ಸಾಹಿತ್ಯದ ಸರ್ವಪ್ರಥಮ ಕರ್ತವ್ಯ ಸಹೃದಯರಿಗೆ ರಸಾಸ್ವಾದನೆಯನ್ನು ದೊರಕಿಸಿಕೊಡುವುದು. ಹಾಗೆ ಮಾಡುವಾಗಲೇ ಅದು ಇತರ ಕೆಲವು ಉಪ ಪ್ರಯೋಜನಗಳನ್ನೂ ನೀಡಬೇಕೆಂಬುದು ಕೆಲವರುಸ ಹಿತ್ಯ ಮೀಮಾಂಸಕರ ಅಭಿಪ್ರಾಯ. ಕಾವ್ಯದ ಪ್ರಯೋಜನಗಳಲ್ಲಿ “ಶಿವೇತರ ಕ್ಷತ” ಎಂದರೆ ಅಮಂಗಳವಾದುದನ್ನು ಪರಿಹರಿಸುವುದು ಒಂದು. ಅಮಂಗಳವನ್ನು ಪರಿಹರಿಸುವುದು ಹೇಗೆ? ಕೆಟ್ಟದನ್ನು ಮಾಡದೇ ಇರುವುದರಿಂದ ಇದರಲ್ಲಿಯೇ ಮೌಲ್ಯಗಳ ಪ್ರತಿಪಾದನೆ ಎಂಬುದೂ ಸೇರಿದೆ.

ಮೌಲ್ಯಗಳು ಎಂದರೇನು? ಅವು ಯಾವುವು? ಒಂದು ಸಮಾಜವು ಆರೋಗ್ಯಕರವಾಗಿರಲು, ಸುಖವಾಗಿರಲು ಅದರ ಅಂಗಗಳಾದ ಪ್ರತಿಯೊಬ್ಬ ವ್ಯಕ್ತಿಯೂ, ಅತ್ಯಂತ ಎಚ್ಚರಿಕೆಯಿಂದ, ನಿಷ್ಠೆಯಿಂದ ಯಾವುದನ್ನು ಆಚರಿಸಲೇ ಬೇಕೋ ಅವೇ ಮೌಲ್ಯಗಳು ಎಂದು ಸ್ಥೂಲವಾಗಿ ಹೇಳಬಹುದು. ಇಂಥವನ್ನು ಮಾಡಬೇಕು ಎನ್ನುವಂತೆಯೇ ಇಂಥವನ್ನ ಮಾಡಬಾರದು ಎಂದೂ ಮೌಲ್ಯಗಳನ್ನು ನಿರ್ದೇಶಿಸಬಹುದು. ಬಸವಣ್ಣನವರ ಈ ಒಂದು ವಚನ ಮೌಲ್ಯಗಳನ್ನು ನಿಚೇಧಾತ್ಮಕವಾಗಿ ಹೇಳುತ್ತದೆ:

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವರ ನೊಲಿಸುವ ಪರಿ.

ತುಂಬ ಸರಳವಾದ ಮಾತುಗಳಲ್ಲಿ, ಲೌಕಿಕದ ಅಥವಾ ಆಧ್ಯಾತ್ಮದಯ ವ ಕ್ಲಿಷ್ಟವಾದ ಪರಿಭಾಷೆಯನ್ನು ಬಳಸದೆ ಬಸವಣ್ಣನವರು ಸಮಾಜದ ಸೌಖ್ಯಕ್ಕೊ, ಭಗವಂತನ ಸಾನಿಧ್ಯಕ್ಕೂ ಅಗತ್ಯವಾದ ಶಬ್ದ ಸೋಪಾನವನ್ನು ಕಟ್ಟಿ ನಿಲ್ಲಿಸಿದ್ದಾರೆ. ಪ್ರಾಚೀನ ಶಾಸನಗಳಲ್ಲೂ ಹಳಗನ್ನಡ, ನಡುಗನ್ನಡ ಕಾವ್ಯಗಳಲ್ಲೂ ಸ್ವಾಮಿಗಾಗಿ ಹೋರಾಡಿ ಸಾಯುವುದನ್ನು, ಅನ್ನದ ಋಣವನ್ನು ತೀರಿಸುವುದನ್ನೂ ಮೌಲ್ಯಗಳೆಂದು ಸಾರಲಾಗಿದೆ.

ಹತ್ತನೆಯ ಶತಮಾನದಲ್ಲಿ ಜೀವಿಸಿದ್ಧ ಪಂಪ ಕನ್ನಡದ ಆದಿಕವಿ.

ಅವನ ಧಾರ್ಮಿಕ ಕಾವ್ಯ. ಆದಿಪುರಾಣ. ಅದರಲ್ಲಿ ತ್ಯಾಗ ಎಂಬ ಮೌಲ್ಯವನ್ನು ಅವನು ಪ್ರತಿಪಾದಿಸಲು ಭರತ-ಬಾಹುಬಲಿಗಳ ಪ್ರಸಂಗವನ್ನು ಆಯ್ಕೆ ಮಾಡಿಕೊಂಡಿದ್ದಾನೆಯೇ ಎಂಬಂತೆ ಅದನ್ನು ವರ್ಣಮಯವನ್ನಾಗಿ ಮಾಡಿದ್ದಾನೆ. ವೃಷಭನಾಥ ಆದಿತೀರ್ಥಂಕರ, ಅವನ ಮಕ್ಕಳು ಭರತ ಬಾಹುಬಲಿ ಮುಂತಾದವರು. ವೃಷಭನಾಥನಿಗೆ ವೈರಾಗ್ಯ ಮೂಡಿದಾಗ ಅವನು ತನ್ನ ರಾಜ್ಯವನ್ನು ಮಕ್ಕಳಿಗೆ ಹಂಚಿಕೊಟ್ಟು ತಪಸ್ಸಿಗೆ ನಡೆದ. ಭರತ ಚಕ್ರವರ್ತಿಯಾದ. ಅನಂತರ ತಾನೂ ಸಮಸ್ತ ಭೂಮಂಡಲಕ್ಕೇ ಒಡೆಯನಾಗಭೇಕೆಂಬ ಆಸೆ ಬೆಳೆಯಿತು. ತನ್ನ ತಮ್ಮಂದಿರೂ ತನಗೆ ಅಧೀನರಾದರಲ್ಲದೆ ತನ್ನ ಸಾರ್ವಭೌಮತ್ವ ಸ್ಥಾಪಿತವಾಗುವಂತಿಲ್ಲವಷ್ಟೆ? ಆ ಕಾರಣದಿಂದ ಅವರೆಲ್ಲರೂ ತನ್ನ ಅಧೀನರಾಗಬೇಕೆಂದು ಹೇಳಿಕಳುಹಿಸಿದ. ಬಾಹುಬಲಿಯನ್ನು ಉಳಿದ ಇತರ ತಮ್ಮಂದಿರು, ಇದೇನಿದು ಎಂದು ಆಶ್ಚರ್ಯಚಕಿತರಾದರು. ಮತ್ತು ಹೇಳಿದರು ಭರತ ಚಕ್ರವರ್ತಿ “ನಮಗೆ ಹಿರಿಯಣ್ಣ, ಗುರು, ತಂದೆ ಎಂದು ಬೇಕಾದರೆ ಅವನಿಗೆ ನಮಸ್ಕಾರ ಮಾಡೋಣ. ಹಿಂದೆ ಹಾಗೆಯೇ ಮಾಡಿದವು. ಆದರೆ ಈಗ ಅವನು ಅರಸ ನಾವು ಆಳು ಎಂಬ ಭೇದ ಭಾವ ಬಂದ ಮೇಲೆ ನಮಸ್ಕರಿಸುವುದು ಅಜಃ ಕಷ್ಟವಲ್ಲವೆ? ಅಲ್ಲದೆ ಈ ರಾಜ್ಯ ನಮಗೆ ತಂದೆ ಕೊಟ್ಟದ್ದು. ಹೀಗಿರುವಾಗ ಈತನಲ್ಲಿ ಕಿಂಕರ ಭಾವವನ್ನು ತೋರಿಸುವುದು ನಮಗೆ, ಯಾರಿಗಾದರೂ ನಾವೇ ಅಕ್ಕಿಯನ್ನು ಕೊಟ್ಟು ತಂಗುಳನ್ನವನ್ನು ಅಥವಾ ಎಂಜಲನ್ನವನ್ನು ತೆಗೆದುಕೊಂಡು ತಿಂದಂತಾಗದೇ?” ಹೀಗೆ ಹೇಳಿ ಅಷ್ಟು ಜನವೂ ರಾಜ್ಯಲಾಲಸೆಯಿರುವ ಭರತನಿಗೆ ನಮಸ್ಕರಿಸುವುದರ ಬದಲು ತಪೋನಿಧಿಯೂ ತಮ್ಮ ತಂದೆಯೂ ಆದ ವೃಷಭದೇವನಿಗೇ ನಮಸ್ಕರಿಸೋಣ ಎಂದು, ರಾಜ್ಯವನ್ನು ತ್ಯಜಿಸಿ ತಪಸ್ಸಿಗೆ ಹೊರಟುಹೋದರು.

ಭರತನ ತಮ್ಮನಾದ ಬಾಹುಬಲಿಯಾದರೂ-ಅವನೇ ನಮ್ಮ ಶ್ರವಣಬೆಳಗೊಳದ ಗೊಮ್ಮಟಮೂರ್ತಿ- ತನ್ನ ಆದುಧಾಗಾರದಲ್ಲಿ ಚಕ್ರರತ್ನ ಹುಟ್ಟಿದೆಂಬ ಸೊಕ್ಕಿನಿಂದ ಭರತನು ದಿಗ್ವಿಜಯ ಮಾಡಿದ್ದಾನಲ್ಲವೆ? ನಾನು ಅದಕ್ಕೆ ಸೊಪ್ಪು? ಹಾಕುವವನಲ್ಲ- ಬೇಕಾದರೆ ಯುದ್ಧ ಮಾಡಿ ನನ್ನನ್ನು ಗೆಲ್ಲಲಿ ಎಂದು ಬಿಟ್ಟ. ಯುದ್ಧ ಅನಿವಾರ್ಯವಾಯಿತು. ಇಬ್ಬರ ಸೈನ್ಯಗಳೂ ಎದುರು ಬಂದುರಾದವು. ಅವರ ಮಂತ್ರಿಗಳು ಬುದ್ಧಿವಂತರು. “ಅವಶ್ಯಕ ರಕ್ತಪಾತವೇಕೆ? ಇಬ್ಬರೂ ಧರ್ಮಯುದ್ಧ ಮಾಡಿ. ಹಾಗೆ ಮಾಡಿ ಗೆದ್ದವರೇ ಚಕ್ರವರ್ತಿ ಎಂದು ನಾನು ಒಪ್ಪುತ್ತೇವೆ ಎಂದರು. ದೃಷ್ಟಿಯುದ್ಧ, ಜಲಯುದ್ಧಗಳಲ್ಲಿ ಭರತ ಸೋತ. ಬಾಹು ಯುದ್ಧದಲ್ಲಿ ಭರತನು ಸೋಲುವ ಸ್ಥಿತಿಗೆ ಬಂದ. ಬಾಹುಬಲಿ ಅಣ್ಣನನ್ನು ಅನಾಮತ್ತಾಗಿ ಆಕಾಶಕ್ಕೆ ಎತ್ತಿದ. ಆದರೆ ಅವನನ್ನು ನೆಲಕ್ಕೆ ಎಸೆಯಲಿಲ್ಲ. ವಿವೇಕ ಎಂಬುದು ಅವನಿಂದ ಹೀಗೆ ಹೇಳಿಸಿತು. “ಈ ಭರತ ಚಕ್ರವರ್ತಿ ನನಗೆ ಗುರು ಹಿರಿಯಣ್ಣ, ಮಹಿಮಾವಂತ. ಈಗ ಇವನು ಶಕ್ತಿ ಗುಂಪಿರುವಾಗ ಭೂಮಿಗೆ ತಂದು ಇವನಿಗೆ ಭಂಗವನ್ನುಂಟು ಮಾಡುವುದೇ?”

ಅಣ್ಣನಲ್ಲಿಲ್ಲದ ವಿವೇಕ ತಮ್ಮನಲ್ಲಿ ರಾರಾಜಿಸಿತು. ದೇವತೆಗಳು ಅವನನ್ನು ಮುಚ್ಚಿದರು. ಅನಂತರ ಈ ರಾಜ್ಯದ, ಬದುಕಿನ, ವೈಭವದ ಅನಿತ್ಯತೆಯನ್ನು ತಮ್ಮನು ಅಣ್ಣನಿಗೆ ವಿವರಿಸಿ ಹೇಳಿದೆ. ಅಷ್ಟೇ ಅಲ್ಲ ತುಂಬ ಸೊಗಸಾದ ಮಾತುಗಳಲ್ಲಿ ತನ್ನ ರಾಜ್ಯ ತ್ಯಾಗದ ಅನಿಶ್ಚಯವನ್ನು ಘೋಷಿಸಿದೆ.

ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗ ಮಂಡಲೋಂ
ತ್ಪಲ ವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮೀ ಭೂ
ವಲಯಮನಯ್ಯನಿತ್ತದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರಗಮಾಟಿಸಿದಂದು ನೆಗ ೞ್ತೆ ಮಾಸದೇ||

ಈ ಮನೋಹರಿಯಾದ ರಾಜ್ಯಲಕ್ಷ್ಮಿಯು ಯುದ್ಧದಲ್ಲಿ ಭಾಗವಹಿಸುವ ಸೈನಿಕರ ಕತ್ತಿಗಳೆಂಬ ಕನ್ನೈದಿಲೆಯ ವನದಲ್ಲಿ ಸಂಚರಿಸುವ ಚಂಚಲೆಯು ತಂದೆಯು ಕೊಟ್ಟ ಈ ಭೂಮಿಯನ್ನು ನಿನಗೇ ಕೊಡುತ್ತೇನೆ. ಇದೇನಣ್ಣ. ನೀನು ಒಲಿದ ಹೆಣ್ಣಿಗೂ, ನೀನು ಒಲಿದ ರಾಜ್ಯಕ್ಕೂ ನಾನು ಆಸೆ ಪಟ್ಟರೇ ಕೀರ್ತಿಯು ಮಾಸಿ ಹೋಗುವುದಿಲ್ಲವೆ?”

ಇಷ್ಟು ಹೇಳಿ ಬಾಹುಬಲಿಯು ತಪಸ್ಸಿಗೆ ನಿಲ್ಲುತ್ತಾನೆ. ಇದು ತ್ಯಾಗವು ಭೋಗದ ಮೇಲೆ ವಿಜಯವನ್ನು ಸಾಧಿಸಿದ ಕಥೆ. ವೈರಾಗ್ಯದ ಧ್ವಜವು ಎಲ್ಲ ಭೋಗಗಳಿಗಿಂತಲೂ ಎತ್ತರದಲ್ಲಿ ಹಾಡುತ್ತದೆ ಎಂಬುದನ್ನು ತೋರಿಸುವ ಕಥೆ. ಇಲ್ಲ ಪಂಪನಿಗೆ ಮುಖ್ಯವಾದದ್ದು. ಗೆಲುವಿನ ತುತ್ತತುದಿಯಲ್ಲಿ ನಿಂತವನು, ಭೋಗವನ್ನು ಮೆಟ್ಟಿನಿಂತು ತ್ಯಾಗ ಎಂಬ ಮೌಲ್ಯವನ್ನು ಮೆರೆದ ಎಂಬ ಅಂಶ. ಆದ್ದರಿಂದಲೇ ಸಹಸ್ಯ ವರ್ಷಗಳಾದರೂ ನಗ್ನನಾಗಿ, ತಪೋಮಗ್ನನಾಗಿ ನಿಂತವನಿಗೆ ನಿಲ್ಲದ ಪೂಜೆಗಳು ನಡೆಯುತ್ತವೆ. ಈ ಘಟನೆಯನ್ನು ಚಿಂತಿಸುತ್ತಾ ಚಿಂತಿಸುತ್ತಾ, ನನ್ನ ಚಿಂತಕ ಮನಸ್ಸು ಹೇಗೆ ಉದ್ಗರಿಸಿತು?

ಬೆಳೆದು ಬೆಳೆದು ನಗ್ನವಾಗಿ ನಿಂತವನಿಗೆ ಕ್ಷೀರಾಭಿಷೇಕವಾಗುತ್ತದೆ.
ಉಡುಗೆ ತೊಡುಗೆಯ ಹಂಗು ತೊರೆದವನಿಗೆ ಚಂದನದ ಲೋಪವಾಗುತ್ತದೆ.
ಬಟ್ಟಬಯಲಾಗಿ ನಿಂತವನ ಲೋಕಕಲ್ಯಾಣದ ಮಂದ ಹಾಸದಲ್ಲಿ ಈಯಲು
ಸಹಸ್ರಾರು ಜೀವಿಗಳು ಜಾತ್ರೆ ನೆರೆಯುತ್ತವೆ,
ಸ್ತುತಿಗೆ ಕಿವುಡಾದವನ ಮಹಿಮೆಯನ್ನು ನೂರಾರು
ಕವಿ ವಾಣಿಗಳು ಹಾಡಿಹೊಗಳುತ್ತದೆ.

ಮಣ್ಣಿನ ಮಾರ್ದವತೆಯಲ್ಲಿ ಅರಳಿದ ಪಾದಕಮಲಗಳಿಗೆ
ಕೋಟಿ ನಮಸ್ಕಾರಗಳ ದುಂಬಿಗಳು ತವಕಿಸಿ ಮುತ್ತುತ್ತವೆ.
ನಿರ್ಭಯನಾಗಿ ಗಗನಕ್ಕೆ ತೆರೆದು ನಿಂತವನ ಎದೆಯ ಮೇಲೆ
ಬಣ್ಣಬಣ್ಣದ ಮೋಡಗಳು ವಿಶ್ರಮಿಸುತ್ತವೆ.

ಬೆಳೆಯಲಾರದೆ ನಿಂತವನ ಬಡತನವನ್ನು ಮುಚ್ಚಲು ಉಡುಗೆ ತೊಡುಗೆಗಳು ಬೇಕು
ಸ್ತುತಿಯನ್ನು ಬಯಸಿ ಬಯಸಿ ಬೇಡುವವನಿಗೆ ವಂದಿ ಮಾಗಧರು ಬೇಕು.
ತನ್ನನ್ನು ಕಂಡು ನಗಲಾರದವನ್ನು ನಗಿಸಲು ವಿದೂಷಕರು ಬೇಕು
ಜಗತ್ತಿಗೆ ತೆರೆಯಲಾರದ ಎದೆಗೆ ಗುಂಡು ಭೇದಿಸಲಾರದ ರಕ್ಷಾಕವಚ ಬೇಕು.
ಹಗಲಿಗೆ ರಾತ್ರಿ ಹೆದರುತ್ತದೆ.
ರಾತ್ರಿ ಬಂದೀತೆಂದು ಹಗಲು ಬೆದರುತ್ತದೆ.

ಹನ್ನೆರಡನೆಯ ಶತಮಾನದ ಪೂರ್ವಾರ್ಧದಲ್ಲಿದ್ದವನೆಂದು ಹೇಳಲಾಗಿರುವ ನಾಗಚಂದ್ರನು ರಾಮಚಂದ್ರ ಚರಿತ ಪುರಾಣ ಎಂಬ ಕಾವ್ಯವನ್ನು ಬರೆದಿದ್ದಾನೆ. ಕವಿಯು ಅಭಿನವ ಪಂಪನೆಂದೂ ಅವನ ಕಾವ್ಯವು ಪಂಪರಾಮಾಯಣವೆಂದೂ ಪ್ರಸಿದ್ಧಿಗಳಿಸಿದೆ. ಕೃತಿಯಲ್ಲಿ ರಾಮಾಯಣವು ಜೈನ ಸಂಪ್ರದಾಯದಂತೆ ನಿರೂಪಿತವಾಗಿದೆ. ಅಲ್ಲಿ ಪ್ರತಿಪಾದಿತ ಮೌಲ್ಯಗಳು ಎಲ್ಲ ರಾಮಾಯಣಗಳಲ್ಲೂ ಪ್ರತಿಪಾದಿತವಾಗಿರುವ ಮೌಲ್ಯಗಳೇ. ಇಲ್ಲಿಯೂ ಸೀತೆಯ ಸೌಂದರ್ಯ ಅವನಿಗೆ ಮೃತ್ಯು ಸ್ವರೂಪವಾಯಿತು. ಪರಸ್ತ್ರೀಯನ್ನು ಮೋಹಿಸಿ. ಅಪಹರಿಸಿ ತರಲು ಮನಸ್ಸು ಮಾಡಿದ್ದು ರಾವಣನ ದುರಂತ ದೌರ್ಬಲ್ಯ. ಅದರ ಮೂಲ “ಕಂದರ್ಪ ವಿಮೋಹ”, ಮನ್ಮಥನ ಆಟ. ಆದುದರಿಂದ ಅವನು “ಪ್ರಾಣ ಪ್ರಿಯರಂ ನೆವಮಿಲ್ಲದೆ ಕರ್ಮವಶಮೆನೆ ಅಗಲಿಸಿದ”. ಸೀತೆಯನ್ನು ಪಡೆಯಬೇಕೆಂಬ ಮೋಹ ಹುಟ್ಟಿದೊಡನೆಯೇ ರಾವಣನು ತನ್ನ ಅವಲೋಕಿನೀ ಎಂಬ ವಿದ್ಯೆಯನ್ನು ಸ್ಮರಿಸುತ್ತಾನೆ. ಆ ವಿದ್ಯೆ ತೊತ್ತಿನಂತೆ ಮುಂದೆ ಬಂದು ನಿಂತು ‘ಏನಪ್ಪಣೆ?’ ಎಂದು ಹೇಳುತ್ತದೆ. ರಾವಣನಿಗೂ ಅವಲೋಕಿನೀ ವಿದ್ಯೆಗೂ ನಡೆಯುವ ಸಂಭಾಷಣೆಯನ್ನು ನಾಗಚಂದ್ರನು ಸೊಗಸಾಗಿ ವರ್ಣಿಸಿದ್ದಾನೆ.

ರಾವಣನು ಕೇಳುತ್ತಾನೆ: “ಈಕೆಯನ್ನು ಈತನಿಂದ ಅಗಲಿಸುವ ಉಪಾಯ ಯಾವುದು? ಅವಲೋಕಿನೀ ವಿದ್ಯೆ ಭಯಚಕಿತ ಚಿತ್ತೆಯಾಗಿ ಉತ್ತರ ಕೊಡುತ್ತದೆ:” “ಇವರು ನಿನಗಿಂತ ಅಧಿಕ ಬಲರಾದವರು. ಕಾರಣ ಪುರುಷರು. ನಿಷ್ಕಾರಣವಾಗಿ ಇವರಲ್ಲಿ ದ್ವೇಷವನ್ನು ಮಾಡುವುದೇ? ಅಧರ್ಮದಲ್ಲಿ ನಿರತರಾಗಿರುವವರನ್ನು ಸದಾಕಾಲದಲ್ಲಿಯೂ ಅಂಕೆಗೆ ಒಳಗಾಗಿಸಿ ಕಾಪಾಡಬೇಕಾದ ಕಾರ್ಯ ನಿನ್ನದು. ಅಂಥವರಲ್ಲಿ ನೀನೇ ವಿಷಯ ಸುಖದಲ್ಲಿ ಆಸಕ್ತನಾಗುವುದು ಎಂದರೆ “ಕಾವರ್ ಕಣಿಗೊಂಡರೆಂಬ ನುಡಿಗೆಡೆಯಿಕ್ಕುಂ” – ಕಾಪಾಡ ಬೇಕಾದವರೇ (ಯಾರನ್ನು ಕಾಪಾಡಬೇಕಾಗಿದೆಯೋ ಅವರ ಮೇಲೆ ಪ್ರಯೋಗಿಸಲು ಬಾಣವನ್ನು ಹಿಡಿದವರು ಎಂತಾಗುತ್ತದೆಯಲ್ಲ!) ದಶಾನನ, ಅನ್ಯಾಯದಿಂದ ನಡೆಯುವವರನ್ನು ನೀನು ನಿಯಂತ್ರಿಸುತ್ತೀಯೆ. ಇನ್ನೂ ನಿನ್ನನ್ನು ನಿಯಂತ್ರಿಸುವವರು ಯಾರು?” ಇಷ್ಟು ಹೇಳಿ ಕನ್ನಡ ಸಾಹಿತ್ಯದಲ್ಲಿ ತುಂಬ ಪ್ರಸಿದ್ಧವಾಗಿ ಉಳಿದ ಒಂದು ಮಾತನ್ನು ಕವಿ ಆ ಅವಲೋಕಿನೀ ವಿದ್ಯೆಯಿಂದ ಹೇಳಿಸುತ್ತಾನೆ: “ಮನ್ನೀರ್ ಬೆನ್ನೀರೆನೆ ಬೆರೆಸಲ್ ಅಣ್ಣ ತಣ್ಣೀರು ಒಳವೇ?” ರಾವಣನನ್ನು ಅದು “ಅಣ್ಣ” ಎಂದು ಆತ್ಮೀಯವಾಗಿ ಸಂಬೋಧಿಸಿ ಹೀಗೆ ಕೇಳುತ್ತದೆ: “ಸಮುದ್ರವು ಕಾದು ಕುದಿದರೆ ಅದಕ್ಕೆ ಬೆರೆಸಲು ತಣ್ಣೀರನ್ನು ಎಲ್ಲಿಂದ ತರೋಣ?”- ಎಂದರೆ ಇತರರಿಗೆ ಧರ್ಮವನ್ನು ಬೋಧಿಸಬೇಕಾದ ರಾಜನೇ ಸಮುದ್ರದ ಪ್ರಮಾಣಕ್ಕೆ ಸಮನಾದ ಅರ್ಧವನ್ನು ಮಾಡಹೊರಟರೆ ಅವನಿಗೆ ಬುದ್ಧಿ ಹೇಳಲು ಯಾರನ್ನು ಕರೆದು ತರುವುದು?

ಸ್ವಾಮಿನಿಷ್ಠೆ ಹಿಂದಿನ ಕಾಲದ ಒಂದು ದೊಡ್ಡ ಮೌಲ್ಯ. ಸ್ವಾಮಿಗಾಗಿ ತನ್ನ ಜೀವವನ್ನೇ ಬಲಿಕೊಡುವುದು ಅಂತಹ ಸ್ವಾಮಿನಿಷ್ಠರಾದವರಿಗೆ ಅತ್ಯಂತ ಹೆಮ್ಮೆಯ ವಿಷಯ. ಕುಮಾರವ್ಯಾಸ ಮಹಾಕವಿಯ ಭಾರತ ಕಥಾ ಮಂಜರಿಯಲ್ಲಿ ಅದು ಅನೇಕ ಕಡೆಗಳಲ್ಲಿ ಸೊಗಸಾಗಿ ನಿರೂಪಿತವಾಗಿದೆ. ಅವುಗಳಲ್ಲಿ ಕಿರೀತ ಪ್ರಾಯವಾಗಿರುವುದು ಕರ್ಣನಿಗೆ ದುರ್ಯೋಧನನ ವಿಷಯದಲ್ಲಿರುವ ಭಕ್ತಿ. ಉದ್ಯೋಗ ಪರ್ವದಲ್ಲಿ ಅದರ ವರ್ಣನೆ ಇದೆ. ಸಂಧಿಯ ಮಾತು ಮುರಿದು ಬಿದ್ದಿದೆ. ಕರ್ಣನನ್ನು ದೂರ ಕರೆದುಕೊಂಡು ಹೋಗಿ ಕೃಷ್ಣನು ಅವನು ಪಕ್ಷಾಂತರ ಮಾಡಬೇಕೆಂದು ಪ್ರಚೋದಿಸಿ, ಅತ್ಯಂತ ಹೆಚ್ಚಿನ ಬೆಲೆಯ ಆಮಿಷವನ್ನು ತೋರಿಸುತ್ತಾನೆ.

ನಿನಗೆ ಹಸ್ತಿನಾಪುರದ ರಾಜ್ಯದ
ಘನತೆಯನು ಮಾಡುವೆನು ಪಾಂಡವ
ಜನಪ ಕೌರವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾಯ್ದುಂಬುಲಕೆ ಕೈಯಾನುವರೆ ಹೇಳೆಂದ ||

ಎಡದ ಮೈಯಲಿ ಕೌರವೇಂದ್ರ
ಗಡಣ ಬಲದಲಿ ಪಾಂಡು ತನಯರ
ಗಡಣಯಿದಿರಲಿ ಮಾದ್ರಮಾಗದ ಯಾದವಾದಿಗಳು
ನಡುವೆ ನೀನೋಲಗ ದೊಳೊಪ್ಪುವ
ಕಡುವಿಲಾಸವ ಬಿಸುಟು ಕುರುಪತಿ
ನುಡಿಗೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ ||

ಆದರೆ ಕರ್ಣ ಆಮಿಶಕ್ಕೆ ಬಲಿಯಾಗಲಿಲ್ಲ. ಅವನ ಸ್ವಾಮಿ ನಿಷ್ಠೆಯು, ತಾನೇ ಸ್ವಯಂ ಚಕ್ರವರ್ತಿಯಾಗುವ ಬಯಕೆಯನ್ನು ಮೆಟ್ಟಿನಿಂತತು. ಅವನು ಹೇಳಿದ:

ಮರುಳು ಮಾಧವ ಮಹಿಯ ರಾಜ್ಯದ
ನಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲು ಮನವಿಲ್ಲ |
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುಹನೆಂಬೀ
ಭರದೊಳಿದ್ದೇನು ಕೌರವೇಂದ್ರನ ಕೊಂದೆ ನೀನೆಂದ ||
ಪತಿಯವಸರಕ್ಕೆ ಶರೀರವನು ನೂಕುವೆನು ||

ಆಧುನಿಕ ಕಾಲದಲ್ಲಿ ಅನೇಕ ಹೊಸ ಮೌಲ್ಯಗಳು ಸೃಷ್ಟಿಯಾಗಿವೆ. ಅವುಗಳಲ್ಲಿ ಒಂದು ಗಿಡಮರಗಳನ್ನು ಕಡಿಯಕೂಡದು, ಸೌಂದರ್ಯವನ್ನು ನಾಶಗೊಳಿಸಕೂಡದು ಎಂಬುದು. ಕುವೆಂಪು ಅವರ ‘ಹೂವು-ದೇವರು’ ಎಂಬ ಪದ್ಯದಲ್ಲಿ ಈ ಮೌಲ್ಯವು ಪ್ರತಿಪಾದಿತವಾಗಿರುವ ರೀತಿ ಹೀಗಿದೆ:

ಕಾಮನ ಬಿಲ್ಲಿನ ಬಿತ್ತವ ಬಿತ್ತಿ
ಬೆಳಯಾದಂತಿದೆ ಹೂದೋಟ
ಮೋಹಿಸುವಪ್ಸರೆಯರೆ ನೆರೆ ಮುತ್ತಿ
ಕುಣಿಕುಣಿವಂತಿದೆ ನೋಟ
ಹಳದಿಯ ಕೆಂಪಿನ ನೀಲಿಯ ಹಸುರಿಸಿ
ಚಿನ್ನದ ಬೆಳ್ಳಿಯ ಮುತ್ತಿನ ಪಚ್ಚೆಯ
ತರತರ ಬಣ್ಣದ ತೆರೆಯಾಟ
ಎದೆಯಲಿ ನಲುಮೆಯ ಚಿಲುಮೆಯ ಚಿಮ್ಮಿಸೆ|
ಕಚಗುಳಿಯಿಡುತಿದೆ ಹೂದೋಟ!

ಆದರೆ ಪೂಜಾರಿಯೂ ಹೂಕೊಯ್ಯಲು ಬರುತ್ತಾನೆ. ಕವಿಗೆ ಗಾಬರಿಯಾಗುತ್ತದೆ ಹೇಳುತ್ತಾರೆ: “ಹೂಗಳ ಚೆಲುವಿಗೆ ದೇವರೆ ಮಾರಿ?” ಅವರು ಪೂಜಾರಿಯನ್ನು ಹೇಳಿಕೊಳ್ಳುತ್ತಾರೆ:

ಪೂಜಾರಿ,
ಕೋಮಲ ಸುಮಗಳ ಕತ್ತನು ಕೊಯ್ದು
ಕಗ್ಗಲ್ಲಿನ ಕಗ್ಗತ್ತಲೆಗೊಯ್ದು
ಗುಡಿಯಾ ಕಲ್ಲಿಗೆ ಬಲಿಕೊಡದಿದ್ದರೆ
ಪರಮಾತ್ಮಗೆ ತೃಪ್ತಿಯೆ ಇಲ್ಲೇನು?
ಈಗಿಡದೊಳೆ ರಾರಾಜಿಸುತ್ತಿದ್ದರೆ
ಶಿವಪೂಜೆಯು ಸಲ್ಲುವುದಿಲ್ಲೇನು?
ಚೆಲುವೆಂಬುದು ಶಿವನಲ್ಲೇನು?
ಸೌಂದರ್ಯದ ಸುಮ ನಯವವ ಕಿತ್ತರೆ
ಶಿವನಾರಾಧನೆಯಾದೀತೆ?
ಶಿವ ಮುಖ ಚಂದ್ರಿಕೆ ಚೆಲುವದು ಸತ್ತರೆ
ಭುವನಕೆ ಮಂಗಳವಾದೀತೆ?
ಬಿಡೋ ಅಲ್ಲಿರಲಿ ಹೂವು!

ಇಷ್ಟು ಹೇಳಿ, ನಮ್ಮೆಲ್ಲರಲ್ಲೂ ತಾತ್ವಿಕ ಚಿಂತನೆಯೊಂದು ಜಾಗೃತವಾಗುವಂತೆ ಮಾಡುತ್ತಾರೆ!

ನೀ ಸೃಷ್ಟಿಸಲಾರದೆ ಚೆಲುವಿಗೆ
ನಿನ್ನಿಂದೇತಕೆ ಸಾವು?