‘ಅಹಲ್ಯೆ’ ಒಂದು ಗೀತರೂಪಕ. ಇಡೀ ನಾಟಕವು ಗೀತೆಗಳಿಂದಲೇ ನಡೆಯುವಂತಹ ಗೀತರೂಪಕ ಅಲ್ಲ ; ಮಧ್ಯೆ ಮಧ್ಯೆ ಹಾಡುಗಳು ಬರುತ್ತವೆ, ಉಳಿದಂತೆ ಪದ್ಯದಲ್ಲಿ ಸಂಭಾಷಣೆಗಳು ನಡೆಯುತ್ತವೆ. ಇದು ರಚಿತವಾದ ಕಾಲಕ್ಕೆ – ೧೯೪೦- ಕನ್ನಡದಲ್ಲಿ ಈ ರೂಪ ಹೊಸದು. ವಸ್ತು, ರೇಖಾ ಮಾತ್ರದಲ್ಲಾದರೂ ಹಳೆಯದು. ಜನರಿಗೆ ಒಂದಲ್ಲ ಒಂದು ರೂಪದಲ್ಲಿ ಪರಿಚಿತವಾದದ್ದು. ರೂಪ ಹೊಸದು. ವಸ್ತುವಿನ ದೃಷ್ಟಿಯಿಂದಲೂ ರೂಪದ ದೃಷ್ಟಿಯಿಂದಲೂ ಈ ನಾಟಕವನ್ನು ವಿವರವಾಗಿ ನೋಡಿ ಕವಿ ಎಷ್ಟರಮಟ್ಟಿಗೆ ಯಶಸ್ಸನ್ನು ಸಾಧಿಸಿದ್ದಾರೆ ಎಂದು ನೋಡೋಣ.

ಮೊದಲನೆಯದಾಗಿ ಕಥೆ ವಾಲ್ಮೀಕಿಯದು. ವಾಲ್ಮೀಕಿ ರಾಮಾಯಣದಲ್ಲಿ ಈ ಪ್ರಸಂಗ ಸಂಕ್ಷೇಪವಾಗಿ ಬಂದಿದೆ. ವಿಶ್ವಾಮಿತ್ರನು ರಾಮಲಕ್ಷ್ಮಣರನ್ನು ಮಿಥಿಲೆಗೆ ಕರೆದುಕೊಂಡು ಹೋದನಷ್ಟೆ ಇನ್ನೇನು ಮಿಥಿಲಾ ಪಟ್ಟಣದ ಹತ್ತಿರ ಬಂದೆವು ಎಂದಾಗ ಅವರ ಕಣ್ಣಿಗೆ ಹಾಳು ಬಿದ್ದ ಒಂದು ಋಷ್ಯಾಶ್ರಮ ಕಂಡಿತು. ‘ಇದು ಯಾರ ಆಶ್ರಮವಾಗಿತ್ತು?’ ಎಂದು ಪ್ರಶ್ನಿಸಿದ ರಾಮನಿಗೆ ಉತ್ತರವಾಗಿ ವಿಶ್ವಾಮಿತ್ರನು ಅಹಲ್ಯೆ-ಗೌತಮರ ವೃತ್ತಾಂತವನ್ನು ಹೇಳುತ್ತಾನೆ. ಅವನ ಮಾತುಗಳಲ್ಲೇ ಪೂರ್ವವೃತ್ತಾಂತವನ್ನು ಹೀಗೆ ಸಂಗ್ರಹಿಸಬಹುದು:

ಇದು ಮಹಾತ್ಮನಾದ ಗೌತಮ ಋಷಿಯ ಆಶ್ರಮ ಗೌತಮನು ತನ್ನ ಪತ್ನಿಯಾದ ಅಹಲ್ಯೆಯೊಡನೆ ಅಲ್ಲಿದ್ದುಕೊಂಡು ಬಹುಕಾಲ ತಪಸ್ಸನ್ನು ಆಚರಿಸಿದನು. ಒಮ್ಮೆ ದೇವೇಂದ್ರನಿಗೆ ಅಹಲ್ಯೆಯೊಡನೆ ಕೂಡುವ ಬಯಕೆಯಾಯಿತು. ಗೌತಮನು ಇಲ್ಲದ ವೇಳೆಯಲ್ಲಿ ಇಂದ್ರನು ಗೌತಮನ ವೇಷದಲ್ಲಿ ಅಹಲ್ಯೆಯ ಬಳಿಗೆ ಬಂದು ತನ್ನ ಆಸೆಯನ್ನು ತಿಳಿಸಿದನು. ಅಹಲ್ಯೆಗೋ ಇಂದ್ರನಲ್ಲಿ ಆಸಕ್ತಿ ‘ದುರ್ಬುದ್ಧಿ’ಯಿಂದ ಅವಳು ಅವನಲ್ಲಿ ಅವನು ಗೌತಮನಲ್ಲ ಇಂದ್ರ ಎಂದು ತಿಳಿದೂ ಕೂಡಿದಳು. ಇಂದ್ರ ಬೀಳ್ಕೊಡುವುದು ತಡವಾಯಿತು. ಅಷ್ಟರಲ್ಲಿ ಅಲ್ಲಿಗೆ ಬಂದ ಗೌತಮ ಇಂದ್ರ ಅಹಲ್ಯೆ ಇಬ್ಬರನ್ನೂ ಶಪಿಸಿದ.

ಅಹಲ್ಯೆಗೆ ಕೊಟ್ಟ ಶಾಪ: “ನಿನ್ನ ಜನನೇಂದ್ರೀಯ ಇಲ್ಲದೇ ಹೋಗಲಿ.” ಶಾಪ ಕೊಟ್ಟ ಋಷಿ ಮತ್ತೆ ತಪಸ್ಸಿಗೆ ಹೊರಟು ಹೋದ.

ರಾಮಲಕ್ಷ್ಮಣರು ವಿಶ್ವಾಮಿತ್ರನೊಡನೆ ಆಶ್ರಮವನ್ನು ಪ್ರವೇಶಿಸಿದರು. ಅಹಲ್ಯೆ ತನ್ನ ನಿಜರೂಪದಿಂದ ಕಾಣಿಸಿಕೊಂಡಳು. ವಾಲ್ಮೀಕಿ ಆಕೆಯ ವಿಷಯದಲ್ಲಿ ಹಿಂದೊಮ್ಮೆ ‘ದುರ್ಬುದ್ಧಿ’ಯಿಂದ ಎಂದು ಉಪಯೋಗಿಸಿದ್ದಷ್ಟೇ ತೆಗಳಿಕೆಯ ಮಾತು. ಈಗ ‘ಮಹಾ ಭಾಗ್ಯಶಾಲಿನಿ’ ಎಂದು ಹೇಳಿದ್ದಷ್ಟೇ ಅಲ್ಲದೆ ಹೀಗೆ ವಣಿðಸಿದ್ದಾನೆ : “ಬ್ರಹ್ಮನು ಬಹಳ ಕಷ್ಟಪಟ್ಟು ಸೃಷ್ಟಿಸಿದ ದೇವಲೋಕದ ಮಾಯಾಸ್ವರೂಪಿಣಿಯಂತೆಯೂ, ನೀರಿನ ಮಧ್ಯದಲ್ಲಿ ನೋಡಲು ಅಸಾಧ್ಯವಾಗಿದ್ದು ಹೊಳೆಯುವ ಸೂರ್ಯನ ಪ್ರಭೇಯಂತೆಯೂ ಇದ್ದಳು.” ಆಕೆ ಕಾಣಿಸಿಕೊಂಡ ಕೂಡಲೇ ರಾಮನೂ ಲಕ್ಷ್ಮಣನೂ ಆಕೆಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು (ರಾಮನು ಆಕೆಗೆ “ತನ್ನ ಕಾವ್ಯಕೆಗೆ ತಾಂ ಮಹಾಕವಿ ಮಣಿಯುವಂತೆ” ನಮಸ್ಕರಿಸಿದ ಎನ್ನುತ್ತಾರೆ ಶ್ರೀಕುವೆಂಪು ತಮ್ಮ “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯದಲ್ಲಿ.)ಅಹಲ್ಯೆಯೂ ರಾಮನನ್ನೂ ಲಕ್ಷ್ಮಣ ವಿಶ್ವಾಮಿತ್ರರನ್ನೂ ಸತ್ಕರಿಸಿದಳು ದೇವತೆಗಳು ಹೂಮಳೆಗರೆದರು. ಗೌತಮ ಋಷಿಯೂ ಬಂದು ಅಹಲ್ಯೆಯೊಡನೆ ರಾಮನನ್ನು ಗೌರಿವಿಸದನು. ಅನಂತರ ಗೌತಮನು ಅಹಲ್ಯೆಯನ್ನು ಕರೆದುಕೊಂಡು ತಪಸ್ಸಿಗೆ ಹೊರಟು ಹೋದನು.

ಇದಿಷ್ಟು ಮಾತ್ರವೇ ಮೂಲ ಕಥೆ. ಇದು ಸಹಸ್ರಾರು ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ನಲಿದಾಡಿದೆ. ಕಥೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೂಪಗಳನ್ನು ತಾಳಿದೆ. ಮುಖ್ಯವಾಗಿ ನಡೆದಿರುವ ಬದಲಾವಣೆ ಎಂದರೆ, ಅಹಲ್ಯೆ ಕಲ್ಲಾಗುವಂತೆ ಗೌತಮ ಶಪಿಸಿದ ಎನ್ನುವುದು ಅನಂತರ ರಾಮನ ಪಾದದ ಸ್ಪರ್ಶದಿಂದ ಅವಳಿಗೆ ತನ್ನ ಮೊದಲಿನ ರೂಪ ದೊರಕಿತು ಎಂಬುದು ಶ್ರೀ ಕುವೆಂಪು ಕೂಡ ತನ್ನ ರಾಮಾಯಣದಲ್ಲಿ ಕಥೆಯ ಈ ರೂಪವನ್ನೇ ಸ್ವೀಕರಿಸಿದ್ದಾರೆ.

ಕವಿ ಪು.ತಿ.ನ. ಜಿಜ್ಞಾಸು. ಎಂದರೆ ಪ್ರತಿಯೊಂದನ್ನೂ ಏಕೆ ಎಂದು ಬೆದಕಿ ಕೇಳುವ ಹವ್ಯಾಸ ಉಳ್ಳವರು. ಅಹಲ್ಯೆಯ ಪ್ರಸಂಗ ಅವರಿಗೆ ಸೋಜಿಗವಾಗಿ ತೋರಿದೆ. ಈ ಪ್ರಸಂಗದಲಿ ಹಿಂದಿನ ಕವಿಗಳಿಗೆ ರಾಮನ ಮಹಿಮೆಯನ್ನು ತೋರಿಸುವುದೇ ಮುಖ್ಯ ಉದ್ದೇಶವಾಗಿತ್ತು. ಆ ಉತ್ಸಾಹವನ್ನು ಸ್ವಲ್ಪ ಮಾತ್ರ ಹತ್ತಿಕ್ಕಿ ನೋಡಿದರೆ ನಾಲ್ಕಾರು ಪ್ರಶ್ನೆಗಳು ಏಳುತ್ತವೆ.

ಮೊದಲನೆಯದಾಗಿ ಇಂದ್ರನು ಅಹಲ್ಯೆಯನ್ನು ಕಂಡದ್ದು ಏಕೆ? ಹೇಗೆ? ಅಹಲ್ಯೆ ಇಂದ್ರನಲ್ಲಿ ಆಸಕ್ತಳಾದದ್ದು ಏಕೆ? ಗೌತಮನಲ್ಲಿ ಇದ್ದ ಕೊರತೆ ಏನು? ಗೌತಮ ಹಿಂದು ಮುಂದೆ ಯೋಚಿಸದೆ ತನ್ನ ಸತಿಗೆ ಅಂಥ ಘೋರ ಶಾಪ ಕೊಟ್ಟಿದ್ದು ಏಕೆ? ಶಾಪ ವಿಮೋಚನೆಯಲ್ಲಿ ರಾಮನ ಪಾತ್ರ ಏನು?

ಈ ಪ್ರಶ್ನೆಗಳಿಗೆ ಕಾವ್ಯಮಯವಾದ ಉತ್ತರ ಪು. ತಿ. ನ. ಅವರ “ಅಹಲ್ಯೆ” ಈ ನಾಟಕದ ಯಶಸ್ಸು, ಅಯಶಸ್ಸುಗಳನ್ನು ಚರ್ಚಿಸುವ ಮುನ್ನ ನಾಟಕಕಾರರು ತಮ್ಮ ಕೃತಿಯ ಕಟ್ಟಡವನ್ನು ಹೇಗೆ ರಚಿಸಿದ್ದಾರೆ ಎಂಬುದನ್ನು ವಿವರವಾಗಿ ನೋಡುವುದು ಅಗತ್ಯ. ಆದ್ದರಿಂದ ಅಂಕ ಅಂಕವಾಗಿ ದೃಶ್ಯ ದೃಶ್ಯವಾಗಿ ಬೆಳವಣಿಗೆಯನ್ನು ಗಮನಿಸೋಣ.

ಪೂರ್ವಾಂಕದ ನಾಂದೀ ಪದ್ಯದಲ್ಲಿ ಕವಿ ತಮ್ಮ ಆಶಯವನ್ನು ಹೇಳುವ ನೆಪದಲ್ಲಿ ತಮ್ಮ ನಾಟಕದ ಆಶಯವನ್ನೂ ಹೇಳಿದ್ದಾರೆ. ಅದು ಮನ್ಮಥನಿಗೆ ಕವಿಯು ಮಾಡಿಕೊಂಡಿರುವ ಬಿನ್ನಹ. “ಓ ಮದನ, ನಮ್ಮ ಮನಸ್ಸಿನ ಹುಲು ಬಯಕೆಯ ನಿನ್ನನ್ನು ‘ಬಾ’ ಎಂದು ಕರೆಯುತ್ತದೆ. (ನೀನು, ಎಂದರೆ, ಕಾಮ. ನಮ್ಮೊಳಗೆ ಅಡಗಿರುವುದು ಹೌದು) ಅಲ್ಪವಾದ ಆಸೆ ‘ಬಾ’ ಎಂದು ಕರೆದ ಕೂಡಲೇ ಹಿಂದೆ ವಾತಾಪಿಯೆಂಬ ರಾಕ್ಷಸ ಜನರ ಹೊಟ್ಟೆಯನ್ನು ಆಹಾರ ರೂಪದಲ್ಲಿ ಹೊಕ್ಕು ಇಲ್ವಲ ಎಂಬ ರಾಕ್ಷಸ ಕೂಗಿದ ಕೂಡಲೇ ಅವರ ಹೊಟ್ಟೆಯನ್ನು ಬಗೆದು ಹೊರಬರುತ್ತಿದ್ದಂತೆ ಬಂದು ಬಿಡಬೇಡ ನೀನು. ಪ್ರತಿಯೊಂದು ಜೀವಿಯ ಚೇತನದಲ್ಲೂ ಮೊಗ್ಗಿನಲ್ಲಿ ಕಂಪು ಹೇಗೋ ಹಾಗೆ ಅಡಗಿ ಬೆಳೆಯುತ್ತ ಸಮಯವರಿತು ಅರಳಿ ಹೊರಗೆ ಬಂದರೆ ಜೀವಕ್ಕೆ ಒಳಿತು. ಇಂತಹ ನಮ್ಮ ಬಿನ್ನಹವನ್ನು ಮಾರನು ಮನಿನಸಲಿ; ಬಾಳು ಸಂತೋಷದ ನೆಲೆ ಆಗುವಂತೆ ಮಾಡಲಿ.”

ಮೊದಲನೆಯ ದೃಶ್ಯವು ಸುರರೂ ಸುರ ಸುಂದರಿಯರೂ ರಂಗದ ಮೇಲೆ ನರ್ತಿಸುವುದನ್ನು ತೋರಿಸುತ್ತದೆ. ತಮಗೆ ಯಾವುದೇ ಭೀತಿಯೂ ಇಲ್ಲ, ತಾವು ಹುಟ್ಟಿರುವುದೇ ಸಂತೋಷವನ್ನು ಅನುಭವಿಸುವುದಕ್ಕಾಗಿ ಎನ್ನುತ್ತಾರೆ ಅವರು ಸ್ವರ್ಗಕ್ಕೂ ಭೂಮಿಗೂ ಇರುವುದು ಕೊಳು-ಕೊಡೆಯ ಸಂಬಂಧ. ತಮ್ಮ ಒಡೆಯ ಇಂದ್ರ. ಅವನು ಆಳುತ್ತಿರುವಾಗ ತಮಗೆ ಭೀತಿ ಎಲ್ಲಿಯದು? ಒಂದೇ ಸಮನೆ ಸಂತೋಷವನ್ನು ಅನುಭವಿಸುವುದೇ ನಮ್ಮ ರೀತಿ-ಹೀಗೆ ಹೇಳುತ್ತಾ ಅವರು ತೆರೆಯ ಹಿಂದೆ ಸರಿಯುತ್ತಾರೆ.

ಅಹಲ್ಯೆ ಭೂಮಿಯ ಹೆಣ್ಣು ಇಂದ್ರ ಸ್ವರ್ಗದ ಒಡೆಯ. ಇವರಿಬ್ಬರ ಸಂಬಂಧ ಮುಂದೆ ಏರ್ಪಡಬೇಕಾಗಿದೆ ಅದಕ್ಕೆ ಪೂರ್ವ ಸಿದ್ಧತೆ ಮೊದಲನೆಯ ದೃಶ್ಯ. ಅಲ್ಲದೆ ಈ ಭೂಮಿಯ ರೀತಿ-ನೀತಿಗಳ ಯಾವ ಸಂಬಂಧವೂ ಇಲ್ಲದೆ ಸ್ವಚ್ಛಂದವಾಗಿ ಬದುಕುವವರು ದೇವತೆಗಳು ಎಂಬುದನ್ನು ಈ ದೃಶ್ಯ ಸೂಚಿಸುತ್ತದೆ.

ಎರಡನೆಯ ದೃಶ್ಯದಲ್ಲಿ ಇಂದ್ರನ ಪ್ರವೇಶವಾಗುತ್ತದೆ. ಅವನು ಮೇಘ-ದೇವತೆಯಾದ ಪುಷ್ಕರನೊಡನೆ ಭೂಮಿಯಲ್ಲಿ ಪ್ರವಾಸ ಮಾಡುತ್ತಿದ್ದಾನೆ. ಈ ಲೋಕದ ಒಂದು ಬನ ಅವನ ಮನಸ್ಸನ್ನು ಸೂರೆಗೊಂಡಿದೆ. ಅವನ ಮನಸ್ಸಿನಲ್ಲಿ ಹೊಸ ಭಾವನೆಗಳು ಮೂಡುತ್ತಿವೆ ಪುಷ್ಕರನಿಂದ ಅವನು ಇದು ಗೌತಮನ ವನ ಎಂದು ತಿಳಿಯುತ್ತಾನೆ. ಅದನ್ನು ಮೆಚ್ಚುತ್ತಿರುವಷ್ಟರಲ್ಲಿಯೇ ‘ದೇವಲೋಕದ ಹೆಣ್ಣು ದುರುಳನಾದ ತಪಸ್ವಿಯ ಹೀಸೆಗೆ ಸಿಕ್ಕಿದ್‌ಆಳೆ; ಯಾರಾದರೂ ರಕ್ಷಿಸುವವರುಂಟೇ’ ಎಂಬ ಆಕ್ರಂದನ ಕೇಳಿಬರುತ್ತದೆ ವಿಚಾರಿಸಿದ್ದಲ್ಲಿ ಅವಳು ರಂಭೆ ಎಂಬುದು ಗೊತ್ತಾಗುತ್ತದೆ. ಗೌತಮನ ತಪಸ್ಸು ಉಗ್ರವಾಗುತ್ತಿರಲು ಅದರಿಂದ ಇಂದ್ರನ ಆಸನ ನಡುಗುತ್ತಿರಲು ಅವನ ತಪಸ್ಸನ್ನು ಕೆಡಿಸಲು ಬಂದವಳು ಅವಳು. ಧ್ಯಾನಭಂಗವಾದ ಗೌತಮ ಶಿವನಂತೆ ಕಣ್ಣು ತೆರೆದ. ಇನ್ನೇನು ಶಾಪಕೊಡಬೇಕು, ಅಷ್ಟರಲ್ಲಿ ಗೌತಮನ ಸತಿ ಅಹಲ್ಯೆ ಅಲ್ಲಿಗೆ ಬಂದಳು. “ಪ್ರಿಯ ಪತಿಯೇ, ಈಕೆ ಹೆಣ್ಣು ; ಕೋಪಕ್ಕೆ ಪಾತ್ರಳಲ್ಲ. ಅಲ್ಲದೆ ಇವಳಿಗೆ ತಿಳಿವಳಿಕೆ ಸಾಲದು. ಶಾಪಕ್ಕೆ ಗುರಿಯಾಗತಕ್ಕವಳಲ್ಲ” ಎಂದು ರಂಭೆಯ ಪರವಹಿಸಿ ಬೇಡಿದಳು ಹೆಂಡತಿಯ ಮಾತನ್ನು ಮನ್ನಿಸಿ ಗೌತಮ ಹೂಂಕಾರ ಮಾತ್ರದಿಂದ ರಂಭೆಯನ್ನು ದೂರಕ್ಕೆ ದೂಡಿದ. ಆಕ್ರಂದನವನ್ನು ಕೇಳಿ ಇಂದ್ರ ಅವಳನ್ನು ಸಮಾಧಾನ ಪಡಿಸಿ ದೇವಲೋಕಕ್ಕೆ ಕಳುಹಿಸಿದ. ಇಂದ್ರನಿಗೆ ಕುತೂಹಲ ಹುಟ್ಟಿದ್ದು ಗೌತಮನಲ್ಲಿ, “ಈ ಲೋಕದ ಜನರ ಮನಸ್ಸಿನ ಆಳವನ್ನು ಅಳೆಯಬಲ್ಲವರಾರು? ಇದನ್ನು ಅಳೆಯುವ ಬೆಳಕಿಲ್ಲ, ಇದನ್ನು ತಿಳಿಯುವ ಜ್ಞಾನವಿಲ್ಲ. ಗೌತಮ ಯಾವ ಕಾರಣದಿಂದ ರಸಕ್ಕೆ ವಿಮುಖನಾಗಿದ್ದಾನೆ? –ಇರಲಿ ಮದನನ ನೆರವು ಪಡೆದು ಉಚಿತವಾದದ್ದನ್ನು ಮಾಡುತ್ತೇನೆ” ಎಂದು ತೀರ್ಮಾನಿಸುತ್ತಾನೆ.

ತಪಸ್ಸು ಮಾಡುವ ಋಷಿಗಳಲ್ಲಿ ಹೆಚ್ಚಿನ ಜನರ ಆಸೆ-ಬ್ರಹ್ಮಜ್ಞಾನ ಪಡೆಯುವುದಲ್ಲ. ವಿಶ್ವಾಮಿತ್ರನಂತೆ ಬ್ರಹ್ಮರ್ಷಿ ‘ಪದವಿ’ ಪಡೆಯುವುದು, ಇಲ್ಲವೇ ಇಂದ್ರ ಪದವಿ’ ಪಡೆಯುವುದು ಇಲ್ಲಿಯೂ ಗೌತಮನ ಆಸೆ ಇಂದ್ರ ‘ಪದವಿ’ ಲಾಭ ಉಳಿದ ಕಥೆಗಳಲ್ಲಿನ ಹಾಗೆಯೇ ಅಂಥ ತಪಸ್ವಿಯ ಏಕಾಗ್ರತೆಗೆ ಭಂಗ ತರಲು ದೇವಲೋಕದ ಹೆಣ್ಣು ಬರುತ್ತಾಳೆ: ಇಲ್ಲಿ ಅವಳು ರಂಭಗೆಮುನಿ ಸೋಲುವುದಿಲ್ಲ. ಆದರೆ ಈ ದೃಶ್ಯದ ಪ್ರಯೋಜನವೆಂದರೆ ಇಂದ್ರನಿಗೆ ಗೌತಮನಲ್ಲಿ ಆಸಕ್ತಿ ಕೆರಳುವುದು ಅದೇ ಅವನಿಗೆ ಮುನಿ ಸತಿಯ ನೋಟ ದೊರಕುವುದಕ್ಕೆ ಕಾರಣವಾಗುತ್ತದೆ.

ಮೂರನೆಯ ದೃಶ್ಯದಲ್ಲಿ ಮನ್ಮಥನ ಪ್ರವೇಶವಾಗುತ್ತದೆ. ಅವನಿಗೂ ಗೌತಮನ ಮನಸ್ಸಿನ ಆಸೆಯೇನು ಎಂದು ತಿಳಿಯುವ ಬಯಕೆ. ಅವನ ಬಿಲ್ಲಿನ ದನಿಯನ್ನು ಅನುಸರಿಸಿ ಅಲ್ಲಿಗೆ ಬಂದ ಇಂದ್ರ ದಿಢೀರನೇ ಅಹಲ್ಯೆಯನ್ನು ಕಾಣುತ್ತಾನೆ ಅವಳ ರೂಪ ಅವನನ್ನು ಆಕರ್ಷಿಸುತ್ತದೆ. ಅವಳಲ್ಲಿ ಕುತೂಹಲ ಹುಟ್ಟಿದರೂ ‘ಪರಸತಿ ಕುತೂಹಲ ತರವಲ್ಲ’ ಎಂದುಕೊಳ್ಳುತ್ತಾನೆ. ಅಹಲ್ಯೆ ತನ್ನ ಮಗು ಶತಾನಂದನೊಡನೆ ಮಾತನಾಡಿ ಸಂತೋಷಪಡುತ್ತಿದ್ದಾಳೆ. ವಿಷಯ : ರಂಭೆಯ ಆಗಮನ-ನಿರ್ಗಮನ ಹಾಗೆ ಮಾತನಾಡುತ್ತಿರಲು ತೇಜಃಪುಂಜವಾದ ರೂಪವೊಂದು ತೋರಿ ಕಣ್ಣು ಕೋರೈಸುತ್ತದೆ. ಅದು ಇಂದ್ರನ ರೂಪ. ಅವಳಿಗೆ ಮೊದಲಿಗಿರುವುದು ಇಂದ್ರನ ವಿಷಯಕ್ಕೆ ಭಯ. ಏಕೆಂದರೆ ತನ್ನ ಪರಿವಾರದ ರಂಭೆಯನ್ನು ಹೂಂಕಾರದಿಂದ ಅಟ್ಟಿದವನು ಗೌತಮ ಎಂದು ತಿಳಿದು ಪ್ರತೀಕಾರಕ್ಕೆ ತೊಡಗಿದರೆ? ಇಂದ್ರ – ಮದನರ ನಡುವಣ ಮಾತುಕತೆಯಿಂದ ಒಂದು ಅಂಶ ಹೊಳೆಯುತ್ತದೆ ; ಅಹಲ್ಯೆಯ ಮೂಲಕ ಗೌತಮನನ್ನು ಗೆಲ್ಲುವ ಸಂಚು ಮದನನದು.

ಈ ದೃಶ್ಯದಲ್ಲಿ ನಾಟಕಕಾರರು ಗೌತಮನ ಮನಸ್ಸನ್ನು ತೆರೆದು ನೋಡಲು ಪ್ರಯತ್ನಿಸಿದ್ದಾರೆ. ಅವನ ಮನಸ್ಸಿನಲ್ಲಿ ಸತಿಯ ಆಸೆ ಹುದುಗಿದೆ. ಅದನ್ನು ಅವನು ತಿಳಿದಿಲ್ಲ. ಅದನ್ನು ಹೊಮ್ಮಿಸಿ ಅದರ ಮೂಲಕವೇ ಅವನನ್ನು ಗೆಲ್ಲುವುದು ಸಾಧ್ಯ ಎಂಬುದನ್ನು ಮನ್ಮಥನ ಬಾಯಲ್ಲಿ ಹೇಳಿದ್ದಾರೆ. ಅಲ್ಲದೆ ಗೌತಮ ಸತಿಯ ಮನಸ್ಸಿನಲ್ಲಿ ಅವಳು ಇನ್ನೂ ಕಾಮದ ಇಂದ್ರನ ಶಕ್ತಿ, ವೈಭವಗಳ ಬಗ್ಗೆ ಮೆಚ್ಚಿಗೆ ಇದೆ ಎಂಬುದನ್ನು ತೋರಿಸಿದ್ದಾರೆ. ಇದು ನಾಟಕದ ಶಿಲ್ಪ ಸೌಂದರ್ಯವನ್ನು ಹೆಚ್ಚಿಸುವ ಎರಡು ಮುಖ್ಯವಾದ ಅಂಶಗಳು.

ನಾಲ್ಕನೆಯ ದೃಶ್ಯ ಅಹಲ್ಯೆಯ ಮನಸ್ಸಿಗೆ ಉಂಟಾಗಿರುವ ಕಾರಣ ತಿಳಿಯದ ಕಳವಳವನ್ನು ತೋರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ‘ದೇವರ ಜೊತೆ ನಮಗೇಕೆ ಸ್ಪರ್ಧೆ?’ ಎಂಬುದು ಅವಳ ಪ್ರಶ್ನೆ ಅದರಿಂದೇನಾದೀತೋ ಎಂದ ಕಳವಳ. ಬಳಿಕ ಇಂದ್ರ ಅಹಲ್ಯೆಯನ್ನು ಕಾಣುತ್ತಾನೆ. ಮನ್ಮಥ ಗೌತಮನನ್ನು ಎಚ್ಚರಿಸಲು ಪ್ರಯತ್ನಿಸುತ್ತಾನೆ. ಅಹಲ್ಯೆಯೂ ಗೌತಮ ತನ್ನಿಂದ ಎಷ್ಟೋ ದೂರಕ್ಕೆ ಸರಿದಿದ್ದಾನೆ ಎಂದು ಹಲುಬುತ್ತಾಳೆ. ಈ ಮಧ್ಯೆ ಮದನ ಬಾಣವನ್ನು ಬಿಡುತ್ತಾನೆ. ಅದು ಗೌತಮನನ್ನು ಮಾತ್ರವಲ್ಲದೆ ಅವನ ಹಿಂದೆ ನಿಂತಿರುವ ಇಂದ್ರನನ್ನು ತಾಗುತ್ತದೆ ಇಂದ್ರ ಅಹಲ್ಯೆಯಲ್ಲಿ ಆಸಕ್ತನಾಗುತ್ತಾನೆ. ಪರಸತಿಯನ್ನು ಅದರಲ್ಲೂ ಮುನಿಸತಿಯನ್ನು ಬಯಸಿ ಕೂಡಿದರೆ ಆಗಬಹುದಾದ ಅಪಾಯದ ಬಗ್ಗೆ ಮದನ ಇಂದ್ರನನ್ನು ಎಚ್ಚರಿಸುತ್ತಾನೆ. ಆದರೂ ಇಂದ್ರನಿಗೆ ಅಹಲ್ಯೆಯ ಕರೆ ಕಿವಿಯಲ್ಲಿ ಮೊಳಗುತ್ತದೆ.

ಇಂದ್ರ ಅಹಲ್ಯೆಯ ರೂಪಿಗೆ ಸೋತ. ಇಂಥ ಹೊತ್ತಿನಲ್ಲಿ ಯಾರ ಯಾವ ಉಪದೇಶವೂ ಫಲಿಸುವುದಿಲ್ಲ. ಅಹಲ್ಯೆಯ ಮನಸ್ಸೂ ಪತಿಯ ತಪವನ್ನು ಯಾಂತ್ರಿಕವಾಗಿ ಮಾತ್ರ ಅನುಸರಿಸುತ್ತಿದೆ. ಬೇರೆ ದಿಕ್ಕಿನಲ್ಲಿ ಹರಿಯುವ ಅವಕಾಶ ಸಿಕ್ಕಿದರೆ ಏನು ಮಾಡುತ್ತದೆಯೋ ತಿಳಿಯದು. ಇಷ್ಟನ್ನು ಈ ದೃಶ್ಯ ತಿಳಿಸುತ್ತದೆ.

ಮನ್ಮಥನ ಬಾಣ ಮುನಿ ಗೌತಮನನ್ನು ತಾಗಿತಷ್ಟೆ ಅದರ ಪರಿಣಾಮವನ್ನು ಚಿತ್ರಿಸುತ್ತದೆ. ಐದನೆಯ ದೃಶ್ಯ. ಚಂದ್ರೋದಯವಾಗುತ್ತದೆ. ಅಂದಿನ ಇರುಳು ಎಂದಿನಂತಿಲ್ಲ- ಅದೂ ಗೌತಮನ ಪಾಲಿಗೆ. ಪ್ರಕೃತಿ ರೌದ್ರಭಾವವನ್ನು ಬಿಟ್ಟು ಹಸನಾಯ್ತು ಎನ್ನುತ್ತಾನೆ. ಅವನ ಹೃದಯವನ್ನೆಲ್ಲ ಸುಂದರಿ ಸತಿ ಅಹಲ್ಯೆ ತುಂಬಿದ್ದಾಳೆ. ಇಂದ್ರನು ಇಂದ್ರಾಣಿಯನ್ನು ತೃಪ್ತಿಪಡಿಸಿದಂತೆ ನಾನು ಅಹಲ್ಯೆಯನ್ನು ತೃಪ್ತಿಪಡಿಸುತ್ತೇನೆ ಎನ್ನುತ್ತಾನೆ. ಅವನ ಮಿತ್ರ ಮೈತ್ರೇಯ ಗೌತಮನ ಅಂದಿನ ರೀತಿಯನ್ನು ನೋಡಿ ‘ಮದನನ ಗೆದ್ದವರುಂಟೇ ಜಗದಿ?’ ಎಂದು ಉದ್ಗಾರವೆತ್ತುತ್ತಾನೆ.

ತಪಸ್ಸು-ಜೀವರತಿ ಇವುಗಳಲ್ಲಿ ಎರಡನೆಯದು ಗೆಲ್ಲುತ್ತದೆ ಅದು ಈ ದೃಶ್ಯ ಭಾವ.

ಆರನೆಯ ದೃಶ್ಯದಲ್ಲಿ ಅಹಲ್ಯೆಯ ಇಂದ್ರಲೋಕದ ಕನಸು, ವೈಭವದಾಸೆ ಕಾಣಿಸಿಕೊಳ್ಳುತ್ತದೆ. ಮೊದಲು ಗೌತಮನ ವೇಷದಿಂದ ಕಾಣಿಸಿಕೊಂಡ ಇಂದ್ರನನ್ನು ಪತಿಯೆಂದೇ ಭ್ರಮಿಸಿ ಸ್ವಾಗತಿಸುತ್ತಾಳೆ. ಆಮೇಲೆ ಇಂದ್ರ ನಿಜರೂಪದಿಂದ ಕಾಣಿಸಿಕೊಂಡಾಗ ಅವನನ್ನು ನಿವಾರಿಸಲು ಯತ್ನಿಸುತ್ತಾಳೆ. ಅವಳ ಮನದ ಮರ್ಮವನ್ನು ಇಂದ್ರ ಮುಟ್ಟಿ ನುಡಿದಾಗ, ಅವಳ ಮನದ ಆಸೆಗಳನ್ನು ಗಾಳಿದನಿ ಎತ್ತರದ ದನಿಯಲ್ಲಿ ಹಾಡಿದಾಗ ಅವಳು ಇಂದ್ರನಿಗೆ ಶರಣಾಗುತ್ತಾಳೆ. ಇಬ್ಬರೂ ಮರೆಯಾಗುತ್ತಾರೆ ಅವಳನ್ನು ಕೂಡಬೇಕೆಂಬ ಕಟ್ಟಾಸೆಯಿಂದ ಬಂದ ಗೌತಮ ಮಗುವನ್ನು ಕಂಡು ಅವಳನ್ನು ಹುಡುಕಲು ಹೋಗುತ್ತಾನೆ.

ಇಡೀ ನಾಟಕದಲ್ಲಿ ಅತ್ಯಂತ ಮುಖ್ಯವಾದ ದೃಶ್ಯ ಇದು. ಮೂರು ಲೋಕಗಳಿಗೆ ಒಡೆಯನಾದ ಇಂದ್ರನಿಗೆ ತುಂಬ ಚೆಲುವೆಯಾದ, ಪತಿಯಿಂದ ಆಸೆ ತೀರದ, ಹೆಣ್ಣೊಂದು ಶರಣಾಗುವ ದೃಶ್ಯ.

ಆಶ್ರಮದ ಬಳಿಯ ಬಳ್ಳಿಯ ಚಪ್ಪರದಲ್ಲಿ ನಡೆಯುವ ಅಹಲ್ಯೆ-ಇಂದ್ರರ ಸಂಭಾಷಣೆ ಏಳನೆಯ ದೃಶ್ಯ. ಆ ಹೆಣ್ಣು, ಈ ದೇವತೆಗಳೊಡೆಯ ಇಬ್ಬರೂ ಸಂತೋಷದಲ್ಲಿದ್ದಾರೆ. ಆದರೆ ಪತಿಯ ಬರವಿನ ಸುಳಿವು ಅಹಲ್ಯೆಯನ್ನು ಮೂರ್ಛೆಗೊಳಿಸುತ್ತದೆ. ಇಂದ್ರ ತೇಜಸ್ಸನ್ನು ಕಳೆದುಕೊಳ್ಳುತ್ತಾನೆ.

ತಮ್ಮದೇ ರೀತಿಯಲ್ಲಿ ಒಲಿದವರ ತೃಪ್ತಿಯ ಗಳಿಗೆಯ ಮಾತು ಕತೆ ಇದು.

ಎಂಟನೆಯ ದೃಶ್ಯವು ಮೊದಲಾಗುವ ತನ್ನ ಕೃತ್ಯಕ್ಕೆ ಪಶ್ಚಾತ್ತಾಪಡುತ್ತಿರುವ ಗೌತಮನಿಂದ. ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವಂತೆಯೇ ಇಂದ್ರನನ್ನೂ ಅಹಲ್ಯೆಯನ್ನೂ ಆತ ಶಪಿಸಿದ್ದಾಗಿದೆ. ಮೊದಲು ಕಾಮಕ್ಕೆ, ಆಮೇಲೆ ಕ್ರೋಧಕ್ಕೆ ವಶನಾಗಿ ತನ್ನ ತಪಸ್ಸನ್ನು ಕೆಡಿಸಿಕೊಂಡೆ ಎಂದು ಪರಿತಪಿಸುತ್ತಾನೆ. ತಾನೂ-ಅಹಲ್ಯೆ ಇಷ್ಟು ಹತ್ತಿರ ಇದ್ದರೂ ಒಬ್ಬರ ಆಸೆ ಮತ್ತೊಬ್ಬರಿಗೆ ತಿಳಿಯಲಾರದೇ ಹೋಯಿತಲ್ಲ ಎಂದು ದುಃಖಿಸುತ್ತಾನೆ. ಹಿಮಗಿರಿಯಲ್ಲಿ ತಪಸ್ಸು ಮಾಡಿ ‘ಆತ್ಮವನ್ನು ಅರಿಯುತ್ತೇನೆ’ ಎಂದು ಹೊರಟು ಹೋಗುತ್ತಾನೆ.

ಗೌತಮ ಶಾಪಕೊಟ್ಟು ಬಿರಬಿರನೆ ಹೋಗದೆ ಸ್ವಲ್ಪ ಸಮಯ ನಿಂತು ತನ್ನ ತಪ್ಪನ್ನು ವಿಚಾರಿಸಿ ನೋಡಿದ ಎಂಬ ಅಮೂಲ್ಯವಾದ ಅಂಶವಿದೆ ಈ ದೃಶ್ಯದಲ್ಲಿ ಇಲ್ಲಿಗೆ ಪೂರ್ವಾಂಕ ಮುಗಿಯುತ್ತದೆ.

ಮಧ್ಯಮಾಂಕದ ಮೊದಲ ದೃಶ್ಯ ಸ್ವರ್ಗದಲ್ಲಿ, ಅಪ್ಸರೆಯರ ಸಲ್ಲಾಪದೊಂದಿಗೆ ಆರಂಭವಾಗುತ್ತದೆ. ಇಂದ್ರ ಚಿಂತಾಕ್ರಾಂತನಾಗಿದ್ದಾನೆ. ಹೀಗಾಗಿ ಸ್ವರ್ಗದಿಂದಲೇ ಸುಖ ಹೊರಟುಹೋಗಿದೆ ಎಂಬುದು ಅವರ ಮಾತುಕತೆಯಿಂದ ತಿಳಿಯುತ್ತದೆ. ಅಷ್ಟರಲ್ಲಿ ರಂಭೆ ಬಂದು ಅಗ್ನಿಯು ಮಧ್ಯೆ ಪ್ರವೇಶಿಸಿ ಬ್ರಹ್ಮನ ಕೋಪವನ್ನು ತಗ್ಗಿಸಿದನೆಂದೂ, ಪರಿಣಾಮವಾಗಿ ಇಂದ್ರನ ಶಾಪ ಹರಿಯಿತೆಂದೂ ಹೇಳುತ್ತಾಳೆ. ಇದರಿಂದ ಎಲ್ಲರಿಗೂ ತುಂಬ ಸಂತೋಷವಾಗುತ್ತದೆ.

ಇಂದ್ರನಿಗೆ ಶಾಪ ವಿಮೋಚನೆಯಾಯಿತು ಎನ್ನುವ ಸಂಗತಿಯೊಂದಿಗೆ ವಿಶ್ವಾಮಿತ್ರನು ರಾಮಲಕ್ಷ್ಮಣರೊಡನೆ ಮಿಥಿಲೆಗೆ ನಡೆಯುತ್ತಿದ್ದಾನೆ. ಎಂಬ ವಾರ್ತೆಯನ್ನೂ ಈ ದೃಶ್ಯ ನಿವೇದಿಸುತ್ತದೆ.

ಎರಡನೆಯ ದೃಶ್ಯದಲ್ಲಿ ಅಪ್ಸರೆಯರು ಮನ್ಮಥನ ಅಂತಃಪುರಕ್ಕೆ ತೆರಳಿ, ಹಾಡಿನಿಂದ ಅವನನ್ನು ಎಚ್ಚರಿಸುತ್ತಾರೆ. ಮಾಗಿ ಕಳೆದು ಸುಗ್ಗಿ ಬರುತ್ತಿದೆ. ಋತುಪರಿವರ್ತನೆಯ ವಿಷಯ ಈ ದೃಶ್ಯದಿಂದ ತಿಳಿಯುತ್ತದೆ.

ಮೂರನೆಯ ದೃಶ್ಯ ಇಬ್ಬರು ಸಿದ್ಧರ ಮಾತಿನ ಮೂಲಕ ತಪಸ್ವಿಯಾಗಿ ಗೌತಮನ ಸಾಧನೆಯ ಪ್ರಗತಿಯನ್ನು ತಿಳಿಸುತ್ತದೆ. ಅವನ ಧ್ಯಾನದ ಏಕಾಗ್ರತೆಯನ್ನು ಕಂಬನಿ ತುಂಬಿದ ಸತಿಯ ಚಿತ್ರ ಕಲಕುತ್ತದೆ. ಹಿಮಗಿರಿಯ ಏಕಾಂತದ ತಪಸ್ಸಿನಿಂದ ಗೌತಮನಿಗೆ ಸತ್ಯ ಕಾಣಿಸಿತು-ಅದು ಬ್ರಹ್ಮವಲ್ಲ. ಕಾಮದ ಅನಂತರದ ಪ್ರೇಮದ ದರ್ಶನ. ಅನಂತರ ನಿದ್ದೆಯಿಂದ ಎದ್ದು ಬಂದವನಂತೆ ಗೌತಮ ಗುಹೆಯಿಂದ ಹೊರಬರುತ್ತಾನೆ. ಅವನ ಬಾಯಿಂದ ಅವನ ತಪಸ್ಸಿನ ಫಲವಾದ ಅನುಭೂತಿ ಹೊರಬರುತ್ತದೆ: “ರಾಗದ ಹಂಬಲವೂ ಇರವೇ-ಅಂತೆಯೇ ತ್ಯಾಗದ ಹಂಬಲವೂ ಇರವೇ… ರಾಗದಿ ತುಸ ನಡೆ, ತ್ಯಾಗದಿ ತುಸ ನಡೆ.” ಅನಂತರದಲ್ಲಿ ಅಲ್ಲಿ ಕಾಣಿಸಿಕೊಂಡ ಮದನನಿಗೂ ಗೌತಮನಿಗೂ ಸಂಭಾಷಣೆ ನಡೆಯುತ್ತದೆ. ಗೌತಮ ಕಂಡದ್ದನ್ನೇ ಮದನ ಸಮರ್ಥಿಸುತ್ತಾನೆ.

ಬದುಕು ಪೂರ್ಣವಾಗಬೇಕಾದರೆ ಈ ರಾಗ-ವಿರಾಗಗಳು ಸಮರತೆಯಿಂದಿರಬೇಕು ಎಂಬುದನ್ನು ಈ ದೃಶ್ಯ ತಿಳಿಸುತ್ತದೆ. ಇಲ್ಲಿಗೆ ಮಧ್ಯಮಾಂಕ ಮುಕ್ತಾಯವಾಗುತ್ತದೆ.

ಉತ್ತರಾಂಕದ ಮೊದಲನೆಯ ದೃಶ್ಯ ಮಿಥಿಲೆಯ ಬನದ ಒಂದೇ ಹಾದಿಯಲ್ಲಿ ಮೈತ್ರೇಯನ ಆಶ್ರಮದ ವಟುಗಳ ಗ್ರಾಮೀಣ ಭಾಷೆಯ ಸಂಭಾಷಣೆಯಿಂದ ಆರಂಭವಾಗುತ್ತದೆ. ವಿಶ್ವಾಮಿತ್ರನು ಬಂದಿದ್ದಾನೆ.ಅದನ್ನು ತಮ್ಮ ಗುರುಗಳಿಗೆ ತಿಳಿಸಬೇಕು ಎಂಬುದಷ್ಟೇ ಈ ದೃಶ್ಯದ ರಚನೆಗೆ ಕಾರಣ.

ಎರಡನೆಯ ದೃಶ್ಯದಲ್ಲಿ ವಟುಗಳು ಗುರುಗಳಿಗೆ ನಿವೇದಿಸುತ್ತಾರೆ, ವಿಶ್ವಾಮಿತ್ರನು ಇಬ್ಬರು ತೇಜಸ್ವಿಗಳಾದ ವಟುಗಳೊಡನೆ ಬರುತ್ತಿದ್ದಾನೆ ಎಂದು.

ಮೂರನೆಯ ದೃಶ್ಯದಲ್ಲಿ ರಾಮಲಕ್ಷ್ಮಣರು ಹೂವನ್ನು ಆರಿಸುತ್ತಿರಲು ಅವರಿಗೆ ಅಹಲ್ಯೆಯ ದುಃಖದ ದನಿ ಕೇಳಿಸುತ್ತದೆ. ಅದು ಯಾರ ದನಿ ಎಂಬುದನ್ನು ಅದರ ಹಿನ್ನೆಲೆಯನ್ನೂ ವಿಶ್ವಾಮಿತ್ರ ರಾಮನಿಗೆ ತಿಳಿಸುತ್ತಾನೆ. ರಾಮನು ಮುಂದೆ ಹೋಗುತ್ತಾನೆ. ಅಹಲ್ಯೆಯ ರೂಪು ಮೂಡುತ್ತದೆ.

ನಾಲ್ಕನೆಯ ದೃಶ್ಯವು ಅಹಲ್ಯೆಯು ಸಂತೋಷ ಗಾನದೊಂದಿಗೆ ಆರಂಭವಾಗುತ್ತದೆ. ಅನಂತರ ಅವಳು ತಾನು ಮಾಡಿದ ‘ತಪ್ಪಿ’ಗಾಗಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸುತ್ತಾಳೆ. ಗೌತಮನೂ ಬರುತ್ತಾನೆ.

‘ದುಗುಡವ ಬಿಡು ಕಾಂತೆ’ ಎಂದು ಅಹಲ್ಯೆಯನ್ನು ಸಂತೈಸುತ್ತಾನೆ. ಎಲ್ಲರೂ ರಾಮನನ್ನು ವಿಶ್ವಾಮಿತ್ರನನ್ನು ಸ್ತುತಿಸುತ್ತಾರೆ.

ಕೊನೆಯದಾದ ಐದನೆಯ ದೃಶ್ಯದಲ್ಲಿ ಭೂಮಿಯಲ್ಲಾದ ಸಂತೋಷಕ್ಕೆ ಸ್ವರ್ಗವೂ ಮರುಧ್ವನಿ ಕೊಡುವುದು ಕಾಣುತ್ತದೆ.

ಇಲ್ಲಿಗೆ ಗೀತರೂಪಕ ಮುಕ್ತಾಯವಾಗುತ್ತದೆ.

ಇನ್ನು ಕಥಾವಸ್ತು, ಶಿಲ್ಪ, ಪಾತ್ರಗಳು, ಕಾವ್ಯ ಸೌಂದರ್ಯ ಭಾಷೆ, ರಂಗ ಪ್ರಯೋಗ ಸಾಧ್ಯತೆ- ಇಷ್ಟು ದೃಷ್ಟಿಗಳಿಂದ ‘ಅಹಲ್ಯೆ’ ಗೀತರೂಪಕವನ್ನು ವಿಮರ್ಶಿಸೋಣ.

ಕಥಾವಸ್ತು: ವಾಲ್ಮೀಕಿ ರಾಮಾಯಣದಲ್ಲಿ ರೇಖಾಮಾತ್ರವಾಗಿರುವ ಈ ಪ್ರಸಂಗವನ್ನು ಪು.ತಿ.ನ. ವಿಸ್ತರಿಸಿದ್ದಾರೆ. ಆದರೆ ಕಥೆಯ ಒಟ್ಟು ಚೌಕಟ್ಟಿಗೆ ಭಂಗ ತಂದಿಲ್ಲ. ವಾಲ್ಮೀಕಿಗೆ ಇಂತಹ ಅನೇಕ ಪ್ರಸಂಗಗಳನ್ನು ನಿರೂಪಿಸುವ ಕರ್ತವ್ಯ ಇರುವುದರಿಂದ ಆತ ಪ್ರತಿಯೊಂದು ಸಂದರ್ಭದಲ್ಲೂ ಪ್ರತಿಯೊಂದು ಪಾತ್ರದ ನಡತೆಯನ್ನೂ ವಿಮರ್ಶಿಸುವ ಅವಕಾಶವಿಲ್ಲ. ಪ್ರತಿಯೊಂದು ಪಾತ್ರದ ಮನಸ್ಸನ್ನೂ ವಿವರವಾಗಿ ತೆರೆದು ತೋರಿಸಲು ಸಮಯವಿಲ್ಲ.

ಈ ಇಡೀ ಪ್ರಸಂಗ ಎರಡು ವ್ಯಕ್ತಿಗಳ ಕಾಮದ ಸುತ್ತ, ಮೂರು ವ್ಯಕ್ತಿಗಳ ಮನಸ್ಸಿನ ಪರಿಪಾಕದ ಸುತ್ತ ಹೆಣೆದುಕೊಂಡಿದೆ. ವಾಲ್ಮೀಕಿಗೆ ಈ ಎಲ್ಲದರ ಅರಿವೂ ಇದೆ. ಇಂದ್ರ ದೇವಲೋಕದ ದೊರೆ. ಅವನು ಜಾರ ಎಂಬುದು (ಅದೂ ಅಹಲ್ಯೆಯ ವಿಷಯಕ್ಕೇ) ವೇದಗಳಲ್ಲಿಯೇ ಹೇಳಿರುವ ಸಂಗತಿ. ಹಲವು ಹೆಣ್ಣುಗಳನ್ನು ಬಲ್ಲವನು ಅವನು. ಅಂಥವನು ಅತ್ಯಂತ ಸುಂದರಿಯೂ, ಕಾಮವನ್ನು ಕೆರಳಿಸುವವಳೂ ಆದ ಅಹಲ್ಯೆಯನ್ನು ಬಿಟ್ಟಾನೆಯೇ? ಇನ್ನು ಗೌತಮ. ಅವನು ತನ್ನದೇ ಆಸೆಯ ಪೂರೈಕೆಗಾಗಿ ತಪಸ್ಸಿನಲ್ಲಿ ತೊಡಗಿರುವವನು ಸುಂದರಿಯಾದ ಸತಿಯನ್ನು ಅನುಭವಿಸಿ, ಅವಳಲ್ಲಿ ದೇಹದ ಆಸೆಯನ್ನು ಕೆರಳಿಸಿರುವವನು ಅದು ಸದಾ ಬೇಡುತ್ತಲೇ ಇರುವಂಥದು ಎಂಬುದನ್ನು ಮತ್ತು ಹೆಚ್ಚಿನ ಸಿದ್ಧಿಗಾಗಿ ತಾತ್ಕಾಲಕ್ಕೆ ಇಂದ್ರಿಯ ನಿಗ್ರಹ ಮಾಡಿರುವವನು. ತನ್ನ ಸತಿ ದಾರಿ ತಪ್ಪಿದಳು ಎಂದಾಗ ತನ್ನ ದೋಷ ಏನು ಎಂದು ವಿಚಾರಿಸದೆ ಹೆಚ್ಚಿನ ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟುಹೋದನು.

ಇನ್ನು ವಾಲ್ಮೀಕಿ ಅಹಲ್ಯೆಯ ವಿಷಯದಲ್ಲಿ ತುಂಬ ಉದಾರಿ. ಮಾನವ ಹೃದಯದ ಬಯಕೆಗಳನ್ನು ಬಲ್ಲ ಕುಶಲಿ ಆದಿಕವಿ ಹರೆಯದ ಹೆಣ್ಣನ್ನು ಬಿಟ್ಟು ಸ್ವರ್ಗವನ್ನು ಬಯಸಬೇಕಾದರೆ ಅಲ್ಲಿ ಇಲ್ಲಿಗಿಂತ ಹೆಚ್ಚಿನ ವೈಭವ ಇರಬೇಕು ಎಂದುಕೊಂಡವಳು. ಅಂಥ ಸ್ವರ್ಗವನ್ನು ಆಳುವವನು ಎಂಥ ಶಕ್ತಿವಂತ ಎಂಬುದನ್ನು ಕಲ್ಪಿಸಿಕೊಳ್ಳುತ್ತಾ ಕೂರಲು ಬೇಕಾದಷ್ಟು ಸಮಯ ಮನಸ್ಸು ಎರಡೂ ಇರುವವಳು. ಒಂದೇ ಮಾತಿನಲ್ಲಿ ವಾಲ್ಮೀಕಿ ಇದನ್ನು ಸೂಚಿಸಿದ್ದಾರೆ. ಅವಳು ಮುನಿವೇಶದಲ್ಲಿರುವವನು ತನ್ನ ಪತಿಯಲ್ಲ. ಇಂದ್ರ ಎಂದು ತಿಳಿದಾಗಲೂ ಅವನೊಡನೆ ಕೂಡಿದಳು, ಏಕೆ?-‘ದೇವರಾಜ ಕೂತೂಹಲಾತ್‌’. ಅದಕ್ಕೆ ಪ್ರತಿಯಾಗಿ ಶಾಪ ಬಂತು. ಆದರೆ ಶಾಪಮುಕ್ತಳಾದ ಅಹಲ್ಯೆಯನ್ನು ವಾಲ್ಮೀಕಿ ಉಜ್ವಲವಾದ ಮಾತುಗಳಲ್ಲಿ ವರ್ಣಿಸಿದ್ದಾನೆ. ಅಲ್ಲದೆ ಅವಳು ‘ಪಾಪಿ’ ಎಂಬ ಮಾತನ್ನು ಬಳಸುವುದಿಲ್ಲ. ‘ಮಹಾಭಾಗ್ಯಶಾಲಿನಿ’ ಎನ್ನುತ್ತಾನೆ. ಅವಳು ರಾಮನಿಗೆ ನಮಸ್ಕರಿಸುವುದಿಲ್ಲ. ರಾಮನೇ ಅವಳಿಗೆ ನಮಸ್ಕರಿಸುತ್ತಾನೆ. ಈ ಪ್ರಸಂಗವನ್ನು ವಾಲ್ಮೀಕಿ ನಿರ್ವಹಿಸಿರುವ ರೀತಿ ಆದಿ ಕವಿಗೆ ಗೌರವ ತರುವಂತಹುದು. ಮುಂದಿನ ಲೇಖಕರಿಗೆ ಬೇಕಾದಷ್ಟು ಸಾಮಗ್ರಿಯನ್ನು ಒದಗಿಸುವ ‘ಕವಿ ಭಿಕ್ಷೆ’ಯನ್ನು ವಾಲ್ಮೀಕಿ ಮಹರ್ಷಿಗಳು ಮುಕ್ತ ಹಸ್ತದಿಂದ ನೀಡಿದ್ದಾರೆ.

ಪು.ತಿ.ನ. ಇದನ್ನು ಒಳ್ಳೆಯ ಕವಿಯಂತೆ. ಮಾನವ ಹೃದಯವನ್ನು ಒಳಹೊಕ್ಕು ನೋಡಬಲ್ಲ ದಕ್ಷ ಮನೋವಿಜ್ಞಾನಿಯಂತೆ, ನೋಡಿದ್ದಾರೆ. ಅವರು ಕಥೆಯಲ್ಲಿ ಹೆಚ್ಚಿನ ಪಾತ್ರಗಳನ್ನು ತಂದಿದ್ದಾರೆ. ಅದರಲ್ಲಿ ಮುಖ್ಯವಾದ ಪಾತ್ರ ಅಹಲ್ಯೆ-ಗೌತಮರ ಮಗ ಶತಾನಂದನದು. ಉಳಿದ ಪಾತ್ರಗಳು ಮನದ ರಂಬೆ, ಮೈತ್ರೇಯ. ಉಳಿದ ಪಾತ್ರಗಳಿಗೆ ಕೆಲಸವಿದೆ. ಇದು ನಾಟಕವಾದ್ದರಿಂದ ಅದರಲ್ಲೂ ಗೀತ ರೂಪಕವಾದುದರಿಂದ ಈ ಪಾತ್ರಗಳಿಗೂ, ಅಪ್ಸರೆಯರ ಗುಂಪಿಗೂ ಅವಶ್ಯಕತೆಯೂ ಉಂಟು. ಇದು ಅವರು ಮಾಡಿರುವ ಮೊದಲನೆಯ ಬದಲಾವಣೆಯಾದರೆ ಇನ್ನುಳಿದ ಬದಲಾವಣೆಗಳಲ್ಲಿ ಮುಖ್ಯವಾದವೆಲ್ಲ ಕ್ರಿಯೆಗೆ ಸಂಬಂಧಪಟ್ಟವು.

ಸುರರೂ ಸುರಸುಂದರಿಯರೂ ಇಂದ್ರನ ವೈಭವವನ್ನು ಹಾಡುತ್ತಾರೆ. ಇಂಥ ಇಂದ್ರನಲ್ಲಿ ಅಹಲ್ಯೆಯಂಥವಳು ಆಸಕ್ತಳಾದಳು ಎಂಬುದನ್ನು ತಿಳಿಸಲು ಈ ಹಿನ್ನೆಲೆಯು ಅಗತ್ಯ. ಹಾಗೆಯೇ ರಂಭೆಯ ಪ್ರವೇಶ ಕೂಡ ಅವಳು ಇಂದ್ರನ ಸ್ಥಾನಮಾನಗಳಲ್ಲಿ ಆಸಕ್ತಳು. ಆದ್ದರಿಂದ ಗೌತಮನ ತಪಸ್ಸನ್ನು ಭಂಗಪಡಿಸಲು ಬರುತ್ತಾಳೆ. ತನಗೆ ಸೋಲಾಗಿ ಶಾಪ ಬರುವ ಪ್ರಸಂಗ ಬಂದಾಗ ಅದನ್ನು ತಪ್ಪಿಸಿದವಳು ಮುನಿಸತಿ ಅಹಲ್ಯೆ ಎಂದು ಇಂದ್ರನಿಗೆ ವರದಿಮಾಡಿ ಋಷಿಯ ತಪದ ಮಹಿಮೆಯನ್ನು ವರ್ಣಿಸುತ್ತಾಳೆ. ಇಷ್ಟಾಗದಿದ್ದರೆ ಈ ನಾಟಕದ ಇಂದ್ರ ತನ್ನ ಭೂಮಿಯ ಪ್ರವಾಸವನ್ನು ಮುಗಿಸಿ ಹೊರಟು ಹೋಗುತ್ತಿದ್ದ ಅವನು ನಿಂತ. ಗೌತಮನ ತಪಸ್ಸಿನ ಶಕ್ತಿ ನಿಜವಾದದ್ದೆಂದು ತಿಳಿಯಬಯಸುವುದು ರಂಭೆಯ ವರದಿಯಿಂದಲೇ.

ಮನ್ಮಥನನ್ನಂತೂ ಪು.ತಿ.ನ. ಸೊಗಸಾಗಿ ಬಳಸಿಕೊಂಡಿದ್ದಾರೆ. ತಪೋಮಯವಾದ ಆವರಣವನ್ನು ಕಾಮಕೇಳಿಯ ರಂಗಮಂಚವಾಗಿ ಮಾರ್ಪಡಿಸುವುದು ಅವನಿಗೆ ಸುಲಭದ ಕೆಲಸ. ಗೌತಮನ ಮನಸ್ಸಿನಲ್ಲಿ ಸತಿಯ ಬಯಕೆಯುಂಟು, ಅದನ್ನು ಅವನು ಅದುಮಿ ಇಟ್ಟಿದ್ದಾನೆ-ಇದು ಗೊತ್ತಾಗುವುದು ಮನ್ಮಥನಿಂದ ಅಲ್ಲದೆ ಗೌತಮನಿಗೆ ಎಚ್ಚರಿಕೆ ನೀಡಿ, ಅನಂತರ ಬಾಣ ಪ್ರಯೋಗ ಮಾಡಿ ಅವನ ಮನಸ್ಸನ್ನು ವಿಚಲಗೊಳಿಸುವವನೂ ಮನ್ಮಥನೆ. ಬಾಣದ ವೇಗ ಹೆಚ್ಚಾಯಿತು. ಅದು ಗೌತಮನನ್ನು ದಾಟಿ ಇಂದ್ರನನ್ನು ಸೋಕಿತು.

ಪು.ತಿ.ನ. ಅವರು ಮೂಲದ ಸೂಚನೆಯನ್ನು ಪಡೆದು ಹಿಗ್ಗಿಸಿರುವ ಭಾಗಗಳಲ್ಲಿ ಶಿಖರಪ್ರಾಯವಾದದ್ದು ಬಹುಶಃ-ಅಹಲ್ಯೆಯ ಮನಸ್ಸಿನ ಒಳತೋಟಿಯ ಭಾಗ. ಒಳತೋಟಿಯೇ ಇಲ್ಲದೆ ಅವಳು ಇಂದ್ರನ ವಶಳಾದಳು ಎಂದರೆ ಅವಳಿಗೆ ತುಂಬ ಅನ್ಯಾಯ ಮಾಡಿದಂತೆ ಆಗುತ್ತಿತ್ತು ತನ್ನ ತಂದೆಯ ಆಸೆಯನ್ನು ತಗ್ಗಿಸಲು ಅವಳು ಬೇಕಾದಷ್ಟು ಪ್ರಯತ್ನ ಮಾಡಿದಳು. ಆದರೆ ದೇಹಧರ್ಮ ಗೆದ್ದಿತು. ‘ಬದುಕಿನಲ್ಲಿ – ಎಷ್ಟೋ ಯುಗಕ್ಕೊಮ್ಮೆ ಮಾತ್ರ ದೊರಕಬಹುದಾದ ಭಾಗ್ಯ ಇದು’ ಎಂದು ಗಾಳಿದನಿಗಳು ಎಂದರೆ ಒಳದನಿಗಳು ಒತ್ತಾಯ ಮಾಡಿದುವು. ಅಹಲ್ಯೆ ಸೋತಳು.

ಗೌತಮನ ಪಶ್ಚಾತ್ತಾಪವೂ ಅವನ ನಂತರದ ತಪಸ್ಸಿನ ವಿವರಗಳೂ ಕವಿಯ ಸೃಷ್ಟಿ ಕೊನೆಗೆ ಅಹಲ್ಯೆಯ ಗೋಳಿನ ಗೀತೆಯೂ ಅವರು ವಾಲ್ಮೀಕಿಯ ಸೂಚನೆಯನ್ನು ಹಿಗ್ಗಿಸಿರುವಂಥದೇ. ಅಂತ್ಯ ಮಾತ್ರ ವಾಲ್ಮೀಕಿಯ ರೀತಿಯದೇ.

ಈ ಬದಲಾವಣೆಗಳೆಲ್ಲ ಒಂದನ್ನು ಹೊರತು, ನಾಟಕದ ಒಟ್ಟು ಸೊಗಸನ್ನು ಹೆಚ್ಚಿಸುವಂಥವು, ಆ ಒಂದು, ಬಾಲಕ ಶತಾನಂದನ ಪಾತ್ರ ಸೃಷ್ಟಿ ಎಂದರೆ ಆ ಪಾತ್ರ ಮೂಲದಲ್ಲಿ ಇಲ್ಲ ಎಂದಲ್ಲ ಈ ಸಂಗತಿ ನಡೆಯುವ ಕಾಲಕ್ಕೆ ಆ ಬಾಲಕನ ಪ್ರಸ್ತಾಪ ಇಲ್ಲ.

ಕವಿ ಇಲ್ಲಿ ಅದನ್ನು ಏಕೆ ಪ್ರವೇಶ ಮಾಡಿಸಿದ್ದಾರೆಯೋ ತಿಳಿಯದು. ನಾಟಕದಲ್ಲಿ ಪ್ರೌಢರ ಪಾತ್ರಗಳೇ ಬಂದು ಬೇಸರವಾದೀತು ಎಂಬ ಕಾರಣಕ್ಕೆ ಒಬ್ಬ ಹುಡುಗನನ್ನು ತಂದಿದ್ದಾರೆಯೇ ಎಂದರೆ ಈ ಕವಿ ಅಷ್ಟೆ ಅಜ್ಞರಲ್ಲ. ಅಲ್ಲದೆ ಇಂಥ ಬಾಲಿಶವಾದ ಚಟ ತೀರಿಸಿಕೊಳ್ಳಲು ಉತ್ತರಾಂಕದ ಮೊದಲ ದೃಶ್ಯದಲ್ಲಿ ಮೈತ್ರೆಯನ ಆಟದ ವಟುಗಳು ಜಾನಪದ ತ್ರಿಪದಿಗಳನ್ನು ಹೇಳುವ ಅಸಂಗತತೆ ಇದ್ದೇ ಇದೆಯಲ್ಲ! ಅದು ಎಷ್ಟು ಅಭಾಸವಾಗಬಹುದು ಎಂಬುದು ಕವಿಗೆ ಕೊನೆಯವರೆಗೂ ಹೊಳೆಯದೇ ಹೋದದ್ದು, ಅವರ ವಿಮರ್ಶಕ ಮಿತ್ರರಾದರೂ ತೋರಿಸದೆ ಹೋದದ್ದು ಆಶ್ಚರ್ಯದ ವಿಷಯ.

ಒಂದು ಮಗುವಾಗಿ, ಅದರೊಡನೆ ಆಟವಾಡುತ್ತಿರುವ ಹೆಣ್ಣಿಗೆ, ಅವಳು ಎಷ್ಟೇ ಸುಂದರಿಯಾಗಿರಲಿ, ದೇಹದ ಬಯಕೆ ಎಷ್ಟೇ ತೀವ್ರವಾಗಿರಲಿ, ಪರಪುರುಷರೊಡನೆ ಕೂಡುವ ಬಯಕೆಯಾಯಿತು ಎಂದರೆ ಅವಳ ತಾಯ್ತನಕ್ಕೆ ಅಗೌರವ ತೋರಿಸಿಂದಂತಲ್ಲವೆ? ಒಂದು ಎರಡೇಕೆ, ಹತ್ತು ಮಕ್ಕಳಾದರೂ ಅವುಗಳ ಕಡೆ ತಿರುಗಿ ಕೂಡ ನೋಡದೆ ದೇಹದ ಬಯಕೆಯನ್ನು ತೀರಿಸಿಕೊಳ್ಳಲು ಬೇರೆಯವನ ಹಿಂದೆ ಹೋಗಿರುವ ನಿದರ್ಶನಗಳುಂಟು. ಆದರೆ ಕವಿ ಇಲ್ಲಿ ಚಿತ್ರಿಸುತ್ತಿರುವುದು ಅಂಥ ತೀರ ವಿಕೃತ ಕಾಮಿಯೊಬ್ಬಳನ್ನಲ್ಲವಷ್ಟೇ?

ಈ ಮಾತನ್ನು ಇನ್ನಷ್ಟು ವಿಶದಪಡಿಸುವುದು ಅಗತ್ಯ. ಸುಂದರಿಯೂ ತರುಣಿಯೂ ಆದ ಹೆಣ್ಣು ಪತಿ ದೂರ ಸಂದಿರಲು. ಅವಲಂಬನಕ್ಕೆ ಯಾರೂ ಇಲ್ಲದಿರಲು ಮನಸ್ಸು ಅತ್ತ ಇತ್ತ ಹರಿದಾಗ ಅದನ್ನು ತಡೆಯಲಾರದೆ ಹೋದಳು ಎಂದರೆ ಅದು ಸಂಭವನೀಯವಾದ ಸಂಗತಿಯಾಗುತ್ತದೆ. ಇಲ್ಲಾದರೋ ಅಹಲ್ಯೆಯ ಸಮಯವನ್ನು ತುಂಬಲು, ಬಾಳನ್ನು ಸವಿಯಾಗಿಸಲು ಮುದ್ದಾದ ಮಗನಿದ್ದಾನೆ. ಹೀಗೆ ವೇಳೆ ಹೋಗುತ್ತಿದ್ದರೂ, ತಾಯ್ತನ ತುಡಿಯುತ್ತಿದ್ದರೂ ಪರಪುರುಷನನ್ನು ಕೂಡಿದಳು ಎಂದರೆ ಅವಳ ಪಾಪವನ್ನು ಹೆಚ್ಚುಗೊಳಿಸಿದಂತಾಗುತ್ತದೆ. ಆದರೆ ಅಂಥ ಉದ್ದೇಶ ಈ ಕವಿಗೆ ಇಲ್ಲ. ವಾಲ್ಮೀಕಿಗಂತೂ ಇಲ್ಲವೇ ಇಲ್ಲ ಹೀಗಾಗಿ ಪು.ತಿ.ನ. ಶತಾನಂದನನ್ನು ಯಾವುದೇ ಕಾರಣಕ್ಕಾಗಲೀ-ತಂದು ತಮ್ಮ ನಾಟಕದ, ಪಾತ್ರ ಸೃಷ್ಟಿಯ ಶಕ್ತಿಯನ್ನು ಕುಂದಿಸಿಕೊಂಡಿದ್ದಾರೆ.

ಶಾಪದ ಸಂದರ್ಭದಲ್ಲೂ ಅಷ್ಟೆ ತನ್ನ ಮಗನ ಗತಿಯೇನು ಎಂದು ಯೋಚಿಸುವುದಕ್ಕೆ, ತಾಯ್ತನದ ಆತಂಕಕ್ಕೆ ಗೌತಮ ಅವಕಾಶವನ್ನೇ ಕೊಡುವುದಿಲ್ಲ. ಇನ್ನು ತಾನಾದರೂ ಆ ಕಂದನ ಮುಂದನ್ನು ಯೋಚಿಸಿದನೆ? ತನ್ನ ತಪಸ್ಸು ತನಗೆ ದೊಡ್ಡದು. ಮುಂದೆ ಆ ಮಗು ತನ್ನ ತಾಯಿ ತಂದೆಯರ ವಿಷಯ ಹೇಳಿಕೊಳ್ಳುವುದೇನು? ಇಷ್ಟೆಲ್ಲ ನೋಡಿದರೆ ಕವಿ ಎಚ್ಚರ ಸಾಲದೆ ಈ ಹುಡುಗನ ಪಾತ್ರವನ್ನು ತುರುಕುವುದಕ್ಕೆ ಎನ್ನಿಸುತ್ತದೆ.

ಇನ್ನು ಶಿಲ್ಪದ ವಿಷಯ. ಇದೊಂದು ಸುಂದರವಾದ ಕಲ್ಪನಾ ಸೌಧ. ದೃಶ್ಯದಿಂದ ದೃಶ್ಯಕ್ಕೆ ಕಥೆ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತದೆ ಮೇಲೆ ದೃಶ್ಯಗಳನ್ನೂ ಒಂದಾದ ಮೇಲೊಂದರಂತೆ ವಿವರವಾಗಿ ನೋಡಿದ್ದೇವಷ್ಟೇ ಅಲ್ಲಿ ಹೇಗೆ ಅವು ನಮ್ಮ ಮನಸ್ಸನ್ನು ಸೆರೆಹಿಡಿದಿಡುತ್ತವೆ ಎಂಬುದು ಸ್ಪಷ್ಟವಾಗಿದೆ. ಭೂಮಿಯಿಂದ ಸ್ವರ್ಗಕ್ಕೆ, ಸ್ವರ್ಗದಿಂದ ಭೂಮಿಗೆ ಏರಿ ಇಳಿದು ಮಾಡಲು ನಮ್ಮ ಮನಸ್ಸು ಸ್ವಲ್ಪವೂ ಕಷ್ಟಪಡುವುದಿಲ್ಲ. ಸ್ವರ್ಗ ನೆರೆಮನೆಯೋ ಎಂಬಂತೆ, ಭೂಮಿ-ಅದು ತಪೋ ಭೂಮಿಯೇ ಆದರೂ-ನಮಗೆ ತೀರ ಪರಿಚಿತ ಎಂಬಂತೆ ಕವಿ ಚಿತ್ರಿಸಿದ್ದಾರೆ. ಅದು ಅವರ ಕೌಶಲದ ಫಲ ಈ ನಾಟಕವು, ನೃತ್ಯ, ಗೀತ, ನರಳಿಕೆ, ರೋದನಗಳ, ದೂರದ ಒಂದು ಗಂಧರ್ವ ನಗರಿಯಾಗಿ ಕಾಣುತ್ತದೆ?

ಪಾತ್ರಗಳು: ಗೌತಮ-ಮಿಥಿಲೆಯ ಬನದಲ್ಲಿ ಅವನು ತಪಸ್ಸಿಗೆ ಕುಳಿತಿದ್ದಾನೆ. ಮನಸ್ಸು ಏಕಾಗ್ರವಾಗಿದೆ. ತಪಸ್ಸೂ ಉಗ್ರವಾಗಿದೆ. ಹೀಗೆ ದೊರೆಯುತ್ತದೆ ಅವನ ಚಿತ್ರ. ರಂಭೆಯ ಮಾತಿನಲ್ಲಿ ಹೇಳುವುದಾದರೆ “ಅವನು ಕೋಪಗೊಂಡರೆ ಮೂರು ಲೋಕಗಳನ್ನೂ ಅಳಿಸಿಹಾಕಿ ಬಿಡಬಲ್ಲ. ಮನಸ್ಸು ಮಾಡಿದರೆ ಮೂರು ಲೋಕಗಳನ್ನೂ ಗಳಿಸಬಲ್ಲ” ಅವನ ಮನಸ್ಸಿನಲ್ಲಿ ಏನಿದೆ, ಯಾವುದನ್ನು ಸಾಧಿಸಲು ತಪಸ್ಸು ಮಾಡುತ್ತಿದ್ದಾನೆ ಇವು ಇಂದ್ರನಿಗೆ ತಿಳಿಯದು. ಆದರೆ ಮನ್ಮಥ ಅವನ ಮನಸ್ಸಿನ ಆಳವನ್ನು ಅಳೆಯುತ್ತಾನೆ. ಅವನು ತಪೋಲುಬ್ಧ-ಎಂದರೆ ತಪಸ್ಸಿನ ಲೋಭ ಅವನಿಗೆ. ‘ಹಣದ ಲೋಭ ಇವನಿಗೆ’ ಎನ್ನುತ್ತಾರಲ್ಲ, ಮಾತಿನಲ್ಲಿ ಹಾಗೆ ಈತನಿಗೆ ತಪಸ್ಸಿನ ವಿಷಯದಲ್ಲಿ ಲೋಭ ಅಲ್ಲದೆ ಸರಸವಾದ ಕಾಮಕ್ಕೆ ಅವನು ದ್ವೇಷಿ, ಹಸಿವು, ನೀರಡಕೆಗಳಂತೆ ಕಾಮ ಜೀವದ ಒಂದು ಅಗತ್ಯ. ಅದನ್ನು ಈತ ತಿರಸ್ಕರಿದ್ದಾನೆ. ಗೆದ್ದಿಲ್ಲ ‘ಮಾಗಿಯಲ್ಲಿ ವಸಂತದಾಸೆ ಅಡಗಿರುವಂತೆ’ ಈ ಋಷಿಯಲ್ಲಿ ಹೆಣ್ಣಿನಾಸೆ ಅಡಗಿದೆ. ಅವನ ಪ್ರಯತ್ನವೂ ಅದನ್ನು ಗೆಲ್ಲುವುದಲ್ಲ. ಸಂಯಮದಿಂದ ಸ್ವರ್ಗವನ್ನು ಸಾಧಿಸುವುದು ಮೋಕ್ಷವನ್ನಲ್ಲ. ಮದನ ಹೇಳುವಂತೆ ಆತ ‘ಮರುಳ ಜೋಗಿ’; ತನ್ನ ಹೃದಯದ ಧರ್ಮವರಿಯದವನು.

ಈ ಮುಂದೆ ಗೌತಮ ಬದಲಾಗುತ್ತಾನೆ. ಕಾಮನ ಬಾಣ ನಿಷ್ಠುರ ತಪಸ್ವಿಯ ಹೃದಯ ಕಾಮಾರ್ದ್ರವಾಗುವಂತೆ ಮಾಡುತ್ತದೆ. ಜಪತಪ ಎಂದು ರಾಗವನ್ನು ಹಿಯ್ಯಾಳಿಸಿದ್ದು ತಪ್ಪಾಯ್ತು ಎಂದುಕೊಳ್ಳುತ್ತಾನೆ. ತಪದ ಸಮಯದಲ್ಲಿ ಸತಿಯ ರೂಪ ಅವನ ಹೃದಯವನ್ನು ಕಲಕಿತಷ್ಟೆ ಅವಳ ದರ್ಶನದಿಂದ ತನ್ನ ವ್ರತ ಮುಗಿಯಿತು ಎಂದುಕೊಳ್ಳುವಷ್ಟ ವಿವೇಕಿಯಾಗುತ್ತಾನೆ. ತಪವನ್ನು ಗಳಿಸಬೇಕು ಎಂಬ ಲೋಭ ತನ್ನ ಎದೆಯಾಳದ ಪ್ರೇಮದ ಧ್ವನಿಯನ್ನು ಮರೆಮಾಚಿತ್ತು ಎಂದು ಕೊಳ್ಳುವಷ್ಟ ತಿಳಿವು, ಇದುವರೆಗಿದ್ದದ್ದು ಕತ್ತಲಿನಲ್ಲಿ ‘ಈಗೆನಗೆ ಬೆಳಗಾಯ್ತು’ ಎಂದುಕೊಳ್ಳುವಷ್ಟು ಜಾಣ್ಮೆ ಅವನಿಗೆ ಬಂದಿದೆ.

ಆದರೆ ಸತಿಯನ್ನು ಕೂಡುವಾಸೆ, ಅವಳನ್ನು ತಣಿಸುವಾಸೆ ಅವನಿಗೆ ಮೂಡುವುದು ತಡವಾಯ್ತು. ಕೌಶಿಕ ಮುನಿ ಮೇನಕೆಯನ್ನು ಇಂದ್ರ ಇಂದ್ರಾಣಿಯನ್ನು (ಎರಡನೆಯ ಹೋಲಿಕೆಯಲ್ಲಿ ಎಂಥ ಧ್ವನಿಯಿದೆ) ಒಲಿಸಿದಂತೆ ಅಹಲ್ಯೆಯನ್ನು ಒಲಿಸುತ್ತೇನೆ ಎಂದು ಅವಸರದಿಂದ ಓಡುವಷ್ಟರಲ್ಲಿ ಅವಳು ಇಂದ್ರನ ಬಾಹುಗಳಲ್ಲಿ ಇಂದ್ರಾಣಿಯಾಗಿ ಹೋಗಿದ್ದಾಳೆ. ಪರಿಸ್ಥಿತಿ ಅರ್ಥವಾಗುವುದೂ ಅವನಿಗೆ ತಡವೇ ಆಯಿತು. ನಿರಾಶೆ ಕೋಪಕ್ಕೆ, ಅಸೂಯೆ ಶಾಪಕ್ಕೆ ದಾರಿಮಾಡಿದವು. ಇಂಥದೊಂದು ಘಟನೆ ನಡೆಯಲು ತಾನು ಎಷ್ಟರಮಟ್ಟಿಗೆ ಕಾರಣ ಎಂಬುದನ್ನು ಯೋಚಿಸುವ ತಾಳ್ಮೆಯಾಗಲೀ, ಅವನಲ್ಲಿ ಉಳಿದಿರಲಿಲ್ಲ.

ಇಂಥ ಘಟನೆ ನಡೆದರೂ ಗೌತಮನಿಗೆ ಬುದ್ಧಿ ಬಂತು ಎಂದು ಹೇಳುವ ಹಾಗಿಲ್ಲ “ಈ ಬೇಗೆಯನ್ನು ನಂದಿಸಲು ಹಿಮಗಿರಿಯ ಶೈತ್ಯವೇ ಸರಿ, ಅಲ್ಲಿಗೆ ಹೋಗಿ ತಪಸ್ಸು ಮಾಡಿ ನನ್ನನ್ನು ನಾನು ತಿಳಿಯುತ್ತೇನೆ, ವಿಶ್ವಾತ್ಮನ ಚಿಂತನೆಯಲ್ಲಿ ನಾನು ಎಂಬುದನ್ನು ಅಳಿಯುತ್ತೇನೆ” ಎನ್ನುತ್ತಾನೆ. ಹೀಗೆ ವಿಫಲ ಪ್ರೇಮಿಯಾದವನು ತಕ್ಷಣ ಆತ್ಮಜ್ಞಾನವನ್ನು ಹಾರೈಸಿ ತಪಸ್ಸಿಗೆ ಹಾರುವುದು ತಪಸ್ಸಿನ ಎಲ್ಲ ನಿಯಮಗಳಿಗೂ ವಿರೋಧವಾದದ್ದು.

ತನಗೆ ಬೇಕಾದದ್ದು ಸಿಕ್ಕದೇ ಹೋದಾಗ, ತನ್ನ ಸತಿ ಅನ್ಯ ಪುರುಷನಲ್ಲಿ ಕೂಡಿದ್ದಾಗ ಹುಟ್ಟುವ ವೈರಾಗ್ಯ ಕ್ಷಣಿಕವಾದದ್ದು. ಅದು ನಿಜವಾದ ತಪಸ್ಸಿಗೆ ದಾರಿ ಮಾಡಿಕೊಡುವುದಿಲ್ಲ. ಗೌತಮನಿಗಾದದ್ದೂ ಹೀಗೆಯೇ. ಅವನು ತಪಸ್ಸನ್ನು ನಿಲ್ಲಿಸಿ ಮತ್ತೆ ಸತಿಯನ್ನು ಹುಡುಕಿಕೊಂಡು ಬರಬೇಕಾಗಿ ಬಂದದ್ದು ಈ ಕಾರಣದಿಂದಲೇ

ಆದರೆ ಆತ ಹಾಗೆ ತಪಸ್ಸಿಗೆ ಹೊರಟ. ಅದರ ಪರಿಣಾಮ ಯಾರೂ ನಿರೀಕ್ಷಿಸಬಹುದಾದದ್ದೇ. ಅವನಿಗೆ ಇಲ್ಲಿ ಆದ ದರ್ಶನ ಎಂಥದು? ಬ್ರಹ್ಮನಲ್ಲ, ‘ಕಾಮೋತ್ತರವಾದ ಒಲವಿನ ಸಂಭೂತಿಯ ದರ್ಶನ.’ ಸರಳವಾದ ಮಾತುಗಳಲ್ಲಿ ಹೇಳುವುದಾದರೆ ‘ಕಾಮ ಕಳೆದ ಪ್ರೇಮ.’ ಅದಕ್ಕೆ ಅವನು ಹಿಮಾಲಯಕ್ಕೆ ಹೋಗಿ ಕೂರಬೇಕಾಗಿರಲಿಲ್ಲ ಸುತ್ತ ತಿರುಗಿ ಜಗತ್ತನ್ನು ನೋಡಿದರೆ ಸಾಕಾಗಿತ್ತು. ಇಲ್ಲ ವಯಸ್ಸು ಕಳೆದಿದ್ದರೂ ಅದು ಒದಗುವ ಸಾಧ್ಯತೆಯೂ ಇತ್ತು! ಅರಿವು ಪಕ್ವವಾದಂತೆ ಅಹಲ್ಯೆಯ ಬಗೆಗೆ ತಾನು ತಳೆದ ನಿಲುವು. ಸಿಡಿಸಿದ ರೋಷ. ನೀಡಿದ ಶಾಪ ಎಲ್ಲ ತಪ್ಪು ಎನಿಸುತ್ತಿತ್ತು. ಹೋಗಲಿ ಅಂಥ ಜಡಮತಿಗೆ ತಪಸ್ಸಿನಿಂದಲಾದರೂ ಅದು ಲಭ್ಯವಾಯಿತಲ್ಲ. ಅದೇ ಸಮಾಧಾನದ ಸಂಗತಿ.

ಇಂದ್ರ : ವಾಲ್ಮೀಕಿ ರಾಮಾಯಣದ ಇಂದ್ರನಂತೆ ಪು.ತಿ.ನ. ಅವರ ಇಂದ್ರನೂ ನಮ್ಮ ತಿರಸ್ಕಾರಕ್ಕೆ ಪಾತ್ರನಾಗುವ ವ್ಯಕ್ತಿಯೇ. ಹೇಗೋ ಮಾಡಿ ಪದವಿಗೆ ಬಂದು ಅದನ್ನು ಉಳಿಸಿಕೊಳ್ಳಲು ಏನು ಮಾಡಲು ಹೇಸದ ಆಧುನಿಕರನ್ನು ಗಳಿಗೆ ಗಳಿಗೆಗೂ ಅವನು ನೆನಪಿಗೆ ತರುತ್ತಾನೆ. ಯಾರೋ ಪ್ರತಿಪಕ್ಷದ ಸ್ಪರ್ಧಿಯನ್ನು ತನ್ನ ಕಡೆಯ ಗೂಂಡಾವೊಬ್ಬ ‘ಹೊಡೆದು ಬಂದೆ, ಸ್ವಾಮಿ’ ಎಂದರೆ ಈಗಿನ ನಾಯಕ-‘ಭೇಷ್‌, ಇದನ್ನು ನಿನ್ನ ಹೆಸರಿನಲ್ಲಿ ಬರೆದುಕೊಂಡಿದ್ದೇನೆ, ಮುಂದೆ ಸಮಯ ಬಂದಾಗ ಇದಕ್ಕೆ ತಕ್ಕ ಬಹುಮಾನ ನೀಡುತ್ತೇನೆ’. ಎನ್ನುತ್ತಾನಲ್ಲಾ ಹಾಗೆ ಮಾತನಾಡುತ್ತಾನೆ ಇಂದ್ರ. “ಗೌತಮನ ತಪಸ್ಸಿನ ಆಳವನ್ನು ತಿಳಿಯಲು ಬಂದೆ” ಎಂದು ರಂಭೆ ಹೇಳಿದರೆ-ತನ್ನ ಸಿಂಹಾಸನವನ್ನು ಉಳಿಸಿಕೊಳ್ಳುವುದರಲ್ಲಿ ಸದಾಕಾತರನಾಗಿರುವ ಈ ದೊಡ್ಡ ಮನುಷ್ ಹೇಳುತ್ತಾನೆ: “ನೀನು ಉಚಿತವಾದುದನ್ನೇ ಮಾಡಿದ್ದೆಯೆ. ಮಾಡಬೇಕಾದ ಕಾರ್ಯ ಇಂಥದು ಎಂಬುದನ್ನು ಬಲ್ಲವಳು ನೀನು. ಇದನ್ನು ಮನಸ್ಸಿಗೆ ತಂದುಕೊಂಡಿದ್ದೇವೆ ಮುಂದೆ ಹೇಳು” ಎನ್ನುತ್ತಾನೆ.

ತನ್ನ ಸಿಂಹಾಸನವನ್ನು ಅಲುಗಿಸಲು ತಪಸ್ಸು ಮಾಡುತ್ತಿರುವವನ ವಿಷಯದಲ್ಲಿ ಅಸಹನೆ, ಅಸೂಯೆಗಳು ಹೇಗೋ ಹಾಗೆಯೇ ಪರಸತಿಯ ಸೌಂದರ್ಯದ ವಿಷಯದಲ್ಲಿ ಕುತೂಹಲವೂ ಅವನಿಗೆ ಸಹಜ ಪ್ರವೃತ್ತಿ. ಮೊದಲ ನೋಟದಲ್ಲಿ ‘ಪರಸತಿ ಕುತೂಹಲವು ಛೇ, ನನಗೆ ತರವಲ್ಲ’ ಎಂದುಕೊಳ್ಳುತ್ತಾನೆ ಆದರೆ ಈ ನೀತಿಭಾವನೆ ಬಹಳ ಕಾಲ ಉಳಿಯುವುದಿಲ್ಲ. ಮನ್ಮಥ ಬಿಟ್ಟ ಬಾಣ ನೆಟ್ಟ ಮೇಲೆ ‘ಸೋತೆನಿಂದು ಚಲುವೆಗೆ’ ಎನ್ನುತ್ತಾನೆ. ಅವನು ಸೋತದ್ದು ಏಕೆ? ಅದನ್ನು ಅವನೇ ತರ್ಕಿಸುತ್ತಾ ಹೋಗುತ್ತಾನೆ. ತಾನು ನೂರಾರು ಹೆಣ್ಣುಗಳನ್ನು ಕಂಡವನಾದರೂ ಇವಳಿಗೆ ತನ್ನ ಹೃದಯ ತೆರೆದ ತರ ಇನ್ನಾರಿಗೂ ತೆರೆದದ್ದಿಲ್ಲ. ಇನ್ನು ಇದು ಸರಿಯೇ ತಪ್ಪೇ ಎಂಬ ಪ್ರಶ್ನೆ ಒಲಿದವನಿಗೆ ತರ್ಕದ ಪ್ರಶ್ನೆ ಏಕೆ? ಋಷಿ ಶಪಿಸಿದರೋ? ನರನ ಬೆದರಿಕೆಗೆ ಹೆದರಿಕೊಳ್ಳುವುದು ದೇವರ ಧರ್ಮವೆ?

ಮನ್ಮಥನು ತನಗೆ ಅಹಲ್ಯೆ ದೊರೆಯುವುದರಲ್ಲಿ ಸಹಾಯ ಮಾಡುತ್ತೇನೆ ಎಂದು ಒಪ್ಪಿದಾಗ, ಅಥವಾ ಅವನು ಹಾಗೆ ಮಾಡುವಂತೆ ಇವನೇ ಅವನನ್ನು ಒಪ್ಪಿದಾಗ ಇವನಿಗಾದ ಆನಂದ ಎಷ್ಟು? ‘ಮಿಕ್ಕಿನ ರಾಗಗಳೆಲ್ಲ ಹುಸಿ, ಅವಳನ್ನು ಪಡೆಯುವ ಪುಣ್ಯವೇ ಸತ್ಯ’ ಇದು ಅವನ ಉದ್ಗಾರ.