ಕಾವ್ಯ ಎಂದರೇನು? ಅದರ ಜೀವಾಳ ಯಾವುದು? ರಸವೆ? ಧ್ವನಿಯೇ? ರಸವೇ ಆದರೆ ಅದು ಇರುವುದು ಎಲ್ಲಿ: ಕವಿಯಲ್ಲಿಯೇ? ಸಹೃದಯನಲ್ಲಿಯೇ? ಧ್ವನಿ ಆದರೆ ಅದರ ಸ್ವರೂಪ ಏನು?-ಇಂತಹ ಅನೇಕ ಪ್ರಶ್ನೆಗಳು ಕಾವ್ಯದಲ್ಲಿ ಕುತೂಹಲ ಉಳ್ಳ ಅನೇಕರನ್ನು ಸಾವಿರಾರು ವರ್ಷಗಳಿಂದ ಕಾಡಿವೆ. ಅವಕ್ಕೆ ಅಲಂಕಾರಿಕರು, ಕಾವ್ಯ ಮೀಮಾಂಸಕರು, ಕವಿಗಳು ಅನೇಕ ರೀತಿಯ ಉತ್ತರಗಳನ್ನು ನೀಡಿದ್ದಾರೆ. ಒಂದು ಸ್ವಾರಸ್ಯದ ಸಂಗತಿ ಎಂದರೆ ಕವಿಗಳೇ ಅನೇಕ ಸಲ ತಮ್ಮ ಕಾವ್ಯ ಸೃಷ್ಟಿಯ ಮೂಲವನ್ನು ಬೆದಕಿ ನೋಡಿ ಅದರ ಸ್ವರೂಪವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ. ಇಂಗ್ಲೆಂಡಿನಲ್ಲಿ ವರ್ಡ್ಸ್‌ವರ್ತ್‌, ಷೆಲ್ಲಿ. ಕೋಲ್‌ರಿಜ್‌ಇಂಥ ಪ್ರಯತ್ನಗಳನ್ನು ನಡೆಸಿದ ಕವಿಗಳಲ್ಲಿ ಕೆಲವರು. ಕನ್ನಡದ ಕವಿಗಳಲ್ಲಿ ಕುವೆಂಪು, ಬೇಂದ್ರೆ, ಪುತಿನ ಮುಂತಾದ ಹಿರಿಯ ಕವಿಗಳು ತಮ್ಮ ಅನುಭವಗಳು ಮಾತಿನಲ್ಲಿ ಅಭಿವ್ಯಕ್ತಿಯನ್ನು ಪಡೆಯಲು ನಡೆಸಿದ ಹೋರಾಟದ ಪ್ರಕ್ರಿಯೆಗಳು ವಿಶ್ಲೇಷಿಸುವ ಪ್ರಯತ್ನ ನಡೆಸಿದ್ದಾರೆ. ಪು.ತಿ.ನ. ಅವರು ನಡೆಸಿದ ಅಂಥ ಪ್ರಯತ್ನಗಳಲ್ಲಿ ಹೆಚ್ಚಿನ ಭಾಗ ‘ಕಾವ್ಯ ಕುತೂಹಲ’ ಎಂಬ ಕಾವ್ಯಮೀಮಾಂಸೆಯ ಪ್ರಬಂಧಗಳ ಸಂಕಲನದಲ್ಲಿ ರೂಪುಗೊಂಡಿವೆ.

ಮೊದಲನೆಯದಾದ ಪ್ರಶ್ನೆ ‘ಕಾವ್ಯದ ಜೀವಾಳ’ ಯಾವುದು ಎಂಬುದು. ಅದೇ ಹೆಸರಿನ ಪ್ರಬಂಧದಲ್ಲಿ ಪುತಿನ ಈ ಪ್ರಶ್ನೆಗೆ ಉತ್ತರ ಕೊಡಲು ಪ್ರಯತ್ನಿಸಿದ್ದಾರೆ. ಪ್ರಶ್ನೆ ಇದು: ಕಾವ್ಯದ ಜೀವಾಳ ಇರುವುದೆಲ್ಲಿ? ಕಾವ್ಯದ ವಸ್ತುವಿನಲ್ಲಿಯೇ? ಎಂದರೆ ಕಾವ್ಯದ ವಸ್ತು ಮುಖ್ಯವೆ? ಅಥವಾ ಅದರ ರೂಪಾಂಶವೆ? ಪದ್ಯವಾದರೆ ಯಾವ ಛಂದಸ್ಸಿನಲ್ಲಿ ? ಛಂದಸ್ಸು ಇಲ್ಲದ ಪದ್ಯರೂಪದಲ್ಲಿಯೇ?-ಅಲ್ಲದೆ ರೀತಿ ಅಥವಾ ಶೈಲಿ ಮುಖ್ಯವೆ? ಪದಗಳನ್ನು ಬಳುವ ಕೌಶಲವೋ ಸಂಸ್ಕೃತವೋ-ಕನ್ನಡವೋ ಅಥವಾ ಅವುಗಳ ಮಿಶ್ರಣವೋ?

ಪುತಿನ ಹೇಳುತ್ತಾರೆ: ಕಾವ್ಯದ ಜೀವಾಳ ಇರುವುದು ಇವುಗಳಲ್ಲಿ ಯಾವುದರಲ್ಲೂ ಅಲ್ಲ. ಹಿಂದಿನ ಅಲಂಕಾರಿಕರು ರಸ ಮುಖ್ಯ, ಧ್ವನಿ, ಮುಖ್ಯ, ರೀತಿಯೇ ಕಾವ್ಯದ ಆತ್ಮ-ಹೀಗೆಲ್ಲಾ ವಾದಗಳನ್ನು ಮಂಡಿಸಿದ್ದನ್ನು ನೆನೆದರೆ ಪುತಿನ ಅವರ ಉತ್ತರ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಪುತಿನ ಅವರ ಆಲೋಚನೆಯ ಪ್ರಖರತೆ, ಆ ಪ್ರಖರತೆಯ ಸ್ವಂತಿಕೆ ಇರುವುದು ಈ ಉತ್ತರವನ್ನು ಅವರು ಕಾರಣಸಹಿತವಾಗಿ ರೀತಿಯಲ್ಲಿ.

ಮುಂದೆ ಹೇಳುವುದೆಲ್ಲ ಪುತಿನ ಅವರ ವಾದದ ಸಂಗ್ರಹ. ಆದ್ದರಿಂದ ಪದೇ ಪದೇ ಪುತಿನ ಹೀಗೆ ಹೇಳುತ್ತಾರೆ ಎಂದು ಹೇಳುವುದಿಲ್ಲ. ಇಲ್ಲಿನ ಅಭಿಪ್ರಾಯಗಳೆಲ್ಲ ಅವರವೇ. ಅವರವು ಅಲ್ಲ ಎಂದಾಗ ಹಾಗೆ ಸೂಚಿಸುತ್ತೇವೆ.

“ಕವಿಗೆ ಹುಟ್ಟಿನಿಂದಲೇ ಪ್ರಾಪ್ತವಾದ ಎರಡು ಗುಣಗಳಿರಬೇಕೆಂದು ತೋರುತ್ತದೆ: ಭವದ ತೀವ್ರ ಸಂವೇದನಾರೂಪವಾದ ಪ್ರಜ್ಞೆ-ಇದನ್ನು ಬೇಕಾದರೆ ಭವನಿಮಜ್ಜನ ಚಾತುರ್ಯ ಎಂದು ಕರೆಯಬಹುದು-ಮತ್ತು ಆ ನಿಮಗ್ನತೆಯಿಂದ ಪಾರಾಗಿ ಬೇರೆಯಾಗಿ ನಿಲ್ಲುವ ಲಘಿಮಾ ಕೌಶಲ. ಈ ಎರಡು ಗುಣಗಳು ಕವಿಗಿದ್ದ ಹೊರತು ಕಾವ್ಯ ಸಿದ್ಧಿಸಲಾರದು.”

ಮೇಲಿನ ಮಾತುಗಳು ಕಾವ್ಯದ ಹುಟ್ಟು ಹೇಗೆ ಎಂಬುದನ್ನು ತಿಳಿಸುತ್ತವೆ. ಕವಿಯ ಮನಸ್ಸು ಈ ಲೋಕದ ಕ್ರಿಯೆಗಳಲ್ಲಿ ತೊಡಗಬೇಕು. ಎಂದರೆ ಕವಿ ತನ್ನ ಸುತ್ತಣ ಜಗತ್ತಿನಲ್ಲಿ ಆಸಕ್ತನಾಗಬೇಕು.‘ಜಗತ್ತು’ ಎಂಬ ಮಾತು ನಮ್ಮ ಸುತ್ತ ಇರುವ ಸಮಕಾಲೀನ ಪ್ರಪಂಚ ಎಂಬುದನ್ನಷ್ಟೇ ಸೂಚಿಸುವುದಿಲ್ಲ. ಸಮಕಾಲೀನ ಆಗುಹೋಗುಗಳು ಆ ‘ಜಗತ್ತಿ’ನ ಒಂದು ಅತ್ಯಲ್ಪ ಭಾಗ ಮಾತ್ರ. ಇಡೀ ವಿಶ್ವದ ಸಮಸ್ತ ವ್ಯವಹಾರಗಳನ್ನೂ “ಜಗತ್ತು” ಎಂಬುದು ಒಳಗೊಳ್ಳುತ್ತದೆ. ವಿಶ್ವದ ಎಲ್ಲ ಮಹಾಕಾವ್ಯಗಳು, ಎಲ್ಲ ಮಹಾಚಿಂತಕರ ಚಿಂತನೆಗಳು, ಇತಿಹಾಸ, ಕಲೆ, ವಿಜ್ಞಾನ, ನಾಗರಿಕತೆಗಳ ಉದಯ, ವೃದ್ಧಿ, ಅವಸಾನ, ಮಾನವನ ಮಹತ್ಸಾಧನೆಗಳು, ಮಹಾಪರಾಧಗಳು, ಎಲ್ಲ ಕ್ಷೇತ್ರಗಳಲ್ಲಿ ಉದಿಸಿದ ಮಹಾ ವಿಭೂತಿಗಳು-ಇಷ್ಟೆಲ್ಲ ಕವಿಯ ಮನಸ್ಸಿನ ಪ್ರವೃತ್ತಿಗೆ ಆಶ್ರಯ ನೀಡುತ್ತದೆ. ಸರಳವಾಗಿ ಹೇಳುವುದಾದರೆ ಇವುಗಳನ್ನೆಲ್ಲ ಕವಿಯ ಮನಸ್ಸು ವಿವೇಚಿಸಬೇಕಾಗುತ್ತದೆ. ಕವಿ ದೊಡ್ಡವನಾದಷ್ಟು ಅವನ ಕಾವ್ಯ ಅಥವಾ ಕೃತಿ ದೊಡ್ಡದಾಗಬೇಕಾದಷ್ಟು ಅವನ ಪ್ರಜ್ಞೆ ಇವುಗಳಲ್ಲಿ ದಷ್ಟು ಹೆಚ್ಚಿನದನ್ನು ಒಳಗೊಳ್ಳಬೇಕಾಗುತ್ತದೆ. ಸಮಕಾಲೀನವಾದ ವಿಷಯಗಳನ್ನು ಯುದ್ಧ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಮಸ್ಯೆಗಳು-ಇವುಗಳನ್ನು ಕವಿಯ ಮನಸ್ಸು ಖಂಡಿತವಾಗಿಯೂ ಆಸಕ್ತಿಯಿಂದ ಗಮನಿಸುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ಇವೆಲ್ಲವನ್ನೂ ಒಟ್ಟಾರೆ ‘ಭವ ನಿಮಜ್ಜನ ಚಾತುರ್ಯ’ ಎಂದು ಕರೆಯಲಾಗಿದೆ.

ಮೇಲಿನ ಮಾತಿನ ಅರ್ಥ ಹೀಗಾಗುತ್ತದೆ. ಭವ ಎಂದರೆ ಸಷ್ಟಿ ಏನೇನು ಅಸ್ತಿತ್ವಕ್ಕೆ ಬಂದಿವೆಯೋ-ಚಂದ್ರ ಸೂರ್ಯ ತಾರಗೆಗಳಿಂದ ಹಿಡಿದು ಸಣ್ಣ ಹುಲ್ಲಿನ ಎಸಳಿನವರೆಗೆ-ಅವೆಲ್ಲಾ ಭವ. ಕಣ್ಣಿಗೆ ಕಾಣುವ, ಅನುಭವಕ್ಕೆ ಬರುವ ವಸ್ತುಗಳು ಮಾತ್ರ ಎಂದು ಇದರ ಅರ್ಥವಲ್ಲ, ನಮ್ಮ ಕಣ್ಣಿಗೆ ಕಾಣದ, ಉದಾಹರಣೆಗೆ ಸೂಕ್ಷ್ಮದರ್ಶಕ ಯಂತ್ರ ಮಾತ್ರ ತೋರಿಸಬಲ್ಲ ಅಣುಗಳು, ಕವಿಗೆ ಕೇಳದ ಆದರೆ ಬೇರೆ ವಿಧಾನದಿಂದ ಇವೆ ಎಂದು ಸಾಧಿಸಲು ಸಾಧ್ಯವಾಗಿರುವ ಶಬ್ದಗಳು-ಇವೆಲ್ಲವನ್ನು ‘ಭವ’ ಎಂಬುದು ಒಳಗೊಳ್ಳುತ್ತದೆ. ಕವಿ ಈ ‘ಭವ’ದಲ್ಲಿ ‘ನಿಮಜ್ಜನ’ ಹೊಂದುವ ಎಂದರೆ ಅದರಲ್ಲಿ ಮುಳುಗುವ ‘ಚಾತುರ್ಯವನ್ನು ಹೊಂದಿರಬೇಕು. ಎಂದರೆ ಜಗತ್ತಿನ ಸಕಲ ಆಗುಹೋಗುಗಳನ್ನೂ ಅವುಗಳಲ್ಲಿ ಪ್ರವೇಶಿಸಿ, ಅರಿತು ಅನುಭವಿಸುವ ಸಾಮರ್ಥ್ಯವನ್ನೂ ಪಡೆದಿರಬೇಕು. ಒಂದು ಉದಾಹರಣೆಯಿಂದ ಇದು ಸ್ಪಷ್ಟವಾಗಬಹುದು. ಕಾವ್ಯದ ಪಾತ್ರಗಳಾದ ರಾಮ-ಸೀತೆ, ದುಷ್ಯಂತ-ಶಕುಂತಲೆ ಇವರ ಪ್ರೇಮದ ಸ್ವರೂಪ, ವಿರಹದ ತೀವ್ರತೆ ಇವುಗಳನ್ನು ಅವನು ಮಾನಸಿಕವಾಗಿ ಒಳಹೊಕ್ಕು ನೋಡಬೇಕು. ಇದರಲ್ಲಿ ‘ಚಾತುರ್ಯ’ ಏನು ಎಂಬ ಪ್ರಶ್ನೆ ಏಳುತ್ತದೆಯಷ್ಟೆ? ನೀರಿನಲ್ಲಿ ಬೀಳುವವನಿಗೆ ಈಜು ಬರದಿದ್ದರೆ ಏನಾಗುತ್ತದೆ? ಹಾಗೆಯೇ ಈ ಜಗತ್ತಿನಲ್ಲಿ ತೊಡಗುವವನಿಗೆ ಯಾರ ಕಾಲಿಗೂ ತೊಡಕಾಗದಂತೆ, ಇತರರನ್ನು ಮುಳುಗಿಸದಂತೆ, ಅಲ್ಲೇ ಮುಳುಗದಂತೆ, ಆದರೆ ಎಲ್ಲವನ್ನು ಅರಿಯುವಂತೆ ವ್ಯವಹರಿಸುವ ಕಲೆ ಬೇಕು. ಇದನ್ನೇ ‘ಭವ ನಿಮಜ್ಜನ ಚಾತುರ್ಯ’ ಎಂದು ಕರೆದಿರುವುದು.

ಅದೊಂದು ಸಿದ್ಧಿಸಿದರೇ ಕಲೆ ಅಥವಾ ಕಾವ್ಯ ಹುಟ್ಟುವುದಿಲ್ಲ. ಈ ಲೋಕದಲ್ಲಿ ಮೇಲೆ ಹೇಳಿದಂತೆ ವ್ಯವಹಿರಿಸುವ ಚಾತುರ್ಯವು ಕಲಾವಿದನಿಗಲ್ಲದೆ ಬೇರೆಯವರಿಗೂ ಇರುವುದು ಸಾಧ್ಯ. ಕಲಾ ಸೃಷ್ಟಿಗೆ ಅಗತ್ಯವಾದ ಇನ್ನೊಂದು ‘ಅವಳಿ’ ಅಂಶವೆಂದರೆ ‘ಲಘಿ-ಮಾ ಕೌಶಲ.’

‘ಲಘಿಮಾ’ ಎಂದರೆ ಹಾರುವುದು, ಹಾರಿ ಪಾರಾಗುವುದು. ಕವಿ ಭವದಲ್ಲಿಯೇ ಎಂದರೆ ಜಗತ್ತಿನ ಆಗುಹೋಗುಗಳಲ್ಲಿಯೇ ತೊಡರಿಕೊಂಡರೆ ಕಾವ್ಯಸೃಷ್ಟಿಯಾಗುವುದಿಲ್ಲ ಇದು ಸ್ಪಷ್ಟವಾಗಬೇಕಾದರೆ ಕಾವ್ಯಮೀಮಾಂಸೆಯ ಮತ್ತೊಂದು ಮೂಲ ಸೂತ್ರ ಅರ್ಥವಾಗುವುದು ಅವಶ್ಯ. ಶೋಕ ಎಂಬ ಭಾವವು ಕಲೆಯಲ್ಲಿ ಪರಿವರ್ತನೆ ಹೊಂದಿ ಕರುಣ ಎಂಬ ರಸವಾಗುತ್ತದೆ. ಇದೊಂದು ವಿಚಿತ್ರ ಕ್ರಿಯೆ. ಸುಲಭವಾಗಿ ವಿವರಿಸಲಾರದ ಕ್ರಿಯೆ. ಒಂದು ಉದಾಹರಣೆ ತೆಗೆದುಕೊಳ್ಳೋಣ. ಯಾರೋ ನಮಗೆ ಬೇಕಾದವರು ಸತ್ತಿದ್ದಾರೆ. ಕೂಡಲೇ ನಮ್ಮ ಪ್ರತಿಕ್ರಿಯೆ ಶೋಕವನ್ನು ವ್ಯಕ್ತಪಡಿಸುವುದು. ಆಗ ನಮ್ಮ ಭಾವವು ಕ್ರಿಯಾಭಿಮುಖವಾಗುತ್ತದೆ. ಸತ್ತವರ ಸಮೀಪದವರಿಗೆ ಸಮಾಧಾನ ಹೇಳುವುದು, ಅವರ ಜೊತೆ ಸ್ಮಶಾನಕ್ಕೆ ಹೋಗಿ ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದು ಇತ್ಯಾದಿ. ಇದು ಕವಿಗೂ ಕವಿಯಲ್ಲದವನಿಗೂ ಸಮಾನ ಆದರೆ ಕವಿಯಾದವನು ಮನಸ್ಸು ಅಷ್ಟಕ್ಕೇ ನಿಲ್ಲುವುದಿಲ್ಲ. ಸಾವಿನ ಘಟನೆಯಿಂದ ತನ್ನನ್ನು ತಾನು ಬಿಡಿಸಿಕೊಂಡು ದೂರ ನಿಲ್ಲುತ್ತದೆ. ಸಾವಿನ ಹಿಂದು ಮುಂದುಗಳನ್ನು ಕುರಿತು ಪರಿಭಾವಿಸುತ್ತದೆ. ಸತ್ತವನ ಹತ್ತಿರದವರ ಮನಸ್ಸಿನ ವ್ಯಾಪಾರಗಳನ್ನು ಹತ್ತು ರೀತಿಯಿಂದ ಕಲ್ಪಿಸಿಕೊಳ್ಳುತ್ತದೆ. ಅದಕ್ಕೆ ಅಭಿವ್ಯಕ್ತಿ ಕೊಟ್ಟಾಗ ಶೋಕರಸ ಪ್ರಧಾನವಾದ ಕಾವ್ಯಭಾಗವೋ ಕವನವೋ ಸೃಷ್ಟಿಯಾಗುತ್ತದೆ. ಕಾಳಿದಾಸನ ರತಿ ವಿಲಾಸ, ಷಡಕ್ಷರಿಯ ತಿರುಕೊಳವಿನಾಚಿಯ ಪ್ರಲಾಪ, ಇಂಥ ಅನೇಕ ಪ್ರಾಚೀನ ಕಾವ್ಯಭಾಗಗಳೂ ಆಧುನಿಕರ ಅನೇಕ ಶೋಕಗೀತೆಗಳೂ ಇಂಥ ಸೃಷ್ಟಿಗೆ ನಿದರ್ಶನಗಳು. ಇಲ್ಲಿನ ‘ಶೋಕ’ ಎಂಬ ಭಾವ ‘ಕರುಣ’ ಎಂಬ ರಸ ಆದದ್ದು ಹೇಗೆ? ಕವಿಯ ‘ಲಘಿಮಾ ಕೌಶಲ’ದಿಂದ. ಕವಿಯ ಮನಸ್ಸು ತನ್ನ ಪರಸರದಿಂದ ದೂರಕ್ಕೆ, ಪರಿಸರವು ಸ್ಪಷ್ಟವಾಗಿ ಕಾಣುವಷ್ಟು ಎತ್ತರಕ್ಕೆ ಹಾರುತ್ತದೆ. ಆ ‘ದೂರ’ ‘ಎತ್ತರ’ಗಳನ್ನೂ ಸಾಧಿಸುವ ಕಲೆನ್ನೂ ‘ಲಘಿಮಾ ಕೌಶಲ’ ಎಂದು ಕರೆಯಲಾಗಿದೆ. ಇದನ್ನು ಪುತಿನ ತಮ್ಮ ಪ್ರಬಂಧದಲ್ಲಿ ಸಂಗ್ರಹಿಸಿ ಹೀಗೆ ಹೇಳಿದ್ದಾರೆ:

“(ಆದುದರಿಂದ) ವಸ್ತುವಿನಿಂದ ಕವಿತ್ವಕ್ಕೆ ಉನ್ನತಿಯಾಗಲಿ ಅವನತಿಯಾಗಲಿ ಲಭಿಸದು ಆ ವಸ್ತುವಿನ ವಿಷಯದಲ್ಲಿ ಕವಿಯ ಮನಸ್ಸು ನಿಲ್ಲುವ ನೆಲೆಯ ಬೆಲೆಯಿಂದ ಆ ಕಾವ್ಯಕ್ಕೆ ಬೆಲೆ. ಕವಿ ತನ್ನ ಅನುಭವಗಳಿಂದ ತನ್ನನ್ನು ಪ್ರತ್ಯೇಕಿಸಿಕೊಂಡು ಅದನ್ನು ನಿರೂಪಿಸುತ್ತಾ ನಮಗಾಗಿ ಬಣ್ಣಿಸುವ ಜಾಣ್ಮೆಯ ಮೇಲೆ ಅದರ ಬೆಲೆ ನಿಲ್ಲುತ್ತದೆ. ಕವಿಯ ಕೌಶಲವಿರುವುದಿ ಎಡೆಯಲ್ಲಿ-ಭವದಲ್ಲಿ ಅಲೆಯಂತೆ ಮೈಗರೆದು ; ಕಣದಂತೆ ಒಂದುಗೂಡಿ, ಸುದೂರದಲ್ಲಿ ಎಂದರೆ, ಎಲ್ಲಿ ಲೌಕಿಕಭಾವ ಉಲ್ಭಣಿಸಿ ರಸಚ್ಯುತಿಯನ್ನು ತರುವುದಿಲ್ಲವೋ ಆ ದೂರದಲ್ಲಿ ತೋರಿ, ತಾನೆ ಅದು ಎಂಬಂತೆ ಹಾಗೂ ಅದಲ್ಲವೆಂಬಂತೆ ಯೋಗೈಶ್ವರ್ಯವನ್ನು ಪ್ರದರ್ಶಿಸುವ ಚಾತುರ್ಯದಲ್ಲಿ.”

. ಅಸಂಭಾವ್ಯತೆಯಿಂದ ಕಾವ್ಯಕ್ಕೆ ಬರುವ ರಮ್ಯತೆ

ಕವಿಗಳು ಅನೇಕ ‘ಅಸಂಭಾವ್ಯ’ಗಳನ್ನು ಕಾವ್ಯವಸ್ತುಗಳನ್ನಾಗಿ ಮಾಡಿಕೊಳ್ಳುತ್ತಾರೆ. ‘ಅಸಂಭಾವ್ಯ’ ಎಂದರೆ ಸಾಮಾನ್ಯವಾಗಿ ಪ್ರಕೃತಿ ನಿಯಮಗಳಿಗೆ ಅನುಸಾರವಾಗಿ ನಡೆಯಲು ಸಾಧ್ಯವಲ್ಲದ್ದು. ಉದಾಹರಣೆಗೆ ಸಮುದ್ರವನ್ನು ಕಪಿಯೊಂದು ಹಾರುವುದು; ಸಮುದ್ರಕ್ಕೆ ಕಪಿಗಳು ಬಂಡೆಗಳಿಂದ ಸೇತುವೆ ಕಟ್ಟುವುದು. ಆದರೆ ರಾಮಾಯಣ ಕಾವ್ಯದಲ್ಲಿ ಇಂಥವು ನಡೆದಿದೆ. ಇಂಥ ‘ಅಸಂಭಾವ್ಯ’ಗಳನ್ನು ಸಹೃದಯರು ಹೇಗೆ ಸ್ವೀಕರಿಸುತ್ತಾರೆಂಬುದನ್ನು ಅಂಥ ‘ಅಸಂಭಾವ್ಯ’ಗಳಿಂದ ಕವಿಗಳು ಯಾವ ಬಗೆಯ ಪ್ರಯೋಜನಗಳನ್ನು ಸಾಧಿಸಿದ್ದಾರೆ ಎಂಬುದನ್ನು ಕವಿ ಪುತಿನ ಮೇಲಿನ ಹೆಸರಿನ ಪ್ರಬಂಧದಲ್ಲಿ ಪರಿಶೀಲಿಸಿದ್ದಾರೆ.

ನೇಮಿಚಂದ್ರನೆಂಬ ಕವಿ ಇತರ ಕವಿಗಳು ಬಳಸಿಕೊಂಡಿರುವ ಈ ಅಸಂಭಾವ್ಯಗಳನ್ನು ಮುಗಿಲಿಗೇರಿಸಿ ಮುಕ್ತಕಂಠದಿಂದ ಹೊಗಳಿದ್ದಾನೆ. ಕವಿ ಸಂತತಿಯು ಕೆಡಲಿಗೆ ಸೇತುವೆಯನ್ನು ಕಟ್ಟಲಿ ಬಿಡಲಿ, ಹರವನ್ನು ನರನು (ಅರ್ಜುನ) ಗಂಟಲ ಬಳೆಯನ್ನೆತ್ತಿ ತುಳಿಯಲಿ ಬಿಡಲಿ (ಪಾಶುಪತಾಶ್ತ್ರವನ್ನು ಪಡೆಯುವ ಸಂದರ್ಭ), ವಾಮನನ ಪಾದವು ಮುಗಿಲನ್ನು ಮುಟ್ಟಿ ಅಳೆಯಲಿ ಬಿಡಲಿ (ಬಲಿ ಚಕ್ರವರ್ತಿಯ ಕಥೆ), ಕವೀಂದ್ರರು ತಮ್ಮ ಕಾವ್ಯದಲ್ಲಿ ‘ಕಟ್ಟಿದರು,’ ಮೆಟ್ಟಿಸಿದರು, ಮುಟ್ಟಿಸಿದರು ಭಲಾ ಎಂಥ ಚಮತ್ಕಾರ ಅವರದ್ದು.”

ಇದಕ್ಕೆ ಪ್ರತಿಯಾಗಿ ಒಬ್ಬ ಪಂಡಿತ ಕವಿ ಕೊರಗುತ್ತಾನೆ. ‘ಏನಿದು, ಅನ್ಯಾಯ ಕಲ್ಲಿನಿಂದ ಕಡಲಿಗೆ ಸೇತುವೆ ಕಟ್ಟಿ ಕಪಿಗಳಿಂದ ರಕ್ಕಸರನ್ನು ಸದೆಬಡಿದನಂತೆ ರಾಮ, ಕಣಿಗಳಿಂದ ಆಕಾಶಕ್ಕೆ ಬಲೆಗಟ್ಟಿ ಮಲೆಯನ್ನು ತಡೆದನಂತೆ ಅರ್ಜುನ, ಸಾಗರವನ್ನು ಹೀರಿದನಂತೆ ಅಸಸ್ತ್ಯ-ಹೀಗೆ ದೊಡ್ಡ ಹೆಸರಿನವರು ಏನು ಹೇಳಿದರೂ ನಡೆಯುತ್ತದೆ; ನಾವು ಎಷ್ಟೋ ಶಾಸ್ತ್ರಗಳನ್ನು ಓದಿ ಎಷ್ಟು ತರ್ಕಬದ್ಧವಾಗಿ ಎಂಥ ಕಾವ್ಯವನ್ನು ರಚಿಸಿದರೂ ಹೇಳುವವರೇ ಇಲ್ಲ.

ಇಬ್ಬರದು-ಕವಿಯದು, ಬರಿಯ ತಾರ್ಕಿಕನದು-ದೃಷ್ಟಿಗಳು ಬೇರೆ ಬೇರೆ ಇಬ್ಬರ ಅಳತೆಗೋಲುಗಳೂ ಬೇರೆ ಬೇರೆ. ಕವಿಯ ಉದ್ದೇಶ ರಸಾನುಭವವನ್ನು ಪಡೆಯುವುದು ಮತ್ತು ಹಾಗೆ ಪಡೆದ ರಸಾನುಭವವನ್ನು ಇತರರಿಗೆ ನೀಡುವುದು. ಹಾಗೆ ರಸಾನುಭವವನ್ನು ಪಡೆಯುವುದಕ್ಕೂ ಅವನು ಅನುಸರಿಸಬೇಕಾದದ್ದು ರಸದ ಹಾದಿಯೇ ಹೊರತು ತರ್ಕದ ಹಾದಿಯಲ್ಲ. ಪುತಿನ ತಾರ್ಕಿಕನನ್ನು-ಎಂದರೆ ತರ್ಕಬದ್ಧವಾಗಿ ಇದು ಸರಿಯಲ್ಲವೇ ಎಂದು ವಾದಿಸುವವರನ್ನು-ಜಡ-ಜೀವ-ಪಾರಮ್ಯವಾದಿ ಎಂದು ಕರೆದಿದ್ದಾರೆ. ಅದರ ಅರ್ಥ ಹೀಗೆ: ಜಡ ಮತ್ತು ಜೀವಗಳೇ ಎಲ್ಲಕ್ಕೂ ಕೊನೆಯದು-ಪರಮ ಎಂದು ಹೇಳುವವಾದ. ಮತ್ತು ವಿವರಿಸಿ ಹೇಳಬೇಕಾದರೆ ಜಡಕ್ಕೆ ಒಂದು ನಿಯಮ ಉಂಟು-ಉದಾಹರಣೆಗೆ ಕಲ್ಲು ಇದ್ದಲ್ಲಿ ಇರುವುದು. ತನಗೆ ತಾನೇ ದೊಡ್ಡದೂ ಆಗದಿರುವುದು, ಚಿಕ್ಕದೂ ಆಗದಿರುವುದು. ಹಾಗೆಯೇ ಜೀವಕ್ಕೆ ಬೆಳೆಯುವ ರೂಪ ಬದಲಾಯಿಸುವ ಧರ್ಮವುಂಟು. ಗಿಡ ಮರ ಬಳ್ಳಿಗಳಲ್ಲಿ, ಪ್ರಾಣಿ ಪಕ್ಷಿಗಳಲ್ಲಿ, ಮನುಷ್ಯರಲ್ಲಿ ಈ ನಿಯಮವನ್ನು ಕಾಣುವುದು ಸರಿಯಷ್ಟೆ. ಜಡ-ಜೀವ-ಪಾರಮ್ಯಾರಿಯು ಜಡವೂ ಜೀವವೂ ಹೀಗೆಯೇ, ನಡೆದುಕೊಳ್ಳತಕ್ಕದ್ದು. ನಡೆದುಕೊಳ್ಳಬೇಕು ಎನ್ನುತ್ತಾನೆ. ಅವನ ಪ್ರಕಾರ ಕಪಿ ಕಚ್ಚೆಂದರೆ ಹತ್ತು ಮಾರು, ಹದಿನೈದು ಮಾರು ಹಾರಬಹುದೇ ಹೊರತು ಇಡೀ ಸಮುದ್ರವನ್ನೇ ಲಂಘಿಸಲಾರದು.

ಏಕಾಗಬಾರದು ಎನ್ನುತ್ತಾನೆ ಕವಿ! ಹಾಗೆ ಹಾರಿತು ಎಂದರೆ ಎಷ್ಟು ರೋಮಾಂಚವಾಗುತ್ತದೆ ನೋಡಿ ಎನ್ನುತ್ತಾನೆ. ಏಕೆಂದರೆ ಅವನು ಜಡ-ಜೀವ ಪಾರಮ್ಯವಾದಿ ಅಲ್ಲ. ಅವನು ಜಡ-ಜೀವ-ರಸ ಪಾರಮ್ಯವಾದಿ ಎಂದರೆ ಜಡ ನಿಯಮಗಳೂ ನಿಜ, ಜೀವದ ನಿಯಮಗಳೂ ನಿಜ, ಅವುಗಳಿಂದ ಬೇರೆಯದಾದ ಮತ್ತೊಂದು ನಿಯಮವಿರುವುದೂ ನಿಜ-ಅದು ‘ರಸದ ನಿಯಮ’ ಎಂಬುದು ಅವನ ವಾದ. ರಸದ ನಿಯಮವು ಜಡ-ಜೀವಗಳ ನಿಯಮಗಳಿಗಿಂತ ಹೆಚ್ಚಿನದೂ ಅಲ್ಲ, ಕಡಿಮೆಯದೂ ಅಲ್ಲ, ಅವಕ್ಕೆ ವಿರೋಧಿಯಾದದ್ದೂ ಅಲ್ಲ. ಆದರೆ ಅವುಗಳಿಂದ ಬೇರೆಯಾದವು ಅಷ್ಟೇ. ಪುತಿನ ಆ ನಿಯಮಗಳ ಸ್ವರೂಪವನ್ನೂ ಪ್ರಯೋಜನ್ನು ಕಾವ್ಯಮಯವಾಗಿ ನಿರೂಪಿಸಿದ್ದಾರೆ.

ಕವಿಗೆ ಒಂದು ವಿಶಿಷ್ಟ ಶಕ್ತಿಯಿದೆ. ಅದು ಲೌಕಿಕ ನಿಯಮಗಳಿಂದ, ತತ್ಕಾಲಕ್ಕಾದರೂ ದೂರ ನಿಂತು ಪರಿಸ್ಥಿತಿಯನ್ನು ನೋಡುವ ಶಕ್ತಿ, ಪುತಿನ ಒಂದು ಉದಾಹರಣೆಯಿಂದ ಆ ಶಕ್ತಿಯ ಸ್ವರೂಪವನ್ನು ವರ್ಣಿಸಿದ್ದಾರೆ : ಒಬ್ಬ ಕಾಡಿನಲ್ಲಿ ಪ್ರಯಾಣ ಮಾಡುತ್ತಿದ್ದಾನೆ ಎಂದು ಭಾವಿಸಿ ಅವನನ್ನು ಒಂದು ಹುಲಿ ಅಟ್ಟಿಕೊಂಡು ಬರುತ್ತಿದೆ. ಪ್ರಯಾಣಿಕ ಬೇಗ ಓಡಿ ಹುಲಿಯನ್ನು ವಂಚಿಸಿ ಒಂದು ಮರವನ್ನು ಹತ್ತಿ, ಹುಲಿ ಅಲ್ಲಿಗೆ ಬರಲಾರದು ಎಂಬ ಎತ್ತರದಲ್ಲಿ ನಿಲ್ಲುತ್ತಾನೆ. ಅಲ್ಲಿಂದ ಅವನು ಹುಲಿಯನ್ನು ನೋಡಿ ‘ಓ, ಎಂಥ ಚೆಲುವಾದ ಪ್ರಾಣಿ!’ ಎಂದು ಉದ್ಗರಿಸುವುದು ಸಾಧ್ಯ. ಹಾಗೆಯೇ ಕವಿ ಲೋಕದಿಂದ ದೂರ, ಎತ್ತರದಲ್ಲಿ ನಿಂತು ಲೋಕದ ಚೆಲುವು- ಕುರೂಪಗಳಲ್ಲೆಲ್ಲವನ್ನೂ ಆಸ್ವಾದಿಸಬಹುದು. ಪುತಿನ ಕವಿ ನಿಂತ ನಿಲುವನ್ನು ‘ಶಿವಸ್ಥಾನ’- ಮಂಗಳದ ನೆಲೆ-ಎಂದು ಕರೆದಿದ್ದಾರೆ. ಅವರು ಹೇಳುತ್ತಾರೆ : ‘ಕವಿ ನಮಗಾಗಿ ನಿರ್ಮಿಸುವ ಇಂಥ ಶಿವಸ್ಥಾನಗಳಿಂದ ಜಗತ್ತಿ ತನ್ನ ಅಶಿವತೆಯನ್ನೆಲ್ಲಾ ಕಲೆದುಕೊಂಡು ನಮಗೆ ರಮ್ಯವಾಗಿ ತೋರುತ್ತದೆ.’

“ಅಸಂಭಾವ್ಯ ಸಂದರ್ಭಗಳಿಂದ ವಾಸ್ತವಕ್ಕೆ ದೊರೆಯುವ ಅಪೂರ್ವ ಸೌಂದರ್ಯಕ್ಕೆ ವಿಫುಲವಾದ ಉದಾಹರಣೆಗಳನ್ನು” ಪುತಿನ ಎತ್ತಿ ಎತ್ತಿ ನೀಡಿದ್ದಾರೆ. ಒಂದು ಕುಮಾರವ್ಯಾಸನು ವರ್ಣಿಸಿರುವ ಕರ್ಣನ ಜನನ ಪ್ರಸಂಗ. ಕವಿಯ ಮಾತುಗಳಲ್ಲಿಯೇ ಆಯಾಮ ಪ್ರಸಂಗಗಳ ಸ್ವಾರಸ್ಯವನ್ನು ಸವಿಯುವುದು ಸಾಧುವಾದುದು.

ಅಸಂಭಾವ್ಯ ಸಂದರ್ಭಗಳಿಂದ ವಾಸ್ತವಕ್ಕೆ ದೊರೆಯುವ ಅಪೂರ್ವಸೌಂದರ್ಯಕ್ಕೆ ವಿಫಲವಾದ ಉದಾಹರಣೆಗಳನ್ನು ಸತ್ಕಾವ್ಯಗಳಿಂದ ಎತ್ತಿ ಎತ್ತಿ ಕೊಡಬಹುದು. ಬಹುಕಾಲದ ಹಿಂದೆ ಪ್ರಣೀತವಾಗಿ ಈಗಲೂ ನಮ್ಮಿಂದ ಆದರಿಸಲ್ಪಡುತ್ತಿರುವ ಕಾವ್ಯಗಳೆಲ್ಲವೂ ಈ ಅಲೌಕಿಕ ಅಲೋಕದಿಂದ ತುಂಬಿವೆ; ಆದುದರಿಂದಲೇ ಆದರಣೀಯವಾಗಿವೆ. ಉದಾಹರಣೆಗಾಗಿ, ಕುಮಾರವ್ಯಾಸನು ವರ್ಣಿಸಿರುವ ಕರ್ಣಜನನ ಪ್ರಸಂಗವನ್ನು ನೋಡೋಣ. ಕುಂತಿ ಸೂರ್ಯನನ್ನು ಮಂತ್ರದಿಂದ ನೆನೆದಳು; ಸೂರ್ಯ ಪ್ರತ್ಯಕ್ಷನಾಗಿ ಬಂದು ಆ ಭೀರುವನ್ನು ಮುಟ್ಟಿದ; ಶಿಶು ಜನಿಸಿತು. ಕುಲ ಕೆಡುವುದೆಂಬ ಭಯದಿಂದ ಆಕೆ ಕೂಸನ್ನು ಗಂಗಾ ನದಿಯಲ್ಲಿ ಬಿಸುಟಳು. ಆ ನದಿ ತನ್ನ ಅಲೆಗೈಗಳಲ್ಲಿ ಆ ಕಂದನನ್ನು ದಡಕ್ಕೆ ತಳ್ಳಿತು. ಮರಲಿನ ಮೇಲೆ ಆ ಮಗು ಅಂತರಿಕ್ಷದಲ್ಲಿರುವ ಸೂರ್ಯನನ್ನು ನೋಡುತ್ತಾ ಅಳುತ್ತಿದೆ. ಆದರೆ ತನ್ನ ಸ್ವಂತ ಮಗನನ್ನು ಸಂರಕ್ಷಿಸುವುದಕ್ಕೆ ಮಹಾಮಹಿಮನಾಗಿ ಜಗತ್ತನ್ನೇ ಹೊರೆಯುತ್ತಿರುವ ಆ ಸೂರ್ಯನೂ ಅಸಮರ್ಥ. ಮಗು ತಂದೆಯನ್ನು ನೋಡಿ ಅಳುತ್ತಿದೆ; ತಂದೆ ನಿರುಪಾಯನಾಗಿ ಅದನ್ನು ಸುಮ್ಮನೆ ನಿಟ್ಟಿಸುತ್ತಾನೆ.

ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ ||
ಇದನ್ನು ಕಂಡನು ಸೂತನೊಬ್ಬನು

ಅನಾಥ ಶಿಶು ಕರುಣಾಸ್ಪದವೇ ಸರಿ. ಆದರೆ ಈ ಸಂದರ್ಭದಲ್ಲಿ ಮಗು ಸೂರ್ಯನಿಂದ ಜನಿಸಿದುದು ಎಂಬ ಅಸಂಭಾವ್ಯ ಸಂದರ್ಭದ ಹಿನ್ನೆಲೆಯಲ್ಲಿ ಈ ವರ್ಣನೆಗೆ ಎಷ್ಟೊಂದು ಕಳೆ ಬಂದಿದೆ! ಮಗುವಿನ ಮೇಲೆ ನಮ್ಮ ಕರುಣೆ ಸೂರ್ಯಮಂಡಲದವರೆಗೂ ವ್ಯಾಪಿಸಿ ಎಷ್ಟು ಆಳವಾಗುತ್ತದೆ! ಆ ಮಗುವಿನಂತೆ ಸೂರ್ಯನೂ ನಮ್ಮ ಮರುಕಕ್ಕೆ ಪಾತ್ರ. ಹೀಗೆಯೇ ಸೌಗಂಧಿಕಾ ಪುಷ್ಪಹರಣ ಪ್ರಸಂಗದಲ್ಲಿ ಮಂದಾನಿಲನು ಭೀಮನನ್ನು ಅಪ್ಪಿಕೊಳ್ಳುವ ಸಂದರ್ಭವೂ ಈಗ ನೆನೆದು ಸವಿಯಲು ಅರ್ಹವಾದುದು:

ಒಗುಮಿಗೆಯ ಪರಿಮಳದ ಕಂಪಿನ
ತಗಡತೆಕ್ಕೆಯ ಬೀದಿವರಿಗಳ
ಮುಗುಳಮೊಗ್ಗೆಯ ತಗೆವ ತುಂಬಿಯ ಬಳಿಯ ಲಗ್ಗೆಗಳ
ಹೊಗರ ಹೊರಳಿಯ ಕಿರುದರೆಯ ನೂ
ಕುಗಳ ತಳಿತ ತುಷಾರ ಭಾರದ
ಸೊಗಸ ಸೇರಿಸಿ ಮಂದಮಾರುತನಪ್ಪಿದನು ಮಗನ ||

ಇಲ್ಲಿ ಮಂದಮಾರುತ ಮೈಮೇಲೆ ಬೀಸಿದರೆ ಆಗುವ ಸುಖದ ವರ್ಣನೆಯಷ್ಟೆ ಇಲ್ಲ; ತಂದೆ ಮಗನನ್ನು ತಬ್ಬಿಕೊಂಡು ಮುದ್ದಿಸಿದ ಸುಖವಿದೆ. ಈ ಅಪ್ಪುಗೆಯಲ್ಲಿ ಎಷ್ಟು ಸಂಭ್ರಮ, ಎಷ್ಟು ಸಂತೋಷ, ಎಂಥ ತಂಪು! ಇಲ್ಲಿನ ಸೊಗಸಿಗೆ ಮಾತೃಕಾರೂಪವಾಗಿರುವುದು ಮಾರುತನ ಮಗ ಭೀಮ ಎಂಥ ಅಲೌಕಿಕ ಸಂದರ್ಭ.

ನಮ್ಮ ಪುರಾಣೇತಿಹಾಸಗಳಲ್ಲಿ ಇಂಥ ಅಸಂಭಾವ್ಯ ಸಂಭವಗಳೇ ತುಂಬಿವೆ. ದೇವಕು ಮಾರರಾಗಿ ಹುಟ್ಟಿಯೂ ಪಾಂಡವರು ಪಟ್ಟ ಕಷ್ಟ ಎಂಥದು,- ಹೀಗೆ ನಮ್ಮ ಬುದ್ಧಿ ದೇವತೆಯ ನಿಲುವಿನಲ್ಲಿ ಓಡಿ ಆ ಸಂದರ್ಭಗಳ ರಸವನ್ನು ಸವಿಯುತ್ತದೆ. ಹಾಗೆಯೇ ರಾಮಾಯಣದಲ್ಲೂ ಕೂಡ. ಅದರಲ್ಲೂ ಸುಂದರಕಾಂಡದಲ್ಲಿನ ಆಂಜನೇಯನನ್ನು ನೆನೆದುಕೊಂಡರೆ ಯಾರ ಮನಸ್ಸು ಪ್ರಪುಲ್ಲವಾಗದು? ರಸಮತದ ಪ್ರಭುತ್ವಕ್ಕೆ ಆತ ಅಳವಟ್ಟಂತೆ ಮತ್ತೊಂದು ವ್ಯಕ್ತಿ ಅಳವಟ್ಟಲ್ಲ ಆ ಕಾವ್ಯದಲ್ಲಿ ವಾಲ್ಮೀಕಿಯಷ್ಟು ಕುಶಾಗ್ರ ಬುದ್ಧಿಗಳೂ ವಿಶಾಲ ಬುದ್ಧಿಗಳೂ ಕವಿ ಪ್ರಪಂಚದಲ್ಲಿ ಅಪೂರ್ವ. ಆದರೆ ಆ ಬುದ್ಧಿಯೂ ಕೂಡ ಆ ಕವಿಯ ರಸಪ್ರತಿಭೆಯ ಹುಚ್ಚಿಗೆ ತಗ್ಗಿ ನಡೆಯುತ್ತದೆ. ಈ ಹುಚ್ಚಿನ ಗೆಲುಗಂಬದಂತೆ ಆಂಜನೇಯ ನಮ್ಮ ಮನಸ್ಸಿನಲ್ಲಿ ಮರೆ ಎಯುತ್ತಾನೆ. ಕವಿ ಕೇವಲ ತನ್ನ ಬುದ್ಧಿಗೆ ವಶನಾಗಿದ್ದಾನೆ. ಹನುಮಂತ ಹ್ರಸ್ವನಾಗಿಯೇ ಉಳಿಯುತ್ತಿದ್ದ; ಆತನಿಗೆ ಈಗಿನ ಅಮರತ್ವ ದೊರೆಯುತ್ತಿತ್ತೋ ಇಲ್ಲವೋ. ಒಂದು ಸಂದರ್ಭವನ್ನು ವಿವೇಚಿಸೋಣ. ಕಪಿಗಳು ಕಡಲ ತಡಿಗೆ ಬಂದಿವೆ. ಲಂಕೆಗೆ ಹೋಗುವುದು ಹೇಗೆ ಎಂಬ ಸಮಸ್ಯೆ ತಲೆದೋರಿವೆ. ಕವಿಗೆ ಕವಿಯೇ ರಾಜ; ಆತನ ಬುದ್ಧಿಯೇ ಮಂತ್ರಿ ಆ ತೊಡಕಿನ ಸಂದರ್ಭದಲ್ಲಿ ಕಥೆಯನ್ನು ಮುಂದುರಿಸುವುದು ಹೇಗೆ ಎಂಬ ಸಮಸ್ಯೆ ಸಹಜವಾಗಿ ತೊಎದೋರಿ ಕವಿ ನಿಂತು ಬುದ್ಧಿಯನ್ನು ಕುರಿತು, “ಅಯ್ಯಾ, ಈ ಕಪಿಗಳು ಈ ಮಹಾಸಾಗರವನ್ನು ಹೇಗೆ ದಾಟುತ್ತವಯ್ಯಾ” ಎನ್ನುತ್ತಾನೆ. ಬುದ್ಧಿ ಎನ್ನುತ್ತದೆ, “ಇದು ಹೇಗೆ, ಯಾರಿಂದ ಸಾಧ್ಯ?”, ಕವಿ : “ಹನುಮಂತನಿದ್ದಾನಲ್ಲ”, ಬುದ್ಧಿ: “ಓ, ಆ ಋಷ್ಯಮೂಕ ಪರ್ವತದಲ್ಲಿ ಸುಗ್ರೀವನೊಡನೆ ತಲೆಗೆ ಮುಸುಕು ಹಾಕಿಕೊಂಡು ಓಡಾಡುತ್ತಿದ್ದ ಪರಿಜನ ಹನುಮಂತ ತಾನೆ?”, ಕವಿ: “ಅಲ್ಲ ಅಲ್ಲ; ರಾಮದೂತ ಹನುಮಂತ, ಮಾರುತನ ಮಗ” ಬುದ್ಧಿ : “ಹಾಗೆಯೇ”, ಕವಿ : “ಅಹುದು ಮಾರುತಿ ಹೇಗೆ ಬೆಳೆದು ನಿಂತಿದ್ದಾನೆ! ಈತನಿಗೆ ಈ ಕಡಲು ಅಸಾಧ್ಯವೇ!” ನೋಡಿ ಬುದ್ಧಿಯ ಕಣ್ಣು ಕೊರೈಸಿ ಹೋಗುತ್ತದೆ. ಕವಿಯ ಅಪ್ರತಿಹತವಾದ ರಸಪ್ರಜ್ಞೆಯ ಈ ನಿರ್ಮಿತಿಗೆ ಮಣಿದು ನಿಲ್ಲುತ್ತದೆ; ಇಳೆಯಿಂದ ಮುಗಿಲಿಗೆ ಬೆಳೆದ ಆ ಮಹಾಮೂರ್ತಿಯನ್ನು ಸ್ಫುರದುಪಮೆಗಳಿಂದ ಅಲಂಕರಿಸತೊಡಗುತ್ತದೆ. ಮಹಾಕವಿಯ ವಾಕ್ಯಗಳಿಗೆ ಬುದ್ಧಿಮಾಡತಕ್ಕ ಕೆಲಸವೇ ಇದು- ಈ ಶೋಭನದ ದಾಸ್ಯವೃತ್ತಿ ಅಥವಾ ಕೈಂಕರ್ಯ

(‘ತೊಡೆಜವಕೆ ಕಿತ್ತೆದ್ದ ಮರಗಳು ಕಪಿಯ ಬೆಂಗಡೆ ಬಂದವು
ದೂರಪಯಣಕೆ ಹೊರಟ ನೆಂಟನ ಬೀಳ್ಕೊಡುವ ನೆಂಟರ ತೆರ
ತುದಿಯರಳ ಬಲುಮರಗಳಿಂದಲಿ ಸುತ್ತುವರಿದಾ ಕಪಿವರ
ಬೆಟ್ಟದಂತಹ ಮೈಯ ಹನುಮನು ಬೆರಗತಂದನು ಕಣ್ಣಿಗೆ
ಮೋಡದೊಡ್ಡನು ಹೊಗುತಲಂತೆಯ ಹೊರಬರುತ ಮರಮರಳಿಯು
ಮರೆಗೊಳುತ ಮರೆತೆಗೆದು ಬೆಳಗುವ ಚಂದ್ರನಂದದಿ ಕಾಂಬನು’)

ಹೀಗೆ ಆ ಅದ್ಭುತ ವ್ಯಕ್ತಿಯನ್ನು ಬುದ್ಧಿ ಬಣ್ಣಿಸೆ ತೀರದು. ನಮ್ಮ ಮನಸ್ಸಿನಲ್ಲಿ ನಿಲ್ಲುವ ರಸಮೂರ್ತಿಯೂ ಇದೇ. ಸುಗ್ರೀವನೊಡನೆ ಸಾಮಾನ್ಯನಂತೆ ಭೀರುವಾಗಿ ಬಂಡೆಯಿಂದ ಬಂಡೆಗೆ ನೆಗೆದಾಡುತ್ತಿದ್ದ ವಾಸ್ತವಮೂರ್ತಿ ಇನ್ನು ನಮ್ಮ ಪಾಲಿಗೆ ಉಳಿಯುವುದಿಲ್ಲ. ಇಂತು ರಸದ ನೆಲೆಯಲ್ಲಿ ಕವಿಗೆ ಪ್ರಾಪ್ತವಾಗುವ ಅಲೌಕಿಕ ಆಲೋಕದಿಂದ ದೃಶ್ಯವಾಗುವ ಮತ್ತು ಬುದ್ಧಿಯಿಂದ ಪ್ರಸಾದಿತವಾಗುವ ವಸ್ತುವಿಗೆ ಸೌಂದರ್ಯವೊಂದೇ ಅಲ್ಲದೆ ಸತ್ಯವೆನ್ನಿಸಿಕೊಳ್ಳುವ ಪದವಿಯೂ ಪ್ರಾಪ್ತವಾಗುತ್ತದೆ. ಆ ಬೆಳಕಿನಿಂದಲೇ ವಾಸ್ತವಕ್ಕೂ ಕಳೆ. ಬುದ್ಧಿಯೋ ಜೀವ-ಜಡ ಧರ್ಮಾನುಯಾಯಿ ; ಅದರ ಸಂತತಾನುಸರಣಿಯಿಂದ ರಸ ಸ್ಥಾನವನ್ನು ತಲುಪುವುದು ಕಷ್ಟ ಆ ನೆಲೆಯನ್ನು ತಲುಪಬಯಸುವ ಕವಿ ಆಗಾಗ ತನ್ನ ಪ್ರಭುತ್ವವನ್ನು ಚಲಾಯಿಸಬೇಕಾಗುತ್ತದೆ; ಇಷ್ಟದಂತೆ ಪಾತ್ರಗಳನ್ನು ಕುಣಿಸಬೇಕಾಗುತ್ತದೆ; ಅವಿನೀತವೂ ಅಶಿಕ್ಷಿತವೂ ಆದ ಬುದ್ಧಿ ಇದೇನು ಹುಚ್ಚೆನ್ನುವ ಅಸಂಭಾವ್ಯ ಸಂದರ್ಭಗಳನ್ನೂ ನಿರ್ಮಿಸಬೇಕಾಗುತ್ತದೆ. ಆಗ ಪ್ರಭುವಿನ ಬೆಲೆಯನ್ನರಿತ ಬುದ್ಧಿ “ಹಸಾದ”ವೆಂದು ಆ ವಿಶೇಷಾಜ್ಞೆಗಳನ್ನು ಒಪ್ಪಿ ಕಾವ್ಯವನ್ನು ನಡೆಗೊಳಿಸುತ್ತದೆ-ಇಂಗ್ಲಿಷರ ರಾಜ್ಯಭಾರದಲ್ಲಿನ ಐ.ಸಿ.ಎಸ್‌. ಗುಂಪಿನಂತೆ. ರಸಮತವನ್ನನುಸರಿಸಿ ಕಡಲನ್ನು ದಾಟುವಾಗ ಬೆಳೆದ ಕಪಿ, ಅಂತಃಪುರದಲ್ಲಿ ಓಡಾಡುವಾಗ ಕಿರಿದಾಗಲೂಬಹುದು. ಹೀಗೆ ಕಿರಿದಾಗಿ ವಾಸ್ತವವಕೆ ಮರಳುವ ಪವಾಡವೂ ಮೋದಾವಹವಾಗಲೂ ಬಲ್ಲುದು. ಹೀಗೆ ಕಿರಿದಾಗಿ ವಾಸ್ತವಕೆ ಮರಳುವ ಪವಾಡವೂ ಮೋದಾವಹವೇ ಆಗುತ್ತದೆ. ‘ಆಸ್ಫೋಟಯಾಮಾಸ ಚುಚುಂಬ ಪುಚ್ಚಂ’-ಕವಿಯ ಹುಚ್ಚಿನಿಂದ ನಿರ್ಮಿತವಾದ ಆ ಮಹಾಕಪಿಯ ಹಿನ್ನೆಲೆಯಲ್ಲಿ ಈ ವಾಸ್ತವವೂ ಎಷ್ಟು ಮುದ್ದಾಗಿದೆ! ಹಾಗೆಯೇ, ಬಕ ಮಹಾರಾಕ್ಷಸನ ಹಿನ್ನೆಲೆಯಲ್ಲಿ ಹಂಚಿಕಡ್ಡಿಯನ್ನು ಜಳಪಿಸುತ್ತಾ ರಕ್ಕಸನನ್ನು ಸದೆಬಡಿವೆನೆಂದು ಆಟೋಪಿಸುವ ಏಕಚಕ್ರನಗರದ ಬ್ರಾಹ್ಮಣ ದಂಪತಿಗಳ ಮಗುವು ಎಷ್ಟು ಮುದ್ದಾಗುತ್ತದೆ!

ಮೇಲಿನ ಕೆಲವು ಉದಾಹರಣೆಗಳನ್ನು ನೋಡಿದರೇ ಸಾಕು, ‘ಅಸಂಭಾವ್ಯ’ ಎನ್ನುವುದನ್ನು ಬಳಸಿ ಸತ್ಕವಿ ಎಂತಹ ರಸಪ್ರಯೋಜನವನ್ನು ಸಾಧಿಸಬಲ್ಲ ಎಂಬುದು ಹೊಳೆಯುತ್ತದೆ.

ಕವಿ ಮತ್ತು ಪ್ರಕೃತಿ

ಕವಿ ಎಂದರೆ ಪ್ರಕೃತಿಯ ವಿವಿಧ ಮುಖಗಳನ್ನು ಕಂಡು ಆನಂದ ಪರವಶನಾಗುವವನು, ಅದರ ವಿವಿಧ ಭಾವಗಳನ್ನು ಕವನಗಳಲ್ಲಿ ಹಿಡಿದಿಡುವವನು ಎಂಬ ಭಾವನೆ ಜನರಲ್ಲಿ ನೆಲಸಿದೆಯಷ್ಟು ಸ್ವತಃ ಪ್ರಕೃತಿ ಪ್ರಿಯರಾದ ಪುತಿನ ಕವಿಗೂ-ಪ್ರಕೃತಿಗೂ ಇರುವ ಸಂಬಂಧವಂಥದು ಎಂಬುದನ್ನು ‘ಕಾವ್ಯ ಕುತೂಹಲ ಸಂಕಲನದ ಕೆಲವು ಪ್ರಬಂಧಗಳಲ್ಲಿ ವಿಶ್ಲೇಷಿಸಿದ್ದಾರೆ.’

ವಿಜ್ಞಾನಿಯ ದೃಷ್ಟಿಯಲ್ಲಿ ಪ್ರಕೃತಿಯು ‘ಗಣಿತಕ್ಕೆ ಸಿಕ್ಕಿ ಪ್ರಯೋಗಕ್ಕೆ ದಕ್ಕುವ ವಿಷಯ. ಕಲೆಗಾರನಿಗೆ ಬಣ್ಣ ಮತ್ತು ಗೆರೆಗಾರಿಕೆಯ ವಿಷಯ. ಕವಿಗೋ ಭಾವಗಾರಿಕೆಯ ವಿಷಯ.’ ಕವಿಯ ಕುಶಲತೆಯಿರುವುದು ಶಬ್ದ ಸಂಪತ್ತಿನ ನೆರವಿನಿಂದ ಒಂದು ಅಪೂರ್ವವಾದ ಮನೋಭಾವವನ್ನು ಸಹೃದಯನಲ್ಲಿ ನಿರ್ಮಿಸುವುದು ಅಥವಾ ‘ರಸ ಸ್ಥಿತಿಯ ಜಾಗರವನ್ನು’ ತರುವುದು. ಎಂದರೆ ರಸಾನುಭವದಸ್ಥಿತಿಗೆ ಸಹೃದಯವನ್ನು ಎಚ್ಚರಿಸುವುದು. ಅದನ್ನು ಅವನು ಸಾಧಿಸಲು ಬಳಸುವ ಮೂಲ ಸಾಮಗ್ರಿಗಳಲ್ಲಿ ಪ್ರಕೃತಿಯೂ ಒಂದು. ಎಂದರೆ ಪ್ರಕೃತಿಯ ಸುಂದರ ಹಾಗೂ ರುಂದ್ರ ಮುಖಗಳನ್ನು ವರ್ಣಿಸಿ ಸಹೃದಯರಿಗೆ ಆನಂದವು ದೊರಕುವಂತೆ ಕವಿಯು ಮಾಡುತ್ತಾನೆ. ಹೀಗೆ ಮಾಡುವುದಕ್ಕೆ ಅವನು ಅನೇಕ ವೇಳೆ ತನ್ನ ಕಾವ್ಯದ ಪಾತ್ರಗಳನ್ನು ಬಳಸಿಕೊಳ್ಳುತ್ತಾನೆ. ಅದಕ್ಕೆ ಒಂದು ಉದಾಹರಣೆಯನ್ನು ರಾಮಾಯಣದಿಂದ ಪುತಿನ ಕೊಟ್ಟಿದ್ದಾರೆ.

ರಾಜ್ಯವನ್ನು ಕಳೆದುಕೊಂಡ ರಾಮನು ಕಾಡಿನಲ್ಲಿ ಸೀತೆಗೆ ಹೀಗೆ ಹೇಳುತ್ತಾನೆ ಎಂದು ವಾಲ್ಮೀಕಿ ವರ್ಣಿಸಿದ್ದಾನೆ : “ಎಲೌ ಮಂಗಳೆ, ಈ ರಮಣೀಯವಾದ ಗಿರಿಯನ್ನು ಕಂಡು ರಾಜ್ಯವನ್ನು ತೊರೆದು, ಆಪ್ತರನ್ನು ಅಗಲಿ ಬಂದ ದುಃಖ ನನ್ನ ಮನಸ್ಸನ್ನು ಮುಟ್ಟದು, ನೋಡು” ಇದನ್ನು ಕುರಿತು ವ್ಯಾಖ್ಯಾನಮಾಡುತ್ತಾ ಪುತಿನ ಹೇಳುವ ಮಾತುಗಳು ರಮ್ಯವಾಗಿವೆ, ವಿಚಾರವಂತಿಕೆಯಾಗಿವೆ: “ಏನಾದರೂ ಸರಿಯೆ ಧೈರ್ಯ ಸಂತುಷ್ಟಿಗಳು ರಾಮನನ್ನು ಬಿಡಲೊಲ್ಲವು. ಹಾಗಿಲ್ಲದಿದ್ದರೆ ಒಂದು ಕಾಡಿನ ಮಲೆಯಲ್ಲಿ ಕಂಡು ಅದು ರಮಣೀಯವೆಂದು ಕೊಂಡಾಡುವುದು ಆ ಸ್ಥಿತಿಯಲ್ಲಿ ಸಾಮಾನ್ಯ ಮನುಷ್ಯನಿಗೆ ಆಗದ ವಿಷಯ. ಆ ಮುಂದೆ ಬರುವ ಗಿರಿ ವರ್ಣನೆಗಳು ಈ ಉದಾರ ಹೃದಯನ ಸಂತೋಷೋಲ್ಲಾಸಗಳನ್ನು ಎತಿತ್ತಿ ಹಿಡಿದು ಸೀತೆಯ ಹೃದಯಕ್ಕೂ ತನ್ಮೂಲಕ ನಮ್ಮ ಹೃದಯಕ್ಕೂ ಹರಿಸುತ್ತವೆ. ಈಗ ಮೇಲೆ ಅಂದವಾಗಿ ಕಾಣುತ್ತದೆ. ನಮಗೆ. ನಮ್ಮೆದೆಯಲ್ಲಿ ಸಂತೋಷವಿರುವ ತನಕ ಅದರ ಸೌಂದರ್ಯ ಮಲಿನವಾಗುವುದಿಲ್ಲ. ಪ್ರಕೃತಿ ಸ್ವಭಾವತಃ ಸುಂದರವೋ ಅಲ್ಲವೋ ಹೇಳುವುದಕ್ಕಾಗುವುದಿಲ್ಲ. ಏಕೆಂದರೆ ಚೆಲುವು ಭಾವಾವಲಂಬಿ. ಚಿತ್ರವಿಚಿತ್ರವಾದ ಚಿತ್ತವೃತ್ತಿಗಳನ್ನು ಎಂದರೆ ಭಾವಗಳನ್ನು ಎಷ್ಟರಮಟ್ಟಿಗೆ ಯಾವ ಮಟ್ಟದಲ್ಲಿ ತದಚಿತುವಾದ ವಿಭಾವಾನುಭಾವಗಳ ವರ್ಣನೆಯ ಮೂಲಕ ಕವಿ ವ್ಯಂಜಿಸುತ್ತಾನೋ ಅಷ್ಟರ ಮಟ್ಟಿಗೆ ಅವು ಸುಂದರ. ಈಗ ವಾಲ್ಮೀಕಿಯ ಮತ್ತೊಂದು ಗಿರಿ ವರ್ಣನೆಯನ್ನು ನೋಡೋಣ.

ಜಲ ಪ್ರಪಾತಾಸ್ರಮುಖಾಃಶೃಂಗೈರುಚ್ಛ್ರಿತ ಬಾಹುಭಿಃ |
ಸೀತಾಯಾಂ ಹ್ರಿಯಾಮಾಣಾಯಾಂ ವಿಕ್ರೋಶಂತೀವ ಪರ್ವತಾಃ ||

‘ಸೀತೆಯನ್ನು ರಾವಣ ಹಾರಿಸಿಕೊಂಡು ಹೋಗುವುದನ್ನು ಕಂಡು ಪರ್ವತಗಳು ಜಲಪಾತಗಳ ಕಣ್ಣೀರು ಸುರಿಸಿ ಕೋಡುಗಳ ತೋಳುಗಳನ್ನೆತ್ತಿ ದೊಡ್ಡ ದನಿ ತೆಗೆದವು.’ ಈ ವರ್ಣನೆಯೂ ಸುಂದರ. ಆದರೆ ಭಾವ ಬೇರೆ ತರದ್ದು. ಕೇಡಿಗತನವನ್ನು ಕಂಡು ಮಹಾಸತ್ವರ ಶೋಕ, ಸಂಭ್ರಮ, ನಿಸ್ಸಹಾಯಕತೆ ಇತ್ಯಾದಿ ಅನೇಕ ಸೂಕ್ಷ್ಮಭಾವಗಳ ಗುಂಪನವನ್ನು ಈ ಪರ್ವತಗಳೂ ಅವುಗಳ ಕೋಡುಗಳೂ ಜಲಪ್ರಪಾತಗಳೂ ಪ್ರತಿಫಲಿಸುತ್ತವೆ.

ಪ್ರಕೃತಿ ವರ್ಣನೆಗಳ ಮೂಲಕ ಇಂಥ ಅನೇಕ ಸೂಕ್ಷ್ಮಚಿತ್ತವೃತ್ತಿಗಳನ್ನು ವ್ಯಂಜಿಸುವ ಕವಿಯ ಪವಾಡಗಳನ್ನು ನಾವು ರಾಮಾಯಣದ ತುಂಬ ಕಾಣಬಹುದು. ರಾಮಾಯಣವೊಂದರಲ್ಲೇ ಅಲಲ ನಮ್ಮ ಪುರಾಣಗಳಲ್ಲೂ, ಮುಖ್ಯವಾಗಿ ಭಾಗವತ ವಿಷ್ಣುಪುರಾಣ ಹರಿವಂಶಗಳಲ್ಲಿ, ಬಹು ರಮ್ಯವಾದ ವರ್ಣನೆಗಳು ಅಪೂರ್ವ ಭಾವಗಳನ್ನು ನಮ್ಮ ಹೃದಯದಲ್ಲಿ ಬಿಡಿಸಿ ಬಿಡಿಸಿ ತೋರುತ್ತವೆ. ಹರಿವಂಶದಲ್ಲಿ ಕೃಷ್ಣನು ಕಂಡ ಈ ಆಲದ ಮರ ಯಾರ ಮನಸ್ಸನ್ನು ತಾನೆ ಅರಳಿಸದು?

ಸ್ಥಿತಂ ಧರಣ್ಯಾಂ ಮೇಘಾಭಂ ನಿಬಿಡಂ ಪತ್ರಸಂಚಯಃ
ಗಗನಾರ್ಥೋಚ್ಛ್ರಿತಾಕಾರಂ ಪವನಾಭೋಗ ಧಾರಿಣಂ
ನೀಲ ಚಿತ್ರಾಂಗ ವರ್ಣೈಶ್ಚಸೇವಿತಂ ಬಹುಭಿರ್ದ್ವಿಜೈಃ
ಫಲೈಃ ಪ್ರವಾಳೈಶ್ಚಘನಂ ಸೇಂದ್ರಚಾಪಘನೋಪಮಂ
ಭವನಾಕಾರ ವಿಟಪಂ ಲತಾಪುಷ್ಪಸಲುಮಂಡಿತಂ
ಅಧಿಪತ್ಯಮಿವಾನ್ಯೇಷಾಂ ತಸ್ಯ ದೇಶಸ್ಯ ಶಾಖಿನಾಂ
ನೃಗ್ರೋಧಂ ಪರ್ವತಾಗ್ರಾಭಂ ಭಾಂಡೀರಂ ನಾಮ ನಾಮತಃ
ದೃಷ್ಟ್ವಾತತ್ರ ಮನಂ ಚಕ್ರೇನಿವಾಸಾಯ ತದಾ ಪ್ರಭುಃ

ದೊಡ್ಡ ಆಲದಮರ ; ಒಂದು ನೋಟದಲ್ಲಿ ಅದನ್ನು ಅಳೆಯಲು ಅಸಾಧ್ಯ. ‘ನೆಲದ ಮೇಲೆ ಮೋಡದಂತೆ ನಿಂತಿದೆ. ಅದರ ತುಂಬ ಎಲೆ; ಅದು ಎತ್ತರದಲ್ಲಿ ಹರಡಿಕೊಂಡು ಆಕಾಶದ ಅರ್ಧಭಾಗವನ್ನೇ ಆಕ್ರಮಿಸಿದೆ. ಬಣ್ಣಬಣ್ಣದ ಹಕ್ಕಿಗಳು ಅದರಲ್ಲಿ ನೆಲೆಸಿವೆ. ಅದರ ಹಣ್ಣು ಕೆಂಪು, ಚಿಗುರು ಕೆಂಪು, ಇವುಗಳಿಂದ ಅದು ಮೋಡದ ಮೇಲೆ ಕಾಮನಬಿಲ್ಲು ಬಿದ್ದರೆ ಹೇಗೋ ಹಾಗೆ ಕಾಣುತ್ತದೆ. ಅದರ ರೆಂಬೆಗಳು ಅರಮನೆಯನ್ನೇ ಕಟ್ಟಿವೆ. ಅದರಲ್ಲಿ ದೊಡ್ಡ ಬಿರುಗಾಳಿ ಮನೆ ಮಾಡಿಕೊಂಡಿದೆ. ಮಲೆ ಕೋಡಿನಂತಿರುವ ಈ ಮಹಾವೃಕ್ಷ ಆ ಕಾಡಿನ ಮರಗಳಿಗೆಲ್ಲ ಸ್ವಭಾವತಃ ಅಧಿಪತಿ ಅದರ ಹೆಸರು ಭಾಂಡೀರ-ಪವನಾ ಭೋಗಧಾರಿ.’ ಮೊದಲು ಒಂದು ಸಾಸಿವೆಯಷ್ಟು ಸಣ್ಣ ಬೀಜವೊಂದು ಅಷ್ಟು ಬಿಸಿಲು, ಅಷ್ಟು ಗಾಳಿ, ಅಷ್ಟು ಮಳೆ, ಒಂದಿಷ್ಟು ಭೂಮಿ ಇವುಗಳನ್ನು ಹಿಡಿದು ತನ್ನ ಸ್ವಂತ ಸತ್ವದಿಂದ ಇಷ್ಟೊಂದು ಹರವಾಗಿ ನಿಂತಿರುವ ಬೆರಗು-ಇದನ್ನು ಕವಿ ಹಿಡಿದಿಟ್ಟಿದ್ದಾನೆ ಈ ವಿಸ್ತಾರವಾದ ವೃಕ್ಷ ವರ್ಣನೆಯಲ್ಲಿ. ಅದರ ಹತ್ತಿರವೇ ಯಮುನೆ ಹರಿಯುತ್ತಿದೆ. ಆ ಹೊಳೆ ಈ ಮರಕ್ಕೆ ಸೀಮಂತರೇಖೆಯಂತೆ ಎಂದರೆ ಬೈತಲೆಯ ಗೆರೆಯಂತಿದೆ- ತುಂಬ ಚೆಲುವಾದ ವರ್ಣನೆ. ಏಕೆ? ಇದನ್ನು ಕಂಡ ನಿರ್ಮಲಹೃದಯನಾದ ಕವಿಯಂತೆ ನಮ್ಮ ಮನಸ್ಸೂ ಸಂತೋಷಾಶ್ಚರ್ಯಗಳಿಂದ ಅರಳುವುದರಿಂದ. ಇದೇನೋ ಎದ್ದು ಕಾಣುವ ದೊಡ್ಡ ಮರದ ಮಾತಾಯಿತು. ಸಾಮಾನ್ಯ ವೃಕ್ಷಗಳ ಅಂದವನ್ನು ಕುರಿತ ಈ ಕವಿ ವಾಕ್ಯವನ್ನು ಕೇಳಿ. ಇದು ಭಾಗವತದಲ್ಲಿ ಬರುತ್ತದೆ:

ಪೀತ್ವಾಪಃ ಪಾದಪಾಃಪ್ಬದಿಃ ಆಸನ್ನಾನಾತ್ಮಮೂರ್ತಯಃ
ಪ್ರಾಕ್ಕ್ಷಾಮಾಸ್ತಪಸಾಕ್ಷಾಂತಾ ಯಥಾ ಕಾಮಾನುಸೇವಯಾ

ಮಳೆಗಾಲ ಮರಗಳಿಗೆ ಭೋಗದ ಕಾಲ. ‘ಕಾಲುಗಳಿಂದ ನೀರೆತ್ತಿ ಕುಡಿದು ಮರಗಳು ಬಗೆಬಗೆಯ ಮೋಜಿನಲ್ಲಿವೆ. ಮೊದಲು ತಪಸ್ಸಿನಿಂದ ಒಣಗಿ ಸೊರಗಿರುವ ಮುನಿಗಳು ಬೇಕಾದ ಭೋಗಗಳನ್ನು ಅನುಭವಿಸುತ್ತಿರುವ ಹಾಗೆ.’ ‘ನಾನಾತ್ಮಮೂರ್ತಯಃ’ ಮನುಷ್ಯರ ಸ್ವಭಾವ ಅವರವರ ವಿಶಿಷ್ಟ ಭೋಗಗಳಲ್ಲಿ ವ್ಯಕ್ತವಾಗುತ್ತದೋ ಏನೋ.! ಇದನ್ನು ಓದುವಾಗ ನಮ್ಮ ತುಟಿಗಳಲ್ಲಿ ಒಂದು ಕಿರುನಗೆ ಅನಿವಾರ್ಯವಾಗಿ ಮೂಡಿ ಮಾಯವಾಗುತ್ತದೆ. ಅಲ್ಲವೆ ಈ ಭೋಗಾಸಕ್ತರಾದ ಮುನಿಗಳನ್ನು ಮರಗಳನ್ನೂ ಕಂಡು?

ಅನೇಕ ಉದಾಹರಣೆಗಳನ್ನು ನೀಡಿ ಪುತಿನ ಈ ಬಗ್ಗೆ ತಮ್ಮ ಮೀಮಾಂಸೆಯನ್ನು ಮಂಡಿಸುತ್ತಾರೆ.

ಹೀಗೆ ಕವಿಗಳು ತಮ್ಮ ಕುಶಲವಾದ ಮಾತುಗಳಿಂದ ತಮ್ಮ ಹೃದಯದಲ್ಲಿ ಬಿಡಿಸುವ ಸೂಕ್ಷ್ಮಭಾವಗಳನ್ನು ಕುರಿತು ಹೇಳುತ್ತ ಹೋದರೆ ಅದಕ್ಕೆ ಮುಗಿವೆಲ್ಲಿ? ಸೌಂದರ್ಯವೆಂಬ ಮೌಲ್ಯ ಪ್ರಕೃತಿಗೆ ಬರುವುದು ಕವಿಗಳಿಂದ. ಅವು ಪೂಜ್ಯವೂ ಸೇವ್ಯವೂ ಎನಿಸುವುದೂ ಅವರಿಂದಲೇ. ಏಕೆಂದರೆ, ಸಕಲ ಸೃಷ್ಟಿಯೂ ಅಂತರ್ಯಾಮಿಯನ್ನೇ, ತಮ್ಮ ಪ್ರಭುವನ್ನೇ ವ್ಯಂಜಿಸುತ್ತದೆ ಎಂಬಲ್ಲಿ ಕವಿಗಳ ಮಾತು ಮುಗಿಯುತ್ತದೆ. ಕವಿ ದೃಷ್ಟಿಯಲ್ಲಿ ಪ್ರಕೃತಿ ಶಿವನ ಮೈ ಕಾಳಿದಾಸನ ಶಾಕುಂತಲದ ನಾಂದಿ ಶ್ಲೋಕ ಈ ಕವಿ ದೃಷ್ಟಿಯನ್ನು ನೇರವಾದ ಮಾತುಗಳಲ್ಲಿ ಸ್ಪಷ್ಟವಾಗಿ ಸಾರುತ್ತದೆ. ನೀರು, ಹವ್ಯವಾಹನವಾದ ಅಗ್ನಿ, ಯಜಮಾನ, ಚಂದ್ರ, ಸೂರ್ಯ, ಆಕಾಶ, ಭೂಮಿ ಇವೆಲ್ಲ ಪ್ರತ್ಯಕ್ಷಾವಗಮ್ಯವಾದ ಪರಮೇಶ್ವರನ ಸಕಲಾಂತರ್ಯಾಮಿ ಪ್ರಭುವಿನ ದೇಹಗಳು: ಅವನಿರುವಿಕೆಯನ್ನು ವ್ಯಂಜಿಸುವುದೇ ಇವುಗಳಿರವಿನ ಪರಮ ಪ್ರಯೋಜನ- ಅದರಲ್ಲೂ ಆತ್ಮಕಾಮ ಮತ್ತು ಆಐತನ ಸಾಧನೋಪಕರಣಗಳು-ಇವೂ ಶಿವನ ಅಷ್ಟದೇಹಗಳಲ್ಲೆರಡು. ಕವಿ ತನ್ನ ಮಾತುಗಳಿಂದ ಇವುಗಳನ್ನು ವರ್ಣಿಸುತ್ತಾ ಈ ಪರಿಧಿಗೆ ಸೇರಿ ಆತನೂ ಶಿವನ ಮೈಯೆ ಆಗುತ್ತಾನೆ. ಕವಿ ಪ್ರಕೃತಿಯನ್ನು ವರ್ಣಿಸುವಾಗ ಅವನ ದೃಷ್ಟಿ ಸಮಸ್ತ ಗುಣ ಮೌಲ್ಯಗಳ ನಿಧಿಯೂ ಪರಮಾಶ್ಚರ್ಯಕಾರನೂ ಹೃದಯ ಸಮುದ್ರಶಾಹಿಯೂ ಆದ ಸಕಲಾಂತರ್ಯಾಮಿಯತ್ತ ಸದಾ, ಅವನಿಚ್ಚಿಸಲಿ ಇಚ್ಚಿಸದಿರಲಿ, ಹರಿಯುತ್ತದೆ ; ಸಂತೋಷಾಶ್ಚರ್ಯಗಳಿಂದ ಆ ಕಡೆಗೆ ನಮ್ಮ ಮನಸ್ಸನ್ನೂ ತಿರುಗಿಸುತ್ತದೆ.

ಇದಕ್ಕೆ ಪೂರಕವಾದ ಅಂಶಗಳು ಪುತಿನ-ಅವರ “ಕವಿಯ ಆನಂದಾನುಭೂತಿ- ಪ್ರಕೃತಿ” ಎಂಬ ಪ್ರಬಂಧದಲ್ಲಿವೆ. ಶ್ರೀನಿವಾಸರ “ಕಾಡು ಹೂಗಳು” ಎಂಬ ಕವನದಲ್ಲಿ ಬರುವ “ವಿಷ್ಣುಕ್ರಾಂತಿಯ ಪರಿಮಿತ ನೀಲ” ಎಂಬ ಪಂಕ್ತಿ ಕವಿಯನ್ನು ಪುಳಕಗೊಳಿಸಿದೆ. ನಿಜವಾಗಿ ‘ನಿರಲಂಕಾರವಾದ ನೆನಕೆಯ ನುಡಿಗಳಿವು.’ ಆದರೆ ಕವಿ ಶ್ರೀನಿವಾಸರು ಇಂಥದೊಂದು ಪಂಕ್ತಿಯಿಂದ ನಮಗೂ ವಿಷ್ಣುಕ್ರಾಂತಿಗೂ ಎಂಥ ಆತ್ಮೀಯವಾದ ಸಂಬಂಧವನ್ನು ಕಲ್ಪಿಸಿದ್ದಾರೆ ಎಂಬುದನ್ನು ಸೊಗಸಾದ ರೀತಿಯಲ್ಲಿ ಪುತಿನ ವಿವರಿಸಿದ್ದಾರೆ:

“ವಿಷ್ಣುಕ್ರಾಂತಿಯ ಪರಿಮಿತ ನೀಲ”. ಈ ಮಾತುಗಳಲ್ಲಿ ವಿಶಿಷ್ಟವಾದದ್ದೇನೂ ಇಲ್ಲ; ನಿರಲಂಕಾರವಾದ ನೆನಕೆಯ ನುಡಿಗಳಿವು. ಆದರೆ ಇವನ್ನು ನೆನೆದು ಹೂವನ್ನು ನೋಡಿದರೆ ಮನಸ್ಸಿಗೇನೋ ಒಂದು ತರದ ಸಂತೋಷವಾಗುತ್ತದೆ. ಹೂವಿಗೂ ನಮಗೂ ಒಂದು ತರದ ಮಧುರಬಾಂಧವ್ಯ ಬೆಳೆದು ಅದು ನಮಗೆ ಹತ್ತಿರವಾದಂತೆ ತೋರುತ್ತದೆ. ನಮ್ಮರಿವಿನಲ್ಲಿ ಅದರ ಸ್ಪಷ್ಟತೆ ಹೆಚ್ಚುತ್ತದೆ. ಒಂದು ದಿನ ಆ ಕವಿಯ ಮನಸ್ಸು ಸಾಮ್ಯಸ್ಥಿತಿಯಲ್ಲಿದ್ದಾಗ ಈ ಹೂವು ಅವರ ಕುಶಲ ದೃಷ್ಟಿಗೆ ಬಿದ್ದು ಭಗವಂತನ ನಿರಂತರಾನಂದದ ಒಂದು ತುಂತುರಾಗಿ ಕಂಡಿತು. ಮರೆಯುವ ದೈವ ಇಂತು ಚೆಲುವಿನ ರೂಪದಲ್ಲಿ ತನ್ನ ನಲವನ್ನು ಹರಿಸದಿದ್ದರೆ ನಮ್ಮ ಗತಿ ಏನು! ಎಂದು ಕವಿ ಈ ಕಾಡು ಹೂಗಳ ಅಭಾವದ ಸ್ಥಿತಿಯನ್ನು ಕುರಿತು ಆಲೋಚಿಸುತ್ತಾ ತಲ್ಲಣಗೊಳ್ಳುತ್ತಾರೆ. ಈ ಅನುಭೂತಿಯನ್ನು ಸರಳವಾದ ಮಾತಿನಿಂದ ನಮ್ಮ ಹೃದಯಕ್ಕೆ ಹರಿಸಿ ಈ ಹೂಗಳ ಅಂದವನ್ನೂ ಬೆಲೆಯನ್ನೂ ನಮ್ಮರಿವಿನಲ್ಲಿ ಹೆಚ್ಚಿಸುತ್ತಾರೆ. ಈ ಪದ್ಯ ಓದಿ ಕವಿಯ ಅನುಭವವನ್ನು ಪಡೆಯುವುದಕ್ಕೆ ಮುಂಚೆ ನಮಗೂ ಈ ಲೋಕಕ್ಕೂ ಇದ್ದ ಸಂಬಂಧ ಒಂದು ರೀತಿಯದು; ಇದನ್ನು ಓದಿ ಕವಿಯ ಅನುಭವವನ್ನು ಪಡೆದ ಮೇಲೆ ಈ ಪ್ರಪಂಚವು ನಮ್ಮರಿವಿನಲ್ಲಿ ಎಷ್ಟೊಂದು ವಿಸ್ತಾರವನ್ನು ಹೊಂದುತ್ತದೆ! ಸೃಷ್ಟಿಯಲ್ಲಿ ನಾವು ಅಸಡ್ಡೆಗೈದ ಎಷ್ಟು ಹೂಗಳು ನಮಗೆ ಆತ್ಮೀಯವಾಗಿ ಬಿಟ್ಟವು-ಕವಿಯ ಮಾತಿನ ಬೆಳಕಿನಲ್ಲಿ ನಮಗೆ ಎಂಥ ಚೆಲುವು ಕಂಡಿತು!

ಕವಿಯ ಕಾವ್ಯದ ರೀತಿ ಹೆಳವನಿದ್ದಲ್ಲಿಗೆ ಹೊಳೆ ಹರಿದು ಬರುವ ರೀತಿ. ವಿಜಗೀಷುವಾದ ಶೂರನ ದೆಸೆಯಿಂದ ಪುರಜನರಿಗೆ ಕೂತ ಕಡೆಯಲ್ಲಿ ಸಿರಿಸಂಪತ್ತು ಒದಗುವಂತೆ, ತನ್ನ ವಿಶೇಷಗಣೋಪಯುಕ್ತ ಶಿಕ್ಷಿತಾಂತಃಕರಣದಿಂದ ಕವಿ ಲೋಕದಲ್ಲಿ ತನ್ನ ಬಾಳಿಗೆ ಗೆದ್ದುಕೊಳ್ಳುವ ಆನಂದ ಕಾವ್ಯಮುಖ್ಯವಾಗಿ ನಮ್ಮೆಡೆಗೆ ಹರಿದು ನಮ್ಮ ಆತ್ಮದಾರಿದ್ರ್ಯವನ್ನು ನೀಗಿಸುತ್ತದೆ. ಈ ಹೂಗಳನ್ನು ನೋಡಿ ಅಮಿತಾನಂದವನ್ನು ಕವಿ ಹೊಂದಿದರೆಂಬುದು ಸ್ಪಷ್ಟ ಆದುದರಿಂದಲೇ ತೌರಿನಿಂದ ಹೊರಟ ಹೆಣ್ಣಿನಂತೆ ಬಹುಮತವಾಗಿ ಅವರ ಹೃದಯದಿಂದ ಶಬ್ದವಾಹನವೇರಿ ಛಂದೋಗಮನದಲ್ಲಿ ಹೊರಟುಬರುವ ಈ ಹೂಗಳ ಸಂಭ್ರಮಕ್ಕೆ ಮನ ತೆತ್ತು ನಾವು ಸುಖಿಗಳಾಗಿ ಹೀಗೆಂದುಕೊಳ್ಳುತ್ತೇವೆ : ‘ಕವಿಯ ಆನಂದದಲ್ಲಿ ಅಲ್ಲವೇ ಇವುಗಳ ಜನನ, ಸಹೃದಯ ಹೃದಯಾಭಿಮುಖವಾಗಿ ಅಲ್ಲವೇ ಇವುಗಳ ಗಮನ,. ತದಾನಂದವಲ್ಲವೇ ಇವುಗಳ ಶಮನ?’ ಇಂತು ತನ್ನ ಬಾಳಿಗೆ ಕಳೆ ತಂದು ಹೃದಯಹೃದಯಕ್ಕೂ ಹರಿದು ಅಕ್ಷಯವಾಗುವ ತನ್ನ ಆನಂದವನ್ನು ಕವಿ ಯಾವ ಕೌಶಲದಿಂದ ಪಡೆಯುತ್ತಾನೆ?- ಕೆಲಸಕ್ಕೆ ಬಾರದ ಸಾಮಾನ್ಯ ವಸ್ತು ಈತನಿಗೆಂದು ರಸ ಪ್ರದವಾಯಿತು. ಈ ಮನಮೋಹನ ವಿದ್ಯೆಯ ರಹಸ್ಯವೇನು? ಕಾವ್ಯ ಕುತೂಹಲಿಗೆ ಈ ಪ್ರಶ್ನೆ ಸಹಜವಾದದ್ದು”

ಪುತಿನ ‘ಆನಂದ’ದ ಸ್ವರೂಪವನ್ನು ವಿವೇಚಿಸಿದ್ದಾರೆ. ಆನಂದ ಹೃದಯದ ಸ್ಥಿತಿ. “ಮಾನವರಿಗೆ ಇಷ್ಟು ಮಾತ್ರ ಗೊತ್ತು- ತಮ್ಮ ಅತ್ಯಂತ ಮಂಗಳಕರವಾದ ಸ್ಥಿತಿ ಆನಂದವೆಂದು” ಇದನ್ನು ಪ್ರಕೃತಿ ನಿರೀಕ್ಷಣದಿಂದ ಪಡೆಯಬಹುದು. ಇದಕ್ಕೆ ಆದಿಕವಿ ವಾಲ್ಮೀಕಿಯಿಂದ ಇಂದಿನ ಕವಿಗಳವರೆಗೂ ಅನೇಕರು ಸಾಕ್ಷಿ. “ನಮ್ಮ ಕಾಳಿದಾಸ ಕವಿ ಕ್ಷೀರಸಾಗರದಲ್ಲಿ ವಿಷ್ಣುವನ್ನು ದೇವತೆಗಳು ಕಂಡರು ಎಂದು ವರ್ಣಿಸುವಾಗ ಅವರು ಪಟ್ಟ ಸುಖ ಅರಳುವ ಕಮಲದ ಕಣ್ಣುಳ್ಳ, ಎಳಬಿಸಿಲಿನ ಚೀನಾಂಬರವನ್ನು ಹೊದ್ದಿರುವ ಶರತ್ಕಾಲದ ಹಗಲನ್ನು ಕಂಡ ಸುಖದಷ್ಟಿತ್ತು” ಎಂದೂ ವರ್ಣಿಸಿದ್ದಾನೆ. ಕವಿಗಳು ಪ್ರಕೃತಿಯನ್ನು ಕಂಡು ಅನುಭವಿಸುವ ಸಂತೋಷವನ್ನು ತಮ್ಮ ಕಾವ್ಯದಲ್ಲಿ ನಾನಾ ಸಂದರ್ಭಗಳಲ್ಲಿ ವರ್ಣಿಸುತ್ತಾರೆ. ಋಗ್ವೇದದ ಋಷಿಯ ಉಷಾಸೂಕ್ತವನ್ನು ಸವಿಯಿರಿ. “ದಿನದಿನವೂ ಹುಟ್ಟಿಬಂದರೂ ಈಕೆ ಸನಾತನಳು. ಈಕೆಯ ಮೈಬಣ್ಣ ಒಂದೇ ಸಮನಿದ್ದು ಕಾಂತಿಗುಂದದು. ಈ ಶುಭದಶಿನಿ, ಚಿರವಿನೂತನೆ, ಉಷಾದೇವಿ, ನಮ್ಮ ಆಯುಷ್ಯವನ್ನು ಉಷೆ ಕ್ಷಯಿಸುತ್ತಾಳೆ. ಏಕೆಂದರೆ ಉಷೆಯನ್ನು ಕಂಡ ಕೂಡಲೇ ಕಳೆದ ಒಂದು ದಿನದ ನೆನಪಿನ ಜೊತೆಗೆ ಕಳೆದುಹೋಗಲಿರುವ ಮತ್ತೊಂದು ದಿನದ ನೆನಪೂ ಬರುತ್ತದೆ. ಆದರೂ ಕವಿಯ ವರ್ಣನೆ ವಿಷಾದವನ್ನು ಮರೆಸಿ ಸಂತೋಷವನ್ನು ನೀಡುತ್ತದೆ.

ಹಾಗೆ ಕವಿ ತಾನು ಪ್ರಕೃತಿಯಿಂದ ಆನಂದವನ್ನು ಪಡೆದು, ಕಾವ್ಯ ಸೃಷ್ಟಿಯಲ್ಲಿ ಆ ಆನಂದವನ್ನು ಮತ್ತೆ ಸವಿದು, ಕಾವ್ಯವನ್ನು ಓದುವ ರಸಿಕರಿಗೆ ಆ ಆನಂದವನ್ನು ನೀಡುತ್ತಾನೆ. ಕವಿಗೂ ಪ್ರಕೃತಿಗೂ ಇರುವುದು ಆನಂದದ ಸಂಬಂಧ. ಅದನ್ನು ಸಹೃದಯರಿಗೂ ನೀಡಿ ಅವರಿಗೂ ಆನಂದ-ಸಂಬಂಧವನ್ನು ಅವನ ಕೌಶಲ.