ವರ್ಡ್ಸ್ ವರ್ತ್‌, ಷೆಲ್ಲಿ ಕೀಟ್ಸ್ ಮುಂತಾದ ಕವಿಗಳು ಕೂಡ ತಾವು ಹೊಸದು ಎಂದು ಭಾವಿಸಿದ್ದ ಒಂದು ಅಭಿವ್ಯಕ್ತಿ ವಿಧಾನವನ್ನು ಪ್ರಚಲಿತಗೊಳಿಸಿದ್ದರಲ್ಲ, ಅದು ಈ ಹೊಸ ಯುಗದ ಅನುಭವಗಳನ್ನು ನಿರೂಪಿಸಲು ಸಮರ್ಥವಾಗಿಲ್ಲವೆ ಎಂಬುದಕ್ಕೆ ಈ ನವ್ಯ ಪಂಥ “ಇಲ್ಲ” ಎಂದು ಉತ್ತರ ಹೇಳಿತು. ಅವರದು ರೊಮಾಂಟಿಕ್‌ಸಂಪ್ರದಾಯ.[1] ಆ ಸಂಪ್ರದಾಯದಲ್ಲಿ ಅನೇಕ ದೋಷಗಳಿವೆ ಎಂದು ಈ ಆಧುನಿಕ ಪ್ರವೃತ್ತಿಯವರು ವಾದಿಸಿದರು. ಅಕೃತಿಮ ಪಾಪ ನಿವೇದನೆ (naïve confession), ಭಾವ ಮಾರ್ದವತೆಯ ಬಗ್ಗೆ ವಿಶೇಷ ಒಲವು (preference for emotional softness), ಪ್ರವಾದಿಯ ಗಾಂಭೀರ್ಯದೊಂದಿಗೆ ಬೆರೆಸಿದ ನಾಟಕೀಯತೆ (combination of theatricality with prophetic soleminity) ಮತ್ತು ಸ್ವಾನುರಕ್ತಿ (narcissism)[2] ಇವು ಆ ದೋಷಗಳಲ್ಲಿ ಕೆಲವು ಎಂಬುದು ಹೊಸಬರ ಆಪಾದನೆ. ವರ್ಡ್ಸ್ ವರ್ತ್ ಕವಿಯಿಂದ ಹಿಡಿದು ಸ್ವಿನ್‌ಬರ್ನ್‌ಕವಿಯವರೆಗೆ ಎಲ್ಲ ರೋಮಾಂಟಿಕ್ ಸಂಪ್ರದಾಯದವರಲ್ಲೂ ಈ ಎಲ್ಲ ದೋಷಗಳು ಇದ್ದುವು ಎಂಬುದು ಇವರ ಅರ್ಥವಲ್ಲ, ಪ್ರತಿಭೆಯು ಮಂದವಾದಾಗ ಕಾವ್ಯವು ಈ ದೋಷಗಳಿಗೆ ಒಳಗಾಗಬಹುದಾದ ಅಪಾಯ ಇದೆ ಎಂಬುದು ಅಭಿಪ್ರಾಯ. ೧೯೧೭ರಲ್ಲಿ ಟಿಎಸ್ ಎಲಿಯೆಟ್ ಹೀಗೆ ಬರೆದ:

‘ಅಭಿವ್ಯಕ್ತಿಗೊಳಿಸಲು ಕವಿಯ ಬಳಿ ಇರುವುದು ಒಂದು ವ್ಯಕ್ತಿತ್ವ ಅಲ್ಲ. ಒಂದು ನಿರ್ದಿಷ್ಟ ಮಾಧ್ಯಮ. ಅದು ಒಂದು ಮಾಧ್ಯಮ ಮಾತ್ರ; ಒಂದು ವ್ಯಕ್ತಿತ್ವ ಅಲ್ಲ. ಆ ಮಾಧ್ಯಮದಲ್ಲಿ ಮನಸ್ಸಿನ ಮೇಲೆ ಮೂಡಿದ ಭಾವನೆಗಳೂ ಅನುಭವಗಳೂ ವಿಚಿತ್ರವೂ ಅನಿರೀಕ್ಷಿತವೂ ಆದ ರೀತಿಯಲ್ಲಿ ಬೆರೆತುಕೊಳ್ಳುತ್ತವೆ.’

“ಕಾವ್ಯದ ಕರ್ತವ್ಯ ಸ್ವಾಭಿವ್ಯಕ್ತಿಯಲ್ಲ, ಭಾಷೆಯಲ್ಲಿ ಅರ್ಥವು ಸರಿಯಾದ ರೀತಿಯಲ್ಲಿ ಬೆಸೆದುಕೊಳ್ಳುವಂತೆ ಮಾಡುವುದು. ಇಲ್ಲಿ ಮುಖ್ಯವಾದದ್ದು ಭಾವಗಳ, ಇತರ ಘಟಕಗಳ ‘ಮಹತ್ತು’, ‘ತೀವ್ರತೆ’ಗಳಲ್ಲ. ಇಲ್ಲಿ ಮುಖ್ಯವಾದದ್ದು ಕಲಾ ಪ್ರತಿಕ್ರಿಯೆಯ ತೀವ್ರತೆ, (ಹಾಗೂ) ಈ ಬೆಸುಗೆಯು ಯಾವ ಒತ್ತಡದಲ್ಲಿ ನಡೆಯುತ್ತದೆ ಎಂಬುದು.”

ಕವಿಯು ರುದ್ರ-ರಮ್ಯವಾದ ದೃಶ್ಯಗಳ, ನೋವು-ನಲಿವುಗಳ, ಸಾವು-ಬದುಕುಗಳ ವಿಷಯಕ್ಕೆ ತನ್ನ ವೈಯಕ್ತಿಕ ಪ್ರತಿಕ್ರಿಯೆಯನ್ನು ನೀಡುವುದು ಅನಗತ್ಯ ಎಂದಂತಾಯಿತು. ಕವನಗಳು ಕಲಾಕೃತಿಗಳು, ನಿಜ. ಆದರೆ ಈ ಪಂಥದವರ ಪ್ರಕಾರ ಅವು ಭಾವಾತ್ಮಕವಾದ ಆತ್ಮವೃತ್ತಗಳಲ್ಲ, ಅಥವಾ ಅಲಂಕಾರಿಕವಾದ ಭವಿಷ್ಯವಾಣಿಯೂ ಅಲ್ಲ. ಕಲೆಯ ಕೆಲಸ ಅನುಭವಗಳ ಅನ್ವೇಷಣೆ. ಕೇವಲ ಶಬ್ದಗಳ ಜಗತ್ತಿನಲ್ಲೇ ವ್ಯವಹರಿಸುವ ಕಾವ್ಯ, ಕಲೆಯೂ ಘಟನೆಯೂ ಒಂದು ಹೇಳುವಷ್ಟೇ ಅಸಮರ್ಪಕವಾದದ್ದು ಎಂದು ತೀರ್ಮಾನವಾಯಿತು.

ಈ ಕಾವ್ಯ ಮಾರ್ಗಗಳ ವಿಭಿನ್ನ ಸ್ವರೂಪಗಳನ್ನು ಡೇವಿಡ್ ಡೆಚಿಸ್ ನಾಲ್ಕು ಉದಾಹರಣೆಗಳಿಂದ ಮನಮುಟ್ಟುವಂತೆ ವಿವರಿಸಿದ್ದಾನೆ. ಮೊದಲನೆಯದು ಕೀಟ್ಸ್ ಕವಿಯ ಸಾನೆಟ್ಟಿನ ಕೆಲವು ಪಂಕ್ತಿಗಳು:

ತುಂಬು ಜೀವನವನ್ನು ನಡೆಸುವುದಕ್ಕೆ ಆಗದೆಯೇ ತಾನು ಸಾಯಬಹುದು ಎಂಬ ಭಯ ಕವಿಯನ್ನು ಆವರಿಸಿದೆ. ಆದ್ದರಿಂದ ಅವನು ಹೇಳುತ್ತಿದ್ದಾನೆ:

Then on the shore
Of the wide world I stand alone, and think
Till Love and Fame to nothingness do sink.

(ಬಳಿಕ, ವಿಸ್ತದ ಲೋಕದಂಚಿನಲ್ಲಿ ಏಕಾಂಗಿ, ನಿಂತು ಚಿಂತಿಸುವೆ ನಾನಿಂತು ಪ್ರೇಮ, ಕೀರ್ತಿಗಳು ಶೂನ್ಯದಾಳಕ್ಕೆ ಮುಳುಗುವನಿತುವರೆಗೆ)

ಎರಡನೆಯ ಮ್ಯಾಥ್ಯೂ ಆರ್ನಾಲ್ಡ್‌ನದು. ಕಡಲಿನ ಕಲೆಗಳ ಮ್ಲಾನ ಗಮನವನ್ನು ಕುರಿತು ಚಿಂತಿಸುತ್ತಾ ಕವಿಯು (ಧಾರ್ಮಿಕ) ಶ್ರದ್ಧೆಯು ಇಳಿಮುಖವಾಗಿರುವುದರ ಬಗ್ಗೆ ದುಃಖಿಸುತ್ತಾ ಕವನವನ್ನು ಹೀಗೆ ಮುಕ್ತಾಯ ಮಾಡಿದ್ದಾನೆ:

Ah, love let us be true
To one another! For, the world, which
Seems to lie before us like a land of dreams,
So various, so beautiful, so new,
Hath really neither joy, not love, not light.
Nor certitude, nor peace, nor help for pain;
And we are here as on a darkling plain
Swept with confused alarms of struggle and flight,
Wehere ignorant armies clash by night.

(ಎಲೆ ಒಲವೆ, ನಮ್ಮ ನಮ್ಮಲ್ಲಿ ಇರಲಿ ನಿಷ್ಠೆ
ನಮ್ಮೆದುರು
ಸ್ವಪ್ನಲೋಕದೊಳು ಹರಡಿರುವ ಜಗದಿ
ವಿಧವಿಧದ
, ತುಂಬು ಚೆಲುವಿನ, ಹೊಚ್ಚಹೊಸದಾದ ಜಗದಿ
ಇಲ್ಲಿ
ಸುಖ, ಒಲವಿಲ್ಲ, ಇಲ್ಲ, ಬೆಳಕೂ ಇಲ್ಲ.
ಇಲ್ಲ
ನಂಬಿಕೆಯು, ಇಲ್ಲ ಶಾಂತಿಯೂ, ಇಲ್ಲ ನೋವಿಗೆ ಶಮನವು.
ತಿಳಿವೆ
ಇಲ್ಲದಿಹ ಎರಡು ಸೇನೆಗಳು ಇರುಳು ಕಾಳಗದಿ,
ಕಗ್ಗತ್ತಲ
ರಂಗದಲಿ,
ಕದನ
ಪಲಾಯನಗಳ ಕಹಳೆಯ ಗೊಂದಲದಿ
ಕಸಿವಿಸಿಗೊಳ್ಳುವ
ತೆರದಲಿ ಇರುವೆವು ನಾವಿಲ್ಲಿ.)

ಮೂರನೆಯದು ಹಾಪ್‌ಕಿನ್ಸ್‌ನದು. ಅವನು ಕೂಡ ಆರ್ನಾಲ್ಡನಂತೆಯೇ ಆಧ್ಯಾತ್ಮಿಕತೆ ಇಲ್ಲವಾಯಿತಲ್ಲ ಎಂಬ ಮನೋಭಾವದಲ್ಲಿ ತೊಯ್ದಾಡುತ್ತಾ ಹೀಗೆನ್ನುತ್ತಾನೆ:

O, the mind, mind has mountains, cliffs of fall
Frighful, sheer, no-man-fathomed, nor does long our small
Durance deal with steep or deed. Here! creep,
Wretch, under a comfort serves in a whirlwind! All
Life death does end each day dies with sleep!

, ಮನವು, ಮನದಲಿಬೆಟ್ಟಗಳು, ಆಳ ಕಣಿವೆಗಳು.
ಭೀಕರವು, ಕೇವಲವು, ಯಾವಮನುಜನುಅಳೆಯಲಾರದುದು.

ಇಲ್ಲ, ನಮ್ಮಕಿರಿಯ ಸರೆವಾಸ ಕಡಿದಾದುದನೊ ಆಳಾತಿ ಆಳವನೊ
ಸಹಿಸಲಾರದುದು ದೀರ್ಫಕಾಲ. ಇದೊ

ಎಲ್ಲ ಬದುಕಿಗು ಸಾವು ಮಂಗಳವ ಹಾಡುವುದು,
ಅಲ್ಲದೆಯೆ ನಿದ್ದೆಯೊಡನೆಯೆ ಸಾಯುವುದು ಒಂದೊಂದು ದಿನವು.

ನಾಲ್ಕನೆಯದು ಹಾಗೂ ಕೊನೆಯದು ಟಿ.ಎಸ್. ಎಲಿಯಟ್‌ನದು. ಎಲ್ಲ ಅರ್ಥವನ್ನೂ ಮೌಲ್ಯವನ್ನೂ ಕಳೆದುಕೊಂಡಿರುವ ಜೀವನ ವಿಧಾನದ ಜಟಿಲ ಚಿತ್ರವನ್ನು ಸಂಕೇತಿಸುತ್ತಾ ಕವಿ “ಜೆರೋನ್ಷನ್”ನಲ್ಲಿ ಹೀಗೆನ್ನುತ್ತಾನೆ:

These with a thousand small deliberation
Portrait the profit of their chilled delirium
Excite the membrane, when the sense has cooled
With pungent sances, multiply variety
In a wilderness of mirrors. What will the spider do,
Suspend its operations, will the weevil
Delay? De Bailache. Fresca, Mrs. Cammel Whirled
Beyond the circuit of the shuddering Bear
In fractured atoms, crall against the wind in the windy straits
While feathers in the snow, the Gulf Claims.
And an old man driven by the trades
To a sleepy corner, Tenants of the house
Thoughts of the dry brain in a dry season.

ಇವು, ಸಾವಿರಾರು ಸಣ್ಣಪುಟ್ಟ ವಿಚಾರ ವಿನಿಮಯಗಳಿಂದ
ಮಂಜು ಶೀತಲವಾದ ತಮ್ಮ ಬುದ್ಧಿಭ್ರಮೆಯ ಲಾಭವನ್ನು ಚಿತ್ರಿಸುವುವು.
ಬುದ್ಧಿ ತಂಪಾದಾಗ, ಕಟುರುಚಿಯ ವ್ಯಂಜನಗಳಿಂದ ಒಳಚರ್ಮವನು ಉದ್ರೇಕಿಸುವುವು.
ವೈವಿಧ್ಯವನು ಶತಗುಣಗೊಳಿಸುವುವು ಕನ್ನಡಿಗಳ ಕಾಡಿನಲ್ಲಿ. ಏನು ಮಾಡುವುದು ಜೇಡ?
ತನ್ನ ಚಟುವಟಿಕೆಗಳ ನಿಲಿಸುವುದೆ? ತಡಮಾಡುವುದೆ ಜೀರುಂಡೆ?
ತತ್ತರಿಪ ಸಪ್ತರ್ಷಿ ಮಂಡಲದ ವಲಯದಾಚೆಗೆ,
ಅಂಗಾಂಗ ಮುರಿದಂಥ ಪರಮಾಣುಗಳಲಿ ಸುತ್ತಿದಳು ಶ್ರೀಮತಿ ಕ್ಯಾಮೆಲ್
ಬೆಲ್ಲೆದ್ವೀಪದಲ್ಲಿ, ಬೀಸುತಿಹ ಬಿರುಗಾಳಿಗೆದುರಾಗಿ ಹಾರುತಿಹ
ಕಡಲು ಹಕ್ಕಿಯ ತೆರದಿ, ಇಲ್ಲ, ಮಂಜಿನಲಿ ಬಿಳಿಯ ತುಪ್ಪಳು,
ಮನೆಯಲಿಹ ಒಕ್ಕಲು
ಒಣ ಹವೆಯ, ಒಣ ಮಿದುಳ ಚಿಂತನೆಗಳು.

ಈ ಮೇಲಿನ ನಾಲ್ಕು ಕವನ ಖಂಡಗಳನ್ನು ಕುರಿತು ವಿಚಾರ ಮಾಡುತ್ತಾ ಡೇನಿಯಲ್ ಡೇಚಿಸ್ ಹೀಗೆನ್ನುತ್ತಾನೆ: “ಕೀಟ್ಸನ ಸಾನೆಟ್ಟಿನ ಪಂಕ್ತಿಗಳು ರೊಮಾಂಟಿಕ್ ಸಂವೇದನ ಶಕ್ತಿಗೆ ಉದಾಹರಣೆಯಾಗಿವೆ. ಅಸುಖಕರವಾದ ಸಂದರ್ಭವನ್ನು ಎದುರಿಸಲು ಕಹಿ-ಕಹಿ (bitter-sweet) ಆಲೋಚನಾ ಮಗ್ನ ಮನಸ್ಥಿತಿಯೊಂದನ್ನು ಅವನ ಕವನ ಸೃಷ್ಟಿಸಿದೆ. ಮ್ಯಾಥ್ಯೂ ಅರ್ನಾಲ್ಡನ “ಡೋವರ್ ಬೀಚ್” ಕೂಡ ಹೆಚ್ಚು ಕಡಿಮೆ ಹಾಗೆಯೇ ಮಾಡುತ್ತದೆ. ಒಂದು ವ್ಯತ್ಯಾಸವೆಂದರೆ ಅರ್ನಾಲ್ಡನ ಕವನದ ಭಾವಮಯ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳಿದ್ದಾರೆ.

ಮೂರನೆಯವನಾದ ಹಾಪ್‌ಕಿನ್ಸ್‌ನಲ್ಲಿ ವ್ಯತ್ಯಾಸ ಸ್ಪಷ್ಟವಾಗಿದೆ. ಅವನು ಮನಸ್ಸಿಗೆ ಹಿತವಾಗುವ ವಿಷಣ್ಣತೆಯ ಭಾವವನ್ನು ಬೆಳೆಸುತ್ತಿಲ್ಲ. ಅವನ ಕವನದ ವಸ್ತು ಮನಸ್ಸಿನ ಘೋರ ಸ್ಥಿರ. ಅದರ ಯಥಾವತ್ತಾದ ಹಾಗೂ ಮನಸ್ಸನ್ನು ಕಲಕುವ ಚಿತ್ರವನ್ನು ನೀಡಲು ಈತ ಭಾಷೆಯನ್ನು ತಟ್ಟಿ ಕುಟ್ಟಿ ಅದರ ಆಕಾರಕ್ಕೆ ತಂದಿದ್ದಾನೆ.

“ಇನ್ನು ಎಲಿಯಟ್‌ನ ಕವನದ ಪಂಕ್ತಿಯಲ್ಲಿ ಕವಿಯ ಸಂವೇದನಾ ಶೀಲತೆ ನೇರವಾಗಿ ಇಲ್ಲವೇ ಇಲ್ಲ. ಒಣ ಹವೆಯಲ್ಲಿ, ಒಣ ಚಿಂತನೆಗಳ ಮೂಲಕ ಪ್ರತಿಯೊಂದನ್ನೂ ನಾಟಕೀಯವಾಗಿ ಚಿತ್ರಿಸಲಾಗಿದೆ. ರತೀಕಗಳ, ಚಿತ್ರಾಲಂಕಾರಗಳ ಮೂಲಕ ಬತ್ತಿಹೋದ ಒಂದು ಸ್ಥಿತಿಯನ್ನು ಸಂಕೇತದ ಮೂಲಕ, ಪರಿಸ್ಥಿತಿಗಳು, ಸೂಚನೆಗಳ ಮೂಲಕ ಚಿತ್ರಿಸಲಾಗಿದೆ.”

ಇನ್ನು ಆಧುನಿಕತೆ ಎಂದರೇನು, ಅದು ಪಶ್ಚಿಮದ ಸಾಹಿತ್ಯದಲ್ಲಿ ಮೈದೋರಿದ ಬಗೆ ಹೇಗೆ ಎಂಬುದನ್ನು ಕುರಿತು ವಿವರವಾಗಿ ವಿಚಾರ ಮಾಡಬಹುದು.

ಇದೇ “ಆಧುನಿಕತೆ” ಎಂದು ಬೆರಳಿಟ್ಟು ತೋರಿಸುವುದಾಗಲಿ, ನಿಷ್ಕೃಸ್ಟವಾಗಿ, ಸರ್ವಸಮರ್ಪಕವಾಗಿ ಅದರ ಲಕ್ಷಣವನ್ನು ನಿರೂಪಿಸುವುದಾಗಲೀ ತುಂಬ ಕಷ್ಟದ ಕೆಲಸ, ಹಾಗೆಂದು ಲಕ್ಷಣ ನಿರೂಪಣೆಯನ್ನೇ ಕೈಬಿಡುವಂತೆಯೂ ಇಲ್ಲ. ಇರ್ವಿಂಗ್ ಹೋವೆ ಒಂದು ಪ್ರಬಂಧದಲ್ಲಿ ಹೇಳಿರುವಂತೆ[3] ಆ ಕಷ್ಟದಲ್ಲಿಯೇ ಒಂದು ಸೊಗಸಿದೆ.

ಮೊದಲನೆಯದಾಗಿ “ಆಧುನಿಕತೆ” ಎಂಬುದು “ಸಮಕಾಲೀನತೆ” ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಅಷ್ಟೇ ಅಲ್ಲ, “ನವೀನತೆ”ಯೂ “ಆಧುನಿಕತೆ” ಅಲ್ಲ, ಕೇವಲ ಯಂತ್ರೋಪಕರಣಗಳ ಉಲ್ಲೇಖವೂ ಆಧುನಿಕತೆಯಲ್ಲ. ಇದರ ಸ್ಪಷ್ಟೀಕರಣ ಹೀಗಾಗುತ್ತದೆ: ನಮ್ಮ ಸುತ್ತ ನಡೆಯುತ್ತಿರುವ ಘಟನೆಗಳನ್ನು ರಾಜಕೀಯ ಅಥವಾ ಸಾಮಾಜಿಕ ಸ್ಥಿತಿಗತಿಗಳನ್ನು ವಸ್ತುಗಳನ್ನಾಗಿ ಮಾಡಿಕೊಂಡ ಕೂಡಲೇ ಅಂಥ ಬರವಣಿಗೆ ಆಧುನಿಕ ಆಗುವುದಿಲ್ಲ. ಅದು ಸಮಕಾಲೀನ ಅಷ್ಟೆ ಯಾವುದಾದರೂ ಇತ್ತೀಚಿನ ಫ್ಯಾಷನ್ ಅನ್ನು ವಸ್ತುವಾಗಿ ಆರಿಸಿ ಕೊಂಡರೋ? ಅಲ್ಲಿ ವಸ್ತು “ನವೀನ” ಅಷ್ಟೇ-ಆಧುನಿಕ ಅಲ್ಲ. ಇನ್ನು ಯಂತ್ರೋಪಕರಣಗಳ ಪಟ್ಟಿಯಾಗಲೀ, ವರ್ಣನೆಯಾಗಲೀ ಆಧುನಿಕವಾಗಲಾರದು. ಪುಷ್ಪಕ ವಿಮಾನದ ವರ್ಣನೆಯ ಬದಲು ಬೋಯಿಂಗ್ ೭೦೭ ಅಥವಾ ಏರ್ ಬಸ್ಸನ್ನು ವರ್ಣಿಸಿದರೆ ವಸ್ತು ಬದಲಾಯಿತೇ ಹೊರತು ಆಧುನಿಕ ಆಗಲಿಲ್ಲ. ಹಾಗಾದರೆ “ಆಧುನಿಕತೆ” ಎಂದರೇನು ಎಂದು ಕೇಳಿದರೆ ಪಾಶ್ಚಾತ್ಯ ವಿಮರ್ಶಕರು ಅದು ಒಂದು “ಮನಃಸ್ಥಿತಿ” ಎನ್ನುತ್ತಾರೆ.

ಸ್ಟೀಫನ್ ಸ್ಟೆಂಡರ್ ಎನ್ನುವುದು ಸಮಕಾಲೀನತೆಗೂ ಆಧುನಿಕತೆಗೂ ಇರುವ ವ್ಯತ್ಯಾಸವನ್ನು ತೋರಿಸಲು ತುಂಬ ಶ್ರಮವಹಿಸಿದ್ದಾರೆ.[4] ಟೆನಿಸನ್ ಕವಿಗೂ ರಸ್ಕಿನ್ ಮತ್ತು ಕಾರ್ಲೈಲ್ ಮುಂತಾದ ಚಿಂತನಶೀಲ ಲೇಖಕರಿಗೂ ವಿಜ್ಞಾನ ಜಗತ್ತಿನ ಪರಿಚಯವಿತ್ತು. ಅಲ್ಲದೆ, ವಿಜ್ಞಾನವು ಸಮಾಜದ ಮೇಲೆ ಮಾಡುವ ಪರಿಣಾಮದ ಅರಿವು ಅವರಿಗೆ ಪೂರ್ಣವಾಗಿಯೇ ಇತ್ತು. ಅವರಿಗಿದ್ದ ಆಸಕ್ತಿಗಳಂತೂ ಅತ್ಯಂತ ಸಮಕಾಲೀನವಾದವು. ಆದರೂ ಅವರನ್ನು “ಆಧುನಿಕರು”ಎಂದು ಕರೆಯಲು ಸ್ಟೆಂಡರ್ ಸಿದ್ಧನಾಗಿರಲಿಲ್ಲ. ಅದಕ್ಕೆ ಕಾರಣವನ್ನು ನೀಡುತ್ತಾ ಆತ ಹೇಳುತ್ತಾನೆ:

“ಅವರು ವಿಚಾರವಾದದ ಒಂದು ಸಂಪ್ರದಾಯದಲ್ಲಿ ಉಳಿದು ಬಿಟ್ಟರು. ಲಾರೆನ್ಸ್ ಯಾವುದನ್ನು ‘ಪ್ರಜ್ಞಾಪೂರ್ವಕ ಅಹಂ’ ಎಂದು ಕರೆದರೋ ಅದರ ಪ್ರಭಾವದಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಅವರದು ವಾಲ್ಟೇರಿಯನ್ “ಅಹಂ(೧)” ತಾವು ಅನ್ಯಾಯ ಮತ್ತು ಅವಿಚಾರತೆಯ ಜಗತ್ತಿನಿಂದ ದೂರ ನಿಂತಿದ್ದೇವೆ ಎಂಬ ವಿಶ್ವಾಸ ಅವರದ್ದು. ಆ ವಿಶ್ವಾಸದಿಂದ ಜಗತ್ತಿನ ಸರಿ-ತಪ್ಪುಗಳನ್ನು ತಮ್ಮ ವಿಚಾರ ಮತ್ತು ಕಲ್ಪನಾಶಕ್ತಿಗಳ ಬಲದಿಂದ ನಿರ್ಣಯಿಸತೊಡಗಿದರು. ತಾವು ಸಾಹಿತಿ-ಸಂತರ (writer prophets) ಪರಂಪರೆಗೆ ಸೇರಿದವರು ಎಂಬ ಭಾವನೆಯೂ ಅವರಿಗೆ ಇತ್ತು. ತಾವು ಯಾವ ಒಂದು ಕಾಲವನ್ನು ಖಂಡಿಸಹೊರಟರೋ ಆ ಒಂದು ಕಾಲದ ಫಲವಾಗಿ ಮೂಡಿದ್ದಲ್ಲ ಅವರ ಸಂವೇದನ ಶಕ್ತಿ.”

“ಸಮಕಾಲೀನ” ಮತ್ತು “ಆಧುನಿಕ”ಗಳ ನಡುವೆ ವ್ಯತ್ಯಾಸವನ್ನು ತೋರಿಸಲು ಸ್ಟೀಫನ್ ಸ್ಪೆಂಡರ್ ತುಂಬ ಅಪರೂಪದ ಒಂದು ತಂತ್ರವನ್ನು ನಿದರ್ಶನವನ್ನಾಗಿ ಆರಿಸಿಕೊಂಡಿದ್ದಾನೆ. ಅವನ ಪ್ರಕಾರ ಎಚ್.ಜಿ. ವೇಲ್ಸ್, ಬರ್ನಾರ್ಡ್‌ಷಾ ಮತ್ತು ಆನಾಲ್ಡ್ ಬೆನೆಟ್ ಕೂಡ ಸುಖವಾದದ ಸಮಾಜವೊಂದರ (materialist society) ಪ್ರವಾದಿಗಳು ಎಂದು ಭಾವಿಸಿದ್ದರಲ್ಲ, ಆದ್ದರಿಂದ ಅದು “ಆಧುನಿಕತೆ”ಯ ಸತ್ವಕ್ಕೆ ವಿರೋಧವಾದದ್ದು ಎನ್ನುತ್ತಾನೆ. ಇದನ್ನು ಅವನು ಕಂಡುಕೊಂಡದ್ದು ಹೇಗೆ ಎಂಬುದು ಸ್ವಾರಸ್ಯವಾಗಿದೆ.

೧೯೨೭-೩೦ರ ಸುಮಾರಿನಲ್ಲಿ ಹೆರಾಡ್ಸ್ ಎಂಬ ಸಂಸ್ಥೆ ವೆಲ್ಸ್, ಷಾ ಮತ್ತು ಬೆನೆಟ್ ಅವರಿಗೆ ಕಾಗದ ಬರೆದು ಅವರಿಂದ ತಮ್ಮ ಸಂಸ್ಥೆಯ ಬಗ್ಗೆ ಜಾಹೀರಾತು ಲೇಖನಗಳನ್ನು ಬಯಸಿತು. ಆದರೆ ಈ ಲೇಖಕರು ತಮ್ಮ ಸಂಸ್ಥೆಯನ್ನು ಮೆಚ್ಚಿ ಬರೆಯಬೇಕು ಎಂದೇನೊ ಇಲ್ಲ, ತಮಗೆ ಅನಿಸಿದ್ದನ್ನು ಅದು ಅಪ್ರಿಯವಾಗಿದ್ದರೂ ಸರಿ, ಬರೆಯಬೇಕು ಎಂದಿತು. ಮೂರು ಜನ ಲೇಖಕರೂ ಹೆರಾಡ್ಸ್ ಸಂಸ್ಥೆಯ ಕೋರಿಕೆಯನ್ನು ನಿರಾಕರಿಸಿದರು. ಹಾಗೆಂದು ತಿಳಿಸುವಾಗ ಅವರು ಆ ಸಂಸ್ಥೆಗೆ ಸಾಕಷ್ಟು ದೀರ್ಘವಾದ ಪತ್ರಗಳನ್ನು ಬರೆದರು. ಸಂಸ್ಥೆಯು ಅವರ ಉತ್ತರಗಳನ್ನೇ ಪತ್ರಿಕೆಗಳಲ್ಲಿ ಜಾಹೀರಾತಾಗಿ ಪ್ರಕಟಿಸಿತು. ಸ್ಟೀಫನ್ ಸ್ಪೆಂಡರ್ ಅದನ್ನು ವಿಶ್ಲೇಷಿಸಿ ಮೂರು ಜನ ಲೇಖಕರೂ ಸಾರ್ವಜನಿಕರಿಗೆ ತಾವು ಜವಾಬ್ದಾರರು ಎಂದು ಸಾರಿದ್ದಾರೆ. ಆದ್ದರಿಂದ ಅವರಿಗೆ “ಆಧುನಿಕತೆ” ಇಲ್ಲ ಎಂದಿದ್ದಾನೆ. ಈ ಅಂಶ ಸ್ಪಷ್ಟವಾಗಬೇಕಾದರೆ ಮೇಲಿನ ಮೂವರ ಕಾಗದಗಳಿಂದಲೂ ಕೆಲವು ಭಾಗಗಳನ್ನು ಉದ್ಧರಿಸಿ ಅನುವಾದಿಸುವುದು ಅಗತ್ಯ.

ಬರ್ನಾರ್ಡ್‌ಷಾ: “ಒಂದು ವ್ಯಾಪಾರೀ ಸಂಸ್ಥೆಯನ್ನು ಬೆಂಬಲಿಸಿ ಹೇಳಿಕೆ ಕೊಡುವುದೂ ಒಂದೇ, ನನ್ನ ನಾಟಕಗಳನ್ನು ಮೆಚ್ಚಿ ಬರೆಯಿರಿ ಎಂದು ನಾಟಕ ವಿಮರ್ಶಕರಿಗೆ ಹಣ ಕೊಡುವುದೂ ಒಂದೇ. ರಂಗ ಭೂಮಿಯ ನಾಟಕಗಳನ್ನು ವಿಮರ್ಶಿಸುವವರು ತೀರ್ಪು ನೀಡುವವರಂತೆ ಬರೆಯುತ್ತಾರೆ. ಸಾರ್ವಜನಿಕರ ಮನಸ್ಸನ್ನು ರೂಪಿಸಲು ಅಗತ್ಯವಾದ ಆಳ, ಗಾಂಭೀರ್ಯಗಳಿಂದ ಕೂಡಿದ ಬರಹಗಾರರೂ ಹಾಗೆಯೇ ಬರೆಯುತ್ತಾರೆ. ಅಂಥ ಲೇಖಕನೊಬ್ಬನು ವ್ಯಾಪಾರೀ ಸಂಸ್ಥೆಯೊಂದರಿಂದ ಹಣ ಪಡೆದು ಅದರ ಸಾಮಾನುಗಳನ್ನು ಕೊಳ್ಳಿ ಎಂದು ಜನರನ್ನು ಪ್ರೇರಿಸುವುದು ಎಂದರೆ ತನ್ನ ಅಂತಸ್ಸಾಕ್ಷಿಗೆ ಪಾಪ ಬಗೆದಂತೆ. ನಮ್ಮ ವ್ಯಾಪಾರೀ ಸಂಸ್ಥೆಗಳು ಜಾಹೀರಾತು ಬರೆಯಲು ಚತುರರಾದ. ಆದರೆ ಅನಾಮಧೇಯರಾದ ಲೇಖಕರ ಸೇವೆಯನ್ನು ಖಂಡಿತ ಪಡೆಯಲಿ. ಆದರೆ ಕೀತಿಯು (fame) ಯಾರನ್ನು ಸಾರ್ವಜನಿಕರ ಸೇವೆಗೆ ಎಂದು ನೀಡಿದೆಯೋ ಆ ಲೇಖಕನು, ಅದೇ ಕಾರಣದಿಂದ ಪ್ರವಾದಿಯೂ ಆಗಿರುವ ಲೇಖಕನು, ತಾನು ಬೇರೆ ಯಾವುದಕ್ಕೂ ಸೇವೆ ಸಲ್ಲಿಸಿ ಹಣ ಪಡೆಯಕೂಡದು.”

ಆರ್ನಾಲ್ಡ್ ಬೆನೆಟ್: (ಜಾಹೀರಾತು ಬರೆಯಲು) ಒಪ್ಪಿಕೊಳ್ಳದೇ ಇರುವುದಕ್ಕೆ ಯಾವ ಕಾರಣವೂ ನನಗೆ ಕಾಣುತ್ತಿಲ್ಲ, ಒಂದು ಹೊರತು. ಸಾರ್ವಜನಿಕ ಅಭಿಪ್ರಾಯವು ಜವಾಬ್ದಾರಿಯುತರಾದ ಸೃಜನಶೀಲ ಲೇಖಕರಿಗೆ ಕೀರ್ತಿಯನ್ನು ನೀಡಿದೆಯಷ್ಟೆ. ಅಂಥವರು ವ್ಯಾಪಾರೀ ಸಂಸ್ಥೆಯೊಂದರ ಜಾಹೀರಾತು ಯೋಜನೆಯಲ್ಲಿ ಭಾಗವಹಿಸಬಹುದು ಎಂಬುದನ್ನು ಒಪ್ಪುವಷ್ಟರಮಟ್ಟಿಗೆ ಅದೇ ಸಾರ್ವಜನಿಕ ಅಭಿಪ್ರಾಯವು ಇನ್ನೂ ಪಕ್ವವಾಗಿಲ್ಲ. ಈ ಅಂಶದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಆದರೆ ಅಂಥದೊಂದು ಅಭಿಪ್ರಾಯವು ಅಸ್ತಿತ್ವದಲ್ಲಿ ಇರುವುದಂತೂ ಹೌದು. ಆದ್ದರಿಂದ ಅದನ್ನು ನಾನು ಕಡೆಗಣಿಸಿ ಜನರ ತಿರಸ್ಕಾರಕ್ಕೆ ಗುರಿಯಾಗಲಾರೆ…”

ಎಚ್.ಬಿ.ವೆಲ್ಸ್: “ಬರಹಗಾರನ ಸ್ಥಾನ ಕಲಾವಿದರ ನಡುವೆ ಅಲ್ಲ, ಶಿಕ್ಷಕರ ನಡುವೆ, ಪ್ರವಾದಿಗಳ ನಡುವೆ (ಎಂಬುದು ಬರಹಗಾರನ ಮನಸ್ಸಿನಲ್ಲಿ ಮನೆ ಮಾಡಿರುವ ಭಾವನೆ)”.

ಸ್ಟೀಫನ್‌ಸ್ಪೆಂಡರ್‌ಮೇಲಿನ ಪತ್ರಗಳನ್ನು ಪರಿಶೀಲಿಸಿ, ಆ ಘಟನೆಯತ್ತ ನಮ್ಮ ಗಮನವನ್ನು ಸೆಳೆದಿರುವುದಕ್ಕೆ ಕಾರಣ ಅವನಿಗೆ ಇದು “ಆಧುನಿಕ” ಮತ್ತು “ಸಮಕಾಲೀನತೆ”ಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಕಲ್ಪಿಸಿದ ಅನುಕೂಲತೆ. ಅವನ ಪ್ರಕಾರ ಷಾ, ಬೆನೆಟ್ ಮತ್ತು ವೆಲ್ಸ್ ತಾವು ಐಹಿಕ ಸುಖವಾದೀ ಸಮಾಜದ ಪ್ರವಾದಿಗಳು ಎಂದು ಭಾವಿಸಿದರು. ಯಾವುದೇ ಒಂದು ತತ್ವವನ್ನು ಪ್ರತಿಪಾದಿಸುವವರು ಅಥವಾ ತಾವು ಒಂದು ತತ್ವದ ಪ್ರವಾದಿಗಳು ಎಂದು ಭಾವಿಸುವವರು “ಆಧುನಿಕರು” ಆಗಲಾರರು.

ಸ್ಪೆಂಡರ್ ತನ್ನ ವಾದವನ್ನು ಮುಂದುವರಿಸುತ್ತಾ “ಆಧುನಿಕತೆ” ಮತ್ತು “ಸಮಕಾಲೀನತೆ”ಗಳ ಸತ್ವ ಇಂಥದು ಎಂದು ಬೆರಳಿಟ್ಟು ತೋರಲು ಪ್ರಯತ್ನಿಸಿದ್ದಾನೆ. ಸಮಕಾಲೀನನು (ಎಂದರೆ ಸಮಕಾಲೀನತೆಯ ಲೇಖಕನು) ಆಧುನಿಕ ಜಗತ್ತಿಗೆ ಸೇರಿದವನೇ. ತನ್ನ ಕೃತಿಗಳಲ್ಲಿ ಅದನ್ನು ಚಿತ್ರಿಸುತ್ತಾನೆ. ಆಧುನಿಕ ಜಗತ್ತಿನಲ್ಲಿ ಚಲಿಸುತ್ತಿರುವ ಚಾರಿತ್ರಿಕ ಶಕ್ತಿಗಳನ್ನು ಒಪ್ಪಿಕೊಳ್ಳುತ್ತಾನೆ. ವಿಜ್ಞಾನ ಮತ್ತು ಪ್ರಗತಿಗಳನ್ನು ಕುರಿತಂತೆ ಆಧುನಿಕ ಜಗತ್ತು ಒಪ್ಪಿರುವ ಮೌಲ್ಯಗಳನ್ನು ಇವನು ಒಪ್ಪುತ್ತಾನೆ ಎಂದ ಮಾತ್ರಕ್ಕೆ ತನ್ನ ಪರಿಸರವನ್ನು ಅವನು ವಿವೇಚಿಸಿ ಟೀಕಿಸುವುದಿಲ್ಲ ಎಂದು ಅರ್ಥವಲ್ಲ. ಬದಲಿಗೆ ಅವನು ಕ್ರಾಂತಿಕಾರನಾಗಿರುವ ಸಾಧ್ಯತೆಯೂ ಉಮಟು. ಆದರೆ ಸಮಾಜ ಎಂದರೆ ಘರ್ಷಣೆಗಳುಂಟಷ್ಟೆ ಸಮಕಾಲೀನನು ಈ ಘರ್ಷಣೆಗಳಲ್ಲಿ ಒಂದಲ್ಲ ಒಂದು ಪಕ್ಷವನ್ನು ವಹಿಸುತ್ತಾನೆ. ಆಧುನಿಕ ಜೀವನವನ್ನು ಇಡಿಯಾಗಿ ನೋಡುವ ಸಾಮರ್ಥ್ಯ ಅವನಿಗಿಲ್ಲ. ಆಧುನಿಕನಾದರೋ (ಎಂದರೆ ಆಧುನಿಕತೆಯ ಲೇಖಕ) ಜೀವನವನ್ನು ಇಡಿಯಾಗಿ ನೋಡಬಲ್ಲ. ಫ್ಯಾಸಿಸಂ ವಿರುದ್ಧ ಅಥವಾ ಕಾರ್ಮಿಕ ವರ್ಗದ ಪರವಾಗಿ ನಿಂತು ಬರೆಯುವ ಲೇಖಕ ಸಮಕಾಲೀನವೇ ಹೊರತು ಆಧುನಿಕನಲ್ಲ.

ಆಧುನಿಕನಿಗೆ ಸಮಕಾಲೀನ ಸಮಾಜದ ಚಿತ್ರದ ಅರಿವುಂಟು. ಆದರೆ ಅವನು ಈ ಸಮಕಾಲೀನ ಸಮಾಜದ ಮೌಲ್ಯಗಳನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಪರಂಪರೆಯ ಪ್ರವಾಹದಿಂದ ನಾವು ದೂರವಾಗಿದ್ದೇವೆ ಎಂಬುದು ಅವನ ಭಾವನೆ. ಇಂದು ಹಿಂದನ್ನೂ ಆ ಪ್ರಜ್ಞಾಪ್ರವಾಹವನ್ನೂ, ಒಳಗೊಳ್ಳಲೇಬೇಕು ಎಂಬುದು ಅವನ ನಂಬಿಕೆ. ಜೇಮ್ಸ್ ಜಾಯ್ಸ್ ನ ಯೂಲಿಸಿಸ್ ಕಾದಂಬರಿ ಮತ್ತು ಪಿಕಾಸೋವಿನ ಗುಯರ್ನಿಕಾ ಚಿತ್ರ ಇವುಗಳಿಗೆ ನಿದರ್ಶನ. ಯಾವುದೋ ಒಂದು ನಿರ್ದಿಷ್ಟ ಕಾಲ ಮತ್ತು ದೇಶದಲ್ಲಿನ ಸಮಕಾಲೀನ ಜೀವನವನ್ನು ಸಮಗ್ರವಾಗಿ ನೋಡಿ ಹೋಮರನ ಮಹಾಕಾವ್ಯವನ್ನು ಅಂದಿನ ಸಮಕಾಲೀನತೆಯ ಸಂದರ್ಭದಲ್ಲಿ ವ್ಯಾಖ್ಯಾನಿಸಿ ಎರಡೂ ಒಂದಕ್ಕೊಂದು ತಾಗುವಂತೆ ಮಾಡುವ ಪ್ರಯತ್ನ ನಡೆದಿದೆ ಜಾಯ್ಸ್‌ನ ಯೂಲಿಸನ್ ಕಾದಂಬರಿಯಲ್ಲಿ. ಪಿಕಾಸೋವಿನ ಗುಯರ್ನಿಕಾದಲ್ಲಿ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ ನಡೆದಿದೆ. ಆಧುನಿಕ ಕಾಲದ ವಿಮಾನ ಧಾಳಿಯ ಭಯಾನಕತೆಯು ಕ್ಲಾಸಿಕಲ್ ಗ್ರೀಕ್ ಅಥವಾ ಮಿತ್ರ ಸಂಪ್ರದಾಯದ ದುರಂತ ಪ್ರತಿಮೆಗಳಾದ-ಲಿಯ ಹೋರಿ, ಕತ್ತಿ ಮತ್ತು ಉರಿಯುವ ದೊಂದಿಗಳಾಗಿ ಪರಿವರ್ತಿತವಾಗಿವೆ.

ಇನ್ನು ಪಾಶ್ಚಾತ್ಯ ಲೇಖಕರು ತಮ್ಮ ಸಾಹಿತ್ಯದಲ್ಲಿ ಯಾವುದನ್ನು ಆಧುನಿಕತೆಯ ಲಕ್ಷಣಗಳು ಎಂದು ಹೇಳುತ್ತಾರೆ ಎಂಬುದನ್ನು ಇರ್ವಿಂಗ್ ಹೋವ್‌ನನ್ನು ಅನುಸರಿಸಿ ನಿರೂಪಿಸಬಹುದು.

ಮೊದಲನೆಯದಾಗಿ “ಆಧುನಿಕತೆ” ಎಂಬುದರ ಲಕ್ಷಣ ನಿರೂಪಣೆ ತುಂಬ ಕಷ್ಟದ್ದು ಎಂಬುದನ್ನು ಎನ್ನರೂ ಒಪ್ಪಿದ್ದಾರೆ. ಪ್ರೊ. ಲವ್‌ಜಾತ್ ಅವರ ಪ್ರಕಾರ ಅದು ವಿವರಣೆಗೆ ಹೊರಟಾಗ ನುಣುಚಿಕೊಳ್ಳುವಂಥದು ಮತ್ತು ಕಾಮರೂಪಿಯಾದದ್ದು ರೂಪ ಬದಲಾಯಿಸುತ್ತಾ ಇರುವಂಥದು.

ಆಧುನಿಕ ಬರವಣಿಗೆಯಲ್ಲಿ ಅರಿವಿನ ಸಾಧನದ ಬಗ್ಗೆ, ವೈಚಾರಿಕತೆಯ ಅಸಹನೆಯ ಬಗ್ಗೆ ತೀವ್ರವಾದ ಅಸಹನೆ ಇದೆ. ಎರಡನೆ ಅಂಶವೆಂದರೆ ಈ ಬರವಣಿಗೆ ಬದುಕಿನ ಸ್ಥಿತಿಗತಿಗಳನ್ನು ಅವು ಇರುವಂತೆಯೇ ಒಪ್ಪಿಕೊಂಡಿರುವ ಸಂಗತಿಯನ್ನು ಎತ್ತಿ ತೋರಿಸುತ್ತದೆ. ಬಾಡಿಲೆಯರನ ಮಾತುಗಳಲ್ಲಿ ಹೇಳುವುದಾದರೆ: “ಬದುಕಿನ ಸ್ಥಿತಿಗತಿಗಳನ್ನು ಒಪ್ಪಿಕೊಳ್ಳದವನು ತನ್ನ ಆತ್ಮವನ್ನು ಮಾರಿಕೊಳ್ಳುತ್ತಾನೆ.[5]

ಆಧುನಿಕ ಸಾಹಿತಿ, ಆಧುನಿಕ ಮಾನವನಂತೆ, ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಾ ಹೋಗುತ್ತಾನೆ. “ಹಿಂದಿನ ಕಾಲವು ಉತ್ತರಗಳನ್ನು ನೀಡುವ ಕರ್ತವ್ಯದಲ್ಲಿ ಮಗ್ನವಾಗಿತ್ತು. ಆಧುನಿಕ ಕಾಲವಾದರೋ ಪ್ರಶ್ನೆಗಳನ್ನು ಕೇಳುವುದರಲ್ಲಿ ನಿರತವಾಗಿದೆ” ಎನ್ನುತ್ತಾನೆ ಹೋವೆ. ಬದುಕು ಸಾವು, ಕಾಮ ಪ್ರೇಮ, ಸುಖ ದುಃಖ ಈ ಎಲ್ಲದರ ಬಗ್ಗೆಯೂ ಆಧುನಿಕನು ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾನೆ. ಯಾವ ಮೂಲ ಭೂತವಾದ ಪ್ರಶ್ನೆಗೂ ಸಮರ್ಪಕವಾದ ಉತ್ತರ ಇಲ್ಲ ನಿಜ. ಪ್ರಶ್ನೆಗಳೂ ಹಳೆಯದೇ ಎಂಬುದೂ ನಿಜ. ಆದರೆ ಹಳೆಯ ಪ್ರಶ್ನೆಗಳನ್ನೇ ಹೊಸ ಹೊಸ ರೀತಿಯಲ್ಲಿ ಕೇಳಬಹುದಷ್ಟೆ. ಆದರೆ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಶಾಸ್ತ್ರಗಳಲ್ಲಾಗಲೀ ಇತರ ಪುಸ್ತಕಗಳಲ್ಲಾಗಲೀ ಹುಡುಕಿ ಏನೂ ಪ್ರಯೋಜನವಿಲ್ಲ. ಅವು ಅವರಿವರು ನೀಡಿದ ಉತ್ತರಗಳನ್ನು ತಿಳಿಸುತ್ತವೆ. ಪ್ರತಿಯೊಬ್ಬನೊ ತನ್ನ ಪ್ರಶ್ನೆಗಳಿಗೆ ತಾನೇ ಉತ್ತರಗಳನ್ನು ಕಂಡುಹಿಡಿದುಕೊಳ್ಳಬೇಕು. ಆಲ್ಬರ್ಟ್‌ಕಾಮು ಹೇಳುತ್ತಾನೆ: “ಬದುಕಿನ ಅರ್ಥ ಏನು ಎಂಬುದನ್ನು ಕುರಿತು ಡಾಸ್ಟೋವಸ್ತಿಯ ಎಲ್ಲ ಪಾತ್ರಗಳೂ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. ಈ ವಿಷಯದಲ್ಲಿ ಅವರು ಆಧುನಿಕರು. ಇತರರು ತಮ್ಮನ್ನು ಗೇಲಿ ಮಾಡುತ್ತಾರೆ ಎಂಬುದಕ್ಕಾಗಿ ಅವರೇನೂ ಅಂಜುವುದಿಲ್ಲ. ಆಧುನಿಕ ಸಂವೇದನೆಗೆ ಆಹಾರ ನೈತಿಕ ಸಮಸ್ಯೆಗಳು, ಆಧುನಿಕ ಸಂವೇದನೆಗಾದರೋ ಆಧ್ಯಾತ್ಮಕ ಸಮಸ್ಯೆಗಳು”[6]

ಆಧುನಿಕರು ಬದುಕಿನಲ್ಲಿ ಸಮಸ್ಯೆಗಳು ಅನಿವಾರ್ಯ ಎಂಬುದನ್ನು ಒಪ್ಪುತ್ತಾರೆ. ಸಮಸ್ಯೆಗಳಿಲ್ಲದ ಬದುಕು ಯಾವ ಕಾಲದಲ್ಲಿ ತಾನೆ ಇತ್ತು. ಆದರೆ ಈ ಸಮಸ್ಯೆಗಳಿಗೆ ಇವೇ ಅಂತಿಮವಾದ ಪರಿಹಾರ ಎಂದು ಹೇಳುವುದನ್ನು ಅವರು ಒಪ್ಪುವುದಿಲ್ಲ. ಸಮಸ್ಯೆಗಳೇ ಒಂದು ಜೀವನ ವಿಧಾನ. ಅವುಗಳನ್ನು ಕುರಿತು ಪರಿಶೀಲನೆ ನಡೆಸುವುದೇ ನಮ್ಮ ಆದ್ಯ ಕರ್ತವ್ಯ. ಬದುಕು ನಮ್ಮನ್ನು ಗಾಯಗೊಳಿಸುತ್ತಾ ಹೋಗುತ್ತದೆ. ಗಾಯಗಳು ವಾಸಿಯಾಗುವಂಥವೇ ಅಲ್ಲ. “ಜನ ನಮ್ಮ ಗಾಯಗಳಲ್ಲೇ ಸಂತೈಕೆಯನ್ನು ಪಡೆಯುವುದನ್ನು ಕಲಿಯುತ್ತಾರೆ.” ಇಂಥದೇ ಅಂತಿ ಪರಿಹಾರ ಕೇವಲ ಪರಿಹಾರ ಎಂದು ಯಾರೂ ಹೇಳಲಾರರು. ಅಲ್ಲದೆ ಒಂದು ಸಮಸ್ಯೆಗೆ ಒಬ್ಬನಿಗೆ ಪರಿಹಾರ ಆಗುವಂಥದು ಇನ್ನೊಬ್ಬನಿಗೆ ಆಗದೇ ಇರುವ ಸಂಭವವೇ ಹೆಚ್ಚು. ನಿಷೆ ಹೇಳುತ್ತಾನೆ: “ಸತ್ಯವು ಇನ್ನೂ ಯಾವುದೇ ಒಂದು ‘ಕೇವಲ’ದ ತೋಳಿಗೂ ಜೋತುಬಿದ್ದಿಲ್ಲ”[7]

ಸಮಸ್ಯೆಗಳಿಗೇ ಮಾನವರು ಅಂಟಿಕೊಂಡಿರುವುದೇಕೆ? ಅನಾನುಕೂಲದಲ್ಲಿ ಬಾಳುವುದೇ ಒಳ್ಳೆಯದು, ಉಚಿತವಾದದ್ದು, ಸುಂದರವಾದದ್ದು ಕೂಡ ಎಂದು ಜನ ಅರಿತಿರುವುದೇ ಅದಕ್ಕೆ ಕಾರಣ. ಮತ್ತು ನಿಷೆಯ ಮಾತುಗಳು:

“ಆಕ್ಷೇಪಣೆ, ನಿವಾರಣೆ, ಅಸಂತೋಷಪೂರ್ಣವಾದ ಸಂದೇಹ, ವಿಡಂಬನೆಯನ್ನು ಪ್ರೀತಿಸುವುದು-ಇವೇ ಆರೋಗ್ಯದ ಲಕ್ಷಣಗಳು. ಕೇವಲವಾದದ್ದು ಎನ್ನುವುದೆಲ್ಲ ಅನಾರೋಗ್ಯದ ಲಕ್ಷಣ”.[8]

ಸತ್ಯ ಮತ್ತು ಪ್ರಾಮಾಣಿಕತೆಗಳು ಬೇರೆ ಬೇರೆ. ಅವೆರಡರ ನಡುವೆ ವ್ಯತ್ಯಾಸ ಇದೆ ಎನ್ನುವುದರ ಅರಿವು ಅಗತ್ಯ, ಆಧುನಿಕತೆಯ ಬರವಣಿಗೆಯ ವಿಶಿಷ್ಟ ಲಕ್ಷಣಗಳನ್ನು ವಸ್ತುನಿಷ್ಠವಾದ ನಿಯಮವೊಂದರ ಕಡೆಯಿಂದ ಪ್ರಾಮಾಣಿಕವಾದ ಪ್ರತಿಕ್ರಿಯೆಯ ಕಡೆಗೆ ಅದು ತಿರುಗಿತು. ವಸ್ತುನಿಷ್ಠವಾದ ನಿಯಮವೊಂದನ್ನು ಅರಿವುದು ಎಂದರೆ ಈ ವಿಶ್ವದ ಸ್ವರೂಪವನ್ನು ಅರಿಯುವುದ ಪ್ರಯತ್ನ ನಡೆಸುವುದು ಎಂದು. ಈ ಪ್ರಯತ್ನ ನಮ್ಮನ್ನು ತತ್ವಜಿಜ್ಞಾಸೆಯ ಕಡೆಗೆ ಒಯ್ಯುತ್ತದೆ. ಅಷ್ಟೇ ಅಲ್ಲ ಆತ್ಮಹತ್ಯೆ, ಕ್ರಾಂತಿ. ಕೊನೆಗೆ ದೇವರು ಈ ಕಡೆಗೆ ಒಯ್ಯಬಹುದು. ಪ್ರಮಾಣಿಕವಾದ ಪ್ರತಿಕ್ರಿಯೆಯೇ ಎಂದರೆ ನಮ್ಮೊಳಗಿರುವ ದಾನವ ಶಕ್ತಿಗಳನ್ನು ತೆರೆದು ತೋರಿಸುತ್ತದೆ… ಇವರ ಪ್ರಕಾರ ಪ್ರಮಾಣಿಕತೆ ಎಂಬುದು ಬುದ್ಧಿಯ ಜಟಿಲ ಗೊಂದಲಗಳನ್ನು ನಿವಾರಿಸಿ ವೇಗವಾಗಿ ಸತ್ಯವನ್ನು ಸಮೀಪಿಸುವ ಸಾಧನ ಎಂದು ತೋರಿತು. ಆಧುನಿಕರ ದೃಷ್ಟಿಯಲ್ಲಿ ಪ್ರಾಮಾಣಿಕತೆಯು- ಸತ್ಯಕ್ಕೆ ಒಯ್ಯಲಿ ಬಿಡಲಿ, ಸತ್ಯವನ್ನು ಕಾಣುವುದು ಸಾಧ್ಯವೋ ಇಲ್ಲವೋ ಆ ಮಾತೂ ಹಾಗಿರಲಿ-ತನ್ನಷ್ಟಕ್ಕೆ ಒಂದು ಮೌಲ್ಯವಾಯಿತು.

ಸಾಹಿತ್ಯದಲ್ಲಿ ಆಧುನಿಕತೆಯ ಲಕ್ಷಣಗಳು ಇವು ಎಂದು ಇರ್ವಿಂಗ್ ಹೋಮ್ ನಿರೂಪಿಸಿದ್ದಾನೆ.

(೧) ಅವಾನ್-ಗಾರ್ಡ್‌(Avan Garde) ಎಂಬ ಒಂದು ಹೊಸ ಜಾತಿಯ ಉದಯ.

ಸಮಾಜದ ಒಳಗೇ ಅಥವಾ ಅದರ ಅಂಚಿನಲ್ಲಿ ನಿಂತು ಆಧುನಿಕರು ತಮ್ಮದೇ ಆದ ಒಂದು ‘ಜಾತಿ’ಯನ್ನು ನಿರ್ಮಿಸಿಕೊಂಡಿದ್ದಾರೆ. ತಾವು ಹಾಗೆ ಒಪ್ಪಿಕೊಳ್ಳದಿದ್ದರೂ ಅವರದು ಒಂದು ಬಗೆಯ ಅವ್ಯವಸ್ಥಿತ ವಿರೋಧ. ಈ ವಿರೋಧ ಕಟ್ಟುಪಾಡಿನ ಬಗ್ಗೆ ಸಂಪ್ರದಾಯದ ಬಗ್ಗೆ ಅಥವಾ ರಾಜಕೀಯ ವ್ಯವಸ್ಥೆಯ ಬಗ್ಗೆ ಆಗಬಹುದು. ಈ ಅವಾನ್ ಗಾರ್ಡ್‌ನ ಲಕ್ಷಣಗಳು:

ಶ್ರೋತೃಗಳು ಅಥವಾ ಓದುಗರಿಗೆ ತಾವು ‘ಜವಾಬ್ದಾರರು’ ಎಂಬ ಭಾವನೆಯನ್ನೆ ಇವರು ಒಪ್ಪುವುದಿಲ್ಲ. ಶ್ರೋತೃಗಳು ಅಥವಾ ಓದುಗರು ಇದ್ದಾರೆಯೇ? ಇರಬೇಕೆ? ಎಂಬ ಪ್ರಶ್ನೆಯನ್ನು ಅವರು ಕೇಳುತ್ತಾರೆ. ಕಲೆ ಸ್ವಯಂಪೂರ್ಣವಾಗಿರಬೇಕು. ಬೇಜವಾಬ್ದಾರವಾಗಿರಬೇಕು, ಅದರಲ್ಲೇ ಕಲೆಗೆ ಮುಕ್ತಿ ಎಂಬುದು ಇರುವುದು ಎನ್ನುತ್ತಾರೆ ಈ ಪಂಥದವರು.

[1] ರೊಮಾಂಟಿಂಗ್ ಎಂಬ ಪದ ಮತ್ತು ಸಂಪ್ರದಾಯಗಳನ್ನು ಕುರಿತು ದುರದೃಷ್ಟವಶಾತ್ ತಪ್ಪು ಅಭಿಪ್ರಾಯಗಳು ಹೇರಳವಾಗಿ ಪ್ರಚಲಿತವಾಗಿವೆ. ಈ ಲೇಖಕನು ಸಿದ್ಧಪಡಿಸುತ್ತಿರುವ ‘ರೊಮಾಂಟಿಂಕ್ ಪಂಥ’ ಎಂಬ ಗ್ರಂಥವು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

[2] ನೋಡಿ: David Daiches: The Present Age. The Crescent Press. London. 1958.

[3] Literary Modernism-Edited with an Introduction and Commentry by Irwing Howe. Faweett Publications Inc. 1967 `The Idea of the Modern.’

[4] The Struggle of the Modern-University of California Press.

[5] Every man who refuses to accept the conditions of life sells his soul.

[6] What distinguishes modern sensibility from classical sensibility is that the latter thrives on moral problems and the former on metaphysical problems.

[7] “Truth has never yet hung on the arm of an absolute.”

[8] Objection evasion, joyous distrust and love of irony are signs of health everything absolute belongs to pathology.