ನಮ್ಮ ದೇವಸ್ಥಾನಗಳ ವಿಷಯದಲ್ಲಿ ನನ್ನಂತಹವರ ದೃಷ್ಟಿಗೂ ಅವರ ದೃಷ್ಟಿಗೂ ಇರುವ ಅಂತರ ಧ್ರುವಗಳದ್ದು. ಈ ದೇಶದ ಪ್ರಖ್ಯಾತ-ಅಪ್ರಖ್ಯಾತ ದೇವಸ್ಥಾನಗಳಲ್ಲಿ ಹೆಚ್ಚಿನವನ್ನು ನಾನು ನೋಡಿದ್ದೇನೆ. ಆದ್ದರಿಂದ ದೇವಸ್ಥಾನ ಎಂದಕೂಡಲೇ ನನ್ನ ಮನಸ್ಸಿಗೆ ಬರುವುದು ಗದ್ದಲ, ಹೊಲಸು, ದುರ್ವಾಸನೆ, ವ್ಯಾಪಾರ ಮನೋಭಾವ, ಅಕರಾಳ ವಿಕರಾಳವಾಗಿ ಬಣ್ಣಬಳಿದು, ಚಿನ್ನಬೆಳ್ಳಿಗಳನ್ನು ಹೇರಿಸಿಕೊಂಡು ತಮ್ಮನ್ನು ತಾವು ಕೊಡುಕೊಳೆಯ ವ್ಯವಹಾರಕ್ಕೆ ತೆರೆದಿಟ್ಟುಕೊಂಡು ಸಹಾಯಕರಾಗಿ ನಿಂತಿರುವ ದೇವ-ದೇವಿಯರ ವಿಗ್ರಹಗಳು – ಇನ್ನೂ ಏನೇನೋ. ಆದರೆ ಪುತಿನ ಅವರಿಗೆ ದೇವಾಲಯ ಪಾವಿತ್ರ್ಯದ, ಆನಂದದ ಸಂಕೇತ. ಒಮ್ಮೆ ನಮ್ಮಿಬ್ಬರಿಗೂ ದೇವಸ್ಥಾನಗಳ ವಿಷಯದಲ್ಲಿ ಮಾತುಕತೆ ನಡೆಯಿತು. ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಸಂಭಾಷಣೆಯಾದ್ದರಿಂದ ಕರಾರುವಕ್ಕಾಗಿ ಅವೇ ಮಾತುಗಳು ನೆನಪಿಲ್ಲ. ಆದರೆ ಅತ್ಯಂತ ವಿಚಾರಯೋಗ್ಯವಾದ ವಿಷಯವನ್ನು ಅವರು ಅಂದು ಹೇರಿದ್ದರಿಂದ ಆ ಸಂಭಾಷಣೆಯನ್ನು ಪುನರ್ರಚನೆಯ ಪ್ರಯತ್ನಪಡುತ್ತೇನೆ.

ನಾನು : ನಮ್ಮ ದೇವಸ್ಥಾನಗಳ ಸ್ಥಿತಿ ಶೋಚನೀಯ. ಅದೇ ಒಂದು ಮಸೀದಿ ನೋಡಿ ಅಥವಾ ಚರ್ಚುನೋಡಿ. ಅವುಗಳನ್ನು ಎಷ್ಟು ಶುಚಿಯಾಗಿ ಇಟ್ಟಿರುತ್ತಾರೆ. ನಮ್ಮವೋ ಕೊಳಕಿನ ನೆಲೆ. ಅಲ್ಲದೆ ಚರ್ಚು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಾಗ ಎಂಥ ಗಂಭೀರ ಮೌನ, ಇಲ್ಲ ವ್ಯವಸ್ಥಿತ ಧ್ವನಿಗಳ ಏರಿಳಿತ ನಮ್ಮದು, ಸಂತೆ. ಅಲ್ಲದೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ.

ಪುತಿನ : ಛೆ ಛೆ ಹಾಗಲ್ಲಪ್ಪ ದೇವರಿಗೂ ನಮಗೂ ವ್ಯವಹಾರ ನಡೆಯುವಾಗ ಅಷ್ಟು ಲೆಕ್ಕಾಚಾರದ ಮೌನದ ಅವಶ್ಯಕತೆ ಏನಿದೆ? ಅಲ್ಲಿನದು ಸ್ಮಶಾನಮೌನದಂತೆ ತೋರುತ್ತದೆ. ನಮಗೆ ನಮ್ಮ ಜನ ನೋಡಿ ಏನು ಉತ್ಸಾಹ ಏನು ಕತೆ! ಒಬ್ಬರನೊಬ್ಬರು ತಳ್ಳಿಕೊಂಡು ಸ್ವಾಮಿಯ ದರ್ಶನಕ್ಕೆ ನೋಡಿ ನನ್ನ ಜೀವನೋತ್ಸಾಹವೂ ಇಮ್ಮಡಿಯಾಗುತ್ತದೆ! ದೇವಾಲಯವೂ ಮದುವೆ ಮನೆಥರ ಇರೊದರಿಂದಲೇ ನೋಡಿ, ಅಲ್ಲಿ ಆಕರ್ಷಣೆ ಇರೋದು.

ಈ ವಾದ ನನಗೆ ಒಪ್ಪಿಗೆಯಾಯಿತು ಎಂದೇನಲ್ಲ. ಆದರೆ ಇದು ದೇಗುಲವನ್ನು ಕುರಿತಂತೆ ಪುತಿನ ದೃಷ್ಟಿ ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಒಂದು ಸಲ ನಾನು ಪುತಿನ ಅವರನ್ನು ಕರೆದುಕೊಂಡು ಬಂದಿದ್ದೆ. ಉತ್ಸವ ಹೊರಬಿತ್ತು ಪುತಿನ ಒಂದು ಅಂಚಿನಲ್ಲಿ ನಿಂತು, ತುದಿಗಾಲಿನಲ್ಲಿ ನಿಂತು, ದೇವರನ್ನು ಎಗರಿ ಎಗರಿ ನೋಡುತ್ತಿದ್ದ ದೃಶ್ಯವನ್ನು ನಾನು ಎಂದೂ ಮರೆಯಲಾರೆ. ಉತ್ಸವದಲ್ಲಾಗಲಿ, ದೇವಾಲಯದಲ್ಲಾಗಲಿ ಜನರ ಕೂಟ ಹೆಚ್ಚು ಗದ್ದಲ ಹೆಚ್ಚು ಕೊಳಕು ಹೆಚ್ಚು ಆದ್ದರಿಂದ ನಾನು ಬರಲಾರೆ ಎನ್ನುವ ಭಾವನೆ ಅವರಲಿಲ್ಲ. ಬದಲಿಗೆ ಈ ಎಲ್ಲ ಇರುವುದರಿಂದಲೇ ಅವು ಜೀವಂತವಾಗಿರುವುದು ಅಲ್ಲಿಗೆ ಹೋಗುವ ಒಂದೇ ಒಂದು ಅವಕಾಶವನ್ನು ತಪ್ಪಿಸಿಕೊಳ್ಳುವ ಇಚ್ಛೆ ಅವರಿಗಿಲ್ಲ. ಅವರನ್ನು “ದೇಗುಲ ಜೀವಿ” ಎಂದೂ ಕರೆಯಬಹುದು. ದೇಗುಲ, ಅದು ತನ್ನ ಗರ್ಭ ತಾಳಿರುವ ದೇವರು ಇವರ ಆಕರ್ಷಣೆ ಅವರ ವಿಷಯಕ್ಕೆ ಪ್ರಬಲ.

ಬದುಕಿನ ಎಲ್ಲ ವಿಷಯಗಳನ್ನೂ ಕುರಿತಂತೆ ಕುತೂಹಲಶೀಲವಾದ ಅವರ ಮನಸ್ಸು ಸಹಸ್ರಾರು ಮಂದಿ ಆಸಕ್ತರನ್ನು ದಿನದಿನವೂ ತಮ್ಮ ಒಳಗೆ ಬರಮಾಡಿಕೊಳ್ಳುತ್ತಿರುವ ದೇಗುಲದ ಶಕ್ತಿಮೂಲ ಯಾವುದು ಎಂಬುದನ್ನು ಕುರಿತೂ ಕುತೂಹಲ ತಾಳಿದೆ. ಇದೇ ವಿಷಯವನ್ನು ಕುರಿತು ಒಂದು ವರ್ಷಕ್ಕೂ ಮೇಲ್ಪಟ್ಟ ಅವಧಿಯಲ್ಲಿ ಅವರು ನಡೆಸಿದ ಚಿಂತನೆ, ಮಂಥನಗಳು “ಮಲೆ ದೇಗುಲ” ಎಂಬ ಒಂದು ಸಂಕಲನದ ಐವತ್ತೊಂದು ಮುಕ್ತಕಳಾಗಿ ಹರಳುಗಟ್ಟಿವೆ.[1] “ದೇಗುಲವೆಂಬ ಮಹಾಭಾವವನ್ನು ಕುರಿತು ಎಂಥ ಬಣ್ಣನೆಯಲ್ಲಿ ತೊಡಗಿದರೂ ಕೊನೆಗೆ ಮನಸ್ಸು ಬೆರಗಿನಲ್ಲೇ ಉಳಿಯತಕ್ಕದ್ದು ಅನಿವಾರ್ಯ-“ ಎಂಬ ತೀರ್ಮಾನವೆನ್ನಲಾಗದ ತೀರ್ಮಾನಕ್ಕೆ ಅವರು ಬಂದಿದ್ದಾರೆ.

ಒಂದು ಮಲೆ, ಅದರ ಮೇಲೊಂದು ಕಲ್ಲು. ಆ ಮಲೆಯ ಮೇಲಣ ಕಲ್ಲು ದೇವರಾಯಿತು. ಅದನ್ನು ನೋಡುವುದಕ್ಕೇಕೆ ಇಂಥ ಜನ ಜಂಗುಳಿ? ಮಲೆ ದೇಗುಲದ ನಾಲ್ಕನೆಯ ಮುಕ್ತಕ ಈ ಸೋಜಿಗದ ಪದರಗಳನ್ನು ಬಿಡಿಸಿನೋಡಲು ಯತ್ನಿಸುತ್ತಿದೆ. ‘ಈ ದೇಗುಲವಾದರೋ ಮನೆಯಲ್ಲ, ಮಠವಲ್ಲ, ರಾಜನ ಅರಮನೆಯೂ ಅಲ್ಲ. ನಾಟ್ಯಮಂದಿರವಲ್ಲ, ಭೋಗವಸ್ತುಗಳನ್ನು ಬಯಸುತ್ತದೆಯಷ್ಟೆ. ಈ ದೇಗುಲ ಅಂಥ ಯಾವ ಭೋಗವಸ್ತುವನ್ನೂ ಒದಗಿಸುವುದಿಲ್ಲ. ಹೀಗಿರುವಾಗ ಈ ಮಲೆಯ ಕಲ್ಲಿಗೆ ಯಾವ ಅರ್ಥ, ಯಾವ ಪ್ರಯೋಜನ ಅಂಟಿಕೊಂಡಿದೆ? ನಾಲ್ಕು ಪಂಕ್ತಿಗಳಲ್ಲಿ ಆಳವಾದ ಚಿಂತನೆಗೆ ತೊಡಗಿದ ಕವಿಮನಸ್ಸು ಚಿಂತನೆಯನ್ನು ಅಲ್ಲಿಗೆ ನಿಲ್ಲಿಸಿ ಥಟ್ಟನೆ ಸೃಷ್ಟಿಕ್ರಿಯೆಯಲ್ಲಿ ತೊಡಗಿ ಒಂದು ಸುಂದರವಾದ ಮತ್ತು ಸಂಕೀರ್ಣವಾದ ಚಿತ್ರವನ್ನು ನಿರ್ಮಿಸುತ್ತದೆ.

ಗೋಪುರದ ತುದಿಯಲ್ಲಿ ಬಾನನೆತ್ತುತ ನಿಂತು
ಇರುಳಿನೊಳು ಮಿರುತಾರಗೆಯ ಮಾಲೆಗೊಳುತಸ
ಮೋಡ ಮುತ್ತುವ ಜಡೆಗೆ ಜಾಹ್ನವಿಯ ಜಾರಿಬರೆ
ಪಕ್ಕಕೆಳವರೆ ಸಿತ್ತಿಕಣ್ಸವಿಯ ಕೊಳುತ

ಇದೊಂದು ಭಕ್ತಿಯ ಕೇಂದ್ರ, ಜೀವ-ದೇವರ ಸಂಬಂಧ ಸ್ಥಾನ ಎಂಬ ಕಾರಣಗಳಷ್ಟೇ ಕವಿಮನಸ್ಸನ್ನು ದೇಗುಲದ ಕಡೆಗೆ ಸೆಳೆದಿಲ್ಲ. ಅದು ಸೌಂದರ್ಯಸ್ಥಾನವು ಆಗಿದೆ, ಆ ಕ್ಷಣಕ್ಕಾದರೂ. ಗೋಪುರದ ತುದಿಯಿಂದ ಬಾನನ್ನು ಎತ್ತುತ್ತಿರುವಂತೆ ಮೇರುತ್ತಿದೆ; ರಾತ್ರಿಯಲ್ಲಿ ಮಿರುಗುವ ತಾರಸಿಗಳ ಮಾಲೆಯನ್ನು ಧರಿಸುತ್ತಿದೆ; ಮೋಡಗಳು ಮುತ್ತುತ್ತಿರುವ ಜಡೆಗೆ ದೇವಗಂಗೆಯೇ ಧುಮುಕುತ್ತಿದೆ; ಪಕ್ಕಕ್ಕೆ – ಈಗಾಗಲೇ ಇದು ಅವ ಜಟಾಜೂಟವನ್ನು ನಮ್ಮ ಮನಸ್ಸಿಗೆ ಸೂಚಿಸಿದೆಯಷ್ಟೆ-ಬಾಲ ಚಂದ್ರನನ್ನು ಮುಡಿಸಿದಂತಾಗಿ ಕಣ್ಣಿಗೆ ಔತಣವನ್ನು ಏರ್ಪಡಿಸಿದ. ಹೀಗೆಲ್ಲ ಮಾಡಿ, ಕವಿ ಹೇಳುತ್ತಾರೆ- ‘ದೊರೆಯುತ್ತಿರುವ ಇದರ ದರ್ಶನವೇ ನನ್ನ ಎದೆಯ ನಡೆಯನ್ನು ದುಡುಕಿಸುತ್ತಿದೆ. ಹೀಗೆ ಹೇಳಿ ಒಂದು ಉತ್ತರಿಸಲಾರದ, ಆಶ್ಚರ್ಯವಾಗಿಯೇ ನಿಲ್ಲುವ ಒಂದು ಪ್ರಶ್ನೆಯನ್ನು ಕೇಳುತ್ತಾರೆ.” “ಮನುಜಗಿದು ನೆಲೆಯಾಸೆಯೋ ಕಟ್ಟಕಡೆಯ?” ಇಂದ್ರಿಯಗಳ ಜಗತ್ತಿನಲ್ಲಿ ಸುತ್ತಿ ಸುಳಿದು ಬಳಲಿದ ಮನುಷ್ಯನಿಗೆ ಇದು-ಈ ದೇಗುಲ-ಕಟ್ಟಕಡೆಯ ನೆಲೆಯಾಸೆಯೇ?”

ಹೃದಯ ಗರ್ಭದಲ್ಲಿ ದೇವಮೂರ್ತಿ, ಸುತ್ತ ಕಲೆಯ ಬಲ-ಇದು ನಮ್ಮ ದೇವಾಲಯಗಳ ಸಾಮಾನ್ಯ ರಚನಾ ಸ್ವರೂಪ. ಕಲೆಯ ನೆಲೆಯಲ್ಲಿಯೂ ಪುತಿನ ಅವರ ಚಿಂತನಾಲಹರಿ ಹರಿದಿದೆ. ಅಂತಿಮವಾಗಿ ದೊರಕಬೇಕಾದದ್ದು ರಸಸಥಿತಿ- ಇಲ್ಲಿನ ರಸ ಪದದ ಬಳಕೆ“ರಸೋ ವೈಸಃ” ಎಂಬ ಹಿನ್ನೆಲೆಯದು. ತಮ್ಮ ಸಂಕಲನದ ಮೊದಲೆರಡು ಮಾತುಗಳಲ್ಲಿ ಈ ವಿಷಯವನ್ನು ಕುರಿತು ಜಿಜ್ಞಾಸೆ ನಡೆಸಿದ್ದಾರೆ ಪುತಿನ. ಅವರು ಹೇಳುತ್ತಾರೆ: “ಇನ್ನು ಅದರ ಪ್ರಾಪ್ಯ ರಸಸ್ಥಿತಿ. ಈ ಸ್ಥಿತಿಗೆ ಪ್ರಥಮ ಸೋಪಾನದಂತಿದೆ ಕಲೆ.[2] ಅಲ್ಲಿ ಮೊದಲಿಡುವ ರಸಾವಸ್ಥೆಯ ಪರಿಧಿಯಲ್ಲಿ ಹೊಂಚುವ ಭವ ಕಾವ್ಯವಸ್ತುವೆನಿಸಿಕೊಂಡು ಪ್ರತಿಭೆಯ ಮೆರುಗನ್ನು ತಳೆದು ಸಂಮೋಹನವಾಗುತ್ತದೆ. ಈ ಮೆಟ್ಟಿಲನ್ನೇರಿದರೆ ನಾವು “ದೇಗುಲವನ್ನು ಮುಟ್ಟುತ್ತೇವೆ, ಮುಂದೆ ಮೌನ: ಇನ್ನೊಂದು ರೀತಿಯಲ್ಲಿ ಮೊದಲು ರಸಾವಸ್ಥೆಯ ಮೌನ, ಅದರುಪಾಂತ್ಯದಲ್ಲಿ ದೈವ ಭಾಗವದ ಜಾಗರ, ಅದರ ಕೆಳಮಟ್ಟದಲ್ಲಿ ಕಲೆಯೆಚ್ಚರ, ಅದರ ತಲದಲ್ಲಿ ಭವ ಅಥವಾ ನಿಯತಿನಿಯತ ಜಗತ್ತಿನಲ್ಲಿನ ಜಾಗ್ರದವಸ್ಥೆ.

“ಹೀಗೆ ಮನುಷ್ಯನ ನೆಲೆಯಲ್ಲಿ ಚೈತನ್ಯದೇರಿಳಿತಗಳು. “ದೇಗುಲ”ವೆಂಬ ಭವ್ಯಕಲ್ಪನೆ, ಈ ಏರುವಿಕೆಯ ಒಂದು ನೆಲೆಯ ಸ್ಥಿರೀಕರಣಕ್ಕೆ ದೇವ ಮಾನವರು ಕಲ್ಪಿಸಿರುವ ಉಪಾಯಗಳಲ್ಲೊಂದು? ಭವಮಗ್ನರಿಗೂ ರಸದರಿವು ಸ್ವಲ್ಪವಾದರೂ ಆಗಲೆಂಬುದು ಅವರ ಆಶಯ. ನೀರಿನಾಸರೆಯುಳ್ಳ ಪೈರಿಗೂ ಮುಗಿಲ ಹನಿ ಬಿದ್ದಲ್ಲದೆ ತೆನೆ ಹುಲುಸದಿರುವಂತೆ ವಿಜ್ಞಾನದಿಂದ ಸಮೃದ್ಧವಾಗಿ ಜಾಗೃದವಸ್ಥಾಪ್ರಭೂತವಾದ ಮಾನವ ಜೀವಿತಕ್ಕೂ ಈ ರಸಾವಸ್ಥೆಯ ಸ್ಪರ್ಶವಿಲ್ಲದೆ ಹುಲುಸಿಲ್ಲ. ‘ದೇಗುಲ’ಗಳು ಈ ಮೋಡಗಳನ್ನು ತಡೆದಿಡುವ ಮರಗಳು. ಸಾಧು ಸಿದ್ಧ ಸಂತರ ತೇಜಗಳನ್ನು ಹೊಳೆಸಿ ಅಲೌಕಿಕ ಭಾವಗಳನ್ನು ಮಿಂಚಿಸುತ್ತಾ, ಋಷಿ ಮುಖೋದ್ಗತ ಬ್ರಹ್ಮ ಬೃಂಹಿತಗಳಿಂದ ಸಕಲರನ್ನು ಉಲ್ಲಾಸಗೊಳಿಸುತ್ತಾ ಮೆರೆವ ದೇಗುಲಗಳೂ ದೇವೋತ್ಸವಗಳೂ ವನಪರ್ವತ ಸಾಗರಗಳಂತೆ ಮತ್ತು ಭಾವವೇಗಗಳಂತೆ ವಿಷಯ ಸ್ಥಾನದಲ್ಲಿ ತೀವ್ರ ಸಂವೇದನೆಗಳನ್ನು ಪ್ರಚೋದಿಸಿ ಕಾವ್ಯ ಜಾಗರವನ್ನು ತರಬಹುದಲ್ಲವೆ? ಅಥವಾ ‘ದೇಗುಲ’ದಲ್ಲಿ ನಾನು ಪಟ್ಟು ಪಟ್ಟು ಇದುವರೆಗೆ ಧರಿಸಿದ್ದ ವಿಚಿತ್ರಾನುಭೂತಿಗಳು ಇನ್ನು ನಾನು ಸದಾಶ್ರಯವಲ್ಲದೆಂದರಿತು ಹೀಗೆ ಈ ವಾಕ್ಕಾದಲ್ಲಿ ತಮ್ಮ ಭವವನ್ನು ಮುಂದುವರಿಸಲು ಹವಣಿಸುತ್ತಿವೆಯೇ?”

ಇಂಥ ಸಂದೇಹಗಳು ನೂರಾರು ಸಲ ಜೀವವನ್ನು ಹಿಂಸಿಸುತ್ತವೆ. ಒಂದೊಂದು ಸಲವಾದರೂ ‘ದೇಗುಲ’ ಇಂಥ ಸಂದೇಹಗಳಿಂದ ಜೀವವನ್ನು ಪಾರು ಮಾಡುವ ಶಕ್ತಿಯಾಗುತ್ತದೆ. ಪುತಿನ ಮಲೆಯ ದೇಗುಲವನ್ನು “ಸಕಲ ಸಂದೇಹಗಳು ಬಳಲಿ ಬಳಿಗೈತಂದು ಬಿಡುವ ಬಯಸುವ ತವರೆ” ಎಂದು ಆತ್ಮೀಯವಾಗಿ ಸಂಬೋಧಿಸಿದ್ದಾರೆ. ‘ತವರೆ’ ಎನ್ನುವ ಮಾತು ವಿಶೇಷವಾಗಿ ಗಮನಿಸತಕ್ಕದ್ದಾಗಿದೆ. “ಯೋಗಿಗಳ ಮುದದಿಂದ ಸಾಂದ್ರ”ವಾದ ಅಂಥ ದೇಗುಲದ ಬಾಗಿಲಿನಲ್ಲಿ ನಮ್ರನಾಗಿ ನಿಂತುಕೊಳ್ಳುತ್ತಾರೆ – ‘ನುಡಿಸುಯ್ದು ಬವಣೆಗೊಳಭಾವಗಳ ಭಾರದಿಂ ತಲೆಯ ಬಾಗಿ” ಮನಸ್ಸಿನ ಒಂದು ವಿಶಿಷ್ಟ ಸ್ಥಿತಿಯಲ್ಲಿ, ಕಾಳಿದಾಸನ ಶಕುಂತಲೆಯಂತೆ” ದೇಗುಲವನ್ನು ಹೋಗುವಾಸೆಯೂ ಇಲ್ಲದ, ಹೊರೆದು ಹೋಗುವಾಸೆಯೂ ಇಲ್ಲದೆ ನಿಂತು ಅದನ್ನೇ ನೋಡುತ್ತಾ, ಪರಿಭಾವಿಸುವಾಗ ಧಿಗ್ಗನೆ ಸೃಷ್ಟಿಕ್ರಿಯೆಯ ಸೂಕ್ಷ್ಮವೊಂದು ಹೊರೆದು ಮತ್ತು ಮನಸ್ಸು ಪ್ರಶ್ನೆಗಳಿಗಾಗಿ ಹಣೆದುಕೊಳ್ಳುತ್ತದೆ. ಅದನ್ನು ವಿವರಿಸುವ ಮುಕ್ತಕ ಇದು:

ಹೊಗುವಾಸೆಯಲ್ಲ ಕಾಲ್ತೆಗೆ ವಾಸೆಯಿಲ್ಲ, ಸು
ಮ್ಮನೆ ಮೇಲೆನಿಟ್ಟಿಸಿ ನಿಲ್ಲುವಾಸೆಯೆನೆಗೆ
ಬೊಂಜಿಗೂಡಿದ ತೆನೆಯ ಗೋಪುರದ ಬಾಗಿಲಿನ
ಕತ್ತಲೆಯೊಳು ಕಿಣಿಕಿ ಏರಲೆನ್ನ ಬಗೆ
ಕತ್ತಲೊಳಹೊಕ್ಕು ಮರಲಿ ಹೊರ ಹಾರುವೀ
ಗಿಳಿಪಾರಿವಾಳಗಳ ಭ್ರಮಣೆಯನು ಕಂಡು
ಅವ್ಯಕ್ತದಿಂ ವ್ಯಕ್ತ ಹೊರಬರುವ ನಟನೆಯನು
ಚಿಂತಿಸುವುದೆನ್ನ ಮನ ಬಲು ಬೆರಗುಗೊಂಡು
ಏನುಳಿವುದೇ ನಳಿವುದೀ ಒಳಹೋಗುವಾಟದಲ್ಲ
ಏನಳಿವುದೇನುಳಿವುದೀ ಹೊರಬರುವಾಟದಲ್ಲಿ

ದೇವಾಲಯದಲ್ಲಿ ಜನರ ಉತ್ಸಾಹ ಮೇರೆ ಮೀರುತ್ತದೆ ಎಂದು ಈ ಹಿಂದೆ ಸೂಚಿಸಲಾಗಿದೆ. ಆ ಉತ್ಸಾಹವನ್ನು ಕಂಡು ಪುತಿನ ಅವರ ಉತ್ಸಾಹವೂ ನೂರ್ಮಡಿಯಾಗುತ್ತದೆ.

ತುಂಬುಸೆರೆಯನು ಕಂಡು ಕಡಲುಬ್ಬುಹರಿದಂತೆ
ದೇಗುಲದೊಳುಬ್ಬುವೀ ಜವವ ಕಂಡು
ಉಬ್ಬುವುದು ಹಬ್ಬುಗೆಯ ಮತ್ತೆಲ್ಲು ತಾಳದಿರು
ವುಬ್ಬಿನೊಳು ಹಬ್ಬುಗೆಯ ರಸವ ಕೊಂಡು
ದಿವ್ಯ ನೀಲದ್ಯುತಿಯ ಹನಿಯನುಣಿಸುವ ಹೀರ
ಮಕುಟದೆಳನಗೆಯ ಸುಂದರಮೂರ್ತಿಯ
ಕಂಡು ತರ್ಕದ ಬಿಗುಹು ಕಳೆದನ್ನ ಹೃದಯವಿದು
ಅರಳುವುದು ತಳೆದು ನೂತನದರ್ತಿಯ
ಕಣ್ಣಿಗಾಗಿಹುದೆನಗೆ ಆತ್ಮವೇ ವಿಷಯದೆಡ ತೊಳಗುವಂತೆ
ರಹಸ್ಯ ರಸ ಚಿಂತನವ ಬಾಹ್ಯದೊಳಗೀ ತೆರದಿ ಮೊಳಗುವಂತೆ

ಇಷ್ಟು ಮಾತ್ರವಲ್ಲ ದೇವರು, ದೇಗುಲಗಳು ಪುತಿನ ಅವರ ಬರಹಗಳಲ್ಲಿ ಆಗಾಗ, ಅಲ್ಲಲ್ಲಿ ಇಣುಕುತ್ತಲೇ ಹೋಗುತ್ತವೆ. ಅವುಗಳನ್ನೇ ನೇರವಾಗಿ ವಸ್ತುವಾಗಿ ಹೊಂದಿಲ್ಲದ ಕವನಗಳಲ್ಲೂ ಧಿಡೀರನೆ ಅವುಗಳಿಗೆ ಸೂಚನೆಗಳು ದೊರಕುತ್ತದೆ. ತೀರ್ಥಕ್ಷೇತ್ರವಾದ ಮೇಲುಕೋಟೆಯ ಸಂಪ್ರದಾಯಸ್ಥ “ಪುರೋಹಿತ” ಮನೆಯಲ್ಲಿ ಜನಿಸಿ ಅಲ್ಲೇ ಬೆಳೆದುದರಿಂದಲೂ ಅವರ ಜೀವ ನಮ್ಮ ಪ್ರಾಚೀನ ಸಂಪ್ರದಾಯಗಳಲ್ಲೂ ಅವುಗಳನ್ನು ಪೋಷಿಸುತ್ತಾ ಬಂದ ಪುರಾಣಗಳಲ್ಲೂ ಹೆಣೆದುಕೊಂಡಿರುವುದರಿಂದಲೂ ಅಂಥ ಸೂಚನೆಗಳು ಅನಿವಾರ್ಯವಾಗಿರಬಹುದು.

‘ಮಳೆ’ಯನ್ನು ಕುರಿತು “ಅದಿಗೊ ದೆಸೆಕೂಡುವೆಡೆ’ ಎಂದು ಆರಂಭವಾದ ಕವನದಲ್ಲಿ ಮಳೆಯ ಬೀಸುವಿಕೆಯನ್ನು ಸೊಗಸಾಗಿ ವರ್ಣಿಸಿದ ಮೇಲೆ ತಾವು ಅದನ್ನು ನೇರವಾಗಿ ಅನುಭವಿಸಿದ ರೀತಿಯನ್ನು ವರ್ಣಿಸುತ್ತಾರೆ.

ಸನಿಯಕೈದಿತು ಮಳೆ, ನೆನನೆದುದೆನ್ನ ಮೈ
ಕುಳಿತಡೆಯ ಕುಳಿತಿಹೆನು ಚಿರಕಾಲದಭಿಲಷಿತ
ಸಲುವ ತೆರ ಅರಿತರಾರೀ ಮೇಘನಾವ ಪಾ
ವನ ನದೀ ತೀರ್ಥವನು ತಿಂದಿಹುದೆ.

ತಕ್ಷಣವೇ-ಇಷ್ಟು ಸೊಗಸಾದ ಅನುಭವವನ್ನು ನೀಡುತ್ತಿರಬೇಕಾದರೆ-“ವೇಂಗಡದ ಮರೆಯುಟ್ಟು ಬಂದಿಹೊದೊ ಸೇಚನದೊಳೆನ್ನ ಹರಸೆ, ಕರುಣೆಯೊಳು ನಿಂತಡೆಯ ಅವಭೃತಸ್ನಾನನೆನೆಸೆ?” ಎಂಬ ಭಾವ ಅವರಲ್ಲಿ ಸುಳಿಯುತ್ತದೆ.

ಕೆಲಸ ಮಾಡಿ ದಣಿದ ಮನೆ ಕೆಲಸದ ನಾಗಿಗೂ- ದೇವರ ಕಷ್ಟವನ್ನು ನೆನೆದು ಬಿಕ್ಕಿ ಬಿಕ್ಕಿ ಅಳುವಷ್ಟು ದುಃಖ ‘ವಿಶ್ವ ಕುಟುಂಬಿಯ ಕಷ್ಟ’ ಕವನದಲ್ಲಿನಾಗಿಯ ಅಳಲಿಗೆ ಕಾರಣವನ್ನು ಹೀಗೆ ಕೊಡುತ್ತಾರೆ, ಪುತಿನಃ

ಏನೆಳ್ಳ ನಮ್ಮವ್ವ, ಇರೊವೊಂದು ಮೂವೋರು;
ನಾನು ನಮ್ಮೆಣ್ಣು ಮೊಲೆಗೂಸ
ಕಾಣಿರಾ, ಒಪ್ಪೊತ್ತುದಿಡಿಯದೆ ಕೂತರೂ
ಪ್ರಾಣಾವ ನೀಸೋದು ಕಷ್ಟ

ಹುಲುಮನಸಿಯ ಪಾಡು ಹಿಂಗಯ್ತೆ, ನಮ್ಮವ್ವ
ಮಲೆದೇವ್ರಪಾಡ ಏನೇಳ್ಳಿ!
ಸುಲಭಾನೆ ಲೋಕಾದ ಸಂಸಾರ ನಡೆಸೋದು?
ಅಳುಬಂತು ನಮ್ಮವ್ವಗಾಗಿ!

ಹೀಗೆಯೇ ಇನ್ನೂ ಅನೇಕ ಕವನಗಳಲ್ಲಿ ಮತ್ತೆ ಮತ್ತೆ ನಮ್ಮ ಮನಸ್ಸು ಪುತಿನ ದೇವಾಲಯಕ್ಕೆ, ಅಲ್ಲಿಯ ದೇವ ಸನ್ನಿಧಿಗೆ ಯಾತ್ರೆ ಕರೆದೊಯ್ಯುತ್ತಾರೆ. ‘ರಂಗವಲ್ಲಿ’ ಅಂಥದೊಂದು. ತೀರ ಮುದುಕಿ ಕಷ್ಟಪಟ್ಟು ಬೆಟ್ಟ ಹತ್ತಿ ಬಂದಿದ್ದಾಳೆ. ಚಿಂದಿಯುಟ್ಟ ತೀರ ಬಡವ ಮಲೆಯ ನರಸಿಂಹಗೀವಳಾದ ಕಾಣುಕೆ’ ಎಂಬುದು ಕವಿಯ ಕುತೂಹಲಭರಿತ ಪ್ರಶ್ನೆ ಉತ್ತರ ಅವಳ ಕ್ರಿಯೆಯಲ್ಲಿ.

ಸೆರಗಿನಿಂದ ನೆಲವ ಗುಡಿಸಿ
ಮಡಿಲೊಳಿಟ್ಟು ಮುಚ್ಚಿತಂದ
ರಂಗವಲ್ಲಿಯಿಂದ ಹಸೆಯ
ಮುದುಕಿ ಬರೆದಳು
ಅದರ ಸುತ್ತ ಬೆಳ್ಳಿ ಹೆಣಿಗೆ,
ಬೆಳ್ಳಿಯೆಲೆಯ ಮೇಲೆ ಪಕ್ಷಿ
ಯುಗದ ಬೇಟವು.

ಕವಿ ಅವಳ ಭಕ್ತಿ ಶ್ರದ್ಧೆಗಳನ್ನು ನೆನೆಯುತ್ತಾರೆ. ಅವಳು ಇದ್ದಾಳೆಯೇ ಇಲ್ಲವೋ ಆದರೆ ‘ಅವನನೊಲಿಸುವುದನೆ ಬಾಳಿದೊಂದೆ ಗುರಿಯಮಾಡಿದವಳ ನೆನಪು ಎಂದು ಮನೆಗೆ ತಂಪನೀವುದು.”

“ಯದುಗಿರಿಯ ಮೌನವಿಕಾಸ ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ಶ್ರೇಷ್ಠಕವನಗಳಲ್ಲಿ ಒಂದು. ಅದರ ಮೊದಲ ಭಾಗದಲ್ಲಿ ‘ಯದುಗಿರಿಯ ಮೂಡಣ ಕಣಿವೆಯ ಮೌನ’ದ ವರ್ಣನೆಯಿದ್ದರೆ ಎರಡನೆಯ ಭಾಗದಲ್ಲಿ ಯದುಗಿರಿಯ ಪಡುವಣ ಕಣಿವೆಯ ಮೌನದ ವರ್ಣನೆಯಿದೆ ಮೂರನೆಯದು ‘ಯದುಗಿರಿಯ ದೇಗುಲದ ಮುಂಜಾನೆಯ ಮೌನ’.

ಹೀಗೆ ಮಾನವ ವರ್ಣನೆಯಿಂದ ದೇಗುಲದ ನಿತ್ಯ ಚೈತನ್ಯಸ್ಥಿತಿಯನ್ನು ವರ್ಣಿಸಬಲ್ಲ ಇಷ್ಟು ಶಕ್ತಿ ಪುತಿನ ಅವರದ್ದು

[1] ೧೯೫೪ರಲ್ಲಿ ಮೊದಲು ಬೆಳಕು ಕಂಡ ಈ ಕೃತಿ ಕನ್ನಡಿಗರ ಔದಾರ್ಯದ ಫಲವಾಗಿ ಮೂವತ್ತೆರಡು ವರ್ಷಗಳ ಅನಂತರ ಎರಡನೆಯ ಮುದ್ರಣ ಕಂಡಿದೆ! (ಪ್ರಕಾಶನ ಕಾವ್ಯಾಲಯ, ಮೈಸೂರು).

[2] ಹೋಲಿಸಿ : ಕುವೆಂಪು