ತನ್ನದೇ ವೈಭವದ ಕನಸನ್ನು ಕಾಣುತ್ತಿರುವ ಅಹಲ್ಯೆ ತನಗೆ ಸುಲಭವಾಗಿ ಬಲಿಯಾಗುತ್ತಾಳೆ ಎಂಬುದನ್ನು ಅವನು ಬಲ್ಲ. ಆದರೂ ತನ್ನ ನಿಜರೂಪದಿಂದ ದಿಡೀರನೆ ಕಾಣಿಸಿಕೊಂಡು ಅವಳನ್ನು ಬೆದರಿಸುವ ಹುಂಬತವನ್ನು ಅವನು ಮಾಡುವುದಿಲ್ಲ. ಮುನಿಯ ವೇಷದಿಂದಲೇ ಅವನು ಕಾಣಿಸಿಕೊಳ್ಳುತ್ತಾನೆ. ಈ ವಿದ್ಯೆಯಲ್ಲಿ ಅವನು ಚತುರ. ಇಂಥ ಸಮಯದಲ್ಲಿ ಅವನು ಸ್ವರ್ಗದೊಡೆಯನಾದ ಇಂದ್ರನಂತೆ ಕಾಣುವುದಿಲ್ಲ. ಆದರಲ್ಲಿ ಪರಿಣಿತನಾದ ವಿಟಪುರುಷನಂತೆ ಕಾಣುತ್ತಾನೆ. ಅಲ್ಲದೆ ಮೊದಲಿಗೆ ಬೆದರಿದ ಅಹಲ್ಯೆಯನ್ನು ಒಲಿಸಲು ಅವನು ಸುಳ್ಳು ಎಂದು ಗೊತ್ತಿದ್ದರೂ ಅವಳ ಮುಂದೆ ಸ್ವರ್ಗ ಸುಖದ ಆಸೆಗಳನ್ನು ಹರಡುತ್ತಾನೆ “ನಂದನದ ತೋಟಿನಲ್ಲಿ ಮಂದಾರವನ್ನು ಮುಡಿದು, ಕಲ್ಪಲತೆಯ ಮಾಡದಲ್ಲಿ ಸವಿಯಾದ. ಅಮೃತವನ್ನು ಅಪ್ಪಲು ಬಾ” ಎನ್ನುತ್ತಾನೆ. ಅಲ್ಲದೆ ಹೇಳುತ್ತಾನೆ. “ನಿನ್ನ ಅಡಿಗೆ ತಾರೆಗಳ ನೂಪುರವನ್ನು ತೊಡಿಸುತ್ತೇನೆ. ಕೊಂಕಾದ ಚಂದ್ರನನ್ನು ಮುಡಿಗೆ ಮುಡಿಸುತ್ತೇನೆ. ಕ್ಷೀರಪಥದ ಡಾಬನ್ನು ಸೊಂಟಕ್ಕೆ ಸುತ್ತುತ್ತೇನೆ-ಕೊನೆಗೆ ತನ್ನ ಕಿರೀಟವನ್ನೇ ನಿನಗೆ ಮುಡಿಪಾಗಿಸುತ್ತೇನೆ” ಇಂಥ ಮಾತಿಗೆ, ಅದು ಸ್ವರ್ಗದೊಡೆಯನಾದ ಇಂದ್ರನೇ ಆಡುತ್ತಿರುವ ಮಾತಿಗೆ, ಮರುಳಾಗದ ಹೆಣ್ಣು ಯಾರು? ಅವಳು ಅಧೀರಳಾಗುತ್ತಾಳೆ “ಬೇಡಿಕೊಳ್ಳುತ್ತೇನೆ, ಇಲ್ಲಿಂದ ಹೋಗು” ಎಂದರೆ ಅವನ ಉತ್ತರ : “ಇಳೆಯ ಮಡದಿಯರು ಮೊದಲು ದೇವತೆಗಳಿಗೆ ಸಲ್ಲತಕ್ಕವರು.” ಅಲ್ಲಿಗೂ ಅವಳು ಶರಣಾಗದಿರಲು ಸ್ವಲ್ಪ ಕಾಲ ಮರೆಯಾಗುತ್ತಾನೆ. ಇದು ಅವಳ ಮನಸ್ಸನ್ನು ಮತ್ತಷ್ಟು ಕೆರಳಿಸುವ ಹೂಟ. ಅದನ್ನು ಅವನು ಬಲ್ಲ. ಅವಳ ಮನಸ್ಸಿನ ಆಸೆ ಗಾಳಿ ದನಿಯಾಗಿ ಹಾಡಿ ಅವಳನ್ನು ಅಧೀರಳನ್ನಾಗಿ ಮಾಡುತ್ತವೆ. ಅವಳು ಇಂದ್ರನಿಗೆ ಸೋಲುತ್ತಾಳೆ.

ಗೌತಮ ಸಮೀಪಿಸುತ್ತಿರುವಾಗ ಅಹಲ್ಯೆ ಮೂರ್ಛೆ ಹೋಗುತ್ತಾಳೆ ಎಂದು ಕವಿ ವರ್ಣಿಸಿದ್ದಾರೆ. ಇಂದ್ರ ‘ನಿಸ್ತೇಜನಾಗುವನು.’ ಮುನಿಯ ತಪಸ್ಸಿನ ಮುಂದೆ ಅವನ ಪ್ರತಾ ಏನೇನೂ ಇಲ್ಲ. ಅವನು ಮುನಿಗೆ ಏನಾದರೂ ವಿವರಣೆ ಕೊಡಲು ಪ್ರಯತ್ನಿಸಿದನೋ ಅಥವಾ ಹಾಗೇ ಪರಾರಿಯಾದನೋ ಅದರ ವರ್ಣನೆ ಇಲ್ಲ. ಅಂತೂ ಗೌತಮನ ಶಾಪ ಅವನ ಕಿವಿಯ ಮೇಲೆ ಬಿದ್ದಿದೆ. ಆದ್ದರಿಂದಲೇ ಮಧ್ಯಮಾಂಕದಲ್ಲಿ ಸ್ವರ್ಗದ ಸುಖ ಸುರರ ಉಲ್ಲಾಸಗಳು ಮಾಯವಾಗಿವೆ ಎಂಬ ವಾರ್ತೆ ತಿಳಿಯುತ್ತದೆ. ಅವನು ಎಂದಿನಂತೆ ನೋಡುತ್ತಿಲ್ಲ, ಎಂದಿನಂತೆ ಆಡುತ್ತಿಲ್ಲ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ, ಮಂದಿಯ ಜೊತೆ ಬೆರೆಯುತ್ತಿಲ್ಲ. ಸದಾ ಮರವಟ್ಟವನಂತೆ ಇದ್ದಾನೆ. ಅಪ್ಸರಸಿಯರು ಹೀಗೆ ಮಾತನಾಡುತ್ತಿರುವ ವೇಳೆಗೆ ರಂಭೆ ಸಡಗರದಿಂದ ಪ್ರವೇಶಿಸಿ ಅಗ್ನಿಯ ಮಧ್ಯೆ ಪ್ರವೇಶಿಸಿ ಬೇಡಿದ್ದರಿಂದ ಪಿತಾಮಹನ ಕೋಪ ಶಮನವಾಯಿತೆಂದೂ, ಇಂದ್ರನ ಶಾಪ ಹರಿಯಿತೆಂದೂ ತಿಳಿಸುತ್ತಾಳೆ. ಇದರಿಂದ ದೊರೆಯ ಚಿಂತೆ ನೀಗಿತು.’ ಅವನಿಗೆ ಚಿಂತೆ ಯಾವುದು ಎಂದರೆ ಭೂಮಿಯ ಹೆಣ್ಣಿನ ಬಗ್ಗೆ ಇದ್ದ ಅನುತಾಪ. ಇಲ್ಲಿ ಅಗ್ನಿ ಏಕೆ ಮಧ್ಯೆ ಪ್ರವೇಶ ಮಾಡಿದ ಎಂಬುದಾಗಲೀ ಪಿತಾಮಹನ, ಎಂದರೆ ಬ್ರಹ್ಮನ ಕೋಪ (ಅವನಿಗೆ ಕೋಪ ಬಂದದ್ದಾದರೂ ಏಕೆ?) ಶಮನವಾದದ್ದು ಏಕೆ ಎಂಬುದಾಗಲೀ ಸ್ಪಷ್ಟವಾಗಿಲ್ಲ.

ಇಲ್ಲಿಗೆ ಇಂದ್ರನ ಆಸಕ್ತಿ ಮುಗಿಯಲಿಲ್ಲ. ಮಿಥಿಲೆಯತ್ತ ರಾಮನು ಹೊರಟಿರುವುದು ತಿಳಿದು ಅವನಿಗೆ ಸಡಗರ ‘ಚೈತ್ರನನ್ನು ಅಟ್ಟು ಆ ಕಾಡನ್ನು ಸಿಂಗರಿಸಲಿ’ ಎಂದು ಅಪ್ಪಣೆ ಮಾಡಿದ್ದಾನೆ. ರಾಮನ ತೇಜಸ್ಸಿನಿಂದ ಅಹಲ್ಯೆಯ ಗೋಳು ಮುಗಿಯುತ್ತದೆ ಎಂಬುದು ಅವನ ಉತ್ಸಾಹಕ್ಕೆ ಕಾರಣ. ವಾಲ್ಮೀಕಿಯ ಇಂದ್ರನಿಗೆ ಅಹಲ್ಯೆಯನ್ನು ಭೋಗಿಸಿದ ಮೇಲೆ ಅವಳ ನೆನಪು. ಬಹುಶಃ ತನ್ನ ಶಾಪ ಹೋದ ಮೇಲೆ, ಉಳಿದಿರಲಾರದು. ಪು.ತಿನ. ಅಹಲ್ಯೆಯ ಜೊತೆಗೆ ಇಂದ್ರನನ್ನೂ ಉದ್ಧರಿಸುವ ಪ್ರಯತ್ನ ಮಾಡಿದ್ದಾರೆ. ಸ್ವರ್ಗದ ಎಲ್ಲ ವೈಭವಗಳಿಗೂ ಅವನು ವಿಮುಖನಾಗಿ ಅಹಲ್ಯೆಯೊಡನೆ ಪರಿತಾಪ ಪಡುತ್ತಿದ್ದ ಎನ್ನುವುದು ನಿಜವಾಗಿಯೂ ಅವನ ಪಾತ್ರವನ್ನು ಉಜ್ಜಿ ತೊಳೆದಂತೆಯೇ ಸರಿ. ಕವಿ ಈ ಪಾತ್ರದ ಸೃಷ್ಟಿಯಲ್ಲಿ ಯಶಸ್ಸನ್ನು ಪಡೆದಿದ್ದಾರೆ ಎನ್ನುವುದು ಗಮನೀಯವಾದ ಮಾತು. ಆ ಯಶಸ್ಸಿಗೆ ಕಾರಣ ಇಂದ್ರನ ಪರಿತಾಪ.

ಅಹಲ್ಯೆ: ಈ ನಾಟಕದ ಕೇಂದ್ರ ಪಾತ್ರ ಅಹಲ್ಯೆ. ಇಲ್ಲಿನ ಎಲ್ಲ ಕ್ರಿಯೆಗಳೂ ಸುತ್ತುವುದು ಅವಳ ಸುತ್ತಲೇ. ಅವಳದು ಸೋಜಿಗ ಕನಿಕರ, ಅನುಕಂಪಗಳನ್ನು ಹುಟ್ಟಿಸುವ ಪಾತ್ರ.

ಅಹಲ್ಯೆ ಸುಂದರಿ : ಎಷ್ಟೋ ಜನ ಸುಂದರಿಯರನ್ನು ಬಲ್ಲ ಇಂದ್ರನೂ ಕೂಡ ‘ಇಂಥ ಚೆಲ್ವಿಕೆಯ ನಾನೆಂದು ಕಂಡಿಲ್ಲ; ಈಕೆಗೆಣೆ ನಾ ಕಾಣೆ ಮೂಲೋಕದಿ’ ಎಂದು ಉದ್ಗರಿಸುವಂಥ ಸುಂದರಿ ಅಂಥವಳಿಗೆ ಈ ನಾಟಕದಲ್ಲಿ ಮೊದಲಿಗೆ ತಾಯ್ತನದ ಸುಖ ಕೂಡ ದೊರೆತಿದೆ-ತನ್ನ ಬಾಲಕನೊಡನೆ ಮಾತನಾಡಿ, ಅವನನ್ನು ಪೋಷಿಸಿ ಅವಳಿಗೆ ಹೊತ್ತು ಹೋಗುತ್ತದೆ, ಪತಿ ಗೌತಮ ತಪಸ್ಸಿನಲ್ಲಿದ್ದಾಗಲೂ.

ಋಷಿಗಳು ತಪಸ್ಸು ಮಾಡುವುದು ಸ್ವರ್ಗ ಪ್ರಾಪ್ತಿಗಾಗಿ. ಯಜ್ಞಯಾಗಾದಿಗಳಲ್ಲೂ ಹೋಮ ಹವನಗಳಲ್ಲೂ ಹವಿಸ್ಸನ್ನು ಅರ್ಪಿಸುವುದು ದೇವತೆಗಳಿಗೆ. ಅಂಥ ಸ್ವರ್ಗದ ವಿಷಯದಲ್ಲೂ, ಅಲ್ಲಿ ವಾಸಿಸುವ ದೇವತೆಗಳ ವಿಷಯದಲ್ಲೂ ಅಹಲ್ಯೆಗೆ ಸಹಜವಾಗಿಯೇ ಕುತೂಹಲ.

ಸ್ವರ್ಗದ ಅಧಿಪತಿಯ ವಿಷಯದಲ್ಲಿ ಅವಳಿಗೆ ಮೊದಲ ಕುತೂಹಲ ಭಯದ ಮೂಲಕ. ತನ್ನ ತಪಸ್ಸಿಗೆ ಭಂಗ ತರಲು ಬಂದ ರಂಭೆಯನ್ನು ಗೌತಮ ಹೂಂಕಾರದಿಂದ ದೂರಕ್ಕೆ ಅಟ್ಟಿದ್ದಾನೆ. ಆದರೆ ಸ್ವರ್ಗ ಕನ್ಯೆಗೆ, ಆದ್ದರಿಂದ ಸ್ವರ್ಗಕ್ಕೆ ಅದರ ಮೂಲಕ ಸ್ವರ್ಗದ ಅಧಿಪತಿ ಇಂದ್ರನಿಗೆ ಮಾಡಿದ ಅವಮಾನ. ಆಗ ಇಂದ್ರ-ಅಷ್ಟು ಶಕ್ತನಾದವನು ತಮಗೆ ಏನು ಮಾಡುತ್ತಾನೆಯೋ ಎಂದು ಭಯ. ರಂಭೆಗೆ ಶಾಪ ಬರುವುದನ್ನು ತಪ್ಪಿಸಲು ತಾನು ಕಾರಣ, ನಿಜ. ಆದರೆ ಅದು ಇಂದ್ರನಿಗೆ ತಿಳಿಯುವುದು ಹೇಗೆ?

ಹಸುಳೆ ಶತಾನಂದನೊಡನೆ ಅವಳು ಮಾತನಾಡುವುದು ಒಂದು ನಿಮಿಷವೋ ಏನೋ. ಅಷ್ಟು ಮಾತುಕತೆಯಲ್ಲಿಯೇ ಅವಳ ಬಾಳಿನ ಶೂನ್ಯದ ಲಕ್ಷಣಗಳನ್ನು – ಅವೇ ಹೆಚ್ಚು-ಆ ಬಾಲಕ ತುಂಬುತ್ತಿರುವುದು ತಿಳಿಯುತ್ತದೆ ಅವನು ಆಡಲು ಹೋದ ಮೇಲೆ ಅವಳು ಏನು ಮಾಡಬೇಕು? ಗುಡುಗು ಕೇಳಿದರೂ ಅದು ಅವಳ ಇಂದ್ರಿಯಗಳನ್ನು ದೇವಲೋಕಕ್ಕೆ ತೆರೆಯುತ್ತದೆ. ಅದನ್ನು ಕೇಳುತ್ತ ಕೇಳುತ್ತ ತನಗೆ ಭೂಮಿಯ ಆಸರೆಯೇ ತಪ್ಪಿದಂತಾಗುತ್ತಿದೆ ಎನ್ನುತ್ತಾಳೆ. ಬಾನಿನ ಗುಡುಗು ಸ್ವರ್ಗದ ಧ್ವನಿಯಾಗಿ ಮನಸ್ಸಿನ ಉನ್ಮಾದಕ್ಕೆ, ಚಿತ್ತಭ್ರಮೆಗೆ ಕಾರಣವಾಗುತ್ತದೆ.

ಇಲ್ಲಿಂದಾಚೆಗೆ ಇವಳ ಪಾತ್ರ ಸೃಷ್ಟಿಯ ವಿಷಯದಲ್ಲಿ ಕವಿ ತಮ್ಮ ಸಕಲ ಕಾವ್ಯ ಸಾಮರ್ಥ್ಯವನ್ನು ಮುಡಿಪಾಗಿಟ್ಟಿದ್ದಾರೆ ಎನ್ನಿಸುವಂತೆ ಕುಶಲ ಕರ್ಮದಲ್ಲಿ ತೊಡಗಿದ್ದಾರೆ. ಆಶ್ರಮವಾಸಿನಿಯೂ, ಗೌತಮ ನಂತಹ ತಪಸ್ವಿಯು ಸತಿಯೂ, ಶತಾನಂದನಂತಹ ಜಾಣ ಮಗುವಿನ ತಾಯಿಯೂ ಆದ ಅಹಲ್ಯೆ ಒಂದು ಕ್ಷಣ ಈ ಎಲ್ಲ ವ್ಯಕ್ತಿತ್ವಗಳನ್ನೂ ಮರೆತು ಅವನಿಗೆ ಶರಣಾದಳು ಎಂದರೆ ನಂಬುವುದು ಕಷ್ಟವಾಗುತ್ತದೆ. ಮಾನವ ಸ್ವಭಾವದ ಸಾಮಾನ್ಯ ಸ್ವರೂಪವನ್ನು ಬಲ್ಲವರಿಗೆ ಅದು ಅಸಹಜವಾಗಿ ಕಾಣುತ್ತದೆ ಆದರೆ ಈ ಕವಿ ಮಾನವ ಸ್ವಭಾವವನ್ನೂ ಮನೋವ್ಯಾಪಾರಗಳನ್ನೂ ಚೆನ್ನಾಗಿ ಬಲ್ಲವರು. ಆದ್ದರಿಂದಲೇ ಕನಿಷ್ಠ ಪಕ್ಷ ಎರಡು ಸಾವಿರ ವರ್ಷಗಳ ಕಾಲ –ಎಂದರೆ ವಾಲ್ಮೀಕಿಯಿಂದೀಚೆಗೆ ಕಲ್ಲಾಗಿ ಬಿದ್ದಿದ್ದ ಒಂದು ಪಾತ್ರವನ್ನು ಕೈಗೆತ್ತಿಕೊಂಡು ಅದಕ್ಕೆ ಮತ್ತೆ ಜೀವ ನೀಡಿದ್ದಾರೆ. ನಾವು ನಿಂತು, ಮಾತನಾಡಿಸಿ, ಮೆಚ್ಚಿ ಕೈಮುಗಿದು, ಬೀಳ್ಕೊಳ್ಳಬೇಕು ಎನ್ನುವ ಪ್ರೀತಿ-ಗೌರವಗಳ ಮಹಿಳೆಯನ್ನಾಗಿ ಮಾಡಿದ್ದಾರೆ.

ಮೊದಲು ಮಗ ಅನಂತರ ಮಾಧವಿಯೊಡನೆ ಮಾತಾಡುತ್ತಿರುವ ಅಹಲ್ಯೆಯನ್ನು ನೋಡಲು, ಅವರ ಮಾತು ಕೇಳಲು ಸುಳಿದಾಡಿದ ಇಂದ್ರನ ಹೊಳಪನ್ನು ನೋಡಿ ಅವಳು ಬೆಚ್ಚುತ್ತಾಳೆ. ಕಾಣದ ನೋಟವನ್ನು ಕಂಡಂತೆ, ಕೇಳದ ನಾದವನ್ನು ಕೇಳಿದಂತೆ ಭ್ರಮಿಸುತ್ತಾಳೆ. ಇದೆಲ್ಲ ಅವಳ ಎದೆಯಲ್ಲಿ ಅವಳಿಗೇ ತಿಳಿಯದಂತೆ ಮೊಳೆದು ಬೆಳೆಯುತ್ತಿರುವ ಆಸೆಯ ಮೊಳಕೆಗಳು. ಸ್ವರ್ಗ ಮತ್ತು ಸ್ವರ್ಗದ ಅಧಿಪತಿ ಅವಳ ಎದೆಯನ್ನು ಕಲಕುತ್ತಲೇ ಇದ್ದಾರೆ, ಅವಳಲ್ಲಿ ಹೊಸ ಹೊಸ ಕಲ್ಪನೆಗಳನ್ನು ಮೂಡಿಸುತ್ತಲೇ ಇದ್ದಾರೆ.

ಗೌತಮ ಇಚ್ಛಿಸಿದರೆ ನಿನ್ನನ್ನೂ ಇಂದ್ರನು ಇಂದ್ರಾಣಿಯನ್ನು ಹೇಗೋ ಹಾಗೆ ಬಾಳಿಸುತ್ತಾರೆ ಎಂಬ ಮಾಧವಿಯ ಮಾತಿನಲ್ಲಿ ಅವಳಿಗೆ ನಂಬಿಕೆ ಮೂಡದು. ‘ಏಕೆಂದರೆ ಮೂರು ಲೋಕವೂ ಶರಣು ಎನ್ನುವ ಇಂದ್ರನಲ್ಲಿ ಅವನ ಪ್ರಸನ್ನತೆಗಾಗಿ ಬೇಡುವ ಭೂಮಿಯಲ್ಲಿ ಜನರೆಲ್ಲಿ ? ಇಷ್ಟೆಲ್ಲ ಯಾಗಗಳನ್ನು ಮಾಡಿ ಒಲಿಸಬೇಕಾಗಿರುವುದು, ಯಜ್ಞಗಳಿಂದ ಹೊಗಳಿ ತೃಪ್ತಿ ಪಡಿಸಬೇಕಾಗಿರುವುದೂ ಆ ಇಂದ್ರನನ್ನು ತಾನೆ ? ಅವನು ಈ ಭೂಮಿಗೆ ಆಧಾರ ಎಂಬುದನ್ನು ಅವನು ಎಲ್ಲ ಆಗ ಭೋಗವೈಭವಗಳಿಗೂ ಅರಸು ಎಂಬುದನ್ನೂ ವರ್ಣಿಸುವ ನಾಲ್ಕು ಪಂಕ್ತಿಗಳನ್ನು ಅಹಲ್ಯೆಯ ಬಾಯಲ್ಲಿ ಹೇಳಿಸಿದ್ದಾರೆ, ಕವಿ ಅವನು ಉದ್ಧರಿಸಿ ಹೇಳದಿರುವುದು ಸಾಧ್ಯವೇ ಇಲ್ಲ ;

ಅವನಿಂ ಮಳೆ, ಅವನಿಂ ಬೆಳೆ, ಅವನಿಂದಲೆ ಸುಗ್ಗಿ –
ಹದಳಕೆ ಹೊಣೆ ಅವನಿರದಿರ, ತಿರೆಪೋಪುದು ಮಗ್ಗಿ
ಎಲ್ಲಾರಾಗದ ಭೋಗದ ವೈಭವದರಸವನು
ನೋವಿನ ಸಾವಿನ ಬಾಳಿನ ನರರಪ್ಪರೆ ಸಮನು ?

ಇಂದ್ರನಿಗೆ ಸಮನಾದವರು ಯಾರೂ ಇಲ್ಲ ಎಂಬ ಅವನ ಭಾವನೆ ಬೆಳೆಯುತ್ತಲೇ ಹೋಗುತ್ತದೆ. ಹೀಗಾದುದರಿಂದ ಬಳಕೆಯ ನೆಲದ ಮರ ಗಿಡಗಳೆಲ್ಲಾ ಅವಳನ್ನು ಅಂಜಿಸುತ್ತವೆ. ಪತಿಯ ಮನಸ್ಸು ಹಿಂದಕ್ಕೆ ಬರಬೇಕು ಎಂಬುದು ಅವಳ ಬಯಕೆ. ಅದಕ್ಕೆ ಅವಳು ಸ್ಪಷ್ಟವಾಗಿ ಕೊಡುವ ಕಾರಣ ‘ದೇವರೊಡನೆ ನಮಗೆ ಸ್ಪರ್ಧೆಬೇಡ’ ಎಂಬುದು ಆದರೆ ಅಂತರಂಗದ ಅವಳಿಗೆ ಸ್ಪಷ್ಟವಾಗಿಲ್ಲದ ಕಾರಣ ಅವಳ ದೇಹದ ಬಯಕೆ. ಈ ಬಯಕೆ ನಾಲ್ಕನೆಯ ದೃಶ್ಯದ ಅವಳ ಹಾಡಿನಿಂದ ಸ್ಪಷ್ಟವಾಗುತ್ತದೆ. ‘ಎನಿತು ದೂರಕ್ಕೆ ಸರಿದು ನಿಂತಿಹೆಯೋ ನನ್ನ ಮನದನ್ನ – ’ ಎಂದು ಆರಂಭವಾಗುವ ಹಾಡು ಅದು. ಅವನ ತಪದ ಗುರಿ ಏನು ಎಂದು ಅವಳಿಗೆ ತಿಳಿಯದು. ಇಂತಹ ಸುಂದರವಾದ ಇಹಲೋಕದ ಸುಖವನ್ನು ಮರೆಸಬೇಕಾದರೆ “ಯಾವ ಆಸೆಯ ಗಂಧ ಸೆಳೆಯಿತು? ಯಾವ ಮದದ ತಣಿಸಿತು? ಯಾವ ಮತ್ತು ಇಂತಹ ಇಹವನ್ನು ಮರೆಸಿತು?”-ಇವು ಅವಳ ಪ್ರಶ್ನೆಗಳು ಈ ಪ್ರಶ್ನೆಗಳನ್ನು ಕೇಳುತ್ತಾ ಕೇಳುತ್ತಾ ಅವಳ ಮನಸ್ಸಿನ ಆಳದಲ್ಲಿದ್ದ ಇತರ ಪ್ರಶ್ನೆಗಳೂ ಮೇಲಕ್ಕೆ ತೇಲುತ್ತವೆ :

ಎಂಥ ಮರೆವೆಯೊ ಇನಿಯ ಇನಿತೊಂದು
ಹಂಬಲನು ಬಿಟ್ಟೆ – – ನನ್ನ
ಒಂಟಿಯೊಳಗಿಟ್ಟೆ
ಮನವು ಮುದುಡಿತು ಆಸೆ ನೂರಕ್ಕೆ
ಬದುಕು ತೆರವೋ ನೂರು ತವಕಕೆ,
ಏನು ಹೇಳಲಿ ನಿನ್ನ ಸ್ವಾರ್ಥðಕೆ
ಹಂಬಲನು ಬಿಟ್ಟೆ – ನನ್ನ
ಒಂಟಿಯೊಳಗಿಟ್ಟೆ

ಅಹಲ್ಯೆಯ ಮುಂದಿನ ನಡೆಯನ್ನು ನಿರ್ಧರಿಸುವ ಆ ನಡೆಯ ಸರಿ ತಪ್ಪುಗಳ ನಿರ್ಧಾರಕ್ಕೆ ಮೂಲ ಮಾಪನಗಳನ್ನು ನೀಡುವ ಪಂಕ್ತಿಗಳು ಇವು. ಅದಕ್ಕೆ ಹಿನ್ನೆಲೆಯಾಗಿ ಗೌತಮ-ಅಹಲ್ಯೆಯರಂತಹ ಮಿನಿಗಳ ಜೀವನ ಕ್ರಮವನ್ನೂ ಸಮಯಗಳನ್ನೂ ತಿಳಿಯುವುದು ಅಗತ್ಯ ಗೌತಮ ಋಷಿ ಎಂದರೆ ತಪಸ್ವಿಯ ಜೀವನವನ್ನು ನಡೆಸುವವನು. ಆದರೆ ಅದು ಬ್ರಹ್ಮಚರ್ಯದಲ್ಲಿದ್ದು. ಕಟ್ಟೇಕಾಂತದಲ್ಲಿದ್ದು ಆಚರಿಸುವಂತಹ ತಪಸ್ಸಲ್ಲ. ಸತಿಯೊಡನಿದ್ದು ಮಧ್ಯರ ಮಧ್ಯೆ ಧ್ಯಾನಕ್ಕೆ ತೊಡಗಿ ಆಚರಿಸುವ ರಪಸ್ಸು, ಈ ಸತಿಯಾದರೂ ಇದನ್ನೆಲ್ಲ ತಿಳಿದು ಇದನ್ನೇ ಸಮಯ ಎಂದದ್ದು- ಗೌತಮನನ್ನು ಮದುವೆಯಾವಳು. ಸಾವಿತ್ರಿಯಂತೆ ತಾನಾಗಿ ಪತಿಯನ್ನು ಆರಿಸಿ ವರಿಸಿದಳೋ ಇಲ್ಲವೆ ತಂದೆತಾಯಿಗಳ ಇಚ್ಛೆಯಂತೆ, ತನ್ನ ಇಚ್ಛೆಯನ್ನು ಬದಿಗಿಟ್ಟೋ. ಅಥವಾ ತನ್ನ ಇಚ್ಛೆಯೊಂದಿದೆಯೋ ಇಲ್ಲವೋ ತಿಳಿಯದೆಯೋ ಮದುವೆಯಾದವಳೋ ಈ ಯಾವ ಅಂಶಗಳೂ ವಾಲ್ಮೀಕಿಯ ಕಾವ್ಯದಿಂದಾಗಲೀ, ಈ ನಾಟಕದಿಂದಲಾಗಲೀ ತಿಳಿಯವು.

ಗೌತಮನಾದರೋ, ಈ ನಾಟಕಕಾರರು ಹೇಳುವಂತೆ ನೂರು ಹೆಣ್ಣುಗಳಲ್ಲಿ ಇವಳನ್ನೇ ಪ್ರೀತಿಯಿಂದ ಆರಿಸಿ ಮದುವೆ ಮಾಡಿಕೊಂಡ. ಅವನು ಮದುವೆಯಾದದ್ದು ಅವಳು ‘ಈ ಭೂಮಿಯಲ್ಲಿ ಈಬಾಳನ್ನು ನಡೆಸಲಿ’ ಎಂದು ಅವನು ಹಾಗೆ ನಡೆದುಕೊಂಡದ್ದು ಹೌದು, ಸ್ವಲ್ಪ ಕಾಲ. ಆಮೇಲೆ ಅವನಿಗೆ ಯಾವುದೋ ಆಸೆ ಹುಟ್ಟಿತು. ದಿನದ ರೂಢಿಯಲ್ಲಿ ಆಕೆಯನ್ನು ಮರೆತ. ತಪಸ್ಸು ಕದಡಿದಾಗ ಈತನೇ ಅದನ್ನೆಲ್ಲಾ ಹೇಳುತ್ತಾನೆ. “ತಪ ಎಂದ, ಜಪ ಎಂದೆ, ಅವಳಲ್ಲಿ ರಾಗ ಬತ್ತಿ ಹೋಗುವಂತೆ ಮಾಡಿದೆ. ಪ್ರೀತಿಸಿದವಳಿಗೆ ಪ್ರೀತಿಯಲ್ಲಿಯೇ ಮುಕ್ತಿ ಎಂಬುದನ್ನು ತಿಳಿಯದೇ ಹೋದೆ. ತಪಸ್ಸನ್ನು ಗಳಿಸುವ ಲೋಭವು ( ಪ್ರೇಮದ) ಧ್ವನಿಯನ್ನು ಮರೆಸಿತು.” ಅವನ ಪ್ರಕಾರವೇ ಅವನು ಉಗ್ರವಾದ ತಪಸ್ಸನ್ನು ಆಚರಿಸಲು ಪ್ರಯತ್ನಿಸಿ ಅದಕ್ಕಾಗಿ ಕುಳಿತ ಕಾಲ ಕತ್ತಲೆಯದು. ಮತ್ತೆ ಅವಳ ಪ್ರೇಮದ ಕರೆ ಕೇಳಿಸಿದ ಆ ಕ್ಷಣವೇ ಬೆಳಗು.

ಹೀಗೆ ಇತ್ತ ತಪಸ್ಸಿನಲ್ಲಿದ್ದು ನಿಜಕ್ಕೆ ಎಚ್ಚೆತ್ತು ಸತಿಯ ಬಳಿಗೆ ಹಿಂದಿರುಗುವ ನಿರ್ಣಯವನ್ನು ಗೌತಮನು ಕೈಗೊಳ್ಳುವ ಸಮಯದಲ್ಲಿ ಅತ್ತ ಅಹಲ್ಯೆ ಏನು ಮಾಡುತ್ತಿದ್ದಾಳೆ? ಸ್ವರ್ಗದ, ಸ್ವರ್ಗದೊಡೆಯನ ಆಸೆ ಮೊಳೆತು, ಮರವಾಗಿ ಚಿಗುರೊಡೆದಿದೆ. ಇಂದ್ರಾಣಿಯ ಪುಣ್ಯವೇ ಪುಣ್ಯ ಎಂದು ಹೇಳುತ್ತಿದ್ದಾಳೆ, ಅದೂ ಮಗಿವಿನ ಮುಂದೆ. ಯಾವ ಸುಖವನ್ನು ಮೂರು ಲೋಕಗಳೂ ಕನಸು ಕಾಣುತ್ತಿವೆಯೋ ಅಂಥದು ಇಂದ್ರಾಣಿಗೆ ನನಸಾಗಿದೆ ಎಂದು ಈಕೆ ಕನವರಿಸುತ್ತಿದ್ದಾಳೆ : ಅವಳ ಮನಸ್ಸು ಇಂದ್ರನತ್ತ ಓಡಿದೆ. ಅವನ ಸುತ್ತ ಬಳಿಯಾಗಿ ಹಬ್ಬುತ್ತಿದೆ. ಇದಕ್ಕೆ ಕಾರಣ ಅಲ್ಲಿ ಆ ಮನಸ್ಸಿಗೆ ಆಸರೆಯಾಗಿ ಇರಬೇಕಾದವನು ತಪಸ್ಸಿಗೆ ಕುಳಿತದ್ದು . ಮನ್ಮಥ ಮುಂದೆ ನೀಡುವ ಉಪದೇಶ, ರಾಗದಿ ತುಸು ನಡೆ, ತ್ಯಾಗದಿ ತುಸು ನಡೆ’ ಎಂಬುದು ಗೌತಮನಿಗೆ ಅರಿವಾಗದಿದ್ದ ಕಾಲ ಅದು. ಸಂಸಾರದಲ್ಲಿ ನಡೆಸುತ್ತೇನೆ ಎಂದು ಸತಿಯಾಗಿ ತಂದ ಸುಂದರಿಯನ್ನು ಹಾಗೆ ನಡೆಸಿಕೊಳ್ಳದ ತಪ್ಪು ಗೌತಮನದು. ಹಾಗೆಂದ ಮಾತ್ರಕ್ಕೆ ಆ ಸತಿಯಾದವಳು ಹಾದಿ ತಪ್ಪಲೇಬೇಕು ಎಂದೇನಿಲ್ಲ. ಆದರೆ ನಿಜವಾದ ಹಾದಿ ಯಾವುದು. ಎಂಬುದು ನಿರ್ಣಯವಾದ ಮೇಲೆ ಅವಳು ಹಾದಿ ತಪ್ಪಿದಳೇ ಇಲ್ಲವೇ ಎಂಬುದೂ ನಿರ್ಣಯವಾಗತಕ್ಕದ್ದು.

ಜೀವನದ – ಅದು ಋಷಿ ಜೀವನವೇ ಆಗಲಿ – ಸಮಯವನ್ನು ಗೌತಮ ಪಾಲಿಸಲಿಲ್ಲ. ತಾನು ಪಾಲಿಸದಿದ್ದರೂ ಸತಿಯಾದವಳು ಅದನ್ನು ಪಾಲಿಸಲೇ ಬೇಕು ಎಂದು ನಿರೀಕ್ಷಿಸುವವನು ಅವನು. ಇದು ತುಂಬಾ ಸೂಕ್ತವಾದ ಪ್ರಶ್ನೆಯೇ ತುಂಬ ಸೂಕ್ಷ್ಮವಾದದ್ದು ಎನ್ನುತ್ತಾರೆ. ಗೌತಮನಾದರೂ ನಾನು ಹುಟ್ಟಿ ಬೆಳೆದ ಆವರಣವನ್ನು ಅದು ಒಪ್ಪಿಕೊಂಡಿರುವ ನಿಯಮಗಳನ್ನು ಮೀರಲಾರದವನು. ತಪಸ್ಸಿಗೆ ಕೂತರೂ ಅಸೂಯೆಯನ್ನು ಗೆಲ್ಲಲಾರದೇ ಹೋದವನು. ಹೀಗಾಗಿ ಅಹಲ್ಯೆ ತಪ್ಪಿತಸ್ಥಳು ಆದಳು. ಪತಿಯಾದ ಗೌತಮನ ಕಣ್ಣಿನಲ್ಲಿ ತಪ್ಪಿತಸ್ಥಳಾದವಳು, ಲೋಕದ ಕಣ್ಣಿನಲ್ಲೋ?

ಇದಕ್ಕೆ ಉತ್ತರ ‘ಯಾವ ಲೋಕ?’ ‘ಯಾವ ಕಾಲದ ಲೋಕ’ ಎಂಬ ಎರಡು ಮುರು ಪ್ರಶ್ನೆಗಳ ಸಹಾಯವಿಲ್ಲದೆ ನಿರ್ಣಯವಾಗತಕ್ಕದ್ದಲ್ಲ. ಅಂದಿನ ಕಾಲದ ಲೋಕ ಏನು ಹೇಳಿತು ಎಂಬುದಕ್ಕೆ ನಾಟಕದಲ್ಲಿ ಸೂಚಿನೆಗಳಿವೆ. ಗೌತಮ ಶಾಪದ ಮಾತನ್ನೇ ಮತ್ತೆ ಮತ್ತೆ ಉಚ್ಚರಿಸುತ್ತಿರಲು ಅವನ ಗೆಳೆಯ ಮೈತ್ರೇಯ ಅಹಲ್ಯೆಯಪರವಾಗಿ ಸಹಾನುಭೂತಿಯ ಮಾತನ್ನು ಆಡುತ್ತಾನೆ: “ಇಂದ್ರನೇ ನೀತಿಗೆಡೆ ಬಿದ್ದಳೀ ಬಡವೆ.” ಇಂದ್ರನೇ ನೀತಿಗೆಡಲು ಈ ಭೂಮಿಯ ಹೆಣ್ಣು ಅವನಿಗೆ ವಶವಾದಳು. ಇದು ತಪ್ಪೆ? ಮುಂದೆ ರಂಭೆಯೂ ‘ಮಿಥಿಲೆ ಬನದಲ್ಲಿ ಏಕಾಕಿನಿಯಾಗಿ. ಅನುತಾಪವಿಲ್ಲದವಳಾಗಿ ಅಲೆಯುತ್ತಿದ್ದಾಳೆ’ ಎಂದು ಹೇಳುವಲ್ಲಿಯೂ ಕನಿಕರದ, ಸಹಾನುಭೂತಿಯ ಧ್ವನಿಯಿದೆ.

ಸ್ವಲ್ಪ ಹೊತ್ತು ಮಾತ್ರ ಇಂದ್ರನೊಡನೆ ದೇಹಸುಖವನ್ನು ಅನುಭವಿಸಿ ಅನಂತರ, ಕೂಡಲೇ ಶಾಪಕ್ಕೆ ಸಿಕ್ಕಿ ತತ್ತರಿಸಿದ ಅಹಲ್ಯೆಗೆ ಈ ಬಗ್ಗೆ ಮೂಡಿದ ಭಾವನೆಗಳು ಯಾವುವು? ಅವಳೂ ಈ ಸಂಪ್ರದಾಯದ ಒತ್ತಡದಿಂದ ಪಾರಾಗಲಾರದ ಹೆಣ್ಣು. ಅದೇ ಸಂಪ್ರದಾಯ ಹೇಳಿಕೊಟ್ಟಂತೆ, ಅದರ ತುಳಿತದಿಂದ ಪಾರಾಗಲಾರದ, ಅದಕ್ಕೇ ಬಲಿಯಾದ, ಇಂಥ ಸಂದರ್ಭದಲ್ಲೂ ಇದಕ್ಕಿಂತ ಬೇರೆಯಾಗಿ ಯೋಚಿಸಲು ಶಕ್ತಿಯಿಲ್ಲದ ಕವಿ ಹೇಳಿಸುವ ಮಾತುಗಳನ್ನೇ ಹೇಳಬೇಕಾದ ಅಭಾಗಿನಿ ಅವಳು. ಮುಂದೆ ಅವಳ ರೋದನದಲ್ಲಿವೆ ಈ ಮಾತುಗಳು : “ವಿಶ್ವಕ್ಕೆ ನಾನು ಏಕಾಕಿನಿ, ಪಾತಕಿ, ಅಸತಿ, ಅನಾತ್ಮೆ, ಭ್ರಷ್ಟೆ, ಹೇಸಿಕೆ ಎಲ್ಲರ ಮನಕೂ.”

ಇವು ಅಹಲ್ಯೆಯ ಅವನತಿಯನ್ನು ಸೂಚಿಸುವ ಮಾತುಗಳು ಮಾತ್ರವಲ್ಲ. ಇದುವರೆಗೆ ಶುಭ್ರ ಚೇತನರಾಗಿ, ಶುಭ್ರಮತಿಯಾಗಿ, ಪ್ರತಿಭಾ ತೇಜಸ್ವಿಯಾಗಿ ನಾಟಕವನ್ನು ನಡೆಸಿಕೊಂಡು ಬಂದ ಕವಿಯ ಪ್ರತಿಭೆಯ ಅವನತಿಯನ್ನೂ ಸೂಚಿಸುವ ಮಾತುಗಳು. ಇದುವರೆಗೆ ದೃಶ್ಯದಿಂದ ದೃಶ್ಯಕ್ಕೆ ಸೊಗಸನ್ನು ಪೇರಿಸುತ್ತಾ ಬಂದ ಶಿಲ್ಪದಲ್ಲಿ, ಅದರ ಗೋಪುರದ ಭಾಗದಲ್ಲಿ ಇದೂ ಶಿಲ್ಪದ ಒಂದು ಭಾಗವೋ ಎಂದು ಭ್ರಮಿಸಿ ಕವಿ ಗೂಡು ಕಟ್ಟಿಸಿ ಹಳೆಯತರನದ ಭ್ರಾಂತಿ ಬರಿಸಿ ಬಾವಲಿಗಳನ್ನು ಬಿಟ್ಟು ಅವುಗಳಿಂದ ಕಚಪಚ ಎಂದು ಶಬ್ದ ಮಾಡಿಸಿದಂತಿದೆ. ಈ ಮಾತುಗಳು. ಕವಿಗೆ ತಾವು ನಾಟಕವನ್ನು ಪ್ರಾರಂಭಿಸಿದ ರೀತಿಯೂ, ಉದ್ದೇಶವೂ ಸ್ವಲ್ಪ ಕಾಲದ ಮಟ್ಟಿಗಾದರೂ. ಮರೆತು ಹೋದಂತಿದೆ.

ಆದರೆ ಮತ್ತೆ ವಿಶ್ವಾಮಿತ್ರ ಮಾತನಾಡುವ ವೇಳೆಗೆ ಕವಿಗೆ ಒದಗಿದ್ದ ತಾತ್ಕಾಲಿಕ ವಿಸ್ಮೃತಿ-ಅದು ಈ ಸಂಸ್ಕೃತಿಯ ಹಿರಿಮೆಯ ಭ್ರಾಂತಿಯಿಂದ ಬಂದದ್ದು-ಹೋಗಿವೆ. ಸಂಪ್ರದಾಯದ ಆವರಣದಿಂದ ಪಾರಾಗಲು ಕವಿ ಸಮರ್ಥರಾಗಿದ್ದಾರೆ. ವಿಶ್ವಾಮಿತ್ರ ‘‘ಈಕೆ ನನ್ನ ಸಖ ಗೌತಮನ ಪುಣ್ಯಮಯಿ ಸತಿ” ಎನ್ನುತ್ತಾನೆ. ಇದು ಕವಿಯ ಸ್ವಂತಿಕೆಯೋ ವಾಲ್ಮೀಕಿಯ ಪ್ರಭಾವವೋ ಹೇಳಲು ಬಾರದು. ಏಕೆಂದರೆ ಈ ಸಂದರ್ಭದಲ್ಲಿ ವಾಲ್ಮೀಕಿಯೂ ಅಹಲ್ಯೆಯನ್ನು ಉಜ್ವಲ ಮಾತುಗಳಲ್ಲಿ ವರ್ಣಿಸಿದ್ದಾರೆ. ಎಂಬುದನ್ನು ನೋಡಿದ್ದೇವೆ. ಗೌತಮ ಹಿಂದೆ ಆಗಿಹೋದದ್ದನ್ನು “ಒಂದು ಕೆಟ್ಟ ಕನಸು” ಎನ್ನುತ್ತಾನಷ್ಟೆ “ಅದನ್ನು ಕಳೆದುಕೊಂಡು ನಾವು ಒಳ್ಳೆಯ ಎಚ್ಚರಕ್ಕೆ ಬಂದಿದ್ದೇವೆ” ಎಂದು ಅವನು ಹೇಳುವ ಮಾತು ಈ ನಾಟಕದ ಮೂಲ ಉದ್ದೇಶಕ್ಕೆ ಅನುಗುಣವಾಗಿದೆ. ಅಷ್ಟೇ ಅಲ್ಲ, ಇಲ್ಲಿನ ಗೌತಮನ ಪಾತ್ರಕ್ಕೂ ಗೌರವ ತರುವ ಮಾತುಗಳು ಅವು.

ಅಹಲ್ಯೆ-ಒಟ್ಟು ದೃಷ್ಟಿಗೆ-ಅನುಚಿತವಾದ ಪ್ರಮಾಣ ಮೀರಿದ ಶಾಪಕ್ಕೆ ಗುರಿಯಾದ, ಆ ಶಾಪದಿಂದ ನೊಂದು ಬೆಂದು ಸಹೃದಯರ ಸಹಾನುಭೂತಿಗೆ ಪಾತ್ರಳಾಗುವ, ಅವರಸರಲ್ಲಿ ಅನವಶ್ಯಕವಾಗಿ ಶಾಪಕ್ಕೆ ಈಡಾದುದಕ್ಕೆ ಪರಿಹಾರವೋ ಎಂಬಂತೆ ಶ್ರೀರಾಮನೇ ನಮಸ್ಕರಿಸುವ ಶುಭ್ರಳೂ ಪ್ರೇಮಮಯಿಯೂ ಆದ ಮಹಿಳೆಯಾಗಿ ಎದ್ದು ಕಾಣುತ್ತಾಳೆ.

ಕಾವ್ಯಸೌಂದರ್ಯ:

ಇದರ ನಾಟಕ ಗುಣವನ್ನು ವಿಚಾರ ಮಾಡುವ ಮೊದಲು ಕಾವ್ಯ ಸೌಂದರ್ಯವನ್ನು ಪರಿಶೀಲಿಸೋಣ. ಪು.ತಿ.ನ. ಪ್ರಧಾನತಃ ಕವಿ. ಕನ್ನಡದಲ್ಲಿ ಕಾವ್ಯ ರಚನೆ ಮಾಡಿರುವ ಶ್ರೇಷ್ಠ ಕವಿಗಳಲ್ಲಿ ಅವರೂ ಒಬ್ಬರು. ಕಾವ್ಯಕ್ರಿಯೆ ಅವರಿಗೆ ಸಹಜ ಧರ್ಮವಾದುದರಿಂದ ಈ ನಾಟಕದುದ್ದಕ್ಕೂ ಸುಂದರವಾದ ಕಾವ್ಯ ಸೃಷ್ಟಿ ನಡೆದಿರುವುದು ಕಾಣುತ್ತದೆ. ಪ್ರಕೃತಿ ವರ್ಣನೆಯಲ್ಲಿ ಹೇಗೋ ಹಾಗೆ ಪಾತ್ರಗಳ ಸ್ವಭಾವ ವರ್ಣನೆಯಲ್ಲಿಯೂ, ಸಂಭಾಷಣೆಯಲ್ಲಿಯೂ ಕಾವ್ಯ ಪ್ರಧಾನ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ.

ಗೌತಮನ ಹೂಂಕಾರದಿಂದ ಮೂರ್ಛಿತಳಾಗಿ ಬಿದ್ದಿರುವ ರಂಭೆಯ ವರ್ಣನೆ ಇದು:

ಕಡಿದು ಬಿದ್ದ ಕಲ್ಪಲತೆಯೋ ?
ತೊಟ್ಟುಗಳೆದ ಮಂದಾರವೋ?
ಗುರಿಯು ತಪ್ಪಿ ವಿಫಲವಾದ ಪುಷ್ಟ ಬಾಣವೊ?
ಯೋಗಿ ಬಿಸುಟ ರಾಗವಿದುವೋ? ತವಸಿ ಎಸೆದ ಭೋಗವಿದುವೋ?
ರಂಭೆ ಇವಳೊ? ಮುರುಟಿ ಬಿದ್ದ ನಮ್ಮ ಮಾನವೊ?

ಬಳ್ಳಿ, ಹೂವು, ಗುರಿತಪ್ಪಿದ ಬಾಣ, ಯೋಗಿಯು ಬಿಸಾಡಿದ ರಾಗ, ತಪಸ್ವಿಗೆ ಬೇಡವಾದ ಭೋಗ-ಇವಿಷ್ಟೂ ಅವಳ ಸೌಂದರ್ಯವನ್ನೂ, ಆ ಸೌಂದರ್ಯಕ್ಕೆ ತಪಸ್ವಿಯೊಬ್ಬನಿಂದ ದೊರೆತ ತಿರಸ್ಕಾರವನ್ನೂ ವರ್ಣಿಸಿ, ಇವಳು ರಂಭೆ ಎಂದು ತಿಳಿದ ಕೂಡಲೇ ಇಲ್ಲಿ ಬಿದ್ದಿರುವುದು ನಮ್ಮ ‘ಮಾನವೇ’ ಎಂದು ಇಂದ್ರನಿಗೆ ಸಂದೇಹ ಬರುತ್ತದೆ. ಹೀಗೆ ಸ್ಪಷ್ಟವಾಗಿ ಅನುಭವಕ್ಕೆ ಬರುವ ವಸ್ತುಗಳನ್ನೂ ಅಸ್ಪಷ್ಟವಾದ ಭಾವಗಳನ್ನಾಗಿ ತಕ್ಷಣ ತಕ್ಷಣ ಪರಿವರ್ತಿಸಿ ಈ ಬಗೆಯ ಪ್ರತಿಮಾ ಮಿಶ್ರಣಗಳಿಂದ ಅಪೂರ್ವವಾದ ಪರಿಣಾಮ ರಮಣೀಯತೆಯನ್ನು ತರುವ ಕೌಶಲ ಈ ವಿಶೇಷ ಕಾವ್ಯಗುಣ.

ಸಂಜೆಯಾಗುತ್ತಿರುವುದನ್ನು ವರ್ಣಿಸಲು ಪುರಾಣದ ಒಂದು ಘಟನೆಯನ್ನು ಬಳಸಿದ್ದಾರೆ.

ಬುವಿ ಭಾನಳೆದುರವಣಿಸಿದ
ಹರಿಪಾದಕೆ ತಲೆಯೊಡ್ಡುತ
ಕೆಳಲೋಕಕೆ ತೆರಳುತ್ತಿಹ
ಬಲಿದೊರೆಯಂದದೊಳು
ಮಿಗುವಿರುಳಿನ ನಿಡು ನೀಡಿದ
ದೆಸೆ ಮೆಟ್ಟಿದ ಮುಗಿಲಡಿಯಡಿ
ಮರೆಯಾದುದು ಪಗಲೈಸಿರಿ
ಪಡುವಣ ಕಮರಿಯೊಳು.

ಇದು ಬಲಿ ಚಕ್ರವರ್ತಿಯನ್ನು ಹರಿಯ ಪಾದವು ಪಾತಾಳಕ್ಕೆ ತುಳಿದ ಚಿತ್ರ. ಭೂಮಿ ಬಾನುಗಳನ್ನು ಅಳೆದು ವ್ಯಾಪಿಸಿದ ಹರಿಯ ಪಾದಕ್ಕೆ ತಲೆಯೊಡ್ಡಿ ಬಲಿಯು ಕೆಳಲೋಕಕ್ಕೆ ತೆರಳುತ್ತಿರುವಂತೆ, ಹೆಚ್ಚುತ್ತಿರುವ ರಾತ್ರಿಯ, ದೀರ್ಘವಾಗಿ ಚಾಚಿದ ಮುಗಿಲ ಪಾದದ ಅಡಿಯಲ್ಲಿ, ಪಶ್ಚಿಮದ ಕಮರಿಯಲ್ಲಿ ಹಗಲಿನ ಐಶ್ವರ್ಯ ಮರೆಯಾಯಿತು. ಪುರಾಣದ ಒಂದು ಘಟನೆಯನ್ನೇ ಸುಂದರವಾದ ಉಪಮೆಯನ್ನಾಗಿ ಬಳಸಿರುವ ನಿದರ್ಶನ ಇದು. ಇಂಥವು ಇನ್ನೂ ಉಂಟು.

ಮನ್ಮಥ ಗೌತಮನನ್ನು ಉದ್ದೇಶಿಸಿ ಅವನ ಬಾಳು ಹೇಗೆ ಹಾಳುಗುತ್ತಿದೆ ಎಂದು ಹೇಳುವಾಗ ನೀಡುವ ಉಪಮೆ: “ಗೋವನ್ನು ಕಾಯುವ ಗೊಲ್ಲನು ಆ ಗೋವುಗಳಲ್ಲೇ ನೆಟ್ಟ ಮನಸ್ಸನ್ನು ಉಳ್ಳವನಾಗಿರುವಂತೆ ನಿನ್ನ ಇಂದ್ರಿಯಗಳನ್ನು ಕಾಯುವ ಆಳು ನೀನಾಗಿ ಅಸ್ವತಂತ್ರನಾಗಿದ್ದೀಯಲ್ಲಾ”

ಚಂದ್ರೋದಯದ, ಬೆಳದಿಂಗಳು ಹರಡುವ ಇಲ್ಲಿನ ವರ್ಣನೆ ಕನ್ನಡ ಸಾಹಿತ್ಯದ ಪ್ರಕೃತಿ ವರ್ಣನೆಯ ಪಂಕ್ತಿಯಲ್ಲಿ ಅಪೂರ್ವವಾಗಿ ಎದ್ದು ನಿಲ್ಲುವಂಥದು. ಮೊದಲನೆಯ ಅಂಕದ ಐದನೆಯ ದೃಶ್ಯದಲ್ಲಿ ಗೌತಮಾಶ್ರಮದ ಮೈತ್ರೇಯ, ಕೌಶಿಕರು ಈ ಇಂದ್ರಜಾಲವನ್ನು ವರ್ಣಿಸುತ್ತಿದ್ದಾರೆ.

ಅದೇಕೊ ಗುರುಗಳೇ ಬುವಿಗು ಬಾನಿಗು
ಎಳೆಯುತೆಲ್ಲೆಯ ಗೆಳೆಯನು
ಇರುಳ ಪಾಚೆಯ ಸುತ್ತಲೊತ್ತರಿ
ಸುತ್ತ ಬಹ ಕೆಂಬೆಳಗನು

ಕತ್ತಲೆ ಇದುವರೆಗೂ ಜಗತ್ತನ್ನೆಲ್ಲ ಆವರಿಸಿತ್ತು. ಬುವಿ ಯಾವುದೋ ಬಾನು ಯಾವುದೊ ತಿಳಿಯುತ್ತಿರಲಿಲ್ಲ. ಈಗ ಕೆಂಪನೆಯ ಬೆಳಕನ್ನು ಚೆಲ್ಲುತ್ತಿರಲು ಚಂದ್ರ ಇದು ಬುವಿ, ಇದು ಭಾನು ಎಂದು ತಿಳಿಯುವಂತೆ ಅವುಗಳ ನಡುವೆ ಎಲ್ಲೆಯ ರೇಖೆಯನ್ನು ಎಳೆಯುತ್ತಾ ಬರುತ್ತಿದ್ದಾನೆ-ಆಶ್ಚರ್ಯಕರವಾದ ರೂಪಕ ಬಂತು- ರಾತ್ರಿಯೆಂಬ ಪಾಚಿಯನ್ನು ಸುತ್ತಲೂ ಬಿತ್ತರಿಸುತ್ತಾ ಚಂದ್ರ ಮೂಡುತ್ತಿದ್ದಾನೆ. ಮತ್ತೂ ಮತ್ತೂ ಕವಿಯ ಪ್ರತಿಭೆ ಉಜ್ವಲವಾಗುತ್ತಾ ಇನ್ನೂ ಇನ್ನೂ ಆಶ್ಚರ್ಯಕರವಾದ ಉಪಮೆ ರೂಪಕರ ಉತ್ಪ್ರೇಕ್ಷೆಗಳ ಮಿಶ್ರಣದಿಂದ ಆನಂದದ ಲಹರಿಯನ್ನೇ ಹರಿಸುತ್ತಾ ಹೋಗುತ್ತದೆ. ಕತ್ತಲೆ (ಎಂಬ ಹೆಣ್ಣು) ಮತ್ತನ್ನು ಬಿಟ್ಟು ಕಣ್ಣು ತೆರೆಯುತ್ತಿದ್ದಾಳೆ ಎಂಬಂತೆ ಚಂದ್ರನ ಉದಯವಾಗುತ್ತಿದೆ. ಮತ್ತೂ ರೋಮಾಂಚಕಾರಿಯಾದ ಚಿತ್ರಗಳು ಬೇಕೆ? ಇಗೋ ಇಲ್ಲಿವೆ ಕುಶಲಿಯಾದ ಕುಂಬಾರನು ಮಣ್ಣಿನಿಂದ ರೂಪಗಳನ್ನು ಮೂಡಿಸುವಂತೆ ಚಂದ್ರನ ಕಲೆಯಿಂದ ಕತ್ತಲೆಯಿಂದಲೇ ರೂಪಗಳು ಮೂಡುತ್ತಿವೆ. ಡಂದ, ಕುಂಬಾರನು ಮಣ್ಣನ್ನು ಒತ್ತುವಂತೆ. ಇತ್ತ ಒತ್ತಿದ – (ಹಳ್ಳಬಿದ್ದು) ಕೆರೆಗಳಾದುವು. ಅತ್ತ ಎತ್ತಿದ ಬೆಟ್ಟಗಳಾದವು ಅಲ್ಲಿ ಒಂದೇ ನೀಲಿಯ ರೇಖೆ ಒಂದೇ ಕ್ಷಣದಲ್ಲಿ ಕಾಡಿನ ಮೊತ್ತವನ್ನೇ ರಚಿಸಿಬಿಟ್ಟ ಅವೆಲ್ಲ ಅಲ್ಲೇ ಇದ್ದುವು. ಕತ್ತಲಲ್ಲಿ ಅವಕ್ಕೆ ರೂಪ ಇರಲಿಲ್ಲ-ಈಗ ಬೆಳದಿಂಗಳು ತುಂಬಿ ಎಂಥ ಸೋಜಿಗವಾಯಿತು. ಅದು ಮುಟ್ಟಿದ ಕಡೆ ರೂಪವಾಯಿತು.

ಶೈಲಿ ಈ ಕವಿಯ ಕಾವ್ಯ ಸಂಪತ್ತನ್ನು ಮಾನವ ರಾಗ ಭಾವಗಳ ಆತ್ಮೀಯ ಪರಿಚಯವನ್ನು ಉದ್ದಕ್ಕೂ ಮಿಂಚುತ್ತಾ ಹೋಗುವ ಪ್ರತಿಭಾ ವಿಲಾಸವನ್ನು ಹೇಗೋ ಹಾಗೆ ಇವರ ಶೈಲಿಯನ್ನು ಮುಕ್ತ ಕಂಠವಾಗಿ ಹೊಗಳುವ ಸ್ವಾತಂತ್ರ್ಯ ಇಲ್ಲದಿರುವುದು ವಿಮರ್ಶಕರ ದೌರ್ಭಾಗ್ಯ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಶಬ್ದಗಳ ಪರಿಚಯ ಹೇರಳವಾಗಿ ಕವಿಗೆ ಉಂಟು. ಕನ್ನಡದಲ್ಲಿ ಬರೆಯುವವರಿಗೆಲ್ಲ ಅಸೂಯೆಯಾಗುವಂತೆ ಅವುಗಳನ್ನು ಬಳಸುವ ಸಾಮರ್ಥ್ಯವೂ ಉಂಟು. ಆದರೆ ಬೇಕಾದಾಗ ಬೇಕಾದ ಅಸ್ತ್ರಗಳನ್ನು ಪ್ರಯೋಗಿಸುವ ಸಂದರ್ಭದಲ್ಲಿ ಅವುಗಳ ಪ್ರಯೋಗ ನೆನಪಿಗೆ ಬಾರದ ಶಾಪಗ್ರಸ್ತನಾದ ಕರ್ಣ ಇವರು. ಪದಗಳ ಬಳಕೆಯ ವಿಷಯದಲ್ಲಿ. ಅವನಿಗಾದರೋ ಮರೆತು ಹೋಗುತ್ತಿತ್ತು ಅಷ್ಟೆ. ಒಂದಕ್ಕೆ ಬದಲು ಮತ್ತೊಂದು ಅಸ್ತ್ರವನ್ನು ಬಳಸುತ್ತಿರಲಿಲ್ಲ. ಈ ಕವಿಗೆ ಹಿತವಾದ ಕನ್ನಡ ಪದಗಳು ದೊರಕದೇ ಹೋಗುವುದು ಮಾತ್ರವಲ್ಲ ಭಯಂಕರವಾದ ಸಂಸ್ಕೃತದ ಅಸ್ತ್ರಗಳು ದೊರೆತೂ ಬಿಡುತ್ತವೆ. ಇವರು ಅವುಗಳನ್ನು ಪ್ರಯೋಗಿಸಿಯೂ ಬಿಡುತ್ತಾರೆ. ಇದಕ್ಕೆ ಈ ನಾಟಕದಿಂದ ಬೇಕಾದಷ್ಟು ನಿದರ್ಶನಗಳನ್ನು ಕೊಡಬಹುದು,

“ಮಿಥಿಲೆ ಬನದೊಳೇಕಾಕಿನಿ ಅನುತಾಪ – ವಿಹೀನೆ
ತತ್ಕೃತಿ ಶುಚೆ ಬಾಷ್ಪಮುಚೆ ಪರಿತಾಪ ವಿದೀನೆ
“ಎಂತಾಯಿತೊ ಆ ದುಷ್ಕೃತಿ
ಎಂತಹದೊ ಮಮ ನಿಷ್ಕೃತಿ”
“ಪ್ರೇಮ ಶ್ರುತಿ ಜೀವಸ್ವರ ಮೇಳನದಿಂದ ಶಿವಗೀತಂ
ನಡೆವುಡಲಾ ನಿರಂತರ ವಿಧಿಚಿರ ಹರ್ಷೋದ್ಭೂತಂ”
“ಕೋಟಿ ಸ್ವನ ವೇಶ ಶ್ರುತಿಗುಲಿನ ಮಹಾಮೇಳದೊಲೆ
ನಿರ್ಝರಗಳ ನಿರ್ಹ್ರಾದಂ ಧ್ವನಿತುಮುಲಂ ವಿಪಿನದೊಳೆ”

ಇಷ್ಟೇ ಹೇಳಿದರೆ ಕವಿಗೆ ಅನ್ಯಾಯವಾಗುತ್ತದೆ. ಅರ್ಥವಾಗುವಂತಹ ಅಚ್ಚಗನ್ನಡ ಪದಗಳಿಂದ ಪಂಕ್ತಿ ಪಂಕ್ತಿಗಳನ್ನು ನೇಯ್ದು ಕವನಗಳಿಂದ ಕವನಗಳಿಗೆ ಈ ಸೊಗಸನ್ನು ಹಬ್ಬಿಸಿಕೊಂಡು ಹೋಗುವ ಶಕ್ತಿ ಕವಿಗೆ ಖಂಡಿತ ಉಂಟು. ಅವಕ್ಕೆ ನಿದರ್ಶನಗಳಿಗೆ ಏನೇನೂ ಕೊರತೆಯಿಲ್ಲ. ಮಗು ಶತಾನಂದ ಮತ್ತು ತಾಯಿ ಅಹಲ್ಯೆ ಮಾತನಾಡುತ್ತಿರುವ ದೃಶ್ಯವನ್ನು ನೋಡಿ :

ಹಸುಳೆ: ಮೇಲಿಂದಿಲ್ಲಿಗೆ ಇಳಿದರೆ ಅವಳು?
          ಹೇಗಮ್ಮಾ ಇದು ಹೇಳಮ್ಮಾ
          ಹಕ್ಕಿಯ ಹಾಗೆಯೇ ಹಾರಿ ಬಂದಳೆ,
          ರೆಕ್ಕೆಗಳಿದ್ದುವೆ ಹೇಳಮ್ಮಾ?

ಅಹಲ್ಯೆ: ಇದಕೇನುತ್ತರ ಪೇಳಲೆ ನಾನು?
          ಮೇಲಿಂದಿಳಿದಳುಹೂ ಕಂದಾ
          ಕಾಮನ ಬಿಲ್ಲಿನ ಜಾರುಗುಪ್ಪೆಯೊಳು
          ಜಾರುತ ಬಂದಳು ಮುಗಿಲಿಂದ

ಇದಲ್ಲದೆ ಗಂಭೀರವಾದ ವಿಷಯವನ್ನು ಕೂಡ ಎಂತಹ ಸೊಗಸಾದ ಕನ್ನಡದ ಪದಗಳಲ್ಲಿ ನಿರೂಪಿಸಬಲ್ಲರು ಎಂಬುದಕ್ಕೆ ಈ ಉದಾಹರಣೆಗಳನ್ನು ನೋಡಿ :

ಬಾಳ ಕಾಡೊಳೊಲುಮೆಯೊರತೆ
ಹಿಂಗಿ ಹೋಗಲೆಂಥ ಕೊರತೆ
ನಿನ್ನ ಈ ಬಗೆ ಕಂಡು ಕನಿಕರಿಪೆ ಶಕ್ರ,
ಮುನಿಗು ಮಡದಿಗು ಮಡದಿಗು ಇಂತೆ ಮರುಗುತಿಹೆನು
ನಿದ್ದಿಸಿದನೀ ಮುದ್ದನೇ ಮಾಯೆಗಾಯ್ತಮ್ಮ
ಈ ನಾಡು? ನಾ ಬಗೆದ ಕನಸೆ ಮೂಡಿ
ಬಂದ ತೆರನೀ ಚೊನ್ನ ಈ ಗಾಳಿ ಈ ಕಂಪು
ಎನಗೆನಿಪುದಿಳೆಯಿಂದು ದಿವಕೆ ಜೋಡಿ
ಮುರುಟಿದೆಯಲಾ ನೀನೇ ಮಳ್ಳಿ
ನೀನೆ ಬೆಳೆದ ಬಯಕೆ ಬಳ್ಳಿ

ಇಂಥವು ಬೇಕಾದಷ್ಟು ಕವಿ ಭಾವಗಳನ್ನು ಕಲ್ಪನೆಗಳನ್ನು ಪ್ರತಿಮೆಗಳನ್ನು ಕಾವ್ಯದಲ್ಲಿನ ಚಿಂತನೆಗಳನ್ನು ಮತ್ತೆ ಮತ್ತೆ ಒಪ್ಪವಿಟ್ಟು, ತಿದ್ದಿ ತೀಡಿ ಅಲಂಕರಿಸಿ ಓದುಗರಿಗೆ ನೀಡುವಂತೆ ಭಾಷೆಯ ವಿಷಯದಲ್ಲೂ ಕೃಷಿ ಮಾಡಿದ್ದಾರೆ, ಇದೇ ಪದಗಳ ಜಾಗದಲ್ಲಿ ಬೇರೆ ಪದಗಳನ್ನು ಹಾಕುವುದು ಸಾಧ್ಯವೇ ಎಂದು ಪ್ರಯತ್ನಿಸಿದ್ದರೆ ಅವರ ಓದುಗರ ಸಂಖ್ಯೆ ಬೆಳೆಯುತ್ತಿತ್ತು.

ಗೀತ ನಾಟಕವಾಗಿಅಹಲ್ಯೆ

ಇದು ನಾಟಕವಾಗಿ, ಗೀತ ನಾಟಕವಾಗಿ, ರಂಗಭೂಮಿಯ ಮೇಲೆ ಪ್ರಯೋಗಿಸುವ ದೃಷ್ಟಿಯಿಂದ ಯಶಸ್ವಿಯಾಗುವ ಕೃತಿಯೆ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಕೂಡ ಸುಲಭದಲ್ಲಿ ಉಂಟು ಅಥವಾ ಇಲ್ಲ ಎಂದು ಹೇಳುವಂತಿಲ್ಲ. ಅನೇಕ ಮುಖಗಳಿರುವ ಈ ಪ್ರಶ್ನೆಗೆ ನಾಟಕವು ಅನೇಕ ರೀತಿಯ ಉತ್ತರಗಳನ್ನು ನೀಡುತ್ತದೆ.

ಒಂದು ನಾಟಕ ರಂಗಭೂಮಿಯ ಮೇಲೆ ಪ್ರಯೋಗವಾಗಿ ಯಶಸ್ಸನ್ನು ಪಡೆಯಬೇಕಾದರೆ ಮೊದಲನೆಯದಾಗಿ ಅದರ ವಸ್ತುವಿನ ತೂಕಕ್ಕೂ ಅದರ ಹರವಿಗೂ ಉಚಿತವಾದ ಒಂದು ಪ್ರಮಾಣ ಇದ್ದೇ ತೀರಬೇಕು. ನಿರ್ದಿಷ್ಟವಾಗಿ ಸಂಖ್ಯೆಗಳನ್ನು ಬಳಸಿ ಹೇಳಬೇಕಾದರೆ ಈ ನಾಟಕದ ಮಾತುಗಳನ್ನು ಆಡಿ, ಹಾಡುಗಳನ್ನು ಕವಿ ಬಯಸಿರುವಂತೆ ಹಾಡಿ ತೋರಿಸಬೇಕಾದರೆ ಕನಿಷ್ಠ ಪಕ್ಷ ಮೂರು ಗಂಟೆಗಳ ಕಾಲ ಬೇಕು ಆ ಮೂರು ಗಂಟೆಗಳ ಕಾಲ ನಡೆಯುವ ಕ್ರಿಯೆಗಳ ಸರಣಿ ಉದ್ದಕ್ಕೂ ಪ್ರೇಕ್ಷಕರ ಗಮನವನ್ನು ಸೆಳೆಯುವಂತಿರಬೇಕು. ಇಲ್ಲಿ ನಡೆಯುವ ಕ್ರಿಯೆಯ ಮೊತ್ತ ಏನು? ಗೌತಮನ ತಪಸ್ಸು, ಅದನ್ನು ಭಂಗಗೊಳಿಸಲು ಬಂದ ರಂಭೆಯ ಪ್ರಯತ್ನಭಂಗ, ಇಂದ್ರನ ಆಗಮನ, ಮದನನ ನೆರವಿನಿಂದ ಗೌತಮನ ತಪೋಭಂಗ, ಅಹಲ್ಯೆಯ ಸ್ವರ್ಗದ, ಸ್ವರ್ಗದೊಡೆಯನ ಹಂಬಲ ಇಂದ್ರನಿಗೆ ಶರಣಾಗತಿ, ಗೌತಮನ ಶಾಪ, ತಪಸ್ಸು, ರಾಮಾಗಮನ, ಅಹಲ್ಯೆ-ಗೌತಮರ ಸಮಾಗಮ. ಎಷ್ಟು ಅಳೆದು ಸುರಿದರೂ ಇಲ್ಲಿನ ಘಟನೆಗಳು ಇಷ್ಟೇ. ಇಷ್ಟೂ ಪ್ರೇಕ್ಷಣೀಯವಾದ ಘಟನೆಗಳೂ ಅಲ್ಲ. ಅನೇಕವು ನಿರೂಪಣೆಯಿಂದ ನಮ್ಮ ಮನಸ್ಸಿನಲ್ಲಿ ಅಲೆಗಳನ್ನು ಎಬ್ಬಿಸುವಂಥವು ಈ ದೃಷ್ಟಿಯಿಂದ ನಾಟಕದ ಹರವು ತಾನು ತುಂಬುವ ಸಮಯವನ್ನು ಸಮರ್ಥಿಸಿಕೊಳ್ಳಲಾರದು.

ಎರಡನೆಯದಾಗಿ ಸಂಭಾಷಣೆ : ಯಾವುದೇ ಯಶಸ್ವಿಯಗುವ ನಾಟಕದಲ್ಲಿ ಸಂಭಾಷಣೆ, ಮಾತು, ಉತ್ತರ-ಪ್ರತ್ಯುತ್ತರಗಳು ಆದಷ್ಟು ಚುಟುಕವಾಗಿರಬೇಕು. ದೀರ್ಘವಾದ ಆತ್ಮಗತ ಭಾಷಣ ಬಂದರೆ ಅದಕ್ಕೆ ತಕ್ಕ ಹಿನ್ನೆಲೆ ರಚಿತವಾಗಿ ಅದರ ಅಗತ್ಯವನ್ನು ಒತ್ತಿ ತೋರಿಸುವಂತಿರಬೇಕು. ಈ ನಾಟಕದ ತುಂಬ ಅಂಥ ಹ್ರಸ್ವವಾದ ಸಂಭಾಷಣೆಗಳು. ಆತ್ಮಗತಗಳೇ ಎನ್ನುವಂತಹ ದೀರ್ಘ ಭಾಷಣಗಳೂ ಇವೆ. ಅಷ್ಟರಮಟ್ಟಿಗೆ ಅವು ಪ್ರೇಕ್ಷಕರ ಕುತೂಹಲವನ್ನು ಸೆಳೆದಿಡಬಲ್ಲವು. ಆದರೆ ಹಾಗಲ್ಲದವು, ತತ್ವಜಿಜ್ಞಾಸೆಯನ್ನು ತರ್ಕದ ಬೆಂಬಲವನ್ನು ಸಾಕಷ್ಟು ಪಡೆಯದ ಜಿಜ್ಞಾಸೆಯನ್ನು ನಿರೂಪಿಸುವಂಥವು ಇವೆ. ಉದಾಹರಣೆಗೆ: ಮೂರನೆಯ ಅಂಕದ, ಮೂರನೆಯ ದೃಶ್ಯದ ಸಿದ್ಧರ ಸಂಭಾಷಣೆ. ಇದುವರೆಗೆ ಅನೇಕ ಕಡೆ ಮಿಂಚಿದ ಕವಿ ಪ್ರತಿಭೆಗೆ ಇದ್ದಕ್ಕಿದ್ದಂತೆ ತಾವು ತತ್ವಶಾಸ್ತ್ರಗಳಲ್ಲಿ ಓದಿದ ಭಾವನೆಗಳು ತುಕ್ಕಾಗಿ ಪರಿಣಮಿಸಿ ಪ್ರೇಕ್ಷಕರ (ಅದುವರೆಗೂ ಅವರು ಕುಳಿತಿದ್ದರೆ) ತಲೆ ತಿನ್ನುತ್ತೇವೆ. ಕವಿಯ ಸ್ವಂತಿಕೆ ಏನಾಯಿತು? ಅಲ್ಲದೆ ಅಲ್ಲಿನ ಭಾಷಣಗಳ ಭಾಷೆ ಅರ್ಥವಾಗುವುದಾದರೂ ಯಾರಿಗೆ?

ಇವೆಲ್ಲ ಈ ನಾಟಕವನ್ನು ಅನಿವಾರ್ಯವಾದ ಸೋಲಿಗೆ ಒಯ್ಯುವ ಅಂಶಗಳು. ಆದರೆ ಈ ನಾಟಕದ ನಿಜವಾದ ಶಕ್ತಿ ಇಲ್ಲಿನ ಹಾಡುಗಳು. ಉದ್ದೇಶಪೂರ್ವಕವಾಗಿಯೇ ಈ ಅಂಶವನ್ನು ಕೊನೆಯವರೆಗೂ ಉಳಿಸಿಕೊಂಡು ಬಂದದ್ದಾಯಿತು. ಈ ನಾಟಕದಲ್ಲಿ ನಮ್ಮ ಸಾಹಿತ್ಯದಲ್ಲೇ ಶ್ರೇಷ್ಠವೆನಿಸುವ ಹಲವು ಗೀತೆಗಳಿವೆ. ಉದಾಹರಣೆಗೆ ಕೆಲವನ್ನು ನೋಡಬಹುದು. ಮೊದಲನೆಯದು ಪೂರ್ವಾಂಕದ ನಾಲ್ಕನೆಯ ದೃಶ್ಯದ ಮದನನ ಹಾಡು, “ಮರುಳ ತಪಸಿ ಗೌತಮಾ, ಇನ್ನಾದರೆಚ್ಚರು” ಎಂದು ಆರಂಭವಾಗುವುದು. ಪುತಿನ ಅವರ ಹಾಡಿನ ವಿಶೇಷ ಲಕ್ಷಣ ದರೆ ಸಂಗೀತ ಮತ್ತು ಕಾವ್ಯಗಳು ಮಧುರವಾಗಿ ಬೆರೆತಿರುವುದು ಚಿತ್ರಗಳ ಪರಂಪರೆಯನ್ನೇ ಚಿತ್ರಿಸುತ್ತಾ ಹೋಗುತ್ತಾರೆ. ಸೊಗಸಾದ ಗಾನದ ಗುಂಗಿನ ಹಿನ್ನೆಲೆಯನ್ನು ಬಿಡದೆ. ಅದರಲ್ಲಿ ಒಂದು :

ಗಂಗೆ ತಡೆವ ರುದ್ರನಂತೆ
ಕಾಲಪೂರದಿದಿರು ನಿಂತೆ
ಸೆಳೆತವರಿಯೆ ಅದರ ವೇಗ
ಮುಪ್ಪಿಗೊಯ್ವುದಣ್ಣಬೇಗ

ಮತ್ತೊಂದು: “ಮರುಳೆ ಹೆಣ್ಣೆ ಏನ ಗೈದೆ? ಸಾವವರೆಗು ಮರುಗಲಾರ” ಎಂದು ಪ್ರಾರಂಭವಾಗುವ ‘ಗಾಳಿ ದನಿಗಳ’ ಹಾಡು. ಇನ್ನೂ ಒಂದು ಅಹಲ್ಯೆ “ಬಾರೋಲವೇ ಬಾ ಮುದವೇ ಬಾ ಬಚ್ಚಿಟ್ಟಾಸೆ” ಎನ್ನುತ್ತಾ ಇಂದ್ರನಿಗೆ ಒಪ್ಪಿಸಿಕೊಳ್ಳುವ ಹಾಡು ಎಲ್ಲಕ್ಕೂ ಶಿಖರ ಪ್ರಾಯವಾಗಿ ಅಹಲ್ಯೆ ಗೌತಮನಿಗೆ ಕೊನೆಯಲ್ಲಿ ಶರಣಾಗುವ ದೃಶ್ಯದಲ್ಲಿ ಹಾಡುವ ಹಾಡು:

ಬಯಸುವೆ ನಾ ಗಂಗೆಯ ತೆರ
ಪದದಿ ಕರಗಿ ಹರಿಯೆ
ಇಲ್ಲದಿಲು ಹಗುರವಾಗಿ
ಕಂಪಿನಂತೆ ಸರಿಯೆ
ಮೈಯೆ ಭಾರ ಮನವೆ ಭಾರ
ಬದುಕೆ ಭಾರವೆಂಬ
ಆಸರೆಯೇ ಬೇಡದಂಥ
ನಲವೆ ನನ್ನ ತುಂಬ.

ಸಹೃದಯ ಮನೋಲೋಕದಲ್ಲಿ ತುಂಬ ಯಶಸ್ವಿಯಾಗಬಲ್ಲ ನಾಟಕ ಇದು. ಅವರ ಮನಸ್ಸನ್ನು ನಲವತ್ತು ವರ್ಷಗಳಷ್ಟು ದೀರ್ಘಕಾಲ ತುಂಬಿ ಅಲ್ಲಿ ಅಭಿನಯಿಸಲ್ಪಟ್ಟು ಅನುರಣಿತವಾಗುತ್ತಲೇ ಇರುವ ನಾಟಕ ಇದು.

ನಮ್ಮ ರಂಗಭೂಮಿ ನಟನಟಿಯರು, ಪ್ರೇಕ್ಷಕರು, ಅವರಲ್ಲಿ ಹೆಚ್ಚಿನ ಮಂದಿಯ ಶಬ್ದ ಸಂಪತ್ತು-ಇವಿಷ್ಟೂ ಈಗಿರುವ ಸ್ಥಿತಿಯಲ್ಲಿ ಇದು ಯಶಸ್ವಿಯಾಗುವ ನಾಟಕ ಎಂದು ಹೇಳುವುದು ಸಮರ್ಥನೀಯವಾಗುವುದಿಲ್ಲ. ಆದರೆ ಭವಿಷ್ಯದ ವಿಷಯದಲ್ಲಿ ಹೀಗೇ ಎಂದು ಹೇಳುವುದು ಹೇಗೆ ತಾನೆ ಸಾಧ್ಯ? ನಮ್ಮ ರಂಗಭೂಮಿಗೆ ಉತ್ಕರ್ಷಸ್ಥಿತಿ ಬರಬಹುದು, ಇನ್ನೂ ಹೆಚ್ಚಿನ ಪ್ರತಿಭಾಶಾಲಿಗಳಾದ ನಟನಟಿಯರು ಸಿದ್ಧರಾಗಬಹುದು, ಪ್ರೇಕ್ಷಕರ ಶಬ್ದ ಸಂಪತ್ತು ಹೆಚ್ಚಬಹುದು, ಆಗ ಉತ್ತಮವಾದ ರೀತಿಯಲ್ಲಿ ಈ ನಾಟಕ ಪ್ರಯೋಗವಾಗಬಹುದು.

ಈ ಆಶಾವಾದಕ್ಕೆ ಆಧಾರವಿದೆ. ಲಂಡನ್ನಿನಲ್ಲಿ ಸುಮಾರು ಎಂಬತ್ತು ನಾಟಕ ಮಂದಿರಗಳಿವೆಯಂತೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಾಟಕ ಮಂದಿರಗಳಲ್ಲಾದರೂ ಪ್ರತಿದಿನವೂ ಷೇಕ್ಸ್‌ಪಿಯರ್‌ನ ಒಂದಲ್ಲ ಒಂದು ನಾಟಕ ಪ್ರದರ್ಶನವಾಗುತ್ತಿರುತ್ತದೆಯಂತೆ. ಆ ಅಷ್ಟೂ ನಾಟಕಮಂದಿರಗಳು ವರ್ಷವಿಡಿ ಭರ್ತಿಯಾಗಿರುತ್ತವೆಯಂತೆ. ಎಷ್ಟೋ ತಿಂಗಳ ಮುಂಚೆ ಟಿಕೇಟುಗಳನ್ನು ಕೊಂಡು ಸ್ಥಳ ಕಾದಿರಿಸಿಕೊಂಡಿರುತ್ತಾರಂತೆ ಎಲ್ಲಕ್ಕಿಂತ ಮುಖ್ಯವಾದ, ಸಾಹಿತ್ಯಕ್ಕೆ ಉತ್ತಮವಾದ ಭವಿಷ್ಯದ ಭರವಸೆಯನ್ನು ಮೂಡಿಸುವ ಸತ್ಯಸಂಗತಿಯೊಂದುಂಟು. ಪ್ರೇಕ್ಷಕರು ತಮ್ಮ ಮುಂದೆ ನಿಂತು, ಓಡಾಡಿ ಅಭಿನಯಿಸುತ್ತಾ ಹೇಳುತ್ತಿರುವ ಮಾತುಗಳನ್ನೂ ಹಾಡುತ್ತಿರುವ ಹಾಡುಗಳನ್ನೂ ತಾವು ಅತ್ಯಂತ ಮೆತ್ತಗೆ ಪಿಸುಗುಟ್ಟುತ್ತಿರುತ್ತಾರಂತೆ. ಎಂದರೆ ಅಷ್ಟರಮಟ್ಟಿಗೆ ಅವರಿಗೆ ಸಾಹಿತ್ಯ ಕಂಠಗತವಾಗಿರುತ್ತದೆ. ಅಷ್ಟರಮಟ್ಟಿಗೆ ಅವರು ನಾಟಕದ ಕ್ರಿಯೆಯಲ್ಲಿ ಭಾಗವಹಿಸುತ್ತಿರುತ್ತಾರೆ. ಅಂಥ ಒಳ್ಳೆಯ ಕಾಲ ಕನ್ನಡದ ನಾಟಕಗಳಿಗೂ ಪ್ರಾಪ್ತವಾಗುತ್ತದೆ ಎಂದು ನಿರೀಕ್ಷಿಸುವುದು ಕೈಗೂಡಲಾರದ ಆಶೆಯಲ್ಲ ಎಂದು ಭಾಸವಾಗುತ್ತದೆ.