ವೈದಿಕನಿಷ್ಠನು. ಪುಣ್ಯಕಾಲ, ವ್ರತ ದಿವಸ ಹದಿ ದಿವಸ ಉಪವಾಸ ಮುಂತಾದ ನಿಯಮದಲ್ಲೇ ಇರುವುದರಿಂದ ನನ್ನ ಕಾಮ ಪೂರ್ತಿಮಾಡಲು ವ್ಯವಧಾನವು ಶಕ್ತಿಯು ಸಹ ಸಾಲದ್ದರಿಂದ ಅನ್ಯನಿಂದ ಕಾಮಪೂರ್ತಿ ಮಾಡಿಸಿಕೊಳ್ಳುವಾಗಲು ಪ್ರತಿಯೆಂದು ಭಾವಿಸುತ್ತೇನೆ. ಲೋಕದಲ್ಲಿ ಪತಿವ್ರತೆಯರೆಲ್ಲರೂ ಕೆಲವರಿಂದ ಧರ್ಮವನ್ನೂ ಕೆಲವರಿಂದ ಅರ್ಥಗಳನ್ನೂ ಕೆಲವರಿಂದ ಮೋಕ್ಷವನ್ನೂ ಪಡೆಯುವುದಿಲ್ಲವೆ. ಅವರೆಲ್ಲರು ದೂಷಿತರಾಗುವರೆ?

ಸವಾಲು- ಅನ್ಯನಿಂದ ನಿನ್ನ ಮನೋರಥ ಪೂರ್ತಿ ಆದಮೇಲೆ ಪತಿಯಿಂದೇನು ಪ್ರಯೋಜನ? ಬಿಟ್ಟುಬಿಡು.

ಜವಾಬು- ಪತಿಯೇ ಪರದೈವವೆಂದು ಹಿರಿಯರು, ಶಾಸ್ತ್ರವು ಹೇಳುವುದರಿಂದ ನನ್ನ ಕಾಮವು ಯಾರಿಂದ ಪೂರ್ತಿಯಾದಾಗ್ಯೂ ಪತಿಯಿಂದಲೇ ಎಂದು ಭಾವಿಸುತ್ತಾ ಪತಿ ಸೇವೆಯಂ ಮಾಡುವೆನು.

ಸವಾಲು- ಅನ್ಯರೊಡನೆ ರಮಿಸುತ್ತಾ ಗಂಡನೆಂದು ಭಾವಿಸಿದರೆ ಹ್ಯಾಗೆ ಆದಾನು.

ಜವಾಬು –ಕಲ್ಲನ್ನೂ ಪೂಜಿಸುತ್ತಾ ದೇವರೆಂತಲೂ ಬ್ರಾಹ್ಮಣರನ್ನು ನಿಯಂತ್ರಿಸಿ ಪೂಜಿಸುತ್ತಾ ತಂದೆ ತಾಯಿಗಳೆಂತಲೂ ಕೆರೆ ಕಟ್ಟೆಗಳಲ್ಲಿ ಮುಳುಗುತ್ತಾ ಪುಣ್ಯ ತೀರ್ಥಗಳೆಂತಲೂ ಭಾವಿಸುವಂತೆ ನಾನು ಭಾವಿಸಲಾಗದೋ?

ಫಿರ್ಯಾದಿ ಸವಾಲು-ಈ ಹೇಳಿಕೆ ನ್ಯಾಯವಾದಾಗ್ಯೂ ನನ್ನ ಧರ್ಮಾಚರಣೆಗೆ ಅಡಚಣೆಯಾಗುತ್ತಲ್ಲವೆ?

ಜವಾಬು- ಲಗ್ನಕಾಲದಲ್ಲಿ ಅಗ್ನಿಸಾಕ್ಷಿಕವಾಗಿ ‘ಧರ್ಮೇಚ’, ‘ಅರ್ಥೇಚ, ಕಾಮೇಚ’ ಎಂದು ಕೈ ಹಿಡಿದು ಪ್ರಮಾಣ ಮಾಡಿ ನನ್ನ ಕಾಮಕ್ಕೆ ಅಡಚಣೆ ಮಾಡಬಹುದೆ.

ರಾಜಂ – (ನಿರುತ್ತರನಾಗಿ), ನಂಬರು ಡಿಸ್‌ಮಿಸ್. ಪಿರ್ಯಾದಿಯು ಕರ್ತವ್ಯ ನಿಷ್ಠನಾದ್ದರಿಂದ ಪುನರ್ವಿವಾಹಕ್ಕೆ ೧,೦೦೦ ರೂ. ಇನಾಮು.

ಅಪರಾಧಿಯು- ಪತಿಯು ಪುನರ್ವಿವಾಹ ಮಾಡಿಕೊಂಡಮೇಲೆ ನನಗೆ ಗತಿಯೇನು? ನನಗೂ ಪುನರ್ವಿವಾಹಕ್ಕೆ ಅಪ್ಪಣೆ ಕೊಡಿಸಬೇಕು.

ರಾಜಂ- ಸ್ತ್ರೀಯರಿಗೆ ಪರಿವೋರ್ವನಲ್ಲದೆ ಹಲವರಾಗದು.

ರಮಣಿ-ಸೋಮಾಗ್ನಿಗಂಧರ್ವ ಪುರುಷರೆಂದು ಶಾಸ್ತ್ರದಲ್ಲೇ ಹೇಳಿಲ್ಲವೆ?

ದೌಪದಿಗೆ ಪಂಚಪತಿಗಳಿಲ್ಲವೆ? ವಾಷ್ಣೇಯನಿಗೆ ೧೦ ಪ್ರಾಚೇತಸರೆಂದು ಮಹಾಭಾರತದಲ್ಲಿ ಹೇಳಿಲ್ಲವೆ?

ರಾಜಂ- ಪತಿಗಳನೇಕರಾದಾಗ್ಯೂ ಲಗ್ನ ವಂದೇ ಸಾರಿಯಾಗಬೇಕು.

ರಮಣಿ-ಗಾಂಧಾರಿಗೆ ಎರಡು ಸಾರಿಯೂ, ಯಯಾತಿ ರಾಜನ ಮಗಳು ಮಾಧವಿಗೆ ನಾಲ್ಕು ಸಾರಿ ಮದುವೆಯಾಗಿ ನಾಲ್ಕು ಜನರಿಂದಲೂ ನಾಲ್ಕು ಜನರಿಂದಲೂ ನಾಲ್ಕು ಮಕ್ಕಳನ್ನು ಪಡೆಯಲಿಲ್ಲವೆ?

ಇದಕ್ಕೆ ನಿರುತ್ತರನಾದ ರಾಜನು ಮೊಕದ್ದಮೆಯನ್ನೆ ಮುಂದುವರಿಸುತ್ತಾನೆ.

ಶಾಸ್ತ್ರಪುರಾಣಗಳನ್ನು ಆಧಾರವಾಗಿಟ್ಟುಕೊಂಡೆ ತನ್ನ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವ ಹೆಣ್ಣಿನ ಚತುರತೆ ನಮ್ಮಲ್ಲಿ ಇತ್ತೀಚೆಗೆ ಹಬ್ಬುತ್ತಿರುವ ವಿತಂಡವಾದಕ್ಕೆ ಯಾವ ವಿಧದಲ್ಲೂ ಕಡಿಮೆಯಿಲ್ಲ ಎಂದು ತೋರುತ್ತದೆಯಲ್ಲವೆ:

ಭಾಷೆಯ ವಿಷಯದಲ್ಲೂ ಇದೇ ಕಾಲದಲ್ಲಿ ಪ್ರಯೋಗಗಳು ನಡೆದಂತೆ ತೋರುತ್ತದೆ. ಮತ್ತೆ ಡಾ|| ಹಾವನೂರರನ್ನು ಉದ್ಧರಿಸುತ್ತಿದ್ದೇನೆ: “ಮುಂಬಯಿ ಕರ್ಣಾಟಕದಲ್ಲಿ ಅಗಳಗಟ್ಟಿ ವೆಂಕಣ್ಣಾಚಾರ್ಯ, ಗುರುರಾವ್ ಮಮದಾಪುರ, ಕೃಷ್ಣಜಿ ಬೀಳಗಿಕರ, ನಾ. ರಾ. ಕಾಮತ. ಕೃ. ಶ್ರೀ. ಕೌಲಗಿ ಮೊದಲಾದ ನಾಟಕಕಾರರು ಪೌರಾಣಿಕ ನಾಟಕ ರಚನೆಯನ್ನು ಮುಂದುವರೆಸಿದರು. ಹಳಗನ್ನಡ ಶೈಲಿಯನ್ನೂ ಜಾನಪದ ರಂಗಭೂಮಿಯ ತಂತ್ರವನ್ನೂ ಬಿಟ್ಟುಕೊಡದೇ ಹೊಸಗನ್ನಡ ಗದ್ಯದಲ್ಲಿ ಬರೆದ ನಾಟಕಗಳಿವೆ. ತಮ್ಮ ನಾಟಕಗಳಲ್ಲಿ ಸಂಭಾಷಣೆ ಯಾವ ರೀತಿಯಾಗಿ ಇರಬೇಕೆಂಬ ಸಮಸ್ಯೆ ಇವರಿಗಿದ್ದಿತು. ಈ ದಿಶೆಯಲ್ಲಿ ಗುರುರಾವ್ ಮಮದಾಪುರನ ಈ ಕೆಳಗಿನ ನಿಲುಮೆಯು, ಮುಂಬಯಿ ಕರ್ನಾಟಕದ ಇತರ ಕೆಲವು ನಾಟಕಕಾರರಲ್ಲಿಯೂ ಕಂಡುಬರುತ್ತದೆ:

“ಕಲೊಕ್ವಿಯಲ್‌ಅಂದರೆ ಮನೆಯಲ್ಲಿ ಸ್ತ್ರೀಪುರುಷರೂ ಹುಡುಗರೂ ಆಳುಗಳೂ ಮಾತಾಡತಕ್ಕ ಗ್ರಾಮ್ಯಶಬ್ದಗಳಿಂದ ಕೂಡಿದ ಭಾಷಣಗಳನ್ನು ಇದರಲ್ಲಿ ಎಲ್ಲ ಕಡೆಗೂ ಉಪಯೋಗಿಸುವ ಅವಶ್ಯ ಕಂಡು ಬಂತು. ಹೀಗೆ ಮಾಡದಿದ್ದರೆ ಈ ನಾಟಕದಲ್ಲಿಯ ಭಾಷಣದ ರಸಮಾಧುರ್ಯವು ವಾಚಕರಿಗೆ ಏನೂ ದೊರೆಯದೆ ಕೇವಲ ನಿಬಂಧಗಳಂತೆ ಕಥಾಭಾಗ ಮಾತ್ರಿ ತಿಳಿಯುತ್ತಿತ್ತು. ಇದಕ್ಕೋಸ್ಕರ ಉಳಿದ ಭಾಷೆಗಳಲ್ಲಿ ಉಪಯೋಗಿಸದಂತೆ “ಹೋಮಲ್ಯಾಂಗವೇಜ್‌” ಅಂದರೆ ಮನೆಯಲ್ಲಿ ಮಾತಾಡುವ ಪ್ರಚಾರದಲ್ಲಿಯ ಭಾಷೆಯನ್ನುಪಯೋಗಿಸಿ ಗ್ರಂಥವನ್ನು ಪೂರ್ಣದೆಶೆಗೆ-ತಂದಿರುವೆನು.

ಭಾಷೆಯಲ್ಲಿ ಆಧುನಿಕತೆ ಎಂಬುದು-ಎಂದರೆ ಕಲೊಕ್ವಿಯಲ್ ಭಾಷೆಯ ಪ್ರಯೋಗ ಎಂತಹ ಅದ್ಭುತವಾದ ಪರಿಣಾಮವನ್ನು ಉಂಟುಮಾಡಬಲ್ಲುದು ಎಂಬುದಕ್ಕೆ ಶಾಕುಂತಲ ನಾಟಕದ ಎರಡು ಅನುವಾದ ಭಾಗಗಳನ್ನು ಹೋಲಿಸಬಹುದು. ಮೊದಲನೆಯದು ಬಸವಪ್ಪ ಶಾಸ್ತ್ರಿಯವರ ಅನುವಾದ: (೧೮೮೨)

ಅಯ್ಯೋ ದೈವವೇ; ಬೇಟೆಯಲ್ಲೇ ಆಸಕ್ತನಾದ ಈ ರಾಯನೆ ಸ್ನೇಹದಿಂದ ಕೆಟ್ಟೆನಲ್ಲಾ; ಇದೋ ಹುಲ್ಲೇ; ಇದೋ ಹಂದಿ; ಇದೋ ಹುಲಿ; ಎನ್ನುತ್ತಾ ಮಧ್ಯಾಹ್ನದಲ್ಲಿಯೂ ಬೇಸಗೆಯಿಂದ ದಟ್ಟವಾಗಿ ಮರದ ನೆರಳಿಲ್ಲದ ಅಡವಿಗಳಲ್ಲಿ ಸುತ್ತಿ ಸಾಕಾಯಿತು. ಉದುರಿದೆಲೆಗಳಿಂದ ಒಗರಾಗಿ ಬೆಚ್ಚಗಿರುವ ಬೆಟ್ಟದ ಜೋಗಿನ ನೀರುಗಳನ್ನೆಲ್ಲಾ ಕುಡಿದುದಾಯಿತು. ಇದು ಹೊರತಾಗಿ ಹೊತ್ತುಗೊತ್ತಿಲ್ಲದೆ ಸುಟ್ಟ ಮಾಂಸವೇ ಹೆಚ್ಚಾಗಿರುವ ಆಹಾರವು ಭುಂಜಿಸಲ್ಪಟ್ಟಿತು. ಕುದುರೆಯ ಹಿಂದೋಡಿ ಶರೀರದ ಕೀಲುಗಳೆಲ್ಲಾ ಸಡಲಿ ನೋವಿಂದ ರಾತ್ರಿಯಲ್ಲಿಯೂ ನಾನು ಚೆನ್ನಾಗಿ ಮಲಗಲಿಲ್ಲ. ಆಮೇಲೆ ಬೆಳಕು ಹರಿಯುವುದಕ್ಕಿಂತ ಮುಂಚೆಯೇ ಅರಣ್ಯವನ್ನು ಆಕ್ರಮಿಸುವ ತೊತ್ತಿನ ಮಕ್ಕಳಾದ ಹಕ್ಕಿನ ಬೇಟೆಗಾರರ ಕಲಕಲ ಧ್ವನಿಯಿಂದ ಎಚ್ಚರವಾಯಿತು.

ಇನ್ನೊಂದು ಚುರುಮುರಿ ಶೇಷಗಿರಿರಾಯರದು:

ಏನ್‌ನನ್ನ ಕರ್ಮಪ್ಪಾ: ಈ ಅರಸಿನ ಬ್ಯಾಟೀ ಕಾಲಾಗ ನಾನನಕಾ ದಣದ ಹೋದ್ನಿ. ಕವವ ಚಿಗರಿ: ಕವವ ಕಾಡಂದಿ ಕವವ; ಹುಲಿ: ಅಂತ ವದರಾಡಿಕೊಂಡ ಚೀರಾಡಿಕೊಂಡ ಈ ಅಡವ್ಯಾಗಿಂದ ಆ ಅಡವಿ, ಆ ಅಡವ್ಯಾಗಿಂದೀ ಅಡವಿ ಓಡಿ ಓಡಿ ಸಾಕಾತ್ನೋ ನಮ್ಮಪ್ಪಾ: ಬಿಸಿಲಂತಿ ಆಸಾಡಮಾಸ ಕೇಳೋದೈನತಿ, ರಣರಣ ಕುಟ್ಟೇ ಕುಟ್ಟೆತತಿ; ಮದ್ಯಾಣದೊಹತ್ತಿನಾಗ ವಂದ ಜರಾ ಗಿಡದ ಬುಡಕ ಕುಂತೇ ನಂದರ ನೆಳ್ಳಾರ ಅತೆ? ಅದೂ ಇಲ್ಲ. ನೀರಡಸಾಣಾ ತೊಪ್ಪಲ ಬಿದ್ದಕೊಳತ ಹಳದಾನ ನೀರ ಕುಡ್ಯಾಣಾ ಹಸುವಾಗಾಣಾ ಹೊತ್ತಲ್ಲದ್ಹೊತ್ತಿನ್ಯಾಗ ಹಸೆ ಖಂಡಾ ತಿನ್ನಾಣಾ; ಇವನ ಕುದುರೀ ಹಿಂದ ಓಡಿ ಓಡಿ ಕೈ ಕಾಲೆಲ್ಲಾ ಸಂದದಪ್ಪಿ ಹೋದವು. ರಾತರಿನ್ಯಾಗ ಕಣ್ಣ ತುಂಬಾ ನಿದ್ಯಾರ ಆಕ್ಕೈತೆ? ಅದೂ ಇಲ್ಲ. ಒಂದು ಜರಾ ಜರಪ ಹತ್ತಿರ್ತೊ ಇಲ್ಲೊ ಆಟಗಾರ ಬ್ಯಾಟೇ ಆಡೊ ಮೊಮ್ಮಕ್ಕಳು ವದರಾಡಿ ಕೊಂಡ ಬಂದಕ್ಯಾಸ ಎಬ್ಬಿಸಿದರ.

ಇನ್ನು ಮೊದಲನೆಯ ಮಹಾಯುದ್ಧವು ಬಿ.ಎಂ.ಶ್ರೀ. ಮತ್ತಿತರರ ಮೇಲೆ ಯಾವ ಪರಿಣಾಮವನ್ನು ಉಂಟುಮಾಡದೇ ಹೋದರೂ, ಅವರಿನ್ನೂ ರೊಮ್ಯಾಂಟಿಕ್ ಕವಿಗಳ ಕವನಗಳನ್ನು ಅನುವಾದ ಮಾಡುವುದರಲ್ಲಿ ಮಗ್ನರಾಗಿದ್ದರೂ, ಬಡ ಶಾಲಾ ಮಾಸ್ತರನೊಬ್ಬನ ಮೇಲೆ ಅದು ಭೀಕರವಾದ ಪರಿಣಾಮವನ್ನು ಉಂಟುಮಾಡಿರುವುದು ತುಂಬ ಸಮಾಧಾಣದ ಸಂಗತಿ. ಫಕೀರಯ್ಯ ಬ. ಇಂಡಿ ಎಂಬುವರು (೧೯೨೦ರ ಸುಮಾರಿನಲ್ಲಿ) ಬರೆದ ‘ಬಡ ಶಿಕ್ಷಕನ ಬಡಬಡಿಕೆ’ ಎಂಬ ಕವನ ಇದು

ನಿಲಯದಲಿ ನಾ ವೈವರಿರುವೆವುತಲುಬು ದೊರೆವುದು ಮೂರು ವರಹವು
ಬಳಲುತಿರ್ಪೆನು ಕರುಣಿಸೈ ದೇವೇಶ ಜಗದೀಶಾ
ಮಳೆಯು ಪೋದುದು ದಯವ ತೋರದೆ ಹೊಲಗಳೆಲ್ಲವು ಬೀಳುವೆದ್ದವು
ಬೆಲೆಯು ಹೆಚ್ಚಿತು ಕಾಳು ಕಡ್ಡಿಗಳನೆಂತುಕೊಳ್ಳುವುದು?…..
ಹರಕ ಬಟ್ಟೆಯು ಹೊದೆಯಲಾರೆನುಧರಿಸಲಾರೆನು ಮಲಿನ ವಸ್ತ್ರವ
ಮರುಗುತಿಹೆ ನಾನಿದರ ದೆಶೆಯಿಂ ದಿವಸದಿವಸಕ್ಕೆ

ಭರದಿನೊಡವೆಯ ಬೆಲೆಯು ಬೆಳೆವುದುತರಲಿ ನಾನಿನ್ನೆಲ್ಲಿ ದುಡ್ಡ
ನ್ನರಿವೆಗಳ ಕೊಳ್ಳಲ್ಕೆ ತಿಳಿಯದದೆನಗೆ ಜಗದೀಶಾ
ಬರದೆ ನಡೆದಿಹ ಯುದ್ಧ ಮುಗಿಸೈಮರುಳ ವೈರಿಗೆ ಮರುಣವೀಯೈ
ಬರದ ಬಾಧೆಯ ನೀಗಿಸೈನುತಿಸುವೆನು ದೇವೇಶಾ
ಕರುಣ ಭರಿತನೆ ಪರಮಚರಿತನೆಇರದೆಯಧ್ಯಾಪಕರ ತಲಬನು
ತ್ವರೆಯೊಳೈಮಡಿ ಮಾಳ್ಪಮನವನ್ನೀವುದೊಡೆಯರ್ಗೆ

ಇದುವರೆಗೆ ನಾನು ಹೇಳಿರುವುದನನ್ನೆಲ್ಲ ನೋಡಿದರೆ ಸ್ಥೂಲವಾಗಿ ಇಷ್ಟನ್ನು ಹೇಳಬಹುದು: ಪಶ್ಚಿಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಾಕ್ರಾಂತಿಕಾರಕ ಬದಲಾವಣೆಗಳಾಗುತ್ತಿದ್ದ ಅವಧಿಯಲ್ಲಿ ಕನ್ನಡ ಹೊಸದರ ಕಡೆಗೆ ತವಳುತ್ತಿತ್ತು. ನೂತನತೆಯನ್ನು ಹಾರೈಸುತ್ತಿತ್ತು. ಶತಮಾನಗಳ ಸಂಪ್ರದಾಯ, ಮೌಢ್ಯಗಳ ಹೆಣಭಾರವನ್ನು ಹೊತ್ತೂ ಇದು ಮುಂದಕ್ಕೆ ಇಟ್ಟ ಒಂದು ಹೆಜ್ಜೆಯೂ ಅರ್ಜುನನ ರಥ, ಹನುಮ ಕೃಷ್ಣ ಸಹಿತವಾಗಿದ್ದುದ್ದು; ಒಂದು ಅಂಗುಲ ಹಿಂದಕ್ಕೆ ಹೋದಷ್ಟೇ ಮಹತ್ವದ ವಿಷಯ ಎಂಬುದನ್ನು ಉಪೇಕ್ಷಿಸುವಂತಿಲ್ಲ.

ಪಶ್ಚಿಮದಲ್ಲಿ ಆಧುನಿಕತೆ ಅನೇಕಾನೇಕ ಪ್ರಯೋಗಗಳನ್ನು ನಡೆಸಿ ತಾನು ತಿಳಿದುಕೊಂಡಿದ್ದಂತೆ, ತನ್ನ ಭಾವನೆಗಳಿಗೆ ಅನುಗುಣವಾಗಿ ಸಿದ್ಧಿಯನ್ನೋ ಪೂರ್ಣತೆಯನ್ನೋ ಸಾಧಿಸಿದ್ದ ಕಾಲದಲ್ಲಿ ಕನ್ನಡನಾಡಿನಲ್ಲಿ ನವೋದಯ ಸಾಹಿತ್ಯ ಪ್ರಯೋಗಗಳನ್ನು ನಡೆಸಿ, ತಾನು ತಿಳಿದುಕೊಂಡಿದ್ದಂತೆ, ತನ್ನ ಭಾವನೆಗಳಿಗೆ ಅನುಗುಣವಾಗಿ ಸಿದ್ಧಿಯನ್ನೋ ಪೂರ್ಣತೆಯನ್ನೋ ಸಾಧಿಸಲು ಪ್ರಯತ್ನಿಸುತ್ತಿತ್ತು.

ಪಶ್ಚಿಮದಲ್ಲಿ ಕೆಲವರಾದರೂ ಕವಿಗಳು ಮಾಡಿದಂತೆ ನಮ್ಮ ಲೇಖಕರೂ ವಿಜ್ಞಾನವು ತೆರದ ಹೊಸ ಹೊಸ ಲೋಕಗಳಿಂದ ಪ್ರತಿಮೆಗಳನ್ನೂ ಉಪಮೆಗಳನ್ನೂ ಬಳಸಿಕೊಂಡರು. ವಿಜ್ಞಾನ ಎಂಬುದು ಎಲ್ಲಿಂದಲೋ ದಿಢೀರನೆ ಈ ವ್ಯವಹಾರ ಜಗತ್ತಿಗೆ ಧುಮುಕಿದ್ದಲ್ಲ, ನಮ್ಮ ಒಳ ಪ್ರಜ್ಞೆಯ “ಅನಂತ”ನೇ ವಿಜ್ಞಾನದ ಹೆಡೆಯನ್ನು ಬಿಚ್ಚಿ ತನ್ನ ಅಂತರಂಗದ ಆಧ್ಯಾತ್ಮಿಕ ನಿಧಿಯನ್ನು ಕಾಪಾಡಲು ಪಂತ ತೊಟ್ಟಿದ್ದಾನೆ ಎನ್ನುತ್ತಾರೆ ಶ್ರೀ ಪು. ತಿ. ನರಸಿಂಹಾಚಾರ್ಯರು:

ಮುದುರಿದ ವಿಜ್ಞಾನ ಹೆಡೆ ಬಿಚ್ಚುತ
ನಮ್ಮೊಳ ಪ್ರಶ್ನೆಯನಂತ
ತನ್ನೆಗೆ ತಲ್ಪದೊಳಿಹ ಮಂಗಳವನು
ಕಾಪಿಡೆ ತೊಟ್ಟಿದೆ ಪಂತ.
(ರಸ ಸರಸ್ವತಿ ಮತ್ತು ಇತರ ಕವನಗಳು-‘ಜಯಭಾರತಕೆ’)

ಅನೂಚಾನವಾಗಿ ಪರಂಪರೆಯ ಪ್ರಜ್ಞೆಯನ್ನು ಉಳಿಸಿಕೊಂಡ ಈ ಕವಿಗಳು ವಿಜ್ಞಾನದ ಕಣ್ಣುಕೋರೈಸುವ ಹೊಸ ಬೆಳಕಿನಿಂದ ಕಾವ್ಯ ಪ್ರಯೋಜನವನ್ನು ಸಾಧಿಸಿಕೊಂಡರೇ ಹೊರತು ಅದು ಇವರನ್ನು ದಿಗ್ಬ್ರಮೆಗೊಳಿಸಿ ಕುರುಡಾಗಿಸಲಿಲ್ಲ. ಶ್ರೀ ಕುವೆಂಪು ತಮ್ಮ “ಶ್ರೀ ರಾಮಾಯಣ ದರ್ಶನಂ” ಕಾವ್ಯದಲ್ಲಿ ದಶರಥನ ಯಜ್ಞ ಶಾಲೆಯನ್ನೂ ಅದರ ಮಧ್ಯದಲ್ಲಿದ್ದ ಅಗ್ನಿಕುಂಡದ ಉರಿಯನ್ನೂ ಹೀಗೆ ವರ್ಣಿಸುತ್ತಾರೆ:

ಸಮೆದುದಧ್ವರ ಶಾಲೆ ಸರಯೂ ತರಂಗಿಣಿಯ
ಪಚ್ಚೆಯ ಪಸುರ್ ದಡದ ಮೇಲೆ, ಚೈತ್ರನ ಕೃಷಿಯ
ಕುಸುಮ ಕಿಸಲಯ ಲತಾಶೋಭಿತದ ರಮಣೀಯ
ಗಂಧ ಬಂಧುರ ದೇವ ಕಾನನ ನಿಕೇತನದ
ಸಿರಿಮಾಳ್ಕೆಯಿಂದೆ. ಮಧ್ಯದೊಳಗ್ನಿಕುಂಡದುರಿ
ದೇದೀಪ್ಯಮಾನಮಾದುದು, ವಿಫುಲ ದೂರದಲಿ,
ದೂರದರ್ಶಕ ಯಂತ್ರದಕ್ಷಿಯೊಳೆ ಕಣ್ಣಿಟ್ಟು
ಗಗನ ವಿಜ್ಞಾನಿ ತಾಂ ರಾತ್ರಿಯಾಕಾಶದಲಿ
ಕಾಣ್ಬೊಂದು ತಾರಾ ಗರ್ಭದಂತೆ….
(ಶ್ರೀ ರಾಮಾಯಣ ದರ್ಶನಂ, ಕವಿಕ್ರತುದರ್ಶನ)

ಮೇಲಿನ ವಿಜ್ಞಾನೋಪಮೆಯು ಸ್ವಲ್ಪಮಟ್ಟಿನ ವಿಶ್ಲೇಷಣೆಯನ್ನು ಬಯಸುತ್ತದೆ. ದೂರದರ್ಶಕ ಯಂತ್ರ, ತಾರಾ ಗರ್ಭ ಮುಂತಾದ ಮಾತುಗಳು ಬಂದ ಕೂಡಲೇ, ಅಥವಾ ಬಂದಷ್ಟರಿಂದಲೇ ಇದು ವೈಜ್ಞಾನಿಕ ಎನ್ನಬಹುದೆ. ಅದರ ಬಳಕೆ “ಯಜ್ಞ”ದಂತಹ ಅವೈಜ್ಞಾನಿಕ, ಅವೈಚಾರಿಕ ಮತ್ತು ಸನಾತನ ಮಾಧ್ಯಮವೊಂದನ್ನು ಪ್ರತಿಪಾದಿಸುವುದಕ್ಕಾಗಿ ಆಗಿದೆಯಲ್ಲ ಎಂಬ ವಾದವನ್ನು ಮಂಡಿಸುವುದು ಸಾಧ್ಯ. ಇಲ್ಲಿನ ಯಜ್ಞ “ಅಹಿಂಸಾತ್ಮಕ”ವಾದದ್ದು ಎಂಬುದಷ್ಟೇ ಈ ಯುಗ ಪ್ರಜ್ಞೆಯ ಸ್ಪರ್ಶವನ್ನುಳ್ಳದ್ದು. ಯಜ್ಞವು ಸಂತೃಪ್ತಿಪಡಿಸುವುದು ದೇವತೆಗಳನ್ನಲ್ಲ. ಜನರನ್ನು ಎಂದೇ ವಾದಿಸಬಹುದು. ಆದರೆ, ಅದರಿಂದ ಪುತ್ರೋಪತ್ಪತ್ತಿಯಾಗುತ್ತದೆ ಎಂಬುದಕ್ಕೆ, ಅಥವಾ ಬೇರಾವುದೋ ಫಲ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ಸಿದ್ಧವಾದ ಯಾವುದೋ ದಾಖಲೆಯೂ ಇಲ್ಲ. ನಿಜವಾಗಿಯೂ ಹಳೆಯ ನಂಬಿಕೆಯೊಂದಕ್ಕೆ ಪೋಷಣೆ ನೀಡುವ ಸಂದರ್ಭದಲ್ಲಿ ಬಂದದ್ದು ಈ ಉಪಮೆ. ಆದರೆ ಇಂಥದೊಂದು ಸಂದರ್ಭದಲ್ಲೂ ವೈಜ್ಞಾನಿಕ ಉಪಮೇಯವನ್ನು ಬಳಸುವ ಪ್ರಯತ್ನ ನಡೆದಿದೆ ಎಂಬುದರ ಕಡೆ ಸಹೃದಯರ ಗಮನವನ್ನು ಸೆಳೆಯಲಾಗಿದೆ.

ಹೀಗಾದರೂ, ಪ್ರಾಚೀನವಾದ ಪುರಾಣ ಪ್ರಪಂಚದ ಕಥಾವಸ್ತುವನ್ನು ಕುರಿತು ಬರೆದಿರುವ ಮಹಾಕಾವ್ಯವೊಂದರಲ್ಲಿ ಯಾವಾಗಲೂ ಮೇಲೆ ಹೇಳಿದ ಪ್ರಯೋಜನಾಕ್ಕಾಗಿಯೇ ವೈಜ್ಞಾನಿಕ ಉಪಮೆಗಳನ್ನು ಬಳಸುತ್ತಾರೆ ಎಂದೇನಿಲ್ಲ. ಭಾವ ಪ್ರಯೋಜನಕ್ಕಾಗಿಯೇ ವಿಜ್ಞಾನೋಪಮೆ ಬಂದಿರುವುದಕ್ಕೆ ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿಯೇ ನಿದರ್ಶನಗಳಿವೆ. ಒಂದು ಚಿತ್ರಕೂಟದಲ್ಲಿ ಭರತ-ರಾಮರ ಸಮಾಗಮ ಪ್ರಸಂಗದಲ್ಲಿ, ಭರತನು ದುಃಖಾತಿಶಯದಿಂದ ಮೂರ್ಛಿತನಾಗಿ ಮತ್ತೆ ಮೈ ತಿಳಿಯುವ ಸಂದರ್ಭದಲ್ಲಿ ಒಂದು ವೈಜ್ಞಾನಿಕ ಮಹೋಪಮೆಯನ್ನು ಶ್ರೀ ಕುವೆಂಪು ಅವರು ಸೃಷ್ಟಿಸಿದ್ದಾರೆ.

ದೇವಾಸುರರ ಮಂದರದ ಮೇಣಿ
ವಾಸುಕಿಯ ಮಥನ ದೈತ್ಯತೆಗೆಂತು ಮುನ್ನೊಮ್ಮೆ
ತಾನುಕ್ಕಿತಂತೆ, ಭೂ ಜಠರ ಜಠರಾಂತರದ
ಪಲ್ಲಟದ ಪರಿಣಾಮದಿಂದಂ ಪ್ರಕೋಪಿಸುತೆ
ಭೋರ್ಗುದಿದು ಮೆಲ್ವಾಯ್ವುದಟ್ಲಾಂಟಿಕಾಂಬೋಧಿ
ಪೆಸಿಫಿಕಂಬುಧಿಯೊಡನೆ ಢಿಕ್ಕಿ ಹೊಡೆದುಕ್ಕಿ…..
(ಶ್ರೀ ರಾಮಾಯಣ ದರ್ಶನಂ- ಪಾದಾಕಾ ಕಿರೀಟ)

ಇನ್ನು ಆಧುನಿಕತೆಯ ಇತರ ಅಂಶಗಳನ್ನು ಕುರಿತು ವಿಚಾರಿಸೋಣ. ೧೯೫೦ರ ಸರಿಸುಮಾರಿನಲ್ಲಿ ನಿಂತು ಹೇಳುವುದಾದರೆ, ಅಂದಿಗೆ ಮೂವತ್ತು ನಲವತ್ತು ವರ್ಷಗಳಷ್ಟು ಹಿಂದೆಯೇ ಪಶ್ಚಿಮದಲ್ಲಿ ನಡೆಯುತ್ತಿದ್ದ ಪ್ರಯೋಗಗಳು ನಮ್ಮ ಸಾಹಿತಿಗಳಿಗೆ ಗೊತ್ತಿರಲಿಲ್ಲ ಎಂದು ಹೇಳುವಂತಿಲ್ಲ. ಇಲ್ಲಿನ ಜನ ಜೀವನದಲ್ಲಿ ಬಡತನ, ಅಜ್ಞಾನ, ನಿರಾಶೆ, ನಾಸ್ತಿಕ್ಯ, ಮೌಲ್ಯನಾಶ, ಸಮಕಾಲೀನ ಪ್ರಜ್ಞೆ- ಇವೆಲ್ಲ ಇರಲೇ ಇಲ್ಲ ಎಂದು ಹೇಳುವಂತೆಯೂ ಇಲ್ಲ. ಹಾಗಾದರೆ ಇವೆಲ್ಲ, ಪಶ್ಚಿಮದಲ್ಲಿ ಸಾಹಿತ್ಯ, ಕಲೆಗಳಲ್ಲಿ ಆಂದೋಳನಗಳನ್ನು ಉಂಟುಮಾಡಿದ ಪ್ರೇರಕ ಶಕ್ತಿಗಳಾದಂತೆ ಇಲ್ಲಿ ಆಗಲಿಲ್ಲ ಏಕೆ. ನನಗೆ ತೋರುವಂತೆ ಕೆಲವು ಸೂಚನೆಗಳನ್ನು ಉತ್ತರ ರೂಪದಲ್ಲಿ ನೀಡಬಯಸುತ್ತೇನೆ. ಆದರೆ ಇವೆಲ್ಲ ಇನ್ನೂ ತೀವ್ರವಾದ ಜಿಜ್ಞಾಸೆಗೆ ಒಳಪಡಲೇಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

ನಮ್ಮಲ್ಲಿ ೧೯೫೦ ರವರೆಗೆ ಒಂದು ಅವಧಿ ಎಂದು ಭಾವಿಸಿ ಅಲ್ಲಿಗೆ ಒಂದು ಸಾಹಿತ್ಯಕ ಗೆರೆಯನ್ನು ಎಳೆಯಬಹುದಾದರೆ ಅಲ್ಲಿನವರೆಗೆ ಸಾಹಿತ್ಯ ರಚನೆ ಮಾಡಿದ ನಮ್ಮ ವಿದ್ಯಾವಂತ, ಮಧ್ಯಮ ವರ್ಗದ ಜನರು ಹೇಗೆ ಆಲೋಚಿಸಿದರು ಎಂಬುದನ್ನು ವಿಶ್ಲೇಷಿಸಿ ಹೀಗೆ ಹೇಳಬಹುದು.

೧. ಇಂಗ್ಲೆಂಡಿನ ರೊಮಾಂಟಿಕ್ ಸಂಪ್ರದಾಯದ ಸಾಹಿತ್ಯ ಪ್ರಕಾರಗಳನ್ನು ಕನ್ನಡಕ್ಕೆ ತರುವುದು ಅಗತ್ಯ. ಏಕೆಂದರೆ ಇಂಥದು ಕನ್ನಡಕ್ಕೆ ಹೊಸದು. ಹೂವು ಹಕ್ಕಿಗಳನ್ನೂ ಗಿಡ ಮರ ಬಳ್ಳಿಗಳನ್ನೂ, ಬೆಟ್ಟ ಹೊಳೆಗಳನ್ನೂ, ತಿಪ್ಪೆ, ಕಸ, ಬಡತನಗಳನ್ನೂ, ಹೊಸ ಹೊಸ ಸಾಹಿತ್ಯ ಪ್ರಕಾರಗಳ ವರ್ಣಿಸಬಹುದು ಎಂಬುದು ಇವರನ್ನು ಆಕರ್ಷಿಸಿ, ಸಾಹಿತ್ಯ ರಚನೆಗೆ ಸ್ಫೂರ್ತಿ ನೀಡಿತು.

೨. ಭರತ ಖಂಡದ ಆರ್ಷೆಯವಾದ ಸಂಸ್ಕೃತಿಯನ್ನು ಇದು ತುಂಬ ಬೆಲೆ ಬಾಳುವಂಥದು, ಇಂಥದು ಜಗತ್ತಿನ ಭೇರೆ ಯಾವ ಕಡೆಯೂ ಇಲ್ಲ ಎಂಬುದನ್ನೂ ಇದು ಪರಮ ಶ್ರೇಷ್ಠವಾದುದು ಎಂಬುದನ್ನೂ-ವಿಚಾರ ಪೂರ್ವಕವಾಗಿ ಅಲ್ಲ-ಭಾವನಾಪೂರ್ವಕವಾಗಿ-ಒಪ್ಪಿಕೊಂಡ ಜನ ಇವರು, ಅಥವಾ ಇವರಲ್ಲಿ ಹೆಚ್ಚಿನ ಮಂದಿ.

ಈ ಭಾವನಾವೇಗ ಕನ್ನಡದ ಲೇಖಕರಿಗೇ ಮೀಸಲಾದದ್ದಲ್ಲ. ಭರತ ಖಂಡದ ಹೆಚ್ಚಿನ ಮಂದಿ ಲೇಖಕರಿಗೆ, ಏಕೆ, ಬಹುಮಂದಿ ಭಾರತೀಯರಿಗೆ ಸಮಾನವಾದದ್ದು. ಇದಕ್ಕೆ ಭರತ ಖಂಡದ ಅಂದಿನ ಪರಿಸ್ಥಿತಿಯೂ ಕಾರಣ. ರಾಜಕೀಯವಾಗಿ ದಾಸ್ಯ, ಆರ್ಥಿಕವಾಗಿ ದಾರಿದ್ರ್ಯ ಬೇಸಾಯ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಹಿಂದುಳಿದಿದ್ದುದು ಇವೆಲ್ಲ ಸೇರಿ ಯಾವುದರಲ್ಲಾದರೂ ನಾವು ಪಶ್ಚಿಮದವರಿಗಿಂತ ಮೇಲು ಎನ್ನುವ ಒಂದು ಹೆಮ್ಮೆ ಭಾರತೀಯರಿಗೆ ಬೇಕೆ ಬೇಕಾಗಿತ್ತು. ಇಲ್ಲದಿದ್ದರೆ ಮಾನಸಿಕ ಸಾವು ಅನಿವಾರ್ಯವಾಗಿತ್ತು. ಅಂಥ ಸಮಯದಲ್ಲಿ, ಆ ಮತ್ತೆ ಅದೇ ಪಶ್ಚಿಮದ ವಿದ್ವಾಂಸರು ಇಲ್ಲಿನ ಚಿಂತನಾಪ್ರಧಾನವಾದ ಗ್ರಂಥಗಳನ್ನು ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಿ ಅವುಗಳನ್ನು ಹೊಳಿದರು. ಭಾರತೀಯರು ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡು ಈ ವಿಷಯದಲ್ಲಾದರೂ ನಾವು ನಿಮಗಿಂತ ಮೇಲಲ್ಲವೆ ಎಂದು ಕೇಳತೊಡಗಿದರು. ಕೆಲವು ನೂರು ಸಲ ಈ ಮಾತುಗಳನ್ನು ಮತ್ತೆ ಮತ್ತೆ ಹೇಳಿಕೊಂಡ ಭಾರತೀಯರು ತಾವು ಜಗತ್ತಿನ ಎಲ್ಲ ಜನರಿಗಿಂತ ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶ್ರೇಷ್ಠ ಎಂದು ನಂಬಿಯೇ ಬಿಟ್ಟರು. ತಮ್ಮ ತಾತ ಮುತ್ತಾತಂದಿರು ಕೆಲವು ಗ್ರಂಥಗಳನ್ನು ಬರೆದಿಟ್ಟ ಮಾತ್ರಕ್ಕೆ ಅವುಗಳಲ್ಲಿನ ಬಹುಪಾಲು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆಯೇ ಇದ್ದ ಈ ಜನ ಹೇಗೆ ತಾನೇ ಇತರ ದೇಶದವರಿಗಿಂತ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಸಾಧಿಸಿದ್ದರೋ ಹೇಳುವುದು ಕಷ್ಟ ಆದರೂ ನಮ್ಮ ಲೇಖಕರಲ್ಲಿ ಹೆಚ್ಚಿನ ಜನ ಹಾಗೆಯೇ ನಂಬಿದ್ದರು.

೩. ಮೇಲಿನ ನಂಬಿಕೆಗೆ ಪೋಷಕವಾಗಿತ್ತು. ಅಂದಿನ ಸಮಗ್ರ ಭರತ ಖಂಡದ ಸ್ಥಿತಿ. ಸ್ವಾತಂತ್ರ್ಯಕ್ಕಾಗಿ ನಡೆಸಬೇಕಾಗಿ ಬಂದಿದ್ದ ಹೋರಾಟದಲ್ಲಿ ಜನರು ತ್ಯಾಗ, ಸಹಿಷ್ಣುತೆಗಳನ್ನು ತೋರಿಸಬೇಕಾಗಿತ್ತು. ಬಡತನ, ಕಷ್ಟಗಳಲ್ಲೂ ತ್ಯಾಗ, ಬಲಿದಾನಗಳನ್ನು ಮಾಡಿ, ದೇಶಕ್ಕಾಗಿ ಸತ್ತರೆ ಸ್ವರ್ಗಸಿಕ್ಕುತ್ತದೆ ಮುಂತಾದ ಭಾವನೆಗಳನ್ನು ಬಿತ್ತಬೇಕಾಗಿತ್ತು. ಜನತೆಯು ಯಾರ ನಾಯಕತ್ವವನ್ನು ಒಪ್ಪಿಕೊಂಡಿತ್ತೋ ಆಕತ ಈಶ್ವರ ಭಕ್ತನೂ ಪರಮ ಆಶಾವಾದಿಯೂ ಆಗಿದ್ದವರಾಗಿದ್ದರು.

ಇನ್ನು ಇದಕ್ಕೆ ವಿರುದ್ಧವಾಗಿ ಮೇಲೆ ಹೇಳಿದ ಆಧುನಿಕತೆಯ ಲಕ್ಷಣಗಳನ್ನು ಸಂಪೂರ್ಣವಾಗಿ, ಮೈಗೂಡಿಸಿಕೊಂಡು ಬರೆಯುವವರು ಯಾರು? ಹಾಗೆ ವಿಚಾರ ಮಾಡುವ ಅಗತ್ಯವಾದರೂ ಎಲ್ಲಿತ್ತು? ಜನತೆಯು ಕಷ್ಟನಷ್ಟಗಳಿಗೆ ವಿದೇಶೀ ಆಡಳಿತ ಕಾರಣ ಎಂದು ಒಂದು ಕಡೆ ಹೇಳಿ, ಜನತೆಯ ಜನ್ಮಾಂತರ. ಕರ್ಮವೂ ಕಾರಣ ಎಂದು ಒಂದೇ ಉಸುರಿನಲ್ಲಿ ಹೇಳುವ ನಾಯಕರನ್ನೂ ಬರಹಗಾರರನ್ನೂ ಜನ ಒಪ್ಪಿಕೊಂಡಿದ್ದರು. ಈ ಸಂಸ್ಕೃತಿಯನ್ನು ಇಲ್ಲಿನ ಶಾಸ್ತ್ರ ಪುರಾಣಗಳನ್ನು ತಮ್ಮ ಲೇಖಕ-ಚೇತನದ ಒಂದು ಅವಿನಾಭಾಗವಾಗಿ ಸ್ವೀಕರಿಸಿದ್ದ ಬರಹಗಾರರು ಇಲ್ಲಿ ಮೇಲೆ ಹೇಳಿದ ರೀತಿಯ ಆಧುನಿಕತೆಯನ್ನು ಸಾಧಿಸುವುದು ಹೇಗೆ?

ಇಲ್ಲಿ ನನ್ನ ದೃಷ್ಟಿಯಲ್ಲಿ ಆಧುನಿಕತೆ ಎಂದರೆ ಏನು ಎಂಬುದನ್ನು ನಿರೂಪಿಸುತ್ತೇನೆ. ಮೊದಲಿಗೆ ಜೀವನ ದೃಷ್ಟಿಯಲ್ಲಿ ಆಧುನಿಕತೆ ಎಂದರೆ ಏನು ಎಂಬುದನ್ನು ವಿವರಿಸಿ ಅನಂತರ ಬರವಣಿಗೆಯಲ್ಲಿ ಆಧುನಿಕತೆ ಎಂದರೆ ಏನು ಎಂಬುದನ್ನು ಸೂಚಿಸುತ್ತೇನೆ.

೧. ನಮ್ಮ ಸುತ್ತ ನಡೆಯುವ ಘಟನಾ ಪರಂಪರೆಗಳನ್ನು ಕಾರ್ಯ-ಕಾರಣ ಸಂಬಂಧಗಳ ದೃಷ್ಟಿಯಿಂದ ಅತ್ಯಂತ ವೈಚಾರಿಕವಾಗಿ ವಿವರಿಸುವುದು ಸಾಧ್ಯ. ಒಂದು ಉದಾಹರಣೆ ತೆಗೆದುಕೊಳ್ಳಿ. ಒಬ್ಬ ವ್ಯಕ್ತಿ, ಸಾಧಾರಣ ಓದು ಬರಹ ಮಾಡಿದವನು. ಒಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಪದವಿಗೆ ಏರುತ್ತನೆ. ಅಥವಾ ಇನ್ನೂ ಅಂಥದೇ ನಾಲ್ಕಾರು ಗೌರವಗಳನ್ನು ಸಾಧಿಸುತ್ತಾನೆ. ಆಗ ಅದೆಲ್ಲ ಆದದ್ದು ಗುರುಕೃಪೆಯಿಂದ ಅಥವಾ ಭಗವಂತನ ದಯೆಯಿಂದ ಎನ್ನುತ್ತಾನೆ. ಜನತೆಯ ಬಹುಭಾಗ, ಸ್ವಲ್ಪವೂ ವಿಚಾರ ಮಾಡದೆ, ಇದನ್ನು ನಂಬುತ್ತದೆ. ಅವನು ಯಾವ ಯಾವ ವಾಮ ಮಾರ್ಗಗಳನ್ನು ಅನುಸರಿಸಿ, ಎಷ್ಟು ಜನ ಯೋಗ್ಯರನ್ನು ತುಳಿದು, ಯಾವ ಯಾವ ಮುಖ್ಯಸ್ಥರಿಗೆ ಯಾವ ರೀತಿಯ ಮಂಕು ಬೂದಿ ಎರಚಿ, ಯಾವ ಜಾತಿ ಮುಂತಾದ ಪುಂಗಿಗಳನ್ನು ಊದಿ ಈ ಪದವಿಗೆ ಏರಿದ್ದಾನೆ ಎನ್ನುವುದನ್ನು ವಿಚಾರ ಮಾಡುವ ಶಕ್ತಿ ಈ “ಗುರುಕೃಪೆ” ಎನ್ನುವ ಮಂತ್ರದಂಡದಿಂದ ಜನರಿಗೆ ನಾಶವೇ ಆಗಿ ಹೋಗುತ್ತದೆ. ಅವನು ಅದೇ ಮಾಯೆಯನ್ನು ಬೀಸಿ ಇನ್ನೂ ಇನ್ನೂ ಮಾಡಬಾರದ ಅನ್ಯಾಯಗಳನ್ನೆಲ್ಲ ಮಾಡುತ್ತಾನೆ. ‘ಗುರುಕೃಪೆ’ ಮತ್ತು ‘ಭಗವಂತನ ದಯ’ಗಳು ರಕ್ಷೆಯಾಗುವುದಾದರೆ ಅಂಥ ಗುರುವೂ ಅಂಥ ಭಗವಂತನೂ ಶಿಕ್ಷಾರ್ಹರಾಗುವುದಿಲ್ಲವೆ?

ಆದ್ದರಿಂದ ಆಧುನಿಕತೆಯ ಮೊದಲ ಲಕ್ಷಣ ವೈಚಾರಿಕತೆ.

೨. ಎರಡನೆಯದು ವೈಜ್ಞಾನಿಕತೆ. ವಿಜ್ಞಾನ ಇಂದು ನಮ್ಮ ಬದುಕಿನ ಪದರ ಪದಗಳಲ್ಲೂ ಹರಿಯುತ್ತಿದೆ. ನಮಗೆ ಇದುವರೆಗೆ ಕೇವಲ ಪವಾಡವಾಗಿ ತೋರುತ್ತಿದ್ದ ಅನೇಕ ಘಟನೆಗಳನ್ನು ನಮಗೆ ಒಪ್ಪಿಗೆಯಾಗುವಂತೆ ವಿವರಿಸುತ್ತಿದೆ. ಚಂದ್ರಸೂರ್ಯರ ನಿಜವಾದ ಸ್ವರೂಪವನ್ನು ತಿಳಿಸಿದೆ. ಈ ಎಲ್ಲ ಭೌತಿಕ ವ್ಯಾಪಾರಗಳ ಆಚೆಗೆ ಯಾವುದೋ ಶಕ್ತಿ ಇದೆಯೋ ಇಲ್ಲವೋ ನಮಗೆ ತಿಳಿಯದು. ಅದನ್ನು ಕಂಡವರು. ಕಂಡವರಂತೆ ಬಾಳುವವರು, ಕಂಡವರು ಹೀಗೆ ಬಾಳುತ್ತಾರೆ ಎಂದು ಶಾಸ್ತ್ರಗಳಲ್ಲಿ ವಿವರಿಸುವಂತೆ ಬಾಳಬೇಕಾದವರು ಯಾರಿದ್ದಾರೆಯೋ ನಮಗೆ ತಿಳಿಯದು. ಕಂಡೆವು ಎಂದವರು ಏನನ್ನು ಕಂಡಿದ್ದಾರೋ ಯಾರಿಗೂ ತಿಳಿಯದು. ಶೂನ್ಯದಿಂದ ಬೆಲೆಬಾಳುವ ಬಾಳದ ವಸ್ತುಗಳನ್ನು ಬರಿಸುತ್ತೇವೆ ಎಂದು ಜನರನ್ನು ನಂಬಿಸುತ್ತಿರುವ ಮಹನೀಯರು ಹಸಿವಿನಿಂದ ಬಳಲುವವರಿಗೆ ಆಹಾರವನ್ನೂ ಚಳಿಯಲ್ಲಿ ನಡುಗುತ್ತಿರುವವರಿಗೆ ಬಟ್ಟೆಯನ್ನೂ ಏಕೆ ಬರಿಸುವುದಿಲ್ಲವೋ ಅದೂ ತಿಳಿಯದು. ಇವೆಲ್ಲ ಸ್ಪಷ್ಟವಾಗುವವರೆಗೆ ಜೀವನ ವಿಷಯದಲ್ಲಿ ಬೌದ್ಧಿಕ ಘಟನೆಗಳ ವಿಷಯದಲ್ಲಿ ವಿಜ್ಞಾನವು ನೀಡಿರುವ ತೀರ್ಮಾನಗಳನ್ನು ಸ್ವೀಕರಿಸುವುದು ಕ್ಷೇಮ.

೩. ಮೂರನೆಯ ವರ್ಗ ವರ್ಣ ಜಾತಿಗಳ ನಾಶ. ಇವುಗಳಿಂದ ಈ ದೇಶಕ್ಕೆ ಆಗಿರುವ ಹಾನಿಗೆ ಮಿತಿಯೇ ಇಲ್ಲ. ಇದನ್ನು ಒಪ್ಪಿ ಸ್ವೀಕರಿಸದಿದ್ದರೆ ಆಧುನಿಕತನ ಪ್ರವೇಶವಿಲ್ಲ.

೪. ಯಾವುದೇ ವಿಧವಾದ ಮೂಢನಂಬಿಕೆಗಳಿಗೂ ಆಸ್ಪದ ಕೊಡದೇ ಇರುವುದು.

೫. ಸಮಾಜದ ಎಲ್ಲ ಸ್ತರಗಳಲ್ಲೂ-ಅತ್ಯುನ್ನತ ಪದವಿಯಲ್ಲಿರುವವರಿಂದ ಹಿಡಿದು ಮೋಚಿ ಬೆಸ್ತನವರೆಗೂ-ಪರಿಚಯ ಪಡೆದಿರುವುದು.

ಇಷ್ಟನ್ನೂ ನಮ್ಮ ತಲೆಮಾರಿನ ಲೇಖಕರು ಮೈಗೂಡಿಸಿಕೊಂಡಿದ್ದಾರೆ ಎಂದು ಧೈರ್ಯವಾಗಿ ಹೇಳುವಂತಿಲ್ಲ. ಇದಕ್ಕೆ ಕಾರಣವನ್ನು ಹುಡುಕಬೇಕಾದರೆ ನಮ್ಮ ಪ್ರಮುಖ ಲೇಖಕರಲ್ಲಿ ೨೫ ಜನರನ್ನು ಹೆಸರಿಸಿ ನೋಡೋಣ.

ಬಿ.ಎಂ.ಶ್ರೀ., ಪಂಜೆ ಮಂಗೇಶರಾಯರು, ಮಂಜೇಶ್ವರದ ಗೋವಿಂದ ಪೈ, ಕುವೆಂಪು, ಬೇಂದ್ರೆ, ಪು.ತಿ.ನ., ಗೋಕಾರ, ಮುಗಳಿ, ಮಾಸ್ತಿ, ಡಿ.ವಿ.ಜಿ., ವಿ.ಸೀ., ಕಾರಂತ, ಶ್ರೀರಂಗ, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ರಾವ್ ಬಹದ್ದೂರ್, ಎಂ.ವಿ. ಸೀತಾರಾಮಯ್ಯ, ಎಸ್.ವಿ. ಪರಮೇಶ್ವರ ಭಟ್ಟ, ಎಸ್.ಎಲ್. ಭೈರಪ್ಪ, ಅಡಿಗ, ಅನಂತಮೂರ್ತಿ, ತೇಜಸ್ವಿ, ಲಂಕೇಶ, ಚಂದ್ರಶೇಖರ ಪಾಟೀಲ, ನಿಸಾರ ಅಹಮದ್.

ಇವರು ಯಾರು? ಇವರ ವಿದ್ಯಾಭ್ಯಾಸ ಹೇಗೆ? ಇವರ ಜೀವನೋಪಾಯ ಯಾವುದು?

ಪಶ್ಚಿಮದಲ್ಲಿ, ಇಂಗ್ಲೆಂಡಿನಲ್ಲಿ, ಇಂಥದೊಂದು ವಿಶ್ಲೇಷಣೆ ನಡೆದಿದೆ. ಮಾಲ್ಕೋಂ ಬ್ರಾಡ್‌ಬರಿ (Concise Cambridge Bibliography of English Literature ತೆಗೆದುಕೊಂಡು ೧೯೦೦ ರಿಂದ ಈಚೆಗಿನ ೭೨ ಜನ ಪ್ರಮುಖ ಸೃಜನ ಶೀಲ ಲೇಖಕರ ವಿವರಗಳನ್ನು ಕೊಟ್ಟಿದ್ದಾನೆ. (ಅವರು ಮುಖ್ಯವಾಗಿ ಕವಿಗಳು, ಕಾದಂಬರಿಕಾರರು ನಾಟಕಕಾರರು.) ಅವರಲ್ಲಿ ೪೪ ೪೪ ಜನ ಯಾವುದಾದರೂ ರೀತಿಯ ಪಬ್ಲಿಕ್‌ಸ್ಕೂಲ್‌ಗಳಿಗೆ ಹೋದವರು. ೧೪ ಜನ ಗ್ರಾಮರ್ ಸ್ಕೂಲಿಗೆ ಹೋದವರು. ೯ ಜನ ಖಾಸಗಿಯಾಗಿ ವಿದ್ಯಾಭ್ಯಾಸ ಮಾಡಿಕೊಂಡವರು. ೪೭ ಜನ ವಿಶ್ವವಿದ್ಯಾನಿಲಯಗಳಿಗೆ (ಆಕ್ಸ್ ಫರ್ಡ್‌೨೧, ಕೇಂಬ್ರಿಡ್ಜ್‌೧೫) ಹೋದವರು. ಆ ಮೇಲೆ ಇಷ್ಟು ಜನರಲ್ಲಿ ಬಹುಮಂದಿ ಮಧ್ಯಮ ವರ್ಗಕ್ಕೆ ಸೇರಿದವರು. ಬ್ರಾಡ್ ಬರಿ ಹೇಳುತ್ತಾನೆ: “ಕಳೆದ ನೂರೈವತ್ತು ವರ್ಷಗಳಲ್ಲಿ ಓದುಗರ ಸಂಖ್ಯೆ ಬಹುವಾಗಿ ಹೆಚ್ಚಿದರೂ ಈ ಸಂಸ್ಕೃತಿ ನಿರ್ಮಾಪಕರು (Culture-makers) ಮಾತ್ರ ಅತಿ ಕಿರಿದಾದ ಸಾಮಾಜಿಕ ವಲಯಕ್ಕೆ ಸೇರಿದವರಾಗಿದ್ದಾರೆ. ೧೯೪೫ರ ವರೆಗಿನ ಪರಿಸ್ಥಿತಿ ಇದು. ಅನಂತರ ಕೆಳ-ಮಧ್ಯಮವರ್ಗ (lower middle class) ಪ್ರಾಬಲ್ಯಕ್ಕೆ ಪ್ರಯತ್ನಿಸಿತು. ಡಿಲಾನ್ ಥಾಮಸ್ ಈ ಕೆಳ-ಮಧ್ಯಮ ವರ್ಗಕ್ಕೆ ಸೇರಿದವನು ಎಂಬುದನ್ನು ಅವನ ಮೊದಲಿನ ಪತ್ರಗಳು ತೋರಿಸುತ್ತವೆ.”

ಪಶ್ಚಿಮ ದೇಶಗಳಿಗೂ ನಮ್ಮ ದೇಶಕ್ಕೂ ಒಂದು ಮುಖ್ಯ ವ್ಯತ್ಯಾಸ ಇದೆ. ಅಲ್ಲಿ ಬೇಕಾದರೆ ಒಬ್ಬ ಒಳ್ಳೆಯ ಲೇಖಕ ತನ್ನ ಬರವಣಿಗೆಯಿಂದಲೇ ಜೀವನ ನಡೆಸಿಕೊಳ್ಳುವುದು ಸಾಧ್ಯ. ಆದರೆ ನಮ್ಮಲ್ಲಿ ಯಾವನೇ ಬರಹಗಾರನೂ ಲೇಖನಿಯಿಂದಲೇ ಜೀವಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟಸಾಧ್ಯವಾದ ವಿಷಯ. ಕಾರಂತರು, ಡಿ.ವಿ.ಜಿ., ಅ.ನ.ಕೃ., ತ.ರಾ.ಸು., ತೇಜಸ್ವಿ ಹೀಗೆ ಕೆಲವೇ ಲೇಖಕರನ್ನು ಬಿಟ್ಟರೆ ಉಳಿದವರು ಜೀವನೋಪಾಯಕ್ಕಾಗಿ ಯಾವುದಾದರೂ ಉದ್ಯೋಗವನ್ನು ಅವಲಂಬಿಸಿದವರು. ಹೆಚ್ಚಿನವರು ಕಾಲೇಜು ಅಧ್ಯಾಪಕರು. ಹೀಗಾಗಿ ನಮ್ಮ ಲೇಖಕರ ಅನುಭವದ ವಲಯ ಅತ್ಯಂತ ಸೀಮಿತವಾಯಿತು. ಸಮಾಜದ ಎಲ್ಲ ವರ್ಗಗಳೊಡನೆಯೂ ಜೀವನದ ಎಲ್ಲ ಸ್ತರಗಳೊಡನೆಯೂ ಸಂಪರ್ಕ ಕಲ್ಪಿಸಿಕೊಳ್ಳುವುದು ಇವರಿಗೆ ಖಂಡಿತ ವಾಗಿಯೂ ಸಾಧ್ಯವಾಗಲಿಲ್ಲ. ಆದ್ದರಿಂದ ಹಸಿವು, ಬಡತನ, ಕೊಳಕು, ಕೊಂಪೆ ಮುಂತಾದವುಗಳ ಬಗ್ಗೆ ಬಹುಮಂದಿ ಲೇಖಕರ ಬರವಣಿಗೆ ನಗು ಬರಿಸುತ್ತದೆಯೇ ಹೊರತು ವಾಸ್ತವತೆಯ ಸಂವೇದನೆಯನ್ನು ನೀಡುವುದಿಲ್ಲ. ಅವೇ ಜಗತ್ತೆಲ್ಲ ಅಲ್ಲ, ಆದರೆ ನಮ್ಮ ಜಗತ್ತಿನ ಬಹು ಭಾಗವಂತೂ ಅವೇ ತಾನೇ?

ಕೊನೆಯದಾಗಿ ಆಧುನಿಕತೆ ಸಾಹಿತ್ಯದಲ್ಲಿ ಅಭಿವ್ಯಕ್ತಿ ಪಡೆಯುವುದು ಹೇಗೆ? ಅದು ಲೇಖಕರು ಪ್ರಯೋಗಗಳಿಂದ ನಿರ್ಣಯಿಸಬೇಕಾದ ವಿಷಯ. ಆದರೆ ಕೆಲವು ಸೂಚನೆಗಳನ್ನು ಕೊಡಬಹುದು.

ಕನ್ನಡಕ್ಕೆ ಭಾರತದ ಬಹುತೇಕ ಭಾಷೆಗಳಿಗೆ, ವಿಶಿಷ್ಟವಾದ ಸಮಸ್ಯೆಯೊಂದಿಗೆ. ಇಲ್ಲಿ ಓದುವವರು ಯಾರು? ಅನಕ್ಷರಸ್ಥರಾದ ಶೇಕಡ ೮೦ ರಷ್ಟು ಜನ ಅಲ್ಲ. ಇನ್ನುಳಿದ ಶೇಕಡ ೨೦ ರಷ್ಟು ಜನರೂ-ಓದು ಬರಹ ಬಲ್ಲವರೆಲ್ಲರೂ-ಶುದ್ಧ ಸಾಹಿತ್ಯವನ್ನೇ ಓದುತ್ತಾರೆ ಎಂದೇನೂ ಅಲ್ಲ. ಆದ್ದರಿಂದ ಈ ವಿಷಯವನ್ನು ವಾಸ್ತವಿಕತೆಯ ದೃಷ್ಟಿಯಿಂದ ನಮ್ಮ ಲೇಖಕರು ನೋಡಬೇಕು. ನಾವು ಬರೆದದ್ದು ಓದು ಬರಹ ಬಲ್ಲವರಿಗೂ, ಬಾರದವರಿಗೂ ಮುಟ್ಟುವಂತಾಗಬೇಕು. ಅದಕ್ಕೆ ನಾಟಕ ಸಮರ್ಥವಾದ ಮಧ್ಯ. ಬ್ರೆಕ್ಟೆನ “ಗೆಲಿಲಿಯೋ” ನಾಟಕ ಪಟ್ಟಣಗಳಂತೆಯೇ ಇನ್ನೂ ಸಣ್ಣ ಊರುಗಳವರಿಗೂ ಪ್ರಿಯವಾಯಿತು ಎಂಬುದು ಇತ್ತೀಚಿನ ಪ್ರಯೋಗಗಳಿಂದ ಗೊತ್ತಾದ ಸಂಗತಿ. ಅವನ ತಂತ್ರವನ್ನು ನಮ್ಮ ಲೇಖಕರು ಬಳಸಿದರೆ ಬಹುಮಟ್ಟಿನ ಪ್ರಯೋಜವಾದೀತು ಎಂಬುದು ನನ್ನ ಅಭಿಪ್ರಾಯ. ರೇಡಿಯೋ ಮತ್ತು ಈಚೆಗೆ ಇನ್ನೂ ಸಾಮಾನ್ಯವಾಗುತ್ತಿರುವ ಟೆಲಿವಿಷನ್ ಇಂಥ ಬರವಣಿಗೆಯನ್ನು ಹೆಚ್ಚು ಜನರಿಗೆ ಮುಟ್ಟಿಸುವ ಭರವಸೆಯಿದೆ. ಮೇಳಿನ ಆಧುನಿಕತೆ ಲಕ್ಷಣಗಳನ್ನೊಳಗೊಂಡ ಕೃತಿಗಳು ಜನಪ್ರಿಯತೆಯನ್ನು ಪಡೆಯುವ ಸಾಧ್ಯತೆಯೂ ಇದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)