ಬಡತನದ ಬವಣೆ, ದಾರುಣ ಸ್ಥಿತಿ, ಆ ಸ್ಥಿತಿಯಿಂದ ಹೊರಬರಲು ಬಡಜನತೆಯ ಆಕ್ರೋಶವು ಜ್ವಾಲಾಮುಖಿಯಂತೆ ಸಿಡಿದೆದ್ದು ಕಲ್ಕಿ ರೂಪದಲ್ಲಿ ಬಂದು ನಡೆಸುವ ವಿಲಯ ತಾಂಡವದ ಭವ್ಯ ಚಿತ್ರವನ್ನು ಹೊಸ ಗನ್ನಡದ ಮಹಾಕವಿ, ದಾಶನಿಕ ಕವಿ ಕುವೆಂಪು ಅವರು ‘ಕಲ್ಕಿ’ ಎಂಬ ಕವನದಲ್ಲಿ ಒಂದು ಭವ್ಯ ಕಾವ್ಯ ಪ್ರತಿಮೆಯ ರೂಪದಲ್ಲಿ ಕಡೆದು ನಿಲ್ಲಿಸಿದ್ದಾರೆ. ಕವನ ದೀರ್ಘವಾಗಿದೆ. ಕೆಲವು ಸಾಲುಗಳನ್ನು ಮಾತ್ರ ಆಯ್ದು ಉದ್ಧರಿಸಬಹುದು.

ಧನಿಕರ ಮನೆಗಳು ಒಂದೆಡೆ ನಿಂತಿವೆ,
ಬಡವರ ಗುಡಿಸಲು ಒಂದೆಡೆ ನಿಂತಿವೆ.
ಜ್ಯೋತಿಯ ಮಣಿದೀಪಗಳಲ್ಲಿ;
ಕತ್ತಲು, ಕಗ್ಗತ್ತಲು ಇಲ್ಲಿ!
ಹಾಡಿನ ನುಣ್ದನಿಯತ್ತ.
ಗೋಳಿನ ನೀಳ್ದನಿಯತ್ತ
ಕೂಳನು ಹೆಮ್ಮೆಗೆ ಬಿಸುಡುವರಲ್ಲಿ,
ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ!
ಕಡೆ ಉದ್ಯಾನ,
ಕಡೆ ಶ್ಮಶಾನ!
ಪೀತಂಬರಗಳ ಹೊದೆಯುವರಲ್ಲಿ.
ಕೌಪೀನಕೆ ಚಿಂದಿಯು ಸಿಗದಿಲ್ಲಿ!
ನೋಡುತ ನೋಡುತ ನೋಡುತ್ತಿದ್ದೆ;
ನೋಡುತ್ತಿರೆಯಿರೆ ಬೆಚ್ಚಿ ಬಿದ್ದೆ:
ಬಡಬಗ್ಗರ ಜಠರಾಗ್ನಿಯು ಎದ್ದು
ಗುಡಿಸಲುಗಳಿಗೇ ಬೆಂಕಿಯು ಬಿದ್ದು
ಧಗಧಗ ಧಗಧಗ ಹೊತ್ತಿದುದು,
ಭುಗಿಭುಗಿಲೆನ್ನುತ ಮುತ್ತಿದುದು!
ಮುಗಿಲಿನವರೆಗೂ ಬಾನಿನವರೆಗೂ
ದಿಕ್ಕು ದಿಕ್ಕುಗಳ ಜುಟ್ಟಿನವರೆಗೂ
ಬಡವರ ಬೆಂಕಿಯು ನಾಲಗೆ ಚಾಚಿ
ಶ್ರೀಮಂತರನಪ್ಪಿತು ಬಾಚಿ!
ಬಡವರ ಸಿಟ್ಟದು ಏನು ಪಿಶಾಚಿ?
ಬಡಬಾಗ್ನಿಯೆ ತಲೆತಗ್ಗಿತು ನಾಚಿ!
ಶ್ರೀಮಂತರ ಸೌದಂಗಳ ನೆತ್ತಿ
ಸೀದುದು ಬಡಹೊಟ್ಟೆಯ ಉರಿಹೊತ್ತಿ!
ದೂರದ ಗಿರಿಶಿಖರದ ಮೇಲೆ
ನನಗೂ ತಟ್ಟಿತು ಬೆಂಕಿಯ ಜ್ವಾಲೆ!
ಕೇಳಿಸಿತೊಡನೆಯೆ ಹಾಹಾಕಾರ!
ಮಕ್ಕಳು ಮರಿಗಳ ಚೀತ್ಕಾರ!
ಗರ್ಭಿಣಿ ಸ್ತ್ರೀಯರು, ಬಾಣಂತಿಯರು,
ನವ ವಧುಗಳು ಮೇಣ್ ಶ್ರೀಮಂತೆಯರು;
ಹುಡುಗರು, ಮುದುಕರು, ಕುಂಟರು, ಕಿವುಡರು;
ಬಡವರ ಗೋಳನು ಕೇಳದ ಕಿವುಡರು;
ಹೊಟ್ಟೆಯ ಪಾಡಿಗೆ ಕಾವಿಯನುಟ್ಟು
ಬಡವರ ಹಸಿವಿಗೆ ಮೌಢ್ಯವ ಕೊಟ್ಟು
ಸುಖಸಂಪತ್ತನ್ನು ಕೊಂಡವರು,
ಮೃಷ್ಟಾನ್ನವನೇ ಉಂಡವರು;
ಗುರುಗಳು ಶಿಷ್ಯರು ಮನೆಗಳು ಮಠಗಳು
ಎಲ್ಲರು ಬೆಂದರು ಬಡಬಾಗ್ನಿಯಲಿ,
ಬಡವರ ಬಗ್ಗರ ಜಠರಾಗ್ನಿಯಲಿ!
ಬಡವರ ಜಠರಾಗ್ನಿಯೆ ಬಡಬಾಗ್ನಿ!
ಬಡವನೆ ಕಲಿಯುಗದಂತ್ಯದ ಕಲ್ಕಿ!

ಕಾಲಗತಿಯ ವೇಗ, ಬಡತನದ ಬವಣೆಗಳ ಚಿತ್ರಣ ಮಾತ್ರವಲ್ಲದೆ ಪರರಾಳ್ವಿಕೆಯಿಂದ ಬಿಡುಗಡೆ ಪಡೆಯಬೇಕೆಂಬ ಜಾಗೃತಿ ಮತ್ತು ಹೋರಾಟ, ಆ ಮೂಲಕ ರೂಪುಗೊಂಡ ಹೊಸ ರಾಷ್ಟ್ರೀಯ ಪ್ರಜ್ಞೆ ಎಂದರೆ ಭಾರತೀಯತೆಯ ನವಪ್ರಜ್ಞೆ, ಪರಂಪರಾಗತವಾಗಿ ಬಂದ ಶ್ರೇಣಿಕೃತ ಜಾತಿ ಮತ್ತು ಲಿಂಗವ್ಯವಸ್ಥೆಗಳನ್ನು ಮಾನವೀಯ ನೆಲೆಯಲ್ಲಿ ಪುನಾರಚಿಸಬೇಕೆಂಬ ಸಮಾನತೆಯ ಪರಿಕಲ್ಪನೆ, ಮಾನವ ಬದುಕಿನ ಔನ್ನತ್ಯ ಸಾರ್ಥಕತೆಗಳಿಗೆ ಎಲ್ಲ ಕಾಲ, ಎಲ್ಲ ದೇಶಗಳಲ್ಲಿಯೂ ನಾಗರಿಕ ಜನಾಂಗಗಳು ಅಗತ್ಯವೆಂದು ಒಪ್ಪಿ ಆರಾಧಿಸುತ್ತ ಬಂದ ಸೌಂದರ್ಯಪ್ರಜ್ಞೆ ಮತ್ತು ಆಧ್ಯಾತ್ಮದ ಅರಿವು-ಹೀಗೆ ಹತ್ತು ಹಲವು ಸಂಗತಿಗಳು, ವಿಷಯಗಳು ಕಾವ್ಯದ ಮಾತ್ರವಲ್ಲ ಇತರ ಸಾಹಿತ್ಯ ಪ್ರಕಾರಗಳು ವಸ್ತುಗಳಾದವು. ಹಾಗಾಗಿ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕಾಣಿಸದ ಸಂಕೀರ್ಣತೆ ಸಿದ್ಧ ಉತ್ತರ ಗೊತ್ತಿಲ್ಲದೆ ಹೊಸ ಕಾಲ ಸಂದರ್ಭದಲ್ಲಿ ಉತ್ತರಗಳನ್ನು ಹುಡುಕುವ ಸವಾಲನ್ನು ಎದುರಿಸುವ ಜವಾಬ್ದಾರಿಯನ್ನು ನಮ್ಮ ಕನ್ನಡ ಸಾಹಿತ್ಯವು ಹೊತ್ತುಕೊಂಡು ಸಮರ್ಥವಾಗಿ ನಿರ್ವಹಿಸುತ್ತ ಬಂದಿದೆ. ಕನ್ನಡ ಸಾಹಿತಿಗಳು ಅದನ್ನು ಪ್ರತಿಭಾ ಸಂಪನ್ನತೆಯಿಂದ ನಿರ್ವಹಿಸಿದ್ದಾರೆ, ನಿಭಾಯಿಸಿದ್ದಾರೆ.

ಆಧುನಿಕ ಸಾಹಿತ್ಯ- ಎಂದರೆ ಸ್ಥೂಲವಾಗಿ ಇಪ್ಪತ್ತನೆಯ ಶತಮಾನದ ಸಾಹಿತ್ಯ-ನಾಲ್ಕು ನೆಲೆಗಳಲ್ಲಿ ರೂಪುಗೊಂಡು ಬೆಳೆದಿರುವುದನ್ನು ಕಾಣಬಹುದು: ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ. ಈ ನಾಲ್ಕೂ ಸಾಹಿತ್ಯ ಮಾರ್ಗಗಳಲ್ಲಿ ಅತ್ಯಂತ ಪ್ರತಿಭಾಶಾಲಿಗಳು ಕೃಷಿ ಮಾಡಿದ್ದಾರೆ. ಬೇರೆ ಬೇರೆ ಮಾರ್ಗಗಳವರ ಆಶಯಗಳು ಬೇರೆ ಬೇರೆಯಾಗಿದ್ದರೂ ಆ ಶತಮಾನದ ಸಾಹಿತ್ಯ ಸಮೃದ್ಧಿಗೆ ಅವರು ನೀಡಿರುವ ಕಾಣಿಕೆ ಗಣನೀಯವಾದದ್ದು. ಭಾರತದ ಯಾವ ಪ್ರಾದೇಶಿಕ ಭಾಷೆಯವರು ಪಡೆಯದಿರುವಷ್ಟು ಜ್ಞಾನಪೀಠ ಪ್ರಶಸ್ತಿಗಳನ್ನು ಪ್ರಪ್ರಥಮ ಪ್ರಶಸ್ತಿ ಹಂತದಿಂದಲೇ ಕನ್ನಡ ಸಾಹಿತಿಗಳು ಪಡೆದಿದ್ದಾರೆ. ಭಾರತದ ಶ್ರೇಷ್ಠ ಕವಿಗೆಂದೇ ಮೀಸಲಾದ ಅಖಿಲ ಭಾರತ ಮಟ್ಟದ ಮಧ್ಯಪ್ರದೇಶ ಸರ್ಕಾರ ಸ್ಥಾಪಿಸಿರುವ ‘ಕಬೀರ್ ಸಮ್ಮಾನ್’ ಮನ್ನಣೆಯನ್ನು ಮತ್ತಿಬ್ಬರು ಕವಿಗಳು ಪಡೆದಿದ್ದಾರೆ.

ಆ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ಪ್ರಾಧ್ಯಾಪಕ ಹಾಗೂ ಕನ್ನಡದ ಗೌರವ ಪ್ರಾಧ್ಯಾಪಕರಾಗಿದ್ದ ಬಿ.ಎಂ. ಶ್ರೀಕಂಠಯ್ಯನವರು ಇಂಗ್ಲೆಂಡಿನ ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯದ ಕವನಗಳನ್ನು ಹೊಸಗನ್ನಡ ಭಾಷೆಯಲ್ಲಿ ಹೊಸ ಹೊಸ ಛಂದೋರೂಪಗಳಲ್ಲಿ ಅನುವಾದಿಸಿ ‘ಇಂಗ್ಲಿಷ್ ಗೀತಗಳು’ (೧೯೨೬) ಎಂಬ ಸಂಕಲನ ರೂಪದಲ್ಲಿ ಪ್ರಕಟಿಸಿ ನವೋದಯ ಸಾಹಿತ್ಯ ಮಾರ್ಗಕ್ಕೆ ದೃಢ ಬುನಾದಿ ಹಾಕಿದರು. ಪಂಜೆ ಮಂಗೇಶರಾಯ, ಗೋವಿಂದಪೈ, ಡಿ.ವಿ. ಗುಂಡಪ್ಪ ಸಕ್ಕರಿ ಬಾಳಾಚಾರ್ಯ, ದ.ರಾ.ಬೇಂದ್ರೆ ಮುಂತಾದವರು ಸ್ವತಂತ್ರ ಬಿಡಿ ಕವನಗಳನ್ನು ಬರೆಯುತ್ತಿದ್ದರು. ಹಟ್ಟಿಯಂಗಡಿ ನಾರಾಯಣರಾಯರು ಇಂಗ್ಲಿಷ್ ಕಾವ್ಯದ ಅನುವಾದಗಳನ್ನೂ ಮಾಡಿದ್ದರು. ಆದರೂ ಅವೆಲ್ಲ ಹೊಸ ಸಾಹಿತ್ಯ ಮಾರ್ಗ ನಿರ್ಮಾಪಕ ಶಕ್ತಿ ಪಡೆದವಾಗಿರಲಿಲ್ಲ.

ಪ್ರತಿಭಾವಂತ ಕವಿಗಳು, ಕಥೆಗಾರರು, ಕಾದಂಬರಿಕಾರರು, ನಾಟಕಕಾರರು, ವಿಮರ್ಶಕರು ತಮ್ಮದೇ ಆದ ಸ್ವತಂತ್ರ ದನಿ, ಧಾಟಿ, ದರ್ಶನಗಳನ್ನು ತಮ್ಮ ಕೃತಿಗಳಲ್ಲಿ ಬೆಳಗಿದ್ದಾರೆ. ಕುವೆಂಪು, ಬೇಂದ್ರೆ, ಪು.ತಿ.ನ, ಮಾಸ್ತಿ, ಕಾರಂತ, ಡಿ.ವಿ. ಗುಂಡಪ್ಪ ಕಡೆಂಗೋಡ್ಲು ಶಂಕರಭಟ್ಟ ಶ್ರೀರಂಗ, ರಂ.ಶ್ರೀ. ಮುಗಳಿ, ಕೆ.ಎಸ್. ನರಸಿಂಹಸ್ವಾಮಿ ಮಧುರ ಚೆನ್ನ ವಿ. ಸೀತಾರಾಯಮ್ಮ-ಮೊದಲಾದ ಇನ್ನೆಷ್ಟೋ ಅಂಥ ಪ್ರತಿಭಾಶಾಲಿ ಸಾಹಿತಿಗಳನ್ನು ನವೋದಯ ಮಾರ್ಗದಲ್ಲಿ ಕಾಣಬಹುದು. ಆದರೂ ಎಲ್ಲ ಸಾಹಿತ್ಯ ಪ್ರಕಾರಗಳ ಬರವಣಿಗೆಗಳನ್ನೂ ನಿರ್ದೇಶಿಸುವ ಮತ್ತು ನಿಯಂತ್ರಿಸುವ ಮನೋಧರ್ಮವು ಈ ಮೂಲ ಗ್ರಹಿಕೆಯಿಂದಲೇ ಬಂದದ್ದಾಗಿದೆ ಎನ್ನಬಹುದು.

ನವೋದಯ ಸಾಹಿತ್ಯ ಮಾರ್ಗವು ಸ್ವಾತಂತ್ರ್ಯಾನಂತರವೂ ಮುಂದುವರಿದು ಶತಮಾನದ ಮತ್ತು ನವೋದಯದ ಸಿದ್ಧಿ ಶಿಖರಗಳೆಂಬಂಥ ಎಷ್ಟೋ ಕೃತಿಗಳು ಆ ಮಾರ್ಗದ ಲೇಖಕರಿಂದಲೇ ಬಂದಿದೆ. ಲೋಕಮಾನ್ಯ ತಿಲಕರ ಅನಂತರ ೧೯೨೦ರಲ್ಲಿ ಗಾಂಧೀಜಿ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದ ಕಾಲದಿಂದ ಅವರು ತೀರಿಕೊಂಡವರೆಗಿನ ಸ್ವಾತಂತ್ರ್ಯ ಹೋರಾಟದ ಕಾಲಮಾನದಲ್ಲಿ ನವೋದಯ ಸಾಹಿತ್ಯ ವಿಜೃಂಭಿಸಿತ್ತು. ಆ ಕಾಲಮಾನದಲ್ಲಿ ಭಾರತೀಯ ಜಾಗೃತಿಯೂ ಪ್ರಜ್ವಲಿಸಿತ್ತು. ರಾಷ್ಟ್ರೀಯ ಪ್ರಜ್ಞೆಯನ್ನು ರೂಪಿಸುವುದರಲ್ಲಿ ಗಾಂಧೀಜಿಯೆ ಕೇಂದ್ರ ವ್ಯಕ್ತಿತ್ವವಾಗಿದ್ದರು. ಗಾಂಧೀಜಿಯನ್ನು ದೈವೀಶಕ್ತಿಯ ಚಲನೆಯ ನೆರಳಿನ ಪ್ರತಿಮೆಯಾಗಿ ಭಾವಿಸಿ ಅಭಿಜಾತ ರುಚಿಸೂಕ್ಷ್ಮದ ಕವಿ ಪು.ತಿ. ನರಸಿಂಹಾಚಾರ್ ಅವರು ಬರೆದ ‘ನೆರಳು’ ಎಂಬ ಕವನವನ್ನು ನೋಡಿ:

ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ
ನೆಲನೆಲ ಮನೆಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡಗುಲ್ಮತೆವರು ತಿಟ್ಟು
ಎನ್ನದಿದಕೊಂದೆ ನಿಟ್ಟು
ಗಾಳಿ ಬೆರಗಿದರೆ ನೆಲದೊಳೋಟ
ವೇಗ ಕಡ್ಡಬಹುದಾವ ಹೂಟ
ಸಿಕ್ಕು ದಣಿವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ
ಇದ ನೋಡಿ ನಾನು ನೆನೆವೆನಿಂದು:
ಇಂಥ ನೆಳಲೇನು ಗಾಂಧಿಯೆಂದು!
ಹರಿದತ್ತ ಹರಿಯ ಚಿತ್ರ
ಧೀರ ನಡೆವತ್ತ.

ಇಪ್ಪತ್ತನೆಯ ಶತಮಾನದ ನವಲತ್ತರ ಸುಮಾರಿಗೆ ಕನ್ನಡದ ಕೆಲವು ಪ್ರಭಾವಶಾಲಿ ಲೇಖಕರು ‘ಪ್ರಗತಿಶೀಲ ಸಾಹಿತ್ಯ’ ಎಂಬ ಹೆಸರಿನಲ್ಲಿ ಹೊಸದೊಂದು ಚಳುವಳಿಯನ್ನು ಪ್ರಾರಂಭಿಸಿದರು. ಅವರಿಗೆ ಸ್ಫೂರ್ತಿ ನೀಡಿದವರು, ೧೯೨೫ರ ಸುಮಾರಿನಲ್ಲಿ ಲಂಡನ್ನಿನಲ್ಲಿ ವಕೀಲಿಗಾಗಿ ವ್ಯಾಸಂಗ ಮಾಡುತ್ತಿದ್ದ ಉರ್ದು ಸಾಹಿತಿ ಸಜ್ಜದ್ ಸಾಹಿದ್ ಅವರು ಆತ ತಾನು ಕಣ್ಣಾರೆ ಕಂಡ ಕ್ರೌರ್ಯ, ಶೋಷಣೆ ಇತ್ಯಾದಿಗಳಿಂದ ನೊಂದು, ಕೆರಳಿ,‘ಪ್ರಗತಿ ಶೀಲ’ ಎಂಬ ಸಾಹಿತ್ಯಪಂಥಕ್ಕೆ ನಾಂದಿ ಹಾಡಿದರು. ಭಾರತದಲ್ಲಿ ಮುಲ್ಕ್ ರಾಜ್ ಆನಂದ್, ಡಾ|| ಘೋಷ್‌ಸುಬ್ಬರಾಯ್, ಬಸವರಾಜ ಕಟ್ಟೀಮನಿ, ನಿರಂಜನ, ಚದುರಂಗ, ಶ್ರೀರಂಗ, ಕುಮಾರ ವೆಂಕಣ್ಣ, ಎಸ್. ಅನಂತನಾರಾಯಣ ಮತ್ತು ಇತರರು ಈ ಚಳವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿ ಕೃತಿಗಳನ್ನು ರಚಿಸಿದರು. ಆದರೆ ಈ ಚಳುವಳಿ ಬಹಳ ಕಾಲ ಪ್ರತ್ಯೇಕವಾದ ಅಸ್ತಿತ್ವವನ್ನು ಪಡೆದು ಉಳಿಯಲಿಲ್ಲ. ಆದರೂ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಪಂಥದ ಲೇಖಕರು ಅನ್ಯ ಕಾರಣಗಳಿಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ಕಾಲ ನಿಲ್ಲಬಹುದಾದಂತಹ ಕೃತಿಗಳನ್ನು ರಚಿಸಿದರು ಎಂಬುದು.

ಪ್ರಗತಿಶೀಲ ಸಾಹಿತಿಗಳು ಮಾರ್ಕ್ಸ್‌ವಾದ ಅಂದರೆ ಸಮತಾವಾದಕ್ಕೆ ಒಲಿದವರಾಗಿದ್ದರು. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮತಧರ್ಮದ ತತ್ವ ಸಿದ್ಧಾಂತಗಳು ಸಾಹಿತ್ಯದ ಪ್ರಧಾನ ಪ್ರೇರಣಾ ನೆಲೆಗಳಾಗಿದ್ದಂತೆ ಪ್ರಗತಿಶೀಲರಿಗೆ ರಾಜಕೀಯ ತತ್ವಸಿದ್ಧಾಂತವೊಂದು ಪ್ರಧಾನ ಪ್ರೇರಣಾ ನೆಲೆಯಾಯಿತು. ಸಮಾಜದ ಶೋಷಕ ಶೋಷಿಕ ಅಂದರೆ ಶ್ರೀಮಂತ, ಬಡವ ಎಂಬ ವರ್ಗದೃಷ್ಟಿಯೇ ಅವರಿಗೆ ಪ್ರಧಾನವಾಯಿತು. ಹೊಟೆಲ್ ಮಾಣಿ, ಬೀದಿ ಮಹಿಳೆ, ಮೋಚಿ ಮೊದಲಾದ ಅಸಹಾಯಕರು ಶೋಷಿತರು ಅವರ ಕಥಾನಾಯಕ-ನಾಯಕಿಯರಾದರು. ಅವರು ಕಾವ್ಯವನ್ನು ಹೆಚ್ಚಾಗಿ ಬರೆಯಲಿಲ್ಲ. ಕಥೆ, ಕಾದಂಬರಿಗಳನ್ನೇ ಮುಖ್ಯವಾಗಿ ಬರೆದರು. ಅವರ ಗದ್ಯಶೈಲಿ ಸರಳವಾಗಿತ್ತು. ಮಾದಕ ಪರಿಣಾಮಗಳನ್ನು ಉಂಟುಮಾಡುವಂಥದಿತ್ತು. ಓದು ಬರಹ ಬಲ್ಲವರೆಲ್ಲ ಓದಹುದಾದಂಥ ಅವರ ಗುಣದಿಂದಾಗಿಯೂ ಅದು ಜನಪ್ರಿಯವಾಯಿತು. ಅವರಿಂದಾಗಿ ಕನ್ನಡ ಓದುಗರ ಬಳಗ ಅತಿಶಯವಾಗಿ ಬೆಳೆಯಿತು. ಅವರು ಚಾರಿತ್ರಿಕ, ಪೌರಾಣಿಕ ವಸ್ತು ಕುರಿತ ಬರವಣಿಗೆ ಮಾಡಿದಾಗಲೂ ಅವುಗಳಲ್ಲಿ ಸಮತಾವಾದೀ ದೃಷ್ಟಿ ಇಲ್ಲದಿದ್ದರೂ ಶೈಲಿಯ ಸರಳತೆ, ಮಾದಕ ಗುಣಗಳಿಂದಾಗಿ ಅತ್ಯಂತ ಜನಪ್ರಿಯವಾಯಿತು. ಆ ಲೇಖಕರಲ್ಲಿ ಕಾಲೇಜು, ವಿಶ್ವವಿದ್ಯಾನಿಲಯಗಳ ಪಂಡಿತವರ್ಗದಿಂದ ಹೊರಗಿದ್ದವರೇ ಹೆಚ್ಚಾಗಿದ್ದರು.

೧೯೫೦ರಲ್ಲಿ ವಿ.ಕೃ. ಗೋಕಾಕರಿಂದ ನವ್ಯ ಕಾವ್ಯದ ಅಧಿಕೃತ ಘೋಷಣೆಯಾಯಿತು. ಇಂಗ್ಲೆಂಡಿಗೆ ಉನ್ನತ ವಿದ್ಯಾಬ್ಯಾಸಕ್ಕೆಂದು ಅವರು ಹೋಗಿದ್ದ ಕಾಲದಲ್ಲಿ ಟಿ.ಎಸ್. ಎಲಿಯಟ್, ಆಡೆನ್ ಮೊದಲಾದವರ ನವ್ಯಕಾವ್ಯ (Modern Poetry) ಅಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿತ್ತು. ನಮ್ಮ ಕನ್ನಡ ಕಾವ್ಯದಲ್ಲಿಯೂ ‘ನವ್ಯತೆ’ಯನ್ನು ತರಬೇಕೆಂಬ ಉತ್ಸಾಹ, ಮಹತ್ವಾಕಾಂಕ್ಷೆ ಗೋಕಾಕರದಾಯಿತು. ಬಳಕೆಯ ಮಾತು, ಛಂದಸ್ಸಿನ ನವೀನ ಪ್ರಯೋಗ, ಪ್ರತಿಮಾ ಪ್ರಧಾನತೆ, ವಾಸ್ತವಿಕ ಚಿತ್ರಸೃಷ್ಟಿ ಪಾರಿಭಾಷಿಕ ಶೈಲಿ, ವಸ್ತುವಿನ ಆಯ್ಕೆಯಲ್ಲಿನ ಸ್ವಾತಂತ್ರ್ಯ, ಬುದ್ಧಿಪ್ರಧಾನತೆ, ವ್ಯಕ್ತ್ಯತೀತ ಮೌಲ್ಯಗಳಿಗೆ ಪ್ರಾಶಸ್ತ್ಯ-ಈ ಎಂಟು ನವ್ಯ ಕಾವ್ಯದ ಲಕ್ಷಣಗಳೆಂದು ಗೋಕಾಕರು ಪಟ್ಟಿ ಮಾಡಿ ವಿವರಿಸಿದರು.

ಮುಂದೆ ನವ್ಯ ಕಾವ್ಯ ಮಾತ್ರ ಅಲ್ಲ, ನವ್ಯ ಸಾಹಿತ್ಯ ಮಾರ್ಗವನ್ನೇ ಬೆಳೆಸಿದವರು ಎಂ. ಗೋಪಾಲಕೃಷ್ಣ ಅಡಿಗರು. ೧೯೫೪ರಲ್ಲಿ ಅವರು ಪ್ರಕಟಿಸಿದ ‘ಚಂಡೆ ಮದ್ದಳೆ’ ಎಂಬ ನವ್ಯ ಕವನಗಳ ಸಂಕಲನ ನವ್ಯಕಾವ್ಯದ ಚಂಡೆಮದ್ದಳೆಯನ್ನು ಬಾರಿಸುತ್ತಲೇ ರಂಗ ಪ್ರವೇಶ ಮಾಡಿತು. ನವ್ಯಕಾವ್ಯದ ಉಗಮದ ಅವಶ್ಯಕತೆಯನ್ನು ಕುರಿತು ಅವರು ಹೀಗೆ ಹೇಳಿದ್ದಾರೆ:

“…. ಸ್ವಾತಂತ್ರ್ಯ ಸಂಗ್ರಾಮದ ಉತ್ಸಾಹ, ಉದ್ವೇಗ, ಆದರ್ಶ ಪರವಶತೆಯ ಹಾರಾಟ ಮುಗಿದು ಈಗ ನಮ್ಮ ಮನಸ್ಸು ಮತ್ತೆ ನೆಲಕ್ಕಿಳಿದಿದೆ…. ಹೊಸ ಆದರ್ಶಕ್ಕಾಗಿ ಹೊಸ ಕನಸಿಗಾಗಿ ದೇಶದ ಮನಸ್ಸು ಹಸಿದು ಕಾಯುತ್ತಿದೆ. ಇಂಥ ವಾತಾವರಣ ಸುತ್ತಮುತ್ತಲೂ ಇರುವಾಗ, ಜೀವನಾವಲಂಬಿಯಾದ ಕಾವ್ಯವೂ ಪರಿವರ್ತನೆಗೊಳ್ಳುವುದು ಸಹಜ. ಗಾಂಧಿಯುಗದಲ್ಲಿ ಬರೆದ ರೀತಿಯಲ್ಲೇ ಇನ್ನೂ ಬರೆದರೆ ಬಹುಶಃ ಅದು ಕಾವ್ಯಾಭಾಸವಾಗುತ್ತದೆ. ಇಲ್ಲವೆ ಸತ್ವಹೀನ ಕಾವ್ಯವಾಗುತ್ತದೆ. ಚರ್ವಿತಚರ್ವಣವಾಗುತ್ತದೆ….. ಆದಕಾರಣ ಈಗ ಕಾಣುತ್ತಿರುವ ಹೊಸ ಮನೋಧರ್ಮವನ್ನು ವ್ಯಕ್ತಪಡಿಸಲು ಹೊಸ ನಾಲಗೆ, ಹೊಸ ನುಡಿಕಟ್ಟು ರೂಪುಗೊಳ್ಳಬೇಕಾಗಿದೆ. ಈಗ ಬರೆಯುತ್ತಿರುವ ಕವಿಗಳೆಲ್ಲ ಈ ಕುರಿತು ಯೋಚನೆ ಮಾಡಬೇಕಾದದ್ದು ಅನಿವಾರ್ಯ….. ನಮ್ಮ ಹಿರಿಯ ಕವಿಗಳು ಆಧುನಿಕ ಕಾವ್ಯಕ್ಕೆ ತನ್ನ ಭಾಷೆಯನ್ನು ಸಿದ್ಧಗೊಳಿಸಿ ಅದರಲ್ಲಿ ಅಮೋಘವಾದ ಕೆಲಸವನ್ನು ಮಾಡಿದ್ದಾರೆ. ಆದರೆ ಅದೇ ರೀತಿ ಅಮೋಘವಾದ ಕೆಲಸವನ್ನು ಹೊಸ ತಲೆಮಾರಿನವರೂ ಮಾಡಿ ತೋರಿಸಬೇಕಾಗಿದೆ.” (ಕನ್ನಡದಲ್ಲಿ ನವ್ಯಕಾವ್ಯ, ಕರ್ನಾಟಕದ ಕನ್ನಡ ವಿಜಯ ವಿಶ್ವಕೋಶ, ಪುಟ ೧೬೬, ೧೯೭೯)

ಗೋಕಾಕರು ಹೇಳಿದ ನವ್ಯಕಾವ್ಯದ ಲಕ್ಷಣಗಳಲ್ಲಿ ಹಲವನ್ನು ತನ್ನದೇ ಆದ ರೀತಿಯಲ್ಲಿ ಬಳಸಿಕೊಂಡರೂ ಕಾವ್ಯತತ್ವ ಮತ್ತು ಮನೋಧರ್ಮದ ದೃಷ್ಟಿಯಿಂದ ಗೋಕಾಕರಿಂದ ಅಡಿಗರ ನವ್ಯಕಾವ್ಯ ತೀರಾ ಭಿನ್ನವಾಯಿತು; ನವೋದಯದಿಂದಲೂ ಭಿನ್ನವಾಗಿಯು. ಸಾಹಿತ್ಯದ ಮಾಧ್ಯಮದ ಭಾಷೆಯ ಬಗ್ಗೆ ಕಾವ್ಯ ಶಿಲ್ಪದ ಬಗ್ಗೆ ಸ್ಫೂರ್ತಿ ತತ್ವಕ್ಕೆ ಹೊರತಾದ ನಿಲುವನ್ನು ಅದು ತಳೆಯಿತು. ಭಾಷೆಯನ್ನು ದುಡಿಸಿಕೊಳ್ಳುವ ಸಿದ್ಧಾಂತವನ್ನು ಮುಂದಿಟ್ಟಿತು. ಸಂಕೇತ, ಪ್ರತಿಮೆ ಸಭ್ರಾಮಕ (Fantasy), ಪುರಾಣ (Myth) ಮುಂತಾದ ಅಭಿವ್ಯಕ್ತಿ ವಿಧಾನಗಳನ್ನು ಬಳಸಿತು. ಮನುಷ್ಯ ಚೈತನ್ಯ ಅಪಾರ, ಅನಂತ, ಅಮೇಯ ಎಂಬ ರೊಮ್ಯಾಂಟಿಕ್ ಕಾವ್ಯತತ್ವವನ್ನು ವಿರೋಧಿಸಿ ಮನುಷ್ಯ ಚೈತನ್ಯಕ್ಕೆ ಮಿತಿ, ಮೇರೆ ಇದೆ ಎಂದು ಪ್ರತಿಪಾದಿಸಿತು. ಭಾವಕ್ಕಿಂತ ಅನುಭವದ ಬಗ್ಗೆ ಒತ್ತು ಕೊಟ್ಟಿತು. ಚಿಂತನ ಪ್ರಧಾನತೆಯನ್ನು ಒತ್ತಿ ಹೇಳಿತು. ಮನುಷ್ಯನನುಭವಗಳ ದ್ವಂದ್ವ ಮತ್ತು ಒಳಪದರಗಳ ಶೋದನೆ, ಅರಿವು ಮುಖ್ಯ ಎನ್ನಲಾಯಿತು.

ಅಡಿಗರ ನವ್ಯಕಾವ್ಯ ಮತ್ತು ಇತರ ಪ್ರಕಾರಗಳ ನವ್ಯ ಬರವಣಿಗೆಗಳು ಕಬ್ಬಿಣದ ಕಡಲೆ, ಅರ್ಥವಾಗುವುದಿಲ್ಲ, ಬರೆದವರಿಗೇ ಅರ್ಥವಾಗುತ್ತಿದೆಯೊ ಇಲ್ಲವೊ ಎಂಬಂಥ ಪ್ರತಿಕ್ರಿಯೆ, ಟೀಕೆ ಸಾರ್ವತ್ರಿಕವಾಯಿತು. ಪ್ರಗತಿಶೀಲ ಸಾಹಿತ್ಯದ ಓದುಗರು ಹೋಗಲಿ, ನವೋದಯ ಸಾಹಿತ್ಯದ ಪ್ರಬುದ್ಧ ಓದುಗ ವರ್ಗವೂ ಕಾವ್ಯ ಅರ್ಥವಾಗುವುದಿಲ್ಲ ಎಂಬ ಆಕ್ಷೇಪವನ್ನು ದೊಡ್ಡ ದನಿಯಲ್ಲಿಯೆ ಎತ್ತಿತ್ತು. ಅದಕ್ಕೆ ಉತ್ತರ ರೂಪವಾಗಿ ಅಡಿಗರು ‘ಅರ್ಥವಾಗುವ ಹಾಗೆ ಬರೆಯಬೇಕು’ ಎಂಬ ಕವನ ಬರೆದರು. ಅದರ ಕೆಲವು ಸಾಲುಗಳನ್ನು ನೋಡಿ:

ಅರ್ಥವಾಗುವ ಹಾಗೆ ಬರೆಯಬೇಕೆಂದ ಹಿರಿಯರುತಮಗೆಎಂದು
ಮಾತು ಸೇರಿಸಿದ್ದಕ್ಕೆ ಶಾಭಾಸೆನ್ನಲೇಬೇಕು. ಆದರೂ ಅರ್ಥ
ಇರುವ ಹಾಗೆ ಎಂದಿದ್ದರೆ ಅರ್ಥಪೂರ್ಣವಾಗುತ್ತಿತ್ತು ಮಾತು.
…..
ಕಾಡಿನೊಳಹೊಕ್ಕು ಪೊದೆಪೊದರು ಗಿಡಗಂಟೆ
ಮುಳ್ಳುಗಳ ನಡುವೆ ಹೊಚ್ಚ ಹೊಸ ಹಾದಿ ಹಡಿವವರು, ಪದ್ಧತಿ ಬಿಟ್ಟು
ಮುದ್ದಾಮು ದಾರಿ ಹುಡುಕುತ್ತ ಅಲೆವವರು, ಬೆಟ್ಟದ ನೆತ್ತಿ
ಹತ್ತಿ ಹತ್ತೂ ಕಡೆಗೆ ಕಣ್ಣು ಕಣ್ಣು ಬಿಡುವಂಥವರು, ಇಂಥವರು
ಅರ್ಥವಾಗುವುದಾದರೂ ಹೇಗೆ? ಹಾಕಿಟ್ಟ ಹಳಿಗಳ ಮೇಲೆ
ರೈಲು ಬಿಟ್ಟವರಿಗೆ? ನಿಮ್ಮ ವಿಚಾರ ಹೇಳಿದ್ದೀರಿ. ನಮ್ಮದು ನಾವು
ಆಚರಿಸಿ ತೋರಿಸುತ್ತೇವೆ ಆಕೃತಿಯಲ್ಲಿ
…..
ಕತ್ತಲೆಂದರೆ ನಿಮಗೆ ಭಗ
ಅದರ ಆಳಕ್ಕಿಳಿದು ಏಕಾಂಗಿಯಾಗಿ ನೆಳಲುಗಳ ಜೊತೆ
ಜೋತಾಡುತ್ತಿರುವಸಂಖ್ಯ ಶಂಕೆ, ಸಂದಿಗ್ಧ, ಸಮ್ಮೋಹ ಭೂತಗಳ ಕಡೆ
ತಿರುಗಿಯೂ
ನೋಡಲಾರಿರಿ
…..
ಇಲ್ಲ, ಅರ್ಥವಾಗುವುದಿಲ್ಲ, ಮುದುಕ, ರೋಗಿ, ಮೃತ ಮೂವರ ವಿಚಿತ್ರ
ಚಿತ್ರ
ಅರ್ಥವಾದದ್ದು ಬುದ್ಧನಿಗೆ….

ಅಡಿಗರ ‘ನವ್ಯತೆ’ ಗೋಕಾಕರ ‘ನವ್ಯತೆ’ಯಂತೆ ಕಾವ್ಯಕ್ಕೆ ಮಾತ್ರ ಸೀಮಿತವಾಗದೆ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿಯೂ ಸಮಾರು ಎರಡೂವರೆ ದಶಕಗಳ ಕಾಲ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಹೊಸ ಹೊಸ ಪ್ರಯೋಗಗಳಿಗೆ ದಾರಿ ಮಾಡಿಕೊಟ್ಟಿತು. ಬಿ.ಸಿ. ರಾಮಚಂದ್ರಶರ್ಮ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ, ಚಂದ್ರಶೇಖರ ಕಂಬಾರ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಕೆ. ಸದಾಶಿವ, ಗಿರೀಶ ಕಾನಾಧಡ, ಸುಮತೀಂದ್ರ ನಾಡಿಗೆ, ಕೆ.ವಿ. ತಿರುಮಲೇಶ, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಪಾಟೀಲ, ಕೆ.ಎಸ್. ನಿಸಾರ್ ಅಹಮದ್, ರಾಜಲಕ್ಷ್ಮಿ ಎನ್.ರಾವ್., ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್ ಮೊದಲಾದವರು ನವ್ಯಮಾರ್ಗದ ಮುಖ್ಯರೆನ್ನಬಹುದು. ಇವರುಗಳು ‘ನವ್ಯೆ’ಯ ಪರಿಕಲ್ಪನೆಗೆ ಹೊಸ ಹೊಸ ಆಯಾಮಗಳನ್ನು ರೂಢಿಸಿದರು.

ಎ.ಕೆ. ರಾಮಾನುಜನ್ ಅವರು ಗೋಕಾಕ ಮತ್ತು ಅಡಿಗರಿಗಿಂತ ಭಿನ್ನವಾದ ಕಾವ್ಯ ರೀತಿಯನ್ನು ಸೃಷ್ಟಿಸಿಕೊಂಡು ಬರೆದರು. ಅಗ್ಯಗಣ್ಯ ಸಾಹಿತಿಗಳ ಸಾಲಿನಲ್ಲಿ ಸಲ್ಲುವ ಜಿ.ಎಸ್. ಶಿವರುದ್ರಪ್ಪ ಚನ್ನವೀರ ಕಣವಿಯರದೂ ಸ್ವೋಪಜ್ಞವಾದ ದಾರಿ. ಶಿವರುದ್ರಪ್ಪನವರ ಸಾಧನೆಯ ವ್ಯಾಪ್ತಿ ದೊಡ್ಡದು. ಸಾಹಿತ್ಯ ಕ್ಷೇತ್ರದಲ್ಲಿ ಇಂದು ಮೇಲೆದ್ದು ಕಾಣುವ ಹೆಸರು ಅವರದು. ಎಸ್.ಎಲ್. ಭೈರಪ್ಪನವರು ಕಾದಂಬರಿಕಾರರಾಗಿ ಅತ್ಯಂತ ಖ್ಯಾತಿ ಪಡೆದಿರುವ ಲೇಖಕರು. ಅವರಷ್ಟು ಓದುಗರನ್ನು ಪಡೆದಿರುವ ಲೇಖಕರು ಅಪರೂಪ. ಇವರು ಯಾವ ಸಾಹಿತ್ಯ ಮಾರ್ಗಕ್ಕೂ ಬದ್ಧರಲ್ಲದ ಸ್ವತಂತ್ರ ಪ್ರತಿಭೆಯ ಲೇಖಕರು. ಇವರು ಕೃತಿಗಳು ಭಾರತದ ಅನೇಕಾನೇಕ ಭಾಷೆಗಳಿಗೆ ಅನುವಾದವಾಗಿದೆ. ಇಷ್ಟು ಪ್ರಮಾಣದಲ್ಲಿ ಬೇರೆ ಯಾವ ಕನ್ನಡ ಸಾಹಿತಿಯ ಕೃತಿಗಳೂ ಇತರ ಭಾಷೆಗಳಿಗೆ ಅನುವಾದವಾಗಿಲ್ಲ.

ಗಾಂದಿ ಯುಗದಲ್ಲಿಯೆ ಅಂದರೆ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿಯೆ ಡಾ|| ಬಿ.ಆರ್. ಅಂಬೇಡ್ಕರ್ ಅವರು ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾಗಿದ್ದ ಎಲ್ಲರ ಪರವಾಗಿ, ಮುಖ್ಯವಾಗಿ ದಲಿತರ ಪರವಾಗಿ ಸಮಾನತಾ ಹೋರಾಟವನ್ನು ಸಮರ್ಥವಾದ ರೀತಿಯಲ್ಲಿ ಸಂಘಟಿಸಿದ್ದರು. ಆದರೆ ದೇಶದ ಸ್ವಾತಂತ್ರ್ಯಕ್ಕೆ ಮೊದಲ ಅದ್ಯತೆ ಇದ್ದ, ಅದಕ್ಕಾಗಿ ಹೋರಾಟ ನಡೆದಿದ್ದ ಕಾಲದಲ್ಲಿ ಗಾಂಧೀಜಿಯ ದನಿಯೆ ಪ್ರಧಾನ ದನಿಯಾಗಿತ್ತು; ಅಂಬೇಡ್ಕರ್ ಅವರ ದನಿ ಅಷ್ಟು ಮುಖ್ಯ ಅನಿಸಿರಲಿಲ್ಲ.

ಭಾರತೀಯತೆಯ ಹೆಸರಿನಲ್ಲಿ ವೈದಿಕ ಪುರೋಹಿತಶಾಹಿ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿಯೆಂದು ಮರೆಸುವ ಮನೋಧರ್ಮವೂ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬೆಳೆದಿತ್ತು. ಅದು ಕಾಲದ ಮತ್ತು ಚಾರಿತ್ರಿಕ ಸಂದರ್ಭದ ರಾಜಕೀಯ ಅಗತ್ಯವಾಗಿತ್ತು ಎಂದರೂ ಅದರು ಕೆಳ ಜಾತಿ ವರ್ಗಗಳವರ ಹಾಗೂ ದಲಿತ ಜನ ಸಮುದಾಯದವರ ಆತ್ಮಗೌರವವನ್ನು ಚುಚ್ಚುವಂಥದೇ ಆಗಿತ್ತು. ಡಾ|| ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿಯೆ ಭಾರತದ ಸಂವಿಧಾನ ರಚಿತವಾಗುವಂತಾಯಿತಾದರೂ ಪ್ರಧಾನಿ ಜವಾಹರಲಾಲ ನೆಹರೂ ಅವರ ವಿಶ್ವಶಾಂತಿ, ಔದ್ಯೋಗೀಕರಣದ ಉತ್ಸಾಹ ಮುಖ್ಯವಾಗಿದ್ದ ರಾಜಕೀಯ ಚಿಂತನೆ ಪಡೆದುಕೊಂಡಷ್ಟು ಮಹತ್ವವನ್ನು ಡಾ|| ಅಂಬೇಡ್ಕರರ ಚಿಂತನೆಗಳು ಆಗ ಪಡೆದುಕೊಳ್ಳಲಿಲ್ಲ. ಅದಕ್ಕೆ ನೆಹರೂ ಅವರ ಜನಪ್ರಿಯತೆ ಮತ್ತು ಅಧಿಕಾರ ಸ್ಥಾನದ ಬಲ ಮಾತ್ರ ಕಾರಣವಾಗಿರಲಿಲ್ಲ. ದಲಿತರೂ ಸೇರಿದಂತೆ ಶೂದ್ರ ಜಾತಿ ಜನಾಂಗಗಳವರು ವಿದ್ಯಾವಂತರಾಗುವುದಕ್ಕೆ ಅವರಲ್ಲಿ ಸ್ವತಂತ್ರ ರಾಜಕೀಯ, ಸಾಮಾಜಿಕ ಚಿಂತನೆ ಬೆಳೆಯುವುದಕ್ಕೆ ಕೆಲವು ದಶಕಗಳೇ ಬೇಕಾದವು. ಡಾ|| ಅಂಬೇಡ್ಕರ್, ಡಾ. ರಾಮಮೋಹರ ಲೋಹಿಯಾ, ಜಯಪ್ರಕಾಶ ನಾರಾಯಣ್ ಇವರುಗಳ ಚಿಂತನೆ ಹೊತೆಗೆ ಮಾರ್ಕ್ಸ್‌ವಾದೀ ಚಿಂತನೆ-ಇವೆಲ್ಲ ೧೯೭೦ರ ದಶಕದ ಹೊತ್ತಿಗೆ ಸಮಾನತಾ ಆಂದೋಲನಕ್ಕೆ ಸಂಬಂಧಿಸಿದಂತೆ ಹೊಸ ಜಾಗೃತಿಯನ್ನು ಮೂಡಿಸಿದವು. ಅದರ ಪರಿಣಾಮವೇ ೧೯೭೯ರಲ್ಲಿ ದಲಿತ-ಬಂಡಾಯ ಸಾಹಿತ್ಯದ ಹುಟ್ಟಿಗೆ ಕಾರಣವಾಯಿತು ಎನ್ನಬಹುದು.

ವಿಮರ್ಶಕ ಜಿ.ಎಚ್. ನಾಯಕರು ದಲಿತ-ಬಂಡಾಯ ಸಾಹಿತ್ಯ ಕುರಿತು ಹೀಗೆ ಹೇಳುತ್ತಾರೆ:

“ಅಡಿಗರ ಮತ್ತು ನವ್ಯರ ಇಂಥ ದೃಷ್ಟಿ ಧೋರಣೇಗಳಿಗೆ ಪ್ರತಿಕ್ರಿಯೆಯಾಗಿ ೧೯೭೨ರ ಹೊತ್ತಿಗಾಗಲೆ ಪೂರ್ಣಚಂದ್ರ ತೇಜಸ್ವಿ, ದೇವನೂರು ಮಹಾದೇವ ಅಂಥವರು ನವ್ಯಕ್ಕೆ ಭಿನ್ನವಾದ ಬರವಣಿಗೆಯ ದಾರಿಯನ್ನು ತಮ್ಮ ಕಥೆಗಳ ಮೂಲಕ ಹುಡುಕತೊಡಗಿದರು. ೧೯೭೪ರ ಹೊತ್ತಿಗೆ ಶೂದ್ರ ಸಾಹಿತ್ಯದ ಹೆಸರಿನಲ್ಲಿ ‘ಬರಹಗಾರರ ಒಕ್ಕೂಟ’ ಸ್ಥಾಪನೆಯಾಗಿ ಮೈಸೂರಿನಲ್ಲಿ ಒಂದು ಸಮ್ಮೇಳನವೂ ನಡೆಯಿತು. ನವ್ಯದಲ್ಲಿಯೆ ಬರೆಯುತ್ತಿದ್ದ ಬ್ರಾಹ್ಮಣೇತರ ಸಾಹಿತಿಗಳು ಅದರಲ್ಲಿ ಮುಖ್ಯ ಪಾತ್ರವಹಿಸಿದ್ದರು.”

“ಭಾರತೀಯ ಸಂಸ್ಕೃತಿಯನ್ನು ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೇಲು ನೆಲೆಯಲ್ಲಿದ್ದವರ ಕಡೆಯಿಂದ ಅರ್ಥವಿಸಿ ವ್ಯಾಖ್ಯಾನಿಸುವ ವೈಭವೀಕರಿಸುವ ನವೋದಯ ಕಾಲದ ದೃಷ್ಟಿಯನ್ನು ಪ್ರಶ್ನಿಸಲಾಯಿತು. ಕೆಳನೆಲೆಯವರು ಅನುಭವದ ಕಡೆಯಿಂದ ಸಂಸ್ಕೃತಿ ಮತ್ತು ಸಾಹಿತ್ಯ ಸಂದರ್ಭವನ್ನು ಪುನಾರಚಿಸಿಕೊಳ್ಳುವ ಮನೋಧರ್ಮ ವ್ಯಕ್ತವಾಯಿತು. ಮುಂದೆ ೧೯೭೯ರಲ್ಲಿ ಘೋಷಿತವಾಗಿ ಈವರೆಗೂ ಬೆಳೆದು ಬಂದಿರುವ ದಲಿತ-ಬಂಡಾಯ ಸಾಹಿತ್ಯ ಮಾರ್ಗಕ್ಕೆ ಹಿನ್ನೆಲೆಯನ್ನು ಬರಹಗಾರರ ಒಕ್ಕೂಟ ಒದಗಿಸಿಕೊಟ್ಟಿತು. ಪ್ರಗತಿಶೀಲರು ವರ್ಗದ ನೆಲೆಯಿಂದ ಶೋಷಿತರ ಪರ ದನಿ ಎತ್ತಿದ್ದರೆ, ಒಕ್ಕೂಟದ ಲೇಖಕರು ಜಾತಿಯ ನೆಲೆಯಿಂದ ದನಿ ಎತ್ತಿದ್ದರು. ಹಾಗೆಂದು ಅದು ಜಾತಿ ಪ್ರತಿಪಾದಕವಾಗಿರಲಿಲ್ಲ. ಅವರ ಗುರಿ ಜಾತಿ ವಿನಾಶವೇ ಆಗಿತ್ತು. ದಲಿತ-ಬಂಡಾಯದಲ್ಲಿ ಪ್ರಗತಿಶೀಲ ಮತ್ತು ಒಕ್ಕೂಟದ ಚಿಂತನೆಗಳು ವಿಲೀನವಾಗಿ ಹೊಸ ವ್ಯಾಪ್ತಿ, ಹೊಸ ಆಯಾಮ ಪಡೆದುಕೊಂಡವು. ಅಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ದನಿ ಕಳೆದುಕೊಂಡ ಮತ್ತು ಅವಕಾಶ ವಂಚಿತರಾದ ಎಲ್ಲರ ದನಿಯಾಗಿ ದಲಿತ-ಬಂಡಾಯ ಬೆಳೆದು ಬಂದಿದೆ. ಸಮಾನತಾ ಮೌಲ್ಯ ಮತ್ತು ಸಾಮಾಜಿಕ ನ್ಯಾಯ ಕೇಂದ್ರಿತ ಸಂಸ್ಕೃತಿ ಸಂದರ್ಭ ನಿರ್ಮಾಣದ ಗುರಿಯನ್ನು ಇಟ್ಟುಕೊಂಡು ದಲಿತ-ಬಂಡಾಯದವರು ಮುಂದುವರಿಯುತ್ತಿದ್ದಾರೆ.” (ಶ್ರೀ ರಾಘವೇಂದ್ರ ಪ್ರಕಾಶನ, ಅಂಬಾರಕೊಡ್ಲ ಅದರ ಬೆಳ್ಳಿ ಹಬ್ಬದ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ೧೯೭೭)

ದಲಿತ-ಬಂಡಾಯದ ಮುಖ್ಯ ಧ್ವನಿ ಸಿದ್ಧಲಿಂಗಯ್ಯನವರ ಇಪ್ಪತ್ತು ಕವನಗಳ ಸಂಕಲನ ‘ಹೊಲೆ ಮಾದಿಗರ ಹಾಡು’ ‘ಕನ್ನಡ ಬರವಣಿಗೆಗೆ ಅರ್ಥಪೂರ್ಣವಾದ ಹೊಸ ದಿಕ್ಕನ್ನು ತೋರಿಸಿಕೊಟ್ಟ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ’ ಎಂಬ ಕೀರ್ತಿಗೆ ಪಾತ್ರವಾಗಿದೆ. ಕವಿ ಸಿದ್ಧಲಿಂಗಯ್ಯನವರ ‘ನನ್ನ ಜನಗಳು’ ಎಂಬ ಕವನ ನೋಡಿ:

ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು
ವದೆಸಿಕೊಂಡು ವರಗಿದೋರು ನನ್ನ ಜನಗಳು
ಕಾಲುಕಯ್ಯಿ
ಹಿಡಿಯೋರು ಕೈಮಡಗಿಸಿಕೊಳ್ಳೋರು
ಭಕ್ತರಪ್ಪ ಭಕ್ತರೋ ನನ್ನ ಜನಗಳು
ಹೊಲವನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು
ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು
ಬರಿಗೈಲೇ ಬಂದೋರು ಉಸ್ಸೆಂದು ಕೂತೋರು
ಹೊಟ್ಟೆ ಬಟ್ಟೆ ಕಟ್ಟಿದೋರು ನನ್ನ ಜನಗಳು
ಮಾಳಿಗೆಗಳ ಎತ್ತಿದೋರು ಬಂಗಲೆಗಳ ಕಟ್ಟಿದೋರು
ತಳಾದೀಗೆ ಸಿಕ್ಕಿದೋರು ನನ್ನ ಜನಗಳು
ಬೀದಿಯಲ್ಲಿ ಬಿದ್ದೋರು ಸದ್ದಿಲ್ಲದೆ ಇದ್ದೋರು
ಒಳಗೊಳಗೇ ಅತ್ತೋರು ನನ್ನ ಜನಗಳು
ಬಡ್ಡಿಯನ್ನು ತೆತ್ತೋರು ಭಾಷಣಗಳ ಬೆಂಕಿಯಲ್ಲಿ
ಬೆಂದು ಬೂದಿಯಾದೋರು ನನ್ನ ಜನಗಳು
ಪರಮಾತ್ಮನ ಹೆಸರು ಹೇಳಿ ಪರಮಾನ್ನ ಉಂಡ ಜನಕೆ
ಬೂಟು ಮೆಟ್ಟು ಹೊಲಿದೋರು ನನ್ನ ಜನಗಳು
ಚಿನ್ನವನ್ನು ತೆಗೆಯೋರು ಅನ್ನವನು ಕಾಣದೋರು
ಬಟ್ಟೆಯನ್ನು ನೇಯೋರು ಬರಿ ಮೈಲೆ ಹೋಗೋರು
ಹೇಳಿದಂತೆ ಕೇಳುತಾರೆ ನನ್ನ ಜನಗಳು
ಗಾಳಿಯಲ್ಲಿ ಬಾಳುತಾರೆ ನನ್ನ ಜನಗಳು

ಮೂಡ್ನಾಕೂಡು ಚಿನ್ನಸ್ವಾಮಿಯವರ ‘ನಾನೊಂದು ಮರವಾಗಿದ್ದರೆ’ ಎಂಬ ಕವನದಲ್ಲಿ ಅಸ್ಪೃಶ್ಯ, ಶ್ವಪಚ ಎಂಬಂಥ ಅಮಾನವೀಯ ಕ್ರೌರ್ಯಕ್ಕೆ ನೊಂದು ಬೆಂದ ಮನಸ್ಸಿನ ನೋವು ಉತ್ತಮ ಕಾವ್ಯಾಭಿವ್ಯಕ್ತಿಯನ್ನು ಪಡೆದುಕೊಂಡಿದೆ. ನೋಡಿ:

ನಾನೊಂದು ಮರವಾಗಿದ್ದರೆ
ಹಕ್ಕಿಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ
ಬಿಸಿಲು ನನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ
ತಂಬೆಲರ ಕೂಡ ಎಲೆಗಳ ಸ್ನೇಹ
ಮಧುರವಾಗಿರುತ್ತಿತ್ತು
ಮಳೆ ಹನಿಗಳು ನಾನು ಶ್ವಪಚನೆಂದು
ಹಿಂದೆ ಸರಿಯುತ್ತಿರಲಿಲ್ಲ ನಾನು
ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ
ಮಡಿ ಮಡಿ ಎಂದು ಓಡುತ್ತಿರಲಿಲ್ಲ
ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜಿ
ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ
ಅಡರಿಕೊಂಡ ಮುಕ್ಕೋಟ ದೇವತೆಗಳು
ನನ್ನನ್ನು ಮುಟ್ಟಿಕೊಳ್ಳುತ್ತಿದ್ದರು.
ಯಾರಿಗೆ ಗೊತ್ತು
ನನ್ನ ಅಂತ್ಯಕಾಲದಲ್ಲಿ
ಕಡಿದು ತುಂಡಾದ ಒಣ ಸೀಳೊಂದು
ಹೋಮಾಗ್ನಿಯಲ್ಲಿ ಬೆಂದು
ಪಾವನವಾಗುತ್ತಿತ್ತೇನೊ
ಅಥವಾ
ಸತ್ಪುರಷನೊಬ್ಬನ ಹೆಣಕ್ಕೆ ಚಟ್ಟವಾಗಿ
ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೆ?

-ಈ ಕವನಗಳ ಅರ್ಥ ವಿವರಣೆಗೆ ವ್ಯಾಖ್ಯಾನದ ಅಗತ್ಯವಿಲ್ಲ. ಹೃದಯ, ಅಂತಃಕರಣ, ಮನುಷ್ಯತ್ವದ ಸಂವೇದನೆ ಇದ್ದವರಿಗೆಲ್ಲ ಪಾಪಪ್ರಜ್ಞೆಯಾಗಿ ಕಾಡುವ ಕವನಗಳಿವು.

ದೇವನೂರು ಮಹಾದೇವ, ದೇವಯ್ಯ ಹರವೆ, ಬರಗೂರು ರಾಮಚಂದ್ರಪ್ಪ ಚಂದ್ರಶೇಖರ ಪಾಟೀಲ, ಅರವಿಂದ ಮಾಲಗತ್ತಿ, ಮೊಗಳ್ಳಿ ಗಣೇಶ, ಕಾಳೇಗೌಡ ನಾಗವಾರ, ಮುಳ್ಳೂರು ನಾಗರಾಜ, ಮ.ನ. ಜವರಯ್ಯ, ಕೆ.ಬಿ. ಸಿದ್ಧಯ್ಯ, ರಷೀದ್, ಕೆ.ನ. ಶಿವತೀರ್ಥನ್, ಚೆನ್ನಣ್ಣ ವಾಲೀಕಾರ, ಕುಂ. ವೀರಭದ್ರಪ್ಪ, ಆರ್.ವಿ. ಭಂಡಾರಿ, ವಿ. ಮುನಿವೆಂಕಟಪ್ಪ, ಎಲ್. ಹನುಮಂತಯ್ಯ, ಗೋವಿಂದಯ್ಯ, ಬಿ. ಚಿನ್ನಸ್ವಾಮಿ, ಸರಜೂ ಕಾಟ್ಕರ್, ವಿಷ್ಣುನಾಯ್ಕ, ಜಿ.ಪಿ. ಬಸವರಾಜು, ಶಿವರಾಮು ಕಾಡನಕುಪ್ಪೆ ಪ್ರಹ್ಲಾದ್ ಅಗಸನಕಟ್ಟೆ ಕಾ.ತ. ಚಿಕ್ಕಣ್ಣ, ಇಂದೂಧರ ಹೊನ್ನಾಪುರ, ಸುಬ್ಬು ಹೊಲೆಯಾರ್-ಹೀಗೇ ಹೇಳುತ್ತ ಹೋದರೆ ಈ ಸಾಹಿತ್ಯ ಮಾರ್ಗದ ಸಾಹಿತಿಗಳು ಹೆಸರಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಲ್ಲಿ ಹೆಸರಿಸಿದ ಎಲ್ಲ ಲೇಖಕರೂ ಹುಟ್ಟಿನಿಂದ ದಲಿತರಲ್ಲ. ಇವರಲ್ಲಿ ದಲಿತರೂ ದಲಿತೇತರರೂ ಇದ್ದಾರೆ. ಇವರು ದಲಿತರ, ಶೋಷಿತರ, ಅಸಾಯಕರ ನೋವಿಗೆ, ಕಷ್ಟಕ್ಕೆ ಅನುಭವ ಪ್ರಪಂಚಕ್ಕೆ ಸೂಕ್ಷ್ಮವಾಗಿ ಸಂವೇದಿಸಿ ಬರೆಯುತ್ತಿರುವ ಸಾಹಿತಿಗಳು.

ಪುರುಷ ಪ್ರಧಾನ ಸಂಸ್ಕೃತಿಯ ಪರಂಪರೆ ಇರುವ ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯ ಶೋಷಣೆಯ ವಿರುದ್ಧದ, ಸಮಾನತೆಯ ಪರವಾದ ಸ್ತ್ರೀವಾದಿ ದನಿಯ ಸಾಹಿತ್ಯ ದಲಿತ-ಬಂಡಾಯ ಮಾರ್ಗದ ದನಿಯೊಂದಿಗೇ ಇತ್ತೀಚಿನ ವರ್ಷಗಳಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಕಾವ್ಯ ಮಾತ್ರವಲ್ಲ ಇತರ ಸಾಹಿತ್ಯ ಪ್ರಕಾರಗಳಲ್ಲಿಯೂ ಅದು ಅಭಿವ್ಯಕ್ತಿ ಪಡೆಯುತ್ತಿದೆ.

ಲೇಖಕಿಯರ ಸಂಖ್ಯೆ ಅಪಾರವಾಗಿ ಬೆಳೆಯುತ್ತಿರುವುದು ಸಂತೋಷದ ಸಂಗತಿ. ಸಾರಾ ಅಬೂಬಕರ, ವಿಜಯಾದಬ್ಬೆ, ಬಿ.ಎನ್. ಸುಮಿತ್ರಾಬಾಯಿ, ನೇಮಿಚಂದ್ರ, ಸ. ಉಷಾ, ಶಶಿಕಲಾ ವೀರಯ್ಯಸ್ವಾಮಿ, ಬಿ.ಟಿ. ಲಲಿತಾ ನಾಯಕ, ವೀಣಾ ಶಾಂತೇಶ್ವರ, ಕಮಲಾ ಹಂಪನಾ, ಕಮಲಾ ಹೆಮ್ಮಿಗೆ ಚ. ಸರ್ವಮಂಗಳಾ, ಪ್ರತಿಭಾ ನಂದಕುಮಾರ್, ಸವಿತಾ ನಾಗಭೂಷಣ, ಎಚ್.ಎಲ್. ಪುಷ್ಪ ಗೀತಾ ನಾಗಭೂಷಣ, ಎಂ.ಎಸ್. ವೇದ, ಎಂ.ಆರ್. ಕಮಲ, ಎಚ್.ಎಸ್. ಶ್ರೀಮತಿ., ಎಲ್.ಸಿ. ಸುಮಿತ್ರಾ, ವೈದೇಹಿ, ಎಚ್.ಎಸ್. ಮುಕ್ತಾಯಕ್ಕ, ಸಬೀಹಾ, ಮಲ್ಲಿಕಾ ಘಂಟಿ, ಬಾನು ಮುಷ್ತಾಖ್, ಹೇಮಾ ಪಟ್ಟಣಶೆಟ್ಟಿ-ಹೀಗೆ ಹೆಸರಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಟ್ಟಿನಲ್ಲಿ, ದಲಿತ-ಬಂಡಾಯ ಸಾಹಿತ್ಯದಿಂದಾಗಿ ಬಾಯಿ ಇಲ್ಲದವರಿಗೆಲ್ಲ ಬಾಯಿ ಬಂದಂತಾಗಿದೆ. ಬಗೆದಲ್ಲೆಲ್ಲ ಅಬ್ಬಿ ನೀರು ಉಕ್ಕಿ ಬರುವಂತೆ ಪ್ರತಿಭೆ ಚಿಮ್ಮಿ ಬರುತ್ತಿದೆ. ಇವರು ಬರೆದದ್ದೆಲ್ಲವೂ ಉತ್ತಮ ಕಾವ್ಯ, ಕಥೆ, ಕಾದಂಬರಿ, ನಾಟಕ ಎಂದೇನಲ್ಲ. ಬೇಂದ್ರೆ ಮಾತಿನಲ್ಲಿ ಹೇಳುವುದಾದರೆ ಪಟ್ಟ ವಾಡೆಲ್ಲವು ಹುಟ್ಟು ಹಾಡಾಗಿ ಬರುತ್ತಿವೆ. ನೋವಿನ ಹಾಡೇ, ರಕ್ತ ಒಸರುವ ಹಾಡೆ, ಕರುಳ ಹಿಂಡುವ ಹಾಡೇ ಬರುತ್ತಿದೆ. ನಲಿವಿನ ಹಾಡನ್ನು ಈ ಕವಿ ಸಾಹಿತಿಗಳಿಂದ ಕೇಳುವ ಕಾಲ ಎಂದು ಬಂದೀತೋ! ದೇಶ ಆ ದಿನಕ್ಕಾಗಿ ಹಸಿದು ಕಾಯುತ್ತಿದೆ.

* * *

ಇದೊಂದು ಸಂಕ್ಷಿಪ್ತ ಸಮೀಕ್ಷೆ ಮಾತ್ರ. ಇದರಿಂದ ಕನ್ನಡ ಸಾಹಿತ್ಯದ ಮುಖ್ಯವಾಗಿ ಕಾವ್ಯದ ವೈವಿಧ್ಯ ಪೂರ್ಣ ಶ್ರೀಮಂತಿಕೆಯ ಮಿಂಚಿನ ದರ್ಶನವಾದರೂ ಆದೀತೆಂಬ ನಂಬಿಕೆ ನನ್ನದು.