ದಿವಂಗತ ಶ್ರೀ ವಿ. ಸೀತಾರಾಮಯ್ಯನವರು ಬರೆದಿರುವ ಎಂ. ವಿಶ್ವೇಶ್ವರಯ್ಯ, ಬಿ. ಎಂ. ಶ್ರೀಕಂಠಯ್ಯ, ಪಂಜೆ ಮಂಗೇಶರಾವ್‌ಮತ್ತು ಡಿ. ವಿ. ಗುಂಡಪ್ಪ- ಈ ಮಹನೀಯರ ಜೀವನ ಚರಿತ್ರೆಗಳನ್ನು ಒಂದು ಸಂಯುಕ್ತ ಸಂಪುಟವಾಗಿ ವಿ. ಸೀ. ಸಂಪದ ಪ್ರಕಟಿಸುತ್ತಿರುವ ಸಂದರ್ಭದಲ್ಲಿ, ನಾನು ಅದಕ್ಕೆ ಒಂದು ‘ವಿಮರ್ಶಾತ್ಮಕ ಪ್ರಸ್ತಾವನೆ’ಯನ್ನು ಬರೆಯಬೇಕೆಂದು ಮಿತ್ರರು ಅಪೇಕ್ಷಿಸಿದ್ದಾರೆ. ಈ ಕೃತಿಗಳ ಪೂರ್ವ ಚರಿತ್ರೆಯನ್ನೂ ಅವರು ಹೀಗೆ ತಿಳಿಸಿದ್ದಾರೆ : “ವಿಶ್ವೇಶ್ವರಯ್ಯ’ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗಕ್ಕಾಗಿ ಇಂಗ್ಲಿಷ್‌ನಲ್ಲಿ ಬರೆದದ್ದು (‘ಆಧುನಿಕ ಭಾರತ ನಿರ್ಮಾಪಕರು’ ಮಾಲೆ); ‘ಶ್ರೀ’ಯರನ್ನು ಕುರಿತುದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದ ‘ಶ್ರೀ ಸಾಹಿತ್ಯ’ ಸಂಪುಟಕ್ಕೆ ಬರೆದ ಪ್ರಸ್ತಾವನೆ; ‘ಪಂಜೆ’ ಕೇಂದ್ರ ಸಾಹಿತ್ಯ ಅಕಾಡೆಮಿ ‘ಭಾರತೀಯ ಸಾಹಿತ್ಯ ನಿರ್ಮಾಪಕರು’ ಮಾಲೆಗಾಗಿ ಬರೆದದ್ದು ; ‘ಡಿ.ವಿ.ಜಿ.’ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಗಾಗಿ ಇಂಗ್ಲಿಷ್‌ನಲ್ಲಿ ಬರೆದುದು. ‘ಪಂಜೆ’ ಕೂಡ ಮೊದಲು ಇಂಗ್ಲಿಷ್‌ನಲ್ಲಿಯೇ ರಚಿತವಾದದ್ದು ; ವಿ. ಸೀ. ಅವರಿಂದಲೇ ಅನುವಾದಗೊಂಡಿತು. ವಿಶ್ವೇಶ್ವರಯ್ಯ ಹಾಗೂ ಡಿ.ವಿ.ಜಿ. ಕುರಿತ ಕೃತಿಗಳನ್ನು ವಿ. ಸೀ. ಕನ್ನಡಿಸಿರಲಿಲ್ಲ; ಈ ಸಂಪುಟಕ್ಕಾಗಿ ಶ್ರೀ ನೀಲಹತ್ತಹಳ್ಳಿ ಕಸ್ತೂರಿಯವರು ಅವನ್ನು ಭಾಷಾಂತರಿಸಿ ಉಪಕರಿಸಿದ್ದಾರೆ.”

ಇಷ್ಟು ಹಿನ್ನೆಲೆಯೊಂದಿಗೆ ಬಂದ ಮನವಿಯನ್ನು ನನ್ನ ಇತಿಮಿತಿಗಳ ಪರಿವೆಯೇ ಇಲ್ಲದೆ, ನಾನು ಒಪ್ಪಿಕೊಂಡುಬಿಟ್ಟೆ. ಮಿತಿಗಳ ಬಗ್ಗೆ ಹೇಳುತ್ತೇನೆ : ಮೊದಲನೆಯದು ನಾನು ಪೂಜ್ಯರಾದ ವಿ. ಸೀತಾರಾಮಯ್ಯನವರ ಶಿಷ್ಯ. ೧೯೪೭-೪೮ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಮೊದಲ ವರ್ಷದ ಆನರ್ಸ್‌ವಿದ್ಯಾರ್ಥಿಯಾಗಿ ಅವರ ಬೋಧನೆಯನ್ನು ಕೇಳಿದ ಭಾಗ್ಯ ನನ್ನದು. ಆದರೆ ನನ್ನ ಭಾಗ್ಯ ಅಲ್ಪಾಯುವಾದದ್ದು. ಏಕೆಂದರೆ ಮರುವರ್ಷವೇ ಅವರು ಹೊಸದಾಗಿ ಪ್ರಾರಂಭವಾಗಿದ್ದ ಚಿಕ್ಕಮಗಳೂರು ಇಂಟರ್‌ಮೀಡಿಯೇಟ್‌ಕಾಲೇಜಿಗೆ ಮುಖ್ಯಸ್ಥರಾಗಿ ಹೊರಟುಹೋದರು. ಅವರ ಪಾಠದ ವೈಖರಿಯನ್ನೂ ಅವರ ಕೃಪೆಯಿಂದ ನನಗೆ ಪೂಜ್ಯರಾದ ರಾಳ್ಲಪಲ್ಲಿ ಅನಂತಕೃಷ್ಣಶರ್ಮ ಅವರ ಶಿಷ್ಯತ್ವ ಪ್ರಾಪ್ತವಾದ ಪರಮ ಭಾಗ್ಯದ ವಿಷಯವನ್ನೂ ಅನ್ಯತ್ರ ದಾಖಲಿಸಿದ್ದೇನೆ. (“ನನ್ನ ಗೌರವದ ಗುರುಗಳು” : ವಿ. ಸೀ. ನೂರರ ನೆನಪು. ವಿ. ಸೀ. ಸಂಪದ, ೧೯೯೯)

ಎರಡನೆಯ ಮಿತಿ ಎಂದರೆ ಪೂಜ್ಯರಾದ ಡಿ. ವಿ. ಜಿಯವರನ್ನು ಬಿಟ್ಟರೆ (ಅವರು ನಾನು ಅನುವಾದಿಸಿರುವ ಪ್ರೊ. ಎಂ. ಹಿರಿಯಣ್ಣನವರ Outlines of Indian Philosophy ಗ್ರಂಥ : ಭಾರತೀಯ ತತ್ವಶಾಸ್ತ್ರದ ರೂಪುರೇಖೆಗಳ ಬಗ್ಗೆ ಬರೆದಿರುವ ಮಾತುಗಳನ್ನು ಆ ಗ್ರಂಥದ ಎರಡನೆಯ ಭಾಗದ ಕೊನೆಯಲ್ಲಿ ಮುದ್ರಿಸಿದ್ದೇನೆ) ಬೇರೆ ಮೂರು ಜನ ಮಹನೀಯರ ಆಪ್ತ ಪರಿಚಯ ನನಗೆ ದೊರೆಯುವ ಅವಕಾಶವಾಗಲಿಲ್ಲ.

ಈ ಹಿನ್ನೆಲೆಯಲ್ಲಿ-ಗುರುಗಳ ಬರವಣಿಗೆಗೆ ವಿಮರ್ಶಾತ್ಮಕವಾದ ಪ್ರಸ್ತಾವನೆಯನ್ನು ಹೇಗೆ ತಾನೆ ಬರೆಯಲಿ? ಆದರೂ ಆ ಸಾಹಸಕ್ಕೆ ಕೈಹಾಕುತ್ತಿದ್ದೇನೆ. ಈ ನನ್ನ ಪ್ರಯತ್ನವನ್ನು ಸಹೃದಯರು “ಪರಿಚಯ ನುಡಿ ನಮನ” ವೆಂದು ಗ್ರಹಿಸಬೇಕಾಗಿ ಕೋರುತ್ತೇನೆ.

ಮೊದಲನೆಯದಾಗಿ ಸರ್‌.ಎಂ. ವಿಶ್ವೇಶ್ವರಯ್ಯನವರ – ಇನ್ನು ಮುಂದೆಲ್ಲಾ ಎಂ. ವಿ. ಯವರು ಎಂದೇ ನಿರ್ದೇಶಿಸುತ್ತೇನೆ-ಜೀವನ, ಸಾಧನೆಗಳ ಬಗ್ಗೆ ವಿ. ಸೀ. ಯವರು ಏನು ಹೇಳಿದ್ದಾರೆ ಎಂಬುದನ್ನೇ ನೋಡೋಣ. ಅದಕ್ಕೆ ಮೊದಲು ಎಂ. ವಿ. ಯವರನ್ನು ಕುರಿತು ನನ್ನ ಮನಸ್ಸಿನಲ್ಲಿದ್ದ ಭಾವನೆಗಳು ಯಾವುವು ಎಂಬುದನ್ನು ಹೇಳಬೇಕು. ಅವರ ವಿಷಯ ಅಸ್ಪಷ್ಟವಾಗಿಯಾದರೂ ನನಗೆ ಏನಾದರೂ ತಿಳಿಯಲು ಪ್ರಾರಂಭವಾದದ್ದು ನಾನು ೧೪-೧೫ ವರ್ಷದವನಾಗಿದ್ದಾಗ, ಎಂದರೆ ೧೯೪೩-೪೪ರ ಸುಮಾರಿನಲ್ಲಿ. ಆ ವೇಳೆಗಾಗಲೇ ಎಂ. ವಿ.ಯವರಿಗೆ ೮೨-೮೩ ವಯಸ್ಸು. ಅವರು ಅತ್ಯಂತ ಬುದ್ಧಿವಂತರಾಗಿದ್ದವರು ಎಂಬುದು ಜನಜನಿತವಾಗಿತ್ತು. ಎಷ್ಟರಮಟ್ಟಿಗೆ ಎಂದರೆ ನಾನು ಏನಾದರೂ ಬುದ್ಧಿವಂತಿಕೆ ತೋರಿಸಲುಹೋದರೆ ಓಹೋ ಇವನದು ವಿಶ್ವೇಶ್ವರಯ್ಯನವರ ಬ್ರೇನು ಎನ್ನುತ್ತಿದ್ದರು. ಆ ವೇಳೆಗೆ ಜನರ ಕಲ್ಪನೆಯಲ್ಲಿದ್ದದ್ದು ಇವರು ಕನ್ನಂಬಾಡಿ ಕಟ್ಟಿಸಿದರು, ಮಹಾರಾಜರಿಗೂ ಇವರಿಗೂ ಪರಮಾಪ್ತತೆ, ಇವರಷ್ಟು ಪ್ರಾಮಾಣಿಕತೆ ಗಾಂಧೀಜಿಯವರನ್ನು ಬಿಟ್ಟರೆ ಇನ್ನು ಯಾರಲ್ಲೂ ಇಲ್ಲ ಇತ್ಯಾದಿ.

ಮುಂದೆ ೧೯೫೦-೫೧ರ ಸುಮಾರಿನಲ್ಲಿ ಎಂ.ವಿ.ಯವರ ಜೀವನ-ಸಾಧನೆಗಳ ವಿಷಯವನ್ನು ಅವರ ಮೇಲಿನ ಬರಹಗಳು ಮತ್ತು ಅವರೇ ಬರೆದಿರುವ ಉದ್ಯೋಗದ ಅವಧಿಯ ಸ್ಮೃತಿಗಳು ಮುಂತಾದುವನ್ನು ಓದಿದ ಮೇಲೆ ನನಗೆ ಈ ಹಿಂದೆ ತಿಳಿದಿದ್ದದ್ದು ಎಷ್ಟು ಸ್ವಲ್ಪ ಎಂಬುದು ಗೊತ್ತಾಗುತ್ತಾ ಹೋಯಿತು. ಅವರ ಬುದ್ಧಿಶಕ್ತಿ, ಯೋಜನಾ ಪ್ರತಿಭೆ ಮತ್ತು ಚಾರಿತ್ರ್ಯ ಶುದ್ಧಿ ಇವುಗಳ ಪರಿಚಯವಾಗುತ್ತಾ ಅವರು ನನ್ನ ಮತ್ತು ನನ್ನಂತಹವರ ಮನಸ್ಸಿನಲ್ಲಿ ಗೊಮ್ಮಟನೆತ್ತರಕ್ಕೆ ಬೆಳೆದರು. ಅವರ ವಿಷಯವಾಗಿ ಏನಾದರೂ ಕಿವಿಗೆ ಬಿದ್ದರೆ ಗಾಂಧೀಜಿಯನ್ನು ಕುರಿತು ಐನ್‌ಸ್ಟೈನ್‌ಹೇಳಿದಂತೆ ‘ಅವರಂತಹವರು ಇದ್ದರು ಎಂದರೆ ನಂಬುವುದೇ ಕಷ್ಟ’ ಎನ್ನುವ ಭಾವನೆ ಬರತೊಡಗಿತು. ಇನ್ನೂ ಮುಂದುವರಿದ ಸಮಕಾಲೀನ ಸಮಾಜದ ಪರಿಸ್ಥಿತಿಯ ಹಿನ್ನೆಲೆಯಲ್ಲಿ-ವಿದ್ಯಾವಂತರೆನ್ನಿಸಿಕೊಂಡವರ ಜ್ಞಾನದ ಟೊಳ್ಳುತನ, ಯಾವ ಒಂದು ಕ್ಷೇತ್ರವನ್ನೂ ಬಿಡದೆ ವ್ಯಾಪಕವಾಗಿ ಆವರಿಸಿಕೊಂಡು ಜನಸಾಮಾನ್ಯರನ್ನು ಹಿಂಡಿ ಹೀರುತ್ತಿರುವ ಭ್ರಷ್ಟಾಚಾರ ಇವನ್ನೆಲ್ಲ ನೋಡಿದರೆ ಎಂ.ವಿ. ಯಾವುದೋ ಪುರಾಣಯುಗದ ವ್ಯಕ್ತಿ ಎನ್ನಿಸುತ್ತದೆ. ಇಂಥವರನ್ನು ಕುರಿತು ವಿ. ಸೀ. ವಿಶ್ಲೇಷಣಾತ್ಮಕವಾಗಿ ಏನು ತಾನೆ, ಹೇಗೆ ತಾನೆ ಬರೆಯಬಲ್ಲರು ಎಂಬ ಸಂದೇಹವೂ ನಮ್ಮನ್ನು ಕಾಡುತ್ತದೆ.

ನಿಜ, ವಿ. ಸೀ. ತಮ್ಮ ಈ ಪುಸ್ತಕದಲ್ಲಿ ಎಂ. ವಿ. ಯವರ ಪ್ರತಿಭಾ ಜಗತ್ತನ್ನು ತಮ್ಮ ಚಿಕಿತ್ಸಕ ಬುದ್ಧಿಯ ಮೂಲಕ ಅನಾಯಾಸವಾಗಿ ಪ್ರವೇಶಿಸಿದ್ದಾರೆ. ಕುವೆಂಪು ಶ್ರೀಮಾತೆ ಶಾರದಾ ದೇವಿಯವರನ್ನು ಕುರಿತು ಒಂದು ಕವನದಲ್ಲಿ ‘ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ” ಎಂದು ಹೇಳಿರುವ ಮಾತನ್ನು ಬದಲಾಯಿಸಿ ‘ಪ್ರತಿಭೆ ಪ್ರತಿಭೆಯನ್ನು ಅರಿವುದು’ ಎಂದು ಹೇಳಬಹುದು. ‘ವಿದ್ವಾನೇವ ವಿಜಾನಂತಿ ವಿದ್ವಜ್ಜನ ಪರಿಶ್ರಮಂ’ ಎಂಬ ಉಕ್ತಿಯೂ ಉಂಟು. (ವಿದ್ವಜ್ವನರ ಪರಿಶ್ರಮ ವಿದ್ವಾಂಸರಿಗೆ ಮಾತ್ರ ಅರ್ಥವಾಗುತ್ತದೆ.)ಅದಕ್ಕೆ ಉದಾಹರಣೆಯಾಗಿ ಈ ಮಾತುಗಳನ್ನು ನೋಡಿ :

“ಈ ಯುಗದ ಲಕ್ಷಣವೆಂದರೆ ವಿಜ್ಞಾನ, ತಂತ್ರಜ್ಞಾನಗಳ ಸೇರ್ಪಡೆ ಹಾಗೂ ಇಂಜಿನಿಯರನ ಚಲನಶೀಲತೆ ಮತ್ತು ಕಾರ್ಯಸಾಹಸದ ಪ್ರಮಾಣ. ವಸ್ತುಗಳು, ವಿಚಾರಗಳು ಹಾಗೂ ವಿನ್ಯಾಸಗಳ ಚಲನೆದಷ್ಟೆ ಮನುಷ್ಯನ ಚಲನೆಯೂ ಅಭಿವೃದ್ಧಿಯ ಮೂಲವಾಗಿದೆ, ಪ್ರೇರಣೆಯಾಗಿದೆ. ಎಲ್ಲ ಕಡೆಯಲ್ಲೂ ಹೆಚ್ಚು ಸುಖಮಯವೂ ಹೆಚ್ಚು ದಕ್ಷವೂ ಆದ ಬದುಕಿಗೆ ಆಧಾರವಾಗಿರುವುದು ಪ್ರತಿಯೊಂದರ ಬಗೆಗೂ ಜ್ಞಾನವೆಂಬುದರ ಪ್ರಸಾರ. ಎಲ್ಲಿಯಾದರೂ ಎದ್ದು ಕಾಣುವ ವಿನ್ಯಾಸಗಳು ಮತ್ತು ವಿಧಾನಗಳು ದೃಷ್ಟಿಗೆ ಬಿದ್ದಾಗ, ಹೃದಯ ಮನಸ್ಸು ಮತ್ತು ಕಣ್ಣು ಪುಳಕಗೊಳ್ಳುತ್ತದೆ. ಅನುಕರಣೆ, ಅನುಸರಣೆ ಹಾಗೂ ಸೃಜನಾತ್ಮಕ ಸಾಹಸ ಉಳಿದುದನ್ನು ಮಾಡುತ್ತವೆ.” (ಪುಟ ೫).

ವಿ.ಸೀ. ಯವರು ವಿಶ್ವೇಶ್ವರಯ್ಯನವರ ಬುದ್ಧಿ ಕೆಲಸ ಮಾಡಿದುದನ್ನು ಆ ಬುದ್ಧಿಯ ಕೆಲಸವನ್ನು ಮನಸ್ಸು ಅಳವಡಿಸಿಕೊಂಡುದನ್ನು, ಆ ಅಳವಡಿಕೆ ಕಾರ್ಯಗತವಾದುದನ್ನು ಸೂತ್ರರೂಪದಲ್ಲಿ ನಿರೂಪಿಸಿದ್ದಾರೆ :

“ಶಿಲ್ಪಿಯ ಕಾರ್ಯದ ಒಂದು ಭಾಗ ವಿಚಾರ. (ಅದನ್ನು)ಮಂತ್ರ ಎನ್ನಬಹುದು. ಅದು ಶುದ್ಧ ವಿಜ್ಞಾನದಂತೆ, ಮೂಲ ದರ್ಶನ. ಆ ದರ್ಶನವನ್ನು ವಸ್ತುವನ್ನಾಗಿ ಮಾಡುವುದು ತಂತ್ರಜ್ಞತೆ-ತಂತ್ರ. ಇದೇ ಶಿಲ್ಪಿಯ ಕಾರ್ಯದ ಎರಡನೆಯ ಭಾಗ. ಮೂರನೆಯದು ಉಪಕರಣ ಯಂತ್ರ. ಯಂತ್ರೋಪಕರಣ, ಜನ ಹಾಗೂ ಹಣ ಮುಂತಾಗಿ, ನಾವು ಇಚ್ಛಿಸಿದುದನ್ನು ಮಾಡಲು ಸಹಾಯಕವಾಗುವುವು.” (ಪುಟ ೬)

ಅಂಥ ಪ್ರತಿಭಾಶಾಲಿಯಾಗಿದ್ದ ವ್ಯಕ್ತಿ, ಆ ಪ್ರತಿಭೆಯ ವಿಷಯದಲ್ಲಿ, ಅದು ಕಾರ್ಯಗತವಾಗುವ ವಿಷಯದಲ್ಲಿ ಸ್ವಾರ್ಥಿಯೂ, ಸ್ವಕೇಂದ್ರೀಕೃತರೂ ಆಗಿರಲಿಲ್ಲ. ಅವರ ಶಕ್ತಿಯೆಲ್ಲವೂ ಸಮಾಜಮುಖಿಯಾಗಬೇಕೆಂದು ಅವರು ಬಯಸಿದರು. ಅದನ್ನು ಹಾಗೆ ಹರಿಯಬಿಟ್ಟರು. ಆದ್ದರಿಂದಲೇ ಆ ಸುವರ್ಣ ಪುಷ್ಪವು ಸುಗಂಧಭರಿತವೂ ಆದದ್ದು. ವಿ. ಸೀ. ಅಂದಿನ ಭಾರತದ ಸ್ಥಿತಿಯನ್ನು ವಿವೇಕಾನಂದರು ಹೇಳಿದಂತೆ, ಸತ್ತ ಒಂದು ಜನಾಂಗವನ್ನು ಅಥವಾ ಕುವೆಂಪು ಹೇಳಿದಂತೆ ಸತ್ತಂತಿರುವವರನ್ನು ಬಡಿದೆಬ್ಬಿಸುವ ಕಾರ್ಯವನ್ನು ವಿಶ್ವೇಶ್ವರಯ್ಯನವರು ಕೈಗೊಂಡರು. ದೊಡ್ಡ ಜಲಾಶಯವನ್ನು ನಿರ್ಮಿಸಿದರೆ ಸಾಲದು, ಅದರ ನೀರು ಕಾಲುವೆಗಳಲ್ಲಿ ಹರಿದು ಪ್ರತಿಯೊಬ್ಬ ರೈತನ ಜಮೀನಿಗೂ ಹರಿಯುವಂತೆ ಮಾಡಬೇಕಾದದ್ದು ಅಗತ್ಯ ಎಂಬುದನ್ನು ವಿಶ್ವೇಶ್ವರನವರ ವಿಶ್ವತೋವಿಶಾಲವಾದ ಹೃದಯ ಅರಿತಿತ್ತು. ವಿ. ಸೀ. ಅದನ್ನು ಮನಮುಟ್ಟುವಂತೆ ಹೇಳಿದ್ದಾನೆ :

“ಅವರು (ಎಂ. ವಿ.)ತಮ್ಮ ಮಹದಾಶೆಯನ್ನು ವೈಯಕ್ತಿಕ ಏಳಿಗೆಗೆ ಸೀಮಿತಗೊಳಿಸಿದ್ದರೆ, ಬಾಳಿನಲ್ಲಿ ಬೇರೊಂದು ಬಗೆಯಲ್ಲು ಛಾಪು ಮೂಡಿಸುವುದು ಅವರಿಗೇನೂ ಕಷ್ಟವಾಗಿರಬೇಕಾಗಿಲ್ಲ. ವೃತ್ತಿಪರ ಇಂಜಿನಿಯರ್‌ಆಗಿ ಅವರು ಉನ್ನತ ಮಹತ್ವಗಳಿಸಿದರು, ದಿಟ. ಆದರೆ ಅವರ ಆಸೆ ಇದ್ದುದು ತಾವು ನೋಡಿದ ಇಡೀ ರಾಷ್ಟ್ರಜನತೆಯ ಯೋಗಕ್ಷೇಮವನ್ನೇ ಸಾಧಿಸಿವುದಾಗಿತ್ತು. ಆ ಜನ ಬೌದ್ಧಿಕವಾಗಿ ತಣ್ಣಗಾಗಿ ಹೆಪ್ಪುಗಟ್ಟಿದ್ದರು. ಸಂಪ್ರದಾಯ ಶರಣರು, ನಿಂತ ನೀರಿನಂತೆ, ಆಶೋತ್ತರಹೀನರು, ಹಿಂದಿನ ಕಾಲದವರು. ಸುಮಾರು ಐದು ಸಾವಿರ ಮೈಲಿ ದೂರದಿಂದ ಆಳುತ್ತಿದ್ದ ಸಣ್ಣ ರಾಜ್ಯ ಬ್ರಿಟನ್ನಿನ ಅಧೀನಕ್ಕೆ ಒಳಪಟ್ಟಿದ್ದವರು ; ವಿಚಾರ-ಆಚಾರ ಸ್ವಾತಂತ್ರ್ಯ ಸುರುಟಿಹೋಗಿದ್ದವರು; ಇತರ ಆಧುನಿಕ ದೇಶಗಳಲ್ಲಿ ಏನು ನಡೆಯುತ್ತಿತ್ತೋ ಅದನ್ನು ನೋಡಲು ಸಾಧನಶಕ್ತಿ ಮತ್ತು ಇಚ್ಛೆಯೂ ಇಲ್ಲದವರು. ಈ ವಿಚಾರ ಅವರಿಗೆ ಹೀನಾಯವೆನಿಸಿತ್ತು ಮತ್ತು ವರ್ಡ್ಸ್‌ವರ್ತ್‌ನ ಪ್ರೊಟಿಸೈಲಾಸ್‌ನಂತೆ, ‘ತನಗಿಂತ ಉತ್ತಮರಾದರೂ ಪ್ರಯತ್ನಿಸದಿದ್ದರೆ, ತಾನು ಮಾಡುವುದು’ ಎಂದಂತೆ, ವಿಚಾರ ಮತ್ತು ವಿನ್ಯಾಸಗಳನ್ನು ಮೊದಲು ಒಪ್ಪಿಗೆಗಾಗಿ ಮಂಡಿಸುವುದಾಯಿತು. ಹಾಗಾಗಿ ಅವರು ತಮ್ಮ ಜೀವನವನ್ನೇ ಜನತೆಯ ಒಳಿತಿಗಾಗಿ ಮುಡಿಪಿಟ್ಟರು.” (ಪುಟ ೭)

ಹೀಗೆ ಅವರು ತೀರ್ಮಾನಿಸಿ ಇಡೀ ಭರತ ಖಂಡದ ಏಳ್ಗೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡದ್ದು ಹೌದು. ಆದರೆ ಅದು ಮೂರ್ತವಾಗಲು ಅವರು ಮೊದಲ ಹೆಜ್ಜೆಯನ್ನು ಇಟ್ಟಿದ್ದು ಅಂದಿನ ಬೊಂಬಾಯಿ ಪ್ರಾಂತದ ಪುಣೆಯಲ್ಲಿ. ಅಲ್ಲಿಯ ಖಡಕ್‌ವಾಸ್ಲಾದಲ್ಲಿದ್ದಾಗ ಸ್ವಯಂಚಾಲಿತ ತೂಬನ್ನು ಅವರು ಕಂಡುಹಿಡಿದರು. ‘ಅದರ ಸ್ವಾಮ್ಯವನ್ನು ಪಡೆದುಕೊಳ್ಳಿ’ ನಿಮಗೆ ಜೀವಮಾನ ಪರ್ಯಂತ ಒಳ್ಳೆಯ ಆದಾಯ ಬರುತ್ತದೆ’ ಎಂದು ಆಂಗ್ಲ ಮೇಲಾಧಿಕಾರಿಗಳು ಸೂಚಿಸಿದಾಗ ಎಂ. ವಿ. ಯವರು ಒಪ್ಪಲಿಲ್ಲ. ‘ಇದೆಲ್ಲ ಜನಹಿತಕ್ಕಾಗಿ’ ಎಂದುಬಿಟ್ಟರು. ಮುಂದೆ ಮೈಸೂರಿನ ಕೃಷ್ಣರಾಜಸಾಗರದಲ್ಲೂ, ಗ್ವಾಲಿಯರಿನ ಟೆಗ್ರಾ ಅಣೆಕಟ್ಟೆ ಮತ್ತಿತರ ಸ್ಥಳಗಳಲ್ಲೂ ಇದೇ ಮಾದರಿಯ ತೂಬು ಬಳಕೆಗೆ ಬಂದಿತು.

ವಿಶ್ವೇಶ್ವರಯ್ಯನವರು ಇಂಥ ಅನೇಕ ಲೋಕೋಪಕಾರಿ ಕಾರ್ಯಗಳನ್ನು ತಾವು ಇದ್ದಕಡೆಯಲ್ಲೆಲ್ಲ ಮಾಡಿದರು. ಅವನ್ನೆಲ್ಲ ವಿ. ಸೀ.ಯವರು ಸವಿವರವಾಗಿ ನಿರೂಪಿಸಿದ್ದಾರೆ. ಇವೆಲ್ಲ ಪ್ರತಿಭೆಗೆ, ಕಾರ್ಯದಕ್ಷತೆಗೆ ಸಂಬಂಧಪಟ್ಟವು. ಇವು ಎಲ್ಲರಿಗೂ ಸಾಮಾನ್ಯವಾಗಿ ಲಭ್ಯವಾಗತಕ್ಕವರಗಳಲ್ಲ. ಆದರೆ ಯಾರೇ ಆಗಲಿ ಜೀವನದಲ್ಲಿ ಅನುಷ್ಠಾನಕ್ಕೆ ತರಲೇಬೇಕಾದ ಕೆಲವು ವ್ರತಗಳಿವೆ. ಅದರಲ್ಲೂ ಸರ್ಕಾರದಿಂದ ಸಂಬಳ ಪಡೆದು, ಸಾರ್ವಜನಿಕರ ತೆರಿಗೆ ಹಣದಿಂದ ಜೀವನ ನಿರ್ವಹಣೆ ಮಾಡುತ್ತಿರುವ ನೌಕರರ ಒಂದು ದೊಡ್ಡ ಸೈನ್ಯವೇ ಇದೆ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರು ಸಂಸ್ಥಾನದ ಒಟ್ಟು ಆದಾಯ ಸುಮಾರು ಐದು ಕೋಟಿ ರೂಪಾಯಿಗಳು. ಐನೂರು ಕೋಟಿಯಲ್ಲ, ಬರೇ ಐದು ಕೋಟಿ ರೂಪಾಯಿಗಳು. ರಾಜರ್ಷಿಗಳೆಂದು ಹೆಸರು ಪಡೆದಿದ್ದ ಶ್ರೀ ಕೃಷ್ಣರಾಜ ಒಡೆಯರ್‌ಅವರೂ, ಅವರ ದಿವಾನರುಗಳೂ ಅದರಲ್ಲಿ ಒಂದು ಚಿಕ್ಕಾಸೂ ಪೋಲಾಗದಂತೆ ಇಡೀ ಹಣ ಪ್ರಜೆಗಳ ಅನುಕೂಲಕ್ಕಾಗಿ ವೆಚ್ಚವಾಗತಕ್ಕದ್ದು ಎಂದು ತೀರ್ಮಾನಿಸಿ, ವ್ರತದಂತೆ ಅದನ್ನು ಪಾಲಿಸಿದರು. ಅದನ್ನು ಅತಿರೇಕ ಎನ್ನುವಲ್ಲಿಗೆ ಒಯ್ದು ಸಾರ್ವಕಾಲಿಕ ಆದರ್ಶ ಮಹಾಪುರುಷರಾಗಿ ಬೆಳಗುತ್ತಿರುವವರು ಪ್ರಾತಃಸ್ಮರಣೀಯರಾದ ಸರ್‌ಎಂ. ವಿಶ್ವೇಶ್ವರಯ್ಯನವರು. ಮೈಸೂರಿಗೆ ಮುಖ್ಯ ಎಂಜಿನಿಯರಾಗಿ ಬರಬೇಕೆಂದು ಅರಮನೆಯಿಂದ ಅವರಿಗೆ ಆಹ್ವಾನ ಹೋದದ್ದು ಅವರ ಬಂಧುವಾದ ಶ್ರೀ ರಾಮಯ್ಯನವರ ಮೂಲಕ. ವಿಶ್ವೇಶ್ವರಯ್ಯನವರು ಆಹ್ವಾನವನ್ನು ಒಪ್ಪಿದರು-ಒಂದು ಷರತ್ತಿನ ಮೇಲೆ ತಮ್ಮ ಬಂಧುಗಳಲ್ಲಿ ಯಾರೂ ಉದ್ಯೋಗ ಮುಂತಾದ ಯಾವುದಕ್ಕೂ ತಮಗೆ ಶಿಫಾರಸ್ಸು ತರಕೂಡದು ಎಂಬುದು ಆ ಷರತ್ತು ಅದನ್ನು ರಾಮಯ್ಯನವರು ಒಪ್ಪಿಕೊಂಡರು. ಎಂ. ವಿ. ಅವರು. ಅದನ್ನು ಅಕ್ಷರಶಃ ಪಾಲಿಸಿದರು. ವಿ. ಸೀ. ಹೇಳುತ್ತಾರೆ : “ಇದರಿಂದ ಅವರ ನಿಕಟ ಬಂಧುವರ್ಗದವರ ಅಸಮಾಧಾನಕ್ಕೆ ಅವರು ಗುರಿಯಾಗಬೇಕಾಯಿತು. ಆದರೆ ಆ ಕ್ರಮ ನಾಡಿನ ಇತರರಿಂದ ಗೌರವವನ್ನು ವಿಶ್ವಾಸವನ್ನು ಸಂಪಾದಿಸಿ ಕೊಟ್ಟಿತು. (ಪುಟ ೨೯).

ಇಂದು ಕರ್ನಾಟಕ ಸರ್ಕಾರದ ಆಯವ್ಯಯ ಎಷ್ಟೋ ಕೋಟಿ ರೂಪಾಯಿಗಳು. ಅದನ್ನು ದುರ್ವ್ಯಯ ಮಾಡಲು ತಮ್ಮ ಖಾಸಗಿ ಸಂಪತ್ತಿನ ಭಾಗವಾಗಿ ಮಾಡಲು ರಾಜಕಾರಣಿಗಳಲ್ಲೂ ಸರ್ಕಾರೀ ನೌಕರರಲ್ಲೂ ಏಕಪ್ರಕಾರವಾದ ಪೈಪೋಟಿ ನಡೆಯುತ್ತಿದೆ ಎಂಬುದು ಪತ್ರಿಕೆಗಳಿಂದ, ಲೋಕಾಯುಕ್ತರಿಂದ, ಸಾರ್ವಜನಿಕರಿಂದ ತಿಳಿಯುತ್ತಿದೆ. ಅಸಹಾಯಕರಾದ ತೆರಿಗೆದಾರರು ಮಂಕು ಕವಿದ ಸ್ಥಿತಿಯಲ್ಲಿದ್ದೇವೆ. ಆದರೆ ವಿಶ್ವೇಶ್ವರಯ್ಯನವರು ಈ ಎಲ್ಲ ವಿಷಯಗಳಲ್ಲೂ ಋಷಿ ಸದೃಶರಾಗಿದ್ದರು. ವಿ. ಸೀ. ಅವರು ಈ ಗುಣಗಳನ್ನು ನಿರೂಪಿಸುವ ರೀತಿ ಹೃದ್ಯವಾಗಿದೆ:

“ವೈಯಕ್ತಿಕವಾಗಿ ವಿಶ್ವೇಶ್ವರಯ್ಯ ಶುಭ್ರರು, ಅಚ್ಚುಕಟ್ಟಾಗಿದ್ದರು, ಆಯಾಸರಹಿತರು, ಉತ್ಸಾಹದ ಚಿಲುಮೆ. ತಮ್ಮೊಡನೆ ಅಥವಾ ತಮಗಾಗಿ ಕೆಲಸ ಮಾಡುತ್ತಿದ್ದವರು ಎಲ್ಲರೂ ಹಾಗೆಯೇ ಇರಬೇಕೆಂದು ಅವರ ನಿರೀಕ್ಷೆ” (ಪುಟ ೨೯)

ಬಹಳ ಕಾಲದವರೆಗೆ ನಾನು ಮತ್ತು ನನ್ನಂಥವರು-ಎಂದರೆ ಲೋಕದ ರೀತಿ ನೀತಿಗಳನ್ನಾಗಲಿ, ಜನರ ಸ್ವಭಾವ ವೈಚಿತ್ರ್ಯಗಳನ್ನಾಗಲಿ, ರಾಜಕೀಯದ ಕುಟಿಲತೆಗಳನ್ನಾಗಲಿ ತಿಳಿಯದವರು, ಜಾತೀಯತೆಯ ವಿಷಪ್ರಭಾವಕ್ಕೆ ಒಳಗಾಗದವರು-ವಿಶ್ವೇಶ್ವರಯ್ಯನವರು ತಮ್ಮ ಕೆಲಸಕಾರ್ಯಗಳಲ್ಲಿ ಯೋಜನೆಗಳನ್ನು ಯಶಸ್ವಿಗೊಳಿಸುವುದರಲ್ಲಿ ಬಹುಮಟ್ಟಿಗೆ ಆಳರಸರ-ಎಂದರೆ ರಾಜರ್ಷಿ ಎಂದೇ ಮಹಾತ್ಮಾಗಾಂಧಿಯವರು ಕರೆದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ಅವರ – ಬೆಂಬಲವನ್ನು ಪಡೆದಿದ್ದವರು ಎಂದೇ ಭಾವಿಸಿದ್ದೆವು. ಕಾಲಕ್ರಮದಲ್ಲಿ ನಮಗೆ ಈ ವಿಷಯದಲ್ಲಿ ಭ್ರಮನಿರಸನವಾದರೂ ವಿಶ್ವೇಸ್ವರಯ್ಯನವರು ಎಂಥ ಕಠಿಣ ಪರಿಸ್ಥಿತಿಯಲ್ಲಿ ಒಳಗಿನ ಮತ್ತು ಹೊರಗಿನ ಒತ್ತಡಗಳನ್ನು ಸಹಿಸಿಕೊಂಡೂ ಕೆಲಸ ಮಾಡಬೇಕಾಗಿತ್ತು ಎಂಬುದು ತಿಳಿದಿರಲಿಲ್ಲ. ಅನಂತರ ವಿಶ್ವೇಶ್ವರಯ್ಯನವರ ಬರಹಗಳನ್ನೂ, ಅದಕ್ಕಿಂತ ಹೆಚ್ಚಾಗಿ ಇತರರು, ಅವರನ್ನು ಬಹುವಾಗಿ ಗೌರವಿಸುತ್ತಿದ್ದವರು, ನೀಡಿದ ಮಾಹಿತಿಗಳಿಂದಲೂ ನಿಜವಾದ ವಸ್ತುಸ್ಥಿತಿ ತಿಳಿಯಿತು. ಕೃಷ್ಣರಾಜ ಒಡೆಯರ್‌ಅವರು ತಮ್ಮ ದಿವಾನರಲ್ಲಿ ತುಂಬು ವಿಶ್ವಾಸವನ್ನೇ ಇಟ್ಟುಕೊಂಡಿದ್ದರು. ಆದರೆ ಸ್ವಪ್ರಯೋಜನವನ್ನು ಸಾಧಿಸಿಕೊಳ್ಳಲು, ವಿಶ್ವೇಶ್ವರಯ್ಯನವರಂತಹ ಅಗ್ನಿಸಮ ಶುದ್ಧರ ಸಮೀಪ ಸುಳಿಯಲಾರದ ಕೀಳು ಜನರ ಕಾರಸ್ಥಾನಗಳ ಶಕ್ತಿಯೂ ಪ್ರಬಲವಾಗೇ ಇತ್ತು. ವಿ. ಸೀ. ಅವರು ತಮಗೆ ದೊರೆತ ನಂಬಲರ್ಹವಾದ ಮಾಹಿತಿಯಿಂದ ಆ ಜಾಲಗಳ ರಚನೆಯನ್ನೂ ಅದು ಕೆಲಸ ಮಾಡುತ್ತಿದ್ದ ರೀತಿಯನ್ನೂ ಪರಮ ವಿವೇಕಿಗಳು, ರುಚಿ ಶುದ್ಧರೂ ಆದ ಲೇಖಕರೊಬ್ಬರು ತಿಳಿಸಬಹುದಾದ ರೀತಿಯಲ್ಲಿ ಓದುಗರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವುಗಳನ್ನು ಸಂಕ್ಷೇಪಿಸಿ ಹೀಗೆ ಹೇಳಬಹುದು :

೧. ವಿಶ್ವೇಶ್ವರಯ್ಯನವರು ಮೈಸೂರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದುದು ಯುದ್ಧಕಾಲದ ಭಾರತದ ಭಾಗವಾಗಿದ್ದ ಒಂದು ದೇಶೀ ಸಂಸ್ಥಾನದಲ್ಲಿ. ಅಲ್ಲಿ ಅನೇಕ ರೀತಿಯ ಇಕ್ಕಟ್ಟುಗಳು. “ಇಂಥ ಇಕ್ಕಟ್ಟಿನ ಸಂದರ್ಭಗಳಲ್ಲಿ ವಿಶ್ವೇಶ್ವರಯ್ಯನವರು ಮಾಡಿದ ಕೆಲಸವನ್ನು ಮೆಚ್ಚಿಕೊಳ್ಳುವುದಿರಲಿ ಅನೇಕ ಪರಭಾವಶಾಲಿಗಳು ವಿಶ್ವೇಶ್ವರಯ್ಯನವರ ವಿರೋಧವಾಗಿಯೇ ಗುಂಪುಗೂಡಿ ನಿಂತು, ಅವರು ಕೈಗೊಂಡುದಕ್ಕೆಲ್ಲ ಅಡ್ಡಗಾಲು ಹಾಕಲು ಸಜ್ಜಾಗಿದ್ದರು.” (ಪುಟ ೪೨)

೨. ವಿಶ್ವೇಶ್ವರಯ್ಯನವರು ಪ್ರಾಮಾಣಿಕರು ನಿಜ, ಆದರೆ ಅವರು ಯೋಜನೆ ಹಾಕುವುದು ಅದನ್ನು ಪೌರ ಹಾಗೂ ಸಾಮಾಜಿಕ ಸಭೆಗಳಲ್ಲಿ ಚರ್ಚಿಸುವುದು ಮುಂತಾದವುಗಳ ಮೂಲಕ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂಬ ವ್ಯವಸ್ಥಿತವಾದ ಪ್ರಚಾರ ನಡೆಯಿತು.

೩. ಮಹಾರಾಜರ ಆಪ್ತ ಕಾರ್ಯದರ್ಶಿಗಳು ದಿವಾನರಿಗೂ ಮಹಾರಾಜರಿಗೂ ನಡುವೆ ಇದ್ದು ವಿಳಂಬ ನೀತಿ ಅನುಸರಿಸಿ ಯೋಜನೆಗಳು ಕಾರ್ಯಗತವಾಗದಂತೆ ಮಾಡುತ್ತಿದ್ದರು.

೪. ಮಹಾರಾಜದ ಸೋದರರಾದ ಯುವರಾಜನನ್ನು ದಾಳವನ್ನಾಗಿ ಮಾಡಿಕೊಂಡು ಅಸೂಯಾಪರರಾದ ದುಷ್ಟರು ದಿವಾನರ ಕೆಲಸವನ್ನು ಕಠಿಣಗೊಳಿಸಿದರು.

೫. ೧೯೧೬-೧೭ರ ಸುಮಾರಿನಲ್ಲಿ ಮದರಾಸಿನಲ್ಲಿ ಹುಟ್ಟಿದ ಬ್ರಾಹ್ಮಣ ವಿರೋಧಿ ಜಸ್ಟಿಸ್‌ಪಾರ್ಟಿ ಮೈಸೂರಿಗೂ ಕಾಲಿಟ್ಟು ಉದ್ಯೋಗದಲ್ಲಿ ಪ್ರತಿಭೆಗೆ ಪ್ರಾಶಸ್ತ್ಯ ಬೇಕು, ವಿದ್ಯಾಭ್ಯಾಸ ಮಾತ್ರ ಸಾಮಾನ್ಯರಿಗೂ ದೊರಕಬೇಕು ಎಂಬ ದಿವಾನರ ವಾದವನ್ನು ಅರ್ಥಶೂನ್ಯವಾಗಿಸಿತು.

೬. ಈ ಮಧ್ಯೆ ದಿವಾನರು ತ್ವರಿತವಾಗಿ ನಡೆಸಬೇಕು ಎಂದು ಉದ್ದೇಶಿಸಿದ್ದ ಯಾವ ಯೋಜನೆಗಳಿಗೂ ಮಹಾರಾಜರ ಸಹಿ ಬೀಳುವುದು ತಡವಾಗುತ್ತಾ ಹೋಯಿತು. “ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಅವಧಿಯ ಕೊನೆಯ ಒಂದು ಒಂದೂವರೆ ವರ್ಷ ಅವರ ಹಾಗೂ ಮಹಾರಾಜರ ಸಂಬಂಧ ತುಂಬ ಸಂಕಟಕರವಾಗಿತ್ತು. ತಮ್ಮ ದಿವಾನರ ವಿರುದ್ಧವಾಗಿ ತಮ್ಮ ಮೇಲೆ ಪ್ರಭಾವ ಬೀರಲಾಗುತ್ತಿದೆ ಎಂಬ ಅಂಶವನ್ನು ಮಹಾರಾಜರು ಒಪ್ಪಿಕೊಳ್ಳಲಿಲ್ಲ. (ಪುಟ ೪೭)

೧೯೧೮ರ ಡಿಸೆಂಬರ್‌ನಲ್ಲಿ ವಿಶ್ವೇಶ್ವರಯ್ಯನವರು ದಿವಾನಗಿರಿಯಿಂದ ನಿವೃತ್ತರಾದರು. ನಿವೃತ್ತರಾದರೂ ಅವರು ಮೈಸೂರು ರಾಜ್ಯದ ಅಭಿವೃದ್ಧಿಗಾಗಿ ಹಗಲಿರುಳೂ ದುಡಿದರು. ಅನೇಕ ಅದ್ಭುತಗಳನ್ನು ಸಾಧಿಸಿದರು. ಅವರ ಎಲ್ಲ ಸಧನೆಗಳನ್ನೂ ವಿ. ಸೀ. ಯವರು ಆಧಾರ ಸಹಿತವಾಗಿ ನಿರೂಪಿಸಿದ್ದಾರೆ.

ವಿಶ್ವೇಶ್ವರಯ್ಯನವರು ಉದ್ಯೋಗಗಳಿಗೆ ಮೇಲ್ಜಾತಿಯವರನ್ನೇ ಆಯ್ಕೆ ಮಾಡುವುದನ್ನು ಸಮರ್ಥಿಸಿದರು. ಕೆಳಜಾತಿಯವರಿಗೆ ಸಾಕಷ್ಟು ಅವಕಾಶವನ್ನೇ ಕೊಡುತ್ತಿರಲಿಲ್ಲ ಎಂಬ ಒಂದು ಅಪಾದನೆಯನ್ನು ಹೊತ್ತರು. ಆದರೆ ವಾಸ್ತವವಾಗಿ ಅವರು ಜಾತಿಪದ್ಧತಿಯನ್ನೇ ವಿರೋಧಿಸಿದರು. ಕೆಳಸ್ತರದಲ್ಲಿರುವವರು ವಿದ್ಯಾವಂತರಾಗಬೇಕು, ಉನ್ನತ ಸ್ತರಕ್ಕೆ ಏರಬೇಕು ಎಂಬುದು ಅವರ ವಾದವಾಗಿತ್ತು ಅದಕ್ಕಾಗಿ ಕೆಳಸ್ತರದವರಿಗೆ ಬೇಕಾದಷ್ಟು ವಿದ್ಯಾರ್ಥಿ ವೇತನಗಳು ದೊರಕುವಂತೆ ಮಾಡಲೂ ಅವರು ಪ್ರಯತ್ನಿಸಿದರು. ಪೌರ ಹಾಗೂ ಸಾಮಾಜಿಕ ಸಮ್ಮೇಳನದ ಒಂದು ಭಾಷಣದಲ್ಲಿ ಅವರು ಹೇಳಿದ್ದನ್ನು ವಿ. ಸೀ. ಉದ್ದರಿಸಿದ್ದಾರೆ :

“ಜಾತಿ ಪದ್ಧತಿ ನಮ್ಮ ಅನೇಕ ದೌರ್ಬಲ್ಯಗಳಿಗೆ ಕಾರಣವಾಗಿದೆ. ನಮ್ಮ ಜನತೆಯ ಸಾಕಷ್ಟು ದೊಡ್ಡ ಭಾಗವನ್ನು ಶಾಶ್ವತ ಹೀನಸ್ಥಿತಿಯಲ್ಲಿ ಇಟ್ಟಿದೆ. ನಿಮ್ಮ ವರ್ಗದ ಜನರ ಸ್ಥಿತಿಗತಿ ಸಮುದಾಯಕ್ಕೆ ಭೂಷಣವಲ್ಲ, ಅದೊಂದು ಹಳೆಯ ಕೆಡುಕು, ಅದಕ್ಕಾಗಿ ಆ ವರ್ಗದ ಜನರಿಗೆ ಪರಿಹಾರ ನೀಡಬೇಕಾಗಿದೆ. ಮೊದಲು ಅವರಿಗೆ ಶಿಕ್ಷಣ ಸುಲಭವಾಗಿ ಸಿಗುವಂತೆ ಮಾಡಬೇಕು, ಅನಂತರ ಅವರನ್ನು ಆಕ್ಷೇಪನೀಯ ಅಭ್ಯಾಸಗಳಿಂದ ದೂರ ಸೆಳೆದು, ಸರಿಯಾದ ಆದರ್ಶಗಳನ್ನು ನಡವಳಿಕೆಯ ರೀತಿಯನ್ನೂ ಅವರ ಮುಂದೆ ಇರಿಸಲು ಮಾನವೀಯ ಸಂಘಗಳನ್ನು ಕಟ್ಟಬೇಕು. ಇದರಿಂದ ಅವರ ಸ್ಥಿತಿಗತಿಯ ಸುಧಾರಣೆ ಸಾಧ್ಯ.”

ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಸರ್‌ಎಂ. ವಿ. ಯವರಿಗೆ ಕರ್ನಾಟಕದಲ್ಲೂ ಹೊರಗೆ ಭಾರತದಲ್ಲೂ ಬೇಕಾದಷ್ಟು ಗೌರವ ದೊರಕಿತು. ಅವರು “ಭಾರತರತ್ನ”ರಾದರು. ತಮ್ಮ ಕೊನೆಯ ಉಸಿರಿರುವವರೆಗೂ ಕರ್ನಾಟಕದ, ಭಾರತದ, ಜಗತ್ತಿನ ಜನರ ಒಳಿತನ್ನೆ ಬಯಸುತ್ತಾ ಬಾಳಿದರು.

ಅಂತಹ ಮಹನೀಯರ ಜೀವನ-ಸಾಧನೆಗಳನ್ನು ವಿ. ಸೀತಾರಾಮಯ್ಯನವರು ಪರಿಮಿತ ಅವಕಾಶದಲ್ಲಿ ಸುಂದರವಾಗಿ ಪ್ರಭಾವ ಬೀರುವ ರೀತಿಯಲ್ಲಿ ನಿರೂಪಿಸಿದ್ದಾರೆ. ಸರ್‌ಎಂ. ವಿ.ಯವರ ಜೀವನ ಚಿತ್ರಣಕ್ಕೆ ಶ್ರೀ ಎ. ಎನ್‌. ಮೂರ್ತಿರಾಯರ ಹಾಗೂ ಡಿ. ವಿ. ಗುಂಡಪ್ಪನವರ ಬರಹಗಳು ಪೂರಕವಾಗಿ ಬಂದಿವೆ.

‘ಕನ್ನಡದ ಕಣ್ವರು’ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಬಿ.ಎಂ.ಶ್ರೀಕಂಠಯ್ಯನವರನ್ನು ಕುರಿತದ್ದು ಎರಡನೆಯ ಪುಸ್ತಕ ಅದು ಓದುಗರನ್ನು ಒಂದು ರಸ ಪರ್ಯಟನಕ್ಕೆ ಮಾತ್ರವಲ್ಲದೆ ಅದ್ಭುತವಾದ ಪ್ರಪಂಚಕ್ಕೂ ಕೊಂಡೊಯ್ಯುತ್ತದೆ. ಅವರೂ ಅವರನ್ನು ವ್ಯಾಖ್ಯಾನಿಸ ಹೊರಟಿರುವವರೂ ಮಹಾನ್‌ವಿದ್ವಾಂಸರು. ಶ್ರೀಯವರು (ಮುಂದೆಲ್ಲ ಬಿ. ಎಂ. ಶ್ರೀಕಂಠಯ್ಯನವರನ್ನು ಬಿ. ಎಂ. ಶ್ರೀಯವರು ಎಂದೋ ಶ್ರೀಯವರು ಎಂದೋ ನಿರ್ದೇಶಿಸಲಾಗುತ್ತದೆ) ಇಂಗ್ಲಿಷ್‌, ಕನ್ನಡ, ಸಂಸ್ಕೃತ ಮತ್ತು ತಮಿಳು ಭಾಷೆಗಳನ್ನೂ ಅಲ್ಲಿನ ಸಾಹಿತ್ಯ ಸಂಪತ್ತನ್ನೂ ಚೆನ್ನಾಗಿ ಬಲ್ಲವರು. ಛಂದಸ್ಸು, ಭಾಷಾಶಾಸ್ತ್ರ ಮುಂತಾದ ಶಾಸ್ತ್ರವಿಷಯಗಳಲ್ಲಿ ಪಾರಂಗತರು. ವ್ಯಾಕರಣದ ವಿಷಯದಲ್ಲೂ ಆಳವಾದ ಜ್ಞಾನವುಳ್ಳವರು. ಕಾಲೇಜಿನಲ್ಲಿ ಅವರ ಶಿಷ್ಯರಾಗಿದ್ದ ವಿ. ಸೀ. ಯಾವುದರಲ್ಲಿ ತಾನೇ ಕಡಿಮೆ? ಅವರು ಕನ್ನಡದಲ್ಲಿ ಆನರ್ಸ್ ಅಥವಾ ಎಂ. ಎ. ಪದವಿ ಪಡೆದವರಲ್ಲ. ಅವರು ಓದಿದ್ದು ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ತತ್ವಶಾಸ್ತ್ರ. ಅವೆಲ್ಲದರಲ್ಲಿಯೂ, ಜೊತೆಗೆ ಕನ್ನಡದಲ್ಲಿಯೂ ತಳ ಸ್ಪರ್ಶಿಯಾದ ಜ್ಞಾನ. ನಯನೀತಿಗಳೇ ಮೈತಳೆದಂತೆ ಇದ್ದ ವಿ. ಸೀ. ಆ ಗುಣಗಳನ್ನು ಇತರರಲ್ಲಿ ಕಂಡು ಗೌರವಿಸುವವರು. ಈ ಗುರು ಶಿಷ್ಯರು ಒಬ್ಬನೊಬ್ಬರು ತೀರ ಹಚ್ಚಿಕೊಂಡರು. ಜೊತೆಗೆ ಕನ್ನಡದ ಸೇವೆಗೆ ತಮ್ಮನ್ನು ತಾವು ಮೀಸಲು ಮಾಡಿಕೊಂಡರು. ಹೊಸಗನ್ನಡದ ಹೊಂಬೆಳಸನ್ನು ಬಿತ್ತಿ ಬೆಳೆಸುವುದರ ಜೊತೆಗೆ ಹಳಗನ್ನಡ ನಡುಗನ್ನಡಗಳಲ್ಲಿ ಹುದುಗಿದ್ದ ಮುತ್ತು ಮಾಣಿಕ್ಯಗಳನ್ನು, ವಜ್ರ ವೈಡೂರ್ಯಗಳನ್ನು ಜನಸಾಮಾನ್ಯರಿಗೆ ನೀಡುವ ಸಲುವಾಗಿ ಸಮಸ್ತ ಕರ್ನಾಟಕದ ಅಂಗುಲ ಅಂಗುಲ ನೆಲವನ್ನು ತುಳಿದು ಪಾವನಗೊಂಡವರು, ಪಾವನಗೊಳಿಸಿದವರು. ಕನ್ನಡದ ಬೆಳವಣಿಗೆಗಾಗಿ ಸ್ಥಾಪಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ವಿನಮ್ರ ಕಾರ್ಯಕರ್ತರಾಗಿ ದುಡಿದವರು. ಹೀಗಿರುವಾಗ ಅವರಲ್ಲಿ ಶಿಷ್ಯರಾಗಿದ್ದವರು ತಮಗೆ ಗುರುಗಳಾಗಿದ್ದು ಹಿರಿಯಣ್ಣನಾದವರ, ಹಿರಿಯಣ್ಣನಾಗಿದ್ದು ಹಿರಿಯ ಮಿತ್ರರಾದವರ ಜೀವನ ಸಾಧನೆಗಳನ್ನು ವರ್ಣಿಸುವಾಗ ಸಂಯಮಪೂರ್ಣವಾದ ಉತ್ಸಾಹವನ್ನು ತೋರಿಸಿದ್ದಾರೆ, ಶ್ರೀಯವರ ಸುಂದರವಾದ ನುಡಿ ಚಿತ್ರವನ್ನು ರಚಿಸಿದ್ದಾರೆ.

ಒಂದು ಪಠ್ಯವನ್ನು ಬೋಧಿಸುವಾಗ ಶ್ರೀಯವರು ಆ ಕೃತಿಯು ರಚಿತವಾದ ಸಂದರ್ಭವನ್ನು ತಿಂಗಳುಗಟ್ಟಲೆ ಬೋಧಿಸಿಯಾರು. ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಅದು ಬೇಕಿಲ್ಲದಿರಬಹುದು; ಲೇಖಕರ ಬಗ್ಗೆ, ಅವರಿಗೆ ಅಷ್ಟೇ ಅನವಶ್ಯಕವೆಂದು ತೋರುವ ಲೇಖಕರ ಜೀವನ ವಿರಗಳನ್ನು ನೀಡಿಯಾರು. ಆದರೆ ಆ ವಿವರಗಳಲ್ಲಿದೆ ವಿದೇಶೀಯ ಲೇಖಕನೊಬ್ಬನು ಇಂಗ್ಲಿಷ್‌ನಲ್ಲಿ ಬರೆದ ಕೃತಿಯು ವಿದ್ಯಾರ್ಥಿಯ ಭಾವಕೋಶದ, ಚಿತ್ತ ವಲಯದ ಭಾಗವಾಗುವುದು ಹೇಗೆ ಎಂಬುದು ಗುರುಗಳ ಕಳಕಳಿ. ಸಹನೆ ಸಾಲದ ಶಿಷ್ಯರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್‌ರವರಿಗೆ ಶ್ರೀಯವರ ವಿರುದ್ಧ ದೂರು ಕೊಟ್ಟದ್ದೂ ಆಯಿತು. ದೂರಿನ ಸಾರಾಂಶ ‘ಇಟ್ಟಿರುವ ಪಾಠವನ್ನು ಬಿಟ್ಟು ಏನೇನೋ ಹೇಳುತ್ತಾರೆ.’ ಗುರುಗಳು ಆ ಪತ್ರವನ್ನು ತರಗತಿಯಲ್ಲಿ ಓದಿ ಹೇಳಿದರು ; ಬೇಸರಪಟ್ಟುಕೊಳ್ಳಲಿಲ್ಲ, ಬದಲಿಗೆ ಅಷ್ಟು ವಿಸ್ತಾರವಾಗಿ ಪೀಠಿಕೆಗಳನ್ನು ಏಕೆ ನೀಡುತ್ತಿದ್ದೇನೆ ಎಂಬುದನ್ನು ವಿವರಿಸಿದರು. “ಕಾಲೇಜಿನಲ್ಲಿ ನಾವು ಹುಡುಗರನ್ನು ಪಾಸ್‌ಮಾಡಿಸುವ ಯಂತ್ರಗಳಲ್ಲ ; ನಾವು educators. Not coaches” ಎಂದರು. ಅದರ ಅರ್ಥ ನಾವು ಜ್ಞಾನವನ್ನು ವೃದ್ಧಿಸುವವರು, ಮನೆಪಾಠದ ಮೇಷ್ಟ್ರುಗಳಲ್ಲ ಎಂದು. ಅದರ ಮೇಲೆ ವ್ಯಾಖ್ಯಾನ ಮಾಡುತ್ತಾ ವಿ. ಸೀ. ಯವರು ಹೇಳುತ್ತಾರೆ: “ಆ ದೃಷ್ಟಿ, ಮನಸ್ಸು, ಸಾಹಿತ್ಯದ ಉದಾರ ಸಂಸ್ಕಾರ ಎಷ್ಟು ಜನಕ್ಕೆ ಇರುತ್ತದೆಯೋ-ಇಂದಂತೂ ಹೇಳಲಾರೆ. ಪಾಠಗಳನ್ನೇ ಹೇಳಬೇಕಾಗಿಲ್ಲ ಎನ್ನುತ್ತಿರುವ ಈ ಕಾಲದಲ್ಲಿ ಈ ಮಾತು ಎಷ್ಟು ಜನಕ್ಕೆ ಪಧ್ಯವಾದಿತೋ ಅದನ್ನೂ ಹೇಳಲಾರೆ.” ಇಪ್ಪತ್ತು ವರ್ಷದ ಹಿಂದೆ ಈ ಮಾತು ಹೇಳಿದ ವಿ. ಸೀ. ಇಂದು ನಮ್ಮ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳನ್ನು ನೋಡಿದ್ದರೆ ತಮಗಾಗುತ್ತಿದ್ದ ನೋವನ್ನು ಹೇಗೆ ತಡೆದುಕೊಳ್ಳುತ್ತಿದ್ದರೋ ಹೇಳಲಾರೆ.

ಮುಂದಿನ ಹದಿನೈದು ಹದಿನಾರು ಪುಟಗಳಲ್ಲಿ ನಮ್ಮ ಗುರುಗಳು ತಮ್ಮ ಗುರುಗಳ ಪಾಠಕ್ರಮವನ್ನು ವಿಸ್ತಾರವಾಗಿ ವರ್ಣಿಸಿದ್ದಾರೆ. ಆ ವರ್ಣನೆ ಶ್ರೀಯವರು ನಿಂತು ಪಾಠ ಹೇಳುತ್ತಿದ್ದ ಅನನುಕರಣೀಯ ವೈಖರಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಅಷ್ಟೇ ಅಲ್ಲ ಆ ವಿದ್ಯುತ್‌ಪ್ರಭೆ ನಮ್ಮ ಬುದ್ಧಿಯನ್ನು ಕೋರೈಸುವಂತೆಯೂ ಮಾಡುತ್ತದೆ. ಆ ಪಾಠ ಕೇಳಿ ಅನೇಕ ದಶಕಗಳಾದ ಮೇಲೆ – ಅರ್ಧ ಶತಮಾನವೇ ಎನ್ನಿ – ಆ ಪಂಕ್ತಿಗಳನ್ನು ಅರ್ಥ ವ್ಯಾಖ್ಯಾನಗಳನ್ನುವಿ. ಸೀ. ಯವರು ಹೇಗೆ ನೆನಪಿಟ್ಟುಕೊಂಡಿದ್ದರೋ. (ಇದು ಒಂದೆರಡು ಪದಗಳ, ಪಂಕ್ತಿಗಳ, ಪ್ಯಾರಾಗಳ ಮಾತಲ್ಲ, ಅಖಂಡವಾಗಿ ಹದಿನಾರು ಪುಟಗಳ ವ್ಯಾಪ್ತಿಯುಳ್ಳದ್ದು.) ಉದ್ಧರಿಸಿ ಹೇಳಿದ ಪಂಕ್ತಿಗಳೂ, ಸಂದರ್ಭಗಳೇ ಇಷ್ಟಾದರೆ ವಿ. ಸೀ. ಯವರ ವಿಶ್ವಕೋಶದಂತಹ ಬುದ್ಧಿಕೋಶದಲ್ಲಿ ನೂರಾರು ಪುಟಗಳಿಗಾಗುವಷ್ಟಾದರೂ ಅವರ ಗುರುಗಳ ವ್ಯಾಖ್ಯಾನ ರಾಶಿ, ವರ್ಗೀಕೃತವಾಗಿ ಸಂಗ್ರಹಗೊಂಡಿದ್ದರಬೇಕಲ್ಲವೆ? ನಿತ್ಯಸ್ಮರಣೀಯರಾದ ಟಿ. ಎಸ್‌. ವೆಂಕಣ್ಣಯ್ಯ, ಎ. ಆರ್‌. ಕೃಷ್ಣಶಾಸ್ತ್ರಿಗಳು ಮುಂತಾದವರಿಗೆ ಪಾಠ ಹೇಳಿದ ಗುರುಗಳು “ಶ್ರೀ” ಅವರು- ಅವರ ಮಾತೂ ಇವರ ನಿರೂಪಣೆಯಲ್ಲಿ ಸೇರಿದೆ-ಅಂಥವರಿಂದ ಶಾಶ್ವತವಾಗಿ ನಿಲ್ಲುವಂತಹ ಕನ್ನಡದ ವಿದ್ವತ್‌ಕಾರ್ಯಗಳನ್ನು ಮಾಡಿಸಿದ ಗುರು ಅವರು ಇವರನ್ನು ಅಂಥದೇ ಕೆಲಸಕ್ಕೆ ಆಶ್ಚರ್ಯವೇನೂ ಇಲ್ಲ.

ಅಧ್ಯಾಪಕ ತಾನು ಪಾಠ ಹೇಳುವ ವಿಷಯದ ಬಗ್ಗೆ ಮಾತ್ರ ತಿಳಿದುಕೊಂಡಿದ್ದರೆ ಸಾಲದು. ಅದರ ಆಸುಪಾಸಿನ ವಿಷಯಗಳ ಬಗ್ಗೆಯೂ ನಿಷ್ಕೃಷ್ಟವಾದ ಜ್ಞಾನ ಇರಬೇಕು. ಆ ರೀತಿಯ ಜ್ಞಾನ ಇದ್ದವರು ಬಿ. ಎಂ. ಶ್ರೀ ಅಂಥ ವಿಸ್ತೃತ ವ್ಯಾಪ್ತಿಯ ಪಾಠ ಕೇಳಿದ್ದ ವಿ. ಸೀ. ಅವರು ತಮ್ಮ ಗುರುಗಳ ಬಗ್ಗೆ ಹೇಳುತ್ತಾರೆ :

“ಅಂಥ ಸಾಹಿತ್ಯದ ಗುರುಗಳು ನಂದಾ ದೀವಿಗೆಗಳು. ಆದುದರಿಂದ ನಾವು ಅವರಿಗೆ ನಿಜವಾದ ಗುರುಸ್ಥಾನವನ್ನು ಕೊಟ್ಟೆವು. ನಾನು ಸಾಹಿತ್ಯದಲ್ಲಿ ಯಾವ ಪದವಿಯನ್ನೂ ಪಡೆದವನಲ್ಲ. ನಾನು ಓದಿದ್ದು ತತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ. ಆದರೆ ನನಗೆ ಅನ್ನಿಸಿದೆ : ಯಾವುದಾದರೂ ಒಂದು ಸಮಾಜವಿಜಜ್ಞಾನ ಭಾಗವನ್ನೋ ಶಾಸ್ತ್ರಭಾಗವನ್ನೊ ಬಿ. ಎ. ತರಗತಿಗಳಲ್ಲಿ ಓದದೆ ಕನ್ನಡದಲ್ಲಿ ಎಂ. ಎ. ಮುಂತಾದ ಪರೀಕ್ಷೆಗಳಲ್ಲೆಲ್ಲ ಕೇವಲವಾಗಿ ವ್ಯಾಸಂಗ ಮಾಡಿ ಅದರ ಆನರ್ಸ್ ತರಗತಿಗಳಿಂದ ತನಿಗಯಾಗಿ ಲೋಕಜ್ಞಾನಕ್ಕೆ ಅಸಿದ್ಧವಾಗಿ ಕಲಿಸುವುದು. ಸೂಕ್ತವಲ್ಲ ಎಂದು. ‘ಶ್ರೀ’ಯವರು ಎಷ್ಟೋ ವೇಳೆ ಹೇಳುತ್ತಿದ್ದ ಪರಸ್ಪರ ವೈದೃಶ್ಯವಿರುವ ಎರಡು ಸಾಹಿತ್ಯ ಸಂಸ್ಕಾರವನ್ನೂ ವಿಭಾಗವನ್ನೂ ಓದಿದಲ್ಲದೆ ಒಂದರ ಎಷ್ಟು ಆಳವಾದ ಪ್ರಜ್ಞೆಯೂ ಅರೆತಿಳಿವಾಗುತ್ತದೆ ಎಂಬ ಮಾತೂ ಅದೇ ನೆಲಸಿನದು, ಹೃದಯದ್ದು.”

ಶ್ರೀಯವರ ಕೃತಿಗಳನ್ನೂ ಈ ಪುಸ್ತಕದಲ್ಲಿ ವಿ. ಸೀ. ಅವರು ಪರಿಚಯಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಶ್ರೀಯವರ ಬಹುದೊಡ್ಡ ಕೊಡುಗೆ “ಇಂಗ್ಲಿಷ್‌ಗೀತೆಗಳು” : ಕೆಲವು ಇಂಗ್ಲಿಷ್‌ಕವನಗಳನ್ನೂ ಅವರು ತಿಳಿಯಾದ ಕನ್ನಡಕ್ಕೆ, ಕನ್ನಡ ಕಾವ್ಯ ಪರಂಪರೆಯ ಮಾತ್ರಾಗಣದಲ್ಲಿ ಬಗೆಬಗೆಯ ಪ್ರಯೋಗಗಳನ್ನು ಮಾಡಿ, ಅನುವಾದಿಸಿದರು. ಅನೇಕ ತರುಣ ಕವಿಗಳಿಗೆ ಅದು ಹೊಸದೊಂದು ಯಕ್ಷಲೋಕವನ್ನೇ ತೆರೆದಂತಾಯಿತು. ಅವರ ಈ ಸಾಹಸದ ಪರಿಚಯವನ್ನು ವಿ. ಸೀ. ವಿವರವಾಗಿ ಮಾಡಿಕೊಟ್ಟಿದ್ದಾರೆ. ಅವರು ನಾಟಕಗಳಲ್ಲಿ ನಡೆಸಿದ ಪ್ರಯೋಗವನ್ನೂ ಅವರ ಇತರ ವಿದ್ವತ್‌ಕೃತಿಗಳನ್ನೂ ಸೂಕ್ತ ಹಿನ್ಲೆಯೊಡನೆ ವ್ಯಾಖ್ಯಾನಿಸಿದ್ದಾರೆ.

ಕನ್ನಡಕ್ಕಾಗಿ ಏನೆಲ್ಲ ಕಷ್ಟಗಳನ್ನು ಅನುಭವಿಸಿದ ಶ್ರೀಯವರು ಆರ್ಥಿಕವಾಗಿಯೂ ಶಕ್ತಿಮೀರಿ ಸಹಾಯ ನೀಡಿ ಸಂಸ್ಥೆಗಳು ಬೆಳೆಯುವಂತೆ ಮಾಡಿದರು. ವಿ. ಸೀ. ಹೇಳುತ್ತಾರೆ : “ಒಂದು ಸಂದರ್ಭದಲ್ಲಿ ಪರಿಷತ್ತಿನ ಅಚ್ಚುಕೂಟದ ನಿರ್ಮಾಣಕ್ಕಾಗಿ ‘ಶ್ರೀ’ಯವರು ಮೊದಲು ಒಂದು ಸಾವಿರ ರೂಪಾಯಿಗಳ ನೆರವು ಹಣ ಕೊಟ್ಟಿದರೂ ಅಚ್ಚುಕೂಟಕ್ಕೆ ಮೂಲಧನವಾಗುವಂತೆ ಐದುಸಾವಿರ ರೂಪಾಯಿಗಳ ದೇಣಿಗೆಯನ್ನು ಕೊಟ್ಟರು.” ಶ್ರೀಯವರು ಶ್ರೀಮಂತರಲ್ಲ, ಆದರೂ ಆ ಕಾಲಕ್ಕೆ ತುಂಬ ಹೆಚ್ಚು ಎನ್ನಹಬುದಾದಷ್ಟು ಮೊತ್ತವನ್ನು ಪರಿಷತ್ತಿಗೆ ದಾನ ಮಾಡಿದರು. ಅಂಥ ಸಂದರ್ಭದಲ್ಲೂ ಅವರನ್ನು ಕೃಪಣ ಎಂದು ಹೀಯಾಳಿಸಿದವರುಂಟು. ವಿ. ಸೀ.ಯವರ ಮುಂದೆ ‘ಶ್ರೀ’ಯವರು ತಮ್ಮ ಮನೆಯ, ಬಹುಬೇಗ ಹೆಂಡತಿಯನ್ನು ಕಳೆದುಕೊಂಡು ದಾರುಣವಾದ ಮನದ ವೇದನೆಗಳನ್ನು ತೋಡಿಕೊಂಡದ್ದುಂಟು. ಅವೆಲ್ಲ ಕರಗಿಸುವ ಮಾತುಗಳು.

ಇದೊಂದು ಒಳ್ಳೆಯ ಪುಸ್ತಕ. ಸಂಗ್ರಹಯೋಗ್ಯವಾದ ಗ್ರಂಥ. ಆದರೆ ಇದರಲ್ಲಿ ನಮ್ಮ ಗುರುಗಳ ಬರವಣಿಗೆಯ ಒಂದು ಲೋಪ ನನ್ನನ್ನು ಅತಿಯಾಗಿ ಕಾಡುತ್ತಿದೆ. ಕನ್ನಡ ಸುಲಭವಾಗಿ ಓದಿಸಿಕೊಳ್ಳುತ್ತಾ ಹೋಗುತ್ತದೆಯಷ್ಟೆ. ಮಧ್ಯೆ ಮಧ್ಯೆ ರಾಶಿ ರಾಶಿ ಇಂಗ್ಲಿಷ್‌ಪದ್ಯಭಾಗಗಳು. ಗದ್ಯದ ಗುಪ್ಪೆಗಳು ಬಂದು ಓದು ಸುಲಲಿತವಾಗುತ್ತಿಲ್ಲವಲ್ಲ ಎನ್ನಿಸುತ್ತದೆ. ಅವಷ್ಟೂ ಭಾಗಗಳ ಸರಳ ಕನ್ನಡಾನುವಾದದ ಅವಶ್ಯಕತೆ ಇದೆ. ಹಾಗೆ ಮಾಡಿ-ಕೊನೆಯಲ್ಲಿ ಅನುಬಂಧವಾಗಿ ಕೊಟ್ಟು-ಪುಸ್ತಕವನ್ನು ಹೆಚ್ಚು ಉಪಯುಕ್ತವನ್ನಾಗಿ ಮಾಡಬಹುದು. ಆಗ ಕನ್ನಡ ಮಾತ್ರ ಬಲ್ಲ ಓದುಗರಿಗೆ ಮುಜುಗರವಾಗುವುದಿಲ್ಲ.

ನನಗೆ ಶ್ರೀಯವರನ್ನು ನೋಡುವ ಭಾಗ್ಯ ಒಮ್ಮೆ ಮಾತ್ರ ಪ್ರಾಪ್ತವಾಗಿತ್ತು. ಅದು ನಾನು ನಿರೂಪಿಸಲೇಬೇಕಾದ ಘಟನೆ. ನನಗಾಗ ಹತ್ತು ವರ್ಷ ವಯಸ್ಸು. ಯಳಂದೂರಿನಲ್ಲಿ ನಮ್ಮ ದೊಡ್ಡಪ್ಪನವರ ಮನೆಯಲ್ಲಿದ್ದೆ. ಅಲ್ಲೇ ಮಿಡ್ಲಸ್ಕೂಲು ಮೊದಲ ತರಗತಿಯಲ್ಲಿದ್ದೆ. ಯಳಂದೂರು ಕನ್ನಡದ ವಿದ್ವತ್‌ಕವಿ ಷಡಕ್ಷರಿಯ ಊರು. ಪ್ರತಿವರ್ಷವೂ ಆ ಊರಿನ ಜಹಗೀರ್‌ದಾರ್‌ಬಂಗಲೆಯಲ್ಲಿ ಷಡಕ್ಷರ ಕವಿಯ ಜಯಂತಿ ನಡೆಯುತ್ತಿತ್ತು. ಆ ವರ್ಷದ ಜಯಂತಿಗೆ ಮೈಸೂರಿನಿಂದ ಪ್ರೊ. ಬಿ. ಎಂ. ಶ್ರೀಕಂಠಯ್ಯನವರೂ, ಪ್ರೊ. ಟಿ. ಎಸ್‌. ವೆಂಕಣ್ಣಯ್ಯನವರೂ ಭಾಷಣಕಾರರಾಗಿ ಬಂದಿದ್ದರು. ನಮ್ಮ ದೊಡ್ಡಪ್ಪ ನನ್ನನ್ನು ಆ ಸಭೆಗೆ ಕರೆದುಕೊಂಡು ಹೋಗಿದ್ದರು. ಅಂದು ನಡೆದ ಒಂದು ಘಟನೆ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಶ್ರೀಕಂಠಯ್ಯನವರು ಉಪನ್ಯಾಸ ಮುಗಿಸಿ ಕುಳಿತರು. ಅವರು ಹೇಳಿದ್ದು ನನಗೆ ಆ ವಯಸ್ಸಿನಲ್ಲಿ ಚೂರೂ ಅರ್ಥವಾಗಲಿಲ್ಲ. ಆದರೆ ಈಗ ಪ್ರಕೃತವಲ್ಲ. ಆಮೇಲೆ ವೆಂಕಣ್ಣಯ್ಯನವರು ಎದ್ದರು. ಅವರು ಹೇಳಿದ್ದು : “ಶ್ರೀಕಂಠಯ್ಯನವರು ತುಂಬ ದೊಡ್ಡವರು…” ಅವರು ಅಷ್ಟೇ ಹೇಳಿದ್ದು. ತಕ್ಷಣ ಶ್ರೀಕಂಠಯ್ಯನವರು ಎದ್ದು ನಿಂತು “ಸ್ವಾಮೀ ನೀವೇ ನೋಡಿ, ಯಾರು ದೊಡ್ಡವರು ಎಂದು” ಇಷ್ಟು ಹೇಳಿ ಕುಳಿತುಬಿಟ್ಟರು. ಸಭೆಯವರೆಲ್ಲ ನಕ್ಕಿದ್ದೂ ನಕ್ಕಿದ್ದೇ. ಏಕೆಂದರೆ ವೆಂಕಣ್ಣಯ್ಯನವರು ಅಷ್ಟು ಎತ್ತರ, ಶ್ರೀಯವರು ಕುಳ್ಳು! ಈ ೬೮-೬೯ ವರ್ಷಗಳಲ್ಲಿ ಇದನ್ನು ಎಷ್ಟು ಜನಕ್ಕೆ ಎಷ್ಟು ಸಲ ಹೇಳಿದ್ದೇನೆಯೋ! ಇದನ್ನು ಹೇಳಿ ಹೇಳಿ ಆ ಘಟನೆ ಇನ್ನೂ ಹಚ್ಚಹಸುರಾಗಿ ಉಳಿದಿದೆ.

ಮೂರನೆಯ ಪುಸ್ತಕ ‘ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ’ ಎಂದು ರಾಷ್ಟ್ರಕವಿ ಕುವೆಂಪು ಅವರು ನಮನ ಸಲ್ಲಿಸಿದ ಪಂಜೆ ಮಂಗೇಶರಾಯರನ್ನು ಕುರಿತದ್ದು. ಈ ಇಡೀ ಪದ್ಯವನ್ನು ಇಲ್ಲಿ ಉದ್ಧರಿಸಬಹುದು: ಅದೊಂದು ಸಾನೆಟ್‌ಅಥವಾ ಅಷ್ಟಷಟ್ಪದಿ : ವಿ. ಸೀ. ಅವರು ಅದನ್ನು ಚೌದಶಪದಿ ಎಂದು ಕರೆದಿದ್ದಾರೆ.

ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ
ನಡೆಯ ಮುಡಿಯಲಿ, ನುಡಿಯ ಸವಿಯಲ್ಲಿ. ನಿಮ್ಮ ಬಗೆ
ಹಸುಳೆ ನಗೆ : ನಿಮ್ಮ ಕೆಳೆಯೊಲುಮೆ ಹಗೆತನಕೆ ಹಗೆ.
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ.

ಸಂಗಮಿಸಿದಂತೆ, ರಂಜಿಸಿದೆ ಜೀವನ ಸೂರ್ಯ
ನಿಮ್ಮದೆಮ್ಮಯ ನುಡಿಯ ಗುಡಿಗೆ ಮಂಗಳ ಕಾನ್ತಿ
ಪರಿಮಳಂಗಳನಿತ್ತು. ನಿಮ್ಮ ಬಾಳಿನ ಶಾನ್ತಿ
ಮತ್ತೆ ರಸಕಾರ್ಯಗಳಿಗುಪಮೆ ವೀಣಾ ತೂರ್ಯ!

ಕಚ್ಚಿದರೆ ಕಬ್ಬಾಗಿ, ಹಿಂಡಿದರೆ ಜೇನಾಗಿ
ನಿಮ್ಮುತ್ತಮಿಕೆಯನೆ ಮೆರೆದಿರಯ್ಯ : ಚಪ್ಪಾಳೆ
ಮೂಗುದಾರವನಿಕ್ಕಿ ನಡೆಯಿಸಿದರದು ಬಾಳೆ
ಹಿರಿಯ ಸಿರಿಚೇತನಕೆ? ಕೀರ್ತಿಲಾಭಕೆ ಬಾಗಿ
ಬಾಳ್ಬಂಡಿ ನೊಗಕ್ಕೆ ಹೆಗಲಿತ್ತವರು ನೀವಲ್ಲ;
ತೇರ್ಮಿಣಿಯನೆಳೆದಿರಲ್ಲದೆ ಮತ್ತೆ ಮಣಿದಿಲ್ಲ!

ಪಂಜೆಯವರ ಬಾಳೆಲ್ಲ ಕುವೆಂಪುರವರ ಈ ನುಡಿನಮನದ ಶ್ರೀಭಾಷ್ಯವಷ್ಟೆ. ಹಾಗೆ ಉದಾತ್ತವಾಗಿ ಬಾಳಿದರು, ಜನಮನವನ್ನು ಆಳಿದರು. ಅಂಥದೇ ಬಾಳ್ವೆಯನ್ನು ಬಾಳಿದ ವಿ. ಸೀ. ಈ ದೊಡ್ಡವರನ್ನು ಕುರಿತು ಪುಸ್ತಕ ಬರೆದದ್ದು ಸಹಜವಾಗಿಯೇ ಇದೆ.

ಪಂಜೆಯವರು ‘ಶ್ರೀ’ ಅವರಷ್ಟು, ಡಿ. ವಿ. ಗುಂಡಪ್ಪನವರಷ್ಟು ಪ್ರಖ್ಯಾತರಾಗಲಿಲ್ಲ. ಅವರು ಎಷ್ಟರಮಟ್ಟಿಗೆ ಜನರ ಗಮನಕ್ಕೆ ಬರಬೇಕಾಗಿತ್ತೊ ಅಷ್ಟು ಮಟ್ಟಿಗೆ ಬರಲಿಲ್ಲ. ಅದಕ್ಕೆ ಕಾರಣಗಳನ್ನು ವಿ. ಸೀ. ನೀಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು ಪಂಜೆಯವರು ಹುಟ್ಟಿ ಬೆಳೆದ ಕನ್ನಡ ನಾಡಿನ ಭಾಗ ಘಟ್ಟದ ಕೆಳಗಿದ್ದು, ದಕಷಿಣ ಕನ್ನಡ ಜಿಲ್ಲೆ ಎನಿಸಿಕೊಂಡದ್ದು. ಘಟ್ಟದ ಮೇಲಕ್ಕೆ ಅವರು ಪದೇ ಪದೇ ಬರುವುದಾಗಲಿ, ಘಟ್ಟದ ಮೇಲಿದ್ದವರು ಪದೇ ಪದೇ ಕನ್ನಡ ಜಿಲ್ಲೆಗೆ ಹೇಗಿ ಬರುವುದಾಗಲಿ ಅಂದಿನ ದಿನಗಳಲ್ಲಿ ಸಾಹಸದ ಮಾತಾಗಿತ್ತು. ಈಗಲೂ ಬೆಂಗಳೂರು ಮೈಸೂರುಗಳಿಂದ ಘಟ್ಟದ ಕೆಳಕ್ಕೆ ವಾಹನಗಳಲ್ಲಿ ಹೋಗಬೇಕಾದರೆ, ನಮ್ಮ ಎಂಜಿನಿಯರಿಂಗ್‌ಇಲಾಖೆಯವರ ಹಾಗೂ ರಾಜಕಾರಣಿಗಳ ಕೃಪೆಯಿಂದ ನಮ್ಮ ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಇಂದಿನ ಲೋಕಾಯುಕ್ತರ ಮಾತುಗಳಲ್ಲಿ ಹೇಳಬೇಕಾದರೆ “ನಾವು ಹೊರಿಸಿಕೊಂಡು ಹೋಗಬೇಕು.” ಆಡಳಿತಾತ್ಮಕವಾಗಿಯೂ ಆಗ ಅದು ಮದರಾಸು ಪ್ರಾಂತಕ್ಕೆ ಸೇರಿದ್ದು. ಹೆಚ್ಚಿನ ಓದು, ಪದವಿಗಳಿಗಾಗಿ ಅಲ್ಲಿನ ಜನ ನೋಡುತ್ತಿದ್ದುದು ಮದರಾಸಿನತ್ತಲೇ ಹೊರತು ಮೂಸೂರಿನತ್ತ ಅಲ್ಲ. ಪ್ರವಾಸಿಪ್ರಿಯರೂ, ಸಾಹಸಿಗಳೂ ಆದ ಶಿವರಾಮ ಕಾರಂತರು ಮಾತ್ರ ಈ ಕಡೆಯ ಭಾಗದ ಜನರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವರು. ದಕ್ಷಿಣ ಕನ್ನಡ ಜಿಲ್ಲೆಗೂ ಮೈಸೂರು ಉತ್ತರ ಕರ್ನಾಟಕಗಳಿಗೂ ಸಾಹಿತ್ಯಕ ಸೇತುವೆಯಂತಿದ್ದವರಲ್ಲಿ ಕಾರಂತರದು ದೊಡ್ಡ ಪಾತ್ರ.

ಪಂಜೆ ಮಂಗೇಶರಾಯರು ಹುಟ್ಟಿದ್ದು ಮಧ್ಯಮವರ್ಗದ ಒಂದು ಕುಟುಂಬದಲ್ಲಿ ೨೨ ಫೆಬ್ರುವರಿ ೧೮೭೪ರಲ್ಲಿ. ನಮ್ಮ ಹಿಂದಿನ ತಲೆಮಾರಿಗೆ ಅವರು ಹಿಂದಿನ ತಲೆಮಾರಿನವರಾಗಿದ್ದರು. ಅವರ ಬಾಲ್ಯ ಜೀವನ, ಬಡತನದಿಂದ ತುಂಬ ಕಷ್ಟದ್ದಾಗಿತ್ತು. ಮುಂದೆಯೂ ಅವರು ಎಂದೂ ಶ್ರೀಮಂತರಾಗಿದ್ದರೂ ಬಡತನದ ರೇಖೆಯಿಂದ ಮೇಲೆದ್ದರು. ಅಧ್ಯಾಪಕ ಹುದ್ದೆ ದೊರೆತು ಸ್ವಲ್ಪ ಕಾಲದ ಮೇಲೆ ಶಾಲಾ ಉಪಸಹಾಯಕ ಇನ್ಸ್‌‌‌‌ಪೆಕ್ಟರ್‌(AssistantIAssistant Inspector of SchoolSchool) ಆದರು. ಅವರು ಒಳ್ಳೆಯ ಉಪಾಧ್ಯಾಯರು ಎನಿಸಿಕೊಂಡಿದ್ದು, ಅನಂತರ ಒಳ್ಳೆಯ ಕವಿಗಳೆಂದೂ ಕೀರ್ತಿ ಪಡೆದರು. ವಿ. ಸೀ. ಅವರು ತುಂಬ ಕಷ್ಟಪಟ್ಟು ಪಂಜೆಯವರ ಬದುಕಿನ ಅನೇಕ ವಿವರಗಳನ್ನು ಸಂಗ್ರಹಿಸಿ ಅವನ್ನೆಲ್ಲ ಇಲ್ಲಿ ದಾಖಲಿಸಿದ್ದಾರೆ.

ಪಂಜೆಯವರು ೧೯೩೪ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅಧ್ಯಕ್ಷ ಭಾಷಣದ ಸುಮಾರು ಕಡೆಕಡೆಯ ಭಾಗಗಳಲ್ಲಿ ಅವರು ಎಷ್ಟು ಮಟ್ಟಿಗೆ ಹಳ್ಳಿಯ ಶಾಲೆಗಳ ಮತ್ತು ಅಲ್ಲಿನ ಉಪಾಧ್ಯಾಯರ ಮನಸ್ಸನ್ನು ಪರಿಷತ್ತಿನ ಕೆಲಸಗಳಿಗಾಗಿ ಬಳಸಿಕೊಳ್ಳಲು ಹೇಗೆ ಆಕರ್ಷಿಸಬಹುದು ಎಂಬುದನ್ನು ತಿಳಿಸುತ್ತಾರೆ. ಅವರು ಹೇಳಿದುದು ಇದು :

“ನಮ್ಮ ಹಳ್ಳಿಯ ಶಾಲೆಗಳನ್ನೂ ಹಳ್ಳಿಯ ಉಪಾಧ್ಯಾಯರನ್ನೂ ನಾವು ಸಾಹಿತ್ಯ ಸಮ್ಮೇಳನದ ಕಾರ್ಯಸಾಧನೆಗಾಗಿ ಎಳೆದುಕೊಳ್ಳಬೇಕು. ಸಾಹಿತ್ಯ ರಚನೆ, ಭಾಷಾಭಿವೃದ್ಧಿ, ಗ್ರಾಮಾರೋಗ್ಯ, ದೇಶಾಭ್ಯುದಯದ ಯಾವ ಸತ್ಕಾರ್ಯವಾದರೂ ಈ ಅಧ್ಯಾಪಕರ ಕೈಯಲ್ಲಿದೆ. ಸಮ್ಮೇಳನದ ಉದ್ದೇಶಗಳನ್ನು ಹಳ್ಳಿಯ ಉಪಾಧ್ಯಾಯರಿಗೆ ಮೊಟ್ಟ ಮೊದಲು ತಿಳಿಯ ಹೇಳಿ, ಅದರ ಸದಸ್ಯತ್ವಕ್ಕೆ ತೆರಬೇಕಾದ ಚಂದಾ ತಗ್ಗಿಸಿ, ಅವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಅಧ್ಯಾಪಕರು ತಮ್ಮ ಕೈದೀವಟಿಗೆಗಳನ್ನು ಸಾಹಿತ್ಯಾಗ್ನಿಯಿಂದ ಹೊತ್ತಿಸಿ ಬಿಟ್ಟರೆ, ಪ್ರತಿಯೊಂದು ಗ್ರಾಮಶಾಲೆ ಒಂದು ಪರಿಷನ್ಮಂದಿರ! ಅಲ್ಲಿಯ ಮಕ್ಕಳ ಕೂಟ ಚಿಕ್ಕ ಸಾಹಿತ್ಯ ಸಭೆ! ಹಳ್ಳಿಯ ಕೈಬರಹದ ಕನ್ನಡ ಪತ್ರಿಕೆ ಚಿಕ್ಕದೊಂದು ಪರಿಷತ್ಪ್ರತ್ರಿಕೆ ಆಗುವುದರಲ್ಲಿ ಸಂಶಯವಿಲ್ಲ. ಕನ್ನಡ ಭಾಷೆಯ ವ್ಯಾಪನೆಗೂ, ಜನಜೀವನದ ಸಂಸ್ಕಾರಕ್ಕೂ, ಸಾಹಿತ್ಯ ರಚನೆಗೂ ಹಳ್ಳಿಯ ಶಿಕ್ಷಣವೇ ಸ್ಥಿರವಾದ ತಳಹದಿ, ಈ ತಳಹದಿಯನ್ನು ಕಟ್ಟತಕ್ಕೆ ಶಿಲ್ಪಿಗಳು ನನ್ನ ಗೆಳೆಯರಾದ ಹಳ್ಳಿಯ ಯುವ ಉಪಾಧ್ಯಾಯರು.”

ಪಂಜೆಯವರ ಕನಸು ಎಷ್ಟು ದೊಡ್ಡದು! ನಮ್ಮ ದೌರ್ಭಾಗ್ಯದಿಂದ ಆ ಕನಸು ನನಸಾಗಲಿಲ್ಲ. ಆದರೆ ಅಂಥ ಕನಸನ್ನು ಕಂಡ ಮನಸ್ಸು ಎಷ್ಟು ದೊಡ್ಡದು ಎಂಬುದು ನಮಗೆ ಅಚ್ಚರಿ ಮೂಡಿಸುತ್ತದೆ. ಹಾಗೆ ತಿಳಿಯುವಂತೆ ಮಾಡಿದ್ದಾರೆ, ವಿ. ಸೀ. ಅಷ್ಟೇ ಅಲ್ಲ, ತಮ್ಮ ನಿರೂಪಣೆಯ ಮುಂದಿನ ಭಾಗದಲ್ಲಿ ಅವರು ಮಂಗೇಶರಾಯರ ವ್ಯಕ್ತಿತ್ವದ ಹಿರಿಮೆಯನ್ನು ಬಿಡಿಬಿಡಿಯಾಗಿ ಕಟ್ಟಿ ಕಾಣಿಸಿದ್ದಾರೆ. ಮೊದಲಮೊದಲು ಪಂಜೆಯುಟ್ಟು ಒಂದು ನಿಲುವಂಗಿ ಧರಿಸಿ ರುಮಾಲು ಕಟ್ಟಿಕೊಂಡು ನೆರೆಯ ಜಿಲ್ಲೆಯಿಂದ ಬಂದ ಇವರನ್ನು ಉಡುಪಿಯಲ್ಲಿ ದೊಡ್ಡ ಶಿಸ್ತು ಪಾಲಿಸುತ್ತಿದ್ದ ಕೊಡಗಿನ ಹಿರಿಯರು ತಮ್ಮೊಳಕ್ಕೆ ಸ್ವೀಕರಿಸಲಿಲ್ಲ. ಆಮೇಲೆ ಎಲ್ಲೆಲ್ಲಿ ಇವರ ಪರಿಚಯವಾಯಿತೋ ಅಲ್ಲೆಲ್ಲ ಇವರಿಗೆ ಮನ್ನಣೆ ದೊರಕಿತು. ‘ಕವಿಶಿಷ್ಯ’ ಎಂಬ ಹೆಸರಿನಲ್ಲಿ ಇವರು ಬರೆದ ಪ್ರಖ್ಯಾತವಾದ “ಹುತ್ತರಿ ಹಾಡು” ಕೊಡಗಿನ ಜನತೆಯ ನಾಡಗೀತೆಯಾಯಿತು!

ಪಂಜೆಯವರ ಸಾಹಿತ್ಯಕ ಸಾಧನೆಗಳನ್ನೆಲ್ಲ ವಿ. ಸೀ. ಶ್ರಮದಿಂದ ಸಂಗ್ರಹಿಸಿ, ತಮಗೆ ವಿಶಿಷ್ಟವಾದ ಶೈಲಿಯಲ್ಲಿ ಹೃದಯಂಗಮವಾಗಿ ನಿರೂಪಿಸಿದ್ದಾರೆ. ಅದನ್ನು ಈ ‘ನಿವೇದನ’ದಲ್ಲಿ ಬಿಂಬಿಸುವುದು ಕಷ್ಟ ಹಾಗೆ ಮಾಡಹೊರಟರೆ ಪುಸ್ತಕದ ಬಹುಭಾಗವನ್ನು ಉದ್ಧರಿಸಬೇಕಾಗುತ್ತದೆ. ಪಂಜೆಯವರ ಅಮೂಲ್ಯವಾದ ಸಾಹಿತ್ಯಸೃಷ್ಟಿ ನಾಲ್ಕು ಸಂಪುಟಗಳಷ್ಟಿದೆ. ಅದರ ಮೌಲ್ಯವನ್ನು ಬಿಡಿಸಿ ತೋರಿಸುವುದರಲ್ಲಿ ವಿ. ಸೀ. ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ಪಂಜೆಯವರ ವ್ಯಕ್ತಿತ್ವದ ಅನೇಕ ಮುಖಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ, ಅತ್ಯುತ್ತಮ ವರ್ಣಶಿಲ್ಪಿಯಂತೆ. ಒಂದು ಉದಾಹರಣೆಯನ್ನು ನೀಡುವ ಮೋಹದಿಂದ ಪಾರಾಗಲಾರೆ. ಪಂಜೆಯವರ ಮನೆಯಲ್ಲಿ ವಿ. ಸೀ. ಪಂಜೆ ಅವರೊಡನೆ ಊಟಕ್ಕೆ ಕುಳಿತಿದ್ದಾರೆ. ಮಾವಿನ ಹಣ್ಣನ್ನು ತಿನ್ನುತ್ತಿದ್ದಾರೆ. ಅದನ್ನು ವಿ. ಸೀ. ವರ್ಣಿಸಿರುವ ರೀತಿ ಇದು.

“ಒಂದು ಸಂಗತಿ : ಪಂಜೆಯವರು ಮಾವಿನ ಹಣ್ಣನ್ನು ಸ್ವಚ್ಛವಾಗಿ ಬೆರಳಿಗೆ ಸ್ವಲ್ಪವೂ ರಸ ಅಂಟದೆ ತಿಂದುದು. ಅವರು ಕಡಿದ ರೀತಿ, ಹಲ್ಲುಗಳಲ್ಲಿ ಕಚ್ಚಿ ರಸವನ್ನು ಹೀರುವ ರೀತಿ, ಒಂದು ತೊಟ್ಟು ರಸ ಉಳಿಸದೆ ಪೂರ್ತಿ ಮಾವಿನ ಹಣ್ಣನ್ನು ಮುಗಿಸಿದ ರೀತಿ ಒಂದು ಕಲಾಸಾಧನೆಯಂತೆ ಇತ್ತು. ‘ಇದೊಂದು ಪವಾಡ ಕೃತಿಯಂತೆಯೇ ಇದೆ’ – ಎಂದೆ. ಸರಸವಾಗಿ (graciously) ಮಂದಹಾಸ ಬೀರಿದರು. ನಾನು ಅವರಿಗೆ ಹೇಳಿದೆ : ‘ಈಗ ನನಗೆ ಅರ್ಥವಾಗುತ್ತಿದೆ ; ನೀವು ಇಷ್ಟು ಸವಿಯಾಗಿರುವುದು ಏಕೆ, ಹೇಗೆ?’ ಎಂದು. ಅವರ ಉತ್ತರ ಇದು : ಹಿಂದೆ ಈ ಮಾತನ್ನು ಇನ್ನಾರಿಗೊ ಹೇಳಿದ್ದರಂತೆ : ‘ನಾನು ಯುವಕನಾಗಿದ್ದಾಗ ಆವನ ಹೆಣ್ಣಲ್ಲಿ ಪ್ರೀತಿಯಿಟ್ಟಿದ್ದೆ. ಈಗ ಮುದುಕನಾಗಿದ್ದೇನೆ, ಮಾವಿನ ಹಣ್ಣಲ್ಲಿ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ’ ಎಂದು. ಮಾತುಗಳ ಜೋಡಣೆಯ ಚಮತ್ಕಾರ ಕನ್ನಡಿಗರಿಗೆ ರಾಯರ ಉಕ್ತಿಯ ಜಾಣನ್ನು ಕಾಣಿಸುತ್ತದೆ. ಅವರ ಶ್ರೀಮತಿಯವರು ಸಂಕೋಚ ಪಟ್ಟಿದ್ದಾರು ; ಆದರೆ ಇವರ ವಿಧಾನಗಳೆಲ್ಲ ಅವರಿಗೆ ಗೊತ್ತು; ಮುಖವನ್ನು ಆಚೆ ಕಡೆಗೆ ತಿರುಗಿಸಿದರು. ಇಂಥ ಸರಸ ಹಾಸ್ಯಕ್ಕೆ, ಪ್ರೀತಿ ಪ್ರಕಾಶನಕ್ಕೆ ಸಂಬಂಧಿಸಿದ ಸಂದರ್ಭಗಳೂ ಮನೆಯಲ್ಲಿ ವಾಡಿಕೆಯಾಗಿತ್ತು. ಒಟ್ಟು ಆವರಣ ಪ್ರೀತಿಯಿಂದಲೂ ಸಂತೋಷದಿಂದಲೂ ಕೂಡಿದ್ದು. ಇವಕ್ಕೆಲ್ಲ ವ್ಯಾಖ್ಯಾನದ ಅವಶ್ಯಕತೆ ಇಲ್ಲವಷ್ಟೆ?

ಪೂಜ್ಯರಾದ ಡಿ. ವಿ. ಗುಂಡಪ್ಪನವರ ಜೀವನಚಿತ್ರಣ ಅವರ ಸಾಧನೆ-ಸಿದ್ಧಿಗಳ ನಿರೂಪಣೆ, ಸಮಕಾಲೀನ ಕರ್ನಾಟಕದಲ್ಲಿ, ಏಕೆ ಭಾರತದಲ್ಲಿ ವಿದ್ವಜ್ಜನರ ನಡುವೆ ಅವರ ಸ್ಥಾನ ನಿರ್ದೇಶನ ಇವುಗಳನ್ನು ಮಾಡಬಲ್ಲ ಧೀಮಂತ ಸಹೃದಯರು ಬಹಳ ಮಂದಿ ಇಲ್ಲ. ಬಹುಭಾಷೆಗಳ ದೇಶ ಇದಾಗಿರುವುದೂ ಅಂಥ ಸಾಹಸವನ್ನು ಅಸಫಲಗೊಳಿಸುತ್ತದೆ. ಅಂಥ ಧೈರ್ಯ ಮಾಡಬಲ್ಲವರಲ್ಲಿ ಮಾನ್ಯರಾದ ಶ್ರೀ. ವಿ. ಸೀ. ಒಬ್ಬರು. ಅವರ ‘ಡಿ. ವಿ. ಗುಂಡಪ್ಪ’ ಎಂಬ ಗ್ರಂಥದಲ್ಲಿ ಈ ಪ್ರಯತ್ನ ಎಷ್ಟು ಯಶಸ್ವಿಯಾಗಿದೆ ಎಂಬುದನ್ನು ಪರಿಶೀಲಿಸಬಹುದು.

ಡಿ.ವಿ.ಜಿ. ಏನು? ಒಟ್ಟಾರೆ ಯಾವುದನ್ನು ಅವರು ಪ್ರತಿನಿಧಿಸುತ್ತಾರೆ? ಒಂದು ವೇಳೆ ಅವರ ಪೂರ್ಣಾಕೃತಿಯ ಪ್ರತಿಕೃತಿಯನ್ನು ಕಡೆದು ಶಿಲ್ಪದಲ್ಲಿ ಹಿಡಿದಿಟ್ಟರೆ ಅದರ ಮುಂದೆ ನಿಂತ ಸಮಕಾಲೀನ ಭಾರತೀಯನಿಗೆ – ಅಥವಾ ಕನ್ನಡಿಗರಿಗೆ – ಬರುವ ಭಾವನೆಗಳೇನು’ ಅಂಥವನ ತಲೆಯಲ್ಲಿ ಏಳುವ ಪ್ರಶ್ನೆಗಳೇನು, ಇವೆಲ್ಲ ಆದ ಮೇಲೂ ಅಂಥವರನ್ನು ಕಳೆದುಕೊಂಡ ಒಂದು ಜನಾಂಗದ ಕೆನ್ನೆಗಳ ಮೇಲೆ ಉರುಳುವ ಕಂಬನಿಗಳನ್ನು ಇಂಗಿಸುವ ವೈಚಾರಿಕ ಶಾಖ ಯಾವುದು?- ಇವಕ್ಕೆಲ್ಲ ತಕ್ಕ ಮಟ್ಟಿಗೆ ಸಮರ್ಪಕವಾದ ಉತ್ತರ ವಿ. ಸೀ. ಯವರ ಈ ಪುಟ್ಟ ಪುಸ್ತಕದಲ್ಲಿದೆ ಎಂಬುದು ನನ್ನ ಭಾವನೆ. ಹೀಗೆ ಹೇಳುವಾಗ ಕೂಡ ಈ ಪ್ರಶ್ನೆಗಳಿಗೆ ಸರ್ವಸಮರ್ಪಕವಾದ ಉತ್ತರವನ್ನು ಯಾವ ಒಬ್ಬ ವ್ಯಕ್ತಿಯೂ ನೀಡಲಾರ ಎಂಬ ಅರಿವು ನನಗಿದೆ.

ತಮ್ಮ ಪುಸ್ತಕದ ಪ್ರಾರಂಭದಲ್ಲೇ ವಿ. ಸೀಯವರು ಒಂದು ದೀರ್ಘವಾದ ಪ್ಯಾರಾದಲ್ಲಿ ಡಿ.ವಿ.ಜಿಯವರ ಸಾಧನೆಯನ್ನು ಅವರ ವ್ಯಕ್ತಿತ್ವ ಹೊರಹೊಮ್ಮುವ ರೀತಿಯಲ್ಲಿ ಸಂಗ್ರಹಿಸಿದ್ದಾರೆ. ಅದೇ ಪುನರುಕ್ತಿಗೆ ಅರ್ಹವಾಗಿದೆ :

“ಈ (೨೦ನೆಯ) ಶತಮಾನದ ಮೊದಲನೆಯ ದಶಕದ ಕೊನೆಯ ವೇಳೆಗೆ ಅವರು ಒಬ್ಬ ಲೇಖಕರಾಗಿ ಖ್ಯಾತಿ ಪಡೆದಿದ್ದಾರೆ. ಸಾರ್ವಜನಿಕ ಜೀವನದಿಂದ ಕಳೆ, ಕೊಳೆ, ಮಲಿನತೆಗಳನ್ನು ತೊಡೆದು ಹಾಕುತ್ತಿರುವ, ಜನತೆಗೆ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಷಯಗಳಲ್ಲಿ ಶಿಕ್ಷಣ ನೀಡುತ್ತಿರುವ ಅವರ ದನಿ ಪ್ರಬಲವಾಗಿದೆ. ಅದೇ ಅವರ ಪ್ರಯತ್ನವಾಗಿದೆ. ಪತ್ರಿಕೆಯ ಸಂಪಾದಕ, ಸ್ಥಳೀಯ ಪುರಸಭಾ ಸದಸ್ಯ (ಬೆಂಗಳೂರು ನಗರದಲ್ಲಿ), ಹಳೆಯ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆ ಸಭೆ ಹಾಗೂ ನ್ಯಾಯವಿಧಾಯಕ ಸಭೆಗಳ ಸದಸ್ಯ, ವಿಶ್ವವಿದ್ಯಾನಿಲಯದ ಸೆನೆಟ್‌ಮತ್ತು ಕೌನ್ಸಿಲ್‌, ಸಾರ್ವಜನಿಕ ವ್ಯವಹಾರಗಳ ತನಿಖೆಗಳಾಗಿರುವ ಅನೇಕ ಆಯೋಗಗಳ ಸದಸ್ಯ, ಲೌಕಿಕ ಜೀವನದ ನಾನಾ ರಂಗಗಳಲ್ಲಿ ತೂಕವಾದ ವಿಜ್ಞಾಪನ ಪತ್ರಗಳನ್ನೂ, ತಜ್ಞ ಸಲಹೆಯನ್ನೂ ನೀಡುವುದು – ಒಬ್ಬನೇ ವ್ಯಕ್ತಿ ಇಂಥವೆಲ್ಲವೂ ಆಗುವುದು ಸಾಮಾನ್ಯವಾಗಿ ವಿರಳ. ನಮ್ಮ ಜನ ಆಧುನಿಕ ರಾಜ್ಯದ ಯೋಗ್ಯ ಪ್ರಜೆಗಳಾಗಬೇಕು ಎನ್ನುವುದು ಏಕೈಕ ಆಸೆ. ಪೌರತ್ವದ ಪರಿಕಲ್ಪನೆಯನ್ನು ಅವರೇ ಸ್ಥೂಲವಾಗಿ ವಿವರಿಸಿದ್ದಾರೆ. ವ್ಯಕ್ತಿ ಮತ್ತು ರಾಜ್ಯದ ನಡುವಿನ ಸಂಬಂಧದ ರಾಜಕೀಯ ಅಂಶ ಮತ್ತು ವ್ಯಕ್ತಿ ಅತ್ಯುತ್ತಮ ಶಿಕ್ಷಿತನಾಗಿ ಸಜ್ಜುಗೊಂಡು ರಾಜ್ಯಕ್ಕೆ ಜವಾಬ್ದಾರಿಯುತನಾಗಿ, ಬುದ್ಧಿವಂತನಾಗಿ ಹಾಗೂ ಮುಕ್ತನಾಗಿ ಸೇವೆ ಸಲ್ಲಿಸಲು ತರಬೇತು ಪಡೆಯುವುದು – ಈ ಎರಡೂ ಸೇರಿದ್ದು ಆ ಪರಿಕಲ್ಪನೆ. ‘ರಾಷ್ಟ್ರಕ’ ಎಂಬುದು ಅವರು ಬಳಸಿರುವ ಶಬ್ದ. ಅದರ ಅರ್ಥ ಈ ಪೌರತ್ವ ಕೇವಲ ಸ್ಥಳೀಯವಾದುದಲ್ಲ ಅಥವಾ ಪ್ರಾಂತೀಯವಾದುದಲ್ಲ, ಇಡೀ ದೇಶಕ್ಕೇ ಸೇರಿದ್ದು. ಕರ್ತವ್ಯ ಮತ್ತು ಹೊಣೆಗಾರಿಕೆಗಳು ಕಿರಿದಾದ ಕ್ಷೇತ್ರಕ್ಕೆ ಅಂದರೆ ವ್ಯಕ್ತಿಯ ರಾಜ್ಯಕ್ಕೆ ಎಷ್ಟು ಮಟ್ಟಿಗೆ ಸಲ್ಲುತ್ತವೆಯೋ, ವಿಶಾಲಾರ್ಥದಲ್ಲಿ ಇಂದಿನ ಭಾರತೀಯನಿಗೂ ಸಲ್ಲುತ್ತದೆ. ಹಾಗೆ ಅವರು ತಮ್ಮ ಬಾಳನ್ನು ರೂಪಿಸಿಕೊಂಡಿದ್ದಾರೆ. ತಮ್ಮ ಸೇವೆಯನ್ನು ಬೇರೆ ಯಾರೊ ಒಬ್ಬರಿಗೆ, ಖಾಸಗಿಯೋ, ವ್ಯಕ್ತಿಗತವೋ – ಅಂದರೆ ವ್ಯಕ್ತಿ ಪಕ್ಷ ಅಥವಾ ಸರ್ಕಾರದ ಒಂದು ಅಂಗಕ್ಕೆ ಸೀಮಿತಗೊಳಿಸಿದಂಥ ನಾಗರಿಕನಾಗಿ ತಮ್ಮನ್ನು ರೂಪಿಸಿಕೊಂಡಿದ್ದಾರೆ. ಅಂದರೆ ಅವರು ಸ್ವತಂತ್ರ ವ್ಯಕ್ತಿಯಾಗಿ ಉಳಿದುಕೊಂಡಿದ್ದಾರೆ. ಒಮ್ಮೆ ದಿವಾನ್‌ಸರ್‌ಮಿರ್ಜಾ ಇಸ್ಮಾಯಿಲ್‌ಅವರು ಡಿ.ವಿ.ಜಿಯವರಿಗೆ ಯಾವುದೊ ಒಂದು ಸಾರ್ವಜನಿಕ ಲಾಭವನ್ನು ಸೂಚಿಸಿದರು. ಹಿಂದಿನ ಒಂದು ಆಡಳಿತದಲ್ಲೂ ಹೀಗೆ ಆಗಿತ್ತು. ಯಾವುದೋ ಮೆಚ್ಚುಗೆಯನ್ನು ವಸ್ತುವನ್ನು ಒಪ್ಪಿಕೊಳ್ಳಲು ಸೂಚಿಸಲಾಗಿತ್ತು. ಡಿ.ವಿ.ಜಿ. ಅದನ್ನು ನಯವಾಗಿಯೇ ನಿರಾಕರಿಸಿದರು. ‘ಅದರಿಂದ ಪ್ರಭುತ್ವದ ಮುಕ್ತ ಟೀಕೆ ಮಾಡಲು ಅಡ್ಡಿಯಾಗುವುದು’ ಎಂದರು.

ಡಿ.ವಿ.ಜಿ ಇಂಗ್ಲಿಷ್‌ಸಾಹಿತ್ಯ, ಪೂರ್ವ ಪಶ್ಚಿಮದೇಶಗಳ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವೇದ ವೇದಾಂತಾದಿ ಮೂಲಗ್ರಂಥಗಳು, ಕನ್ನಡ ಸಾಹಿತ್ಯ ಎಲ್ಲವನ್ನೂ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದರು. “ಹತ್ತು ವಿಶ್ವವಿದ್ಯಾನಿಲಯಗಳು ಸೇರಿ ಯಾವುದನ್ನು ಕೊಡಲಾರವೊ ಅದನ್ನು ಅವರ ಶ್ರದ್ಧಾಪೂರ್ಣ ಪರಿಶ್ರಮ ಹಾಗೂ ಕಾಳಜಿ ಒದಗಿಸಿಕೊಟ್ಟಿವೆ. ಅವರು ಮೂಲದಲ್ಲಿಯೋ ಇಲ್ಲವೇ ಅನುವಾದದಲ್ಲಿಯೋ ಓದಿ ಕರಗತ ಮಾಡಿಕೊಳ್ಳದ ಸಾಹಿತ್ಯ, ರಾಜನೀತಿ, ಅರ್ಥಶಾಸ್ತ್ರ, ಪತ್ರಿಕಾವೃತ್ತಿ, ಸಂಸ್ಕೃತ ಅಧ್ಯಯನ ಹಾಗೂ ರಾಜ್ಯಾಂಗದ ಮಹಾಕೃತಿಗಳು ತೀರ ವಿರಳ” ಎನ್ನುತ್ತಾರೆ ವಿ. ಸೀ. ಅವರನ್ನು ಭೇಟಿ ಮಾಡಿದ್ದ, ಅವರ ಕೃತಿಗಳನ್ನು ಓದಿದ್ದ ಯಾರಿಗೇ ಆದರೂ ಈ ಮಾತುಗಳು ಎಷ್ಟು ಸತ್ಯ ಎಂಬುದು ತಿಳಿಯುತ್ತದೆ.

ಪತ್ರಿಕಾವೃತ್ತಿ ಅವರ ಬಾಳಿನ ಉಸಿರಾಗಿತ್ತು. ಸಂಗೀತ ಅವರಿಗೆ ಸಾಹಿತ್ಯದಷ್ಟೇ ಪ್ರಿಯ ಅದರ ಶಾಸ್ತ್ರಭಾಗದಲ್ಲಿ ಆಳವಾದ ಪರಿಶ್ರಮ. ಇನ್ನು ಸಾಹಿತ್ಯದ ಮಾತು. ಕಾವ್ಯ ತತ್ವಗಳ ಸಂಗಮವಾಗಿದ್ದೂ ತತ್ವವೇ ಮೇಲುಗೈಯಾಗಿರುವ – ಅವರ “ಮಂಕುತಿಮ್ಮನ ಕಗ್ಗ” ಎಷ್ಟು ಸಹಸ್ರ ಜನಗಳ ಬಾಳ ದೀವಿಗೆಯಾಗಿದೆಯೋ ಹೇಳುವುದು ಕಷ್ಟ ವೈಯಕ್ತಿಕವಾಗಿ ನಾನಂತೂ ಅದರಿಂದ ತುಂಬ ಮಾರ್ಗದರ್ಶನ ಪಡೆದವನು. ಅವರ “ಜೀವನ ಸೌಂದರ್ಯ ಮತ್ತು ಸಾಹಿತ್ಯ”, “ಸಾಹಿತ್ಯ ಶಕ್ತಿ”, “ಬಾಳಿಗೊಂದು ನಂಬಿಕೆ”, “ಸಂಸ್ಕೃತಿ” ಇವೆಲ್ಲ ಬಾಳನ್ನು ಹಸನುಗೊಳಿಸಬೇಕೆನ್ನುವ ಪ್ರತಿಯೊಬ್ಬನೂ ಓದಬೇಕಾದ ಗ್ರಂಥಗಳು. ಲೋಕ ಜೀವನದ ಆಳ ಎತ್ತರಗಳನ್ನು ಆತ್ಮೀಯವಾಗಿ ತಿಳಿಸುವ “ಜ್ಞಾಪಕ ಚಿತ್ರಶಾಲೆ”ಯ ಎಲ್ಲ ಸಂಪುಟಗಳಲ್ಲಿ ಡಿ.ವಿ.ಜಿ. ಆತ್ಮೀಯವಾಗಿ ಬಿಡಿಸಿರುವ ನೂರಾರು ಚಿತ್ರಗಳು-ಅವೆಲ್ಲ ಹೇಗೆ ಅವರ ನೆನಪಿನಲ್ಲಿ ಉಳಿದಿದ್ದವೋ ಮನುಷ್ಯ ಸ್ವಭಾವದ ಸಮಸ್ತ ವೈವಿಧ್ಯಗಳನ್ನೂ ಅವುಗಳ ಮೂಲವರ್ಣದಲ್ಲಿಯೇ ತೆರೆದು ತೋರಿಸುತ್ತವೆ. ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದುತ್ತಲೇ ಇರಬೇಕು ಎನ್ನಿಸುವ ಇಂತಹ ಸ್ಮೃತಿಚಿತ್ರಗಳನ್ನು ಈ ಪ್ರಮಾಣದಲ್ಲಿ ನೀಡಿರುವ ಮತ್ತೊಂದು ಕೃತಿಸಮೂಹ ಇದ್ದರೆ ಅದು ನನಗೆ ತಿಳಿಯದ ವಿಷಯ.

ಡಿ.ವಿ.ಜಿಯವರು “ಜೀವನಧರ್ಮಯೋಗ” ಎಂದು ಕರೆದಿರುವ ಭಗವದ್ಗೀತೆಯನ್ನು ಕುರಿತ ಅವರ ರಚನೆ ಅವರ ಕೃತಿಗಳಲ್ಲಿ ಬಹುಶಃ ಅತ್ಯಂತ ಸಮಗ್ರವೂ ಸುವ್ಯವಸ್ಥಿತವಾಗಿ ಪ್ರತಿಪಾದಿತವಾಗಿರುವುದು, ವ್ಯಾಖ್ಯೆಗೊಂಡಿರುವುದು ಎಂದು ವಿ. ಸೀ. ಹೇಳಿದ್ದಾರೆ.

ನಾಲ್ಕು ಜನ ಮಹಿನೀಯರ ಜೀವನ ಚರಿತ್ರೆಗಳನ್ನು ಅವರ ಸಾಧನೆ ಸಿದ್ಧಿಗಳನ್ನು ವಿ. ಸೀತಾರಾಮಯ್ಯನವರು ಅತ್ಯಂತ ನಿಸ್ಪೃಹತೆಯಿಂದ ಆದರೆ ಮೆಚ್ಚುಗೆಯಿಂದ ರಚಿಸಿದ್ದಾರೆ. ಇದು ಕನ್ನಡ ಮಾತನಾಡುವ ಜನಕ್ಕೆ ಅವರು ಕೊಟ್ಟಿರುವ ಉತ್ತಮವಾದ ಕಾಣಿಕೆ ಎಂಬುದು ನನ್ನ ಅಭಿಪ್ರಾಯ. ಡಿ.ವಿ.ಜಿಯವರಂತೆಯೇ ವಿ. ಸೀಯವರಿಗೂ ಇರುವ ಕಾಳಜಿಯೆಂದರೆ ನಮ್ಮ ಜನರ ಜ್ಞಾನ ವೃದ್ಧಿಯಾಗಬೇಕು, ಬದುಕು ಹಸನಾಗಬೇಕು ಎಂಬುದು. ಇವುಗಳ ಓದಿನಿಂದ ವಿ. ಸೀ. ಯವರ ಮನಸ್ಸಿನ ಅಭಿಲಾಷೆ ನೆರವೇರುತ್ತದೆ ಎಂಬುದು ನನ್ನ ಭಾವನೆ.