ಬರೆಯಲು ಅಥವಾ ಮಾತನಾಡಲು ಕಷ್ಟವಾದ ವಿಷಯ ಇದು. ಕಾರಣ ಅದರ ಸ್ವರೂಪ ಅಮೂರ್ತವಾಗಿರುವುದು ಮಾತ್ರವಲ್ಲ. ಬರೆಯುವವರಲ್ಲಿ ಬಹಳ ಮಂದಿ ತಾವು ಉದ್ದಾಮ ಸಾಹಿತಿಗಳೆಂದೋ, ಉದ್ದಾಮ ವಿಮರ್ಶಕರೆಂದೋ ಅಥವಾ ಎರಡೂ ಆಗಿದ್ದೇವೆಂದೇ ಭಾವಿಸಿದ್ದಾರೆ. ವಸ್ತುಸ್ಥಿತಿ ಹಾಗಿಲ್ಲ ಎಂದಕೂಡಲೇ ಅವರಲ್ಲಿ ಅದು ಅಸಮಾಧಾನವನ್ನು ಮೂಡಿಸುತ್ತದೆ. ಅನೇಕರಲ್ಲಿ ಅದು ಸರ್ಪಮತ್ಸರವಾಗಿ ಪರಿಣಮಿಸುತ್ತದೆ. ಇಷ್ಟವಿರಲಿ ಇಲ್ಲದಿರಲಿ ನಾವೆಲ್ಲ ಕೂಡಿ ಬಾಳಿ ಬದುಕಬೇಕಾದ ಪರಿಸ್ಥಿತಿ ಇದೆ. ಆದರೆ ನಮಗೆ ಅನಿಸಿದ್ದನ್ನು ಆಡಿದಾಗ ವಾತಾವರಣ ಕದಡುತ್ತದೆ. ಬಾಂಧವ್ಯ ಕಡಿದು ಹೋಗುತ್ತದೆ. ನಮ್ಮ ಬರವಣಿಗೆಯ ಬಗ್ಗೆ ಇತರರು ತಾಳುವ ಅಭಿಪ್ರಾಯಕ್ಕೂ ನಮ್ಮ ಅವರ ನಡುವಣ ಬಾಂಧವ್ಯದ ಮಧುರತೆಗೂ ಸಂಬಂಧ ಕಲ್ಪಿಸಕೂಡದು ಎಂಬ ವಿವೇಕ ನಮ್ಮಲ್ಲಿ ಮೂಡಿಲ್ಲ. ಆದ್ದರಿಂದ ನಮ್ಮ ವಿಮರ್ಶಕರಲ್ಲಿ ಪ್ರಾಮಾಣಿಕತೆ ಬೆಳೆಯುವುದು ಸಾಧ್ಯವಾಗಿಲ್ಲ. ಒಬ್ಬನೇ ವ್ಯಕ್ತಿ ಒಬ್ಬ ಸಾಹಿತಿಯನ್ನು ಕುರಿತು ಒಂದೊಂದು ಕಡೆ ಒಂದೊಂದು ಮಾತನ್ನು ಹೇಳಿರುವುದು ನನ್ನ ಅನುಭವಕ್ಕೆ ಬಂದಿದೆ. ನಾನೇನೋ ಇಲ್ಲಿ ನನಗೆ ಅನಿಸಿದ್ದನ್ನು ಹೇಳಿ ಬಿಡುತ್ತೇನೆ. ಸಾಹಿತಿಗಳೂ ವಿಮರ್ಶಕರೂ ಇದರಿಂದ ನನ್ನ ವಿಷಯಕ್ಕೆ ಹಗೆತನ ಸಾಧಿಸುವುದು ಬೇಡ. ಅನೇಕ ಬರಹಗಾರರ ಬರಹದ ಬಗ್ಗೆ ನನಗೆ ಗೌರವವಿರಬಹುದು, ಅವರ ವ್ಯಕ್ತಿತ್ವದ ಬಗ್ಗೆ ಗೌರವವಿರಬಹುದು, ಆದರೆ ಬರಹದ ಬಗ್ಗೆ ಗೌರವ ಇಲ್ಲದಿರಬಹುದು. ಇದನ್ನು ಸ್ಪಷ್ಟಪಡಿಸುತ್ತಿರುವುದನ್ನು ಕಾರಣ ನಮ್ಮ ವ್ಯಕ್ತಿತ್ವವನ್ನೂ ಬರಹವನ್ನೂ ಬೆರೆಸಬಾರದು ಎಂದು ಕೇಳಿಕೊಳ್ಳುವುದು.

ಇನ್ನೊಂದು ತೊಂದರೆ ಉಂಟು. ಸಾಹಿತ್ಯದಲ್ಲಿ ಯಾವುದೇ ತಾರೀಖೂ- ಅದು ೧೯೪೭ ಏ ಆದರೂ – – – ಲಕ್ಷ್ಮಣರೇಖೆಯಾಗಲಾರದು, ಬಹುಮಾನಗಳನ್ನು ನಿರ್ಧರಿಸುವಾಗ ವಿನಾಕಾರಣ ಎಲ್ಲರಿಗೂತಿಳಿದಿದ್ದೇ. ಒಂದು ಕೃತಿ ೧೯೪೭ರಲ್ಲಿ ಪ್ರಕಟವಾದರೂ ಅದಕ್ಕೆ ಕೃಷಿ ಆ ಇಸವಿಗೆ ಹಿಂದೆಯೇ ನಡೆದಿರುತ್ತದೆ. ಉದಾಹರಣೆಗೆ ಶ್ರೀರಾಮಾಯಣದರ್ಶನಂ ಮಹಾಕಾವ್ಯ. ಅದರ ಮೊದಲ ಸಂಪುಟ ೧೯೪೭ರಲ್ಲಿ ಪ್ರಕಟವಾದರೂ ಅದರ ರಚನೆ, ಮುದ್ರಣ ಮುಂತಾದವು ಅದಕ್ಕೆ ಹಿಂದೆಯೇ ಆದುವು. ಹೀಗಾಗಿ ಆ ಕೃತಿಯನ್ನು ಸ್ವಾತಂತ್ರ್ಯಪೂರ್ವಕ್ಕೆ ಸೇರಿಸುವುದೇ, ಅನಂತರಕ್ಕೇ? ನಾನೇನೋ ಈ ವಿಭಜನೆಯನ್ನು ಅಷ್ಟು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ. ಆ ಅವಧಿಯ ಕೃತಿಗಳ ವಿಷಯದಲ್ಲಿ ಅದನ್ನು ಅಷ್ಟು ಕಟ್ಟುನಿಟ್ಟಾಗಿ ಪಾಲಿಸುವುದು ಇತರರಿಗೂ ತುಂಬ ಕಷ್ಟವಾಗುತ್ತದೆ ಎಂದು ಭಾವಿಸಿದ್ದೇನೆ.

ನಾನು ಅನುಸರಿಸಲು ಪ್ರಯತ್ನಿಸುವ ಒಂದು ನಿಯಮ ಇದು: ಸಾಧ್ಯವಾದಷ್ಟೂ ಸಾಹಿತಿಗಳ ಹೆಸರುಗಳನ್ನು ಹೇಳಲು ಹೋಗದೆ ಸಾಹಿತ್ಯ-ವಿಮರ್ಶೆಗಳ ಪ್ರವೃತ್ತಿಗಳನ್ನು ಹೇಳುತ್ತೇನೆ ಅದರಿಂದ ಪ್ರಯೋಜನ ಹೆಚ್ಚು ಎಂಬುದು ನನ್ನ ಭಾವನೆ.

ನವೋದಯ ಸಾಹಿತ್ಯದ ಬಹುಪಾಲು ಕನ್ನಡ ಕವಿಗಳಿಂದ ಕನ್ನಡದ ಕಾವ್ಯ ಪ್ರಕಾರ ಶ್ರೀಮಂತಿಕೆಯನ್ನು ಪಡೆದಿದೆ. ಇಂಗ್ಲೆಂಡಿನ ಕವಿಗಳಿಂದ – – – ಕ್ಲಾಸಿಕಲಂ, ನಿಯೋಕ್ಲಾಸಿಕಲ್‌, ರೊಮ್ಯಾಂಟಿಕ್‌ಮತ್ತು ವಿಕ್ಟೋರಿಯನ್‌ಈ ಎಲ್ಲ ಕವಿಗಳಿಂದ- ಕಾವ್ಯದ ರೂಪದಲ್ಲಿ ಮಾತ್ರವಲ್ಲದೆ ವಸ್ತು ಮತ್ತು ದೃಷ್ಟಿಗಳಲ್ಲೂ ನಮ್ಮ ಕವಿಗಳು ಸ್ಫೂರ್ತಿಪಡೆದರು. ಆದರೆ ಇವರ ಹಾಡಿನ ರೀತಿ ಭಾರತೀಯವಾದದ್ದು. ಉಸಿರು ಭಾರತೀಯವಾದದ್ದು ಎಂದರೆ ಈ ನಾಡಿನ ಮಣ್ಣಿನಲ್ಲಿ ಮೂಡಿ ಬೆಳೆದ ನಂಬಿಕೆಗಳನ್ನೂ ಮೌಲ್ಯಗಳನ್ನೂ ತಮ್ಮ ಸಾಹಿತ್ಯದಲ್ಲಿ ಈ ಸಾಹಿತಿಗಳು ಹೊಮ್ಮಿಸಿದರು. ಬದುಕಿನ ಸಮಸ್ತ ಮುಖಗಳನ್ನೂ ತಮ್ಮ ಕಾವ್ಯ ವಸ್ತುವನ್ನಾಗಿ ಮಾಡಿಕೊಂಡರು. ಅಧ್ಯಾತ್ಮ ಪ್ರಕೃತಿ, ಪ್ರೇಮಗಳಂತೆಯೇ ಬಡತನ, ಶೋಷಣೆ ಇವೂ ಇವರ ಸಾಹಿತ್ಯ ವಸ್ತುವಾದುವು. ಶ್ರೀ ಕುವೆಂಪು, ಬೇಂದ್ರೆ, ಪುತಿನ, ವಿ.ಸೀ., ಕೆ. ಎಸ್‌. ನರಸಿಂಹಸ್ವಾಮಿ, ಕಾರಂತರು ಮಾಸ್ತಿಯವರು ಮುಂತಾದ ಎಲ್ಲ ಪ್ರಧಾನ ಸಾಹಿತಿಗಳಲ್ಲೂ ಇದನ್ನು ಕಾಣಬಹುದು. ಇವರೂ ಇನ್ನೂ ಅನೇಕರೂ ನಮ್ಮ ಸಾಹಿತ್ಯಕ್ಕೆ ಗವರವನ್ನು ತಂದುಕೊಟ್ಟವರು. ಈ ಯುಗದ ದೃಷ್ಟಿಯ ಸಾರ್ಥಕ ಅಭಿವ್ಯಕ್ತಿ ಎನ್ನಬಹುದಾದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಸೃಷ್ಟಿಸಿ ಕುವೆಂಪು ನಮ್ಮ ಸಾಹಿತ್ಯದ ಘನತೆಯನ್ನು ಇನ್ನೂ ಏರಿಸಿದರು. ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು ಕಾದಂಬರೀ ಪ್ರಪಂಚದ ಹೆಗ್ಗುರುತುಗಳಾದುವು. ಕಾರಂತರ ಮರಳಿ ಮಣ್ಣಿಗೆ, ಚೋಮನ ದುಡಿಗಳನ್ನು ಓದದೆ ನಮ್ಮ ಕಾದಂಬರಿಯ ಓದು ಅಪೂರ್ಣ; ಮಾಸ್ತಿಯವರ ಮೊಸರಿನ ಮಂಗಮ್ಮ, ಸುಬ್ಬಣ್ಣಗಳನ್ನು ಓದದೆ ನಮ್ಮ ಕತೆ, ನೀಳ್ಗತೆಗಳ ಓದು ಅಪೂರ್ಣ; ಆನಂದರ ನಾನು ಕೊಂದು ಹುಡುಗಿಯನ್ನು ಓದದೇ ಕತೆಯ ಓದಿಗೆ ಕೊರತೆ ತಪ್ಪಿದ್ದಲ್ಲ ಇಂಥ ಭಾವನೆ ನಮಗೆ ಬರುತ್ತಿತ್ತು.

ಸ್ವಲ್ಪ ನಿಂತು ಮನಸ್ಸನ್ನು ಹಿಂದಕ್ಕೆ ಹರಿಯಬಿಡೋಣ. ಈ ಸಾಹಿತಿಗಳು, ಪ್ರಧಾನ ಸಾಹಿತಿಗಳೇ ಆಗಲಿ, ಬರೆದದ್ದೆಲ್ಲ ಚೊಕ್ಕ ಬಂಗಾರವೆ? ಯಾರು ತಾನೆ ಹಾಗೆನ್ನುತ್ತಾರೆ? ಆದರೆ ಅದರಲ್ಲಿ ಬಹುಪಾಲು ನನ್ನಂತಹವರ ಮನಸ್ಸನ್ನು ಸೂರೆಗೊಂಡವು. ಮನಸ್ಸಿಗೆ ಹರ್ಷವನ್ನು ನೀಡಿ ಪ್ರಸನ್ನಗೊಳಿಸಿದುದುವು. ಯಾವುದನ್ನು ಪ್ರಾಚೀನ ಕಾವ್ಯಮೀಮಾಂಸಕರು ರಸಾನುಭವ ಎಂದು ಕರೆದರೋ ಅದನ್ನು ನೀಡಿದವು. ಯಾವ ಅನುಭೂತಿಯಾಗಿ ಸಾಹಿತ್ಯದ ವಿದ್ಯಾರ್ಥಿಗಳಾದ ನಾವು ಷೇಕ್ಷ್‌ಪಿಯರ್‌, ವರ್ಡ್ಸವರ್ತ್‌, ವಾಲ್ಮೀಕಿ, ಕಾಳಿದಾಸ, ಟಾಲ್‌ಸ್ಟಾಯ್‌ಮುಂತಾದವರನ್ನು ಓದುತ್ತಿದ್ದೆವೋ ಅಂಥ ನಾವೇ ಕುವೆಂಪು, ಕಾರಂತ, ಪುತಿನ, ಮಾಸ್ತಿ, ಬೇಂದ್ರೆ ಮುಂತಾದವರನ್ನು ಓದತೊಡಗಿದೆವು. ನಮ್ಮ ಓದು ನಮಗೆ ನಿರಾಶೆಯನ್ನು ಉಂಟುಮಾಡಲಿಲ್ಲ. ಬದಲಿಗೆ ಬೇಕಾದಷ್ಟು ರಸಪುಷ್ಟಿಯನ್ನು ನೀಡಿತು.

ಸ್ವಾತಂತ್ರ್ಯೋದಯದ ಹತ್ತು ವರ್ಷಗಳ ಅನಂತರ – ಅಂದಾಜು ಹತ್ತು ವರ್ಷ ಅಷ್ಟೆ ಆದದ್ದೇನು? ಸ್ವಾತಂತ್ರ್ಯ ಸಿದ್ಧಿಯ ಅನಂತರದ ಭರತಖಂಡದ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಾದದ್ದೇ ಸಾಹಿತ್ಯ ಪ್ರಪಂಚದಲ್ಲೂ ನಡೆಯಿತು. ತೃಪ್ತಿ, ನಿರಾಶೆ, ಉತ್ಕರ್ಷದ ಭಾವನೆ, ವಿಫಲತೆಯ ಆಕ್ರೋಶ ಇವು ತಾನೆ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ನಮ್ಮ ಅನುಭವ. ಸಾಹಿತ್ಯಕ್ಷೇತ್ರದಲ್ಲಿ ಅದು ಬೇರಾಗಲಿಲ್ಲ.

ಉತ್ಕರ್ಷದ ವಿಷಯವನ್ನು ಮೊದಲು ಹೇಳಿಬಿಡುತ್ತೇನೆ. ಸಾಹಿತ್ಯ ಕೃತಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರಕಟವಾಗಿವೆ. ಅನೇಕ ಪ್ರಕಾರಗಳು- ಕಾದಂಬರಿ, ಕಾವ್ಯ-ತುಂಬ ಸಮಾಧಾನ ತರುವಂತೆ ಬೆದಿವೆ. ಎಲ್ಲ ರೀತಿಯ ವಿಮರ್ಶೆಯ ಗ್ರಂಥಗಳೂ ನೂರರ ಸಂಖ್ಯೆಯಲ್ಲಿ ಪ್ರಕಟವಾಗಿದೆ. ಸಂಖ್ಯೆಯೊಂದರಿಂದಲೇ ನಿರ್ಣಯಿಸುವುದಾದರೆ ನಾವು ನಿಸ್ಸಂಕೋಚವಾಗಿ ಹೆಮ್ಮಪಟ್ಟುಕೊಳ್ಳಬಹುದಾದ ಸ್ಥಿತಿಯಲ್ಲಿದ್ದೇವೆ.

ಆದರೆ ವಿಮರ್ಶೆಯ ತೀಕ್ಷ್ಣದೃಷ್ಟಿ ಸಂಖ್ಯೆಯಿಂದ ದಿಗ್ಭ್ರಮೆಗೊಂಡು ಕುರುಡಾಗುವುದಿಲ್ಲ. ಒಳಹೊಕ್ಕು ನಿರ್ಭೀತಿಯಿಂದ ನೋಡುತ್ತದೆ. ಷೇಕ್ಸಪೀಯರ್‌ಮತ್ತು ಹೋಮರರು ತೂಕಡಿಸಿದ್ದನ್ನು ಸಮಾಧಿ ಎಂದು ಭ್ರಮಿಸುವ ಮೌಢ್ಯ ಅದರದಲ್ಲ. ಆದ್ದರಿಂದ ನಮ್ಮ ಸಾಹಿತ್ಯ ಮತ್ತು ಸಾಹಿತ್ಯ ಪ್ರಶಂಸೆಗಳ ಸಂಖ್ಯೆಯ ಹುಸಿಕೋಟೆಯ ಹಿಂದೆ ಇರುವುದೇನು ಎಂಬುದನ್ನು ಅದು ನೋಡಲೇಬೇಕಾಗಿದೆ. ಹಾಗೆ ನೋಡಹೊರಟಾಗ ಎರಡು ರೀತಿಯ ಅವನತಿಗಳು ಕಾಣುತ್ತವೆ. ಮೊದಲನೆಯದು ‘ನವ್ಯ’ ಎಂದು ನಾವು ನಿರ್ದೇಶಿಸುವ ಪಂಥದವರಿಂದ ಪ್ರಾರಂಭವಾಗಿ ಇನ್ನೇನು ತುದಿಮುಟ್ಟಲಿರುವ ಜಾರಿಕೆಯದು.

ಅಭಿವ್ಯಕ್ತಿಗೆ ಹೊಸ ಮಾರ್ಗವನ್ನು ಹುಡುಕುವುದು ತಪ್ಪಲ್ಲ. ಸಹಜವಾದದ್ದೇ, ಅಷ್ಟೇ ಅಲ್ಲ. ಅಭಿನಂದನೀಯವಾದದ್ದೇ. ಆದರೆ ಹಾಗೆ ಹುಡುಕ ಹೊರಟಿದ್ದು ಏಕೆ? ಅಂತರಂಗದ ಹೋರಾಟವೆ? ಆಸಕ್ತಿಗಳ ಸಂಘಷಣೆಯೇ? ಸಂಕೀರ್ಣವಾದ ಬದುಕಿನ ಆಗುಹೋಗುಗಳಿಗೆ ಮೂಡುತ್ತಿರುವ ಹೊಸ ಹೊಸ ಪ್ರಜ್ಞೆಗಳಿಗೆ ಹೊಸ ರೀತಿಯ ಉಕ್ತಿ ಬೇಕು ಎಂಬ ತಡಕಾಟವೆ?- ಇವೆಲ್ಲವೂ ಹೌದೆಂಬುದು ಹೊರಗಿನ ತೋರಿಕೆಯಾಗಿ, ಚುನಾವಣೆಯ ಪ್ರಚಾರದ ಪ್ರಣಾಳಿಕೆಯಾಗಿ ಒಳಗಿದ್ದದ್ದು ಬೇರೆ ಎಂಬುದನ್ನು ಈ ಪಂಥದ ಕೆಲವು ವಿಮರ್ಶೆಗಳು ತೋರಿಸಿದುವು. ಯಾರು ತಮ್ಮ ಸಾಹಿತ್ಯ ಶಕ್ತಿಯಿಂದ ಜನಮನದಲ್ಲಿ ಸ್ಥಾಪಿತರಾಗಿದ್ದರೋ ಅವರನ್ನು ವಿಪೀಠಗೊಳಿಸಿ ತಾವು ಅಲ್ಲಿ ಪೀಠಸ್ಥರಾಗಬೇಕೆಂಬ ದುರಾಸೆ. ಹಿಂದೆ ಸೃಷ್ಟಿಯಾದದ್ದು ಸಾಹಿತ್ಯವೇ ಅಲ್ಲ. ನಾವು ಬರೆಯುತ್ತಿರುವುದೇ ಸಾಹಿತ್ಯ ಎಂದು ಈ ಪಂಥದವರು ಸಾರಿದಾಗ ವಿವೇಕಿಗಳಾದವರು ಎಚ್ಚೆತ್ತು ಈ ‘ಪ್ರಾಮಾಣಿಕತೆ’ಯ ಘೋಷಣೆಯ ಹಿಂದೆ ಇರುವ ಗಾಢವಾದ ಅಪ್ರಾಮಾಣಿಕತೆಯನ್ನು ಕಂಡುಕೊಂಡರು.

ಇನ್ನು ತಾವು ಮಾತ್ರವೇ ಜನಸಾಮಾನ್ಯರ ಭಾಷೆಯಲ್ಲಿ ಬರೆಯುತ್ತೇವೆ ಎಂದು ಘೋಷಿಸಿದ ಸಾಹಿತ್ಯವೀರರ ಬರಹವನ್ನು ಓದಿದಾಗ ಅದು ಜನಸಾಮಾನ್ಯರಿರಲಿ ಅವರನ್ನು ಸೃಷ್ಟಿಸಿದಾತ ಒಬ್ಬನಿದ್ದರೆ ಅವನಿಗೂ ಅರ್ಥವಾಗುವುದಿಲ್ಲ ಎಂಬುದು ತಿಳಿದಾಗ ಇವರ ವೀರವ್ರತ ಬಕವ್ರತ ಎಂಬುದು ಬಯಲಾಗಿ ಓದುಗರು ಯಾವುದನ್ನು ಓದಬೇಕು ಏಕೆ ಓದಬೇಕು ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಘೋಷಣೆಗಳನ್ನು ಮಾಡಿದ ಈ ಪಂಥ ಒಬ್ಬನೇ ಒಬ್ಬ-ಮೇಜರ್‌ಇರಲಿ-ಸಾರ್ಥಕ ಲೇಖಕನನ್ನು ನೀಡಲಿಲ್ಲ ಎಂದಾಗ, ಇವನನ್ನು ಓದದಿದ್ದರೆ ನನ್ನ ಓದು ಅಪೂರ್ಣ ಎಂಬ ಭಾವನೆ ನಮಗೆ ಬರದೇ ಹೋದಾಗ ಇನ್ನೂ ಇನ್ನೂ ಇದು ಚರ್ಚೆಗೆ ಯೋಗ್ಯ ಎಂದು ನನಗೆ ಅನ್ನಿಸುವುದಿಲ್ಲ.

ಈ ಪಂಥದ ಲೇಖಕರ ವಿಫಲತೆಗೆ ಕಾರಣವೇನು ಎಂದು ಅನೇಕ ಸಲ ಯೋಚಿಸಿದ್ದೇನೆ. ಹಿಂದಿನ ತಲೆಮರೆಯವರಿಗೂ ಇವರಿಗೂ ಒಂದು ಸ್ಪಷ್ಟವಾದ ವ್ಯತ್ಯಾಸ ಎದ್ದುಕಾಣುತ್ತದೆ. ಈ ಬರಹಗಾರರಲ್ಲಿ ಬಹುಮಂದಿಯ ಒಳಗು ಟೊಳ್ಳು. ನಮ್ಮ ಹಿಂದಿನ ಸಾಹಿತಿಗಳೆಲ್ಲ ಪ್ರತಿಭಾಶಾಲಿಗಳು ಎಂದು ನನ್ನ ವಾದವಲ್ಲ. ಪ್ರತಿಭೆ ಸ್ವಲ್ಪವಾದರೆ ಉಳಿದ ಅಧ್ಯಯನ ಬರೆಯುವವನಿಗೆ ಅಗತ್ಯವಷ್ಟೆ. ಹಿಂದಿನ ತಲೆಮಾರಿನ ಲೇಖಕರಲ್ಲಿ ಅನೇಕ ವಿಷಯಗಳ ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಈ ಅಧ್ಯಯನಕ್ಕೆ ಈ ಜನರ ಬರಹಗಳಲ್ಲಿ ಸಾಕ್ಷಿ ಕಾಣುತ್ತಿಲ್ಲ. ಅಧ್ಯಯನಕ್ಕೆ ಬೇಕಾದ ಕಾಲಾವಕಾಶವೂ ಇವರಿಗಿಲ್ಲ. ಪರಸ್ಪರ ನಿಂದೆ, ಬೈಗಳು ಇವುಗಳಿಗೂ, ಕಾಫಿ ಹೊಟೇಲನ ಮದ್ಯದಂಗಡಿಗಳಲ್ಲಿ ತಮ್ಮ ಮುಗ್ಧ ಆರಾಧಕರಿಗೆ ಬೋಧೆ ನೀಡುವುದಕ್ಕೂ ಇವರ ಎಲ್ಲ ಸಮಯವೂ ವ್ಯಯವಾಗುತ್ತಿದ್ದು, ಅಧ್ಯಯನ, ಚಿಂತನೆಗಳಿಗೆ ಅವಕಾಶ ಸಿಕ್ಕದಾಗಿದೆ. ಅಲ್ಲದೆ ಈಚಿನ ಸಾಹಿತಿ ತನ್ನ ಬರವಣಿಗೆಯ ಐದಾರು ಪ್ರತಿಗಳನ್ನು ಕೂಡಲೇ ತಯಾರಿಸಬೇಕಾಗಿದೆ. ಬರೆಯುತ್ತ ಇರುವಾಗಲೇ ಒಂದೊಂದು ಪುಟದ ಒಂದು ಪ್ರತಿಯನ್ನು ಅಚ್ಚಿನ ಮನೆಗೂ ಮತ್ತೊಂದನ್ನು ರಾಜ್ಯ ಸಾಹಿತ್ಯ ಅಕಾಡೆಮಿಗೂ ಮತ್ತೊಂದನ್ನು ಕೇಂದ್ರ ಸಾಹಿತ್ಯ ಅಕಾಡೆಮಿಗೂ ಇನ್ನೊಂದನ್ನು ಜ್ಞಾನಪೀಠಕ್ಕೂ ಮಗದೊಂದನ್ನು ಸಿನಿಮಾ ನಿರ್ಮಾಪಕ ನಿರ್ದೇಶಕರಿಗೂ ಇನ್ನೂ ಒಂದನ್ನು ಆ ಕ್ಷಣಕ್ಕೆ ಯಾವ ಕಾರ್ಯಕ್ರಮವೂ ಇಲ್ಲದೆ ಪೇಚಾಡುತ್ತಿರುವ ಸನ್ಮಾನ ಸಮಿತಿಗಳಿಗೂ ಜರೂರಾಗಿ ರವಾನಿಸಬೇಕಾಗಿರುತ್ತದೆ. ಹೀಗಾಗಿ ಮೈ ಸಾಹಿತ್ಯರಂಗ ಉರಿದು ಮುಗಿದುಹೋಗುವುದು ಅನಿವಾರ್ಯವಾಗಿರುವ ಮೇಣದಬತ್ತಿಗಳ ಮೇಳವಾಗಿವೆ.

ಇನ್ನು ವಿಮರ್ಶಕರ ಮಾತು: ಕೆಲವು ಸಾಹಿತಿಗಳನ್ನು ಉನ್ನತಿಕೆಗೆ ಏರಿಸಬೇಕು ಎಂಬ ಹಟ ತೊಟ್ಟು ಸಾಹಿತ್ಯದ ಎಲ್ಲಾ ಪ್ರಕಾರಗಳನ್ನೂ ಅವಸರವಸರವಾಗಿ ವಿಮರ್ಶಿಸಿ ಸರ್ವಜ್ಞತ್ವವನ್ನು ಪ್ರದರ್ಶಿಸಲು ಕೆಲವರು ಹೊರಟಿದ್ದಾರೆ. ಇದರಿಂದ ಓದುಗರಿಗೆ ಮಾತ್ರ ಅಪಾಯ ಇದೆ ಎಂದು ಭಾವಿಸಬಾರದು. ಸಾಹಿತಿಗಳಿಗೂ ತಮ್ಮ ಸೃಷ್ಟಿಯೆಲ್ಲ ಉತ್ತಮ ಸಾಹಿತ್ಯ ಎಂಬ ಭ್ರಾಂತಿ ಬಂದು ಮುಂದೆ ಉತ್ತಮವಾದ ಕೃತಿಗಳು ಅವರಿಂದ ಬರಬಹುದಾಗಿದ್ದರೆ ಅದಕ್ಕೂ ನಿಲುಗಡೆ ಉಂಟಾಗುತ್ತದೆ. ಅವಸರ ಸಾಹಿತ್ಯ ಸೃಷ್ಟಿ ಸಾಹಿತ್ಯಕ್ಕೂ ಹಾಗೂಅವಸರದ ವಿಮರ್ಶೆಯು ಸೃಷ್ಟಿ ಸಾಹಿತ್ಯದ ಬೆಳವಣಿಗೆಗೂ ಅಪಾಯಕಾರಿ.

ಮತ್ತೊಂದು ಅವನತಿ ನವ್ಯ-ಅನವ್ಯ ಸಾರ್ವತ್ರಿಕವಾಗಿ ಕಾಣಬಹುದಾದದ್ದು ದಿನಕ್ಕೊಂದರಂತೆ, ವಾರಕ್ಕೊಂದರಂತೆ, ತಿಂಗಳಿಗೊಂದರಂತೆ ಪುಸ್ತಕಗಳನ್ನು ಬರೆಯುವ ಸಾಹಸಿ ಲೇಖಕ-ವಿಮರ್ಶಕರು. ವಿಷಯವೆ ಇಲ್ಲದೆ ತುಂಬ ಮಾತನಾಡುತ್ತಾ ಹೋಗುವವರನ್ನು ಒಮ್ಮೆ ಒಬ್ಬರು. Constipation of ideas and diarrhea of expression ಎಂದರು. ಎಂದರೆ, ಭಾವನೆಗಳ ಮಲಬದ್ಧತೆ, ಮಾತಿನ ಭೇದಿ! ಇಂತಹ ಲೇಖಕರನ್ನು ನೋಡಿದಾಗ ಹತ್ತಾರು ಮೆಡಲುಗಳನ್ನು ಇಳಿಬಿಟ್ಟುಕೊಂಡ ಜಾದೂಗಾರರನ್ನೂ ಕಂಡಂತಾಗುತ್ತದೆ! ಹುದ್ದೆಗಳನ್ನು ಅವಸರವಸವಾಗಿ ಆಕ್ರಮಿಸಿಕೊಳ್ಳಲು, ಇಲ್ಲವೆ ರಾಯಲ್ಟಿಯಿಂದ ಶ್ರೀಮಂತರಾಗಲು ಬರವಣಿಗೆಯನ್ನು ಉಪಯೋಗಿಸಿಕೊಳ್ಳುವ ಈ ಗುಂಪಿನವರು ನಾಲ್ಕು ಕಾಲ ನಿಲ್ಲುವ ಸಾಹಿತ್ಯವನ್ನಾಗಲಿ ವಿಮರ್ಶೆಯನ್ನಾಗಲಿ ನಿರ್ಮಾಣ ಮಾಡುವುದು ಹೇಗೆ? ಸಂಖ್ಯಾಬಲದಿಂದ ಮಹಾನ್‌ಸಾಹಿತಿಗಳು ಎಂಬ ಖ್ಯಾತಿ ಗಳಿಸಬಹುದು ಅಷ್ಟೆ.

ಇಷ್ಟೆಲ್ಲ ಆದ ಮೇಲೆ ಇನ್ನೂ ಭೀಕರವಾದ, ಕಳವಳಕಾರಿಯಾದ ಒಂದು ಅನಿಸಿಕೆಯನ್ನು ಹೇಳಲೇಬೇಕು. ನಮ್ಮಲ್ಲಿ ಒಳ್ಳೆಯದು ಬೇಕಾದಷ್ಟು ರಚಿತವಾಗಿದೆ. ನಿಜ. ಆದರೆ ಅದುಎಷ್ಟು ಒಳ್ಳೆಯದು? ಈ ಪ್ರಶ್ನೆಗೆ ಉತ್ತರ ಹೇಳುವ ಮುನ್ನ ನಮ್ಮಲ್ಲಿ ಓದುವವರಲ್ಲೇ ಎರಡು ವರ್ಗಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಒಂದು ಇಂಗ್ಲಿಷ್‌ಬಾರದ, ಬಂದರೂ ಸಾಹಿತ್ಯಕೃತಿಗಳನ್ನು ಓದುವಷ್ಟು ಇಂಗ್ಲಿಷ್‌ಬಾರದ ಒಂದು ವರ್ಗ. ಅವರು ಕಡಿಮೆ ಎಂದು ನಾನು ಹೇಳುತ್ತಿಲ್ಲ. ಅವರಿಗಾಗಿಯೇ ಉತ್ತಮ ಸಾಹಿತ್ಯ ಸೃಷ್ಟಿಯಾಗಬೇಕು ಎಂಬುದುನನ್ನವಾದ. ಮತ್ತೊಂದು ಇಂಗ್ಲಿಷ್‌ಸಾಹಿತ್ಯಕ್ಕೆ ತನ್ಮೂಲಕ ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಪ್ರವೇಶ ಇರುವ ವರ್ಗ ಈ ವರ್ಗಕ್ಕೆ ಕನ್ನಡದ ಯಾವುದೇ ಕೃತಿಯನ್ನು ಓದುತ್ತಿರುವಾಗಲೂ ಇಂಗ್ಲಿಷಿನಲ್ಲಿ ತಾವು ಓದಿರುವ ಅದೇ ವರ್ಗದ ಕೃತಿ ಮನಸ್ಸಿನಲ್ಲಿ ಬರುತ್ತಲೇ ಇರುತ್ತದೆ. ಯಾವುದೇ ಪ್ರಯತ್ನವೂ ಇಲ್ಲದೆಯೇ ಇವೆರಡರ ಹೋಲಿಕೆ ನಡೆಯುತ್ತಲೇ ಹೋಗುತ್ತದೆ. ಒಂದು ಮೂಲಭೂತವಾದ ಪ್ರಶ್ನೆ ಇದನ್‌ಉ ಓದದೆ ಹೋದರೆ ನಮ್ಮ ಜೀವನ ವ್ಯರ್ಥ ಎಂಬ ಅನೇಕ ಕೃತಿಗಳು, ಇವರನ್ನು ಓದದೆ ನಮ್ಮ ಬದುಕು ನಿರರ್ಥಕ ಎಂಬ ಅನೇಕ ಕವಿಗಳು ಜಗತ್ತಿನಲ್ಲಿದ್ದಾರೆ. ಷೇಕಸಪಿಯರ್‌, ಮಿಲ್ಟನ್‌, ಡಾಂಟೆ, ಕಾಪ್ಕ, ಟಾಲ್‌ಸ್ಟಾಯ್‌, ಡಾಸ್ಟೊವಸ್ಕಿ- ಅಂಥ ಸಾಹಿತಿಗಳು ನಮ್ಮಲ್ಲಿ ಎಷ್ಟು ಜನ ಇದ್ದಾರೆ? ಮತ್ತೆ ಅದೇ ಹಳೆಯ ತಲೆಮೊರೆಯವರನ್ನೇ ಹೆಸರಿಸಬೇಕು. ಈಗ?- ಇಲ್ಲ. ಇವರನ್ನು ಓದದೇ ಹೋದರೆ ನಮ್ಮ ಬದುಕು ಅಪೂರ್ಣ ಎಂಬ ಲೇಖಕರು-ಇಂಗ್ಲಿಷ್‌ಬಲ್ಲ ನನಗೆ-ಯಾರೂ ಇಲ್ಲ. ಅಷ್ಟೇ ಅಲ್ಲ ಇವರಲ್ಲಿ ಬಹಳ ಮಂದಿಯ ಬರಹವನ್ನು ಓದುವುದೇ ಕಾಲಹರಣ ಎನ್ನಿಸುತ್ತದೆ.

ಇಷ್ಟೆಲ್ಲ ಮಂಥನ, ಕೋಲಾಹಲಗಳಿಂದ ಅನೇಕ ಕೃತಿಗಳು-ಶ್ರೇಷ್ಠವಾದವು, ಮದ್ಯಮವರ್ಗದವು, ಕೆಳಮಟ್ಟದವು-ರಚಿತವಾಗಿವೆ. ಜೊತೆಯಲ್ಲಿ ಒಂದು ಅತ್ಯಮೂಲ್ಯವಾದ ಫಲ ನಮಗೆ ದೊರೆತಿದೆ. ಅದು ಸೊಗಸಾದ ಗದ್ಯ. ಅಭಿವ್ಯಕ್ತಿಯ ತಿಣುಕಾಟದಲ್ಲಿ ಮೂಡಿಬಂದ ಸಫಲವಾದ ಅಂಶಗಳಲ್ಲಿ ಇದು ಮಹತ್ತರವಾದದ್ದು. ಕನ್ನಡ ಗದ್ಯದ ಬೆಳವಣಿಗೆಯಲ್ಲಿ ಸ್ವಾತಂತ್ರ್ಯೋತ್ತರ ಯುಗ ಪ್ರಮುಖವಾದ ಘಟ್ಟವನ್ನು ಸಾಧಿಸಿದೆ ಎನ್ನಬಹುದು. ಇಲ್ಲೂ ಒಂದು ಬೇಸರದ ಸಂಗತಿ ಎಂದರೆ ಇಂತಹ ಸೊಗಸಾದ ಗದ್ಯದ ಮಧ್ಯೆ ಇಂಗ್ಲಿಷಿನ ವಾಕ್ಯ ರೂಪಗಳು ಕಾಣಿಸಿಕೊಳ್ಳುವುದು. ಕನ್ನಡದ ವಾಕ್ಯರಚನೆಯೇ ಬೇರೆ, ಇಂಗ್ಲಿಷಿನ ವಾಕ್ಯರಚನೆಯೇ ಬೇರೆ ಎಂಬುದನ್ನು ಮರೆತರೆ ಎಂತಹ ಆಭಾಸಗಳಾಗುತ್ತವೆ ಎಂಬುದನ್ನು ಎಷ್ಟುಬೇಕಾದರೂ ನಿದರ್ಶನಗಳನ್ನು ಈಚಿನವರ ಬರಹಗಳಿಂದ ತೋರಿಸಬಹುದು. ಈ ಅಪಾಯದಿಂದ ಪಾರಾಗಬಲ್ಲವರಾದರೆ ಆಧುನಿಕ ಗದ್ಯ ಲೇಖಕರು ಕನ್ನಡಕ್ಕೆ ಚಿರಸ್ಮರಣೀಯವಾದ ಕಾಣಿಕೆಯನ್ನು ನೀಡಿದಂತಾಗುತ್ತದೆ.

ಇಷ್ಟೆಲ್ಲ ಹೇಳಿದ ಮೇಲೆ ಒಂದು ನಿರಾಶೆಯ ಛಾಯೆ, ಒಂದು ಸಿನಿಕತನ ನನ್ನ ದೃಷ್ಟಿಯಲ್ಲೇ ಇದೆ ಎಂಬ ಭಾವನೆ ಮೂಡಬಹುದು. ಅದನ್ನು ಹೋಗಲಾಡಿಸಲು ನಾನು ಪ್ರಯತ್ನಿಸುವುದಿಲ್ಲ. ಬದಲಿಗೆ ನನ್ನ ಅನಿಸುವಿಕೆಯನ್ನೆಲ್ಲ ಹೀಗೆ ಸಂಕ್ಷೇಪಿಸುತ್ತೇನೆ:

ನಮ್ಮಲ್ಲಿ ಅನೇಕ ಶ್ರೇಷ್ಠವಾದ ಸಾಹಿತ್ಯ ಮತ್ತು ವಿಮರ್ಶೆಯ ಕೃತಿಗಳು ರಚಿತವಾಗಿವೆ:

ತುಂಬ ಶ್ರೇಷ್ಠವಾದ ಸಾಹಿತ್ಯ ಮತ್ತು ವಿಮರ್ಶೆಯನ್ನು ರಚಿಸಬಲ್ಲ ಸಾಮರ್ಥ್ಯವುಳ್ಳವರು ನಮ್ಮ ತರುಣರ ಪೀಳಿಗೆಯಲ್ಲಿ ಹಲವರು ಜನ ಇದ್ದಾರೆ. :

ಸಾವಧಾನ, ಶ್ರದ್ಧೆ, ಅಧ್ಯಯನಗಳಿಂದ ಶ್ರೇಷ್ಠ ಕೃತಿಗಳನ್ನು ಅವರು ರಚಿಸಬಲ್ಲರು ಎಂಬ ನಂಬಿಕೆ ನನಗುಂಟು.

ಅಸಾಹಿತ್ಯಕವಾದ ಚಟುವಟಿಕೆಗಳನ್ನು ನಿಲ್ಲಿಸಿ ಸಾಹಿತ್ಯ-ವಿಮರ್ಶೆಯ ಅಧ್ಯಯನ. ರಚನೆಯಲ್ಲಿ ತೊಡಗಿದರೆ ಗುಣದಲ್ಲಿ ಹೆಮ್ಮೆ ಪಡಬಹುದಾದಂಥ ಕೃತಿಗಳು ಸೃಷ್ಟಿಯಾಗುವುದರಲ್ಲಿ ತೋರುವುದಿಲ್ಲ.