅಜಿತ ಪುರಾಣದ ಪರಿಚಯ ಮಾಡಿದ್ದಾರೆ. ಆ ಕೃತಿ ವೈಶಿಷ್ಟ್ಯವನ್ನೆಲ್ಲ ಕೆಲವೇ ಮಾತುಗಳಲ್ಲಿ ಸುಂದರವಾಗಿ ಸಂಗ್ರಹಿಸುತ್ತಾರೆ.

“ಭವಾವಳಿಯ ತೊಡಕಿಲ್ಲದ ಎರಡನೆಯ ತೀರ್ಥಂಕರನನ್ನು ಆಯ್ದುಕೊಂಡು ವೈರಾಗ್ಯದ ಪರಮಾವಧಿಯ ವರ್ಣನೆಯಿಂದಲೂ, ಭಕ್ತಿಯ ಪರಾಕಾಷ್ಠೆಯಿಂದಲೂ ಲಘುವಾದ ಕಾವ್ಯವೊಂದನ್ನು (೧೨ ಆಶ್ವಾಸ, ಪುಟ ೭೮೦ ಪದ್ಯಗಳನ್ನು) ನಿರ್ಮಿಸಿದ್ದಾನೆ. ಸಗರ ಚಕ್ರವರ್ತಿಯ ಕಥೆಯನ್ನು ಜೋಡಿಸಿದ್ದಾನೆ. ಮತಪ್ರಕ್ರಿಯೆಗಳಿಂದಲೂ ಪುರಾಣ ಪ್ರತಿಪಾದನ ಕ್ರಮದಿಂದಲೂ, ಕವಿಗೆ ಪ್ರತಿಭಾಪ್ರದರ್ಶನಕ್ಕೆ ಅವಕಾಶ ಹೆಚ್ಚು ಸಿಕ್ಕಿಲ್ಲ. ಆದರೂ ವೈರಾಗ್ಯವನ್ನು ಬೋಧಿಸುವ ಭಾಗದಲ್ಲಿ (೧೧,೫೦-೧೧೨) ಕೆಲವು ಪದ್ಯಗಳು ಕನ್ನಡ ಸಾಹಿತ್ಯದಲ್ಲಿ ಎಣೆಯಿಲ್ಲದುವು ಎಂದು ಹೇಳಬಹುದು. ಅತ್ತಿಮಬ್ಬೆಯನ್ನು ಸ್ತುತಿಸುವ ಭಾಗವೂ ಗೌರವ ವಿಶ್ವಾಸಗಳಿಂದ ಕೂಡಿ ಹೃದಯಂಗಮವಾಗಿದೆ.”

ಜೊತೆಗೆ ಅಜಿತಪುರಾಣದ ಸಾರವತ್ತಾದ ಪದ್ಯಗಳನ್ನು ಎತ್ತಿ ತೋರಿಸಿದ್ದಾರೆ:

ಎನಿತೆನಿತು ಕಳಿದ ಭವಮಂ
ನೆನೆದಪೆ, ಎನಿತೆನಿತು ಭವದ ಬಂಧುಗಳಂ ನೀನೆ
ನೆನೆದಪೆ, ಎನಿತೆನಿತೊಡಲಂ
ನೆನೆದಪೆ, ಎಲೆ ಜೀವ, ನೀನೆ ಪೇಳೆ ಪವಣೊಳವೇ?

ಎನಿತಂ ಕುಕ್ಕುಳಗುದಿದಪೆ,
ಎನಿತಂ ಕಕ್ಕಳಗಳಲ್ದಪೆ, ಜೀವನೆ ನೀ
ನೆನಿತಂ ಮಲ್ಮಂಮರುಗುವೆ,
ಎನಿತಂ ಸಂಸಾರದೊಳಗೆ ತಿರ್ರನೆ ತಿರಿವೈ

ಕಡೆಯಿಲ್ಲದ ಸಂಸಾರದ
ಕಡೆಗಾಣಲೆ ಬಗೆವೆಯಪ್ಪೊಡೆನ್ನುಕ್ತಿಗೊಡಂ
ಬಡು ಜೀವ ನಿನ್ನಕಾಲಂ
ಪಿಡಿವೆಂ ಧರ್ಮಮನೆ ಮಗುಳೆ ಬಲ್ವಿಡಿವಿಡಿಯಾ.

“ಸಾಹಸ ಭೀಮ ವಿಜಯ” ಅಥವಾ “ಗದಾಯುದ್ಧ” ಶ್ರೀಯವರಿಗೆ ಅತ್ಯಂತ ಪ್ರಿಯವಾದ ಕೃತಿ. ಅದನ್ನು ನಾಟಕವಾಗಿ ಪರಿವರ್ತಿಸುವಷ್ಟು ಸ್ಫೂರ್ತಿ ಅವರಿಗೆ ದೊರಕಿತ್ತಷ್ಟೆ. ಈ ಕೃತಿಯ ಬಗ್ಗೆ ಅವರಿಗಿರುವ ಉತ್ಸಾಹ ಇದೆ : ‘ಕನ್ನಡ ಸಾಹಿತ್ಯದ ಅತ್ಯುತ್ಕ್ರಷ್ಟವೆಂದು ಹೇಳಬಹುದಾದ” (ಪುಟ ೧೩೮) ಕಾವ್ಯ ಎಂದು ಅವರಿಂದ ಹೇಳಿಸಿದೆ. ಅತ್ಯುತ್ಸಾಹ, ಎಂತಹ ಮಹಾವಿದ್ವಾಂಸರನ್ನು ವಿಮರ್ಶೆಯ ಕ್ಷೇತ್ರದಲ್ಲಿ ದಾರಿತಪ್ಪಿಸಬಹುದು ಎಂಬುದಕ್ಕೆ ಶ್ರೀ ಅವರ ಈ ಮುಂದಿನ ಮಾತುಗಳು ಸಾಕ್ಷಿಯಾಗಿವೆ. ಉಳಿದ ಸಾಹಿತ್ಯ ವಿಮರ್ಶಕರಿಗೆ ಎಚ್ಚರಿಕೆಯ ಸಂಕೇತವೂ ಆಗಿವೆ:

ಇನ್ನು ಗದಾಯುದ್ಧ ಕೃತಿಯ ಪರಿಚಯ ಪ್ರಾರಂಭವಾದಾಗ ಅವರಲ್ಲಿ ವಿಮರ್ಶಕ ಮುದುರಿ ಕುಳಿತು ಅವರಲ್ಲಿಯ ವೀಕ್ಷಕ ವಿವರಣಕಾರನ ಬಾಯಿ ಜೋರಾಗುತ್ತದೆ. ಉದಾಹರಣೆ ನೋಡಿ :

ರನ್ನನ ರಕ್ತ ಇನ್ನೂ ಬಿಸಿಹತ್ತಿಲ್ಲ.”
ವಾಕ್ಸುಂದು ಬಂದು ಸನ್ನಿಹಿತೆಯಕ್ಕೆನ್ನೀ ಮುಖಾಂಭೋಜದೊಳೆ
(
ಇಲ್ಲ, ಇನ್ನೂ ಬಂದಿಲ್ಲ).

ಉದ್ದಕ್ಕೂ ಹೀಗೆ – It is a regular running commentary of an enthusiast of a play, a novice, but not that of a critical spectator.

ಇನ್ನು ತಜ್ಞನಾದ ವೀಕ್ಷಕ ವಿವರಣಕಾರನ ಪಾತ್ರವೂ ಮಸುಳಿ ಹೋಗಿ ಉತ್ಸಾಹಿಯಾದ ದಸರಾ ವಿವರಣಕಾರನಾಗಿಬಿಡುತ್ತಾರೆ, ಶ್ರೀಯವರು. ಅವರ ಮಾತುಗಳಲ್ಲೇ:

“ಈ ಪಶುವಂ ಬೇಳ್ದೆಂ ಕೋಪಾಗ್ನಿಯಿಂದ” (೪೬) ; “ಸುಹುತಂ ಕೌರವ್ಯಕ್ರಹವ್ಯದಿಂದೆನ್ನ ಕೋಪವ್ಯವಹಂ” “ಪಗೆ ಮಡಿದುದು ಮುಡಿ” (೪೫-೪೮) ಮುಡಿದ ದ್ರೌಪದಿಯ ಶೃಂಗಾರ ವರ್ಣನೆ – – – ಇದು ಇಲ್ಲಿಬೇಕೆ? ಭೀಮನ ಬಯ್ಗುಳೂ, ಇವಳ “ಸ್ತನಕುಂಭಂ ಪೂರ್ಣಕುಂಭಕ್ಕೆಣಿಯೆನೆ”… ಮುಂತಾದ ಸೌಭಾಗ್ಯವೂ ಸರಸವೋ, ವಿರಸವೋ – – – ಈ ಸಂದರ್ಭದಲ್ಲಿ ? ಕಥೆಯ ನೂಲು ನೂಲುತ್ತಾ ಹೋಗಿ ಅಶ್ವತ್ಥಾಮನ ಸೇಡುತೀರಿಕೆಯನ್ನೂ; ಲಕ್ಷ್ಮಿಯ ಪಾಂಡವರ ಕೂಡಿಕೆಯನ್ನೂ ಭೀಮನ ಪಟ್ಟಾಭಿಷೇಕವನ್ನೂ ಮುಗಿಸಿ, “ಸಾಹಸ ಭೀಮ ವಿಜಯ” ತೇರು ನಿಂತಂತೆ ನಿಲ್ಲುತ್ತದೆ. ಹಣ್ಣುಕಾಯಿ ಮಾಡಿಕೊಂಡು ಮಂಗಳ ಮಯವಾಗಿ ಮನೆಗೆ ಹೋಗಬಹುದು. ಅದೇನು ಕಾರಣವೋ, ಈ ನಿಲುಗಡೆಯಲ್ಲಿ ಗ್ರಂಥಭ್ರಂಶವಾಗಿ ಪಂಪನ ವಾರಕ್ಕೋರನ್ನನ ವಾಕ್ಕೋ ಗುರುತುಹಿಡಿಯದಂತಾಗುತ್ತದೆ. ರನ್ನ ನಿಲ್ಲಿಸಿದ್ದೆಲ್ಲಿ ತಿಳಿಯುವುದಿಲ್ಲ.

ಹೋಗಲಿ – -ಮುನ್ನುಡಿ, ಹಿನ್ನುಡಿಗಳೂ, ನಡುವಣ ಅಶ್ವಾಸಾಂತ, ಆರಂಭ ಪದ್ಯಗಳೂ, ಆಶ್ವಾಸಾಂತ ಗದ್ಯಗಳೂ ಚಾಳುಕ್ಯ ಚಕ್ರವರ್ತಿ ಸಾಹಸಭೀಮನ ವಿಜಯವನ್ನೂ ಕಠೋರಗರ್ಜನೆಯನ್ನೂ ಪಲ್ಲವಿಯಂತೆ ಘಂಟಾಘೋಷವಾಗಿ ಹೇಳುತ್ತದೆ. ಧರ್ಮಯುದ್ಧ ಧರ್ಮಜಯವನ್ನು ಸಾರುತ್ತವೆ. ಈ ಕೋಲಾಹಲದಲ್ಲಿ ದುರ್ಯೋಧನನ (ದುರ್ – – -ಎಂದಲ್ಲವೆ ಜನರ ಮನಸ್ಸಿನಲ್ಲಿ ಇವನ ಹೆಸರು ನೆಟ್ಟಿರುವುದು?) ಹೃದಯಬೇದಿಯಾದ ಸಂಕಟವನ್ನು ಕೇಳುವವರು ಯಾರು? ಕೆಟ್ಟ: ಕಾಲಲ್ಲಿ ತುಳಿದು ನಮ್ಮ ಧರ್ಮಪಕ್ಷಪಾತವನ್ನು ಬೆನ್ನುತಟ್ಟುವ.

ಆದರೆ ರನ್ನ ರನ್ನನ ಸಹೃದಯ – ?- ಈ ಪಟ್ಟಾಭಿಷೇಕದ ಕೋಲಾಹಲದಲ್ಲಿ ಒಂದು ಸಣ್ಣ ದನಿ ಆ ಪಾಪಿ ಕೌರವನನ್ನು ನೆನೆಯಿಸದೆ? ಆ ಸಣ್ಣ ದನಿ ದೊಡ್ಡದಾಗಿ ಈ ಗರ್ಜನೆಯನ್ನು ನುಂಗದೆ? ಮಹಾಕವಿಗಳ ಮಾರ್ಗವನ್ನು ಲಾಕ್ಷಣಿಕರ “ಮಾರ್ಗ”ದಿಂದ ಅಳೆಯಬಹುದೆ? ಕಳೆಯಬಹುದೆ? ರನ್ನನ ಕೈವಾಡ, ಚೆಲುವು ಕೆಲಸ ಎಲ್ಲಿ – -ಭೀಮನಲ್ಲೇ? ದುರ್ಯೋಧನನಲ್ಲೇ? ಪಂಪನ, ಜೈನಧರ್ಮದ ಶಲಾಕಾ ಪುರುಷರ ಕರ್ಮದಲ್ಲಿ ತೊಳಲಿಮೋಕ್ಷಗಾಮಿಗಳಾಗುವರು, ಮಾರ್ಗ ಎತ್ತ ಸಾಗುತ್ತದೆ; ಮೇಲ್ಪಂಕ್ತಿ ಹೇಗಿದೆ? ಬಲ್ಲವರೇ ಬಲ್ಲವರು: “ರಸೋ ವೈ ಸಃ”,“ಏಕೋ ರಸಃ ಕರುಣ ಏವ” ಪಂಪನು ಈ ಗದಾಯುದ್ಧದ ನಿಜವಾದ ನಾಯಕನನ್ನು “ಮಹಾನುಭಾವ”ನನ್ನು ನೋಡಿದ್ದರೆ – -“ಶಿಷ್ಯಾಧಿಛ್ದೇತೆ ಪರಾಜಯಃ” ಎಂದು ಹೇಳಿ ಆನಂದಪಡುತ್ತಿದ್ದನು.ರನ್ನನ ಕವಿತಾಹೃದಯವನ್ನು ರನ್ನನಿಂದಲೇ ಹೊರಪಡಿಸುವ ವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದವನಲ್ಲವೇ ಅವನು?”

ಮುಂದೆ ಶ್ರೀಧರಾಚಾರ್ಯನನ್ನೂ – ಶಾಂತಿ ನಾಥನನ್ನೂ ಸುಮಾರು ಇಪ್ಪತ್ತು ಪಂಕ್ತಿಗಳಲ್ಲಿ ಮುಗಿಸಿದ್ದಾರೆ. ಶಾಂತಿನಾಥನನ್ನು ಕುರಿಕು ಅವರು ಹೇಳುವುದಿಷ್ಟೇ:

“ಶಾಂತಿನಾಥನು ಸುಕುಮಾರ ಚರಿತ್ರವನ್ನು ಬರೆದಿದ್ದಾನೆ (೧೦೪೮) ಬನವಾಸಿಯಲ್ಲಿ ಅಧಿಕಾರಿಯಾಗಿದ್ದನು.” (ಪುಟ ೧೫೧)

ನಾಗಚಂದ್ರನ ರಾಮಚಂದ್ರ ಚರಿತ ಪುರಾಣ ಅಥವಾ ಪಂಪರಾಮಾಯಣ ಮುಂದಿನ ತಂಗುದಾಣ ಶ್ರೀಯವರಿಗೆ. ಅದೂ ಅವರ ಮೆಚ್ಚುಗೆಯನ್ನು ಪಡೆದ ಕಾವ್ಯ. ಹದಿನಾಲ್ಕನೆಯ ಆಶ್ವಾಸದ ಹದಿನೂರು ಪದ್ಯಗಳನ್ನು ಮೆಚ್ಚಿ ಉದ್ದರಿಸಿದ್ದಾರೆ. ಅವುಗಳಲ್ಲಿ ಕೊನೆಯ ಎರಡು ಇವು:

ಜಸದಳಿವಂ ಪರಾಭವದ ಪತ್ತುಗೆಯಂ ದೊರೆವೆತ್ತ ತಮ್ಮಮಾ
ನಸಿಕೆಯ ಕೇಡನುನ್ನತಿಯ ಬನ್ನಮನನ್ಯಭವಾನುಬದ್ಧಮ
ಪ್ಪ ಸುಗುತಿಯಂ ಸುಹೃಜ್ಜನದ ಬೇವಸಮಂ ಜನತಾಪವಾದಮಂ
ವ್ಯಸನಿಗಳಾರುಮೆತ್ತಲವರಿವರೆ ವಿಷಯಾಸವಮತ್ತ ಚೇತಸರೆ.

ಇರದುಯ್ದೀಗಳೆ ಕೊಟ್ಟೊಡೆನ್ನ ಕಡುಪುಂ ಕಟ್ಟಾಯಮುಂ ಬೀರಮುಂ
ಬಿರುದುಂ ಬೀಸರಮಕ್ಕುಮೋಸರಿಸಿದಂತಾಗಿರ್ಕುಂ, ಅಂತಾಗದಂ
ತಿರೆ ದೋರ್ಗರ್ವಮನಿರ್ವಲಂ ಪೊಗಲ್ದಿನಂ ಸೌಮಿತ್ರಿಯಂ ರಾಮನಂ
ವಿರಥರ್ ಮಾಡಿ ರಣಾಗ್ರದೊಳೆ ಪಿಡಿದುತಂದಾನೆ ಕೊಟ್ಟಪೆಂ ಸೀತೆಯಂ.

ಇದನ್ನು ವಿಮರ್ಶಿಸುತ್ತಾ ಹೇಳಿರುವ ಮಾತು ಇದು:

“ಇಂಥ ಬರವಣಿಗೆ ಕನ್ನಡ ಸಾಹಿತ್ಯದಲ್ಲಿ ಅಪೂರ್ವ; ಪದ, ಅರ್ಥ, ಭಾವ, ರಸ ಮನುಷ್ಯ ಹೃದಯಜ್ಞಾನ, ಔದಾರ್ಯ, ಸೀತೆಯ ರಾವಣನ ಉದಾತ್ತ ಚಿತ್ರ – ಎಲ್ಲಕೂ ಮೇಲೆ ಧರ್ಮದೃಷ್ಟಿ; ಒಂದು ನುಡಿ ಬಿಡದ ಹಾಗೆ, ಒಂದು ನುಡಿ ಸೇರಿಸದ ಹಾಗೆ ಕನ್ನಡದ ಸಂಸ್ಕೃತದ ಶಬ್ದವಿನ್ಯಾಸ, ಸರಳ, ಗಂಭೀರ, ನಾಟಕೀಯಶೈಲಿ, ವೃತ್ತ ಕಂದ ವಚನಗಳ ಸಮಕಟ್ಟು ಎಲ್ಲಾ ಹದಿಮೂರೇ ಪದ್ಯ. ನಮ್ಮ ಕವಿಗಳು ಸಾಮಾನ್ಯವಾಗಿ – ಉತ್ತಮ ಕವಿಗಳೂ ಕೂಡ – ”ಕಯ್ಯಿಂದ ಬಿತ್ತು ಚೀಲವೆಲ್ಲಾ ಬಿತ್ತಬೇಡ” ಎಂಬ ಗ್ರೀಕ್ ಬುದ್ಧಿವಾದವನ್ನು ಮರೆಯುತ್ತಾರೆ. ಒಳಕಟ್ಟು ಕಟ್ಟಡ, ಭಾವ ಚೆನ್ನಾಗಿಯೇ ಇರುತ್ತದೆ – ಆದರೆ ಕಾಡಿನೊಳಗಣ ಗುಪ್ತಗಾಮಿನಿಯಂತೆ, ತೆರೆದು, ಸೋಸಿ, ಸಂಗ್ರಹಿಸಬೇಕಾಗುತ್ತದೆ. ಇಂತಹ ಕಾವ್ಯ ಸ್ಥಾನಗಳಲ್ಲಿ ನಮ್ಮವರು ಯಾರಿಗೂ ಕಡಿಮೆಯಿಲ್ಲ. ಇಂತಹ ಕಾವ್ಯ ಘಟ್ಟಗಳೇ ನಮಗೆ ಹೆರರ ಗೌರವವನ್ನು ತರತಕ್ಕುವು : ಉತ್ತಮ ಕವಿಗಳಲ್ಲಿ ಕೂಡ ಇರುವ ಚರ್ವಿತಚರ್ವಣಗಳಲ್ಲ. ಶಬ್ದಜಾಲದಲ್ಲಿ ಅತಿಯಾದ ಉಕ್ತಿ ಚಮತ್ಕಾರಗಳಲ್ಲ ಸಂಪ್ರದಾಯದ ಸಂಕೋಲೆ- ೮; ಅಗ್ಗದ ನೀತಿಯಿಲ್ಲ ಇಲ್ಲಿ ಅವರು ಕಾಲ ಧರ್ಮವನ್ನನುಸರಿಸುತ್ತಾರೆ : ಕಾವ್ಯಸನಾತನಧರ್ಮವನ್ನಲ್ಲ”

ಇಲ್ಲಿಗೆ ಅವರ ಕೃತಿ ನಿಂತು ಹೋಗಿದೆ.

ಈಗ ಕನ್ನಡ ಸಾಹಿತ್ಯ ಚರಿತ್ರಗಳ ಚರಿತ್ರೆಯಲ್ಲಿ ಶ್ರೀಯವರ ಅಪೂರ್ಣ ಸಾಹಿತ್ಯ ಚರಿತ್ರೆಯ ಸ್ಥಾನವೇನು ಎಂಬುದನ್ನು ನೋಡಬೇಕು. ಇದನ್ನು ಕುರಿತು ಈಗಾಗಲೇ ವ್ಯಕ್ತವಾಗಿರುವ ಎರಡು ತೀರ ಭಿನ್ನವಾದ ಅಭಿಪ್ರಾಯಗಳನ್ನು ಮೊದಲು ಎತ್ತಿ ಹೇಳುತ್ತೇನೆ : ಮೊದಲನೆಯದು ಶ್ರೀ ಕುವೆಂಪು ಅವರದ್ದು :

“ಶ್ರೀ ಬಿ.ಎಂ.ಶ್ರೀಕಂಠಯ್ಯನವರಿಗಿದ್ದ ವಿದ್ವತ್ತು ಪರಿಶ್ರಮ, ಸಹೃದಯತೆ, ರಸಜ್ಞತೆ, ತೋಲನ ಸಾಮರ್ಥ, ಸೂಕ್ಷ್ಮದೃಷ್ಟಿ ಉಕ್ತಿಗಾಂಭೀರ್ಯ, ಒಮ್ಮೊಮ್ಮೆ ದಾಕ್ಷಿಣ್ಯಪರವಾದರೂ ಒಟ್ಟಿನಲ್ಲಿ ನಿಷ್ಪಕ್ಷಪಾತವಾದ ಋಜುಮತಿ ಮತ್ತು ಪ್ರಥಮವರ್ಗದ ವಿಮರ್ಶಕನಿಗೆ ಸಹಜವಾದ ಸವಿನಯ ಅಧಿಕಾರವಾಣಿ ಇವಿಗಳ ಪ್ರಯೋಜನ ಕನ್ನಡನಾಡಿನ ಸಂಪೂರ್ಣವಾಗಿ ಲಭಿಸಿ ‘ಕನ್ನಡ ಸಾಹಿತ್ಯ ಚರಿತ್ರೆ’ ಅವರ ಕೈಯಿಂದಲೇ ಸಮಗ್ರವಾಗಿ ರಚಿತವಾಗಿದ್ದರೆ, ಸಾಹಿತ್ಯದ ಚರಿತ್ರೆ ಮಾತ್ರವಲ್ಲದೆ ಅದೆಂತಹ ರಸವಿಮರ್ಶೆಯ ಜೇನುಣಿಸು ಕನ್ನಡಿಗರ ಲಭಿಸುತ್ತಿದ್ದಿತು ಎಂಬುದಕ್ಕೆ ಪ್ರಕಟವಾಗಿರುವ ಈ ಗ್ರಂಥಭಾಗವೆ ಸಾಕ್ಷಿಯಾಗಿದೆ. ಆ ಭಾಗ್ಯ ನಮ್ಮದಾಗಲಿಲ್ಲ. ಆದರೂ ಒಂದು ಸಮಾಧಾನ : ಅನಾಗತ ಚರಿತ್ರೆಯ ಸೃಜನ ಕಾರ್ಯದಲ್ಲಿ ಆಸಕ್ತರಾಗಿ ತಮ್ಮ ಬದುಕೆಲ್ಲವನ್ನೂ ಅದಕ್ಕೆ ಮೀಸಲಾಗಿಸಿದ ಅವರಿಗೆ ಅಗತ ಚರಿತ್ರೆಯನ್ನು ಬರೆದು ಪೂರೈಸಲು ವಿಧಿ ಕೊಟ್ಟಿದ್ದ ಆಯುಃಪ್ರಮಾಣದಲ್ಲಿಸಾಧ್ಯವಾಗಲಿಲ್ಲ.

ಕನ್ನಡನಾಡಿಗೂ ಕನ್ನಡಕ್ಕೂ ಶ್ರೀಕಂಠಯ್ಯನವರು ಸಲ್ಲಿಸಿರುವ ಸೇವೆ ಅಪಾರವಾಗಿ ಅನೇಕಮುಖವಾಗಿದೆ. ಆದರೆ ಚಿರಕಾಲದ ದೃಷ್ಟಿಯಿಂದ ಹೇಳುವುದಾದರೆ, ಅವರ ಸಾಹಿತ್ಯ ಸೃಷ್ಟಿ ಮತ್ತು ಪ್ರಕೃತ ಗ್ರಂಥದಂತಹ ಲಿಖಿತಗಳಲ್ಲಿ ಪ್ರಕಾಶಿತವಾಗಿರುವ ಅವರ ಸಾಹಿತ್ಯ ವಿಮರ್ಶನ ದೃಷ್ಟಿ ಇವುಗಳಿಗೆ ಒಂದು ಮಾನವೀಯವಾದ ಶೃಂಗಸ್ಥಾನ ದೊರೆಯುವುದರಲ್ಲಿ ಸಂದೇಹವಿಲ್ಲ”

ಎರಡನೆಯದು ಡಾ.ಹಾ.ಮಾ.ನಾಯಕರದು :

“ಬಿ.ಎಂ.ಶ್ರೀಕಂಠಯ್ಯನವರು ಬರೆಯಲಾಶಿಸಿದ್ದ ಸಾಹಿತ್ಯ ಚರಿತ್ರೆಯ ಆರಂಭದ ಭಾಗ ‘ಕನ್ನಡ ಕೈಪಿಡಿ’ಯ ಎರಡನೆಯ ಭಾಗವಾಗಿ ಪ್ರಕಟವಾಗಿದೆ. ಇದೆ ೧೯೪೭ರಲ್ಲಿ ಪ್ರಕಟವಾಗಿದ್ದರೂ ಶ್ರೀಕಂಠಯ್ಯನವರು ಇದನ್ನು ೧೯೨೯ಕ್ಕಿಂತ ಮೊದಲೇ ಬರೆಯಲಾಂಭಿಸಿದ್ದರೆಂದು ಹೇಳಬಹುದು. ಕನ್ನಡ ಸಾಹಿತ್ಯವನ್ನಷ್ಟೇ ಅಲ್ಲದೆ ಅನೇಕ ಸಾಹಿತ್ಯಗಳನ್ನು ಚೆನ್ನಾಗಿ ಬಲ್ಲವರಾಗಿದ್ದ ಅವರು ಶ್ರೇಷ್ಠ ಸಾಹಿತ್ಯ ಚರಿತ್ರೆಯನ್ನೂ ರಚಿಸಬಲ್ಲ ಸಮರ್ಥರಾಗಿದ್ದರು. ಆದರೆ ಉದಾಹರಣೆಗಳ ಭಾರದಿಂದ ಕುಸಿದಿರುವ ಪ್ರಕಟಿತ ಭಾಗ ಮಾತ್ರ ಈ ಸಾಹಿತ್ಯ ಚರಿತ್ರೆ ಅತ್ಯುತ್ತಮವಾಗಿರುತ್ತಿತ್ತೆಂಬುದನ್ನೇನೂ ತೋರಿಸುವುದಿಲ್ಲ – ಡಾ.ಹಾ.ಮಾ.ನಾಯಕ .ಸಾ..ಪು.೩೭.

ಶ್ರೀಯವರು ಬರೆದಿರುವಷ್ಟು ಭಾಗವನ್ನು ನಿಷ್ಪಕ್ಷಪಾತವಾಗಿ ವಿಮರ್ಶಿಸಿ ನಮ್ಮ ಅಭಿಪ್ರಾಯವನ್ನು ಹೀಗೆ ಮಂಡಿಸಬಹುದು.

ಶ್ರೀಯವರು ಯೋಜಿಸಿದಂತಹ ವಿಸ್ತಾರವಾದ, ರಸಸ್ಥಾನ ನಿರ್ದೇಶಕವಾದಂತಹ ಸಾಹಿತ್ಯದ ಚರಿತ್ರೆಯ ಅಗತ್ಯ ಕನ್ನಡಕ್ಕೆ ಉಂಟು. ಶ್ರೀಯವರದು ರಸಯಾತ್ರೆ’ ಇಂತಿಂಥ ತಾರೀಖು ಇಂತಿಂಥಲ್ಲಿ ನಿಲ್ಲತಕ್ಕದ್ದು- ತಾಜ್‌ಮಹಲ್‌ನೋಡಲು ಎರಡು ಘಂಟೆ. ಅನಂತರ ಮುಂದೆ ಹೋಗತಕ್ಕದ್ದು ಕಾಶೀ ಪುಣ್ಯಕ್ಷೇತ್ರ, ಅಲ್ಲಿ ಮೂರು ದಿನ ತಂಗತಕ್ಕದ್ದು-ಗಯಾದಲ್ಲಿ ಶ್ರಾದ್ಧಕ್ಕೆ ಎರಡು ದಿನ- ಹೀಗೆ ಕಾಲ ನಿರ್ಧಾರ ಮಾಡಿ ಹೊರಟ ಯಾತ್ರೆಯ ರೈಲಲ್ಲಿ ಅವರ ಸಾಹಿತ್ಯ ಚರಿತ್ರೆ. ಇಷ್ಟಬಂದರೆ ತಾಜಮಹಲನ್ನು ಐದು ದಿನವೂ ನೋಡಿ ಸಂತೋಷ ಪಡುತ್ತಾ ನಿಂತಿರಬಹುದು-ಕಷ್ಟವಾದರೆ ಕಾಶಿ, ಗಯಗಳಿಗೆ ಹೋಗದೆಯೇ ಇರಬಹುದು-ಹೀಗೆ ಸ್ವಸಂತೋಷಕ್ಕಾಗಿ ಕಾಲದ ಪರಿಮಿತಿಯಿಲ್ಲದೆ ಯಥಾಸಾವಕಾಶವಾಗಿ ಹೊರಟ, ಹೆಚ್ಚಿನ ಮಟ್ಟಿಗೆ ಸೌಂದರ್ಯೋಪಾಸನೆಯ ಯಾತ್ರೆ ಅದು. ತಾವು ಮೆಚ್ಚಿದ, ಸವಿದ ರಸಸ್ಥಾನಗಳನ್ನು ಸಹೃದಯರಿಗೂ ತೋರಿಸಿ. ವಿವರಿಸುವ ಉತ್ಸಾಹ ಶ್ರೀಯವರದು.

ಆದರೆ ವಿದ್ವತ್ತು, ರಸಸ್ಥಾನ ನಿರ್ದೇಶನ ಶಕ್ತಿ, ನಿಜವಾದ ಕಾವ್ಯತ್ವದ ಆಸ್ವಾದನೆ ಈ ವರಗಳನ್ನು ಪಡೆದಿದ್ದ ಶ್ರೀಯವರಿಗೆ ಸರಿಯಾದ ವಿಮರ್ಶಕರಿಗಿರಬೇಕಾದ ದಾಕ್ಷಿಣ್ಯ ದೂರತ್ವ ಇರಲಿಲ್ಲ ಎಂದು ಒಪ್ಪಿಕೊಳ್ಳಬೇಕು. ರನ್ನನಂತಹ ಕವಿಯನ್ನು ಕುರಿತು ಅವರು ಹೇಳಿರುವ ಮಾತುಗಳು ಈ ಹೇಳಿಕೆಯನ್ನು ಪುಷ್ಟಿಗೊಳಿಸುತ್ತದೆ.

ಒಂದು ವಿಷಯವನ್ನು ನಾವು ಮರೆಯುವಂತಿಲ್ಲ – ಶ್ರೀಯವರು ಈ ಸಾಹಿತ್ಯ ಚರಿತ್ರೆಯನ್ನು ಬರೆದದ್ದು ಐವತ್ತು ವರ್ಷಗಳ ಹಿಂದೆ. ಆಗ ಕನ್ನಡದ ಬಗ್ಗೆ ಹೊಸ ಉತ್ಸಾಹವನ್ನು ಜನತೆಯಲ್ಲಿ ಮೂಡಿಸಬೇಕಾದ ಹೊರೆ ಅವರ ಮೇಲಿತ್ತು. ಅವರಿಗಿದ್ದ ಮೂಲ ಸಾಮಗ್ರಿಗಳ ಕೊರತೆಯನ್ನು ಗಮನಿಸಬೇಕು ಅಂಥ ಪರಿಸರದಲ್ಲಿ ಇಂಥದೊಂದು ಸಾಹಸಕ್ಕೆ ಕೈಹಾಕಿದ ಶ್ರೀಯವರು ಅಭಿವಂದನೀಯರು.