III

ಶೈಲಿ

ಪ್ರತಿಯೊಬ್ಬ ಗಮನಾರ್ಹವಾದ ಕವಿಗೂ ತನ್ನದೇ ಆದ ಶೈಲಿಯುಂಟು. ಕವಿಯ ವ್ಯಕ್ತಿತ್ವದ ವಿಶಿಷ್ಟತೆಗೆ ಅನುಗುಣವಾಗಿ ಅವನ ಶೈಲಿಯೂ ವಿಶಿಷ್ಟವಾಗಿ ರೂಪುಗೊಳ್ಳುತ್ತದೆ. ಪಂಪನನ್ನು ಅವನ ಶೈಲಿಯ ಮೂಲಕವಾಗಿ ಮಹಾಕವಿ ಎಂದು ಕರೆಯಬಹುದೆ ಎಂಬುದನ್ನು ಪರಿಶೀಲಿಸೋಣ. ಹೀಗೆ ಪರಿಶೀಲಿಸಲು ಹೊರಟ ಕೂಡಲೆ ಶೈಲಿಯೆಂಬುದು ಮುಷ್ಟಿಗ್ರಾಹ್ಯವಾದ ಒಂದು ವಸ್ತುವೆಂದಾಗಲಿ, ಅದನ್ನು ಅಳತೆ, ತೂಕ ಮೊದಲಾದ ಮಾನಗಳಿಗೆ ಒಳಪಡಿಸಿ ಒಬ್ಬ ಕವಿಯ ಶೈಲಿ ಹೀಗೆಂದು ನಿರ್ದಿಷ್ಟವಾಗಿ ಹೇಳಿ ಬಿಡಬಹುದು ಎಂಬುದಾಗಲಿ ಅರ್ಥವಲ್ಲ. ಇನ್ನು ಮಹಾಕವಿಯ ಮಹತ್ತಾದ ಶೈಲಿಯ ವಿಷಯಕ್ಕೆ ಈ ಮಾತು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಅನ್ವಯವಾಗುತ್ತದೆ. ಅವನಂತೂ ಮೊದಲಿನಿಂದ ಕೊನೆಯವರೆಗೂ, ಎಲ್ಲ ಸಂದರ್ಭಗಳಲ್ಲಿಯೂ ಒಂದೇ ರೀತಿಯಾಗಿ ಬರೆಯುವುದಿಲ್ಲ. ವರ್ಣನೆ, ಘಟನೆ, ವ್ಯಕ್ತಿ-ಅವುಗಳ ಸಂದರ್ಭಗಳಿಗೆ ಅನುಸಾರವಾಗಿ ಅವನ ಶೈಲಿಯಲ್ಲಿ ಏರಿಳಿತಗಳು ಇರುತ್ತವೆ. ‘ಶೈಲಿ’ಯನ್ನು ಕುರಿತು ಸವಿಸ್ತಾರವಾಗಿ ಅಧ್ಯಯನ ನಡೆಸಿರುವ ಪ್ರೊ. ಎಸ್.ವಿ. ರಂಗಣ್ಣನವರ ಈ ಮಾತುಗಳು ಮನನೀಯವಾಗಿವೆ:

“ಮಹಾಕಾವ್ಯವನ್ನು ಸಮುದ್ರಕ್ಕೆ ಹೋಲಿಸುವುದು ವಾಡಿಕೆ. ಆ ನೀಲ ಜಲರಾಶಿಯ ಮುಖ್ಯ ಈಗ ಸೌಮ್ಯ, ಮರುಘಳಿಗೆ ಸರೋಷ; ಅದರ ಮೈಲ್ಮೈ ಇಲ್ಲಿ ಕೊಂಚ ಉಬ್ಬುತಗ್ಗಾದರೆ ಅಲ್ಲಿ ಕಣಿವೆ ಗುಡ್ಡ; ಅದರೊಳಗಿರುವ ಪ್ರಾಣಿ ಸಸ್ಯ ಪದಾರ್ಥಗಳನ್ನು ಎಣಿಸಿ ಪೂರೈಸಬಹುದೇ? ಯಾವ ಯಾವ ನಿಧಿ ಎಲ್ಲೆಲ್ಲಿ ಅಡಗಿದೆಯೊ ಕಂಡವರಾರು? ಕೆಲವೊಮ್ಮೆ ಗಾಳಿಯ ಬಡಿತದಿಂದ ಅದು ರೇಗಿ ಉಕ್ಕೇರಿ ಜೋರಾಗಿ ಮೊರೆಯುತ್ತದೆ; ಸದಾ ಅದಕ್ಕೆ ಒಂದು ಘನ ಘೋಷ, ಸಾಗರ ಪ್ರಪಂಚದಂತೆಯೇ ಮಹಾಕಾವ್ಯ ಪ್ರಪಂಚವೂ ಅಗಾಧ, ಗಂಭೀರ, ಸಂಪತ್ಸಮೃದ್ಧ, ಆಶ್ಚರ್ಯಾನಂದಕರ, ಮಥನೀಯ. ಅದರದ್ದೇ ಆದ ಘೋಷದಿಂದ ವಾರಿಧಿಯನ್ನು ಗುರ್ತಿಸುವಂತೆ ಮಹಾಕಾವ್ಯವನ್ನು ಮಹಾ ಶೈಲಿಯನ್ನು ಅದರದ್ದೇ ಆದ ದನಿ ಅಥವಾ ನಾದದಿಂದ ಗುರ್ತಿಸತಕ್ಕದ್ದು.”[1]

ಪಂಪನೂ ತನ್ನ ಕಾವ್ಯವಯ ‘ನಿತ್ಯನೂತನವಾದದ್ದು, ಸಮುದ್ರದಂತೆ ಅತಿ ಗಂಭೀರವಾದದ್ದು ಎಂದಿದ್ದಾನಷ್ಟೆ? (ಆ.ಪು. ೧:೨೭) ಈ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಪಂಪನ ಶೈಲಿಯನ್ನು ವಿಶ್ಲೇಷಿಸಲು ಪ್ರಯತ್ನಿಸಬಹುದು. ಹಾಗೆ ಮಾಡುವಾಗ ಪಂಪನೇ ತನ್ನ ಕಾವ್ಯದ ಶೈಲಿ ಹೇಗಿರಬೇಕು. ಅದರ ಭಾಷೆ ಯಾವುದು ಎಂಬುದನ್ನು ಕುರಿತು ಹೇಳಿರುವ ಇತರ ಮಾತುಗಳನ್ನು ಗಮನಿಸುವುದು ಅಗತ್ಯವಾಗುತ್ತದೆ. ಆದಿ ಪುರಾಣದ ಆರಂಭದಲ್ಲಿ ಕಾವ್ಯವನ್ನು ಹೆಣ್ಣಿಗೆ ಹೋಲಿಸುತ್ತಾ ಹೀಗೆನ್ನುತ್ತಾನೆ (೧:೧೭).

“ಮೃದುವಾದ ಪದಗಳ ನಡೆಯಿಂದ (ಮೃದುವಾದ ಚಲನೆಯಿಂದ), ರಸಭಾವಗಳ ಹೆಚ್ಚಳದಿಂದ, ಪುಣ್ಯವನಿತೆಯಂತೆ (ಪುಣ್ಯ ವನಿತ-ವೇಶ್ಯೆ-ಎಂಬ ಸ್ವೀಕೃತ ಪಾಠವೂ ಇದೆ!) ಕೃತಿಯ ಸೌಂದರ್ಯದ, ಚಾತುರ್ಯದ ಗಣಿ ಎನ್ನಿಸಿಕೊಂಡು ಪಂಡಿತರ ಮನಸ್ಸನ್ನು ಆಕರ್ಷಿಸುತ್ತಿರಬೇಡವೇ!”

ವಿಕ್ರಮಾರ್ಜುನ ವಿಜಯದ ಆರಂಭದಲ್ಲಿ (೧:೮) ಕಾವ್ಯದ ವಸ್ತು ಮತ್ತು ಶೈಲಿ ಎರಡರ ಲಕ್ಷಣ ನಿರೂಪಣೆ ಮಾಡುತ್ತಾ ಪಂಪನು ಕಾವ್ಯಮಯವಾಗಿ ಹೀಗೆ ಹೇಳಿದ್ದಾನೆ:

“ಭಾವ, ಆಲೋಚನೆ ಹೊಸದಾಗಿರಬೇಕು. ಹಾಗೆ ಹೊಸದಾಗಿದ್ದು ಮೃದುವಾದ ಶಬ್ದಗಳ ಶಯ್ಯೆಯಲ್ಲಿ ಸೇರಬೇಕು. ಹಾಗೆ ಸೇರಿ, ದೇಸಿಯಲ್ಲಿ (ಎಂದರೆ ಅಚ್ಚಗನ್ನಡ ಶೈಲಿಯಲ್ಲಿ) ಪ್ರವೇಶಿಸಬೇಕು. ಹಾಗೆ ಪ್ರವೇಶೀಸಿ, ಮಾರ್ಗೀ ಶೈಲಿಯಲ್ಲಿಯೆ (ಎಂದರೆ ಸಂಸ್ಕೃತ ಶೈಲಿಯಲ್ಲಿಯೆ) ಸೇರಿ ಹೊಂದಿಕೊಳ್ಳಬೇಕು. ಹೀಗೆ ಸೇರಿದರೆ ಕಾವ್ಯ ರಚನೆಯು ಸುಗ್ಗಿಯ ಕಾಲದಲ್ಲಿ (ಎಂದರೆ ವಸಂತ ಸಮಯದಲ್ಲಿ) ಎಳೆಯ ಮಾವಿನ ಮರವು ಕೆಂಪಾದ ಚಿಗುರಿನ, ಹೂವಿನ ಬಲು ಭಾರದಿಂದ ಜೋತು ಬಿದ್ದು, ತುಂಬಿಗಲಿಂದ ತುಂಬಿ, ಕೋಗಿಲೆಯು ಕೂಗುತ್ತಿರಲು ಸೊಗಸಾಗಿ ಕಾಣುವಂತೆ, ಶೋಭಿಸುತ್ತದೆ.

ಇಲ್ಲಿ ಕವಿಯು ವ್ಯಕ್ತಪಡಿಸಿರುವ ಆಶಯ ಕಾವ್ಯ ಬಂಧವು ದೇಸಿ ಮತ್ತು ಮಾರ್ಗೀ ಶೈಲಿಗಳ ಹದವಾದ ಸಂಮಿಶ್ರಣವಾಗಿದ್ದರೆ ಕಾವ್ಯವು ಸೊಗಸುತ್ತದೆ ಎಂದು. ತನ್ನ ಪ್ರಭುವಾದ ಅರಿಕೇಸರಿಗೆ ಅರ್ಪಿಸುವ ಕಾವ್ಯವು ಹೇಗಿರಬೇಕೆಂಬುದನ್ನು ಹೇಳುತ್ತಾ ಕಾವ್ಯದ ಇತರ ಲಕ್ಷಣಗಳನ್ನು ತಾನು ಮೆಚ್ಚಿಕೊಂಡಿರುವಂಥದ್ದನ್ನು ಪಂಪ ಪಟ್ಟಿಮಾಡುತ್ತಾನೆ. (ವಿ.ವಿ. ೧:೯)

“ಪ್ರಸಿದ್ಧವಾದ ಎಲ್ಲ ಅರ್ಥಗಳಿಂದ ಕೂಡಿದ, ಅಲಂಕಾರಗಳಿಗೆ ಕೂಡಿರುವ, ಉನ್ನತವಾದ (ಶಬ್ದ) ವೃತ್ತಿಗಳಿಂದ ಕೂಡಿದ, ಅನೇಕ ಕಾವ್ಯಲಕ್ಷಣ ಗುಣಗಳಿಗೆ ಜನ್ಮಸ್ಥಾನವಾಗಿ ಇರುವ, ಮೃದುವಾದ ಪದ್ಯಪಾದಗಳಿಂದ ಕೂಡಿದ. ವಾಕ್ಸಂಪತ್ತಿಯಿಂದ ಸುಂದರವಾದ ಕಲೆಗಳಿಂದ ಕೂಡಿದ, ಪ್ರಸಿದ್ಧವಾದ ಕಾವ್ಯವನ್ನೂ ಹೆಣ್ಣನ್ನೂ ಅರಿಕೇಸರಿಗೆ ಕೊಡತಕ್ಕದ್ದು.”

ಕಾವ್ಯವನ್ನು ಕನ್ನಿಕೆಗೆ ಹೋಲಿಸುವ ಚಮತ್ಕಾರವನ್ನು ಇಲ್ಲಿ ಪಂಪ ಮಾಡಿದ್ದರೂ ಕನ್ನೆಯ ಲಕ್ಷಣಗಳನ್ನು ಕಾವ್ಯಕ್ಕೆ ಅನ್ವಯಿಸುವಾಗ ಉತ್ತಮ ಕಾವ್ಯದ ಲಕ್ಷಣಗಳೇನು ಎಂಬುದನ್ನು ಹೇಳಿದ್ದಾನೆ. ಆದಿ ಪುರಾಣದಲ್ಲಿ ತನ್ನ ಕಾವ್ಯದ ಲಕ್ಷಣಗಳನ್ನು ಇನ್ನೂ ವಿಸ್ತಾರವಾಗಿ ಪಂಪನು ಈಗಾಗಲೇ ಹೇಳಿ ಆಗಿತ್ತು. (೧:೨೬):

“(ಈ ಕಾವ್ಯವು) ಎಲ್ಲರಿಗೂ ತಿಳಿಯುವಂಥದು; ವ್ಯಂಗ್ಯಾರ್ಥದಿಂದ ಕೂಡಿದುದು; ಕೋಮಲವೂ ಸುಭಗವೂ ಆದುದು; ಸುಂದರವಾದ ಸೂಕ್ತಿಗಳಿಂದಲೂ, ಮೃದು ಸಂದರ್ಭಗಳಿಂದಲೂ ಸೇರಿದುದು; ವಿಮರ್ಶನೀಯವಾದದ್ದು; ಉಚಿತ ಪದಗಳಿಂದ ಕೂಡಿ ಶ್ರವ್ಯವಾದದ್ದು; ದೋಷರಹಿತವಾದದ್ದು…..”

ಇದಕ್ಕೆ ಕೊಂಚ ಹಿಂದೆ ಎರಡು ಕಂದಪದ್ಯಗಳಲ್ಲಿ (ಅ.ಪು. ೧:೧೮, ೧೯) ಕಾವ್ಯವು ಹೇಗಿರಬೇಕು ಎಂಬುದನ್ನು ಹೇಳುತ್ತಾ ತನ್ನ ಕಾವ್ಯದ ಲಕ್ಷಣಗಳನ್ನು ಪಂಪ ನಿರೂಪಿಸಿದ್ದಾನೆ:

“ಕೊಂಕುವೆತ್ತ ಪೊಸನುಡಿಗಳು (ಎಂದರೆ, ಕಾವ್ಯದ ಜೀವ ಜೀವಾಳದ ವಕ್ರೋಕ್ತಿಗಳು) ಮಾತ್ರ ಕಿವಿಯ ಮೂಲಕ ಮನಸ್ಸನ್ನು ಮುಟ್ಟುತ್ತವೆ. ಉಳಿದುದು ಕಂದರದ ಹೊಳೆ. ಆ ಹೊಳೆಯು ಬೇಸರವನ್ನುಂಟುಮಾಡಿ ಸುಮ್ಮನೆ ಹರಿದು ಹೋಗುವುದಲ್ಲದೆ ಮನದ ದಾರಿಯನ್ನು ಮುಟ್ಟುವುದೆ? ಮೃದುವೂ ಮಧುರವೂ ಆದ ವಚನ ರಚನೆಯಲ್ಲಿ ಉದಾತ್ತವಾದುದು ಕೇಳುವ ಜನಕ್ಕೆ ನೇರವಾಗಿ ಅರ್ಥ ಪ್ರತೀತಿಯನ್ನು ಮಾಡಿಸದಿದ್ದಲ್ಲಿ ಅದು ಕಾವ್ಯದಲ್ಲಿದ್ದರೂ ಕವಿಯ ಮನಸ್ಸಿನಲ್ಲಿದ್ದಂತೆಯೇ ಸರಿ!”

ತನ್ನ ಶೈಲಿ ಹಿತಮಿತವಾದದ್ದು, ಎಂದು ಹೇಳೀ (ಆ.ಪು.೧: ೨೯) ತನ್ನ ಶೈಲಿಯ ಲಕ್ಷಣವನ್ನು ಮಾತ್ರವಲ್ಲದೆ ಉತ್ತಮವಾದ ಶೈಲಿಯೆಂದರೆ ತನ್ನ ಕಲ್ಪನೆಯಲ್ಲಿ ಎಂಥದು ಎಂಬುದನ್ನು ಪಂಪನು ಅತ್ಯಂತ ಸಂಕ್ಷೇಪವಾಗಿ ಹೇಳಿದ್ದಾನೆ.

ಕಾವ್ಯ ಬಂಧವು ದೇಸೀ-ಮಾರ್ಗೀ ಶೈಲಿಗಳ ಹದವಾದ ಸಂಮಿಶ್ರಣವಾಗಿದ್ದರೆ ಸೊಗಸಾಗಿರುತ್ತದೆ ಎಂದು ಪಂಪನು ಹೇಳಿದ್ದಾನೆಯಷ್ಟೆ. ಕವಿಯಾಗಿ ತಾನು ಇದನ್ನು ಎಷ್ಟರಮಟ್ಟಿಗೆ ಸಾಧಿಸಿದ್ದಾನೆ ಎಂಬುದನ್ನು ನೋಡಬೇಕು. ತನ್ನದು “ಸಹಜವಾದ ಪುಲಿಗೆರೆಯ ತಿರುಳ ಕನ್ನಡ” ಎಂದಿದ್ದಾನೆ. ಆಗ ಪುಲಿಗೆರೆಯಲ್ಲಿ ಎಂತಹ ಕನ್ನಡವನ್ನು ಮಾತನಾಡುತ್ತಿದ್ದರು. ಬರೆಯುತ್ತಿದ್ದ ಕನ್ನಡ ಬೇರೆಯಾಗಿತ್ತೆ ಇದಕ್ಕೆ ಉತ್ತರವನ್ನು ಹೇಳಲು ಬೇಕಾದ ಆಧಾರಗಳು ನಮಗೆ ದೊರೆಯುವುದಿಲ್ಲ. ಆದರೆ ಅದು ಸೊಗಸಾದ ಕನ್ನಡ ಎಂಬುದು ಪಂಪನ ನಂಬಿಕೆ. ಅಂಥ ಕನ್ನಡವನ್ನೇ ಪೂರ್ತಿಯಾಗಿ ಬಳಸಿದ, ಕನ್ನಡ-ಸಂಸ್ಕೃತಗಳ ಹದವಾದ ಬೆರಕೆಯುಳ್ಳ, ಪೂರ್ಣ ಸಂಸ್ಕೃತಮಯವೇ ಆದ ಮೂರು ಶೈಲಿಗಳಿಗೆ ಅವನಲ್ಲಿ ಬೇಕಾದಷ್ಟು ಉದಾಹರಣೆಗಳು ದೊರೆಯುತ್ತವೆ.

ಮೊದಲನೆಯದಕ್ಕೆ-ಅಚ್ಚ ಕನ್ನಡ ಶಬ್ದಗಳಿಂದಲೇ ಪದ್ಯವನ್ನು ನಿರ್ವಹಿಸುವುದಕ್ಕೆ ಈ ಕೆಳಗಿನ ಉದಾಹರಣೆಯನ್ನು ನೋಡಿ:

ಅಮ್ಮಾತಱೆಯದೆ ಮುಳಿದುಂ
ನಿಮ್ಮಡಿಯಂ ನೋಯೆ ನುಡಿದನುಱದೇಳಿಸಲೇ |
ನೆಮ್ಮಳವೆ ಮಱೆವುದಾ ಮನ
ದುಮ್ಮಚ್ಚರಮಜ್ಜ ನಿಮ್ಮನೆರೆಯಲೆ ಬಂದೆಂ ||
(ವಿ.ವಿ. ೧೨:೫೪)

ಇದನ್ನು ಸಮರ್ಥಿಸುವುದಕ್ಕೆ ಪರಿಸ್ಥಿತಿಯ, ಸಂದರ್ಭದ ಅರಿವೂ ಬಹಳ ಮುಖ್ಯ. ಕರ್ಣನು ಶರಶಯ್ಯೆಯಲ್ಲಿರುವ ಭೀಷ್ಮರನ್ನು ಕಾಣಲು ಬಂದಿದ್ದಾನೆ. ಅವರ ಸೈನ್ಯಾಧಿಪತ್ಯದ ಅಭಿಷೇಕದ ಸಂದರ್ಭದಲ್ಲಿ ತಾನು ಉದ್ಧಟನಾಗಿ ನಡೆದುಕೊಂಡದ್ದಕ್ಕೆ ಕ್ಷಮೆ ಕೇಳಲು ಬಂದಿದ್ದಾನೆ. ಆಗ ಅವರ ಮುಂದೆ ವಿನೀತನಾಗಿ ಮಾತನಾಡಬೇಕು. ದೊಡ್ಡ ದೊಡ್ಡ ಸಂಸ್ಕೃತ ಶಬ್ದಗಳಿಂದ ಆರ್ಭಟಿಸುವಂತಿಲ್ಲ. ಮೃದುವಾಗಿ ಅವರ ಮನವನ್ನು ಒಲಿಸಬೇಕು. ಅದಕ್ಕಾಗಿ ಈ ದೇಸಿ.

ಸಂಸ್ಕೃತ ಶಬ್ದಗಳೆಂದು ಗೊತ್ತಾಗದ, ಎಂದರೆ ಕನ್ನಡದಲ್ಲಿ ಬಳಕೆಯಿಂದ ಪರಿಚಿತವಾಗಿರುವ ಸರಳವಾದ ಸಂಸ್ಕೃತ ಶಬ್ದಗಳನ್ನು ಹೆಚ್ಚಿನ ಕನ್ನಡ ಶಬ್ದಗಳೊಡನೆ ಹದವಾಗಿ ಬೆರೆಸುವ ಅವನ ಕೌಶಲವನ್ನು ಈ ಕೆಳಗಿನ ಉದಾಹರಣೆಗಳಲ್ಲಿ ಗಮನಿಸಿ:

ಆನಿರೆ ನೀಮಿದೇಕೆ ದಯಗೆಯ್ದಿರೋಮಿಂಗುಲಿಗಂಗೆ ಪೇೞೆಮೆಂ
ದಾ ನರನಾಥನಂ ತಿಳಿಪೆ ತಮ್ಮನಿ ಭೂಭುಜನೆಯ್ದಿ ನಂಬಿ ಕಾ
ನೀನ ಸಮಂತು ಆಟಿಸುವೆನೊಯ್ಯನೆ ಮುಳ್ಳೊಳ್ಳೆ ಮುಳ್ಳನೆಂದು ತಾ
ನೀ ನಯದಿಂದೆ ಪೆರ್ಚಿ ಪೊಱೆದೞ್ಮಱೊಳಂದೊಡನುಂಡ ನಲ್ಲನೇ ||
(ವಿ.ವಿ.೯:೬೭)

ಗುರುತು ಮಾಡಿರುವ ಸಂಸ್ಕೃತ ಪದಗಳನ್ನು ಗಮನಿಸಿ. ಅಲ್ಲದೆ ಮುಳ್ಳಿನಿಂದ ಮುಳ್ಳನ್ನು ತೆಗೆಯುತ್ತೇನೆ ಎಂಬ ಬಳಕೆಯ ಮಾತುಗಳನ್ನೂ ಗಮನಿಸಿ, ಇಂಥದೇ ಕೌಶಲದ ಪ್ರದರ್ಶನಕ್ಕೆ ಆದಿ ಪುರಾಣದಲ್ಲಿ ಚಕ್ರವರ್ತಿಯಾಗಲಿರುವ ಭರತನಿಗೆ ಯೌವನ ಪ್ರಾಪ್ತವಾದಾಗ ತನ್ನ ತಂದೆಯಂತೆಯೇ ಇದ್ದ ಎಂದು ವರ್ಣಿಸುವ ಈ ಪದ್ಯವನ್ನು ನೋಡಬಹುದು: (೮:೪೩)

ತಂದೆಯ ರೂಪೆ ತಂದೆಯ ವಿಲಾಸಮೆ ತಂದೆಯ ಚೆಲ್ವೆ ತಂದೆಯೊಂ
ದಂದಮೆ ತಂದೆಯೊಂದು ನುಡಿಯೋಜೆಯೆ ತನ್ನೊಳಮರ್ಕೆವೆತ್ತಲಾ
ನಂದಕರಂ ಕರಂ ಸೊಗಯಸುತ್ತಿರೆ ಶೋಭಿಸಿದಂ ಕುಮಾರ ನಾ
ನಂದಿತ ರೂಪನಂದೆಸೆಯೆ ತಂದೆಯೊಳಚ್ಚಿನೊಳೊತ್ತಿದಂತೆ ವೋಲ್||

ಇನ್ನು ಸಂಪೂರ್ಣವಾಗಿ ಸಂಸ್ಕೃತ ಪದಗಳಿಂದಲೇ ತುಂಬಿದ ಪದ್ಮಗಳಿಗಂತೂ ಪಂಪನಲ್ಲಿ ಕೊರತೆಯಿಲ್ಲ. ಔಚಿತ್ಯವಿರುವಾಗಲಂತೂ ಉದ್ದೇಶಿತ ಪರಿಣಾಮವನ್ನು-ಗಾಂಭೀರ್ಯ, ಭಯ, ಕಷ್ಟ ದುಃಖದ ಅತಿಶಯತೆ, ತಿರಸ್ಕಾರ, ಜುಗುಪ್ಸೆ, ಭೀಭತ್ಸ-ಇವುಗಳನ್ನು ಸಾಧಿಸುವಾಗ ಅವನು ಸಂಸ್ಕೃತ ಶಬ್ದ ಭಂಡಾರವನ್ನು ಸೂರೆಮಾಡುವುದನ್ನು ನೋಡಬೇಕು. ಭರತ ಚಕ್ರವರ್ತಿಯು ದಿಗ್ವಿಜಯಕ್ಕೆ ಹೊರಡುವಾಗ ತನ್ನ ಸೇನೆಯನ್ನೊಮ್ಮೆ ನೋಡಿದನು. ಗದ್ಯದಲ್ಲಿ ಅದನ್ನು ಹೇಳಬಹುದಾದದ್ದು ಹೀಗೆ: ಸಾರ್ವಭೌಮನು ತನ್ನ ಮನದಲ್ಲಿ ವೀರರಸವು ಎಲ್ಲೆ ಮೀರಿ ಹೊರಹೊಮ್ಮುತ್ತಿರಲು ತನ್ನ ಸೈನ್ಯವನ್ನು ನೋಡಿದನು. ಆ ಸೈನ್ಯವು ಗಿರಿರಾಜನಂತೆ ಉನ್ನತವಾದ, ಕುಂಕುಮ ಹಚ್ಚಿದ ಕುಂಭ ಸ್ಥಳಗಳುಳ್ಳ ಆನೆಗಳ ಗುಂಪಿನಿಂದ ವಿಜೃಂಭಿಸುತ್ತಿತ್ತು. ಕುಂಕುಮದ ನೀರಿನಿಂದ ಹೊಳೆಯುವ ಚಲಿಸುವ ಎತ್ತರವಾದ ಶರೀರವುಳ್ಳ ಮದಿಸಿದ ಕುದುರೆಗಳ ಆಡಂಬರದಿಂದ ಕೂಡಿತ್ತು. ಚಿತ್ರವಿಚಿತ್ರವಾದ ಬಟ್ಟೆಗಳನ್ನುಟ್ಟ ಅನೇಕವಿಧ ಆಯುಧಗಳನ್ನು ಹಿಡಿದ ಶೂರರಾದ ಕಾಲಾಳುಗಳ ಸೇನೆಯಿಂದ ಭಯಂಕರವಾಗಿತ್ತು.” ಆದರೆ ಅದನ್ನು ಪಂಪನು ಹೇಳುವ ರೀತಿಯೇ ಬೇರೆ, ಅವನ ಪದಗಳ ಶಯ್ಯೆಯೇ, ಆ ಪದಗಳು ಅರ್ಥವಾಗದಿದ್ದರೂ ಪಂಪನು ಉದ್ದೇಶಿಸಿರುವ ಪ್ರಯೋಜನವನ್ನು ಸಾಧಿಸುವಂತೆ (೧೧:೧೪)

ಗಿರಿರಾಜೋದಗ್ರ ಸಿಂದೂರಿತ ಕರಟ ಘಟಾಟೋಪಮಂ ಕುಂಕುಮಾಂಭ
ಸ್ಫುರಿತಾಂಗೋತ್ತುಂಗ ವಲ್ಗತ್ತುರಗ ಬಲಮದೋದ್ದಾಮಮಂ ಚಿತ್ರನೇತ್ರಾಂ
ಬರ ನಾನಾ ಹೇತಿ ಹಸ್ತೋದ್ಭಟ ಭಟಪೃತನಾಭಿಳಮಂ ಚಿತ್ತದೊಳ್ವೀ
ರಸಂ ಕೈಗಣ್ಮಿಪೊಣ್ಮುತ್ತಿರೆ ನಿಜ ಬಲಮಂ ನೋಡಿದುಂ ಸಾರ್ವಭೌಮಂ ||“

ದ್ರೌಪದಿಯ ಕೇಶ ಪಾಶವು-ಪಾಶ ಎಂಬುದನ್ನು ಗಮನಿಸಿ- ಏನೆಲ್ಲದಕ್ಕೂ ಕಾರಣವಾಯಿತು ಎಂಬುದನ್ನು ವರ್ಣಿಸುವಾಗ ಅವನು ರಚಿರುವ ಪದ್ಯ ಅವನಿಗೆ ಮಹಾಕವಿ ಪಟ್ಟವನ್ನು ದಯಪಾಲಿಸುವುದಕ್ಕೆ ಅರ್ಹವಾಗಿದೆ. ಪಂಪನು ಹೇಳಬೇಕಾಗಿರುವ ವಿಷಯವನ್ನು ಗದ್ಯದಲ್ಲಿ ಹೇಳಿದರೆ ಹೀಗಿರುತ್ತದೆ: “ಈ ಮುಡಿಯಲ್ಲಿ ಬೆಳ್ಗೊಡೆಗಳು ತೆತ್ತಿಸಿದ ಹತ್ತು ದಿಕ್ಕುಗಳನ್ನುಳ್ಳ ರಾಜರ ಸಮೂಹವು ಸೇರಿ ನಾಶವಾಯಿತು; ಇದರಲ್ಲಿಯೇ ಕೌರವ ರಾಜ ಕುಲವು ಅಡಗಿ ಹೋಯಿತು; ಇದರಿಂದಲೇ ನನ್ನ ಪ್ರತಾಪಕ್ಕೆ ಅತಿಶಯತೆ ಉಂಟಾಯಿತು; ಕಮಲದಂತೆ ಕಣ್ಣುಳ್ಳವಳೇ ಕೇಳು- ನಿನ್ನ ಪಾಶದಂತಹ ಕೇಶದ ಜಗತ್ತು, ವಿಚಾರಿಸಿ ನೋಡಿದರೆ, ಸಾಮಾನ್ಯವಾದದ್ದೇ?” ಆದರೆ ಅದನ್ನು ಪಂಪನು ನೀರಸವಾಗಿ ಹೀಗೆ ಹೇಳುವುದಿಲ್ಲ. ಬದಲಿಗೆ ಹೀಗೆನ್ನುತ್ತಾನೆ:

ಇದಱೊಳ್ಶ್ವೇತಾಪತ್ರ ಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ
ಪುದಿದೞ್ಕೂಡಿತ್ತಡಂಗಿತತ್ತಿದಱೊಳೆ ಕುರುರಾಜಾನ್ವಯಂ ಮತ್ಪ್ರತಾಪ |
ಕ್ಕಿದಱಿಂದಂ ನೋಡಗುರ್ವುರ್ವಿದುದಿದುವೆ ಮಹಾ ಭಾರತಾಕ್ಕಾದಿಯಾಯ್ತ
ಬ್ಚದಳಾಕ್ಷೀ ಪೇೞ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶ ಪ್ರಪಂಚಂ ||

ಪಂಪಂನಲ್ಲಿ ಉದ್ದಕ್ಕೂ, ಇದೇ ರೀತಿಯಾದ ‘ಮಹಾ ಶಬ್ದ ವಿಜೃಂಭಣೆ’ಯಿಲ್ಲ ಎಂಬುದು ಪ್ರೊ ಎಸ್. ವಿ. ರಂಗಣ್ಣನವರ ಆಕ್ಷೇಪ. ಆದರೆ ಅದಕ್ಕೆ ಪೂರಕವಾಗಿ ಪಂಪನಲ್ಲಿರುವ ನಿಧಿಯನ್ನು ಅವರು ಗುರುತಿಸಿ ತೋರಿಸಿದ್ದಾರೆ. “ಪಂಪ ನಮಗೆ ಕರುಣಿಸುವುದು ಪದಾನು ಗಣ್ಯವಲ್ಲ, ಆಲೋಚನಾನುಗುಣ್ಯ; ಶಬ್ದ ಸಂಪತ್ತಲ್ಲ, ಅರ್ಥ ಸಂಪತ್ತು; ದನಿಯಲ್ಲ, ಧ್ವನಿ.”

ಇನ್ನು ಪಂದನ ಕೆಲವು ಅಲಂಕಾರಗಳ ವಿಶಿಷ್ಟತೆಯನ್ನು ಗಮನಿಸೋಣ. ಪರಂಪರಾಗತವಾಗಿ ಸಂಸ್ಕೃತ ಕವಿಗಳಲ್ಲಿ ಪದೇ ಪದೇ ಕಾಣಿಸಿಕೊಂಡ ಉಪಮೆ, ರೂಪಕಾದಿಗಳು ಪಂಪನಮ್ಮೂ ಇವೆ. ಅವು ನಮಗೆ ಪಕೃತವಲ್ಲ. ಪಂಪನ ಪ್ರತಿಭೆಯ ಮುದ್ರೆಯಿದೆ ಎನ್ನುವ ಅಲಂಕಾರಗಳೂ ಅವನಲ್ಲಿವೆ. ಅದೇ ಅವನಿಗೆ ಅವನದೇ ಆದ ವ್ಯಕ್ತಿತ್ವವನ್ನು ನೀಡುವುದರಲ್ಲಿ ನೆರವಾಗಿವೆ.

ಕಣ್ಣುಗಳನ್ನು ಕಮಲಕ್ಕೆ, ಜಿಂಕೆಯ ಕಣ್ಣು ಮೊದಲಾದುವಕ್ಕೆ ಹೋಲಿಸುವುದು ತಾನೆ ರೂಢಿ? ಅರ್ಜುನನನ್ನು ಕಂಡು ಅವನಲ್ಲಿ ಅನುರಕ್ತಳಾಗಿ ಪರಿತಪಿಸುತ್ತಿರುವ ಸುಭದ್ರೆಯ ಚಿಂತೆಗೆ ಕಾರಣವನ್ನು ಕೇಳುತ್ತಾ ಅವಳ ಗೆಳತಿ ಚೂತಲತಿಕೆ ಎನ್ನುವವಳು “ನೀಳ್ದ ಮಾವಿನ ಪೊೞಂದದ ಕಣ್ಗೆ”- ನೀಳವಾದ ಮಾವಿನ ಹೋಳಿನಂತಹ ಕಣ್ಣಿಗೆ ನೀರು ಬರುವಂತೆ ಮಾಡಿದ್ದು ಯಾವುದು? ಎನ್ನುತ್ತಾಳೆ (೪:೬೪). ಕಣ್ಣನ್ನು ನೀಳವಾದ ಮಾವಿನ ಹೋಳಿಗೆ ಹೋಲಿಸಿರುವುದು ಪಂಪನ ವೈಶಿಷ್ಟ್ಯ.

ನಾರದನು ಭೂಮಿಗೆ ಇಳಿದು ಬರುವ ಸಂದರ್ಭ (೮:೬೭). “ಬೆಳಗುಗಳೆಲ್ಲವೊಂದುರುಳಿಯಾಗಿ” ಎಂದು ಆರಂಭವಾಗುವ ಪದ್ಯವೇನೋ ಮಾಘನ ಶಿಶುಪಾಲವಧೆಯ ಪದ್ಯದ ಅನುವಾದ. ಆದರೆ ಅದರ ಮುಂದಿನ ಪದ್ಯದ ಉಪಮಾನ ಮಾತ್ರ ಪಂಪನದೇ. ನಾರದನ ಕಣ್ಣಿನ ಹೊಳಪು ಅವನ ಮೈಯ್ಯ ಬಿಳುಪಿನಲ್ಲಿ ಅದ್ದುನಿಂದರೆ- “ವಾಳೆಮೀನ್‌ಪೊಳೆಯೆ ಧಾತ್ರಿಗೆ ವರ್ಷ ಗಂಗೆವೊಲೊಪ್ಪಿದಂ.” ಗಂಗಾನದಿ ಗಗನದಿಂದ ಭೂಮಿಗೆ ಇಳಿಯತ್ತಿದೆ. ಅದರಲ್ಲಿ ಬಾಳೆ ಮೀನುಗಳು ಹೊಳೆಯುತ್ತಿವೆ-ಇದು ಉಪಮಾನ!

ಧರ್ಮಪುತ್ರನ ಬಳಿಗೆ ವ್ಯಾಸರು ಬಂದ ಸಂದರ್ಭದಲ್ಲಿ ಅವರನ್ನು ವರ್ಣಿಸುವಾಗ ಬಳಸುವ ಉಪಮೆಗಳನ್ನು ನೋಡಿ (೭:೫೯). “ಕನಕ ಪಿಶಂಗ ತುಂಗ ಜಟಿಕಾವಳಯಂ ಕುಡುಮಿಂಚಿನೊಳಿಯಂ ನೆನೆಯಿಸೆ, ನೀಲ ನೀರದ ತನುಚ್ಛವಿ ಭಸ್ಮ ರಜೋವಿಲಿಪ್ತಮಂಜನ ಗಿರಿಯಂ ಶರಜ್ಜಳಧರಂ ಕವಿದುತಿರೆ ಚೆಲ್ವನಾಳದು…..” ಹೊಂಬಣ್ಣ ಕೆಂಪುಕಪ್ಪು ಬೆರಸಿದ ಎತ್ತರವಾದ ಜಟೆಯ ಸಮೂಹವು ಕೊಂಕುಮಿಂಚಿನ ಸಾಲನ್ನು ನೆನಪಿಗೆ ತಂದು ಕೊಟ್ಟಿತು. ನೀಲುಮೇಘದಂತಹ ದೇಹಕಾಂತಿಯು ವಿಭೂತಿಯ ಧೂಳಿನಿಂದ ಬಳಿಯಲ್ಪಟ್ಟಿತ್ತು. ಅದು ಕಾಡಿಗೆಯ ಬಟ್ಟವನ್ನು ಶರತ್ಕಾಲದ ಮೋಡವು ಕವಿದಂತೆ ಕಾಣುತ್ತಿತ್ತು!

ಧನಸ್ಸು ಬಾಣಗಳನ್ನು ಧರಿಸಿಯೂ ತಪಸ್ವಿಯ ವೇಷದಲ್ಲಿ ಕುಳಿತಿದ್ದ ಅರ್ಜುನನ್ನು ನೋಡಿ ಅಪ್ಸರೆಯರು ಆಡುವ ಮಾತು (೭:೯೨): ಬೂದಿ, ಜಡೆಗಳೇನೋ ತಪಸ್ಸಿನ ಲಕ್ಷಣಗಳಾದುವು ಸರಿ. ಆದರೆ ಎರಡು ಬತ್ತಳಿಕೆಗಳು, ಬಿಲ್ಲು, ಕವಚ ಇವೋ? ಇವೆರಡರ ಬೆರಕೆ- “ಮುತ್ತುಂ ಮೆೞಸುಂ ಕೋದಂತುಟೆ!” ಕೀಚಕನ ಗಂಟಲನ್ನು ಭೀಮ ಮೆಟ್ಟಿದುದು “ಬಳೆಯ ಪೇಱನಾನೆ ಮೆಟ್ಟಿದಂತೆ” (೮:೭೯ ವಚನ).

ಇಪ್ಪತ್ತನೆಯ ಶತಮಾನದಲ್ಲಿ ರೂಪುಗೊಂಡಿರಬಹುದಾದದ್ದು ಎನ್ನುವಂತಹ ಒಂದು ಉಪಮೆಯನ್ನು ಸಂಧ್ಯಾ ಕಾಲದ ಒಂದು ವರ್ಣನೆಯಲ್ಲಿ ನೀಡಿದ್ದಾನೆ, ಪಂಪ (೧೦:೩೫). ಪಗೆ ಸುಗಿಪನ್ನೆಗಂ….. ಎಂದು ಆರಂಭವಾಗುವ ಪದ್ಯದಲ್ಲಿ “ಹಗೆಯು ಹೆದರುತ್ತಿರಲು, ಮಸೆಯುತ್ತಿರುವ ಶೂರ ಯೋಧರ ಭಯಂಕರವಾದ ಆಯುಧಗಳಿಂದ ಭಯದ ಅದ್ಭುತದಿಂದ ಉಚ್ಚಿದ ಕೆಂಪಾದ ಕಿಡಿಗಳು ಸಂಘಟಿಸಿ ಭೇಗನೆ ಹಿಡಿಯಲು, ಹೊಳೆಯುತ್ತಿರುವ ಸಂಜೆಯ ಕೆಂಪು ‘ಸಾಣೆಗೊಡ್ಡಿದಿಟ್ಟಗೆಯ ರಜು ಬೊಲೆಂಬಿನೆಗಂ’-ಸಾಣೆ ಯಂತ್ರಕ್ಕೆ ಒಡ್ಡಿದ ಒಟ್ಟಿಗೆಯ ಕೆಂದೂಳಿಯಂತೆ ಇದೆ ಎನ್ನುವಂತೆ’ ಸೂರ್ಯನು ಮುಳುಗಿದನು! ಅಂಥದೇ ಒಂದು, ಇಂದಿನಕಾಲದ್ದು ಎನ್ನಬಹುದಾದ ಉಪಮೆ ವಿರಾಟನ ಗೋವುಗಳನ್ನು ಕೌರವರು ಅಪಹರಿಸಿದ ಅನಂತರದ ಯುದ್ಧದ ಪ್ರಸಂಗದಲ್ಲಿ ಬರುತ್ತದೆ. ರಾವುತರು ಗೋವಳರನ್ನು ಕತ್ತರಿಸಿ ಹಾಕಿದ್ದು “ದೇಗುಲಕೆ ಪೆರ್ಮರನಂ ಕಡಿವಂತೆ!” ದೇವಾಲಯವನ್ನು ಕಟ್ಟಲು ಭಾರೀ ಮರವನ್ನು ಕತ್ತರಿಸಬೇಕಾಗುತ್ತದೆ. ಹಾಗೆ ಇವರನ್ನು ಕತ್ತರಿಸಿ ಹಾಕಿದ್ದು.

ಪಂಪನು ತನ್ನ ಕಾಲದಲ್ಲಿ ಬಹುಶಃ ಬಳಕೆಯಲ್ಲಿದ್ದ ನುಡಿಗಟ್ಟುಗಳನ್ನು ಬಳಸುವ ರೀತಿಯೂ ಅವನ ಕಾವ್ಯದ ಯಶಸ್ಸಿಗೆ ಕಾರಣವಾಗಿದೆ. ತಾವೆಲ್ಲರೂ ಭರತನಿಗೆ ತಲೆಬಾಗಬೇಕು ಎಂಬ ರಾಜಾಜ್ಞೆಯನ್ನು ಕೇಳಿದ ಭರತ ಸಹೋದರರು ಹೇಳುವ ಮಾತು: “ನಮಗಕ್ಕಿಗೊಟ್ಟು ಮಡಗೊೞ್ ಉಣ್ಬಂದಮಂ ಪೋಲದೇ?” ಭೂಮಿಯನ್ನು ತಂದೆಯಾದ ಪುರುದೇವರು ಅಣ್ಣನಾದ ಭರತನಿಗೆ ಹೇಗೋ ಹಾಗೆ ನಮಗೂ ಕೊಟ್ಟಿದ್ದಾನೆ. ಈಗ ನಾವು ಭರತನಲ್ಲಿ ಕಿಂಕರ ಭಾವವನ್ನು ತೋರಿಸಿದರೆ ನಾವೇ ಅಕ್ಕಿಒಟ್ಟು ತಂಗಳನ್ನವನ್ನ ತಿಂದಂತಾಗುವುದಿಲ್ಲವೇ? (೧೪:೩೨)

ಹಾವಿಗೆ ಹಾಲೆರೆದಂತೆ ಎನ್ನುವುದು ಈಗಲೂ ಬಳಕೆಯಲ್ಲಿರುವ ನುಡಿಗಚ್ಛ ದುರ್ಯೋಧನನು ತನ್ನ ತಂದೆಗೆ ಹೇಳುವ ಮಾತು (೨:೮೯)- ಪಾಲನೆಱೆವಿರ್ ಪಾವಿಂಗೆ. ಹಾಗೆಯೇ ದುರ್ಯೋಧನನು ತಾನೂ ಧರ್ಮರಾಜನಂತೆ ಸೊಗಸಾದ ಸಭಾಲಯವನ್ನು ಮಾಡಿದ್ದೇನೆ ಎಂದು ಅದನ್ನು ತೋರಿಸುವ ಸಂದರ್ಭದಲ್ಲಿ ಪಂಪ ಹೇಳುವುದು ಹೀಗೆ: ಸಿಂಹಮಾಡುವರ ಬಾಲಮನಾಡಿದರೆಂಬ ಮಾೞ್ಕಿಯಿಂ.”- “ಸಿಂಹದ ವೇಷವನ್ನು ಹಾಕಿಕೊಂಡು ಕುಣಿಯುವವರ ಬಾಲವನ್ನು ಹಿಡಿದುಕೊಂಡು ಕುಣಿಯುವವರು ಎಂಬಂತೆ. ಇದನ್ನು ವಿವರಿಸಲು ಪ್ರೊ ಡಿ. ಎಲ್. ಎನ್. ಹೇಳುತ್ತಾರೆ: “ಬಾಬಯ್ಯನ ಹಬ್ಬದ ಹುಲಿವೇಷದವನ ಬಾಲವನ್ನ ಹಿಡಿದು ಅವನು ಕುಣಿಯುವಂತೆ ಕುಣಿಯುವುದು.”

ದುರ್ಯೋಧನನು ಸಕಲ ವೈಭವಗಳೊಡನೆ ಬಂದು ಅರಣ್ಯದಲ್ಲಿ ಕಷ್ಟಪಡುತ್ತಿದ್ದ ಪಾಂಡವರ ಪಕ್ಕದಲ್ಲಿ ಬೀಡು ಬಿಟ್ಟರೆ ಅವನ ದುರದೃಷ್ಟಕ್ಕೆ ಚಿತ್ರಾಂಗದನೆಂಬ ಗಂಧರ್ವನು ದುಯೋಧನ ದುಶ್ಯಾಸನರಿಬ್ಬರನ್ನು ಕೋಡಗಗಟ್ಟು ಕಟ್ಟಿ ಎತ್ತಿಕೊಂಡ ಹೋದ. ಆ ಸಂದರ್ಭದಲ್ಲಿ ಪಂಪ ಮತ್ತೊಂದು ದೇಸಿ ನುಡಿಗಟ್ಟನ್ನು ಬಳಸುತ್ತಾನೆ. (೭:೩೨ ಗದ್ಯ) “ಮಗೆಯಿಱಿಯ ಬಂದರ ಮೂಗನರಿದರೆಂಬಂತೆ.” ಶತ್ರುವನ್ನು ಕೊಲ್ಲಲು ಬಂದರೆ ಅವನ ಮೂಗನ್ನೇ ಕತ್ತರಿಸಿದರು ಎಂಬಂತೆ!

ನಿನಗೆ ಹುಟ್ಟಿದ ದಿನ ಕಾಣಿಸುತ್ತೇನೆ. ಮದುವೆ ಮಾಡಿಸುತ್ತೇನೆ. ನಿನಗೆ ಪಾಯಸದೂಟ ಕಾದಿದೆ-ಇತ್ಯಾದಿ. ಮಾತುಗಳು ಇಂದು ನಿನಗೆ ತಕ್ಕ ಶಾಸ್ತಿಯಾಗುತ್ತದೆ ಎಂಬರ್ಥದಲ್ಲಿ ಬಳಕೆಯಲ್ಲಿವೆಯಷ್ಟೆ. ಭೀಮನು ಕೀಚಕರ ಗುಂಪನ್ನು ನಾಶಪಡಿಸುವಾಗ ಹೇಳುವ ಮಾತು (೮:೮೦)- ‘ವನಿತಾ ಹೇತುವೆ ಕೇತುವಾಯ್ತು ನಿಮಗಂ, ಗಾಂಧರ್ವರಿಂದಿಂದು ನಿಮ್ಮ ನಿಷೇಕಂ ನೆರೆದತ್ತು. “ನಿಮಗೆ ಕೂಡ ಸ್ತ್ರೀ ನಿಮಿತ್ತವೇ ಕೇತುಗ್ರಹವಾಯಿತು. ಈ ದಿನ ನಿಮ್ಮ ಪ್ರಸ್ತದ ಒಸಗೆ!” ದ್ರೋಣನು ಅಧ್ಯಾತ್ಮವಿಶಾರದನಾಗಿ ಪರಮಾತ್ಮನಲ್ಲಿ ಕೂಡಿದನು. ಅದನ್ನು ತಿಳಿಯದೆ, ಅವನು ಸುಮ್ಮನೆ ಕಣ್ಣುಮಚ್ಚಿ ಕುಳಿತಿದ್ದಾನೆ ಎಂದು ಭಾವಿಸಿ, ತಮ್ಮ ತಂದೆ ದ್ರುಪದನು ಸತ್ತ ಮುಳಿಸಿನಿಂದ ಕಣ್ಣುಕಾಣದ, ಧರ್ಮರಾಜನು ಬೇಡ ಬೇಡ ಎಂದೂ ತಡೆದರೂ ಕೇಳದೆ ಧೃಷ್ಟಧ್ಯಮ್ನನು ದ್ರೋಣ ಹೆಣವನ್ನು ಇರಿದದು ‘ಪೆಣನನಿಱಿದು ಪಗೆ ಗೊಂಡರೆಂಬ ನಾಣ್ಣುಡಿಯಂ’ ಸತ್ಯ ಮಾಡಿ ತೋರಿದಂತಾಯಿತು.

ಪಂಪನ ಶೈಲಿಯ ಗುಣದೋಷಗಳನ್ನೆಲ್ಲ ವಿಸ್ತಾರವಾಗಿಯೂ ಆಳವಾಗಿಯೂ ಪರಿಶೀಲಿಸಿ ಎಸ್. ವಿ. ರಂಗಣ್ಣನವರು ಬರೆದಿರುವ ಈ ಕೆಳಗಿನ ನಿರ್ಣಯವನ್ನು ಪಂಪನ ವಿದ್ಯಾರ್ಥಿಗಳು ವಿಮರ್ಶಗೆ ಒಳಪಡಿಸುವುದು ಪ್ರಯೋಜನಕಾರಿಯಾಗುತ್ತದೆ:

“…..ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ; ಎಂಬ ಮುಂತಾಗಿ ಓದುವಾಗ, ಭಾಷೆಯ ಹೊರಮೈ ನಮಗೆ ಅನಾವಶ್ಯಕವಾಗಿ ಅದರ ಒಳಮೈಯಿನ ಸೌಂದರ್ಯ ಸೌಖ್ಯ ಗಾಡಿ ಗಾರುಡಿಗಳಲ್ಲಿ ಮಗ್ನರಾಗುತ್ತೇವೆ. ಇದು ಪಂಪನಿಂದ ನಾವು ನಿರೀಕ್ಷಿಸಬಹುದಾದ ಉದಾರಾರ್ಥದ ಔಚಿತ್ಯ. ಅವನ ವ್ಯಕ್ತಿತ್ವದ ಓಜೆ ವಿಸ್ತಾರ ಮೇಲ್ಮೈ ವೈಲಕ್ಷಣ್ಯಗಳ ಪ್ರತಿಬಿಂಬ ಅವನ ಶೈಲಿ. ತಾನೆಂಬ ಅಹಂಭಾವವನ್ನು ಛೇದಿಸಿ ತನ್ನ ಸತ್ಯಕಾಮವನ್ನು ಸಾಧಿಸುವ ಪವಿತ್ರ ಶೈಲಿ ಅದು. ಅದರಲ್ಲಿ ಕಾಣುವುದು ಅರಣ್ಯ ಪರ್ವತ ಮುಂತಾದ ಪ್ರಕೃತಿಯ ಪರಮಾಶ್ಚರ್ಯ ಪದಾರ್ಥಗಳು ತಾವಿದ್ದ ಹಾಗೆ ನೋಟಕರನ್ನು ತಾಕಿ ಪ್ರಮಾಣಿಸುವ ನಿಶ್ಶಂಕೆಯ ನಿಸರ್ಗ ವೈಭವ. ಶಾಸ್ತ್ರೀಯವಾದ ನಿಷ್ಕೃಷ್ಟ ಶೈಲಿಯೇ ಇಲ್ಲ ಪಂಪನಿಗೆ. ಅದೇ ಅವನ ಅದೃಶ್ಯ ಶೈಲಿ; ಏನು ಮಾಡಿದರೂ ಇತರರಾರೂ ನಿಲುಕಲಾರದ ಆದಿಕವಿ ಸಹಜವಾದ ನಿರಾಯಾಸ ಶೈಲಿ. ಹೊರ ನೋಟಕ್ಕೆ ಅದರ ಸ್ವರೂಪ ಪೂಜ್ಯ; ಒಳನೋಟಕ್ಕೆ ಅದರ ಸ್ವಾರಸ್ಯ ಅನಂತ.[2]

IV

ಪಂಪ ತನ್ನ ಎರಡು ಕಾವ್ಯಗಳಲ್ಲಿ ವ್ಯಕ್ತಪಡಿಸಿರುವ ಜೀವನ ದೃಷ್ಟಿ ಯಾವುದು? ಬೇರೆ ಬೇರೆ ಸಂದರ್ಭಗಳಲ್ಲಿ ಅವನು ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳು ಬಹುಮಟ್ಟಿಗೆ ಆಯಾ ಪರಿಸರಗಳಿಗೆ, ಪಾತ್ರಗಳಿಗೆ ಮಾತ್ರ ಅನ್ವಯವಾಗುವುದು ನಿಜ. ಆದರೆ ಪಂಪ ತನ್ನ ಬಗೆಗೆ ಹೇಳಿಕೊಂಡಿರುವುದನ್ನು ನೋಡಿದರೆ, ಕೆಲವು ವಿಶಿಷ್ಟ ಸಂದರ್ಭಗಳನ್ನು ಚಿತ್ರಿಸಿರುವಾಗ ಅವನು ಅವುಗಳಲ್ಲಿ ತನ್ಮಯವಾಗುವ ರೀತಿಯನ್ನು ಗಮನಿಸಿದರೆ ಅಂಥ ವಿಶೇಷ ಉಕ್ತಿಗಳು ಅವನ ಜೀವನ ದೃಷ್ಟಿಯನ್ನು, ಅವನ ಬದುಕಿನ ನಂಬಿಕೆಗಳನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಬಹುದು. ಅಂತಹವುಗಳಲ್ಲಿ ಕೆಲವನ್ನು ಪರಿಶೀಲಿಸಬಹುದು.

ಪಂಪ ಜೈನ ಧರ್ಮದ ವಿಷಯದಲ್ಲಿ ತುಂಬ ಶ್ರದ್ಧೆಯುಳ್ಳವನು, ಭಕ್ತಿಭಾವವನ್ನೂ ತಾಳಿದವನು. ಆದರೆ ಅವನು ಜೈನಧರ್ಮವು ಉಪದೇಶಿಸಿದ ತೀವ್ರವಾದ ವೈರಾಗ್ಯದ ಮಾರ್ಗವನ್ನು ಸ್ವೀಕರಿಸಿದವನಲ್ಲ ತನ್ನನ್ನು ತಾನು ವರ್ಣಿಸಿಕೊಂಡಿರುವುದನ್ನು-ಅದರಲ್ಲೂ ಭವಾವಳಿಗಳನ್ನು ವರ್ಣಿಸಿ ಸಂಸಾರದ ಅಸಾರತೆಯನ್ನೂ ವೈರಾಗ್ಯದ ಮಹಿಮೆಯನ್ನೂ ವರ್ಣಿಸುವ ಆದಿಪುರಾಣದಲ್ಲಿ-ಅವನು ಭೋಗ ಪರವಾದ ಜೀವನವನ್ನು ಮೆಚ್ಚಿ ಬಾಳಿದವನು, ವೈರಾಗ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡವನಲ್ಲ ಎಂಬುದು ಸ್ಪಷ್ಟವಾಗುತ್ತದೆ. ತಾನು

ಕದಳೀ ಗರ್ಭಶ್ಯಾಮಂ
ಮೃದು ಕುಟಿಲ ಶಿರೋರುಹಂ ಸರೋರುಹ ವದನಂ |
ಮೃದು ಮಧ್ಯಮ ತನು ಹಿತಮಿತ
ಮೃದು ವಚನಂ ಲಲಿತ ಮಧುರ ಸುಂದರ ವೇಷಂ || (:೨೯)

ಎಂದು ಹೇಳಿಕೊಂಡಿದ್ದಾನೆ. “ಬಾಳೆಯ ದಿಂಡಿನಂತೆ ನಸುಗಪ್ಪಾದ (ಬಹುಶಃ ಅವನು ಬಾಳೆದಿಂಡಿನಿಂತೆ ಸುಂದರವಾದ ಗೌರವರ್ಣದವನಿರಬಹುದು) ಮೈಬಣ್ಣವುಳ್ಳವನು. ಮೃದುವೂ ಗುಂಗುರು ಗುಂಗುರೂ ಆದ ಕೂದಲುಳ್ಳವನು. ಮುಖವು ಕಮಲದಂತೆ. ಎತ್ತರವೂ ಅಲ್ಲದ ಕುಳ್ಳೂ ಅಲ್ಲದ ಮಟ್ಟಸವಾದ ದೇಹ, ಮಾತುಗಳು ಹಿತ, ಮಿತ, ಮೃದು. ವೇಷವೋ, ಲಲಿತ, ಮಧುರ, ಸುಂದರ.” ಮುಂದಿನ ಪದ್ಯಗಳಲ್ಲಿ ತಾನೇನೂ ಏಕಪತ್ನೀ ವ್ರತಸ್ಥನಲ್ಲ ಎಂಬುದನ್ನು ವಿವಿಧ ದೇಶಗಳ ಸ್ತ್ರೀಯರ ಆಕರ್ಷಣೆಗೆ ಒಳಗಾದನೆಂಬುದನ್ನು ಹೇಳಿಕೊಳ್ಳುತ್ತಾನೆ. (೧:೩೧, ೩೨). “ವನಿತೆಯರ ಕಡೆಗಣ್ಣಿನ ನೋಟವೆಂಬ ತಾನು ಚಂದ್ರ. ಯುವತಿಯರ ಸೊಂಟದ ಮುಂಭಾಗಕ್ಕೆ ಕಾಂಚೀರತ್ನ. ಸ್ತನಗಳ ಭಾರದಿಂದ ಬಾಗಿದ ಗಣಿಕೆಯರ ಸ್ತನ ಪ್ರದೇಶಕ್ಕೆ ಹಾರ, ಈ ಸರಸ್ವದೀ ಮಣಿಹಾರ. ಕೇರಳದ ವಿಟವನಿತೆಯರ ಸೊಂಟದ ಹಾರಕ್ಕೆ ಅವನು ಕೆಂಪು ಮಣಿ. ಮಲಯ ತರುಣಿಯರ ನೋಟದ ಕನ್ನಡಿ. ಆಂಧ್ರ ಸ್ತ್ರೀಯರ ಸಾಂಧ್ರವಾದ ಸುಂದರ ಸ್ತನಗಳಿಗೆ ಹಾರ, ಉದಾರನಾದ ಈ ಸರಸ್ವತೀ ಮಣಿಹಾರ.”

ಈ ಹಿನ್ನೆಲೆಯಲ್ಲಿ ನೋಡಿದರೆ ಪಂಪನು ಬದುಕನ್ನು ಅದು ನೀಡುವ ಭೋಗವಸ್ತುಗಳನ್ನು ತೀವ್ರವಾಗಿ ಪ್ರೀತಿಸುತ್ತಿದ್ದನೆಂದು ಹೇಳಬಹುದು. ಅದರಲ್ಲಿಯೂ ಸ್ತ್ರೀಭೋಗ ಅವನಿಗೆ ವಿಶೇಷವಾಗಿ ಆಕರ್ಷಣೆಯನ್ನೊಡ್ಡಿತ್ತು ಎಂದು ಹೇಳಲು ಕೆಲವು ನಿದರ್ಶನಗಳಿವೆ. ಸ್ತ್ರೀಯರನ್ನು ವರ್ಣಿಸುವುದಕ್ಕೆ ಅವಕಾಶ ದೊರೆತಾಗ, ಅದು ಆದಿಪುರಾಣವಾಗಲಿ, ಭಾರತವೇ ಆಗಲಿ, ಅವನು ತೋರಿಸುವ ಉತ್ಸಾಹ ಅಷ್ಟಿಷ್ಟಲ್ಲ. ಅಂಥ ಸ್ತ್ರೀ ಸಂಗ ತಪ್ಪುವುದಾದರೆ ಏಕೆ ಬದುಕಿರಬೇಕು? ತನ್ನ ಸತಿಯನ್ನು ಹೆಣ್ಣು ಜಿಂಕೆಯನ್ನಾಗಿ ಮಾಡಿ ತಾನು ಗಂಡು ಜಿಂಕೆಯಾಗಿ ಮನ್ಮಥ ಕ್ರೀಡೆಯನ್ನಾಡುತ್ತಿರುವ ಋಷಿಯನ್ನು ತಿಳಿಯದೆ ಮೃಗವೆಂದು ಬಾಣಪ್ರಯೋಗ ಮಾಡಿ ಪಾಂಡುರಾಜ ಕೊಪ್ಪುತ್ತಾನೆ. “ನೀನು ಪ್ರಿಯೆಯನ್ನು ನೋಡಿ, ಬಯಸಿ ಕೂಡಿದಾಗ ಸಾಯುತ್ತೀಯೆ” ಋಷಿ ಶಾಪದ ಯಮ ಪಾಶ ಅವನನ್ನು ಸುತ್ತುತ್ತದೆ. ಆಗ ಪಾಂಡು ರಾಜ್ಯವನ್ನೇ ಬಿಟ್ಟು ಕಾಡಿಗೆ ಹೊರಟುಹೋಗಲು ಸಿದ್ಧನಾಗುತ್ತಾನೆ. ಆಗ ಪಂಪ ಅವನಿಂದ ಆಡಿಸುವ ಮಾತು: “ಸಾರಮನಂಗ ಜಂಗಮ ಲತಾ ಲಲಿತಾಂಗಿಯರಿಂದಮಲ್ತೆ ಸಂಸಾರಂ.” ಈ ಸಂಸಾರವು ಸಾರವತ್ತಾಗುವುದೇ ಮನ್ಮಥನ ಸುಳಿದಾಡುವ ಲತೆಯಂತಿರುವ ಕೋಮಲೆಯರಿಂದ! ಅವರಿಲ್ಲದ ಬಾಳು ಶೂನ್ಯವಾದದ್ದೇ, ಆದ್ದರಿಂದ ತಪೋವನವೇ ಲೇಸು!

ತಪ್ಪು ಸ್ಥಳದಲ್ಲಿ ಪ್ರೀತಿಯನ್ನು ತೋರಿಸಿದ ಪ್ರಸಂಗವನ್ನು ಚಿತ್ರಿಸುವಾಗಲೂ ಪಂಪನು ಸೌಂದರ್ಯದ ವಸ್ತುವನ್ನು ಅಷ್ಟೆ ಆಕರ್ಷಕವಾಗಿ ಕಾಣುವಂತೆ ವರ್ಣಿಸುತ್ತಾನೆ. ಕೀಚನಕನ ಕಣ್ಣಿಗೆ ಬಿದ್ದ ದ್ರೌಪದಿಯ ಚಿತ್ರದ ವರ್ಣನೆಯನ್ನು ಗಮನಿಸಬೇಕು.(೮ :೫೯, ೬೦, ೬೧)

“ತೋಳ್ಗಳ ಮೇಲ್ಭಾಗದಲ್ಲಿ, ಬುಡದಲ್ಲಿ, ಕಾಂತಿಯನ್ನು ಹೊಂದಿ ಸೊಗಸಾಗಿರುವ ಒಂದು ನುಣುಪು ಶೋಭಿಸಲು, ಸರಿಯಾಗಿ ಹೊದ್ದುಕೊಳ್ಳುವ ಉತ್ತರೀಯವನ್ನು ಮೊಲೆಗಳು ನಡುಗಿಸುತ್ತಿರಲು, ಬೆವರ ಹನಿಗಳು ತಲೆದೋರಲು, ಹೂವಿನ ಬಾಣಗಳಂತೆ ನಸುಗೆಂಪಾದ ಚಂಚಲವಾದ ಕಣ್ಣುಗಳು, ಎಂದರೆ ನೋಟವು ವ್ಯಾಪಿಸಿ ಮನವನ್ನು ಪ್ರವೇಶಿಸಲು ಕೋಮಲವಾದ ತೋಳುಗಳ ಹಿಡಿತವು ಸೊಗಸಾಗಲು ಗಂಧವನ್ನ ಅರೆಯುವಾಗ ಮೇಲು ಕೆಳಗು ಮಾಡುವ ಗಂಧ ಅರೆಯುವವಳಾದ ಸೈರಂಧಿಯನ್ನು ಭೋಂಕನೆ ನೋಡಿ ತಿರುಪೆಯವನಂತೆ ವಿಶೇಷವಾಗಿಯೇ ನಾಚಿಕೆ ಕೆಟ್ಟು ಮನಸ್ಸಿನ ಹತೋಟಿ ತಪ್ಪಿ ಆಸೆಪಟ್ಟು-ದುಂಬಿಯ ಮರಿಗಳು ಮುತ್ತುಗಳನ್ನು ಕಾರುವ ಹಾಗೆ ಬೆವರು ಮುಂಗರುಳುಗಳನ್ನು ಅನುಸರಿಸಿ ಸುರಿಸಲು ಕೋಮಲವಾದ ತೋಳುಗಳ ಚೆಲುವಿನ ಅತಿಶಯವು ಕಣ್ಣುಗಳನ್ನು ಸೆಳೆಯಲು ಇವಳದು ಗಂಧ ತೇಯುವ ಅಂದವಲ್ಲ, ನನ್ನ ಎದೆಯನ್ನು ಅರೆದು ಕೀಳು ಮೇಲು ಮಾಡುವ ರೀತಿಯೇ, ಬೇರೇನು? ಕಸ್ತೂರಿ ಕಂಪಿಗೂ ಇವಳ ಉಸಿರಿನ ಕಂಪಿಗೂ ವ್ಯತ್ಯಾಸವನ್ನು ಕಂಡುಹಿಡಿಯುವುದು ಹೇಗೆ? ಈ ತರಳ ನೇತ್ರೆಯ ಕಡೆ ಗಣ್ಣಿನ ನೋಟ ಇದೇ ಮನ್ಮಥನ ಮನೆಯಾಗಿದೆ. ಇದೇ ಕಾಮಾಮೃತವಾಗಿದೆ. ಇದೇ ಕಾಮನ ಬಾಣವಾಗಿದೆ. ಇದೇ ರತ್ಯುತ್ಸವದ ಸ್ಥಾನವಾಗಿದೆ” ಇಂಥ ಹೆಣ್ಣನ್ನು ನೋಡಿ ಕೀಚಕ ‘ಇವಳು ಯಾರಾದರೂ ಆಗಿರಲಿ. ಹೋಗು, ತಲೆ ಇವತ್ತೇ ಹೋದರೂ ಸರಿ. ಇವತ್ತೇ ಮಹಾದೇವನು ಸಮರ್ಥನಾಗಿ ಮಧ್ಯೆ ಬಂದರು ಸರಿ, ಇವತ್ತೇ ವಿನಾಶವು ಬರುವುದಾದರೂ ಸರಿ, ನನ್ನ ಎದೆ ತುಂಬಿ, ಸೇರಿ ಇವಳ ಕುಚಗಳ ತುದಿಯನ್ನು ಪ್ರೇಮದಿಂದ ಗಾಢವಾಗಿ ಅಪ್ಪಿ ಹೋಗು ಯಾವ ಉಪಾಯದಿಂದಲಾದರೂ ಇವಳಲ್ಲಿ ಕೂಡದೆ ಬಿಡೆನು ಎಂಬ ಮೃತ್ಯು ನಿಶ್ಚಯವನ್ನು ಕೈಗೊಂಡದ್ದವರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಅರ್ಜುನನು ವೇಶ್ಯಾವಾಟಿಯಲ್ಲಿ ಸುತ್ತುವ ಅನೌಚಿತ್ಯದ ಸಂದರ್ಭದಲ್ಲೂ ಪಂಪನು ಆ ವೇಶ್ಯಾವಾಟಿಯನ್ನು ವರ್ಣಿಸುವ ವೈಭವದಲ್ಲಿ ಅವನ ತಪ್ಪು ಮರೆತು ಹೋಗುತ್ತದೆ. ಒಬ್ಬಳು ಸ್ತ್ರೀಯನ್ನು ಹೀಗೆ ವರ್ಣಿಸುತ್ತಾನೆ (೪:೮೪): “ಈಕೆಯ ಹೂವಿನಂಥ ಕಣ್ಣುಗಳಲ್ಲಿ ಮನ್ಮಥನೇ ನೆಲೆಸಿದ್ದಾನೆ. ಸಂಕೇತ ಸ್ಥಾನಕ್ಕೆ ಹೋಗುವ ಚಾರೆ ಮನ್ಮಥನ ಪ್ರಿಯೆಯಾಗಿದ್ದಿರಬೇಕು. ಬೇರೆ ಏನು? ಹಾದರದಲ್ಲಿ ಸಂಸಾರ ಸಾರವನಲ್ಲ ಗೆದ್ದ ಸುಖದ ಉಂಪನ್ನು ಹೊಂದಿದ ರುಚಿ ಇರಬೇಕು. (ಇಲ್ಲದಿದ್ದರೆ) ಜಾರರು ತಲೆಯನ್ನೂ ಮೂಗನ್ನೂ ಒತ್ತೆಯಿಟ್ಟು ಸುಮ್ಮನೆ ಕೂಡುವಷ್ಟು ದಡ್ಡರೇ?” ಹಿಂದಿನ ಕಾಲದಲ್ಲಿ ಹಾದರ ಆಡಿದವರಿಗೆ ಶಿಕ್ಷೆ ಗಂಡಸಿಗೆ ತಲೆ ಕತ್ತರಿಸುವುದು, ಹೆಂಗಸಿಗೆ ಮೂಗು ಕತ್ತಿರುಸುವುದು. ಕತ್ತು ಮೂಗುಗಳನ್ನು ತೆತ್ತಾದರೂ ಈ ಸುಖವನ್ನು ಅನುಭವಿಸುವುದಾದರೆ ಅದರಲ್ಲಿ ಏನೂ ಅಪರೂಪರ ಸವಿ ಇರಲೇಬೇಕು.

ಪಂಪ ಸ್ತ್ರೀಯರನ್ನು ಯಾವ ಅಡೆ ತಡೆಗಳೂ ಇಲ್ಲದೆ ವರ್ಣಿಸಬಹುದು, ಅಂದಿನ ಕಾಲದಲ್ಲಿ ಸಮಾಜ ಒಪ್ಪಿದ ವೇಶ್ಯಾ ಸುಖವನ್ನು ಯಾರೂ ಚಪ್ಪರಿಸುವಂತೆ ವಿವರಿಸಬಹುದು, ಆದರೆ ಅವನು ಧರ್ಮವು ಒಪ್ಪದ ಕಾಮವನ್ನು ಖಂಡತುಂಡವಾಗಿ ಖಂಡಿಸುತ್ತಾನೆ. ಲಂಪಟತನ ನಿಂದ್ಯವಾದದ್ದು. ಪರಸ್ತ್ರೀಯನ್ನು ಮೋಹಿಸಿ ಮುಂದುವರಿಯುವವನಿಗೆ ಸಾವೇ ಸರಿಯಾದ ಶಿಕ್ಷೆ ಎಂಬುದು ಅವನ ಖಚಿತವಾದ ಅಭಿಪ್ರಾಯ. ಇದೇ ಕೀಚಕ, ಉಪಕೀಚಕರ ವೃತ್ತಾಂತದಲ್ಲಿ ಅವನು ತನ್ನ ಈ ಮೌಲ್ಯ ಪ್ರತಿಪಾದನೆಯನ್ನು ಸ್ಪಷ್ಟವಾದ ರೀತಿಯಲ್ಲಿ ಮಾಡಿದ್ದಾನೆ (೮:೭೧ ಗದ್ಯ).

ದ್ರೌಪದಿಯು ಕೀಚಕನಿಂದಾದ ಹಿಂಸೆಯನ್ನು ಭೀಮನಿಗೆ ಹೇಳಿ ಕೊಂಡು ದುಃಖಿಸಿದಾಗ ಅವನು “ಕಣ್ಗಾಣದಿವನೋರ್ವಂ ದುಶ್ಶಾಸನನ ನಂಟನಕ್ಕುಂ” ಎನ್ನುತ್ತಾನೆ. ಮನಸ್ಸಿನಲ್ಲಿಯೇ ದುಶ್ಶಾಸನನ ಬಗೆಗೆ ಮಾಡಿದಂತಹ ಪ್ರತಿಜ್ಞೆಯನ್ನೇ ಇವನ ವಿಷಯಕ್ಕೆ ಮಾಡಿದಂತಾಯ್ತು ಹೇಳುತ್ತದೆ. ಉಪಕೀಚಕರಿಗೆ ಭೀಮನಿಂದ ಸಾಮೂಹಿಕ ಮರಣ ದೊರೆತಾಗ ಊರಿನ ಜನ ‘ಅಕ್ಕಾಟಾ’ ಎಂದು ಕೂಡ ಹೇಳಲು ಸಮರ್ಥರಾಗಲಿಲ್ಲವಂತೆ. ಏಕೆಂದರೆ ಪಂಪ ಹೇಳುತ್ತಾನೆ: “ಪಾರಪದರದೊಳ್ ಸತ್ತಂಗೆ ಅೞಲ್ವನ್ನರಾರ್?” (೮:೮೧) ಹಾದರದಲ್ಲಿ ಸತ್ತವರಿಗೆ ಅಳುವವರು ಯಾರು? ಅಷ್ಟೇ ಅಲ್ಲದೆ ಮುಂದಿನ ಕಂದ ಪದ್ಯದಲ್ಲಿ (೮:೮೨) ಶಾಶ್ವತವಾಗಿ ನೆನಪಿಡಬೇಕಾದ, ನುಡಗಟ್ಟಿನಂತಹ ಮಾತನ್ನು ಹೇಳಿದ್ದಾನೆ “ಪೇಱೇವುದೋ ಶುಚಿಯಿಲ್ಲದವನ ಗುಂಡುಂ ತೊಂಡುಂ!” ಶುಚಿವ್ರತನಲ್ಲದವನ ಪೌರುಷವೂ ತುಂಟಾಟವೂ ಯಾವ ಪ್ರಯೋಜನಕ್ಕೆ ತಾನೆ ಬದಂದ್ದು?

ಪ್ರೇಮಿಗಳು ಮನತಣಿಯುವಷ್ಟು ಸುರತ ಸುಖವನ್ನು ಅನುಭವಿಸುವುದನ್ನು ವರ್ಣಿಸುವ ಕೌಶಲವನ್ನುಳ್ಳ ಪಂಪ ಅವರು ಮರಣದಲ್ಲೂ ಜೊತೆ ಜೊತೆಯಾಗಿರುವುದನ್ನು ಅಪೂರ್ವವಾದ ಪುಣ್ಯ ವೆನ್ನುವಂತೆ ವರ್ಣಿಸುತ್ತಾನೆ. ಶ್ರೀಮತಿ ವಜ್ರಜಂಘರು ಸತ್ತಾಗ (ಆ. ಪು. ೧:೨೪) ಅವನು ಹೇಳುವ ಮಾತುಗಳು: “ಬಿಡದೆ ಹೊಗೆಯು ಸುತ್ತಿಕೊಂಡಿತು. ಅದರಿಂದ ತೋಳುಗಳನ್ನು ಸಡಿಲಿಸದೆಯೇ ಆ ಪ್ರಾಣವಲ್ಲಭರು ಜೊತೆಯಲ್ಲಿಯೇ ಪ್ರಾಣಗಳನ್ನು ಕಳೆದುಕೊಂಡರು. ಹೀಗೆ ಕಾಂತೆಯೂ ಕಾಂತನೂ ಜೊತೆಯಲ್ಲಿಯೇ ಸಾಯಲು ಆಳವಿಲ್ಲದ ಅದೆಷ್ಟು ಪುಣ್ಯವನ್ನು ಮಾಡಿದ್ದರೋ?”

ಪ್ರಮೇಯವಿಲ್ಲದಾಗಲೂ ಅದನ್ನು ಸೃಷ್ಟಿಸಿ ಮತ್ತೆ ಇದೇ ಮಾತುಗಳನ್ನೇ ಹೇಳಿ ಇದೇ ಪುಣ್ಯವನ್ನು ಹಾಡಿ ಹೊಗಳಿದ್ದಾನೆ, ಪಂಪ, ತನ್ನ ವಿಕ್ರಮಾರ್ಜುನ ವಿಜಯದಲ್ಲೂ. ಅರ್ಜುನನು ಖಾಂಡವ ವನವನ್ನು ಇಂದ್ರನಿಗೆ ಉಣಿಸಾಗಿ ನೀಡುತ್ತಿದ್ದಾಗ ಅಲ್ಲಿಯ ಲತಾ ಗೃಹಗಳಲ್ಲಿಯೂ, ಧಾರಾಗೃಹಗಳಲ್ಲಿಯೂ ಸುರತಕ್ರಿಯೆಯಲ್ಲಿ ತೊಡಗಿದ್ದ ನಲ್ಲನಲ್ಲೆಯರು ಉರಿ ಸುತ್ತಿ ಸತ್ತರಂತೆ. ಆಗಲೂ ಪಂಪ ಹೇಳುವುದು ಹೀಗೆಯೇ:

ಒಡನಳುರೆಕಿರ್ಚು ತೋಳು
ಸಡಿಲಿಸದಾ ಪ್ರಾಣ ವಲ್ಲಭರ್ ಪ್ರಾಣಮನಂ |
ದೊಡಗಳೆದರೋಪರೋಪರೂ
ಳೊಡಸಾಯಲ್ ಪಡೆದರಿನ್ನವುಂ ಸಯ್ಪೊಳವೇ ||

ಪಂಪ ಮೆಚ್ಚುವ ಒಂದು ಮೌಲ್ಯ ಪುರುಷವ್ರತ-ಬ್ರಹ್ಮಚರ್ಯ. ಹಾಗೆ ಪ್ರತಿಜ್ಞೆ ಮಾಡಿದವನು ಆ ವ್ರತವನ್ನು ಅಚ್ಚಳಿಯದೆ ನಡೆಸಿದರೆ ಅದನ್ನು ಪಂಪನಷ್ಟು ಮೆಚ್ಚುವವರು ಬೇರೊಬ್ಬರಿರಲಾರರು. ಭೀಷ್ಮರ ಬಗ್ಗೆ ಅವನ ಮೆಚ್ಚುಗೆ ಅಪಾರ. ಅದಕ್ಕೆ ಕಾರಣಗಳು ಅನೇಕ. ಅವುಗಳಲ್ಲಿ ಒಂದು ಅವರು ಈ ಪುರುಷ ವ್ರತವನ್ನು ಪರಿಪಾಲಿಸಿದ ರೀತಿ ತನ್ನನ್ನು ಮದುವೆ ಮಾಡಿಕೋ ಎಂದು ಅಂಬೆಗೆ ಭೀಷ್ಮರು ಹೇಳುವ ಮಾತು (೧:೭೫): “ಎನಗಾಗದು ಅಂಗಜೊತ್ಪತ್ತಿ ಸುಖಕ್ಕೆ ಸೋಲಲ್, ಅೞಿಗುಂ ಪುರುಷವ್ರತಂ, ಈಗಳ್‌ಅಂಬೆಯೆಂದು ಅತ್ತಿಗೆಯೆಂಬ ಮಾತನ್ ಎನಗೆ ಏನ್ ಎನಲಕ್ಕುಮೊ.” ಕಾಮ ಸುಖಕ್ಕೆ ಸೋಲುವುದು ನನ್ನಿಂದಾಗದು. ಹಾಗೆ ಮಾಡಿದರೆ ಪುರುಷವ್ರತ ಹಾಳಾಗುತ್ತದೆ. ಈಗಷ್ಟೆ ತಾಯಿ ಎಂದು ಕರೆದು, ಮರುಕ್ಷಣವೇ ಪ್ರಿಯೆ ಎಂದು ಕರೆಯಲು ನನಗೆ ಸಾಧ್ಯವಾಗುತ್ತದೆಯೇ? ಭೀಷ್ಮರು ಶರಶಯ್ಯೆಯ ಮೇಲೆ ಒರಗಿದುನ್ನೂ ಪಂಪ ಅವರು ಹಾಗೆ ಮಾಡಿದುದು ಶೌಚ ಗುಣದುನ್ನತ್ತಿಯನ್ನು ಮೆರೆಯುವುದಕ್ಕಾಗಿಯೇ ಎಂದು ಅನ್ವಯ ಮಾಡುತ್ತಾನೆ (೧೧:೪೭): “ಬಾಲ್ಯದಿಂದಲೇ ಪ್ರಸಿದ್ಧವಾದ ಶೌಚಗುಣವು ಎಂದರೆ ಬ್ರಹ್ಮಚರ್ಯೆಯು ನಡೆಯಿತು. ಈಗ ನಾನು ನೆಲವನ್ನು ಸೋಕಿ (ಎಂದರೆ ನೆಲದ ಮೇಲೆ ಮಲಗಿ) ಶೌಚವನ್ನು ಕೆಡಿಸುವುದೆ? ನೆಲವು ಸ್ತ್ರೀ ಅಲ್ಲವೆ? ಎಂಬುದಾಗಿ ಮೈಯಲ್ಲಿ ನಾಟಿ ಮುಳುಗಿ ತುಂಬಿದ ಅಸಂಖ್ಯಾತವಾದ ಬಾಣಗಳಿಂದ ನೆಲವನ್ನು ಸ್ವಲ್ಪವೂ ಮುಟ್ಟದೆ ಬಿದ್ದು ಭೀಷ್ಮನು ಶೌಚ ಗುಣದ ಉನ್ನತಿಯನ್ನು ಅಂಗೀಕರಿಸಿದನು.”

ಸಾಹಸ, ದಾನಗುಣ, ಶರಣಾಗತ ರಕ್ಷಣೆ ಪಂಪನು ಪ್ರತಿಪಾದಿಸುವ ಇತರ ಮೌಲ್ಯಗಳು. ಅಗ್ನಿಯು ಬಂದು ಖಾಂಡವವನ್ನು ಉಣಬಡಿಸಬೇಕೆಂದು ಕೇಳಿದಾಗ ಆಗಲಿ ಎಂದು ಅರ್ಜುನನು ತಕ್ಷಣವೇ ಅವನಿಗೆ ಮಾತು ಕೊಟ್ಟ ಪರಿಣಾಮ ಕೇಡಾಗುತ್ತದೆ ಎಂದು ಕೃಷ್ಣನು ಎಚ್ಚರಿಸಿದಾಗ ಅರ್ಜುನನು ಈ ಮೌಲ್ಯಗಳನ್ನು ಘೋಷಿಸುತ್ತಾನೆ. (೫:೭೫)

“ಒತ್ತು ಅಡ್ಡಗಟ್ಟಿನಿಂತ ಶತ್ರುಗಳೆಂಬ ಮರಗಳ ಸಮೂಹದ ಬೇರುಗಳನ್ನು ಆಕಾಶಕ್ಕೆ ಎತ್ತದೆ (ಎಂದರೆ ಶತ್ರುಗಳನ್ನು ಬೇರು ರಹಿತ ಕಿತ್ತೆಸೆಯದೆ), ತನ್ನನ್ನು ಬಂದು ಆಶ್ರಯಿಸಿ ಶರಣಾಗತರಾದವರನ್ನು ರಕ್ಷಿಸದೆ, ತ್ಯಾಗದ ಒಳ್ಳೆಯ ತನದ ಅಚ್ಚನ್ನು ಒತ್ತದೆ, ಬಿಟ್ಟು ಬಾಳುವ ಕೀಟದಂತಹ ಮನುಷ್ಯನು, ಬ್ರಹ್ಮಾಂಡವೆಂಬ ಅತ್ತಿಯ ಹಣ್ಣಿನಲ್ಲಿ ಇರುವ ಹುಳವಲ್ಲದೆ ಮನುಷ್ಯನೆ?”

ತ್ಯಾಗ, ಸತ್ಯವ್ರತಗಳು ಪಂಪನಿಗೆ ಅಚ್ಚುಮೆಚ್ಚಾದ ಗುಣಗಳು. ಅವುಗಳ ಮೂರ್ತಿ ರೂಪಾದ ಕರ್ಣನನ್ನು ಅವನು ಹಾಡಿ ಹಾಡಿ ಹೊಗಳಿದ್ದಾನೆ. ಒಂದೆರಡು ಸಲ ತಾನೇ ಕರ್ಣನನ್ನು ಹೀಯಾಳಿಸಿದುದನ್ನೂ “(ದುಶ್ಯಾಸನ ಕರ್ಣ ಶಕುನಿ ಸೈಂಧವರೆಂಬ ದುಷ್ಟ ಚತುಷ್ಪಯದೊಳ್” ೬:೬೭ ಗದ್ಯ) ಮರೆತು ಕರ್ಣನನ್ನು ಭಾರತದ ಏಕೈಕ ವೀರನೆಂದೂ “ರರ್ಣ ರಸಾಯನಮಲ್ತೆ ಭಾರತಂ” ಎಂದೂ ಆದರ್ಶೀಕರಿಸಿ ತೋರಿಸಿದ್ದಾನೆ.

ಪಂಪನು ಪ್ರತಿಪಾದಿಸುವ ಮತ್ತೊಂದು ಮೌಲ್ಯ ಸ್ವಾಮಿ ಭಕ್ತಿ. ಅನ್ನದ ಋಣವನ್ನು ತೀರಿಸಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂಬುದು ಅವನ ನಂಬಿಕೆ. ಅದನ್ನು ಹೀಗೆ ಸಾರಿದ್ದಾನೆ: ಜೋಳದ ಪಾೞೆಯಂ ನೆರಪಿದಂ ಗಂಡಂ ಪೆಱಂ ಗಂಡನೆ? (೧೦:೪೩)

ಹಿಂದೆ ಹೇಳಿದ ಎಲ್ಲ ಅಂಶಗಳನ್ನೂ ಗಮನಕ್ಕೆ ತೆಗೆದುಕೊಂಡರೆ ಪಂಪನು ಖಂಡಿತವಾಗಿಯೂ ಕನ್ನಡದ ಮಹಾಕವಿಗಳಲ್ಲಿ ಒಬ್ಬ ಎಂದು ಹೇಳಬಹುದಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಮಹಾಕವಿ ಪಂಪ-ಮೈಸೂರು ವಿಶ್ವವಿದ್ಯಾನಿಲಯ ೧೯೭೪ ಪು. ೯೯

[2] ಶೈಲಿ-೧. ಕಾವ್ಯಾಲಯ, ಮೈಸೂರು ೧೯೭೧ ಪು. ೩೮