ವಾಸ್ತವವಾಗಿ ನಾನು ಬರೆಯಬೇಕಾಗಿದ್ದದ್ದು “ಕನ್ನಡದ ಮಹತ್ವದ ಕಾದಂಬರಿಗಳಲ್ಲಿ ಹಾಸ್ಯ” ಎಂಬ ವಿಷಯವನ್ನು ಕುರಿತು. ಆದರೆ ಎರಡು ಕಾರಣಗಳಿಗಾಗಿ ವಿಷಯದ ವ್ಯಾಪ್ತಿಯನ್ನು ಸೀಮಿತಗೊಳಿಸಬೇಕಾಗಿ ಬಂದಿದೆ. ಮೊದಲನೆಯದು, ಒಂದು ವೇಳೆ ಕನ್ನಡದ ಎಲ್ಲ ಮಹತ್ವದ ಕಾದಂಬರಿಗಳನ್ನು ಪರಿಶೀಲಿಸಲು ಹೊರಟರೆ ಈ ಪ್ರಬಂಧದ ಗಾತ್ರ ತುಂಬ ದೊಡ್ಡದಾಗುತ್ತದೆ ಎಂಬುದು ಎರಡನೆಯದು ಅಂತಹ ಒಂದು ಸಮಗ್ರ ಸಮೀಕ್ಷೆಗೆ ಅಗತ್ಯವಾದ ಸಮಯದ ಅಭಾವವಿರುವುದು. ಹೀಗಾಗಿ ಅಷ್ಟೇನೂ ವ್ಯಾಪಕವಲ್ಲದ, ಆ ಕಾರಣದಿಂದ ಅಸಮರ್ಪಕವಾದ ಲೇಖನದಿಂದ ತೃಪ್ತಿಪಡುವುದು ಅನಿವಾರ್ಯವಾಗಿದೆ.

ಕನ್ನಡಕ್ಕೆ ಎರಡು ಮಹತ್ವದ ಕಾದಂಬರಿಗಳನ್ನು ನೀಡಿರುವ ಶ್ರೀ ಕುವೆಂಪು ಅವರೇ ಆ ಕಾದಂಬರಿಗಳಲ್ಲಿ ಯಥೇಚ್ಛವಾಗಿ ಹಾಸ್ಯವನ್ನೂ ನೀಡಿದ್ದಾರೆ. ಪಾತ್ರಸೃಷ್ಟಿಯಲ್ಲಿ, ಘಟನೆಗಳ ನಿರೂಪಣೆಯಲ್ಲಿ ಅವರು ತಂದಿರುವ ಹಾಸ್ಯ ವೈವಿಧ್ಯಮಯವಾದದ್ದಾಗಿದೆ. ಒಂದೆರಡು ಸಂದರ್ಭಗಳನ್ನು ವಿಶ್ಲೇಷಿಸಿ ಅವರ ಹಾಸ್ಯದ ಸ್ವರೂಪ ಎಂಥದು ಎಂಬುದನ್ನು ತಿಳಿಯಬಹುದು.

ಮಾಯಗಾರ್ತಿ ಗಂಗೆ ಮತ್ತು ಮುಗ್ಧೆ ಹೆಗ್ಗಡತಿ ಸುಬ್ಬಮ್ಮ ಒಂದು ಮಧ್ಯಾಹ್ನ ಮನೆಯ ಹಿತ್ತಲು ಕಡೆಯ ಬಾಗಿಲಲ್ಲಿ ಚಿಕ್ಕಂದಿನಿಂದ ಮಾತಾಡುತ್ತ ಎಲೆಯಡಕೆಯ ಚುಟ್ಟಿಯನ್ನು ನಡುವೆ ಇಟ್ಟುಕೊಂಡು ತಾಂಬೂಲವನ್ನು ಸವಿಯುತ್ತ ಕುಳಿತಿದ್ದಾರೆ. ಮುಂದೆ ನಡೆದದ್ದು ಹೀಗೆ :

‘ಇವರು ಮಾತಾಡುತ್ತ ಕುಳಿತಿದ್ದಾಗ ಗರುಡನೊಂದು ಮೇಲೆ ಆಕಾಶದಲ್ಲಿ ಹಾರಾಡಿ ಅಂಗಳದ ಕೆಸರಿನಲ್ಲಿ ಹೇಂಟೆಯೊಡನೆ ಮೇಯುತ್ತಿದ್ದ ಹೂಮರಿಗಳಿಗಾಗಿ ಹೊಂಚು ಹಾಕುತ್ತಿತ್ತು. ರುಚಿರುಚಿಯಾದ ಕ್ರಿಮಿಭೋಜನದಲ್ಲಿ ಅಸಕ್ತವಾಗಿದ್ದ ಕುಕ್ಕುಟ ಸಂಸಾರವು ಅದನ್ನು ಕಾಣಲಿಲಲ. ಗರುಡನು ಹಠಾತ್ತಾಗಿ ಮಿಂಚಿನ ವೇಗದಿಂದ ಸಿಡಿಲಿನಂತೆ ಎರಗಿತು. ಮರಿಗಳು ಚಿಂಯೋಪಿಂಯೋ ಎಂದು ಆರ್ತನಾದ ಮಾಡುತ್ತಾ ಚೆಲ್ಲಾಪಿಲ್ಲಿಯಾದುವು. ಕೆಲವು ಕಲ್ಲುಕಟ್ಟಣೆಯ ಬಿರುಕುಗಳಲ್ಲಿ ಹುದುಗಿದುವು. ಮತ್ತೆ ಕೆಲವು ಗಾಬರಿಯಿಂದ ಕಂಗೆಟ್ಟು ಅತ್ತಿತ್ತ ತಮ್ಮ ಪುಟ್ಟ ಕಾಲು ಮತ್ತು ರೆಕ್ಕೆಗಳ ಶಕ್ತಿಯನ್ನೆಲ್ಲ ವೆಚ್ಚ ಮಾಡಿ ಧಾವಿಸತೊಡಗಿದವು. ಹೇಂಟೆ ಗರುಡನು ಹತ್ತಿರ ಬರಲು ಎಚ್ಚತ್ತು ಅದನ್ನು ಅಟ್ಟಿಸಿಕೊಂಡು ಹೋಯಿತು. ಆದರೂ ಗರುಡನು ಒಂದು ಮರಿಗೆ ಎರಗಿತು. ಆಯಸ್ಸು ಗಟ್ಟಿಯಾಗಿದ್ದುದರಿಂದಲೋ, ಹೇಂಟೆಯ ಸಾಹಸದಿಂದಲೋ, ಗರುಡನ ಗುರಿ ತಪ್ಪಿದುದರಿಂದಲೋ ಅಥವಾ ಅದರ ಸ್ವಂತ ಚಟುವಟಿಕೆಯಿಂದಲೋ ಆ ಮರಿ ತಪ್ಪಿಸಿಕೊಂಡಿತು. ಗರುಡನು ಮತ್ತೊಂದು ಸಾರಿ ಮೇಲಕ್ಕೆ ಚಿಮ್ಮಿ ತೇಲಿ, ಹೇಂಟೆ ಒದೆಯುತ್ತಿದ್ದರೂ, ಸುಬ್ಬಮ್ಮ ‘ಹ್ಯಾ! ಹ್ಯಾ!’ ಎಂದು ಕೂಗಿ ಬರುತ್ತಿದ್ದರೂ ಲೆಕ್ಕಿಸದೆ, ಇನ್ನೊಂದು ಮರಿಗೆ ಎರಗಿ ಮೇಲೆ ಹಾರಿತು. ಅದರ ಉಗ್ರನಖಜಪಂಜರದಲ್ಲಿ ಸೆರೆ ಸಿಕ್ಕಿದ್ದ ಕೋಳಿಮರಿಯ ಶಿಶುಪ್ರಲಾಪ ಬರಬರುತ್ತ ಗಗನದಲ್ಲಿ ಕಿವಿಮರೆಯಾಯಿತು. ಕುಂಕುಮಾಂಕಿತ ಶರೀರಿಯೂ ಧವಳಾಂಕಿತ ವಕ್ಷನೂ ಆಗಿದ್ದ ಆ ಕೃಷ್ಣವಾಹನನು ಸ್ವರ್ಗದ ಅಸೀಮತೆಯಿಂದ ಮಿಂಚೆ ಬಂದು ಕಾನೂರಿನ ಹಿತ್ತಲು ಕಡೆಯ ಅಂಗಳದೆಡೆ ಕೆಸರಿನಲ್ಲಿ ವಿಹರಿಸುತ್ತಿದ್ದ ಕೋಳಿಯ ಹೂಮರಿಯನ್ನು ಅದರ ಪೂರ್ವಜನ್ಮದ ಸುಕೃತಫಲದಿಂದಲೋ ಎಂಬಂತೆ ವೈಕುಂಠಕ್ಕೆ ಎತ್ತಿಕೊಂಡು ಹೋಗುತ್ತಿರುವುದನ್ನು ಗಂಗೆ ಸುಬ್ಬಮ್ಮರಿಬ್ಬರೂ ನಿಸ್ಸಹಾಯರಾಗಿ ಕಣ್ಣಾರೆ ನೋಡುತ್ತ ನಿಂತರು. ಹಿಂದೆ ಅನೇಕಸಾರಿ ಗರುಡನಿಗೆ ಕೈ ಮುಗಿದಿದ್ದ ಸುಬ್ಬಮ್ಮ ಹೂಮರಿಯ ಕರುಣಾಕರವಾದ ಆರ್ತಧ್ವನಿಯನ್ನು ಕೇಳಿ, ಕೋಪ ಕನಿಕರ ಹೊಟ್ಟೆಯುರಿಗಳಿಂದ “ನಿನ್ನ ಕುಲ ನಾಶನಾಗ!” ಎಂದು ವಿಷ್ಣುವಾಹನನನ್ನು ಶಪಿಸಿದಳು. ಆಮೇಲೆ ಹೇಂಟೆಯ ಕಡೆಗೆ ತಿರುಗಿ “ಈ ಹಡಬೇ ಹಾದರಗಿತ್ತಿ ಮರಿಕಟ್ಟಿಕೊಂಡು ಬಂದು ಬಯಲಿನಲ್ಲೇ ಸಾಯ್ತದೆ!” ಎಂದು ಭರ್ತ್ಸನೆ ಮಾಡಿದಳು. ಅಡಗಿದ್ದ ಮರಿಗಳೆಲ್ಲ ಹೊರಗೆ ಬಂದುವು. ಹೇಂಟೆ ಮತ್ತು ಮೊದಲಿನಂತೆ ಅವುಗಳೊಡನೆ ಕೆಸರು ಕೆದರಲು ಪ್ರಾರಂಭಿಸಿತು.

ತನ್ನ ಸಂಸಾರಕ್ಕಾದ ನಷ್ಟವಾಗಲಿ, ತಾನು ಅನೇಕ ದಿವಸಗಳಿಂದ ಮೊಟ್ಟೆಗಳ ಮೇಲೆ ಬೇಸರವಿಲ್ಲದೆ ಕಾವು ಕೂತು ಹೊರಡಿಸಿದ ತನ್ನ ಮುದ್ದು ಹೂಮರಿಯೊಂದಕ್ಕೆ ಒದಗಿದ ಅಕಾಲ ಮೃತ್ಯುವಾಗಲಿ, ಗರುಡನು ಆ ಮರಿಯನ್ನು ಕೊಕ್ಕಿನಿಂದ ಕಿತ್ತು ಕಿತ್ತು ತಿನ್ನುವಾಗ ವಾಸ್ತವತೆಯಿಂದ ಚೂರು ದೂರ ಸರಿಯದ ಈ ವರ್ಣನೆಯಲ್ಲಿ ಎಷ್ಟು ಬಗೆಯ ಹಾಸ್ಯ ಅಡಕವಾಗಿದೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಲ್ಲಿನ ಸಂಸ್ಕೃತ ಪದಗಳೂ ಹಾಸ್ಯ ಸೃಷ್ಟಿಗೆ ನೆರವಾಗುತ್ತದೆ. ಹುಳುಗಳನ್ನು ತಿನ್ನುತ್ತಿರುವ ಕೋಳಿಗಳೂ ಅವುಗಳ ಮರಿಗಳೂ – – “ಕ್ರಿಮಿ ಭೋಜನದಲ್ಲಿ ಆಸಕ್ತವಾದ ಕುಕ್ಕುಟ ಸಂಸಾರ!” ಅಮೃತಾಹಾರಿಗಳಾಗಿದ್ದು ಹಸುವಿನ ಬಾಧೆಯೇ ಇಲ್ಲದೆ ಸದಾ ಸುಖಲೋಲುಪರಾಗಿರುವ ದೇವತೆಗಳ ಒಡನಾಡಿಯಾಗಿದ್ದೂ, ಲಕ್ಷ್ಮೀರಮಣನಾದ ನಾರಾಯಣನ ವಾಹನವಾಗಿದ್ದೂ ತನ್ನ ಹಸಿವನ್ನು ನೀಗಲು ಭೂಲೋಕದ, ಅದೂ ಮಲೆನಾಡಿನ ಮೂಲೆಯ ಮನೆಯೊಂದರ ಹಿತ್ತಲಿನ, ಕ್ರಿಮಿಗಳನ್ನು ತಿನ್ನುವ ಕೋಳಿಯ ಮರಿಯನ್ನು ಅರಸಿ ಬಂದಿರುವ ಗರುಡನನ್ನು ಅವರು ವರ್ಣಿಸಿರುವ ರೀತಿಯೇ ನಗೆಯನ್ನು ಉಕ್ಕಿಸುವಂಥದು. ಕುಂಕುಮಾಂಕಿತ ಶರೀರಿಯೂ, ಧವಳಾಂಕಿಂತ ವಕ್ಷನೂ ಆಗಿದ್ದ ಆ ಕೃಷ್ಣವಾಹನನು ಸ್ವರ್ಗದ ಅಸೀಮತೆಯಿಂದ ಮಿಂಚಿ ಬಂದು ಕಾನೂರಿನ ಹಿತ್ತಲು ಕಡೆಯ ಅಂಗಳದೆಡೆ ಕೆಸರಿನಲ್ಲಿ ವಿಹರಿಸುತ್ತಿದ್ದ (ಈ ಕ್ರಿಯಾಪದವನ್ನು ಗಮನಿಸಿ) ಕೋಳಿಯ ಹೂಮರಿಯನ್ನು ಅದರ ಪೂರ್ವಜನ್ಮದ ಸುಕೃತದಿಂದಲೋ ಎಂಬಂತೆ ವೈಕುಂಠಕ್ಕೆ ಎತ್ತಿಕೊಂಡು ಹೋಗುತ್ತಿರುವುದನ್ನು ಗಂಗೆ ಸುಬ್ಬಮ್ಮರಿಬ್ಬರೂ ನಿಸ್ಸಾಹಾಯರಾಗಿ ಕಣ್ಣಾರೆ ನೋಡುತ್ತ ನಿಂತರು”.

ಕುವೆಂಪುರವರ ವ್ಯಕ್ತಿತ್ವದ ಒಂದು ವಿಶಿಷ್ಟ ಲಕ್ಷಣ ಅವರಿಗೆ ಕನ್ನಡ ಲೇಖಕರ ನಡುವೆ ವಿಶಿಷ್ಟ ಸ್ಥಾನವನ್ನು ದೊರಕಿಸಿಕೊಡಲು ಕಾರಣವಾಗಿದೆ. ಪ್ರಧಾನವಾಗಿ ಅಧ್ಯಾತ್ಮಿಕ ಕೋಶವೊಂದನ್ನು ಬಾಲ್ಯದಿಂದಲೂ ತಮ್ಮಲ್ಲಿ ಅಳವಡಿಸಿಕೊಂಡಿರುವ ಈ ಕವಿ ತಮ್ಮ ಜನತೆಯಲ್ಲಿರುವ ಮೌಢ್ಯ, ಅಜ್ಞಾನಗಳನ್ನು ಎಳ್ಳಷ್ಟು ಸಹಿಸರು. ಹೀಗೆ ಹೇಳುವುದು ತೀರ ಸಪ್ಪೆಯಾಗುತ್ತದೆ, ನಿಜ. ಮೌಢ್ಯ, ಅಜ್ಞಾನಗಳ ವಿರುದ್ಧ ನಿರಂತರವಾದ ಪರಮಾಣು ಯುದ್ಧವನ್ನೇ ಸಾರಿದವರು ಅವರು. ಆದ್ದರಿಂದಲೇ, ಆ ಸಮಾಜದ ತಂತ್ರೋಪತಂತ್ರಗಳಾಗಿ ಬರ್ತ್ಸನೆ, ವಿಡಂಬನೆ, ನೇರವಾದ ಸಿಕ್ಕುವಿಕೆ ಇವೆಲ್ಲವನ್ನೂ ಅವರು ಬಳಸುತ್ತಾರೆ. ಹದ್ದಿನ ಜಾತಿಯ ಹಕ್ತಿಯೊಂದನ್ನು ಗರುಡನೆಂದೂ, ವಿಷ್ಣುವಾಹನನೆಂದೂ ತಿಳಿದು ಪೂಜಿಸುವ ಜನರಿಗೆ ಆ ಹಕ್ಕಿಯ, ಹಕ್ಕಿ ಸಹಜವಾದ ಆಹಾರಾನ್ವೇಷಣೆಯ ಅದರ ಅಂಗವಾಗಿ ಕೋಳಿಮರಿಯವನ್ನು ಕುಕ್ಕಿ ತಿನ್ನುವಲ್ಲಿಯೇ ಎಷ್ಟು ಸಹಜವಾದದ್ದು ಎಂಬುದನ್ನು ತೋರಿಸಿ ಮೌಢ್ಯದ ರೆಕ್ಕೆಯೊಂದನ್ನು ಕತ್ತರಿಸುವ ಕ್ರಿಯೆಯಲ್ಲಿ ತೊಡಗಿದ್ದಾರೆ ಕುವೆಂಪು.

ಕುವೆಂಪು ಮೌಢ್ಯ, ಅಜ್ಞಾನಗಳ ವಿರುದ್ಧ ಗದಾಪ್ರಹಾರ ಮಾಡುವಾಗ ತಮ್ಮವರು, ಪರಕೀಯರು ಎಂಬ ಯಾವ ದಾಕ್ಷಿಣ್ಯವನ್ನೂ ತೋರಿಸುವುದಿಲ್ಲ. ನನಗೆ ತಿಳಿದಂತೆ ಕನ್ನಡದ ಯಾವ ಲೇಖಕನೂ ತನ್ನದೇ ವರ್ಗದ ಮೇಲೆ ಇಷ್ಟು ನಿರ್ದಯವಾಗಿ ಶಸ್ತ್ರಾಸ್ತ್ರಗಳನ್ನು ಪ್ರಯೋಗ ಮಾಡಿದಂತಿಲ್ಲ. ನಮ್ಮ ಲೇಖಕರು ಶೂದ್ರ ಅಥವಾ ಇನ್ನೂ ಕೆಳಸ್ತರದ ಸ್ತ್ರೀಯ ಮೇಲೆ ಉಚ್ಚವರ್ಗದವರಿಂದ ಅತ್ಯಾಚಾರ ಮಾಡಿಸಿಯಾರೇ ಹೊರತು, ಅದಕ್ಕೆ ಪ್ರತಿಲೋಮವಾಗಿ ಪಡೆಯಲು ಬಿಡುವುದಿಲ್ಲ. ಅತ್ಯಂತ ಧೀರ ಲೇಖಕರಾದ ಕುವೆಂಪು ಬದುಕಿನಲ್ಲಿ ಹೇಗೋ ಹಾಗೆ ಸೃಜನಕ್ರಿಯೆಯ ಸಮಯದಲ್ಲಿ ಕಾಲ, ದೇಶ, ಪರಿಸರಗಳನ್ನು ಮೀರಿ ನಿಂತು, ಎತ್ತರದ ಶಿಲಾಶಿಖರದ ಸ್ತರದಿಂದ ತಮ್ಮ ಸುತ್ತಣ ಜಗತ್ತನ್ನು ಸಾಕ್ಷೀ ಪ್ರಜ್ಞೆಯಿಂದ ನೋಡುವ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಆದ್ದರಿಂದಲೇ ತಮ್ಮ ಹುಟ್ಟು ಬೆಳವಣಿಗೆಗಳ ಪರಿಸರವಾದ ಮಲೆನಾಡಿನ ಜೀವನವನ್ನು ತಮ್ಮದೇ ರಕ್ತ ಮಾಂಸಗಳ ಭಾಗವಾದ ಜನರ ಆಚಾರ ವ್ಯವಹಾರಗಳನ್ನು ಕಲಾದೃಷ್ಟಿಯ ನಿರ್ಲಿಪತ್ತೆಯಿಂದ ನೋಡಿ ಅಲ್ಲಿನ ಓರೆಕೋರೆಗಳನ್ನು ಹೊಸದಾಗಿ ಚಿತ್ರಿಸಿದ್ದಾರೆ. ಇದಕ್ಕೆ ಇನ್ನೂ ರಂಜನೀಯವಾದ ನಿದರ್ಶನ ‘ಶೂದ್ರ ಸಂಘದ ಮಹಾಸಭೆಯಲ್ಲಿ” ನಡೆದ ಘಟನೆಗಳ ವರ್ಣನೆ. ಮದ್ಯಪಾನ ಪ್ರಿಯರೆಲ್ಲ ಸಭೆ ಸೇರಿ ಮದ್ಯಪಾನ ನಿಷೇಧದ ನಿರ್ಣಯ ತೆಗೆದುಕೊಂಡ ಸಂದರ್ಭ. “ಕಾನೂರು ಹೆಗ್ಗಡಿತಿ” ಕಾದಂಬರಿಯ ಶೂದ್ರ ಸಂಘದ ಮಹಾಸಭೆಯಲ್ಲಿ ಎಂಬ ಅಧ್ಯಾಯದಲ್ಲಿ ಕಾದಂಬರಿಕಾರರು ಅಲ್ಲಿಯ ನಡೆವಳಿಯ ವಿವರಗಳನ್ನು ನೀಡಿರುವುದು ಹೀಗೆ :

“ಅಧ್ಯಕ್ಷರಾದಿಯಾಗಿ ಸಕಲ ಸದಸ್ಯರ ಬಾಯಿ ಮೂಗುಗಳಿಂದಲೂ ಹೆಂಡಕಳ್ಳು ಸಾರಾಯಿಗಳ ಕಂಪು ಹೊಮ್ಮಿ ಸಭಾಸ್ಥಳದ ವಾಯುಮಂಡಲವನ್ನೆಲ್ಲ ತೀವಿ, ಮದ್ಯಪಾನ ವಿರೋಧದ ಮಸೂದೆಯನ್ನು ಪರಿಹಾಸ್ಯಮಾಡುವಂತಿತ್ತು! ಬಾಳೂರು ಸಿಂಗೇಗೌಡರು ಉಪನ್ಯಾಸ, ಮುಗಿಸಿ, ಬಾಯಲ್ಲಿ ಜೊಲ್ಲು ಸುರಿಸುತ್ತ, ಬಹಳ ಶ್ರಮದಿಂದ ತಮ್ಮ ಪೀಠವನ್ನು ಕೆಡವಿ ತಡವಿ ಹುಡುಕಿ, ಕುಳಿತುಕೊಂಡ ಮೇಲೆ ಕಾನೂರು ಚಂದ್ರಯ್ಯ ಗೌಡರು ಮಾತಾಡಲು ಬಂದಿದ್ದರು. ಸಭೆಯಲ್ಲಿ ಯಾರಾದರೂ ಮಾತನಾಡಲು ಎದ್ದರಾಗಲಿ ಅಥವಾ ಮಾತು ಮುಗಿಸಿ ಕುಳಿತರಾಗಲಿ, ಉತ್ತೇಜಕವಾಗಿಯೂ ಗೌರವ ಸೂಚಕವಾಗಿಯೂ ಕೈ ಚಪ್ಪಾಳೆ howeಹೊಡೆಯುವುದು ಸಭ್ಯತೆಯ ಕುರುಹು ಎಂಬುದನ್ನು ಹೊಸದಾಗಿ ಕಲಿತಿದ್ದ ಆ ಸಂಘದ ಸದಸ್ಯರು, ಚಂದ್ರಯ್ಯ ಗೌಡರು ಎದ್ದುನಿಂತ ಕೂಡಲೇ, ಕುಡಿದ ಮುತ್ತಿನಲ್ಲಿ, ಯದ್ವಾತದ್ವಾ ಕರತಾಡನೆ ಮಾಡಿದರು. ಅದು ಉತ್ತೇಜನ ಸೂಚಕವೋ ಪರಿಹಾಸ ಸೂಚಕವೂ ಗೊತ್ತಾಗುವಂತಿರಲಿಲ್ಲ. ಅಂತೂ ಚೆನ್ನಾಗಿ ಕುಡಿದು ಹಣ್ಣುಹಣ್ಣಾಗಿದ್ದ ಚಂದ್ರಯ್ಯಬೌಡರು ಇದ್ದಕ್ಕಿದ್ದ ಹಾಗೆ ಆ ಕೈಚಪ್ಪಾಳೆಯ ಸಿಡಿಲುದನಿಗೆ ಕುಮುಟಿಬಿದ್ದರು. ಬಯಲು ಸೀಮೆಗೆ ರುಚಿಸುವಂತೆ ಹೇಳುವುದಾದರೆ, ಹಠಾತ್ತಾಗಿ ಚಕಿತರಾದರು. (ಚಕಿತರಾದುದಕ್ಕಿಂತಲೂ ಸ್ವಲ್ಪ ಹೆಚ್ಚಾಗಿಯೇ ಆದರೆಂದು ಹೇಳಬೇಕು!) ಇನ್ನೇನು ತೂರಾಡಿ ನೆಲಕ್ಕೆ ಬಿಳಬೇಕು! ಅಷ್ಟರಲ್ಲಿ ಪಕ್ಕದಲ್ಲಿ ಕುಳಿತಿದ್ದ ಸೀತೆಮನೆ ಸಿಂಗಪ್ಪಗೌಡರು ಕೈಕೊಟ್ಟು ಹಿಡಿದು ನಿಲ್ಲಿಸಿದರು. ಚಂದ್ರಯ್ಯಗೌಡರು ಏನೇನನ್ನು ಹೇಳಬೇಕೆಂದು ಮನಸ್ಸು ಮಾಡಿದ್ದರೋ ಅದೆಲ್ಲ ಕೈಚಪ್ಪಾಳೆಯ ದನಿಯಿಂದ ಮಿದುಳಿನಲ್ಲಿ ಕದಡಿಹೋಗಿತ್ತು. ಅವರ ಕಣ್ಣಿಗೆ ಸಭಾಂಗಣವೆಲ್ಲ ಅಸ್ಥೂಲವಾದಂತಾಗಿ ಸ್ವಪ್ನದಲ್ಲಿಯೊ ಎಂಬಂತೆ ತೇಲಾಡತೊಡಗಿದರು. ಆದರೂ ನೆರೆದವರ ಅಜ್ಞಾನಾಂಧಕಾರವನ್ನು ಪರಿಹರಿಸಿ, ಅವರಿಗೆ ಬೆಳಕು ತೋರುವ ಸಲುವಾಗಿ ‘ಉಫಣ್ಯಾಸ’ ಮಾಡಿಯೇ ಬಿಟ್ಟರು. ಆದರೆ ಅವರು ಮಾತಾಡಿದುದು ಮದ್ಯಪಾನದ ಪರವಾಗಿಯೋ ವಿರೋಧವಾಗಿಯೋ ಒಬ್ಬರಿಗೂ ಗೊತ್ತಾಗಲಿಲ್ಲ.

“ಎಲ್ಲರಿಗೂ ಕೈಮುಗೀತೀನಿ… ನಾನು ಎಲ್ಡು ಮಾತಾಡಿ ಕೂತ್ಕೋ ಬೇಕು ಅಂತ ಎದ್ದು ನಿಂತೀನಿ….

ಗೌಡರಿಗೆ ಮುಂದೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ತಲೆಯಲ್ಲಿ ಹೆಂಡವು ಮದ್ಯಪಾನ ನಿರೋಧಕ್ಕೆ ವಿರೋಧವಾಗಿ ಚಳವಳಿ ಹೂಡಿತ್ತು.

ಪಕ್ಕದಲ್ಲಿದ್ದ ಸಿಂಗಪ್ಪಗೌಡರು ಪಿಸುಮಾತಿನಲ್ಲಿ “ಹೆಂಡ ಕುಡಿಯುವುದು ಕೆಟ್ಟದ್ದು” ಎಂದು ಉಪನ್ಯಾಸ ಮಾಡಲು ಸೂಚನೆ ಕೊಟ್ಟರು.

ಆ ಕೊಟ್ಟ ಸೂಚನೆ ತಮಗೆ ಮಾಡಿದ ಉಪದೇಶವೆಂದು ಕೆರಲಿ ಚಂದ್ರಯ್ಯಗೌಡರು ಮೆಳ್ಳಗಣ್ಣು ಮಾಡಿಕೊಂಡು, ದುರುದುರು ನೋಡುತ್ತ, ಸಿಂಗಪ್ಪಗೌಡರ ಕಡೆ ತಿರುಗಿ, ಗಟ್ಟಿಯಾಗಿ “ಯಾರೋ… ಯಾರೋ ಹೇಳ್ದೋರು ನಿನಗೆ?” ಎಂದು ಕೂಗಿದರು.

“ನಿಮಗಲ್ಲ ಹೇಳಿದ್ದು, ಅವರಿಗೆ ಹೇಳಿ ಅಂತ ಹೇಳ್ದೆ ಅಷ್ಟೇ!” ಎಂದು ಮೆಲ್ಲಗೆ ನುಡಿದು ಸಿಂಗಪ್ಪ ಗೌಡ್ರು ಸಮಾಧಾನ ಮಾಡಿದರು.

ಚಂದ್ರಯ್ಯ ಗೌಡರು ಮತ್ತೆ ಪ್ರಾರಂಭಿಸಿದರು:
“ಹೆಂಡ ಕುಡಿಯೋದು.. ಬಾಳ ಕಟ್ಟಿದ್ದು .. ಬಾಳ ಕೆಟ್ಟದ್ದು… ಕಾಫಿ ಕುಡಿಯೋದೂ… ಅದಕ್ಕಿಂತಾ ಕೆಟ್ಟದ್ದು!… ಹೆಂಡ ಬಿಟ್ಟರೆ … ಮುಂದೇನು ಗತಿ ?… ಅಂತಾ ಕೇಳ್ತಿನಿ ನಾನು!… ಅಮ್ಮ ಅಪ್ಪ ಕುಡ್ದಿದ್ದಾ.. ನಮ್ಮಜ್ಜ ಕುಡ್ದಿದ್ದಾ… ನಾವು ಕುಡಿತೀವಿ.. ಮಳೆಗಾಲದಾಗೆ ಕುಡಿದ್ರೆ… ಒಳ್ಳೆ ಕಾವು ಬರುತ್ತದೆ!… ಸಕ್ತಿ.. ಸಕ್ತಿ ಬರುತ್ತದೆ.. ಹೆಂಡ ಕುಡಿಯೋದು ಬಹಳ ಕೆಟ್ಟದ್ದು..”

ಭಾಷಣದ ನಡುವೆ ಚಂದ್ರಯ್ಯಗೌಡರು ಕುಸಿದುಬಿದ್ದರು…

ಮರುದಿನ ಒಂದು ‘ಮಾನಪತ್ರ’ವಾಯಿತು. ಅದರಲ್ಲಿ ಇನ್ನು ಮುಂದೆ ಮದ್ಯಪಾನ ಮಾಡುವುದಿಲ್ಲ ಎಂದು ತಿರುಪತಿ, ಕಾಶಿ, ರಾಮೇಶ್ವರ, ಧರ್ಮಸ್ಥಳಗಳ ದೇವರುಗಳ ಅಣೆ ಹಾಕಿತ್ತು. ಕೆಲವರೆಲ್ಲ ಒಪ್ಪಿ ರುಜು ಹಾಕಿದರು. ಚಂದ್ರಯ್ಯ ಗೌಡರೂ ರುಜು ಹಾಕಿದರು.

ಬಾಳೂರು ಸಿಂಗೇಗೌಡರು “ನಾನು ದೇವರಾಣೆ ಹಾಕಿ ರುಜು ಹಾಕಲಾರೆ. ನನಗೆ ಹೆಂಡ್ತಿ ಮಕ್ಳನ್ನ ಬಿಡ್ತೀನಿ ಅಂತ ನಂಬಿಕೇನೂ ಇಲ್ಲ. ಇಷ್ಟಾನೂ ಇಲ್ಲ” ಎಂದು ಬಿಟ್ಟರು!

ಚಂದ್ರಯ್ಯಗೌಡರು ‘ಹಾಂಗಾದ್ರೆ ನೀವು ಮೀಟಿಂಗಿಗೆ ಬಂದಿದ್ಯಾಕೆ?” ಎಂದರು.

“ನೀವೆಲ್ಲ ಕರೆದ್ರಿ, ನಾನು ಬಂದೆ. ಹೋಗು ಅಂದ್ರೆ ಹೋಗ್ತೀನಿ” ಎಂದು ಬಾಳೂರು ಸಿಂಗೇಗೌಡರು ಹೊರಟೇಹೋದರು.

ಅವರಂತೂ ಸಾಯುವವರೆಗೂ ಕುಡಿಯುವುದನ್ನು ಬಿಡಲಿಲ್ಲ. ಮಾನಪತ್ರಕ್ಕೆ ರುಜು ಹಾಕಿದವರಲ್ಲಿ ಯಾರೋ ಒಂದಿಬ್ಬರು ಮಾತ್ರ ಮದ್ಯಪಾನವನ್ನು ಸಂಪೂರ್ಣವಾಗಿ ವಿಸರ್ಜಿಸಿದರಂತೆ; ಉಳಿದವರು ಅದುವರೆಗೆ ಬಹಿರಂಗವಾಗಿದ್ದುದನ್ನು ಅಂತರಂಗವನ್ನಾಗಿ ಮಾಡಿಕೊಂಡರು.

ಈ ಶೂದ್ರ ಸಂಘದ ಮಹಾಸಭೆಯಲ್ಲಿ ನಡೆದ ಕಥೆಯ ಪೂರ್ವೋತ್ತರವನ್ನೆಲ್ಲ ಕೇಳಿ ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರು ಮೊದಲಾಗಿ ವೇದಮೂರ್ತಿಗಳಾದ ಬ್ರಾಹ್ಮಣ ನಾಗರಿಕರೆಲ್ಲ ಹಾರಿ ಹಾರಿ ಬಿದ್ದು ನಕ್ಕು “ಹುಟ್ಟುಗುಣ ಸುಟ್ಟರೂ ಹೋದೀತೆ? ತೆನ್ನಾಲಿ ರಾಮಕೃಷ್ಣ ಕರಿಯ ನಾಯಿಯನ್ನು ತೊಳೆದು ಬಿಳಿಯ ನಾಯಿಯನ್ನಾಗಿ ಮಾಡಿದ ಹಾಗೆ!” ಎಂದರಂತೆ.

ಕುವೆಂಪುರವರ ‘ಕಾನೂರು ಹೆಗ್ಗಡತಿ’ಯಲ್ಲಿ ‘ಕಿಲಸ್ತರ ಮಾರ್ಕನಿಗೆ ಬೈರನಾಮ ಹಾಕಿದ್ದು’ ಅಂಥದೇ ಸ್ವಾರಸ್ಯದ ಪ್ರಸಂಗ. ಬೇಲರ ಬೈರ ಹೆಂಡ ಇಳಿಸಲು ಬಗನಿ ಮರ ಏರಿದ್ದಾನ. ಕೆಳಗೆ ಮಾರ್ಕ ಕಳ್ಳು ಕಳ್ಳನನ್ನು ಹಿಡಿಯಲು ಸಜ್ಜಾಗಿ ನಿಂತಿದ್ದಾನೆ. ಮುಂದಿನ ಪ್ರಸಂಗವನ್ನು ಕಾದಂಬರಿಕಾರರ ಮಾತುಗಳಲ್ಲೇ ಕೇಳಬೇಕು:

“ಇಳಿತಿಯೋ ಇಲ್ಲೋ? ಮಾಡಿಮಗನೇ, ಥೂ!” ಎಂದು ಮಾರ್ಕರೇಗಿ, ಮೇಲಕ್ಕೆ ಉಗುಳಿದನು. ಉಗುಳು ಗಾಳಿಯಲ್ಲಿ ತುಂತುರು ತುಂತುರಾಗಿ ಅವನ ಮುಖದ ಮೇಲೆಯೇ ಬಿದದಿತು. ಮಾರ್ಕನಿಗೆ ಮತ್ತಷ್ಟು ಕೋಪವೇರಿತು. ಒಂದು ಬಡಿಗೆ ತೆಗೆದುಕೊಂಡು ಬೈರನ ಕಡೆಗೆ ಬೀಸಿದನು. ಅದು ಅವನಿಗೆ ತಗುಲದೆ ಪಕ್ಕದಲ್ಲಿರೊಯ್ಯೆಂದು ನುಗ್ಗಿಹೋಗಿ ಹಳುವಿನಲ್ಲಿ ಬಿದ್ದು ಸದ್ದು ಮಾಡಿತು.

“ಅಯ್ಯಯ್ಯೋ! ಇಳಿತೀನಿ! ನಿಮ್ಮ ದಮ್ಮಯ್ಯ!” ಎಂದು ಬೈರ ಇಳಿಯತೊಡಗಿದನು. ಮಾರ್ಕನು ಮುಖವೆತ್ತಿ ಅವನನ್ನೇ ನೋಡುತ್ತ, ಅವನು ಕೆಳಗಿಳಿದೊಡನೆಯೆ ಹೇಗೆ ಹಿಡಿಯಬೇಕೆಂಬುದನ್ನು ಕುರಿತು ಆಲೋಚಿಸುತ್ತಿದ್ದನು.

ಇನ್ನೇನು ನೆಲ ಒಂಬತ್ತು ಹತ್ತು ಅಡಿಗಳಷ್ಟು ದೂರದಲ್ಲಿದೆ ಎನ್ನುವಾಗ ಬೈರ ನಿಂತನು. ಕೆಳಗೆ ನೋಡಿದನು.

“ಇಳಿಯೋ! ಇಳಿಯೋ! ಕತ್ತಲಾಯ್ತು!” ಮಾರ್ಕ ಬೈರನಿಗೆ ನೇರವಾಗಿ ಕೆಳಗಡೆ ನಿಂತು ಆಕಾಶದ ಕಡೆಗೆ ಮುಖವೆತ್ತಿ ಹೇಳುತ್ತಿದ್ದನು.

ಕ್ಷಣ ಮಾತ್ರದಲ್ಲಿ ಬೈರನ ಮನಸ್ಸಿಗೆ ಒಂದು ಉಪಾಯ ಹೊಳೆಯಿತು. ಹಿಂದೆ ಪ್ರಯತ್ನಪಟ್ಟರೂ ಹೊಳೆದಿರಲಿಲ್ಲ. ಈಗ ಅಪಾಯ ಸನ್ನಿಹಿತವಾದಾಗ, ಸನ್ನಿವೇಶವೇ ಉಪಾಯವನ್ನೂ ತೋರಿಸಿಕೊಟ್ಟಿತು. ತುಂಬಿದ್ದ ಕಳ್ಳುಮೊಗೆಯನ್ನು ಎಡಗೈಯಿಂದ ಬಲಗೈಗೆ ಜಾರಿಸಿಕೊಂಡನು. ಅದನ್ನೇ ನೋಡುತ್ತಿದ್ದ ಮಾರ್ಕ ಎಡಗೈ ಸೋತುದರಿಂದ ಬಲಗೈಗೆ ಜಾರಿಸಿಕೊಂಡನು. ಅದನ್ನೇ ನೋಡುತ್ತಿದ್ದ ಮಾರ್ಕಎ ಡಗೈ ಸೋತುದರಿಂದ ಬಲಗೈಗೆ ಸರಿಸಿಕೊಳ್ಳುತ್ತಿದ್ದಾನೆ ಎಂದು ಭಾವಿಸಿದನು. ಆದರೆ ಮರುಕ್ಷಣದಲ್ಲಿಯೇ ಕಳ್ಳುತುಂಬಿ ಭಾರವಾಗಿದ್ದ ಆ ಮೊಗೆ ಮೇಲೆ ನೋಡುತ್ತಿದ್ದ ಅವನ ಮುಖದ ಮೇಲೆ ಅದರಲ್ಲಿಯೂ ಮೂಗಿಗೆ ಸರಿಯಾಗಿ, ಧೊಪ್ಪೆಂದು ಬಿದ್ದು ಒಡೆದು ಹೋಳುಹೋಳಾಗಿ ಚದುರಿಹೋಯಿತು. ನೊರೆಗಳ್ಳು ಕಣ್ಣು ಮೂಗು ಬಾಯಿ ಕಿವಿ ಎಲ್ಲೆಲ್ಲಿಯೂ ನುಗ್ಗಿ ಪ್ರವಹಿಸಿತು! ಮೂಗಿನ ಎಲುಬಂತೂ ಮುರಿದುಹೋದಂತಾಗಿ ಅಸಾಧ್ಯವಾಗಿ ನೋವಾಯಿತು. ಕಣ್ಣುಗಳಿಗೆ ನುಗ್ಗಿದ ಹುಳಿಗಳುಳ್ಳ ಬೈರನ ಪರವಾಗಿ ಚೆನ್ನಾಗಿ ವಾದಿಸಿತ್ತು.

“ಅಯ್ಯೋ! ಅಯ್ಯಯ್ಯೋ! ಅಯ್ಯಯ್ಯೋ ಸೂಳೇ ಮಗನೇ! ತೆಗೆದಲ್ಲೊ ಕೊಂದ್ಯೇನೋ! ತಿಮ್ಮಾ! ಎಲ್ಲಿ ಸತ್ಯೊ! ಕೊಂದನಲ್ಲೋ! ಕೊಂದನಲ್ಲೋ!.. ಹಿಡಕೊಳ್ಳೋ ಓಡ್ದನಲ್ಲೊ! ಅಯ್ಯಯ್ಯೋ!…” ಎಂದು ಮೊದಲಾಗಿ ಮಾರ್ಕ ಆ ನಿಶ್ಯಬ್ದವಾದ ಸಂಧ್ಯಾ ಕಾನದಲ್ಲಿ ತಾರಸ್ವರದಿಂದ ಕೂಗಿಕೊಂಡು ಹುಚ್ಚು ಹಿಡಿದವನಂತೆ ಚೇಳು ಕಡಿದವನಂತೆ ವರ್ತಿಸಿದನು. ಬೈರ ಇಳಿದು ಪರಾರಿಯಾದುದನ್ನು ನೋಡಲೂ ಆಗಲಿಲ್ಲ; ಆಲಿಸಲೂ ಆಗಲಿಲ್ಲ…

“ಮಲೆಗಳಲ್ಲಿ ಮದುಮಗಳು” ಕಾದಂಬರಿಯಲ್ಲಿ ಕುವೆಂಪು ಮಲೆನಾಡಿನ ಅಂದಿನ ದಿನಗಳಲ್ಲಿ ಅತ್ಯಂತ ದಾರುಣವಾಗಿ ಪರಿಣಮಿಸಬಹುದಾಗಿದ್ದ ಸಂದರ್ಭವೊಂದನ್ನು ತಮ್ಮ ಸಮಯೋಚಿತವಾದ ಹಾಸ್ಯಪ್ರಜ್ಞೆಯಿಂದ ವಿನೋದಾಂತವಾಗಿ ಪರಿವರ್ತಿಸಿದ್ದಾರೆ. ದೇವಯ್ಯನವರು ಅಂದು ಸಂಜೆ ತಮ್ಮ ತಾತ ಮುತ್ತಾಂದಿರೆಲ್ಲ ಆಶ್ರಯಿಸಿದ್ದ ಹಿಂದೂ ಧರ್ಮಕ್ಕೆ ತಿಲಾಂಜಲಿಯನ್ನು ಕೊಟ್ಟು ಕ್ರಿಸ್ತನ ಧರ್ಮವನ್ನು ಸ್ವೀಕರಿಸಲಿದ್ದಾರೆ. ಕರಿಪಾದ್ರಿ ಜೀವರತ್ನಯ್ಯನವರು ಬಿಳಿಪಾದ್ರಿ ಲೇಕ್‌ಹಿಲ್‌ದೊರೆಗಳ ಸಮ್ಮುಖದಲ್ಲಿ ದೇವಯ್ಯನವರಿಗೆ ಕ್ರೈಸ್ತಮತ ದೀಕ್ಷೆಯನ್ನು ನೀಡಲಿದ್ದಾರೆ. ನಾನಾ ಸಾಮಾಜಿಕ ಕಾರಣಗಳಿಗಾಗಿ ಆ ಪ್ರಶಸ್ತ ಪರಕ್ರಿಯೆಯು ಗುಟ್ಟಾಗಿ ನಡೆಯುತ್ತಿದೆ. “ಮೇಗರಹಳ್ಳಿಯ ಮಿಶನ್‌ಇಸ್ಕೂಲಿನ ಹೊಸ ಕಟ್ಟಡದ ಪ್ರಾರಂಭೋತ್ಸವದ ದಿನವೇ. ಇನ್ನು ಮುಂದಿನ ಪ್ರಮುಖ ಘಟನೆ ನಡೆದದ್ದು ಹೀಗೆ :

“ಪಿಟೀಲು ಕೊಯ್ದು ಪ್ರಾರ್ಥನೆ ನಡೆಸುತ್ತಿದ್ದ ಉಪದೇಶಿ ಜೀವರತ್ನಯ್ಯನವರು ಬೆಳಕಂಡಿಯ ಕಡೆಗೆ ನೋಡುತ್ತಾರೆ.: ಒಂದು ಕೋವಿಯ ನಳಿಗೆಯ ಬಾಯಿ ತಮ್ಮ ಕಡೆಗೇ ಗುರಿಯಿಟ್ಟು ಕಿಟಕಿಯ ಮರದ ಸರಳುಗಳ ಮಧ್ಯೆ ತೂರುತ್ತಿದೆ! ಯೇಸುಕ್ರಿಸ್ತ, ಬೈಬಲ್ಲು, ಕ್ರೈಸ್ತಮತ, ಧರ್ಮಪರಚಾರ, ಉಪದೇಶಿತ್ವ, ಪಾದ್ರಿತ್ವ-ಇತ್ಯಾದಿಯೆಲ್ಲ ಮನುಷ್ಯತ್ವದ ಉಪಾಧಿಗಳೂ ತಟಕ್ಕನೆ ಕಳಚಿಬಿದ್ದು, ಅವರ ಜೀವ ತನ್ನ ಪ್ರಾಣತ್ವದ ಮೂಲೋಪಾಧಿಯೊಂದನ್ನು ಮಾತ್ರ ಅವಲಂಬಿಸಿ, ಬತ್ತಲೆ ನಿಂತಂತಾಯಿತು ಬದುಕಿದರೆ ಬೆಲ್ಲ ತಿಂದೇನು ಎಂಬಂತೆ ಹೌಹಾರಿ, ಪಿಟೀಲನ್ನೂ ಸುವಾರ್ತೆಯನ್ನೂ ಹೊತ್ತು ಹಾಕಿ, ಮರೆಯಾಗಿ ಅವಿತುಕೊಳ್ಳಲು ಒಂದು ಮೂಲೆಯ ಕಡೆಗೆ ಓಡಿದರು. ಅವರಿಗೆ ಏನು? ಯಾರು? ಏಕೆ? ಎಂಬುದೊಂದೂ ಅರ್ಥವಾಗದಿದ್ದರೂ ತನ್ನನ್ನು ಗುಂಡಿಕ್ಕಿ ಕೊಲೆ ಮಾಡಲು ಹವಣಿಸುತ್ತಿದ್ದಾರೆ ಎಂಬುದಂತೂ ಚೆನ್ನಾಗಿ ಅರ್ಥವಾಗಿತ್ತು. ಮೊನ್ನೆತಾನೆ ಬಯಲು ಸೀಮೆಯ ಒಂದು ಹಳ್ಳಿಯಲ್ಲಿ ಕಿಲಸ್ತರ ಜಾತಿಗೆ ತನ್ನ ಮಗನನ್ನು ಸೇರಿಸಲು ಹವಣಿಸುತ್ತಿದ್ದ ಒಬ್ಬ ಪಾದ್ರಿಯನ್ನು ರೈತನೊಬ್ಬನು ದೊಣ್ಣೆಯಿಂದ ಹೊಡೆದು ಕೊಂದಿದ್ದ ಸುದ್ದಿ ಬಂದಿದ್ದು, ಅದರ ನೆನಪಿನ್ನೂ ಹಸಿಗಾಯವಾಗಿಯೇ ಇತ್ತು, ಜೀವರತ್ನಯ್ಯನ ಮನಸ್ಸಿನಲ್ಲಿ.

ಆ ಮತಾಂತರದ ಯಜ್ಞದಲ್ಲಿ ಯೂಪಸ್ತಂಭಕ್ಕೆ ಕಟ್ಟುಗೊಂಡು ಬಲಿಪಶುವಾಗಿದ್ದ ದೇವಯ್ಯ, ತನ್ನ ರಕ್ಷಣೆಗೆ ಬರುತ್ತೇನೆಂದು ಭಾಷೆಯಿತ್ತು ಮೋಸ ಮಾಡಿಬಿಟ್ಟೇನೋ ಎಂದು ಕಳವಳಿಸುತ್ತಾ, ಮುಕುಂದಯ್ಯನ ಆಗಮನವನ್ನೇ ನಿರೀಕ್ಷಿಸುತ್ತಿದ್ದವನು, ಮರದ ಸರಳುಗಳ ನಡುವೆ ಬೆಳಕಂಡಿಯಲ್ಲಿ ತೂರಿದ ಕೋವಿಯ ನಳಿಗೆಯನ್ನು ಕಂಡು, ‘ಸದ್ಯಕ್ಕೆ ಬದುಕಿದೆ.’ ಎಂದುಕೊಂಡನು. ತಟಕ್ಕನೆ ತನ್ನ ನಾಟಕಾಭಿನಯವನ್ನು ಪ್ರಾರಂಭಿಸಿ ಬಿಳಿ ಪಾದ್ರಿ ರೆವರೆಂಡ್‌ಲೇಕ್‌ಹಿಲ್ಲರನ್ನು ಪ್ರಾಣಾಪಾಯದಿಂದ ತಪ್ಪಿಸಲೆಂಬಂತೆ, ತೋಳ್ವಿಡಿದು ಎಳೆದುಕೊಂಡೆ ಓಡಿದನು, ಕರಿಪಾದ್ರಿ ಅವಿತುಕೊಂಡಿದ್ದ ಮೂಲೆಗೆ.’

ಅಷ್ಟರಲ್ಲಿ ಕಿಟಕಿಯ ಆಚೆಯಿಂದ ಮೊಳಗಿತು ಮುಕುಂದಯ್ಯನ ರುದ್ರವಾಣಿ : “ಪಾದ್ರಿಗಳೆ, ನನ್ನ ಬಾವನಿಗೆ ಜಾತಿ ಕೆಡಿಸುವ ಕೆಲಸ ಮಾಡುತ್ತಿದ್ದೀರಿ. ಬಾವಿಗೆ ಹಾರಲಿದ್ದ ನನ್ನ ಅಕ್ಕನನ್ನು ತಡೆದು ನಿಲ್ಲಿಸಿ ಬಂದಿದ್ದೇನೆ. ಒಳ್ಳೆಯ ಮಾತಿಗೆ, ನನ್ನ ಭಾವನನ್ನು ಕಿಲಸ್ತರ ಜಾತಿಗೆ ಸೇರಿಸುವುದಿಲ್ಲ ಎಂದು ನಿಮ್ಮ ದೇವರ ಮೇಲೆ ಆಣೆಯಿಟ್ಟು ಅವನನ್ನು ಬಿಟ್ಟುಕೊಡದಿದ್ದರೆ ನಿಮ್ಮನ್ನೆಲ್ಲ ಸುಟ್ಟು ಬಿಡುತ್ತೇನೆ…”

“ದೇವಯ್ಯಗೌಡರೆ, ನಿಮ್ಮ ಭಾವನಿಗೆ ಬುದ್ಧಿ ಹೇಳಿ. ಅವರು ಮಾಡುತ್ತಿರುವುದು ಕ್ರಿಮಿನಲ್‌ಕಾರ್ಯ. ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ… ಎಂದರು ರೆವರೆಂಡ್‌ಲೇಕ್‌ಹಿಲ್‌, ಅವರು ಉಪದೇಶಿ ಜೀವರತ್ನಯ್ಯನಂತೆ ದಿಗಿಲುಗೊಂಡಿರಲಿಲ್ಲ.

ಇಷ್ಟರಲ್ಲಿ ಉಪದೇಶಿ ಜೀವರತ್ನಯ್ಯನವರು ಸ್ಕೂಲಿಗೆ ಇದ್ದ ಏಕೈಕ ಬಾಗಿಲ ಬಳಿಗೆ ಧಾವಿಸಿ, ಅದನ್ನು ತೆರೆಯಲೆಂದು ಎಳದೆರು, ಬಾಗಿಲಿಗೆ ಹೊರಗಡೆ ಇದ್ದ ಸರಪಣಿಯ ಚಿಲಕವನ್ನು ಐತ ಮುಕುಂದಯ್ಯನ ಅಪ್ಪಣೆಯಂತೆ, ಹಾಕಿಕೊಂಡು, ಅದರ ರಕ್ಷಣೆಗೆ ಕತ್ತಿ ಹಿಡಿದು ನಿಂತಿದ್ದಾನಾದ್ದರಿಂದ ಅದು ತೆರೆಯಲೊಲ್ಲದೆ ಹೋಯ್ತು.

ಮೇಲುಸಿರು ಕೀಳುಸಿರು ಬಿಡುತ್ತಾ ಉಪದೇಶಿ ಕೂಗಿದರು : “ದೇವಯ್ಯಗೌಡರೆ, ನೀವೇ ಹೊಣೆಯಾಗುತ್ತೀರಿ, ರೆವರೆಂಡ್‌ಅವರಿಗೆ ಏನಾದರು ಆದರೆ! ಇಡೀ ಬ್ರಿಟಿಷ್‌ಚಕ್ರಾಧಿಪತ್ಯವೇ ನಿಮ್ಮ ಮನೆಮಾರುಗಳನ್ನೆಲ್ಲಾ ಧ್ವಂಸ ಮಾಡಿಬಿಡುತ್ತದೆ! ನಮ್ಮನ್ನು ರಕ್ಷಿಸುವ ಭಾರ ನಿಮ್ಮದು…”

“ಹೆದರಬೇಡಿ, ಉಪದೇಶಿಗಳೇ! ನಾನು ಹೇಗಾದರೂ ಮಾಡಿ ನಿಮ್ಮನ್ನು ಉಳಿಸುತ್ತೇನೆ.” ನಾಟಕದ ಮಾತನಾಡಿ ದೇವಯ್ಯಗೌಡರು ಕಿಟಕಿಯ ಕಡೆಗೆ ನೋಡಿದಾಗ ಅಲ್ಲಿ ಕೋವಿಯ ನಳಿಗೆ ಕಾಣಿಸಲಿಲ್ಲ. ಆದರೆ ಅದು ಆ ಕಿಟಕಿಯ ಎದುರಿಗಿದ್ದ ಗೋಡೆಯ ಕಿಟಕಿಯಿಂದ ತೂರುತ್ತಿತ್ತು! ಯಾವಾಗ ಕೋವಿಯ ನಳಿಗೆ ತಮ್ಮ ಕಡೆಗೆ ಮುಖಮಾಡಿತೋ ಆವಾಗ ಉಪದೇಶಿ ಅಲ್ಲಿದ್ದವರನ್ನೆಲ್ಲ ತಳ್ಳಿಕೊಂಡು ಹೋಗಿ ಎದುರಿಗಿದ್ದ ಮತ್ತೊಂದು ಮೂಲೆಯಲ್ಲಿ ರಕ್ಷಣೆ ಪಡೆದು ನಿಂತರು!

ದೇವಯ್ಯ ಮಾತ್ರ ಕೈಮುಗಿದುಕೊಂಡು, ನೇರವಾಗಿ ಬೆಳಕಂಡಿಯ ಬಳಿ ಸಾರಿ, ಕೋವಿಯ ನಳಿಗೆಗೆ ಅಡ್ಡನಿಂತು ಬಿನ್ನಯ್ಸಿದನು : “ಬಾವ, ಮುಕುಂದ ಬಾವ, ಬೇಡ, ಖಂಡಿತಾ ಬೇಡ! ನನ್ನನ್ನವರು ಜಾತಿಗೆ ಸೇರಿಸಿಕೊಳ್ಳುವುದಿಲ್ಲ.” ಬಾಗಿಲ ಚಿಲಕ ತೆಗಿ!..

“ಹಾಗೆಂದು ಉಪದೇಶಿಗಳೇ ಹೇಳಲಿ. ಇಲ್ಲದಿದ್ದರೆ ನಾನು ಬಿಡುವುದಿಲ್ಲ…” ಎಂದಿತು ಮುಕುಂದಯ್ಯನ ದೃಢಧ್ವನಿ.

ದೇವಯ್ಯ ಮೂಲೆಗೆ ಹಿಂತಿರುಗಿ, ತನ್ನ ಬಾವನಿಗೆ ಒಮ್ಮೊಮ್ಮೆ ಒಂದು ತರಹದ ಹುಚ್ಚು ಕೆರಳುತ್ತದೆಂದೂ, ಸದ್ಯಕ್ಕೆ ಅಪಾಯದಿಂದ ಪಾರಾಗಬೇಕಾದರೆ ಅವನು ಹೇಳಿದಂತೆ ಮಾಡುವುದೇ ಲೇಸೆಂದೂ ತಿಳಿಸಿದನು.

ರೆವರೆಂಡ್‌ಲೇಕ್‌ಹಿಲ್‌ಹೇಳಿದರು : “ನಾವೇನೂ ನಿಮ್ಮನ್ನು ಬಲಾತ್ಕಾರವಾಗಿ ಕ್ರೈಸ್ತಮತಕ್ಕೆ ಸೇರಿಸುತ್ತಿಲ್ಲ. ನಿಮ್ಮ ಇಷ್ಟದ ಮೇರೆಗೆ ಹಾಗೆ ಮಾಡುತ್ತಿದ್ದೇವೆ. ನಿಮ್ಮ ಹೆಂಡತಿಯನ್ನು ನೀವು ಒಪ್ಪಿಸದಿದ್ದರೆ ಅದು ನಿಮ್ಮ ತಪ್ಪು. ಅದು ನನಗೆ ಮೊದಲೇ ಗೊತ್ತಾಗಿದ್ದರೆ ನಿಮ್ಮನ್ನು ಮತಾಂತರಗೊಳಿಸಲು ನಾನೇ ಒಪ್ಪುತ್ತಿರಲಿಲ್ಲ. ಕ್ರೈಸ್ತರಿಗೆ ನಿಮ್ಮ ಕುಟುಂಬವನ್ನು ನಾಶಗೊಳಿಸುವ ಉದ್ದೇಶ ಎಂದೂ ಇರುವುದಿಲ್ಲ… ಎಂದು, ಕರಿಯ ಪಾದ್ರಿಯ ಕಡೆಗೆ ತಿರುಗಿ ಮುಂದುವರಿದರು:

“ಉಪದೇಶಿಗಳೆ, ನೀವು ಅದನ್ನೆಲ್ಲ ಮೊದಲೇ ಚೆನ್ನಾಗಿ ಅರಿಯಬೇಕಿತ್ತು.. ಹೋಗಿ, ದೇವಯ್ಯಗೌಡರ ಬಾವನಿಗೆ ತಿಳಿಸಿ, ನಾವು ಯಾರನ್ನೂ ಬಲಾತ್ಕಾರವಾಗಿ ಕ್ರೈಸ್ತಮತಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬುದಾಗಿ !.. ಪಾಪ, ರೆವರೆಂಡ್‌ಸಾಹೇಬರಿಗೆ ಹೇಗೆ ತಾನೆ ಗೊತ್ತಾಗಬೇಕು, ಯೇಸುಕ್ರಿಸ್ತ, ಮತ, ಧರ್ಮ, ಪರಲೋಕ, ದೇವರು ಇವು ಯಾವುದಕ್ಕೂ ಸಂಬಂಧಪಡದ ಪಾದ್ರಿಯ, ಪಾದ್ರಿಯ ಮಗಳ ಮತ್ತು ದೇವಯ್ಯ ಗೌಡರ ಅಂತರಂಗಿಕವೂ ಶುದ್ಧ ಲೌಕಿಕವೂ ಆಗಿದ್ದ ಗುಪ್ತ ವ್ಯಾವಹಾರಿಕ ಜಟಿಲತೆ?”

ಯಾವುದು ಬಹಿರಂಗವಾಗಬಾರದೋ ಅದು ಎಲ್ಲಿ ಹೊರಬಿದ್ದು, ತನಗೆ ಉನ್ನತತರಸ್ಥಾನ ಲಭಿಸುವುದಕ್ಕೆ ಬದಲಾಗಿ ಸ್ಥಾನಾವನತಿಯೆ ಉಂಟಾಗಿಬಿಡುತ್ತದೆಯೋ ಎಂದು ಹೆದರಿ, ಪಾದ್ರಿ ಜೀವರತ್ನಯ್ಯ ಮುಕುಂದಯ್ಯನಿಗೆ ಅವನ ಇಷ್ಟದಂತೆ ಆಶ್ವಾಸನೆಯಿತ್ತು. ಬಾಗಿಲು ಚಿಲಕ ತೆಗೆಸಿದರು”

ಕನ್ನಡ ಕಾದಂಬರಿಕಾರರಲ್ಲಿ ಸಮಯೋಚಿತವಾದ ಮಾತುಗಳಿಂದಲೂ ಹಾಸ್ಯವನ್ನು ಸೃಷ್ಟಿಸುವುದರ ಜೊತೆಗೆ ತಮ್ಮ ವಸ್ತುಸ್ಥಿತಿಯಿಂದಲೇ ಹಾಸ್ಯವನ್ನು ಉತ್ತಿ ಹರಿಸುವ ಪ್ರಸಂಗಗಳ ಸೃಷ್ಟಿಯಲ್ಲೂ ಅಗ್ರಗಣ್ಯರಾದ ಲೇಖಕರೆಂದರೆ ಶ್ರೀ ಪೂರ್ಣಚಂದ್ರ ತೇಜಸ್ವಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅವರಿಗೆ ದೊರಕಿಸಿಕೊಟ್ಟ ಅವರ ಕಾದಂಬರಿ “ಚಿದಂಬರ ರಹಸ್ಯ”ದ ತುಂಬ ಮನೋಹರವಾದ ಹಾಸ್ಯದ ಕರಂಜಿಗಳಿವೆ. ಕೆಸರೂರಿನ ಪೇಟೆಯ ಜೀನಿಯರ್‌ಕಾಲೇಜಿನ ವಿಚಾರವಾದಿಗಳ ಸಂಘದ ಸದಸ್ಯರು ಪಟ್ಟ ಜೀವನ ವರ್ಣನೆ ಹೀಗಿದೆ:

ಜೂನಿಯರ್‌ಕಾಲೇಜಿನ ಸಭೆಗೆ ಮುಖ್ಯ ಅತಿಥಿಗಳಾಗಿ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ. ಪಾಟೀಲರನ್ನು ಕರೆಸಿದ್ದರು. ಗೂಗ್ಲಿ ರಮೇಶ ರಫಿ ಎಲ್ಲಾ ಬೆಳಗಿನಿಂದಲೂ ರಾಮಚಂದ್ರನ ಬಲಿವಾದ ಮಾಡಿ ಕೊನೆಗೂ ಅವನನ್ನು ಒಪ್ಪಿಸಿ ಪಾಟೀಲರಿಗೆ ಅವರ ಮಂತ್ರ ತಂತ್ರಗಳ ಬಗ್ಗೆ ಪ್ರಶ್ನೆ ಕೇಳುವುದೆಂದು ತೀರ್ಮಾನಿಸಿದ್ದರು. ಏಕೆಂದರೆ ವಿಚಾರವಾದಿಗಳ ಸಂಘ ಆರಂಭವಾದಾಗಿನಿಂದ ವಿಚಾರವಾದಿಗಳಿಗೆ ಯಾವುದೇ ಒಂದು ಕಾರ್ಯಕ್ರಮವೂ ಸಿಕ್ಕದೆ, ಎಲ್ಲಿ ತಮ್ಮ ಜಾತಿವಿನಾಶ ಸಂಘಕ್ಕಾದ ಗತಿಯೇ ಇದಕ್ಕೂ ಆಗುತ್ತದೋ ಎಂದು ಅವರಿಗೆ ದಿಗಿಲಾಗಿತ್ತು. ಅಷ್ಟಲ್ಲದೆ ಈಚೆಗೆ ತಮ್ಮ ಮೇಲೆ ಪೋಕರಿಗಳೆಂದು ಬಂದಿರಬಹುದಾದ ಅಪಖ್ಯಾತಿಯನ್ನೂ ತೊಳೆದುಕೊಳ್ಳಬೇಕೆಂಬ ಹಂಬಲವೂ ಆವರಿಸಿತ್ತು… ಅವರು ತಮ್ಮ ಧೋರಣೆ ಚಟುವಟಿಕೆಗಳಿಗೂ ಒಂದು ಸೈದ್ಧಾಂತಿಕ ತಳಹದಿ ಇದೆ ಎಂದು ತೋರಿಸಿಕೊಳ್ಳಲು ಕಾತರರಾಗಿದ್ದರು. ಅದಕ್ಕಾಗಿ ಅಲ್ಲಿ ಕೇಳಬೇಕಾದ ಪ್ರಶ್ನೆಗಳಿಗೂ ರಾಮಚಂದ್ರನನ್ನೇ ಪೀಡಿಸಿ ಅವನಿಂದಲೇ ಸಿದ್ಧಪಡಿಸಿದ್ದರು. ಅಂತೂ ಕಾರ್ಯಕ್ರಮದ ವೇಳೆಗೆ ಅವರೆಲ್ಲಾ ಸರಿಯಾಗಿ ಪ್ರಶ್ನೆಗಳನ್ನು ಬಾಯಿಪಾಠ ಮಾಡಿಕೊಂಡು ಬಂದು ಕುಳಿತಿದ್ದರು. ಆದರೆ ಕಾಲೇಜು ಹುಡುಗಿಯರೆಲ್ಲಾ ಕಣ್ಣು ಕೋರೈಸುವ ಉಡುಗೆ ತೊಟ್ಟು ಫಲಫಳ ಹೊಳೆಯುತ್ತಾ ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆಯೇ ಇವರಿಗೆಲ್ಲಾ ಅನಾವಶ್ಯಕ ಗಾಬರಿ ಆರಂಭವಾಗಿ ಪ್ರಶ್ನೆಗಳು ಕೆಲವರಿಗೆ ಒಂದೊಂದೇ ಮರೆತುಹೋಗತೊಡಗಿದವು. ಅವರ ಸೈದ್ಧಾಂತಿಕ ತಳಹದಿ ಮಲ್ಲಗೆ ಯಾಕೋ ಕುಸಿಯತೊಡಗಿತು.

ಕಾಲೇಜು ಸುಂದರಿ ವನಜಾಕ್ಷಿಯಿಂದ ಸ್ವಾಗತ ಗೀತೆ ಆರಂಭವಾಯ್ತು. ಆಕೆ ಯಾವುದೋ ಪ್ರೇಮಗೀತೆಯಂಥ ಸ್ವಾಗತ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದಳು. ಹುಡುಗರೆಲ್ಲಾ ಭಾವೋದ್ವೇಗದಿಂದ ಕೇಳಿದರು. ಪ್ರತಿಯೊಬ್ಬರೂ ಅವಳು ತಮ್ಮನ್ನು ಉದ್ದೇಶಿಸಿಯೇ ಹಾಡುತ್ತಿದ್ದಾಳೆ ಎಂದು ತಿಳಿದು ಅವಳ ಕಂಠಶ್ರೀಯನ್ನು ಮನಸಾರೆ ಸವಿಯುತ್ತಾ ಪುಂಗಿಯ ನಾದಕ್ಕೆ ತಲೆಯಾಡಿಸುವ ಹಾವುಗಳಂತೆ ಓಲಾಡಿದರು. ವನಜಾಕ್ಷಿಯ ಹಾಡು ಮುಗಿಯಿತು. ಆದರೆ ವೇದಿಕೆಯಿಂದ ಇಳಿಯುವುದು ಹುಡುಗರಿಗೆ ಸುತರಾಂ ಇಷ್ಟವಿರಲಿಲ್ಲ. ಅವರು ಇದನ್ನೊಂದು ಭಾವಗೀತೆ ಕಾರ್ಯಕ್ರಮ ಎನ್ನುವಂತೆಯೇ ತಿಳಿದು “ಒನ್ಸ್‌ಮೋರ್‌, ಒನ್ಸ್‌ಮೋರ್‌” ಎಂದು ಕೂಗತೊಡಗಿದರು. ವನಜಾಕ್ಷಿಗೆ ತನ್ನ ಅಗಾಧ ಅಭಿಮಾನಿಗಳ ಬಳಗವನ್ನು ನೋಡಿ ಇನ್ನೊಂದು ಹಾಡನ್ನು ಹಾಡಲು ಇಷ್ಟವಾಗಿ ಅನುಮತಿಗಾಗಿ ಪ್ರಿನ್ಸಿಪಾಲರತ್ತ ನೋಡುತ್ತಾ ವೇದಿಕೆಯ ಮೇಲೆ ನಿಂತೇ ಇದ್ದಳು.

ಪ್ರಿನ್ಸಿಪಾಲರಿಗೆ ಅರ್ಥವಾಯ್ತು. ಇವತ್ತಿನ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಹಾದಿ ತಪ್ಪಿಸುವ ಹವಣಿಕೆಯಲ್ಲಿದ್ದಾಳೆ ಇವಳು ಎಂದು. “ನೋಡಿ ಅದಕ್ಕೇ ಹೇಳಿದ್ದು ಯಾರಾದರೂ ಒಬ್ಬ ಹುಡುಗನಿಂದ ಸ್ವಾಗತ ಗೀತೆ ಹೇಳಿಸಿ ಅಂತ” ಎಂದು ಇಂಗ್ಲಿಷ್‌ಮೇಷ್ಟರ ಕಡೆಗೆ ತಿರುಗಿಗೊಣಗಿದರು. ಒಪ್ಪಿಗೆ ಕೊಟ್ಟರೆ ಮತ್ತೆ ಮತ್ತೆ ಒನಸ್‌ಮೋರ್‌ಗಳು ಶುರುವಾಗ್ತದೆ! ಬೇಡ ಅಂದರೆ ಪ್ರಿನ್ಸಿಪಾಲರಿಗೆ ಧಿಕ್ಕಾರ ಶುರುವಾಗ್ತದೆ! ಅಂತೂ ತಡವರಿಸುತ್ತಾ ಎದ್ದು ಮೈಕಿನ ಬಳಿಗೆ ಬಂದು ವನಜಾಕ್ಷಿಗೆ ಹೋಗಲು ಹೇಳಿ “ದಯವಿಟ್ಟು ವಿದ್ಯಾರ್ಥಿಗಳು ಶಾಂತವಾಗಿ ಕುಳಿತುಕೊಳ್ಳಬೇಕು. ಇದು ಸ್ವಾಗತಗೀತೆ. ಮುಂದೆ ಅತಿಥಿಗಳ ಭಾಷಣ ಇದೆ. ಕಾರ್ಯಕ್ರಮ ಮುಂದುವರಿಸುವುದಕ್ಕೆ ಅವಕಾಶ ಕೊಡಬೇಕು” ಎಂದು ಪ್ರತಿ ಸಮಾರಂಭದಲ್ಲೂ ಒರಲುವಂತೆ ಮೈಕಿನಲ್ಲಿ ಅದೇ ಧಾಟಿಯಲ್ಲಿ ಅದೇ ದನಿಯಲ್ಲಿ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು.

“ಥತ್ತೇರಿ ಇವನ್ಯಾಕೋ ಇಲ್ಲಿ ಬಂದ” ಎಂದು ಒಬ್ಬ ಕೂಗಿದ.

“ಪ್ರಿನ್ಸಿಪಾಲಂತೆ ನಮ್ಮ ಪ್ರಾಣ ತಿನ್ತಾನಲ್ಲಯ್ಯ” ಎಂದು ಇನ್ನೊಬ್ಬ ಗಟ್ಟಿಯಾಗಿ ಹಿಂದಿನಿಂದ ಕೂಗಿದ. ವನಜಾಕ್ಷಿ ಇಳಿದು ನಿರ್ಗಮಿಸಿದ್ದಕ್ಕಿಂತಲೂ ಪ್ರಿನ್ಸಿಪಾಲರ ಆಗಮನ ವಿದ್ಯಾರ್ಥಿಗಳಿಗೆ ಹೆಚ್ಚು ಘೋರವಾಗಿ ಕಂಡಿತು. ಹಿಂದಿನಿಂದ ಸಿಳ್ಳೆಗಳು ಆರಂಭವಾದವು. ಅಷ್ಟರಲ್ಲಿ ಕಾರ್ಯದರ್ಶಿ ಅತಿಥಿಗಳ ಪರಿಚಯ ಮಾಡಿಕೊಡತೊಡಗಿದ. ಅತಿಥಿಗಳಾದ ಪಾಟೀಲರು ಮಹಾ ವಿಜ್ಞಾನಿಗಳೆಂದೂ ಧಾರ್ಮಿಕರೆಂದು ಶಾಸ್ತ್ರಾಚಾರ ಸಂಪನ್ನರೆಂದೂ ಅವತಾರ ಪುರುಷರೆಂದೂ ಬಾಯಿಗೆ ಬಂದ ಹಾಗೆ ಹೊಗಳಿದ. ಆ ರೀತಿ ಅವರನ್ನು ಕಾರ್ಯದರ್ಶಿ ಹೊಗಳಿದ್ದು ಅಲ್ಲಿನ ಮೊದಲೇ ನಿರ್ಧರಿಸಿಕೊಂಡಿದ್ದ ತಂತ್ರವಾಗಿತ್ತು. ಹೇಗಾದರೂ ಮಾಡಿ ಪಾಟೀಲರನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂದು ಹಿಂದೂವಾದಿಗಳ ಉಪಾಯದ ಒಂದು ಅಂಗವಾಗಿತ್ತು.

ಕಾರ್ಯದರ್ಶಿಯ ಭೋಪರಾಕುಗಳನ್ನೆಲ್ಲ ಕೇಳುತ್ತಿದ್ದಂತೆ ವಿಚಾರವಾದಿಗಳಿಗೆ ಸಿಟ್ಟು ಬಂತು. ಇನ್ನೇನು ಕಾರ್ಯದರ್ಶಿಯ ಪರಿಚಯ ಭಾಷಣ ಮುಗಿಯುತ್ತಾ ಬಂತು. ಪ್ರಶ್ನೆ ಕೇಳುವ ಹೊತ್ತು ಸನ್ನಿಹಿತವಾಗುತ್ತಿದೆ! ತಲೆಯೊಳಗೆ ಬರೀ ಹುಡುಗಿಯರ ಫಳಫಳ ಗೋಚರಿಸುತ್ತದೆಯೇ ಹೊರತು ಪ್ರಶ್ನೆಗಳೊಂದು ಜ್ಞಾಪಕಕ್ಕೆ ಬರುತ್ತಿಲ್ಲ! ರಾಮಚಂದ್ರನನ್ನಾದರೂ ಸೂಕ್ತ ನಿರ್ದೇಶನಕ್ಕೆ ಕೇಳೋಣೆಂದರೆ ರಾಮಚಂದ್ರ ತಾನು ಸಮಾರಂಭಕ್ಕೆ ಬರುವುದಿಲ್ಲವೆಂದು ಮೊದಲೇ ಹೇಳಿಬಿಟ್ಟಿದ್ದಾನೆ! ಗೂಗ್ಲಿ, ರಫಿ, ರಮೇಶ, ಚಂದ್ರ, ಅಂಗಾರ, ಎಲ್ಲಾ ಒಬ್ಬರನೊಬ್ಬರು “ನೀನೇ ಕೇಳೋ, ನೀನೇ ಕೇಳೋ” ಎಂದು ತಿವಿದುಕೊಳ್ಳುತ್ತಿದ್ದಾರೆ. ಅಷ್ಟರಲ್ಲಿ ಕಾರ್ಯದರ್ಶಿ ವಿದ್ಯಾರ್ಥಿಗಳು ಅತಿಥಿಗಳ ಭಾಷಣವನ್ನು ಶಾಂತರೀತಿಯಿಂದ ಕೇಳಬೇಕೆಂದು ಮನವಿ ಮಾಡಿ ಕುಳಿತುಕೊಂಡ. ಅತಿಥಿಗಳಾದ ಪಾಟೀಲರು ಎದ್ದು ನಿಂತರು.”

ಈಗಾಗಲೇ ಸೂಚಿಸಿರುವಂತೆ ಈ ಪ್ರಬಂಧವು ಕನ್ನಡದ ಕೆಲವೇ ಕಾದಂಬರಿಗಳಲ್ಲಿನ ಹಾಸ್ಯಪ್ರಸಂಗಗಳನ್ನು ಎತ್ತಿ ತೋರಿಸುವ ಕೆಲಸವನ್ನು ಮಾತ್ರ ಮಾಡಿದೆ. ಉಳಿದಂತೆ, ಈ ದಿಕ್ಕಿನಲ್ಲಿ ನಡೆಯಬಹುದಾದ ಕೆಲಸ ವಿಶೇಷವಾಗಿದೆ ಎಂಬುದನ್ನೂ ಇದು ಸೂಚಿಸುತ್ತದೆ.