ಮಹಾಭಾರತದ ಪಾಂಡು ಮಹಾರಾಜ ನನ್ನಲ್ಲಿ ಬಹುಕಾಲದಿಂದಲೂ ಕನಿಕರವನ್ನು ಮೂಡಿಸುತ್ತಲೇ ಇರುವ ಒಬ್ಬ ವ್ಯಕ್ತಿ ಏನೂ ಅಪರಾಧ ಮಾಡದೆ; ಅಥವಾ ಏನನ್ನಾದರೂ ಮಾಡಿದ್ದರೂ ಅದು ತಪ್ಪು ಎಂದು ತಿಳಿಯಲು ಯಾವುದೇ ಅವಕಾಶವನ್ನು ಪಡೆಯದೆ, ಮನುಷ್ಯ ಸಹಜವಾದ ಆಕರ್ಷಣೆಗೆ ಒಳಗಾಗಿ ತನ್ನ ಜೀವವನ್ನೇ ತೆತ್ತ ವ್ಯಕ್ತಿ ಅವನು ಇಬ್ಬರು ಸತಿಯರಿಗೆ ಅವನಿಂದಾಗಿ ವೈಧವ್ಯ ಬಂತು. ಐದು ಜನ ಮಕ್ಕಳು ತಂದೆಯನ್ನು ಕಳೆದುಕೊಂಡರು. ಓದುಗರಿಂದ ನಿರಂತರವಾಗಿ ಕನಿಕರವನ್ನು ಬೇಡುತ್ತಲೇ ಇರುವ ಪಾಂಡುವಿನ ಬದುಕಿನ ಪ್ರಸಂಗವನ್ನು ವ್ಯಾಸರು, ಅವನ ಅನಂತರ ಪಂಪ ಕುಮಾರವ್ಯಾಸರು ಹೇಗೆ ನೋಡಿದ್ದಾರೆ ಎಂಬುದನ್ನು ಪರಿಶೀಲಿಸುವುದು ಈ ಲೇಖನದ ಉದ್ದೇಶ.

ನಡೆದದ್ದೇನು ಎಂಬುದನ್ನು ಮೊದಲು ವ್ಯಾಸರ ಮಾತುಗಳಲ್ಲಿ ಹೇಳುತ್ತೇನೆ. ಕುಂತೀಭೋಜನು ಏರ್ಪಡಿಸಿದ್ದ ಸ್ವಯಂವರ ಸಮಾರಂಭವಲ್ಲ ಕುಂಪಿಯು ಪಾಂಡುವನ್ನು ವರಿಸಿದಳು. ಅನಂತರ ಭೀಷ್ಮನು ಮದ್ರದೇಶದ ರಾಜಧಾನಿಗೆ ಹೋಗಿ ಮೂರುಲೋಕಗಳಲ್ಲಿಯೂ ಸುಂದರಿಯೆಂದು ಪ್ರಸಿದ್ಧಳೂ, ಮದ್ರರಾಜನ ಮಗಳೂ, ಭೂಲೋಕದಲ್ಲಿ ಅಸದೃಶ ಸೌಂದರ್ಯವುಳ್ಳವಳೆಂದು ಎಲ್ಲ ರಾಜರುಗಳಲ್ಲಿ ಖ್ಯಾತಿ ಹೊಂದಿದವಳೂ ಆದ ಮಾದ್ರಿಯನ್ನು ಪಾಂಡುವಿಗೋಸ್ಕರವಾಗಿ ವಿಫುಲವಾದ ಧನವನ್ನು ಕೊಟ್ಟು ಕೊಂಡುಕೊಂಡನು. ಆಮೇಲೆ ಭೀಷ್ಮನು ಅವಳನ್ನು ಮಹಾತ್ಮನಾದ ಪಾಂಡುವಿಗೆ ವಿವಾಹ ಮಾಡಿಸಿದನು.

ವಿವಾಹದ ಅನಂತರ ಪಾಂಡುವು ಅನೇಕ ರಾಜರುಗಳ ಮೇಲೆ ದಂಡೆತ್ತಿ ಹೋಗಿ ಅವರನ್ನು ಸೋಲಿಸಿ ಕೀರ್ತಿಯನ್ನು ಸಂಪಾದಿಸಿದನು. ಆಮೇಲೆ ಕಾಡಿನಲ್ಲಿ ಸುತ್ತಾಡಲು ಹೋದನು. ಅವನು “ಎರಡು ಹೆಣ್ಣಾನೆಗಳ ನಡುವೆ ವಿಹರಿಸುವ ಐರಾವತದಂತೆ ಕುಂತೀ ಮತ್ತು ಮಾದ್ರಿಯರೊಡನೆ ಕಾಡಿನಲ್ಲಿ ವಿಹರಿಸುತ್ತಿದ್ದನು. ಹಾಗೆ ಸಂಚರಿಸುತ್ತಿರುವಾಗ ಪಾಂಡುವು ಜಿಂಕೆ, ಆನೆ ಮುಂತಾದ ಪ್ರಾಣಿಗಳಿಗೆ ಆಶ್ರಯವಾದ ದೊಡ್ಡ ಅರಣ್ಯದಲ್ಲಿ ಹಿಂಡಿಗೆ ಅಧಿಪತಿಯಾಗಿದ್ದ ಒಂದು ಜಿಂಕೆ ಸಂಭೋಗಾವಸ್ಥೆಯಲ್ಲಿದ್ದುದನ್ನು ನೋಡಿದನು. ಕೂಡಲೇ ಅವನು ಚಿನ್ನದ ಗರಿಗಳಿಂದ ಕೂಡಿದ್ದ, ಬಹಳವೇಗವಾಗಿ ಚಲಿಸುವ ತೀಕ್ಷ್ಣವಾದ ಐದು ಬಾಣಗಳಿಂದ ಹೊಡೆದನು. ವಾಸ್ತವವಾಗಿ ಇವನ ಬಾಣಕ್ಕೆ ತುತ್ತಾದದ್ದು ನಿಜವಾದ ಜಿಂಕೆಯಲ್ಲ, ಜಿಂಕೆಯ ರೂಪದಲ್ಲಿದ್ದ ಋಷಿಪುತ್ರ. ಅವನು ತನ್ನ ಹೆಂಡತಿಗೂ ಜಿಂಕೆಯ ರೂಪವನ್ನು ಕೊಟ್ಟು ಅವಳೊಡನೆ ರಮಿಸುತ್ತಿದ್ದ. ಆಗ ಆ (ಹೆಣ್ಣು ಜಿಂಕೆಯೊಡನೆ) ಕೂಡಿಕೊಂಡಿದ್ದ ಆ ಜಿಂಕೆ ಮನುಷ್ಯರಂತೆ ಮಾತನಾಡುತ್ತಾ ಆಕ್ಷಣದಲ್ಲಿಯೇ ನೆಲದ ಮೇಲೆ ಬಿದ್ದು ಕುಗ್ಗಿಹೋದ ಇಂದ್ರಿಯಗಳುಳ್ಳದಾಗಿ ವಿಲಪಿಸತೊಡಗಿತು. ಅದು ಹೀಗೆ ಹೇಳಿತು:

“ಕಾಮಕ್ರೋಧಗಳಿಂದ ಕೂಡಿದವರಾಗಿ ಬುದ್ದಿಗೆಟ್ಟು ಪಾಪಕಾರ್ಯಗಳಲ್ಲಿಯೂ ತೊಡಗಿರುವ ಮನುಷ್ಯರು ಕೂಡ ಕೊಲೆಪಾತಕ ಕಾರ್ಯಗಳನ್ನು ತ್ಯಜಿಸುತ್ತಾರೆ. ವಿವೇಕವು ವಿಧಿಯನ್ನು ಕಬಳಿಸಲಾರದು. ಆದರೆ ವಿಧಿಯು ವಿವೇಕವನ್ನು ಕಬಳಿಸುತ್ತದೆ. ವಿಧಿಯಿಂದ ಪ್ರಾಪ್ತವಾದ ವಿಷಯಗಳನ್ನು ವಿವೇಕವು ಅರಿಯುವುದಿಲ್ಲ. (ನೀನು) ಯಾವಾಗಲೂ ಧರ್ಮಾತ್ಮರಾದವರ ಶ್ರೇಷ್ಠ ಕುಲದಲ್ಲಿ ಹುಟ್ಟಿದನು. (ಹೀಗಿದ್ದರೂ) ಕಾಮ ಮತ್ತು ಲೋಭಗಳಿಂದ ಆಕ್ರಾಂತನಾಗಿ ವಿವೇಕವನ್ನು ಹೇಗೆ ಕಳೆದುಕೊಂಡೆ?”

ವ್ಯಾಸರ ವಿಚಾರಧಾರೆ ತರ್ಕಬದ್ಧವಾಗಿಲ್ಲ ಎಂಬುದನ್ನು ಹೇಳದೆ ವಿಧಿಯಿಲ್ಲ. ಅವರು ಕಿಂದಮನೆಂಬ ಋಷಿಯ ಬಾಯಲ್ಲಿ ಮೇಲಿನದನ್ನೆಲ್ಲ ಹೇಳಿಸಿದ್ದಾರೆ. ಮೊದಲನೆಯದಾಗಿ ಪಾಂಡುವು ಕೊಲೆಪಾತಕ ಕಾರ್ಯದಲ್ಲಿ ತೊಡಗಿದ್ದಾನೆ ಎಂದು ಹೇಳುವುದು ಸರಿಯೆ? ಅವನು ಕೊಂದಿರುವುದು ಜಿಂಕೆಯನ್ನು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ರಾಣಿಗಳನ್ನು ಕೊಲ್ಲಬಾರದು ಎಂಬ ನಿಯಮ ಆಗ ಜಾರಿಗೆ ಬಂದಿರಲಿಲ್ಲ. ಯಾರೂ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲಬಹುದಾಗಿದ್ದ ಕಾಲ ಅದು. ಹಾಗೆಯೇ ಪಾಂಡುವು ಜಿಂಕೆಯನ್ನು ಕೊಂದಿದ್ದಾನೆ. ಅದರಲ್ಲಿ ಯಾವ ತಪ್ಪು ಕಾಣಿಸುವುದಿಲ್ಲ.

ವ್ಯಾಸರು ಇದ್ದಕ್ಕಿದ್ದಂತೆಯೇ ವಿಧಿವಾದವನ್ನು ತುರುಕಿದ್ದಾರೆ. ಅವೈಚಾರಿಕವು ಭರತಖಂಡದ ಇಂದಿನ ದಾರುಣ ಪರಿಸ್ಥಿತಿಗೆ ಬಹುಮಟ್ಟಿಗೆ ನೇರವಾಗಿ ಕಾರಣವೂ ಆದದ್ದು ವಿಧಿವಾದ. ಇರಲಿ, ಇಲ್ಲಿ ಅದರ ಪ್ರಸ್ತುತ ಏನು? ವಿವೇಕಯುತನಾಗಿ ಮನುಷ್ಯನು ಬಾಳಬೇಕು ಎಂಬುದು ತಪ್ಪತಕ್ಕ ವಿಷಯ. ಆದರೆ ವಿವೇಕವನ್ನು ವಿಧಿ ಕಬಳಿಸುತ್ತದೆ ಎಂಬುದು ಅವಿವೇಕಿ ಯಾದವನು ಮಾತ್ರ ಆಡತಕ್ಕ ಮಾತು. ಏಕೆಂದರೆ ವಿಧಿ ಸರ್ವಶಕ್ತನಾದರೆ ಅದರ ಕೈಯಗೊಂಬೆ ಯಾಗಿರುವ ಪಾಂಡು ಬಾಣ ಪ್ರಯೋಗ ಮಾಡಿದ್ದರಲ್ಲಾಗಲಿ, ಮನುಷ್ಯನಾಗಿದ್ದರೂ ಜಿಂಕೆಯ ರೂಪ ಧರಿಸಿ ಸಂಭೋಗ ಕ್ರಿಯೆಯಲ್ಲಿ ತೊಡಗಿದ್ದ ಕಿಂದಮ ಸಾಯುವುದರಲ್ಲಾಗಲೀ ಏನೇನೂ ತಪ್ಪಿಲ್ಲ. ಏಕೆಂದರೆ ವಿಧಿಯೇ ಕೊಲ್ಲಿಸಲು ಕಾರಣ. ವಿಧಿಯೇ ಋಷಿಯು ಸಾಯಲೂ ಕಾರಣ.

ಆದ್ದರಿಂದ ಈ ಅವೈಚಾರಿಕ ವಾದವನ್ನೂ ಕೈಬಿಟ್ಟು ಮುಂದುವರಿಸೋಣ. ಋಷಿಯು ಪಾಂಡುವನ್ನು ಕಾಮ ಮತ್ತು ಲೋಭಗಳಿಂದ ಆಕ್ರಾಂತನಾಗಿ ವಿವೇಕವನ್ನು ಹೊಣೆ ಕಳೆದುಕೊಂಡ ಎಂದು ಕೇಳುತ್ತಾನೆ. ಇದೇ ಎಷ್ಟು ಹಾಸ್ಯಾಸ್ಪದವಾದ ಪ್ರಶ್ನೆ! ಕಾಮಕ್ಕೆ ಸಿಕ್ಕಿ ವಿಲಿ ವಿಲಿ ಒದ್ದಾಡುತ್ತಿರುವವನು ಕಿಂದಮ ಋಷಿ. ಆದರೆ ಅವನು ಕಾಮಿಯೆಂದು ಆಸ್ವಾದಿಸುತ್ತಿರುವುದು ಪಾಂಡುವನ್ನು! ಪ್ರಕೃತ ಪರಿಸ್ಥಿತಿಯಲ್ಲಂತೂ ಪಾಂಡುವು ಕಾಮಿಯೂ ಅಲ್ಲ ಲೋಭಿಯೂ ಅಲ್ಲ. ಕ್ರೀಡಾ ವಿನೋದಾಸಕ್ತ ಅಷ್ಟೆ. ಲೋಭ ಯಾತರದ್ದು? ಜಿಂಕೆಯ ೧೫ ಕೆ.ಜಿ. ಮಾಂಸದ್ದೆ? ಅವನು ಮಹಾರಾಜ. ಅವನಿಗೆ ಜಿಂಕೆಯ ಮಾಂಸದ ಕೊರತೆ ಏನೇನೂ ಇಲ್ಲ.

ಆದ್ದರಿಂದ ಋಷಿಯ ಅಸಂಬದ್ಧವಾದ ಆಕ್ಷೇಪಣೆಗಳಿಗೆ ಸರಿಯಾದ ಉತ್ತರವನ್ನು ಪಾಂಡುಮಹಾರಾಜನು ನೀಡುತ್ತಾನೆ:

“ಎಲೈ, ಜಿಂಕೆಯೆ (ಅವನು ಹೀಗೇಕೆ ಸಂಬೋಧಿಸುತ್ತಾನೆ ಎಂದರೆ ಅವನಿಗಿನ್ನೂ ಆ ಜಿಂಕೆಯೇ ಋಷಿಪುತ್ರ ಎಂಬುದು ತಿಳಿಯದು) ರಾಜರುಗಳಿಗೆ ಶತ್ರುಗಳನ್ನು ಕೊಲ್ಲುವ ವಿಷಯದಲ್ಲಿ (ವಿಹಿತವಾಗಿರುವ) ಧರ್ಮವು ಮೃಗಗಳನ್ನು ಕೊಪ್ಪುವ ವಿಷಯದಲ್ಲೂ (ವಿಹಿತವಾಗಿವೆ). ಆದುದರಿಂದ ನೀನೇ ಅಜ್ಞಾನದಿಂದ ನನ್ನನ್ನು ನಿಂದಿಸುವುದು ಸರಿಯಲ್ಲ.” ಹೀಗೆ ಹೇಳಿ ಅವನು ಅಗಸ್ತ್ಯ ಋಷಿಯು ಕೂಡ ಜಿಂಕೆಯನ್ನು ಕೊಂಡು ಅದರ ವಪೆಯನ್ನು ಹೋಮ ಮಾಡಿದ ನಿದರ್ಶನವನ್ನು ನೀಡುತ್ತಾನೆ. ಆಗ ಜಿಂಕೆಯ ವೇಷದಲ್ಲಿದ್ದ ಋಷಿಯು ಹೇಳುತ್ತಾನೆ: “ನೀನು ನನ್ನ ಸಂಭೋಗ (ಕಾಲ) ಮುಗಿಯುವವರೆಗೂ ನಿರೀಕ್ಷಿಸಬೇಕಾಗಿತ್ತು. ಸಮಸ್ತ ಪ್ರಾಣಿಗಳಿಗೂ ಹಿತವಾಗಿರುವ ಮತ್ತು ಸಮಸ್ತ ಪ್ರಾಣಿಗಳೂ ಇಷ್ಟಪಡುವಂತಹ ಇಂತಹ (ಸಂಭೋಗದ) ಸಮಯದಲ್ಲಿ ಕಾಡಿನಲ್ಲಿ ರತಿಕ್ರೀಡೆಯನ್ನು ನಡೆಸುತ್ತಿರುವ ಜಿಂಕೆಯನ್ನು ವಿದ್ವಾಂಸನಾದವನು ಯಾವನು ತಾನೆ ಕೊಲ್ಲುವನು? ಕಮನೀಯವಾದ ಪುರುಷಾರ್ಥ ಫಲವನ್ನು ನೀನು ವ್ಯರ್ಥಗೊಳಿಸಿರುವೆ… ಸ್ತ್ರೀಭೋಗಗಳ ವಿಶೇಷ ಪರಿಚಯವನ್ನು ಹೊಂದಿರುವವನೂ, ಶಾಸ್ತ್ರ, ಧರ್ಮ ಮತ್ತು ಅರ್ಥಗಳ ತತ್ವವನ್ನು ತಿಳಿದಿರುವವನೂ (ಆದ ನೀನು) ಸ್ವರ್ಗವನ್ನು ಕೊಡದಿರುವ ಈ ರೀತಿಯ ಕಾರ್ಯವನ್ನು ಮಾಡಲು ಯೋಗ್ಯನಾದವನಲ್ಲ.”

ಹೀಗೆ ಹೇಳುತ್ತಾ ಹೇಳುತ್ತಾ ಋಷಿಗಳಿಗೆ ಸಹಜವಾಗಿರುವ ಶಾಪವನ್ನು ನೀಡುವ ಪ್ರವೃತ್ತಿಯು ಆ ಪ್ರಾಣಿ ರೂಪದ ಋಷಿಯಲ್ಲೂ ಭುಗ್ಗನೆ ಜ್ವಾಲೆಯೆದ್ದಿತು. ಮೊದಲು ಶಾಪವನ್ನು ನೀಡಿ, ಅನಂತರ ತಾನು ಕಿಂದಮನೆಂಬ ಋಷಿ ಎಂಬುದಾಗಿ ಆ ಜಿಂಕೆ ಹೇಳುತ್ತದೆ…. ಶಾಪ ಹೀಗೆ!

ನೀನು ನನ್ನನ್ನು ಹಿಂಸಿಸಿ ಕೊಂದಿರುವೆ. ಆದುದರಿಂದ ಮಿಥುನ ಭಾವದಲ್ಲಿದ್ದವರನ್ನು ಕೊಲೆ ಮಾಡಿರುವ ನಿನಗೆ ಮುಂದೆ ವಿವಶನಾಗಿ ಕಾಮಮೋಹಿತನಾದ (ಸಂದರ್ಭದ)ಲ್ಲಿ ನಿಸ್ಸಂಶಯವಾಗಿ ಇಂತಹ ಪ್ರಾಣನಾಶಕರವಾದ ಸ್ಥಿತಿಯೇ ಒದಗಿ ಬರುವುದು.”

ಅನಂತರ ಜಿಂಕೆಯ ರೂಪದಲ್ಲಿದ್ದ ಋಷಿಯು ತಾನು ಯಾರೆಂಬುದನ್ನು ಹೇಳಿಕೊಳ್ಳುತ್ತಾನೆ. ಮನಸ್ಸಿನಲ್ಲಿ ಎಣೆಯಿಲ್ಲದವನಾದ ಕಿಂದಮನೆಂಬ ಮುನಿ ಮನುಷ್ಯರಿಗೆ ನಾಚಿಕೆಪಟ್ಟು (ನಾನು) ಮೃಗರೂಪವನ್ನು ಧರಿಸಿರುವ ನನ್ನ ಪತ್ನಿಯಲ್ಲಿ (ನಾನೂ ಜಿಂಕೆಯಾಗಿ) ಮೈಥುನವನ್ನು ಆಚರಿಸುತ್ತಿದ್ದನು. ಜಿಂಕೆಯ ರೂಪವನ್ನು ತಾಳಿ ತಾನು ಜಿಂಕೆಗಳ ಜೊತೆಯಲ್ಲಿ ದಟ್ಟವಾದ ಕಾಡಿನಲ್ಲಿ ಸಂಚರಿಸುತ್ತಿದ್ದೆ. ಇದನ್ನು ಅರಿಯದೆ ನೀನು ಹೀಗೆ ಕಾಮಮೋಹಿತನಾಗಿ ಜಿಂಕೆಯ ರೂಪವನ್ನು ಧರಿಸಿರುವ ನನ್ನನ್ನು ಕೊಂದಿರುವುದರಿಂದ ಈ ಬ್ರಹ್ಮಹತ್ಯಾ (ದೋಷ) ನಿನಗೆ ತಟ್ಟುವುದಿಲ್ಲ. ಮೂರ್ಖನೆ! ಆದರೆ, ಈ ಕರ್ಮಕ್ಕೆ ಇಂತಹುದೇ ಫಲವನ್ನು ಪಡೆಯುವೆ. ಕಾಮಮೋಹಿತನಾಗಿ ನಿನ್ನ ಪ್ರಿಯೆಯೊಡನೆ ಸಮಾಗಮವನ್ನು ಮಾಡಿ ಇಂತಹ ಸ್ಥಿತಿಯಲ್ಲಿರುವಾಗಲೇ ನೀನೂ ಮರಣಹೊಂದುವೆ. ಬುದ್ದಿವಂತರಲ್ಲಿ ಶ್ರೇಷ್ಠನಾದವನ! ಕೊನೆಗಾಲದಲ್ಲಿ (ನೀನು) ಯಾವ ಕಾಂತೆಯೊಡನೆ ಸಮಾಗಮ ಆಡುವೆಯೋ ಅವಳೂ ಸಮಸ್ತ ಪ್ರಾಣಿಗಳೂ ಮೀರಲಾಗದಿರುವ ಯಮರಾಜನ ವಶಕ್ಕೆ ಸೇರುವ ನಿನ್ನನ್ನು ಭಕ್ತಿಯಿಂದ ಹಿಂಬಾಲಿಸುವಳು. ಸುಖದ ಸ್ಥಿತಿಯಲ್ಲಿರುವ ನಿನಗೆ ನೀನು ದುಃಖವನ್ನುಂಟುಮಾಡಿದಂತೆಯೇ, ಸುಖದ ಸ್ಥಿತಿಯನ್ನು ಹೊಂದಿರುವ ಸಮಯದಲ್ಲಿ ನಿನಗೂ ದುಃಖ ಪ್ರಾಪ್ರವಾಗುವುದು.” ಹೀಗೆಂದು ಹೇಳಿ, ಅವನು ಬಹಳ ದುಃಖದಿಂದ ಪೀಡಿತನಾಗಿ ಪ್ರಾಣವನ್ನು ಬಿಟ್ಟನು. ಪಾಂಡುರಾಜನೂ ಕ್ಷಣಮಾತ್ರದಲ್ಲಿ ಶೋಕಪೀಡಿತನಾದನು.

ಮುಂದುವರಿಯುವ ಮುಂಚೆಯೇ ವಿಚಾರಕ್ಕೆ ಒಳಪಡಿಸಬೇಕಾದ ಕೆಲವು ಅಂಶಗಳು ಇಲ್ಲಿವೆ. ಕಿಂದಮನು ತನ್ನನ್ನು ತಾನು ಎಣೆಯಿಲ್ಲದೆ ತಪಸ್ವಿ ಎಂದು ಹೇಳಿ ಆತ್ಮಜ್ಞಾನವು ಎರಡನೆಯದಾಗಿ ಸಂಭೋಗದಲ್ಲಿರುವ ಪ್ರಾಣಿಯನ್ನು ಕೊಲ್ಲಕೂಡದು ಎಂಬ ಋಷಿಯ ವಿಚಿತ್ರವಾದ. ಇದು ಯಾವ ಧರ್ಮಶಾಸ್ತ್ರದಲ್ಲಿ ವಿಹಿತವಾಗಿದೆ! ಕಿಂದಮನ ಅಪೇಕ್ಷೆ, ಪಾಂಡುವು ಜಿಂಕೆಗಳ ಸಂಭೋಗ ನಡೆಸುತ್ತಾ ಇದ್ದ ಕ್ರಿಯೆಯನ್ನು ನೋಡುತ್ತಾ, ನಯನಾನಂದ ಪಡೆದು, ಅವುಗಳ ಸಂಭೋಗ ಮುಗಿದ ಮೇಲೆ ಅದನ್ನು ಕೊಲ್ಲಬೇಕಾಗಿತ್ತು ಎಂದೆ?

ಮೂರನೆಯದು ಇನ್ನೂ ಗಂಭೀರವಾದ ಆಕ್ಷೇಪಣೆ. ಕಿಂದಮ ಋಷಿಗೆ ಮನುಷ್ಯ ರೂಪದಲ್ಲಿಯೇ ತನ್ನ ಸತಿಯಲ್ಲಿ ರತಿಕ್ರೀಡೆಯಲ್ಲಿ ತೊಡಗಲು ಇದ್ದ ಅನಾನುಕೂಲವೇನು? ಋಷ್ಯಾಶ್ರಮದಲ್ಲಿ ಸ್ಥಳಾಭಾವವಿತ್ತೆ? ಅಥವಾ ಇತರ ಋಷಿಗಳೂ, ಋಷಿಕುಮಾರ, ಕುಮಾರಿಯರೂ, ಋಷಿ ಪತ್ನಿಯರೂ ಹೊಂಚುಹಾಕಿ ಕಾದು ನೋಡುತ್ತಾರೆ ಎಂಬ ಭಯವೇ? ಭಯ ಏಕೆ? ಅನೇಕ ಋಷಿಗಳು, ತಮ್ಮ ಪತ್ನಿಯರೊಡನೆ ಬಾಳುತ್ತಿದ್ದುದು. ಅವರು ಮಕ್ಕಳನ್ನು ಪಡೆಯುತ್ತಿದ್ದುದೂ ಸಾಮಾನ್ಯ. ಉದಾಹರಣೆಗೆ ಗೌತಮ-ಅಹಲ್ಯೆಯರು ಶತಾನಂದನನ್ನು ಪಡೆದುದು. ಹೀಗಿರುವಾಗ ಕಿಂದಮನಿಗೇನಾಗಿತ್ತು? ಅವನು ಹೇಳುವ ಮಾತುಗಳನ್ನು ಗಮನಿಸಿ ಮನುಷ್ಯರಿಗೆ ನಾಚಿಕೆಪಟ್ಟು (ನಾನು) ಮೃಗರೂಪವನ್ನು ಧರಿಸಿರುವ ನನ್ನ ಪತ್ನಿಯಲ್ಲಿ (ನಾನೂ ಜಿಂಕೆಯಾಗಿ) ಮೈಥುನವನ್ನು ಆಚರಿಸುತ್ತಿದ್ದೆನು.”

ಆದ್ದರಿಂದ ನಾಚಿಕೆಪಟ್ಟುಕೊಳ್ಳುವ ಕೆಲಸ ಮಾಡಿರುವವನು ಕಿಂದಮ. ಆದರೆ ಅವನು ಶಾಪಕೊಡುತ್ತಿರುವುದು ಪಾಂಡುವಿಗೆ!

ಇನ್ನೊಂದು ಅಧಿಕ ಪ್ರಸಂಗಿತನವನ್ನೂ ಇಲ್ಲಿ ಒತ್ತಿ ಹೇಳಬೇಕಾಗಿದೆ!

ನಿನಗೆ ಬ್ರಹ್ಮಹತ್ಯಾ ದೋಷವು ತಟ್ಟುವುದಿಲ್ಲ ಎನ್ನುತ್ತಾನೆ ಕಿಂದಮ ಋಷಿ. ಬ್ರಾಹ್ಮಣರೇ ಅಲ್ಲದ ವ್ಯಾಸರು ಈ ಅವಿವೇಕರ ಮಾತುಗಳನ್ನು ತಾವೇ ಹೇಳಿದ್ದಾರೆ ಎಂಬುದನ್ನು ನಂಬುವುದು ಕಷ್ಟವಾಗುತ್ತದೆ. ತಾವು ಯಾವುದೇ ರೀತಿಯ ಪಾಪವನ್ನು ಮಾಡಿದರೂ ತಮ್ಮನ್ನು ಕೊಲ್ಲತಕ್ಕದ್ದಲ್ಲ ಎಂಬ ನಿಯಮವನ್ನು ಮಾಡಿ, ಬ್ರಾಹ್ಮಣನನ್ನು ಕೊಲ್ಲುವುದಕ್ಕಿಂತ ಮಹತ್ತರವಾದ ಪಾಪ ಬೇರೊಂದಿಲ್ಲ ಎಂಬುದನ್ನು ಸಮಯ ಸಿಕ್ಕಿದಾಗಲೆಲ್ಲ ಸಾಧಿಸುತ್ತಾ ಬಂದಿರುವ ಬ್ರಾಹ್ಮಣ ಕುತಂತ್ರ ಬುದ್ಧಿಯನ್ನು ಎಷ್ಟು ಮೆಚ್ಚಿದರೂ ಸಾಲದು! ಎಂದರೆ ಬೇರೆ ಯಾರನ್ನು ಕೊಂದರೂ ಪರವಾಗಿಲ್ಲ. ಬ್ರಾಹ್ಮಣರನ್ನು ಮಾತ್ರ ಕೊಲ್ಲಕೂಡದು! ಹೇಗಿದೆ ಪಾಪ-ಪುಣ್ಯಗಳ ನಿರ್ಣಯ ವೈಖರಿ! ಬ್ರಾಹ್ಮಣನಾದ ರಾವಣನನ್ನು ಕೊಂದದ್ದರಿಂದ ಸ್ವಯಂ ಶ್ರೀರಾಮಚಂದ್ರನಿಗೇ ಬ್ರಹ್ಮಹತ್ಯಾ ದೋಷವನ್ನು ಆರೋಪಿಸಲಾಗಿದೆ ಎಂದ ಮೇಲೆ ಬ್ರಾಹ್ಮಣದ ಸೋಗಿನಲ್ಲಿ ಪರಸ್ತ್ರೀ ಹರಣ ಮುಂತಾದ ಎಲ್ಲ ತಪ್ಪುಗಳನ್ನೂ ಮಾಡಲು ಸಾರ್ವಕಾಲಿಕವಾದ ಪರವಾನಗಿಯನ್ನು ಪಡೆದುಕೊಂಡಿರುವ ಚಾಣಕ್ಯತನದ ಮುಂದೆ ಬೇರೆ ಯಾವ ತರ್ಕ ತಾನೆ ಕೆಲಸಮಾಡಬಲ್ಲದು?

ಋಷಿಗಳಲ್ಲಿ ಬಹುಮಂದಿ ತಪಸ್ಸು ಮಾಡುತ್ತಿದ್ದು ಅನೇಕ ಲೌಕಿಕ ಕಾಮನೆಗಳನ್ನು ಈಡೇರಿಸಿಕೊಳ್ಳಲು ಇಲ್ಲವೇ ಅವರ ಬಡತನದ ಬಾಳಿಗೆ ಹೋಲಿಸಿದರೆ ಅತ್ಯಂತವೈಭವ ಪೂರಿತವಾದದ್ದು ಎಂದು ವರ್ಣಿಸಲ್ಪಟ್ಟಿರುವ ಸ್ವರ್ಗದಲ್ಲಿ ಜಾಗವನ್ನು ಸಂಪಾದಿಸಿಕೊಳ್ಳುವುದಕ್ಕೆ. ಇಂಥ ಘನವಾದ ಉದ್ದೇಶವನ್ನು ಹೊಂದಿ ತಪಸ್ಸು ಮಾಡುತ್ತಿದ್ದ ಋಷಿಗಳು ವಿಷ ಸರ್ಪಗಳಂತೆ, ತಮಗೆ ತಿಳಿಯದೆಯೇ ತಮ್ಮನ್ನು ತುಳಿಯುತ್ತಿದ್ದವರನ್ನು ತಕ್ಷಣ ಶಾಪದ ಹೆಡೆಬಿಚ್ಚಿ ಕಚ್ಚೇ ಬಿಡುತ್ತಿದ್ದರು. ದೂರ್ವಾಸರು ಶಕುಂತಲೆಗೆ ಶಾಪನೀಡಿದ್ದನ್ನು ನೆನೆಯಿರಿ. ಇಲ್ಲೂ ಹಾಗೆಯೇ ಕಿಂದಮ ಋಷಿಯು ಪೂರ್ವಾಪರ ವಿವೇಚನೆಯಿಲ್ಲದೆ, ತನ್ನ ಸಂಭೋಗ ಕ್ರಿಯೆಯು ದಿಢೀರನೆ ನಿಂತು ತಾನು ಸಾಯಬೇಕಾಗಿ ಬಂದುದಕ್ಕೆ ಶಾಪವನ್ನು ನೀಡುತ್ತಾನೆ. ಅದೂ ಎಂಥ ಶಾಪ. ನೀಚನಾದವನ ಬಾಯಿಂದ ಮಾತ್ರ ಬರಬಹುದಾದ ಶಾಪ.

ಕಿಂದಮನು ಅಂತಹ ಶಾಪವನ್ನು ನೀಡಿ ಪ್ರಾಣಬಿಟ್ಟನು. ಅವನ ಹೆಂಡತಿಯ ಗತಿ ಏನಾಯಿತೋ ಗೊತ್ತಾಗುವುದಿಲ್ಲ. ಪಾಂಡುವಾದರೋ ಆ ಕಿಂದಮನೆಂಬ ಋಷಿ ತನಗೆ ಬಂಧು ಎಂದು ಪರಿಗಣಿಸಿ ಅವನ ಸಾವಿಗಾಗಿಯೂ ತನಗೆ ಬಂದ ಶಾಪಕ್ಕಾಗಿಯೂ ಶೋಕವ್ಯಾಕುಲನಾಗಿ ಕಂಗೆಟ್ಟು ಬಹಳ ಗೋಳಾಡಿದನು. ಇಲ್ಲ ಕಿಂದಮನಿಗಿಂತ ಪಾಂಡುವೇ ಉತ್ತಮನೆಂದು ತೋರುತ್ತದೆ. ಏಕೆಂದರೆ ಅವನು ಕಿಂದಮುನು ತನ್ನ ಬಂಧು ಎಂದು ಪರಿಗಣಿಸಿದ, ಅದೂ ಶಾಪಕೊಟ್ಟ ಮೇಲೆಯೂ? ಶೋಕ ಹೆಚ್ಚಿ ಕಂಗೆಟ್ಟ ಪಾಂಡುವು ತನ್ನ ವಿಚಾರ ಶಕ್ತಿಯನ್ನು ಕಳೆದುಕೊಳ್ಳುವುದನ್ನು ಕಾಣುತ್ತೇವೆ. ಏಕೆಂದರೆ ಅವನು ತನ್ನನ್ನು ತಾನು ನಿಂದಿಸಿಕೊಳ್ಳುತ್ತಾನೆ. ನಾನು ಚಿಕ್ಕಂದಿನಲ್ಲಿಯೇ ಕಾಮವಶನಾಗಿ ಮರಣ ಹೊಂದಿದ ವಿಚಿತ್ರ ವೀರ್ಯನ ಮಗ. ಆದರೆ ನಾನು ಹುಟ್ಟಿದ್ದು ಪೂಜ್ಯರಾದ ವ್ಯಾಸರಿಂದ (ಆದರೂ) ದೇವತೆಗಳಿಂದ ಬಿಡಲ್ಪಟ್ಟವನೂ ದುರಾತ್ಮನೂ ಆದ ಅಂತಹ ನನಗೆ ಅನೀತಿಯಿಂದ ಬೇಟೆಯೆಂಬ ಈ (ಕೆಟ್ಟಗೀಳಿನಲ್ಲಿ) ಇಂತಹ ನೀಚಬುದ್ದಿ ಉಂಟಾಯಿತು.

ನ್ಯಾಯವಾಗಿ ಪಾಂಡುವು ನಿಂದಿಸಬೇಕಾದದ್ದು ವಿವೇಚನೆಯಿಲ್ಲದೆ, ಮೃಗದ ರೂಪವನ್ನು ಧರಿಸಿ ಸಂಭೋಗ ನಡೆಸುತ್ತಿದ್ದು, ಸಾಯುವ ಸಮಯದಲ್ಲಿ ಅನ್ಯಾಯವಾಗಿ ತನಗೆ ಘೋರವಾದ ಶಾಪವನ್ನು ಕೊಟ್ಟ ಕಿಂದಮನೆಂಬ ಋಷಿಯನ್ನು ಅವನು ಬಿಟ್ಟ ಅವನು ಆತ್ಮನಿಂದೆಯಲ್ಲಿ ತೊಡಗುತ್ತಾನೆ. ಅಥವಾ ಅವನು ಆತ್ಮನಿಂದೆ ಮಾಡಿಕೊಳ್ಳುವಂತೆ ವ್ಯಾಸರು ಮಾಡಿದ್ದಾರೆ. ಒಬ್ಬ ಋಷಿ ಮತ್ತು ಗೃಹಸ್ಥನ ನಡುವೆ ಘರ್ಷಣೆ ನಡೆದಾಗ, ಆದರಲ್ಲೂ ಆ ಗೃಹಸ್ಥನು ಆ ಬ್ರಾಹ್ಮಣನಾಗಿದ್ದರೂಂತೂ ತಪ್ಪೆಲ್ಲವೂ ಗೃಹಸ್ಥನದೇ ಎಂದು ನಿರ್ಣಯಿಸುವ ಪುರಾಣಕಾರರ ಸಂಪ್ರದಾಯವನ್ನೇ ವ್ಯಾಸರೂ ಪಾಲಿಸಿದ್ದಾರೆ.

ಮರುಕ್ಷಣವೇ ಪಾಂಡು ಕೈಗೊಳ್ಳುವ ನಿರ್ಣಯವು ಇನ್ನೂ ವಿಚಿತ್ರವಾಗಿದೆ. ಇಹಲೋಕದ ವಿಷಯಗಳಲ್ಲಿ ಕಾರ್ಯ ಪ್ರವೃತ್ತರಾಗುವ ಸಾಧ್ಯತೆಗಳೂ ಕಾಣದೇ ಹೋದಾಗ ತಕ್ಷಣ ನೆನಪಾಗುವುದು ಪರಲೋಕ. ಅದರ ಪ್ರಾಪ್ತಿಗಾಗಿ ಆಚರಿಸಬೇಕಾದದ್ದು ತಪಸ್ಸು! ಪಾಂಡುವೂ ಅದೇ ದಾರಿಯನ್ನು ಹಿಡಿಯುತ್ತಾನೆ. ಮುನಿಯಾಗಿ, ತಲೆಯನ್ನು ಬೋಳಿಸಿ ಕೊಂಡು, ಭಿಕ್ಷೆಯನ್ನು ಬೇಡುತ್ತಾ ಈ ಭೂಮಿಯಲ್ಲಿ ತಿರುಗಾಡುತ್ತೇನೆ ಎಂದು ತೀರ್ಮಾನಿಸುತ್ತಾನೆ.

ಅನಂತರ ಕುಂತೀ ಮತ್ತು ಮಾದ್ರಿಯರ ಕಡೆಗೆ ನೋಡಿ, ಹಸ್ತಿನಾವತಿಗೆ ಹಿಂದಿರುಗಿ ಬಂಧುಬಾಂಧವರಿಗೆ ವಿಷಯವನ್ನು ತಿಳಿಸುವಂತೆ ಕೇಳಿಕೊಳ್ಳುತ್ತಾನೆ. ಅವರಿಬ್ಬರು ಅವನಿಗೆ ಹೇಳುತ್ತಾರೆ: (ಸನ್ಯಾಸಾಶ್ರಮ ಒಂದೇ ಅಲ್ಲದೆ) ಇನ್ನೂ ಇತರ ಆಶ್ರಮಗಳೂ ಇದೆ. ಅವುಗಳಲ್ಲಿ ಇದ್ದುಕೊಂಡು ಧರ್ಮಪತ್ನಿಯಾದ ನಮ್ಮೊಡನೆ ಮಹತ್ತಾದ ತಪಸ್ಸನ್ನು ಆಚರಿಸಿ ಸ್ವರ್ಗಕ್ಕೆ ಅರ್ಹನಾಗಬಹುದು. ಇದರಲ್ಲಿ ಸಂಶಯವಿಲ್ಲ. ನಾವಿಬ್ಬರೂ ಇಂದ್ರಿಯಗಳನ್ನು ಜಯಸಿ, ಪತಿಲೋಕ ಪರಾಯಣಿಯರಾಗಿ ಕಾಮಸುಖಗಳನ್ನು ಬಿಟ್ಟು ವಿಫುಲನಾದ ತಪಸ್ಸನ್ನು ಆಚರಿಸುತ್ತೇವೆ.”

ಪಾಂಡುರಾಜನಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಅವನ ಪರಿಸ್ಥಿತಿಯನ್ನು ನಾವು ಸುಲಭವಾಗಿ ಊಹಿಸಿಕೊಳ್ಳಬಹುದು. ಅವನು ಬದುಕಿನ ಎಲ್ಲಾ ಬಯಕೆಗಳನ್ನು ತೀರಿಸಿಕೊಂಡು, ವೃದ್ಧನಾಗಿ, ಸುಖಭೋಗಗಳನ್ನು ತ್ಯಜಿಸಿ ಸಿದ್ಧವಾದನಲ್ಲ. ಬಲಾತ್ಕಾರದ ಕಾಮಕೇಳಿಯಲ್ಲಿ ತೊಡಗಲಾರದ ಅಪೇಕ್ಷಣೀಯನಲ್ಲದ, ಆಕರ್ಷಕವಲ್ಲದ ಅವಸ್ಥೆಗೆ ನೂಕಲ್ಪಟ್ಟವನು. ಆಹಾರ, ವಿಹಾರ ಮುಂತಾದವುಗಳ ಮೇಲೆ ಆದಷ್ಟೂ ನಿಯಂತ್ರಣವನ್ನು ಸ್ಥಾಪಿಸಿ, ಹೇಗೋ ಇಂದ್ರಿಯಗಳನ್ನು ನಿಗ್ರಹಿಸಿ, ಬ್ರಹ್ಮಚರ್ಯದ ಸ್ಥಿತಿಯಲ್ಲಿ ಕಾಲಹಾಕುವ ಸಂಕಲ್ಪ ಅವನದು. ರೂಪವತಿಯರಾದ ಇಬ್ಬರು ಪತ್ನಿಯರು ಕಣ್ಣಮುಂದೆ ಸುಳಿಯದೇ ಇದ್ದರೆ ಅದು ಸಾಧ್ಯವಾದೀತು ಎಂಬ ಎಣಿಕೆ ಅವನದು. ಆ ದೃಷ್ಟಿಯಿಂದಲೇ ಅವರನ್ನು ಹಸ್ತಿನಾವತಿಗೆ ಸಾಗಹಾಕುವ ಪ್ರಯತ್ನ ನಡೆಸಿದ. ಅದು ಸಾಧ್ಯವಾಗುವಂತೆ ತೋರಲಿಲ್ಲ. ಏಕೆಂದರೆ ಪತ್ನಿಯರು ವಾನಪ್ರಸ್ಥದ ಮಾತನ್ನಾಡುತ್ತಿದ್ದಾರೆ! ಅಲ್ಲದೆ ತಮ್ಮವಾದದ ಮೊದಲ ಹಂತದಲ್ಲೇ ಅಂತಿಮ ಹಂತದ ಬೆದರಿಕೆಯನ್ನೂ ಮಂಡಿಸುತ್ತಿದ್ದಾರೆ: “ಒಂದು ವೇಳೆ ನೀನು ನಮ್ಮಿಬ್ಬರನ್ನೂ ತ್ಯಾಗಮಾಡುವುದಾದರೆ, ನಾವಿಬ್ಬರೂ ಈಗಲೇ ಪ್ರಾಣ ಬಿಡುವೆವು. ಇದರಲ್ಲಿ ಸಂಶಯವಿಲ್ಲ.

ಪಾಂಡುವಿಗೂ ಈ ಇಬ್ಬರು ಸುಂದರಿಯರು ಒಮ್ಮೆಲೇ ಹೊರಟೇಹೋಗುವುದು ಬೇಕಾಗಿರಲಿಲ್ಲ. ಹಾಗೆ ಅವನು ಅವರು ಹೊರಟೇ ಹೋಗಬೇಕೆಂದು ತೀರ್ಮಾನಿಸಿದ್ದರೆ ಅದು ಅಸಹಜವಾಗುತ್ತಿತ್ತು. ಅವನ ಪ್ರವೃತ್ತಿಗೆ ವಿರೋಧದದ್ದಾಗುತ್ತಿತ್ತು. ಆದ್ದರಿಂದ ಅವನು ಹೇಳಿದನು: “ಒಂದು ವೇಳೆ ನಿಮ್ಮಿಬ್ಬರ ಈ ನಿಶ್ಚಯವು ಧರ್ಮಯುಕ್ತವಾದದ್ದು ಆಗಿದ್ದರೆ ನಾನು ನನ್ನ ತಂದೆಯ (ವ್ಯಾಸಮಹರ್ಷಿಯ) ಸ್ಥಿರವಾದ (ವಾನಪ್ರಸ್ಥಾಶ್ರಮ) ವೃತ್ತಿಯನ್ನು ಅವಲಂಬಿಸುತ್ತೇನೆ. ಊರಿನಸುಖ, ಆಚಾರಗಳನ್ನು ಬಿಟ್ಟು ಮಹತ್ತಾದ ತಪ್ಪಸ್ಸನ್ನು ಆಚರಿಸುತ್ತಾ ನಾರುಮಡಿಯುನ್ನುಟ್ಟು ಹಣ್ಣುಗೆಡ್ಡೆಗಳನ್ನು ತಿನ್ನುತ್ತಾ ಮಹಾರಣ್ಯದಲ್ಲಿ ಸಂಚರಿಸುವೆನು.”

ಹೀಗೆ ಹೇಳಿ ಅವನು ತಾನು ಧರಿಸಿದ್ದ ಆಭರಣಗಳೆಲ್ಲವನ್ನೂ ಬ್ರಾಹ್ಮಣರಿಗೆ ದಾನ ಮಾಡಿದನು. (ಯಾವುದೇ ಸಂದರ್ಭದಲ್ಲೂ ಬ್ರಾಹ್ಮಣರಿಗೆ ಇವೆಲ್ಲ ದೊರಕುವುದನ್ನು ತಪ್ಪಿಸಲು ಸಾಧ್ಯವಿಲ್ಲ!) ನಡೆದದ್ದನ್ನೆಲ್ಲ ಹಸ್ತಿನಾವತಿಗೆ ಹೇಳಿ ಕಳುಹಿಸಿದ್ದೂ ಆಯಿತು. ಅನಂತರ ಶತಶೃಂಗ ಪರ್ವತದಲ್ಲಿ ತಪ್ಪಸ್ಸನ್ನು ಆಚರಿಸುತ್ತಿದ್ದನು. ತಪಸ್ಸಿನಿಂದ ಬ್ರಹ್ಮರ್ಷಿಗಳಿಗೆ ಸಮಾನನಾದವನೂ ಆದನು.

ಆದರೆ ಒಂದು ತೊಂದರೆ ಬಂದಿತು. ಸಂತಾನವಿಲ್ಲದವನಿಗೆ ಸ್ವರ್ಗಕ್ಕೆ ಪ್ರವೇಶ ಹೇಗೆ ಸಾಧ್ಯ? ಸಹಜವಿಧಾನದಲ್ಲಿ ಸಂತಾನವನ್ನು ಪಡೆಯುವುದಕ್ಕೆ ಕಿಂದಮ ಋಷಿಯ ಶಾಪ ಅಡ್ಡಿಯಾಗಿ ನಿಂತಿದೆ! ತನ್ನ ದುಃಖವನ್ನು ಕುಂತಿಯಲ್ಲಿ ತೋಡಿಕೊಂಡ ಅವನು ಒಂದು ದಾರಿಯಿದೆ ಎನ್ನುತ್ತಾನೆ: “ಸತ್ಪುರುಷರಾದವರು ತಮ್ಮ ವೀರ್ಯದಿಂದಲ್ಲದಿದ್ದರೂ (ಆಪತ್ಕಾಲದಲ್ಲಿ) ಧರ್ಮದ ಫಲವನ್ನು ಕೊಡುವಂತಹ ಉತ್ತಮವಾದ ಸಂತಾನವನ್ನು (ಬೇರೆ ಪುರುಷನಿಂದ) ಪಡೆಯುತ್ತಾರೆ ಎಂದು ಸ್ವಾಯಂಭೂವ ಮನವು ಹೇಳಿದ್ದಾನೆ. ಆದುದರಿಂದ ಸ್ವತಃ ಪುತ್ರೋತ್ಪಾದನ ಸಾಮರ್ಥ್ಯವನ್ನು ಕಳೆದುಕೊಂಡಿರುವ ನಾನು, ಈಗ ನಿನ್ನನ್ನು (ಬೇರೆಯವರ ಬಳಿಗೆ) ಕಳುಹಿಸಿ ಕೊಡುವೆನು! ನೀನು ನನಗೆ ಸಮಾನನಾದವನಿಂದಾಗಲಿ ಅಥವಾ ಉತ್ತಮನಾದನಿಂದಾಗಲಿ ಸಂತಾನವನ್ನು ಹೊಂದು.”

ಇದು ಮಾಡಬಹುದಾದದ್ದು ಎಂದು ನಂಬಿಕೆ ಹುಟ್ಟಿಸಲು ಪಾಂಡುವು ಕುಂತಿಗೆ ಶಾರದಂಡಾಯನಿ ಎಂಬ ವೀರಪತ್ನಿಯು ತನ್ನ ಪತಿಯಿಂದ ಕಳುಹಿಸಲ್ಪಟ್ಟು ಅನ್ಯಪುರುಷನಿಂದ ಸಂತಾನವನ್ನು ಪಡೆದ ನಿದರ್ಶನವನ್ನು ಹೇಳಿದನು. ಅವಳು ಬ್ರಾಹ್ಮಣನಿಂದ ಪುತ್ರರನ್ನು ಪಡೆದಳಂತೆ. ಹಾಗೆಯೇ ಕುಂತಿಯೂ ತಪಸ್ಸಿನಿಂದ ಶ್ರೇಷ್ಠನಾಗಿರುವ ಬ್ರಾಹ್ಮಣನಿಂದ ಸಂತಾನವನ್ನು ಪಡೆಯುವಂತೆ ಅಪ್ಪಣೆ ಮಾಡಿದನು.

ಆದರೆ ಕುಂತಿ ಒಪ್ಪಲಿಲ್ಲ. “ನಿನಗಿಂತ ಶ್ರೇಷ್ಠನಾದ ಪುರುಷನು ಯಾರಿದ್ದಾರೆ?” ಎಂದು ಕೇಳಿದಳು. ಅಲ್ಲದೆ “ಸಂತಾನಕ್ಕಾಗಿ ನೀನೇ ನನ್ನೊಡನೆ ಸಮಾಗಮ ಮಾಡು” ಎಂದೂ ಬೇಡಿದರು. “ನಿನ್ನನ್ನು ಬಿಟ್ಟು ಬೇರೆ ಪುರುಷನನ್ನು ಮನಸ್ಸಿನಿಂದಲೂ ಸಮಾಗಮ ಮಾಡುವುದಿಲ್ಲ” ಎಂದು ಘೋಷಿಸಿದಳು. ಅಷ್ಟಕ್ಕೆ ನಿಲ್ಲಿಸದೆ ಭದ್ರಾ ಎಂಬ ಸ್ತ್ರೀಯು ತನ್ನ ಪರಿಯಾದ ವ್ಯುಷಿತಾಶ್ವನು ಸತ್ತು ಹೋಗಲು ಅವನ ಶವದಿಂದ ಏಳು ಮಕ್ಕಳನ್ನು ಪಡೆದ ಕಥೆ ಹೇಳಿ, ‘ನೀನೂ ಅದೇ ಪ್ರಕಾರ ತಪಸ್ಸು ಮತ್ತು ಯೋಗಗಳ ಶಕ್ತಿಯ ಸಂಬಂಧದಿಂದ ಮನಸ್ಸಿನಿಂದಲೇ ನನ್ನಲ್ಲಿ ಪುತ್ರರನ್ನು ಹುಟ್ಟಿಸಲು ಸಮರ್ಥನಾಗಿದ್ದೀಯೆ” ಎಂದು ಹೇಳಿ, ತನಗೂ ಹಾಗೂ ಮಕ್ಕಳನ್ನು ಪಡೆಯುವ ಅಪೇಕ್ಷೆಯಿದೆ ಎಂಬುದನ್ನು ಸೂಚಿಸಿದಳು.

ಪಾಂಡುರಾಜನು ಪ್ರತ್ಯುತ್ತರನಾಗಿ ಶ್ವೇತಕೃತು ಎಂಬ ಋಷಿಯ ಸ್ತ್ರೀಪುರುಷರ ನಡವಳಿಕೆಗಳಿಗೆ ಸಂಬಂಧಿಸಿದಂತೆ ಮಾಡಿದ. ಕಟ್ಟುಪಾಡುಗಳನ್ನು ತಿಳಿಸಿ “ನೀನು ಈಗ ನಾನು ಹೇಳಿದಂತೆ ನಡೆದುಕೋ” ಎಂದು ಕೇಳಿಕೊಂಡನು. ಅಲ್ಲದೆ ಅತ್ಯಂತ ದೈನ್ಯಾವಸ್ಥೆಯಲ್ಲಿ ನಿಂತು ತನ್ನ ಅಪೇಕ್ಷೆಯನ್ನು ಅವಳಿಗೆ ಹೀಗೆ ತಿಳಿಸಿದನು:

“ದೋಷ ರಹಿತವಾದ ಶರೀರವುಳ್ಳವಳೆ! ವಿಶೇಷವಾಗಿ ಪುತ್ರಾಪೇಕ್ಷಿಯಾದ ನಾನು ಸ್ವತಃ ಪುತ್ರೋತ್ಪಾದನೆಯನ್ನು ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇನೆ. ಆದರೆ ಪುತ್ರನನ್ನು ನೋಡಬೇಕೆಂದು (ನಾನು) ಬಹಳ ಆಸೆ ಹೊಂದಿದ್ದೇನೆ. ಮಂಗಳೆ! (ಹೀಗಾಗಿ) ನಿನ್ನನ್ನು ಪ್ರಸನ್ನಗೊಳಿಸುವುದಕ್ಕಾಗಿ, ಬೆರಳುಗಳು ಮತ್ತು ಅಂಗೈಗಳಿಂದ ಕೂಡಿ ಕಮಲದಳದಂತೆ ಶೋಭಿಸುತ್ತಿರುವ ನನ್ನ ಕೈಗಳನ್ನು ಜೋಡಿಸಿ ನನ್ನ ತಲೆಯ ಮೇಲಿಟ್ಟು ಕೇಳಿಕೊಳ್ಳುವನು. ಸುಂದರವಾದ ಕೇಶಪಾಶವುಳ್ಳವಳೆ! ನನ್ನ ಅಪ್ಪಣೆಯಂತೆ ನೀನು ತಪಸ್ಸಿನಿಂದ ಉತ್ತಮನಾದ ಒಬ್ಬ ಬ್ರಾಹ್ಮಣನಿಂದ ಗುಣಯುಕ್ತರಾದ ಪುತ್ರರನ್ನು ಪಡೆಯಬೇಕು, ಸುಂದರಿಯೆ! ನಿನ್ನಿಂದಲಾದರೂ ನಾನು ಪುತ್ರವಂತರು ಹೊಂದುವ ಸದ್ಗತಿಯನ್ನು ಹೊಂದುತ್ತೇನೆ.”

ಕುಂತಿಯು ತಾನು ಬಾಲೆಯಾಗಿದ್ದಾಗ ದುರ್ವಾಸರಿಂದ ಪಡೆದ ವರದ ವಿಷಯವನ್ನು ಪತಿಗೆ ತಿಳಿಸಿದಳು. ತಾನು ಕರ್ಣನನ್ನು ಪಡೆದ ವಿಷಯವನ್ನು ಮರೆಮಾಚಿದಳು. ಪಾಂಡುವಿನ ಅಪೇಕ್ಷೆಯಂತೆ ಅವಳು ಧರ್ಮದೇವನನ್ನು ಸ್ಮರಿಸಿದಳು. ದುರ್ವಾಸನು ನೀಡಿದ್ದ ಮಂತ್ರವನ್ನು ವಿಧಿವತ್ತಾಗಿ ಜಪಿಸಿದಳು. ಅನಂತರ “ಆ ಸುಂದರಿಯು ಯೋಗ ಮಯವಾದ ಶರೀರವನ್ನು ಧರಿಸಿದ್ದ ಧರ್ಮದೇವನೊಡನೆ ಸಮಾಗಮ ಮಾಡಿ ಸಮಸ್ತ ಜೀವರಲ್ಲಿ ಶ್ರೇಷ್ಠನಾದ ಪುತ್ರನನ್ನು ಪಡೆದಳು. ಮುಂದೆ ವಾಯುವಿನಿಂದ ಭೀಮನನ್ನೂ ಇಂದ್ರನಿಂದ ಅರ್ಜುನನನ್ನೂ ಪಡೆದಳು. ಕುಂತಿಯ ನೆರವಿನಿಂದ ಮಾದ್ರಿಯು ಅಶ್ವಿನೀ ದೇವತೆಗಳಿಂದ ನಕುಲ ಸಹದೇವರನ್ನು ಪಡೆದಳು.

ಒಮ್ಮೆ ರಮ್ಯವಾದ ವಸಂತ ಋತುವಿನಲ್ಲಿ. ಕಾಡೆಲ್ಲ ಚೆನ್ನಾಗಿ ಹೂಬಿಟ್ಟಿದ್ದು ಮನುಷ್ಯರನ್ನಿರಲಿ, ಪ್ರಾಣಿಗಳನ್ನೂ ಆಕರ್ಷಿಸುತ್ತಿತ್ತು. ಆಗ ಪಾಂಡುವು ತನ್ನ ಹೆಂಡತಿಯರೊಡನೆ ವನದಲ್ಲಿ ಸಂಚರಿಸುತ್ತಿದ್ದನು. ಶೋಭಿಸುತ್ತಿದ್ದ ಅರಣ್ಯವನ್ನು ನೋಡಿದ ಕೂಡಲೇ ಪಾಂಡುವಿನ ಮನಸ್ಸಿನಲ್ಲಿ ಕಾಮಹುಟ್ಟಿತು. ಹರ್ಷಚಿತ್ತನಾಗಿ ದೇವತೆಯಂತೆ ಆ ಕಾಡಿನಲ್ಲಿ ವಿಹರಿಸುತ್ತಿದ್ದ ಅವನನ್ನು ಉತ್ತಮವಾದ ಉಡುಗೆಯನ್ನುಟ್ಟು ಮಾದ್ರಿಯೊಬ್ಬಳೇ ಹಿಂಬಾಲಿಸಿ ಹೋದಳು. (ಬಹುಶಃ ಅವಳಲ್ಲಿಯೂ ಕಾಮವು ಉದ್ರೇಕಗೊಂಡಿತ್ತು ಎಂದೇ ತೋರುತ್ತದೆ. ಇಲ್ಲದಿದ್ದರೆ ಅವಳು ಉತ್ತಮವಾದ ಉಡುಗೆಯನ್ನು ಧರಿಸಿದ್ದಳು ಎಂಬುದಕ್ಕಾಗಲಿ, ಪಾಂಡುವನ್ನು ಒಬ್ಬಳೇ ಹಿಂಬಾಲಿಸಿ ಹೋದಳು ಎಂಬುದಕ್ಕಾಗಲಿ ಏನೇನೂ ಅರ್ಥವಿರುವುದಿಲ್ಲ.) ಮಾದ್ರಿ ಉಟ್ಟಿದ್ದುದು ತೆಳ್ಳನೆಯ ಉಡುಗೆ ಎನ್ನುತ್ತಾರೆ ವ್ಯಾಸರು. “ತನುವಾಸಸಮ್‌” ಹಾಗೆ ತೆಳ್ಳನೆಯ ಉಡುಗೆಯನ್ನುಟ್ಟಿದ್ದ ಆ ತರುಣಿಯನ್ನು ನೋಡುತ್ತಿರುವಂತೆಯೇ…..

ಏಕಾಂತದಲ್ಲಿ ತನ್ನ ಜೊತೆಯಲ್ಲಿದ್ದ ಆ ಕಮಲಲೋಚನೆಯನ್ನು ನೋಡಿ ಕಾಮವಶನಾದ ರಾಜನಿಗೆ ಕಾಮವನ್ನು ತಡೆಯಲಾಗಲಿಲ್ಲ. (ಭಯದಿಂದ) ನಡುಗುತ್ತಿದ್ದ ಆ ದೇವಿಯು ತನ್ನ ಸಾಮರ್ಥ್ಯವಿದ್ದಷ್ಟು ತಡೆಯುತ್ತಿದ್ದರೂ (ಆ) ರಾಜನು ಏಕಾಂತದಲ್ಲಿ ಸಿಕ್ಕಿದ ಅವಳನ್ನು ಬಲಾತ್ಕಾರದಿಂದ ಹಿಡಿದುಕೊಂಡನು. ಬಲಾತ್ಕಾರದಿಂದ ಮಾದ್ರಿಯೊಡನೆ ಮೈಥುನ ಧರ್ಮದಿಂದ ಸಮಾಗಮ ಮಾಡಲು ತೊಡಗಿದ, ಕಾಮವಶನಾಗಿದ್ದ ಅವನಿಗೆ (ಋಷಿಯ) ಶಾಪವು ನೆನಪಿಗೆ ಬರಲಿಲ್ಲ. ಅವನು ತನ್ನ ಪ್ರಾಣಹಾನಿಗಾಗಿಯೇ ಕಶಮವಶನಾದನು. ಶಾಪದ ಭಯವನ್ನು ಬಿಟ್ಟು ತನ್ನ ಪ್ರಿಯೆಯೊಡನೆ ಬಲಾತ್ಕಾರದಿಂದ ಕೂಡಿಬಿಟ್ಟನು. ಸಾಕ್ಷಾತ್ ಯಮನೇ ಕಾಮವಶವಾದ ಅವನ ಇಂದ್ರಿಯಗಳನ್ನು ಚೆನ್ನಾಗಿ ಕಲಕಿ ಅವನ ಮನಸ್ಸು ಮತ್ತು ಬುದ್ಧಿಗಳನ್ನು ಮೋಹಗೊಳಿಸಿ ನಾಶಪಡಿಸಿದನು. ಪರಮ ಧರ್ಮಾತ್ಮನಾದ ಆ ಪಾಂಡುವು ತನ್ನ ಭಾರ್ಯೆಯೊಡನೆ ಸಮಾಗಮ ಮಾಡಿ ಮೃತ್ಯುವಶನಾದನು.

ವ್ಯಾಸ ಮಹರ್ಷಿಗಳ ಮನಸ್ಸಿನಲ್ಲಿ, ಈ ಪ್ರಸಂಗವನ್ನು ಚಿತ್ರಿಸುತ್ತಿರುವಾಗ ಉಂಟಾದ ಕ್ಷೋಭೆಯನ್ನು ಸುಲಭವಾಗಿ ಊಹಿಸಬಹುದು. ಇಲ್ಲಿ ಪ್ರತ್ಯಕ್ಷವಾಗಿ ಕಾಣುವ ಪ್ರಾತ್ರಗಳು ಎರಡು ಪಾಂಡು ಮತ್ತು ಮಾದ್ರಿ. ಅವರ ನಡುವೆ ಮೃತ್ಯುವಿನಂತೆ ಸದಾ ಪಾಂಡುವನ್ನು ಹಿಂಬಾಲಿಸಿ ಬರುತ್ತಿರುವ ಋಷಿಶಾಪ. ಪಾಂಡುವು ಜೀವಿಗೆ ಸಹಜವಾದ ಎಲ್ಲ ಬಯಕೆಗಳನ್ನೂ ತೃಪ್ತಿಗೊಳಿಸಿಕೊಂಡು, ಮೋಕ್ಞಾಪೇಕ್ಷಿಯಾಗಿ ವಾನಪ್ರಸ್ಥಕ್ಕೆಂದು ಕಾಡಿಗೆ ಬಂದವನಲ್ಲ. ಅಸಹಜವಾದ ರೀತಿಯಲ್ಲಿ ಮೈಥುನವನ್ನು ನಡೆಸುತ್ತಿದ್ದು, ಜಿಂಕೆಯ ರೂಪ ತಾಳಿ ಕಾಮಕೇಳಿಯಲ್ಲಿ ತೊಡಗಿದ್ದು. ನ್ಯಾಯವಾದ ರೀತಿಯಲ್ಲಿ ಬೇಟೆಯಾಡುತ್ತಿದ್ದವನ ಬಾಣಕ್ಕೆ ಸಿಕ್ಕಿ ಹತನಾದವನು ಕಿಂದಮನೆಂಬ ಋಷಿ, ಆದರೂ ತನ್ನಷ್ಟು ಶ್ರೇಷ್ಠನಾದ ತಪಸ್ವಿಯೇ ಇಲ್ಲ ಎಂದು ತನಗೆ ಸಲ್ಲದ, ತಪಸ್ಸಿಗೆ ಒಪ್ಪದ ಅಹಂಕಾರವನ್ನು ತೋರಿಸಿದ ಋಷಿಯ ಅನ್ಯಾಯವಾದ ಶಾಪಕ್ಕೆ ತುತ್ತಾದವನು ಪಾಂಡು. ಅವನೇನು ಪರಸ್ತ್ರೀಯೊಬ್ಬಳ ಮೇಲೆ ಅತ್ಯಾಚಾರ ಮಾಡುತ್ತಾ ಸಾಯಲಿಲ್ಲ. ಸಹಜವಾದ ಕಾಮವನ್ನು ತನ್ನ ಧರ್ಮಪತ್ನಿಯಲ್ಲಿ ಪೂರೈಸಿಕೊಳ್ಳುತ್ತಾ ಸತ್ತನು. ಧರ್ಮಸ್ವರೂಪಿ ಯಾಗಿರಬೇಕಾದ ಯಮನೂ ಋಷಿಯ ಅತ್ಯಂತ ನೀಚಸ್ವರೂಪದ ಶಾಪವನ್ನು ಸಫಲಗೊಳಿಸಲು ತುದಿಗಾಲಿನಲ್ಲಿ ನಿಂತಿರುವುದು. ಹಾಸ್ಯಾಸ್ಪದವಾಗಿದೆ, ಯಮನ ವಿಷಯದಲ್ಲೂ ತಿರಸ್ಕಾರವನ್ನು ಹುಟ್ಟಿಸುವಂಥದ್ದಾಗಿದೆ. ಏಕೆಂದರೆ, ವ್ಯಾಸರು ಹೇಳುತ್ತಾರೆ: ‘ಸಾಕ್ಷಾತ್ ಯಮನೇ ಕಾಮವಶನಾದ ಅವನ (ಪಾಂಡುವಿನ) ಇಂದ್ರಿಯಗಳನ್ನು ಚೆನ್ನಾಗಿ ಕಲಕಿ ಅವನ ಮನಸ್ಸು ಮತ್ತು ಬುದ್ದಿಗಳನ್ನು ಮೋಹಗೊಳಿಸಿ ನಾಶಪಡಿಸಿದನು.” ಅನೇಕ ಶತಮಾನಗಳ ಅನಂತರ ಕವಿ ಜನ್ನನು ತನ್ನ ಯಶೋಧರ ಚರಿತ್ರೆಯಲ್ಲಿ ಬರೆದ ಈ ಪಂಕ್ತಿಗಳನ್ನು ನೆನೆಯಿರಿ.

ಮನನಿಜನ ಮಾಯೆ ವಿಧಿವಶ
ಸನದ ನೆರಂ ಬಂಡೆಯ ಕೊಂದು ಕೊಗದೆ ನರರಂ?

ಮನ್ಮಥನ ಮಾಯೆ ಪಾಂಡುವಿನ ಮನಸ್ಸನ್ನು ಬಲವಾಗಿ ಆಕ್ರಮಿಸಿಕೊಂಡಿದೆ. ಜೊತೆಗೆ ಯಮನೂ ಮನ್ಮಥನಿಗೂ ಋಷಿಶಾಪಕ್ಕೂ ನೆರವಾಗಿ ನಿಂತು ಪಾಂಡುವನ್ನು ನಾಶಗೊಳಿಸಲು ಉತ್ಸುಕನಾಗಿದ್ದಾನೆ! ಸಂದರ್ಭದಲ್ಲಿಯೂ ಪಾಂಡುವನ್ನು ಪರಮಧರ್ಮಾತ್ಮ ಎಂದು ಸ್ವಯಂ ವ್ಯಾಸರೇ ಕರೆದಿರುವುದನ್ನು ಗಮನಿಸಿದರೆ ಅವರಿಗೆ ಪಾಂಡುವಿಗಾದ ಅನ್ಯಾಯದ ಸ್ವರೂಪವು ಚೆನ್ನಾಗಿಯೇ ಅರಿವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಮಾದ್ರಿಯನ್ನು ಪಾಂಡುವು ಬಲಾತ್ಕಾರದಿಂದ ಎಂದು ಹೇಳಿದ ವ್ಯಾಸರು ಈ ವಿಷಯವನ್ನು ಕುರಿತು ಮತ್ತೆ ಯೋಚಿಸಿದ್ದಾರೆಂದು ತೋರುತ್ತದೆ. ಕುಂತಿ-ಮಾದ್ರಿಯರು ಪಾಂಡುವಿನೊಡನೆ ಸಹಗಮನ ಮಾಡಲು ನಾನು, ತಾನು ಎಂದು ಮುಂದಾಗುತ್ತಿರುವಾಗ ದಿಢೀರನೆ ಮಾದ್ರಿ ಹೇಳುತ್ತಾಳೆ. “ಇನ್ನೂ (ದೂರ) ಹೋಗದಿರುವ ಪತಿಯನ್ನು ನಾನೇ ಹಿಂಬಾಲಿಸಿ ಹೋಗುವೆನು. ಆಸೆಗಳು ನನಗಿನ್ನೂ ತಣಿದಿಲ್ಲ. ಆದುದರಿಂದ ಹಿರಿಯಳಾದ (ನೀನು) ಅನುಮತಿಯನ್ನು ಕೊಡು”.

ಆಸೆಗಳು ತಣಿದಿಲ್ಲವಾದುದರಿಂದ ಪಾಂಡು ನನ್ನ ಹಿಂಬಾಲಿಸಿ ಹೋಗಿ ಬೇರೆ ಲೋಕದಲ್ಲಿ ಅವನಿಂದಲೇ ಆಸೆಗಳನ್ನು ತಣಿಸಿಕೊಳ್ಳುತ್ತೇನೆ ಎಂಬುದು ಮೇಲುನೋಟಕ್ಕೆ ಕಾಣುವ ಅರ್ಥ ಸಹಗಮನ ಮಾಡದೆ ಈ ಲೋಕದಲ್ಲೇ ಉಳಿದರೆ ಆ ಆಸೆಗಳನ್ನು ತಣಿಸಿಕೊಳ್ಳಲು ನಡೆಸುವ ಪ್ರಯತ್ನಗಳು ಧರ್ಮ ಸಮ್ಮತವಾಗದೇ ಹೋಗಿ ಅಪಕೀರ್ತಿ ಬರುವ ಭಯವೂ ಇದೆ ಎಂಬುದನ್ನು ಅವಳ ಮನಸ್ಸು ಸೂಚಿಸುತ್ತಿರಬಹುದು. ಆದ್ದರಿಂದ ಪಾಂಡುವು ಅನುಭವಿಸಿದ ಮೈಥುನ ಸುಖದಲ್ಲಿ ಮಾದ್ರಿಯು ಸಂಪೂರ್ಣವಾಗಿ ತಟಸ್ಥಳಾಗಿದ್ದಳು ಎಂದು ಹೇಳುವುದು ಕಷ್ಟವಾಗುತ್ತದೆ.

ಅವಳ ಮುಂದಿನ ಮಾತುಗಳು ತನಗಾಗಲೀ ಪಾಂಡುವಿಗಾಗಲೀ ಕಾಮವು ಪೂರ್ಣವಾಗಿ ತಣಿದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. “ಭರತ ಶ್ರೇಷ್ಠನಾದ ಇವನು ಕಾಮದಿಂದ ನನ್ನನ್ನು ಸೇರಿ ನಾಶವಾದನು. ಆದುದರಿಂದ ಯಮಲೋಕದಲ್ಲಿ ಅವನ ಕಾಮವನ್ನು ತಪ್ಪಿಸುವುದು ಹೇಗೆ?”

ಹೀಗೆ ತಮ್ಮ ಕಾಮೇಚ್ಛೆಯು ಯಮಲೋಕದಲ್ಲಾದರೂ ಪೂರೈಸುತ್ತದೆ ಎಂದು ನಂಬಿದ ಮಾದ್ರಿಯು, ತನ್ನ ಮಕ್ಕಳನ್ನು ಕುಂತಿಯ ವಶಕ್ಕೆ ಒಪ್ಪಿಸಿ “ಚಿತಾಗ್ನಿಯಲ್ಲಿ ಇದ್ದ ಪುರುಷ ಶ್ರೇಷ್ಠನಾದ” ಅವನೊಡನೆ ಕೂಡಲೇ ಚಿತೆಯೇರಿದಳು.

ವ್ಯಾಸರು ಸಿದ್ಧಪಡಿಸಿ ನೀಡಿರುವ ಈ ಪಾಂಡು-ಮಾದ್ರಿಯರ ಪ್ರಸಂಗವನ್ನು ಕನ್ನಡದ ಇಬ್ಬರು ಮಹಾಕವಿಗಳಾದ ಪಂಪ-ನಾರಣಪ್ಪರು ಹೇಗೆ ಪುನಸೃಷ್ಟಿಸಿದ್ದಾರೆ ಎಂಬುದು ಕುತೂಹಲಕಾರಿಯಾದ ಸಮೀಕ್ಷೆಯಾಗುತ್ತದೆ.

ಪಂಪನು ಈ ಪ್ರಸಂಗವನ್ನು ಹೇಗೆ ನಿರೂಪಿಸಿದ್ದಾನೆ ಎಂದು ನೋಡುವ ಮುನ್ನ ನೆನಪಿನಲ್ಲಿಡಬೇಕಾದ ಒಂದು ಅಂಶವು ಪಂಪನ ಶೈಲಿಗೆ ಸಂಬಂಧಪಟ್ಟದ್ದು. ಅವನದು ಸಂಕ್ಷೇಪ ಶೈಲಿ, ಆದಷ್ಟು ಕಡಿಮೆ ಮಾತುಗಳನ್ನು ಬಳಸಿ ಹೇಳಬೇಕಾದಷ್ಟನ್ನು ಅಡಕಮಾಡಿ ಹೇಳುವ ಶೈಲಿ ಅವನದು. ಪಾಂಡುವಿನ ಪ್ರಸಂಗವೂ ಅದಕ್ಕೆ ಹೊರತಾದುದಲ್ಲ.

“ಪಾಂಡು ಮಹಾರಾಜನು ಅಧಿಕ ತೇಜಸ್ವಿಯಾಗಿದ್ದು, ಶತ್ರುಗಳನ್ನೆಲ್ಲ ದಮನ ಮಾಡಿರುತ್ತಾ ಇರುವಲ್ಲಿ ಒಂದುದಿನ” ಎಂದು ಪ್ರಾರಂಭಿಸುತ್ತಾನೆ ಪಂಪ. ತೋಪಿನ ಬೇಟೆಯನ್ನಾಡಲು ಪ್ರೀತಿಯಿಂದ ಹೋಗಿ

ಇನಿಯಳನೞ್ತುಯಿಂದೆ ಮೃಗಿ ಮಾಡಿ ಮನೋಜ ಸುಖಕ್ಕೆ ಸೋಲ್ತಲಂ |
ಬನೆ ನೆರೆಯಲ್ತೆ ದಿರ್ಪ್ಸ ಮುನಿಯುಂ ಮೃಗವಾಗಿ ಮರಲ್ದು ಕೂಡಮ ||
ಲ್ಲನೆ ಮೃಗಮೆಂದು ಸಾರ್ಪು ನೆಱನಂ ನಡೆ ನೋಡಿ ನರೇಂದ್ರನೆಚ್ಚು ಭೋಂ |
ಕನೆ ಮೃಗಜಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ ||

ಇದರ ಅರ್ಥ: “ಪ್ರಿಯೆಯನ್ನು ಪ್ರೀತಿಯಿಂದ ಹೆಣ್ಣು ಜಿಂಕೆಯನ್ನಾಗಿ ಮಾಡಿ, ಮನ್ಮಥ ಸುಖಕ್ಕೆ ಸೋತು, ದಿವ್ಯ ಮುನಿಯು ಅವಳನ್ನು ಸಂತೋಷದಿಂದ ಕೂಡಲೆಂದು, ಉಬ್ಬಿ ಅವಳಲ್ಲಿ ಕೂಡಲು, (ಅವರು ಮನುಷ್ಯರೆಂದರಿಯದೆ) ಜಿಂಕೆಗಳೆಂದು ತಿಳಿದು, ಮೆಲ್ಲನೆ ಸಮೀಪಿಸಿ, ಮರ್ಮಸ್ತಾನವನ್ನು ಸರಿಯಾಗಿ ನೋಡಿ, ಜಿಂಕೆಯಂತೆ ಸಂಚರಿತುತ್ತಿದವನ ಮೇಲೆ ದಿಢೀರನೆ ಬಾಣಪ್ರಯೋಗಮಾಡಿ, ರಾಜನು ತನಗೆ ತಪ್ಪದೆ ಮಾರಿಯನ್ನು ತಂದುಕೊಂಡನು.”

ವ್ಯಾಸರನ್ನು ಎಚ್ಚರಿಕೆಯಿಂದ ಅನುಸರಿಸಿದ್ದಾನೆ, ಪಂಪ. ಋಷಿಯು ಕಾಮವಶನಾಗಿದ್ದುದ್ದು, ಜಿಂಕೆಯ ರೂಪ ತಾಳಿದ್ದು, ಸತಿಗೂ ಜಿಂಕೆಯ ರೂಪ ನೀಡಿದ್ದು, ಇದಾವುದೂ ಅರಿಯದೆ ಪಾಂಡು ಬಾಣಪ್ರಯೋಗ ಮಾಡಿದ್ದು, ಇದೆಲ್ಲ ವ್ಯಾಸರು ಒದಗಿಸಿರುವ ವಿವರಗಳೇ. ಆದರೆ ಪಂಪನು ಇಲ್ಲೂ ಮುಂದೆಯೂ ಇಡೀ ಪ್ರಸಂಗಕ್ಕೆ ನೀಡಿರುವ ಕಾವ್ಯಲೇಪ ಎಂದೂ ಮಾಸದೆ ಥಳಥಳನೆ ಹೊಳೆಯುವಂಥದು ಸಂಕ್ಷಿಪ್ತತೆ ಅವನ ಶೈಲಿಗೆ ಒಂದು ರಭಸವನ್ನು ನೀಡುತ್ತದೆ.

“ಆಗಲಿ ಪ್ರಳಯಕಾಲದ ಉಲ್ಕಾಪಾತವು ಉಕ್ಕುವಂತೆ ತಾನು ಪ್ರಯೋಗಿಸಿದ ಬಾಣವು ಮುನಿಕುಮಾರನ ಕಣ್ಣಲ್ಲಿಯೂ ಇದೆಯಲ್ಲಿಯೂ ಉತ್ತಮ”-

ಇಲ್ಲಿ ಒಂದು ಕ್ಷಣ ನಿಂತು ಪಂಪನ ವಾಸ್ತವ ಗ್ರಹಣ ಶಕ್ತಿಯನ್ನು ಮೆಚ್ಚಬೇಕು. ಪಾಂಡವು ಬಾಣ ಪ್ರಯೋಗ ಮಾಡುತ್ತಿರುವುದು ಮನುಷ್ಯನಿಗಲ್ಲ, ಮನುಷ್ಯನಿಗಾದರೆ ನೇರವಾಗಿ ಎದೆಗೆ ಗುರಿಯಿಡಬೇಕು. ಆದರೆ ಜಿಂಕೆ….. ಬಾಣ ಪ್ರಯೋಗ ಮಾಡಿದ್ದಾನೆ. ಆ ಬಾಣವು ಜಿಂಕೆಯ ಕಣ್ಣನ್ನು ಹಾದು ಎದೆಯನ್ನು ಹೊಕ್ಕದೆ!

ಬಾಣವು ತಗುಲಿದ ಕೂಡಲೇ ಹೇಳಿ, ಯಾವನವನು ಬಾಣ ಪ್ರಯೋಗ ಮಾಡಿದವನು?” ಎಂಬ ಪ್ರಶ್ನೆ ಮುಳಿದ ಮುನಿಯಿಂದ ಹೊರಟಿತು. ಕೂಡಲೇ ಬಿಲ್ಲನ್ನೂ ಬಾಣವನ್ನೂ ಎಸೆದು ತನ್ನ ಮುಂದೆ ನಿಂತಿದ್ದ ರಾಜನನ್ನು ಋಷಿಯು ನೋಡಿ ಹೀಗೆಂದನು:

ಸನ್ನತದಿಂ ರತಕ್ಕೆಳಸಿ ನಲ್ಲಳೊಳೋಡಗೂಡಿದೆನ್ನನಿಂ |
ತನ್ನೆಯಮಚ್ಚುದರ್ಕೆ ಪೆೞತಿಲ್ಲದು ದಂಡಮೊೞಲ್ದು ನಲ್ಲಳೊಳ್ ||
ನೀನ್ನಡೆನೋಡಿಯುಂ ಬಯಸಿ ಕೂಡಿಯುಮಾಗಡೆ ಸಾವೆಯಾಗಿ ಪೋ |
ಗಿನ್ನೆವೆ ರೌದ್ರಶಾಪ ಪರಿತಾಪ ವಿಚಾಪದೊಳಾ ಮಹೀಶ್ವರಂ ||

ಸಂಭೋಗವನ್ನು ಬಯಸಿ ಪ್ರಿಯೆಯಲ್ಲಿ ಪ್ರೀತಿಸಿ ಕೂಡಿದ ನನ್ನನ್ನು ಹೀಗೆ ಅನ್ಯಾಯದಿಂದ ಬಾಣಪ್ರಯೋಗ ಮಾಡಿ (ಕೊಂದುದರಿಂದ) ನಿನಗೆ ಬೇರೆ ಶಿಕ್ಷೆಯಿಲ್ಲ. ಏಕೆಂದರೆ ನೀನು (ನಿನ್ನ) ನಲ್ಲೆಯಲ್ಲಿ ಪ್ರೀತಿಯಿಂದ (ಅವಳನ್ನು) ಚೆನ್ನಾಗಿ ನೋಡಿ, ಬಯಸಿ ಕೂಡಿದ ಕೂಡಲೇ ಸಾಯುತ್ತೀಯೆ, ಇನ್ನು ಹೋಗು. (ಹೀಗೆ ಹೇಳಲು) ಆ ಪಾಂಡುರಾಜನು ಭಯಂಕರವಾದ ಶಾಪದಿಂದಾದ ಸಂಕಟದ ರೋದನದಿಂದ

ಎನ್ನಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು

ನಾನು ಮಾಡಿದ ಕಾಮಕ್ರೀಡಾ ವಿಘ್ಣಕ್ಕೆ, ಸ್ವೇಚ್ಛಾಚಾರದಿಂದ (ದೊರೆತ ಈ ಶಾಪವು) ಏನೂ ದೊಡ್ಡದಲ್ಲ ಎಂದು ಹೇಳುತ್ತಾ ಚಿಂತೆಗೆ ಒಳಗಾದನು. ಅಲ್ಲದೆ:

ಎತ್ತವನಮೆತ್ತಮೃಗಯಾ
ವೃತ್ತಕಮೀ ತಪಸಿಯೆತ್ತ ಮೃಗಮೆಂದೆಂತಾ ||
ನೆತ್ತೆಚ್ಚೆನಾತ್ಮಕರ್ಮಾ
ಯತ್ತಂ ಪೆಱತಲ್ತಿದೆಲ್ಲ ಮಘಟಿತಘಟಿತಂ ||

ಎಲ್ಲಿಯ ಕಾಡು, ಎಲ್ಲಿಯ ಬೇಟೆ, ಎಲ್ಲಿಯ ಋಷಿ, ಎಲ್ಲಿಯ ಜಿಂಕೆ, ಎಲ್ಲಿಯ ಬಾಣ ಪ್ರಯೋಗ ಇದೆಲ್ಲ ನನ್ನ ಕರ್ಮದಿಂದಾಯ್ತು. ಬೇರೆಯಲ್ಲ. ಏಕೆಂದರೆ ಒಂದಕ್ಕೊಂದಕ್ಕೆ ಏನೂ ಸಂಬಂಧವಿಲ್ಲವಲ್ಲ ಎಂದು ಚಿಂತಿಸತೊಡಗಿದರು.

ಹಾಗಂದುಕೊಂಡವನು ಪಟ್ಟಣಕ್ಕೆ ಹಿಂದಿರುಗಿ ಬಂದು ಭೀಷ್ಮ ದೃತರಾಷ್ಟ್ರ ವಿದುರರಿಗೆ ನಡೆದ ವೃತ್ತಾಂತವನ್ನೇನಾದರೂ ಅನಾಥರೂ ಆದ ಜನರಿಗೆ ತನ್ನಲ್ಲಿದ್ದ ಎಲ್ಲ ವಸ್ತುಗಳನ್ನು ತನ್ನ ಪರಿವಾರದವರನ್ನೆಲ್ಲ ಕರೆಸಿ ಹೀಗೆಂದನು:

ಇಲ್ಲಿ ಸ್ವಲ್ಪ ನಿಂತು ವ್ಯಾಸರಿಂದ ಪಂಪನು ಹೇಗೆ ದೂರ ಸರಿದಿದ್ದಾನೆ ಎಂದು ನೋಡೋಣ: ಕಿಂದಮ ಋಷಿಯು ತಾನು ಏಕೆ ಜಿಂಕೆಯ ರೂಪ ತಾಳಿ, ತನ್ನ ಹೆಂಡತಿಯನ್ನೂ ಜಿಂಕೆಯನ್ನಾಗಿ ಮಾಡಿ ರತಿಸುಖದಲ್ಲಿ ತನ್ಮಯನಾಗಿದ್ದೆ ಎಂಬುದಕ್ಕೆ ಕಾರಣವನ್ನು ನೀಡುತ್ತಾನೆ, ವ್ಯಾಸರಲ್ಲಿ, ತಾನೇ ಮನುಷ್ಯ ವೇಷದಲ್ಲಿ ಸಂಭೋಗದಲ್ಲಿ ತೊಡಗಲು ಮನುಷ್ಯರಿಗೆ ನಾಚಿಸುದು ಕಾರಣ ಎಂದು ಹೇಳುತ್ತಾನೆ. ಅದೊಂದು ಮುಖ್ಯವಾದ ಅಂಶ. ಪಂಪ ಆ ವಿವರಣೆಯನ್ನು ಕೈ ಬಿಟ್ಟಿದ್ದಾನೆ. ಸಂಕ್ಷೇಪವಾಗಿ ಕಥೆಯನ್ನು ನಿರೂಪಿಸುವ ಭರದಲ್ಲಿ ಮೂಲ ಮಹಾಭಾರತದ ಅನೇಕ ಪ್ರಸ್ತುತವಾದ ವಿವರಗಳನ್ನು ಪಂಪ ಬಿಟ್ಟುಬಿಟ್ಟಿದ್ದಾನೆ. ಅದರಿಂದ ಆಗಿರುವ ಹಾನಿಯನ್ನೆಲ್ಲ ಚರ್ಚಿಸುವುದು ಈ ಪ್ರಬಂಧದ ವ್ಯಾಪ್ತಿಗೆ ಹೊರಗಾಗುತ್ತದೆ. ಪ್ರಸ್ತುತ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ಹೇಳುವುದಾದರೆ ಈ ಅಂಶಗಳನ್ನು ಬಿಟ್ಟಿರುವುದು ಪಂಪನ ನಿರೂಪಣಾ ಶಕ್ತಿಗೆ ಗೌರವ ತರುವಂಥದಲ್ಲ. ಏಕೆಂದರೆ, ಜಿಂಕೆಯ ವೇಷದಲ್ಲಿದ್ದ ಋಷಿಗೆ ಬಾಣಬಿಟ್ಟಿದ್ದು ತಪ್ಪು, ಆದ್ದರಿಂದ ಋಷಿಯು ಪಾಂಡುವಿಗೆ ಶಾಪಕೊಟ್ಟದ್ದು ಸರಿ ಎಂಬ ಭಾವನೆಯನ್ನು ಪಂಪನು ತಾಳಿದ್ದ ಎಂದು ಅಭಿಪ್ರಾಯ ಮೂಡುತ್ತದೆ. ವ್ಯಾಸರು ಮಾತ್ರ ಕಿಂದಮನಿಗೂ ಪಾಂಡುವಿಗೂ ನಡೆಯುವ ಸಂಭಾಷಣೆಯನ್ನು ನಿರೂಪಿಸಿ, ಮನುಷ್ಯ ಸ್ವಭಾವದ ಎಲ್ಲ ಮಗ್ಗಲುಗಳನ್ನು ತೆರೆದು ತೋರಿಸಿ, ತಮ್ಮ ಅನುಕಂಪಯೆಲ್ಲ ಪಾಂಡುವಿನ ಕಡೆಗಿದೆ ಎಂಬುದನ್ನು ತೋರಿಸಿದ್ದಾರೆ.

ಕೊಲೆಯಲ್ಲೂ ಬ್ರಾಹ್ಮಣನನ್ನು ಕೊಂದರೆ ಬರುವ ದೋಷ ಹೆಚ್ಚಿನದು ಎಂದು ವ್ಯಾಸರು ಭಾವಿಸಿದ್ದಾರೆ. ಸ್ವಯಂ ವ್ಯಾಸರೇ ಬ್ರಾಹ್ಮಣರಲ್ಲ. ಅಂಥದರಲ್ಲಿ ಅವರ ತಲೆಗೂ ಈ ಕೃತ್ಯ ಹತ್ತಿರುವುದನ್ನು ನೋಡಿದರೆ ಆಶ್ವರ್ಯವಾಗುತ್ತದೆ. ಅಥವಾ ಇಂಥ ಶ್ಲೋಕಗಳನ್ನು ಮುಂದೆ, ಸಮಾಜ ವಿನಾಶಕ ಪ್ರವೃತ್ತಿಯುಳ್ಳ ಬ್ರಾಹ್ಮಣರು ಬರೆದು ಸೇರಿಸಿದರೋ ಹೇಗೋ ಹೇಳುವುದು ಕಷ್ಟ. ನಾನು ಇಲ್ಲ ಅನುಸರಿಸಿರುವುದು ಪುಣೆಯ ವಿಸ್ವಾಂಸ ಮಂಡಲಿಯು ಸುಕ್ತಂಕರ್ ಅವನ ನೇತೃತ್ವದಲ್ಲಿ ಸಿದ್ಧಪಡಿಸಿದ, ಅತ್ಯಂತ ಪ್ರಮಾಣಭೂತವಾದದ್ದು ಎಂದು ಪರಿಗಣಿಸಲ್ಪಟ್ಟಿರುವ ಮಹಾಭಾರತದ ಆವೃತ್ತಿ. ಆದ್ದರಿಂದ ಈ ಬ್ರಹ್ಮಹತ್ಯಾ ದೋಷವು ಭಾರಿಯಾದದ್ದು ಎಂದು ಹೇಳಿರುವ ಶ್ಲೋಕವು ವ್ಯಾಸರದ್ದೇ ಆಗಿರಬಹುದು. ಹಾಗಿದ್ದರೇ ವ್ಯಾಸರ ಮಹಾಮನಸ್ಸು ಆ ಕಾಲದಲ್ಲಿ ಪ್ರಚಲಿತವಾಗಿದ್ದ ಇಂತಹ ಹೀನಾಯವಾದ ಭಾವನೆಗಳನ್ನು ಒಪ್ಪಿತ್ತು ಎಂದು ಹೇಳದೆ ವಿಧಿಯಿಲ್ಲ.

ಪಂಪನು ಕಿಂದಮ-ಪಾಂಡುವಿನ ನಡುವೆ ನಡೆದ ಸಂಭಾಷಣೆಯನ್ನು ಹುಟ್ಟಿರುವುದರಿಂದ ಇಲ್ಲಿ ಈ ವಿಷಯದ ಪ್ರಸ್ತಾಪ ಬರುವುದೇ ಇಲ್ಲ. ಪಂಪನು ಮಾಡಿರುವ ಇನ್ನೊಂದು ಬದಲಾವಣೆಯೆಂದರೆ ಈ ಘಟನೆಯ ಅನಂತರ ಪಾಂಡುವು ಮತ್ತು ಪಟ್ಟಣಕ್ಕೆ ಎಂದರೆ ಹಸ್ತಿನಾಪುರಕ್ಕೆ ಹಿಂದಿರುಗಿ ಬಂದ ಎಂದು ಹೇಳಿರುವುದು. ವ್ಯಾಸರು ಹಾಗೆ ಹೇಳಿಲ್ಲ. ಶಾಪವನ್ನು ಪಡೆದ ಪಾಂಡುವು ತನ್ನ ಸತಿಯರಾದ ಕುಂತಿ-ಮಾದ್ರಿಯರ ಮೂಲಕ ಊರಿಗೆ ವರ್ತಮಾನವನ್ನು ತಲುಪಿಸಲು ಪ್ರಯತ್ನಿಸುತ್ತಾನೆ. ಅವರು ಹಿಂದಿರುಗಲು ಒಪ್ಪುವುದಿಲ್ಲ. ಆದ್ದರಿಂದ ತನ್ನ ಆಭರಣಗಳನ್ನೆಲ್ಲ ಬ್ರಾಹ್ಮಣರಿಗೆ ದಾನ ಮಾಡಿ ಅವರ ಮೂಲಕ ಭಿಕ್ಷಾದಿಗಳಿಗೆ ನಡೆದದ್ದನ್ನೆಲ್ಲ ಹೇಳಿಕಳುಹಿಸುತ್ತಾನೆ. ಬಹುಶಃ ತಪ್ಪಿತಸ್ಥ ಭಾವನೆಯಿರುವುದರಿಂದ ಸ್ವಜನರಿಗೆ ಮುಖ ತೋರಿಸಲು ಅವನ ನಾಚಿರಬಹುದು.

ಪಂಪನು ಮಾಡಿರುವ ಬದಲಾವಣೆ ಮಾನವ ಸ್ವಭಾವಕ್ಕೆ ಅನುಗುಣವಾಗಿದೆ. ಪಾಂಡುವು ತನ್ನ ಜೀವನದಲ್ಲಿ ಒಂದು ಅತ್ಯಂತ ಮುಖ್ಯವಾದ ನಿರ್ಧಾರವನ್ನೂ ಕೈಗೊಳ್ಳುವುದರಲ್ಲಿದ್ದಾನೆ. ಋಷಿ ಶಾಪದಿಂದಾಗಿ ಅವನಿಗೆ ಸ್ತ್ರೀ ಸಂಬಂಧವಿಲ್ಲದ ವಾನಪ್ರಸ್ತಾಶ್ರಮ ಅನಿವಾರ್ಯವಾದ ಸ್ಥಿತಿಯಾಗಿದೆ. ಹಾಗೆ ಇರುವುದರಿಂದ ತಾನು ಅಂಥ ನಿರ್ಧಾರವನ್ನು ಕೈಗೊಳ್ಳಲು ಕಾರಣವೇನು ಎಂಬುದನ್ನು ಹಿರಿಯರಿಗೂ, ಬಂಧು ಬಾಂಧವ ಮಿತ್ರ ಪರಿವಾರ ವರ್ಗಕ್ಕೂ ತಾನೇ ತಿಳಿಸುವುದು ಅತ್ಯಂತ ಉಚಿತವಾದದ್ದು. ಅಲ್ಲದೆ ಮುಂದೆ ನಿಯೋಗದಿಂದ ಮಕ್ಕಳನ್ನು ಪಡೆಯುವ ಕುಂತಿ ಮಾದ್ರಿಯರ ವಿಷಯದಲ್ಲಿ ಬರಬಹುದಾಗಿದ್ದ ಸಣ್ಣಪುಟ್ಟ ಮಾತುಗಳನ್ನೂ ನಿವಾರಿಸುವ ದೃಷ್ಟಿಯಿಂದಲೂ ಅದು ಅತ್ಯಂತ ಅಗತ್ಯವಾದದ್ದು. ನಡೆದದ್ದನ್ನೆಲ್ಲ ತಾನೇ ಭೀಷ್ಮ, ದೃತರಾಷ್ಟ್ರ ವಿದುರರಿಗೆ ಹೇಳುವುದರಲ್ಲಿಯೂ, ಕರ್ಣಾಕರ್ಣಿಯಾಗಿ ಆ ವೃತ್ತಾಂತವೆಲ್ಲ ಅವರಿಗೆ ತಲುಪುವುದರಲ್ಲಿಯೂ ಎಷ್ಟೊಂದು ವ್ಯತ್ಯಾಸವಿದೆಯಲ್ಲವೆ? ಆದುದರಿಂದ ಈ ದೃಷ್ಟಿಯಿಂದ ಪಂಪನು ಮಾಡಿರುವ ಬದಲಾವಣೆಯೂ ಸೂಕ್ತವಾಗಿದೆ.