II

ಕವಿಯ ಮಹತ್ತು ಅವನು ಆರಿಸಿಕೊಳ್ಳುವ ವಸ್ತುವೊಂದರಿಂದಲೇ ನಿರ್ಣಯವಾಗುವುದಿಲ್ಲ ಎಂದು ಸೂಚಿಸಿದ್ದೇವೆ. ಅವನು ಸನ್ನಿವೇಶಗಳನ್ನು ನಿರ್ಮಿಸುವುದು ಅವನ ಮಹತ್ತನ್ನು ನಿರ್ಣಯಿಸುವ ಅಂಶವಾಗುತ್ತದೆ. ಪಂಪ ಮಹಾಕವಿಯು ತನ್ನ ಎರಡೂ ಮಹಾಕಾವ್ಯಗಳಲ್ಲಿ ವಿವಿಧ ರೀತಿಯ ಸನ್ನಿವೇಶಗಳನ್ನು ಹೇಗೆ ನಿರ್ಮಿಸುತ್ತಾನೆ. ನಿರ್ವಹಿಸುತ್ತಾನೆ ಎಂಬುದನ್ನು ನೋಡೋಣ ಮೊದಲನೆಯದಾಗಿ ವಿಕ್ರಮಾರ್ಜುನ ವಿಜಯದ ಕೆಲವು ಸನ್ನಿವೇಶಗಳನ್ನು ಪರಿಶೀಲಿಸೋಣ.

ವೃದ್ಧಪರಾಶರ ಮುನಿಯು ಉತ್ತರಾಪಥಕ್ಕೆ ಹೋಗುತ್ತ ಯಮುನಾ ನದಿಯಲ್ಲಿ ಓಡನ್ನು ನಡೆಸುತ್ತಿದ್ದ ಮತ್ಸ್ಯಗಂಧಿಯನ್ನು ಕಂಡ ಸಂದರ್ಭ. ಒಂದು ಗದ್ಯಭಾಗದಲ್ಲಿ ಪರಾಶರ ಮುನಿಗೂ ಮತ್ಸ್ಯಗಂಧಿಗೂ ನಡೆದ ಸಂಭಾಷಣೆಯನ್ನು ತನಗೆ ಉಚಿತವಾದ ಸಂಕ್ಷೇಪತಾ ರೀತಿಯಲ್ಲಿ ಪಂಪನು ನಿರೂಪಿಸುತ್ತಾನೆ.

ಪರಾಶರ: ಎಮ್ಮನ್ ಈ ತೊಱೆಯಂ ಪಾಯಿಸು.

ಮತ್ಸ್ಯಗಂಧಿ: ಸಾಸಿರ್ವರ್ ಏಱೆದೊಡಲ್ಲದೆ ಈ ಓಡಂ ನಡೆಯುದು.

ಪರಾಶರ: ಆಂ ಅನಿಬರ ಬಿಣ್ಪುಮ್ ಅಪ್ಪೆಮ್ ಏಱಿಸು.

ಅವಳು ಒಪ್ಪಿದಳು. ಋಷಿಯು ಓಡನ್ನು ಏರಿದರು. ಆಕೆ ಅದನ್ನು ನಡೆಯಿಸುವಾಗ ಆ ದಿವ್ಯಕನ್ಯೆಯನ್ನು-ಋಷಿಯು ನೋಡುವವರೆಗೂ ಅವಳು ಮೀನು ವಾಸನೆಯ ಹೆಣ್ಣು ಅವರ ಕಾಮದ ಕಣ್ಣಿಗೆ ಅವಳು ದಿವ್ಯಕನ್ಯೆಯಾಗಿ ಕಂಡಳು!- ಪ್ರೀತಿಯಿಂದ ನೋಡಿದರು. ನೋಡಿ:

“ಮನದಲ್ಲಿಸೋತು, ಮುನೀಂದ್ರನು ಆಕೆಯ ಒಡಲಿನ ದುರ್ಗಂಧವು ಹೋಗುವಂತೆ ಯೋಜನ ಗಂಧಿತ್ವವನ್ನು ಕೊಟ್ಟು ಮಂಜನ್ನೇ ಕಾಂಡಪಟವನ್ನಾಗಿ ಮಾಡಿ (ಅವಳನ್ನು) ಸಂತೋಷವು ಪ್ರೀತಿಯನ್ನುಂಟುಮಾಡುವಂತೆ ಕೂಡಿದಾಗ ಜ್ಞಾನಸ್ಪರೂಪಿಯಾದ ಮಹಾ ಮುನಿಪ (ವ್ಯಾಸ ಭಟ್ಟಾರಕನು) ಹುಟ್ಟಿದನು. ಮಹಾಮುನಿಗಳು ಏನು ಮಾಡಿದರೂ ತಡೆಯುತ್ತದೆ, ಅಲ್ಲದೆ?

ಮೂಲದಲ್ಲಿ ಇದು ಒಂದು ಆಖ್ಯಾನ ಅದನ್ನು ಪಂಪ ನಾಲ್ಕೇ ಪಂಕ್ತಿಯ ಒಂದು ಪದ್ಯದಲ್ಲಿ, ಒಂದು ವಿವರವನ್ನೂ ಬಿಡದೆ ವರ್ಣಿಸಿದ್ದಾನೆ. ಅಷ್ಟೇ ಅಲ್ಲ. ಯಾರ ಮನಸ್ಸಿನಲ್ಲಾದರು, ಇದೇನಿದು, ಮಹರ್ಷಿಗಳು, ಹೀಗೆ ಸಾಮಾನ್ಯರಂತೆ ದೋಣಿ ನಡೆಸುವ ಬೆಸ್ತರ ಹೊಣ್ಣೊಂದನ್ನು, ಅದೂ ದೋಣಿಯಲ್ಲಿ ಕೂಡಬಹುದೆ ಎಂಬ ಪ್ರಶ್ನೆ ಸುಳಿದೀತು ಎಂಬುದನ್ನು ನಿರೀಕ್ಷಿಸಿ ತಾನೇ ಸಮಾಧಾನವನ್ನೂ ಹೇಳುತ್ತಾನೆ; ಹಾಗೆ ಮಾಡಿದರು ಮಹಾ ಋಷಿಗಳು, ಅಂಥವರು ಏನು ಮಾಡಿದರೂ ನಡೆಯುತ್ತದೆ ಅಲ್ಲದೆ? ಅದು ಕ್ಷಮ್ಯ. ಅದನ್ನು ಪ್ರಶ್ನಿಸುವುದು ಕೂಡ ಸರಿಯಲ್ಲ ಎಂಬುದು ಪಂಪನ ಸೂಚನೆ.

ಮುಂದಿನದು ಇನ್ನೂ ಪ್ರಖ್ಯಾತವಾದ ಪದ್ಯ. ಪರಾಶರರು ಸತ್ಯವತಿಗೆ-ಅದು ಮತ್ಸ್ಯಗಂಧಿಯಾಗಿದ್ದು ಯೋಜನಗಂಧಿಯಾದ ಹೆಣ್ಣಿನ ಹೆಸರು-ಪುನ ಕನ್ಯಾಭಾವವನ್ನು ನೀಡಿ ಹೊರಟು ಹೋದರು. ಅನಂತರ ನಡೆದ ಘಟನೆಯನ್ನು ಪಂಪ ವರ್ಣಿಸಿರುವ ರೀತಿ ‘ಹಿತಮಿತ ವಚನನ್’ ಎಂಬ ಕೀರ್ತಿಯನ್ನು ಸಾರ್ಥಕಗೊಳಿಸುವಂಥದು. ಹಿಂದಿನಂತೆಯೇ ಒಂದು ವಿಸ್ತಾರವಾದ ಆಖ್ಯಾನವನ್ನು ನಾಲ್ಕೇ ಪಂಕ್ತಿಗಳಲ್ಲಿ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಸಂಕ್ಷೇಪಿಸುವ ಅವನ ಕಲೆಗೂ ಇದು ಉತ್ತಮ ನಿದರ್ಶನ.

“ಬೇಟೆಯ ಕಾರಣವಾಗಿ ಒಂದು ಸಲ ಶಂತನುವು ಸಂಚರಿಸುತ್ತಿರಲು ಜಿಂಕೆಯ ಕಣ್ಣಿನ ಹೆಣ್ಣಿನ ಕಂಪು ಒತ್ತಿತಾಗಲು, ಕೂಡಲೇ ಅವನು ತುಂಬಿಯಂತೆ ಅದಕ್ಕೆ (ಆ ಕಂಪಿಗೆ ಕಾರಣವಾದ ಹೆಣ್ಣನ್ನು ಕಂಡು ಅವಳಿಗೆ) ಸೋತು, (ತನ್ನ ಪ್ರೀತಿಯನ್ನು ಸ್ಥಿರಪಡಿಸುವುದಕ್ಕೆ) ‘ದಿವ್ಯ’ವನ್ನು ಹಿಡಿಯುವಂತೆ (ಆಕೆಯನ್ನು) ಹಿಡಿದು ‘ಬಾ ಹೋಗೋಣ’ ಎಂದ ಅವನನ್ನು ಕುರಿತು ಆಕೆ ನಾಚಿಕೆಯಿಂದ ‘ನೀವು ನನ್ನನ್ನು ಅಪೇಕ್ಷಿಸುವುದಾದರೆ, ನಮ್ಮ ತಂದೆಯ ಬಳಿ ಈ ಅಪೇಕ್ಷೆಯನ್ನು ಹೇಳಿರಿ’ ಎಂದಳು.

ವಾಸ್ತವವಾಗಿ ಎಷ್ಟು ವಿಷಯಗಳು ಈ ಒಂದು ವೃತ್ತದಲ್ಲಿ ಅಡಕವಾಗಿವೆ. ಶಂತನು ಯಮುನಾ ನದೀ ತೀರಕ್ಕೆ ಬಂದದ್ದೇಕೆ ಎಂಬುದಕ್ಕೆ ಮೊದಲ ಮಾತಿನಲ್ಲಿ ಉತ್ತರವಿದೆ. ಬೇಟೆ ಅವನಿಗೆ ಪ್ರಿಯವಾದದ್ದು. ಬೇಟೆಯಾಡುತ್ತಾ ಅಲ್ಲಿಗೆ ಬಂದ. ಮೃಗವನ್ನು ಅರಸುತ್ತಾ ಬಂದವನನ್ನು ಮೃಗದಂತೆ ಕಣ್ಣುಳ್ಳ ಹೆಣ್ಣಿನ ಸುವಾಸನೆ-ಅದೂ ಯೋಚನೆ ಗಂಧಿತ್ವ ಪ್ರಾಪ್ತವಾಗಿತ್ತಾಗಿ- ತಟ್ಟಿ ಮುತ್ತಿತು. ಅಂಥ ಸುವಾಸನೆಗೇ ಆತ ಸೋತ, ತುಂಬಿ ವಾಸನೆಗೆ ಸೋಲುವಂತೆ. ಮುಂದಿನ ಕ್ರಿಯೆ ಅಂಥ ವಾಸನೆಯನ್ನು ಸೂಸುತ್ತಿದ್ದವಳನ್ನು ಕಂಡದ್ದು. ಅನಂತರದ ಕ್ರಿಯೆ ಕಂಡಕೂಡಲೇ ಅವಳನ್ನು ಪ್ರೀತಿಸತೊಡಗಿದ್ದು. ಮುಂದಿನ ಕ್ರಿಯೆ ತಾನು ಧಿಡೀರನೇ ಪ್ರೀತಿತೊಡಗಿದ ಹೆಣ್ಣನ್ನು ಹಿಡಿದದ್ದು. ಹೀಗೆ ಅಪರಿಚಿತಳಾದ ಹೆಣ್ಣನ್ನು ರಾಜನೇ ಆದರೂ ಥಟ್ಟನೆ ಹಿಡಿಯಬಹುದೇ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಏಳುತ್ತದೆಯಷ್ಟೆ. ಹಾಗೆ ಆದದ್ದರಲ್ಲಿ ಲವಲೇಶವೂ ತಪ್ಪಿಲ್ಲ ಎಂಬುದನ್ನು ಅದು ಎಲ್ಲರ ಒಪ್ಪಿಗೆಯನ್ನು ಪಡೆಯಬಹುದಾದ್ದು ಎನ್ನುವುದನ್ನು ಒಂದೇ ಒಂದು ಸುಂದರವಾದ ಉಪಮೆಯಿಂದ ಪಂಪ ಸ್ಥಾಪಿಸುತ್ತಾನೆ. “ನಲ್ಮೆಗೆ ದಿಬ್ಬಂಬಿಡಿವಂತೆವೋಲ್ ಪಿಡಿದು.” ತಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂಬುದನ್ನು ಪ್ರಮಾಣಪೂರ್ವಕವಾಗಿ ತೋರಿಸುವಂತೆ ಅವಳನ್ನು ಹಿಡಿದನಂತೆ. ಅಗ್ನಿ, ಜಲ ಮುಂತಾದವನ್ನು ಹಿಡಿದು ತಾನು ತಪ್ಪಿತಸ್ಥನಲ್ಲ ಎಂದು ತೋರುವುದು “ದಿಬ್ಬ ಅಥವಾ ದಿವ್ಯ” ಹಾಗೆ ಅಗ್ನಿಯನ್ನು ಮುಟ್ಟಿ ಪ್ರೇಮವನ್ನು ಪ್ರಮಾಣೀಕರಿಸಿ ತೋರಿಸಿದ ಮೇಳೆ ಇನ್ನು ಅನುಮಾನವೆಲ್ಲಿಯದು? ಮುಂದಿನ ಕ್ರಿಯೆ ಶಂತನು ಸತ್ಯವತಿಯನ್ನು ತನ್ನ ಜೊತೆಯಲ್ಲಿ ಕರೆದೊಯ್ಯಲು ಆಹ್ವಾ ನೀಡಿದ್ದು. ಆಕೆ ತಕ್ಷಣ ಒಪ್ಪಿದ್ದರೆ ಅವನ ಅರಮನೆಯ ಅನೇಕ ರಾಣಿಯರಲ್ಲಿ ಅವಳೂ ಒಬ್ಬಳಾಗುತ್ತಿದ್ದಳು. ಅಲ್ಲದೆ ಮಹಾಭಾರತದ ಕತೆಯೇ ಬೇರೆಯಾಗುತ್ತಿತ್ತು. ಇರಲಿ, ಆಕೆ ಮೆಲ್ಲಗೆ, ನಾಚಿಕೆಯಿಂದ ಹೇಳಿದಳಂತೆ. ಮೆಲ್ಲಗೆ ನಾಚಿಕೆಯಿಂದ ಹೇಳಿದಳು ಎನ್ನುವುದರಲ್ಲಿಯೇ ಸತ್ಯವತಿಯೂ ಶಂತನುವಿನಲ್ಲಿ ಅನುರಕ್ತಳಾಗಿದ್ದಾಳೆ ಎಂದು ಸೂಚಿಸಿದ್ದಾಯಿತು. ಅವಳು ರಾಜನನ್ನು ನೋಡಿ, ಮನಸೋತು, ರಾಣಿಯಾಗುವ ಆಸೆಯಿಂದ ಅವನೊಡನೆ ನಡೆದು ಬಿಡಲಿಲ್ಲ (ಯೋಚಿಸಿ ಹೇಳಿದಳು) ನೀವು ಬೇಡುವುದೇ ಆದರೆ ಈ ಬೇಡಿಕೆಯನ್ನು ನಮ್ಮ ತಂದೆಯ ಮುಂದೆ ಇಡಿ.”

ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ತಮ್ಮ “ಪಂಪಬಾರತ ದೀಪಿಕೆ” ಯಲ್ಲಿ (ಪು. ೨೬) ಇದಕ್ಕೆ ಒಪ್ಪುವ ವ್ಯಾಖ್ಯಾನವನ್ನು ಬರೆದಿದ್ದಾರೆ: “ವೇಗವಾಗಿ ಗತಿ, ಪಾತ್ರಗಳ ಮನೋಧರ್ಮ, ಪ್ರೇಮೋನ್ಮಾದ, ಲಜ್ಜೆ, ಒಲವು, ತಂದೆಯಲ್ಲಿ ವಿಧೇಯತೆ ಇವೇ ಮುಂತಾದವುಗಳಿಂದ ಈ ಪದ್ಯ ಅತಿ ರಮಣೀಯವಾಗಿದೆ; ಎಷ್ಟು ಚವರ್ಣಮಾಡಿದ ರೂ ಇದರ ಸೊಗಸು ಮುಗಿಯುವಂತಿಲ್ಲ.”

ದ್ರೋಣರು ಪರಶುರಾಮರ ಬಳಿಗೆ ಬಂದು ಏನನ್ನಾದರೂ ಕೊಡಿ ಎಂದು ಬೇಡಿದಾಗ ಅವರು ಉತ್ತರ ಕೊಡುವ ಒಂದು ವೃತ್ತದಲ್ಲಿ ಹತ್ತು ಸಣ್ಣ ವಾಕ್ಯಗಳನ್ನು ಪಂಪ ತುರುಕಿದ್ದಾನೆ (೨:೫೬): ನನ್ನ ಸಂಪತ್ತನ್ನೆಲ್ಲ ಯಾಚಕರಿಗೆ ಕೊಟ್ಟಿಬಿಟ್ಟಿದ್ದೇನೆ. ಭೂಮಂಡಲವನ್ನು ಗುರುವಿಗೆ ಕೊಟ್ಟೇನೆ. ಈಗ ನನ್ನ ಕೈಯಲ್ಲಿ ಒಂದು ಅಡಕೆಯೂ ಇಲ್ಲ! (ಇಲ್ಲಿನ ನುಡಿಗಟ್ಟಿನ ಪ್ರಯೋಗವನ್ನು ಗಮನಿಸಿ.) ನನ್ನನ್ನು ಬಂದು ಬೇಡಿರುವವನಾದರೋ ಶಾಸ್ತ್ರ ಪರಂಗತನಾದವನು. ಇಂಥವನನ್ನು ಹೇಗೆ ಸಂತೋಷಪಡಿಸಲಿ? ‘ದ್ರೋಣರೇ, ಇದೊಂದು ಬಿಲ್ಲು ಇದೆ. ಶ್ರೇಷ್ಠವಾದ ಮಂತ್ರಾಸ್ತ್ರಗಳ ಸಮೂಹವಿದೆ. ಬೇರೇನೂ ಆಸ್ತಿ ಇಲ್ಲ. ಈ ಎರಡರಲ್ಲಿ ಯಾವುದನ್ನು ಕೊಡಲಿ? ಚೆನ್ನಾಗಿ ಹೇಳಿ.’ ಸಂಭಾಷಣೆಯನ್ನು ಪಂಪನು ನಿರ್ವಹಿಸುವ ಅನುಪಮವಾದ ರೀತಿಗೂ ಈ ಪದ್ಯ ಒಳ್ಳೆಯ ಉದಾಹರಣೆ.

ಮುಂದಿನ ಪದ್ಯದಲ್ಲೇ (೨:೮೭) ದ್ರುಪದನನ್ನು ದ್ರೋಣರು ಕಾಣಲು ಬಯಸುವ ಸಂದರ್ಭದ ವರ್ಣನೆಯಿದೆ. “ಜೊತೆಯಲ್ಲಿ ಓದಿನ ದ್ರೋಣನೆಂಬಾತನು ಬಂದಿದ್ದೇನೆ, ಕಾಣಬೇಕು” ಎಂಬ ದ್ರೋಣ ಸಂದೇಶವನ್ನು ಒಯ್ದ ಪಡಿಯರನಿಗೆ ದ್ರುಪದ ಹಾಕುವ ಪ್ರಶ್ನೆಗಳ ಸರ ಮಾಲೆಯಲ್ಲಿ, ಕೊನೆಗೆ ನೀಡುವ ಲಜ್ಜೆಯಲ್ಲಿ ಎಷ್ಟು ಭಾವಗಳು ಅಡಕವಾಗಿವೆ: “ಹಾಗೆ (ಎಂದರೆ ಸಹಪಾಠಿ) ಎಂದು ಹೇಳಿಕೊಳ್ಳುವವನು ಯಾರು? ಹಿರಿದಾದ ಭ್ರಮೆಯಲ್ಲವೆ ಅದು? ದ್ರೋಣನೆಂಬುವನೇನು? ಬ್ರಾಹ್ಮಣನೇ ಅವನು? (ಹಾಗದರೆ) ಅವನು ಹೇಗೆ ನನಗೆ ಸ್ನೇಹಿತ? ಅಂಥ (ಯಾರನ್ನೂ) ನಾನು ಅರಿಯೆ. ನೂಕು.” ಅಹಂಕಾರ, ಔದಾಸೀನ್ಯ, ತಿರಸ್ಕಾರ, ಅನಾದರ, ದುಷ್ಟತನ-ಇಷ್ಟು ಭಾವಗಳನ್ನು ಒಂದು ಪುಟ್ಟ ಪದ್ಯದಲ್ಲಿ ಪಂಪ ಅಡಕಮಾಡಿದ್ದಾನೆ. ಮುಂದಿನ ಪದ್ಯದಲ್ಲಂತೂ ಸಂಭಾಷಣೆಯ ಸೊಗಸನ್ನು ಪಂಪ ಇನ್ನೂ ಚೆನ್ನಾಗಿ ತೋರಿಸಿದ್ದಾನೆ (೨:೪೮)

ದ್ರೋಣ: ಅಣ್ಣ, ನೀನೂ ನಾನು ಜೊತೆಯಲ್ಲಿ ಕಲಿತೆವು ಎಂಬುದನ್ನು ತಿಳಿಯಿರೇ?

ದ್ರುಪದ: ನಿನ್ನನ್ನು ನಾನು ತಿಳಿಯೆನು. ಅದೆಲ್ಲಿ ಕಂಡೆಯೋ? ರಾಜನಿಗೂ ಬ್ರಾಹ್ಮಣನಿಗೂ ಎಂಥ ಸ್ನೇಹ? ಮನುಷ್ಯರು ಹೀಗೆ ನಾಚಿಕೆಗೆಟ್ಟವರಾಗುತ್ತಾರೆಯೆ?

ಮುಂದೆ (೨:೯೧) ದುರ್ಯೋಧನನು ತನ್ನ ತಂದೆಗೆ ಪಾಂಡವರಿಂದ ಒದಗುವ ಅಪಾಯದ ಬಗ್ಗೆ ಎಚ್ಚರಿಕೆಯನ್ನು ನೀಡುವಾಗ ಅವನಿಗೆ ಹೇಳುವ ಮಾತುಗಳು ರಾಜನೀತಿಯ ಅರಿವನ್ನು ತೆರೆದು ತೋರಿಸುವಂಥವು. ಅಲ್ಲಿಯೂ ಪ್ರಶ್ನೆಗಳ ಸರಮಾಲೆಯೇ ಇದೆ: “ಮತ್ತು (ಪಾಂಡವರಿಗೆ) ಕುಲ ಇಲ್ಲವೋ? ರಾಜ್ಯಕ್ಕೆ ಅವರ ತಂದೆಯೇ ಮುಖ್ಯಸ್ಥನಾಗಿರಲಿಲ್ಲವೆ? ತಂದೆಯೇ, ನಿಮಗೆ ಮನಸ್ಸಿನಲ್ಲಿ ಬಿದ್ಧಿಯು ಅಲ್ಪವಾಗಬೇಕಾದದ್ದಿಲ್ಲ. ವಿಧಿಯೋಗದಿಂದ ನಿಮ್ಮಕಣ್ಣು ಕುರುಡಾದರೇನು, ನಿಮ್ಮ ಬುದ್ಧಿಯೂ ಕುರುಡಾಗಬೇಕೇನು?”

ಶಿಶುಪಾಲ ವಧೆಯ ಸಂದರ್ಭದಲ್ಲಿ “ಪೌರುಷಯುಕ್ತವಾದ ಅಚ್ಚದೇಸೀ ಶೈಲಿಯಲ್ಲಿ” ಶಿಶುಪಾಲನ ಭಾವನೆಗಳನ್ನು ವರ್ಣಿಸಿರುವ ಈ ಪುಟ್ಟ ಪದ್ಯವನ್ನು ಗಮನಿಸಿ (೬:೪೯) “(ಅಗ್ರಪೂಜೆಯನ್ನು ಈ ಕೃಷ್ಣನಿಗೆ) ಕೊಡಲು ಹೇಳುವವನ, (ಹಾಗೆ ಕೊಡಲು) ಪಡೆಯುವವನ ಹಿರಿಮೆ ಏನು ಕೀರ್ತಿಯನ್ನು ಪಡೆಯುತ್ತದೆಯೇ? ಕೊಡುವ ಅಣ್ಣನು ಕೊಡಲಿ ಕೊಡಲು ಸ್ವೀಕರಿಸುವ ಶೂರನನ್ನು ತಿಳಿಯಲು ಸಾಧ್ಯವಾಗುತ್ತದೆ. (ಎಂದರೆ ಯಾವನು ಸ್ವೀಕರಿಸುತ್ತಾನೋ ಆ ಶೂರನನ್ನು ನೋಡಿ ಕೊಳ್ಳುತ್ತೇನೆ.)

ಇದೊಂದು ಪದ್ಯ ಮಾತ್ರವಲ್ಲ, ಇಡೀ ಶಿಶುಪಾಲ ವಧೆಯ ಪ್ರಸಂಗವೇ ಅತ್ಯಂತ ಮನನೀಯವಾಗಿದೆ. ತಮ್ಮ ಪಂಪಭಾರತ ದೀಪಿಕೆಯಲ್ಲಿ (ಪು. ೨೩೩-೪) ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಈ ಪ್ರಸಂಗವನ್ನು ಪಂಪನು ನಿರ್ವಹಿಸಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಾ ಹೀಗೆನ್ನುತ್ತಾರೆ:

“ವ್ಯಾಸ ಭಾರತದಲ್ಲಿ ಈ ಉಪಾಖ್ಯಾನ ಆರು ಅಧ್ಯಾಯಗಳಷ್ಟು ವಿಸ್ತಾರವಾಗಿದೆ. ಪಂಪನು ಇಪ್ಪತ್ತೈದು ಪದ್ಯಗಳಲ್ಲಿ ಇದನ್ನು ನಾಟಕೀಯತೆಯಿಂದ ಸಂಗ್ರಹಿಸಿದ್ದಾನೆ. ಈ ಪ್ರಸಂಗದಲ್ಲಿ ನೇರವಾಗಿ ಸಂಬಂಧವನ್ನುಳ್ಳ ವ್ಯಕ್ತಿಗಳು ಇಬ್ಬರು, ಶಿಶುಪಾಲ ಮತ್ತು ಶ್ರೀಕೃಷ್ಣ ಪಂಪನು ಅವರನ್ನು ಮುಂದೆಬಿಟ್ಟು ಈ ನಾಟಕವನ್ನಾಡಿಸಿದ್ದಾನೆ. ಅಗ್ರಪೂಜೆಗೆ ಶ್ರೀಕೃಷ್ಣನನ್ನೇ ಸೂಚಿಸಿದ ಭೀಷ್ಮ, ಅದರಂತೆ ಒಪ್ಪಿ ಮಾಡಲು ತೊಡಗಿದ ಧರ್ಮರಾಜ-ಇವರಿಬ್ಬರನ್ನು ಶಿಶುಪಾಲ ನಿಂದಿಸುವುದು ಅವನ ಸ್ವಭಾವಕ್ಕೆ ತಕ್ಕುದಾಗಿಯೂ ಇದೆ; ಅನಂತರ ಕೃಷ್ಣನ ನಿಂದೆ, ಸ್ವಾತ್ಮಪ್ರಶಂಸೆ. ಕೃಷ್ಣನು ಸ್ವಲ್ಪವಾದರೂ ಉದ್ರಿಕ್ತನಾಗದೆ ಸ್ಥಿತಪ್ರಜ್ಞನಂತೆ ಇದ್ದು ಶಿಶುಪಾಲನ ತೆಗಳಿಕೆಗಳನ್ನು ಕೇಳಿ ಸಮಾಧಾನ ಚಿತ್ತದಿಂದ ತನ್ನ ಮಾತನ್ನು ಆರಂಭಿಸುತ್ತಾನೆ. ಆ ಮೇಲೆ ಕೋಪ ಬಂದು ಅರ್ಘ್ಯದ ತಟ್ಟೆಯಿಂದಲೇ ಶಿಶುಪಾಲನ ಕೊರಳನ್ನು ಕತ್ತರಿಸುತ್ತಾನೆ. ಇಲ್ಲಿ ಒಂದು ಯುದ್ಧವೇ ನಡೆಯುತ್ತದೆ, ಕೃಷ್ಣ ಚಕ್ರಾಯುಧವನ್ನೇ ಪ್ರಯೋಗಿಸುತ್ತಾನೆ, ವ್ಯಾಸ ಭಾರತದಲ್ಲಿ ಶಿಶುಪಾಲನ ಸಂಹಾರಕ್ಕೆ ಇಷ್ಟೆಲ್ಲ ಗೊಂದಲವೇಕೆ, ತಟ್ಟೆಯೊಂದೇ ಸಾಕು ಎಂದು ಪಂಪನು ಭಾವಿಸಿದ್ದಾನೆ. ಈ ದೃಶ್ಯದ ಕ್ರಿಯೆಯ ಆರೋಹಣ, ಶಿಖರ, ಅವರೋಹಣಗಳು ಕಲಾಮಯವಾಗಿದೆ; ಪಾತ್ರಗಳ ಗುಣ ಸ್ವಭಾವ ಪ್ರಸ್ಫುಟವಾಗಿ ಚಿತ್ರಿತವಾಗಿದೆ. ಬೇರೊಬ್ಬರ ಮಾತುಗಾರಿಕೆ ನಡುವೆ ಬರುವುದಿಲ್ಲ. ಶೈಲಿ ಮಿತಹಿತವಾಗಿದೆ. ಒಟ್ಟಿನಲ್ಲಿ ಪಂಪನ ಚಿತ್ರಣ ನಾಟಕದ ಒಂದು ದೃಶ್ಯದಂತೆ ರಮಣೀಯವಾಗಿದೆ. ಇಲ್ಲಿ ಅವನ ಎಲ್ಲ ಶಕ್ತಿ ವಿಶೇಷಗಳನ್ನು ಕಾಣಬಹುದು.”

ಪಂಪನು ಉಜ್ವಲವಾಗಿ ಬೆಳಗಿ ತೋರುವ ಇನ್ನೊಂದು ಪ್ರಸಂಗ ಭೀಮಸೇನನು ಸಭೆಯಲ್ಲಿ ಕೌರವ ನಾಶದ ಪ್ರತಿಜ್ಞೆ ಮಾಡುವುದು. ಏಳನೆಯ ಆಶ್ವಾಸದ ೧೨ ರಿಂದ ೧೫ರ ವರೆಗಿನ ನಾಲ್ಕು ಪದ್ಯಗಳಲ್ಲಿ ಈ ಪ್ರತಿಜ್ಞೆಯ ಉಗ್ರತೆ ಹೆಪ್ಪುಗಟ್ಟಿನಿಂತಿದೆ. ಕಿಡಿ ತೋರಿಸಿದರೆ ಆಸ್ಫೋಟಿಸುತ್ತದೆ. ವ್ಯಾಸಭಾರತದಲ್ಲಿ ಭೀಮನ ಪ್ರತಿಜ್ಞೆ ಮೂರು ನಾಲ್ಕು ಕಡೆ ಹಂಚಿಹೋಗಿದೆ. ಇಲ್ಲಿನ ಉಗ್ರತೆ ಅಲ್ಲಿ ಕಾಣುವುದಿಲ್ಲ, ‘ತೀವ್ರತೆ, ಸಾಂದ್ರತೆ, ನಿರ್ಘೋಷಗಳೂ’ ಅಲ್ಲಿಲ್ಲ. ಪ್ರೊ.ಡಿ. ಎಲ್.ಎನ್. ಅವರು ಹೇಳಿರುವಂತೆ (ಪಂಪಭಾರತ ದೀಪಿಕೆ ಪು. ೨೪೩) “ಪಂಪನ ಪದ್ಯಗಳನ್ನು ಹಿಂಡಿದರೆ ಈಗಲೂ ಕೆಂಪು ಕೋಪ ಸುರಿಯುತ್ತದೆ. ಶಬ್ದಗಳು ಸಿಡಿಲ ಚುಕ್ಕೆಗಳಂತೆ ಒಂದಾಗಿ ಸೇರಿ ಕಿಡಿಗಟ್ಟುತ್ತಿವೆ; ಕೋಪವನ್ನು ಅಳೆದು ಸುರಿದು ಮುಗಿಸಲಾರದೆಂಬಂತಿವೆ.” ಇಲ್ಲಿ ಭೀಮ ವಿವೇಕ ಶೂನ್ಯನಾಗುವುದಿಲ್ಲ. ವ್ಯಾಸ ಭಾರತದಲ್ಲಿ ಭೀಮನ ಕೋಪ ಧರ್ಮರಾಯನ ಮೇಲೂ ಉಕ್ಕಿ ಹರಿದು “ಸಹದೇವ, ಅಗ್ನಿಯನ್ನು ತೆಗೆದುಕೊಂಡು ಬಾ, ಈ ಧರ್ಮಪುತ್ರನ ತೋಳುಗಳನ್ನು ಸುಡುತ್ತೇನೆ” ಎನ್ನುತ್ತಾನೆ. ಪಂಪ ಈ ಮಾತುಗಳನ್ನೆಲ್ಲ ತೆಗೆದು ಹಾಕಿ ಸಂದರ್ಭ ಗಾಂಭಿರ್ಯವನ್ನು ಭೀಮನ ಕೋಪನ ಉಗ್ರತೆಯನ್ನೂ ಹೆಚ್ಚಿಸಿದ್ದಾನೆ.

ಇನ್ನೊಂದು ಅತ್ಯಂತ ಗಮನಾರ್ಹವಾದ ಪ್ರಸಂಗ ದುರ್ಯೋಧನನು ಶಲ್ಯನನ್ನು ಕರ್ಣನಿಗೆ ಸಾರಥಿಯಾಗುವಂತೆ ಪ್ರಾರ್ಥಿಸುವುದು. ಸಾರ್ವಭೌಮನಾದ ದುರ್ಯೋಧನನೇ ಶಲ್ಯನ ಬಳಿಗೆ ಹೋಗುತ್ತಾನೆ. ಅವನನ್ನು ಕಂಡು ಶಲ್ಯನು ಸಂಭ್ರಮದಿಂದ ಕೂಡಿದ ಹೃದಯವುಳ್ಳವನಾಗಿ ಬೇಗ ಎದ್ದು ಸ್ವಾಗತಿಸತೊಡಗುತ್ತಾನೆ. ದುರ್ಯೋಧನ ಹೇಳುವ ಮಾತು: “ಇಲ್ಲ ಇಲ್ಲ ಹಾಗೇ ಕುಳಿತಿರಿ, ಎದ್ದರೆ ನನ್ನ ಮೇಲೆ ಆಣೆ.” ಆತ ಕುಳಿತ. ದುರ್ಯೋಧನನು ವಿಶೇಷವಾದ ಆಪ್ತತೆಯನ್ನು ತೋರುವವನಂತೆ ಅವನ ಮುಂದೆನಡೆಯುವ ಸಂಭಾಷಣೆ ಪಂಪನ ಲೋಕವ್ಯವಹಾರಜ್ಞಾನವನ್ನೂ ಮಾತಿನ ಚತುರತೆಯನ್ನೂ ತೋರಿಸುವಂಥದು.

ಶಲ್ಯ: ಏನಾದರೂ ಕೆಲಸವಿದ್ದರೆ ನೀನೇ ಬರುವ ಹಾಗಾಯಿತೆ? ಹೇಳಿ ಕಳುಹಿಸಬಾರದಾಗಿತ್ತೆ? ಸರಿ, ಬಂದದ್ದಂತೂ ಆಯಿತು, ಯಾವ ಮನವಾರ್ತೆಯನ್ನು ಹೇಳಬಂದೆ?

ದುರ್ಯೋಧನ: ನೀವೇನೋ ಹೇಳಿ ಎನ್ನುತ್ತೀರಿ. ಆದರೂ ಹೇಳಲು ನನಗೆ ಸಂಕೋಚವಾಗುತ್ತಿದೆ.

ಶಲ್ಯ: ಶಂಕೆಯೇಕೆ? ಅಪ್ಪಣೆ ಮಾಡು.

ದುರ್ಯೋಧನ: ಮಾವ, (ಇಲ್ಲಿನ ಆತ್ಮೀಯತೆಯ ಸಂಬೋಧನೆಯನ್ನು ಗಮನಿಸಿ. ಅಲ್ಲದೆ ಮುಂದಿನ ಮಾತಿನಲ್ಲಿ ಶಲ್ಯನ ಸಾಹಸಕ್ಕೆ ತೋರುವ ಗೌರವವನ್ನು ಗಮನಿಸಿ.) ನಿಮ್ಮ ದಯೆಯಿಂದ ಜಯವಧು ನಮ್ಮಲ್ಲಿ ಪ್ರೀತಿಯನ್ನು ತೋರಿಸಿದ್ದಾರೆ. (ಇಷ್ಟು ಹೇಳಿ ಇನ್ನೂ ಇದಕ್ಕಿಂತ ನಯವಾಗಿ ಹೇಳುವುದು ಸಾಧ್ಯವಿಲ್ಲ ಎನ್ನುವಂತೆ ತಾನು ಬಂದ ಕಾರ್ಯವನ್ನು ಒಂದೇ ಉಸುರಿನಲ್ಲಿ ಹೇಳುತ್ತಾನೆ). ಹರಿಯು ಸುಳ್ಳೇ ಸಾರಥಿಯಂತೆ ಕಾಣಿಸಿಕೊಂಡ ನಿಜವಾಗಿ ಹೇಗೆ ಅರ್ಜುನನ್ನು ಗೆಲ್ಲಿಸುತ್ತಿದ್ದಾನಲ್ಲ, ಹಾಗೆಯೇ ತಾವು ಯುದ್ಧದಲ್ಲಿ ಕರ್ಣನಿಗೆ ಕೀರ್ತಿಯನ್ನು ದೊರಕಿಸಿ ತಾವು ವಿಜಯವನ್ನು ಸಂವಾದಿಸಿ.”

ತಾವು ನಿಜವಾಗಿ ಸಾರಥಿಯಾಗಿ ಎನ್ನಲಿಲ್ಲ. ಆದರೂ ತಾನೆ ಏನು? ಸಾಕ್ಷಾತ್ ಹರಿಯೇ ರಥವನ್ನು ನಡೆಸುತ್ತಿಲ್ಲವೆ. ಆ ಒಂದು ದೃಷ್ಟಾಂತದಿಂದ ಶಲ್ಯ ನನ್ನ ಹರಿಯ ಮಟ್ಟಕ್ಕೆ ಏರಿಸಲು ನೋಡಿದ. ಅಲ್ಲದೆ ನಿಜವಾಗಿ ಗೆಲ್ಲುತ್ತಿರುವವನು ಅರ್ಜುನನನ್ನ. ಗೆಲುವು ಕೃಷ್ಣನದು. ಹಾಗೆಯೇ ಈಗಲೂ ಗೆಲುವೆಲ್ಲ ನಿಮ್ಮದೇ. ಹೆಸರು ಮಾತ್ರ ಕರ್ಣನಿಗೆ.

ಆದರೆ ಮದ್ರರಾಜ ಈ ಹೊಗಳಿಕೆಯಿಂದ ಹಿಗ್ಗಲಿಲ್ಲ. ಕುಲಹೀನನಿಗೆ ಸಾರಥಿಯಾಗು ಎಂಬುದು. ಅವನ ಮಾತುಗಳು ಶಲ್ಯನು ಕೋಪದಿಂದ ಕಿಡಿ ಕಾರುವಂತೆ ಮಾಡಿದುವು. ದುರ್ಯೋಧನನನ್ನು ನಿಂದಿಸಿ ನುಡಿದ. ಆದರೆ ಕಾರ್ಯಸಾಧನೆ ಮಾಡಬೇಕಾಗಿದ್ದ ಸುರ್ಯೋಧನ ಮಾತ್ರ ಅದರಿಂದ ಅಸಮಾಧಾನಗೊಳ್ಳಲಿಲ್ಲ, ಬದಲಾಗಿ ಶಾಂತನಾಗಿಯೇ ಇದ್ದು ಸಮಾಧಾನದ ಮಾತುಗಳನ್ನು ಆಡಿ ಕೊನೆಗೂ ತಾನು ತಂದ ಕಾರ್ಯವನ್ನು ಸಾಧಿಸಿದ.

4

ಇನ್ನು “ಆದಿಪುರಾಣ”ದ ಇಂಥವೇ ಕೆಲವು ಪ್ರಸಂಗಗಳನ್ನು ಪರಿಶೀಲಿಸೋಣ ಪಂಪನು ಪುರಾಣವನ್ನು ಕಾವ್ಯವನ್ನಾಗಿ ಮಾರ್ಪಡಿಸಿದ್ದಾನೆ ಎಂಬ ಮಾತ್ರನ್ನು ಹಿಂದೆಯೇ ಸೂಚಿಸಿದ್ದೇನೆ. ಹಾಗೆ ಮಾಡುವಾಗ ಅವನು ಅನುಸರಿಸಿರುವ ಕಾವ್ಯ ನಿರ್ಮಿತಿ ಕ್ರಿಯೆಯನ್ನು ಪ್ರಾನಗುರುದತ್ತರು ಅತ್ಯಂತ ಸಮರ್ಪಕವಾಗಿ ಸಂಗ್ರಹಿಸಿದ್ದಾನೆ:[1]

“ಪಂಪನು ಮೂಲದ ಜಾಡನ್ನೇ, ಬಹುಮಟ್ಟಿಗೆ ಯಥಾವತ್ತಾಗಿಯೇ, ಅನುಸರಿಸಿದ್ದಾನೆ. ಕಥೆಯ ಹಂದರದಲ್ಲಾಗಲಿ, ನಿರೂಪಣ ಕ್ರಮದಲ್ಲಾಗಲಿ ಪಂಪನು ಯಾವುದೇ ವ್ಯತ್ಯಾಸವನ್ನೂ ಮಾಡಿಲ್ಲವಾದರೂ ಅಲಂಕರಣದಲ್ಲಿ ತನ್ನತನವನ್ನು ಮೆರೆದಿದ್ದಾನೆ ನೀರಸವಾಗಿರುವುದನ್ನು ಸರಸವಾಗಿಸುವುದು, ಸರಸವಾಗಿರುವುದನ್ನು ಮತ್ತಷ್ಟು ಸ್ವಾರಸ್ಯಪೂರ್ಣವಾಗಿಸುವುದು, ಪ್ರಸಂಗಾನುಗುಣವಾಗಿ ಸಂಗ್ರಹ-ವಿಸ್ತಾರಗಳನ್ನೆಸಗುವುದು ಮತ್ತು ನೂತನ ಪ್ರಸಂಗಗಳನ್ನು ಸ್ವತಃ ಸೃಷ್ಟಿಸುವುದು ಈ ನಾಲ್ಕು ವಿಧಾನಗಳ ಮೂಲಕ ಪಂಪನು ಆ ಕಾರ್ಯವನ್ನು ನಿರ್ವಹಿಸಿದ್ದಾನೆ; ಆದಿಪುರಾಣವನ್ನು ಕಾವ್ಯಗುಣದ ದೃಷ್ಟಿಯಿಂದ ಉತ್ಕೃಷ್ಟ ಸೃಷ್ಟಿಯಾಗಿಸಿದ್ದಾನೆ.”

ಲಲಿತಾಂಗ ದೇವನ ಭೋಗ ಜೀವನದ ಅಂತಿಮ ಅವಸ್ಥೆಯ ಆವರಣ ಸೃಷ್ಟಿ ಪಂಪನ ಪ್ರತಿಭಾಶಕ್ತಿಗೆ ವಿಶೇಷ ದ್ಯೋತಕವಾಗಿದೆ. ಮೂಲದಲ್ಲಿ ಇದು ಹೃದಯವನ್ನು ಕರಗಿಸುವ ಸನ್ನಿವೇಶದಂತೆ ವರ್ಣಿತವಾಗಿಲ್ಲ. ಲಲಿತಾಂಗದೇವನು ಸ್ವಯಂಪ್ರಭೆ, ಕನಕಲತೆ, ಕನಕಮಾಳೆ, ಮತ್ತು ವಿದ್ಯುಲ್ಲತೆ ಎಂಬ ನಾಲ್ವರು ಮಹಾರಾಣಿಯರಲ್ಲಿ ವಿಶೇಷವಾದ ಭೋಗವನ್ನು ಅನುಭವಿಸುತ್ತಾನೆ. ಒಂದು ಪದ್ಯದಲ್ಲಿ ಅದನ್ನು ಅವನು ವರ್ಣಿಸುವ ರೀತಿ ಹೀಗೆ (೨:೭೦): “ರತ್ನಗಳ ಕಾಂತಿಯಿಂದ ಹೊಮ್ಮುವ ಬೆಳಕಿನಲ್ಲಿ ಸೇರಿಸಿಕೊಂಡನು. ಪ್ರಜ್ವಲಿಸುವ ಉಜ್ವಲಕಾಂತಿಯಲ್ಲಿ ಸೇರಿಕೊಂಡನು. (ಕೂಡುವ) ಕಾರ್ಯವು ಸೊಗಸುಗೊಳಿಸಿತು. ಕಣ್ಣು ತಣಿಯುವಷ್ಟು ನೋಡಿದರು. ತೋಳು ತಣಿಯುವಷ್ಟು ಅಪ್ಪಿದನು. ಸುರತಾಮೃತ ಸೇವೆಯಲ್ಲಿ ಮನಸ್ಸು ತಣಿಯುವಷ್ಟು ಸುರಲೋಕ ಸೌಖ್ಯವನ್ನು ಉಂಟನು.” ರತಿ ಸುಖದ ವರ್ಣನೆಯಲ್ಲಿ ತನಗೆ ಸಮನಾದವರಿಲ್ಲ ಎಂಬುದನ್ನು ನಿಜಮಾಡುವಂತಿದೆ ಪಂಪನ ಈ ಭಾಗದ ನಿರ್ವಹಣೆ.

ಶ್ರೀಮತಿ ವಜ್ರಜಂಘರ ಮದುವೆ ನಡೆದು ಅನಂತರ ಶ್ರೀಮತಿಯನ್ನು ಪತಿಗೃಹಕ್ಕೆ ಕಳುಹಿಸಿಕೊಡುವ ಸಂದರ್ಭದ ನಿರೂಪಣೆಯಲ್ಲೂ ಪಂಪನ ಪ್ರತಿಭೆ ಮಿಂಚಿದೆ. ಈ ಸಂದರ್ಭವನ್ನು ವಿವೇಚಿಸುತ್ತಾ ಶ್ರೀ ಎಂ.ವಿ. ಶ್ರೀನಿವಾಸಮೂರ್ತಿಯವರು ಹೇಳಿರುವ ಮಾತುಗಳು ಮನನೀಯವಾಗಿವೆ: “ಶ್ರೀಮತಿಯನ್ನ ಕಳುಹಿಸಿಕೊಡುವಾಗ ತಂದೆ ವಜ್ರಜಂಘನಿಗೆ ನೀಡುವ ಉಪದೇಶ ‘ಶಾಕುಂತಲಾ’ ನಾಟಕದ ನಾಲ್ಕನೆಯ ಅಂಕದ ‘ಶ್ಲೋಕ ಚತುಷ್ಟಯ’ವನ್ನ ನೆನಪಿಗೆ ತರುತ್ತದೆ. ಮೂಲದಲ್ಲಿಲ್ಲದ, ಸ್ವಂತವೂ ಅಲ್ಲದ ಆದರೆ ಸಂದರ್ಭಕ್ಕೆ ಉಚಿತವಾದ ಮಹಾಕವಿಯನ್ನು ಸುಂದರ ಕೋಮಲ ಕರುಣರಸಪೂರಿತ ಸನ್ನಿವೇಶವನ್ನು ಅಳವಡಿಸಿರುವುದು ಅವನ (ಪಂಪನ) ರಸಾಭಿಜ್ಞತೆಗೂ, ಪೂರ್ವಕವಿ ಗೌರವಕ್ಕೂ ಸಾಕ್ಷಿಯಾಗಿದೆ.”[2]

ನಾಲ್ಕನೆಯ ಆಶ್ವಾಸದ ೫೫-೫೬ನೆಯ ಪದ್ಯಗಳು ಕಾಳಿದಾಸನ ಪದ್ಯಗಳ ಅನುವದಗಳೇ ಎಂದು ಹೇಳಬಹುದಾದರೂ ೫೭ನೆಯ ಪದ್ಯದಲ್ಲಿ ಕಾಣುವುದು ಪಂಪನ ಸ್ವಂತಿಕೆ. ಅದರಲ್ಲಿ ಅನೇಕ ಕ್ರಿಯೆಗಳ ನಿರೂಪಣೆಯಿದೆ. ಬೀಳ್ಕೊಳ್ಳುವವರೂ ಬೀಳ್ಕೋಡುವವರೂ ಪರಸ್ಪರ ಅಪ್ಪಿಕೊಳ್ಳುತ್ತಿದ್ದಾರೆ. ನೆನಪಿರಲಿ, ಮರೆಯಬೇಡಿ ಎನ್ನುತ್ತಿದ್ದಾರೆ. (ಹೊರಡುವ ಸಮಯವಾದುದರಿಂದ ಪರೀತಿ ಉಕ್ಕಿ, ಭಾವೋದ್ವೇಗಕ್ಕೆ ವಶರಾಗಿ) ತಮ್ಮ ಬಳಿ ಇರುವ ಸಮಸ್ತ ವಸ್ತುಗಳನ್ನು ಕೊಡುತ್ತಿದ್ದಾರೆ. ಹಲವು ವಿಧವಾಗಿ ಹರಸಿ ಅಕ್ಷತೆಗಳನ್ನು ಹಾಕುತ್ತಿದ್ದಾರೆ. (ಮತ್ತೆ ಕೆಲವರು) ಬುದ್ಧಿಯ ಮಾತುಗಳನ್ನು ಹೇಳುತ್ತಿದ್ದಾರೆ. (ಈ ವಸ್ತುಗಳು) ನಿಮ್ಮಲ್ಲಿರಲಿ ಎಂದು ಒತ್ತಾಯದಿಂದ ಕೊಡುತ್ತಿದ್ದಾರೆ. ಪ್ರಿಯರಾದವರು ಅಗಲುತ್ತಿದ್ದಾರೆ ಎಂದು ಕಣ್ಣೀರುಗಳನ್ನು ಮಿಡಿಯುತ್ತಿದ್ದಾರೆ. (ಹೀಗೆ) ಇದ್ದವು ಪ್ರಯಾಣ ಕಾಲದಲ್ಲಿ ನಾನು ಪ್ರಕಾರದ ಜನ ಸಂಕಟಗಳು (ಬಹುವಚನ ವನ್ನು ಗಮನಿಸಿ. ದುಃಖದ ವೈವಿಧ್ಯವನ್ನು ತೋರಿಸಲು ಇಲ್ಲಿ ಪಂಪ ಬಹುವಚನವನ್ನು ಪ್ರಯೋಗಿಸಿದ್ದಾನೆ.)

ಪಂಪನ ಆದಿಪುರಾಣದಲ್ಲಿ ಎದ್ದು ಕಾಣುವ ಪ್ರಸಂಗಗಳಲ್ಲಿ ಶ್ರೀಮತಿ ವಜ್ರ ಜಂಘರ ಸಹ ಮರಣದ ಪ್ರಸಂಗವೂ ಒಂದು. ಮೂಲದಲ್ಲಿ ಈ ಪ್ರಸಂಗ ಇದೆ, ನಿಜ. ಆದರೆ ಪಂಪನು ಅದನ್ನು ಉತ್ತಮ ಗೊಳಿಸಿದ್ದಾನೆ. ಪ್ರೇಮದ ತೀವ್ರತೆಯ ಸ್ವರೂಪದ ಅರಿವು ರಸಿಕನಾದ ಪಂಪನಿಗಿರುವಷ್ಟು ವಿರಾಗಿಗಳಾದ ಜಿನಸೇನರಿಗೆ ಇರುವಂತೆ ನಿರೀಕ್ಷಿಸುವುದು ತಪ್ಪಾಗುತ್ತದೆ. ಆದುದರಿಂದಲೇ ಪಂಪನಿಗೆ ಮೂಲವನ್ನು ಮೀರಿಸುವುದು ಸಾಧ್ಯವಾಗಿರುವುದು.

‘ಅಮರ ಲೋಕದ ಸೌಖ್ಯಕ್ಕಿಂತ ಈ ಲೋಕದ ಸೌಖ್ಯವು ಅತಿಶಯವಾದುದು.ದೇವಲೋಕದ ಸ್ತ್ರೀಗಿಂತ ಈ ದೇವಿಯೇ (ಶ್ರೀಮತಿಯೇ) ಮಿಗಿಲು. ಈ ಮಾನವ ರೂಪದ ಆಕಾರ ದೇವರೂಪವನ್ನು ಮೀರಿದೆ.’ ಎಂದು ಲೋಕದ ಜನವೆಲ್ಲ ಹೇಳುತ್ತಿರಲು ಶ್ರೀಮತಿಯ ಮುಖ ಚಂದ್ರನು ಚೆಲುವನ್ನು ಉಂಟುಮಾಡುತ್ತಿರಲು ವಜ್ರಜಂಘನು ಅಖಿಳ ಭೋಗಗಳನ್ನು ಭೋಗಿಸಿದನು.” ಇಷ್ಟೆಲ್ಲ ಭೋಗಿಸಿದರೆ, ಆ ಭೋಗದ ಪಕ್ಕದಲ್ಲೇ ಮೃತ್ಯು ಕಾದು ನಿಂತಿತ್ತು. ಆ ದಂಪದಿಗಳು ಅನ್ಯೋನ್ಯ ಅಂಗಸ್ಪರ್ಶ ಸುಖದಿಂದ ಕಣ್ಣುಮುಚ್ಚಿ ‘ನಿದ್ರಾರಸವಶಗತ’ರಾಗಿದ್ದರು. (ಪಂಪನಿಗೆ ಸುಖನಿದ್ರೆಯೂ ರಸಾಸ್ವಾದ ನೀಡುವಂಥದು!) ಆದರೆ ಅವರು ಮಲಗಿದ್ದ ಕೊಠಡಿಯ ಗವಾಕ್ಷವನ್ನು ತೆರೆಯಲು ಮರೆತು ಸೆಜ್ಜವಳನು ಕೇಶಸಂಸ್ಕಾರಕ್ಕೆಂದು ಧೂಪವನ್ನು ಹಾಕಿದ್ದಾದೇ ಮೃತ್ಯುವಾಯಿತು. ಒಂದೊಂದು ಸಣ್ಣಮಾತನ್ನು ಸೇರಿಸಿ ಪಂಪ ಈ ಸಂದರ್ಭದ ಮೃತ್ಯಛಾಯೆಯನ್ನು ದಟ್ಟಗೊಳಿಸುತ್ತಾನೆ., ಪರಿಣಾಮದ ಭಯಂಕರತೆಯನ್ನು ತೀವ್ರಗೊಳಿಸುತ್ತಾನೆ. ಮೂಲದಲ್ಲಿ ಜಿನಸೇನರು “ಕೇಶಸಂಸ್ಕಾರಧೂಪ” ಎಂದುದನ್ನು ಪಂಪ “ಕೇಶಸಂಸ್ಕಾರ ಕಾಳಾಗರು ಧೂಪ” ಎನ್ನುತ್ತಾನೆ. ಮುಂದಿನ ಎರಡು ಪದ್ಯಗಳಲ್ಲಂತೂ ಪಂಪ ಮತ್ತೆ ತನ್ನತನವನ್ನು ಮೆರೆದಿದ್ದಾನೆ. ಕಾಳಾಗರು ಧೂಪ ಧೂಮವು ಹಬ್ಬಿ ವ್ಯಾಪಿಸಿ ಆ ಪ್ರೇಮಿಗಳನ್ನು ಕೊಂದ ರೀತಿಯನ್ನು ಮುಂದಿನ ಪದ್ಯವಿವರಿಸುತ್ತದೆ. “ಅದು) ಮೊದಲು ನೀಳವಾಗಿ ಹರಿದು ವ್ಯಾಪಿಸಿಕೊಂಡಿತು. ಅನಂತರ ನಿಧಾನವಾಗಿ ಚಲಿಸಿ ತನ್ನ ಆಕಾರದಲ್ಲಿ ಸ್ವಲ್ಪವೂ ಕುಗ್ಗದೆ ಆ ದಂಪತಿಗಳು ಉಸಿರಾಡದಂತೆ ಮಾಡಿ ಆ ‘ಕೇಷ್ಣಾಗರು ಧೂಪಧೂಪದ ಸಮೂಹವು ಕೃಷ್ಣ ಸರ್ಪವು ಕೊಲ್ಲುವಂತೆ ಆ ದಂಪತಿಗಳನ್ನು ಕೊಂದಿತು. (ಹಾಗೆ ಕೊಂದ ಆ ರಾತ್ರ ಲೋಕಾಶ್ಚರ್ಯಕರ ವಾದುದು)” ಇಂಥ ಮೃತ್ಯ ಭೀಕರತೆಯಲ್ಲಿಯೂ ಅಮೃತತ್ವದ ರೇಖೆಯನ್ನು ಪಂಪ ಕಂಡಿದ್ದಾನೆ. ಮೃತ್ಯವನ್ನು ಅಮೃತವನ್ನಾಗಿ ಪರಿವರ್ತಿಸಿದ್ದು ಪ್ರೇಮದ ತೀವ್ರತೆ, ಪ್ರಿಯರ ಸಹ ಮರಣ. ಪಂಪ ಮುಂದಿನ ಪದ್ಯದಲ್ಲಿ ಅದನ್ನು ಹೇಳುತ್ತಾನೆ. “ಬಿಡದೆ ಹೊಗೆ ಸುತ್ತಲು ತೋಳನ್ನು ಸಡಿಲಿಸದೆ ಆ ಪ್ರಾಣವಲ್ಲಭರು ಜೊತೆ ಜೊತೆಯಾಗಿಯೇ ಪ್ರಾಣವನ್ನು ಕಳೆದುಕೊಂಡರು. ಹೀಗೆ ಪ್ರಿಯೆ ಪ್ರಿಯರು ಒಡಸಾಯಬೇಕಾದರೆ ಆಳವಿಲ್ಲದ ಅದೆಷ್ಟು ಪುಣ್ಯವನ್ನು ಮಾಡಿದ್ದರೋ!” ಇಷ್ಟು ಹೇಳಿ ನಮ್ಮ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯುತ್ತಿರುವಾಗಲೇ ಭೋಗದ ನಶ್ವರತೆಯನ್ನು ಎರಡು ಸೊಗಸಾದ ಕಂದಪದ್ಯಗಳಲ್ಲಿ ಸಾರುತ್ತಾನೆ “ಭೋಗಕ್ಕೆ ಸಹಾಯಕವಾಗಿದ್ದರೂ ಆ ಕೃಷ್ಣಾಗರು ಧೂಪವು (ಬೇರೆ ಮಾತುಗಳು ತಿಳಿದಿದ್ದರೂ ಇದನ್ನೇ ಪಂಪ ಎಷ್ಟು ಸಲ ಬಳಸುತ್ತಾನೆ, ಗಮನಿಸಿ. ಅದರಿಂದ ಭೋಗ ಮತ್ತು ಹಾನಿ ಒಂದರೊಡನೊಂದು ಹೆಣೆದು ಕೊಂಡಿವೆ ಎಂಬುದನ್ನು ನಮ್ಮ ಮನಸ್ಸಿನ ಮೇಲೆ ಒತ್ತುತ್ತಾನೆ) ವ್ಯಾಪಿಸಿಕೊಂಡು ಆ ಪ್ರೇಮಿಗಳನ್ನ ಕೊಂದು ಹಾಕಿ ಬಿಟ್ಟಿತು. ಹುಟ್ಟು ಸಾವುಗಳ ಭೋಗಗಳು ಸರ್ಪದ ಹೆಡೆಗಳಿಗಿಂತ ವಿಷಮವಾದುವು! ಅಷ್ಟು ಸುಖಕ್ಕೆ, ಅಷ್ಟು ಭೋಗಕ್ಕೆ ಆಗರವಾಗಿದ್ದ ಆ ದಂಪತಿಗಳು ನೋಡು ನೋಡುತ್ತಿದ್ದಂತೆಯೇ ಆ ಕ್ಷಣದಲ್ಲಿ ಅಂಥದೊಂದು ಅವಸ್ಥೆಯನ್ನು ಪಡೆದರು. ಹೀಗಿರುವಾಗ ಮೂರ್ಖರಾದ ಜನ ಈ ಸಂಸಾರ ಸುಖವನ್ನು ಏನೆಂದು ನಂಬುತ್ತಾರೆಯೋ!”

ನಾವು ಗಮನಿಸಬಹುದಾದ ಮುಂದಿನ ಪ್ರಸಂಗ ಪಂಚಕಲ್ಯಾಣದಲ್ಲಿ ಒಂದಾದ ಜನ್ಮಾಭಿಷೇಕದ ವರ್ಣನೆ. ನಮ್ಮ ಸಾಹಿತ್ಯದಲ್ಲೇ ಅಪೂರ್ವವಾದ ಒಂದು ಭವ್ಯತಾಸ್ಪರ್ಶಿಯಾದ ಘಟನೆಯ ವರ್ಣನೆ ಅದು. ಶ್ರೀ ಕುವೆಂಪು ಅವರು ಹೇಳುವಂತೆ “ಆ ಪ್ರತಿಮಾ ಚಿತ್ರಕ್ಕೆ ಸಮಾನವಾಗುವ ಭೂಮಾನುಭೂತಿಯ ಚಿತ್ರಗಳು ಸಾಹಿತ್ಯ ಲೋಕದಲ್ಲಿ ಅಪೂವ್ವ ಮತ್ತು ಅಲ್ಪಸಂಖ್ಯಾತ.”[3] ಜಿನ ಶಿಶುವನ್ನು ಹೊತ್ತ ಐರಾವತವು ಪ್ರಮಾಣದಲ್ಲಿ ಬೆಳೆದು ಭವ್ಯತಾನುಭುತಿಗೆ ರಂಗವನ್ನು ನಿರ್ಮಾಣಮಾಡಿತು. “ಪ್ರಸಿದ್ಧವಾದ ಐರಾವತವೆಂಬ ಗಜಕ್ಕೆ ಮುಖಗಳು ಮೂವತ್ತೆರಡಾದುವು. ಆ ಒಂದೊಂದು ಮುಖದಲ್ಲೂ ಎಂಟೆಂಟು ದಂತಗಳು. ಆ ದಂತಗಳು ಒಂದೊಂದರಲ್ಲೂ ಒಂದೊಂದು ತಾವರೆಯ ಬಳ್ಳಿ ಕಂಗಿಳಿಸಿತು. ಒಂದೊಂದು ತಾವರೆ ಬಳ್ಳಿಯಲ್ಲಿಯೂ ಮೂವತ್ತೆರಡು ಹೂಗಳು ಅವುಗಳಲ್ಲಿ ಸುವಾಸನೆಯಿಂದ ಕೂಡಿದ ಮೂವತ್ತೆರಡು ಎಸಳುಗಳು. ಒಂದೊಂದು ಎಸಳಿನ ಮೇಲೆಯೂ ಮೂವತ್ತೆರಡು ಜನ ದೇವಾಂಗನೆಯರು ನರ್ತಿಸುತ್ತಿದ್ದಾರೆ! ಹೀಗೆ ಈ ಎಲ್ಲವುಗಳಿಂದ ಕೂಡಿ “ಇಂದ್ರರುಂದ್ರದ್ವೀಪವು” ಆಶ್ಚರ್ಯಕರವಾಗಿ ತೋರುತ್ತಿದೆ; ಇಲ್ಲಿ ಐರಾವತವನ್ನು ಇಂದ್ರರುಂದ್ರದ್ವೀಪ ಎಂದು ಕರೆದಿರುವುದು ಬರಿಯ ಪ್ರಾಸಪ್ತಿಯತೆಯಿಂದಲ್ಲ. ರುಂದ್ರ-ವಿಸ್ತಾರ ಅತಿಶಯ ಎನ್ನುವುದು ಭವ್ಯತೆಯನ್ನು ಸೂಚಿಸಲು ಬಳಸಿರುವ ಪದ.

ಮುಂದಿನ ಇಂದ್ರನ ಆನಂದ ನೃತ್ಯವೂ ಅಷ್ಟೆ. ಮೂಲದಿಂದ ಸ್ಫೂರ್ತಿ, ಸಾಮಗ್ರಿಗಳನ್ನು ಪಂದ ಪಡೆದಿದ್ದಾನೆ ನಿಜ. ಆದರೆ ಮೂಲದ ಅತಿ ವಿಸ್ತಾರವು ಉದ್ದೇಶಿತ ಪರಿಣಾಮವನ್ನು ಸಾಧಿಸಲು ಸಮರ್ಥವಾಗಿಲ್ಲ. ಪಂಪನಾದರೆ ತನ್ನ ಅದ್ಬುತವಾದ ವರ್ಣನಾಶಕ್ತಿಯಿಂದ, ಸಾಂದ್ರತೆಯನ್ನು ಸಾಧಿಸುವ ಕಲೆಯಿಂದ ಈ ವರ್ಣನೆಯನ್ನು ಪರಿಣಾಮ ರಮಣೀಯವಾಗುವಂತೆ ನಿರ್ವಹಿಸಿದ್ದಾನೆ.

“ಲಯ ಬದ್ಧವಾಗಿ ಹೆಜ್ಜೆಗಳನ್ನು ಹಾಕುತ್ತಾ ಅವುಗಳಲ್ಲೇ ವೈವಿಧ್ಯಮಯವನ್ನು ಇಂದ್ರನು ತೋರಿಸಿದನು. ಅವನು ರಂಗವನ್ನು ಬಳಸಿದ್ದು ಸಮುದ್ರದಿಂದ ಸುತ್ತುವರಿದ ಭೂಮಿಯನ್ನು ಅಳೆಯುವಂತೆ ತೋರಿತು. ಇಂದ್ರನ ಆನಂದ ನೃತ್ಯದ ಸಮಯದಲ್ಲಿ ಅವನ ಕಾಲುಗಳ ತುಳಿತದಿಂದ ಕುಲಪರ್ವತಗಳು ಅಲುಗಾಡಿದುವು. ಅವನ ನೀಳವಾದ ತೋಳುಗಳ ಸ್ಪರ್ಶದಿಂದ ನಕ್ಷತ್ರಗಳು ಹೂವುಗಳಂತೆ ಉದುರಲಾರಂಭಿಸಿದುವು. ಅವನು ಬಿಡುತ್ತಿದ್ದ ಉಸಿರಿನಿಂದ ಸಮುದ್ರಗಳು ಅಲ್ಲೋಲಕಲ್ಲೋಲವಾದುವು. ದಿಗಂತಗಳು ದೇವನಾಗರಿಗಳು ಶಬ್ದದಿಂದ ವ್ಯಾಪ್ತವಾದುವು….. ಐರಾವತವನ್ನು ಕಟ್ಟುವ ಕಂಬಕ್ಕೆ ಎಣೆಯಾಗಿರುವ ದೇವೇಂದ್ರನ ತೋಳುಗಳ ಮೇಲೆ ಸಂತೋಷಾಧಿಕ್ಯದಿಂದ ಧೀರ ಅಪ್ಸರೆಯರು ವೀರ ವನಿತೆಯರು ಸಮೂಹಕ್ಕೆ ಸಮಾನ ಎಂಬಂತೆ ನರ್ತನವಾಡಿದರು.” ಶ್ರೀ ಕುವೆಂಪು ಹೇಳುವಂತೆ “ಪುನಃ ಪಂಪನ ಮಹಾ ಪ್ರತಿಭೆಯೂ ಏದುತ್ತದೆ. ಭೂಮಾನುಭೂತಿಗೆ ನಾಲಗೆ ತತ್ತರಿಸುತ್ತದೆ.”[4]

ಇನ್ನೊಂದು ಅತ್ಯಂತ ಮುಖ್ಯವಾದ ಘಟನೆಯ ಪ್ರಸ್ತಾಪದೊಂದಿಗೆ ಈ ಸಮೀಕ್ಷೆಯನ್ನು ಮುಗಿಸುವುದು ಅನಿವಾರ್ಯವಾಗುತ್ತದೆ. ಅದು ಅತ್ಯಂತ ಪ್ರಸಿದ್ಧವಾದ ಭರತ-ಬಾಹುಬಲಿಯ ಯುದ್ಧ ಸಂದರ್ಭ. ಪ್ರೊ. ವಿ. ಸೀತಾರಾಮಯ್ಯನವರು ಇದನ್ನು “ಕನ್ನಡ ಕಾವ್ಯ ಪ್ರಪಂಚದಲ್ಲಿ ಶಿಖರ ಪ್ರಾಯವಾದದ್ದರಲ್ಲಿ ಒಂದು”೧೩ ಎಂದು ಕಳೆದಿರುವುದು ಅತ್ಯಂತ ಸಮಂಜಸವಾಗಿದೆ. ಮೂಲದ ಕೆಲವು ಅಭಾಸಗಳನ್ನು ನಿವಾರಿಸಿ ಪಂಪನು ತನ್ನ ಸಂಗ್ರಹ ಶಕ್ತಿಯನ್ನೂ ಕಾವ್ಯಶಕ್ತಿಯನ್ನೂ ಮರೆದಿದ್ದಾನೆ. ಮೂಲದಲ್ಲಿ ಸುಂದರವಾಗಿರುವ ಪದಗಳನ್ನು ಪದಪುಂಜಗಳನ್ನೂ, ಪದ್ಯಾರ್ಥಗಳನ್ನೂ, ಪದ್ಯಗಳನ್ನೂ ಬಳಸಿಕೊಂಡಿದ್ದಾನೆ. ಅಹಂಕಾರ, ಕೋಪ, ಪಶ್ಚಾತ್ತಾಪ ಈ ಎಲ್ಲ ಭಾವಗಳ ಸ್ವರೂಪವನ್ನು ವಿವರ ವಿವರವಾಗಿ ಚಿತ್ರಿಸಿದ್ದಾನೆ.

ಹೀಗೆ, ತನ್ನ ವಿಕ್ರಮಾರ್ಜುನ ವಿಜಯದಲ್ಲಿಯೂ ಆದಿಪುರಾಣದಲ್ಲಿಯೂ ಪಂಪನು ಸನ್ನಿವೇಶಗಳ ನಿರ್ವಹಣೆಯ ಪ್ರಸಂಗದಲ್ಲಿ ಆದಷ್ಟು ಅವಧಾನದಿಂದಿದ್ದು ತನ್ನ ಮಹಾಕವಿ ಪಟ್ಟಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾನೆ. ಆದರೆ ಅವನ್ನು ಅವಿವೇಕಗಳನ್ನು ಮಾಡಿಯೇ ಇಲ್ಲ ಎಂದು ಭಾವಿಸಬಾರದು. ಅರ್ಜುನನ ವೇಶ್ಯಾವಾಟೀ ಸಂಚಾರ ಇತ್ಯಾದಿಗಳಲ್ಲಿ ಅತ್ಯುತ್ಸಾಹದಿಂದ ತನ್ನ ವ್ಯಕ್ತಿತ್ವಕ್ಕೂ, ಕಾವ್ಯ ವ್ಯಕ್ತಿತ್ವಕ್ಕೂ ಅಪಚಾರ ಮಾಡಿದ್ದಾನೆ. ಇಷ್ಟಾದರೂ ಒಟ್ಟಿನಲ್ಲಿ ದೋಷಗಳನ್ನು ಮೀರಿ ಗುಣಗಳು ರಾರಾಜಿಸುವುದರಿಂದ ಅವನು ಮಹಾಕವಿಯೇ

[1] ಕನ್ನಡ ಸಾಹಿತ್ಯ ಚರಿತ್ರೆ- ಮೈಸೂರು ವಿಶ್ವವಿದ್ಯಾನಿಲಯ- ಮೂರನೆಯ ಸಂಪುಟ ಪು. ೪೨೬.

[2] ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಬೆಂಗಳೂರು ವಿಶ್ವವಿದ್ಯಾನಿಲಯ. ಸಂಪುಟ ೨, ಪು. ೧೦೪.

[3] ತಪೋನಂದನ, ಉದಯ ರವಿ ಪ್ರಕಾಶನ, ಮೈಸೂರು ೧೯೬೯ ಪು. ೫೨

[4] ಅಲ್ಲೇ ಪು. ೫೯-೬೦