ಪಂಪ ಕನ್ನಡದ ದೊಡ್ಡ ಕವಿಗಳಲ್ಲಿ ಒಬ್ಬ ಇದುವರೆಗೆ ನಮಗೆ ದೊರೆತಿರುವ ಕಾವ್ಯಗಳ ದೃಷ್ಟಿಯಿಂದ ಹೇಳುವುದಾದರೆ ಅವನೇ ನಮ್ಮ ಮೊದಲ ಕವಿ. ಅವನು ಸಾವಿರ ವರ್ಷಗಳ ಕಾಲ ಕನ್ನಡದ ಓದುಗರಿಗೆ ನಿರಂತರವಾಗಿ ರಸಾಸ್ವಾದನೆಯನ್ನು ನೀಡಿದ್ದಾನೆ. ಅಷ್ಟೇ ಅಲ್ಲದೆ ಸಾವಿರ ವರ್ಷಗಳ ಕಾಲ ಕನ್ನಡದಲ್ಲಿ ಕಾವ್ಯ ರಚನೆ ಮಾಡಿದ ಅನೇಕರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿದ್ದಾನೆ. ಒಂದು ಧಾರ್ಮಿಕ ಕಾವ್ಯಾವನ್ನೂ ಒಂದು ಲೌಕಿಕ ಕಾವ್ಯವನ್ನೂ ಬರೆದು ಇತರ ಕವಿಗಳೂ ಆ ಮಾರ್ಗವನ್ನು ಅನುಸರಿಸುವಂತೆ ಸ್ಫೂರ್ತಿ ನೀಡಿದ್ದಾನೆ. ಹೀಗೆ ಮುಂದಿನ ಕವಿಗಳ ಮೇಲೆ, ವಿದ್ವಾಂಸ-ಸಹೃದಯರ ಮೇಲೆ, ಸಾಮಾನ್ಯ ಓದುಗರ ಮೇಲೆ ಅವನು ಸಾರ್ವಭೌಮತ್ವವನ್ನು ನಡೆಸಿರುವುದರ ರಹಸ್ಯ ಏನು? ಅವನ ಕಾವ್ಯದ ಯಾವ ಅಂಶಗಳು ನಮಗೆ ಸಾರ್ವತ್ರಿಕವಾಗಿ ಪ್ರಿಯವಾಗುತ್ತವೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತ ಹೋದರೆ ಸಾರಭೂತವಾದ ವಿಮರ್ಶಾ ಪ್ರಯೋಜನ ನಮಗೆ ದೊರಕುತ್ತದೆ.

ಕವಿಯ ಆಶಯದ ಮಹತ್ತು ಅವನು ಆರಿಸಿಕೊಳ್ಳುವ ಕಾವ್ಯವಸ್ತುವಿನ ಮಹತ್ತನ್ನು ಅವಲಂಬಿಸುತ್ತದೆ. ಮಹಾಕವಿಯಾದವನು ಮಹತ್ತಾದ ವಸ್ತುವೊಂದನ್ನು ಆರಿಸಿಕೊಂಡು ಅದನ್ನು ಕಾವ್ಯೋದ್ದೇಶಕ್ಕೆ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಮೊದಲನೆಯ ಪರೀಕ್ಷೆಯಲ್ಲೇ ಪಂಪ ಮಹತ್ತಾದ ಯಶಸ್ಸನ್ನು ಗಳಿಸಿದ್ದಾನೆ. ಅವನು ತನ್ನ ಎರಡೂ ಕಾವ್ಯಗಳಾದ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಗಳಿಗೆ ಆರಿಸಿಕೊಂಡಿರುವ ವಸ್ತುಗಳು ಜೈನ ಮತ್ತು ವೈದಿಕ ಸಾಹಿತ್ಯಗಳಲ್ಲಿ ಅತ್ಯಂತ ಮಹತ್ವದ ಕೃತಿಗಳಾಗಿವೆ. ವಿದ್ವಾಂಸರಾದ ಪ್ರೊ. ಸುಜನಾ ಅವರು ತಮ್ಮ ಅನನುಕರಿಣೀಯವಾದ ಶೈಲಿಯಲ್ಲಿ ಪಂಪನ ಈ ಆಯ್ಕೆಗೆ ಹೀಗೆ ಗೌರವ ಸಲ್ಲಿಸಿದ್ದಾರೆ:

“ತನ್ನ ಎರಡೂ ಕಾವ್ಯಗಳ ವಸ್ತುವನ್ನು ಆಯ್ಕೆ ಮಾಡಿಕೊಂಡ ರೀತಿಯಿಂದಲೇ ಪಂಪಕವಿ ಕನ್ನಡಕ್ಕೆ ಅತ್ಯ ಸಾಧಾರಣವಾದ ವೇದಿಕೆಯನ್ನು ನಿರ್ಮಿಸಿಕೊಟ್ಟ ಸಮುದ್ರ ಮಟ್ಟದ ನೆಲವನ್ನು ಹಠಾತ್ತನೆ ಎತ್ತರದ ಪ್ರಸ್ಥಭೂಮಿಯಾಗಿ ಏರಿಸಿದ ಪಶ್ಚಿಮ ಘಟ್ಟದಂತೆ ಪಂಪನ ಈ ಸಾಧನೆ….. ಪಂಪಕವಿ ಏನಾದರೂ ತನ್ನ ಕಾವ್ಯ ವಸ್ತುವನ್ನು ತನ್ನ ಸಮೀಪ ಕಾಲದ ಸಂಸ್ಕೃತ ಕವಿಗಳಿಂದ ಸ್ಫೂರ್ತಿಗೊಂಡು ಆಯ್ಕೆ ಮಾಡಿದ್ದರೆ ಕನ್ನಡದ ಪ್ರಾರಂಭವೇ ಅತಿ ಅಶ್ರೀಮಂತವಾಗುತ್ತಿತ್ತು. ಭಾಸ ಕಾಳಿದಾಸ ಕವಿಗಳಿಂದ ಪ್ರಣೀತವಾದ, ಹಲವು ಹೆಂಡಿರ ರಾಜ ಮತ್ತು ಒಬ್ಬಳನ್ನು ಪ್ರೀತಿಸಿ ಪಡುವ ಪಾಡಿನ ಕಥೆಯನ್ನಷ್ಟೇ ಮುಂದೆ ಬಂದ ಸಂಸ್ಕೃತ ಕವಿಗಳು ಕೆಲವರು ಚರ್ವಿತ ಚರ್ವಣವಾಗಿ ಬರೆದರು. ಮಾಘ ಭಾರವಿ ಭಟ್ಟನಾರಾಯಣರಂತಹವರು ಮಹಾಭಾರತವನ್ನು ತಮ್ಮ ಕೃತಿ ವಸ್ತುವನ್ನಾಗಿ ಆರಿಸಿಕೊಂಡರೂ ಅವರಿಗೆ ಆಂಶಿಕ ಚಿತ್ರನ್ನವಷ್ಟು ಕುಂಚಿಸಲೂ ಸಾಕುಸಾಕಾಯಿತು. ಉಳಿದಂತೆ ಪಾಂಡಿತ್ಯದ ಉಸುಬುಗಾಡಿನ ಅಲೆತದಲ್ಲೇ ಅವರಿಗೆ ಸಿದ್ಧಿಲಾಭದ ಭ್ರಮೆಯುಂಟಾಯಿತು….. ಪಂಪ ಕವಿ ನಮ್ಮ ಸುದೈವದಿಂದ ಈ ಯಾರಿಂದಲೂ ತನ್ನ ಕಾವ್ಯ ವಸ್ತುವಿಗೆ ಆದರ್ಶ ಕಾಣದೆ ತನ್ನ ಸಮೀಪ ಕಾಲದ ಕಾವ್ಯ ಮೌಲ್ಯಗಳಿಗೆ ಕೆಳಗಣ್ಣನ್ನಷ್ಟೆ ಬಿಟ್ಟು ದೂರದ ವ್ಯಾಸ ಹಿಮಾಲಯಕ್ಕೆ ತನ್ನ ಅಭಿರುಚಿಯ ಸೌಭಾಗ್ಯದಿಂದ ಲಭಿಸಿದ ದೂರದರ್ಶಿ ನೇತ್ರವನ್ನು ಊರುತ್ತಾನೆ. ಇದರಿಂದ ಏನಿಲ್ಲದಿದ್ದರೂ ಕನ್ನಡಕ್ಕೆ ಏರೆತ್ತರದ ಆರಂಭ ಸಿಕ್ಕಿತು.[1]

ಮೊದಲನೆಯದಾಗಿ “ವಿಕ್ರಮಾರ್ಜುನ ವಿಜಯ”ವನ್ನು ಪರಿಶೀಲಿಸೋಣ. ಅದಕ್ಕೆ ಆಕರ ಮಹರ್ಷಿ ವ್ಯಾಸರು ಸಂಸ್ಕೃತದಲ್ಲಿ ರಚಿಸಿರುವ ಮಹಾಭಾರತ. ಋಷಿಕವಿ ವ್ಯಾಸರು ರಚಿಸಿರುವ ಈ ಕೃತಿ ಅನನ್ಯವಾದ ಒಂದು ಮಹಾಕೃತಿ. ಮಾನವ ಚೇತನವು ಏರಬಹುದಾದ ಎತ್ತರಗಳನ್ನೂ, ಇಳಿಯಬಹುದಾದ ಆಳಗಳನ್ನೂ, ಒಳಗೊಳ್ಳಬಹುದಾದ ಸಮಸ್ತ ವ್ಯಾಪ್ತಿಯನ್ನೂ ವ್ಯಾಸರ ಋಷಿಪ್ರತಿಭೆಯು ತೀಕ್ಷ್ಣವಾಗಿ ವಿಶ್ಲೇಷಿಸಿ, ಅತ್ಯಂತ ರಸಮಯವಾಗಿ ಈ ಮಹಾಕಾವ್ಯದಲ್ಲಿ ನಿರೂಪಿಸಿದೆ. ಯಾವುದೇ ಒಂದು ಕಾಲಮಾನದ, ಒಂದು ನಿರ್ದಿಷ್ಟ ಜನಾಂಗದ ಒಂದೇ ಎರಕದ ಪಾತ್ರವರ್ಗದ ಪ್ರತಿಕ್ರಿಯೆಗಳನ್ನು ನಿರೂಪಿಸುವ ಕಾವ್ಯವಲ್ಲ ಅದು. ಮಾನವತೆ ಇರುವವರೆಗೂ ಕಾಣುತ್ತಲೇ ಹೋಗುವ ಸಾರ್ವಕಾಲಿಕವಾದ ಗುಣಸ್ವಭಾವಗಳನ್ನುಳ್ಳ ಪಾತ್ರ ಪ್ರಪಂಚ ಅದರಲ್ಲಿದೆ. ಅಲ್ಲದೆ ಎಷ್ಟೊಂದು ವೈವಿಧ್ಯಮಯವಾದ ಘಟನೆಗಳೂ, ಘರ್ಷಣೆಗಳೂ, ಅದರಲ್ಲಿ ಕಾಣಿಸಿಕೊಳ್ಳುತ್ತವೆ! ತಾವು ಸಾಕಿ ಸಲಹಿದ ಮೊಮ್ಮಕ್ಕಳ ಮೇಲೆ ಭೀಷ್ಮರು ಯುದ್ಧ ಮಾಡಬೇಕಾಗಿ ಬಂದ ಪ್ರಸಂಗ. ತಾವು ವಿದ್ಯೆ ಕಲಿಸಿದ ಶಿಷ್ಯರನ್ನು ಎದುರಿಸಿ ದ್ರೋಣರು ಹೋರಾಡಬೇಕಾಗಿ ಬಂದ ಪ್ರಸಂಗ. ತಾನೇ ಚಕ್ರವರ್ತಿಯಾಗಬೇಕಾದವನು, ತನ್ನ ಹುಟ್ಟಿನ ವಿಷಯ ತಿಳಿಯದೆ ತನ್ನ ದಾಯಾದಿಯ ಆಳಾಗಿದ್ದು ತನ್ನ ತಮ್ಮಂದಿರ ಮೇಲೆ ಕೈಮಾಡಬೇಕಾಗಿ ಬಂದ ಕರ್ಣನ ಅಂತರಂಗದ ಹೋರಾಟ. ಇಂಥವು ಒಂದೇ ಎರಡೇ? ಧರ್ಮ ಸಂಕಟ, ರಾಜನೀತಿ, ಲೋಕ ವ್ಯವಹಾರ ಇವುಗಳನ್ನು ಒಳಗೊಂಡ ಸಂಹಿತೆಗಳು. ಮಹಾಭಾರತವು ವಸ್ತುವಿನ ದೃಷ್ಟಿಯಿಂದಂತೂ ಜಗತ್ತಿನಲ್ಲೇ ಅತ್ಯಂತ ಜಟಿಲವಾದ ಮಹಾಕಾವ್ಯ.

ಹುಟ್ಟಿನಿಂದ ಜೈನನಾದರೂ ಪಂಪನು ಭಾರತದ ಕಥೆಯನ್ನು ಚಿಕ್ಕಂದಿನಿಂದಲೂ ಮನಸ್ಸಿನಲ್ಲಿಯೇ ಮೆಚ್ಚಿ ಆರಾಧಿಸುತ್ತಿದ್ದನೆಂದು ತೋರುತ್ತದೆ. ಅವನು ಭಾರತದ ಘಟನೆ, ಪಾತ್ರಗಳೊಂದಿಗೆ ತನ್ವಯತೆಯಿಂದ ಬೆರೆತು ವರ್ಣನೆಗೆ ತೊಡಗಿರುವುದೇ ಇದನ್ನು ಪುಷ್ಟೀಕರಿಸುತ್ತದೆ.

ಮಹಾಭಾರತದಂತಹ ಮಹಾಕೃತಿಯನ್ನು ರಚಿಸಿದ ಋಷಿ ಕವಿ ವಿಭೂತಿಯ ಬಗೆಗೆ, ಅವೈದಿಕನಾದರೂ ಪಂಪನಿಗೆ ಅಗಾಧವಾದ ಭಕ್ತಿಯಿದೆ. ಅವನು ಹೇಳುತ್ತಾನೆ:

“ವ್ಯಾಸಮುನೀಂದ್ರರ ವಿಸ್ತಾರವಾದ ವಚನದ ಅಮೃತದ ಸಮುದ್ರವನ್ನು ಈಜುತ್ತೇನೆ. ನಾನೇ ಕವಿವ್ಯಾಸ ಎಂಬ ಗರ್ವ ನನಗಿಲ್ಲ.” ಹಾಗೆ ಸಂಕಲ್ಪ ಮಾಡುವುದಕ್ಕೆ ಕಾರಣಗಳ ಪರಂಪರೆಯೇ ಇದೆ. ಮೊದಲನೆಯದಾಗಿ ಪಂಡಿತರ ಒತ್ತಾಯ. ಮಹಾಭಾರತವನ್ನು ಅದುವರೆಗೂ ಯಾರೂ ಸಮಗ್ರವಾಗಿ ಕನ್ನಡದಲ್ಲಿ ಅಪೂರ್ವವೆನ್ನುವಂತೆ ರಚಿಸಿರಲಿಲ್ಲ. ಅಂತಹ ಮಹಾಕಾವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಾಮರ್ಥ್ಯ ಯಾರಿಗಾದರೂ ಇರುವುದಾದರೆ ಪಂಪನೊಬ್ಬನಿಗೇ ಎಂಬುದು ಅರಿಕೇಸರಿಯ ಆಸ್ಥಾನದ ಪಂಡಿತ ಮಂಡಳಿಯ ನಿಶ್ಚಯವಾದ ಅಭಿಪ್ರಾಯ. ಅಲ್ಲದೆ ಅವರು ಇವನಿಗೆ ಮಾತ್ರ ಹೇಳಿ ಸುಮ್ಮನಾಗಲಿಲ್ಲ. ಇವನ ಪ್ರಭುವೂ ಆಶ್ಯದಾತನೂ ಆದ ಚಾಳುಕ್ಯ ಅರಿಕೇಸರಿಗೆ ಹೀಗೆ ಹೇಳಿದರು: “ಯಾವ ರಾಜರೂ ಪ್ರೀತಿಯಿಂದ ಸಮಸ್ತ ಭಾರತವನ್ನು ಹೇಳಿಸಿಲ್ಲ, ಯಾವ ಕವೀಂದ್ರರೂ ಪೂರ್ಣವಾಗಿ ಹೇಳಿಲ್ಲ. ಹೇಳಿಸುವುದಾದರೆ ನೀನೇ ಹೇಳಿಸುತ್ತೀಯೆ; ಉದಾತ್ತವಾದ ಕೀರ್ತಿ ನಿಲ್ಲುವಂತೆ ಹೇಳುವುದಾದರೆ ಪಂಪನೇ ಹೇಳುತ್ತಾನೆ. ಹೀಗೆ ಹೇಳಿಸಿದ ನರೇಂದ್ರರಾಗಲಿ, ಪೂರ್ಣವಾಗಿ ಹೇಳಿದ ಕವೀಂದ್ರರಾಗಲಿ ಈ ಭೂಮಿಯಲ್ಲಿ ಯಾರಿದ್ದಾರೆ?”

ಮಹಾಭಾರತದ ಕಥೆಯನ್ನು ಆರಿಸಿಕೊಳ್ಳಲು ಪಂಪನಿಗೆ ಇನ್ನೂ ಒಂದು ಕಾರಣವಿತ್ತು. ತನ್ನನ್ನು ತುಂಬ ಪ್ರೀತಿಯಿಂದ, ಗೌರವದಿಂದ ನೋಡಿಕೊಂಡ ಪ್ರಭುವಾದ ಅರಿಕೇಸರಿಯ ಕೀರ್ತಿಯನ್ನು ಅಜರಾಮರಗೊಳಿಸಬೇಕು ಎಂಬ ಉತ್ಕಟ ಬಯಕೆಯೇ ಆ ಕಾರಣ. ಭರತಖಂಡದಲ್ಲಿ ಜನರಿಗೆ ಅತ್ಯಂತ ಪೂಜ್ಯವಾಗಿರುವ ಈ ಭಾರತವನ್ನು ಆರಿಸಿಕೊಂಡು ಅದರಲ್ಲಿ ಧೀರನಾದ ನಾಯಕನೊಬ್ಬನೊಂದಿಗೆ ತನ್ನ ಪ್ರಭುವನ್ನು ಸಮೀಕರಿಸಿ ಕಾವ್ಯವನ್ನು ರಚಿಸಿದರೆ ತನ್ನ ರಾಜನ ಕೀರ್ತಿ ಶಾಶ್ವತವಾಗಿ ಉಳಿಯುತ್ತದೆ ಎಂಬುದು ಪಂಪನ ನಂಬಿಕೆ. ಒಂದು ಸಾವಿರ ವರ್ಷಗಳ ಈಚೆಯ ತುದಿಯಲ್ಲಿ ನಿಂತು ನೋಡಿದರೆ ಪಂಪನ ನಂಬಿಕೆ ಸುಳ್ಳಾಗಲಿಲ್ಲ ಎಂಬುದು ಗೊತ್ತಾಗುತ್ತದೆ.

ಮಹಾಭಾರತವನ್ನು ಆರಿಸಿಕೊಂಡಿದ್ದು, ಕಾವ್ಯವಸ್ತುವನ್ನಾಗಿ ಪಳಗಿಸಿಕೊಂಡಿದ್ದು ಪಂಪನ ಧೈರ್ಯ ಸಾಹಸಗಳನ್ನು ಒರೆಗೆಹಚ್ಚಲು ಅವಕಾಶವನ್ನು ನೀಡಿದವು. ಏಕೆಂದರೆ ಮೂಲ ವ್ಯಾಸ ಭಾರತದಲ್ಲಿ ಸುಮಾರು ಒಂದು ಲಕ್ಷ ಶ್ಲೋಕಗಳಿವೆ. ಜಗತ್ತಿನ ಯಾವ ಮಹಾಕಾವ್ಯವೂ ಇಷ್ಟೂ ವ್ಯಾಪ್ತಿಯನ್ನುಳ್ಳದ್ದಲ್ಲ. ಅಲ್ಲದೆ ಭಾರತದಲ್ಲಿ ಭರತವಂಶದವರು, ಅದರಲ್ಲೂ ಮುಖ್ಯವಾಗಿ ಕೌರವ, ಪಾಂಡವರ ಕಥೆ ಮಾತ್ರ ಇಲ್ಲ. ನೀತಿ, ಧರ್ಮ, ದರ್ಶನ, ಅನೇಕಾನೇಕ ಆಖ್ಯಾನ-ಉಪಾಖ್ಯಾನಗಳು ಭಾರತದ ತುಂಬ ಹರಡಿವೆ. ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ತನ್ನ ಅಗತ್ಯಕ್ಕೆ ತಕ್ಕಷ್ಟನ್ನು ಕಲಾತ್ಮಕವಾಗಿ ಆಯ್ಕೆಮಾಡಿಕೊಳ್ಳುವ ಮಹತ್ತರವಾದ ಶ್ರಮವೂ ಪಂಪನ ಪಾಲಿಗೆ ಬಂದಿತ್ತು. ಆಯ್ಕೆ, ಅಳವಡಿಕೆ, ಮಾರ್ಪಾಡು, ಸ್ಥಳಾಂತರ ಈ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡು ಮೂಲದ ಸುಮಾರು ಒಂದು ಲಕ್ಷ ಶ್ಲೋಕಗಳನ್ನು ೧೧೬೫ ಪದ್ಯಗಳಿಗೆ, ಕೆಲವು ಗದ್ಯ ಭಾಗಗಳಿಗೆ ಪಂಪ ಭಟ್ಟಿಯಿಳಿಸಿದ. ಹೀಗೆ ಮಾಡುವಾಗ ಎರಡು ಅಂಶಗಳು ಅವನ ನೆರವಿಗೆ ಬಂದವು. ಒಂದನೆಯದು ಜನ್ಮತಃ ಜೈನನಾದ ತಾನು ಭಾರತವನ್ನು ವೈದಿಕರಂತೆ ಕೇವಲ ಪೂಜ್ಯ ಭಾವನೆಯಿಂದಲೇ ನೋಡಬೇಕಾಗಿಲ್ಲ ಎಂಬುದು. ಈ ಅಂಶವು ಪಂಪನಿಗೆ ಅನೇಕ ರೀತಿಯಲ್ಲಿ ಸ್ವಾತಂತ್ರ್ಯವನ್ನು ನೀಡಿತು. ಎರಡನೆಯದು ತನಗಿಂತ ಹಿಂದೆ, ವೈದಿಕರೇ ಆದ ಭಾಸ, ಭಾರವಿ, ಮಾಘ, ಭಟ್ಟನಾರಾಯಣ ಮೊದಲಾದ ಕವಿಗಳು ಕಥಾ ನಿರೂಪಣೆಯ ವಿಷಯದಲ್ಲಿ ಸ್ವಾತಂತ್ರ್ಯವನ್ನು ವಹಿಸಿ ಬದಲಾವಣೆಗಳನ್ನು ಮಾಡಿಕೊಂಡಿದ್ದರಿಂದ ತಾನೂ ತನ್ನ ಉದ್ದೇಶಗಳಿಗೆ ಅನುಗುಣವಾಗಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡರೆ ಅದು ಕ್ಷಮ್ಯವಾಗುತ್ತದೆ ಎಂಬ ಭರವಸೆ.

ಈ ಹಿನ್ನೆಲೆಯಲ್ಲಿ ಅರ್ಜುನನೇ ಕಥಾನಾಯಕ ಎಂದು ಸಾರಿದ್ದು, ತನ್ನ ರಾಜನನ್ನು ಅವನೊಡನೆ ಸಮೀಕರಿಸಿದ್ದು ಪಂಪನಿಗೆ ಉಚಿತವಾಗಿ ಕಂಡಿತು. ಚಾಳುಕ್ಯರ ಅರಿಕೇಸರಿ ರಾಷ್ಟ್ರಕೂಟರ ಸಾಮಂತರಾಜ, ನಿಜ. ಆದರೆ ಅವನ ಪರಾಕ್ರಮ ಪಂಪನಿಗೆ ಹೆಜ್ಜೆ ಹೆಜ್ಜೆಗೆ ತಾನು ಆರಿಸಿಕೊಂಡ ಕಾವ್ಯದ ನಾಯಕನಾದ ಅರ್ಜುನನ್ನು ನೆನಪಿಗೆ ತರುತ್ತಿದ್ದುದು ಸಹಜವಾಗಿಯೇ ಇತ್ತು. ಅಲ್ಲದೆ ಅರಿಕೇಸರಿಯ ಜೀವನದ ಕೆಲವು ಘಟನೆಗಳಿಗೂ ಅರ್ಜುನನ ಪಾತ್ರದ ಕೆಲವು ಘಟನೆಗಳಿಗೂ ಹೋಲಿಕೆಯಿರುವುದೂ ಪಂಪನ ಗಮನಕ್ಕೆ ಬಂದು ಅವನು ಹೋಲಿಕೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದು ಸಾಧ್ಯವಾಯಿತು.

ವಸ್ತುನಿರ್ವಹಣೆಯ ದೃಷ್ಟಿಯಿಂದ ಪಂಪನು ಯಶಸ್ಸನ್ನು ಸಾಧಿಸಿದ್ದಾನೆ ಎಂದು ಒಟ್ಟಾರೆ ಹೇಳಬಹುದಾದರೂ ಕೆಲವು ತೀವ್ರ ಸ್ವರೂಪದ ಇತಿಮಿತಿಗಳಿಗೂ ಕವಿ ಒಳಗಾಗಿದ್ದಾನೆ. ಮೊದಲನೆಯದಾಗಿ ಪ್ರತಿಯೊಬ್ಬ ಕವಿಯೂ, ಅದರಲ್ಲಿಯೂ ಮಹಾಕವಿಯೂ ಅತ್ಯಗತ್ಯವಾಗಿ ಪಾಲಿಸಲೇ ಬೇಕಾದ “ಪ್ರಮಾಣೌಚಿತ್ಯ”ವನ್ನು ಅರ್ಜುನ-ಅರಿಕೇಸರಿ ಸಮೀಕರಣದಿಂದಾಗಿ ಪಂಪನು ಕಾಯ್ದುಕೊಳ್ಳುವುದರಲ್ಲಿ ವಿಫಲನಾಗಿದ್ದಾನೆ. ಅರ್ಜುನನ ಜನನದ ಸಂದರ್ಭದಲ್ಲಿ, ಅವನಿಗೆ ಯೌವನ ಪ್ರಾಪ್ತಿಯಾದಾದ ಅವನ ವೇಶ್ಯಾವಾಟೀ ಸಂಚಾರದಲ್ಲಿ ಪಂಪ ಅಳತೆಮೀರಿದ ವರ್ಣನೆಗೆ ಅನೇಕ ಪದ್ಯಗಳನ್ನು ವಿನಿಯೋಗಿಸಿದ್ದಾನೆ. ಅರ್ಜುನನ ಜನನದ ಸಂದರ್ಭದಲ್ಲಿ ದೇವ, ಬ್ರಹ್ಮ ಸಭೆಗಳು ಅವನಿಗೆ ಅಷ್ಟೋತ್ತರ ಶತನಾಮಾಗಳನ್ನಿಡುವುದೂ, ಅರ್ಜುನನಿಗೆ ಯೌವನ ಬಂತು ಎಂದು ಹೇಳುವಾಗ ಅರಿಕೇಸರಿಯ ಅನೇಕ ಬಿರುದುಗಳನ್ನು ಎತ್ತಿಕೊಂಡು ಅವುಗಳಿಗೆಲ್ಲ ಸಮಂಜಸತೆಯನ್ನು ಕಂಡುಹಿಡಿಯಲು ಕವಿಯು ಮಾಡುವ ಪ್ರಯತ್ನವೂ ಆಭಾಸದ್ದಾಗಿ ಕಾಣುತ್ತವೆ. ಕೃಷ್ಣನು ದುರ್ಯೋಧನನ ಸಭೆಗೆ ಬಂದಾಗ, ತನ್ನ ದೌತ್ಯದ ಮುಖ್ಯ ಉದ್ದೇಶವನ್ನು ಬದಿಗಿಟ್ಟು ಅರ್ಜುನನ ಪರಾಕ್ರಮವನ್ನು ವರ್ಣಿಸುವುದು; ಅವನನ್ನು ‘ಚಾಳುಕ್ಯ ಕುಳ ತಿಳಕನಪ್ಪ ವಿಜಯಾದಿತಯಂಗೆ ಗೋವಿಂದರಾಜಂ ಮುಳಿಯೆ ತಳರದೆ ಪೆಱಗಿಕ್ಕಿಕಾದ ಶರಣಾಗತ ಜಳನಿಧಿಯ ಪೆಂಪುಮಂ, ಗೊಜ್ಜಿಗನೆಂಬ ಸಕಲ ಚಕ್ರವರ್ತಿ ಬೆಸಸೆ ದಂಡುವಂದ ಮಹಾಸಾಮಂತರಂ ಮರಲಿಱುದು ಗೆಲ್ದ ಸಾಮಂತ ಚೂಡಾಮಣಿಯ ಬೀರಮುಮಂ’ ಎನ್ನುವಾಗ ಪುರಾಣ-ಚರಿತ್ರೆಗಳು, ಕಾಲದೇಶಗಳು ಕಲಸುಮೇಲೋಗರವಾಗಿ ಓದುಗರನ್ನು ಗೊಂದಲದಲ್ಲಿ ಮುಳುಗಿಸುತ್ತದೆ. ಅಸಹ್ಯ ಉಂಟಾಗುವ ಪ್ರಸಂಗವನ್ನು ಕೂಡ ಅವನು ಸೃಷ್ಟಿಸಿದ್ದಾನೆ. ಯುದ್ಧದಲ್ಲಿ ಧರ್ಮರಾಯನು ಸೋತು, ಪೆಟ್ಟು ತಿಂದು ಒರಗಿದ್ದಾನೆ. ಅವನನ್ನು ನೋಡಲು ಕೃಷ್ಣಾರ್ಜುನರು ಬರುತ್ತಾರೆ. ಧರ್ಮರಾಯನು ಅರ್ಜುನನ್ನು ಕುರಿತು “ಇನ್ನು ನಾನು ರಾಜ್ಯವಾಳುವ ಆಸೆ ಬಿಟ್ಟೆ ನೀವು ಶತ್ರುಗಳನ್ನು ಕೊಂದು ನನ್ನನ್ನು ರಾಜನನ್ನಾಗಿ ಮಾಡುವುದು ಅಷ್ಟರಲ್ಲೇ ಇದೆ. ನೀವು ಶತ್ರುಗಳ ಪಕ್ಷವನ್ನು ಸೇರಿಸಿಕೊಳ್ಳಿ ನಾನು ತಪೋವನಕ್ಕೆ ಹೋಗುತ್ತೇನೆ” ಎನ್ನುತ್ತಾನೆ. ಆಗ ಪಾಂಡು ಮತ್ತು ಕುಂತಿಯರ ಪುತ್ರನೆಂದು ಹೋಗಲಿ, ಇಂದ್ರಪುತ್ರನೆಂದು, ಪ್ರಸಿದ್ಧನಾಗಿದ್ದ ಅರ್ಜುನನನ್ನು “ನರಸಿಂಗಂಗಂ ಜಾಕಬ್ಬಸಿಗಮಳವೊದವೆ ಪುಟ್ಟಿ ಪುಟ್ಟಿಯುಂ ಅರಿಕೇಸರಿಯೆನೆ ನೆಗೆೞ್ದುಂ ಅರಾತಿಯ ಸರಿದೊರೆಗಂ ಬಂದೆನಪ್ಪೊಡಾಗಳ್ ನಗಿರೇ?” ಎನ್ನುವುದು ಅಂತಹ ಗಂಭೀರ ಪರಿಸ್ಥಿತಿಯಲ್ಲೂ ಓದುಗರಿಗೆ ನಗೆ ಬರಿಸುತ್ತದೆ.

ಇಷ್ಟು ಮಾತ್ರವಲ್ಲದೆ ಅರ್ಜುನನ ನಾಯಕತ್ವದಿಂದ ಒದಗಿದ ಆಭಾಸಗಳ ಪಟ್ಟಿಯನ್ನು ಬೆಳೆಯಿಸುವುದು ಸಾಧ್ಯ. ಪರಂಪರೆಯಿಂದ ಪಂಚವಲ್ಲಭೆಯಾದ ಪಂಚಾಲಿ ಇಲ್ಲಿ ಅರ್ಜುನನೊಬ್ಬನ ಪತ್ನಿ. ಆದರೆ ಅವನಿಗೆ ಅವಮಾನವಾದಾಗ ಪ್ರತಿಜ್ಞೆ ಮಾಡುವವನು ಈ ಕಾವ್ಯದಲ್ಲಿ ಅವಳ ಗಂಡನಲ್ಲದ ಭೀಮ. ವಿರಾಟನ ಅರಮನೆಯಲ್ಲಿ ಅವಳಿಗೆ ವಿಪತ್ತು ಪ್ರಾಪ್ತವಾದಾಗ ಅವಳು ಓಡುವುದು ತನ್ನ ಗಂಡನಾದ ಅರ್ಜುನನ ಬಳಿಗಲ್ಲ, ಅವನ ಅಣ್ಣನಾದ ಭೀಮನ ಬಳಿಗೆ. ಯುದ್ಧದ ಕೊನೆಯಲ್ಲಿ ಪಟ್ಟಾಭಿಷೇಕದ ಸಮಯದಲ್ಲಂತು, ಪಂಪನ ಅಚ್ಚುಮೆಚ್ಚಿನ ಅಭಿಮಾನಿಗಳಿಗೂ ಬೇಸರ ತರುವಂತಿದೆ ಪಂಪನ ನಿರ್ವಹಣೆ. ಪಡಬಾರದ ಕಷ್ಟಗಳನ್ನು ಪಟ್ಟು ಅನುಭವಿಸುವ ಶಕ್ಯವಲ್ಲದ ಅವಮಾನಗಳನ್ನು ಅನುಭವಿಸಿದ ನವೆದ ದ್ರೌಪದಿಗೆ ರಾಣಿಯಾಗುವ ಭಾಗ್ಯವಿಲ್ಲ. ಆ ಸೌಭಾಗ್ಯ ದೊರೆತದ್ದು ಅರಮನೆಯಲ್ಲಿ ಸುಖವಾಗಿ ಕಾಲ ಕಳೆದ ಸುಭದ್ರೆಗೆ.

ಇಷ್ಟು ದೋಷಗಳನ್ನು ಎತ್ತಿ ತೋರಿಸಿಯೂ ಪಂಪನು ಮಹಾಭಾರತವನ್ನು ಒಟ್ಟಿನಲ್ಲಿ ನಮ್ಮ ಮೆಚ್ಚುಗೆಗೆ ಪಾತ್ರವಾಗುವ ರೀತಿಯಲ್ಲಿಯೇ ಕನ್ನಡಕ್ಕೆ ತಂದಿದ್ದಾನೆ ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅವನದು ಮೂಲದಿಂದ ಮಾಡಿದ ಸಂಗ್ರಹಾನುವಾದವಲ್ಲ, ಅದೊಂದು ಪುನಃ ಸೃಷ್ಟಿ ವಿದ್ವಾಂಸ ವಿಮರ್ಶಕರಾದ ಡಾ. ನಂ. ಸುಬ್ರಹ್ಮಣ್ಯಂ ಅವರು ಈ ಅಂಶವನ್ನು ಸೊಗಸಾಗಿ ವಿವರಿಸಿದ್ದಾರೆಳ

“ಮೂಲ ಭಾರತದಿಂದ ವಸ್ತುವನ್ನಾಯ್ದುಕೊಳ್ಳುವಾಗ ಪಂಪ ತನಗೆ ಒಲ್ಲದ ವಿಷಯವನ್ನು ಬಿಟ್ಟು ಬೇಕೆನಿಸಿದ ವಿಷಯಗಳನ್ನು ಮಾತ್ರ ಹಿಗ್ಗಿಸಿಯೋ ಕುಗ್ಗಿಸಿಯೋ ಸಂಗ್ರಹಿಸಿದ್ದಾನೆಂದಷ್ಟೇ ಹೇಳಿದರೆ ತಪ್ಪಾಗುತ್ತದೆ. ಪಂಪ ಮಾಡಿರುವುದು ಕೇವಲ ಮೂಲಕ ಅನುವಾದವಲ್ಲ, ಪುನಃಸೃಷ್ಟಿ ಅವನಾಯ್ದು ಹೇಳುವ ಏನೆ ಸಂಗತಿಯಾದರೂ ಅವನ ಪ್ರತಿಭಾ ಪ್ರಭಾವಕ್ಕೆ ಸಿಕ್ಕಿ, ಅಯಸ್ಕಾಂತ ಸ್ಪರ್ಶವಾದ ಒಂದು ಕಬ್ಬಿಣದ ತುಣುಕು. ಅಯಸ್ಕಾಂತದ್ಯೋತರವಾಗುವಂತೆ ರಸೋಜ್ಜ್ವಲವಾಗಿ ಹೊಮ್ಮುತ್ತದೆ. ಅವನು ಮುಟ್ಟಿದೆಡೆಯಲ್ಲಿ ಕಾವ್ಯಗುಣ ಚಿಮ್ಮುತ್ತದೆ. ಮೂಲ ಭಾರತವನ್ನು ನೋಡುತ್ತ ಹೋಗುವಾಗ ಇಲ್ಲೇನೊ ಕೊರತೆಯಿದೆ ಎನ್ನುವಂತಹ ಎಡೆಯಲ್ಲಿ ಕವಿ ತನ್ನ ಪ್ರತಿಭಾ ಕುಂಚದಿಂದ ಅಲ್ಲೊಂದು ಇಲ್ಲೊಂದು ರಸೋದ್ದೀಪನ ಕಾರಿಯಾದ ಎಳೆಯನ್ನು ಎಳೆದು ಸನ್ನಿವೇಶವನ್ನು ಸೊಗಸುಗೊಳಿಸುತ್ತಾನೆ. ಮೂಲಭಾರತದಲ್ಲಿ ಗುಪ್ತಗಾಮಿನಿಯಾದ ಹರಿವ ರಸದ ಒರತೆಗಳನ್ನು ರಸದ ಕಾರಂಜಿಗಳಾಗಿ ಹೊರಚಿಮ್ಮಿಸುತ್ತಾನೆ.”[2]

2

ಆದಿಕವಿಯಾದ ಪಂಪನು ತನ್ನ ಹಾಗೆ ನೋಡಿದರೆ ಕನ್ನಡದ ಆದಿ ಕಾವ್ಯವಾದ “ಆದಿಪುರಾಣಂ” ಮಹಾಕಾವ್ಯಕ್ಕೂ ಮಹತ್ತಾದ ವಸ್ತುವನ್ನೇ ಆರಿಸಿಕೊಂಡಿದ್ದಾನೆ. ಭಾರತವನ್ನು ಬರೆಯುವುದರ ಉದ್ದೇಶ ಅಲೌಕಿಕ ಸಾಧನೆ. ಮುಕ್ತಿ ಸಂಪಾದನೆ ಜಿನಾಗಮನವನ್ನು ಬೆಳಗಲು ಪಂಪನು ಬಳಸಿಕೊಂಡಿರುವ ಈ ಕಾವ್ಯ ಸಾಧನೆ ಅವನಿಗೆ “ಮುಕ್ತಿ ಸಂಭವಿಸುವ ಲಾಭ”ವೂ ಆಗಬೇಕಾಗಿದೆ. ಕಥೆಯ ಮಹತ್ತನ್ನು ಪಾವಿತ್ರವನ್ನು ಅವನು ಮೊದಲಿಗೇ ಹೇಳಿದ್ದಾನೆ. “ಇಂದ್ರ ನಮಿತಂ ದೇವಂ ಕಥಾ ನಾಯಕಂ ಪುರುದೇವೇ” ಅವನು ಪ್ರಥಮ ತೀರ್ಥಂಕ ಜೈನ ಪುರಾಣ ಪರಂಪರೆಯಲ್ಲಿ ತೀರ್ಥಂಕರನ ಅಂದಿನ ಭವದ ಜೊತೆಗೆ, ಅದಕ್ಕೆ ಹಿನ್ನೆಲೆಯಾಗಿ ಅವನ ಹಿಂದಿನ ಭಾವಾವಳಿಯ ಚಿತ್ರಣ ದೊರಕುತ್ತದೆ. ಈ ಎಲ್ಲ ಭವಗಳಲ್ಲೂ ಸಂಭವಿಸುವ ಅನೇಕ ಸ್ವಾರಸ್ಯಕರ ಪ್ರಸಂಗಗಳು ಪುರಾಣಕ್ಕೆ ಕಾವ್ಯತ್ವವನ್ನು ನೀಡುವ ಸಾಧ್ಯತೆಗಳಿವೆ. ಪಂಪನ ಕವಿ ಹೃದಯ ಅದನ್ನು ಅರಿತುಕೊಮಡಿದೆ. ಪಂಪನ ಮುಮುಕ್ಷು ವ್ಯಕ್ತಿತ್ವ ಮೋಕ್ಷ ಸಾಧನೆಗಾಗಿ ಆದಿತೀರ್ಥಂಕರರ ಭವಾವಳಿಗಳನ್ನೂ ಕೊನೆಯ ಭವವನ್ನೂ ತನ್ನ ನಿರೂಪಣೆಗೆ ಆಯ್ದುಕೊಂಡಿದ್ದರೆ ಅವನ ಕವಿವ್ಯಕ್ತಿತ್ವ ಅಲ್ಲಿನ ರಸಸ್ಥಾನಗಳ ವರ್ಣನೆಗಾಗಿ ಹಾತೊರೆದಿದೆ. ಹೀಗೆ ಏಕ ಕಾಲದಲ್ಲಿ ಅಲೌಕಿಕ ಪ್ರಯೋಜನವನ್ನು ತಾನೂ ಪಡೆದು ಸಹೃದಯರಿಗೂ ನೀಡುವ ಉದ್ದೇಶಕ್ಕೆ ಪ್ರಶಂಸನೀಯವಾದ ರೀತಿಯಲ್ಲಿ ಪಂಪನು ಸಫಲತೆಯನ್ನು ದೊರಕಿಸಿಕೊಂಡಿದ್ದಾನೆ.

ಪಂಪನ ಈ ಆದಿಪುರಾಣಕ್ಕೆ ಆಕರ ನೃಪತುಂಗನ ಗುರುಗಳಾದ ಜಿನಸೇನಾಚಾರ್ಯರು ರಚಿಸಿದ ಪೂರ್ವಪುರಾಣ. ಅವನ ಕೃತಿಯಲ್ಲಿ ೪೭ ಪರ್ವಗಳುಂಟು. ಕಥೆಯ ಉಳಿದ ಭಾಗವಾಗ ಉತ್ತರ ಪುರಾಣದಲ್ಲಿ ೫ ಪರ್ವಗಳುಂಟು. ಅದನ್ನು ಬರೆದು ಮುಗಿಸಿದವರು ಗುಣಭದ್ರಾಚಾರ್ಯರು. ಪೂರ್ವ ಮತ್ತು ಉತ್ತರ ಪುರಾಣಗಳೆರಡನ್ನು ಒಟ್ಟಿಗೆ “ಮಹಾಪುರಾಣ” ಎಂದು ಕರೆಯುತ್ತಾರೆ. ರಾಮಾಯಣ ಮಹಾಭಾರತಗಳು ವೈದಿಕ ಧರ್ಮದ ಅನುಯಾಯಿಗಳಿಗೆ ಹೇಗೆ ಪಾರಾಯಣ ಗ್ರಂಥಗಳೋ ಹಾಗೆಯೇ ಮಹಾಪುರಾಣವು ಜೈನರಿಗೆ ಪೂಜ್ಯವೂ ನಿತ್ಯ ಪಾರಾಯಣ ಯೋಗ್ಯವೂ ಆದ ಗ್ರಂಥ. ಇಂಥ ಗ್ರಂಥವನ್ನೇ ಪಂಪನು ತನ್ನ ಕಾವ್ಯಕ್ಕೆ ಆಕರವಾಗಿ ಆಯ್ದುಕೊಂಡದ್ದು.

ಮಹಾಪುರಾಣ ಕೇವಲ ಕಾವ್ಯವಲ್ಲ. ಅಲ್ಲಿ ಪ್ರಧಾನವಾಗಿರುವುದು ಧರ್ಮ, ಜೈನಧರ್ಮ ಕೇವಲ ಕಾವ್ಯವನ್ನು ಹೇಳಬೇಕು ಎಂಬ ಉದ್ದೇಶವೂ ಜಿನಸೇನಾಚಾರ್ಯರಿಗೆ ಇಲ್ಲ. ಪ್ರತಿಪಾದಿತವಾಗಬೇಕಾದದ್ದು ಧರ್ಮ, ಅದು ಕಾವ್ಯಮಯವಾಗಿದ್ದರೆ ಚೆನ್ನ ಎಂಬುದು ಅವರ ಅಭಿಪ್ರಾಯ. ಹಾಗೆ ನೋಡಿದರೆ ಪೂರ್ವಪುರಾಣದಲ್ಲಿ ಇಲ್ಲದ್ದೇ ಏನೂ ಇಲ್ಲ-ಪುರಾಣ, ಧರ್ಮ, ನೀತಿ, ಆಚಾರ ಸಂಹಿತೆ- ಈ ಎಲ್ಲವೂ ಅಲ್ಲಿವೆ. ಆದರೂ ಪ್ರಧಾನವಾದದ್ದು ಧರ್ಮ. ಜಿನಸೇನಾಚಾರ್ಯರು ಈ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ: “ಯಾರ ವಚನವು ಧರ್ಮ ಕಥೆಗೆ ಅಂಗವಾಗಿದೆಯೋ ಅವರೇ ಲೋಕದಲ್ಲಿ ಕವಿಗಳು, ಅವರೇ ವಿದ್ವಾಂಸರು. ಯಾವ ಕವಿತೆಯು ಧರ್ಮ ಸಂಬಂಧಿಯಾಗಿದೆಯೋ ಅದೇ ಪ್ರಶಂಸನೀಯವಾದುದು. ಬರಿ ಕವಿತೆಯು ಚೆನ್ನಾಗಿ ರಚಿಸಲ್ಪಟ್ಟಿದ್ದರೂ ಪಾಪಸ್ರವಕ್ಕೆ ಕಾರಣವು”[3]

ಮಹಾಪುರಾಣದಲ್ಲಿರುವ ಪ್ರಧಾನ ಕಥಾವಸ್ತು ಆದಿತೀರ್ಥಂಕರನ ಭವಾವಳಿ. ಅದರ ಅನಿವಾರ್ಯ ಅಂಗವಾಗಿ ತೀರ್ಥಂಕರ ಪಂಚಕಲ್ಯಾಣಗಳು ಮತ್ತು ಭರತ-ಬಾಹುಬಲಿಯ ಪ್ರಸಂಗ. ಮಹಾಕಾವ್ಯದ ಲಕ್ಷಣಗಳನ್ನು ಅಲ್ಲಿ ತರಲು ಜಿನಸೇನಾಚಾರ್ಯರು ಪ್ರಯತ್ನಿಸಿದ್ದಾರೆ. ಆದರೂ ಅವರಿಗೆ ಇದು “ಧರ್ಮಾನು ಬಂಧಿನಿಯಾದ ಕತೆ”. ಪಂಪನಿಗಾದರೋ ಇದು ಪ್ರಧಾನವಾಗಿ ಕಾವ್ಯವಾಗಿರಬೇಕು ಎಂಬ ಆಸೆ. ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಕಾವ್ಯದಲ್ಲಿ ಧರ್ಮಕ್ಕಿರಬೇಕಾದ ಸ್ಥಾನ ಎಂಥದ್ದು, ಕಾವ್ಯ ಮತ್ತು ಧರ್ಮಗಳ ಸ್ಥಾನ ಎಂಥದಾಗಿರಬೇಕು ಎಂಬುದನ್ನು ತುಂಬ ಸೊಗಸಾಗಿ ಹೇಳಿದ್ದಾರೆ. “ಕಾವ್ಯದಲ್ಲಿ ಧರ್ಮವು ಕರಗಿ ಅನುಭವ ರಚನೆಗೆ ಮಾತ್ರ ಅದರ ಇರುವು ವೇದ್ಯವಾಗುವಂತಿರಬೇಕು. ಧರ್ಮವು ತನ್ನ ಪೃಥಕ್ ಭಾವವನ್ನು ಮರೆತು ಕಾವ್ಯದಲ್ಲಿ ಕಂಡೂ ಕಾಣದಂತೆ ಗೌಣವಾಗಿರಬೇಕು. ಕಾವ್ಯದಲ್ಲಿ ಧರ್ಮಕ್ಕಿರುವ ಸ್ಥಾನ ಇದು” ಪಂಪನು ಇದನ್ನು ಸಾಧಿಸುವುದರಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾನೆ.

ಮಹಾಭಾರತದ ಕಥೆಯನ್ನು ನಿರ್ವಹಿಸುವುದರಲ್ಲಿ ಪಂಪನಿಗೆ ಒಂದು ಬಗೆಯ ಎಡರು ತೊಡರುಗಳಿದ್ದರೆ ಪೂರ್ವ ಪುರಾಣವನ್ನು ಆಧರಿಸಿ ಆದಿಪುರಾಣವನ್ನು ರಚಿಸುವುದರಲ್ಲಿ ಅವನಿಗೆ ಬೇರೆ ಬಗೆಯ ಅಡ್ಡಿ ಆತಂಕಗಳು ಎದುರಾಗಿವೆ. ಜಿನಸೇನಾಚಾರ್ಯರು ಮುನಿಗಳು, ಪಂಪ ರಸಿಕ ಕವಿ. ಅವನು ಹೇಳುತ್ತಿರುವುದು ಪುರಾಣ, ಪಂಪನು ರಚಿಸಹೊರಡಿರುವುದು ಕಾವ್ಯ. ಜೈನನಾಗಿ ಅವನು ಮಹಾಭಾರತದ ಕಥೆಯನ್ನು ತನಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಬಹುದು, ಆದರೆ ಅದೇ ಜೈನತ್ವ ಅವನು ಮಹಾ ಪುರಾಣದ ಕಥೆಯನ್ನು ಯಾವುದೇ ರೀತಿಯಲ್ಲಿ ಮಾರ್ಪಡಿಸುವುದಕ್ಕೂ ಅವಕಾಶ ನೀಡುತ್ತಿಲ್ಲ. ಅಲ್ಲದೆ ಭವಾವಳಿಗಳ ಎಲ್ಲ ಅಂಶಗಳನ್ನೂ ಪಂಚಕಲ್ಯಾಣಗಳ ಸ್ವರೂಪವನ್ನು ಮೂಲದಲ್ಲಿರುವಂತೆಯೂ, ಅವು ಅಲ್ಲಲ್ಲಿ ನೀರಸವಾಗಿದ್ದರೂ ವರ್ಣಿಸಿಯೇ ತೀರಬೇಕು. ಭವಾವಳಿಗಳು ನಿಜವಾಗಿಯೂ ತೀರ ತೊಡಕಾದವು. ಶ್ರೀ ಜಿ.ಪಿ. ರಾಜರತ್ನಂ ಅವರು ಹೇಳಿದ್ದಾರೆ: “ಈ ಭವಾವಳಿ ಈ ಜನ್ಮಾಂತರ ಕತೆಗಳ ಮಾಲೆ ತೊಡಕು ತೊಡಕಾಗಿ ಕಾಣಬಹುದು. ಕಾರಣ: ಇದು ಇರುವುದೇ ತೊಡಕು ತೊಡಕಾಗಿ; ಹಾಗೆ ಇರುವುದಕ್ಕೆ ಕಾರಣ ಅದು ಸಂಸಾರದ ಪ್ರತಿಬಿಂಬ. ಕಾಲಲಬ್ಧಿ ದೊರಕೊಂಡ ಮೇಳಿನ ಭವಾವಳಿಗೇ ಇಷ್ಟು ಹಿಂಜರಿಯುವುದಾದರೆ ಜೀವ ಮಿಥ್ಯಾತ್ವದಿಂದ ತಂದುಕೊಳ್ಳುತ್ತಿರುವ ಅಸಂಖ್ಯ ಭವಾವಳಿಗೆ ಎಷ್ಟು ಹಿಂಜರಿಯಬೇಡ? ಎಷ್ಟು ಬೇಗ ಭವಕ್ಕೆಭೀತನಾಗಿ ಸಮ್ಯಕ್ತ್ವವನ್ನು ಕೊಂಡು, ಮೋಕ್ಷಗಾಮಿಯಾಗಬೇಡ? ಈ ದೃಷ್ಟಿಯನ್ನು ತರುವುದಕ್ಕಾಗಿಯೇ ಜೈನ ಪುರಾಣಗಳಲ್ಲಿ ಭವಾವಳಿಯ ನಿರೂಪಣ”[4]

ಪಂಪನು ತನ್ನ ಕಾವ್ಯದಲ್ಲಿ ಮೂಲ ಕಥಾವಸ್ತುವಿಗೆ ಅಪಾರವಾದ ಗೌರವವನ್ನು ತೋರಿಸಿದ್ದಾನೆ. ವಾಸ್ತವವಾಗಿ ತೀರ್ಥಂಕರನ ಹಿಂದಿನ ಹತ್ತು ಜನ್ಮಗಳ ಕಥೆ ಪೂರ್ವ ಪುರಾಣದಲ್ಲಿ ಅಂತಹ ಸೂತ್ರಬದ್ಧತೆಯನ್ನು ಹೊಂದಿಲ್ಲ. ಪಂಪನಾದರೋ ಅವುಗಳಲ್ಲಿ ಒಂದು ಸೂತ್ರ ಬದ್ಧತೆಯನ್ನು ಸ್ಥಾಪಿಸಿದ್ದಾನೆ. ಅದಕ್ಕೆ ಬೇಕಾದ ಒಂದು ಮೂಲ ತತ್ವವನ್ನು ಅವನು ಕಂಡು ಕೊಂಡಿದ್ದಾನೆ. “ಮೊದಲ ಐದು ಭವಗಳಲ್ಲಿ ಭೋಗದ ಆಕಾಂಕ್ಷೆ ತೀವ್ರವೂ, ಪ್ರಧಾನವೂ ಆಗಿದ್ದರೆ ಉಳಿದ ಭವಗಳಲ್ಲಿ ಅದೇ ಭೋಗಾಕಾಂಕ್ಷೆ ಕ್ರಮೇಣ ತ್ಯಾಗಕ್ಕೆ ತೆರವು ಮಾಡಿಕೊಟ್ಟು ಕೊನೆಗೆ ಆತ್ಮದ ಸಹಜಗುಣವಾದ ಸಾಕ್ಷಾತ್ಕಾರಕ್ಕೆ ಸಾಧನವೂ ಅನಂತರ ಸುಖಕ್ಕೆ ದಾರಿಯೂ ಆಗಿ ಪರಿಣಮಿಸುತ್ತದೆ. ಈ ಕಾಣ್ಕೆಯೇ ಆದಿಪುರಾಣವನ್ನು ಒಂದು ಕಲಾಕೃತಿಯಾಗಿ ಮಾಡಿರುವುದು.”[5] ಎಂ.ವಿ. ಶ್ರೀನಿವಾಸಮೂರ್ತಿಯವರ ಪಕ್ವವಾದ ವಿಮರ್ಶೆಯ ಮಾತುಗಳು ಪಂಪನು ಸಾಧಿಸಿರುವ ಮಹತ್ತನ್ನು ಸಾರಿ ಹೇಳುತ್ತಿದೆ.

ಪಂಪನಿಗೆ ಸಹಜವಾದ ಕೆಲವು ಕಾವ್ಯಶಕ್ತಿಗಳು ಅವನ ಈ ಸಿದ್ಧಿಗೆ ಕಾರಣವಾಗಿವೆ. ಮೊದಲನೆಯದು ಅವನ ಸಂಗ್ರಹ ಗುಣ. ಅವನ ಎರಡು ಕಾವ್ಯಗಳಲ್ಲಿ ಅದ್ಭುತವಾದ ರೀತಿಯಲ್ಲಿ ಈ ಗುಣ ಕೆಲಸ ಮಾಡಿ ವಿಸ್ತಾರವಾದದ್ದು ತನ್ನ ರಸಾಂಶವನ್ನು ಕಳೆದುಕೊಳ್ಳದೆ ಸಂಗ್ರಹಗೊಳ್ಳಬೇಕಾದರೆ ಅದು ಪಂಪನ ಕೈಯಲ್ಲಿ ಮಾತ್ರ ಸಾಧ್ಯ ಎನ್ನುವ ಕೀತಿಯನ್ನು ಅವನಿಗೆ ತಂದುಕೊಟ್ಟಿದೆ. ಮೂಲದ ಅನೇಕ ವಿಸ್ತಾರವಾದ ಭಾಗಗಳನ್ನು ಅವನು ಸಮರ್ಪಕವಾಗಿ ಸಂಗ್ರಹಿಸಿದ್ದಾನೆ. ಇಲ್ಲಿ ವಿಶಿಷ್ಟವಾಗಿ ಕೆಲಸ ಮಾಡಿರುವ ಇನ್ನೊಂದು ಶಕ್ತಿಯೆಂದರೆ ಧರ್ಮಪ್ರಿಯರಿಗೆ ಬೇಸರವಾಗವಂತೆ, ಮೂಲಕೃತಿಗೆ ಅಪಚಾರವಾಗದಂತೆ ಅವನು ಮೂಲದ ಧರ್ಮ ಶ್ರವಣಕ್ಕೆ ಸಂಗ್ರಹ ಕ್ರಿಯೆ ಚಿಕಿತ್ಸೆಯನ್ನು ಮಾಡುವುದರ ಜೊತೆಗೆ ಅದಕ್ಕೆ ರಸ ಲೇಪನವನ್ನು ಮಾಡಿದ್ದಾನೆ. ಪಂಪನು ಜಿನಸೇನಾಚಾರ್ಯರಿಗೆ ಅನೇಕ ವಿಧದಲ್ಲಿ ಋಣಿಯಾಗಿದ್ದಾನೆ ನಿಜ. ಪ್ರೊ. ತೀ. ನಂ. ಶ್ರೀಯವರ ಈ ಮಾತುಗಳನ್ನು ಗಮನಿಸಿ: “ಕಥಾ ಸರಣಿಯಲ್ಲಿ ಮಾತ್ರವಲ್ಲ, ಎಷ್ಟೋ ಭಾವಗಳನ್ನು ಕೂಡ ಅಲ್ಲಿಂದಲೇ ಸ್ವೀಕರಿಸಿದನು. ಪಂಪನ ಕಾವ್ಯದ ಎಷ್ಟೋ ಪದ್ಯಗಳು, ವಚನ ಖಂಡಗಳೂ, ಕೆಲವು ಉತ್ತಮವಾದ ಪದ್ಯಗಳೂ ಕೂಡ-ಪೂರ್ವ ಪುರಾಣದ ಭಾಗಗಳ ಅನುವಾದಗಳ ಮೇಲೆಯೇ ನಿಂತಿವೆ ಎಂದು ಹೇಳುವಂತಿಲ್ಲ. ತೀ.ನಂ.ಶ್ರೀ.ಯವರು ಮುಂದುವರಿದು ಹೇಳುತ್ತಾರೆ: “ಸಂಸ್ಕೃತ ಮಹಾಕೃತಿಯೊಂದರ ಸಾರವನ್ನು ಕನ್ನಡದ್ಲಲಿ ಭಟ್ಟಿ ಇಳಿಸುವುದು ಹೇಗೆಂಬುದಕ್ಕೆ ನಿದರ್ಶನವಾಗಿ ಆದಿಪುರಾಣ ಹುಟ್ಟಿದಂತಿದೆ. ಇಷ್ಟನ್ನು ಹೇಳಿದ ಬಳಿಕ, ಪಂಪನ ಪರವಾಗಿ ಈ ಮಾತುಗಳನ್ನು ಹೇಳಬೇಕು. ಪೂರ್ವ ಪುರಾಣದ್ದು ಅತಿ ವಿಸ್ತಾರವಾದ ಧಾಟಿ; ಮಾತೆತ್ತಿದರೆ ಮತ ಪ್ರಕ್ರಿಯೆ ದೀಘ್ವಾಗಿ ಬರುತ್ತದೆ. ಅದರ ಧಾರ್ಮಿಕ ಸಂಗತಿಗಳಲ್ಲಿ ಕಾವ್ಯವಾಹಿನಿ ಎಷ್ಟೋವೇಳೆ ಅದೃಶ್ಯವಾಗಿಬಿಡುತ್ತದೆ. ಆದಿಪುರಾಣದಲ್ಲಾದರೆ ಈ ಅಂಶಗಳೆಲ್ಲ ಸಂಗ್ರಹವಾಗಿ ಬಂದಿವೆ; ಮರಳು ನೆಲ ಇಲ್ಲೂ ಒಮ್ಮೊಮ್ಮೆ ಕಾಣಿಸಿ ಕೊಂಡರೂ ಕಾವ್ಯದ ಹೊಳೆ ಆ ಜಾಗದಲ್ಲಿ ಕೂಡ ರೇಖೆಯಷ್ಟಾದರೂ ಮಿಂಚುತ್ತದೆ. ಅಲ್ಲದೆ, ಪಂಪನ ಸ್ವತಂತ್ರ ಪ್ರತಿಭೆಯಿಂದಲೇ ಚಿಮ್ಮಿದ ಉತ್ಕೃಷ್ಟಕಾವ್ಯಧಾರೆಯೂ ಇಲ್ಲಿ ಬೇಕಾದಷ್ಟು ಉಂಟು”[6]

ಪಂಪನ ಮಹತ್ತಾದ ಸಾಧನೆ ಧರ್ಮದ ಶ್ರೀಮೂರ್ತಿಗೆ ಕಾವ್ಯದ ರತ್ನ ಸಿಂಹಾಸನವನ್ನು ನಿರ್ಮಿಸಿದ್ದು ಎಂದೆವು. ಅವನು ಧರ್ಮ ಮತ್ತು ಕಾವ್ಯಧರ್ಮಗಳ ಸಮನ್ವಯಕ್ಕಾಗಿ ಶ್ರಮಿಸಿ ಅದನ್ನು ಸಾಧಿಸಿದ್ದಾನೆ ಎಂದು ಸೂಚಿಸಿದೆವು. ಮಹಾಕವಿ ಕುವೆಂಪು ಅವರು ತಮ್ಮ ಕಾವ್ಯಮಯ ಶೈಲಿಯಲ್ಲಿ ಈ ಕ್ರಿಯೆಯನ್ನು ವಿಶ್ಲೇಷಿಸಿದ್ದಾರೆ: “ಈ ಆದಿ ಪುರಾಣ ರಸರೂಪಿ ವಿಶ್ವೇಶ್ವರನ ಸಾಕ್ಷಾತ್ಕಾರಕ್ಕೆ ಸೋಪಾನವೂ ಸಾಧನವೂ ಆಗಿ ಪರಿಣಮಿಸಿದೆ. ಧರ್ಮಬೋಧೆಯಿಂದ ಆಕರ್ಷಿತರಾದವರು ಕೆಲವರಾದರೆ ಕಲಾ ಸೌಂದರ್ಯದಿಂದ ಆಕರ್ಷಿತರಾಗುವವರು ಹಲವರಿದ್ದಾರೆ. ಪಂಪನಿಗೆ ಇದು ಗೊತ್ತಿಲ್ಲದಿಲ್ಲ, ಆದುದರಿಂದ ಕವಣೆಯೊಂದರಿಂದಲೇ ಹಕ್ಕಿಯೂ ಹಣ್ಣೂ ಬುಟ್ಟಿಗೆ ಬೀಳುವ ಚಮತ್ಕಾರವನ್ನು ಪಂಪ ಸಾಧಿಸಿದ್ದಾನೆ ಇಲ್ಲಿ. ಕಾವ್ಯಧರ್ಮವನ್ನು ಕೂಡಿಸಿ. ಇದರಿಂದ ಈ ಕಾವ್ಯ ಯಾರು ಯಾರು ಯಾವ ಯಾವ ನೋಟದಿಂದ ನೋಡಿದರೂ, ಎಂತೆಂತಹ ಸಂಸ್ಕಾರ ಸೋಪಾನದಲ್ಲಿ ನಿಂತು ಈಕ್ಷೀಸಿದರೂ ಅವರವರಿಗೆ ಆಯಾಯಾ ರೀತಿಯಿಂದಲೇ ದರ್ಶನವಿತ್ತು ಉದ್ಧಾರಗೈವ ಪವಾಡ ಕೃತಿಯಾಗಿ ಪರಿಣಮಿಸಿದೆ. ಆಗಮಫಲ ರಸಾಸ್ವದದಿಂದ ಸಂತೃಪ್ರವಾದ ಕಾವ್ಯಪಕ್ಷಿ ಸಹೃದಯರ ಹೃದಯಾರಾಮವನ್ನು ಹೊಕ್ಕು ಬ್ರಹ್ಮಾನಂದದ ಬೃಹದ್‌ಗಾನವನ್ನು ಸಲಸಲಕ್ಕೆ ಉಣ್ಣಿಸುತ್ತದೆ ಇಲ್ಲಿ, ಕೇಳುವವರು ಕಿವಿಗೊಟ್ಟಲ್ಲಿ!”[7]

ನಾವು ಗಮನಿಸಿದಲೇ ಬೇಕಾದ ಮತ್ತೊಂದು ಅಂಶವುಂಟು. ಆದ ಪಂಪನು ಪ್ರತಿಪಾದಿಸಿರುವ ಧರ್ಮದ ಸ್ವರೂಪವನ್ನು ಕುರಿತದ್ದು. ಅದು ಜೈನ ಧರ್ಮ ಮಾತ್ರವಲ್ಲ, ವಿಶ್ವಧರ್ಮ ಎಂದರೆ ಎಲ್ಲ ದೇಶದ ಎಲ್ಲ ಕಾಲದ ಜನರನ್ನು ಆಕರ್ಷಿಸುವಂತಹುದು. “ಮನುಷ್ಯ ಜಾತಿ ತಾನೊಂದೆವಲಂ” ಎಂದವನು ಅವನು. ಆದ್ದರಿಂದ ಪುದ್ಗಲ, ಆಸ್ರವಮುಂತಾದ ಜೈನ ಧರ್ಮ ಸೀಮಿತವಾದುದಲ್ಲ. ಯಾರೂ ಯಾವಾಗಲೂ ಆಚರಿಸಿ ಇತಿಮಿತಿಗಳಿಂದ ಬಿಡುಗಡೆ ಹೊಂದಬಹುದಾದ ಬೋಧನೆಗಳುಂಟು ಅವನು ಪ್ರತಿಪಾದಿಸುವ ಧರ್ಮದಲ್ಲಿ. “ಭವ ಧರ್ಮ ಎತ್ತಿ ಉದ್ಧರಿಸುತ್ತದೆ.” ಇದು ಸೂತ್ರಪ್ರಾಯವಾಗಿ ಅವನ ಧರ್ಮದ ಕಲ್ಪನೆ.

ಹೀಗೆ ಪಂಪನು ಮಹತ್ತಾದ ವಸ್ತುಗಳನ್ನು ಆಶ್ರಯಿಸಿ ಮಹತ್ತಾದ ಎರಡು ಕೃತಿಗಳನ್ನು ರಚಿಸಿದನು. ವಸ್ತುವಿನ ಮಹತ್ತೇ ಕಾವ್ಯದ ಮಹತ್ತನ್ನು ನಿರ್ಧರಿಸುತ್ತದೆ ಎಂಬುದಲ್ಲ ಈ ಮಾತಿನ ಅರ್ಥ. ಆದರೆ ಮಹತ್ತಾದ ಕಾವ್ಯದ ವಸ್ತು ಮಹತ್ತಾದದ್ದಾಗಿ ಇರುವುದು ಅನಿವಾರ್ಯ. ಅಂತಿಮವಾಗಿ ಕೃತಿಯ ಮಹತ್ತನ್ನು ನಿರ್ಣಯಿಸುವುದು ಕವಿಯ ಪ್ರತಿಭೆ. ಆ ಪ್ರತಿಭೆ ಪ್ರಥಮವಾಗಿ ಮಹತ್ತಾದ ವಸ್ತುವನ್ನು ಆಯ್ದುಕೊಳ್ಳುವುದರಲ್ಲಿ ಕವಿಗೆ ಯಶಸ್ಸನ್ನು ದೊರಕಿಸಿಕೊಡುತ್ತದೆ. ವಸ್ತುವಿನ ಆಯ್ಕೆಯೆಂಬ ಪ್ರಥಮ ಪರೀಕ್ಷೆಯಲ್ಲಿ ಪಂಪನ ಕನ್ನಡದ ಏಕ ಸಂಸ್ಕೃತದ ಕೂಡ, ಅನೇಕ ಕವಿಗಳಿಗಿಂತ ಉನ್ನತವಾದ ಮಟ್ಟದಲ್ಲಿ ತೇರ್ಗಡೆ ಹೊಂದಿದ್ದಾನೆ.

[1] ಸುಜನಾ, “ಪಂಪಭಾರತದ ವಸ್ತು ವಿನ್ಯಾಸ” ‘ಪಂಪ: ಒಂದು ಅಧ್ಯಯನ’ ಬೆಂಗಳೂರು ವಿಶ್ವವಿದ್ಯಾನಿಲಯ. ೧೯೭೪. ಪು. ೧೧೮-೧೯.

[2] ಪಂಪನ ವಿಕ್ರಮಾರ್ಜುನ ವಿಜಯದ ಕಥಾವಸ್ತು-ಡಾ.ನ. ಸುಬ್ರಹ್ಮಣ್ಯ- ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ-ಸಂಪುಟ: ೧೯೭೫ ಬೆಂಗಳೂರು ವಿಶ್ವವಿದ್ಯಾನಿಲಯ, ಪು.೭೨

[3] ಪೂರ್ವ ಪುರಾಣ I-೬೨-೬೩ (೨) ಸುಕುಮಾರ ಚರಿತೆಯ ಮುನ್ನುಡಿ. ಕರ್ಣಾಟಕ ಸಂಘ, ಶಿವಮೊಗ್ಗ ೧೯೫೮

[4] ಜೈನ ಪುರಾಣಗಳಲ್ಲಿ ಭವಾವಳಿ, ಸಂಭಾವನೆ. ಪು. ೨೩೫ ಮತ್ತು ೨೩೯

[5] ಆದಿಪುರಾಣದ ಕಥಾವಸ್ತು. ಅಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ. ಬೆಂಗಳೂರು ವಿಶ್ವವಿದ್ಯಾನಿಲಯ ಪು. ೧೦೫

[6] ಅಲ್ಲೇ.

[7] ಆದಿಪುರಾಣ ಸಂಗ್ರಹ ಮುನ್ನಡಿ. ಪು. iv-v ಮೈಸೂರು ವಿಶ್ವವಿದ್ಯಾನಿಲಯ.