“ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು.” ಇದು ಅಕ್ಕಮಹಾದೇವಿಯವರ ಒಂದು ಮಾತು, ತುಂಬ ಅಪರೂಪವಾದ ಮಾತು. ಜಗತ್ತಿಗೆ, ಜಗತ್ತಿನ, ಭೋಗ ಭಾಗ್ಯಗಳಿಗೆ ಕಣ್ಣುಮುಚ್ಚಿದಾಗ ಬೆಳಗುವಂಥದು ಜ್ಞಾನ. ಅದು ಎಲ್ಲ ಸಾಧನೆಗಳ ಚರಮಸ್ಥಿತಿ ಎಂದು ಹೇಳಲಾಗಿದೆ. ಅದು ಎಲ್ಲ ಕರ್ಮಗಳ ನಿಲುಗಡೆಯ ನಿಲವು. ಎಂದರೆ ಅಲ್ಲಿ ಯಾವ ಕ್ರಿಯೆಯೂ ನಡೆಯುವ ಸಾಧ್ಯತೆಯೇ ಇಲ್ಲ. ಅನುಭಾವಿಯಾದ ಮಹಾದೇವಿಯವರು ಅಂತಹ ಕರ್ಮಕ್ಕೂ ಒಂದು ಕ್ರಿಯೆಯನ್ನು ವಿಧಿಸುತ್ತಾರೆ. ಹಾಗೆ ವಿಧಿಸುವ ಶಕ್ತಿ ಅನುಭಾವದ ನೆಲೆಯಲ್ಲಿ ನಿಂತವರಿಗೆ ಉಂಟು. ಬೆಳಕಿನ ಪುಂಜವಾಗಿರುವ ಪರಮಶಕ್ತಿಗೆ ಆರತಿಯನ್ನು ಬೆಳಗಿ ಸಂತೋಷವನ್ನು ಪಡುವ ಜನರಿದ್ದಾರಷ್ಟೆ ಹಾಗೆ ಮಾಡುವವರು ತೃಪ್ತಿಯನ್ನು ಪಡೆಯುವುದು ಯಾವಾಗ? ಜ್ಞಾನ ಕಣ್ಣುತೆರೆದಾಗ. ವಾಸ್ತವವಾಗಿ ಜ್ಞಾನ ಎಂಬುದು ಕಣ್ಣು ಮುಚ್ಚುವುದೂ ಇಲ್ಲ, ತೆರೆಯುವುದೂ ಇಲ್ಲ! ಅರಿವಿನ ಆಗರವಾಗಿರುವ ಅಕ್ಕನ ಇಂಗಿನ ಭಕ್ತ ಅಥವಾ ಸಾಧಕ ಜ್ಞಾನಕ್ಕೆ ತನ್ನನ್ನು ತಾನು ತೆರೆದುಕೊಂಡಾಗ ಎಂದು. ಅಂತಹವರ ಆರತಿಯನ್ನೂ ಶಿವ ಸ್ವೀಕರಿಸುತ್ತಾನೆ, ಎಂದರೆ ತನ್ನನ್ನು ನೋಡಬಲ್ಲವನನ್ನು ಶಿವನೂ ಮೆಚ್ಚುತ್ತಾನೆ ಎಂದು.

ಇನ್ನೊಂದು ವಚನದಲ್ಲಿ ಅತ್ತ ಬ್ರಹ್ಮ. ಬಟ್ಟ ಬಯಲು ಎನ್ನುತ್ತಾರೆ. ವ್ಯಕ್ತಿ ಹೋಗಿ ಸೇರಬೇಕಾದ ಗುರಿ ಒಂದುಂಟು. ಆತನಿಗೆ ಗರಿಯಸ್ವರೂಪದ ಅರಿವು ಇರಬೇಕಾದದ್ದು ಎಷ್ಟು ಅಗತ್ಯವೋ ದಾರಿಯ ಸ್ವರೂಪವು ತಿಳಿದಿರಬೇಕಾದದ್ದು ಅಷ್ಟೇ ಅಗತ್ಯ. ಇದನ್ನು ಮನಸ್ಸಿಗೆ ತರುವ ಒಂದು ದೃಷ್ಟಾಂತ ಕಥೆ ಉಂಟು. ಒಬ್ಬಾತ, ದೂರ ಪ್ರಯಾಣ ಕೈಗೊಂಡವನು ನಡೆದು ನಡೆದು ದಾರಿ ನಡೆಸಿ, ಒಂದು ಕೂಡುರಸ್ತೆ ತಲುಪುತ್ತಾನೆ. ಅಲ್ಲಿ ಎಡಕ್ಕೆ ತಿರುಗಬೇಕೋ ಬಲಕ್ಕೋ ಅವನಿಗೆ ಗೊತ್ತಾಗುವುದಿಲ್ಲ. ಅಲ್ಲ ಈ ಬಗ್ಗೆ ಹೇಳುವವರೂ ಯಾರೂ ಸಿಕ್ಕಲಿಲ್ಲ. ಕೊನೆಗೆ ಆದದ್ದಾಗಲಿ ಎಂದು ಬಲಕ್ಕೆ ತಿರುಗಿ ನಡೆಯುತ್ತಿದ್ದ ಸ್ವಲ್ಪವೇ ದೂರ ಹೋದ ಮೇಲೆ ಎದುರಿಗಿಂದ ನಡೆದು ಬರುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿದ. ಆತನನ್ನು ಈ ಪ್ರಯಾಣಿಕ ಇಂಥ ಊರಿಗೆ ಇಲ್ಲಿಂದ ಎಷ್ಟು ಮೈಲಿ ನಡೆಯಬೇಕು ಎಂದು ಕೇಳಿದ. ಆತ ಹಾಸ್ಯ ಪ್ರಕೃತಿಯವನು. ಹೇಳಿದ, ‘‘ಅಯ್ಯಾ, ನೀನು ಹೋಗುತ್ತಿರುವ ಮೈ ಸಿಕ್ಕಿನಲ್ಲೇ ನಡೆಯುತ್ತಿದ್ದರೆ ಸುಮಾರು ಇಪ್ಪತ್ತೊಂಬತ್ತು ಚಿಲ್ಲರೆ ಸಾವಿರ ಮೈಲಿ. ಹಿಂದಕ್ಕೆ ತಿರುಗಿ, ನೇರವಾಗಿ ನಡೆದರೆ ಒಂದೇ ಒಂದು ಮೈಲಿ.”

ನಮಗೆ ಆಧ್ಯಾತ್ಮಿಕ ಗುರಿಯ ವಿಷಯದಲ್ಲಿ ಇರುವ ಪ್ರಮಾಣವೆಂದರೆ ವೇದ, ಶಾಸ್ತ್ರ ಪುರಾಣಗಳು. ಅಕ್ಕನಾದರೋ ಅವುಗಳ ತಿರುಳನ್ನೂ ಬಲ್ಲವರು, ನಿಜವಾಗಿ ಅವು ತಿಳಿಸಬೇಕಾಗಿರುವ ಅಂತಿಮ ಸತ್ವದ ಸ್ವರೂಪವನ್ನು ಬಲ್ಲವರು. ಅವುಗಳ ಹಾದಿಯನ್ನು ಹಿಡಿದು ಆಧ್ಯಾತ್ಮ ಸಾಧನೆಯನ್ನು ಮಾಡಹೊರಟರೆ ಇಪ್ಪತ್ತೊಂಬತ್ತು ಚಿಲ್ಲರೆ ಸಾವಿರ ಮೈಲುಗಳನ್ನು ಕ್ರಮಿಸಬೇಕಾದೀತು. ಹಾಗೆ ಸವೆಸಿದರೂ ಸತ್ಯದ ದರ್ಶನವಾಗುತ್ತದೆ ಎಂಬ ನಂಬಿಕೆ ಇಲ್ಲ. ಏಕೆಂದರೆ ಎಲ್ಲ ಜ್ಞಾನಿಗಳಿಗೂ ಅವು ತೋರಿಸುವ ದಾರಿಯ ಖಚಿತತೆಯ ವಿಷಯದಲ್ಲಿ ಏಕಾಭಿಪ್ರಾಯವಿಲ್ಲ ಅವುಗಳ ವಿಷಯದಲ್ಲಿ ಅಕ್ಕನವರೇ ಮತ್ತೊಂದು ಕಡೆ ಹೇಳಿದ್ದುಂಟು:

ವೇದ ಶಾಸ್ತ್ರ ಪುರಾಣ ಆಗಮಗಳಲ್ಲಿ
ಕೊಟ್ಟಣದ ಕುಟ್ಟುತ್ತನುಚ್ಚು ತೌಡು ಕಾಣಿಭೋ
ಇವಕುಟ್ಟಲೇಕೆ?

ವೇದಾದಿಗಳಿಂದ ಅವು ದಿಕ್ಕು ತಪ್ಪುವ ಸಂಭವವೇ ಹೆಚ್ಚೆಂದು ಅತ್ತವಾದಿಸುತ್ತಾರೆ:

ಓದಿ ಓದಿ ವೇದ ವಾದಕ್ಕಿಕ್ಕಿತ್ತು
ಕೇಳಿ ಕೇಳಿ ಶಾಸ್ತ್ರಸಂದೇಹಕ್ಕಿಕ್ಕಿತ್ತ
ಅರಿದಿಹೆ ಅರಿದಿಹೆನೆಂದು ಆಗಮ ಅರೆಯಾಗಿ ಹೋಯಿತ್ತು
ಪೂರೈಸಿಹ ಪೂರೈಸಿಹೆನೆಂದು
ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು
ನಾನಿತ್ತ ತಾನೆತ್ತ?
ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನ.

ವೇದಾಭ್ಯಾಸಗಳು ಋಕ್ಕುಗಳ ಅರ್ಥ ಹೀಗಿರಬಹುದೇ ಹಾಗಿರಬಹುದೇ ಎಂಬ ವಾದದಲ್ಲಿ ಸಿಕ್ಕಿ ಬಿಳುತ್ತಾರೆ. ಶಾಸ್ತ್ರಗಳಾದರೋ ಅವನ್ನು ಕೇಳುತ್ತ ಕೇಳುತ್ತ ಹೆಚ್ಚು ಹೆಚ್ಚು ಸಂದೇಹಕ್ಕೆ ಒಳಗಾಗಿಸುತ್ತವೆ. ಇವುಗಳ ಗೊಡವೆಯೇ ಬೇಡ, ಆಗಮಗಳಿಂದ ನಿಜದ ನೆಲೆಯನ್ನು ತಿಳಿಯೋಣ ಎಂದು ಹೊರಟರೆ ಅವು ‘ತಿಳಿದಿದ್ದೇವೆ, ತಿಳಿದಿದ್ದೇವೆ’ ಎನ್ನುತ್ತಾ ಅರೆಕೊರೆಯಾದ ತಿಳಿವನ್ನು ನೀಡುತ್ತದೆ. ಹೋಗಲಿ, ಇವುಗಳು ಮಾಡಲಾಗದ ಕೆಲಸವನ್ನು ತಾವು ಮಾಡಿ ಪೂರೈಸಿದ್ದೇನೆ ಎನ್ನುವ ಪುರಾಣಗಳೇ ಎಂದರೆ ಅವು ನಮ್ಮನ್ನು ಹಿಂದಿನ, ನಾವು ತಿರಸ್ಕರಿಸಿದ ದಾರಿಗೇ ಕರೆದುಕೊಂಡು ಹೋಗಿ ಅಲ್ಲಿ ನಮಮನ್ನು ಬಿಟ್ಟು ಬಿಡುತ್ತವೆ. ನಾವಲ್ಲ ಅವಲ್ಲ?

ಶಬ್ದ ಪ್ರಪಂಚ, ರೂಪ ಪ್ರಪಂಚಗಳನ್ನು ಅವಲಂಬಿಸಿದ ವೇದಾದಿಗಳು ಏಕವಾದಿ ತಪ್ಪಿಸುತ್ತವೆ ಎಂಬುದಕ್ಕೆ ನಿಚ್ಚಳವಾದ ಉತ್ತರವನ್ನು ಅಕ್ಕನವರು ಮೂರೇ ಮಾತುಗಳಲ್ಲಿ ತಿಳಿಸುತ್ತಾರೆ: “ಭೊಮ್ಮ ಬಟ್ಟ ಬಯಲು’, ಬ್ರಹ್ಮನಾಮ ರೂಪಗಳನ್ನು ಮಾತುವಾದಗಳನ್ನು ಮೀರಿದ’ ಬಟ್ಟ ಬಯಲು’ ಶಬ್ದವು ನಿಶ್ಯಬ್ಧವನ್ನು ವರ್ಣಿಸಿತು ಹೇಗೆ?

ಹಾಗಾದರೆ ಪರಬ್ರಹ್ಮವೆಂದೂ ನಿರ್ದೇಶಿತವಾಗಿರುವ ಪರಶಿವನನ್ನು ಅರಿಯುವ ಬಗೆ ಹೇಗೆ? ಅಕ್ಕ ಸುಲಭ ಎಂದು ತಮಗೆ ತೋರಿದ ದಾರಿಯನ್ನು ಅದರಲ್ಲಿ ನಡೆದು ತಾವು ಗುರಿಮುಟ್ಟಿದ ಬಗೆಯನ್ನು ಹೇಳುತ್ತಾರೆ, ಉಪನಿಷತ್ತುಗಳಲ್ಲಿ ಕಾಣುವ ಸೂತ್ರ ಶೈಲಿಯಲ್ಲಿ!

ಅತ್ತ ಅತ್ತ ಹರಿವ ಮನದ ಶಿರದನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ!

ಮನಸ್ಸು ತಾನೆ ವ್ಯಕ್ತಿಯ ಬಂಧಮೋಕ್ಷಗಳಿಗೆ ಕಾರಣವಾದದ್ದು, ಅದರ ಸ್ವರೂಪವೋ ಅತ್ತ ಇತ್ತ ಹರಿಯುವುದು. ಅದರ ತಲೆಯನ್ನು ಕತ್ತರಿಸಿಬಿಟ್ಟರೆ ಇನ್ನು ಅದಕ್ಕೆ ಚಲನೆಯೆಲ್ಲಿ? ಅದರ ಶಿರಸ್ಸನ್ನು ಕತ್ತರಿಸಿದ ಬಳಿಕ ಅಲ್ಲಿ ಉಳಿಯುವುದೇನು? ಬಚ್ಚಬರಿಯ ಬಯಲು. ಈ ಅಂತಿಮ ಸತ್ಯವನ್ನು ‘ನಿರ್ವಯಲು’ ‘ಶೂನ್ಯ’ ಎಂದೂ ಶರಣರು ಹೆಸರಿಸಿದ್ದಾರೆ ಎಂಬುದನ್ನು ನೆನೆಯಬಹುದು.

ಮನಸ್ಸಿನ ಶಿರವನ್ನು ಕತ್ತರಿಸುವ ಬೇರೊಂದು ವಿಧಾನವನ್ನು ಸೂಚಿಸಿದ್ದಾರೆ. ಅಕ್ಕ ಮತ್ತೊಂದು ವಚನದಲ್ಲಿ:

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
ಕರಣಂಗಳ ಚೇ.ಷೆಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಮನ ನಿಮ್ಮಲ್ಲಿ ಒಡವೆರೆದ ಬಳಿಕ
ಎನಗೆ ಭವ ಉಂಟೇ ಚೆನ್ನಮಲ್ಲಿಕಾರ್ಜುನ?

ಜಗತ್ತಿನ ಎಲ್ಲ ಚಟುವಟಿಕೆಗಳಿಗೂ ಸೂರ್ಯನೇ ಮೂಲದ್ರವ್ಯ. ಹಾಗೆಯೇ ಇಂದ್ರಿಯಗಳ ಎಲ್ಲ ಚಟುವಟಿಕೆಗಳಿಗೂ (ಚೇಷ್ಟೆ ಎಂಬುದನ್ನು ಇಲ್ಲಿ ರೂಢಿಯ ಅರ್ಥದಲ್ಲೂ ತೆಗೆದುಕೊಳ್ಳಬಹುದು!) ಕಾರಣವಾದದ್ದು, ಮೂಲದ್ರವ್ಯವಾದದ್ದು ಮನಸ್ಸು. ನನಗಿರುವುದು ಒಂದು ಮನಸ್ಸು ಅಷ್ಟೇ ನನ್ನದು. ಅದು ನಿಮ್ಮಲ್ಲಿ ಎಂದರೆ ಶಿವನಲ್ಲಿ ಕೂಡಿಕೊಂಡ ಮೇಲೆ ಇನ್ನು ನನಗೆ ಮರುಹುಟ್ಟು ಉಂಟೆ?- ಎಂದರೆ ನನಗೆ ಎಲ್ಲ ಬಂಧನಗಳಿಂದಲೂ ಬಿಡುಗಡೆಯಾದಂತೆಯೇ.

ಮಹಾದೇವಿಯಕ್ಕ ಮಾಯೆಯ ಸ್ವರೂಪವನ್ನು ವರ್ಣಿಸುವಾಗಲೂ ಅವರ ಮತಿ ಎಷ್ಟು ಪ್ರಖರವಾದುದು ಎಂಬುದು ಸ್ಪಷ್ಟವಾಗುತ್ತದೆ. ಮಾಯೆ ಮಾನವನನ್ನು ಕಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ದೇಹ ಮನಸ್ಸುಗಳ ಅಂಗುಲ ಅಂಗುಲಗಳನ್ನೂ ಅದು ವಿವಿಧ ರೀತಿಯಲ್ಲಿ ಕಾಡುತ್ತದೆ ಎಂಬುದನ್ನು “ಕಾರ್ಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ ಎಂದು ಆರಂಭವಾಗುವ ವಚನದಲ್ಲಿ ಆಕೆ ವಿಶ್ಲೇಷಿಸಿದ್ದಾರೆ. ದೇಹಕ್ಕೆ ಮಾಯೆ ನೆಳಲಾಗಿ ಕಾಡುತ್ತದೆ; ಮನಸ್ಸಿಗೆ ನೆನಪಾಗಿ ಕಾಡುತ್ತದೆ. ನೆನಪಿಗೆ ತಿಳಿವಳಿಕೆಯಾಗಿ ಕಾಡುತ್ತದೆ; ತಿಳಿವಳಿಕೆಯನ್ನು ಅದು ಮರವೆಯಾಗಿ ಕಾಡುತ್ತದೆ. ಜಗತ್ತೆಂಬ ದನದ ಮಂದೆಗೆ ಬಾರುಕೋಲಾಗಿ ಮಾಯಾ ಕಾಡುತ್ತದೆ. ಹೀಗೆ ಹೇಳಿ ಮಹಾದೇವಿಯಕ್ಕ ಈ ವಚನವನ್ನು ಮುಕ್ತಾಯಗೊಳಿಸುವುದು ಈ ಮಾತುಗಳಿಂದ : “ಚೆನ್ನಮಲ್ಲಿಕಾರ್ಜುನಾ, ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು.” ಹೌದು, ಮಾಯೆಯನ್ನು ಗೆಲ್ಲುವವರು ಯಾರು? ಗೆದ್ದೆವೆಂಬ ಸನ್ಯಾಸಿಗಳನ್ನು ಅಥವಾ ಗೆಲ್ಲಲು ಪ್ರಯತ್ನಿಸುತ್ತಿರುವ ಸಾಧಕರನ್ನು ಅದು ವಿಚಿತ್ರವಾದ ಒಂದು ಆಯುಧದಿಂದ ಗೆಲ್ಲುತ್ತದೆ- ಹೊಗಳಿಕೆಯೆಂಬ ಆಯುಧ ಅದು!- ಯತಿಗೆ ಪರಾರಿಯಾಗಿತ್ತು ಮಾಯೆ!

ಜ್ಞಾನಿಯಂತೆ ನಮ್ಮನ್ನು ತನ್ನ ಅನುಭಾವದ ಮಾತುಗಳಿಂದ ಆವರಿಸುವ ಮತ್ತೊಬ್ಬ ಮಾನ್ಯೇ ಮುಕ್ತಾಯಕ್ಕ. (ಶಿವ) ಯೋಗದಲ್ಲಿ ಸಿದ್ಧಿಯನ್ನು ಪಡೆದುಕೊಂಡಿದ್ದು. ಈಗ ತೀರಿಕೊಂಡಿರುವ ಅಣ್ಣ ಅಜಗಣ್ಣನಿಗಾಗಿ ಜ್ಞಾನದ ನಿಲುವಿನಲ್ಲೂ ಪರಿತಪಿಸುತ್ತಿರುವ ಮಹಿಳೆ ಆಕೆ. ಅವರ ಮಾತುಗಳು ಅನುಭಾವ ಸ್ಫೂರ್ತವಾದ ಉಪಮೆ, ರೂಪಕಗಳಿಂದ ತುಂಬಿ ತುಳುಕುತ್ತಿರುವ ವಚನ ಸಾಹಿತ್ಯರಾಶಿಯಲ್ಲೂ ತುಂಬ ಅಪರೂಪವಾದಂಥವು ಈ ಒಂದು ವಚನವನ್ನು ಗಮನಿಸಬಹುದು:

ಅಂಬರದೊಳಾಡುವ ತುಂಬಿಯ ಬಿಂಬದ ಕಂಬನಿಯೊಳಗಣ ರತ್ನದ
ಬಯಕೆರೊದ್ಯಾಂತವನೇನಂಜನಯ್ಯಾ?
ವೇದ ಶಾಸ್ತ್ರ ಶ್ತ್ರುತಿ ಸ್ಮೃತಿಗಳು ಸ್ತುತಿಸಲರಿಯವು.
ನಾದನಲ್ಲ, ಸುನಾದದ ನಿಲನಲ್ಲ;
ಭೇದಿಸುವೊಡೆ ಅಗಮ್ಯನೋಡಾ!
ಸೊಲ್ಲಿಲ್ಲದ ಸೊಮ್ಮಿಲ್ಲದ ಪ್ರನವನೇನೆಂಬೆನು?
ಎಂತು ಮರೆನೆನಯ್ಯಾ ಎನ್ನ ಅಜಗಣ್ಣ ತಂದೆಯನು?

ಈ ವಚನ ಸಂಪೂರ್ಣವಾಗಿ ಅರ್ಥವಾಗುತ್ತದೆ ಎಂದೇನೂ ಅಲ್ಲ. ಅದರ ಮೊದಲ ವಾಕ್ಯವೇ ಅರ್ಥವೇ ಅಸ್ಪಷ್ಟವಾಗಿದೆ. ಆದರೂ ಅದು ಸುಂದರವಾಗಿದೆ. ಅಸ್ಪಷ್ಟ ಸುಂದರ ಎಂದು ಅದನ್ನು ಕರೆಯೋಣ! ಆಕಾಶದಲ್ಲಿ ಆಡುವ ತುಂಬಿಯ ಬಿಂಬದ ಕಂಪನಿ, ಅದರಲ್ಲಿರುವ ರತ್ನ ಅದರ ಬಯಕೆ-ಅದರ ಮೊದಲು ಕೊನೆಗಳನ್ನು ಏನೆಂದು ವರ್ಣಿಸೋಣ- ಎಂಬುದು ಮುಕ್ತಾಯಕ್ಕನ ಹೇಳಿಕೆ. ಸಾಮಾನ್ಯವಾಗಿ ಕೈಗೆಟುಕಲಾರಂದಂತಹುದು, ಅನುಭವಕ್ಕೆ ಒಳಗು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ್ದು ಎಂಬುದು ನಿರ್ದೇಶಿತ ಅರ್ಥ. ಅದು ನಾದವು ಅಲ್ಲ, ಸುನಾದದ ನಿಲವೂ ಅಲ್ಲ. ಭೇದಿಸಿ ನೋಡೋಣವೆಂದರೆ ನಾವು ಸೇರಲು ಅಸಾಧ್ಯವಾದದ್ದು, ಶಬ್ದವಿಲ್ಲ, ಸೊಮ್ಮೂ ಇಲ್ಲ, ಸೊಮ್ಮು ಎಂಬುದಕ್ಕೆ ಇರುವ ಅನೇಕ ಅರ್ಥಗಳಲ್ಲಿ ನಂಟು, ಬಾಂಧವ್ಯ ಎಂಬುದನ್ನು ಒಪ್ಪಿಕೊಂಡರೆ ಅನ್ವಯ ಸುಲಭವಾದೀತು. ಸೊಲ್ಲು ಸೊಮ್ಮುಗಳಿಲ್ಲದ ಪುನ ಎಂದರೆ ಪರವಸ್ತು ಅದರ ಸ್ವರೂಪವನ್ನು ವೇದಾದಿಗಳಿಂದ ತಿಳಿಯೋಣವೆಂದರೆ ‘ವೇದಶಾಸ್ತ್ರ ಶ್ರುತಿ ಸ್ಮೃತಿ ಇವು ಆ ವಸ್ತುವನ್ನು ಸ್ತುತಿಸಲು ಅಸಮರ್ಥವಾಗಿವೆ. ಹೀಗೆ ಹೇಳಿ ಮುಂದಿನ ವಾಕ್ಯದಲ್ಲಿ ‘ಎಂತು ಮರೆತೆನಯ್ಯಾ ಎನ್ನ ಅಜಗಣ್ಣ ತಂದೆಯನು?’ ಎನ್ನುತ್ತಾರೆ ಮುಕ್ತಾಯಕ್ಕ ಅಜಗಣ್ಣ ತಂದೆಯೇ ಆ ಬ್ರಹ್ಮಸ್ವರೂಪವೇ? ಅಥವಾ ಅಂಥದನ್ನು ಅರಿತಿದ್ದವರು ಅಜಗಣ್ಣ ಎಂದೆ?- ಹೀಗೂ ಆಗಲಿ, ಈ ವಚನ ಸೃಷ್ಟಿಸಿರುವ ಧ್ವನಿ ಪ್ರಪಂಚವಂತೂ ಅದ್ಭುತವಾದದ್ದು ಎಂದು ತೋರುತ್ತದೆ.

ಇನ್ನೊಂದು ವಚನದ ಮೊದಲ ವಾಕ್ಯವಂತೂ ಎಂತಹ ಪ್ರಖರ ಮತಿ ಮುಕ್ತಾಯಕ್ಕನದು ಎಂಬುದನ್ನು ಸಾರಿ ಹೇಳುತ್ತಿದೆ: “ಅರಿವನಣಲೊಳಗಿಕ್ಕಿ ಆಗಿವುತ್ತಿದೆ ಮರ್ತ್ಯಲೋಕವೆಲ್ಲವು!” ಎಲ್ಲ ಸಾಧನಗಳ ಅಂತಿಮ ಫಲ ಜ್ಞಾನ ಪ್ರಾಪ್ತಿ ತಾನೆ? ಅಂತಹ ಜ್ಞಾನವನ್ನೇ ಈ ಲೋಕದ ಎಲ್ಲ ಜನರೂ, ಗಂಟಲಲ್ಲಿಟ್ಟುಕೊಂಡು ಅಗಿಯುತ್ತಿದ್ದಾರಂತೆ! ಹೀಗೆ ಜನ ಅದನ್ನು ಅಗಿಯುತ್ತಿರುವುದರಿಂದ ಅದು ಉಳಿಯಲಾರದೆ ಹೋಯಿತು. ಪರಿಣಾಮ? ಲೋಕವಲ್ಲ ಕೆಟ್ಟುಹೋಯಿತು! ಹೀಗಿರುವಾಗ ನಾನೊಬ್ಬಳು ಬದುಕುವುದು ಹೇಗೆ? ಇದು ಕತ್ತಲೆಯೋ ಬೆಳಕೋ ಎಂಬುದನ್ನು ಕಾಣಲಾರದ ಸಂದೇಹಿ ನಾನು ಎನ್ನುತ್ತಾರೆ ಮುಕ್ತಾಯಕ್ಕ ಇದು ಹೇಗಾಯಿತೆಂದರೆ –ಅಜಗಣ್ಣನ ಯೋಗವು ಈಕೆಯ ಕಣ್ಣನ್ನು ಕಟ್ಟಿ ಕನ್ನಡಿಯನ್ನು ತೋರಿಸಿದಂತೆ!

ಈ ಎರಡೂ ವಚನಗಳು ಅಂತಿಮವಾಗಿ ನಮಗೆ ಪೂರ್ಣವಾಗಿ ಅರ್ಥವಾಗುತ್ತದೆ. ಎಂದಲ್ಲವಾದರೂ ಅವುಗಳ ಧ್ವನಿ ನಿಮ್ಮ ವ್ಯಕ್ತಿತ್ವದ ಆಳಕ್ಕಿಳಿಯುತ್ತವೆ, ನಮಗೆ ಹೊಸ ಲೋಕವೊಂದರ ಪರಿಚಯ ಮಾಡಿಕೊಡುತ್ತದೆ.

ಅದ್ವೈತಾನುಭೂತಿಯ ಸ್ವರೂಪವನ್ನು ವರ್ಣಿಸುವ ಒಂದು ವಚನವಂತೂ ಈ ಮಹಾಮಹಿಮಳು ಏರಿದ್ದ ಆಧ್ಯಾತ್ಮಿಕ ಉನ್ನತಿಯನ್ನು ನಮಗೆ ಆತ್ಮೀಯವಾದ ರೀತಿಯಲ್ಲಿ ಪರಿಚಯಿಸುತ್ತದೆ:

ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು
ಶಿಶುಕಂಡ ಕನಸಿನಂತಿರಬೇಕಲ್ಲದೆ,
ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳ್ಯಾ?
ಅರಿವರತು ಮರಹು ನಷ್ಟವಾಗಿ ಗುರುವ ತೋರಿದೆನೆಂಬರು.
ಇದರಿಂಗೆ ಕರುಳ ಕಲೆಯವರುಹುವ ಪರಿಯೆಂತು ಹೇಳು?
ಮನದ ಕೊನೆಯ ಮೊನೆಯ ಮೇಲಣ ಅರಿವಿನ ಕಣ್ಣಮುಂದೆ
ಸ್ವಯಂಪ್ರಕಾಶ ತೋರುತ್ತಿದ್ದಡೆ ತಾನಾಗ ಬಲ್ಲನೆ?
ನೆರೆಯರಿತು ಮರೆಯಬಲ್ಲಡೆ
ಎನ್ನ ಅಜಗಣ್ಣನಂತೆ ಶಬ್ದಮುಗ್ಧನಾಗಿರಬೇಕಲ್ಲದೆ,
ಶಬ್ದ ಸಂದಣಿಯ ಮಾತು ನಯವಲ್ಲನೋಡಯ್ಯಾ!

ಮಗು ಒಂದು ಕನಸು ಕಾಣುತ್ತದೆ. ಅದನ್ನು ಅಲ್ಲಿ ನಡೆಯುವ ಕ್ರಿಯೆಗಳನ್ನು ಅಲ್ಲಿ ತಾನು ಕಂಡದ್ದಲ್ಲವನ್ನು ಆ ಮಗು ಒಂದು ವ್ಯವಸ್ಥಿತವಾದ ರೀತಿಯಲ್ಲಿ ನಿರೂಪಿಸುವ ಸಾಧ್ಯತೆ ಇದೆಯೆ? ಅದ್ವೈತಾನುಭೂತಿ ಎನ್ನುವುದು ಹಾಗೆ. ಅದು ಅನುಭವ ವೇದ್ಯವೇ ಹೊರತು ವಿವರಣಾ ಸಾಧ್ಯವಲ್ಲ. ಮುಂದೆ ಕೆಲವು ಶತಮಾನಗಳ ಅನಂತರ ಬಂದ ಸರ್ವಜ್ಞ ಈ ವಿಷಯ ಕುರಿತು ಸೊಗಸಾದ ಒಂದು ಮಾತು ಹೇಳಿದ : ಬೊಮ್ಮವನ ಅರಿದಿಹರ ಸುಮ್ಮನಿದ್ದರಿಬೇಕು; ಬೊಮ್ಮವನು ಅರಿದು ಉಸಿರಿದರೆ ಕಳಹೋಗಿ ಕೆಮ್ಮಿದಂತಕ್ಕು ಶಾಸ್ತ್ರಗಳಲ್ಲಿ ಇದನ್ನು ‘ಮೂಕಾಸ್ವಾದನವರ್‌’ ಮೂಕನಾದವನು ಏನನ್ನಾದರೂ ಸವಿದಂತೆ ಎಂದು ಹೇಳಲಾಗಿದೆ. ಮೂಕ ಸವಿದಿರುವುದು ಹೌದು, ಆದರೆ ಅದನ್ನು ಹೇಳಬಲ್ಲ ಹೇಗೆ? ಆದ್ದರಿಂದಲೇ ಅನುಭಾವಿಯಾದ ಮುಕ್ತಾಯಕ್ಕ ಹೇಳುತ್ತಾರೆ. ಅದ್ವೈತವನ್ನು ನೆಲೆಗೊಳಿಸಿಕೊಂಡವರು, ದ್ವೈತ ಎಂಬುದನ್ನು ಕಳೆದುಕೊಂಡಿದ್ದೇನೆ ಎನ್ನುವವರು ಮಗು ಕನಸು ಕಂಡ ಬಳಿಕ ಹೇಗಿರುತ್ತದೆಯೇ ಹಾಗಿರಬೇಕು. ಆ ಅನುಭವವನ್ನು ನುಡಿದು ಹೇಳಿದರೆ ಮತ್ತೆ ದ್ವೈತವಾಯಿತೇ ಹೊರತು ಅದ್ವೈತವಾಗಿ ಉಳಿಯುವುದು ಹೇಗೆ? ಮುಂದಿನ ಮಾತು ತುಂಬ ಗಹನವಾದದ್ದು. ಜ್ಞಾನವನ್ನು ಪಡೆದು, ತನ್ನ ಸ್ವಸ್ವರೂಪವನ್ನು ಇಡುವವರೂ ಮರೆತಿದ್ದುದು ಎಂಬುದು ಕಳೆದುಹೋಗಿ, ಗುರುವನ್ನು ತೋರಿಸಿದ್ದೇವೆ ಎನ್ನುವವರು, ತಮ್ಮ ಕರುಳಿನ ಕಲೆಯನ್ನು-ಕರುಳಿನ ಕರೆ ಎನ್ನುವ ಅಪರೂಪ ಅಭಿವ್ಯಕ್ತಿಯ ವೈಶಿಷ್ಟ್ಯವನ್ನು ಗಮನಸಿಬೇಕು-ಎಂದರೆ ಅಂತರಂಗದ ಅನುಭೂತಿಯ ಕಲೆಯನ್ನು ಹೇಳುವ ರೀತಿಯಾದರು ಎಲ್ಲಿದೆ?

ಗಹಗಹಿಸಿ ಗಹನಕ್ಕೆ ಸಾಗುತ್ತಿರುವ ಅವ್ಯಕ್ತವನ್ನು ವ್ಯಕ್ತಗೊಳಿಸುವ ಸಾಹಸಯಾತ್ರೆಯಲ್ಲಿ ಮುಕ್ತಾಯಕ್ಕ ಇನ್ನು ಒಂದು ಸೊಗಸಾದ ಚಿತ್ರವನ್ನು ರಚಿಸಿದ್ದಾರೆ! ಮನಸ್ಸಿನ ತುದಿಯ ಮೊನೆಯ ಮೇಲೆ ಅರಿವು ಎಂಬುದು ಸ್ತಾಪಿತವಾಗಿದೆ ಎಂಬುದನ್ನು ಊಹಿಸಿಕೊಳ್ಳಬಲ್ಲೆವಾದರೆ ಅದು ಆ ಅರಿವು ಸ್ವಯಂ ಪ್ರಕಾಶವಾದ ಪರವಸ್ತುವನ್ನು ಕಾಣುತ್ತಿದೆ. ಹಾಗೆ ಅದು ಕಂಡರೆ ಅನುಭಾವಿ ತಾನೇ ಅದಾಗಬಲ್ಲನೆ? – – ಎಂದರೆ ಆ ದೃಶ್ಯ-ದೃಕ್‌ನಿರಪೇಕ್ಷವಾದದ್ದು – ಅಥವಾ ನೋಡುವವನನ್ನು ಇಲ್ಲಗೈಯುವಂಥದು. ಅರಿತಪ್ಪದ ಲಕ್ಷಣ-ಅದ್ವೈತ ಪ್ರಪಂಚದಲ್ಲಿ-ತಾನು ಅರಿತೆ ಎನ್ನುವುದನ್ನು ಮರೆತೇ ಬಿಡುವುದು. ಹಾಗೆ ಮರೆತವನು ತನ್ನ ಅಜಗಣ್ಣನ ಹಾಗೆ ಶಬ್ದಮುಗ್ಧನಾಗಿರಬೇಕಲ್ಲದೆ. ಶಬ್ದಗಳ ಸಂತೆಯಲ್ಲಿ ಸಿಕ್ಕಿಕೊಂಡರೆ ಹೇಗೆ? ಇಲ್ಲೂ ಮುಕ್ತಾಯಕ್ಕ ಬಳಸಿರುವ ಶಬ್ದಮುಗ್ಧ ಮತ್ತು ಶಬ್ದ ಸಂದಣಿ ಎಂಬ ಮಾತುಗಳು ಗಮನಾರ್ಹವಾಗಿದೆ.

ಇನ್ನೊಂದು ವಚನದಲ್ಲಿ ಮುಕ್ತಾಯಿಯವರು ಇದ್ದೂ ಇಲ್ಲದಂತಿರುವ ತಮ್ಮ ಸ್ವರೂಪವನ್ನು ವಾಸ್ತವವಾಗಿ ತಾವು ಆತ್ಮವೇ ಆಗಿಹೋಗಿರುವ ಪರಿಯನ್ನು ಬಣ್ಣಿಸಿದ್ದಾರೆ :

ಆರೆಂದು ಬೆಸಗೊಳಲು, ಏನೆಂದು ಹೇಳುವೆನಯ್ಯಾ?
ಕಾಯದೊಳಗೆ ಮಾಯವಿಲ್ಲ:
ಭಾವದೊಳಗೆ ಭ್ರಮೆಯಿಲ್ಲ
ಕರೆದು ಬೆಸಗೊಂಬಡೆ ಕುರುಹಿಲ್ಲ.
ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು
ನಿರ್ಬುದ್ಧಿಯಾದವಳೇನೆಂಬೆನಣ್ಣಾ?
ತಲೆಯುಳಿದು ನೆಲೆಗಟ್ಟು ಬೆಳೆಸುವ ಜ್ಯೋತಿ
ಎನ್ನ ಅಜಗಣ್ಣ ತಂದೆಯ ಬೆನ್ನ ಬಳಿಯವಳಾನಯ್ಯಾ!

ನೀವು ಯಾರು? ಎಂದು ಯಾರೋ ಕೇಳಿದ್ದಾರೆ. ಈಕೆ ಮರು ಪ್ರಶ್ನೆ ಕೇಳಿ ನಾನು ಯಾರು ಎಂದರೆ ಏನು ತಾನೇ ಹೇಳಲಿ ಎನ್ನುತ್ತಾರೆ. ನನ್ನ ದೇಹದ ವಿಷಯ ಕೇಳುತ್ತೀರಾ? –ಅದರ ವಿಷಯ ಏನೂ ಹೇಳಲಾರೆ, ಏಕೆಂದರೆ ಅದರಲ್ಲಿ ಮಾಯೆ ಇಲ್ಲ. ಭಾವವೋ?- ಅದರಲ್ಲಿ ಭ್ರಮೆ ಇಲ್ಲ. ಹೋಗಲಿ ಹೆಸರು ಹೇಳಿ ನನ್ನನ್ನು ಕರೆಯೋಣ ಎಂದರೆ ನನಗೆ ಪ್ರತ್ಯೇಕತೆಯನ್ನು ನೀಡಿರುವೆ ಯಾವ ಗುರುತು ಇಲ್ಲ. ಹೋಗಲಿ ತಂದೆ ತಾಯಿಗಳ ಹೆಸರನ್ನಾದರೂ ಹೇಳು ಎಂದರೆ ನಾನು ಹಾಗೆ ಯೋನಿಯಿಂದ ಬಂದವಳ್ಳ. ಅಯೋನಿಜೆ… ಬುದ್ಧಿಯೆಂಬುದೂ ಇಲ್ಲ-ನಿರ್ಬುದ್ಧಿಯಾಗಿದ್ದೇನೆ! ಇಷ್ಟೆಲ್ಲ ಆದರೂ-ನಾಮವಿಲ್ಲ, ಬುದ್ಧಿಯಿಲ್ಲ, ಮಾತಾಪಿತೃಗಳ ಸಂಬಂಧವಿಲ್ಲ- ಆದರೆ ಒಂದು ಸಂಬಂಧವನ್ನು ಮಾತ್ರ ಹೇಳುತ್ತಾಳೆ. ನಾನು ಅಜಗಣ್ಣ ತಂದೆಯ ಬೆನ್ನ ಹಿಂದೆ ಹುಟ್ಟಿದ ತಂಗಿ! ಇದು ಕೂಡ ಲೌಕಿಕ ಸಂಬಂಧವನ್ನು ಎರಡು ಆತ್ಮಗಳ ಸಂಬಂಧ ಇಬ್ಬರು ಅನುಭಾವಿಗಳ ಸಂಬಂಧ!

ಇಷ್ಟೆಲ್ಲ ಆಯಿತು, ನಿನಗೆ ಗುರು ಯಾರು ಎಂದು ಕೇಳಿದರೆ ಅದಕ್ಕೆ ಅತ್ಯಂತ ಸಮಂಜಸವಾದ ಉತ್ತರ ಉಂಟು ಮುಕ್ತಾಯಕ್ಕನವರ ಹತ್ತಿರ! ತನ್ನ ತಾನರಿದವಂಗೆ ಅರಿವೆ ಗುರು!

ಅಪರೂಪ ಕಲ್ಪನೆಗಳನ್ನೊಳಗೊಂಡ ಮತ್ತೊಂದು ವಚನವನ್ನು ಹೇಳಿದ್ದಾರೆ ಮುಕ್ತಾಯಕ್ಕ.

ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ
ಬಯಲ ಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ.
ಕರ್ಪುರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ,
ಅಗ್ನಿಕರಗಿ ಕರ್ಪುರ ಉಳಿದುದಕ್ಕೆ ಬೆರಗಾದೆನಯ್ಯಾ
ಎನ್ನ ಅಜಗಣ್ಣನ ಯೋಗಕ್ಕೆ

ಇದು ಬೆಡಗಿನ ವಚನ ಅಲ್ಲ. ಶ್ರೀರಾಮಕೃಷ್ಣ ಪರಮಹಂಸರ ಒಂದು ದೃಷ್ಟಾಂತ ಕಥೆ ಈ ವಚನದ ಭಾವವನ್ನು ಸ್ಪಷ್ಟಪಡಿಸಲು ನೆರವಾಗಬಹುದು. ಒಂದು ಉಪ್ಪಿನಗೊಂಬೆ ಕೈಯಲ್ಲಿ ಗಜಕಡ್ಡಿ ಹಿಡಿದು ಸಮುದ್ರದ ಆಳವನ್ನು ಅಳೆಯಲು ಹೋಯಿತಂತೆ. ಇನ್ನು ಅದು ಹೊರಬಂದು ಸಮುದ್ರದ ಆಳವನ್ನು ತಿಳಿಸಲು ಅದು ಉಳಿದಿರಬೇಕಷ್ಟೆ! ಅದ್ವೈತಾನುಭೂತಿಯನ್ನು ಮಾತುಗಳಲ್ಲಿ ಹೇಳುವುದು ಎಷ್ಟು ಕಷ್ಟ ಎಂಬುದನ್ನು ತಿಳಿಸಲು ಪರಮಹಂಸರು ಮೇಲಿನ ಕಥೆಯನ್ನು ಹೇಳಿದ್ದಾರೆ. ಮುಕ್ತಾಯಕ್ಕನವರು ಅಂತಹ ರೂಪಕಗಳನ್ನೇ ನೀಡಿದ್ದಾರೆ.

ನೀರಿನಿಂದ ಮಾಡಿದ ಬೊಂಬೆ, ಅದಕ್ಕೆ ನಿರಾಳದ ಗೆಜ್ಜೆ ಅದನ್ನ ಮುದ್ದಾಡಿಸುತ್ತಿರುವುದು ಬಯಲ ಬೊಂಬೆ! ಹಾಗೆಯೇ ಅಗ್ನಿಯ ಸಿಂಹಾಸನ ಅದರ ಮೇಲೆ ಕೂರಿಸಿರುವುದು ಕರ್ಪೂರದ ಗೊಂಬೆ! ಉರಿದುಕರಗಿದ್ದು ಕರ್ಪೂರವಲ್ಲ, ಬೊಂಬೆ! ಈ ಅಸಾಧ್ಯಗಳಲ್ಲಿ ಸಾಧ್ಯವಾದದ್ದು ಇವು ಯಂತ್ರಮಂತ್ರ ಯಕ್ಷಿಣಿ ಪವಾಡಗಳಲ್ಲ – – ಅದ್ವೈತಾನುಭೂತಿಗೆ ತಾಯಿ ಮುಕ್ತಾಯ ನೀಡಿದ ರೂಪಕಗಳು, ಆಕೆ ನಿರ್ವಯಲಿನಿಂದ ರೂಪಿಸಿದ ಬಯಲುಗಳು ಅಣ್ಣ ಅಜಗಣ್ಣನ ಯೋಗದಿಂದ. ಅದನ್ನು ಅಂತರಂಗದ ಕಣ್ಣುಗಳಿಂದ ಕಂಡ ಭಾಗ್ಯಶಾಲಿ ಮುಕ್ತಾಯಕ್ಕ. ನೋಡಲು ಸಾಧ್ಯವಾದದ್ದು ಹೇಗೆ ಎಂದರೆ-ಆಕೆಯೂ ಅಂಥದೇ ಯೋಗದಲ್ಲಿ ನೆಲೆನಿಂತವಳಾದ್ದರಿಂದ!

ನಮ್ಮಂತಹ ಅಯೋಗದೃಷ್ಟಿಯವರನ್ನು ಆಶ್ಚರ್ಯಮೂಕರನ್ನಾಗಿ ಮಾಡಿರುವ ಸಂಗತಿಯೆಂದರೆ ಕೆಲವೇ ವರ್ಷಳ ಒಂದು ಕಿರು ಅವಧಿಯಲ್ಲಿ ಇಂತಹ ಪ್ರತಿಭಾಶಾಲಿಗಳು ಸ್ತ್ರೀಯರಿಗೆ ವಿದ್ಯಾಭ್ಯಾಸ ಇರದಿದ್ದ ಕಾಲದಲ್ಲಿ-ಹಾಗೆ ಮೂಡಿಬಂದರು ಎಂಬುದು. ಈ ವಿಷಯದಲ್ಲಿ ನಾವು ಶಬ್ದಮುಗ್ಧರಷ್ಟೇ ಅಲ್ಲ, ವಿಚಾರ ಮುಗ್ಧರು!