ಪಂಪನ ಪ್ರಾರ ಪಾಂಡುವು ಅನಂತರ ತನ್ನ ಪರಿವಾರದವರನ್ನು ಬರಮಾಡಿಕೊಂಡು ಈ ಕೆಳಗಿನಂತೆ ಹೇಳುತ್ತಾನೆ:

ಸಾರಮನಂದ ಜಂಗಮ ಲತಾ ಲಲಿತಾಂಗಿಯರಿಂದಮಲ್ತೆ ಸಂ |
ಪಾರಮಿದೆಂಬುದಿನೆನ್ನನಗೆ ತಪ್ಪದು ತನ್ಮುನಿಶಾಪದಿಂದಮಿ ||
ನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪನೆಂದು ದು |
ರ್ವಾರ ಪರಾಕ್ರಮ ತಳರೆ ಬಾರಿಸಿ ವಾರಿಸಿ ಕುಂತಿಮಾದ್ರಿಯರ್ ||

ಈ ಸಂಸಾರವೆಂಬುದು, ಅರ್ಥಾತ್ ಲೋಕ ಜೀವನವೆಂಬುದು ರಸವತ್ತಾಗುವುದು ಮನ್ಮಥನ ನಡೆದಾಡುವ ಬಳ್ಳಿಗಳಂತೆ ಇರುವ ಸುಂದರಾಂಗಿಯರಿಂದ ಅಲ್ಲವೆ? (ಅದು ಹೌದು ಎಂಬುದು ಪಾಂಡುವಿನ ಸಿದ್ಧಾಂತ). (ಆದರೆ) ಇನ್ನು ನನಗೆ (ಆ ಸ್ತ್ರೀಭೋಗವು) ಮುನಿಯ ಶಾಪದಿಂದ ತಪ್ಪಿಹೋಯಿತು. (ಆದ್ದರಿಂದ) (ಇನ್ನು ನಾನು) ಕಾಡಿನಲ್ಲಿ ವಾಸಮಾಡುತ್ತೇನೆ. ಇದಕ್ಕೆ ಯಾರೂ ಅಡ್ಡಿಮಾಡಬೇಡಿರಿ. ಹೀಗೆ ಹೇಳಿ ನಿವಾರಿಸಲು ಅಶಕ್ಯವಾದ ಪ್ರತಾಪವುಳ್ಳ ಪಾಂಡುರಾಜನು ಹೊರಡಲು ಕುಂತಿ-ಮಾದ್ರಿಯರು ಬೇಡ ಬೇಡ ಎಂದು ತಡೆದು ತಡೆದು ಅವನನ್ನು ಹಿಂಬಾಲಿಸಿ ಹೋಗಲು ಅವನು ಮೌನವಾಗಿ ನಡೆದು ಶತಶೃಂಗ ಎಂಬ ಪರ್ವತವನ್ನೇ ತಲುಪಿದನು.

ಮೇಲಿನ ಪದ್ಯದ ಮೊದಲ ಪಂಕ್ತಿ ಪಾಂಡುವಿನ ಜೀವನ ದೃಷ್ಟಿಯನ್ನೂ ಪಂಪನ ಜೀವನ ದೃಷ್ಟಿಯನ್ನೂ ಒಟ್ಟಿಗೆ ಸಾರುತ್ತದೆ ಎಂಬುದು ಸ್ಪಷ್ಟವಾಗಿದೆ. ಸಹಜವಾದ ಬದುಕು, ಹಿಂದಿನವರು ನಂಬಿದ್ದಂತೆ, ಮೋಕ್ಷ ಪೂರ್ವದಲ್ಲಿ ಧರ್ಮ, ಅರ್ಥ ಮತ್ತು ಕಾಮಗಳನ್ನು ಒಳಗೊಂಡದ್ದು. ಪಂಪನ ಎರಡೂ ಕೃತಿಗಳನ್ನು- ಪ್ರಕೃತ ನಾವು ಪರಿಶೀಲಿಸುತ್ತಿರುವ ವಿಕ್ರಮಾರ್ಜುನ ವಿಜಯಂ ಮತ್ತು ಅವನ ಇನ್ನೊಂದು ಕೃತಿ, ಜಿನಾಗಮವನ್ನು ಬೆಳಗುವ ಆದಿಪುರಾಣಂ-ಸಮಗ್ರವಾಗಿ ಅಧ್ಯಯನ ಮಾಡಿದರೆ ಶೃಂಗಾರದ ವಿಷಯದಲ್ಲಿ ಅವನಿಗಿರುವ ಪಕ್ಷಪಾತ ಸ್ಪಷ್ಟವಾಗುತ್ತದೆ. ಅದನ್ನೇ ಸೂತ್ರರೂಪವಾಗಿ ಇಲ್ಲಿ ಪಾಂಡುವಿನ ಬಾಯಲ್ಲಿ ಹೇಳಿಸಿದ್ದಾನೆ:

ಸಾರಮನಂಗ ಜಂಗಮಲತಾಲಲಿತಾಂಗಿಯರಿಂದಮಲ್ತೆ ಸಂಸಾರಂ!

ಅದನ್ನು ಎಷ್ಟು ಸೊಗಸಾಗಿ ಕಾವ್ಯಮಯವಾಗಿ, ದೀರ್ಘಾಕ್ಷರ ವಿನ್ಯಾಸಗಳಿಂದ ಚೆಲುವುಗೊಳಿಸಿ ಹೇಳಿದ್ದಾನೆ!

ಮುಂದಿನ ಋಷ್ಯಾಶ್ರಮದ ವರ್ಣನೆ ಪಂಪನು ಬಲವಂತಕ್ಕೆ ಮಾಡಿದ ಮಾಘಸ್ನಾನ! ಅತ್ಯಂತ ಸಾಂಪ್ರದಾಯಿಕವಾದ, ಪಂಪನ ವೈಶಿಷ್ಟ್ಯವೇನೂ ಇಲ್ಲದ ವರ್ಣನೆ ಅದು.

ಅತ್ತ ಧೃತರಾಷ್ಟ್ರನ ಪತ್ನಿ ಗಾಂಧಾರಿಯೂ ನೂರು ಮಕ್ಕಳನ್ನು ಪಡೆಯುವಂತೆ ಪರಾಶರರಿಂದ ವರವನ್ನು ಪಡೆದಳು ಎಂದು ಕೇಳಿದ ಕುಂತಿಗೆ ಸಹಜವಾಗಿಯೇ ತಾನೂ ಮಕ್ಕಳನ್ನು ಪಡೆಯಬೇಕು ಎಂಬ ಹಂಬಲವಾಯಿತು. ಹಂಬಲವು ಚಿಂತೆಗೆ ತಿರುಗಿತು. ಚಿಂತಾಕ್ರಂತಳಾಗಿದ್ದ ಕುಂತಿಯನ್ನು ಕುರಿತು ಪಾಂಡುರಾಜನು ಹೀಗೆಂದನು:

ಚಿಂತೆಯಿದೇನೊ ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪ್ಯಡಿ |
ನ್ನಿಂತಿರವೇದ ದಿವ್ಯ ಮುನಿ ಪುಂಗವರಂ ಬಗೆದೀರ್ಪಿನಂ ನಿಜಾ
ತ್ಯಂತ ಪತಿವ್ರತಾ ಗುಣದಿನರ್ಜಿಸಿ ಮೆಚ್ಚಿಸು ನೀಂ ದಿಗಂತ ವಿ
ಶ್ರಾಂತ ಯಶರ್ಕಳಂ ವರ ತನೂಭವರಂ ಪಡೆನೀಂ ತಳೋದರೀ ||

ಇದೇನು ಚಿಂತೆ? ವಂಶಕ್ಕೆ ಮಕ್ಕಳೇ ಪ್ರಯೋಜನ ಎನ್ನುವುದಾದರೆ ಇನ್ನು ನೀನು ಹೀಗಿರಬೇಡ. ನಿನ್ನ ಅತಿಶಯವಾದ ಪಾತಿವ್ರತ್ಯ ಗುಣದಿಂದ ಅತಿಶ್ರೇಷ್ಠರಾದ ಋಷಿಗಳನ್ನು ಮನಸ್ಸು ತೃಪ್ತಿಯಾಗುವಂತೆ ಪೂಜಿಸಿ ಮೆಚ್ಚಿಸು, (ಹಾಗೆ ಮಾಡಿ) ದಿಗಂತದವರೆಗೂ ಹಬ್ಬಿದ ಕೀರ್ತಿಯುಳ್ಳ ಮಕ್ಕಳನ್ನು ನೀನು ಪಡೆ.”

ಇಲ್ಲಿ ಗಮನಿಸಬೇಕಾದ ಅಂಶಗಳುಂಟು. ಮೂಲ ಮಹಾಭಾರತದಲ್ಲಿ ಸಂತಾನದ ತೀವ್ರವಾದ ಅಪೇಕ್ಷೆಯು ಉಂಟಾಗುವುದು ಪಾಂಡು ಮಹಾರಾಜನಿಗೆ. ಈಗಾಗಲೇ ವಿವರಿಸಿರುವಂತೆ ಅವನು ಕುಂತಿಗೆ ಹೀಗೆ ಹೇಳಿದ್ದನು:

“ಸತ್ಪುರುಷರಾದವರು ತಮ್ಮ ವೀರ್ಯದಿಂದಲ್ಲಿದ್ದರೂ (ಆಪತ್ಕಾಲದಲ್ಲಿ) ಧರ್ಮದ ಫಲವನ್ನು ಕೊಡುವಂತಹ ಉತ್ತಮವಾದ ಸಂತಾನವನ್ನು (ಬೇರೆ ಪುರುಷನಿಂದ) ಪಡೆಯುತ್ತಾರೆ ಎಂದು ಸ್ವಾಯಂಭುವ ಮನುವು ಹೇಳಿದ್ದಾನೆ” ಎಂದು ಹೇಳಿ ಮತ್ತೆ “ಈಗ ನಿನ್ನನ್ನು (ಬೇರೆಯವರ ಬಳಿಗೆ) ಕಳುಹಿಸಿಕೊಡುವೆನು. ಕೀರ್ತಿವಂತಳಾದವಳೆ, ನೀನು ನನಗೆ ಸಮಾನವಾದವನಿಂದಾಗಲಿ ಅಥವಾ ಉತ್ತಮನಾದವನಿಂದಾಗಲಿ ಸಂತಾನವನ್ನು ಹೊಂದು” ಎಂದು ಹೇಳಿಕೊಂಡನು.

ಮಹಾಭಾರತದ ಕಾಲದ ಇಲ್ಲವೇ ವ್ಯಾಸರ ಕಾಲದ ಸಾಮಾಜಿಕ ನೀತಿ-ನಿಯಮಗಳು ಹೀಗೆ ಮತ್ತೊಬ್ಬನಿಂದ ತನ್ನ ಸತಿಯ ಕ್ಷೇತ್ರದಲ್ಲಿ ಪಡೆದ ಸಂತಾನವು ತನ್ನದೇ ಸಂತಾನವೆಂದು ಒಪ್ಪಲು ಅನುಮತಿ ನೀಡಿದ್ದುವು. ಅಲ್ಲದೆ ಹಾಗೆ ಪಡೆದ ಮಕ್ಕಳು ಮಾಡುವ ಶ್ರಾದ್ಧವೇ ಮುಂತಾದ ಕರ್ಮಗಳಿಂದ ತಮಗೆ ಉತ್ತಮ ಲೋಕವು ಪ್ರಾಪ್ರವಾಗುತ್ತವೆ ಎಂದೂ ಜನರು ತಿಳಿದಿದ್ದರು.

ಮಹಾಭಾರತದಲ್ಲಿ ಕುಂತಿಯು ತನಗೆ ಸಂತಾನದ ತೀವ್ರವಾದ ಬಯಕೆಯಿಂದ ಎಂದು ಹೇಳುವುದಿಲ್ಲ. ಅಲ್ಲದೆ ಋಷಿಯ ಶಾಪವು ಗೊತ್ತಿದ್ದೂ ಪಾಂಡುವೇ ತನ್ನಿಂದ ಪುತ್ರರನ್ನು ಪಡೆಯಬೇಕೆಂದು ಹೇಳುತ್ತಾಳೆ.

ಆದರೆ ಮಹಾಭಾರತದ ಕಾಲದಿಂದ ಪಂಪನವರೆಗೆ ಎಷ್ಟೇ ಸಹಸ್ರ ವರ್ಷಗಳು ಉರುಳಿ ಹೋಗಿವೆ. ಸಾಮಾಜಿಕ ನೀತಿ ನಿಯಮಗಳಲ್ಲಿ ಗಮನೀಯವಾದ ಬದಲಾವಣೆಗಳಾಗಿವೆ. ಆದರೂ ತಾನು ಬರೆಯುವುದು ಪ್ರಾಚೀನ ಕಾಲದ ಪೌರಾಣಿಕ ವಿಷಯ ಎಂಬ ಅರಿವು ಪಂಪನಿಗಿದೆ. ಆದುದರಿಂದಲೇ ಅವನು ನಿಯೋಗ ಪದ್ಧತಿಯನ್ನು ತತ್ವಶಃ ಒಪ್ಪಿಕೊಂಡಿದ್ದಾನೆ. ಪುತ್ರರು ಉದಯಿಸುವುದು ನಿರೂಪಣೆ ಮಾಡುವಾಗ ಕೆಲವು ಬದಲಾವಣೆಗಳನ್ನು ಮಾಡಿದ್ದಾನೆ.

ಮೊದಲನೆಯದಾಗಿ ಪುತ್ರರ ತೀವ್ರ ಬಯಕೆ ಉಂಟಾಗುವುದು ಸ್ತ್ರೀ ಹೃದಯದ ಸಹಜವಾದ ಬಯಕೆ ಅದು. ಅದನ್ನು ಪಂಪನು ಪರಿಣಾಮಕಾರಿಯಾದ ರೀತಿಯಲ್ಲಿ ನಿರೂಪಿಸಿದ್ದಾನೆ. ಕುಂತಿ ಹೇಳುತ್ತಾಳೆ:

ನಾಡೆ ನೋಯಿಸಿದಪುದಿಕ್ಷು ಪುಷ್ಪದವೊಲೆನ್ನಯ ಪುಷ್ಪದರ್ಶನಂ. “ನಾನು ಪುಷ್ಪವತಿಯಾಗುತ್ತಿದ್ದೇನೆ, ಎಂದರೆ ತಿಂಗಳು ತಿಂಗಳೂ ಮುಟ್ಟಾಗುತ್ತಿದ್ದೇನೆ. ಆದರೆ ಫಲವತಿಯಾಗುತ್ತಿಲ್ಲ ಎಂದರೆ ಗರ್ಭಿಣಿಯಾಗುತ್ತಿಲ್ಲ, ಹೇಗೆಂದರೆ ಅಲ್ಲಿನ ಹೂವು ಹೇಗೆ ಕಾಯಾಗುವುದಿಲ್ಲವೋ ಹಾದೆ”

ಅವಳ ಪುತ್ರ ದೋಹಳ-ಸಂತಾನದ ಬಯಕೆ ಎದೆಯಾಳದಿಂದ ಉಕ್ಕಿ ಬಂದದ್ದು. ಅದನ್ನು ತಿಳಿದ ಪಾಂಡು ನೀನು ಮುನಿಶ್ರೇಷ್ಠರಿಂದ ಮಕ್ಕಳನ್ನು ಪಡೆ ಎಂದು ಸಧ್ಯ, ಜೈನನಾದ ಪಂಪನು, ವ್ಯಾಸರಂತೆ, ಎಚ್ಚರ ತಪ್ಪಿ “ಬ್ರಾಹ್ಮಣರಿಂದ ಮಕ್ಕಳನ್ನು ಪಡೆ” ಎಂದೂ ಹೇಳಲಿಲ್ಲ! ಯಾವ ಜಾತಿಯವನಾದರೇನು, ಅವನು ಶ್ರೇಷ್ಠ ಋಷಿಯಾಗಿದ್ದರಾಯಿತು.

ಸಂಕ್ಷೇಪಪ್ರಿಯನಾದ ಪಂಪನ ಒಂದೇ ಮಾತಿನಲ್ಲಿ, ಇತರರಿಂದ ಮಕ್ಕಳನ್ನು ಪಡೆದರೂ ಸಂಪ್ರಾಯವು ಅದನ್ನು ಒಪ್ಪಿರುವುದರಿಂದ ಕುಂತಿಯು ಪತಿವ್ರತೆಯಾಗಿಯೇ ಉಳಿಯುತ್ತಾಳೆ ಎಂಬುದನ್ನು ಸೂಚಿಸಿದ್ದಾನೆ- “ಪತಿವ್ರತಾಗುಣದಿನರ್ಚಿಸಿ ಮೆಚ್ಚಿಸು” ಎಂದು ಹೇಳಿ.

ಆಗ ಕುಂತಿಯು ತಾನು ತನ್ನ ಮಾವನಾದ ಕುಂತೀ ಭೋಜನ ಮನೆಯಲ್ಲಿ ಬೆಳೆಯುತ್ತಿದ್ದ ಕಾಲದಲ್ಲಿ ದುರ್ವಾಸರಿಂದ ಮಂತ್ರಗಳನ್ನು ಪಡೆದ ವಿಷಯವನ್ನು ಹೇಳುತ್ತಾಳೆ. ಮೂಲ ಮಹಾಭಾರತದಲ್ಲಿ ದುರ್ವಾಸರು ಮಂತ್ರ ಸಮೂಹವನ್ನು ನೀಡಿದರು ಎಂದಿದೆ. ಪಂಪನ ಕುಂತಿಯಾದರೋ “ಮಂತ್ರಾಕ್ಷರಂಗಳನಯ್ದಂ ವರವಿತ್ತರ್‌” ಎನ್ನುತ್ತಾಳೆ. ಈ ಐದು ಮಂತ್ರಗಳು ಎಂದಿರುವುದು ಪಂಪನ ಸೃಷ್ಟಿಯೋ ಅಥವಾ ಇದಕ್ಕೆ ಬೇರೆ ಯಾವುದಾದರೂ ಆಧಾರವಿದೆಯೋ ತಿಳಿಯದು. ಇಲ್ಲಿಯೂ ಅವಳು ತನಗೆ ಸೂರ್ಯನಿಂದ ಮಗ ಹುಟ್ಟಿದ್ದನ್ನು ಹೇಳುವುದಿಲ್ಲ.

ಅನಂತರ ಕುಂತಿ ಯಮನನ್ನು ನೆನೆದಳು. ಅವನು ಬಂದು ತನ್ನ ಅಂಶವನ್ನು ಅವಳ ಗರ್ಭದಲ್ಲಿ ಇರಿಸಿಹೋದನು. ಧರ್ಮರಾಜನ ಜನನವಾಯಿತು. ಅನಂತರ ವಾಯುದೇವ, ಬಳಿಕ ಇಂದ್ರ ಇವರಿಂದ ಕ್ರಮವಾಗಿ ಭೀಮ ಮತ್ತು ಅರ್ಜುನರು ಹುಟ್ಟಿದರು. ಪಂಪನು ತನ್ನ ರಾಜನಾದ ಅರಿಕೇಸರಿಯೊಂದಿಗೆ ಅರ್ಜುನನನ್ನು ಸಮೀಕರಿಸಿರುವುದರಿಂದ ತನ್ನ ಕಾವ್ಯದ ನಾಯಕ ಅರ್ಜುನನೇ ಎಂದು ನಿರೂಪಿಸಿದ್ದಾನೆ. ಆದ್ದರಿಂದ ಅರ್ಜುನನ ಜನನ ವೃತ್ತಾಂತವು ಅಗತ್ಯಕ್ಕಿಂತ ಹೆಚ್ಚು ವಿಸ್ತಾರವಾಗಿ ವರ್ಣಿತವಾಗಿದೆ.

ಕುಂತಿಗೆ ಮಕ್ಕಳಾದವು. ತನಗೆ ಮಾತ್ರ ಆಗಲಿಲ್ಲ ಎಂಬ ಕೊರಗಿನಿಂದ ಮಾದ್ರಿಯು “ವಿರಕ್ತೆಯಾಗಿ, ಹೊಸೆದು ಬಿಸಾಡಿದ ಅಶೋಕದ ಚಿಗುರಿನಂತೆ” ಕೊರಗಿ ಚಿಂತಿಸುತ್ತಿದ್ದಳು. ಅವಳ ಸೊರಗಿನ ಮುಖವನ್ನು ಕಂಡು ಕುಂತಿಯು ಅವಳಿಗೆ “ಪುತ್ರೋತ್ಪತ್ತಿ ಕಾರಣಗಳಾದ” ಮಂತ್ರಗಳನ್ನು ಕರುಣಿಸಿದಳು. ಅವನ್ನು ಜಪಿಸಿ ಮಾದ್ರಿಯು ಅಶ್ವಿನೀದೇವತೆಗಳನ್ನು ಆಹ್ವಾನಿಸಿ ನಕುಲ ಸಹದೇವರನ್ನು ಪಡೆದಳು.

ಮಕ್ಕಳು ಬೆಳೆಯುತ್ತಿದ್ದರು. ತಂದೆ ತಾಯಿಗಳು ಅವನ್ನು ನೋಡಿ ಸಂತೋಷಪಡುತ್ತಿದ್ದರು. ಅಷ್ಟರಲ್ಲಿ ವಸಂತ ಮಾಸ ಬಂದಿತು. ವ್ಯಾಸರಲ್ಲಿ ವಸಂತ ಮಾಸದ ವರ್ಣನೆ ಕೇವಲ ವರದಿಯಾಗಿದೆಯೋ ಹೊರತು ಪಂಪನಂತೆ ವಸಂತ ವರ್ಣನೆಯಂತೆ ಪ್ರತಿಭಾ ಸ್ಪರ್ಶವನ್ನು ಪಡೆದಿಲ್ಲ. ವ್ಯಾಸರು ಹೇಳಿರುವುದು ಇಷ್ಟು:

ರಮ್ಯವಾದ ವಸಂತ ಋತುವಿನ ಸಮಯದಲ್ಲಿ, ಒಮ್ಮೆ (ಸಮಸ್ತ) ಪ್ರಾಣಿಗಳನ್ನು ಮೋಹಗೊಳಿಸಿದ್ದು, ಕಾಡೆಲ್ಲ ಚೆನ್ನಾಗಿ ಹೂಬಿಟ್ಟಿದ್ದು, ಪಾಂಡುವು ತನ್ನ ಹೆಂಡತಿಯರೊಂದಿಗೆ ವನದಲ್ಲಿ ಸಂಚರಿಸುತ್ತಿದ್ದನು. ಮುತ್ತುಗ, ತಿಲಕ, ಮಾವು, ಸಂಪಿಗೆ, ಪಾರಿಭದ್ರಕ ಮತ್ತು ಇನ್ನೂ ಅನೇಕ ಮರಗಳು ಹಣ್ಣುಗಳಿಂದಲೂ ಹೂಗಳಿಂದಲೂ ತುಂಬಿ ಹೋಗಿದ್ದುವು. (ಆ ರೀತಿಯಾಗಿ) ಶೋಭಿಸುತ್ತಿದ್ದ ಅರಣ್ಯವನ್ನು ನೋಡಿದ ಕೂಡಲೇ ಪಾಂಡುವಿನ ಮನಸ್ಸಿನಲ್ಲಿ ಕಾಮವು ಹುಟ್ಟಿತು.”

ಪಂಪನು ಮಾಡಿರುವ ವಸಂತ ಋತುವಿನ ವರ್ಣನೆಯು ಪ್ರಾರಂಭದಲ್ಲಿ ಸಾಂಪ್ರದಾಯಿಕವಾಯೇ ಇದೆ. ಆದರೆ ಅದರ ನಡುವೆ ಪ್ರತಿಭೆಯು ಅಲ್ಲಲ್ಲಿ ಮಿಂಚಿ ಮುಂದಿನ ಘಟನಾವಳಿಗಳಿಗೆ ಸೊಗಸಾಗ ನಾಂದಿಯನ್ನು ಮೊಳಗಿದೆ.

“ಪರಿದತ್ತು ವಸಂತಗಜಂ ವಿಯೋಗಿಯಂ”- ಮದಿಸಿದ ವಸಂತನೆಂಬ ಆನೆಯು ವೀರರಾಯ ಮೇಲೆ ಧಾಳಿಯಿಟ್ಟಿತು”! ಎಂದು ಒಂದೇ ಒಂದು ಶಕ್ತಿ ಪೂರ್ಣವಾದ ಪಂಕ್ತಿಯಿಂದ ಪಂಪನು ಪಾಂಡುವಿನ ಚಿಂತಾಜನಕ ಸ್ಥಿತಿಯನ್ನು ವರ್ಣಿಸಿದ್ದಾನೆ. ಮುಂದಿನದು ಮಾದ್ರಿಯ ವರ್ಣನೆ.

ವನಕುಮುಸಂಗಳಂ ಬಗೆಗೆ ವಂದುವನಯ್ತಿಯೊಳಾಯ್ದು ಕೊಯ್ದುಮೆ |
ಲ್ಲನೆ ವಕುಳಾಳವಾಳ ತಳದೊಳ್ ಸುರಿದಂಬುಜ ಸೂತ್ರದಿಂದ ||
ತ್ತನಿತಯೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂತು ಬೇ |
ಬ್ಬಿನಿತನೆ ಮಾಡಿ ತೊಟ್ಟು ಕರಮೊಪ್ಪಿದಳಾಕೆ ಬಸಂತ ಕಾಂತೆ ವೋಲ್ ||

ಈ ಪದ್ಯದ ಹಿಂದಿನ ವಚನದಲ್ಲಿ “ವರ್ಗದಿಂದ ತೊಂಡಾದವಳೂ, ಕ್ರೀಡೆಯಲ್ಲಿ ಆಸಕ್ತಿಯುಳ್ಳವಳೂ ಆದವಳೇ ಮಾದ್ರಿ” ಎಂದು ಹೇಳಲಾಗಿದೆ. ವಸಂತನ ಆಗಮನದಿಂದ, ತನ್ನ ದೇಹವನ್ನು ಅದರ ಹಿನ್ನೆಲೆಯಲ್ಲಿ ನೋಡಿಕೊಂಡ ಮಾದ್ರಿಯು ತನ್ನ ಸೌಂದರ್ಯದ ವಿಷಯದಲ್ಲಿ ಗರ್ವವನ್ನು ತಾಳಿದುದು ಸಹಜವಾಗಿಯೇ ಇದೆ. ಅವಳು ಚಿಕ್ಕವಳು. ಆದುದರಿಂದ (ರತಿ) ಕ್ರೀಡೆಯಲ್ಲಿ ಆಸಕ್ತಳಾದವಳಾಗಿದ್ದಳು ಎಂದು ಹೇಳಿರುವುದಂತೂ ಸೂಕ್ತವಾಗಿಯೇ ಇದೆ. ಅಂತಹ ಮಾದ್ರಿಯು, ಮೇಲಿನ ಪದ್ಯದಲ್ಲಿ ಹೇಳಿರುವಂತೆ ತನ್ನ ಮನಸ್ಸಿಗೆ ಬಂದ ಕಾಡುಹೂಗಳನ್ನು ಪ್ರೀತಿಯಿಂದ ಆಯ್ದುಕೊಂಡಳು. ಬಕುಳದ ಹೂಗಳ ಪಾತಿಯಲ್ಲಿ ಅವನ್ನು ಸುರಿದಳು. ತಾವರೆ, ದಂಟಿನ ನೂಲಿನಿಂದ ಆ ಹೂಗಳನ್ನು ಮೊಗ್ಗಿನ ಸರಿಗೆ, ತೋಳಿನ ಬಳೆ, ಕಂಕಣ ಬಳೆಗಳು, ಹಾರಗಳು ಮುಂತಾದ ಆಭರಣಗಳನ್ನಾಗಿ ಮಾಡಿದಳು. ಅವುಗಳಿಂದ ಅಲಂಕರಿಸಿಕೊಂಡು ವಸಂತರಾಜನ ರಾಣಿಯಂತೆ ಶೋಭಿಸಿದಳು.

ಅವಳು ಹಾಗೆ ತೊಟ್ಟ ಹೂವಿನ ಆಭರಣಗಳು, ಮನ್ಮಥನು ಹೂಡಿದ ಹೂವಿನ ಬಾಣಗಲಿಗೆ ಸಮಾನಾಗಿರಲು,

ಮಿಳಿರ್ವ ಕುರುಳ್ಗಳೊಳ್ ತೊಡರ್ದು ದೇಸಿಯನಾವಗಮೀವ ಚೆನ್ನಪೂ |
ಗಳನವನೊಯ್ಯನೋಸರಿಸುತುಂ ವದನಾಬ್ಬದ ಕಂಪನಾಳ್ದುಣಲ್ ||
ಳಸುವ ತುಂಬಯಂ ಪಿಡಿದ ನೆಯ್ದಲೊಳೊಯ್ಯನೆ ಸೋವುತುಂ ಬೆಡಂ |
ಗೊಳಕೊಳೆ ಸೂರ್ಕಿದಂಗಜ ಮತಗಂಜದಂತಿರೆ ಬರ್ಪ ಮಾದ್ರಿಯಂ ||

ಅಲುಗಾಡುತ್ತಿರುವ ಕೂದಲುಗಳಲ್ಲಿ ಸಿಕ್ಕಿಕೊಂಡು ಸಂಪೂರ್ಣವಾಗಿ ಚೆಲುವನ್ನು ನೀಡುವ ಚೆಲುವಾದ ಆ ಹೂಗಳನ್ನು ಮೆಲ್ಲನೆ ಒಂದು ಪಕ್ಕಕ್ಕೆ ತಳ್ಳುತ್ತಾ, ಮುಖಕಮಲದ ಸುಗಂಧವನ್ನು (ಬಹುಶಃ ಮಕರಂದವನ್ನು) ಪಡೆದು ಉಣ್ಣಲು ಮುತ್ತಿಕೊಳ್ಳುವ ದುಂಬಿಯನ್ನು ತಾನು ಹಿಡಿದಿದ್ದ ನೆಯ್ದಿಲೆಯ ಹೂವಿನಿಂದ ಮೆಲ್ಲನೆ ಓಡಿಸುತ್ತಾ ಸೊಗಸನ್ನು ಪಡೆದು ಮನ್ಮಥನ ಮದಿಸಿದ ಆನೆಯಂತೆ ಬರುವ ಮಾದ್ರಿಯನ್ನು-

ಎಂತಹ ಸೊಗಸಾದ ಚಿತ್ರವನ್ನು ನೀಡಿದ್ದಾನೆ, ಪಂಪ! ಚಲಿಸುತ್ತಿರುವ ಸ್ತ್ರೀ ಸೌಂದರ್ಯವೇ ಮೂರ್ತಿವೆತ್ತಂತಿರುವ ಮಾದ್ರಿ-ಪಾಂಡು ಇರಲಿ, ಆಗ ಸ್ವಯಂ ಭೀಷ್ಮನೇ ಅವಳನ್ನು ನೋಡಿದ್ದರೂ ತನ್ನ ಪ್ರತಿಜ್ಞೆಯನ್ನು ಮುರಿದು ಎಸೆಯುತ್ತಿದ್ದ, ಇಲ್ಲವೇ ಅದಕ್ಕೆ ಏನಾದರೂ ತಿದ್ದುಪಡಿ ತರುತ್ತಿದ್ದ-

ಅಂತಹ ಮಾದ್ರಿಯನ್ನು (ಮನ್ಮಥನ ಅಂತಃಪುರದಿಂದ ಹೊರಟಂತಿದ್ದ ಮಾತ್ರಿಯನ್ನು) ತಾಪಸಾಶ್ರಮದಿಂದ ಹೊರಟು ಹಾಗೇ (ಸುಮ್ಮನೆ) ವನದಲ್ಲಿ ಸಂಚಾರ ಹೊರಟ ಪಾಂಡುವು ನೋಡುತ್ತಾನೆ!

ಅವಳೋ ಸ್ವಚ್ಛಂದ ಸೌಂದರ್ಯ-ಇವನೋ ತಡೆಹಿಡಿದಿಟ್ಟಿದ್ದ ಅಸಹಜ ಸಂಯಮ- ಇವರದನ್ನು ರಸಿಕನಾದ ಪಂಪ ಸೊಗಸಾಗಿ ಮುಖಾಮುಖಿಯಾಗಿದ್ದಾನೆ- ಆದ್ದರಿಂದಲೋ ನೋಡುವ ಕ್ರಿಯೆ, ಅದರ ಅನಿವಾರ್ಯವಾದ ಪರಿಣಾಮ ಎರಡೂ ಒಂದರ ಹಿಂದೆ ಒಂದು ನಡೆಯುವ ರಭಸ ಸುರುಳಿ ಚಿತ್ರದಂತೆ ಬಿಚ್ಚಿಕೊಳ್ಳುತ್ತಾ ಹೋಗುವುದು.

ಸೊಗಯಿಸೆ ಪೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿದಿ
ಟ್ಟಿಗಳೊಳನಂಗರಾಗ ಸಮುಣ್ಮುವಿನಂ ನಡೆ ನೋಡಿ ನೋಡಿ ತೊ ||
ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾಯಿಭು ತನ್ನ ಸಾಪಮಾ |
ಬಗೆಯದೆ ಮಿೞ್ತು ದೇವತೆಯನಂವಿಶುರ್ಕಯಿ ನಸ್ಪೃವಂತವೋಲ್ ||

ಅವಳು ಮಾಡಿಕೊಂಡಿರುವ ಹೂವಿನ ಅಲಂಕಾರವು ಚೆಲುವಾಗಿರಲು, ಕೋಮಲವಾದ ಎಲೆಯಲ್ಲಿ ಸೌಂದರ್ಯವು ಮೆಲ್ಲದೆ ಆಡುತ್ತಿರಲು, ಕಣ್ಣುಗಳಲ್ಲಿ ಮನ್ಮಥರಸವು ಚಿಮ್ಮುತ್ತಿರಲು, ಕಣ್ಣಿನಾಟ ನೋಡಿ ಅವಳನ್ನು ತಕ್ಷಣ ಹಿಡಿದುಕೊಳ್ಳಲು ಅವಳ ಮೇಲೆ ನುಗ್ಗಿ ಪಾಂಡುರಾಜನು, ತನಗೆ ಬಂದಿದ್ದ ಶಾಪವನ್ನು ಲೆಕ್ಕಿಸದೆ, ಅತಿಶಯವಾದ ಪ್ರೀತಿಯಿಂದ ಮೃತ್ಯುದೇವತೆಯನ್ನು ಅಪ್ಪಿಕೊಳ್ಳುವ ಹಾಗೆ ಅವಳನ್ನು ಅಪ್ಪಿಕೊಂಡನು.

ಹೀಗೆ ಕೇಡುಂಟು ಮಾಡುವ ವಿಷದ ಬಳ್ಳಿಯನ್ನು ತಬ್ಬಿಕೊಂಡಂತೆ, ತಾನು ಅಪ್ಪಿಕೊಂಡ ನಲ್ಲಳ ಮೃದುವಾದ ತಾವರೆಯ ದಂಟಿನಂತೆ ಲಲಿತವಾಗಿರುವ ತೋಳುಗಳೆಂಬ ಹಗ್ಗಗಳೇ ಯಮನ ಪಾಶವಾಗಲು.

ಬಿಗಿದಮರ್ದಿರ್ದತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೊ
ಯ್ಯಗೆ ನಗೆಗಣ್ಗಳಾಲಿ ಮುಗುವ್ದಿಂತಿರೆ ಮುಟ್ಟರೆ ಸುಯ್ಯದಂಗೆ ಮೆ
ಲ್ಲಗೆ ಮಱಸೊಂದಿ ದಂದದೊಳೆ ಜೋಲ್ದ ನಿಜೇಶನನಾ ಲತಾಂಗಿ ತೊ
ಟ್ಟಗೆ ಕೊಳೆ ನೋಡಿ ಕೆಟ್ಟಿನಿನಿಯಂ ಮಱಸೊಂದಿನೋ ಬೞಲ್ದನೋ||

ಬಿಗಿಯಾಗಿ ಸೇರಿಕೊಂಡಿದ್ದ (ಪಾಂಡುವಿನ) ತೋಳು ಸಡಿಲವಾಗಲು, ಅವನ ಮುಖವು ಜೋತು ಬೀಳಲು, ನಗುತ್ತಿದ್ದ ಕಣ್ಣುಗಳ ಪಾಪೆಗಳು ನಿಧಾನವಾಗಿ ತನ್ನ ಮುಖದಿಂದ ಹಿಂಜರಿದಿರಲು, ಹಿಂಜರಿದಂತೆ ಮುಚ್ಚಿಕೊಂಡಿರಲು ಉಸಿರಾದ ನಿಂತು ಹೋಗಲು. ನಿಧಾನವಾಗಿ ಮೈಮರೆವನ್ನು ಹೊಂದಿದಹಾಗೆ ಜೋತುಬಿದ್ದ ತನ್ನ ಪತಿಯನ್ನು ಮಾದ್ರಿಯು ಬೇಗನೆ ಕಣ್ಣಲ್ಲಿಯೇ ಪುಟಿಯುವಂತೆ ನೋಡಿ, ನಾನು ಕೆಟ್ಟೆ ಪತಿಯೂ ಮೂರ್ಛೆ ಹೊಂದಿದನೇ ಅಥವಾ ಬಳಲಿದನೋ ಎಂದು ಭಾವಿಸಿ,

ಕತ್ತರಿಸಿ ಹೋದ ಉಸಿರನ್ನು ತಣ್ಣಗಾದ ಮೈಯನ್ನೂ ನೋಡಿ ಅವನು ಸತ್ತುದನ್ನು ತಿಳಿದುಕೊಂಡಳು.

ಈ ಇಡೀ ಸಂದರ್ಭವನ್ನು ಪಂಪ ಅತ್ಯಂತ ಕುಶಲವಾದ ಕಲಾಕೃತಿಯನ್ನಾಗಿ ಪರಿವರ್ತಿಸಿದ್ದಾನೆ. ವ್ಯಾಸರಲ್ಲಿರುವುದು ನಿರೂಪಣೆ. ಪಂಪನದು ಪ್ರತಿಭಾ ಪುನಸ್ಸೃಷ್ಟಿ ವಸಂತಾಗಮನ. ಮಾದ್ರಿಯ ಹೃದಯದಲ್ಲಿ ಸಹಜವಾಗಿ ಅರಳಿದ ರತಿ, ಅವಳನ್ನು ಕಂಡ ಗಂಡನಾದ ಪಾಂಡುವು ಪ್ರತಿಕ್ರಿಯಿಸಿದ ಸಹಜ ರೀತಿ, ಇವುಗಳನ್ನೆಲ್ಲ ತನ್ನ ಪ್ರತಿಭೆಯಿಂದ ಪಂಪನು ವರ್ಣರಂಜಿತ ಚಲನಚಿತ್ರದಂತೆ ನಮ್ಮ ಮನಸ್ಸಿನ ಮೇಲೆ ಸುರುಳಿಬಿಚ್ಚುತ್ತಾ ಹೋಗುತ್ತಾನೆ. ಪಾಂಡುವಿನ ದೇಹವನ್ನು ಸುತ್ತಿದ್ದ ಮಾದ್ರಿಯ ಯೋಳುಗಳೆಂಬ ಬಳ್ಳಿಗಳು ಯಮನ ಪಾಶಗಳಾದವು ಎನ್ನುವಾಗ ಮಾಧುರ್ಯವು ಮೃತ್ಯುವಿಗೆ ಎಡೆಕೊಟ್ಟ ರೀತಿಯ ಹೃದಯ ವಿದ್ರಾವಕ ಚಿತ್ರವಿದೆ. ಕಾಮೋದ್ರೇಕದಿಂದ ಬಿರಿಯುತ್ತಿರುವ ಎರಡು ದೇಹಗಳ ಕಾವಿಗೆ, ಅದುವರೆಗೆ ದಟ್ಟೈಸಿದ್ದ ಮುನಿಶಾಪರೂಪಿಯಾದ ಮೃತ್ಯವುದು ಮಂಜಿನಂತೆ ಕರಗಿಹೋಗುತ್ತಾನೆ. ಕಿಂದಮ ಋಷಿಗೆ ಹೇಗೆ ನಾಚಿಕೆ ಕಾಡಿತ್ತೋ ಹಾಗೆಯೇ ಮೃತ್ಯುವಿಗೂ ನಾಚಿಕೆ ಕಾಡಿದ್ದರೆ, ಅದು ಮತ್ತೆ ತನ್ನ ಎಲ್ಲ ಶಕ್ತಿಗಳನ್ನೂ ಸಂಜಯಿಸಿಕೊಂಡು, ನಿಜವಾಗಿಯೂ ನಿರಪರಾಧಿಯೂ, ನಿರಾಯುಧನೂ ಆದ ಪಾಂಡುವಿನ ಮೇಲೆ ಧಾಳಿ ಮಾಡುತ್ತಿರಲು, ಧರ್ಮಕ್ಕೆ ವಿರುದ್ಧವಲ್ಲದ ಕಾಮದಿಂದ ತಪ್ತಳಾದ ಪ್ರಮದೆಯೊಬ್ಬಳನ್ನು ವಿಧವೆಯಾಗಿಯೋ, ತನ್ನ ಲೋಕದ ಅನಾಥ ಪ್ರೇತವಾಗಿಯೇ ಅಲೆಯಲು ಬಿಡುತ್ತಿರಲಿಲ್ಲ. ಆದರೆ ಮೃತ್ಯುವಿಗೆ ನಾಚಿಕೆ ಹೇಸಿಗೆ ಎಲ್ಲಿದೆ? ಕರೆಯಿಸಿಕೊಳ್ಳದೆ ಬರುವ ಅತಿಥಿಯಲ್ಲವೆ, ಅದು?

ಮುಂದೆ ಮಾದ್ರಿಯ ಪ್ರಲಾಪವೂ ಎದೆಯನ್ನು ಕರಗಿಸುವಂಥದು, ಪಂಪನ ಮಾತುಗಳಲ್ಲಿ ಹೇಳುವುದಾದರೆ ವನದೇವತೆಗಳೆಲ್ಲರಿಗೂ ಕರುಣೆಯನ್ನು ಉಕ್ಕಿಸುವಂತದು. ಪಂಪನು ಮೂರೇ ಮೂರು ಕಂಪ ಪದ್ಯಗಳಲ್ಲಿ ಅದನ್ನು ಸಾಧಿಸಿದ್ದಾನೆ:

ತಾಪಸನ ಶಾಪಮೆಂಬುದು
ಪಾಪದ ರೂಪಮಿತು ಮಱುಯದಂತೇಕೆ ಮನಂ |
ಗಾಪಯಿದು ಬಂದು ಮುಟ್ಟದೆ
ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ ||

ನೀನ್ನಿನ್ನ ಸಾವನದನೆನೆ
ಸುನ್ನನೆಯದೆ ನೆರೆದೆನೆಂಬ ಬಗೆಯೊಳ್ ಬಂದೈ |
ನಿನ್ನೊಡನೆಯವಂದು ದಿವದೊಳ್
ನಿನ್ನ ಮನೋರಥಮನರಸ ನೆಱಪದೆ ಮಾಣಂ ||

ಉನ್ನತ ಧವಳಚ್ಛತ್ರ
ಚ್ಛನ್ನ ವಿಯತ್ತಳನನಿಂದುಕುಳ ನಿಳಕನನಿಂ |
ತನ್ನೆಯ ದಿಂದೀ ಪಯಿವಿನೊ
ಳೆನ್ನರಸನನಿಂತು ಬಿದಿಯೆ ತಂಬಿಕ್ಕುವುದೇ ||

ಎಂದರೆ: ಓವನ (ಪ್ರಿಯನೇ), ಋಷಿ ಶಾಪವೆನ್ನುವುದು ಮೂರ್ತಿಮತ್ತಾದ ಪಾಪ. (ಅವನ್ನು) ತಿಳಿದೂ ತಿಳಿಯದವನಂತೆ, ಮನಸ್ಸಿನ ಸಂಯಮವನ್ನು ಮೀರಿ ಪಾಪಿಷ್ಠಳಾದ ನನ್ನ ಮೈಯನ್ನು ಬಂದು ಏಕೆ ಮುಟ್ಟಿದೆ?

ನಿನ್ನ ಸಾವನ್ನು ಸ್ವಲ್ಪವೂ ನೆನೆಯದೆ ನಿನ್ನನ್ನು ಸಂಭೋಗಿಸುತ್ತೇನೆ ಎಂಬ ಮನಸ್ಸಿನಿಂದ ಬಂದಿದ್ದೀಯೆ. (ಆದ್ದರಿಂದ) ನಿನ್ನ ಜೊತೆಯಲ್ಲಿ ಬಂದು ಸ್ವರ್ಗದಲ್ಲಿ ನಿನ್ನ ಆಸೆಯನ್ನು ಪೂರೈಸದೆ ಬಿಡುವುದಿಲ್ಲ.

ವಿಧಿಯೇ, ಎತ್ತರವಾದ ಬಿಳಿಯ ಕೊಡೆಯಿಂದ ಮುಟ್ಟಿದ ಆಕಾಶವನ್ನುಟ್ಟು ಎಂದರೆ ದೊರೆಯಾದ, ಚಂದ್ರವಂಶಕ್ಕೆ ಸೇರಿದ ಶ್ರೇಷ್ಠವಾದ ಈತನನ್ನು ಹೀಗೆ ಈ ಕಾಡಿನಲ್ಲಿ ತಂದು ಎಸೆಯಬಹುದೆ?

ಮಾದ್ರಿಯು ಹೀಗೆ ಪ್ರಾಲಾಪಿಸುವ ಸದ್ದನ್ನು ಕೇಳಿದ ಕುಂತಿಯು ಏನೋ ದೊಡ್ಡ ಅನಾಹುತವಾಗಿದೆ ಎಂದು ಊಹಿಸಿದಳು.

ದೆಸೆಯೊಳ್ ಭೂಭುಜನೋ |
ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಂ ||
ತಾದೆಸೆಯೊಳ್ ಭೂಪತಿಗೇ
ನಾದುದೊಪೇೞ್ ಬಿದಿಯೆ ಕೆಟ್ಟೆನೞಿದೆನೆನುತ್ತುಂ ||

ಬೞುಯನೆ ಮಕ್ಕಳ್ ಭೋರ್ಗರೆ
ಗಮಿತುಂ ಪೆೞ ಪೆೞಗನಂತೆ ಪಂತರೆ ಮೂಡಿಬಿ |
ಟ್ಟೆೞಲೆ ನಸುನಡುಗೆ ಕಣ್ಣೀರ್
ಗೞಗೞನೊರ್ಮೊದಲೆ ಸುರಿಯೆ ಪರಿತಂದಾಗಳ್ ||

ಯಾವ ದಿಕ್ಕಿನಲ್ಲಿ ರಾಜನು ಹೋದನೋ ಆ ದಿಕ್ಕಿನಲ್ಲಿ ಮಾದ್ರಿಯೂ ಯೋದಳು. ಆ ದಿಕ್ಕಿನಿಂದಲೇ ಮಾದ್ರಿಯ ಅಳುವ ಧ್ವನಿ ಕೇಳಿಬರುತ್ತಿದೆ. ರಾಜನಿಗೆ ಏನಾಯಿತೋ, ಹೇಳು, ವಿಧಿಯೆ ಕೆಟ್ಟೆ ನಾಶಳಾದೆ ಎಂದು (ಕುಂತಿಯು ದುಃಖಿಸಿದಳು)

(ಇವಳ) ಹಿಂದೆ ಹಿಂದೆಯೇ ಮಕ್ಕಳು ಭೋರೆಂದು ಶಬ್ದಮಾಡಿ ಅಳುತ್ತಾ ಬೆನ್ನ ಹಿಂದೆಯೇ ಓಡಿಬರಲು ತುರುಬು ಬಿಚ್ಚಿಹೋಗಿ ಕೆಳಕ್ಕೆ ಬಾಗಿರಲು, ತಾಯಿ ನಡುಗುತ್ತಿರಲು, ಕಣ್ಣೀರು ಗಳಗಳನೆ ಸುರಿಯುತ್ತಿರಲು ಓಡಿ ಬಂದಾಗ,

ತನ್ನ ಪ್ರಿಯನ ಕಳೇಬರವನ್ನು ಅಪ್ಪಿಕೊಂಡು ತನ್ನ ಸಾವನ್ನು ನಿಶ್ಚಯಿಸಿಕೊಂಡು ಕಲ್ಲನ್ನು ಉಜ್ಜಿಕೊಳ್ಳುತ್ತಿದ್ದ (ಅದು ಅಂದಿನ ಪದ್ಧತಿಯೆಂದು ತೋರುತ್ತದೆ) ಮಾದ್ರಿಯನ್ನು ಕಂಡು ವಿಶೇಷವಾಗಿ ದುಃಖಿಸುತ್ತಾಳೆ ಕುಂತಿ.

ಮೇಲಿನ ಕ್ರಿಯೆಗಳಲ್ಲಿ ಸಹಜತೆಯನ್ನು ಸಾಧಿಸಿರುವ ರೀತಿಯನ್ನು ಗಮನಿಸಿ ಅಳುವಿನ ಧ್ವನಿಯನ್ನು ಕೇಳಿದ ಕೂಡಲೇ ಕುಂತಿಯ ಮನಸ್ಸು ಹೀಗೆ ಯೋಚಿಸುವ ರೀತಿ. ಅದು ತರ್ಕದಿಂದ ರಾಜನಿಗೆ ಒದಗಿರಬಹುದಾದ ಸ್ಥಿತಿಯನ್ನು ನಿರ್ಣಯಿಸುವ ವಿಧಾನ. ಈ ಎಲ್ಲವನ್ನೂ ಅತ್ಯಂತ ಸಂಕ್ಷೇಪವಾಗಿ ನಿರೂಪಿಸುವ ಪಂಪನ ಶೈಲಿ ಎಲ್ಲವೂ ಓದುಗರ ಮನಸ್ಸನ್ನು ತುಂಬುತ್ತದೆ.

ಮಾದ್ರಿಯು ಆ ಸ್ಥಿತಿಯನ್ನು ಕಂಡು ಕುಂತಿ ನೆಲದಲ್ಲಿ ಬಿದ್ದು ಬಹಳವಾಗಿ ಅತ್ತು

ಅಡವಿಯೊಳೆನ್ನುಮನೇನ್ನೀ
ನಡಪಿದ ಶಿಶುಗಳುಮನಿರಿಸಿ ನೀಂ ಪೇೞಿದೆ ಪೋ |
ದೊಡಮೇನೊ ನಿನ್ನ ಬಱಿಯನೆ
ನಡೆತರ್ಪೆಂ ನಿನ್ನನರಸಬಿಸುಟೆಂತಿರ್ಪಂ ||

ನನ್ನನ್ನೂ, ನಾನು ಸಾಕಿದ ಈ ಮಕ್ಕಳನ್ನೂ ಕಾಡಿನಲ್ಲಿ ಬಿಟ್ಟು ನೀನು ಹೇಳದ ಹೋದರೆ ತಾನೆ ಏನು? ನಿನ್ನ ಹಿಂದುಗಡೆಯೇ ಬರುತ್ತೇನೆ. ನಿನ್ನನ್ನು ಬಿಟ್ಟು ಹೀಗೆ ಇರುತ್ತೇನೆ?

ಎಂದು ಮಾದ್ರಿಗೆ ಹೇಳಿ “ನೀನು ಈ ಮಕ್ಕಳನ್ನು ಸಾಕಿಕೊಂಡಿರು. ನನ್ನ ಪ್ರಿಯನನ್ನು ನನಗೆ ಒಪ್ಪಿಸು. ಆತನಾಡಿದುದನ್ನೇ ನಾನು ಆಗುತ್ತೇನೆ” ಎಂದಳು. ಆ ಮಾದ್ರಿ ಕೇಳುವುದು ಕರುಳನ್ನು ಕರಗಿಸುವ ಬೇಡಿಕೆ:

ಎನಗಿಂದಿನೊಂದು ಸೂೞುಮ
ನಿನಿಯಂ ದಯೆಗೆಯ್ದ ನೆನ್ನ ಸೂಯಂ ನಿನಗೂ |
ನೆನಿತಾದೆಂಡಮೀನೆನೆ
ತ್ತನಯರ್ ಕೆಯ್ಸೆದೆ ಪಲಂಬದಿರ್ ಪೆೞಪೆಲುವಂ ||

ಈ ದಿನದ ಒಂದು ಸರದಿಯನ್ನು ನನಗೆ ಪತಿಯು ಕರುಣಿಸಿಕೊಟ್ಟಿದ್ದನು. ನನ್ನ ಸರದಿಯನ್ನು ನಾನು ಎಷ್ಟಾದರೂ ನಿನಗೆ ಕೊಡುತ್ತೇನೆಯೇ? ಇಲ್ಲ. ನನ್ನ ಮಕ್ಕಳನ್ನು ನಿನಗೆ ನ್ಯಾಸವಾಗಿ ಕೊಟ್ಟಿದ್ದೇನೆ. (ನಿನ್ನ ಕೈಯಲ್ಲಿ ಇರಿಸಿದ್ದೇನೆ) ಬೇರೆ ಬೇರೆ ರೀತಿಯಾಗಿ ಹಲುಬಬೇಡ.

ಹೀಗೆ ಅವರು….. ತಪೋವನದ ಮುನಿಜರೂ ವನದೇವತೆಯರೂ ಅಲ್ಲಿಗೆ ಬಂದರು. ಬಂದವರು ಅವಳ ಸಾಹಸವನ್ನು ಹೊಗಳಿದರು. ದುಃಖಾಕ್ರಾಂತಳಾಗಿದ್ದ ಕುಂತಿಗೆ ತಪಸ್ಸಿನಲ್ಲಿ ವೃದ್ಧರಾದವರು ಸಂತೈಕೆಯ ಮಾತುಗಳನ್ನು ಹೇಳಿದರು. ಈ ಮುಂದಿನ ಪದ್ಯ ತುಂಬ ಸೊಗಸಾದ್ದು. ಅದರಲ್ಲಿ ಸರ್ವರಿಗೂ ಎಲ್ಲ ಕಾಲಕ್ಕೂ ಅನ್ವಯಿಸುವ, ಎಲ್ಲರಿಗೂ ತಿಳಿದೇ ಇರುವ ತತ್ವವು ಅಡಕವಾಗಿದೆ. ಆ ಕಾರಣಕ್ಕಲ್ಲದೆ ಚಿಕ್ಕ ಚಿಕ್ಕ ವಾಕ್ಯಗಳಿಂದ, ದೇಸೀ ಶೈಲಿಯಲ್ಲಿ ಓದುಗರ ಮನಸ್ಸಿನಲ್ಲಿ ನಿಲ್ಲುವಂತೆ ವಿಷಯವನ್ನು ನಿರೂಪಿಸಿ ಪಂಪನು ಕಾವ್ಯ ಕೌಶಲವನ್ನು ತೋರಿಸಿದ್ದಾನೆ:

ಕೞುದವರ್ಗೞ್ಮುದಱ್ತೊಡವರೇಯ್ವೊಡಮಂತವರಿಂ ಬಲುಕ್ಸೆತಾ |
ಮುೞುವೊಡಮೇ ಱೆರಂತವರಣಂ ತಮಗಂ ಬರ್ದುಕಿಲ್ಲ ಧರ್ಮಮಂ ||
ಗೞುಯಿಸಿಕೊಳ್ವದೊಂದೆ ಚರ್ದುರಿಂತುಟು ಸಂಸ್ಕೃತಿ ಧರ್ಮಮೇಕೆ ಬಾ |
ಯಾೞುವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ?

ಸಾಯುವವರಿಗೆ ಅಳಬೇಕು, ಅತ್ತರೆ ಅವರು ಏಳುವುದಾದರೆ, (ಸಾಯುವವರಿಗೆ ಅಳಬೇಕು) ಅವರ ಅನಂತರ ನಾವು ಉಳಿದುಕೊಳ್ಳುವುದಾದರೆ, ಹಾಗೆ ಸತ್ತವರು ಏಳುವುದಿಲ್ಲ. ಹೆಚ್ಚಿನದಾಗಿ, ನಮಗೂ ಬಾಳುವೆಯಿಲ್ಲ. ಧರ್ಮವನ್ನು ಗಳಿಸಿಕೊಳ್ಳುವುದು ಒಂದು ಜಾಣತನ. ಹೀಗುಂಟು ಸಂಸಾರದ-ಎಂದರೆ ಹುಟ್ಟು-ಸಾವುಗಳ ಧರ್ಮ. (ಹೀಗಿರುವಾಗ) ಪ್ರಲಾಪಿಸುವುದು ಏಕೆ? ಗೋಳಾಡುವುದು ಏಕೆ? ನೋವನ್ನು ಅನುಭವಿಸುವುದು ಏಕೆ?

ಅಷ್ಟೆ ಅಲ್ಲ ಅತಿಯಾಗಿ ದುಃಖಿಸುವುದು ಸತ್ತವರಿಗೂ ಶ್ರೇಯಸ್ಸನ್ನು ಉಂಟುಮಾಡುವಂಥದಲ್ಲ ಎನ್ನುತ್ತಾರೆ ಋಷಿಗಳು:

ಬಿಡನೞಲ್ವ ಬಂಧುಜನದೊ
ೞ್ಮುಡಿಯದ ಕಣ್ಣೀರ ಪೂರಮಾ ಪ್ರೇತಮ ನೋ |
ಗಡಿಸದೆ ಸುಡುವುದು ಗಡಮಿ
ನ್ನುಡುಸುವುದೀ ಶೋಕಮಂ ಸರೋಜದಳಾಕ್ಷೀ ||

ಒಂದೇ ಸಮನೆ ದುಃಖಪಡುವ ಬಂಧುಜನದ ಸತತವಾದ ಕಣ್ಣೀರಿನ ಪ್ರಮಾದವು ಮೃತವಾದುದನ್ನು ಅಸಹ್ಯಪಟ್ಟುಕೊಳ್ಳದೆ ಸುಡುತ್ತದೆಯಲ್ಲವೆ? ಎಂದರೆ ಬಾಂಧವರ ದುಃಖವೆಂಬ ಅಗ್ನಿಯೇ ಪ್ರೇತವನ್ನು ಸುಡುತ್ತದೆ. ಕಪ್ಪುವಂಶದಲ್ಲಿಯೂ (೮:೮೬) ಇದೇ ಮಾತಿದೆ ಎಂಬುದನ್ನು ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ತೋರಿಸಿಕೊಟ್ಟಿದ್ದಾರೆ. “ಸ್ವಜನಾಶ್ರು ಕಿಲಾತಿ ಸಂತಸಂ ದಹತಿ ಪ್ರೇತಮಿತಿ ಪ್ರಚಕ್ಷತೆ” ಸ್ವಜನರ ಕಣ್ಣೀರಿನ ಸಂತತ ಪ್ರವಾಹವು ಮೃತ ದೇಹವನ್ನು ಸುಡುತ್ತದೆ.”

ಅಲ್ಲದೆ ಋಷಿಗಳು ಮುಂದುವರಿದು ಕುಂತಿಯನ್ನು ಕುರಿತು ಹೇಳಿದರು: “ಹೀಗೆ ನೀನು ಸಂಸಾರದ ಸ್ಥಿತಿಯನ್ನು ಅರಿಯದ ಅಜ್ಞಾನಿಗಳಂತೆ ಪ್ರಲಾಪಿಸುತ್ತಿದ್ದರೆ ಈ ಕೂಸುಗಳು ಮನಸ್ಸು ಕುಗ್ಗಿ, ಧೈರ್ಯವು ಕಡಿಮೆಯಾಗಿ ಕೆಡುತ್ತಾರೆ.” ಹೀಗೆ ಹೇಳಿ ಅವರು ಕುಂತಿಯನ್ನು ಮಕ್ಕಳನ್ನು ಕರೆದುಕೊಂಡು ಹಸ್ತಿನಾಪುರಕ್ಕೆ ಹೋಗಿ ಅವರನ್ನು ಭೀಷ್ಮ ಧೃತರಾಷ್ಟ್ರಾದಿಗಳಿಗೆ ಒಪ್ಪಿಸಿದರು.

ಮಹಾಕವಿ ಪಂಪನಲ್ಲಿ ಪಾಂಡುಪ್ರಸಂಗವು ಹೀಗೆ ಪರಿಸಮಾಪ್ತಿ ಹೊಂದುತ್ತದೆ. ವ್ಯಾಸ ಭಾರತದ ಮಹಾರಣ್ಯದ ಒಂದು ಪುಟ್ಟ ಭಾಗವನ್ನು ಪಂಪನು ಒಂದು ಸುಂದರವಾದ ಉದ್ಯಾನವನ್ನಾಗಿ ಮರುಸೃಷ್ಟಿ ಮಾಡಿದ್ದಾನೆ.

ಕನ್ನಡದಲ್ಲಿ ಇನ್ನೊಂದು ಉದ್ಯಾನವನ್ನು ಸೃಷ್ಟಿಸಿರುವ ಕೀರ್ತಿ ಮತ್ತೊಬ್ಬ ಮಹಾಕವಿಗೆ ಮೀಸಲಾಗಿದೆ. ಕಥಾಕುತೂಹಲಿಯಾಗಿ ನಿರೂಪಣಾ ವೇಗದಲ್ಲಿ ಕುಮಾರವ್ಯಾಸ ಪ್ರತಿಭೆಯ ತಂಗುದಾಣಗಳಲ್ಲಿ ಶೃಂಗಾರವೂ ಸೇರಿದೆ. ಆದ್ದರಿಂದ ಪಾಂಡುವಿನ ಪ್ರಸಂಗವು ಸಹಜವಾಗಿಯೇ ಕುಮಾರವ್ಯಾಸನ ಆಸಕ್ತಿಯನ್ನು ಕೆರಳಿಸಿದೆ.

ಗಾಂಧಾರಿಯಲ್ಲಿ ಗರ್ಭವನ್ನು ನಿಲ್ಲಿಸಿ ವ್ಯಾಸರು ತಮ್ಮ ಆಶ್ಯಮಕ್ಕೆ ತೆರಳಿದರು. ಇತ್ತು ಪಾಂಡುನೃಪನ ಓಲಗಕ್ಕೆ ಬೇಟೆಗಾರರು ಬಂದು, ತಾವು ಮೃಗಗಳನ್ನು ಒಟ್ಟುಗೂಡಿಸಿರುವುದಾಗಿ ಹೇಳಿ, ರಾಜನನ್ನು ಬೇಟೆಗೆ ಆಹ್ವಾನಿಸಿ ಹೋದರು. ಕುಮಾರವ್ಯಾಸನಿಗೆ ಬೇಟೆಯನ್ನು ಕಂಡರಾಗದು! ಪಂಪನ ಅನಂತರ ಸುಮಾರು ಐದುನೂರು ವರ್ಷಗಳು ಉರುಳಿ, ಜನರಿಗೆ ನೀತಿ ನಿಯಮಗಳನ್ನು ತಿಳಿಸಬೇಕಾದ ಭಾರವನ್ನು ಸಮಾಜವು ಕವಿಗಳ ಮೇಲೂ ಹೇರಿದೆ! ಅಥವಾ ಕವಿಗಳೇ ಸ್ವಂತ ಇಚ್ಛೆಯಿಂದ ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ! ಜೈನನಾಗಿದ್ದು ಸ್ವತಃ ಅಹಿಂಸಾ ವ್ರತದಲ್ಲಿ ಗೌರವವಿದ್ದ ಪಂಪನು ಬೇಟೆಯನ್ನು ಇಟ್ಟು ಕಟುವಾಗಿ ಟೀಕಿಸಿಲ್ಲ. ಬ್ರಾಹ್ಮಣನಾದ ನಾರಣಪ್ಪನಿಗೆ ಬೇಟೆಯಲ್ಲಿ ಹಿಂಸೆ ಅಡಗಿದೆ ಎಂಬ ಕಾರಣಕ್ಕಿಂತ ಹೆಚ್ಚಾಗಿ ಅದು ಸಪ್ತವ್ಯಸನಗಳಲ್ಲಿ ಒಂದು, ರಾಜರನ್ನು ಹಾಳುಮಾಡುವಂಥದು ಎಂಬ ಕೋಪವೂ ಸೇರಿದೆ. ಜೊತೆಗೆ ತಾನು ಕಥೆ ಹೇಳುತ್ತಿರುವುದು ಮನುಷ್ಯರಿಗಲ್ಲ, ಜನಮೇಜಯ ರಾಜನಿಗೆ ಎಂಬ ಭ್ರಾಂತಿ ಅವನ್ನು ಸದಾ ಕಾಡುತ್ತಿದೆ. ಜನಮೇಜಯನ ಅಪ್ಪ ಪರೀಕ್ಷಿದ್ರಾಜನು ಅಕಾಲದಲ್ಲಿ ಸತ್ತದ್ದು ಬೇಟೆಯಾಡಲು ಹೋದಾಗ ತಾನೆ? ಆದ್ದರಿಂದ ಜನಮೇಜಯನನ್ನೂ ಅವರ ಅಪ್ಪನನ್ನು ಪಾಂಡುವನ್ನೂ ರಾಜಸಂತತಿಯನ್ನು ಒಟ್ಟಿಗೆ ಬಯ್ಯಲು ಈ ಅವಕಾಶವನ್ನು ಕುಮಾರವ್ಯಾಸನು ಕಳೆದುಕೊಳ್ಳುವುದಿಲ್ಲ:

ಏನನೆಂಬೆನು ನಿಮ್ಮನು ಪಿಳಾ
ಚೋನ್ಯ…..
ನಾನು ಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ |
ಕಾನನದೊಳಾಯತದ ಶರಸಂ
ಧಾನಕಲಿತ ಶರಾಸನನು ಮೃಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ ||

ರಾಜರನ್ನೆಲ್ಲ ಪಿಶಾಚಿಗಳು ಎಂದು ಬೈದಿದ್ದಾನೆ ಈ ಪದ್ಯದಲ್ಲಿ ಕುಮಾರವ್ಯಾಸ ವ್ಯಸನಾನು ಬಂದ್ರದ ಬೇಗೆ ಕೊಂಡೊಯ್ದುದು ಮಹೀಪತಿಯ. ಪಾಂಡು ಕಾಡಿಗೆ ಹೋದದ್ದು ಏಕೆ? ಬೇಟೆಯೆಂಬ ದುಶ್ಯಬ್ದದಿಂದ. ಅಲ್ಲದೆ ಬಾಣ ಪ್ರಯೋಗದಲ್ಲಿ ಬಲ್ಲಿದನಾದ ಅವನು ಮೃಗಗಳ ನಾಶವೆಂಬ ಪ್ರವಾಹ ಅಥವಾ ಉತ್ಸಾಹದಲ್ಲಿ ಓಲಾಡಿದ! ಜನಮೇಜಯನ ಅಪ್ಪನಿಗಾದ ವಿಪತ್ತು ಪಂಡುವಿಗೂ ಬಂದಿತೆಂದೂ, ಅವರ ಸ್ವರೂಪ ಏನೆಂಬುದನ್ನೂ ಕವಿ ಒಂದೇ ಪದ್ಯದಲ್ಲಿ ಹೇಳಿದ್ದಾನೆ:

ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಹಾವಿನಮೊಬ್ಬ ಮುನಿ ಮೃಗ ಮಿಥುನರೂಪದಲಿ |
ನಿಂದು ರಮಿಸುತ್ತಿರೆ ಮೃಗಧ್ವಯ
ವೆಂದು ಹೂಡಿದನುಂಬನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ

ಒಂದು ಸ್ಥಳದಲ್ಲಿ ಒಬ್ಬ ಋಷಿ ಎರಡು ಜಿಂಕೆಗಳ್ ರೂಪದಲ್ಲಿ ನಿಂದು ರಮಿಸುತ್ತಿದ್ದರೆ ಅವು ಎರಡು ಜಿಂಕೆಗಳೆಂದು ಭಾವಿಸಿ ಒಂದೇ ಭಾಣದಲ್ಲಿ ಅವರನ್ನು ಪಾಂಡು ಇರಿದನು. ಅವರು ನರರಾಗಿ ಒರಲಿದರು.

ಹಾ ಮಹಾದೇವಾಯೆನುತ್ತ
ನಾಮ ಮುನಿ ತೆತ್ತಿಸಿದ ಬೆನ್ನಿ
ತೋಮರಸ ಮರುಮೊನೆಯ ಕಿಬ್ಬನೇರಿನ ನಿಜಾಂಗನೆಯ
ಕಾಮಿನಿಯೆ ಕಡುನೊಂದಲಾ ಮುಖ
ತಾಮರಸವನು ತೋರು ತೋರೆನು
ತಾ ಮುನೀಶ್ವರನಪ್ಪಿ ಮುಂಡಾಡಿದನು ನಿಜಸತಿಯ ||

ಎಂದರೆ: (ಪ್ರಖ್ಯಾತನಾದ ಆ ಮುನಿಯು “ಹಾ ಮಹಾದೇವ” ಎನ್ನುತ್ತ (ನರಳಿದ). ಈಟಿಯು (ಇಲ್ಲಿ, ಬಾಣದ ತುದಿಯ) ಬೆನ್ನಿನಲ್ಲಿ ನಾಟಿ, ಋಷಿ ಸತಿಯ ಕಿಬೊಟ್ಟೆಯಲ್ಲಿ ಮರುಮೊನೆಗೊಂಡಿದೆ, ಎಂದರೆ ಅವಳ ಹೊಟ್ಟೆಯನ್ನು ಹೊಕ್ಕು ಹೊರ ಬಂದ. (ಅಂತಹ ಸಂದರ್ಭದಲ್ಲಿ ಋಷಿಯು) ತನ್ನ ಸತಿಯನ್ನು ಕುರಿತು…. ನೋಡಲಾ, ನಿನ್ನ ತಾವರೆಯಂತಹ ಮುಖವನ್ನು ತೋರು, ತೋರು ಎನ್ನುತ್ತಾ ಆಕೆಯನ್ನು ಅಪ್ಪಿ ಮುದ್ದಾಡಿದನು.

ಕಾತರಿಪ ಮುನಿಮಿಥುನವನು ನಿ
ನ್ನಾತ ಕಂಡನು ಬಿಲ್ಲಕೊದ್ದಿನ
ಲಾತ ಕದವಿನ ಮಕುಟದೊಲಪಿನ ಬೆರಳ ಬಿರುದನಿ[1]ಯು |
ಬೀತ ಸೊಂಪಿನ ತಳಿತ ಬೆರಗಿನ
ಪಾತಕದ ಪರುಡವದ ಮುಖದ
ಹೀತಳಾಧಿಪ ಸುಯ್ದು ನೊಂದನು ಶಿವಶಿವಾಯೆನುತ ||

ಅಂತಹ ಪರಿಸ್ಥಿತಿಗೆ ಸಿಕ್ಕಿಕೊಂಡ ಪಾಂಡು ಇದ್ದ ರೀತಿಯನ್ನು ಅವನ ಹಾವಭಾವಗಳನ್ನು ಕವಿ ಸೊಗಸಾಗಿ ವರ್ಣಿಸಿದ್ದಾನೆ.

ಕಥೆ ಹೇಳುತ್ತಿರುವವನು ವೈಶಂಪಾಯನಮುನಿ, ಹೇಳುತ್ತಿರುವುದು ಜನಮೇಜಯ ರಾಯನಿಗೆ. ಇವನಾದರೂ ಪಾಂಡಿವಿನ ವಂಶದವನೇ. ಆದ್ದರಿಂದ ನಿನ್ನಾತ, ನಿನ್ನವನೂ ಕಾತರಿಪ ಮುನಿಮಿಥುನವನ್ನು ಕಂಡು ಎನ್ನುತ್ತಾನೆ. ಬಿಲ್ಲಿನ ತುದಿಯ ಮೇಲೆ ಒರಗಿಸಿದ ಕೆನ್ನೆ. ತಲೆ ತೂಗುತ್ತಿರುವುದರಿಂದ ಅದರ ಜೊತೆಯಲ್ಲೇ ತೂಗುತ್ತಿರುವ ಕಿರಿಟ. ಜೊತೆಗೆ ಛೆ, ಎಂಥ ಕೆಲಸ ಮಾಡಿಬಿಟ್ಟೆ ಎಂದು ಬೆರಳಿನಿಂದ ಹೊರಡಿಸುತ್ತಿರುವ ಬಿರುದನಿ, ಎಂದರೆ ಕೈಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಒದರಿದಾಗ ಬೆರಳುಗಳಿಂದ ಹೊಮ್ಮುತ್ತಿರುವ ಬಿರುಸಾದ ಧ್ವನಿ.ಜ ತೆಗೆ ಅವನ ವ್ಯಕ್ತಿತ್ವದ ಸೊಂಪು ಕರಗಿಹೋಯಿತು. ಆಶ್ಚರ್ಯವು ಚಿಗುರಿತು. ಪಾತಕದ ಭಾವನೆ ಹೆಚ್ಚಾಯಿತು. ಅದು ಮುಖದ ಮೇಲೆ ಎದ್ದು ಕಂಡಿತು. ಈ ಬಗೆಬಗೆಯ ಭಾವನೆಗಳನ್ನು ತಾಳಿದ ರಾಜನು ನಿಟ್ಟುಸಿರುಬಿಡುತ್ತಾ ನೊಂದು ಶಿವ ಶಿವಾ ಎಂದ. ತನಗೆ ತಾನೇ ಹೀಗೆ ಹೇಳಿಕೊಂಡ.

ಅರಿಯೆ ನಾನಿನವರೆಂದು ಮೃಗವೆಂ
ದಿರಿದೊಡಿದು ಮತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡದೆ ಕೆಂಡವಾದುದಲ |
ಸರವಿಯೇ ಹಾವಾದುದೇನೆಂ
ದರಿಯೆನೀ ಕೌತುಕವ ನುಳಿ ಮೈ
ಮರೆಸಿಕೊಂದುವೆ ವಿಧಿಯನುತ ಹರಿತಂದತಾ ಸ್ಥಳಕ್ಕೆ ||

[1] “ಬೆರಳ ಬಿರುದನಿ” ಎಂಬುದಕ್ಕೆ ವಿವರಣೆಯೂ ದೊರೆತಿರಲಿಲ್ಲ. ಇದರ ವಿವರಣೆಗೆ ನಾನು ಪ್ರೊ. ಅ.ರಾ. ಮಿತ್ರ ಅವರಿಗೆ ಕೃತಜ್ಞನಾಗಿದ್ದೇನೆ. ತಮಗೆ ಅದು ಹೊಳೆದ ರೀತಿಯನ್ನು ಕುಮಾರವ್ಯಾಸ ಭಾರತವನ್ನು ವ್ಯಾಖ್ಯಾನಿಸುತ್ತಾ ನಡುವೆ ಅವರು, ಅಭಿನಯದ ಸಮೇತ ವಿವರಿಸಿದರು. “ಛೆ, ಇದೇನು” ಬೆರಳ ಬಿರುದನಿ ಎಂಬುದು ಅರ್ಥವಾಗುತ್ತಿಲ್ಲವಲ್ಲ ಎಂದು ಅವರ ಕೈಯನ್ನು ಒದರಿಸಿದಂತೆ. ಆಗ ಹೊಮ್ಮಿತ್ತು ‘ಬಿರುದನಿ’ ಆಗ ಹೊಳೆಯಿತೇ ಅರ್ಥ! ಈ ವಿವರಣೆಯ ಕೀರ್ತಿಯೆಲ್ಲಾ ಸಲ್ಲಬೇಕಾದದ್ದು ಅ.ರಾ. ಮಿತ್ರ ರವರಿಗೆ.