ಮಹಾದೇವಿಯಕ್ಕ ಉಜ್ವಲವಾದ ವೈರಾಗ್ಯದ ಅತ್ಯುತ್ತಮ ನಿದರ್ಶನ ಎಂದು ಸಾಮಾನ್ಯವಾಗಿ ವರ್ಣಿಸಲಾಗಿದೆ. ಆಕೆಯ ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಕೆಯ ವೈರಾಗ್ಯವನ್ನು ಆಕೆಯ ಪ್ರಖರವಾದ ಧೀಶಕ್ತಿಯು ಬೆಳಗಿ ಎತ್ತಿ ತೋರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗೂಳೂರು ಸಿದ್ಧವೀರಣ್ಣಾರ್ಯರು ತಾವು ಸಂಕಲಿಸಿದ “ಶೂನ್ಯ ಸಂಪಾದನೆ”ಯಲ್ಲಿ ಮಹಾದೇವಿಯಕ್ಕನನ್ನು ಪರಿಚಯಿಸುತ್ತಾ ಆಕೆ “ತನ್ನ ಸಕಲ ಇಂದ್ರಿಯಗಳನ್ನೂ ಜ್ಞಾನಕ್ಕೆ ಆಹುತಿಯನ್ನಾಗಿ ಮಾಡಿದ್ದಳು (ಸರ್ವ ಕರಣಂಗಳಅಱುಹಿಂಗಾಹುತಿಯನಿಕ್ಕಿ) ಎನ್ನುತ್ತಾರೆ. ಅಲ್ಲಮಪ್ರಭು ಮುಂತಾದವರೊಡನೆ ಆಕೆ ಮಾತನಾಡುವಾಗ ಆಕೆಯ ಜ್ಞಾನದ ವಿಸ್ಫುಲಿಂಗಗಳು (ಕಿಡಿಗಳು)ದಿಢೀರನೇ ಹಾರಿ ಇಡೀ ವಾತಾವರಣವನ್ನು ಬೆಳಗುವುದನ್ನು ಕಾಣುತ್ತೇವೆ.

ಕಲ್ಯಾಣಕ್ಕೆ ಬಂದ ಮಹಾದೇವಿಯನ್ನು ಅಲ್ಲಮ ಕೇಳುತ್ತಾನೆ, ಉಕ್ಕುತ್ತಿರುವ ಮದದಿಂದ ಕೂಡಿದ ಯೌವನವತಿಯಾದ ನೀನು ಇತ್ತಲೇಕೆ ಬಂದೆಯವ್ವಾ? ಹೆಂಗಸು ಎಂದರೆ ನಮ್ಮ ಶರಣರು ಮುನಿಸುತ್ತಾರೆ! (ವಾಸ್ತವವಾಗಿ ಶರಣರು ಸೃಷ್ಟಿಸಿದ ಸ್ತ್ರೀ-ಪುರುಷ ಸಮಾನತೆಯ ಹೊಸ ವಾತಾವರಣವನ್ನು ನೆನಪುಮಾಡಿಡೊಂಡರೆ ಅಲ್ಲಮ ಪ್ರಭು ಅಕ್ಕನನ್ನು ಕೆರಳಿದರು. ಇಲ್ಲವೆ ಹಾಸ್ಯಕ್ಕಾಗಿ ಹೀಗೆ ಹೇಳಿದ್ದಾನೆ. ಹೆಂಗಸು ಎಂದ ಮಾತ್ರಕ್ಕೆ ಶರಣರು ಮುನಿಯುತ್ತಾರೆ ಎಂಬುದಂತೂ ನಿಜವಲ್ಲ.)”

ಮುಂದುವರಿದು ಅಲ್ಲಮ ಹೇಳುತ್ತಾನೆ : ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು. ಅಲ್ಲದಿರು ತೊಲಗು ತಾಯೆ!” ತಾಯಿ ಎಂದು ಸಂಬೋಧಿಸಿದರೂ ‘ತೊಲಗು’ ಎನ್ನುವ ಮಾತೇಕೆ? ಅದೂ ದೂರದಿಂದ, ಒಂಟಿಯಾಗಿ, ಅಸಹಾಯಕಳಾಗಿ, ಇಲ್ಲಿ ಜ್ಞಾನಿಗಳಿದ್ದಾರೆ, ಶರಣರು ಇದ್ದಪುರವ ಕೈಲಾಸ, ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ಷಕ್ತಕ್ಷೇತ್ರ ಎಂದು ಹೇಳುತ್ತಾ ಬಂದವಳಿಗೆ ಹೀಗೇಕೆ ಹೇಳಿದರು ?

ಆದರೂ ಆಕೆ ತುಂಬ ವಿನಯದಿಂದ ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. “ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಸ್ಸು ಮಾಡಿದ ನನಗೆ ನಮ್ಮ ತಂದೆ ತಾಯಿಗಳು ಚನ್ನಮಲ್ಲಿಕಾರ್ಜುನ ಎಂಬ ವರನಿಗೆ ಮದುವೆ ಮಾಡಿದರು.”

ಆದರೂ ಪ್ರಭು ಆಕೆಯ ಮಾತನ್ನು ಒಪ್ಪುತ್ತಿಲ್ಲ, ಪಾಟೀಸವಾಲಿಗೆ ಒಳಗು ಮಾಡುತ್ತಾನೆ: “ನೀನು ನಿನ್ನ (ಲೌಕಿಕ ಗಂಡನ ಮೇಲೆ) ತಪ್ಪು ಹೊರಿಸಿ ಹೊರಟಿದ್ದೀಯಂತೆ, ಹೌದೆ ? ನಿನ್ನ ದೇಹವು ಬಟ್ಟೆಯನ್ನು ಬಿಚ್ಚಿ ಎಸೆದು ಬತ್ತಲಾಗಿದೆ. ಹಾಗಾದ ಮಾತ್ರಕ್ಕೆ ಮನಸ್ಸಿನ ಭ್ರಾಂತಿ ಅಳಿಯುವುದಿಲ್ಲ. (ನೀನು ಪೂರ ನಿರ್ವಾಣಳಾದವಳೂ ಅಲ್ಲ ಏಕೆಂದರೆ) ನಿನ್ನ ಕೂದಲೆಂಬ ಸೀರೆಯಿಂದ ನಿನ್ನ ದೇಹವನ್ನು ಮುಚ್ಚಿಕೊಂಡಿದ್ದೀಯೆ. (ಆದ್ದರಿಂದ) ನಾಚಿಕೆಯೆಂಬುದನ್ನು ಬಿಟ್ಟಿದ್ದ ಹೇಗೆ ? ಈ ನಿನ್ನ ವೇಷ ಗುಹೇಶ್ವರ ಲಿಂಗಕ್ಕೆ ಒಪ್ಪಿಗೆಯಾಗದು!” ಈ ಮಾತುಗಳನ್ನು ಇಂಥವೇ ಒಗಳನ್ನು ಕೊರೆಯುವ ಮಾತುಗಳನ್ನು ಕೇಳಿ ಕಷ್ಟಪಟ್ಟ ಆ ತರುಣಿ, ಹೆಣ್ಣು ಹೇಳಿಕೊಳ್ಳಲಾರದ ತನ್ನ ಅವಸ್ಥೆಯನ್ನು ಆದಷ್ಟು ಗಂಭೀರವಾದ ರೀತಿಯಲ್ಲಿ ಹೇಳುತ್ತಾಳೆ:

“ಕಾಮನ ಮುನೆಯ ಕಂಡು ನಿಮಗೆ ನೋವಾದೀತೆಂದು, ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ? ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನ ದೇವರ ಒಳಗಾದವಳಾ.”

ಈ ಮಾತು ಕಥೆಯಲ್ಲಿ ಹತ್ತು ಜನ ಸೇರಿದ ಸಭೆಯಲ್ಲಿ ನಡೆಯಿತೋ, ಇಲ್ಲವೋ ಏಕಾಂತದಲ್ಲಿ ನಡೆಯಿತೋ ನಮಗೆ ತಿಳಿಯುವಂತಿಲ್ಲ.

ದೇಹದ ವಿಷಯವನ್ನೇ ಎತ್ತಿ ಎತ್ತಿ ಆಡುವುದು ತರಹವಲ್ಲ ಎಂದು ಮಹಾದೇವಿಯಕ್ಕ ಸ್ಪಷ್ಟವಾಗಿಯೇ ಹೇಳುತ್ತಾಳೆ : “ತಾಯಿ ಕರ್ರನೆ ಕಂದಿದಡೇನಯ್ಯಾ ? ಕಾಯಮಿರ್ರನೆ ಮಿಂಚಿದಡೇನಯ್ಯಾ ? ಅಂತರಂಗ ಶುದ್ಧವಾದ ಬಳಿಕ, ಚೆನ್ನಮಲ್ಲಿಕಾರ್ಜುನ ಲಿಂಗವು ಒಲಿದ ಕಾಯವು ಹೇಗಿದ್ದಡೇನಯ್ಯಾ ?” ಕಾಯದ ಮಾತು ಇಲ್ಲಿಗೆ ಸಾಕು ಎಂಬುದು ಅಕ್ಕನ ಸೂಚನೆ. ಆದರೆ ಆ ಸೂಚನೆಯನ್ನು ಗ್ರಹಿಸುವವನಲ್ಲ ಅಲ್ಲಮ. ಅಕ್ಕ ಹೇಳಿದ್ದ “ಫಲ ಒಳಗೆ ಪಕ್ವವಾದಲ್ಲದೆ ಹೊರಗಿನ ಸಿಪ್ಪೆ ಒಪ್ಪಗೆಡದು” ಎಂಬ ಮಾತನ್ನೆತ್ತಿಕೊಂಡು ಮತ್ತೆ ಅವಳ ಮನಸ್ಸಿಗೆ ನೋವಾಗುವಂತೆ ಹೇಳುತ್ತಾನೆ: “ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಯಿತ್ತು” ಈ ಮಾತು ನಿಜವೇ ಎಂಬುದನ್ನು ವಿಚಾರಿಸಿಸೋಣ. ಇದರ ಧ್ವನಿತಾರ್ಥವೇನು? ಹೊರಗು- ಎಂದರೆ ದೇಹ –ಅಂದಗೆಟ್ಟಾಗ ಒಳಗು- ಎಂದರೆ ಮನಸ್ಸು ಅಥವಾ ಜೀವ ಕೊಳಕಾಯಿತು ಎಂದು. ಅದು ನಿಜವೇ? ವೃದ್ದಾಪ್ಯದಿಂದಲೋ, ರೋಗದಿಂದಲೋ ದೇಹ ಕುಂದಿದರೆ, ಅಥವಾ ವಿಕಾರವಾದರೆ ಮನಸ್ಸು ಅಥವಾ ಜೀವ ಅಶುದ್ಧವಾಯಿತು ಎಂದು ಹೇಳುವುದು ತರ್ಕಬದ್ಧವಾದೀತೆ ?

ತಾನು ಮದುವೆ ಮಾಡಿಕೊಂಡಿರುವ ಪರವಸ್ತುವಿನ ಸ್ವರೂಪ ಅವಳಿಗೆ ಚೆನ್ನಾಗಿ ಗೊತ್ತು. ಅದನ್ನು ಆಕೆ ಅಲ್ಲಮನಿಗೆ ತಿಳಿಸುತ್ತಾಳೆ. ಆ ವಸ್ತು ಸಾವಿಲ್ಲದ್ದು, ಕೇಡಿಲ್ಲದ್ದು, ರೂಪ ಇಲ್ಲದ್ದು, ಆದರೂ ಸೌಂದರ್ಯದ ಆಗರ. ಅದಕ್ಕೆ ಜನ್ಮಾಂತರಗಳಿಲ್ಲ –ಭವ ಇಲ್ಲ – ಯಾವುದೇ ರೀತಿಯ ಭಯವೂ ಇಲ್ಲ. ನಿರ್ಭಯನಾದರೂ ಚೆಲುವಿನ ಸಾರ ಅವನು ಅಥವಾ ಅದು. ಆ ವಸ್ತುವಿನ ಇಲಿದಿದ್ದಾಳೆ. ಅದಕ್ಕೆ ಒಂದು ಹೆಸರು ಕೊಡಬೇಕಾದರೆ ಆಕೆಗೆ ಗೊತ್ತಿರುವ ಹೆಸರು ‘ಚೆನ್ನಮಲ್ಲಿಕಾರ್ಜುನ’ ಆಕೆಗೆ ಉಳಿದ ಲೌಕಿಕ ಪುರುಷರಿಗೂ ಯಾವ ಸಂಬಂಧವೂ ಇಲ್ಲ!

ಈ ಮಾತನ್ನು ಕೇಳಿ ಪ್ರಭು ಸಂತೋಷಪಡಬೇಕಾಗಿತ್ತು. ಅದರ ಬದಲಿಗೆ ಅವಳ ಕಡೆಗೆ – – ಅವಳನ್ನು ತಬ್ಬಿಬ್ಬು ಮಾಡುವ ಉದ್ದೇಶದಿಂದ – ಒಂದು ಮುಂಡಿಗೆಯನ್ನು (ಸವಾಲು) ಎಸೆಯುತ್ತಾನೆ. ಅವಳ ಶಕ್ತಿಯು ಪ್ರಮಾಣ ಎಷ್ಟು ಎಂಬುದನ್ನು ಅವನು ಅಳೆಯಲಾರದಾದ. ಅದು ತೀರ ಕಡಿಮೆಯೆಂದು ಎಂದು ಭಾವಿಸಿದ. ಅವಳು ಹೇಳಿದ್ದ ‘ರೂಪವಿಲ್ಲದವನು’ ಎಂಬುದನ್ನೇ ಹಿಡಿದು ತನ್ನ ವಾದ ವೈಖರಿಯನ್ನು ಮೆರೆಯಲು ಪ್ರಯತ್ನಿಸಿದ ತಾತ್ವಿಕ ಜಿಜ್ಞಾಸೆಯ ಜಟಿಲತೆಯಲ್ಲಿ ಅಕ್ಕನನ್ನು ಸಿಲುಕಿಸಲು ನೋಡಿದ:

“ರೂಪಿಗೆ ಕೇಡುಂಟು. ನಿರೂಪಕ್ಕೆ – ಎಂದರೆ ರೂಪವೇ ಇಲ್ಲದುದಕ್ಕೆ ಕೇಡಿಲ್ಲ

ನೀನು ರೂಪು-ಎಂದರೆ ಆಕಾರ ಉಳ್ಳವರು, ದೇಹ ಉಳ್ಳವರು ಅಂಥವಳು ನಿರೂಪಿಯಾದ – ಎಂದರೆ ನಿರಾಕಾರಿಯಾದ ಶಿವನನ್ನು ಕೂಡುವ ರೀತಿ ಹೇಗೆ?

ಇದು ಅಸಂಬಂಧವಾದುದು ಎಂದರೆ ಇಂತಹ ಸಂಬಂಧ ಸಾಧವೇ ಇಲ್ಲದ್ದು”

ಪ್ರಭು ಇಷ್ಟಕ್ಕೇ ನಿಲ್ಲಿಸಿದ್ದರೆ ಪ್ರಶ್ನೆ ತಾತ್ವಿಕವಾಗಿಯೋ ಉಳಿಯುತ್ತಿತ್ತು. ಆದರೆ ಅದಕ್ಕಿಂತ ಒಂದು ಮಟ್ಟ ಕೆಳಕ್ಕಿಳಿದು ಆತ ಹೇಳಿದ:

“ದೇಹ ಇಂದ್ರಿಯಗಳೆಂಬ ಜಾತಿ ಸೂತಕವಿರಲು
ಗುಹೇಶ್ವರ ಲಿಂಗವ ಮುಟ್ಟಬಾರದು ಕೇಳವ್ವಾ”

“ದೇಹ ಇಂದ್ರಿಯಗಳು ಜಾತಿ ಸೂತಕ ಎಂದರೇನು? ದೇಹಧಾರಣೆ ಮಾಡಿದ ಕೂಡಲೇ ಆತ್ಮಕ್ಕೆ ಸೂತಕ ಉಂಟಾಗುತ್ತದೆ ಎಂಬ ಪ್ರಭುವಿನ ವಾದಕ್ಕೆ ಆಧಾರವೇನು? ದೇಹಧಾರಣೆ ಮಾಡದ ಶುದ್ಧ ಆತ್ಮಕ್ಕೆ ಲೌಕಿಕ ವ್ಯವಹಾರ ಸಾಧ್ಯವೇ? ಅಲ್ಲದೆ ಬರಿಯ ಆತ್ಮಗಳೇ ವ್ಯವಹಾರ ಮಾಡಲು ಈ ಲೋಕ ಪ್ರೇತ ಜಗತ್ತೆ? ಅಲ್ಲದೆ “ಜಾತಿಸೂತಕ” ಎಂಬುದು ಪ್ರಭುವಿನಂಥವರು ಆಡಬಾರದ ಮಾತು-ಇನ್ನೊಬ್ಬರನ್ನು ಪರೀಕ್ಷಿಸುವುದಕ್ಕೆಂದೂ ಆಡಬಾರದ ಮಾತು.

ತುಂಬಾ ತೀಕ್ಷ್ಣವಾದ ಸಂವೇದನೆಯನ್ನು ಮತಿಯನ್ನೂ ಉಳ್ಳ ಮಹಾದೇವಿಯಕ್ಕ ಅತ್ಯಂತ ವಿನಯಶೀಲಳಾಗಿಯೇ ಪ್ರಭುವಿಗೆ ತಕ್ಕ ಉತ್ತರವನ್ನು ಕೊಡುತ್ತಾಳೆ. ಅವಳ ಪ್ರಸಿದ್ಧವಾದ ವಚನವೊಂದರಲ್ಲಿ

“ಹಾವಿನ ಹಲ್ಲನ್ನು ಕಳೆದು ಹಾವನ್ನು ಆಡಿಸುವ ಕಲೆಯನ್ನು ಕಲಿತರೆ”

ಹಾವಿನ ಸಂಗವೇ ಲೇಸು. ಕಾಯದ ಸಂಗವನ್ನು ಸರಿಯಾಗಿ ವಿವೇಚಿಸಬಲ್ಲಿರಾದರೆ ಕಾಯದ ಸಂಗವನ್ನು ಮಾಡುವುದೇ ಒಳ್ಳೆಯದು. ಕಾಯವಿಕಾರ ಎನ್ನುವುದು ತಾಯಿಯೇ ರಾಕ್ಷಸಿಯಾದಂತೆ! (ಎಂದರೆ ಕಾಯ ವಿಕಾರವು ವ್ಯಕ್ತಿಯನ್ನು ತಿಂದು ಹಾಕಿ ಬಿಡುತ್ತದೆ) ಕೊನೆಯದಾಗಿ ಅವಳು ಹೇಳುವ ಮಾತು ಅಲ್ಲಮನಿಗೆ ಮೃದುವಾಗಿ ಬುದ್ಧಿ ಹೇಳಿದಂತಿದೆ: ಚನ್ನಮಲ್ಲಿಕಾರ್ಜುನ ಯಾರಿಗೆ ಒಲಿದಿದ್ದಾನೆಯೋ ಅಂಥವರನ್ನು ‘ನೀವು ದೇಹವನ್ನು ಹೊಂದಿದ್ದೀರಿ ಎಂದು ಹೇಳಕೂಡದು.” (ಎಂದರೆ ಭಗವಂತನ ಒಲವನ್ನು ಪಡೆದವರು ದೇಹಭಾವನೆಯನ್ನು ಕಳೆದುಕೊಂಡವರು ಎಂದರ್ಥ.)

ಹೀಗೆ ವಾದವು ಮುಂದುವರಿಯುತ್ತದೆ. ಪ್ರಭು ತಾನು ಕುಳಿತಿದ್ದ ಉಪದೇಶ ಸ್ಥಾನದ ಬಲದಿಂದ ಮಹಾದೇವಿಯ ಕಾಯ. ಜೀವ, ಭಾವಗಳ ಶುದ್ಧಿಯನ್ನು ಪ್ರಶ್ನಿಸುತ್ತಲೇ ಹೋಗುತ್ತಾನೆ. ಅವನು ಈ ಹಿಂದೆ ಭೇಟಿ ಮಾಡಿದ್ದ ಸಿದ್ಧರಾಮ, ಮುಕ್ತಾಯಕ್ಕ ಮುಂತಾದವರ ಜೊತೆ ಮಾತನಾಡುವಾಗಲೂ ತನ್ನ ಆಚಾರ್ಯಪೀಠದ ಉಚ್ಚೋಹಂ ಭಾವನೆಯನ್ನು ಬಿಟ್ಟಿರಲಿಲ್ಲ ಎಂಬುದನ್ನು ಮರೆಯಬಾರದು. ಆದರೆ ಮಹಾದೇವಿಯಕ್ಕನಾದರೋ ತನ್ನ ವಿನಯದ ಮರ್ಯಾದಾ ರೇಖೆಯನ್ನು ಎಂದೂ ದಾಟಲಿಲ್ಲ. (ಮುಕ್ತಾಯಕ್ಕ ತನ್ನ ಗಟ್ಟಿನಿಲುವನ್ನು ಪ್ರಭುವಿನ ಮುಖಕ್ಕೆ ರಾಚುತ್ತಿದ್ದ ಸಂದರ್ಭದ ಮಾತುಗಳನ್ನು ನೆನೆಯಿರಿ). ಅಕ್ಕ ಈಗಲೂ ಕಿರಿಯಳ ಸ್ಥಾನದಲ್ಲಿಯೇ ನಿಂತು ಅವಳಿಗೆ ಶೋಭೆ ತರುವಂತಹ ಮಾತುಗಳನ್ನೇ ಆಡುತ್ತಾಳೆ.

“ಬಸವಣ್ಣನ ವಾದವನ್ನು ಕಂಡದ್ದರಿಂದ ನನ್ನ ದೇಹ (ಭಾವ) ಹೊರಟು ಹೋಯಿತು. ಚನ್ನಬಸವಣ್ಣನ ಪಾದವನ್ನು ಕಂಡದ್ದರಿಂದ ನನ್ನ ಪ್ರಾಣ (ಭಾವ) ಬಯಲಾಯಿತು. ಪ್ರಭುವೆ, ನಿಮ್ಮಶ್ರೀ ಚರಣಕ್ಕೆ ಶರಣು ಎಂದದ್ದರಿಂದ ನನ್ನ ಜ್ಞಾನಸ್ವಯಂವಾಯಿತ್ತು (ನನ್ನದೇ, ಸ್ವಂತದ್ದೇ ಆಯಿತು). ಅಲ್ಲದೆ ನಿಮ್ಮ ಶರಣರ ಕರುಣೆಯನ್ನು ಪಡೆದಿದ್ದೇನಾಗಿ ನನಗೆ ಮತ್ತೆ ಯಾವುದೂ (ಬಂಧನ) ಇಲ್ಲ.

ಆದರೆ ಆಕೆಯ ಈ ಮಾತುಗಳನ್ನೂ ಪ್ರಭು ಒಪ್ಪುವುದಿಲ್ಲ. ತಾನು ಮೊದಲು ಹೇಳಿದಂಥದೇ ಮಾತುಗಳಲ್ಲಿ ಅವಳನ್ನು ಸೋಲಿಸಲು ಪ್ರಯತ್ನಿಸಿ ಆಕೆ ಸೋಲದಿದ್ದಾಗ ಮತ್ತೊಂದು ರೀತಿಯಲ್ಲಿ ಅವಳನ್ನು ಮಾತಿನ ಮೋಡಿಯಲ್ಲಿ ಸಿಕ್ಕಿಸಲು ಪ್ರಯತ್ನಿಸುತ್ತಾನೆ :

“ಕೂಡಲು ಸಾಧ್ಯವಿಲ್ಲದ ಘನದಲ್ಲಿ (ನೀನು) ಕಂಡಿದ್ದು ಹೇಗೆ? ಹೇಳಿದರೆ ಅದಕ್ಕದೆ ಕೊರತೆ (ಎಂದರೆ ಆ ಸಂಬಂಧ ಮಾತಿನಲ್ಲಿ ಹೇಳುವಂಥದಲ್ಲ ಅಲ್ಲವೆ?) ಗುಹೇಶ್ವರ ಲಿಂಗವನ್ನು ಬೇರೆ ಮಾಡಿ ಅವನನ್ನು ಬೆರೆಸುವ ರೀತಿ ಎಂಥದು?”

ಅಲ್ಲಮನ ಮಾತಿನ ಅರ್ಥ ಇದು: ಭಗವಂತನು ನಿರಾಕಾರನಾದವನು. ನೀನಾದರೋ ಆಕಾರ ಉರ್ಳಳವಳು. ಹೀಗೆ ಆಕಾರ ಉಳ್ಳದ್ದು ಆಕಾರ ಇಲ್ಲದ್ದನ್ನು ಕೂಡುವುದು ಹೇಗೆ ಸಾಧ್ಯ?

ಇದಕ್ಕೆ ಮಹಾದೇವಿಯಕ್ಕ ಕೊಡುವ ಉತ್ತರ ವಚನ ಸಾಹಿತ್ಯದ ಅನರ್ಘ್ಯ ರತ್ನಗಳಲ್ಲಿ ಒಂದು ಎಂದು ನಾವು ಹೇಳಬಹುದಾದದ್ದು, ಅನುಭವಿಯೂ ಜ್ಞಾನಿಯೂ ಆದ ಅಪೂರ್ವ ಚೇತನವು ಮಾತ್ರವೇ ನೀಡಬಹುದಾದದ್ದು; ಹಾಗೂ ಕವಿ ಹೃದಯವೊಂದು ನೀಡಬಹುದಾದ ಮಾಲೋಪಮೆಗಳಿಂದ ಕೂಡಿದ್ದು.

ಗಟ್ಟಿದುಪ್ಪಕ್ಕೆ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯ?
ದೀಪಕ್ಕೆ ದೀಪ್ತಿಗೆ ಭೇದ ಉಂಟೆ ಅಯ್ಯಾ?
ಅಂಗಕ್ಕೆ ಆತ್ಮಂಗೆ ಭಿನ್ನ ಉಂಟೆ ಅಯ್ಯ?
ಎನ್ನಂಗವನು ಶ್ರೀಗುರು ಮಂತ್ರವ ಮಾಡಿ ತೋಱುದನಾಗಿ,
ಸಾವಯ () ನಿರವಯಕ್ಕೆ ಭಿನ್ನವಲ್ಲವಯ್ಯಾ.
ಚನ್ನಮಲ್ಲಿಕಾರ್ಜುನ ದೇವರ ಬೆರೆಸಿ ಮತಿಗೆಟ್ಟವಳ
ಏತಕ್ಕೆ
ನುಡಿಸುವಿರಯ್ಯಾ ಪ್ರಭುವೆ?

(ಮೊದಲನೆಯ ಪಂಕ್ತಿಯಲ್ಲಿ ಬರುವ ‘ಹಂಗುಟೆ’ ಎಂಬ ಪದ ಮುಂದಿನ ಪಂಕ್ತಿಯಲ್ಲಿನಂತೆ “ಭೇದ ಉಂಟೆ?” ಎಂದಿರಬೇಕು. ಏಕೆಂದರೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದವರು ಪ್ರಕಟಿಸಿರುವ ‘ಶಿವಶರಣೆಯರ ವಚನ ಸಂಪುದ ಸಂಪಾದಕರು ‘ಹಂಗು’ ಎಂಬುದಕ್ಕೆ ಆಶ್ರಯ, ಋಣ, ಆಶೆ, ಹಂಬಲ ಎಂಬ ಅರ್ಥವನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಯಾವುದೂ ಈ ಸಂದರ್ಭದಲ್ಲಿ ಹೊಂದುವುದಿಲ್ಲ.)

ಮಹಾದೇವಿಯಕ್ಕ ತಮ್ಮ ಆಧ್ಯಾತ್ಮಿಕ ಅನುಭವ ಸಮಸ್ತವನ್ನೂ ತಮ್ಮ ಅನುಭವದ ನಿಲುವನ್ನು ಈ ವಚನದಲ್ಲಿ ಕೊನೆಗೊಳಿಸಿದ್ದಾರೆ. ಆಕೆ ಸಾಕಾರ-ನಿರಾಕಾರಗಳ ನಡುವೆ ಲೀಲಾಜಾಲವಾಗಿ ಸಂಚರಿಸುತ್ತಿರುವ ಚೇತನ. ತಮ್ಮ ಅವರ್ಣನೀಯವಾದ ಆ ಸ್ಥಿತಿಯನ್ನು ವರ್ಣಿಸಲು ಅವರು ಮೂರು ಉಪಮೆಗಳನ್ನು ಬಳಸಿಕೊಳ್ಳುತ್ತಾರೆ. ಮೊದಲನೆಯದು ಗಟ್ಟಿದುಪ್ಪ ತಿಳಿದುಪ್ಪಗಳದ್ದು. ಎರಡನೆಯದು ದೀಪ ಮತ್ತು ಅದರ ಬೆಳಗಿನದು. ಮೂರನೆಯದು ದೇಹ ಮತ್ತು ಆತ್ಮಗಳದ್ದು.

ತುಪ್ಪ ಶೈತ್ಯಾವಸ್ಥೆಯಲ್ಲಿ ಗಟ್ಟಿಯಾಗಿರುತ್ತದೆ. ಶಾಖ ತಗುಲಿದೊಡನೆ ದ್ರವವಾಗುತ್ತದೆ. ಹಾಗಾದರೆ ತುಪ್ಪದ ಸ್ಥಾಯಿ ಸ್ವರೂಪ ಯಾವುದು? ದಪ್ಪ? ದ್ರವವೆ? ಈ ಅನುಭಾವ ದೀಪ್ತ ಉಪಮೆ ನಮಗೆ ಮನದಟ್ಟಾಗಬೇಕಾದರೆ ಏಳು ಶತಮಾನಗಳು ಈಚೆಗೆ ಪ್ರಯಾಣಿಸಬೇಕು. ೧೯ನೆಯ ಶತಮಾನದ ಅನುಭಾವಿ ದಕ್ಷಿಣೇಶ್ವರದ ದೇವಮಾನವರೆಂದೇ ನಿರ್ದೇಶಿತರಾಗಿರುವ ಶ್ರೀರಾಮಕೃಷ್ಣ ಪರಮಹಂಸರು ದೇವರ ಸಾಕಾರ-ನಿರಾಕಾರಗಳ ಸ್ವರೂಪವನ್ನು ವಿವರಿಸುವ ಸಂದರ್ಭದಲ್ಲಿ ಹೀಗೆನ್ನುತ್ತಾರೆ ಒಬ್ಬ ಭಕ್ತ-ದೇವರು ಖಂಡಿತವಾಗಿಯೂ ನಿರಾಕಾರನೇ ಎಂದು ನಂಬಿದ್ದ ಬ್ರಹ್ಮಸಮಾಜಕ್ಕೆ ಸೇರಿದವನು. – ಒಮ್ಮೆ ಪರಮಹಂಸರನ್ನು ಕೇಳಿದ. “ಮಹಾಶಯರೆ, ಭಗವಂತ ಸಾಕಾರನೆ ಅಥವಾ ನಿರಾಕಾರನೆ? ಶ್ರೀರಾಮಕೃಷ್ಣ ಪರಮಹಂಸರು ಹೀಗೆ ಹೇಳಿದರು: “ಆತನ ಸಂಬಂಧವಾಗಿ ಆತ ಕೇವಲ ಇದು ಮಾತ್ರವೇ ಎಂದು ಎಂದಿಗೂ ಹೇಳಲಾಗುವುದಿಲ್ಲ. ಆತ ನಿರಾಕಾರನೂ ಹೌದು, ಸಾಕಾರನೂ ಹೌದು.” ಇಷ್ಟು ಹೇಳಿ ಸಾಕಾರವನ್ನು ನಂಬುವ ಭಕ್ತರಿಗೂ ನಿರಾಕಾರವನ್ನು ನಂಬುವ ವೇದಾಂತಿಗಳಿಗೂ ಇರುವ ವ್ಯತ್ಯಾಸವನ್ನು ವಿವರಿಸುತ್ತಾರೆ. ಅನಂತರ ಹೀಗೆ ಹೇಳಿದರು:

“ನಾನು ಹೇಳಿದ್ದು ಅರ್ಥವಾಯಿತೆ? ಭಾವಿಸಿಕೋ-ಪರಬ್ರಹ್ಮ ದಡವೇ ಇಲ್ಲದ ಸಚ್ಚಿದಾನಂದ ಸಾಗರ ಅಂತ. ಭಕ್ತಿಯ ಶೈತ್ಯದ ದೆಸೆಯಿಂದ ಅಲ್ಲಲ್ಲಿ ನೀರು ಗಡ್ಡೆ ಕಟ್ಟುತ್ತದೆ ಹಿಮಗಡ್ಡೆಯಾಗುತ್ತದೆ. ಎಂದರೆ ಭಗವಂತ ತನ್ನ ಭಕ್ತರ ಸಲುವಾಗಿ ವ್ಯಕ್ತವಾಗಿ, ಆಗಾಗ ಸಾಕಾರ ರೂಪ ಧರಿಸುತ್ತಾನೆ. ಜ್ಞಾನ ಸೂರ್ಯ ಉದಯಿಸಿದನೆಂದರೆ ಆ ಹಿಮಗಡ್ಡೆ ಕರಗಿಹೋಗುತ್ತದೆ. ಆಗ ಭಗವಂತ ಸಾಕಾರ ಅಂತ ಮನಸ್ಸಿಗೆ ಅನಿಸುವುದೂ ಇಲ್ಲ. ಆತನ ರೂಪ ಕಾಣಿಸುವುದೂ ಇಲ್ಲ. ಆತ ಏನು ಅನ್ನುವುದನ್ನು ಬಾಯಿಂದ ಹೇಳಲಾಗುವುದಿಲ್ಲ. ಆತನನ್ನು ವರ್ಣಿಸಲು ಯಾರು ಉಳಿದುಕೊಂಡಿರುತ್ತಾರೆ? ಯಾರು ವರ್ಣನೆ ಮಾಡಬೇಕಾಗಿತ್ತೋ ಆತನ ಅಸ್ತಿತ್ವವೇ ಉಳಿದುಕೊಂಡಿರುವುದಿಲ್ಲ. ಆತ ‘ಅಹಂ’ಗಾಗಿ ಎಷ್ಟು ಹುಡುಕಿದರೂ ಅದು ಮಾತ್ರ ದೊರೆಯಲೊಲ್ಲದು.”[1]

ಮುಂದುವರಿದು ಮಹಾದೇವಿಯಕ್ಕ ಹೇಳುತ್ತಾರೆ: “ಅಂಗವನ್ನು ಲಿಂಗಮುಖದಿಂದ ಅರ್ಪಿಸಿಬಿಟ್ಟೆನಾಗಿ ಆ ಅಂಗ ಅನಂಗವಾಯಿತು- ಎಂದರೆ ಅದರ ಅಂಗಸ್ವರೂಪದ ದೇಹತ್ವ ನಾಶವಾಯಿತು. ಮನಸ್ಸನ್ನು ಜ್ಞಾನಕ್ಕೆ ಅರ್ಪಿಸಲಾಗಿ ಮನಸ್ಸು ಲಯವಾಗಿ ಹೋಯಿತು. ಭಾವವನ್ನು – ಇಚ್ಛೆಯನ್ನು ಆನಂದಕ್ಕೆ ಅರ್ಪಿಸಲಾಗಿ ಭಾವ ಎಂಬುದು ಬಯಲಾಗಿ ಹೋಯಿತು. ಹೀಗೆ ಅಂಗ, ಮನಸ್ಸು ಭಾವಗಳು ನಾಶವಾಗಿ ಹೋದ ಕಾರಣದಿಂದ ನನ್ನ ಕಾಯ ಅಕಾಯವಾಯಿತು- ಎಂದರೆ ನನಗೆ ದೇಹಬುದ್ಧಿ ಹೊರಟೇ ಹೋಯಿತು. ಇನ್ನು ದೇಹದ ಸುಖವನ್ನು ಅನುಭವಿಸುವುದು ಯಾವುದು? ಅಥವಾ ಯಾರು? ಲಿಂಗವೇ-ಭಗವಂತನೇ ಅದು ಆನಂದ ಸ್ವರೂಪಿಯಾದುದರಿಂದ ಅದೇ ಆನಂದವನ್ನು ಸವಿಯಬೇಕು. ಹೀಗಾಗಿ ನಾವು ಶರಣ ಸತಿ ಲಿಂಗ ಪತಿ ಆಗಿದ್ದೇನೆ. ಈ ಮೂಲಕ ಚೆನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಅವನನ್ನು ಬೆರೆಸಿದ್ದೇನೆ”

ಕಾಯ ಅಕಾಯವಾಗಿ, ನಿರಾಕಾರವಾದ ವಸ್ತುವಿನಲ್ಲಿ ಆನಂದಾನುಭೂತಿಯನ್ನು ಪಡೆಯುವ ರಹಸ್ಯವನ್ನು ಅತ್ತ ಸೊಗಸಾಗಿ ವರ್ಣಿಸಿದರು. ಆಕೆಯ ಮಾತನ್ನು ಆ ಮಾತು ವರ್ಣಿಸಿದ ನಿಜದ ನಿಲುವನ್ನು ಪ್ರಭುದೇವರು ಒಪ್ಪಿದರು. ಇದುವರೆಗೂ ತಾವು ಝಂಕಿಸಿ, ಕೆದಕಿ, ಬೆದಕಿ, ನುಡಿದದ್ದು ಮಹಾದೇವಿಯಕ್ಕ ಏರಿದ್ದ ಎತ್ತರವನ್ನು ಅವರ ಅನುಭಾವದ ಆಳ, ವೈಶಾಲ್ಯಗಳನ್ನು ಅಂದು ಅಲ್ಲಿ ನೆರೆದಿದ್ದ ಜನರಿಗೆ ಮುಂದೆ ನಮ್ಮಂತಹ ಅನ್ವೇಷಿಗಳಿಗೆ ತೆರೆದು ತೋರಿಸುವುದಕ್ಕೆ ಎಂಬ ಸತ್ಯ ಬಯಲಾಯಿತು. ಅವರು ಹೃದಯ ಪೂರ್ವಕವಾಗಿ ಅಕ್ಕನನ್ನು ಸ್ತುತಿಸಿದರು:

ಅಂಗ ಅಂಗನೆಯ ರೂಪಲ್ಲದೆ,
ಮನ ವಸ್ತುಭಾವದಲ್ಲಿ ಬೆಚ್ಚಂತಿರ್ಪುದು,
ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ!
ಅಕ್ಕ, ಗುಹೇಶ್ವರ ಲಿಂಗದಲ್ಲಿ ಉಭಯ ನಾಮ ವಳಿದ ಎನ್ನಕ್ಕಾ!

ಅಲ್ಲಮರು ಮಹಾದೇವಿಯನ್ನು ‘ನನ್ನ ಅಕ್ಕ’ ಎಂದು ಸಂಬೋಧಿಸಿದ್ದಾರೆ. ಈ ಸಂಬೋಧನೆಯಿಂದ ಅವರಿಗೆ ಅಕ್ಕನವರ ನಿಜವಾದ ನಿಲುವು ಅರ್ಥವಾಗಿತ್ತೆಂಬುದೂ, ಆಕೆಯ ವಿಷಯದಲ್ಲಿ ಗೌರವ ಭಾವನೆ ಇತ್ತೆಂಬುದೂ ವೇದ್ಯವಾಗುತ್ತದೆ. “ನಿಮ್ಮ ದೇಹ ಮಾತ್ರ ಹೆಣ್ಣಿನದು, ಆದರೆ ಮನಸ್ಸು ಪರಮ ಸತ್ಯದಲ್ಲ ಬೆಸುಗೆಯಾದಂತಿದೆ, ಯಾವುದೋ ಕಾರಣಕ್ಕಾಗಿ ಇಲ್ಲಿಗೆ ಬಂದವರು ನೀವು” ಎಂಬ ಭಾವನೆ ಮಾತ್ರವಲ್ಲದ, ಗುಹೇಶ್ವರ ಲಿಂಗದಲ್ಲಿ ಒಂದಾಗಿ ನಾನು-ನೀನು ಎಂಬ ದ್ವೈತ ಭಾವನೆಯನ್ನು ಕಳೆದುಕೊಂಡವರು ನೀವು ಎಂಬ ಭಾವನೆಯೂ ಮೇಲಿನ ವಚನದಿಂದ ಧ್ವನಿತವಾಗುತ್ತದೆ.

ಮುಂದುವರೆದ ಸಂಭಾವಣೆಯಲ್ಲಿ ಮಹಾದೇವಿಯಕ್ಕನ ಜ್ಞಾನದ ಪಕ್ವತೆಯನ್ನು ಕಂಡು ಬಸವಣ್ಣನವರು ಮಹಾದೇವಿಯಕ್ಕನ ಮಹಿಮೆಯನ್ನು ಇತರ ಶರಣರಿಗೆ ವಿವರಿಸುತ್ತಾ “ಬ್ರಹ್ಮವನ್ನು ಆಚರಿಸಿ- ಎಂದರೆ ಬ್ರಹ್ಮಾನುಭೂತಿಯನ್ನು ಪಡೆದು ತಮ್ಮನ್ನು ತಾವು ಈಕೆ ಮೆರೆದಿದ್ದಾರೆ” ಎನ್ನುತ್ತಾರೆ. ಪ್ರಭುದೇವರಂತೂ ತಾವು ತೋರಿಕೆಗಾಗಿ ಆಡಿದ್ದ ಕಟುನುಡಿಗಳನ್ನು ಮರೆಸುವಂತೆ “ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು” ಎನ್ನುತ್ತಾರೆ. ಅದಕ್ಕೆ ಅವರು ಕೊಡುವ ಕಾರಣ : ನಾಮ ಸೀಮೆಗಳಿಲ್ಲದ ಚಿಚ್ಛಕ್ತಿಯಾದ ನಿಜಶಕ್ತಿ ಆತ. ಆಕೆಯ ಅಂತರಂಗದ ಕಾಂತಿ ಬಹಿರಂಗವಾಗಿ ಪ್ರಜ್ವಲಿಸುತ್ತಿದೆ. ಅಲ್ಲದೆ ಆಕೆ ಗುಹೇಶ್ವರ ಲಿಂಗದಲ್ಲಿ ತೆರಹಿಲ್ಲದ ರೀತಿಯಲ್ಲಿ ಒಂದಾಗಿದ್ದಾರೆ!

ಹಾಗೆ ಆಕೆಯ ಅಂತರಂಗದ ಕಾಂತಿ ಬಹಿರಂಗವಾಗಲು ಅಲ್ಲಮಪ್ರಭು ಆಕೆಯನ್ನು ವಾದಕ್ಕೆಳೆದು ಝಂಕಿಸಿ ನುಡಿದದ್ದು ಕಾರಣನಾಗಿರಬಹುದಲ್ಲವೆ? – ವಾದೇ ವಾದೆ ಜಾಯತೇ ತತ್ವ ಬೋಧಃ![2]

[1] ಶ್ರೀ ರಾಮಕೃಷ್ಣವಚನ ವೇದ, (ಪೂರ್ವಾರ್ಧ) ಶ್ರೀರಾಮಕೃಷ್ಣಾಶ್ರಮ ಮೈಸೂರು. ಪು. ೯೭.

[2] ಇಲ್ಲಿ ಬಳಸಿಕೊಂಡಿರುವ ವಚನಗಳೆಲ್ಲದರ ಆಕರ ಕರ್ನಾಟಕ ವಿಶ್ವವಿದ್ಯಾಲಯದವರು ಅನುವಾದದ ಸಹಿತ ಪ್ರಕಟಿಸಿರುವ (ಇಂಗ್ಲಿಷ್‌ಶೂನ್ಯ ಸಂಪಾದನೆ ಸಂ. ೪).