ಸಾಹಿತ್ಯದಲ್ಲಿ ಆಧುನಿಕತೆಯನ್ನು ತರುವ ಪ್ರಯತ್ನ ಅಥವಾ. ಮತ್ತು ಸಾಹಿತ್ಯದಲ್ಲಿ ಆಧುನಿಕತೆಯು ಪ್ರವೇಶಿಸುವ ಪ್ರವೃತ್ತಿ ಎಲ್ಲ ದೇಶಗಳ ಸಾಹಿತ್ಯಗಳಲ್ಲಿಯೂ ಕಾಲಕಾಲಕ್ಕೆ ಕಾಣಿಸಿಕೊಳ್ಳುತ್ತಲೇ ಇವೆ. ಇದಕ್ಕೆ ಕಾರಣ ಸಮಾಜ. ಏಕೆಂದರೆ ಹೊಸದನ್ನು ಹುಡುಕುವುದು, ಹೊಸದಕ್ಕಾಗಿ ಹಾತೊರೆಯುವುದು, ಹೊಸ ಹೊಸ ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮಾನವನ ಚೇತನದ ಒಂದು ಲಕ್ಷಣ.

ಕಲೆ/ಸಾಹಿತ್ಯದಲ್ಲಿ ಆಗುತ್ತ ಬಂದ ಬದಲಾವಣೆಗಳಿಗೂ ಶತಮಾನಗಳಿಗೂ ಯಾವುದೋ ರೀತಿಯಲ್ಲಿ ಸಂಬಂಧವಿರುವಂತೆ ತೋರುತ್ತದೆ. ಇಂಗ್ಲೆಂಡಿನಲ್ಲಿ ಸಾಹಿತ್ಯದ ಪ್ರವಾಹವು ತನ್ನ ಗತಿಯನ್ನು ಬದಲಾಯಿಸಿದ ಸಂದರ್ಭದಲ್ಲೆಲ್ಲಾ ಒಂದೊಂದು ಶತಮಾನವು ಮುಗಿದದ್ದನ್ನು ಗುರುತಿಸಬಹುದು. ಹದಿನೆಂಟನೆಯ ಶತಮಾನವು ಮುಗಿಯುತ್ತಿದ್ದಂತೆ ನಿಯೋ-ಕ್ಲಾಸಿಂಸಂನ ಪ್ರಭಾವವೂ, ಹತ್ತೊಂಬತ್ತನೆಯ ಶತಮಾನವು ಮುಗಿಯುತ್ತಿದ್ದಂತೆ ರೋಮಾಂಟಿಸಿಸಂನ ಪ್ರಭಾವವೂ ಮುಗಿಯುತ್ತ ಬಂದವು ಎಂದು ಹೇಳಲಾಗಿದೆ. ಎಲ್ಲಕ್ಕಿಂತ ಕ್ರಾಂತಿಕಾರಕವಾದ ಹೊಸ ಪ್ರವೃತ್ತಿಗಳ ಪರಂಪರೆ ಇಪ್ಪತ್ತನೆಯ ಶತಮಾನದ ವೈಶಿಷ್ಟ್ಯ.

ಸಾಹಿತ್ಯದ ವಸ್ತು ಮತ್ತು ರೂಪಗಳಲ್ಲಿ ಬದಲಾವಣೆಗಳಾಗುವುದಕ್ಕೆ ಕಾರಣಗಳೇನು ಎಂಬುದನ್ನು ವಿಚಾರ ಮಾಡುವುದು ಅಗತ್ಯ. ಪಶ್ಚಿಮದಲ್ಲಿ ಸಾಹಿತಿಗಳೂ, ಸಮಾಜವಿಜ್ಞಾನಿಗಳೂ, ಸಮಾಜ ವಿಜ್ಞಾನವು ಆಳವಾಗಿ ಅಭ್ಯಾಸ ಮಾಡಿರುವ ಕಲಾವಿದರೂ ಈ ಘಟನಾವಳಿಗಳಿಗೆ ಕಾರಣಗಳೇನು ಎಂಬುದನ್ನು ಕುರಿತು ಅನೇಕ ದೃಷ್ಟಿಗಳಿಂದ ವಿವೇಚಿಸಿದ್ದಾರೆ. ಅವರಲ್ಲಿ ಮಾಲ್ಕೋಂ ಬ್ರಾಡ್‌ಬರಿ

[1] ಡಿಚರ್ಡ್‌ಹೊಗರ್ಟ್‌[2] ಇರ್ವಿಂಗ್ ಹೋವ್[3] ಮುಂತಾದವರ ವಾದಗಳನ್ನು ಆಧಾರವಾಗಿಟ್ಟುಕೊಂಡು ಆಧುನಿಕತೆಯನ್ನು ಕುರಿತು ವಿಶ್ಲೇಷಣೆ ನಡೆಸುವ ಪ್ರಯತ್ನ ಇಲ್ಲಿ ನಡೆದಿದೆ.

ಕೆಲವು ಮೂಲಭೂತವಾದ ಪ್ರಶ್ನೆಗಳುಂಟು: ಸಾಹಿತ್ಯದಲ್ಲಿ ಆಗುವ ಬದಲಾವಣೆಗಳಿಗೆ ಸಮಾಜದಲ್ಲಿ ಆಗುವ ಬದಲಾವಣೆಗಳು ಕಾರಣವೆ. ಅಥವಾ ಸಾಹಿತ್ಯವೇ ಸಮಾಜದಲ್ಲಿ ಬದಲಾವಣೆಗಳನ್ನು ಪ್ರೇರಿಸುತ್ತದೆಯೋ? ಅಥವಾ ಸಾಹಿತಿಗಳಲ್ಲಿ ಕಲಾವಿದರಲ್ಲಿ ತಮ್ಮ ಕಲಾ ಮಾಧ್ಯಮದ ಬಗ್ಗೆ ನಡೆಯುವ ಚರ್ಚೆ, ವಿಮರ್ಶಕರು ಇವಕ್ಕೆ ನೀಡುವ ಕಾಣಿಕೆ-ಇವೂ ಇಂಥ ಬದಲಾವಣೆಗೆ ಕಾರಣಗಳಾಗುತ್ತವೆಯೋ?

ವಿಚಾರ ಮಾಡಿ ನೋಡಿದರೆ ಈ ಮೂರಕ್ಕೂ ಹೌದು ಎನ್ನುವ ಉತ್ತರವೇ ದೊರೆಯುತ್ತದೆ.

ಸಮಾಜದಲ್ಲಿ ಆದ ಬದಲಾವಣೆ ಇಂಗ್ಲೆಂಡಿನಲ್ಲಿಯೂ ಸಾಹಿತ್ಯದಲ್ಲಿ ಪ್ರತಿಬಿಂಬಿಸಿತು. ಔದ್ಯೋಗೀಕರಣ (industrialization), ನಗರೀಕರಣ (urbanization), ಪ್ರಜಾಪ್ರಭುತ್ವೀಕರಣ (democratization) ಮತ್ತು ಸಮಷ್ಟೀಕರಣ (massification), ಸಂಬಳ ಕೊಟ್ಟು ಮ್ಯಾನೇಜರುಗಳನ್ನು ನೇಮಿಸಿಕೊಂಡು ಅವರ ಮೂಲಕ ಸಮಷ್ಟಿಯಾಗಿ ಜನಗಳೊಡನೆ, ಮುಖ್ಯವಾಗಿ ಕಾರ್ಮಿಕರೊಡನೆ ವ್ಯವಹರಿಸುವ ಕ್ರಮ ಇವುಗಳಿಂದ ಇಲ್ಲಿನ ಸಮಾಜ ವ್ಯವಸ್ಥೆಯೇ ಬದಲಾಯಿಸಿತಷ್ಟೆ ಈ ಬದಲಾವಣೆಯ ಪ್ರಭಾವ ಅಲ್ಲಿನ ಸಾಹಿತ್ಯ, ಕಲೆಗಳ ಮೇಲೆ ಸ್ಪಷ್ಟವಾಗಿ ಆಯಿತು. ಮೇಲೆ ಹೇಳಿನ ಔದ್ಯೋಗಿಕರಣ ಮುಂತಾದುವೆಲ್ಲ ಏಕಕಾಲದಲ್ಲಿ ನಡೆದವು ಎಂದು ಅರ್ಥವಲ್ಲ. ಅವು ಬೇರೆ ಬೇರೆ ಕಾಲದಲ್ಲೆ ನಡೆದರೂ ಒಂದೊಂದೂ ಸ್ವತಂತ್ರವಾದುದಲ್ಲ, ಒಂದನ್ನೊಂದನ್ನು ಅವಲಂಬಿಸಿಯೇ ಇರುವಂಥವು. ಇವೆಲ್ಲ ಒಟ್ಟು ಸೇರಿ ಆಧುನೀಕರಣಕ್ಕೆ (modernization) ಕಾರಣವಾಗುತ್ತವೆ. ಅಲ್ಲದೆ ಇವುಗಳ ಪರಿಣಾಮವಾಗಿ ಮಾನವನ ನಿರ್ವ್ಯಕ್ತಿಕರಣ (de-personalisation) ಮತ್ತು ಅ-ಮಾನವೀಕರಣ (de-humanisation) ಕೂಡ ಅನಿವಾರ್ಯವಾಗಿ ಸಂಭವಿಸುತ್ತವೆ.

ಅ-ವ್ಯಕ್ತೀಕರಣ ಹಾಗೂ ಅ-ಮಾನವೀಕರಣ ಎಂದರೇನು ಎಂಬುದನ್ನು ವಿವರಿಸುವ ಅಗತ್ಯವಿದೆ. ವ್ಯಕ್ತಿಗೆ ಲೋಕವು ಹೇಗೆ ಕಾಣುತ್ತದೆ, ಅವನ ಮೇಲೆ ಅದು ಹೇಗೆ ಪ್ರಭಾವ ಬೀರುತ್ತದೆ, ಅವನ ಸ್ವಂತ ಸುಖ-ದುಃಖಗಳೇನು ಎಂಬುದಕ್ಕೆ ಯಾವ ಪ್ರಾಮುಖ್ಯತೆಯೂ ಇಲ್ಲ ಎಂಬುದನ್ನು ಸೂಚಿಸುತ್ತದೆ ಅ-ವ್ಯಕ್ತೀಕರಣ ಎಂಬುದು. ಲೋಕ ಯಾರೊಬ್ಬರಿಗಾದರೂ ಹೇಗೆ ಕಾಣುತ್ತದೆ ಎನ್ನುವುದಕ್ಕಿಂತ ಹೇಗೆ “ಇದೆ” ಎನ್ನುವುದು ಮುಖ್ಯ. ಒಬ್ಬ ವ್ಯಕ್ತಿಯ ಮೇಲೆ, ಅವನು ಯಾರೇ ಆಗಲಿ, ಹೇಗೆ ಪ್ರಭಾವ ಬೀರುತ್ತದೆ ಎನ್ನುವುದಕ್ಕಿಂತ ಇಡೀ ಸಮಾಜದ ಮೇಲೆ ಅವು ಬೀರುವ ಪ್ರಭಾವ ಎಂಥದು ಎಂಬುದು ಮುಖ್ಯ. ಸುಖ-ದುಃಖ ಸಮಾನ, ಅವನ್ನು ಹಾಗೆ ಸ್ವೀಕರಿಸಿ ಎಂಬುದರಲ್ಲಿ ಅರ್ಥವಿಲ್ಲ ಎನ್ನುತ್ತದೆ ಈ ವಾದ. ಅದರ ದೃಷ್ಟಿಯಲ್ಲಿ ಬಸವಣ್ಣನವರ ಈ ಹೇಳಿಕೆಯೇ ಹೆಚ್ಚು ಸತ್ಯ: “ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.”

ಅ-ಮಾನವೀಕರಣವು ನಗರ-ನಾಗರಿಕತೆಯ, ಅದಕ್ಕಿತಂತಲೂ ಹೆಚ್ಚಾಗಿ ಯಂತ್ರ-ನಾಗರಿಕತೆಯ, ಇವುಗಳಿಂದ ಉಂಟಾದ ಜೀವನ ಜಟಿಲತೆಯ ವರಪ್ರಸಾದ. ಒಂದು ನಿದರ್ಶನವು ಇದನ್ನು ಸ್ಪಷ್ಟಪಡಿಸಬಹುದು.

ಕೆಲವು ದಿನಗಳ ಹಿಂದೆ ಬೆಂಗಳೂರು ಬಸ್‌ನಿಲ್ದಾಣದಲ್ಲಿ ದೀರ್ಘವಾದ ಕ್ಯೂ ಇತ್ತು. ಮೈಸೂರಿಗೆ ಬೇಗ ಹೋಗಿ ಸೇರುತ್ತೇನೆ ಎಂಬ ಆಸೆಯಿಂದ ಅಲ್ಲಿಗೆ ಬಂದಿದ್ದ ನಾನು ಈ ಕ್ಯೂನಲ್ಲಿ ಸೇರಿದೆ. ಸುಮಾರು ಒಂದೂವರೆ ಗಂಟೆ ಅದರಲ್ಲಿ ತೆವಳಿ ಮುಂದುವರಿಯುತ್ತಿದ್ದಾಗ ಅಲ್ಲಿಗೆ ಸ್ವಲ್ಪ ಹಿರಿಯರಾದ ವ್ಯಕ್ತಿಯೊಬ್ಬರು ಅವಸರವಸರವಾಗಿ ಧಾವಿಸಿ ಬಂದರು. ಹಾಗೆ ಬಂದು ನನ್ನ ಮುಂದೆ ಕ್ಯೂನಲ್ಲಿ ನಿಂತಿದ್ದವರ ಕೈಯಲ್ಲಿ ಹಣ ತುರುಕಲು ಪ್ರಯತ್ನಿಸುತ್ತಾ ತಮಗೂ ಒಂದು ಟಿಕೆಟ್ ಕೊಳ್ಳಬೇಕೆಂದು ಬೇಡಿದರು. ನನ್ನ ಮುಂದೆ ಇದ್ದವರು ನಿರಾಕರಿಸಿದರು. ಅದಕ್ಕೆ ಇವರು ಕೊಟ್ಟ ಕಾರಣ: “ನನ್ನ ಹಿಂದೆ ನಿಂತಿರುವವರೆಲ್ಲ ಒಂದೂವರೆ ಗಂಟೆಯಿಂದ ಕಾಯುತ್ತಿದ್ದಾರೆ. ನೀವು ಈಗಷ್ಟೆ ಬಂದಿದ್ದೀರಿ. ನಿಮಗೆ ನಾನು ಟಿಕೆಟ್ ಕೊಡಿಸಿದರೆ ಹಿಂದೆ ನಿಂತವರಿಗೆ ಅನ್ಯಾಯವಾಗುತ್ತದೆ.” ಬಂದವರು ಹೊರಟು ಹೋದ ಮೇಲೆ ನನ್ನ ಮುಂದೆ ನಿಂತವರು ಹಿಂದಿರುಗಿ ನನಗೆ ಹೇಳಿದರು: “ಸ್ವಾಮಿ, ನೋಡಿ. ಈ ರೀತಿಯ ವ್ಯವಸ್ಥೆಯಿಂದ (ಆಗ ತಾನೆ ಬಸ್ಸುಗಳ ರಾಷ್ಟ್ರೀಕರಣವಾಗಿತ್ತು) ನಮ್ಮ ಹೃದಯದಲ್ಲಿ ಅಲ್ಪಸ್ವಲ್ಪ ಕರುಣೆಯೂ ಬತ್ತಿಹೋಗಿದೆ.” ಇದು ಅ-ಮಾನವೀಕರಣದ ಅಸಂಖ್ಯಾತ ಮುಖಗಳಲ್ಲಿ ಒಂದು ಮಾತ್ರ.[4]

ಈ ಅ-ವ್ಯಕ್ತೀಕರಣ ಮತ್ತು ಅ-ಮಾನವೀಕರಣಗಳಿಂದ ಮಾನವ-ಮಾನವರ ನಡುವಣ ಸಂಬಂಧವು ಸಡಿಲಗೊಂಡು ಮಾನವ ಮತ್ತು ವಸ್ತುಗಳ ನಡುವಣ ಸಂಬಂಧವಾಗಿ ಬಿಡುತ್ತದೆ ಎಂದರೆ ಈಗ ಈ ಹೊಸ ಸಮಾಜ ವ್ಯವಸ್ಥೆಯಲ್ಲಿ ಸಂಬಂಧವಿರುವುದು ನಮಗೂ-ಶೈಲಿಗೂ, ನಮಗೂ-ಬಸ್ಸಿಗೂ, ನಮಗೂ-ಜೀವನೋಪಾಯಕ್ಕೂ ಇತ್ಯಾದಿ. ಹೊಸ ಜೀವನ ವಿಧಾನ, ನಗರಗಳಲ್ಲಿ ವಾಸಿಸಲೇಬೇಕಾದ ಬಂದಿರುವ ಪರಿಸ್ಥಿತಿ, ನಮ್ಮನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗ ಇವು ಇಂಥದೊಂದು ಸಂಬಂಧದ ಜನ್ಮಸ್ಥಾನಗಳು. ಹೀಗಾಗಿ ವೈಯಕ್ತಿಕ ಅನುಭವ ಬೇರೆ ರೀತಿಯದಾಗುತ್ತದೆ. ಹಿಂದಿನ ಕಾಲದಲ್ಲಿ ಮಧ್ಯ ಯುಗದಲ್ಲಿ ಕನ್ನಡ ದೇಶದ ಕೇಂದ್ರದಲ್ಲಿ ವಿಜಯನಗರವು ಧೂಳೀದೂಸರವಾಗುತ್ತಿದ್ದಾಗ, ಇದೇ ಕನ್ನಡ ನೆಲದ ಇನ್ನೊಂದು ಭಾಗದಲ್ಲಿ ಈ ಸಾಮ್ರಾಜ್ಯ ನಾಶದ ಅರಿವೂ ಇಲ್ಲದೆ ಕವಿಯೊಬ್ಬನು ಕುಳಿತು “ಪಂಚಾಕ್ಷರೀ ಮಹಿಮೆ” ಎನ್ನುವ ಗ್ರಂಥವನ್ನು ರಚಿಸಬಹುದಾದ ಸಾಧ್ಯತೆ ಇತ್ತು. ಆದರೆ ಈಗ ಕವಿ ಕನಗಿಷ್ಟವಿರಲಿ, ಇಲ್ಲದಿರಲಿ ಅದರ ಪರಿಣಾಮಕ್ಕೆ ಒಳಗಾಗುತ್ತಾನೆ. ಅವನ ಸ್ವಂತ ಪ್ರತಿಕ್ರಿಯೆ ಏನು ಎನ್ನುವುದು ಯಾರಿಗೂ ಮುಖ್ಯವಾಗಿಲ್ಲದಿರಬಹುದು. ಆದರೆ ಹೊಸ ಪರಿಸ್ಥಿತಿಯಲ್ಲಿ ತನ್ನ ಪರಿಸರದ ಪ್ರಭಾವದಲ್ಲಿ ಸಿಕ್ಕಿಹಾಕಿಕೊಳ್ಳದಿರುವುದು ಸಾಧ್ಯವಿಲ್ಲ. ಈಗ ನಮಗೆ ಹೊಸ ಹೊಸ ಸ್ಥಳಗಳಲ್ಲಿ ಹೊಸ ಹೊಸ ಜನರೊಡನೆ ಹೊಸ ಹೊಸ ರೀತಿಯ ಸಂಬಂಧಗಳು ಏರ್ಪಡುತ್ತವೆ. ಹೊಸ ಹೊಸ ಸಂಪರ್ಕ ಮಾಧ್ಯಮಗಳು ಸೇವೆಗೆ ಸಿದ್ಧವಾಗುತ್ತವೆ. ಹೊಸ ಹೊಸ ಆಕಾಂಕ್ಷೆಗಳು ಮನಸ್ಸನ್ನು ತುಂಬುತ್ತವೆ. ಸಾಮಾಜಿಕವಾಗಿ, ಮಾನಸಿಕವಾಗಿ ನಿರಂತರವಾದ ಒಂದು ಬದಲಾವಣೆ ನಡೆಯುತ್ತಿದೆ. ಸಾಮಾಜಿಕ ವ್ಯವಸ್ಥೆಗಳಲ್ಲಿ ಕೂಡ ಗಮನೀಯವಾದ ವ್ಯತ್ಯಾಸಗಳಾಗುತ್ತವೆ. “ಆಧುನೀಕರಣವನ್ನು ಪಡೆದ ಜಗತ್ತಿನಲ್ಲಿ ಇರುವುದು ಒಂದು ಪರಿಸರವಲ್ಲ. ಪರಿಸರಗಳ ಸಮೂಹ. ಅದು ಯಾವ ಒಬ್ಬ ವ್ಯಕ್ತಿಗೂ ಸೇರಿದ್ದಲ್ಲ. ಇಂಥವನೇ ನಾಯಕ, ಇಂಥವನೇ ಕೇಂದ್ರ ವ್ಯಕ್ತಿ ಎಂದು ಹೇಳುವಂತೆಯೂ ಇಲ್ಲ.” [5]

ಕಲೆಯ ಜಗತ್ತಿನಲ್ಲಿ ಹತ್ತೊಂಬತ್ತನೆಯ ಶತಮಾನದ ಕೊನೆಯ ಹಾಗೂ ಇಪ್ಪತ್ತನೆಯ ಶತಮಾನದ ಮೊದಲ ದಶಕಗಳನ್ನು “ಆಧುನಿಕತೆ”ಯ ಆರಂಭದ ಅವಧಿ ಎಂದು ಹೇಳುತ್ತಾರೆ. ಈ ಅವಧಿಯಲ್ಲಿ ಅಲ್ಲಿ “ಒಂದು ಹೊಸ ಯುಗ” ಎಂಬುದೇ ಕಲೆಗಳಿಗೆ ವಸ್ತು ಆಯಿತು. ಇದ್ದಕ್ಕಿದ್ದಂತೆ ಯಾವುದೇ ಒಂದು ನಿರ್ದಿಷ್ಟದಿನ ಹೊಸತರ ಬಿರುಗಾಳಿ ಬೀಸಿ ಬದಲಾವಣೆ ಬಂತು ಎಂದು ಭಾವಿಸುವವರಿದ್ದಾರೆ. ಉದಾಹರಣೆಗೆ ವರ್ಜೀನಿಯಾ ವುಲ್ಫ್ ಹೀಗೆ ಹೇಳುತ್ತಾಳೆ: “೧೯೧೦ರ ಡಿಸೆಂಬರಿನಲ್ಲಿ ಅಥವಾ ಅದರ ಸರಿಸುಮಾರಿನಲ್ಲಿ ಮಾನವ ಸ್ವಭಾವ ಬದಲಾಯಿತು” ಸ್ಯಾಮ್ಯುಅಲ್ ಬಟ್ಲರ್ನ ಕೃತಿಗಳಲ್ಲಿ, ಅದರಲ್ಲೂ ಮುಖ್ಯವಾಗಿ “The Way of All Flesh” ಎಂಬುದರಲ್ಲಿ ಈ ಆಧುನಿಕತೆಯ ಮೊದಲ ಗುರುತುಗಳು ದಾಖಲಾಗಿವೆ. ೧೯೦೩ರಲ್ಲಿ ರಚಿತವಾದ ಈ ಕಾದಂಬರಿಯಲ್ಲಿ ತಂದೆ-ತಾಯಿಗಳ ಆಳ್ವಿಕೆಯಿಂದ ದೂರ ಸರಿದು ಸ್ವತಂತ್ರರಾಗಿ, ತಮಗೆ ಸರಿತೋರಿದಂತೆ, ಸಂದರ್ಭಗಳು ಎಳೆದಂತೆ ನಡೆಯುವ ಮಕ್ಕಳ ಚಿತ್ರಣವಿದೆ. ಅದು ತುಂಬ ಕ್ರಾಂತಿಕಾರಕವಾದ ಕೃತಿ ಎಂದಲ್ಲ. ಆದರೆ ಅಂದಿಗೆ ಹೊಸತಾಗಿ ತೋರಿತು.

ಬರ್ನಾರ್ಡ್‌ ಷಾನ ನಾಟಕಗಳಲ್ಲಿ ಈ ಬದಲಾವಣೆಯ ದಾಖಲೆಗಳು ಹೆಚ್ಚು ಸ್ಪಷ್ಟವಾಗಿ ವ್ಯಕ್ತಗೊಂಡಿವೆ. ೧೯೦೫ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಅವನ Man and Superman ನಾಟಕದ ಪ್ರಧಾನ ಪಾತ್ರ ಜ್ಯಾಕ್‌ಟ್ಯಾನರ್ ಅರಾಜಕತೆಯನ್ನು ಬೋಧಿಸುವ ತತ್ವಜ್ಞಾನಿ. ಸ್ತ್ರೀ-ಪುರುಷರ ಪರಸ್ಪರ ಹೋರಾಟದಲ್ಲಿ ಅಂತಿಮವಾಗಿ ಸ್ತ್ರೀಯೇ-ಪ್ರತಿಸ್ಪರ್ಧಿಯು ಅತಿಮಾನವನೇ ಆಗಿರಲೊಲ್ಲನೇಕೆ-ಗೆಲ್ಲುವುದು ಎಂಬುದನ್ನು ಈ ನಾಟಕದಲ್ಲಿ ಷಾ ಪ್ರತಿಪಾದಿಸುತ್ತಾನೆ. ಅಲ್ಲದೆ ಮಾನವನಲ್ಲಿ ಪ್ರವೃತ್ತಿ ಮತ್ತು ಬುದ್ಧಿ-ಶಕ್ತಿಗಳ ನಡುವೆ ಘರ್ಷಣೆ ನಡೆದಾಗಲೆಲ್ಲ ಪ್ರವೃತ್ತಿಗೇ ಜಯ ಸಿದ್ಧ ಎಂಬುದನ್ನು ತೋರಿಸುತ್ತಾನೆ.

ಇಪ್ಪತ್ತನೆಯ ಶತಮಾನದ ಆದಿಯಿಂದಲೇ ಪಶ್ಚಿಮ ದೇಶಗಳಲ್ಲಿ ಸಾಮಾಜಿಕ ಸಂಬಂಧಗಳು ಬದಲಾಗತೊಡಗಿದವು. ಆಳು-ಒಡೆಯ, ಗಂಡ-ಹೆಂಡತಿ, ತಂದೆ-ತಾಯಿಗಳು-ಮಕ್ಕಳು ಇವರ ನಡುವಣ ಸಂಬಂಧಗಳು ತೀವ್ರಗತಿಯಿಂದ ಬದಲಾದುವು. ಹೀಗೆ ಮಾನವ ಸಂಬಂಧಗಳು ಬದಲಾಗತೊಡಗಿದೊಡನೆ ಮಾನವರು ಧರ್ಮ, ರಾಜಕೀಯ ಮುಂತಾದವುಗಳ ವಿಷಯದಲ್ಲಿ ತಾಳಿದ್ದ ಅಭಿಪ್ರಾಯಗಳೂ ಬದಲಾದುವು.

ಇಂಥದೊಂದು ಬದಲಾವಣೆ ೧೯೧೦ರಲ್ಲಿ ಇಂಗ್ಲೆಂಡಿನಲ್ಲಿ ನಡೆಯಿತು ಎಂದು ವರ್ಜೀನಿಯಾ ವುಲ್ಫ್ ಹೇಳಿದ್ದು ಕೇವಲ ಅಂದಾಜಿನಿಂದ ಅಲ್ಲ. ಕೆಲವು ಪ್ರಮುಖ ಘಟನೆಗಳು ಇದೇ ಇಸವಿಯಲ್ಲಿ ನಡೆದು ಈ ಇಸವಿ ಒಂದು ಪ್ರಾರಂಭಿಕ ಬಿಂದುವಾಗುವಂತೆ ಮಾಡಿದುವು. ಐದನೇ ಜಾರ್ಜ್‌ಪಟ್ಟಕ್ಕೆ ಬಂದದ್ದು ೧೯೧೦ ರಲ್ಲಿ. ಹೀಗಾಗಿ ಸಾಹಿತ್ಯದಲ್ಲಿ ಜಾರ್ಜಿಯನಿಸಂ ಎಂದು ನಿರ್ದೇಶಿಸುವ ಅವಧಿಯು ಆರಂಭವಾದದ್ದು ಈ ಇಸವಿಯಲ್ಲಿ. ಅಲ್ಲದೆ ಅದೇ ವರ್ಷ ಗ್ರಾಫ್ಟನ್‌ಗ್ಯಾಲರೀಸ್ ಎಂಬ ಪ್ರದರ್ಶನ ಶಾಲೆಯಲ್ಲಿ ಪೋಸ್ಟ್ ಇಂಪ್ರೆಷನಿಸಂ (Post Impressionism) ಕಲಾ ಪ್ರದರ್ಶನ ನಡೆಯಿತು. ಅದರ ಮೂಲಕವೇ ಇಂಗ್ಲೆಂಡಿಗೆ ಫ್ರಾನ್ಸಿನ ಅವಾನ್ ಗಾರ್ಡ್‌(Avante Guarde)[6] ಚಳುವಳಿಯ ಪರಿಚಯವಾದದ್ದು.

೧೯೦೦ನ್ನು ಕೂಡ ಈ ಆಧುನಿಕತೆಯ ಪ್ರವೇಶದ ವರ್ಷವನ್ನಾಗಿ ಗುರುತಿಸುವುದೂ ಉಂಟು. ಅದು ಇನ್ನೂ ಮಹತ್ವದ ವರ್ಷ. ಆಧುನಿಕ ಜಗತ್ತಿನ ಆಲೋಚನಾ ವಿಧಾನಗಳನ್ನೇ ಕ್ರಾಂತಿಕಾರಕವಾಗಿ ಬದಲಾಯಿಸಿದ ಕೆಲವು ಘಟನೆಗಳು ಅದೇ ವರ್ಷದಲ್ಲಿ ನಡೆಯಿತು. ಸಿಗ್ಮಂಡ್ ಫ್ರಾಯ್ಡ್‌ನ ಮಹತ್ವಪೂರ್ಣ ಕೃತಿ-ಸ್ವಪ್ನಗಳ ವ್ಯಾಖ್ಯಾನ (Interpretation of Dreams) ಪ್ರಕಟವಾದದ್ದು ಅದೇ ವರ್ಷದಲ್ಲಿ ಮ್ಯಾಕ್ಸೆ ಪ್ಲಾಂಕೆನ ಕ್ವಾಂಟಂ ಥಿಯರಿ (Quantum Theory) ಅದೇ ವರ್ಷ ಪ್ರಕಟವಾಯಿತು. ಜರ್ಮನಿಯ ವಿಜ್ಞಾನಿ ಪ್ಲಾಂಕ್ ಕಂಡುಹಿಡಿದ ಈ ಸಿದ್ಧಾಂತ ಪರಮಾಣು ಪ್ರಕ್ರಿಯೆಗಳನ್ನು ಅರಿಯಲು ಮುಖ್ಯವಾದ ಸಾಧನವಾಗಿ ಪರಿಣಮಿಸಿ ವಿಜ್ಞಾನದ ಜಗತ್ತಿನಲ್ಲಿ ಕ್ರಾಂತಿಗೆ ಕಾರಣವಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ, ಭೌತ ದ್ರವ್ಯ ಮತ್ತು ವಿಕಿರಣ ಕ್ರಿಯೆಗೆ ಸಂಬಂಧಿಸಿದಂತೆ ಪ್ರಚಲಿತವಾಗಿದ್ದ ಭಾವನೆಗಳೆಲ್ಲ ಈ ಸಿದ್ಧಾಂತದಿಂದ ಅಮೂಲಾಗ್ರವಾಗಿ ಬದಲಾದುವು. ಅಲ್ಲದೆ ಯುರೋಪಿನ ರಾಜಕೀಯ, ಮನಶ್ಯಾಸ್ತ್ರ, ಸಾಹಿತ್ಯ, ಕಲೆಗಳ ಮೇಳೆ ಮಾತ್ರವಲ್ಲದೆ ಇಡೀ ಜಗತ್ತಿನ ಆಲೋಚನೆಯ ವಿಧಾನದ ಮೇಲೆಯೂ ಪ್ರಭಾವ ಬೀರಿದ ಫ್ರಡ್ರಿಕ್ ನೀಷೆ (Fredrick Nietze) ಸತ್ತದ್ದೂ ಅದೇ ವರ್ಷವೇ. ಹಳೆಯ ರೂಪಾಂಶಗಳೆಲ್ಲ ಪುಡಿ ಪುಡಿಯಾಗುತ್ತವೆ ಎಂದು ಆತ ಭವಿಷ್ಯ ನುಡಿದಿದ್ದ. ಅಮೆರಿಕಾ ದೇಶವು ೧೯೦೦ನ್ನೇ ಒಂದು ಸಂಕ್ರಾಂತಿಯ ಸಮಯ ಎಂದು ಭಾವಿಸುತ್ತದೆ. ಪ್ರೊ. ಹೆನ್ರಿ ಆಡಮ್ಸ್‌ನ ಪುಸ್ತಕದಲ್ಲಿ (Education of Henry Adams) ಸಮಾಜದ ಬದಲಾವಣೆಯ ದಾಖನೆಗಳುಂಡು.[7] ಅದು ಮೊದಲ ಬಾರಿಗೆ ಪ್ರಕಟವಾದುದ್ದು ೧೯೦೭ರಲ್ಲಿ. ಆದರೂ ಈ ಶತಮಾನದ ಆದಿಯಲ್ಲಿ ಆಗುತ್ತಿದ್ದ ಮಹತ್‌ಪ್ರಮಾಣದ ಪರಿವರ್ತನೆಗಳನ್ನು ಈ ಕಾದಂಬರೀ ಕೃತ ಆತ್ಮಕಥೆ ನಿರೂಪಿಸುತ್ತದೆ.

ಹೆನ್ರಿ ಆಡಮ್ಸ್ ಷಿಕಾಗೋ ವಸ್ತು ಪ್ರದರ್ಶನದಲ್ಲಿ ಡೈನಮೋವನ್ನು ನೋಡಿ ವ್ಯಕ್ತಪಡಿಸಿದ ಪ್ರತಿಕ್ರಿಯೆ ಭವಿಷ್ಯ ಸೂಚಕವಾಗಿದೆ: ಇತಿಹಾಸ ಎನ್ನುವುದು ಕಾರ್ಯ ಕಾರಣಗಳ ಸರಣಿ ಮಾತ್ರವಲ್ಲ, ಅದು ಮಾನವರ ಮೇಲೆ ಶಕ್ತಿಗಳು ಬೀರುವ ಪ್ರಭಾವಗಳ ದಾಖಲೆ. ಹನ್ನೆರಡನೆಯ ಶತಮಾಣದಲ್ಲಿ ಕನ್ಯೆ ಮೇರಿ (The virgin) ಹೇಗೆ ಎಲ್ಲ ಶಕ್ತಿಗಳಿಗೂ ಸಂಕೇತವಾಗಿದ್ದಳೋ ಹಾಗೆಯೇ ಈ ಡೈನಮೋ ಕೂಡ ತನ್ನ ಕಾಲದ ಮೇಲೆ ಪ್ರಭಾವ ಬೀರುತ್ತಿರುವ ಶಕ್ತಿಯ ಸಂಕೇತ.[8]

ಹಾಗೆ ನೋಡಿದರೆ ಇವೆಲ್ಲಕ್ಕಿಂತ ಪ್ರಮುಖವಾದ ಘಟನೆ ಎಂದರೆ ಇಡೀ ಪಶ್ಚಿಮದ ಸಮಸ್ತ ಜೀವನ ವಿಧಾಣದ ದಿಕ್ಕು ದೆಸೆಗಳನ್ನೇ ಬದಲಿಸಿದ ಮೊದಲನೆಯ ಮಹಾಯುದ್ಧ. ಆಗ ಉದುರಿದ ಬಾಂಬುಗಳೂ ಸಿಡಿದ ಗುಂಡುಗಳೂ ನೆಲಸಮ ಮಾಡಿದ್ದು ಕೇವಲ ಕಟ್ಟಡಗಳನ್ನು ಸೇತುವೆಗಳನ್ನೂ ಮಾತ್ರವಲ್ಲ. ಅನೇಕ ದೇಶಗಳ ಅರ್ಥವ್ಯವಸ್ಥೆ, ನೈತಿಕ ನೆಲೆಗಟ್ಟು ಮಾನವ ಸಂಬಂಧಗಳು ಇವನ್ನೆಲ್ಲ. ಹತ್ತಿರ ಹತ್ತಿರ ಐದು ವರ್ಷಗಳ ಕಾಲ (೧೯೧೪-೧೯೧೮) ನಡೆದ ಈ ಯುದ್ಧದಲ್ಲಿ ಇಪ್ಪತ್ತುಮೂರು ದೇಶಗಳು ಭಾಗಿಯಾಗಿದ್ದುವು. ೬೫,೦೦೦,೦೦೦ ಜನ ಹೋರಾಟದಲ್ಲಿ ಭಾಗವಹಿಸುವ ಸೈನಿಕರಾದರು. ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ಸತ್ತರು. ಗಾಯಕೊಂಡರು. ಕೈದಿಗಳಾದರು, ನಾಪತ್ತೆಯಾದರು. ಅನಂತರ ಕ್ಷಾಮ, ರೋಗ, ಮನೆಮಠಗಳ ಹಾನಿಯಿಂದ ನೊಂದವರನ್ನು ಸತ್ತವರನ್ನು ಎಣಿಸಿದವರು ಯಾರು? ಆಸ್ತಿಪಾಸ್ತಿಗಳ ಹಾನಿಯ ಅಂದಾಜು. ೨೦೦,೦೦೦,೦೦೦,೦೦೦೦ ಪೌಂಡುಗಳು!

ತಮ್ಮ ಕಣ್ಣೆದುರಿಗೇ ಮನೆ-ಮಾರುಗಳಂತೆಯೇ ಮಾನವ ಹೃದಯಗಳೂ ಪುಡಿಪುಡಿಯಾಗುತ್ತಾ ಹೋಗುವುದನ್ನು ಕಣ್ಣಾರೆ ಕಾಣುತ್ತಾ ಅನಾಥರಾಗಿ ನಿಂತ ಜನಕ್ಕೆ ಇತಿಹಾಸ ಚಕ್ರ ತಿರುಗುತ್ತದೆ ಎನ್ನುವುದು ಆಲಂಕಾರಿಕ ಸತ್ಯವಾಗಿ ಉಳಿಯಲಿಲ್ಲ. ತಮ್ಮ ಎದೆಯ ಮೇಲೆ ಹರಿದು ಬಂದ ಟ್ಯಾಂಕುಗಳೆ ಮಾರಕ ನಕ್ರ ದಂಷ್ಟ್ರವಾಯಿತು. ಆ ಅನುಭವ ಸಮಾಜದ ಸಾವಿರ ಶಾಖೋಪಶಾಖೆಗಳಲ್ಲಿ ಪ್ರತಿಫಲಿತವಾದಂತೆಯೇ ಕಲೆಯಲ್ಲಿಯೂ ಪ್ರತಿಫಲಿತವಾಗುವುದು ಅತ್ಯಂತ ಅನಿವಾರ್ಯವಾಯಿತು.

ಇದಕ್ಕೆ ನಲವತ್ತು ನಲವತ್ತೈದು ವರ್ಷಗಳ ಪೂರ್ವದಿಂದಲೇ ಜನ ಹಳತರಿಂದ ಬೇಸತ್ತಿದ್ದರು. ಚರ್ಚು ಮತ್ತು ಅದು ಬೋಧಿಸುತ್ತಿದ್ದ ಮತ ಈ ಬೇಸರಕ್ಕೆ ನೀಡಿದ ಕಾಣಿಕೆ ಅಲ್ಪವಾದದ್ದೇನೂ ಅಲ್ಲ. ಜನರನ್ನು ನಿರಂತರ ದಮನಕ್ಕೆ ಗುರಿಮಾಡಿರುವ ಎರಡು ಶಕ್ತಿಗಳು-ಇತಿಹಾಸದುದ್ದಕ್ಕೂ-ರಾಜ ಮತ್ತು ಪುರೋಹಿತ. ಜನರ ದೌರ್ಬಲ್ಯ ಒಬ್ಬನಿಗೆ ಬಂಡವಾಳವಾದರೆ ಅವರ ಅಜ್ಞಾನ ಮತ್ತೊಬ್ಬನ ಆಸ್ತಿ. ಈ ಇಬ್ಬರ ಕ್ರೌರ್ಯದ ಅರಿವಾಗುತ್ತಾ ಬಂದಂತೆ ಜನರ ಹೃದಯದ ಅಶಾಂತಿ ಹೆಚ್ಚಿ ಕ್ರಾಂತಿ ಹೊಗೆಯಾಡತೊಡಗಿದ್ದರಿಂದ ಆಶ್ಚರ್ಯವೇನೂ ಇಲ್ಲ.

ಕಲೆ-ಸಾಹಿತ್ಯಗಳಲ್ಲಿ ಪಶ್ಚಿಮದಲ್ಲಿ, “ಆಧುನಿಕತೆ” ಎನ್ನುವುದರ ಅವಧಿ ೧೮೭೦ ರಿಂದ ೧೯೨೦ರ ವರೆಗೆ ಎಂದು ಅನೇಕ ವಿದ್ವಾಂಸರು ಸೂಚಿಸಿದ್ದಾರೆ. ಈ ಅವಧಿಯಲ್ಲಿ “ಹೊಸದು” ಎನ್ನುವುದರ ಕಡೆಗೆ ಜನರು ಒಲವು ಹರಿಯತೊಡಗಿತ್ತು ಎನ್ನುತ್ತಾರೆ. ಮಾಲ್ಕೋಂಬ್ರಾಡ್ ಬರಿ ಎನ್ನುವ ವಿಮರ್ಶಕ ಹೇಳುತ್ತಾನೆ;

“ಆಧುನಿಕ ಅರಿವು ಅಥವಾ ಆಧುನಿಕ ಶೈಲಿಯು ಇಂಥ ಒಂದು ದಿನ ಅಸ್ತಿತ್ವಕ್ಕೆ ಬಂದಿತು ಎಂದು ಹೇಳುವಂತೆಯೇ ಇಲ್ಲ. ಇಂಗ್ಲೆಂಡಿನಲ್ಲಿ ೧೯೭೦ರ ಸರಿಸುಮಾರಿನಲ್ಲಿ ಇಂಥದೊಂದು ಪ್ರವೃತ್ತಿ ಬೆಳೆಯಿತು ಎಂದು ಮಾತ್ರ ಹೇಳಬಹುದು. ಕೆಲವು ಸಲ ಈ ಪ್ರವೃತ್ತಿ ವೇಗವಾಗಿ ಬೆಳೆದರೆ ಮತ್ತೆ ಕೆಲವು ಸಲ ಅದರ ಗತಿ ಕುಂಠಿತವಾಯಿತು. ೧೮೭೦ರ ದಶಕದಲ್ಲಿ ಹೊಸದು ಎಂಬುದರ ವಿಷಯಕ್ಕೆ ಹೊಸ ಅಭಿರುಚಿಬೆಳೆಯಿತು ಎಂದು ಹೇಳುವುದಕ್ಕೆ ಸ್ಪಷ್ಟವಾದ ಕೆಲವು ಕುರುಹುಗಳಿವೆ. ಓದುಗರು ಶೈಲಿಯಲ್ಲಿ ಸಂಪ್ರದಾಯದ ಉಲ್ಲಂಘನೆಯನ್ನು ಬಯಸಿದರು; ಹೊಸ ರೂಪಾಂಶಗಳನ್ನು ಅಪೇಕ್ಷಿಸಿದರು. ಬರೆಯುವವರು ಅವುಗಳನ್ನು ಪೂರೈಸಲು ಮುಂದಾದರು. ಆಧುನಿಕ ಚಿಂತನೆಯಲ್ಲಿ ಸಂಬಂಧವಾದ (relativism= ಜ್ಞಾನ ಎನ್ನುವುದು ಕೇವಲ ಸಂಬಂಧಗಳ ಅರಿವು ಎಂಬ ವಾದ) ಎಂಬುದನ್ನು ಜನ ಒಪ್ಪಿದ್ದರಿಂದ ಜನರ ಸಂವೇದನೆಯ ಮೇಲೂ ಕಲಾ ವಿಮರ್ಶೆಯ ಮೇಲೂ ಇದರ ಪರಿಣಾಮ ಏನಾಯಿತು ಎಂಬುದನ್ನು ನೋಡಬೇಕಾಯಿತು.[9]

‘ಹತ್ತೊಂಬತ್ತನೆಯ ಶತಮಾನ ಮುಗಿಯುತ್ತಿದ್ದಂತೆ. ಇತಿಹಾಸ ಚಕ್ರ ತಿರುತ್ತಿದೆ ಎಂಬ ಅರಿವು ಜನಕ್ಕೆ ಆಗುತ್ತಿದ್ದಂತೆ ಹೊಸ ಹೊಸ ಶೈಲಿಗಳು ರೂಢಿಗೆ ಬಂದುವು. ಹೊಸ ಹೊಸ ಸಂಕೇತಗಳನ್ನು ಬಳಸುವುದು ಆರಂಭವಾಯಿತು. ವಿಕಾಸ ತತ್ವದ ಪ್ರವೇಶವಾಯಿತು. ಇದು ಎಷ್ಟರ ಮಟ್ಟಿಗೆ ಎಂದರೆ ಸಂವೇದನೆಯೊಂದೆ ಜ್ಞಾನದ ಮೂಲ (sensationalism) ಎಂಬುದು ಅತಿರೇಕಕ್ಕೆ ಒಯ್ಯುವಂತಾಯಿತು.[10]

ಫ್ರಾನ್ಸಿನ “ಅರ್‌ನೋವೊ” (Art Nouveau- ಹೊಸ ಕಲೆ) ಎಂಬುದರಿಂದ ಬಹುಶಃ ಪ್ರಭಾವಿತವಾಗಿ “ಹೊಸತು” ಎಂಬುದು ಒಂದು ವಿಶಿಷ್ಟವಾದ ರೀತಿಯಲ್ಲಿ ಪ್ರತಿಧ್ವನಿಸಲು ಪರಾರಂಭವಾಯಿತು.[11] ಈ ಗುಣವಾಚಕದ ಅರ್ಥ ವಿಸ್ತರಿಸುತ್ತಾ ಹೋಗಿ ಈ ಅವಧಿಯ ಭಾವನೆಗಳನ್ನೆಲ್ಲ ವ್ಯಾಪಿಸಿತು. ಎಲ್ಲ ಕಡೆಯೂ ಇದೆ ವಿಜೃಂಭಿಸುತ್ತದೆ ಎನ್ನುವಷ್ಟರ ಮಟ್ಟಿಗೂ ಆಯಿತು. “ಹೊಸಚೈತನ್ಯ”, “ಹೊಸ ಹಾಸ್ಯ”, “ಹೊಸ ವಾಸ್ತವವಾದ”, “ಹೊಸ ಸೌಖ್ಯ ಪುರುಷಾರ್ಥವಾದ” (New hedonism), “ಹೊಸ ನಾಟಕ”, “ಹೊಸ ಒಕ್ಕೂಟ ತತ್ವ” (New unionism), “ಹೊಸಪಕ್ಷ”, “ಹೊಸ ಮಹಿಳೆ”- ಹೀಗೆ. ಜಾಕ್‌ಸನ್ ಕೊನೆಗೆ ಎಚ್. ಡಿ. ಟ್ರೈಲ್ (H.D. Trail) ಎನ್ನುವವನನ್ನು ಉದ್ಧರಿಸಿ ಹೇಳುತ್ತಾನೆ: “ಇಂದಿನ ದಿನಗಳಲ್ಲಿ ಹೊಸದಾಗಿಲ್ಲದಿರುವುದು ಎಂದರೆ ಏನೂ ಅಲ್ಲ ಎಂದೇ ಅರ್ಥ.”[12] “ಆಧುನಿಕ” (Modern) ಎಂಬುದನ್ನು ಬಳಸುವುದಕ್ಕೆ ಜರ್ಮನಿ ಮತ್ತು ಸ್ಕಾಂಡಿನ್ಯೇವಿಯಾಗಳಿಂದ ಸ್ಫೂರ್ತಿ ದೊರೆತಿರಬಹುದು.[13] ಜಾನ್‌ಲೇನ್ ಎಂಬ ಲೇಖಕ ತನ್ನ “ಹಳದಿ ಪುಸ್ತಕ” (Yellow Book) ಎಂಬುದಕ್ಕೆ ಆಧುನಿಕತೆಯ ಸಾಹಸ ಉಂಟು ಎಂದು ಹೇಳಿದ.

ಪಶ್ಚಿಮದಲ್ಲಿ “ಹೊಸದು” ಮತ್ತು “ಆಧುನಿಕ” ಎನ್ನುವುದರ ನಡುವೆ ಅರ್ಥ ವ್ಯತ್ಯಾಸ ಮೊದಲಿಗೆ ಸ್ಪಷ್ಟವಾಗಿರಲಿಲ್ಲ. “ಹೊಸದು” ಎಂಬುದಕ್ಕೆ ಹತ್ತೊಂಬತ್ತನೆಯ ಶತಮಾನದ ಅಂತ್ಯದ ಲಕ್ಷಣಗಳುಳ್ಳದ್ದು, ನಿರಾಶಾವಾದಿಯಾದದ್ದು, ಸೊಗಸುಗಾರಿಕೆಯಿಂದ ಕೂಡಿದ ಅವನತಿ ಸೂಚಕವಾದದ್ದು, ಜಾರ್ಜಿಯನ್ ಕವಿಗಳ ಉಜ್ವಲವಾದ ಆಶೆ ಮುಂತಾದ ಅರ್ಥಗಳೆಲ್ಲ ಇದ್ದುವು. ಮೊದಮೊದಲಲ್ಲಿ ಅನೇಕ ಸಲ ಏರಿಳಿತಗಳಿಗೆ ಒಳಗಾಗಿ ಕೊನೆಗೆ ೧೯೨೦ರ ವೇಳೆಗೆ ಭ್ರಮಾ ನಿರಸನ ಮತ್ತು ನಿರಾಶೆಗಳನ್ನು ಒತ್ತಿ ಹೇಳುವ ಹೊಸ ಮನೋಭಾವ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಆದರೂ “ಆಧುನಿಕತೆ”ಯ ಅವಶ್ಯಕತೆ, ಅನಿವಾರ್ಯತೆಗಳನ್ನು ಒಪ್ಪಿಕೊಂಡವರೂ ಅದರ ಲಕ್ಷಣಗಳೇನು ಎಂಬುದರ ವಿಷಯದಲ್ಲಿ ಏಕಾಭಿಪ್ರಾಯಕ್ಕೆ ಬಂದಿರಲಿಲ್ಲ.

“ಆಧುನಿಕತೆ ಎಂಬುದರ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳೇ ಇದ್ದುವು. ಅವು ಒಂದಕ್ಕೊಂದಕ್ಕೆ ಹೊಂದಾಣಿಕೆಯೇ ಇಲ್ಲದಷ್ಟು ಭಿನ್ನವಾಗಿದ್ದುವು. ಕೆಲವರು ‘ಸಂಪ್ರದಾಯವಾಯವನ್ನು ನಿರ್ಲಕ್ಷಿಸುವ ವಾಸ್ತವತಾವಾದ’ (Naturalistic Realism) ಎಂಬುದು ಆಧುನಿಕತೆಯ ಲಕ್ಷಣ ಎಂದರೆ ಮತ್ತೆ ಕೆಲವರು “ಪ್ರಜ್ಞೆಯ ಕ್ಷಣಿಕತೆ” (evanescence of consciousness) ಅದರ ಲಕ್ಷಣ ಎಂದರು. ಮತ್ತೆ ಕೆಲವರು “ಭಾವಾತಿರೇಕವನ್ನು ದಾಟಿದ, ಯಂತ್ರ ಯುಗಕ್ಕೆ ಉಚಿತವಾದ, ಗಟ್ಟಿಯಾದ, ಹಾಳತವಾದ ಕ್ಲಾಸಿಸಿಸಂ” ಅದರ ಲಕ್ಷಣ ಎಂದರು. ಮತ್ತೆ ಕೆಲವರು “ಒಂದು ಹೊಸ ರೊಮಾಂಟಿಸಿಸಂ ಮತ್ತು ವ್ಯಕ್ತಿ ನಿಷ್ಠತೆ” ಅದರ ಸ್ವರೂಪ ಎಂದು ವಾದಿಸಿದರು. ಇವರೆಲ್ಲರ ಹೇಳಿಕೆಯಲ್ಲಿ ಸಮಾನವಾಗಿದ್ದ ಅಂಶ ಒಂದು: ಒಂದು ಹೊಸ ಯುಗದ ಅಗತ್ಯಕ್ಕೆ ಹೊಂದುವಂತಹ ಹೊಸ ಕಲೆ (ಎಂದರೆ ಕಲಾ ಮಾಧ್ಯಮ) ಮೂಡಬೇಕು. ಇತಿಹಾಸದಲ್ಲಿ ಒಂದು ನಿರ್ದಿಷ್ಟ ಭವಿಷ್ಯ ದರ್ಶನದ (apocalypse) ಸಂಭವಕ್ಕಾಗಿ ಆಧುನಿಕತೆಯ ಮನಸ್ಸು ೧೯೧೪ರ ವರೆಹೆ ಕಾಯಬೇಕಾಯಿತು. ಆಗ ಪ್ರಾರಂಭವಾದ ಮಹಾಯುದ್ಧವು ಸರ್ವನಾಶವನ್ನು ತಂದುದಲ್ಲದೆ ಭವಿಷ್ಯ ದರ್ಶನಕ್ಕೆ ಪ್ರತೀಕವೂ ಆಯಿತು. ಅಷ್ಟೇ ಅಲ್ಲ ಆ ವರ್ಷವು ಪಶ್ಚಿಮದ ನಾಗರಿಕತೆಯ ಒಂದು ಘಟ್ಟಕ್ಕೆ ಅಂತ್ಯವನ್ನು ತಂದಿತು. ಹಿಂದು ಮತ್ತು ಮುಂದುಗಳ ನಡುವೆ ಎಳೆದ ಸ್ಪಷ್ಟವಾದ ಸೀಮಾರೇಖೆಯೂ ಅದೇ ಆಯಿತು. ಭಾವಜಗತ್ತಿನಲ್ಲಿ ಮಾತ್ರ, ಈಗಾಗಲೇ ಹೇಳಿರುವಂತೆ, ಇದಕ್ಕೆ ಬೇಕಾದ ಸಿದ್ಧತೆ ಅದರ ಹಿಂದಿನ ಮೂವತ್ತು ನಲವತ್ತು ವರ್ಷಗಳಿಂದಲೂ ನಡೆದು ಬಂದಿತ್ತು. ಅಸ್ತಿತ್ವದ ಒಂದು ಹೊಸ ಘಟ್ಟದ ಕಡೆಗೆ ನಡೆಯಲು ಹೋರಾಡುತ್ತಿರುವ ಇಲ್ಲವೇ ಹೊಸ ವಾಸ್ತವತೆಯೊಂದನ್ನು ಎದುರಿಸಲು ಸಿದ್ಧವಾಗುತ್ತಿರುವ, (ಷಾ ನ ಅತಿಮಾನವ, ಹಾರ್ಡಿಯ ಹೊಸ ಮಹಿಳೆ, ವೆಲ್ಸ್‌ನ ಹೊಸ ವಿಜ್ಞಾನಿಯಂತಹ) ಹೊಸ ಚಾರಿತ್ರಿಕ ಮಾದರಿಗಳನ್ನು ಸೃಷ್ಟಿಸುತ್ತಿರುವ ಪ್ರಯತ್ನಗಳಲ್ಲಿ ಆ ಸಿದ್ಧತೆ ಸೂಚಿತವಾಗಿದೆ. ಪ್ರಜ್ಞೆಯು ಹೊಸ ಹೊಸ ರೂಪಗಳನ್ನು ನೀಡಲು ಪ್ರಯತ್ನಿಸಿರುವುದಕ್ಕೆ ಅವೆಲ್ಲ ಸಾಕ್ಷಿಯಾಗಿವೆ. ಈ ಪ್ರತೀಕಗಳಲ್ಲೆಲ್ಲ ಎಡೆಬಿಡದೆ ಬರುವ ಮುಖ್ಯವಾದ ಪ್ರತೀಕವೆಂದರೆ ಹೊಸ ಕಲಾವಿದನೇ. ಹಂಬಲಿಸುತ್ತಿರುವ ಹೊಸ ಅಭಿವ್ಯಕ್ತಿ ವಿಧಾನದತ್ತ ವಿವಿಧ ರೂಪ ಶೈಲಿಗಳ ಜವುಗಿನಲ್ಲಿ ದಾರಿಯನ್ನು ಅರಸುತ್ತಾ ಹೋಗುತ್ತಿದ್ದಾನೆ, ಆತ.”

ಪಶ್ಚಿಮದಲ್ಲಿ ಯುರೋಪಿನ ಯುದ್ಧಗಳು ಎಲ್ಲಕ್ಕಿಂತ ಹೆಚ್ಚಾಗಿ ವಿಧ್ವಂಸ ಗೊಳಿಸಿದ್ದು ಧರ್ಮವನ್ನು ಪರಸ್ಪರ ಹೋರಾಡುತ್ತಿರುವ ಎರಡು ಪಕ್ಷಗಳೂ ಏಕಕಾಲದಲ್ಲಿ ವಿಜಯಕ್ಕಾಗಿ ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದು ಆತ ಅಸಹಾಯಕನಾಗಿ ನೋಡುತ್ತಿದ್ದುದು ಪೂಜೆ, ಪ್ರಾರ್ಥನೆಗಳ ನಿಷ್ಪಲತೆಯನ್ನೂ ಚರ್ಚು ಬೋಧಿಸುತ್ತಿದ್ದ “ಪರಮ ಪ್ರೇಮ”ದ ಡೊಗರನ್ನೂ ಲಕ್ಷ ಲಕ್ಷ ಜನ ನಿರಪರಾಧಿ ಬಲಿ ಪ್ರಾಣಿಗಳಿಗೆ ಮನದಟ್ಟು ಮಾಡಿಕೊಟ್ಟಿತ್ತು. ನೀತಿಯ ವಿಷಯದಲ್ಲಿ ಪ್ರಚಲಿತವಾಗಿದ್ದ ಕಟ್ಟು ಕಥೆಗಳೆಲ್ಲ ತಮ್ಮಷ್ಟಕ್ಕೆ ತಾವೇ ಮೂಲೆ ಗುಂಪಾದವು. ನಿಜವಾಗಿಯೂ ಶೀಲವಂತರಾಗಿ ನಡೆದುಕೊಂಡವರು ಸ್ವರ್ಗದಲ್ಲಿ ಯಾವ ಸುಖವನ್ನು ಅನುಭವಿಸುತ್ತಾರೆಯೋ ತಿಳಿಯದೇ ಹೋದರು. ತಾವು ವಾಸ್ತವವಾಗಿ ಅನುಭವಿಸುತ್ತಿರುವ ನರಕಯಾತನೆಗಿಂತ ಹೆಚ್ಚಿನ ಹಿಂಸೆಯನ್ನು ಕಲ್ಪಿಸಿ ನೀಡಬಹುದಾದ ನರಕ ಮತ್ತೊಂದಿರುವುದು ಸಾಧ್ಯವೇ ಇಲ್ಲ ಎಂದು ಜನಗಳಿಗೆ ಸ್ಪಷ್ಟವಾಯಿತು.

ಈ ಎಲ್ಲ ಅನುಭವಗಳೂ ಸಹಜವಾಗಿಯೇ ಕಲೆಗಳಲ್ಲಿ ಅಭಿವ್ಯಕ್ತಿ ಪಡೆದುವು. ೧೯೨೦ರ ದಶಕವನ್ನು ಸಿನಿಕಲ್ ಮತ್ತು ಪ್ರಯೋಗಾತ್ಮಕ ಎಂದು ಕರೆದರು. ತಂತ್ರದ ದೃಷ್ಟಿಯಿಂದಂತೂ ಈ ದಶಕ ಇಡೀ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಅತ್ಯಂತ ಫಲಪ್ರದವಾದದ್ದು ಎಂದು ಕರೆಯಲ್ಪಟ್ಟಿದೆ. ಕಾದಂಬರೀ ಕ್ಷೇತ್ರದಲ್ಲಿ ‘ಪ್ರಜ್ಞಾಪ್ರವಾಹ’ (stream of consciousness) ಎಂಬ ವಿಧಾನ ಜನ್ಮ ತಳೆದು ಪಕ್ವ ಸ್ಥಿತಿಯನ್ನು ಮುಟ್ಟಿ ಕೊನೆಗೆ ಅವನತಿಯನ್ನು ಕಂಡದ್ದೂ ಇದೇ ದಶಕದಲ್ಲಿ ಈ ಅವಧಿಯ ಮೂರು ಜನ ಮಹಾ ಸಾಹಿತಿಗಳು ಇಡೀ ಜಗತ್ತಿನ ಸಾಹಿತ್ಯಗಳ ಮೇಲೆಲ್ಲ ಪ್ರಭಾವ ಬೀರಿದರು. ಬರ್ನಾರ್ಡ್‌ಷಾ, ಟಿ.ಎಸ್. ಎಲಿಯಟ್ ಮತ್ತು ಜೇಮ್ಸ್ ಜಾಯ್ಸ್, ಪ್ರಜ್ಞಾ ಪ್ರವಾಹದ ತಂತ್ರವನ್ನು ಬಳಸಿಕೊಂಡು ಜೇಮ್ಸ್ ಜಾಯ್ಸ್ ರಚಿಸಿದ “ಯೂಲಿಸಿಸ್” ಎಂಬುದು ಈ ವಿಧದ ಕಾದಂಬರಿಗಳಲ್ಲಿ ನಾಯಕಸ್ಥಾನದಲ್ಲಿರುವ ಕೃತಿ. ಇದರ ಬಗ್ಗೆ ಕೆಲವಾದರೂ ವಿವರಗಳನ್ನು ನೀಡಿದರೆ ಸಾಹಿತಿಯೊಬ್ಬನ ಮನಸ್ಸು ಕೆಲಸ ಮಾಡುತ್ತಿದ್ದ ರೀತಿ ಎಂಥದು ಎಂಬುದು ಗೊತ್ತಾಗುತ್ತದೆ.

ಒಂದು ನಿರ್ದಿಷ್ಟ ಸ್ಥಳದಲ್ಲಿ ಒಂದು ನಿರ್ದಿಷ್ಟ ಕಾಲದಲ್ಲಿ ನಡೆಯುವ ಘಟನೆಗಳನ್ನೆಲ್ಲ ಆದಷ್ಟೂ ಮಟ್ಟಿಗೆ ಸಂಪೂರ್ಣವಾಗಿ ಕಾದಂಬರೀ ರೂಪದಲ್ಲಿ ಚಿತ್ರಿಸುವ ಪ್ರಯತ್ನ “ಯೂಲಿಸಿಸ್” ನಲ್ಲಿ ನಡೆದಿದೆ. ಕಾದಂಬರಿಯಲ್ಲಿನ ಘಟನೆಗಳು ನಡೆಯುವ ಸ್ಥಳ ಡಬ್ಲಿನ್. ಅಲ್ಲಿನ ಬೀದಿಗಳು ಮನೆಗಳು, ಅಂಗಡಿಗಳು, ಪತ್ರಿಕಾ ಕಚೇರಿಗಳು, ಮಧ್ಯಪಾನದ ಕೇಂದ್ರಗಳು, ಆಸ್ಪತ್ರೆಗಳು, ವೇಶ್ಯಾವಾಟಿಕೆಗಳು, ಶಾಲೆಗಳು- ಇವುಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುವ ಘಟನೆಗಳನ್ನು ಅಲ್ಲಿ ಚಿತ್ರಿಸಲಾಗಿದೆ. ಕಾಲ: ೧೯೦೪ರ ಒಂದೇ ಒಂದು ದಿನ. ಹೋಮರ ಕವಿಯ ಒಡಿಸ್ಸಿಯಲ್ಲಿ ಬರುವ ಘಟನೆಗಳು, ಪಾತ್ರಗಳು ಮುಂತಾದುವಕ್ಕೂ ಇಲ್ಲಿನ ಘಟನೆಗಳು ಪಾತ್ರಗಳಿಗೂ ಒಂದು ಬಗೆಯ ಹೋಲಿಕೆಯಿದೆ. ಇಲ್ಲಿನ ಒಂದು ಪಾತ್ರವಾದ ಲಿಯೋ ಫೋರ್ಡ್ ಬ್ಲೂಮನ್ ಯೂಲಿಸಸ್. ಅವನ ಹೆಂಡತಿ ಮೇರಿಯನ್ ಟ್ವೀಡಿ ಬ್ಲೂಮ್ (ಮೋಲಿ) ಒಡಿಸ್ಸಿಯ ಪೆನ್‌ಲೋಪ್. ಜಾಯ್ಸ್‌ನ ಪಾತ್ರ ಸ್ಟೀಫನ್‌ಡೆಡಲಸ್‌, ಯೂಲಿಸಿಸ್ಸಿನ ಮಗ ಟೆಲಿಮಾಕಸ್. ಈ ಕೃತಿಯ ರಚನೆಗೆ ಜಾಯ್ಸ್ ಬಗೆ ಬಗೆಯ ಶೈಲಿಗಳನ್ನೂ ತಂತ್ರಗಳನ್ನೂ ಬಳಸಿದ್ದಾನೆ. ತಂತ್ರಗಳಲ್ಲಿ ಮುಖ್ಯವಾದದ್ದು “ಪ್ರಜ್ಞಾ ಪ್ರವಾಹ”. ಏಕಕಾಲದಲ್ಲಿ ಅಲ್ಲಲ್ಲಿ ನಡೆಯುವ ಘಟನೆಗಳನ್ನು ಮಾತ್ರವಲ್ಲದೆ ಒಂದಾದ ಮೇಲೊಂದರಂತೆ ಮನಸ್ಸಿನಲ್ಲಿ ಮೂಡುವ ತೋರಿಕೆಗೆ ಅಸಂಬದ್ಧ ಎನಿಸುವ ಭಾವಗಳನ್ನೂ ನೆನಪುಗಳನ್ನೂ ಚಿತ್ರಿಸುವುದು ಈ “ಪ್ರಜ್ಞಾಪ್ರವಾಹ”ದ ಪ್ರಧಾನವಾದ ಲಕ್ಷಣ. ಜಾಯ್ಸ್ ಡಬ್ಲಿನ್ ನಗರದ ದೃಶ್ಯಗಳು, ಶಬ್ದಗಳು, ವಾಸನೆ ಇವನ್ನೂ ಮಾತ್ರವಲ್ಲದೆ ನೀರಸವಾದ ಆಧುನಿಕ ಜಗತ್ತಿನ ಈ ಜನರ ಭಾವಗಳನ್ನೂ ಸ್ಮೃತಿಗಳನ್ನೂ ಯಥಾವತ್ತಾಗಿ ಚಿತ್ರಿಸುವ ಪ್ರಯತ್ನ ನಡೆಸಿದ್ದಾನೆ. ಭಾಷೆಯ ವಿಷಯದಲ್ಲೂ ಧೈರ್ಯವಾಗಿ ಹೊಸ ಪ್ರಯೋಗಗಳನ್ನು ಸಾಧಿಸಿದ್ದಾನೆ. ೧೯೨೨ ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಕೃತಿಯು ಅಸಾಧ್ಯವಾದ ಕೋಲಾಹಲವನ್ನೇನೋ ಉಂಟುಮಾಡಿತು. ಆದರೆ, ಇಷ್ಟು ಪ್ರಭಾವಶಾಲಿಯಾದ ಮತ್ತೊಂದು ಇಂಥ ಕೃತಿ ಇಂಗ್ಲಿಷ್‌ನಲ್ಲಿ ಪ್ರಕಟವಾದಂತೆ ತೋರಲಿಲ್ಲ. ಹೀಗಾಗಿ ಅದು ಅನನ್ಯ ಸಾಧಾರಣ ಕೃತಿಯಾಗಿ ಉಳಿಯಿತೇ ಹೊರತು ಮಾರ್ಗ ಪ್ರವರ್ತಕ ಕೃತಿಯಾಗಲಿಲ್ಲ.

ಅಂಥ ಮಾರ್ಗ ಪ್ರವರ್ತಕ, ಪರಿವರ್ತಕ ಕವನ ಟಿ.ಎಸ್. ಎಲಿಯಟ್‌ನ “ದಿ ವೇಸ್ಟ್ ಲ್ಯಾಂಡ್” (೧೯೨೨). ಇದು ಹೆಚ್ಚು ಕಡಿಮೆ ಅರ್ಧ ಜಗತ್ತಿನ ಕಾವ್ಯ ಮಾರ್ಗವನ್ನೇ- ತತ್ಕಾಲಕ್ಕಾದರೂ-ಬದಲಾಯಿಸಿದ ಮಹತ್ವದ ಕವನವಾಗುವುದು ಯೋಗ ಪಡೆಯಿತು.[14] ಆಧುನಿಕ ಜಗತ್ತು ಇರುವಂತೆ-ಅಂದು ಅರ್ಥರಹಿತವಾಗಿ, ಧ್ಯೇಯಶೂನ್ಯವಾಗಿ ಇದ್ದಂತೆ-ಚಿತ್ರಿಸುವ ಪ್ರಯತ್ನ ಕವನದ ಪ್ರಾರಂಭ. ಅದು ನಡೆಯುವುದು ಕೆಲಸಕ್ಕೆ ಬಾರದ ಸಂಭಾಷಣೆಯ ತುಣುಕುಗಳಿಂದ. ಈ ಬಂಜೆ ನಾಗರಿಕತೆಯಿಂದ ಏನುತಾನೆ ಬೆಳೆಯುತ್ತದೆ ಎಂದು ಎಲಿಯಟ್ ಪ್ರಶ್ನಿಸುತ್ತಾನೆ. ಆರಕ್ಕೇರದೆ ಮೂರಕ್ಕಿಳಿಯದೆ, ಸ್ವರ್ಗಕ್ಕೂ ಬೇಕಾಗದೆ ನರಕಕ್ಕೂ ಬೇಕಾಗದೆ ಬಾಳುತ್ತಿರುವ ಸಮಷ್ಟಿ-ವ್ಯಷ್ಟಿಯ, ಎಂದರೆ, ಹತ್ತರಲ್ಲಿ ಹನ್ನೊಂದನೆಯವನ ಬದುಕನ್ನು ಕವಿ ಯಶಸ್ವಿಯಾಗಿ ಚಿತ್ರಿಸಿದ್ದಾನೆ. ಇಲ್ಲಿ ಮನೆ ಮಾರಿಸುವ ದಬ್ಬಾಳಿಕೆಯ ಗುಮಾಸ್ತೆಯೊಬ್ಬ ಟೈಪಿಣಿಯನ್ನು ಭ್ರಷ್ಟಗೊಳಿಸುತ್ತಾನೆ-ಪ್ರಣಯವೋ ಈ ಆಧುನಿಕ ಜಗತ್ತಿನಲ್ಲಿ ಯಾಂತ್ರಿಕವಾಗಿದೆ ಎಂಬುದನ್ನು ಕವಿ ಈ ಘಟನೆಯನ್ನೇ ಪ್ರತಿಮೆಯನ್ನಾಗಿಸಿ ಚಿತ್ರಿಸಿದ್ದಾನೆ. ತುಂಬ ಜಟಿಲವಾದ ಈ ಕವನ ವಿಧಾನ ಅಷ್ಟೇ ಜಟಿಲವಾದ ಇಂದಿನ ಜೀವನ ವಿಧಾನಕ್ಕೆ ಉಚಿತವಾಗಿದೆ ಎಂಬುದು ಅನೇಕ ವಿಮರ್ಶಕರ ಅಭಿಪ್ರಾಯ. ಕವನದ ಮುಕ್ತಾಯ ಅಧ್ಯಾತ್ಮದಿಂದ ಮಾತ್ರ. ಈ ಬರಡು ಜೀವನ ಫಲವತ್ತಾಗುತ್ತದೆ ಎಂಬ ಆಶಾವಾದದಿಂದ. ಅದನ್ನು ನಂಬುವುದು ಹೇಗೆ?-ಈ ಮಾತು ಹೇಗೆ ಇರಲಿ, ಎಲಿಯಟ್ ಇಪ್ಪತ್ತನೆಯ ಶತಮಾನದ ಮೊದಲ ಅರ್ಧದಲ್ಲಿ ಕಾವ್ಯ ಪದ್ಧತಿಯು ಹೊಸ ಹಾದಿಯನ್ನು ಹಿಡಿಯುವಂತೆ ಮಾಡುವುದರಲ್ಲಿ ಯಶಸ್ವಿಯಾದ.

[1] Malcolm Bradhury: The Social Context of Modern English Literature Oxford-Basil –Balckwell. 1971 Ed. Malcolm Bradhury and James Mc-Farlane: Modernism-Penguins. 1976

[2] Richard Hoggart: Contemporary cultural Studies: An Approach to the stucy of Literature and Society-Essay included in “contemporary Criticism- Stafford-upon-Avon Studies. Gen D., Malcolm Bradhury and David Plamer-Edward Arnold, 1970.

[3] Irwing Howe: Literary Modernism-A Fawcett Premier Book, 1967.

[4] ಔದ್ಯೋಗೀಕರಣ ಮತ್ತು ನಗರೀಕರಣಗಳು ನಮ್ಮನ್ನು ಎಲ್ಲಿಗೆ ಒಯ್ಯಬಲ್ಲವು ಎಂಬುದನ್ನು ಗ್ರಹಿಸಬೇಕಾದರೆ ಬೊಂಬಾಯಿನ ಕಾರ್ಮಿಕರ ವಠಾರಗಳನ್ನು (ಅಲ್ಲಿ ಅವನ್ನು ‘ಚಾಳು’ಗಳು ಎಂದು ಕರೆಯುತ್ತಾರೆ) ನೋಡಬೇಕು. ಆ ವಠಾರಗಳಲ್ಲಿ ‘ಮನೆ’ ಎಂದರೆ ೧೨ ಮತ್ತು ೨೦ ವಿಸ್ತಾರದ ಒಂದೇ ಒಂದು ಕೊಠಡಿ. ಅಲ್ಲೇ ಸ್ನಾನ, ಊಟ, ನಿದ್ರೆ, ಸಂಭೋಗ, ಮಕ್ಕಳ ಲಾಲನೆ, ಪಾಲನೆ, ಹುಡುಗರ ಓದುಬರಹ ಅಷ್ಟೂ ನಡೆಯಬೇಕು. ನಡುವೆ ಗೋಡೆ, ಸ್ಕೀನು ಮುಂತಾದ ಅಡೆತಡೆಗಳೇನೂ ಇರುವುದಿಲ್ಲ.

[5] The modernized world is a plural environment possessed by no one and with no locateable individual in command-Malcolm Bradhury, The Social Context of modern English Literature, P.6. Mr. Bennett and Mrs. Brown ಎಂಬ ಪ್ರಖ್ಯಾತ ಪ್ರಬಂದ ನೋಡಿ.

[6] ಈ ಮಾತಿನ ಅರ್ಥ ಅಗ್ರಗಾಮಿ ಎಂದು. ಮೊದಲಿಗೆ ಇದು ಯುದ್ಧಕ್ಕೆ ಸಂಬಂಧಪಟ್ಟ ಮಾತು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಇದು ಕಲೆಗಳಿಗೂ ಅನ್ವಯವಾಗತೊಡಗಿತು. ಸಂಪ್ರದಾಯಕ್ಕೆ ಬೇಸತ್ತು ನೂತನ ಪ್ರಯೋಗಗಳನ್ನು ನಡೆಸುವವರು ಅಗ್ರಗಾಮಿಗಳು. ಫ್ರಾನ್ಸ್ ದೇಶದ ಕಲಾವಿದರಲ್ಲಿ ಕೊರ್ಬೆ (Courbet) ಡೆಗಾ (Degar) ಮುಂತಾದವರು ಮೊದಲು ಈ ತೀರಿಯ ಪ್ರಯೋಗ ನಡೆಸಿ ಜನರನ್ನು ದಿಗ್ಭ್ರಮೆಗೊಳಿಸಿದರು.

[7] ೧೯೦೭ರಲ್ಲಿ ಪ್ರಕಟವಾದ ಈ ಪುಸ್ತಕ ಸ್ವಾರಸ್ಯಮಯವಾಗಿದೆ. ಕಾದಂಬರಿಯ ರೂಪದಲ್ಲಿರುವ ಆತ್ಮಕಥೆ ಇದು. “ಹೆನ್ರಿ ಆಡಮ್ಸಂನ ಶಿಕ್ಷಣದ ಕಥೆ ಎಂದರೆ ಅವನ ಜೀವಿತ ಕಾಲದಲ್ಲೇ ಯಂತ್ರಗಳು ಬಹುಸಂಖ್ಯೆಯಲ್ಲಿ ಮೆಚ್ಚಿಕೊಂಡದ್ದರ ಕಥೆಯೇ. ಆ ಹೆಚ್ಚಳದ ಪರಿಣಾಮವಾಗಿ ಮಾನವರ ನಡುವೆ ನೈತಿಕ ಸಂಬಂಧಗಳು ಮುರಿದುಬಿದ್ದವು. ಜನರ ಪ್ರಯತ್ನಗಳೆಲ್ಲ ಕಡಿಮೆ ಶ್ರಮದಿಂದ ಹೆಚ್ಚಿನ ಹಣ ಸಂಪಾದಿಸುವುದು ಹೇಗೆ ಎಂಬುದರ ಕಡೆ ತಿರುಗಿದವು.” ಚಿಕ್ಕಂದಿನಲ್ಲಿ ತನಗೆ ದೊರೆತಿದ್ದ ಸಾಧನಗಳಲ್ಲಿ ತನ್ನ ಸುತ್ತಣ ಜಗತ್ತಿನ ರಹಸ್ಯಗಳನ್ನು ಭೇದಿಸುವುದಾಗಲೀ ಆಧುನಿಕತೆಯೊಂದಿಗೆ ಹೊಂದಿಕೊಳ್ಳುವುದಾಗಲೀ ಸಾಧ್ಯವಿಲ್ಲ ಎಂಬುದು ಆಡಮ್ಸ್‌ನ ಅನುಭವದ ಸಾರ. ತನ್ನ ತಂದೆ ತಾತಂದಿರ ಕಾಲದ ನೈತಿಕ ಮೌಲ್ಯಗಳು ನುಚ್ಚುನೂರಾಗಿ ದುರಾಸೆ ಭ್ರಷ್ಟಾಚಾರಗಳು ಆಡಳಿತದ ಅತ್ಯನ್ನತಸ್ತರದಲ್ಲಿಯೂ ವ್ಯಾಪಿಸಿದ್ದು ಯಂತ್ರ ನಾಗರಿಕತೆಯ ಪರಿಣಾಮವಾಗಿ ಎಂಬುದು ಅವನ ವಾದ.

[8] In observing the dynamo he (Henry Adams) decided that history is not merely a series of causes and effects, of men acting upon men, but the record of forces acting upon men. For him the dynamo became the symbol of force acting upon his own time as the Virgin had been these symbol of force in the twelfth century

[9] ನೋಡಿ: Pater: Studies in the History of the Renaissance.

[10] Malcom Bradbury: The Social Context of Modernity in English Literature. P.87

[11] Holbrook Jackson: The eighteen Nineteen (1913)

[12] “Not to be New is, in these days, to be nothing.”

[13] Malcolm Bradhury: the Social context of Modern English Literature.p.87

[14] ಈ ಕವನದ ವಿಸ್ತಾರವಾದ ವಿಶ್ಲೇಷಣೆಗೆ ಇದೇ ಲೇಖಕನ “ಕನ್ನಡದಲ್ಲಿ ಭಾವಗೀತೆ” ಗ್ರಂಥದ “ನವ್ಯ ಕಾವ್ಯ” ಎಂಬ ಅಧ್ಯಾಯವನ್ನು ನೋಡಿ ಪ್ರಕಾಶಕರು: ಡಿ.ವಿ.ಕೆ. ಮೂರ್ತಿ, ಮೈಸೂರು.