ಪು.ತಿ.ನ. ಅವರ ‘ಹಂಸ ದಮಯಂತಿ ಮತ್ತು ಇತರ ರೂಪಕಗಳು’ ಮುಖ್ಯವಾಗಿ ಗೀತರೂಪಕಗಳು. ಎಂದರೆ ಸಂಗೀತ ಪ್ರಧಾನವಾದುವು. ಕನ್ನಡ ಸಾಹಿತ್ಯದ ದೀರ್ಘ ಇತಿಹಾಸದಲ್ಲಿ ನಾಟಕ ಎಂಬ ಪ್ರಕಾರವೇ ಅಷ್ಟು ಹಳೆಯದಲ್ಲ. ಇತ್ತೀಚೆಗೆ ಈ ರೂಪ ತಕ್ಕಮಟ್ಟಿಗೆ ಬೆಳೆದಿದ್ದರೂ ‘ಗೀತ ರೂಪಕ’ ಎಂಬ ಪ್ರಕಾರವಂತೂ ಅಷ್ಟಾಗಿ ಬೆಳೆಯಲಿಲ್ಲ. ಈ ದೃಷ್ಟಿಯಿಂದ ಪು.ತಿ.ನ. ಅವರ ಕೊಡುಗೆ ಅಮೂಲ್ಯವಾದದ್ದು.

ಒಂದು ಹೊಸ ರೂಪವನ್ನು ನಮ್ಮಲ್ಲಿ ಬೆಳೆಸಿದರೂ ಎಂಬ ಕಾರಣಕ್ಕಾಗಿ ಅಷ್ಟೇ ಅಲ್ಲ ಪುತಿನ ಅವರಿಗೆ ಮಾನ್ಯತೆ ಸಲ್ಲುವುದು. ಅವರು ನೀಡಿದ ಈ ಪ್ರಕಾರ ಗುಣದಲ್ಲಿ ತುಂಬ ಬೆಲೆಯುಳ್ಳದ್ದು. ಸಾಹಿತ್ಯದ ದೃಷ್ಟಿಯಿಂದಲೂ, ಸಂಗೀತದ ದೃಷ್ಟಿಯಿಂದಲೂ, ನೃತ್ಯಕ್ಕೆ ಅಳವಡಿಸಬಹುದು ಎಂಬ ದೃಷ್ಟಿಯಿಂದಲೂ ಕನ್ನಡದ ಗೀತರೂಪಕಗಳ ಸೃಷ್ಟಿಯಲ್ಲಿ ಅದ್ವಿತೀಯವಾದ ಸ್ಥಾನವನ್ನು ಪುತಿನ ಅವರ ಗೀತರೂಪಕಗಳು ಗಳಿಸಿಕೊಂಡಿವೆ.

ಪುತಿನ ಅವರು ಪ್ರಧಾನವಾಗಿ ಕವಿ, ಶ್ರೇಷ್ಠಕವಿ. ಅವರ ಗೀತ ರೂಪಕಗಳನ್ನು ಪರಿಶೀಲಿಸುವಾಗ ಮೊದಲು ಗಣನೆಗೆ ತೆಗೆದುಕೊಳ್ಳಬೇಕಾದ ಅಂಶ ಇದು. ಏಕೆಂದರೆ ನಿಜವಾದ ಸಾಹಿತ್ಯಕ ಗುಣವಿಲ್ಲದೆ ಎಷ್ಟು ಸೊಗಸಾದ ಹಾಡುಗಳನ್ನು ಬರೆದರೂ ಅವು ಸಾಹಿತ್ಯ ಕ್ಷೇತ್ರದಲ್ಲಿ ಸತ್ವಯುತವಾದುವು ಎಂದು ಎಣಿಕೆಗೆ ಬರುವುದಿಲ್ಲ. ಪುತಿನ ಅವರ ಹಾಡುಗಳಾದರೋ ಸಾಹಿತ್ಯಕ ಮೌಲ್ಯವುಳ್ಳವು. ಆದ್ದರಿಂದ ಸಾಹಿತ್ಯ ಕ್ಷೇತ್ರದಲ್ಲಿ ನಿಲ್ಲತಕ್ಕವು.

ಎರಡನೆಯದಾಗಿ ಸಂಗೀತದ ದೃಷ್ಟಿಯಿಂದ ಗಮನಿಸಬೇಕಾದ ಅಂಶ: ಪುತಿನ ನಮ್ಮ ನಾಡಿನ ಶ್ರೇಷ್ಠ ಸಂಗೀತ ತಜ್ಞರಲ್ಲಿ ಒಬ್ಬರು. ಸಂಗೀತವನ್ನು ಶಾಸ್ತ್ರೀಯವಾಗಿ ಬಲ್ಲವರು. ಹೀಗಾಗಿ ರಾಗಗಳ ಸ್ವರೂಪ ಅವರಿಗೆ ಸುಪರಿಚಿತ. ಆದ್ದರಿಂದ ಆಗಿರುವ ಲಾಭವೆಂದರೆ ಯಾವ ಯಾವ ಭಾವಕ್ಕೆ ಯಾವ ರಾಗ ಅನುಗುಣವಾದದ್ದು ಎಂದು ತಿಳಿದು ಅದಕ್ಕೆ ತಕ್ಕಂತೆ ಗೀತೆಗಳನ್ನು ರಚಿಸಿದ್ದಾರೆ. ಈ ಎಲ್ಲ ಅಂಶಗಳೂ ಸೇರಿ ಅವರ ರೂಪಕಗಳು ಸಹಜವಾಗಿಯೇ ಶ್ರೇಷ್ಠವಾದ ಗೀತರೂಪಕಗಳಾಗಿವೆ. ಅವುಗಳಲ್ಲಿ ಮೂರನ್ನು ಇಲ್ಲಿ ಪರಿಶೀಲಿಸೋಣ.

ಮೊದಲನೆಯದಾಗಿ ಹಂಸ-ದಮಯಂತಿ. ಇಲ್ಲಿ ಕಥೆಯ ಅಂಶ ಹೆಚ್ಚಾಗಿಲ್ಲ. ಅಲ್ಲದೆ ಪರಿಚಿತವದದ್ದೂ ಅಲ್ಲ. ನಳನ ಸಂದೇಶವನ್ನು ದಮಯಂತಿಗೆ ತಲುಪಿಸಿದ ಹಂಸ ಇಲ್ಲಿ ಪಾತ್ರಗಳಲ್ಲಿ ಒಂದು. ‘ಹಿಮವತ್ಪರ್ವತದ ಮಾನಸ ಸರೋವರ ವಾಸಿಯಾದ ಹಂಸವು ಮರ್ತ್ಯರ ಪ್ರಣಯ ಸಂದೇಶ ವಾಹಕವಾಯಿತು ಎಂಬುದೇ ವಿಚಿತ್ರ’ ಎನ್ನುತ್ತಾರೆ ಕವಿ.

ಮೊದಲನೆಯ ಹಾಡಿನಲ್ಲಿ ಕತೆಗಾರನ-ಕಲೆಗಾರನ ಎಂದರೂ ಸರಿ ಹೊಂದುತ್ತದೆ-ಕೌಶಲದ ವರ್ಣನೆಯಿದೆ. ಇಲ್ಲಿನ ವಸ್ತು ಕೂಡ ಹಳೆಯದೇ-ನಾಗಚಂದರಾದಿಗಳು ಹೇಳಿದ್ದೇ. ಆದರೆ ಹಾಡು ಅದನ್ನೇ ಹೊಸದಾಗಿ ಹೇಳುತ್ತಿದೆ; ವ್ಯಥೆಗಳ ಕಳೆಯುವ ಕತೆಗಾರ, ನಿನ್ನ ಕಲೆಗೆ ಯಾವುದು ಭಾರ? ಯಾವುದು ವಿಸ್ತರ? ಯಾವುದು ದುಸ್ತರ? ಕತೆಗಾರ ಹರ್ಷದ ಹರಿಕಾರ, ಕವಿ ಹೆಗ್ಗಡಲನ್ನು ಹಾರಿತು ಎನ್ನುತ್ತಾನೆ, ಬೆಟ್ಟದಿಂದ ಕಡಲನ್ನು ಕಡೆದರು ಎನ್ನುತ್ತಾನೆ, ಅವನ ಊಹೆಯ ಹೇರಾಳನ್ನು ತುಂಬಲು ಸೃಷ್ಟಿಕರ್ತನಿಗೂ ಅಸಾಧ್ಯ ಎಂಬುದು ಎಲ್ಲರಿಗೂ ತಿಳಿದದ್ದು. ಅದಕ್ಕೆ ಅನುಗುಣವಾಗಿಯೇ ಈ ರೂಪಕವೂ ಸೃಷ್ಟಿಯಾಗಿರುವುದು. ಇಲ್ಲದೇ ಹೋದರೆ ಹಂಸ ಮಾತನಾಡುವುದು ಎಂದರೇನು? ಒಬ್ಬರ ಮುಂದೆ ಮತ್ತೊಬ್ಬರನ್ನು ವರ್ಣಿಸುವುದು ಎಂದರೇನು? ಪರಸ್ಪರರಲ್ಲಿ ಪ್ರೇಮವನ್ನು ಉಕ್ಕಿಸುವುದು ಎಂದರೇನು?

ಹೀಗೆ ಪೀಠಿಕೆ ಹಾಕಿದ ಮೇಲೆ ಮೊದಲನೆಯ ದೃಶ್ಯದಲ್ಲೇ ಹಂಸಗಳು ಹಾಡುತ್ತವೆ. ಈ ಇಡೀ ರೂಪಕದ ಸ್ವಾರಸ್ಯ ಇಲ್ಲಿನ ಕಾವ್ಯ ಸೌಂದರ್ಯ. ಅದಕ್ಕೆ ನಿದರ್ಶನ ಮೊದಲ ಹಾಡಿನಲ್ಲೇ ಕಾಣುತ್ತದೆ!

ನೀರಿನೆಳೆಯ ತಂಬೂರಿಯ ಮೀಟುತ
ಶ್ರುತಿ ನುಡಿಸುವ ಪಾದಗಳಲ್ಲಿ?
ಕೊರಳ ಬಳುಕಿನೊಳೆ ತಾಳವನಂಕಿಸಿ
ನಡೆಯ ತೋರ್ವ ಬಿನದಿಗಳಲ್ಲಿ?
ಚಂಚಲ ಜಲದಲ್ಲಿ
ಬಿಂಬವ ಚಲ್ಲಿ
ಎದೆಯೊಳಗಣ ಬರಿ ಮೂಕ ಭಾವಗಳೆ
ರೇಖೆಗೊಳುವ ಪರಿ ನೆರಳಿಂದೇಳುತ
ತೇಲುವ ಚಂದಿಗರೆಲ್ಲಿ?

ಇಲ್ಲಿನ ವಿವರಗಳ ಸೊಗಸನ್ನು ಗಮನಿಸಿ. ಹಂಸದ ಪಾದಗಳು ನೀರಿನ ಮೇಲೆ ಚಲಿಸುತ್ತವೆಯಷ್ಟೆ? ಅವು ನೀರಿನ ಎಳೆಯ ತಂಬೂರಿಯನ್ನು ಮೀಟಿ ಶ್ರುತಿಯನ್ನು ನುಡಿಸುವ ಬೆರಳುಗಳು! ಕೊರಳ ಬಳುಕಿನಲ್ಲೇ ತಾಳವನ್ನು ಅಂಕಿಸಿ ನಡೆಯನ್ನು ತೋರಿಸುವ ವಿನೋದಿಗಳು ಅವು! ಮುಂದಿನದು ಇನ್ನೂ ನವುರಾದ ಚಿತ್ರ. ಚಂಚಲವಾದ ಜಲದಲ್ಲಿ ಬಿಂಬವನ್ನು ಚೆಲ್ಲಿ ಎದೆಯಲ್ಲಿನ ಬರಿಯ ಮೂಕಭಾವಗಳೇ ರೇಖೆಗೊಳ್ಳುವಂತೆ ನೆರಳಿನಿಂದ ಏಳುತ್ತ ತೇಲುವ ಚಂದಿಗರು ಅವು!

ಮುಂದಿನ ಎರಡು ಪಂಕ್ತಿಗಳು:

ಹಾರಿ ಹಾರಿ ನಾವೂರ ನೂರ ಕಳೆದೇರಿಯೇರಿ ನಭಕೆ
ದೂರ ದೂರ ಕಾಸಾರ ತೀರಕೋಗುಡುತ ಸೇರುವುದಕೆ

ಹಕ್ಕಿಗಳು ಹಾರಿ ಹಾರಿ ದೂರದ ಸರಸಿಯ ತೀರಕ್ಕೆ ತಲುಪುವ ಚಿತ್ರವನ್ನು ತಮ್ಮಲ್ಲಿನ ಮಾತುಗಳಿಂದಲೇ ಸೃಷ್ಟಿಸುತ್ತವೆ.
ಅದರ ಮುಂದಿನ ಎರಡು ಪಂಕ್ತಿಗಳೂ ಅಷಟೆ:

ನೀಳ್ಕೊರಳೊಳು ಗಾಳಿಯ ಕೊರೆದಾಗಸದೊಳು ಬಳಿ ಮಾಡಿ
ನೀಲಾಂಬರತಾಗಲು ಜಾಲಿಯ ಹೂಮಾಲೆಯ ನೋಡಿ

ಹಂಸಗಳು ತಮ್ಮ ನೀಳವಾದ ಕೊರಳಿನಿಂದ ಆಕಾಶದಲ್ಲಿ ಗಾಳಿಯನ್ನು ಕೊರೆದು ದಾಡಿ ಮಾಡುವ ಚಿತ್ರ ನವುರಾದದ್ದು.
ಅದನ್ನು ಮಾತುಗಳಿಂದ ಕವಿ ಸೊಗಸಾಗಿ ಬಿಡಿಸಿದ್ದಾರೆ.

ರೆಕ್ಕೆಯನ್ನು ಬಡಿದು ಹಕ್ಕಿಗಳು ಹಾರುತ್ತಿದ್ದರೆ ಅಕ್ಕಪಕ್ಕದಲ್ಲಿ ಗಾಳಿ ದೀರ್ಘðವಾಗಿ ಉಸಿರು ಬಿಡುವಂತಾಗುತ್ತದೆ ಎಂಬುದನ್ನು ಗಮನಿಸಿ ವರ್ಣಿಸಿದ್ದಾರೆ ಕವಿ. ಹಾರಿ ಹಾರಿ ಅವಕ್ಕೆ ಆಯಾಸವಾಗಿದೆ. ಸ್ವಲ್ಪಸಮಯ ತಂಗಿ ವಿಶ್ರಮಿಸಿಕೊಳ್ಳೋಣ ಎನಿಸುತ್ತದೆ. ತಂಗುವ ರೀತಿಯನ್ನೂ ಸ್ಥಳವನ್ನೂ ಕವಿ ಸೊಗಸಾಗಿ ವರ್ಣಿಸಿದ್ದಾರೆ : ತೆರೆಗಳು ದಡದ ಮೇಲಿನ ಹೆಮ್ಮರದ ನೆರಳನ್ನು ಉಯ್ಯಾಲೆಯಾಡಿಸುತ್ತಿವೆ. ಅವುಗಳನ್ನು ತಾವರೆಯು ತನ್ನ ಕೈಯಲ್ಲಿ ಹಿಡಿದು ‘ನೀನೆನ್ನ ರತುನವೇ’ ಎನ್ನುತ್ತಿದೆ. ಅಂಥ ತಾವರೆಯ ಮರೆಯನ್ನು ಸೇರಿ, ದಣಿವನ್ನು ಕಳೆದು ಆಯಾಸವನ್ನು ನಿದ್ರೆಗೆ ಅರ್ಪಿಸಿ ಮುಂದುವರಿಯುವ ತೀರ್ಮಾನ ಹಂಸಗಳದ್ದು!

ಸಾಮಾನ್ಯವಾಗಿ ನಾವು ಗಮನಿಸದೇ ಹೋಗುವ ಪ್ರಕೃತಿಯ ಚೆಲುವಿನ ವಿವರಗಳನ್ನು ಗಮನಿಸಿ ಸುಂದರವಾಗಿ ಮಾತುಗಳಲ್ಲಿ ಹಿಡಿದಿಡುವ ಕೌಶಲ ಈ ಕವಿಯ ವೈಶಿಷ್ಟೈ.

ಮುಂದೆ ನಳ ವಿದೂಷಕರ ಪ್ರವೇಶವಾಗುತ್ತದೆ. ಅವರ ಮಾತುಕತೆ ಅನೇಕ ಕೆಟ್ಟ ಸಂಸ್ಕೃತ ನಾಟಕಗಳಲ್ಲಿ ಬರುವ ಇಂಥದೇ ದೃಶ್ಯಗಳನ್ನು ನೆನಪಿಗೆ ತರುತ್ತದೆ. ಕವಿಯ ಸ್ವಂತಿಕೆ ಮಾಯವಾಗಿ ಪ್ರತಿಭೆ ಮಂಕಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಅವರ ನಾಯಕನಾದ ನಳ ತಾನು ಮಾತನಾಡಬೇಕಾದದ್ದು ಕನ್ನಡ ನಾಟಕದಲ್ಲಿ ಎಂಬುದನ್ನು ಸ್ವಲ್ಪ ಹೊತ್ತು ಮರೆತು ‘ಸುದೀರ್ಘ ಪ್ರಾಲಂಬ ವಿಸೃತ ವಿಟಪಂ…’ ಇತ್ಯಾದಿಯಾಗಿ ಸಂಸ್ಕೃತದಲ್ಲಿ ಸೌರಾಷ್ಟ್ರರಾಗದಲ್ಲಿ ಅಳುತ್ತಾನೆ ! ಇಲ್ಲಿನ ಸ್ವಾರಸ್ಯವೆಂದರೆ ಆ ಪ್ರಲಾಪದಿಂದ ನಾಯಕನಾದ ನಳ ವಿದೂಷಕನಂತೆ ಕಾಣುತ್ತಾನೆ ! ಮನಸ್ಸಿಗೆ ಬಂದಂತೆ ಮಾತನಾಡಿ ಹಾಸ್ಯ ಮಾಡಿದ್ದೇನೆ ಎಂದು ಭಾವಿಸಿ ನಮ್ಮ ನೆಗೆಗಾಗಿ ಅಂಗಲಾಚುವ ಸಂಸ್ಕೃತನಾಟಕಗಳ ವಿದೂಷಕ ಇಲ್ಲಿ ತುಂಬ ಸುಸಂಬದ್ಧವಾಗಿಯೂ, ರಸಮಯವಾಗಿಯೂ ಮಾತನಾಡಿ ನಮ್ಮ ಮನಸ್ಸಿಗೆ ಆಶ್ಚರ್ಯವನ್ನು ಸಂತೋಷವನ್ನು ಉಂಟುಮಾಡುತ್ತಾನೆ. ವನಪಾಲಕರ ಕಲೆಯನ್ನು ಅವನು ವರ್ಣಿಸುವ ಕ್ರಮವೇ ನಮ್ಮಿಂದ ಹೀಗೆ ಮೆಚ್ಚುಗೆಯನ್ನು ಸೆಳೆದುಕೊಳ್ಳುವುದು :

“….ಈ ಬಂಡೆಗಳು, ಆಬಿದಿರಿನ ಮಳೆಗಳು, ಮರಳಂಚಿನ ಕೆರೆ – ನಮ್ಮ ವನಪಾಲಕರ ಕಲೆಗೆ ಭಲೆ ಎನ್ನಬೇಕು. ಗೆಡ್ಡೆಗೆಣಸು ತಿನ್ನುತ್ತಾ ಜಟಾಭಸ್ಮಗಳನ್ನು ಧರಿಸಿರುವ ಋಷಿಗಳು ನಮ್ಮ ಅರಮನೆಗೆ ಬಂದು ಮೋದಕಗಳನ್ನು ಮೃಷ್ಟಾನ್ನವನ್ನೂ ಮೆದ್ದು ನಮ್ಮನ್ನು ಅನುಗ್ರಹಿಸುವಂತೆ ಈ ಹೆಮ್ಮರಗಳೂ ಪೊದರುಗಳೂ ಮೆಳೆಗಳೂ ನಮ್ಮ ತೋಟಗಾರರ ಆತಿಥ್ಯವನ್ನು ಪಡೆದು ಒಲ್ಳೆಯ ಮೋಜಿನಲ್ಲಿವೆ. ಉದ್ಯಾನ ಪ್ರಸನ್ನವಾಗಿದ್ದರೂ ತಮ್ಮ ಕಾಡುತನವನ್ನು ಕಳೆದುಕೊಂಡಿಲ್ಲ…..”

ಸ್ವಂತಿಕೆಯಿಂದ ಕೂಡಿದ ಸೃಜನಶೀಲರಾದ ಈ ಉಪಮ, ರೂಪಕಗಳ ಸಾಲು ಧಿಡೀರನೆ ಕತ್ತರಿಸಿ ಹೋಗುವಂತೆ ಸಂಸ್ಕೃತ ನಾಟಕಗಳ ವಿಧೂಷಕ ಸ್ಮೃತಿ ಬರುತ್ತದೆ ಕವಿಗೆ ವಿದೂಷಕ ಹಳೆಯ ಹಳಸಲು ಮಾತನ್ನಾಡಲು ಪ್ರಾರಂಭಿಸುತ್ತಾನೆ :

“ಅದು ಸರಿ, ಮಧ್ಯಾಹ್ನದ ನಿದ್ದ ಮಾಡೋಣ ಎಂದಿದ್ದರೆ ನನ್ನನ್ನೇಕೆ ಇಲ್ಲಿಗೆ ಕರೆತಂದೆ?” ವಿದೂಷಕ ನಿಜವಾಗಿ ತನ್ನಲ್ಲಿದ್ದ ವಿದೂಷಕತ್ವವನ್ನು ಕಳಚಿ ಧರಿಸಿಕೊಂಡು ಕೂಡಲೇ ನಳನಿಗೆ ವಿದೂಷಕತ್ವ ಹೋಗಿ ತನ್ನತನ ಬರುತ್ತದೆ ! ಅವನು ಅವರ ನಿಜವಾದ ನಾಯಕನಾಗುತ್ತಾನೆ. ತನ್ನ ಮನಸ್ಸಿನ ಭಾವನೆಗಳನ್ನು ತೋಡಿಕೊಳ್ಳುತ್ತಾನೆ:

“ರಾತ್ರಿಯಲ್ಲಿ ನಕ್ಷತ್ರಗಳ ಮಧ್ಯ ಇರುವ ಕತ್ತಲಿನಲ್ಲಿ ಏನೆನ್ನೋ ಹುಡುಕುವಂತೆ ನನ್ನ ಮನಸ್ಸು ಅಲೆಯುತ್ತಿದೆ. ಪೂರ್ವ ದಿಕ್ಕಿನಲ್ಲಿ ಬಣ್ಣದ ಬೆಳಕು ಆಕಾಶದ ನೀಲದಲ್ಲಿ ಬಯಲಾಗುವ ಕಡೆಗೆ ಮನಸ್ಸು ಧಾವಿಸುತ್ತಿದೆ ಸಂಜೆಯಲ್ಲಿ ಬಾಲಚಂದ್ರನ ಬಟ್ಟಲಿನಿಂದ ತೊಟ್ಟಿಡುವ ಬೆಳ್ಳಿಯನ್ನು ಕಂಡು ಅನ್ನು ತುಳುಕಿಸುವವರು ಯಾರು ಎಂದು ಮನಸ್ಸು ನಿಟ್ಟುಸಿರು ಬಿಡುತ್ತಿದೆ. ಹೂವಿನ ಮುಂಗೂದಲನ್ನು ಉಳ್ಳ ಹೆಮ್ಮರಗಳ ಆಚಗೆ ಇರುವ ಬಾನು ಮನಸ್ಸಿನ ಹಂಬಲಕ್ಕೆ ತವರಾಯಿತು ಎನ್ನುತ್ತಾನೆ.

ಮುಂದಿನ ಹಾಡಿನಲ್ಲೂ ನಳನು ಏನನ್ನೋ ಹುಡುಕುವ ಮಾತನ್ನೇ ಆಡುತ್ತಾನೆ. ಮನಸ್ಸಿನ ಸ್ವರೂಪವನ್ನು ಅರಿಯುವುದು ಕಷ್ಟ ಅದು ನೆಲೆ. ಬೆಳಕಿನ ಹಿಗ್ಗು ಬಣ್ಣದ ಹಿಗ್ಗು ಕಂಪಿನ ಹಿಗ್ಗು, ಸಂಪತ್ತಿನ ಸುಗ್ಗಿಯ ಹಿಗ್ಗನ್ನು ಅನುಭವಿಸಲು ಒಂದು ಜನ್ಮ ಸಾಲದು ಎನ್ನುತ್ತಾನೆ.

ವಿದೂಷಕ ನಳನನ್ನು ತಾವರೆಯ ಕೆರೆಯ ಬಳಿಗೆ ಕರೆದುಕೊಂಡು ಹೋಗಿ ‘ಕೆರೆಯಲ್ಲಿ ಅರಳಿರುವ ತಾವರೆಯ ಹೂಗಳನ್ನು ನೋಡಿ ನೀನು ವರಿಸಬಯಸುವ ಹೆಣ್ಣಿನ ರೂಪವನ್ನಾದರೂ ರೇಖಿಸು’ ಎನ್ನುತ್ತಾರೆ.

ಈ ರೂಪಕದ ಮುಖ್ಯ ಘಟ್ಟ ಇಲ್ಲಿ ಇರುತ್ತದೆ. ನಳ ಹಂಸಗಳ ಕಡೆಗೆ ಸದ್ದಲ್ಲದೆ ನುರಿತ ಬೇಟೆಗಾರನ ಸುಳುವಿನಲ್ಲಿ ಹೋಗುತ್ತಾನೆ. ಉಪಾಯವಾಗಿ ಹಂಸವನ್ನು ಹಿಡಿಯುತ್ತಾನೆ. ಆ ಹಂಸವೋ. ಸರಸ್ವತಿಯ ಹಂಸದ ಬಳಗಕ್ಕೆ ಸೇರಿದ ಹಕ್ಕಿ ಎಂಬಂತೆ ಮಾತನಾಡುತ್ತದೆ: ನಳನನ್ನು ಹೊಗಳುತ್ತದೆ. ನಿನ್ನಂಥ ಸುಂದರ ಗಂಡು ಜಾತಿಯಲ್ಲೇ ಮತ್ತೊಬ್ಬನಿಲ್ಲ ಎನ್ನುತ್ತದೆ. ಹಾಗಾದರೆ ಹೆಂಗಸರಲ್ಲಿ ನನ್ನ ಸಮಾನರು ಇದ್ದಾರೆಯೋ?’ ಎಂದು ನಳನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಹಂಸ ‘ಇದ್ದಾಳೆ, ಅವಳಂತೆ ಇನ್ನೊಬ್ಬಳು ಸ್ತ್ರೀಜಾತಿಯಲ್ಲಿ ಇಲ್ಲ. ಆಕೆ ಅದ್ವಿತೀಯಳು. ನಿನೂ ಅದ್ವಿತೀಯ’ ಎನ್ನುತ್ತದೆ. ಜೊತೆಗೆ ವಿಸ್ತಾರವಾಗಿ ದಮಯಂತಿಯ ಸೌಂದರ್ಯವನ್ನು ವರ್ಣಿಸುತ್ತದೆ. ಬಳಿಕ ದಮಯಂತಿಯ ಮನಸ್ಸನ್ನು ನಳನ ಕಡೆಗೆ ತಿರುಗಿಸುವುದಾಗಿ ಹೇಳಿ ಹಾರಿ ಹೋಗುತ್ತದೆ.

ಎರಡನೆಯ ದೃಶ್ಯದಲ್ಲಿ ದಮಯಂತಿ ಮತ್ತು ಸಖಿಯರು ಹರ್ಷ ಸೂಸುವಂತೆ ಹಾಡುತ್ತ ಚಲಿಸುತ್ತಾರೆ. ಹಂಸ ದಮಯಂತಿಯ ಬಳಿಗೆ ಬಂದು ಅವಳು ಏಕಾಂತದಲ್ಲಿ ತನ್ನ ಬಳಿಗೆ ಬರುವಂತೆ ಮಾಡುತ್ತದೆ. ದಮಯಂತಿಯ ಮುಂದೆ ನಳನ ರೂಪವನ್ನು ಹಾಡಿ ಹೊಗಳುತ್ತದೆ. ಆಕೆಗಾಗಿಯೇ ವಿಧಿ ಸೃಷ್ಟಿಸಿರುವ ಪುರುಷ ಎಂಬುದನ್ನು ಹೇಳಿ ಮನಸ್ಸನ್ನೆಲ್ಲ ನಳನ ರೂಪ ತುಂಬುವಂತೆ ಮಾಡುತ್ತದೆ.

ಕಥೆಯ ವಸ್ತು ಇಷ್ಟೆ ಇಲ್ಲಿನ ಸೌಂದರ್ಯವೆಲ್ಲ ಇದರ ಹಾಡುಗಳಲ್ಲಿ ಮತ್ತು ಅವು ಒಳಗೊಂಡಿರುವ ಶ್ರೇಷ್ಠವಾದ ಕಾವ್ಯತ್ವದಲ್ಲಿ .

2

ಶ್ರೀ ಪು.ತಿ.ನ. ಅವರ ಶ್ರೇಷ್ಠವಾದ ಮತ್ತೊಂದು ಗೀತರೂಪಕ ಹರಿಣಾಭಿಸರಣ. ಇಲ್ಲಿಯೂ ಕಾವ್ಯ ಮತ್ತು ಗೀತೆಗಳು ಹದವಾದ ಬೆರೆತುಕೊಂಡು ಉತ್ತಮವಾದ ಗೀತರೂಪಕವೊಂದು ರಚಿತವಾಗಲು ಕಾರಣವಾಗಿದೆ.

ನಾಂದೀ ಶ್ಲೋಕದಲ್ಲಿ ಕವಿ ನಾಲ್ಕೇ ಪಂಕ್ತಿಗಳಲ್ಲಿ ಈ ಘಟನೆಯ ಮಹಿಮೆಯನ್ನೂ ಇಂಥದೊಂದು ಘಟನೆ ಸಾಧಿಸುವ ಅದ್ಭುತವಾದ ಪರಿಣಾಮವನ್ನೂ ನಿರೂಪಿಸಿದ್ದಾರೆ.

ಶ್ರೀರಾಮನ ಸತಿಗಾಗಲು ಮಾಯಾಮೃಗದೀಹೆ
ಶ್ರೀರಾಮಾಯಣವಾಯಿತು ಮುನಿಕರುಣೆಯ ಗಾಹೆ
ಪಂಚವಟಿಯೊಳಾ ದಿವ್ಯರ ದುಃಖವ ನೆನೆದು
ಅಲ್ಪಗಳೆಮ್ಮೀ ಚಿಂತೆಗಳಳಿಯಲಿ ನವೆದು

ಈಗಾಗಲೇ ಅಯೋಧ್ಯೆಯಲ್ಲಿ ನಡೆದ ಘಟನೆಗಳ ಅನೇಕ ವ್ಯಕ್ತಿಗಳ ದುಃಖಕ್ಕೆ ಕಾರಣವಾಗಿದೆ. ಮುಂದೆ ಮಾಯಾಮೃಗದ ವಿಷಯದಲ್ಲಿ ಸೀತೆಗೆ ಅಪೇಕ್ಷ ಹುಟ್ಟಿದಿದ್ದರೆ ರಾಮಾಯಣವು ಇನ್ನೂ ಶೋಕತರವಾದ ಕಾವ್ಯವಾಗುತ್ತಿರಲಿಲ್ಲ. ವಾಲ್ಮೀಕಿ ಮಹರ್ಷಿಯ ಅಪಾರವಾದ ಕಾವ್ಯಶಕ್ತಿಯನ್ನು ಸೂರೆಗೊಂಡು ಕರುಣೆಯ ಮಹಾಕಾವ್ಯ ಎನ್ನಿಸಿಕೊಳ್ಳುವ ಅವಕಾಶ ಕಲ್ಪಿತವಾದದ್ದು ಈ ಘಟನೆಯಿಂದಲೇ.

ಇಂಥ ಮಹತ್ತಾದ ದುಃಖವನ್ನು ವರ್ಣಿಸುವುದರ ಪ್ರಯೋಜನವೇನು ಎಂಬ ಪ್ರಶ್ನೆ ಹುಟ್ಟುವುದು ಸಹಜವಾಗಿಯೇ ಇದೆ. ಅದಕ್ಕೆ ಉತ್ತರವನ್ನು ಈ ಶ್ಲೋಕದಲ್ಲಿಯೇ ನೀಡಿದ್ದಾರೆ. ರಾಮ ಸೀತೆ, ಲಕ್ಷ್ಮಣ ಮುಂತಾದ ದಿವ್ಯಪುರುಷರಿಗೆ ಅಗಾಧವಾದ ಪ್ರಮಾಣದಲ್ಲಿ ದುಃಖ ಪ್ರಾಪ್ತವಾಯಿತು. ಅದನ್ನು ನೆನೆದು ಅಲ್ಪವಾದ ನಮ್ಮ ಚಿಂತೆಗಳು ನವೆದು ಅಳೆಯುತ್ತವೆ. ಅಂಥವರ ಅಂಥ ಚಿಂತೆಯ ಮುಂದೆ ನಮ್ಮ ಚಿಂತೆ ಏತರದ್ದೂ ಅಲ್ಲ ಎಂಬ ಭಾವನೆ ತಾನಾಗಿಯೇ ಬರುತ್ತದೆ. ಹಾಗೆ ಬಂದರೆ ಕಾವ್ಯ ತನ್ನ ಬಹುಪಾಲು ಕರ್ತವ್ಯವನ್ನು ನಿರ್ವಹಿಸಿದಂತೆಯೇ.

ರೂಪಕದ ಪ್ರಾರಂಭವೇ ಉನ್ಮತವಾದ ಕಾವ್ಯದ ಸ್ತರದಲ್ಲಿ ನಡೆಯುತ್ತದೆ. ಕಾಡಿನ ಹೂಗಳನ್ನು ಆರಿಸುತ್ತ ಓಡಾಡುತ್ತಿರುವ ಲೋಕಮಾತೆ ಸೀತೆಯ ವರ್ಣನೆಗೆ ತೊಡಗುತ್ತ ಕವಿ ಆದಿಕವಿ ಕೋಕಿಲನ ಕೊರಳಿಗೆ ಇಂಪನ್ನು ನೀಡಿದವಳು ಇವಳು ಎನ್ನುತ್ತಾರೆ.

ಮೊದಲನೆಯ ಹಾಡಿನಲ್ಲಿ ಅವಳ ರೂಪವನ್ನೂ ನಡೆಯನ್ನೂ ವರ್ಣಿಸಿರುವ ರೀತಿ ಗಂಭೀರ ಸೌಂದರ್ಯದಿಂದ ಕೂಡಿದ್ದಾಗಿದೆ; ಇಂದ್ರಾಣಿಯನ್ನೂ ಬದಿಗೆ ಒತ್ತುವ ಸೀತೆಯ ಚೆಲುವಿನ ತೇಜಸ್ಸಿನಿಂದ ನಮ್ಮ ಮನಸ್ಸು ನಿರ್ಮಲಗೊಳ್ಳುತ್ತದೆ ಎನ್ನುತ್ತಾರೆ. ಅಲ್ಲದೆ ಇಂಥ ಮಂಗಳ ಸುಂದರ ರೂಪಿನ ತರುಣಿಯನ್ನು ಕಂಡು ಮನಸ್ಸು ಮೋಹಗೊಳ್ಳುವುದಿಲ್ಲ. ಬದಲಿಗೆ ಆ ಸೌಂದರ್ಯದ ಅಧಿದೇವಿಗೆ ಮಣಿಯುತ್ತದೆ.

ಇನ್ನು ಅವಳ ನಡೆಯೋ, ಆಡಿಯಿಟ್ಟಲ್ಲೆಲ್ಲ ಒಂದೊಂದೂ ಹೂವು ಅರಳಿತೊ ಎಂಬಂತೆ ಕಾಣುತ್ತಿದೆ. ಅವಳ ಮೃದುಪದಗತಿಗೆ ನೆಲ ಪುಳಕಗೊಳ್ಳುತ್ತಿದೆ. ಅವಳು ಹೋದ ಕಡೆ, ಇರುವ ಕಡೆ, ಬರುವ ಕಡೆ ಬೆಳಕಿನ ಬುಗ್ಗೆ ಚಿಮ್ಮುತ್ತಿದೆ ಎಂಬಂತೆ ಆಕೆ ಹರುಷವನ್ನು ಎರಚುತ್ತಿದ್ದಾಳೆ. ತೋರಿಕೆಗಳ ಹಿಂದೆ ಇರುವ ಪರಮಾನಂದವೇ ಹೊರತುಳುಕಿತು ಎನ್ನುವ ಭಾವನೆ ಬರುವಂತೆ ಅವಳು ನಡೆದಾಡುತ್ತಿದ್ದಾಳೆ.

ಸೀತೆ ಚಿನ್ನದ ಜಿಂಕೆಯನ್ನು ಕಾಣುವ ಸಂದರ್ಭವು ನಾಟಕೀಯವಾಗಿಯೂ ಕಾವ್ಯರಮ್ಯವಾಗಿಯೂ ಇದೆ. ಅದು ಒಂದು ಹೂವು ಎಂಬಂತೆ ಸೀತೆ ಮೊದಲು ಭ್ರಮಿಸುತ್ತಾಳೆ. ಅವಳು ಹೂವು ಎಂದು ಭ್ರಮಿಸಿದ್ದನ್ನು ವರ್ಣಿಸುವ ರೀತಿ ಇದು: ‘ಚಿಟ್ಟೆಗೆ ಬಣ್ಣವನ್ನು ಕಲಿಸುವ ಹೂವು ತನ್ನಲ್ಲಿ ಅದು ದುಂಬಿ ತಂಗುವಂತೆ ಮಾಡುತ್ತದೆ. ಅದೋ ಹಾಡಿಗಿಂತಲೂ ಮೌನವೇ ಸವಿಯಾದದ್ದು ಎಂಬುದನ್ನು ಸೂಚಿಸುವಂತಿದೆ. ಜಿಂಕೆ ಒಂದು ಪೊದರಿನಲ್ಲಿ ಅವಿತುಕೊಂಡೆ ಅಲ್ಲಿ ಕಾಣುತ್ತಿರುವ ಕಾಂತಿ ರತ್ನದ ಹೂವು, ಹೊನ್ನಿನ ಚಿಗುರು ಒಂದೆಡೆ ಸೇರಿದಂತೆ ತೋರುತ್ತದೆ.’ ಆಗಲೇ ಆಕೆಗೆ ಗೊತ್ತಾದದ್ದು ಅದು ಹೂವಲ್ಲ, ಜಿಂಕೆ ಎಂದು. ಮರಳು ತರುವಂಥ ಚೆಲುವು ಅವರದ್ದು. ಅಂಥ ಚೆಲುವಾದ ಜಿಂಕೆಯನ್ನು ನೋಡಿ ಅದನ್ನು ಪಡೆಯುವ ಅಪೇಕ್ಷೆಯಿಂದ ಆಕೆ ರಾಮನನ್ನು ಬಲಿಗೆ ಕರೆಯುತ್ತಾಳೆ. ಮೊದಲು ಸೀತೆ, ಅನಂತರ ರಾಮ ಜಿಂಕೆಯನ್ನು ಕಂಡು ಆಶ್ಚರ್ಯಪಟ್ಟು ವರ್ಣಿಸಿರುವ ರೀತಿ ಅಪೂರ್ವವಾಗಿದೆ. ಅದರ ಚೆಲುವು ‘ಮರುಳ ತರುವಂಥದು’ ಸೀತೆ ಅದನ್ನು ವರ್ಣಿಸುವ ರೀತಿ ಹೀಗೆ: ತನ್ನನ್ನು ಮುಟ್ಟಲು ಬರುವ ರವಿಕಿರಣವನ್ನು ಅಟ್ಟುತ್ತ ಅದನ್ನು ವರ್ಣಿಸುವ ರೀತಿ ಹೀಗೆ: ತನ್ನನ್ನು ಮುಟ್ಟಲು ಬರುವ ರವಿಕಿರಣವನ್ನು ಅಟ್ಟುತ್ತ ಅದನ್ನು ನುಚ್ಚುನೂರಾಗಿಸಿ ಬಣ್ಣಗಳನ್ನು ಒಡೆಯುವ, ಮೆರುಗನ್ನು ಮಿಡಿಯುವ ಹರಿಣ ಅದು. ರಾಮನು ಅದನ್ನು ವರ್ಣಿಸುವ ರೀತಿ ಹೀಗೆ : ಅದು ದಿಟ ಮತ್ತು ತೋರಿಕೆಗಳ ಭ್ರಮಣೆಯನ್ನು ತರುತ್ತಿರುವಂಥದು. ಅಲ್ಲದೆ ಕಾನನ ಚೇತನದ ಆಭರಣ. ಕಡಲಿನ ನೀಲದ ಕಿಡಿ, ಎದೆ ಕೆಂಪಿನ ಕುಡಿ, ಮಿಂಚಿನ ಹುಡಿ.

ರಾಮ ಮತ್ತು ಸೀತೆ ಜಿಂಕೆಯ ಚೆಲುವನ್ನು ಮೆಚ್ಚಿ ಅದರ ಚೆಲುವನ್ನು ವರ್ಣಿಸುತ್ತಿದ್ದರೆ ಲಕ್ಷ್ಮಣನಿಗೆ ಮಾತ್ರ ಅದರ ನಿಜವಾದ ಸ್ವರೂಪದ ವಿಷಯದಲ್ಲಿ ಶಂಕೆ ಮೂಡಿದೆ. ಮನುಷ್ಯರ ಭೀತಿ ಅದಕ್ಕೆ ಕಾಣುತ್ತಿಲ್ಲ. ಕಾಡಿನಲ್ಲಿದ್ದೂ ಕಾಡಿನ ರೂಢಿ ತಪ್ಪಿದಂತೆ ಚಲಿಸುತ್ತಿರುವ ಅದನ್ನು ಕಂಡು ಲಕ್ಷ್ಮಣನ ಶಂಕೆ ಬೆಳೆಯುತ್ತಲೇ ಹೋಗುತ್ತದೆ. ಸೀತೆ ಜಿಂಕೆಯನ್ನು ಹಿಡಿದುಕೊಂಡು ಹೋಗಿ ಅಯೋಧ್ಯೆಯಲ್ಲಿ ತಾಯಂದಿರನ್ನು ಬೆರಗುಗೊಳಿಸಬಯಸುತ್ತಾಳೆ. ರಾಮನೂ ಏನನ್ನೂ ಶಂಕಿಸದೆಯೇ ‘ಬಿಲ್ಬಾಣವ ತಾ ಹೋಗುವೆನನುಜ ಹಿಡಯಲಿದನು ಬನಕೆ’ ಎನ್ನುತ್ತಾನೆ. ಅವನ ಕಣ್ಣಿಗೆ ಅದು ಇಡೀ ಕಾಡಿನ ಪ್ರಾಣವೇ ಹಬ್ಬಕ್ಕಾಗಿ ಶೃಂಗಾರಗೊಂಡಂತೆ ಕಾಣುತ್ತಿದೆ. ಲಕ್ಷ್ಮಣ ಕಾರಣಗಳನ್ನು ಕೊಟ್ಟು ಅಣ್ಣನನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ‘ಜ್ವರವೇರಿದ ಬಗೆ- ಜಿಂಕೆಗೇತಕೀ ಮೈಬಣ್ಣ, ಕೆರಳಿಸಲೆಲ್ಲರ ಕಣ್ಣ? ಚಿಂತಿಸು ಚಿಂತಿಸು’ ಎನ್ನುತ್ತಾನೆ. ಮೋಹಿನಿ ರೂಪದ ಶೂರ್ಪನಖಿಯನ್ನು ನೆನೆ. ಇದು ಹೊಂಡದ ಮೇಗಣ ಸೊಂಪಿನ ತೆನೆ, ರಕ್ಕಸ ಮಾಯೆಗೆ ಬನ ತವರುಮನೆ, ಮಿಗವನು ಅದರಷ್ಟಕೆ ಬಿಡು ಸುಮ್ಮನೆ’ ಎನ್ನುತ್ತಾನೆ.

ಈ ರೂಪಕದ ಸೀತೆ ತನ್ನ ಹಠವನ್ನೇ ಸಾಧಿಸುವವಳಲ್ಲ. ಲಕ್ಷ್ಮಣನ ಮಾತು ನಿಜ ಇರಬಹುದು. ಏಕೆಂದರೆ ಎಂದೂ ಕಾಣದ ಚೆಂದದ ಹುಲ್ಲೆಯು ನನ್ನ ಮನಸ್ಸಿನಲ್ಲೂ ಶಂಕೆಯನ್ನು ಉಂಟುಮಾಡುತ್ತಿದೆ ಎನ್ನುತ್ತಾಳೆ. ಹರಿಣದ ಶೃಂಗಾರವನ್ನು ನೋಡುತ್ತ ನೋಡುತ್ತ ನಮ್ಮ ಕಣ್ಣಿನ ಋಣ ತೀರಲಿ ಎಂಬ ತೀರ್ಮಾನಕ್ಕೂ ಬರುತ್ತಾಳೆ.

ಈ ರೂಪಕದ ಸ್ವಾರಸ್ಯ ಎಂದರೆ ಸೀತೆಗಿಂತ ಹೆಚ್ಚಾಗಿ ರಾಮನಿಗೆ ಜಿಂಕೆಯಲ್ಲಿ ಆಸೆ ಬೆಳೆಯುವುದು ‘ಕಲ್ಲುಹೂವಿನ ಬಂಡೆಯ ಇದಿರು’ ಈ ಜಿಂಕೆ ಎಂಥ ಚೆಲುವನ್ನು ತಳೆದಿದೆ. ಅದನ್ನು ನೋಡುತ್ತ ನೋಡುತ್ತ ‘ನಿನ್ನಂತೆಯೇ ನನಗೂ ಇದರಲ್ಲಿ ಆಸೆ ಬಲಿದಿದೆ, ಸೀತೆ, ನಿನ್ನ ಚಿನ್ನದ ಬಣ್ಣದ ಅಂಗೈಯಿಂದ ಇದು ನೀರನ್ನು ಕುಡಿಯುತ್ತಿದ್ದರೆ ಎಷ್ಟು ಸೊಗಸಾಗಿರುತ್ತದೆ.’ ಎನ್ನುತ್ತಾನೆ. ಲಕ್ಷ್ಮಣನಿಗೆ ಅವನು ಹೇಳುವ ಸಮಾಧಾನ ‘ಇದು ನಿಜದ ಜಿಂಕೆಯಾಗಿದ್ದರೆ ಅದು ರತ್ನದಂತೆ ಸಂಗ್ರಹಯೋಗ್ಯವಾದದ್ದು. ಹಾಗಲ್ಲದೆ ಮೋಸದ್ದೇ ಆಗಿದ್ದರೆ ವಧೆಗೆ ಯೋಗ್ಯವಾದದ್ದು. ಆದ್ದರಿಂದ ಹೇಗೇ ಯೋಚಿಸಿದರೂ ಹರಿಣಾಭಿಸರಣ ಲೇಸೆಂದೇ ತೋರುತ್ತದೆ.’ ಹೀಗೆ ಹೇಳಿ ಜಿಂಕೆಯನ್ನು ಬೆನ್ನಟ್ಟಿ ಹೋಗುತ್ತಾನೆ.

ರಾಮನು ಜಿಂಕೆಯನ್ನು ಬೆನ್ನಟ್ಟಿಹೋಗುವ. ಅವನನ್ನು ತಪ್ಪಿಸುತ್ತಾ ಜಿಂಕೆ ಓಡುವ ವರ್ಣನೆಯನ್ನೊಳಗೊಂಡ ಹಾಡು ಈ ರೂಪಕದ ಅತ್ಯಂತ ಸೊಗಸಾದ ರಚನೆಗಳಲ್ಲಿ ಒಂದು:

ಘನವಿಪಿನ ಚಲಹರಣ ನೋಡು, ಮೈದುನ
ಘನಕು ಘನನ ಚಲಕು ಚಲನ ನೋಡೆನ್ನಿನನ

ಎಂಬುದನ್ನು ಪಲ್ಲವಿ ಅನುಪಲ್ಲವಿಗಳಾಗಿ ಉಳ್ಳ ಹಾಡು ಅದು. ರಾಮ ನೆಲವನ್ನೆಲ್ಲ, ಬಾನನ್ನೇ ಮೆಟ್ಟಿ ನಡೆಯುತ್ತಿದ್ದಾನೆ ಎಂಬಂತೆ ತೋರುತ್ತಿದೆ. ಅವನ ನಡಗೆಯ ವೇಗದಿಂದ. ಜಿಂಕೆಯಾದರೋ ಪ್ರಾಣದ ಹಂಗಿನಲ್ಲಿ ಓಡುತ್ತಿದೆ. ಕಾಮನ ಬಿಲ್ಲನ್ನು ನೇರಮಾಡಿದ್ದಾರೋ ಎಂಬಂತೆ ತೋರುತ್ತಿದೆ ಅದರ ಓಟದಿಂದ. ಅವನೋ ವೇಗದಿಂದ ವಿಕ್ರಮನಂತೆ ನಗಗಿರಿದರಿಗಳನ್ನೆಲ್ಲ ತುಂಬಿ ಹಾರುತ್ತಿದ್ದಾನೆ. ಓಡುತ್ತಿರುವ ಜಿಂಕೆಯನ್ನೂ ಅದನ್ನು ಹಿಂಬಾಲಿಸುತ್ತಿರುವ ರಾಮನನ್ನೂ ವರ್ಣಿಸತೊಡಗಿದ ಈ ಸಂದರ್ಭದಲ್ಲಿ ಕವಿಯ ಪ್ರತಿಭೆ ಸೃಜನಶೀಲತೆಯ ಉನ್ನತ ಸ್ತರಗಳನ್ನು ಮುಟ್ಟಿದೆ. ಈ ಚಿತ್ರಗಳನ್ನು ಗಮನಿಸಿ:

ಮಲೆಬೆಂಕಿಯ ಕುಡಿಯೊಂದನು ತರುಬುತಿರುವ ಗಾಳಿಯೊಲು
ಬೇಟೆಗಾರ ಮೆರೆವನಗೋ ಹುಲ್ಲೆ ಹಿಡಿವ ಕೇಳಿಯೊಳು
ಮಲೆಮಲೆಗೂ ಮಕುಟವಾಗಿ ಪುಟಪುಟನೆಗೆವರಳೆ
ಬೆನ್ನೊಳೆ ದೊರೆ, ಚಿಗಿವ ಮಿಂಚ ಹಿಡಿಯ ಬರುವ ಮೋಡದೊಲೆ

ಮುಂದಿನ ಕಥೆ ವಾಲ್ಮೀಕಿ ರಾಮಾಯಣದಂತೆಯೇ ನಡೆಯುತ್ತದೆ-‘ಹಾ ಸೀತೆ ಹಾ ಲಕ್ಷ್ಮಣ’ ಎಂಬ ಕೂಗು, ಅದನ್ನು ಕೇಳಿದ ಧೈರ್ಯವನ್ನು ಕಳೆದುಕೊಂಡ ಸೀತೆ ಲಕ್ಷ್ಮಣನನ್ನು ಬೈದು ಅಟ್ಟಿದ್ದು ಇತ್ಯಾದಿ. ರಾವಣನ ಆಗಮನ, ಸೀತೆಯನ್ನು ಕಂಡು ಅವನು ಮರುಳಾಗುವುದು, ಕೊನೆಗೆ ಸೀತೆಯನ್ನು ಎಳೆದೊಯ್ಯುವುದು ಇವೆಲ್ಲ ಅಷ್ಟೇನೂ ವಿಶೇಷ ಕಾವ್ಯಶಕ್ತಿಯ ಕ್ರಿಯೆಯಿಲ್ಲದೆ ಇಲ್ಲಿ ನಡೆಯುತ್ತವೆ. ಕವಿಯ ಪ್ರತಿಭೆ ಮಂಕಾಗುತ್ತಾ ಹೋಗಿ ಕೇವಲ ಪ್ರಾಸಮೋಹ ಹೆಚ್ಚಿ ಸಾಮಾನ್ಯವಾದ ಕುಣಿತವಾಗಿಯೂ ಪರಿಣಮಿಸಿಬಿಡುತ್ತದೆ. ಈ ಕೆಳಗಿನ ಭಾಗಗಳನ್ನು ಗಮನಿಸಬಹುದು:

ತೆರವಾಯಿತೀ ನೆಲ ರಾವನನ ಇಚ್ಛೆಗೆ
ಭಳಿಭಳಿರೆ ಮಾರೀಚ ನಿನಗೆನ್ನ ಮೆಚ್ಚಿಗೆ
ನುಡಿದಂದದೊಳೆ ನಡೆದ ನಿನ್ನ ಕೆಚ್ಚಿಗೆ
ಇಕೊ ನನ್ನ ಮಣಿಗೆ

ಮಾಮಾಯೆ
ಚೆಲುವಿನ ಮಾಮಾಯೆ
ನೀ
ನೆಲಗೊಲಿಯೆ

ಬಂಧುರೇ
ಕಂಬು ಕಂಧರೇ
ಶ್ರೋಣಿ ಮಂದರೇಲಂಕಾ
ಧೀಶ್ವರೀಶ್ವರಿಯಾಗೆಸೆಯೆ
ಮಾಮಾಯೆ
ನೀನೆನಗೊಲಿಯೆ

ದುಷ್ಟ
ತೊಲಗಿಷ್ಟ |
ಪರಿಗರಿಷ್ಠ
ಭ್ರಷ್ಟ
…..

ಇಂಥ ಕೆಲವು ಸಣ್ಣ ಪುಟ್ಟ ದೋಷಗಳಿದ್ದರೂ ‘ಹರಿಣಾಭಿಸರಣ’ವು ಒಂದು ಒಳ್ಳೆಯ ರೂಪಕ. ಕವಿ ನಮ್ಮಿಂದ ನಿರೀಕ್ಷಿಸುವುದೂ ನಾವು: ಗಮನಿಸಬೇಕಾದದ್ದೂ ಪ್ರಧಾನವಾಗಿ ಇಲ್ಲಿನ ಗೇಯ ಗುಣವನ್ನು ಈ ದೃಷ್ಟಿಯಿಂದ ‘ಹರಿಣಾಭಿಸರಣ’ ಪು.ತಿ.ನ. ಅವರ ಇತರ ರೂಪಕಗಳಂತೆಯೇ ಯಶಸ್ಸನ್ನು ಗಳಿಸಿದೆ.

4

‘ದೀಪಲಕ್ಷ್ಮೀ’ ದೀಪಾವಳಿಯನ್ನು ಕುರಿತ ಸಂಗೀತ ಚಿತ್ರ. ಕವಿಯೇ ತಮ್ಮ ಅವತರಣಿಕೆಯಲ್ಲಿ ಈ ಗೀತರೂಪಕವನ್ನು ಕುರಿತು ಹೀಗೆ ಪರಿಚಯ ಮಾಡಿಕೊಟ್ಟಿದ್ದಾರೆ:

“ಈ ಗೀತರೂಪಕದಲ್ಲಿ ಎರಡು ದೃಶ್ಯಗಳಿವೆ. ಮೊದಲನೆಯದರಲ್ಲಿ ನಾವು ಈ (ದೀಪಾವಳಿಯ) ಸಂಜೆ ನಮ್ಮ ನಮ್ಮ ಮನೆಗಳಲ್ಲಿ ಹೊತ್ತಿಸಿದ ಹಣತೆಗಳ ಮತ್ತು ಅವು ಮನಸ್ಸಿನಲ್ಲಿ ಮೂಡಿಸುವ ‘ಭಾವನಾಲಹರಿಗಳ ವರ್ಣನೆಯಿದೆ. ಎರಡನೆಯದರಲ್ಲಿ ‘ಎಲ್ಲಿಬಂದಿರೇದೇವಿಗೆ’ ಎಂಬ ಪ್ರಶ್ನೆಗೆ ಉತ್ತರವಾಗಿ ನರಕಾಸುರನ ರಾಜಧಾನಿಗೆ ನಮ್ಮ ಮನಸ್ಸು ಧಾವಿಸುತ್ತದೆ. ನರಕನನ್ನು ಗೆದ್ದು ಶ್ರೀಕೃಷ್ಣಸತ್ಯಭಾಮೆಯೊಡನೆ ಗರುಡಾರೂಢನಾಗಿ ಆ ಅರಸನು ಸೆರೆತಂದಿಟ್ಟಿದ್ದ ರಾಜಕುಮಾರಿಯನ್ನು ಬಿಡಿಸುವುದಕ್ಕೆ ಬರುವಾಗ ಆತ ಅವರಿಗೆ ಎಂಥ ದರ್ಶನವನ್ನು ಕೊಟ್ಟ ಅವರು ಆತನನ್ನು ಹೇಗೆ ಪೂಜಿಸಿ ಆನಂದಿಸಿದರು ಎಂಬುದರ ವರ್ಣನೆಯಿದೆ. ನಾವು ಈ ಹಬ್ಬದ ದಿವಸ ಹಚ್ಚುವ ದೀಪ ಅಲ್ಲಿ ಆ ರಾಜಕುಮಾರಿಯರೂ ಅಪ್ಸರೆಯರೂ ಶ್ರೀಕೃಷ್ಣನಿಗೆತ್ತಿದ ದೀಪಾರತಿಯ ಕುಡಿಯಿಂದ ಮೂಡಿ ತಲೆಯಿಂದ ತಲೆಮೊರೆಗೆ ಅನುಸ್ಯೂತವಾಗಿ ಕುಡಿಯೊಡೆದು ಬರುತ್ತಿರುವ ದೀಪ.”

ನಕ್ಷತ್ರಗಳಿಂದ ಶೋಭಿತವಾದ ರಾತ್ರಿಯನ್ನು ಕುರಿತ ಸೊಗಸಾದ ಹಾಡಿನಿಂದ ಈ ರೂಪಕ ಪ್ರಾರಂಭವಾಗುತ್ತದೆ. ರಾತ್ರಿಯನ್ನು ಕವಿ ‘ಭವತಾರಿಣೀ’ ಎಂದು ಸಂಬೋಧಿಸಿದ್ದಾರೆ. ತಾರಾಪಥದಲ್ಲಿ ಈಕೆಯ ರಥ ಹರಿಯಲು ಇಕ್ಕೆಲದಲ್ಲೂ ಚುಕ್ಕಿಗಳು ಕಿಕ್ಕಿರಿದು ನೆರೆದಿರಲು ಧೂಳನ್ನು ಎಬ್ಬಿಸಿ ಕಾಂತಿಯನ್ನು ಹಬ್ಬಿಸಿ ನೋಡುವವರ ಎದೆಯನ್ನು ಉಬ್ಬಿಸುತ್ತ ಮೆರೆಯುವ ಭವತಾರಿಣಿ ಅವಳು.

ಮುಂದಿನ ಕಲ್ಪನೆಯಂತೂ ನಮ್ಮನ್ನು ಬೆಕ್ಕಸಬೆರಗುಗೊಳಿಸುವಂಥದು. ಸೃಷ್ಟಿಸ್ಥಿತಿಲಯ ಕರ್ತರನ್ನು ಎಂದರೆ ಬ್ರಹ್ಮವಿಷ್ಣು ಮಹೇಶ್ವರರನ್ನು ಶಿಶುಗಳನ್ನಾಗಿ ಮಾಡಿದ ಋಷಿ ಪತ್ನಿಯಂತೆ ವಿಶ್ವಗಳನ್ನೇ ಬಿಂದುಗಳನ್ನಾಗಿ ಮಾಡಿ ಕತ್ತಲಿನ ತೊಟ್ಟಿಲಲ್ಲಿ ಇಟ್ಟು ತೂಗುವ ಭವತಾರಿಣಿ ಆಕೆ.

ಮನೆ ಮನೆಯಲ್ಲಿ ಕುಡಿಯಾಡಿಸುತ್ತಿರುವ ನರು ಬೆಳಕನ್ನು ತಂದ ದೀಪಾವಳಿಯನ್ನು ಕುರಿತ ಮುಂದಿನ ಹಾಡು ರಮ್ಯವಾಗಿದೆ. ಅದರ ನರು ಬೆಳಕು ಮಿರುಸೊಡರಿನ ಮಿತವಾದ ಮೊನದಲ್ಲಿ ಇರುಳನ್ನು ಮೊಗೆದು ಸುರಿಯುವ ಮೋದದ ತಳುಕು ಎನ್ನುತ್ತಾರೆ ಕವಿ. ಕತ್ತಲೆ ದಟ್ಟವಾಗಿದೆ. ಆದ್ದರಿಂದ ಈ ಬೆಳಕಿನ ಕುಡಿಗಳಿಗೆ ಆ ಕತ್ತಲಿನೊಡನೆ ಪಂತ ಇಲ್ಲ. ಮುಂದೆ ಅನೇಕ ಪಂಕ್ತಿಗಳಲ್ಲಿ ಹರಿದಿರುವ ಈ ಬೆಳಕಿನ ವರ್ಣನೆಯೂ ಅಷ್ಟೇ ಸೊಗಸಾಗಿದೆ. ಈ ಪಂಕ್ತಿಗಳನ್ನು ಗಮನಿಸಿ:

ಬೆಳಕಿನ ತೆನೆ
ನಲವಿನ ತೆನೆ

ಹಣತೆಯಿಂ ಹಣತೆಗೆ
ಕನಕದೆಸಳ ಹಬ್ಬುಗೆ

ಕತ್ತಲಮುತ್ತಿಡುತೆತ್ತಲುಸುತ್ತುತ
ಹೊಸ್ತಿಲನೇರುವೀ
ದೀಪಿಕಾ ಸಂಭ್ರಮ

ಇಲ್ಲಿಯೂ ಇತರ ರೂಪಕಗಳಂತೆಯೇ ಗೇಯಗುಣವೇ ಮುಖ್ಯವಾದದ್ದು ಓದಿದ, ಕೇಳಿದ ಬಹುಕಾಲದ ಅನಂತರವೂ ಮನಸ್ಸಿನಲ್ಲಿ ಅರುಸರಣಿಸುತ್ತಿರುವ ಇಂಥ ಗೀತರೂಪಕಗಳನ್ನು ರಚಿಸಿ ಕವಿ ಪುತಿನ ಅಭಿನಂದನೀಯರಾಗಿದ್ದಾರೆ.