ದೇಗುಲ ಪವಿತ್ರವಾದ ಸ್ಥಳ. ಭಗವಂತ ಅಲ್ಲಿ ಮೂಡಿ ನೆಲೆಸಿದ್ದಾನೆ. ಜತೆಗೆ ಅಸಂಖ್ಯಾತ ಭಕ್ತಹೃದಯಗಳು ಅದಕ್ಕೆ ಶಕ್ತಿದಾನ ಮಾಡಿವೆ. ಎಲ್ಲೆಲ್ಲಿಯೂ ಸ್ವೇಚ್ಛೆಯಾಗಿ ಹರಹಿಕೊಂಡಿರುವ ವಿಲಾಸಿ ಪರಮಾತ್ಮ ಗರ್ಭಗುಡಿಯ ಕಗ್ಗತ್ತಲಲ್ಲಿ ಕಗ್ಗಲ್ಲಾಗಿ ಕೂರಬೇಕೆಕೆ, ಈ ಭಕ್ತರ ಸಮಾಗಮದ ಆನಂದಲಾಭಕ್ಕಲ್ಲದಿದ್ದರೆ? ದೇಗುಲ ಭಕ್ತ-ಭಗವಂತರ ನಿತ್ಯಸಮಾಗಮದ ಸಂಕೇತ ಸ್ಥಾನ.

ಅಲ್ಲಿ ಏರುವ ಭಕ್ತ ಹೃದಯಕ್ಕೆ ಭಗವಂತ ಮಾತ್ರ ಧ್ಯಾನವಸ್ತು. ಸತ್ಯ ಶಿವ ಸುಂದರಗಳೆಲ್ಲದರಲ್ಲಿಯೂ ವಿಸ್ಮಯವನ್ನು ಪಡೆಯುವ ಕವಿಚೇತನಕ್ಕೆ ಇಲ್ಲಿ ಭಗವಂತನ್ನೊಳಗೊಂಡ ದೇಗುಲವೇ ಧ್ಯಾನವಸ್ತು. ಈ ಕವಿಯ ಜೀವ ಧ್ಯಾನಪೂರ್ಣ; ಚೇತನವೋ ದರ್ಶನ ದೀಪ್ತ.

ಜಗತ್ತಿನಲ್ಲಿ ಜಂಜಡ ಹೆಚ್ಚಿದೆ ಎನ್ನುತ್ತಾರೆ. ಇಂದ್ರಿಯಲೋಲುಪತೆಯನ್ನು ಬಿಟ್ಟರೆ ಬೇರಾವುದಕ್ಕೂ ಸಮಯವಿಲ್ಲ ಎನ್ನುತ್ತಾರೆ. ಲೋಕ, ನಿರಾಶೆಯ ಅಗ್ನಿಕುಂಡ ಎನ್ನುತ್ತಾರೆ. ನಿರೀಶ್ವರತೆಯನ್ನು ಸಾರಿ ಮಾನವ ಮಹತ್ವವನ್ನು ಪಡೆದ ಎಂದೂ ಭಾವಿಸುತ್ತಾರೆ. ಹೌದೆ? ಹೌದಾದರೆ ಈಗಲೂ ಜನ ದೇಗುಲಕ್ಕೆ ಧಾವಿಸುವುದೇಕೆ?

ಮನೆಯಲ್ಲ ಮಠವಲ್ಲ ರಾಜರಮನೆಯಲ್ಲ
ಇದು ನಾಟ್ಯಮಂದಿರ ಛಾತ್ರ ಸತ್ರವಲ್ಲ
ಜೀವ ಬಯಸುವ ಭೋಗದುಪಕರಣವಲ್ಲವಿದು
ಆವರ್ಥ ಘಟಿಸಿತೀತೆರ ಮಲೆಯಕಲ್ಲ?

ಸಾಮಾನ್ಯವಾಗಿ ಜೀವ ಬಯಸುವ ಈ ಯಾವ ಭೋಗದ ಉಪಕರಣವೂ ಅಲ್ಲ, ಮಲೆನೆತ್ತಿಯ ಈ ದೇಗುಲ. ಆದರೂ ಈ ಮಲೆಯ ಕಲ್ಲು ಯಾವ ಪ್ರಯೋಜನವನ್ನು ನೀಡಬಲ್ಲುದು?

ಗೋಪುರದ ತುದಿಯಲ್ಲಿ ಬಾನೆನೆತ್ತುತ ನಿಂತು
ಇರುಳಿನೊಳು ಮಿರುತಾರಗೆಯ ಮಾಲೆಗೊಳುತ
ಮೋಡ ಮುತ್ತುವ ಜಡೆಗೆ ಜಾಹ್ನವಿಯೆ ಜಾರಿಬರೆ
ಪಕ್ಕಕೆಳವೆರೆ ಸಿಕ್ಕಿ ಕಣ್ಸವಿಯ ಕೊಳುತ
ಮೆರೆವಿದರ ದರ್ಶನವೆ ದುಡುಕಿಸುವುದೆನ್ನದೆಯ ನಡೆಯ
ಮನುಜಗಿದು ನೆಲೆಯಾಸೆಯೋ ಕಟ್ಟಕಡೆಯ?

ಭಗವಂತನನ್ನು ಒಳಗೊಳ್ಳಬೇಕಾದ ದೇಗುಲವೇ ಪ್ರಕೃತಿಯ ಭವ್ಯಾವರಣದಲ್ಲಿ ಭಗವಂತನಾಗಿ ನಿಂತಿದೆ! ಕಲ್ಪನೆಯ ನೂತನತೆ ಮಾತ್ರವಲ್ಲ ಇದು-ದರ್ಶನದ ಉನ್ಮತ್ತತೆ, ಮಲೆದೇಗುಲ ಮಹಾದೇವನಾಗಿ ನಿಂತಿರುವ ಈ ಚಿತ್ರ. ಗೋಪುರದ ತುದಿಯಿಂದ ಬಾನನ್ನೆತ್ತುತ್ತ ನಿಂತಿರುವ ಆತನಿಗೆ ರಾತ್ರಿಯ ವೇಳೆ ಹೊಳೆಯುವ ತಾರಗೆಗಳು ಮಾಲೆಯಾಗುತ್ತಿವೆ; ವ್ಯೋಮಕೇಶನಾದ ಆತನ ಜಟೆಗೆ ದೇವಗಂಗೆ ಹರಿದುಬರುತ್ತಿದ್ದಾಳೆ; ಹಾಗೆಯೇ ತೇಲಿ ಹೋಗುತ್ತಿರುವ ಬಾಲಚಂದ್ರ ಈ ಅಪೂರ್ವ ಅವಕಾಶವನ್ನು ಕಳೆದುಕೊಳ್ಳಲಿಚ್ಛಿಸದೆ ಬಂದು ಈ ದೇವಾಲಯದ ಹರಮುಡಿಯನ್ನು ಅಲಂಕರಿಸಿ ಮನೋಹಾರಿತ್ವವನ್ನು ಹೆಚ್ಚಿಸಿಕೊಂಡಿದದಾನೆ! ಈ ವೈಭವದ ದರ್ಶನ ಕವಿಯ ಎದೆಯ ನಡೆಯನ್ನು ದುಡುಕಿಸುತ್ತಿದೆ. ಮಾನವ ಹೃದಯದ ಸಕಲ ಬಯಕೆಗಳ ಕಟ್ಟಕಡೆಯೋ ಇದು ಎನ್ನುವ ಪ್ರಶ್ನೆ ಉದ್ಭವಿಸಿದೆ!

ಕವಿಯ ಹೃದಯ, ಜಿಜ್ಞಾಸುವಿನ ಬುದ್ಧಿ, ದಾರ್ಶನಿಕ ದರ್ಶನ, ಅನುಭಾವಿಯ ಅಂತರಂಗ, ನಯನದ ಚಿತ್ಕಾಂತಿಯ ಹೊಳಹು ಎಲ್ಲವೂ ಒಂದೊಂದು ಮುಕ್ತಕದಲ್ಲಿಯ ಸಮರಸವಾಗಿ ಮೈದೋರಿವೆ, ಕಾಮನಬಿಲ್ಲಿನಲ್ಲಿನ ವರ್ಣಮೇಳದಂತೆ. ಒಂದೇ ವಿಷಯವನ್ನು ಕುರಿತು ಮಿಂಚಿದ ಭಾವಗಳನ್ನು ದೀರ್ಘಕಾಲ ಪರಿಭಾವನೆಗೆ ಒಳಪಡಿಸಿ ಭಾವದ ಚಟುಲಜೀವಿಗೆ ಬುದ್ಧಿಯ ಕಡಿವಾಣವನ್ನು ತೊಡಿಸಿ, ಆದರೂ ಒಳಹೊರಗೆಲ್ಲವೂ ಸುಂದರವಾಗಿರುವಂತೆ ರೂಪಿಸಿ ನೀಡಿರುವ ಇಂತಹ ಕೃತಿಗಳು ನಮ್ಮಲ್ಲಿ ಅಪೂರ್ವ. ಈ ಕವನಗಳಲ್ಲಿ, ಅವು ಎನಿಸಿದ ರೀತಿಯ ಕಾರಣದಿಂದ, ಏಕಸೂತ್ರತೆ ಇರುವಂತೆ ಹೊರನೋಟಕ್ಕೆ ಕಾಣುವುದಿಲ್ಲ. ಕವಿಯ ‘ಮೊದಲೆರಡು ಮಾತು’ಗಳಲ್ಲಿ ಇದಕ್ಕೆ ವಿವರಣೆಯಿದೆ: “ದೇಗುಲವನ್ನು ಕುರಿತ ಒಂದು ಚಿಂತನಾ ಲಹರಿ ಈ ಪದ್ಯಗಳಲ್ಲಿ ಹರಡಿದೆ. ಈ ಪದ್ಯಗಳು ಒಂದು ಸ್ಥಾಯಿಭಾವವನ್ನು ವ್ಯಂಜಿಸಲು ಯುಕ್ತವಾದವುಗಳಾದರೂ ಒಂದು ಕಾಲದಲ್ಲಾಗಲಿ ಒಂದು ಪರಿಸರದಲ್ಲಾಗಲಿರೆದಂಥವಲ್ಲ. ಏಕಧ್ಯಾನದಲ್ಲಿ ನಿಂತು ಬಹಿರ್ಮುಖನಾದಾಗ ಕಂಡ ವಿಷಯವನ್ನು ವರ್ಣಿಸುವುದು, ತಿರುಗಿ ಅಂತರ್ಮುಖನಾಗಿ ಆ ಅಂತರಂಗವನ್ನೇ ಬಹಿರಂಗಗೊಳಿಸುವುದು, ತಿರುಗಿ ಹೊರಬರುವುದು, ಪುನಃಒಳಹೋಗುವುದು- ಹೀಗೆ ಈ ಕಾವ್ಯಕರ್ಮ ಒಂದು ವರ್ಷಕ್ಕೆ ಮೇಲ್ಪಟ್ಟ ಅವಧಿಯಲ್ಲಿ ನಡೆದಿದೆ. ಈ ಅನುಕ್ರಮಣಿಕೆಯಲ್ಲಿ ಒಂದು ಪದ್ಯದಿಂದ ಮತ್ತೊಂದಕ್ಕೆ ತಾರ್ಕಿಕ ಪ್ರಚೋದನೆ ಇಲ್ಲದಿರುವುದರಿಂದ ಇವು ಒಂದು ಸೂತ್ರಕ್ಕೆ ಹೋದಂತಿಲ್ಲದೆ ಒಂದೇ ಭಾವಗೋಳವನ್ನು ತಿರುವಿ ತಿರುವಿ ನೋಡುತ್ತಾ ಕಂಡ ಕಂಡ ಮುಖಗಳನ್ನು ಬಣ್ಣಿಸುವ ರೀತಿಯಲ್ಲಿವೆ. ಈ ಲಹರಿಗೆ ನಿಜವಾಗಿ ಕೊನೆಯಿಲ್ಲ; ಇಲ್ಲಿ ಕಾಣಬರುವ ಮುಗಿವು ನನ್ನ ಮನಸ್ಸಿನ ಸದ್ಯದ ರಿಕ್ತಸ್ಥಿತಿಯನ್ನೂ, ಧ್ಯಾನಾವಧಾರಣಾ ಮತೆಯನ್ನೂ ಊಚಿಸುತ್ತದೆ, ಅಷ್ಟೆ”

ಇವುಗಳಿಗೆ ಉಕ್ತಿ ನೀಡಲು ಪ್ರಚೋದನೆಯಾದರೂ ಸಾತ್ವಿಕನ ಸೌಮನಸ್ಯ, ಸತ್ವಶೀಲನ ಮುಗ್ಧತೆ. ಭಾವಗಳು ಬಳಿಗೆ ಬಂದಿವೆ, ಹೀಗೆ:

ಮರದೊಳೆಂತೋ ಅಂತೆ ತುಂಬೊಲುಮೆ ಸಂತನೆಡೆ
ನಿಶ್ಯಂಕೆಯೊಳು ನೆರೆವ ಹಕ್ಕಿಗಳ ತೆರದಿ
ನಿಸ್ತಬ್ಧನೆನ್ನಡೆಗೆ ಬಹ ಭೀರುಭಾವಗಳ
ಕೆಳೆಯ ನೋನೋಡೆಂದು ಸರಸ ಕೌತುಕದಿ
ನುಡಿ ಬೆರಳ ನೇವರಿಕೆಗಳವಡು ಹಲಕೆಲವ
ನಾದರಿಸಿ ತೋರುತಿಹೆ ವೃತ್ತ ವೃತ್ತದೊಳು
ಜೀವ ಜೀವದ ನಡುವೆ ಹರಿದೆನ್ನ ಜೀವವಿದು
ಪಡೆಯುತಿಹ ನಿರ್ವೃತ್ತಿಯ ಚಿತ್ರದೊಳು

ಒಲುಮೆ ತುಂಬಿರುವ ಸಂತನೆಡೆಗೆ, ಮರದಂತೆಯೇ ಆತನ ಹಿಂಸಾದೂರ ಎಂದು ಭಾವಿಸಿ ಹಕ್ಕಿಗಳು ಸುಳಿಯುವಂತೆ, ನಿಸ್ತಬ್ಧವಾಗಿ ನಿಂತ ಕವಿಯೆಡೆಗೆ ಭಯಪಟ್ಟ ಭಾವಗಳು ಬರುತ್ತಿವೆ. ಸಹಜವಾಗಿಯೇ ಮುಗ್ಧನಾದ ಆತ ಸರಸವಾದ ಕೌತುಕದಿಂದ ‘ನೋಡು ನೋಡು ಗೆಳೆಯ’ ಎಂದು ಉಳಿದವರಿಗೂ ನುಡಿಯ ಬೆರಳಿನಿಂದ ನೇವರಿಸಿ ತೋರುತ್ತಿದ್ದಾನೆ. ಎಲ್ಲವೂ ಮಾತಿಗೆ ಅಳವಡುವಂತಹವುಗಳಲ್ಲದುದರಿಂದ ಕೆಲವನ್ನು ಮಾತ್ರ ವೃತ್ತದಲ್ಲಿಟ್ಟು ನೀಡುತ್ತಿದ್ದಾನೆ. ಅನೇಕ ಜೀವಗಳ ನಡುವೆ ಹರಿಯುತ್ತಿರುವ ಕವಿಜೀವ ಪಡೆದ ನಿವೃತ್ತಿಯ ಚಿತ್ರ ಇದರಲ್ಲಿದೆ. ತನ್ನ ಅಂತರಂಗವನ್ನು ಸೌಮನಸ್ಯದಿಂದ, ಬಹಿರಂಗಪಡಿಸುವ ಬಯಕೆ ಕವಿಗೆ

ಹಿರಿಗಾಳಿ ಹೆಗ್ಗಡಲು ಬಯಲು ನೆಲ ಬೆಂಕಿಗಳಿಗೊಳಗೆ ನೀಡುವ ದಿವ್ಯ ದೇವ ಕುಲದಿ
ದೀಪ್ತಚಿತ್ತವ ಹೊಗುವ ವಿವಿಧಾನುಭೂತಿಗಳ ಕಾಂತಿಯೊಳು ನನ್ನೊಳಗೆ
ಮೆರೆಯಿಸುವ ಭರತಿ

ಜಗದೆಲ್ಲ ವಸ್ತುಗಳಿಗೂ ಅವುಗಳ ಒಳಗನ್ನು ನೀಡುವ ದಿವ್ಯ ದೇವ ಸಂಸರ್ಗದಿಂದ ದೀಪ್ತವಾಗಿರುವ ಕವಿಯ ಚಿತ್ತವನ್ನು ಪ್ರವೇಶಿಸುವ ಅನೇಕ ಅನುಭೂತಿಗಳ ಕಾಂತಿಯ ಬೆಳಕಿನಲ್ಲಿ ತಮ್ಮ ಅಂತರಂಗವನ್ನು ತೋರಿ ಮೆರೆಯಿಸುವ ಸ್ವಾಗತಾರ್ಹವಾದ ಬಯಕೆ ಅವರದು. ಆ ಬಯಕೆಯಿಂದ ಪ್ರೇರಿತರಾಗಿ ಹತ್ತು ಪಂಕ್ತಿಗಳ ಐವತ್ತು ಕವನಗಳನ್ನು ಕವಿ ನೀಡಿದ್ದಾರೆ.

ಮೊದಲನೆಯ ಕವನವೇ ಮಲೆ ದೇಗುಲಕ್ಕೆ ಕವಿಯ ಗಮನವಿಧಾನವನ್ನೂ ದೇಗುಲದ ಮಹಿಮೆಯನ್ನೂ ಸುಂದರವಾಗಿ ಒಳಗೊಂಡಿದೆ.

ಸಕಲ ಸಂದೇಹಗಳು ಬಳಿಗೈತಂದು
ಬಿಡುವ ಬಯಸುವ ತವರೆ, ಮಲೆಯ ದೇಗುಲವೆ,
ವಾಸ್ತವದೊಳಲೆದಿರವು ಪಡೆವರಿವಿನರಕೆಯಿಂ
ದೊಡೆವsಶಾಂತಿಯ ಮದ್ವೆ, ಮುನಿಹೃದಯ ಫಲವೆ
ಒಂದೊಂದು ನಿಲವಿನೊಳಗೊಂದೊಂದು ಸೊಗವಳಲ
ತೋರಿ ತಿರಿವೀ ಭವದ ನಿಶ್ಚಲಕೇಂದ್ರವೇ,
ಋಜುಅನೈಜು ಋತನೃತ ಲೇಸು ಕೇಡೆಂಬ ಬೆಲೆ.
ಗಳವಡದ ಯೋಗಿಗಳ ಮುದದಿಂ ಸಾಂದ್ರವೇ
ನಿಂತಿಹೆನು ನಾ ನಿನ್ನ ಬಾಗಿಲೆಡೆ ನಮ್ರನಾಗಿ
ನುಡಿ ತುಯ್ದು ಬವಣೆಗೊಳೆ ಭಾವಗಳ ಭಾರದಿಂ ತಲೆಯ ಬಾಗಿ.

ವಾತ್ಸಲ್ಯಮಯಿಯಾದ ತಾಯಿಯನ್ನೋ ಎನ್ನುವಂತೆ ಕವಿ ದೇಗುಲವನ್ನು ಸಂಬೋಧಿಸಿದ್ದಾರೆ. ಎಲ್ಲ ಕಡೆ ಸುತ್ತಿ ಬಳಲಿದ ಮಗು ತಾಯ ತೊಡೆಯನ್ನು ಆಶ್ರಯಿಸಿ ಬಿಡುವನ್ನು ಬಯಸುವಂತೆ ಎಲ್ಲ ಕಡೆಯು ಸುತ್ತಿ ಬಳಿದ ಸಂದೇಹಗಳು ದೇಗುಲವನ್ನು ಆಶ್ರಯಿಸುತ್ತಿವೆ-ಬಿಡುವಿಗಾಗಿ. ವಾಸ್ತವ ಜಗತ್ತಿನ ಜ್ಞಾನದ ಕೊರತೆ ಉಂಟುಮಾಡುವ ಅಶಾಂತಿಯನ್ನು ಹೋಗಲಾಡಿಸುವ ಮದ್ದು ಇದು. ಅದು ಮುನಿ ಹೃದಯದ ಫಲ. ಸುಖದುಃಖಗಳ ಸಮ್ಮಿಶ್ರಣದಿಂದ ಸುತ್ತುತ್ತಲೇ ಇರುವ ಭವದಲ್ಲಿ ದೇಗುಲ ಮಾತ್ರ ನಿಶ್ಚಲ ಕೇಂದ್ರ. ಯೋಗಿಗಳ ಹೃದಯದ ಆನಂದದಿಂದ ದಟ್ಟವಾದುದು ಅದು. ಆ ಆನಂದವೋ-ಇದು ನೇರ ಇದು ಡೊಂಕು, ಇದು ಧರ್ಮ, ಇದು ಅಧರ್ಮ, ಇದು ಒಳಿದು ಕೆಟ್ಟುದು ಎಂಬ ಲೌಕಿಕದ ಬೆಲೆಗಳನ್ನು ಮೀರಿದುದು. ಅಂತಹ ದೇಗುಲದ ಬಾಗಿಲಲ್ಲಿ ಕವಿ ಭಾವಗಳ ಭಾರದಿಂದ ಮಾತೂ ಭಾರವಾಗಿ, ತಲೆಬಾಗಿ ನಿಂತಿದ್ದಾರೆ.

ಒಂದು ನಿಲುವಿನಲ್ಲಿ ಒಂದು ಚಿತ್ತವೃತ್ತಿಯಲ್ಲಿ, ಭಕ್ತನಿಗೆ ಅದನ್ನು ಪ್ರವೇಶಿಸುವ ಆಸೆಯೂ ಇಲ್ಲ, ಹಾಗೆಯೇ ಹಿಂತಿರುಗುವ ಆಸೆಯೂ ಇಲ್ಲ. ಸುಮ್ಮನೆ ನಿಂತು ಗೋಪುರದ ಕಡೆಗೆ ನೋಡುವಾಸೆ. ಗೋಪುರದ ತುದಿಯ ಕೆತ್ತನೆಯ ಕೆಲಸವನ್ನು ನೋಡುತ್ತಿದ್ದಂತೆಯೇ ಅದರ ಕತ್ತಲಿನಾಳವನ್ನು ಹೊಕ್ಕು ಹೊರಬಂದ ಪಾರಿವಾಳಗಳನ್ನು ಕಂಡು ಅಚ್ಚರಿಗೊಂಡ ಮನ ಅವ್ಯಕ್ತದಿಂದ ವ್ಯಕ್ತ ಹೊರಬರುವ ನಟನೆಯ ಚಿಂತನೆಯಲ್ಲಿ ಲೀನವಾಗುತ್ತದೆ.

ಈ ದೇಗುಲದ ಮುಂದೆ ತಲೆಬಾಗಿ ನಿಲ್ಲಬೇಕೇಕೆ? ಆಕೃತಿಯಲ್ಲಿ ಭವ್ಯತೆಯನ್ನು ಪಡೆದಿದ್ದರೂ ಅಂತರಂಗದ ನಮ್ರತೆ ಪರಿಣತಿಯ ಪೂರ್ಣತೆಯ ಫಲ.

ಹಣ್ಣಿನಿಂ ತರುನಮ್ರ ಮೋಡ ಹನಿಯಿಂ ನಮ್ರ
ನೆರೆದ ಸಿರಿಯೊಳು ಪುಣ್ಯಪುರುಷ ನಮ್ರ
ಜ್ಞಾನಿಯರಿವಿಂ ನಮ್ರ ಆರ್ತನಳಲಿಂ ನಮ್ರ
ನೆಲೆಯರ್ತಿಗಿಂಬಾಗಿ ಭಕ್ತನಮ್ರ
ಭಾವಂಗಳಿಡಿದಿರಲು ಸತ್ಕವಿಯು ವಾಙ್ನಮ್ರ
ವಿಪುಲ ದರ್ಶನ ಶಕ್ತ ಧರ್ಮ ನಮ್ರ
ಎಲ್ಲರಹಮನು ಕಳೆದು ವೃದ್ಧಮಾಈ ಗುಡಿಯು
ಸಕಲ ಜನಕಾಯಿತಾದಾನ ನಮ್ರ
ಇಲ್ಲಿ ಮಣಿದವನೆಲ್ಲೆಡೆಯು ಸೆಟೆದು ನಿಲುವ
ಇಲ್ಲಿ ಮೈ ಕುಗ್ಗಿದವನೆಲ್ಲೆಲ್ಲು ನೇರ ನಡೆವ.

ಗುಡಿ ಎಲ್ಲರ ಅಹಂಕಾರವನ್ನೂ ಕಳೆದು ವೃದ್ಧವಾಗಿದೆ; ಎಲ್ಲರಿಗೂ ನಡಿ ನೀಡಿ ಆ ದಾನದಿಂದ, ಅಹಂಕಾರ ಬಲಿಯದೆ, ನಮ್ರತೆಯನ್ನು ಪಡೆದಿದೆ. ಇದರ ಮುಂದೆ ಮಣಿಯುವುದನ್ನು ನಡೆಯಬಲ್ಲ. ಇದರ ಒಳಹೊಕ್ಕು ಹೊರಗೆ ಬರಬಲ್ಲವನು ಶುದ್ಧನಾಗಬಲ್ಲ- ಹೃದಯವನ್ನು ಪ್ರವೇಶಿಸಿದ ಮಲಿನರಕ್ತ, ಶುದ್ಧರಕ್ತವಾಗಿ ಹೊರಬರುವಂತೆ.

ಇಲ್ಲಿನ ನಮನದ ರೀತಿ ಬರಿಯ ಬಾಹ್ಯಭಂಗಿಯಲ್ಲ. ಪ್ರಣಾಮದ ಸಮಯದಲ್ಲಿ ಚಿತ್ಕ್ರಿಯೆಯೊಂದು ನಡೆಯುತ್ತದೆ, ನಡೆಯಬೇಕು.

ಪ್ರವಹಿಸಲಿ ಮುಗಿದ ಕೈ ಮೈ ನಳಿಗೆಯಿಂದೆಲ್ಲ
ನಮನಂಗಳೆನ್ನವಾ ಸಿರಿಪದದ ತಡಿಗೆ

ಮುಗಿದ ಕೈ ಮೈ ನಳಿಗೆಯಿಂದ ಭಗವಂತನ ಶ್ರೀಪಾದಗಳಿಗೆ ನಮನಗಳು ಪ್ರವಹಿಸಲಿ, ಅಹಂಕಾರ ಅಳಿಯಲಿ, ಅವನ ಕರುಣೆ ಮೈತ್ರಿಗಳನ್ನು ನೆನೆದ ಮನಸ್ಸುಆ ಕರುಣೆಯ ತವರಿನೆಡೆಗೆ ಹರಿಯಲಿ. ಎದೆ ನೆಲದ ತಂಪನ್ನು ಅನುಭವಿಸುತ್ತಿರಲು, ತಾಯಿ ಭೂಮಿ ಮೈಭಾರವನ್ನು ಧರಿಸಲು, ಚಿತ್ತ ಹಗುರವಾಗಿ ಬಿಡುಗಡೆಯ ಸವಿಯನ್ನು ಸವಿಯುತ್ತದೆ.

ಕವಿಯ ಧ್ಯಾನಕ್ಕೆ ಈಗ ದೇವವಿಗ್ರಹ ವಸ್ತುವಾಗುತ್ತದೆ. ಯಾವನೋ ಶಿಲ್ಪಿ ಕಡೆದ ಒಂದು ವಿಗ್ರಹ ಮಾತ್ರವೇ ಇದು? ಅಲ್ಲ ಎನ್ನುತ್ತದೆ ಹೃದಯ. ರೂವಾರಿಯೊಬ್ಬ ರೂಹಿಸಿದ ಕಲ್ಲಲ್ಲ ಇದು, ಮೂರ್ತಿ. ಭಾವಿಸಿದಂತೆ ಪರಿವರ್ತನೆಗೊಳ್ಳುವ ಬಯಲೂ ಅಲ್ಲ. ಮನುಷ್ಯನ ದುಃಖದಿಂದ ಮೂಡಿದ ಒಲುಮೆ ಮಾತ್ರವಲ್ಲ, ನ್ಯಾಯವನ್ನು ನಡೆಸುವ ನಿಷ್ಠುರದ ನಿಯತಿಯೂ ಅಲ್ಲ ಆದರೆ,

ಜಡದಿಂದ ಜೀವಕ್ಕೆ ಜೀವದಿಂದಾತ್ಮಕ್ಕೆ
ಆತ್ಮದಿಂ ರಸಪದಕೆ ಇರವನಿದ ಸೆಳೆವ
ಚೇತನಾಯಸ್ಕಾಂತ ಜಾನಪದ ಹೃಚ್ಛಕ್ತಿ.

ಜಡದಿಂದ ಜೀವಕ್ಕೆ, ಜೀವದಿಂದ ಆತ್ಮಕ್ಕೆ, ಆತ್ಮದಿಂದ ರಸಪದಕ್ಕೆ ಈ ಬದುಕನ್ನು ಸೆಳೆಯುವ ಚೇತನಪೂರ್ಣವಾದ ಆಯಸ್ಕಾಂತ, ಜನಸಮಷ್ಟಿಯ ಹೃದಯದ ಶಕ್ತಿ. ಅದರಿಂದಲೇ “ಮಾನುಷ್ಯವಿಲ್ಲಿಪಡೆವುದು ತನ್ನ ಬಿಡುವ.” ಮತ್ತೆ ಇಳೆಗೆ ಆವತರಿಸಿ ಬಂದ ರಾಮಾದಿಗಳು ಈ ರೂಪದಲ್ಲಿ ನೆಲೆಸಿ ಉಸಿರಾಡುತ್ತಿದ್ದಾರೆ. ದುಸ್ಸತ್ವವನ್ನು ದಮನಮಾಡಲೆಂದು ಬಂದ ಸತ್ಪೋನ್ನತರು ಅವರು. ಮತ್ತೆಲ್ಲಿಯೂ ಕಾಣದಿಹ ಬೆಳೆಗಳನ್ನು ನಮ್ಮ ಈ ಜೀವನದಲ್ಲಿ ನೆಲೆಗೊಳಿಸಿದ ಆಭವ ಬಂಧುಗಳು ಅವರು. ಇಂದ್ರಿಯಗಳ ಪಾತ್ರದಲ್ಲಿ ರುದ್ರರಭಸದಿಂದ ಹರಿದು ಅನೇಕ ಕೇಡುಗಳನ್ನು ವೃದ್ಧಿಗೊಳಿಸುವ ಸಂಮೋದದ ಮಹಾ ಪ್ರವಾಹವನ್ನು ತಮ್ಮ ಬಾಳಿನ ಜಟೆ ಹರಡಿ ಪಳಗಿಸಿದ ವ್ಯೋಮಕೇಶರು ಅವರು. ಆದರೆ ಆ ದಾಂತರು, ಆತ್ಮಕೃಷಿಕರು ಬಂದ ಮನೆಯನ್ನು ಸೇರಿದರು. ಸೇರಿದವರೇ, ಇಲ್ಲ.

ನಂದರುಸಿರಾಡುವರು ದೇವ ಮಂದಿರ ಮೂರ್ತಿ ಶಿಲ್ಪಗೊಳು

ಈ ಧ್ಯಾನದಿಂದ, ದರ್ಶನದಿಂದ ದೊರಕೊಳ್ಳುವುದು ನಲವು, ಆನಂದ. ಆದರೆ ಮಾತು ಅದನ್ನು ಸೆರೆಹಿಡಿಯಲಾರದು. ಸುಸೂಕ್ಷ್ಮವಾದ ರೂಪಕವೊಂದು ಅದರ ಸೂಕ್ಷ್ಮ ಸ್ಥಿತಿಯನ್ನು ಸೂಚಿಸುತ್ತದೆ.

ಈ ಧ್ಯಾನದಿಂದ, ದರ್ಶನದಿಂದ ದೊರಕೊಳ್ಳುವುದು ನಲವು, ಆನಂದ. ಆದರೆ ಮಾತು ಅದನ್ನು ಸೆರೆಹಿಡಿಯಲಾರದು. ಸುಸೂಕ್ಷ್ಮವಾದ ರೂಪಕವೊಂದು ಅದರ ಸೂಕ್ಷ್ಮ ಸ್ಥಿತಿಯನ್ನು ಸೂಚಿಸುತ್ತದೆ.

ಚೇತನ ಪ್ರತ್ಯೇಕ ಚಿದ್ಭೂತಿಯೇ, ನಲವೆ,
ನಿನ್ನ ಹಸಿರಾರುವುದು ನುಡಿತೇರು ಹರಿಯೆ
ಸೂಕ್ಷ್ಮನೀ, ದಿನ ಬಳಕೆ ನುಣ್ಣ ಮಾತಿದು ತೋರ
ಅರಿದಿದಕೆ ನಲುಗಿಸದೆ ನಿನ್ನ ಹಿಡಿಯೆ

ಮಾತು ದಿನದ ಬಳಕೆಯಿಂದ ನುಣ್ಣಗಾಗಿದೆ ನಿಜ. ಆದರೂ ನಲವಿನ ಸೂಕ್ಷ್ಮತೆಯ ಮುಂದೆ ಅದು ಒರಟೇ. ಮಾತಿನ ತೇರು ಹರಿದರೆ ಆನಂದದ ಹಸಿರು ಆಘಾತಗೊಳ್ಳುತ್ತದೆ, ಆರುತ್ತದೆ. ಆದುದರಿಂದಲೇ ಆತ್ಮಪ್ರವಾದಿ, ಮುದ್ರಾದಿ ತಂತ್ರ ಸಂಕೇತಗಳ ನೆರವನ್ನೂ ಅರ್ಥದ ಬಂಧನ ಕಡಿಮೆಯಾಗಿರುವ ಮಂತ್ರಗಳ ನೆರವನ್ನೂ ಕೋರುತ್ತಾನೆ. ಕೊನೆಯ ಎರಡು ಪಂಕ್ತಿಗಳು ಆ ನಲವನ್ನು ಹಿಡಿದಿಡಲು ಕವಿಯ ಅಶಕ್ತತೆಯನ್ನೂ ಆ ನಲವಿನ ಪರಿಣಾಮವಾಗಿ ಒದಗುವ ಅದ್ಭುತ ಸ್ಥಿತಿಯನ್ನೂ ಸೂಚಿಸುತ್ತದೆ.

ಹಾ ನಲವೆ, ನಿನ್ನ ತಡೆದಿಡಲೆನ್ನ ಜಾಗರದೊಳಿಲ್ಲ ಜಾಗ
ಕಂಡ ಜಡ ಜಂಗಮಕೆ ಕೈಯ ಜೋಡಿಸುವುದೇ ಕುಶಲವೀಗ

ಇಂತಹ ಆನಂದ ಮನೋಜನ್ಯ ಭ್ರಾಂತಿಯಲ್ಲವೆಂಬುದಕ್ಕೆ ಕುರುಹೇನು? ಆ ಗಳಿಗೆಯಲ್ಲಿ ಮಾತ್ರವಲ್ಲದೆ ಅನಂತರದ ಬದುಕಿನಲ್ಲಿಯೂ ಅದು ಬಿಟ್ಟುಹೋಗುವ ನಲವಿನ ನೆನಹಿನ ನೆರಳು. ಬೆರೆದರೂ ಬೆರೆದಿಲ್ಲದಂತಿರುವ ಸ್ಥಿತಿ ಅದು. ವಿಷಯ ಆತ್ಮಗಳ ಸಂಗಮದ ಆನಂತ್ಯ. ಸೋಂಕಿತು ಎನ್ನುವಾಗ ಅರಿವು ಕರಗುತ್ತದೆ. ಆದುದರಿಂದ ಸೋಂಕಿದುದೆಂದು ಹೇಳುವುದೆಂತು ಎಂದರೆ ‘ನೆನವೆಂಬ ನೆರಳು’ ಉಳಿಯುವುದರಿಂದ. ಪ್ರತ್ಯಕ್ಷ ಎನ್ನುವಂತೆಯೂ ಇಲ್ಲ, ಪಡಲಿಲ್ಲ ಎನ್ನುವಂತೆಯೂ ಇಲ್ಲ- ಅಂತಹ ಸ್ಥಿತಿ ಅದು.

ಬೆರೆದರೂ ಬೇರೆಂದೆ ಸಮದೂರದೊಳು ಸರಿವ
ವಿಷಯಾತ್ಮಸಂಗಮಿಸುವಾನಂತ್ಯವೇ,
ಸೋಂಕಲರಿವೇ ಕರಗಿ ನೆನೆವೆಂಬ ನೆರಳುಳಿಯೆ
ಪ್ರತ್ಯಕ್ಷವೆನಲಾಗದಾನಂದವೇ,
ಪಡಲಿಲ್ಲವೆನಲಾಗದಪರೋಕ್ಷದನುಭವವೆ,
ಅರಿತಿಲ್ಲದೆನಲಾಗದಾನಂದದರುಳೇ,
ಒಲಿವಂದಮೆನ್ನೆಸಗಿ ಒಲದಕೊಳೆ ಕೈತೆರೆಯು
ತಾವರ್ತ ತೇಜದೊಳು ಬೆಳಗುವಿರುಳೇ,
ಮನ ಮನವ ಎಳೆಗೊಂಡು ಮುಡಿವ ಮೂರ್ತಿ
ನಮ್ಮರ್ತಿ ಮಡುಗೊಳುವ ಗುರಿಯೊಳೇ ನಿನ್ನ ಕೀರ್ತಿ?

ಈ ದಿವ್ಯಾನುಭೂತಿಯಿಂದ ಮೈದೋರಿದ ನಲವು ಸಮಸ್ತ ಪ್ರಕೃತಿಯಲ್ಲೂ ಉಕ್ಕಿ ಹರಿಯುವ ಅನುಭವ ಕವಿಗಾಗುತ್ತದೆ. ಹಸಿರೆಲೆಗಳಲ್ಲಿ ರವಿಯ ತೇಜವನ್ನು ತಳೆದು ಜೀವಕ್ಕೆ ಅರ್ಘ್ಯವನ್ನು ಎರೆಯುವ ಬಲದ ನಲವು, ಕೆರೆ ಕೆರೆಗಳ ವಿಸ್ತಾರದಲ್ಲಿ ಜಲಹಾಸವನ್ನು ಮೆರೆಸಿ ಭೂಮಿಯನ್ನು ಸುಂದರಗೊಳಿಸುತ್ತಿರುವ ಬಿಸಿಲಿನ ನಲವು, ಅಲೆ ಕೆದರುವಂತೆ ಮರ ಬೆದರುವಂತೆ ಗಗನದಿಂದ ಧುಮುಕಿ ಎತ್ತರಕ್ಕೆ ಏರಿ ಮೊರೆಯುವ ಗಾಳಿಯ ನಲವು, ಬೆಳಕುಗಾಳಿ ಹಸಿರುಗಳ ಮೊಮ್ಮಗನಾದ ಸೌಂದರ್ಯಾರಾಧಕ ತನ್ನ ಇಂದ್ರಿಯಗಳಲ್ಲಿ ಪಡೆದು ನಲಿಯುತ್ತಿರುವ ನಲವು- ಈ ಎಲ್ಲ ನಲವು ಬೆರಗಳನ್ನೂ ಕೊಳ್ಳುವಂತೆ ತೋರುತ್ತಿದೆ, ಆದಿಯಿಂದ ಇಂದಿನವರೆಗೆ ನಡೆದ ದಣಿವನ್ನು ಕಳೆಯುತ್ತಿರುವ ಗುಡಿಯಿದಿರು ನಿಂತ ಜನದ ನಮನಕ್ರಿಯೆ.

ಮತ್ತೊಂದು ಅನುಭವ. ಅನುಭವದಂತೆಯೇ ಇಲ್ಲಿ ಉಕ್ತಿಯೂ ನೂತನ ಎಂಬುದನ್ನು ಗಮನಸಿಬೇಕು. ‘ತೊರೆ ಹಾಡುತಿರೆ, ಚುಕ್ಕಿ ಸೂಜಿವೆಳಗಿಂ ಚುಚ್ಚಿ ಬಗೆ ಬಗೆ ಭಾವಗಳ ಹಚ್ಚೆಯೊತ್ತೆ.’

ಇನ್ನೊಂದು ಚಿತ್ರಪಂಕ್ತಿ
ಏಕಕಾಂಡದೊಳೆದ್ದು ಮೇಲೆ ಬಾನನು ತಾಗಿ
ಥಟ್ಟನಲ್ಲಿಯೆ ತನ್ನ ಕಟ್ಟ ಕಳೆದ ಬಗೆ
ಆಡುತಿಹ ಗರಿಗಳನು ದೆಸೆದೆಸೆಗೆ ಹರಹುತ್ತ
ನಿಂತ ತೆಂಗಿನ ಮೇಲೆ ಹರಿವುದೆನ್ನ ಬಗೆ
ನಡುವೆ ಗುಡಿಗೋಪುರದೊಲೆಸೆವ ಮಾಮರದಲೆಯ
ತುರುಗಲೊಳು ತಂಗುವುದು ತವರ ಕಂಡಂತೆ
ಗಗನದಮೃತದ ಮೊಲೆಯ ಸೀಪುವೆಲೆಗಳ ನಡುವೆ
ಮುದದ ಹನಿಯಾರಿಸುತ ತೇಮಗೊಳುವಂತೆ
ನುಡಿಗೆ ಬಾರದ ಚೆಲುವಿನೊಳಸೊಗದ ಸಂಗಮದ ಬಿತ್ತರಿ
ಸುತಿದೆ ವೇಣುಗಾನಲಹರೀ
ದೈವ ಚಿಂತಾಸಕ್ತಮಾದೆನ್ನ ಹೃದಯದೊಳು ಹೊಮ್ಮಲಂತಃ
ಶರ್ಮ ಲಹರೀಲಹರೀ.

ಲಕ್ಷ್ಮಿಯೊಡಗೂಡಿದ ನಾರಾಯಣನ ಮುಖದಲ್ಲಿ ಮಧುರ ಮಂದಹಾಸ ಮುಡಿನಿಂತಿದೆ. ಜಗತ್ತಿನ ಜನಸಮೂಹದ ಅನಂತ ಬಗೆಯ ಸಿದ್ಧಿಗಳನ್ನು ಸಾಕ್ಷಿಭಾವದಿಂದ ಆ ಈಕ್ಷಿಸುತ್ತಾ ನಿಂತಿದ್ದಾನೆ. ಸಿಡಿಲನ್ನು ಪಳಗಿಸುವ ಅರಿವು, ರವಿಯನ್ನು ಸರೆಹಿಡಿಯುವ ಅರಿವು, ಬಾನನ್ನು ಜಾಲಾಡಿ ತಾರೆಗಳನ್ನು ಅಳೆವ ಅರಿವು ಸೂಕ್ಷ್ಮಾತಿಸೂಕ್ಷ್ಮಗಳನ್ನು ಬಯಲುಮಾಡುವ ಅರಿವು, ವಸ್ತುಗಳಲ್ಲಿ ಅವಿತಿರುವ ಸೆಳೆತಗಳ ಹಣವನ್ನರಿತು ಸುಖಕ್ಕೆ ಹೊಸ ಹೊಸ ಸಂಘಾತಗಳನ್ನು ನಿಲಿಸುವ ಅರಿವು ಇವುಗಳನ್ನು ಅಂಗಳದಲ್ಲಿ ಆಡುವ ಮಗುವನ್ನೆಂತೋ ಅಂತು ನಿಂತು ನೋಡುತ್ತಿದೆ ಇರವು! ಎಲ್ಲ ವಿಕೃತಿಗಳ ತಳದ ಸತ್ವದ ವಾತ್ಸಲ್ಯ ದೃಷ್ಟಿಯನ್ನು ರೂಪಿಸುವವನಂತೆ ಸಿರಿ ಸಹಿತ ಸಿರಿರಾಯ ಉತ್ಸವದಿಂದ ಮಂದಹಾಸವನ್ನು ಬೀರಿ ನಿರ್ಲಿಪ್ತನಾಗಿ ನಿಂತಿದ್ದಾನೆ!

‘ಮೇಲೆ ದೇಗುಲ’ದ ಐವತ್ತೂ ಕವನಗಳು ದೀರ್ಘಕಾಲದ ಚಿಂತನೆ ಧ್ಯಾನಗಳಿಗೆ ಅಳವಡಬೇಕಾದಂಥವು. ಪರಮ ಆನಂದಾನುಭೂತಿ ಚಿಂತನೆಗೆ ಅವತರಿಸಿ, ಕಲೆಯನ್ನು ವರಿಸಿ ಮೈದೋರಿರುವ ಕೃತಿ ಇದು. ಕಲಾರಾಧನೆ, ಚಿಂತನೆ ಇವುಗಳಿಂದಲೇ ಆ ಆನಂದಾನುಭೂತಿಯನ್ನು ಮತ್ತೆ ಸಹೃದಯ, ಭಕ್ತ ಪಡೆದುಕೊಳ್ಳಬಲ್ಲ. ಈ ಕಿರುಲೇಖನ ಒಂದು ದಿಕ್ಸೂಚಿ ಮಾತ್ರ. ಕವಿಯೂ ಇದರ ಒಂದು ವಿವರಣೆಗೆ ಪ್ರಯತ್ನಿಸುತ್ತಿದ್ದಾರೆ. ಅವರ ಮಾತುಗಳಿಂದ ಇದನ್ನು ಮುಗಿಸಬಹುದು. “ಮನುಷ್ಯವರ್ಗದಲ್ಲಿ ಉಚ್ಚತಮವಾದ ನೆಲೆಗೇರಿದ ಚೈತನ್ಯಸತ್ವದ ಹಾರೈಕೆಯಲ್ಲ ಇನ್ನು ಈ ಆನಂದದತ್ತ ಜಾಗೃದವಸ್ಥೆಗೆ ಪ್ರತೀತವಾದ ಇರವಿನ ಬೆಲೆ ಸುಖ, ಸ್ವಾಸ್ಥ್ಯ; ಅದನ್ನು ಮೀರಿ ಆನಂದದ ಪ್ರತೀತಿಯಲ್ಲಿರುವ ಇರವಿಗೆ ಈ ಬೆಲೆ ತಗದು. ಅಲ್ಲಿನ ಎಲ್ಲ ಬೆಲೆಗಳನ್ನೂ ಪಲ್ಲಟಿಸುವ ತ್ಯಾಗವೈರಾಗ್ಯಗಳು ಇಲ್ಲಿ ಮೊಳೆದೋರುತ್ತವೆ. ಇನ್ನು ಅದರ ಪ್ರಾಪ್ಯರಸಸ್ಥಿತಿ. ಈ ಸ್ಥಿತಿಗೆ ಪ್ರಥಮ ಸೋಪಾನದಂತಿದೆ ಕಲೆ; ಅಲ್ಲಿ ಮೊದಲಿಡುವ ರಸಾವಸ್ಥೆಯ ಪರಿಧಿಯಲ್ಲಿ ಹೊಂಚುವವ ಕಾವ್ಯವಸ್ತುವೆನಿಸಿಕೊಂಡು ಪ್ರತಿಭೆಯ ಮೆರುಗನ್ನು ತಳೆದು ಸಂಮೋಹನವಾಗುತ್ತದೆ. ಈ ಮೆಟ್ಟಿಲನ್ನೇರಿದರೆ ನಾವು “ದೇಗುಲ”ವನ್ನು ಮುಟ್ಟುತ್ತೇವೆ, ಮುಂದೆ ಮೌನ. ಇನ್ನೊಂದು ರೀತಿಯಲ್ಲಿ, ಮೊದಲು ರಸಾವಸ್ಥೆಯ ಮೌನ, ಅದರ ಪಾಂತ್ಯದಲ್ಲಿ ದೈವಭಾವದ ಜಾಗರ, ಅದರ ಕೆಳಮಟ್ಟದಲ್ಲಿ ಕಲೆಯೆಚ್ಚರ, ಅದರ ತಲದಲ್ಲಿ ಭವ ಅಥವಾ ನಿಯತಿ ನಿಯತ ಜಗದಲ್ಲಿನ ಜಾಗ್ರದವಸ್ಥೆ.

“ಹೀಗೆ ಮನುಷ್ಯನ ನೆಲೆಯಲ್ಲಿ ಚೈತನ್ಯದೇರಿಳಿತಗಳು” ‘ದೇಗುಲ”ವೆಂಬ ಭವ್ಯಕಲ್ಪನೆ, ಈ ಏರುವಿಕೆಯ ಒಂದು ನೆಲೆಯ ಸ್ಥಿರೀಕರಣಕ್ಕೆ ದೇವಮಾನವರು ಕಲ್ಪಿಸಿರುವ ಉಪಾಯಗಳಲ್ಲೊಂದು; ಭವಮಗ್ನರಿಗೂ ರಸದರಿವು ಸ್ವಲ್ಪವಾದರೂ ಆಗಲೆಂಬುದು ಅವರ ಆಶಯ. ನೀರಿನಾಸರೆಯುಳ್ಳ ಪೈರಿಗೂ ಮುಗಿಲಹನಿ ಬಿದ್ದಲ್ಲದೆ ತೆನೆ ಹುಲುಸದಿರುವಂತೆ ವಿಜ್ಞಾನದಿಂದ ಸಮೃದ್ಧವಾಗಿ ಜಾಗ್ರದವಸ್ಥಾಪ್ರಭೂತವಾದ ಮಾನವ ಜೀವಿತಕ್ಕೆ ಈ ರಸಾವಸ್ಥೆಯ ಸ್ಪರ್ಶವಿಲ್ಲದೆ ಹುಲುಸಿಲ್ಲ. ‘ದೇಗುಲ’ಗಳು ಈ ಮೋಡಗಳನ್ನು ತಡೆದಿಡುವ ಮಳೆಗಳು. ಸಾಧುಸಿದ್ಧಸಂತರ ತೇಜಗಳನ್ನು ಹೊಳೆಸಿ ಅಲೌಕಿಕ ಭಾವಗಳನ್ನು ಮಿಂಚಿಸುತ್ತಾ, ಋಷಿಮುಖೋದ್ಗತ ಬ್ರಹ್ಮಬೃಂಹಿತಗಳಿಂದ ಸಕಲರನ್ನೂ ಉಲ್ಲಾಸಗೊಳಿಸುತ್ತಾ, ಎಲ್ಲ ತಾಪಗಳನ್ನೂ ಕಳೆಯುತ್ತಾ, ಎಲ್ಲ ಕಲೆಗಳನ್ನೂ ಕಳೆಗೊಳಿಸುತ್ತಾ ಮೆರೆವ ದೇಗುಲಗಳೂ ದೀಪೋತ್ಸವಗಳೂ ವನಪರ್ವತ ಸಾಗರಗಳಂತೆ ಮತ್ತು ಭವಾವೇಗಗಳಂತೆ ವಿಷಯಸ್ಥಾನದಲ್ಲಿ ತೀವ್ರ ಸಂವೇದನೆಗಳನ್ನು ಪ್ರಚೋದಿಸಿ ಕಾವ್ಯ ಜಾಗರವನ್ನು ತರಬಹುದಲ್ಲವೆ? ಅಥವಾ ‘ದೇಗುಲ’ದಲ್ಲಿ ನಾನು ಪಟ್ಟುಪಟ್ಟು ಇದುವರೆಗೆ ಧರಿಸಿದ್ಧ ವಿಚಿತ್ರಾನುಭೂತಿಗಳು ಇನ್ನು ನಾನು ಸದಾಶ್ರಯವಲ್ಲವೆಂದರಿತು ಹೀಗೆ ಈ ವಾಕ್ಕಾಯದಲ್ಲಿ ತಮ್ಮ ಭವವನ್ನು ಮುಂದುವರಿಸಲು ಹವಣಿಸುತ್ತಿವೆಯೋ?”