ಆದರೆ ಇಂಥದೊಂದು ಗುಂಪು ತನ್ನ ನಿಷ್ಠೆಗೇ ಬದ್ಧವಾಗಿ ಬಹಳ ಕಾಲ ಉಳಿಯುವುದು ಸಾಧ್ಯವಾಗಲಿಲ್ಲ. ಈಗಾಗಲೇ ರೂಢಿಯಲ್ಲಿರುವ ಮೌಲ್ಯಗಳನ್ನು ಸಮಾಜ ವ್ಯವಸ್ಥೆಯನ್ನು ಎದುರಿಸಿ ಬಹಳ ಕಾಲ ಸ್ವತಂತ್ರವಾದ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಕಷ್ಟ ಹಾಗೆ ಉಳಿಸಿಕೊಳ್ಳಲು ಅತ್ಯಂತ ಅಸಾಧಾರಣವಾದ ಧೀರತ್ವ ಬೇಕು. ಆ ಧೀರತ್ವ ಎಂದರೆ ಸಹನೆ. ಕೊನೆಯವರೆಗೂ ಅಂಥ ಸಹನೆಯನ್ನು ತೋರಿಸಿ, ತತ್ವಕ್ಕೆ ನಿಷ್ಠನಾಗಿ ಉಳಿದ ಲೇಖಕ ಒಬ್ಬನೇ ಒಬ್ಬ –ಜೇಮ್ಸ್ ಜಾಯ್ಸ್ ಎನ್ನುತ್ತಾನೆ. ಹೋವ್. ಒಂದಲ್ಲ ಒಂದು ಪಂಥ ಅಂಥ ಲೇಖಕರನ್ನು ತನ್ನ ಸುಳಿಗೆ ಎಳೆದುಕೊಂಡು ಬಿಡುತ್ತದೆ. ಯೇಟ್ಸ್ ಪೌಂಡ್ ಬಲ ಪಂಥೀಯರಾಗಿ ಹೋದರು. ಬ್ರೆಕ್ಟ್ ಮತ್ತು ಮಾಲ್ರೋ ಎರಪಂಥೀಯರಾಗಿ ಹೋದರು. ಹೀಗಾಗಿ ಆ ಪಂಥೀಯತೆಯನ್ನು ಸಾಧಿಸುವುದು ಅವರಿಗೆ ಅಸಾಧ್ಯವಾಯಿತು. ಈ ಆಧುನಿಕತೆಯ ಲೇಖಕರು ರಾಜಕೀಯದಿಂದ ದೂರ ಇದ್ದಿದ್ದರೆ ಸಾಹಿತ್ಯಕ್ಕೂ ಒಳ್ಳೆಯದಾಗುತ್ತಿತ್ತು ಮತ್ತು ಸಮಾಜಕ್ಕೂ ಒಳ್ಳೆಯದಾಗುತ್ತಿತ್ತು ಎಂಬುದು ಹೋವ್‌ನ ಅಭಿಪ್ರಾಯ. ಆದರೆ ನಿಜವಾಗಿ ಆಧುನಿಕ ಸಮಾಜದಲ್ಲಿ ಇದು ಎಷ್ಟೊಂದು ಕಷ್ಟಸಾಧ್ಯವಾದ ವಿಷಯ. ಜೇಮ್ಸ್ ಜಾಯ್ಸ್ ಒಬ್ಬ ಮಾತ್ರವೇ ಅಂಥ “ಸಾಹಿತ್ಯಕ ಸನ್ಯಾಸ” (literary monasticism) ವನ್ನು ಕಾಪಾಡಿಕೊಂಡು ಬರಲು ಸಮರ್ಥನಾದ. ಅವನ ಶಿಷ್ಯರಲ್ಲಿ ಅತ್ಯಂತ ಪ್ರತಿಭಾಶಾಲಿಯೂ ನಿಷ್ಠಾವಂತಲೂ ಆದ ಬೆಕೆಟ್‌ಕೂಡ ಈ ವಿಷಯದಲ್ಲಿ ಶುದ್ಧನೇ ಆಗಿ ಉಳಿದಿದ್ದಾನೆ ಎನ್ನುತ್ತಾನೆ ಹೋವ್.

(೨) ನಂಬಿಕೆಯ ನಿರಸನ

ಜಗತ್ತನ್ನು ಕುರಿತಂತೆ ಎಷ್ಟೊಂದು ವಿಭಿನ್ನವಾದ ದೃಷ್ಟಿಕೋನಗಳಿವೆ. ಹೀಗಿರುವಾಗ ಓದುಗರಿಗೂ ಲೇಖಕರಿಗೂ ಸಮಾನವಾದ ನಂಬಿಕೆಗಳಿರುವುದು ಸಾಧ್ಯವೆ? ಇಬ್ಬರ ನಡುವಣ ಸಮಾನ ಪ್ರಮೇಯಗಳೂ ಕಟ್ಟು ಹರಿದು ಈಗ ಅವು ಪ್ರಶ್ನೆ ಪ್ರಯತ್ನ ಘರ್ಷಣೆಗಳಿಗೆ ಎಡೆಮಾಡಿಕೊಡಬೇಕು. ಜರ್ಮನ್ ಕವಿ, ನಾಟಕಕಾರ ಕಮ್ಯುನಿಸ್ಟ್ ಬೆರ್ಟೋಲ್ಟ್ ಬ್ರೆಕ್ಟ್ “ಮುಂದಿನ ಪೀಳಿಗೆಗೆ” (To Posterity) ಎನ್ನುವ ಕವನದಲ್ಲಿ ಎರಡು ಯುದ್ಧಗಳ ನಡುವೆ ಯುರೋಪು ಅನುಭವಿಸಿದ ಕಷ್ಟ ನಿಷ್ಠುರಗಳನ್ನು ವಿವರಿಸುತ್ತಾ “ಷೂಗಳನ್ನು ಬದಲಿಸುವುದಕ್ಕಿಂತ ಹೆಚ್ಚು ಸಲ ನಾವು ನಮ್ಮ ದೇಶಗಳನ್ನು ಬದಲಿಸಿದೆವು” ಎನ್ನುತ್ತಾನೆ.[1]

ಆದರೆ ಮರುಕ್ಷಣದಲ್ಲಿಯೇ ಸ್ಟಾಲಿನ್ ಸರ್ವಾಧಿಕಾರವನ್ನು ತಾನು ಬೆಂಬಲಿಸುತ್ತಿರುವುದನ್ನು ಜಾಣ್ಮೆಯಿಂದ ಸಮರ್ಥಿಸುತ್ತಾನೆ. ಇದಕ್ಕೆ ನಾವು ಪ್ರತಿಕ್ರಿಯೆ ತೋರಿಸಬಹುದಾದದ್ದು ಹೇಗೆ? ಅನೇಕ ವಿಮರ್ಶಕರು ಹೇಳುವಂತೆ ಸಿದ್ಧಾಂತ ಯಾವುದು ಎಂಬುದು ಅಷ್ಟು ಮುಖ್ಯವಲ್ಲ ಎಂದು ಹೇಳಿಬಿಡಬಹುದು. ಆದರೆ ಅದರಿಂದಾಗುವ ಅಪಾಯ ಎಂದರೆ ಒಂದು ಕವನದ ಚಿಂತನಾಂಶವಾಗಲಿ, ಪ್ರಧಾನವಾದ ಭಾವನೆಯಾಗಲಿ ಈ ಕವನದ ಮೌಲ್ಯ ನಿರ್ಣಯಕ್ಕೆ ಅಗತ್ಯವಾದ ಅಂಶವಲ್ಲ ಎಂಬ ಸಾಧಿಸಲು ಅಸಾಧ್ಯವಾದ., ನಿಲುವಿಗೆ ನಾವು ಬರುವಂತಾಗುವುದು ಅಥವಾ, ಕೆಲವು ವಿಮರ್ಶಕರು ಹೇಳುವಂತೆ, ಒಂದು ಸಿದ್ಧಾಂತವು ಅಸಹ್ಯವಾಗಿರುವುದರಿಂದ ಕವನವು ನಮಗೆ ನೀಡುವ ಸಂತೋಷವನ್ನು ಅದು ಹಾಳು ಮಾಡುತ್ತದೆ ಎಂಬುದನ್ನು ಒಪ್ಪುತ್ತೇವೆ. ಎಂದು ಇಟ್ಟುಕೊಳ್ಳೋಣ. ಆಗ ಮತ್ತೊಂದು ಸಾಧ್ಯವಾದ ನಿಲುವನ್ನು ನಾವು ತಲುಪುತ್ತೇವೆ. ಅದು: ಲೇಖಕನು ಒಪ್ಪಿರುವ ಸಿದ್ಧಾಂತಗಳು ನಮಗೆ ಒಪ್ಪಿಗೆಯಾಗುತ್ತವೆಯೇ ಇಲ್ಲವೇ ಎಂಬುದನ್ನು ಅವಲಂಬಿಸುತ್ತದೆ ನಾವು ಒಂದು ಕೃತಿಯನ್ನು ವಿಮರ್ಶಿಸುವ ವಿಧಾನ.

ಆಧುನಿಕತೆಯ ಮೊದಲ ಘಟ್ಟದಲ್ಲಿ ಈ ಸಮಸ್ಯೆ ಎದ್ದು ಕಾಣುತ್ತದೆ. ಮುಂದೆ ಟಿ.ಎಸ್. ಎಲಿಯಟ್ ಮತ್ತು ಐ.ಎ. ರಿಚರ್ಡ್ಸ್ ಅವರ ವಿಮರ್ಶೆಯಲ್ಲಿ ಇದು ಸ್ಪಷ್ಟವಾಗಿ ವ್ಯಕ್ತಗೊಳ್ಳುತ್ತದೆ. ಆದರೆ ಮುಂದೆ ಒಂದು ಹೊಸ ಪ್ರವೃತ್ತಿ ಕಾಣಿಸಿಕೊಂಡಿರು. ಮೇಲೆ ಹೇಳಿದ ಸಮಸ್ಯೆಯನ್ನು ಪರಿಹರಿಸಲು ಅದು ನೆರವಾಯಿತು. ಸಾಹಿತ್ಯವನ್ನು ಅ-ಚಾರಿತ್ರಿಕವಾಗಿ ನೋಡುವುದು, ಅಭಿಪ್ರಾಯ ಅಥವಾ ನಂಬಿಕೆಗಳ ಆಚೆಗಿನ ಒಂದು ರಚನೆಯಾಗಿ ನೋಡುವುದು ಒಂದು ಪ್ರದರ್ಶನ ಎಂಬಂತೆ ನೋಡುವುದು. ಈ ನಂಬಿಕೆ, ಆ ನಂಬಿಕೆ ಎಂದಲ್ಲ, ನಂಬಿಕೆ ಎಂಬ ಭಾವನೆಯ ಬಗೆಗೇ ಬೇಸರ ಬಂದು ಹೋಗುತ್ತದೆ.

(೩) ಸಾಹಿತ್ಯದಲ್ಲಿ ಸಂಪೂರ್ಣತೆ

ಆಧುನಿಕತೆಯು ಮುಖ್ಯವಾಗಿ ಸ್ವಯಂಪೂರ್ಣತೆಯ ಕಡೆಗೆ ಚಲಿಸತೊಡಗಿತು. ಜನಜೀವನ ಮತ್ತು ಅನುಭವಗಳೊಡನೆ ಸಂಪರ್ಕವನ್ನು ಕಡಿದುಕೊಂಡ ಕಲೆಯನ್ನು ಸೃಷ್ಟಿಸತೊಡಗಿತು ಪ್ರತೀಕವಾದ (symbolism). ಅಂಥದೊಂದು ಕಲಾರೂಪವನ್ನು ಸೃಷ್ಟಿಸುವುದು ನಿಜವಾಗಿಯೂ ಅಸಾಧ್ಯ. ಆದರೂ ಅಂಥ ಪ್ರಯತ್ನವೇನೋ ನಡೆಯಿತು.

“ವರ್ಡ್ಸ್‌ವರ್ತ್‌ಕವಿಯ ಆಧ್ಯಾತ್ಮಿಕ ಜೀವನದ ಅಸ್ತಿಭಾರ ಎಂದರೆ ತೀವ್ರವಾದ ದೀಪ್ತಿಯ (illumination) ಕ್ಷಣಗಳು. ಈ ಅಂಶದಲ್ಲಿ, ಎಂದರೆ ಸ್ಫುರಣೆಯ ಕ್ಷಣಗಳನ್ನು ಕೃತಿರಚನೆ ಅವಲಂಬಿಸುತ್ತದೆ ಎಂಬ ಅರ್ಥದಲ್ಲಿ, ರೊಮಾಂಟಿಕರೂ ಪ್ರತೀಕ ವಾದಿಗಳು ಒಂದೇ. ಆದರೆ ವ್ಯತ್ಯಾಸವಿರುವುದು ಇಲ್ಲಿ; ವರ್ಡ್ಸ್‌ವರ್ತನ ಕಾವ್ಯ ಅವನ ಬೆಳಕಿನ ಸ್ಫುರಣೆಯ ಕ್ಷಣಗಳನ್ನು ವರ್ಣಿಸಿ ಅವಕ್ಕೆ ವ್ಯವಸ್ಥಿತವಾದ ಜೀವಮಾನದ ಸಮಗ್ರ ಅನುಭವದೊಂದಿಗೆ ಸಂಬಂಧವನ್ನು ಕಲ್ಪಿಸುತ್ತದೆ.”[2] ಆದರೆ ಪ್ರತೀಕವಾದಿ ಕವಿಗೆ ಅಂಥ ಅನುಭವವನ್ನು ‘ವರ್ಣಿಸುವ’ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವನಿಗೆ ಕವನದ ಕ್ರಿಯೆಯ ಮೂಲಕ ಮಾತ್ರವೇ ಅಂಥ ಬೆಳಕಿನ ಸ್ಫುರಣೆಯ ಕ್ಷಣವು ಪ್ರಾಪ್ತವಾಗುತ್ತದೆ. ಅಲ್ಲದೆ ಅಂಥ ಬೆಳಕಿನ ಸ್ಫುರಣೆಯ ಕ್ಷಣವು ಪ್ರಾಪ್ತವಾಗುವುದು. ಅದು ಯಾವುದೋ ನಿರ್ದಿಷ್ಟ ಕಾಲ (ಕಾವ್ಯ-ಸಹಿತ) ರೂಪವನ್ನು ಬಲಾತ್ಕಾರವಾಗಿ ಜೀವಮಾನದ ಸಮಗ್ರ ಅನುಭವದೊಂದಿಗೆ ಸಂಬಂಧ ಕಲ್ಪಿಸುವ ಪ್ರಶ್ನೆಯೂ ಬರುವುದಿಲ್ಲ. ಏಕೆಂದರೆ ಆ ಸ್ಫುರಣೆ ಅಸದೃಶವಾದದ್ದು. ಕ್ಷಣಿಕವಾದದ್ದು (ಕವನದ) ವಸ್ತುವಿನಲ್ಲಿ ಮಾತ್ರ, ಅದಕ್ಕಿಂತ ಹೆಚ್ಚಾಗಿ ಸ್ಫುರಣೆಯ ಕ್ಷಣದಲ್ಲಿ ಮಾತ್ರ, ಲಭ್ಯವಾಗುವಂಥದು. ಕವಿ ತೊಡಗಿರುವುದು ಆ ಸ್ಫುರಣೆಯ ಪ್ರಕಾಶನ (revelation)ದಲ್ಲೇ ಹೊರತು ಅದರ ಪ್ರವಹಣದಲ್ಲಿ ಅಲ್ಲ.

ಪ್ರತೀಕವಾದದ ಪ್ರಯತ್ನವೆಂದರೆ ಜಗತ್ತು ಮತ್ತು ಕಲಾಕೃತಿಗಳ ನಡುವೆ ಸಂಪ್ರದಾಯವು ಸೃಷ್ಟಿಸಿರುವ ದ್ವಂದ್ವವನ್ನು ನಾಶಗೊಳಿಸುವುದು. ಅರ್ಥದ ಹೊರೆಯನ್ನು ನಿವಾರಿಸುವುದೂ ಅದರ ಉದ್ದೇಶ. ಪ್ರತೀಕ ಪಂಥದ ದರ್ಶನ (vision) ಅಥವಾ ಅರಿವಿನ ಪ್ರಕಾಶನವನ್ನು ಕುರಿತು ಮಾರ್ಸಲ್ ರೇಮಂಡ್ ಸೊಗಸಾಗಿ ಹೇಳಿದ್ದಾನೆ:

‘ಪರಿಪೂರ್ಣವೂ ಸಮಗ್ರವೂ’ ಆದ ಸಂತೋಷದ ಆ ಸ್ಥಿತಿಯು ಅನಿರ್ವಚನೀಯ ಎನ್ನಬಹುದಾದದ್ದು, ಆದ್ದರಿಂದಲೇ ಅದು ಕ್ಷಣಿಕವಾದದ್ದೂ ಹೌದು. ಅದು ಕಳೆದುಹೋದ ಮೇಲೆ ಮಾನವನಿಗೆ ತನ್ನ ಇತಿಮಿತಿಗಳ, ತನ್ನ ಬದುಕಿನ ಅನಿಶ್ಚತೆಯ ಅರಿವು ತೀವ್ರತರವಾದದ್ದು ಎನ್ನಿಸುತ್ತದೆ. ಸ್ವರ್ಗದ (ಎಂದರೆ ಸಂತೋಷದ) ಬಾಗಿಲನ್ನು ಬಲವಂತವಾಗಿ ತೆರೆಯುವವರೆಗೂ-ಅಥವಾ ಅದು ಅಸಾಧ್ಯವೇ ಆದದ್ದಾದರೆ- ಈ ಅರಿವಿನ ಪ್ರಕಾಶನಗಳ ಪ್ರಯೋಜನವನ್ನು ಪಡೆದುಕೊಳ್ಳುವವರೆಗೂ ಅವನು ಸುಮ್ಮನಿರುವುದಿಲ್ಲ. (ಕಲಾವಿದನ/ ಸಾಹಿತಿಯ) ಚೇತನವು ಒಂದು ರೀತಿಯ ಕ್ರೀಡೆಯಲ್ಲಿ ತೊಡಗಿರುತ್ತದೆ. ಆದರೆ ಯಾವುದೇ ಕ್ರೀಡೆಗಿಂತ ಉನ್ನತವಾದ ಒಂದು ಚಟುವಟಿಕೆಗಾಗಿ ಹಾತೊರೆಯುತ್ತದೆ-ತಾನು ಕಳೆದುಕೊಂಡ ಸಂತೋಷವನ್ನು ಪದದ ನೆರವಿನಿಂದ ಸೃಷ್ಟಿಸಲು ಹಾತೊರೆಯುತ್ತದೆ. (ಅವನು ಪ್ರತೀಕಗಳನ್ನು ಸೃಷ್ಟಿಸುತ್ತಾನಷ್ಟೆ) ಸಂವೇದನೆಗಳೆಂಬ ಮಣ್ಣೇ ಪ್ರತೀಕಗಳ ಮೂಲ ದ್ರವ್ಯ. ಪ್ರತೀಕಗಳ ಉದ್ದೇಶ ಬಾಹ್ಯವಸ್ತುಗಳನ್ನು ವರ್ಣಿಸುವುದಲ್ಲ. ಆದರೆ ಮೂಲ ಆನಂದವನ್ನು ಮುಂದುವರಿಸುವುದು ಅಥವಾ ಅದನ್ನು ಮತ್ತೆ ಸೃಷ್ಟಿಸುವುದು.”[3]

(೪) ಸೌಂದರ್ಯಾನುಭೂತಿಯ ತತ್ವದ ನಿರಾಕರಣೆ ಅಥವಾ ಅದರಲ್ಲಿ ಕ್ರಾಂತಿಕಾರಿಯಾದ ಬದಲಾವಣೆ.

ಸಾಹಿತ್ಯದ ಕಲೆಯ ರೂಪಾಂಶದಲ್ಲಿ ಐಕ್ಯತೆಯಿರಬೇಕು ಎಂದು ಹೇಳಿದರೆ ಬುದ್ಧಿ ಮತ್ತು ಭಾವಗಳ ಮಟ್ಟದಲ್ಲಿ ತಾತ್ವಿಕವಾದ ಶಮಸ್ಥಿತಿ ಅಗತ್ಯ ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಹೀಗೆ ಹೇಳಿದಕೂಡಲೇ ಸಾಹಿತಿ/ ಕಲಾವಿದ ತನ್ನ ಕೃತಿಯ ಸಾಮಗ್ರಿಯಿಂದ ಮೇಲೆ ನಿಂತಿದ್ದಾನೆ, ಅದನ್ನು ನಿಯಂತ್ರಿಸುತ್ತಿದ್ದಾನೆ, (ಅದರ ಸಮಸ್ಯೆಗಳಿಗೆ) ಪರಿಹಾರವಿದೆ ಎಂಬುದನ್ನು ಅರಿತಿದ್ದಾನೆ ಎಂದೆಲ್ಲ ನಿರ್ಣಯವಾಗುತ್ತದೆ. ಅಲ್ಲದೆ ತನ್ನ ಪ್ರಶ್ನೆಗಳಿಗೆ ಉತ್ತರಗಳು ಸಿದ್ಧವಾಗಿವೆ ಎಂದಾಗಲಿ. ಉತ್ತರಗಳಿರುವುದು ಸಾಧ್ಯ ಎಂದಾಗಲಿ ಒಪ್ಪಿಕೊಂಡಂತೆ ಆಗುತ್ತದೆ. ಆದರೆ ಆಧುನಿಕ ಲೇಖಕನಿಗೆ ಈ ಯಾವುವೂ ಸರಿ ಎಂದು ತೋರುವುದಿಲ್ಲ. ಸಂದಿಗ್ಧತೆಗಳಿವೆ ಎಂಬುದನ್ನು ತನ್ನ ಕೃತಿಯಲ್ಲಿ ನಿರೂಪಿಸುತ್ತಾನೆ. ಆದರೆ ಅವುಗಳನ್ನು ಅವನು ಪರಿಹರಿಸಲಾರ. ತಕ್ಷಣ ಪರಿಹರಿಸುವ ಉದ್ದೇಶವೂ ಅವನಿಗಿಲ್ಲ. ಅವನು ನಿರೂಪಿಸಲು ಪ್ರಯತ್ನಿಸುವುದು ಅಂಥ ಸಂದಿಗ್ಧತೆಗಳೊಂದಿಗೆ ಅವನು ನಡೆಸುವ ಹೋರಾಟವನ್ನು ಅವನ ಕೃತಿಯಲ್ಲಿ ಒಂದು ವೇಳೆ ಐಕ್ಯತೆ ಕಂಡರೆ, ಹಾಗೆ ಕಾಣುವುದು ಅಪರೂಪವೇ ಸರಿ, ಅದರ ಮೂಲ ಭಾವದ ಲಯ, ಪೂರ್ಣಗೊಳಿಸುವುದಕ್ಕೆ ಉಕ್ಕಿದ ರಭಸ, ಹೋರಾಟ, ಯಾವುದೇ ಸಮಸ್ಯೆಗಳಿಗೆ, ಈಗಾಗಲೇ ಸೂಚಿಸಿರುವಂತೆ, ಪರಿಹಾರಗಳನ್ನು ನೀಡುವುದು ಆಧುನಿಕ ಲೇಖಕನ ಕರ್ತವ್ಯ ಅಲ್ಲ. ಕಾಫ್ಕನ ಬರವಣಿಗೆಗಳನ್ನು ನೋಡಿದರಂತೂ ಪರಿಹಾರವನ್ನು ಸೂಚಿಸುವುದಿರಲಿ, ಒಂದು ಕೃತಿಯನ್ನು ಪೂರ್ಣಗೊಳಿಸುವುದು ಕೂಡ ಲೇಖಕನ ಜವಾಬ್ದಾರಿಯಲ್ಲ ಎಂದೇ ತೋರುತ್ತದೆ.

(೫) ನಿಸರ್ಗವು ಸಾಹಿತ್ಯದವಸ್ತುವೂ ಅಲ್ಲ, ಹಿನ್ನೆಲೆಯ ಆವರಣವೂ ಅಲ್ಲ.

ವರ್ಡ್ಸ್‌ವರ್ತ್‌ಮುಂತಾದ ಕವಿಗಳು ನಿಸರ್ಗವನ್ನು ವರ್ಣಿಸಿದ್ದಾರಷ್ಟೆ ಸಾವಯವ ಹಿನ್ನೆಲೆ ಅಥವಾ ಆವರಣವಾದ ನಿಸರ್ಗವನ್ನು ಅವರೆಲ್ಲರೂ ತಮ್ಮ ಕವನದಲ್ಲಿ ಆಹ್ವಾನಿತವಾದ ಅಥವಾ ನೆನಪುಮಾಡಿಕೊಂಡ ಭಾವನೆಯಾಗಿ ಪರಿವರ್ತಿಸಿದ್ದಾರೆ.[4] ಅಲ್ಲಿಗೆ ನಿಸರ್ಗದ ಸಹಜತೆ ಉಳಿಯುವುದೆಂತು? ಆದ್ದರಿಂದ ಆಧುನಿಕರು ಯಾವುದೋ ಒಂದು ಸ್ಮೃತಿಯಾಗಿ, ಇನ್ನೆಲ್ಲಿ ಆ ವೈಭವ ಎಂದು ಹಲುಬುವ ಕಾರಣಕ್ಕಾಗಿಯಾಲಿ ಪ್ರತಿಯನ್ನು ಬಳಸಿಕೊಳ್ಳಲಿಲ್ಲ.

(೬) ವಿಕಾರ-(perversity) ಎಂದರೆ ಆಶ್ಚರ್ಯ, ಉದ್ರೇಕ, ಆಘಾತ, ಭಯ ಭ್ರಾಂತಿಗಳನ್ನು ಉಂಟುಮಾಡುವುದು-ಇವೇ ಪ್ರಧಾನ ಸಾಹಿತ್ಯೋದ್ದೇಶಗಳಾಗುತ್ತವೆ.

ಇದನ್ನು ಸ್ಪಷ್ಟಪಡಿಸುವುದಕ್ಕೆ ಜಿ.ಎನ್. ಫ್ರೇಜರ್ ನೀಡುವ ಎರಡು ಉದಾಹರಣೆಗಳನ್ನು ತೆಗೆದುಕೊಂಡಿದ್ದಾನೆ ಹೋವ್. ಒಂದು ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿದ್ದ ಕವಿ ರಾಬರ್ಟ್‌ಬ್ರಿಡ್ಜಸ್‌ನದು:

ಪ್ರೇಮವು ಕರೆದಿದೆ ಪ್ರೇಮವನು
ಪ್ರೇಮವು
ಮರು ನುಡಿದಿದೆ ಪ್ರೇಮಕ್ಕೆ
ಕಣ್ಣಿಗೆ
ಕಾಣದ ಹಗ್ಗವು ಎಳೆದಿದೆ ಭೂಮಿಯ ತುದಿಯಿಂದ,
ಮುಂಬೆಳಗಿನ
ಮುಚ್ಚಂಜೆಯ ದೂರದ ಊರಿಂದ
ಪ್ರೇಮವು
ಬರುವುದು ಪ್ರೇಮಕ್ಕೆ….

ಇನ್ನೊಂದು “ಆಧುನಿಕತೆ”ಯ ಕವಿ ಕ್ಯಾಟಲಸ್ ಎನ್ನುವ ರೋಮನ್ ಕವಿಯದ್ದು (ಗೇಯಸ್ ವೆಲೇರಿಯಸ್‌ಕ್ಯಾಲಸ್‌ಕ್ರಿಸ್ತಪೂರ್ವ ಸುಮಾರು ೮೪-೫೪)

ದ್ವೇಷಿಸುವೆನು ನಾ ಮೇಣ್ ಪ್ರೀತಿಸುವೆನು ನಾ
ಕೇಳುವೆ
ನೀ: “ಎಂತು ಎರಡು ಸಾಧ್ಯ?”
ಅದೆಂತೊ
ಅರಿಯೆ ನಾಅರಿವೆನೊಂದನೇ
ಅದು
ಹಿಂಸಿಸುವುದು ನನ್ನ

ಒಂದು ವಿಷಯವಂತೂ ಸ್ಪಷ್ಟವಾಯಿತು. ಆಧುನಿಕತೆಯ ಕವಿ ಆಧುನಿಕ ಕಾಲದವನೇ ಆಗಬೇಕಾಗಿಲ್ಲ. ಕ್ರಿಸ್ತಪೂರ್ವ ಒಂದನೆಯ ಶತಮಾನದ ಕವಿಯೂ ಆಧುನಿಕತೆಯ ಅಂಶಗಳನ್ನು ವ್ಯಕ್ತಪಡಿಸುವ ಪಂಕ್ತಿಗಳನ್ನು ರಚಿಸಿರಬಹುದು.

ಆಧುನಿಕತೆಯ ಲೇಖಕ ಪ್ರತಿಯೊಂದರ ಆಳಾತಿ ಆಳವನ್ನೂ ಪ್ರವೇಶಿಸಬೇಕು. ಒಂದು ನಗರಚಿವಾಗಲಿ, ತನ್ನದೇ ಚೇತನವಾಗಲಿ ಅದರ ಆಳಾತಿ ಆಳವನ್ನು ಅವನು ಶೋಧಿಸಬೇಕು. ಪ್ರತಿಯೊಂದರ ಹೊರ ಮತ್ತು ಒಳವಲಯಗಳ ಅಂಚನ್ನು ಮುಟ್ಟಬೇಕು.-

(೭) ಆದಿಕಾಲದ ಸಂಸ್ಕೃತಿಯೇ ಇಂದಿನದಕ್ಕಿಂತ ಶ್ರೇಷ್ಠ ಎಂಬ ಭಾವನೆ ಲೇಖಕರ ಪ್ರಧಾನ ಗುರಿಯಾಯಿತು.

ಆಧುನಿಕ ಜೀವನ ವಿಧಾನದಲ್ಲಿ ನೈಜತೆ ಸರಳತೆಗಳು ಮಾಯವೇ ಆಗಿಹೋಗುವಷ್ಟರ ಮಟ್ಟಿಗೆ ಕಡಿಮೆಯಾಗಿ ಹೋಗಿವೆ. ಇದರ ಅರ್ಥ ಆದ್ಯ ಸಂಸ್ಕೃತಿ ಶ್ರೇಷ್ಠ ಎಂಬ ಭಾವನೆ ಬಲವಾಗಿ ಬೇರೂರಿಯೇ ತೀರುತ್ತದೆ ಎಂದೇ. ಬದುಕಿನಲ್ಲಿ ಅತಿರೇಕ ಸ್ಥಿತಿಗಳನ್ನು ಮುಟ್ಟಿ ತನ್ಮೂಲಕ ಬದುಕಿನ ಅರ್ಥವನ್ನು ಹುಡುಕುವ ಸ್ಥಿತಿ ಬಂದಿದೆ ಎಂದರೆ ಮಾನವನು ಆದಿಕಾಲದ ಸ್ಥಿತಿಗಾಗಿ ಹಾತೊರೆಯುತ್ತಾನೆ ಎಂಬುದು ಸಿದ್ಧವಾಗುತ್ತದೆ. ಏಕೆ ಕನಿಷ್ಠಪಕ್ಷ ಮಾನವನು ಸೃಷ್ಟಿಯಾದಾಗಿನ ಕಾಲದಲ್ಲಾದರೂ ಅವನಿಗೆ ಇಷ್ಟು ಬೇಸರ (ಬೋರ್) ಆಗಿರಲಾರದು. ಇಂದಿನ ಬರಹಗಾರರಿಗೆ-ಆಧುನಿಕರಿಗೆ ಸಂಸ್ಕೃತಿ, ಸೂಕ್ಷ್ಮತೆ. ನವಿರು ಜೀವನ ಇವುಗಳ ಬಗ್ಗೆ ಜುಗುಪ್ಸೆ ಉಂಟಾಗಿದೆ. ಇಷ್ಟೆಲ್ಲ ಆದಮೇಲೆ, ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳನ್ನೂ ಪಡೆದಾದ ಮೇಲೆ, ಏನು? ಎಂಬ ಪ್ರಶ್ನೆ ಈ ಬರಹಗಾರರ ಮುಂದೆ ನಿಂತಿದೆ. ಮತ್ತೆ ಆದ್ಯ ಸಂಸ್ಕೃತಿಗೇ ಹಿಂದಿರುಗಿದರೇನು? ಆ ಪೌರುಷ, ಆರೋಗ್ಯ, ವೀರ್ಯಹೀನಗೊಳಿಸುವ ಅತಿ ತಾರ್ಕಿಕತೆಯಿಂದ ಪಾರಾಗುವಿಕೆ-ಇವುಗಳನ್ನು ಮತ್ತೆ ಪಡೆದರೇನು? ಅದು ಆದರೇ ಚೆನ್ನು-ಅದೇ ಸ್ವಾಗತಾರ್ಹ.

ಡಿ.ಎಚ್. ಲಾರೆನ್ಸ್‌ನ ಒಂದು ಕಥೆ- “ಕುದುರೆ ಹತ್ತಿ ಹೊರಟು ಹೋದ ಹೆಂಗಸು” (the woman who Rode Away) ಪಾಶ್ಚಾತ್ಯ ಮಹಿಳೆಯೊಬ್ಬಳು (ರೆಡ್) ಇಂಡಿಯನ್ ಬುಡಕಟ್ಟಿನ ಒಂದು ಗುಂಪಿಗೆ ತನ್ನ “ಕಂಪಿಸುವ ನರಗಳು ಪ್ರಜ್ಞೆಯನ್ನು” (quivering nervous consciousness) ಸಮರ್ಪಿಸಿಕೊಳ್ಳಲು ಬಯಸುತ್ತಾಳೆ. ಅಲ್ಲಿ ಸೂರ್ಯೋಪಾಸನೆಯ ವಿಧಿಯನ್ನು ಅನುಸರಿಸಿ ‘ಯಜ್ಞವನ್ನು ನೆರವೇರಿಸಿ, ಬಲವನ್ನು ಪಡೆಯುವ ಬಯಕೆ ಅವಳದು. ಇದು ಅಂಥ ಆದ್ಯ ಸಂಸ್ಕೃತಿ ಬಯಕೆಗೆ ಉಚಿತವಾದ ನಿದರ್ಶನ.

ಗ್ರೀಕ್ ಕವಿ ಕ್ಯಾವಫಿ ಎನ್ನುವವನು ಪ್ರತಿಭೆಯಿಂದ ಉಜ್ಜಲವಾಗಿರುವ ಕವನವೊಂದನ್ನು ರಚಿಸಿದ್ದಾನೆ. ಒಂದು ಆಧುನಿಕ ಪಟ್ಟಣದ ನಿವಾಸಿಗಳು ಬರ್ಬರರು ಬರದೆ ಹೋಗೇಬಿಟ್ಟರೆ ಎಂಬ ತೀವ್ರ ನಿರಾಶೆ ತಲೆದೋರುತ್ತದೆ. ತಾವು ಹಿಂದಿನಂತೆಯೇ ಬದುಕುತ್ತಾ ಹೋಗಬೇಕಾಗುತ್ತದೆ. ಇದನ್ನು ಯಾರು ಸಹಿಸಿಯಾರು?

ಇದ್ದಕ್ಕಿದ್ದಂತೆ ತೋರುವೀ ಮುಜುಗರದ ಅರ್ಥವೇನು?
ಏನಿದೀ
ಗೊಂದಲ? (ಎಂಥ ಗಂಭೀರತೆಯು, ಮುಖದಲ್ಲಿ)
ಏತಕೀ
ರಸ್ತೆಗಳು ಖಾಲಿಯಾಗುತ್ತವೆ ತೀವ್ರಗತಿಯಲ್ಲಿ
ಮುಳುಗಿ
ಚಿಂತನೆಯಲೇಕೆ ಎಲ್ಲರೂ ನಡೆದಿಹರು ಮನೆಯ ಕಡೆಗೆ?
ಏಕೆಂದಿರ
ರಾತ್ರಿಯಾಯಿತು ಈಗ, ಬರಲಿಲ್ಲ ಬರ್ಬರರು.
ಗಡಿಯಿಂದ
ಬಂದಿಹರು ಕೆಲವರು, ಹೇಳುವರು ಅವರು,
ಬರ್ಬರರೆ
, ಇಲ್ಲ ಈಗವರು
ಬರ್ಬರರೆ
ಇಲ್ಲ ಈಗವರು
ಬರ್ಬರರೆ
ಇಲ್ಲದಿರೆ ನಮ್ಮ ಗತಿಯೇನು
ಅವರೆ
ಒಂದು ರೀತಿಯ (ಸಮಸ್ಯೆಗಳು) ಪರಿಹಾರವಾಗಿದ್ದರಲ್ಲ.

ಇದು ಇಂದಿನ ಜನತೆಯ ಪರಿಸ್ಥಿತಿ. ಈ ಯಂತ್ರನಾಗರಿಕತೆಯ ಹಿಂಸೆ ಸಾಕು. ಈ ಕೃತಕ ಜೀವನದ ಗೊಂದಲ. ಹಿಂಸೆ ಸಾಕು. ಬರ್ಬರರೇ ಆದರೂ ಅವರ ಬದುಕಿನ ರೀತಿ ಬೇಕು. ಆಧುನಿಕನು ಈ ಮನೋಭಾವವನ್ನು ತನ್ನ ಕೃತಿಗಳಲ್ಲಿ ನಿರೂಪಿಸುತ್ತಾನೆ.

(೮) ಕಾದಂಬರಿಯಲ್ಲಿ ಪಾತ್ರ, ರಚನೆ, ನಾಯಕ ಅಥವಾ ಯಾವುದೇ ದೃಷ್ಟಿಯ ಪ್ರತಿಪಾದಕನ ಪಾತ್ರ ಇವುಗಳ ಬಗ್ಗೆ ಸಂಪೂರ್ಣವಾಗಿ ಹೊಸ ಪ್ರಜ್ಞೆ.

ಆಧುನಿಕತೆಯ ಕಾದಂಬರಿಯ ವಸ್ತು ಬದಲಾಗಿದೆ. ಒಮ್ಮೆ ಮಾನವ ಸ್ವಭಾವ ಕಾದಂಬರಿಯ ವಸ್ತುವಾಗಿದ್ದರೆ ಈ ಅನುಭವನದ ಸ್ವರೂಪ, ಅದು ಸಮಸ್ಯಾತ್ಮಕವಾದದ್ದು ಎಂಬುದು ಇಂದು ಇಂದು ಕಾದಂಬರಿಯ ವಸ್ತುವಾಗುತ್ತಿದೆ. ಪಾತ್ರಗಳ ಕಲ್ಪನೆಯೂ ಬದಲಾಗಿದೆ. ನಿಶ್ಚಿತ ಸ್ವಭಾವದ ಪಾತ್ರಗಳು ಮರೆಯಾಗುತ್ತಿವೆ. ಅವುಗಳ ಮನಃಸ್ಥಿತಿಯನ್ನು ಅನುಸರಿಸಿ ಪಾತ್ರಗಳನ್ನು ಸೃಷ್ಟಿಸಲಾಗುತ್ತಿದೆ. ಡಿ.ಎಚ್. ಲಾರೆನ್ಸ್ ಹೇಳಿದ: “ನನಗೆ ಪಾತ್ರಗಳ ಹಳೆಯ ಸ್ಥಿರ ಅಹಂ ಅನ್ನು, ಅವುಗಳ ಸ್ವಭಾವದಿಂದ ಉದ್ಭವವಾಗುವ ‘ಅಹಂ’ ಅನ್ನು ಸೃಷ್ಟಿಸುವ ಇಚ್ಛೆ ಇಲ್ಲ. ಈಗ ನಾನು ಸೃಷ್ಟಿಸ ಬಯಸುವುದು ಮತ್ತೊಂದು ‘ಅಹಂ’. ಯಾವುದರ ಕ್ರಿಯೆಯಿಂದ ವ್ಯಕ್ತಿಯೊಬ್ಬ ಅರಿವಿಗೆ ನಿಲುಕದವನಾಗುತ್ತಾನೋ ಅಂಥ ಅಹಂ.”

ನಾಯಕ ಎನ್ನುವವನ ವಿಷಯದಲ್ಲೂ ಅಷ್ಟೆ ಆಧುನಿಕತೆಯ ಕಾದಂಬರಿಯ ದೃಷ್ಟಿ ಬದಲಾಗಿದೆ. “ಸಮಸ್ಟಿ ವಿಧಿ”ಯ (collective destiny) ವಿಷಯದಲ್ಲಿ ಆಧುನಿಕ ಜಗತ್ತಿಗೆ ನಂಬಿಕೆ ಹೋಗಿದೆ. ಮಾನವನ ಬದುಕನ್ನೇ ಬದಲಿಸಬಲ್ಲ ಶಕ್ತಿ ತನಗೆ ಅಥವಾ ಯಾರಿಗೇ ಆಗಲಿ ಇದೆ ಎಂಬ ಭಾವನೆ ಕಾದಂಬರಿಯ ನಾಯಕನಿಗೆ ಇಲ್ಲ.

(೯) ಕೊನೆಯದಾಗಿ: ಆಧುನಿಕತೆಯ ಸಾಹಿತ್ಯದ ಕೇಂದ್ರ ವಸ್ತು. ಅಂತರಂಗದ ಅತಿಮಾನುಷ ಶಕ್ತಿ (inner demon) ಸರ್ವಶೂನ್ಯವಾದ (nihilism).

ಸರ್ವಶೂನ್ಯವಾದದ ಕೆಲವು ಮುಖ್ಯ ಲಕ್ಷಣಗಳನ್ನು ಸಂಕ್ಷೇಪವಾಗಿ ಹೀಗೆ ನಿರೂಪಿಸಬಹುದು.

(೧) ರಷ್ಯಾ ದೇಶದಲ್ಲಿ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಪರಂಪರೆಯಿಂದ ಬಂದ ಎಲ್ಲ ಬಗೆಯ ಅಧಿಕಾರದ ವಿರುದ್ಧವಾಗಿಯೂ ಬಂಡಾಯ ಹೂಡುವ ಮನೋವೃತ್ತಿ ಕಾಣಿಸಿಕೊಂಡಿತು. ಈ ಮನೋವೃತ್ತಿಯೇ ಶೂನ್ಯವಾದದ ರೂಪವನ್ನು ತಳೆಯಿತು. ಹೊರಗೆ ನಿಷೇಧಾತ್ಮಕವಾಗಿ ತೋರಿದರೂ ಅದರ ಗುರಿ ಮಾತ್ರ ಕ್ರಿಯಾತ್ಮಕವಾದದ್ದು.

(೨) ನೈತಿಕ ಜೀವನಕ್ಕೆ ಮಾರ್ಗದರ್ಶಕಗಳಾಗಬಲ್ಲ ಯಾವುದೇ ಪಾರಮಾರ್ಥಿಕ ವಿಧಿ ನಿಷೇಧಗಳಾಗಲಿ, ಲೌಕಿಕ ಮೌಲ್ಯಗಳಾಗಲಿ ಇವೆಯೆಂದು ನಂಬಲಾಗದು. ಮಾನವ ಜೀವನದಲ್ಲಿ ಅರ್ಥವತ್ತಾಗಿ ಉಳಿಯುವಂಥದು ಯಾವುದೂ ಇಲ್ಲ.

(೩) ಕ್ರಿಯಾಶೀಲವೂ ಪ್ರಯತ್ನಶೀಲವೂ ಆದ ಬದುಕಿಗೆ ಕಾರಣಭೂತವಾದ ಅಂತಃಪ್ರೇರಣೆಗಳು ಯಾವುವೂ ಇಲ್ಲ.

(೪) ಡಾಸ್ಟೋವ್‌ಸ್ಕಿಯ ಕಾದಂಬರಿಗಳಲ್ಲಿ: ಇಂದ್ರಿಯಗಳ ಹೊರತು ನಂಬತಕ್ಕದ್ದು ಯಾವುದೂ ಇಲ್ಲ. ಇಂದ್ರಿಯಗಳೂ ಕೂಡ ತಮ್ಮ ಸತ್ವವನ್ನು ತಾವೇ ಕಳೆದುಕೊಳ್ಳುತ್ತವೆ. ಭಗವಂತ ಎಂದು ಒಬ್ಬನಿರುವುದು ಅಸಾಧ್ಯ. ಆದರೆ ಭಗವಂತನಿಲ್ಲದೆ ಯಾವುದೊಂದು ಇರುವುದೂ ಅಸಾಧ್ಯ. (God is impossible but all is impossible without Him).

(೫) ಫ್ಲಾಬರ್ಟ್‌: ಬದುಕು ಘೋರವಾದದ್ದು. ಅದನ್ನು ಸಹಿಸಿಕೊಳ್ಳಲು ಇರುವ ಒಂದೇ ದಾರಿಯೆಂದರೆ ಅದನ್ನು ಮರೆತು ಅದರಿಂದ ದೂರವಾಗಿರುವುದು. ಕಲಾ ಪ್ರಪಂಚದಲ್ಲಿ ಜೀವಿಸುವುದರಿಂದ ಮಾತ್ರವೇ ಹೀಗೆ ಮಾಡುವುದು ಸಾಧ್ಯ.

(೬) ನೀಷೆ: ಎಲ್ಲ ಬಗೆಯ ಮೌಲ್ಯಗಳೂ ತಮ್ಮ ಮೌಲ್ಯಗಳನ್ನು ತಾವೇ ಕಳೆದುಕೊಳ್ಳುತ್ತವೆ. ಹೀಗಾಗುವುದರಿಂದ ಉಂಟಾಗುವ ಶೂನ್ಯ ಭಾವನೆಯೂ ಶೂನ್ಯವಾದದ ತಿರುಳು.

ಮಾನವನಿಗೂ ಜೀವನದ ಮೂಲಗಳಿಗೂ ಸಂಬಂಧವೇ ಕಡಿದು ಹೋಗಿದೆ. ಹೀಗಿರುವುದರಿಂದ ಜೀವನದಲ್ಲಿ ಹೇಗೋ ಹಾಗೇ ಸಾಹಿತ್ಯದಲ್ಲೂ ಮಾನವನು ಒಂದು ಬೇಸರದ (boredom) ಕೂಪಕ್ಕೆ ಬಿದ್ದು ತೊಳಲಾಡುತ್ತಿದ್ದಾನೆ.

ಕೆಲವು ವಿಮರ್ಶಕರು, ಅದರಲ್ಲೂ ಮುಖ್ಯವಾಗಿ ಇರ್ವಿಂಗ್ ಹೋವ್. ಪಶ್ಚಿಮದಲ್ಲಿ ಈ ರೀತಿಯ ಬರವಣಿಗೆ ಅವಸಾನದ ಸ್ಥಿತಿಯನ್ನು ಮುಟ್ಟಿದೆ ಎನ್ನುತ್ತಾರೆ. ಒಂದು ಕಾಲಕ್ಕೆ ಕೆಲವರು ‘ರೊಮಾಂಟಿಕ್ ಕಾವ್ಯದ ಸತ್ವ ತೀರಿತುಪ ಎಂದು ಹೇಳಿದಂತೆ, ಅದಕ್ಕಿಂತ ಕಡಿಮೆ ಅವಧಿಯ ಈ ಆಧುನಿಕತೆಯ ಸತ್ವ ತೀರಿತು ಎಂದು ಮತ್ತೆ ಕೆಲವರು ಭಾವಿಸುವುದು ಸಾಧ್ಯ. ಮಾರ್ಗರೆಡ್ ಜೆ.ಒ. ಡಾನೆಲ್ (Margaret J.O. Donnel) ಸಮಕಾಲೀನ ಕಾವ್ಯ ಸಂಕಲನ (An Anthology of Contemporary Verse) ಎಂಬುದರ ಮುನ್ನುಡಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಇದು:

“ಇಪ್ಪತ್ತನೆಯ ಶತಮಾನದ ಕಾವ್ಯ ಮಧ್ಯವಯಸ್ಸನ್ನು ಮುಟ್ಟಿದೆ. ಹಾಗೆಂದು, ಈವತ್ತಿಗೆ ಪದ್ಯ ಬರೆಯುತ್ತಿರುವವರಲ್ಲಿ ಗಣ್ಯರಾದ ಅನೇಕ ಕವಿಗಳೇ ಒಪ್ಪಿಕೊಂಡಿದ್ದಾರೆ. ಕ್ರಾಂತಿಕಾರಕ ಚಳುವಳಿಗಳು ಕ್ರಮವಾಗಿ ಸತ್ತುಹೋಗಿವೆ. ಒಂದು ರೀತಿಯ ಮೌನ ತಲೆದೋರಿದೆ. ಈ ಮೌನವು ಯಾವುದರ ಲಕ್ಷಣ ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಪ್ರಯೋಗಗಳ ಪರಿಶ್ರಮದಿಂದ ಹೊರಹೊಮ್ಮಿದ ಕಾವ್ಯ ಒಂದು ಹೊಸ ಚೇತನ ಪಡೆದು ಬೆಳವಣಿಗೆಯ ಇನ್ನೊಂದು ಘಟ್ಟಕ್ಕೆ ಪ್ರವೇಶಿಸಲು ಸಿದ್ಧವಾಗಿದೆ ಎಂಬುದರ ಲಕ್ಷಣ ಇದು ಎಂದು ಕೆಲವರು ಹೇಳುತ್ತಾರೆ. ಆದರೆ ಮತ್ತೆ ಕೆಲವರು ಇದು ಹೊಸತನವೇನನ್ನೂ ಸಾಧಿಸಲಾರದೆ ಮತ್ತೆ ಸಂಪ್ರದಾಯದ ಜಾಡಿಗೆ ಬಿದ್ದಿರುವುದರ ಲಕ್ಷಣ ಎನ್ನುತ್ತಾರೆ. ಆದರೂ ಕಾವ್ಯದ ರೂಪ, ಭಾಷೆ ಮತ್ತು ವಸ್ತುಗಳಲ್ಲಿ ಸರಳತೆ ಕಾಣಿಸಿಕೊಂಡಿರುವುದರಿಂದ ಕವಿಯ ಕಾಣ್ಕೆ (vision) ಯಲ್ಲಿ ಸ್ಪಷ್ಟತೆ ಮತ್ತು ಅಜಟಿಲತೆಗಳು ಮತ್ತೆ ಮೈದೋರಲಿವೆ ಎಂದು ಆಶಿಸಬಹುದಾಗಿದೆ. ಇಂದಿನ ಬದುಕಿನಲ್ಲಿರುವ ಭಯಂಕರವಾದ ಜಟಿಲತೆಗಳು ಹಾಗೂ ಅನಿಶ್ಚಯತೆಗಳ ನಡುವೆ, ಇಂದಿನ ಅನೇಕ ಕವಿಗಳ ಕೃಷಿಗಳಲ್ಲಿ ಎದ್ದು ಕಾಣುವ ಒಂದು ಸರಳವಾದ ಸತ್ಯ ಎಂದರೆ ಇದು: ಮಾನವನ ಉದ್ಧಾರಕ್ಕೆ ಇರುವ ಒಂದೇ ದಾರಿ ಆಧ್ಯಾತ್ಮಿಕತೆ ಮತ್ತೆ ಅವರ ಬದುಕಿನಲ್ಲಿ ನೆಲೆಗೊಳ್ಳುವುದು.”

ನಿಜವಾಗಿ ಆಧುನಿಕ ಕಾವ್ಯ-ಸಾಹಿತ್ಯಗಳನ್ನು ವ್ಯಾಪಕವಾಗಿ ಆವರಿಸಿಕೊಂಡಿರಬೇಕಾದ ಒಂದು ಸತ್ವ ಎಂದರೆ ವಿಜ್ಞಾನ ಮತ್ತು ವೈಜ್ಞಾನಿಕ ದೃಷ್ಟಿ ಸುಮಾರು ನಾನೂರು ವರ್ಷಗಳ ಅವಧಿಯಲ್ಲಿ ವಿಜ್ಞಾನವು ಜನ ಜೀವನದ ಮೇಲೆ ಕ್ರಾಂತಿಕಾರಕವಾದ ರೀತಿಯಲ್ಲಿ ಪರಿಣಾಮವನ್ನು ಬೀರಿದೆಯಷ್ಟೆ ಅದರಲ್ಲೂ ಐದು ಸಾವಿರ ವರ್ಷಗಳಷ್ಟು ದೀರ್ಘಕಾಲ ಮಾನವನ ಜೀವನದಲ್ಲಾದ ಬದಲಾವಣೆಯ ನೂರರಷ್ಟು ಸಾವಿರದಷ್ಟು ಬದಲಾವಣೆ ಈ ಎಪ್ಪತ್ತು ವರ್ಷಗಳಲ್ಲಿ ಆಗಿದೆ ಎನ್ನುವುದು ಎಲ್ಲ ವಿಚಾರವಂತರೂ ಒಪ್ಪುವ ಸತ್ಯ ತಾನೆ? ಇಂಥದೊಂದು ಕ್ರಾಂತಿಯಾದರೂ ವಿಜ್ಞಾನ ಎಷ್ಟರಮಟ್ಟಿಗೆ ಈ ಆಧುನಿಕತೆಯ ಸಾಹಿತ್ಯದ ಭಾಗವಾಗಿದೆ. “ಆಧುನಿಕ ಕಾವ್ಯದ ಹಿನ್ನೆಲೆ” (The Background of Modern Poetry) ಎನ್ನುವ ಗ್ರಂಥದ “ಕಾವ್ಯ ಮತ್ತು ವಿಜ್ಞಾನ” (Poetry and Science) ಎನ್ನುವ ಪ್ರಬಂಧದಲ್ಲಿ ಜೆ. ಐಸಾಕ್ಸ್ (J. Isaacs) ಈ ಬಗ್ಗೆ ವಿಚಾರ ನಡೆಸಿ ಕೆಳಗಿನಂತೆ ಅಭಿಪ್ರಾಯಪಟ್ಟಿದ್ದಾನೆ:

“ಆಧುನಿಕ ಕಾವ್ಯದ ಒಂದು ಲಕ್ಷಣ ವಿಜ್ಞಾನ ಪ್ರಜ್ಞೆ ಎನ್ನುತ್ತಾರೆ. ಇದು ನಿಜವೆ? ವಿಜ್ಞಾನವು ಜನಜೀವನದೊಡನೆ ನಿಕಟವಾಗಿ ಬೆರೆತಿದೆಯಷ್ಟೆ? ಇದು ಕವಿಗಳ ಸಂವೇದನೆ ಮತ್ತು ಅಭಿವ್ಯಕ್ತಿಗಳ ಮೇಲೆ ಪ್ರಭಾವ ಬೀರಿದೆಯೆ? ಇದನ್ನು ಉತ್ತರಿಸುವ ಮುನ್ನ ಇನ್ನೂ ಒಂದು ಪ್ರಶ್ನೆಗೆ ಉತ್ತರ ಹೇಳಬೇಕು. ಯಾವುದೇ ಕಾಲದಲ್ಲೇ ಆಗಲಿ ವಿಜ್ಞಾನವು ಜನರು ತಮ್ಮ ಸುತ್ತಣ ಜಗತ್ತಿನ ವಿಷಯದಲ್ಲಿ ತಾಳಿರುವ ಮೂಲಭೂತ ಭಾವನೆಗಳನ್ನು ಬದಲಾಯಿಸಿದೆಯೇ? ಇಲ್ಲದೆ ಇದ್ದರೆ ಹಾಗೆ ಬದಲಾಯಿಸುವಂತೆ ಮಾಡಲು ಪ್ರಯತ್ನಿಸುವುದು ಕವಿಗಳ, ಸಾಹಿತಿಗಳ ಕರ್ತವ್ಯ ಅಲ್ಲವೆ ಯಾವುದಾದರೂ ಒಂದು ಘಟನೆಯು ನಡೆಯುತ್ತಿರುವಾಗ ಕವಿಯು ಅದನ್ನು ಜನತೆಗೆ ಬೆರಳಿಟ್ಟು ತೋರಿಸಬೇಕೇ ಹೊರತು ಅದು ಮುಗಿದ ಮೇಲೆ ಶವಸಂಸ್ಕಾರ ಭಾಷಣ ನೀಡಿದರೆ ಬರುವ ಲಾಭವೇನು?”[5]

ಇಬ್ಬರು ವಿಜ್ಞಾನಿಗಳು ಡಾರ್ವಿನ್ ಮತ್ತು ಫ್ರಾಯ್ಡ್ ಇಡೀ ಮಾನವತೆಗೇ ಭಾರೀ ಷಾಕ್‌ಕೊಟ್ಟರು. ಕೊಪರ್ನಿಕಸ್‌, ಕೆಪ್ಲರ್‌, ಗೆಲಿಲಿಯೋ, ನ್ಯೂಟನ್ ಮುಂತಾದವರು ಏನನ್ನೂ ಕಂಡುಹಿಡಿದರೋ ಅವು ಮಾನವತೆಯನ್ನು ಬಡಿದೆಬ್ಬಿಸಿತು: ೧೯೧೦ರಲ್ಲಿ ಮೊದಲು ಜಾನ್‌ಡನ್ ಕವಿಯಲ್ಲಿ ವಿಜ್ಞಾನದ ಈ ಷಾಕ್ ಅಭಿವ್ಯಕ್ತಿ ಪಡೆಯಿತು. “ಸೂರ್ಯ ಕಳೆದೇ ಹೋದ, ಪೃಥ್ವಿ ಎಲ್ಲಿದೆಯೋ-ಯಾವನ ಜಾಣ್ಮೆಯೂ ಇವನ್ನು ತೋರಲಾರದು. ಏಕೆಂದರೆ ಹೊಸ ತತ್ವ ಚಿಂತನೆಯೂ ಎಲ್ಲವನ್ನೂ ಪ್ರಶ್ನಿಸತೊಡಗಿದೆ” ಎಂದು ಅವನು ಬರೆದ. ಸೇಟನ್ನನ ವರ್ಣನೆಯಲ್ಲಿ ಮಿಲ್ಟನ್ ಚಂದ್ರನನ್ನು ಕಲೆಗಳ ಗೋಳ (spotty globe) ಎಂದ.

“ಇನ್ನು ಆಧುನಿಕರ ವಿಷಯ ಕೇಳುತ್ತೀರೋ? ಅವರಿಗೆ ಸರಿ ಮಾಡಲು ಉಳಿದಿರುವುದಾದರೂ ಏನು? ಸಧ್ಯ, ನನ್ನ ವಿಷಯ “ಆಧುನಿಕ ಕಾವ್ಯದ ಹಿನ್ನೆಲೆ” ಅದು ಕೆಟ್ಟದಾಗಿ ನಾನು ಡಜನ್‌ಗಟ್ಟಲೆ ಕಾವ್ಯ ಸಂಕಲನಗಳನ್ನು ನೋಡಿದ್ದೇನೆ. ನೂರಾರು ಕವನಗಳನ್ನು ಮತ್ತೆ ಮತ್ತೆ ಓದಿದ್ದೇನೆ. ಹಾಗೆ ಓದುವಾಗ ನನಗಿದ್ದುದ್ದು ಆಧುನಿಕ ಕಾವ್ಯದ ತುಂಬ ವೈಜ್ಞಾಣಿಕ ಪ್ರತಿಮೆಗಳು ವ್ಯಾಪಕವಾಗಿ ಹರಡಿರುವುದನ್ನು ಕಾಣುವ ಆಸೆ. ಆಧುನಿಕ ವಿಜ್ಞಾನವು ಕವಿಗಳು ತಮ್ಮ ಸಂವೇದನೆ ಮತ್ತು ಅಭಿವ್ಯಕ್ತಿಯ ವಿಧಾನಗಳನ್ನು ಬದಲಿಸುವಂತೆ ಮಾಡಲು ಒತ್ತಾಯಿಸಿವೆ ಎಂಬುದನ್ನು ಕಾಣುವ ಆಸೆ. ಆದರೆ ಅಯ್ಯೋ, ಅದು ನಿಜವಲ್ಲವಲ್ಲ”.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] We changed out country more often then we changed our shoes.

[2] Marcel Raymond

[3] Marcel Raymond-from Baudelaire to Surrealism.

[4] Nature is transformed from an organic setting into a summoned or remembered idea.

[5] The poet should point out what is happening while it is happening, he is not there to deliver funeral orations.