ಕನ್ನಡ ಸಾಹಿತ್ಯಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಸಂಸ್ಕೃತ ಮಿಶ್ರಿತವಾದ ಕನ್ನಡದಲ್ಲಿ ರಚಿತವಾಗಿರುವ ಮೊದಲನೆಯ ಶಾಸನವು ಕ್ರಿ.ಶ.೪೫೦ ರಲ್ಲಿ ರಚಿತವಾಗಿದೆ ಎಂದು ನಿರ್ಣಯಿತವಾಗಿರುವ ಹಲ್ಮಿಡಿಯ ಶಾಸನ. ಕ್ರಿ.ಶ. ಏಳನೆಯ ಶತಮಾನದ ಬಾದಾಮಿಯ ಶಾಸನದಲ್ಲಿ ಕಪ್ಪೆ ಅರಭಟ್ಟನ ವ್ಯಕ್ತಿಚಿತ್ರಣವಿದೆ. ಈ ಶಾಸನದ ವೈಶಿಷ್ಟ್ಯವೆಂದರೆ ಕನ್ನಡ ಛಂದಸ್ಸಿನ ತಾಯಿಬೇರಾದ ತ್ರಿಪದಿಯ ಮೊಟ್ಟ ಮೊದಲ ರೂಪ ಇಲ್ಲಿ ಕಂಡುಬರುತ್ತದೆ. ಈ ಶಾಸನದಲ್ಲಿ ಉಪಮಾಲಂಕಾರವಿದ್ದು ಕಾವ್ಯ ಸತ್ವವು ಮಡುಗಟ್ಟಿ ನಿಂತಿರುವುದು ಸ್ಪಷ್ಟವಾಗಿದೆ:

ಆಗಿನ ಜನಸಂಸ್ಕೃತಿಯ ಸಾತ್ವಿಕಧೀರ-ಪುರುಷ ವ್ಯಕ್ತಿತ್ವದ ಪರಿಕಲ್ಪನೆಯೊಂದು ಅದರಲ್ಲಿ ಸ್ಫುಟಗೊಂಡಿದೆ.

ಸಾಧುಗೆ ಸಾಧುಮಾಧುರ್ಯನ್ಗೆ ಮಾಧುರ್ಯಂ |
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ |
ಮಾಧವನೀತನ್ ಪೆಱನಲ್ಲ ||
ಕಟ್ಟಿದ ಸಿಂಘಮನ್ ಕೆಟ್ಟೋದೇನೆಮಗೆಂದು
ಬಿಟ್ಟವೋಲ್ ಕಲಿಗೆ ವಿಪರೀತಂಗಹಿತರ್ಕ್ಕಳ್ |
ಕೆಟ್ಟರ್ ಮೇಣ್ ಸತ್ತರವಿಚಾರಂ ||

ಕಪ್ಪೆ ಅರಭಟ್ಟನ ಶೌರ್ಯ ಮತ್ತು ಸಾಧುಸ್ವಭಾವಗಳ ಕಾವ್ಯಾತ್ಮಕವಾದ ವರ್ಣನೆ ಇದರಲ್ಲಿದೆ. ಅವನು ಸಾಧು ಸ್ವಭಾವದವರಿಗೆ ಸಾಧು ಸ್ವಭಾವದವನು. ಹಾಗೆಯೇ ತನಗೆ ತೊಂದರೆ ಕೊಡುವ ಕಲಿಗೆ ಕಲಿಯುಗದಲ್ಲೇ ಅತ್ಯಂತ ವಿಪರೀತನಾದವನು-ಎಂದರೆ ಘೋರ ಶತ್ರು. ಕಟ್ಟಿಹಾಕಿರುವ ಸಿಂಹವನ್ನು ನಮಗೆ ಅದು ಏನು ತಾನೆ ಮಾಡೀತು ಎಂದು ಬಿಚ್ಚಿ ಬಿಡುವವರಿಗೆ ಆಗುವ ಗತಿಯೇ ಇವನನ್ನು ಎದುರಿಸುವ ಶತ್ರುಗಳಿಗೆ ಒದಗುವುದು ಖಂಡಿತ.

ಕಾವ್ಯದೃಷ್ಟಿಯಿಂದ ಮಾತ್ರವಲ್ಲದೆ ಮರ್ತ್ಯರಾದ ನಮಗೆ ಬದುಕಿನಲ್ಲಿ ನಾವು ಗೌರವಿಸುವ ವಸ್ತುಗಳು ಎಷ್ಟು ಕ್ಷಣಿಕವಾದುವು ಎಂಬುದನ್ನು ತಿಳಿಸುವ ಕ್ರಿ.ಶ. ೭೦೦ರ ಸುಮಾರಿನ ಶ್ರವಣಬೆಳ್ಗೊಳದ ಒಂದು ಶಾಸನವೂ ಉಂಟು. ನಂದಿಸೇನ ಮುನಿವರರು ದೇಹತ್ಯಾಗ ಮಾಡಿದ ಸಂದರ್ಭವನ್ನು ಅದು ತಿಳಿಸುತ್ತದೆ.

ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆಱವೋಲ್ ಮಂಜುವೋಲ್ ತೋಱೆ ಬೇಗಂ
ಪಿರಿಗುಂ ಶ್ರೀ ರೂಪ ಲೀಲಾ ಧನ ವಿಭವ ಮಹಾರಾಶಿಗಳ್ ನಿಲ್ಲವಾರ್ಗಂ
ಪರಮಾರ್ಥಂ ಮೆಚ್ಚೆನಾನೀ ಧರಣಿಯುಳ್ ಇರವಾನೆಂದು ಸಂನ್ಯಾಸನಂಗೆ
ಯ್ದುರುಸತ್ವನ್ ನಂದಿಸೇನ ಪ್ರವರ ಮುನಿವರನ್ ದೇವಲೋಕಕ್ಕೆ ಸಂದಾನ್‌||

“ಕಾಮನಬಿಲ್ಲು, ಮಿಂಚು, ಮಂಜುಗಳಂತೆ ಐಶ್ವರ್ಯ ರೂಪ ವೈಭವಗಳ ಮಹಾರಾಶಿಗಳು ಕೂಡ ಕಾಣಿಸಿಕೊಂಡು ಬೇಗ ನಾಶವಾಗುತ್ತದೆ. ಆಧ್ಯಾತ್ಮಿಕತೆಯನ್ನು ಮೆಚ್ಚುವುದಾದರೆ ನಾನು ಈ ಭೂಮಿಯಲ್ಲಿ ಇರತಕ್ಕವನಲ್ಲ ಎಂದು ತೀರ್ಮಾನಿಸಿ ನಂದಿಸೇನ ಮುನಿಶ್ರೇಷ್ಠರು ದೇವಲೋಕಕ್ಕೆ ಹೋದರು”.

ಹೀಗೆ ನಮ್ಮ ಕನ್ನಡ ನಾಡಿನ ಬಾದಾಮು ಶಾಸನದಲ್ಲಿ ಕಾಣಿಸುವ ಜೀವನ ಸ್ವೀಕಾರ ದೃಷ್ಟಿ ಶ್ರವಣ ಬೆಳ್ಗೊಳ್ದ ಶಾಸನದಲ್ಲಿ ಕಾಣಿಸುವ ಜೀವನ ನಿರಾಕರಣ ದೃಷ್ಟಿ ಈ ಎರಡೂ ದೃಷ್ಟಿಗಳು ಮುಂದಿನ ತಮ್ಮ ಪ್ರಾಚೀನ ಕನ್ನಡ ಕಾವ್ಯ ಪರಂಪರೆಯನ್ನು ಕಟ್ಟಿದ ಜೀವನದೃಷ್ಟಿಗಳಾಗಿವೆ. ಕಾವ್ಯದ ಕಲಾತ್ಮಕತೆ, ರಸದೃಷ್ಟಿಗಳನ್ನು ಸಮರ್ಥವಾಗಿ ಸಮೃದ್ಧವಾಗಿ ಕಾಪಾಡಿಕೊಂಡು ಕೂಡ ಜೀವನದ ಸಾಫಲ್ಯ, ಸಾರ್ಥಕತೆಗಳನ್ನು ಕುರಿತ ನಂಬಿಕೆ, ಚಿಂತನೆಗಳು ಪ್ರಾಚೀನ ಕನ್ನಡದ ಕಾವ್ಯ ಪರಂಪರೆಯನ್ನು ಮುನ್ನಡೆಸಿರುವುದು ಕಾಣುತ್ತದೆ. ಜೈನ, ವೀರಶೈವ, ವೈದಿಕ-ಈ ಧರ್ಮಗಳ ತತ್ವ ಪ್ರಣಾಳಿಕೆಗಳ ನೆಲೆ ನಿಟ್ಟುಗಳಲ್ಲಿಯೆ ಮುಂದಿನ ಕಾವ್ಯ ಮಾರ್ಗಗಳು ಬೆಳೆದು ಬಂದವಾದರೂ ಮನುಷ್ಯನ ಬದುಕಿನ ಸಾರ್ಥಕತೆ, ಸಾಫಲ್ಯದ ನೆಲೆಗಳನ್ನು ಹುಡುಕುವ ಕಾಳಜಿ, ನಿಷ್ಠೆ ನಿರಂತರವಾಗಿ ಇರುವುದು ಕಾಣಿಸುತ್ತದೆ.

ಮುಂದಿನ ಘಟ್ಟ ಎಂದರೆ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರವಲ್ಲದೆ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಇತಿಹಾಸಗಳಲ್ಲೂ ಅತ್ಯಂತ ಮುಖ್ಯ ಎಂದು ಮಾನ್ಯವಾಗಿರುವ ಗ್ರಂಥ “ಕವಿರಾಜ ಮಾರ್ಗ”. ಇದು ಕನ್ನಡದಲ್ಲಿ ದೊರೆತಿರುವ ಮೊಟ್ಟ ಮೊದಲ ಗ್ರಂಥ. ಕ್ರಿ.ಶ.೯ನೆಯ ಶತಮಾನಕ್ಕೆ ಸೇರಿದ್ದು. ಇದನ್ನು ರಚಿಸಿದವನು ರಾಷ್ಟ್ರಕೂಟರ ದೊರೆ ನೃಪತುಂಗ ಎಂದು ಹೇಳಲಾಗಿತ್ತು. ಆದರೆ ವಿದ್ವಾಂಸರ ಪ್ರಕಾರ ಇದನ್ನು ಬರೆದವನು ಅವನ ಆಸ್ಥಾನದಲ್ಲಿದ್ದ ಶ್ರೀವಿಜಯ ಎನ್ನುವವನು. ಕನ್ನಡ ನಾಡಿನ ವಿಸ್ತಾರ, ಅಲ್ಲಿನ ಭಾಷಾ ಪ್ರಭೇದಗಳು ಮತ್ತು ಕನ್ನಡಿಗರ ಬುದ್ಧಿವಂತಿಕೆಯನ್ನು ಕುರಿತ ಅದರಲ್ಲಿನ ಪದ್ಯಗಳು ತುಂಬ ಪ್ರಖ್ಯಾತವಾಗಿವೆ:

ಕಾವೇರಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್ |
ಧಾವಿಸಿದ ಜನಪದಂ ವಸು
ಧಾವಳಯ ವಿಲೀನ ವಿಶದ ವಿಷಯ ವಿಶೇಷಂ ||

ಅದರೊಳಗಂ ಕಿಸುವೊಳಲಾ
ವಿದಿತ ಮಹಾಕೊಪಣನಗರದಾ ಪುಲಿಗೆರೆಯಾ |
ಸದಭಿಸುತ್ತಮಪ್ಪೊಂಕುಂ
ದದ ನಡುವಣ ನಾಡೆ ನಾಡೆ ಕನ್ನಡದ ತಿಱುಳ್ ||

ಪದನರಿದು ನುಡಿಯಲುಂ ನುಡಿ
ದುದನರಿದಾರಯಲುಮಾರ್ಪರಾ ನಾಡವರ್ಗಳ್ |
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ||

ಕನ್ನಡದ- ಎಂದರೆ ಕರ್ನಾಟಕದ –ಉತ್ತರದ ಮೇರೆ ಗೋದಾವರಿ, ದಕ್ಷಿಣದ ಮೇರೆ ಕಾವೇರಿ. ಅಂಥ ಈ ಪ್ರದೇಶ ಭೂಮಂಡಲದಲ್ಲಿ ಉತ್ತಮವಾದ ರಾಜ್ಯವಾಗಿತ್ತು ಎನ್ನುತ್ತಾನೆ ಶ್ರೀ ವಿಜಯ. ಅಲ್ಲದೆ ಇಂದಿನ ಬಿಜಾಪುರ ಜಿಲ್ಲೆಯ ಪಟ್ಟದಕಲ್ಲು, ಇಂದಿನ ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರ- ಈ ನಗರಗಳನ್ನು ಮೇರೆಯಾಗುಳ್ಳ ಭೂಭಾಗದಲ್ಲಿ ತಿರುಳುಗನ್ನಡದ ನಾಡು ಇತ್ತು. ಕನ್ನಡಿಗರ ಕಾವ್ಯ ಕಟ್ಟುವ ಸಹಜ ಶಕ್ತಿ. ವಿಮರ್ಶನ ವಿವೇಕ ಇವುಗಳನ್ನೂ ಮೆಚ್ಚಿ ಕೀರ್ತಿಸುತ್ತಾನೆ. ‘ಕವಿರಾಜ ಮಾರ್ಗ’ವು ಮೂಲತಃ ಕಾವ್ಯ ಲಕ್ಷಣ ಗ್ರಂಥ. ಚಿಕಾಗೊ ವಿಶ್ವವಿದ್ಯಾನಿಲಯದ ಸೆಲ್ಡನ್ ಪೊಲಾಕ್‌ರಂಥ ಅಧುನಿಕ ವಿದ್ವಾಂಸರ ಗಮನವನ್ನೂ ಅದು ಸಳೆದಿದೆ. ಅದನ್ನು ಅವರು ಆಳವಾಗಿ ಅಧ್ಯಯನ ಮಾಡಿ ಹೊಸ ಬಗೆಯಲ್ಲಿ ಈ ಕೃತಿಯನ್ನು ವ್ಯಾಖ್ಯಾನಿಸಿರುವುದು ಒಂದು ವಿಶೇಷ. ಕರ್ನಾಟಕದಲ್ಲಿಯೂ ಇದು ಹೊಸ ಹೊಸ ವಿಮರ್ಶೆ, ವ್ಯಾಖ್ಯಾನಗಳನ್ನು ಅಹ್ವಾನಿಸುತ್ತಲೇ ಇದೆ.

ಕನ್ನಡದ ಆದಿಕವಿ ಪಂಪ. ಕ್ರಿ.ಶ. ೯೦೨ರಲ್ಲಿ ಜನಿಸಿದ ಈತ ಚಾಲುಕ್ಯ ವಂಶದ ರಾಜನಾದ ಎರಡನೆಯ ಅರಿಕೇಸರಿಯ ಆಶ್ರಯದಲ್ಲಿದ್ದ ಇವನ ಕಾವ್ಯಗಳು ಎರಡು: ಜಿನಾಗಮನವನ್ನು ಬೆಳಗುವ ‘ಆದಿ ಪುರಾಣ’ ಮತ್ತು ಲೌಕಿಕವನ್ನು ಪ್ರತಿಪಾದಿಸುವ ‘ವಿಕ್ರಮಾರ್ಜುನ ವಿಜಯ’ ಅಥವಾ ಪಂಪಭಾರತ. ಎರಡರಿಂದಲೂ ಒಂದೊಂದು ಉದಾಹರಣೆ ನೀಡಿದರೆ ಅವನ ಸಂಸ್ಕೃತ ಮಿಶ್ರಿತ ಕನ್ನಡ, ಅಚ್ಚ ಕನ್ನಡ, ಒಂದು ಪದ್ಯದಲ್ಲಿ ಒಂದು ದೊಡ್ಡ ಅಧ್ಯಾಯವನ್ನೇ ಹಿಡಿದಿಡುವ ಅವನ ಶಕ್ತಿ ಮತ್ತು ‘ಹಿತಮಿತ ಮೃದು ವಚನ’ ಎಂಬ ಕೀರ್ತಿಗೆ ಅವನು ಅರ್ಹತೆ ಪಡೆದದ್ದು ಎಲ್ಲ ಸೂಚಿತವಾಗುತ್ತದೆ.

ಪಂಪಕವಿ ‘ಆದುಪುರಾಣ’ದಲ್ಲಿ ಆದಿತೀರ್ಥಂಕರ ವೃಷಭದೇವನಲ್ಲಿ ವೈಭವದ ನಿರಸನ, ಅವನ ಮಕ್ಕಳಾದ ಭರತ, ಬಾಹುಬಲಿಯರಲ್ಲಿ ಅನುಕ್ರಮವಾಗಿ ಅಹಂಕಾರ, ಅಭಿಮಾನ ನಿರಸನಗಳನ್ನು ಕಾಣಿಸಿದ್ದಾನೆ. ಆ ಮೂಲಕ ಬದುಕಿನ ಪರಮಾರ್ಥದ ಪರಿಶೋಧನೆಯನ್ನು ಅದ್ಭುತವಾದ ರೀತಿಯಲ್ಲಿ ಚಿತ್ರಿಸಿದ್ದಾನೆ. ಸಮಸ್ತ ಭೂಮಂಡಲವನ್ನೇ ಗೆದ್ದವನನ್ನು ಎದುರಿಸಿ ಗೆದ್ದು ಸಮಸ್ತ ರಾಜ್ಯ ಸಕಲ ಸಂಪತ್ತಿಗೂ ಒಡೆಯನಾದ ಗಳಿಗೆಯಲ್ಲಿಯೇ ತ್ಯಾಗ-ವೈರಾಗ್ಯದ ಉತ್ತುಂಗತೆಯನ್ನು ಅಂದರೆ ಮನುಷ್ಯ ಘನತೆಯನ್ನು ಬಾಹುಬಲಿ ಮೆರೆಯುತ್ತಾನೆ. ಆ ಸಂದರ್ಭದ ಒಂದು ಪದ್ಯವಿದು:

ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮ್ ಭಟಖಡ್ಗ ಮಂಡಲೋ
ತ್ಪಲ ವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನ್ ಅಯ್ಯನಿತ್ತುದುಮನ್ ಆಂ ನಿನಗಿತ್ತೆನ್ ಇದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಂ ಆಟಿಸಿದಂದು ನೆಗಳ್ತೆ ಮಾಸದೇ?

“ಸೈನಿಕರ ಕತ್ತಿಗಳೆಂಬ ಕನ್ನೈದಿನೆಯ ವನದಲ್ಲಿ ಚಲಿಸುತ್ತಲೇ ಇರುವ ಮನೋಹರಿಯಾದ ಈ ರಾಜ್ಯ ಲಕ್ಷ್ಮಿಯು ನಿನ್ನ ಎದೆಯಲ್ಲೇ ನಿಶ್ಚಲವಾಗಿ ನೆಲೆಸಲಿ. ನಮ್ಮ ತಂದೆ ನನಗೆ ಕೊಟ್ಟಿರುವ ರಾಜ್ಯವನ್ನೂ ನಾನು ನಿನಗೇ ಕೊಟ್ಟಿದ್ದೇನೆ. ಅಣ್ಣ, ಇದೇನಿದು? ನೀನು ಬಯಸಿದ ಹೆಣ್ಣನ್ನೂ ಭೂಮಿಯನ್ನೂ ನಾನು ಬಯಸಿದರೆ ಕೀರ್ತಿ ಮಾಸಿ ಹೋಗುವುದಿಲ್ಲವೆ? –ಎಂದರೆ ಅಪಕೀರ್ತಿ ಬರುವುದಿಲ್ಲವೆ?”

ಕರ್ನಾಟಕದ ಶ್ರವಣಬೆಳಗೊಳದಲ್ಲಿ ೫೭ ಅಡಿ ಎತ್ತರದ ಮನುಷ್ಯಾಕೃತಿಯ ಭವ್ಯಶಿಲ್ಪವಾಗಿ ಕಡೆದು ನಿಲ್ಲಿಸಲಾಗಿರುವ ಗೊಮ್ಮಟೇಶ್ವರ ಈ ಬಾಹುಬಲಿಯೆ. ಆ ಭವ್ಯತೆ, ಎತ್ತರ ಭೌತಿಕ ಭ್ಯವ್ಯತೆ, ಎತ್ತರಗಳನ್ನು ಮಾತ್ರ ಸೂಚಿಸುವಂಥದಲ್ಲ, ತ್ಯಾಗ, ವೈರಾಗ್ಯ, ಕಲಾ ಸೌಂದರ್ಯಗಳ ಔನ್ನತ್ಯಕ್ಕೆ, ಭವ್ಯತೆಗೆ ಶಾಶ್ವತ ಪ್ರತಿಮೆಯಾಗಿಯೂ ಅದು ಇದೆ.

ಪಂಪನ ಎರಡನೆಯ ಕೃತಿಯಾದ “ವಿಕ್ರಮಾರ್ಜುನ ವಿಜಯ”-ಪಂಪ ಭಾರತ ಎಂದೇ ಖ್ಯಾತಿ ಪಡೆದಿದೆ. ಅವನು ಜೈನನಾದುದರಿಂದ ಅವನಿಗೆ ಕೃಷ್ಣನು ಪೂಜ್ಯನು ಅಲ್ಲ, ಮಹಾಭಾರತವು ಲೌಕಿಕ ಕಾವ್ಯವಲ್ಲದೆ ಬೇರೇನೂ ಅಲ್ಲ. ಆದರೂ ಜಗತ್ತಿನಲ್ಲಿ ಇನ್ನು ಇದಕ್ಕೆ ಸಮಾನ ಮಹಾಕಾವ್ಯವಿಲ್ಲ ಎಂಬಂತೆ ಮಹಾಭಾರತವನ್ನು ರಚಿಸಿದ ವ್ಯಾಸರ ವಿಷಯದಲ್ಲಿ ಅವನಿಗೆ ಅಪಾರ ಗೌರವ; ಆದ್ದರಿಂದಲೇ ವಿನಯದಿಂದ.

ವ್ಯಾಸಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನ್ ಈಸುವೆಂ
ಕವಿವ್ಯಾಸನೆನ್ ಎಂಬ ಗರ್ವಮೆನನಗಿಲ್ಲ

‘ವ್ಯಾಸ ಮಹರ್ಷಿಗಳ ವಿಸ್ತಾರವಾದ ಮಾತಿನ ಅಮೃತ ಸಾಗರವನ್ನು ಈಜುತ್ತೇನೆ. ನಾನೇ ಕವಿ ವ್ಯಾಸ ಎಂಬ ಗರ್ವ ನನಗಿಲ್ಲ’ ಎನ್ನುತ್ತಾನೆ. ಪಂಪ ಇಂಥ ವಿನಯವನ್ನು ಮೆರೆಯುತ್ತಲೇ ‘ವ್ಯಾಸಭಾರತ’ವನ್ನು ‘ಪಂಪಭಾರತ’ವಾಗಿ ಪುನರ್ ಸೃಷ್ಟಿಮಾಡಿದ್ದಾನೆ. ತನ್ನದೇ ಆದ ಹೊಸ ದೃಷ್ಟಿ ಹೊಸ ದರ್ಶನವನ್ನು ಮಹಾಭಾರತ ಕಥೆಗೇ ಅವನು ನೀಡಿದ್ದಾನೆ. ತನ್ನ ದೊರೆ ಚಾಲುಕ್ಯ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಡನೆ ಸಮೀಕರಿಸಿ ಮಹಾಭಾರತ ಕಥೆಯ ಮೂಲಭಿತ್ತಿಯ ಮೇಲೆ ಆತ ಕಟ್ಟಿರುವ ಮಹಾಕಾವ್ಯ ಅನನ್ಯವಾಗಿದೆ. ಇಂದಿಗೂ ಹೊಸ ಹೊಸ ವಿಮರ್ಶೆ ವ್ಯಾಖ್ಯಾನಗಳನ್ನು ಆಹ್ವಾನಿಸುತ್ತಿರುವ ಅಪೂರ್ವ ಕಾವ್ಯಗುಣವಿರುವ ಕೃತಿಯಿದು.

ಆ ಭಾರತದ ಕಥಾ ಪ್ರಾರಂಭದಲ್ಲಿಯೇ ಅಧ್ಯಾಯದ ವ್ಯಾಪ್ತಿಗೆ ಬೆಳೆಸಬಹುದಾದ ಒಂದು ಘಟನೆಯನ್ನು ನಾಲ್ಕೇ ಪಂಕ್ತಿಗಳಲ್ಲಿ ಸುಂದರವಾಗಿ ಮತ್ತು ಅತ್ಯಂತ ಧ್ವನಿಪೂರ್ಣವಾಗಿ ಸಂಕ್ಷೇಪಿಸಿರುವ ರೀತಿ ಕವಿಯ ಉಜ್ವಲ ಪ್ರತಿಭೆಗೆ ಸಾಕ್ಷಿಯಾಗಿದೆ:

ಮೃಗಯಾವ್ಯಾಜದಿನೊರ್ಮೆ ಶಂತನು ತೊಳಲ್ತರ್ಪಂ ಪಳಂಚಲ್ಕೆ
ನ್ಮೃಗ ಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೋಲ್ ಸೋಲ್ತು ಕಂಡೊಲ್ದುನ
ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀ ಬಾ ಪೋಪಮೆಂದಂಗೆ ಮೆ
ಲ್ಲಗೆ ತತ್ಕನ್ಯಕೆ ನಾಣ್ಚಿ ಬೇಡುವೊಡೆ ನೀಮೆಮ್ಮಯ್ಯನಂ ಬೇಡಿರೇ||

“ಶಂತನು ಮಹಾರಾಜನು, ಬೇಡೆಯ ನೆಪದಿಂದ, ಒಮ್ಮೆ ಸುತ್ತಾಡುತ್ತಾ ಹೋಗುತ್ತಿರಲು, ಜಿಂಕೆಯ ಕಣ್ಣಿನಂತಹ ಆ ಸುಂದರಿಯ ಸುಗಂಧವು ತಟ್ಟಿ ದುಂಬಿಯಂತೆ (ಆಕೆಗೆ) ವಶನಾಗಿ, ಅವಳನ್ನು (ಹುಡುಕಿಕೊಂಡು ಹೋಗಿ) ಕಂಡು, ತನಗೆ ಅವಳಲ್ಲಿ ಪ್ರೀತಿ ಇದೆ ಎಂದು ತೋರಿಸಲು ದಿವ್ಯವನ್ನು (ಒಂದು ರೀತಿಯ ಪರೀಕ್ಷೆ) ಹಿಡಿಯುವಂತೆ ಅವಳನ್ನು ಹಿಡಿದು ‘ನಡೆ ಹೋಗೋಣ’ ಎಂದರೆ, ಆ ಕನ್ಯೆ, ನಾಚಿ, ನನ್ನನ್ನು (ವಧುವಾಗಿ ಬೇಡುವುದಾದರೆ) ನಮ್ಮ ತಂದೆಯ ಬಳಿ ಕೇಳಿ (ಎಂದಳು).”

ಈಗ ನಾನು ಉದ್ಧರಿಸಿದ ಎರಡು ಪದ್ಯಗಳೂ ಎಷ್ಟು ಮಹತ್ವದವೆಂದರೆ ಜಿ.ಎಚ್. ನಾಯಕ, ಪೂರ್ಣಚಂದ್ರ ತೇಜಸ್ವಿ, ಕೆ.ವಿ. ನಾರಾಯಣರಂಥ ನಮ್ಮ ಮಹತ್ವದ ವಿಮರ್ಶಕರು, ವಿದ್ವಾಂಸರು ಅವುಗಳ ಮೇಲೆಯೇ ಪ್ರತ್ಯೇಕ ಲೇಖನಗಳನ್ನು ಬರೆದಿದ್ದಾರೆ; ಹೊಸ ಹೊಸ ಹೊಳಹುಗಳಿಂದ ಕೂಡಿದ ವ್ಯಾಖ್ಯಾನಗಳನ್ನು ಮಾಡಿದ್ದಾರೆ. ಪಂಪ ಜೈನ. ಧರ್ಮ ಯಾವುದೇ ಇರಲಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ತಿಳುವಳಿಕೆ ಇರುವ ಆ ಕವಿ ಎಲ್ಲ ಕಾಲ, ದೇಶ, ಸಂದರ್ಭಗಳಿಗೂ ಸಲ್ಲುವಂಥ ಅರಿವನ್ನು ರಸಪೂರ್ಣವಾಗಿ ಶೋಧಿಸಿ ಕೊಡುವ ಕೆಲಸವನ್ನು ಈ ಕಾವ್ಯಗಳಲ್ಲಿ ಮಾಡಿದ್ದಾನೆ.

ಮುಂದಿನ ಪ್ರಮುಖ ಕವಿ ‘ಶಕ್ತಿ ಕವಿ’ ಎಂದೇ ಹೆಸರಾದ ಕ್ರಿ.ಶ. ೯೯೩ರಲ್ಲಿದ್ದ ರನ್ನ ಕಲ್ಯಾಣ ಚಾಲುಕ್ಯರ ರಾಜನಾದ ಆಹವಮಲ್ಲ ತೈಲಪನ ಆಶ್ರಯದಲ್ಲಿದ್ದವನು. ‘ಅಜಿತ ತೀರ್ಥಂಕರ ಪುರಾಣತಿಲಕ’ ಮತ್ತು ‘ಗದಾಯುದ್ಧ’ ಎಂದು ಪ್ರಸಿದ್ಧವಾಗಿರುವ ಸಾಹಸಭೀಮ ವಿಜಯವನ್ನು ರಚಿಸಿದವನು. ಅವನ ಕಾವ್ಯ ಕೌಶಲದಲ್ಲಿ ಎದ್ದು ಕಾಣುವ ‘ಶಕ್ತಿ’ಯನ್ನು ಸೂಚಿಸಲು ಒಂದು ಪದ್ಯ:

ವೈಶಂಪಾಯನ ಸರೋವರದಲ್ಲಿ ಅಡಗಿದ್ದ ದುರ್ಯೋಧನನು, ಭೀಮನ ಮೊದಲಿಕೆಯ ಮಾತುಗಳನ್ನು…. ನೀರಿನಲ್ಲಿ ಮೀನುಗಳು ಇರುತ್ತವೆ, ಶೂರರು ಇರುತ್ತಾರೆಯೇ ಮುಂತಾದುವನ್ನು-ಕೇಳಿ ನೀರೊಳಗಿರ್ದುಂ ಬೆಮರ್ತನ್ ಉರಗ ಪತಾಕನ್-ಅನಂತರ

ರಸೆಯಿಂ ಕಾಲಾಗ್ನಿರುದ್ರಂ ಪೊರೆಮಡುವವೊಲಂತಾ ಸರೋಮಧ್ಯದಿಂ ಸಾ
ಹಸ ಗರ್ವಾಲಂಕೃತಂ ತೊಟ್ಟನೆ ಕೊಳೆ ಪೊರಮಟ್ಟು ಎಲ್ಲಿದಂ ಭೀಮನೆಂದೆ
ಣ್ದೆಸೆಯಂ ನೋಡುತ್ತ ಮತ್ತದ್ಭುತ ನಟನಿಟಿಲಾಲೋಲ ಕೀಲಾಕ್ಷಿವೋಲ್ ದ
ಳ್ಳಿಸೆ ಕೋಪಾರಕ್ತ ನೇತ್ರಂ ನಿಜಭುಜಗದೆಯಂ ತೂಗಿದಂ ಧಾರ್ತರಾಷ್ಟ್ರಂ ||

“ಭೂಮಿಯ ಒಳಗಿಂದ ಪ್ರಳಯಕಾಲದ ಅಗ್ನಿರುದ್ರನು ಎದ್ದು ಬರುವಂತೆ ಆ ಸರೋವರದ ಮಧ್ಯದಿಂದ, ಸಾಹಸ, ಗರ್ವಗಳೇ ಅಲಂಕಾರವಾಗಿದ್ದ ದುರ್ಯೋಧನನು, ದಿಢೀರನೆ ಮೇಲಕ್ಕೆ ಬಂದು ‘ಎಲ್ಲಿದ್ದಾನೆ ಭೀಮಸೇನ’ ಎಂದು ಎಂಟೂ ದಿಕ್ಕುಗಳಲ್ಲಿ ಹುಡುಕುತ್ತಾ (ರುದ್ರನ) ಮೂರನೆಯ ಕಣ್ಣಿನಿಂದ ಹೇಗೋ ಹಾಗೆ ಕ್ರೋಧವು ಹೊಮ್ಮುತ್ತಿರಲು, ಕೋಪದಿಂದ ಕೆಂಪಾದ ಕೆಣ್ಣುಗಳುಳ್ಳವನಾಗಿ ಆ ಧೃತರಾಷ್ಟ್ರ ಪುತ್ರನು ತನ್ನ ಗದೆಯನ್ನು ತೂಗಿದನು.”

ಇವನೇಯೇನೀರೊಳಗಿದ್ದೂ ಬೆವರಿದ ದುರ್ಯೋಧನ !

ವೀರ-ರೌದ್ರ ರಸಗಳ ರಾಗ ಭಾವಗಳನ್ನು ಕಾವ್ಯ ಎಷ್ಟು ಸಮರ್ಥವಾಗಿ, ಶಕ್ತಿಪೂರ್ಣವಾಗಿ ಅಭಿವ್ಯಕ್ತಿಸಬಹುದೆಂಬುದಕ್ಕೆ ರನ್ನನ ‘ಗದಾಯುದ್ಧ’ಕಾವ್ಯ ಒಂದು ಅಪೂರ್ವ ಉದಾಹರಣೆಯಾಗಿದೆ.

ಹನ್ನೆರಡನೆಯ ಶತಮಾನದ ಶಿವಶರಣರು ಧಾರ್ಮಿಕ-ಸಾಮಾಜಿಕ ಹರಿಕಾರರು. ಬುದ್ಧನಂತೆ ಜನ ಸಾಮಾನ್ಯರನ್ನು ವೈದಿಕ ಕರ್ಮಗಳ ಸಂಕೋಲೆಗಳಿಂದ ಪಾರುಮಾಡಲು ಕನ್ನಡ ಭಾಷೆಯನ್ನು-ಬುದ್ಧ ಪಾಳಿ ಭಾಷೆಯನ್ನು ಹೇಗೋ ಹಾಗೆ-ಬಳಸಿಕೊಂಡವರು. ಜನಮಾನಸದ ಆಧ್ಯಾತ್ಮಿಕ ಹಾಗೂ ನೈತಿಕ ಉನ್ನತಿಗಾಗಿ ಅವರು ಪ್ರಯತ್ನಿಸಿದರು. ತಮ್ಮ ಈ ಚಳುವಳಿಯಲ್ಲಿ ಸ್ತ್ರೀಯರನ್ನೂ ಸಮಾಜದ ಕೆಳವರ್ಗದವರನ್ನೂ ಸೇರಿಸಿಕೊಂಡು ಅವರಿಗೆ ಸಮಾನ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟರು. ಒಟ್ಟಿನಲ್ಲಿ ಹಿಂದುಳಿದವರ, ಸ್ತ್ರೀಯರ ಶತಮಾನಗಳ ಮೌನಕ್ಕೆ ಮಾತುಕೊಟ್ಟವರು ಅವರು.

ಕನ್ನಡ ಭಾಷೆಗೆ ಒಂದು ಹೊಸ ಬನಿಯನ್ನು ಒಂದು ಹೊಸ ಶಕ್ತಿಯನ್ನು ಕೊಡಲು ಈ ಶರಣರಿಗೆ ಸಾಧ್ಯವಾದದ್ದು ಸಾಮೂಹಿಕವಾಗಿ ಅವರ ಹೃದಯದಲ್ಲಿದ್ದ ಒಂದು ಒತ್ತಡ, ಅವರಲ್ಲಿ ಉಕ್ಕುತ್ತಿದ್ದ ಒಂದು ಪ್ರತಿಭಟನಾ ಆವೇಗ; ಓದು ಬರಹ ಬಾರದಿದ್ದರೂ ಸರಿ ನಮ್ಮ ಹೃದಯದ ಉದ್ವೇಗ, ಉಮ್ಮಳಗಳನ್ನೂ ಅತ್ಯಂತ ತೀವ್ರವಾದ ಸಾಮಾಜಿಕ ಕಳಕಳಿಯನ್ನೂ ನುಡಿದು ತೋರಿಸುತ್ತೇವೆ. ಓದು ಬರಹ ಬಾರದವರಿಗೂ ನಮ್ಮ ತುಡಿತಗಳನ್ನು ಮುಟ್ಟಿಸುತ್ತೇವೆ ಎಂಬ ಆತ್ಮ ವಿಶ್ವಾಸ ಅವರದು.

ಬಸವಣ್ಣನವರ ಒಂದು ವಚನ ಹೀಗಿದೆ:

ಉಳ್ಳವರು ಶಿವಾಲಯದ ಮಾಡಿಹರು
ನಾನೇನು ಮಾಡುವೆ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಳಶವಯ್ಯಾ
ಕೂಡಲ ಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

ತನ್ನ ದೇಹ, ಅಂಗಾಂಗಗಳನ್ನೇ ದೇವಾಲಯ, ದೇವಾಲಯದ ಅಂಗೋಪಾಂಗಗಳು ಎಂದು ತನ್ನ ದೈವ ಕೂಡಲ ಸಂಗಮದೇವನ ಎದುರು ಹೇಳಿಕೊಳ್ಳುವ ಭಕ್ತಿ ಭಂಡಾರಿ ಬಸವಣ್ಣನ ಆತ್ಮಸ್ಥೈರ್ಯ ಅದ್ಭುತವಾದದ್ದು. ‘ನಾನೇನ ಮಾಡುವೆನಯ್ಯಾ’ ಎಂಬ ಮಾತಿನಲ್ಲಿರುವ ವಿನಯ, ತನ್ನ ಲೌಕಿಕ ಬಡತನದ ನಿವೇದನೆ ಇದೆ. ಆದರೆ ಆ ವಿನಯದಲ್ಲಿ ತುಂಬಿರುವ ಆಧ್ಯಾತ್ಮಕ ಶ್ರೀಮಂತಿಕೆ ಅನನ್ಯವಾದದ್ದು. ಬಸವಣ್ಣ, ಮಹಾದೇವಿಯಕ್ಕ, ಅಲ್ಲಮ ಮುಂತಾದ ಶಿವಶರಣರು ಮಾಡುವ ಮಾತು ಕೇವಲ ಮಾತಲ್ಲ, ‘‘ಮಾತೇ ಜ್ಯೋತಿರ್ಲಿಂಗ.’ ಆಡಿದಂತೆ ನಡೆದು ಬಾಳಿದವರು ಅವರು. ಪ್ರತಿ ವಚನವೂ ಶರಣರು ಇಚ್ಟಲಿಂಗದ ಎದುರು ಆ ಲಿಂಗಕ್ಕೆ ಕೊಟ್ಟ ವಚನ ಅಂದರೆ ಭಾಷೆ- ಪ್ರಮಾಣ ವಚನ. ‘ವಚನಗಳ ಒಂದೊಂದು ಮಾತೂ ಭಕ್ತರ, ಶರಣರ ಆತ್ಮ ಸ್ಥೈರ್ಯವನ್ನು ಭಕ್ತಿ ನಿಷ್ಠೆಯನ್ನು ಒರೆಹಚ್ಚುವ ಮಾತುಗಳು. ಇಂಥ ಪರಂಪರೆಯೊಂದು ಕನ್ನಡ ಸಾಹಿತ್ಯದಲ್ಲಿ ಸಾಮೂಹಿಕವಾಗಿ ಬಂದಿತು. ಬೆಳೆಯಿತು ಎಂಬುದು ವಿಸ್ಮಯ, ಆನಂದ ಉಂಟು ಮಾಡುವ ಸಂಗತಿ. ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿ ಎಲ್ಲಿಯೂ ಇದಕ್ಕೆ ಸರಿಗಟ್ಟುವಂತೆ ಮಾನವ ಘನತೆಯನ್ನು ಹೀಗೆ ಸಾಮೂಹಿಕವಾಗಿ ಎತ್ತರಿಸಿದ ಉದಾಹರಣೆಗಳಿಲ್ಲ ಎಂಬುದು ವಿದ್ವಾಂಸರ ಅಭಿಮತ, ಚಿಕಾಗೊ ವಿಶ್ವವಿದ್ಯಾನಿಲಯದ ಸೌತ್ ಏಷಿಯನ್ ಸ್ಟಡೀಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರಾಗಿದ್ದ ಕನ್ನಡ ಕವಿ ಡಾ|| ಎ.ಕೆ. ರಾಮಾನುಜನ್ ಶರಣರ ಆಯ್ದ ವಚನಗಳ ಸಂಕಲನವೊಂದನ್ನು Naming the Nameless ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇದು ಆಸಕ್ತರು ನೋಡಬೇಕಾದಂಥ ಪುಸ್ತಕ. ನಾನು (ಡಾ|| ಪ್ರಭು ಶಂಕರ) ಮತ್ತು ರೊವೇನಾ ಹಿಲ್ ಸೇರಿ ಸಂಪಾದಿಸಿರುವ ಶರಣರ ವಚನಗಳ ಸಂಕಲನ Naming the Nameless ಇಂಗ್ಲಿಷಿನಲ್ಲಿದೆ. ಆಸಕ್ತರಿಗೆ ಅದರಿಂದಲೂ ಪ್ರಯೋಜನವಾದೀತೆಂಬುದು ನನ್ನ ನಂಬಿಕೆ.

ವೈದಿಕತೆಯ ವಿರೋಧ, ಸತ್ಯ ಸಾಕ್ಷಾತ್ಕಾರಕ್ಕೆ ನೇರ ದಾರಿ ಎರಡನ್ನೂ ಒಳಗೊಂಡ ಒಂದು ವಚನ ಮಹಾದೇವಿ ಅಕ್ಕನದು:

ವೇದಶಾಸ್ತ್ರ ಪುರಾಣ ಆಗಮಂಗಳೆಲ್ಲವು
ಕೊಟ್ಟಣದ ಉಟ್ಟುತ್ತ ನುಚ್ಚುತೌಡು ಕಾಣಿ ಭೋ.
ಇದ್ದ ಕುಟ್ಟಲೇಕೆ, ಕುಸುಕಲೇಕೆ?
ತ್ತಲಿತ್ತ
ಹರಿವ ಮನದ ಶಿರವನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ

ಅಕ್ಕಮಹಾದೇವಿಯು ‘ಲೌಕಿಕ ಗಂಡರ ಒಲೆಗೆ ಹಾಕು’ ಎಂದು ಹೇಳಿ ಚೆನ್ನಮಲ್ಲಿಕಾರ್ಜುನ ಶಿವನನ್ನೇ ಗಂಡನೆಂದು ಘೋಷಿಸಿ ಲೌಕಿಕದ ಹಂಗು ತೊರೆದದ್ದರ ಸಂಕೇತವಾಗಿ ಮೈ ಬೆತ್ತಲೆ ಮನ ಬೆತ್ತಲೆ ಆಗಿ ಆಧ್ಯಾತ್ಮವನ್ನೇ ಬದುಕು ಮಾಡಿಕೊಂಡು ಬಾಳಿದ, ಯುಗದ ವಿಸ್ಮಯದ ಮಹಾಮಹಿಳೆ. ವೈರಾಗ್ಯ ಶೃಂಗಾರಗಳ ಅದ್ಬುತ ಸಂಗಮಕ್ಕೆ ಈಕೆ ಅರ್ಥಪೂರ್ಣ ಉದಾಹರಣೆ.

ಶಿವಶರಣರಲ್ಲಿ ಜ್ಞಾನದ ದೃಷ್ಟಿಯಿಂದಲೂ, ಅನುಭಾವದ ದೃಷ್ಟಿಯಿಂದಲೂ, ಶಬ್ದ ಶಿಲ್ಪದ ವಿನ್ಯಾಸದ ದೃಷ್ಟಿಯಿಂದಲೂ ಮೇರುಸ್ಥನದಲ್ಲಿರುವವನು ಅಲ್ಲಮ ಪ್ರಭು.

ಅವನು ಅನುಭಾವವನ್ನು ಸಾರುವಂಥ ಒಂದು ವಚನವನ್ನು ಇಲ್ಲಿ ಗಮನಿಸಬಹುದು:

ಸ್ಫಟಿಕದ ದೀಪದಂತೆ ಒಳಹೊರಗು ಇಲ್ಲ ನೋಡಾ
ವಿಗಡ ಚರಿತ್ರಕ್ಕೆ ನಾ ಬೆರಗಾದೆನು.
ನೋಡಿದರೆ ಕಾಣಬರುತ್ತಿದೆ, ಮುಟ್ಟುವರೆ ಕೈಗೆ ನಿಲುಕದು
ಹೊದ್ದಿದರೆ ಸಮೀಪ ಹತ್ತ ಸಾರಿದಡೆ ಅತ್ತ
ಆಕಾರ ನಿರಾಕಾರವ ನುಂಗಿ, ಬಯಲು ಸಮಾಧಿಯಲ್ಲಿ ನಿಲುಕಿತ್ತು ನೋಡಾ.
ದುರುಶನದಿಂದ ಅಮೃತಾಹಾರವಾಯಿತ್ತು, ಬೆರಸಿದಡೆ ಇನ್ನೆಂತೋ ಗುಹೇಶ್ವರಾ||

ಮುಂದಿನದು ನಡುಗನ್ನಡ ಯುಗ. ಈ ಯುಗದ ಮೇರು ಕವಿ, ಕನ್ನಡ ಸಾಹಿತ್ಯದ ಮೇರುಕವಿಗಳಲ್ಲಿ ಒಬ್ಬನೂ ಹೌದು- ನಾರಣಪ್ಪ ಎಂದು ಜನಮಾನಸದಲ್ಲಿ ನೆಲೆಸಿರುವ ಕುಮಾರವ್ಯಾಸ. ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಭಾಮಿನೀ ಷಟ್ಪದಿಯಲ್ಲಿ ಹಾಡಿ- ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು- ಎಂದು ಆಧುನಿಕ ಕನ್ನಡ ಸಾಹಿತ್ಯದ ಮಹಾಕವಿ ಕುವೆಂಪು ಅವರಿಂದ ನುಡಿ ನಮನವನ್ನು ಸ್ವೀಕರಿಸಿದ ರೂಪಕ ಸಾಮ್ರಾಜ್ಯ ಚಕ್ರವರ್ತಿ. ಇಂಗ್ಲಿಷ್ ನಾಟಕಕಾರ ಷೇಕ್ಷ್‌ಪಿಯರ್‌ನಂತೆ ಬಾಯಿ ತೆರೆದರೆ ಉಪಮ ರೂಪಕಗಳೆಲ್ಲೇ ಮಾತನಾಡುವ ಕವಿ ಶ್ರೇಷ್ಠ ಈತ. ಪ್ರಾಚೀನ ಕನ್ನಡ ಸಾಹಿತ್ಯದ ಎರಡು ಶಿಖರಗಳೆಂದರೆ ಆದಿಕವಿ ಪಂಪ ಮತ್ತು ಕವಿಕುಲತಿಲಕ ಕುಮಾರವ್ಯಾಸ. ಇಷ್ಟೆಲ್ಲ ಮಹಿಮೆಯನ್ನು ಸಾಧಿಸಿದ್ದರೂ ಅವನು ತನ್ನ ಬಗ್ಗೆ ಹೇಳುವುದನ್ನು ಕೇಳಿ: “ವೀರ ನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸ !” ಬಿ.ಎಂ. ಶ್ರೀಕಂಠಯ್ಯನವರಂಥ ವಿಮಶ್ಶಕರು ಈತನನ್ನು ಕುರಿತು ಹೇಳುತ್ತಾರೆ:

“ಕನ್ನಡ ಕಾವ್ಯ ಸೃಷ್ಟಿಯ ನೆಲೆಯಲ್ಲಿ ಈತನ ನೆಲೆ ನಟ್ಟನಡು, ನೆತ್ತಿಯ ಮುಡಿ. ಹಳೆಯ, ಹೊಸ ಕನ್ನಡದ ತಲೆಯ ಕಿರೀಟ. ಹಳ್ಳಿ ಹಳ್ಳಿಯಲ್ಲಿ ಅಂದೂ ಇಂದೂ ಗಮಕ ಶಿರೋಮಣಿಗಳಿಂದ ನಾಡು ನಾಡೇ ಮೊಳಗಿ ರೋಮಾಂಚನಗೊಳ್ಳುವಂತೆ ರಸವನ್ನ, ಇಂಪನ್ನ, ಲಯವನ್ನ ತಾನವನ್ನ ಮಾತಿನ ಹರಹನ್ನ ಛಂದಸ್ಸಿನ ಕುಣಿತವನ್ನ ಲೀಲಾಜಾಲವಾಗಿ ಹೊಮ್ಮಿಸಿ ಹರಿಯಿಸಿದ ಮಾಟಗಾರ ಕುಮಾರವ್ಯಾಸ. ಅಂದರೆ ಗದುಗಿನ ವೀರ ನಾರಾಯಣನ ಭಕ್ತ ನಾರಾಣಪ್ಪ. ಕನ್ನಡದ ಹೊಸ ಹುಟ್ಟಿನಲ್ಲಿ ಹೊಸ ಮಾರ್ಗಕ್ಕೆ ಹೊಸ ಶಕ್ತಿಗೆ ದಿಕ್ಸೂಚಿ, ಧ್ರುವತಾರೆ. ವೇದವ್ಯಾಸರ ಪ್ರೇಮಕುಮಾರ, ಕುಮಾರ ವ್ಯಾಸನೆಂದರೂ ಸರಿ-ವೀರ ನಾರಾಯಣನ ಪ್ರೇಮಕಿಂಕರ, ನಮ್ಮ ನೆಚ್ಚಿನ ನಾರಾಣಪ್ಪನೆಂದರೂ ಸರಿ.”

ಯೇಟ್ಸ್ ಕವಿ ಹೇಳಿದಂತೆ Wisdom speaks first in images- ಪ್ರತಿಭೆ ಬಾಯಿತೆರೆಯುವುದೇ ಪ್ರತಿಮೆಗಳಲ್ಲಿ. ಈ ವಿಷಯದಲ್ಲಿ ಕವಿ ಕುಮಾರವ್ಯಾಸನ ಸಂಚಾರವೆಲ್ಲ ಶಿಖರಗಳಲ್ಲೇ. ಅವನಿಗೆ ಸಾಧಾರಣ ನೆಲ, ಪ್ರಸ್ಥಭೂಮಿ ಎನ್ನುವುದೇ ಇಲ್ಲ.

ಯಾರು ವಿವೇಕ ಹೇಳಿದರೂ ಅದಕ್ಕೆ ಕಿವಿಗೊಡದೆ ಕೌರವ ಸಂಧಿ ಮುರಿದು ಸಂಗ್ರಾಮವನ್ನೇ ನಿಶ್ಚಯಿಸಿ ಕೃಷ್ಣನನ್ನು ತಿರುಗಿ ಕಳಿಸುತ್ತಾನೆ. ಕೃಷ್ಣ ಮರಳಿ ಹೋಗುವಾಗ ಅರ್ಧ ದಾರಿಯವರೆಗೆ ಕಳಿಸಿ ಬರಲೆಂದು ಜೊತೆಗೆ ಬಂದಿದ್ದ ಕರ್ಣನನ್ನು ಏಕಾಂತಕ್ಕೆ ಕರೆದು ಕೃಷ್ಣ ಅವನ ಹುಟ್ಟಿನ ಗುಟ್ಟನ್ನು ಹೇಳುತ್ತೇನೆ. ಕುಂತೀ ಪುತ್ರರಲ್ಲಿ ಹಿರಿಯನಾದ ಕರ್ಣನೇ ಹಸ್ತಿನಾವತಿಯ ಸಿಂಹಾಸನಕ್ಕೆ ಅಧಿಕಾರಿ. ತನ್ನ ಜೊತೆ ಬಂದರೆ ಕೌರವ-ಪಾಂಡವರ ನಡುವಿನ ದಾಯಾದಿ ಕಲಹ ಕೊನೆಗೊಂಡು ಕರ್ಣನೇ ರಾಜವೈಭವದಲ್ಲಿ ಮೆರೆಯುವ ಸುವರ್ಣಾವಕಾಶ ಇದೆ ಎಂಬ ಪ್ರಲೋಭನವನ್ನು ಕೃಷ್ಣ ಒಡ್ಡುತ್ತಾನೆ. ಆಗ ಕರ್ಣ ಹೇಳುವುದನ್ನು ನೋಡಿ:

ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ |
ಹೊರೆದ ದಾತಾರಂಗೆ ಹಗೆದರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ||

ಸಕಲ ಸಿರಿಸಂಪತ್ತು ದಕ್ಕುತ್ತದೆ ಎಂಬ ಆಸೆ ತೋರಿಸಿದರೂ, ಈಗ ಶತ್ರುಪಕ್ಷದಲ್ಲಿರುವವರು ಬೇರಾರೋ ಆಗಿರದೆ ಒಡಹುಟ್ಟಿದವರೇ ಎಂಬ ಸತ್ಯ ಗೊತ್ತಾಗಿ ಸಂಭ್ರಮಿಸಬಹುದಾದ ಸಂದರ್ಭದಲ್ಲಿಯೂ, ಕೌರವನ ಋಣನೆನಕೆಯ ಔನ್ನತ್ಯವನ್ನು ಮೆರೆಯುವ ಕರ್ಣನ ನಿಲುವು ಮನುಷ್ಯತ್ವದ ಘನತೆಯನ್ನು ಮೌಲ್ಯ ಪ್ರಜ್ಞೆಯ ಗೆಲುವನ್ನು ಸಾರುವಂತಿದೆ. ಈ ಪದ್ಯದ ಪದಬಂಧ, ಅದರ ಧ್ವನಿಶಕ್ತಿ, ಅದು ಕಟ್ಟಿಕೊಡುವ ಭಾವಸೂಕ್ಷ್ಮತೆಗಳು ಅನನ್ಯವಾಗಿದೆ ಪರಿಭಾವಿಸಿದಷ್ಟೂ ಅರ್ಥ ಮತ್ತು ಭಾವಸೂಕ್ಷ್ಮಗಳ ಪ್ರಭಾವಳಿ ಕಟ್ಟುತ್ತಾ ಹೋಗುತ್ತದೆ. ಇಂದಿನ ಭಾರತದ ಮೌಲ್ಯರಹಿತ, ಲಜ್ಜಾರರಹಿತ ಲಕ್ಷಾಂತರಗಳ ಭರಾಟೆಯ ಹಿನ್ನೆಲೆಯಲ್ಲಿ ಈ ಚಿತ್ರ ಇನ್ನೂ ಢಾಳಾಗಿ ಕಾಣುತ್ತದೆ. ಅಲ್ಲವೆ?

ಎಷ್ಟೋ ಕವಿ-ಕಾವ್ಯಗಳ ಉದಾಹರಣೆಗಳನ್ನು ನೀಡುವುದಿರಲಿ, ಅವುಗಳನ್ನು ಹೆಸರಿಸಲೂ ಸಾಧ್ಯವಾಗಿಲ್ಲ. ನೂರಾರು ಜನ ವಚನಕಾರರು, ಅಷ್ಟೇ ಸಂಖ್ಯೆಯ ಹರಿದಾಸರು, ಹರಿಹರ, ರಾಘವಾಂಕ, ನಾಗಚಂದ್ರ ನೇಮಿಚಂದ್ರ, ರುದ್ರಭಟ್ಟ ಜನ್ನ, ಲಕ್ಷ್ಮೀಶ, ಸರ್ವಜ್ಞ, ಷಡಕ್ಷರ ದೇವ, ರತ್ನಾಕರ ವರ್ಣಿ, ಹಳೆಯ ಪರಂಪರೆಯ ಕೊನೆಯ ಕವಿಯೂ, ಹೊಸಗನ್ನಡ ಕಾವ್ಯದ ಮುಂಗೋಳಿಯೂ ಆದ ಮುದ್ದಣ್ಣ-ಈ ಎಲ್ಲರೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾಪುರುಷರು.

ಹನ್ನೆರಡನೆಯ ಶತಮಾನದ ವಚನಕಾರ್ತಿಯರ ಅನಂತರ ಹೆಸರಿಸಬೇಕಾದವಳು ಹದಿನೆಂಟನೆಯ ಶತಮಾನದ ಸಂಚಿಯ ಹೊನ್ನಮ್ಮನೆಂಬ ಕವಯಿತ್ರಿ. ಈಕೆ ಚಿಕ್ಕದೇವ ರಾಜರ ಅರಮನೆಯಲ್ಲಿದ್ದ ಊಳಿಗದ ಹೆಣ್ಣು. ಆ ಕಾಲದಲ್ಲಿ ಆಕೆ ಹೇಗೆ ವಿದ್ಯಾವತಿ ಯಾದಳೋ, ಹಾಗೂ ಧೈರ್ಯವಾಗಿ ಹೇಗೆ ಕಾವ್ಯರಚನೆ ಮಾಡಿದಳೊ ಅದೊಂದು ಸೋಜಿಗ. ಅರಸರ ಪ್ರೇರಣೆಯಿಂದ ಸಿಂಗರಾರ್ಯರಲ್ಲಿ ವ್ಯಾಸಂಗ ಮಾಡಿ ‘ಹದಿಬದೆಯ ಧರ್ಮ’ (ಪತಿವ್ರತಾ ಧರ್ಮ) ಎಂಬ ಕಾವ್ಯವನ್ನು ಸಾಂಗತ್ಯದಲ್ಲಿ ರಚಿಸಿದ್ದಾಳೆ. ಆಕೆಯದು ಸಹಜ ಕಾವ್ಯ ಪ್ರತಿಭೆ. ‘ಹೆಣ್ಣು ಹೆಣ್ಣು’ ಎಂದು ಛೀಗರೆಯುವವರನ್ನು ಆಕೆ ಝಂಕಿಸಿದ್ದಾಳೆ:

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ |
ಪೆಣ್ಣಲ್ಲವೆ ಪೊರೆದವಳು |
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು |
ಕಣ್ಣು ಕಾಣದ ಗಾವಿಲರು |
ಕುವರನಾಡೊಡೆ ಬಂದ ಗುಣವೇನದರಿಂದೆ |
ಕುವರಿಯಾದೊಡೆ ಕುಂದೇನು?

ಅನಂತರ ಹಳಗನ್ನಡ, ನಡುಗನ್ನಡಗಳನ್ನಾಗಲಿ, ಎರಡನೆಯ ಅಕ್ಷರದ ಪ್ರಾಸವನ್ನಾಗಲೀ ಪೂರ್ಣವಾಗಿ ಬಿಡದೆ, ಇಟ್ಟುಕೊಳ್ಳಲೂ ಸಾಧ್ಯವಾಗದೆ ರಚಿಸಿದ ಬೇಕಾದಷ್ಟು ಕಥೆ, ಕವನಗಳು ರಚಿತವಾದವು. ಅನೇಕ ಕಾದಂಬರಿಗಳು ಹೊಸಗನ್ನಡ ಸಾಹಿತ್ಯೋದಯವನ್ನು ಸಾರಿದುವು. ಶಿಶುನಾಳ ಷರೀಫರ (೧೮೧೯-೧೮೮೯) ಅನುಭಾವ ಕಾವ್ಯ, ಬಾಲಲೀಲಾ ಮಹಾಂತ ಶಿವಯೋಗಿಗಳು (೧೮೨೯-೧೯೫೮) ಅಡ್ಡ ಪಲ್ಲಕ್ಕಿ ಇತ್ಯಾದಿಗಳನ್ನು ನಿರಾಕರಿಸಿ ಬರೆದ ಷಟ್ಪದಿ-ಇಂಥವು ಬೇಕಾದಷ್ಟಿದ್ದರೂ ನಾವು ಭಾವಗೀತೆ ಎಂದು ಕರೆಯಬಹುದಾದ ‘ವೈಯಕ್ತಿಕ ಅನುಭವವು ಕಾವ್ಯವಾದ ರೀತಿ’ ತುಂಬ ತುಂಬ ಅಪರೂಪವಾಗಿದ್ದುವು. ಆದರೂ, ಅಂಥ ಕಾಲದಲ್ಲೂ ಹುಟ್ಟಿದ, ಮನಸ್ಸನ್ನು ಮುದಗೊಳಿಸುವ ಒಂದು ಪುಟ್ಟ ಕವನವನ್ನು ಗಮನಿಸಬಹುದು. ಅದು ಸೈಕಲ್ಲನ್ನು ಕುರಿತ ಪದ್ಯ. ಸಿದ್ಧೇಶ್ವತ ಮಳೀಮಠ ಎಂಬುವರು ಅತ್ಯಧಿಕ ಸಂತಸದಿಂದ ಇಪ್ಪತ್ತು ರೂಪ್ಯವ ಕೊಟ್ಟುಕೊಂಡ “ಕಾಲುಗಾಡಿ”ಯ ಸವಾರಿಯ ಬಗೆಗೆ ತಮ್ಮ ಅನುಭವವನ್ನು ಹೀಗೆ ಹೇಳುತ್ತಾರೆ:

ಬಲು ಭಯದಿ ಸತ್ತಿರುವ ನರಗಳ
ಸೆಳೆದು ಬಿಗಿದನು ಕಟ್ಟಿ ದವಡೆಯ
ಊತದುಸುರನು ಬಿಡದಲೆದೆಯನು ಗಟ್ಟಿವಿಡಿದಹನು |
ನಿಲದೆ ಗಣ ಗಣ ಗಂಟೆ ಹೊಡೆಯುತ
ಹಲವು ಕುತ್ತನು ದಾಂಟಿ ಗುಡ್ಡದ
ಪೊಳಲನ ಹೊರಗಿರ್ಪ ಇಳುಕಲಿನ ಮಾರ್ಗದಲಿ ನಡೆತಂದ ||

ವೈಯಕ್ತಿಕ ಅನುಭವವನ್ನು ಹೊಂದಿದ್ದು, ಭಾವಗೀತೆ ಎಂದು ಕರೆಯಬಹುದಾದ, ಎದೆಯನ್ನು ಕರಗಿಸುವ ಇನ್ನೊಂದು ಕವನವನ್ನು ನೋಡಬಹುದು. ಅದನ್ನು ಬರೆದಿರುವವರು ಫಕೀರಯ್ಯ, ಬ. ಇಂಡಿಯವರು. ಒಂದನೆಯ ಮಹಾಯುದ್ಧ, ಬರಗಾಲ, ತೀರಾ ಕಡಿಮೆ ವೇತನ, ಇಂಥ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಸಂಸಾರದ ದಾರುಣ ಪಾಡನ್ನು ದೇವರಲ್ಲಿ ಆರ್ತವಾಗಿ ನಿವೇದಿಸಿಕೊಂಡು ವೇತನವನ್ನು ಇಮ್ಮಡಿ ಮಾಡೆಂದು ಮೊರೆಯಿಡುತ್ತಿರುವ ಕವನವಿದು:

ನಿಲಯದಲಿ ನಾವೈವರಿರುವೆವುತಲುಬು ದೊರೆವುದು ಮೂರು ವರಹವು
ಬಳಲುತಿರ್ಪೆನು ಕರುಣಿಸೈ ದೇವೇಶ ಜಗದೀಶಾ
ಮಳೆಯು ಪೋದುದು ದಯವ ತೋರದೆ ಹೊಲಗಳೆಲ್ಲವೂ ಬೀಳು ಬಿದ್ದವು
ಬೆಲೆಯು ಹೆಚ್ಚಿತು ಕಳು ಕಡಿಗಳನೆಂತು ಕೊಳ್ಳುವುದು?
ಹರಕ ಬಟ್ಟೆಯ ಹೊದೆಯಲಾರೆನುಧರಿಸಲಾರೆನು ಮಲಿನ ವಸ್ತ್ರವ
ಮರುಗುತಿಹೆ ನಾನಿದರ ದೆಸೆಯಿಂ ದಿವಸ ಇವಸಕ್ಕೆ
ಭರದಿ ನೊಡವೆಯ ಬೆಲೆಯು ಬೆಳೆವುದುತರಲಿ ನಾನಿನ್ನೆಲ್ಲಿ ದುಡ್ಡ
ನ್ನರಿವೆಗಳ ಕೊಳ್ಳಲ್ಕೆ ತಿಳಿಯದದೆನಗೆ ಜಗದೀಶಾ
ಭರದಿ ನಡೆದಿಹ ಯುದ್ಧ ಮುಗಿಸೈಮರುಳ ವೈರಿಗೆ ಮರಣವೀಯ್ಯೆ
ಬರದ ಬಾಧೆಯ ನೀಗಿಸೈನುತಿಸುವೆನು ದೇವೇಶಾ
ಕರುಣ ಭರಿತನೆ ಪರಮ ಚರಿತನೆಇರದೆ ಅಧ್ಯಾಪಕರ ತಲುಬನು
ತ್ವರೆಯೊಳಿಮ್ಮಡಿ ಮಾಳ್ಪ ಮನವನ್ನೀವುದೊಡೆಯರ್ಗೆ

ಹತ್ತೊಂಬ್ಬತ್ತನೆಯ ಶತಮಾನದ ಉತ್ತರಾರ್ಧವು ಹೀಗೆ ಹೊಸ ಸಾಹಿತ್ಯ ಸೃಷ್ಟಿಯನ್ನು ಕನವರಿಸಿಕೊಳ್ಳುತ್ತಿತ್ತು. ಅದು ನನಸಾದದ್ದು ಇಪ್ಪತ್ತನೆಯ ಶತಮಾನದಲ್ಲಿ.

ಹೊಸಗನ್ನಡ ಕಾವ್ಯದ ಪ್ರಾರಂಭ ಕಾಲದ ಎರಡು ಉದಾಹರಣೆಗಳನ್ನು ನೀಡಿದೆನಷ್ಟೆ. ಒಂದು ಸೈಕಲ್ (ಕಾಲುಗಾಡಿ) ಕುರಿತದ್ದು, ಇನ್ನೊಂದು ಸರ್ಕಾರಿ ನೌಕರನೊಬ್ಬನ ಬಡತನದ ಬವಣೆಗೆ ಸಂಬಂಧಿಸಿದ್ದು. ಇವೆರಡನ್ನೂ ಕೇವಲ ಎರಡು ಕವನಗಳು ಎಂದು ಮಾತ್ರ ನೋಡಬೇಕಾಗಿಲ್ಲ. ಕವನಗಳಾಗಿಯೂ ಅವು ಸ್ವಾರಸ್ಯಪೂರ್ಣವಾಗಿವೆ ಎಂಬುದೇನೋ ನಿಜ. ಆದರೆ ಅದಕ್ಕಿಂತ ಹೆಚ್ಚಿನ ಮಹತ್ವ ಆ ಕವನಗಳಿಗೆ ಇದೆ ಎಂಬುದು ನನ್ನ ಅನಿಸಿಕೆ. ಮೊದಲನೆಯದನ್ನು ಹೊಸ ಕಾಲಮಾನ ವೇಗದ ಕಾಲವಾದದ್ದರ, ಅಂಥ ಕಾಲವಾಗುತ್ತಿರುವುದರ ಒಂದು ಕಾವ್ಯ ಪ್ರತಿಮೆಯೆಂದೂ ನೋಡಬಹುದು. ಹಾಗೆಯೇ, ಎರಡನೆಯದನ್ನು ಬ್ರಿಟಿಷರ ಪರದೇಶೀ ಆಳ್ವಿಕೆಯಲ್ಲಿ ಈ ದೇಶದ ಜನತೆ ಪಡುತ್ತಿದ್ದ ಸಾಯಲಾರದ ಬದುಕಲಾರದ ಬಡತನ, ಬವಣೆ, ದಾರುಣ ಸ್ಥಿತಿಗೆ ಒಂದು ಕಾವ್ಯಪ್ರತಿಮೆ ಎಂದೂ ಪರಿಭಾವಿಸಬಹುದು. ಮುಂದೆ ಈ ಕಾಲಗತಿಯ ವೇಗ ಮತ್ತು ಬಡತನದ ನಾನಾ ಬಗೆಯ ಬವಣೆಗಳು ಹೊಸಗನ್ನಡ ಸಾಹಿತಿಗಳಿಗೆ ದೊಡ್ಡ ಸವಾಲಾಗಿ, ಸಾಹಿತ್ಯ ವಸ್ತುವಾಗಿ ಈವರೆಗೂ ಕಾಡಿದವು ಎಂಬುದು ಈಗ ಇತಿಹಾಸ.

ಕಾಲಗತಿಯ ವೇಗ, ಹೊಸ ಹೊಸ ಆವಿಷ್ಕಾರಗಳನ್ನು ಇನ್ನೂ ಅದ್ಭುತವಾದ ರೀತಿಯಲ್ಲಿ ಹೊಸಗನ್ನಡದ ವರಕವಿ, ‘ಗಾರುಡಿಗ ಕವಿ’ ಎಂದು ಖ್ಯಾತರಾದ ಬೇಂದ್ರೆಯವರು ತಮ್ಮ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಕವನದಲ್ಲಿ ಕಾಲವನ್ನು ವೇಗದಿಂದ ಹಾರುತ್ತಲೇ ಇರುವ ಪಕ್ಷಿರೂಪದ ಒಂದು ಭವ್ಯ ಕಾವ್ಯ ಪ್ರತಿಮೆಯಾಗಿ ಕಡೆದು ನಿಲ್ಲಿಸಿದ್ದಾರೆ ನೋಡಿ:

ರಾಜ್ಯದ ಸಾಮ್ರಾಜ್ಯದ ತೆಲೆ ಒಕ್ಕಿ
ಮಂಡಲಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?
ಯುಗಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ್ತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಇದಕ್ಕೆ ಮತ್ತೆ ಪ್ರತ್ಯೇಕವಾದ ವ್ಯಾಖ್ಯಾನದ ಅಗತ್ಯ ಇಲ್ಲ ಎಂದುಕೊಂಡಿದ್ದೇನೆ. `Great poetry communicates before it is understood’ ಎನ್ನುವ ವಿಮರ್ಶಾ ವಾಕ್ಯ ಈ ಕವನಕ್ಕೂ ಅನ್ವಯಿಸುತ್ತದೆ.