ಪಶ್ಚಿಮದಲ್ಲಿ ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಸಾಹಿತ್ಯದಲ್ಲಿ ಆಧುನಿಕತೆಯ ಅರ್ಥ ಮತ್ತು ವ್ಯಾಪ್ತಿಗಳನ್ನು ನೋಡಿದೆವು. ಇತ್ತ ನಮ್ಮ ದೇಶದಲ್ಲಿ, ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ಪ್ರವೇಶಿಸಿದ ರೀತಿ, ಇಲ್ಲಿನ ಸಾಹಿತ್ಯ ಅದನ್ನು ಅಳವಡಿಸಿಕೊಳ್ಳಲು ಇರುವ ಸಾಧ್ಯತೆಗಳನ್ನು ಕುರಿತು ವಿಚಾರ ಮಾಡಬಹುದು.

ಪಶ್ಚಿಮದಂತೆಯೇ ನಮ್ಮಲ್ಲೂ ಅನೇಕ ಸಾಮಾಜಿಕ ಮೌಲ್ಯಗಳು ಬುಡಮೇಲಾಗಿ ಹೋಗಿವೆ. ಕೆಲವು ಉದಾಹರಣೆಗಳನ್ನು ನೋಡೋಣ.

ಮಹಾಭಾರತದ ಅರಣ್ಯಕ ಪರ್ವದಲ್ಲಿ ಸಾವಿತ್ರಿಯ ಉಪಾಖ್ಯಾನವಿದೆ. ಅಲ್ಲಿ ಸಾವಿತ್ರಿಗೂ ಯಮನಿಗೂ ಸಂಭಾಷಣೆ ನಡೆಯುವ ಸಂದರ್ಭದಲ್ಲಿ ಯಮ ಸಾವಿತ್ರಿಯನ್ನು ಮೆಚ್ಚಿ ಈ ಮಾತುಗಳನ್ನು ಹೇಳುತ್ತಾನೆ:

ಪತಿವ್ರತಾಸಿ ಸಾವಿತ್ರಿ ತಥೈವ ತಪೋನ್ವಿತಾ
ಆತಸ್ತ್ಯಾಮಭಿಭಾಷಾಯ
ವಿದ್ಧಿಮಾಂ ತ್ವಂ ಯಮಂ ಶುಭೇ.

“ಅಮ್ಮ ಸಾವಿತ್ರಿ, ನೀನು ಪತಿವ್ರತೆಯಾಗಿದ್ದೀಯೆ. ಅಲ್ಲದೆ ತಪಸ್ವಿನಿ. ಆದ್ದರಿಂದ ನಿನ್ನೊಡನೆ ಮಾತನಾಡುತ್ತೇನೆ. ಶುಭೇ ನಾನು ಯಮ.”

ಈಗ ಯಾರನ್ನಾದರೂ ಪತಿವ್ರತೆ ಎಂದು ಸಂಬೋಧಿಸುವುದಾಗಲಿ, ಆ ಗುಣಕ್ಕಾಗಿ ಹೊಗಳುವುದಾಗಲಿ ಸಾಧ್ಯವೆ? ಎಂದರೆ ಪತಿವ್ರತೆಯರು ಯಾರೂ ಇಲ್ಲ ಎಂದಲ್ಲ. ಅದು ಎತ್ತಿ ಹೇಳಬೇಕಾದ ಗುಣವಲ್ಲ. ಅಲ್ಲದೆ ಹಾಗೆ ಹೇಳಿದರೆ ಎಷ್ಟು ನಾಟಕೀಯವಾಗಿರುತ್ತೆ! ಹೀಗೆಯೇ ಶಾಕುಂತಲ ನಾಟಕದಲ್ಲಿ ನಾಟಕದಲ್ಲಿ ಕಣ್ವರು ಶಕುಂತಲೆಯನ್ನು ಗಂಡನ ಮನೆಗೆ ಕಳುಹಿಸುವಾಗ ಹೇಳುವ ಮಾತುಗಳು:

ಹಿರಿಯರನ್ನು ಓಲೈಸು ಮತ್ತೆ ನೀಂ ಪ್ರಿಯಸಖಿಯ ತೆರದೊಳಿರು ಸವತಿಯೊಳು
ಮುಳಿದು
ನೀಂ ಪ್ರತಿಕೊಲೆಯಾಗದಿರು ಅಪಚಾರವೆಸಗದಿರು ಪತಿಯ ಹಳಿದು
ಪರಿಜನರ
ವಿಷಯದೊಳು ದಾಕ್ಷಿಣ್ಯವಶಳೆನಿಸು ಭಾಗ್ಯದೊಳು ಬೀಗದಿರು ನೀನು
ಪೆಣ್ಗಳಿಂತಿರ್ಪವರು
ಗರತಿಯರು ತಾವಹರು ಕುಲಪೀಡರಿನ್ಯನ್ಯರು.

ಹಿರಿಯರಿಗೆ ಸೇವೆ ಶೂಶ್ರೂಷೆ ಸಲ್ಲಿಸು ಎನ್ನುವುದನ್ನೇನೋ ಹೆಣ್ಣು ಅರೆಮನಸ್ಸಿನಿಂದಾದರೂ ಒಪ್ಪಿಯಾಳು. ಆದರೆ ಸವತಿಯರಲ್ಲಿ ಪ್ರಿಯ ಸಖಿಯಂತೆ ಇರು ಎನ್ನುವುದನ್ನು ಅವಳು ಒಪ್ಪುವುದಿರಲಿ, ನಾವು ಹೇಳುವುದಾದರೂ ಹೇಗೆ?

ಇನ್ನು ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಬರುವ ಸ್ವಾಮಿ-ಭೃತ್ಯ ಸಂಬಂಧದ ಮೌಲ್ಯ:

ಹಸುವನಳಿ ಪಾರುವನಿ ೞಿಗಟ್ಟು ಮಾತೆ ಪಿತರ ಬಾ
ಧಿಸು ಸುತನ ತಿವಿ ಸತಿಯ ಕೊಲು ಮಾರಿಗೊಱೆಗಟ್ಟು
ವಿಷವ
ಕುಡಿ ಹಾವ ಹಿಡಿ ಹುಲಿಗೆ ಮಲೆ ದಳ್ಳುರಿಯೊಳಡು ಹೋಗೆಂದೊಡೆಯನು
ಬೆಸಸಿದೊಡೆ ನಾನಾಱೆನೆನ ಬಾರದೆಂಬಾಗ
ಳಸವಸದೊಳಿವ ಕಲಸಿ ಸೆಡೆದನಾದೊಡೆ ಕೊಟ್ಟ
ಬೆಸನ ನಡಸುವೆನೆಂಬ ನುಡಿ ಸಡಿಲವಾಗದೇ ಹೇಳೆಂದನವನೀಶನು

ಹಸುವನ್ನು ಕೊಲ್ಲು ಇತ್ಯಾದಿಯಾಗಿ ಸ್ವಾಮಿಯಾದವನು ಏನು ಹೇಳಿದರೂ ಭೃತ್ಯನಾದವನು ಕಮುಕ್‌ಕಿಮುಕ್‌ಎನ್ನದೆ ಮಾಡಲೇಬೇಕು ಎಂಬುದು ಇದರ ಭಾವ. ಇವುಗಳಲ್ಲಿ ಕೆಲವನ್ನಾದರೂ ಮಾಡಲು ಭೃತ್ಯನಾದವನು ಉತ್ಸುಕನಾಗಿರಬಹುದು. ಆದರೆ ಕಾನೂನು?

ಈ ಮೌಲ್ಯಗಳೆಲ್ಲ ಬದಲಾದದ್ದು ಯಾವುದರಿಂದ? ಭರತ ಖಂಡದ ವಿದ್ಯಾಭ್ಯಾಸ, ರಾಜಕೀಯ ಮುಂತಾದ ಕ್ಷೇತ್ರಗಳ ಮೇಲೆ ಪಾಶ್ಚಾತ್ಯ ದೇಶಗಳು, ಅದರಲ್ಲೂ ಪ್ರಜಾಪ್ರಭುತ್ವವಾದಿಯಾದ ಇಂಗ್ಲೆಂಡ್ ಬೀರಿದ ಪ್ರಭಾವದಿಂದ. ಜೊತೆಗೆ ನಮ್ಮ ದೇಶದಲ್ಲೂ ಔದ್ಯೋಗಿಕರಣವೂ ನಗರೀಕರಣವೂ ಹೆಚ್ಚು ಹೆಚ್ಚಾಗಿ ನಡೆದು ನಮ್ಮ ಸಾರ್ವಜನಿಕ ಪರಿಸರ ಬದಲಾದದ್ದೂ ಆ ಮೌಲ್ಯಗಳನ್ನು ಬಡುಮಟ್ಟು ಅಳ್ಳಾಡಿಸಲು ಕಾರಣವಾಯಿತು.

ನಮ್ಮ ದೇಶದಲ್ಲೂ ಪ್ರಾಚೀನ ಕಾಲದಿಂದಲೂ, ಸಂಸ್ಕೃತ ಮತ್ತು ಕನ್ನಡ ಕವಿಗಳು “ಹೊಸದು” ಎಂಬುದನ್ನು ಕೆಲವು ಸಲ ಅಳುಕಿನಿಂದಲೂ, ಕೆಲವು ಸಲ ನಮ್ಮ ಮನಸ್ಸನ್ನು ಸೆಳೆಯುವ ಉದ್ದೇಶದಿಂದಲೂ ಹೇಳಿದ್ದರು ಎಂಬುದನ್ನು ನೆನೆಯಬಹುದು.

ಮಾಳವೀಕಾಗ್ನಿ ಮಿತ್ರದಲ್ಲಿ ಕಾಳಿದಾಸನು ನಾಟಕದ ಪ್ರಾರಂಭದಲ್ಲೆ ಪಾರಿಪಾರ್ಶ್ವಕನಿಂದ ಈ ಮಾತನ್ನು ಹೇಳಿಸುತ್ತಾನೆ:

ಮಾ ತಾವತ್, ಪ್ರಥಿತ ಯಶನಾಂ ಭಾಸ ಸೌಮಿಲ್ಲಕ ಕವಿಪುತ್ತಾದೀನಾಂ
ಪ್ರಬಂಧಾನತಿಕ್ರಮ್ಯ ವರ್ತಮಾನ ಕವೇಃ; ಕಾಳಿದಾಸಸ್ಯ ಕ್ರಿಯಾಯಾಂ ಕಥಂ ಬಹುಮಾನಃ

(ಅಯ್ಯಾ ಬೇಡ. ಭಾಸ, ಸೌಮಿಲ್ಲದ ಕವಿಪುತ್ರ ಮುಂತಾದ ಪ್ರಖ್ಯಾತ ಕವಿಗಳ ಕೃತಿಗಳನ್ನು ಬಿಟ್ಟು ಇವತ್ತಿನ ಕವಿ ಕಳಿದಾಸನ ಕೃತಿಯಲ್ಲಿ ಏನು ವಿಶೇಷ?)

ಅದಕ್ಕೆ ಸೂತ್ರಧಾರ ಕೊಡುವ ಉತ್ತರ ಇದು:

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ
ಸನ್ತಂ ಪರೀಕ್ಷಾನ್ಯತರದ್ಭಜಂತೇ
ಮುಢಾಃ ಪರ ಪ್ರತ್ಯಯನೇಯ ಬುದ್ಧಿಃ

ಹಳತೆಂದ ಮಾತ್ರದೊಳೆ ಎಲ್ಲವೂ ಒಳಿತಲ್ಲ
ಹೊಸತೆಂದ ಮಾತ್ರದೊಳೆ ಕೃತಿ ಕೆಟ್ಟುದಲ್ಲ
ಪರಿಕಿಸಿದ ಮೇಲೊಂದನೊಲಿದಪರು ಬುಧಜನರು
ಪರರು ಪೇಳ್ದಂದದೊಳು ನಡೆದಪರು ಮೂಢ ಜನರು
-(ಶ್ರೀ ಎಸ್. ವಿ. ಪರಮೇಶ್ವರ ಭಟ್ಟರ ಅನುವಾದ)

ಭಾರತೀಯರಲ್ಲಿ ಹೆಚ್ಚಿನವರಿಗೆ ಹಳೆಯದೆಲ್ಲ ಪರಮ ಪವಿತ್ರ, ಹೊಸತು ಎಂದ ಕೂಡಲೇ ಮೂಗುಮುರಿಯುವುದು ಸಹಜ ಸ್ವಭಾವ. ಈ ಬುದ್ಧಿ ಕಾಳಿದಾಸನ ಕಾಲಕ್ಕೇ ಸುವ್ಯಕ್ತವಾಗಿತ್ತು. ಆದ್ದರಿಂದ ಪಾಪ ಆತ “ಹೊಸದಾದರೂ ಪರವಾಗಿಲ್ಲ, ದಯವಿಟ್ಟು ನನ್ನ ಕೃತಿಯನ್ನು ಅವಲೋಕಿಸಿ” ಎಂದು ಬುಧಜನರನ್ನು ಪ್ರಾರ್ಥಿಸಿಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಆತ ತನ್ನ ನಾಟಕ “ಹೊಸದು” ಎಂದು ಸಂಕೋಚದಿಂದ ಹೇಳಿಕೊಂಡಿದ್ದಾನೆ. (ಮಾಳವಿಕಾಗ್ನಿ ಮಿತ್ರವನ್ನು ಕುರಿತು ಆತ ಸಂಕೋಚಪಟ್ಟುಕೊಳ್ಳುವುದಕ್ಕೆ ಬೇಕಾದಷ್ಟು ತರ್ಕಬದ್ಧವಾದ ಕಾರಣಗಳಿದ್ದುವು ಎಂಬುದು ಬೇರೆಯದೇ ಮಾತು).

ಆದಿ ಕವಿ ಪಂಪನೂ ತನ್ನ ಆದಿಪುರಾಣವನ್ನು ಕುರಿತು “ಇದು ನಿಚ್ಚಂ ವೊಸತು ಅರ್ಣವಂಬೊಲ್‌ಅತಿ ಗಂಭೀರಂ ಕವಿತ್ವಂ” ಎಂದಿದ್ದಾನೆ. ಇಲ್ಲಿ “ಅಯ್ಯಾ ಇದು ಹೊಸದು, ಹಳತರಿಂದ ಬೇಸರಗೊಂಡಿದ್ದೀಯೆ, ಇದನ್ನು ಸ್ವಲ್ಪ ನೋಡು” ಎಂಬ ಆತ್ಮ ವಿಸ್ವಾಸದ ಕೆಚ್ಚಿದೆ.

ಲಕ್ಷ್ಮೀಶನೂ ಜೈಮಿನೀ ಭಾರತದಲ್ಲಿ ಹಳತರ ವ್ಯಾಮೋಹಕವನ್ನು ಸ್ವಲ್ಪ ಅಳುಕಿನಿಂದಲೇ ಬಿಡಿಸಲು ಪ್ರಯತ್ನಿಸಿದ್ದಾನೆ. ವಿನಯದ ಭಾಷೆಯನ್ನು ಬಳಸಿ:

ಕೆನವಾಲಗಡೆದು ನವನೀತಮಂ ತೆಗೆದು ಬಾ
ಯ್ಗಿನಿದಾಗಿ ಸವಿಯದದ ಱೊಳಗೆ ಪುಳಿವಿಳಿದು ರಸ
ವನೆ ಕೆಡಿಸಿದೊಡೆ ಕಱೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ
ಜನಿಸಿದ ಪದಾರ್ಥಮಂ ತಿಳಿದು ನೋಡದೆ ವಿನೂ
ತನ ಕವಿತೆಯೆಂದು ಕುಂದಿಟ್ಟು ಜಱೆದೊಡೆ ಪೇಳ್ದ
ವನೊಳಾವದೊಣೆಯಂ ಜಾಣರಿದನಱಿದು ಮತ್ಸರದ ನುಳಿದಾಲಿಸುವುದು

ಇಲ್ಲೆಲ್ಲ ಇದು ಹೊಸತು ಎಂಬ ಅರ್ಥ ಇದೆಯೇ ಹೊರತು ಇದರಲ್ಲಿ ಆಧುನಿಕವಾದದ್ದು ಇದೆ ಎಂಬ ಅರ್ಥವಿಲ್ಲ. ಅದನ್ನು ನಾವು ನಿರೀಕ್ಷಿಸುವಂತೆಯೂ ಅಲ್ಲ. ಅಲ್ಲದೆ ಈ ಯಾವ ಕವಿಗಳೂ ಸಮಕಾಲೀನವಾದ ವಸ್ತುಗಳನ್ನು ಆಯ್ದುಕೊಂಡು ಕಾವ್ಯವನ್ನು ರಚಿಸುವ ಸಾಧ್ಯತೆಯನ್ನು ಕಂಡುಕೊಳ್ಳಲೂ ಇಲ್ಲ.

ಪಶ್ಚಿಮದಲ್ಲಿ ಮೂಡಿ ಬಂದ ಈ ಆಧುನಿಕತೆಯನ್ನೂ ಅದರ ಲಕ್ಷಣಗಳನ್ನೂ ಅವು ಕಲಾಕೃತಿಯಲ್ಲಿ ಮೈದಾಳಿದ ರೀತಿನೀತಿಗಳನ್ನೂ ನಿರೂಪಿಸುವುದಕ್ಕಿಂತ ಮುಂಚೆ ಭರತಖಂಡದಲ್ಲಿ ಅದೇ ಅವಧಿಯಲ್ಲಿ ಏನಾಗುತ್ತಿತ್ತು ಎಂಬುದನ್ನು ನೋಡೋಣ. ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ೧೮೭೦-೧೯೨೦ ಈ ಐವತ್ತು ವರ್ಷಗಳ ಅವಧಿಯ ಒಂದು ಗಟಕದಲ್ಲಿ ಪಶ್ಚಿಮ ದೇಶಗಳಿಗೂ ಭಾರತಕ್ಕೂ ಇದ್ದ ಅಂತರ ಎರಡು ಧ್ರುವಗಳಿದ್ದು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಜ್ಞೆಗಳ ವಿಷಯದಲ್ಲಿ ಪೂರ್ವ-ಪಶ್ಚಿಮ ದೇಶಗಳ ನಡುವೆ ಪೂರ್ವ ಮತ್ತು ಪಶ್ಚಿಮ ಕ್ಚಿತಿಜಗಳಿಗೆ ಇರುವಷ್ಟೇ ಅಂತರವಿತ್ತು. ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಸಾಮ್ರಾಜ್ಯಗಳನ್ನು ಕಟ್ಟಿ ವಸಾಹತುಗಳನ್ನು ಸ್ಥಾಪಿಸಿ ಭೋಗಜೀವನದ ರುಚಿಯನ್ನು ಸವಿದು, ಅದರ ಪರಾಕಾಷ್ಠೆಯನ್ನೂ ಮುಟ್ಟಿ ಸೊಕ್ಕಿ ಮೈಮರೆತು ಯುದ್ಧದ ಆಘಾತದಿಂದ ಮತ್ತೆ ವಾಸ್ತವತೆಗೆ ಕಣ್ತೆರೆಯುತ್ತಿದ್ದ ಅವಧಿ ಅದು. ಜರ್ಮನಿಯು ಯುರೋಪಿನಲ್ಲೇ ಅತ್ಯಂತ ಶಕ್ತಿಯುತವಾದ ಯಂತ್ರಶಕ್ತಿಯ ಕೇಂದ್ರ ಎನ್ನಿಸಿಕೊಂಡಿತ್ತು. ರಷ್ಯ ೧೯೧೭ರ ಮಹಾಕ್ರಾಂತಿಗೆ ಕಾರಣವಾದ ಮಾನವ ಕ್ರೌರ್ಯದ ವಿವಿಧ ಮುಖಗಳನ್ನು ಕಂಡು ಅನುಭವಿಸುತ್ತಿತ್ತು.

ಇತ್ತ ಭಾರತವಾದರೋ ಮೂವತ್ತು ಕೋಟಿ ಹಸಿದ ಹೊಟ್ಟೆಗಳನ್ನು ಹೊರಲಾರದೆ ಹೊತ್ತು ದಾಸ್ಯದಲ್ಲಿ ನರಳುತ್ತಿತ್ತು. ತನ್ನ ನಿಜವಾದ ಸ್ವರೂಪ ಯಾವುದು ಎಂದು ಅರಿಯಲು ಅದು ಪ್ರಯತ್ನಿಸುತ್ತಿತ್ತು. ಒಂದು ಕಡೆ ದಾರಿದ್ರ್ಯ, ಮತ್ತೊಂದು ಕಡೆ ದಾಸ್ಯ, ಇದೆಲ್ಲಕ್ಕೂ ಅವಮಾನದ ಕಿಟೀಟವನ್ನಿಡುವಂತೆ ಅದು ಆಧ್ಯಾತ್ಮಿಕ ದೇಶ ಎಂದು ಇದನ್ನು ಹಾಡಿ ಹೊಗಳುತ್ತಿದ್ದ ವಂದಿ ಮಾಗಧರ ಸ್ತುತಿ ಗೀತಗಳು, ಅದನ್ನು ಕೇಳಿ ಹಿಗ್ಗಿ ಉಬ್ಬಲು ಪ್ರಯತ್ನಿಸಿ, ಅದಕ್ಕೂ ಶಕ್ತಿ ಸಾಲದೆ ಸೋತು ಸೊರಗುತ್ತಿದ್ದ ಜನ ಕೋಟಿ-ಇದು ಭಾರತದ ಸ್ಥಿತಿ, ಸನಾತನವಾದ ಹಿಂದೂಧರ್ಮದಲ್ಲಿನ ಅನೇಕಾನೇಕ ಅಪಮಾನಕಾರಕ ನ್ಯೂನತೆಗಳನ್ನು ತೊಡೆದು ಹಾಕಿ ಜನರಲ್ಲಿ ಹೊಸ ಪ್ರಜ್ಞೆಯನ್ನು ಮೂಡಿಸಲು ಆರ್ಯಸಮಾಜ, ಬ್ರಹ್ಮ ಸಮಾಜ ಮುಂತಾದ ಅನೇಕ ಧಾರ್ಮಿಕ-ಸಾಮಾಜಿಕ ಪಂಥಗಳು ಪ್ರಯತ್ನಿಸುತ್ತಿದ್ದವು. ಶ್ರೀ ರಾಮಕೃಷ್ಣ ಪರಮಹಂಸರು ಸರ್ವ ಧರ್ಮಗಳು ಒಂದೇ ಗುರಿಗೆ ಒಯ್ಯುತ್ತವೆ ಎಂದು ಉದ್ಘೋಷಿಸಿದ್ದು ಅದು ಸ್ವಾಮಿ ವಿವೇಕಾನಂದರ ಮೂಲಕ ಚಿಕಾಗೋ ನಗರದ ಸರ್ವಧರ್ಮ ಸಮ್ಮೇಳನದ ವೇದಿಕೆಯ ಮೇಲೆ ಅನುರಣಿತವಾಗಿತ್ತು (೧೮೯೩). ಭರತ ಖಂಡದ ಮೇಲೆ ತಮ್ಮ ಆಳ್ವಿಕೆಯನ್ನು ಭದ್ರಪಡಿಸಿಕೊಂಡಿದ್ದ ಬ್ರಿಟಿಷ್‌ಸಾಮ್ರಾಜ್ಯದ ಮೇಲೆ ಭಾರತೀಯರು ಸಿಪಾಯಿ ದಂಗೆಯ ಮೂಲಕ ಪ್ರತಿಭಟನೆಯನ್ನು ಘೋಷಿಸಿ ಆಗಿತ್ತು. ಈ ದೇಶದ ಸ್ವಾತಂತ್ರ್ಯ ಸಾಧನೆಗೆ ಅಗತ್ಯವಾದ ಪೂರ್ವ ಸಿದ್ಧತೆಗಳನ್ನು ಮುಗಿಸಿಕೊಂಡು ಮೋಹನದಾಸ ಕರಮಚಂದ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ್ದರು (೧೯೧೪).

ಪಶ್ಚಿಮದಲ್ಲಿ ಕಾವ್ಯ-ಕಲೆಗಳು ನೂತನತೆ ಆಧುನಿಕತೆಗಳನ್ನು ಮೈಗೂಡಿಸಿ ಕೊಳ್ಳುತ್ತಿರುವಾಗ, ಅವುಗಳ ಅಭಿವ್ಯಕ್ತಿಗೆ ಹೊಸ ಹೊಸ ವಿಧಾನಗಳನ್ನು ಹುಡುಕುತ್ತಿರುವಾಗ ಭಾರತದ, ಅದರಲ್ಲೂ ಕರ್ಣಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಏನಾಗುತ್ತಿತ್ತು ಎಂಬುದನ್ನು ನೋಡೋಣ. ಅದಕ್ಕೆ ಮುಂಚೆ ಒಂದು ವಿಷಯವನ್ನು ಸ್ಪಷ್ಟಪಡಿಸುವುದು ಅಗತ್ಯ. ಯಾವುದಾದರೂ ಒಂದು ಅವಧಿಯಲ್ಲಿ, ಯಾವುದೇ ಒಂದು ದೇಶದಲ್ಲಿ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗಗಳು ಇತರ ಎಲ್ಲ ದೇಶಗಳಲ್ಲಿಯೂ, ಅದರಲ್ಲಿಯೂ ಹತ್ತಾರು ಸಾವಿರ ಮೈಲುಗಳಷ್ಟು ದೂರ ಇರುವ ದೇಶಗಳಲ್ಲಿಯೂ, ಅದೇ ಅವಧಿಯಲ್ಲಿ ನಡೆಯಬೇಕು ಎಂದು ನಿರೀಕ್ಷಿಸುವುದು ತರ್ಕಬದ್ಧವಾಗುವುದಿಲ್ಲ. ಈಗಾಗಲೇ ನಾವು ನೋಡಿರುವತೆಯೇ ಒಂದು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಪರಿಸರಗಳು ಆ ದೇಶದ ಸಾಹಿತ್ಯ-ಕಲೆಗಳ ಮೇಲೆ ಪರಿಣಾಮ ಬೀರಿಯೇ ತೀರುತ್ತವೆ. ಆದ್ದರಿಂದ ಬೇರೊಂದು ದೇಶ-ಸಂಪೂರ್ಣವಾಗಿ ಭಿನ್ನವಾದ ಪರಿಸರಗಳಲ್ಲಿರುವ ದೇಶ-ಈ ವಿಷಯದಲ್ಲಿ ಇನ್ನೊಂದು ದೇಶದಲ್ಲಾಗುವ ಬದಲಾವಣೆಗಳನ್ನು ಅನುಸರಿಸಲು ಹೊರಟರೆ ಅದು ಶುದ್ಧಾಂಗವಾಗಿ ಹಾಸ್ಯಾಸ್ಪದವಾಗುತ್ತದೆ.

೧೮೭೦ ರಿಂದ ೧೯೨೦ರ ವರೆಗೆ ಪಶ್ಚಿಮದಲ್ಲಿ ಆಧುನಿಕತೆಯ ಆರಂಭದ ಯುಗ ಎಂದು ಪರಿಗಣಿಸುವುದಾದರೆ ನಮ್ಮ ಕಾವ್ಯ, ನಾಟಕ, ಕಾದಂಬರೀ ಕ್ಷೇತ್ರಗಳಲ್ಲಿ ಏನಾಗುತ್ತಿತ್ತು ಎಂಬುದನ್ನು ನೋಡೋಣ.

ಕನ್ನಡದ ಮುಂದೆ ಇದ್ದ ಸಮಸ್ಯೆಗಳು ಮುಖ್ಯವಾಗಿ ಎರಡು. ಅವೆರಡೂ ತುಂಬ ಕಠಿಣವಾದ ಸಮಸ್ಯೆಗಳೇ. ಮೊದಲನೆಯದು ಹೊಸ ಆವರಣಕ್ಕೆ ತಕ್ಕಂತೆ ಒಂದು ಭಾಷೆಯನ್ನು ರೂಪಿಸುವುದು. ಎರಡನೆಯದು ಹೊಸ ವಿಷಯಗಳನ್ನು ನಿರೂಪಿಸುವುದು. ಈ ಎರಡೂ ಕೆಲಸಗಳು ಏಕಕಾಲದಲ್ಲಿ ನಡೆಯತೊಡಗಿದವು.

ಹೊಸ ಭಾಷೆಯೊಂದನ್ನು ಹದಗೊಳಿಸುವುದು ಎಂತಹ ಕಠಿಣವಾದ ಕಾರ್ಯ ಎಂಬುದಕ್ಕೆ ಉದಾಹರಣೆಯಾಗಿ ಬಸವಪ್ಪ ಶಾಸ್ತ್ರಿಗಳ ಶಾಕುಂತಲ ನಾಟಕದ ಅನುವಾದದ ಒಂದು ಪದ್ಯವನ್ನು ನೋಡಿ:

ಕೊರಲಂ ತಾಂ ಕೊಂಕುಗೆಯ್ಯತ್ತಡಿಗಡಿಗೊಡನೈತರ್ಪ ತೇರಲ್ಲಣ್ಣಂನ
ಟ್ಟಿರೆನೋಟಂ ಬಾಣಪಾತಕ್ಕಗಿದಿರುಕಿಸುತಂ ಪೃಷ್ಠಮಂ ಮಾರ್ಗದೊಳ್ತೀ
ವಿರೆ ನೀಡುಂ ಬಿಟ್ಟ ಬಾಯಿಂ ಶ್ರಮದುದಿರ್ವರೆಮೆಲ್ದಿರ್ದ ದರ್ಭಾಂಕುರಂಗಳ್
ಧರೆಯಲ್ಲೋರೊರ್ಮೆ ಕಾಲಿಟ್ಟಹಹ ನಿರುಕಿಸೈ ಬಾನೊಳೇ ಪಾರಿಪೋಕುಂ.

ಸುಲಭವಾದ ಕನ್ನಡದ ಮಾತುಗಳಲ್ಲೇ ಪದ್ಯವನ್ನು ನಿರ್ವಹಿಸುವ ಶಕ್ತಿ ಶಾಸ್ತ್ರಿಗಳಿಗೆ ಉಂಟು. ಆದರೆ “ಪೃಷ್ಠಮಂ” ಎನ್ನುವುದನ್ನು “ಅಂಡು” ಎಂದು ಹೇಳುವುದು ಹೇಗೆ? “ಭಾಣಪಾತ” ಎನ್ನುವುದನ್ನು ಕನ್ನಡೀಕರಿಸಿಯೂ ಮೂಲದ ಬಿಗಿಯನ್ನು ಉಳಿಸಿಕೊಳ್ಳುವುದು ಹೇಗೆ? ಇಂತಹ ಅನೇಕ ಸಮಸ್ಯೆಗಳು ಶಾಸ್ತ್ರಿಗಳನ್ನು ಕಾಡಿರಬಹುದಲ್ಲವೆ?

ಸಂಸ್ಕೃತದಿಂದ ಅನೇಕ ಕೃತಿಗಳು ಈ ಅವಧಿಯಲ್ಲಿ ಕನ್ನಡಕ್ಕೆ ಅನುವಾದವಾದುವು. ಇವುಗಳಲ್ಲಿ ಸಾಹಿತ್ಯ ಕೃತಿಗಳೆಂದು ಹೇಳಬಹುದಾದ ಕೆಲವನ್ನು ಹೆಸರಿಸಬಹುದು: ಚುರುಮುರಿ ಶೇಷಗಿರಿರಾಯರ ಶಾಕುಂತಲ ಅನುವಾದ (೧೮೭೦), ತೂರಮುರಿಯವರ ಕಾದಂಬರಿ (೧೮೭೬-೭೭), ರಾಮಚಂದ್ರ ಶ್ರೀನಿವಾಸ ನರೇಗಲ್ ಅವರ ರಘುವಂಶ ಎರಡನೇ ಸರ್ಗದ ಅನುವಾದ (೧೮೭೫), ಜಿ.ವಿ. ಕೃಷ್ಣಾಚಾರ್ಯರ ನಾಗಾನಂದ ನಾಟಕ (೧೮೮೮), ಧೊಂಡೋ ನರಸಿಂಹ ಮುಳಬಾಗಲ ಅವರ ಮೃಚ್ಛಕಟಿಕ (೧೮೮೯), ಉತ್ತರ ರಾಮ ಚರಿತೆ (೧೮೯೨), ಮಾಲವಿಕಾಗ್ನಿ ಮಿತ್ರ (೧೮೯೭), ವೇಣೀ ಸಂಹಾರ (೧೮೯೭)

ಮರಾಠೀ, ಬಂಗಾಲೀ, ತೆಲುಗು ಮತ್ತು ತಮಿಳಿಗಳಿಂದಲೂ ಭಾಷಾಂತರ ನಡೆಯಿತು. ಗಳಗನಾಥರು ಮರಾಠಿಯ ಹದಿನಾರಾಯಣ ಅಪ್ಪೆಯವರ ಕೃತಿಗಳನ್ನು ಭಾಷಾಂತರಿಸಿದರು. ಬಿ. ವೆಂಕಟಾಚಾರ್ಯರು ಬಂಕಿಮ ಚಂದ್ರದ ಸೀತಾವನವಾಸ (೧೮೮೪), ದುರ್ಗೇಶ ನಂದಿನಿ (೧೮೮೮) ಇಂದಿರಾ (೧೮೯೭), ಆನಂದಮಠ (೧೮೯೯) ದೇವೀ ಚೌಧುರಾಣಿ (೧೮೯೯), ವಿಷವೃಕ್ಷ (೧೯೦೦)ಗಳನ್ನು ಕನ್ನಡಕ್ಕೆ ದೊರಕಿಸಿ ಕೊಟ್ಟರು.

ಇಂಗ್ಲಿಷಿನಿಂದಲೂ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದವಾಗ ತೊಡಗಿದವು. ಕೇವಲ ಆಧ್ಯಾತ್ಮಿಕವಾದ ಗ್ರಂಥಗಳನ್ನೇ ಆ ಕಾಲದ ಜನ ಬಯಸುತ್ತಿದ್ದರು ಎಂದು ಹೇಳುವಂತಿಲ್ಲ. ಹೊಸದಕ್ಕೆ, ಆಧುನಿಕವಾದುದಕ್ಕೆ ಕನ್ನಡ ಜನ ತವಕ ಪಡುತ್ತಿದ್ದರು ಎಂಬುದಕ್ಕೆ ಈ ಅವಧಿಯಲ್ಲಿ ಅನುವಾದವಾದ ಕೆಲವು ಕೃತಿಗಳು ಉಲ್ಲೇಖಿಸಬಹುದು. ಮೇರಿ ಷೆರ್‌ವುಡ್‌ರ ‘ದಿ ಆಯಾ ಅಂಡ್ ಲೇಡಿ’ ಎಂಬುದು ‘ದೊರೆಸಾನಿಯನ್ನೂ ದಾದಿಯನ್ನೂ ಕುರಿತಂಥ ಕಥೆ’ ಎಂಬ ಹೆಸರಿನಿಂದ ೧೪೮೮ರಲ್ಲಿ ಅನುವಾದವಾಯಿತು. ಅನುವಾದಕರು ಸಿ. ಕ್ಯಾಂಪ್‌ಬೆಲ್. ಇದರ ಮೂರನೆಯ ಆವೃತ್ತಿಯು ‘ಕಥಾಮಾಲೆ’ ಎಂಬ ಹೆಸರಿನಿಂದ ೧೮೬೩ ರಲ್ಲಿ ಪ್ರಕಟವಾಯಿತು. ‘ರಾಬಿನ್‌ಸನ್ ಕ್ರೂಸೋ ವೃತ್ತಾಂತ’ವು ೧೮೫೮ ರಲ್ಲಿ ಕೃಷ್ಣಸ್ವಾಮಿ ಅಯ್ಯಂಗಾರ್ ರಿಂದ ಕನ್ನಡಕ್ಕೆ ಬಂತು. ಫೀಲ್ಡಿಂಗನ ಟಾಮ್ ಜೋನ್ಸ್ ೧೯೦೫ ರಲ್ಲಿ ಎಂ.ಆರ್. ಅಣ್ಣಾಜಿರಾವ್ ಅವರಿಂದ, ‘ದಿ ಸ್ಕೂಲ್ ಫರ್ ಸ್ಕ್ಯಾಂಡಲ್’ ೧೯೧೧ರಲ್ಲಿ ಗ.ಹು. ಹೊನ್ನಾಪುರ ಮಠ ಅವರಿಂದ ‘ನಿಂದಾ ಪ್ರಭಾವ ನಾಟಕ’ ಎಂಬ ಹೆಸರಿನಲ್ಲಿ ಗೋಲ್ಡ್ ಸ್ಮಿತ್‌ನ ‘ದಿ ವಿಕಾರ್ ಆಫ್ ವೇಕ್ ಫೀಲ್ಡ್’ ೧೯೧೫ ರಲ್ಲಿ ಪ್ರಿಮ್ ರೋಜ್ ವಿಜಯಂ ಎಂದು ಗೋವಿಂದ ರಾಜ ಅಯ್ಯಂಗಾರ್ ಅವರಿಂದ, ಗೋಲ್ಡ್‌ಸ್ಮಿತ್‌ನ ‘ಷಿ ಸ್ಟೂಪ್ಸ್‌ಟು ಕಾನ್ಕ್ವೆರ್’ ೧೯೨೧ರಲ್ಲಿ ಕೆರೂರು ವಾಸುದೇವಾಚಾರ್ಯರಿಂದ ‘ಪತಿ ವಶೀಕರಣ’ ಎಂಬ ಹೆಸರಿನಿಂದ ಅನುವಾದಗೊಂಡವು.

ಷೇಕ್ಷ್‌ಪಿಯರನ ಅನೇಕ ನಾಟಕಗಳೂ ಅನುವಾದವಾದು, ಇಲ್ಲವೇ ರೂಪಾಂತರಗೊಂಡುವು. ಒಥೆಲೋ ನಾಟಕವನ್ನು ಗುಂಡೋ ಚುರುಮುರಿಯವರು ‘ರಾಘವೇಂದ್ರ ರಾವ್ ನಾಟಕ’ ಎಂಬ ಹೆಸರಿನಿಂದ ೧೮೮೫ ರಲ್ಲಿ ಕನ್ನಡಕ್ಕೆ ತಂದರು.

೧೯೨೧ರಲ್ಲಿ ಈ.ಪಿ. ರೈಸ್ ಅವರು ಹೀಗೆ ಬರೆದರು: ಆಧುನಿಕ ಯುಗವೊಂದು ತನ್ನ ಪ್ರಾರಂಭದ ಅವಸ್ಥೆಯಲ್ಲಿದೆ. ಪಶ್ಚಿಮದ ಚಿಂತನೆಯೂ ಇಂಗ್ಲಿಷ್‌ಸಾಹಿತ್ಯದ ಪ್ರಭಾವವೂ ಅದರ ಉದಯಕ್ಕೆ ಕಾರಣವಾಯಿತು.

ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಇಂಗ್ಲೆಂಡಿನಲ್ಲಿನಿಯೋ ಕ್ಲಾಸಿಸಂನಿಂದ ಹಿಡಿದು ರೋಮಾಂಟಿಸಿಸಂ ಸೇರಿದಂತೆ ಎಲ್ಲ ಅವಧಿಗಳ ಪ್ರಾತಿನಿಧಿಕ ಕೃತಿಗಳೂ ಕನ್ನಡಕ್ಕೆ ಬಂದುವು. ಎಂದರೆ ಕನ್ನಡಕ್ಕೆ ಹೊದು ಬೇಕಾಗಿತ್ತು. ಆದರೆ ಆಧುನಿಕತೆ, ಪಶ್ಚಿಮದ ಅರ್ಥದಲ್ಲಿ ಬೇಕಾಗಿರಲಿಲ್ಲ ಅಥವಾ ದೊರಕಲಿಲ್ಲ. ಏಕೆ?

ಕನ್ನಡದಲ್ಲಿ ನವೋದಯ ಸಾಹಿತ್ಯದ ಪ್ರವರ್ತಕರು ಪ್ರೊ. ಬಿ. ಎಂ. ಶ್ರೀಕಂಠಯ್ಯನವರು ತಾನೆ. ಇಂಗ್ಲಿಷ್ ಸಾಹಿತ್ಯದಲ್ಲಿ ಅಪಾರವಾದ ಪಾಂಡಿತ್ಯವನ್ನು ಗಳಿಸಿದ್ದ ಶ್ರೀಯವರಿಗೆ ಇಂಗ್ಲೆಂಡಿನಲ್ಲಿ ಅಂದಿಗೆ ಏನಾಗುತ್ತಿದೆ ಎಂಬುದು ತಿಳಿದೇ ಇರಲಿಲ್ಲವೆ? ಅಥವಾ ರೋಮಾಂಟಿಕ್ ರೀತಿ ಈ ನೆಲದ ಜನರಿಗೆ ಸಾಕು ಎಂದು ಅವರು ಭಾವಿಸಿದ್ದರೆ.

ಆಧುನಿಕ ಯಂತ್ರೋಪಕರಣಗಳಾಗಲೀ, ವಾಹನ ವಿಧಾನಗಳಾಗಲೀ, ಇಲ್ಲಿನ ಜನರಿಗೆ ತಿಳಿದಿರಲಿಲ್ಲ ಎಂದಾಗಲಿ, ಅದನ್ನು ಕುರಿತು ಸಾಹಿತ್ಯ ರಚಿಸುವ ಅಪೇಕ್ಷೆ ಅವರಿಗೆ ಇರಲಿಲ್ಲ ಎಂದಾಗಲೀ ಹೇಳುವಂತೆ ಇಲ್ಲ. ಸೈಕಲ್ಲನ್ನು ಕುರಿತು ರಚಿತವಾಗಿರುವ ಪದ್ಯವೊಂದುಂಟು. “ಸಿದ್ಧೇಶ್ವರ ಮಳೀಮಠ ಎಂಬುವರು ಅತ್ಯಧಿಕ ಸಂತಸದಿಂದ ಇಪ್ಪತ್ತು ರೂಪ್ಯವ ಕೊಟ್ಟುಕೊಂಡ ‘ಕಾಲುಗಾಡಿ’ಯ ಸವಾರಿಯ ಬಗೆಗೆ ತಮ್ಮ ಅನುಭವವನ್ನು” ಹೀಗೆ ಹೇಳುತ್ತಾರೆ:

ಬಲು ಭಯದಿ ಸತ್ತಿರುವ ನರಗಳ
ಸೆಳೆದು ಬಿಗಿದನು ಕಚ್ಚಿ ದವಡೆಯ
ಊತದುಸುರನು ಬಿಡದಲೆದೆಯನು ಗಟ್ಟಿ ವಿಡಿದಿಹನು
ನಿಲದೆ ಗಣಗಣ ಗಂಟೆ ಹೊಡೆಯುತ
ಹಲವು ಕುತ್ತನು ದಾಂಟಿ ಗುಡ್ಡದ
ಪೊಳಗ ಹೊರಗಿರ್ಪಿಳುಕಲಿನ ಮಾರ್ಗದಲಿ ನಡೆತಂದ
(ಪ್ರಭಾತ-ಸೆಪ್ಟೆಂಬರ್ ೧೯೧೦., ಪಿ. ೧೧-೧೨)

ಇದು ಉತ್ತಮ ಕವಿತೆ ಎಂದು ನಾನು ಹೇಳುತ್ತಿಲ್ಲ, ಛಂದಸ್ಸು ಹಳೆಯದೇ-ಷಟ್ಪದಿ, ಆದರೆ ಈ ಶತಮಾನದ ಅವಧಿಯಲ್ಲಿ ಆಧುನಿಕತೆ ಎಂಬುದು ಒಂದು ಅರ್ಥದಲ್ಲಿ ನಮ್ಮ ಸಾಹಿತ್ಯ ರಂಗವನ್ನು ಪ್ರವೇಶಿಸುತ್ತಿದೆ ಎಂಬ ಅಮಾಧಾನದ ಸಂಗತಿಯನ್ನು ಗಮನಕ್ಕೆ ತೆಗೆದುಕೊಳ್ಳುತ್ತಿದ್ದೇನೆ ಅಷ್ಟೆ.

ಬರಿಯ ಒಂದು ಹೊಸ ವಸ್ತುವನ್ನು ಕಾವ್ಯದ ವಿಷಯವನ್ನಾಗಿ ಮಾಡಿಕೊಂಡರೆ ಸಾಹಿತ್ಯದಲ್ಲಿ ಆಧುನಿಕತೆ ಬಂದಂತೆ ಆಗಲಿಲ್ಲ. ಆಲೋಚನೆಯೂ ಹೊಸದಾಗಬೇಕಷ್ಟೆ. ಆಧುನಿಕತೆಯ ಲಕ್ಷಣಗಳಾದ ವಿಚಾರವಾದ. ಆ-ಮತಾಂಧತೆಗಳೂ ಅಂದಿನ ಬರವಣಿಗೆಯಲ್ಲಿ ಅಲ್ಲಲ್ಲಿ ಸುಳಿದಿವೆ.

ಸಾಹಿತಿಗಳಾದ ಶ್ರೀ ವೆಂಕಟರಂಗೋಕಟ್ಟಿ ಅವರು ೧೮೯೯ರಲ್ಲಿ “ವಿಧವೆಗಳ ಮುಂಡನ ಅನಾಚಾರವು” ಎಂಬ ಪುಸ್ತಕವನ್ನು ಬರೆದರು. ಪುಸ್ತಕದ ಮುಖಪುಟದಲ್ಲಿ ‘ಧಾರವಾಡ ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರಾದ ವೆಂಕಟರಂಗೋಕಟ್ಟಿ ಇವರು ವಿಧವಾ ದುಃಖ ಪರಿಮಾರ್ಜನಾರ್ಥವಾಗಿ ಬರೆದದ್ದು” ಎಂದಿದೆ. ಕಟ್ಟು ನಿಟ್ಟಾಗಿ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ವ್ಯಕ್ತಿಯೊಬ್ಬರು ಶತಮಾನಗಳಿಂದ ರೂಢಿಯಲ್ಲಿದ್ದ ಪದ್ಧತಿಯೊಂದಕ್ಕೆ ಇಷ್ಟು ತೀವ್ರವಾದ ರೀತಿಯಲ್ಲಿ ಪ್ರತಿಭಟನೆ ತೋರಿಸಿದ್ದಕ್ಕೆ ಕಾರಣವು ನಮ್ಮ ಮನಸ್ಸನ್ನು ಈಗಲೂ ಕಲಕುವಂಥದು. ಪರಿಣಾಮದಲ್ಲಿ ಅದು ಕಾವ್ಯವಲ್ಲದಿದ್ದರೂ ಕಾವ್ಯ ಸೃಷ್ಟಿಗೆ ಪ್ರೇರಕವಾಗುವಂತಹ ಪ್ರಸಂಗ ಅದು. ಕಟ್ಟಿಯವರು ಹೇಳುತ್ತಾರೆ:

“ಈ ವಿಷ್ಯವು ನನ್ನ ಮನಸ್ಸಿನಲ್ಲಿ ಸೇರಲಿಕ್ಕೆ ಒಂದು ಅತ್ಯಂತ ಖೇದಕರವಾದ ಸಂಗತಿಯು ಕಾರಣವಾಯಿತು. ಅದು ಹ್ಯಾಗೆಂದರೆ-

ಸುಮಾರು ಏಳೆಂಟು ವರ್ಷಗಳ ಹಿಂದೆ ಒಬ್ಬ ಸ್ನೇಹಿತನ ಮನೆಯಲ್ಲಿ ಬ್ರಾಹ್ಮಣರ ಭೋಜನವಾಗುತ್ತಿತ್ತು. ಅಲ್ಲಿ ನಾನು ಹೋಗಿದ್ದೆನು. ಯಾವತ್ತು ಜನರು ಕೂಡಿದ ಮೇಲೆ ಎಲೆಗಳನ್ನು ಹಾಕುವ ಕಾಲಕ್ಕೆ ನಾನು ಸಹಜವಾಗಿ ನೆರೆದ ಜನರನ್ನು ನೋಡಬೇಕೆಂದು ಪಂಕ್ತಿಯಲ್ಲಿ ಅಡ್ಡಾಡುತ್ತಾ ಹೋಗುತ್ತಿರುವಾಗ ಒಂದು ಸ್ಥಳದಲ್ಲಿ ಹತ್ತು ವರ್ಷದೊಳಗಿನ ವಯಸ್ಸುಳ್ಳಂಥ ಹುಡುಗಿಯರು ಐದಾರು ಜನರು ಎಲೆಗಳನ್ನು ಹಾಕಿಕೊಂಡು ಹರಟೆ ಕೊಚ್ಚುತ್ತಕೂತಿರುವುದನ್ನು ಕಂಡೆನು. ಅವರಲ್ಲಿ ಏಳೆಂಟು ವರ್ಷದ ವಿಧವೆಯಾದ ಹುಡುಗಿಯೊಬ್ಬಳಿದ್ದರು. ಆ ಬಡ ಹುಡುಗಿಯ ಕೂದಲನ್ನು ತೆಗೆದಿದ್ದರು; ಕೈಯಲ್ಲಿ ಬಳೆಗಳಿದ್ದಿಲ್ಲ. ಮೈಯಲ್ಲಿ ಕುಬ್ಬಸವಿದ್ದಿಲ್ಲ; ಕೊರಳಲ್ಲಿ ಏನೂ ಇದ್ದಿಲ್ಲ… ನಾನು ಬಹು ಕೌತುಕದಿಂದ ಆಕೆಯನ್ನು ನೋಡುತ್ತ ನಿಂತಿರುವಷ್ಟರಲ್ಲಿ ಅತ್ತ ಕಡೆಯಿಂದ ದೊಡ್ಡ ದೊಡ್ಡ ನಾಮಗಳನ್ನೂ ಮುದ್ರೆಗಳನ್ನೂ ಬ್ರಾಹ್ಮಣನು ಅಲ್ಲಿಗೆ ಬಂದು ಆ ಅನಾಥ ವಿಧವೆಯನ್ನು ನೋಡಿ ಕೆಕ್ಕರಿಸಿ ಅಂದಿದ್ದು-

ಬ್ರಾ:- ಏನೇ, ನೀನು ಯಾಕೆ ಕೂತಿ. ಏಳು ಇಲ್ಲಿಂದ.

ಹುಡುಗಿಯು:- ಯಾಕೋ, ನಿನ್ನದೇನು ಉಪದ್ರ ಹೋಗು. ನಾನು ಇಲ್ಲಿಂದ ಏಳುವುದಿಲ್ಲ.

ಬ್ರಾ:- ನೀನು ಮಡಿಯಾದವಳು. ಅವರ ಸಂಗಡ ಕೂಡ್ರಬಾರದು: ಏಳು ಬೇಗ ಇಲ್ಲದಿದ್ದರೆ ತಳಿಸುತ್ತೇನೆ.

…… ನಾನು ತಿರುಗಿ ಹೋಗಿ ಅಲ್ಲಿ ನೋಡಿದಾಗ ಅವಳು ಅಲ್ಲಿ ಇದ್ದಿಲ್ಲ: ಬೇರೊಂದು ಮನೆಯಲ್ಲಿ ಆಗಂತುಕರಾದ ಮುದಿ ಹೆಂಗಸರಲ್ಲಿ ಒಂದು ಮೂಲೆಯೊಳಗೆ ಕತ್ತಲಲ್ಲಿ ಆಕೆ ಆಳುತ್ತ ಊಟಕ್ಕೆ ಕೂತದ್ದನ್ನು ನೋಡಿ ಬಹಳ ಮರುಗಿದೆನು.

ಈ ಒಂದು ಸತ್ಯ ಸಂಗತಿಯ ನಿರೂಪಣೆ ಕಲ್ಪನಾವಿಲಾಸದ ಕಾರ್ಯವಾದ ಸಾಹಿತ್ಯ ಸೃಷ್ಟಿಯ ಪರಿಣಾಮವನ್ನೂ ಕರುಣರಸ ವ್ಯಂಜನವನ್ನೂ ಉಂಟುಂಮಾಡುತ್ತದೆ.

ಇನ್ನು ನಾಟಕೀಯದ ಒಂದು ಭಾಗದಲ್ಲಿ ವಿಚಾರ ಹರಿದಿರುವುದಕ್ಕೆ ಒಂದು ಸುಂದರವಾದ ನಿದರ್ಶನ ಇದೇ ಅವಧಿಯ ರಚನೆಯೊಂದರಲ್ಲಿ ನಮಗೆ ದೊರಕುತ್ತದೆ. ೧೮೭೫ರ ಸುಮಾರಿನಲ್ಲಿ ಸರಗೊರ ವೆಂಕಟರಮಣಾಚಾರ್ಯನು ರಚಿಸಿದ ‘ತಪಸೀ ಪರಿಣಯ’ ನಾಟಕ. ಡಾ|| ಶ್ರೀನಿವಾಸ ಹಾವನೂರರು ಇದನ್ನು ಕುರಿತು ಪ್ರಸ್ತಾಪಿಸುತ್ತಾ ಹೀಗೆಂದಿದ್ದಾರೆ: ‘ಈ ಪೌರಾಣಿಕ ಕೃತಿಯಲ್ಲಿ ಆಧುನಿಕ ಪಾತ್ರಗಳೂ ಸಾಮಾಜಿಕ ಸನ್ನಿವೇಶಗಳೂ ತೋರಿ ಬರುತ್ತವೆ. ಬೇಟೆಯಲ್ಲಿ ಭಾಗ ವಹಿಸುವವರು ದಫೇದಾರ ಶಿದ್ದ, ಕಮಾನಾಫೀಸರ್ ಮೊದಲಾದವರು. ಅದಕ್ಕಿಂತ. ರಾಜನ ದಬಾರದಲ್ಲಿ ಸುರುವಿಗೆ ನಡೆಯುವ ಒಂದು ‘ಮೊಕದ್ದಮೆ’ಯ ವಿಚಾರಣೆಯ ಸಂದರ್ಭ ಅತ್ಯಾಧುನಿಕವೆನ್ನಬಹುದು/ ಸದಾಚಾರ ದೀಕ್ಷಿತನೆಂಬ ಬ್ರಾಹ್ಮಣ ಹೆಂಡತಿಯಾದ ರಮಣೀಮಣಿಯು ರತಿಪ್ರದರಾಯ ಎಂಬ ವಿಟನೊಡನೆ ಕೂಡಿದ್ದಳು. ಅವಳ ಮೇಲೆ ಕೇಸು ಹಾಕಿದ್ದಾಗ ನಡೆದ ಈ ಸಂಭಾಷಣೆಯು ನಾಟಕಕಾರನ ಜಾಣ್ಮೆಯನ್ನು ತೋರ್ಪಡಿಸುತ್ತದೆ.

“ಸವಾಲು- ನೀನು ರತಿಪ್ರದರಾಯನ ಸಂಗದಿಂದ ದೂಷಿತಳಾಗಿರುವುದುಂಟೋ’.

ಜವಾಬು- ಆತನ ಸಂಗದಿಂದ ನಾನು ತೋಷಿತಳಾದೆನಲ್ಲದೆ ದೂಷಿತಳಾಗಲಿಲ್ಲಾ.

ಸವಾಲು-ಪರಪುರುಷನ ಸಂಗದಿಂ ತೋಷಿತಳಾದ ಮೇಲೆ ದೂಷಿತಳಾಗಲಿಲ್ಲವೆ?

ಜವಾಬು- ಸಂಗವು ಅಂತರಂಗಂ, ಬಹಿರಂಗವೆಂಬುದು ಎರಡು ವಿಧ. ಅಂತರಂಗವೆಂದರೆ ಮನಸ್ಸು . ಅದು ಪತಿಯಲ್ಲೇ ಇರುವದ್ದರಿಂದಲೂ ಬಹಿರಂಗ ಸಂಗವನ್ನು ಸರ್ವ ಸಮ್ಮತಿಯಂತೆ ನಾನು ಪರಿಗ್ರಹಿಸಿದ್ದರಿಂದಲೂ ದೂಷಿತಳಲ್ಲಾ.

ಸವಾಲು-“ಸರ್ವ ಸಮ್ಮತಿ” ಯೆಂದರೆ ಏನು.

ಜವಾಬು-ಬಳೆಗಾರರ ಕೈಪಿಡಿಯುವುದನ್ನೂ ವೈದ್ಯರು ಸರ್ವಾಂಗಗಳು ಪರಿಶೋಧಿಸುವುದನ್ನೂ ಸರ್ವರು ಸಮ್ಮತಿಸಿರುವುದಿಲ್ಲವೆ?

ಸವಾಲು-ಮನಸ್ಸು ಪತಿಯಲ್ಲೇ ಇದ್ದ ಮೇಳೆ ಪರಪುರುಷನ ಸಂಗವಾಗಲು ಕಾರಣವೇನು?

ಜವಾಬು- ನನ್ನ ಪತಿಯು ಸಾಮಾನ್ಯನಲ್ಲ. ಸಕಲಶಾಸ್ತ್ರಪಾರಂಗತನು.