ಕನ್ನಡ ಭಾಷೆಗೆ ಒಂದು ಹೊಸ ಬನಿಯನ್ನು ಕೊಟ್ಟವರು ವಚನಕಾರರು, ಅವರು ಭಾಷೆಗೆ ಒಂದು ಹೊಸ ಶಕ್ತಿಯನ್ನು ಕೊಡಲು ಸಾಧ್ಯವಾದದ್ದು ಸಾಮೂಹಿಕವಾಗಿ ಅವರ ಹೃದಯದಲ್ಲಿದ್ದ ಒಂದು ಒತ್ತಡ, ಅವರಲ್ಲಿ ಉಕ್ಕುತ್ತಿದ್ದ ಒಂದು ಪ್ರತಿಭಟನಾ ಮನೋಭಾವ, ಓದು ಬರಹ ಬಾರದಿದ್ದರೂ ಸರಿ, ತಮ್ಮ ಹೃದಯದ ಉದ್ವೇಗ, ಉಮ್ಮಳಗಳನ್ನು ಅತ್ಯಂತ ತೀವ್ರವಾದ ಸಾಮಾಜಿಕ ಕಳಕಳಿಯನ್ನು ಅಂದು ತೋರಿಸುತ್ತೇವೆ. ಓದು ಬರಹ ಬಾರದವರನ್ನು ಮುಟ್ಟುತ್ತೇವೆ ಎಂಬ ಆತ್ವವಿಶ್ವಾಸ.

ವಚನಕಾರರ ಮುಖಂಡರು ಒಂದು ಸಾಮಾಜಿಕ ಚಳವಳಿಯನ್ನು ಮಾಡಹೊರಟವರು. ಅವರ ಜೊತೆಯಲ್ಲಿ ಆಧ್ಯಾತ್ಮ ಬೆರೆತುಕೊಂಡಿತು. ಜಗತ್ತಿನಲ್ಲಿ ಇದಕ್ಕೆ ಹಿಂದೆಯಾದರೂ ಇದರ ಅನಂತವಾದರೂ ಹೀಗೆ ಸಾಮಾಜಿಕ ಚಳುವಳಿಯೊಂದಿಗೆ ಆಧ್ಯಾತ್ಮಿಕ ಚಳುವಳಿಯೂ ಬೆರೆತುಕೊಂಡು ಭಾಷೆಯ ಸಮಸ್ತ ಶಕ್ತಿಯನ್ನೂ ಎಚ್ಚರಗೊಳಿಸಿ ಬಳಸಿಕೊಂಡ ಉದಾಹರಣೆಗಳು ಇಲ್ಲ.

ಮಾತಿಗೆ ಸತ್ವ ಬರುವುದು ಯಾವಾಗ? ಶರಣರ ಪ್ರಕಾರ ಅದು ವ್ಯವಹಾರಶಕ್ತಿ ಬಳಕೆಯಾದಾಗ ಅಲ್ಲ. ವ್ಯವಹಾರಕ್ಕೆ ಮಾತಿನ ನಿಘಂಟಿನ ಅರ್ಥಸಾಕು. ಆದರೆ ಆಗ ಅದಕ್ಕೆ ಹೊಸ ಶಕ್ತಿಯನ್ನು ತುಂಬ ಬೇಕಾಗಿಲ್ಲ. ಅವು ಆಗ ಬೇರೆಯದೇ ಬೆಳಕನ್ನು ಚಿಮ್ಮ ಬೇಕಾಗಿಲ್ಲ. ಮಾತು ಸತ್ವಪೂರ್ಣವಾಗುವುದು ಅಂತರಂಗದ ಅರಿವಿನಿಂದ ಅದು ಮೂಡಿದಾಗ, ಅಂತರಂಗದ ಅರಿವಿನ ಶಕ್ತಿ ಅದರಲ್ಲಿ ವಿದ್ಯುತ್ತಿನಂತೆ ಹರಿದಾಗ ಅಲ್ಲಮಪ್ರಭುವಿನ ಈ ವಚನವನ್ನು ಪರಿಭಾವಿಸಿ:

ತನ್ನ ತಾನಱುದಡೆ ನುಡಿಯೆಲ್ಲಾ ತತ್ವನೋಡಾ!
ತನ್ನ ತಾನುಱಿದಡೆ ನುಡಿಯೆಲ್ಲಾ ಮಾಯೆ ನೋಡಾ!
ಅಱೆದು ಮಱೆದ ಶಿವಯೋಗಿಯ ಶಬುದವೆಲ್ಲಾ ಉಪದೇಶವಲ್ಲದೆ ಭಿನ್ನವುಂಟೆ?

ಪ್ರಭು ಈ ವಚನದ ಮಾತುಗಳಲ್ಲಿ ಎಂಥ ಸೊಗಸಾದ ಭಾವದ ಕಣ್ಣು ತೆರೆಸಿದ್ದಾನೆ! ತನ್ನನ್ನು ತಾನು ಅರಿತವನ್ನು ಮಾತನಾಡಿದರೆ ಆ ಮತ ತತ್ವ. ಹಾಗೆ ಆತ್ಮಜ್ಞಾನವಿಲ್ಲದೆ ಆಡುವವನ ಮಾತು ಮಾಯೆ. ಇದಕ್ಕಿಂತ ಹೆಚ್ಚಾಗಿ ಭಾವ ಸೊಗುಸುವುದು ಇಲ್ಲ! ತತ್ವವನ್ನು ಅರಿತು ತಾನು ಅದನ್ನು ಅರಿತಿದ್ದೇನೆ ಎಂಬುದನ್ನು ಮರೆತುಬಿಡಬೇಕು. ಹಾಗೆ ಮರೆತವನು, ತಾನು ಆತ್ಮಜ್ಞಾನಿ ಎಂಬ ಅಹಂಕಾರವನ್ನು ಕೂಡ ಪೂಣ್ವಾಗಿ ಕಳೆದುಕೊಂಡವನು ಬಾಯಿತೆರೆದರೆ, ನುಡಿದರೆ ಆ ನುಡಿಯೆಲ್ಲಾ ಉಪದೇಶವಾಗುತ್ತದೆ!

ಮಾತು, ಶಬ್ದ ಅರ್ಥವನ್ನು ಹೆರಬಲ್ಲದು, ಅದು ಅನುಭಾವ ಗರ್ಭವತಿಯಾಗಿದ್ದರೆ, ಇಲ್ಲದಿದ್ದರೆ ಅದು ಬಂಜೆಯಾಗಿಯೂ ಉಳಿಯುತ್ತ ಎಂಬುದನ್ನು ಇನ್ನೊಂದು ವಚನದಲ್ಲಿ ಅಲ್ಲಮಪ್ರಭು ಹೇಳಿದ್ದಾನೆ.

ಅರಿದರಿದು ಅರಿವು ಬಂಜೆಯಾಯಿತ್ತು
ಮರಮರೆದು ಮರಹು ಬಂಜೆಯಾಯಿತ್ತು
ಗುಹೇಶ್ವರನೆಂಬ ಶಬ್ದ ನಿನೆ ಬಂಜೆಯಾಯಿತ್ತು

ಜ್ಞಾನ ಕೂಡ ಸೋಪಾಧಿಕವಾಗಿದ್ದು ಎಂಬುದನ್ನು ನಮ್ಮ ಶಾಸ್ತ್ರಗಳು ಹೇಳಿದೆ. ಅದು ಅದಕ್ಕೆ ಕುರಿತು ಹೇಳಿದ್ದು: ಅಂಥ ಅವಿದ್ಯೆಯನ್ನು ಪಡೆದು ಪಡೆದು- ಅರಿವೇ, ಅವಿದ್ಯೆಯೇ ಬಂಜೆಯು ಹೋಗಿದೆ. ಹಾಗೆಯೇ ಇದು ಬೇಡ, ಇದನ್ನು ಮರೆಯುತ್ತೇನೆ, ಅವಿದ್ಯೆಯಾದ್ದರಿಂದ ಇದೂ ಬೇಡ ಎಂದು ಮರೆಯ ಹೊರಟರೆ, ಮರವೆ ಎಂಬುದನ್ನೇ ದುಡಿಸಿ ದುಡಿಸಿ ಬಳಸಿದರೆ ಆ ಮರಹು ಕೂಡ ಬಂಜೆಯಾಗುತ್ತದೆ. ಮಾತು ಮಾತಿಗೆ ದೇವರು, ಭಗವಂತ ಎಂದು ಹೇಳುತ್ತಾ ಹೋದರೆ, ಅದಕ್ಕೆ ಅನುಭಾವದ ಬೆಂಬಲವಿಲ್ಲದಿದ್ದರೆ, ಆತ್ಮೀಯತೆಯ ಸೋಂಕು ಇಲ್ಲದೇ ಹೋದರೆ “ಗೊಹೇಶ್ವರ” ಎಂಬ ಶಬ್ದವೂ ಬಂಜೆಯಾಗಿ ಹೋಗುತ್ತದೆ!

ಶಬ್ದ-ಮಾತು ಶರಣರಿಗೆ ಸಾಕಾರವಾದದ್ದು, ಗಟ್ಟಿಯಾದದ್ದು, ಮಾತಿಗೆ ಮಡಿಯುಂಟು, ಮೈಲಿಯುಂಟು, ಅದು ಎಂಜಲೂ ಆಗಬಹುದು. ಅಲ್ಲಮ ಪ್ರಭುವಿನ ಮತ್ತೊಂದು ವಚನ ಪ್ರಾರಂಭವಾಗುವುದೇ ಹಾಗೆ. “ಶಬ್ದವಂಚನೆ ಶ್ರೋತ್ರದೆಂಜಲು!” ಹಾಗೆಯೇ ಪಟ್ಟಿ ಬೆಳೆಯುತ್ತದೆ. ಇಂದ್ರಿಯಗಳನ್ನು ರೂಪರಸಗಳನ್ನೂ ಹೆಕ್ಕಿ ನೋಡುತ್ತಾ ಹೋಗುತ್ತಾನೆ ಪ್ರಭು. “ಸ್ಪರ್ಶವೆಂಬೆನೆ ತ್ವಕ್ಕಿಂಜಲು. ರೂಪಂಜನೆ ನೇತ್ರದೆಂಜಲು, ರುಚಿಯೆಂಬೆನೆ ಜಿಹ್ವೆಯೆಂಜಲು, ಪರಿಮಳವೆಂಬೆನೆ? ಘ್ರಾಣದೆಂಜಲು. ನಾನೆಂಬೆನೆ? ಅರಿವನೆಂಜಲು. ಹಾಗಾದರೆ ಎಂಜಲೇ ಅಲ್ಲದ್ದು ಯಾವುದು?

ಎಂಜಲೆಂಬ ಭಿನ್ನವಳಿದ ಬೆಳಗಿನೊಳಗಣ ಬೆಳಗು ಗೊಹೇಶ್ವರ ಲಿಂಗವು!”

ಶಬ್ದಕ್ಕೆ ಸೂತಕವುಂಟೆ?- ಉಂಟು ಎನ್ನುತ್ತಾರೆ ಜನ ಇಲ್ಲವೇ ಇಲ್ಲ ಎಂದು ಸಾಧಿಸುತ್ತಾನೆ ಅಲ್ಲಮ. “ಶಬ್ದ ಸೂತಕಮವೆಂಬರು, ಶಬ್ದಕ್ಕೆ ಸೂತಕವುಂಟೆ. ತನ್ಮಯ ಸಂದೇಹವಲ್ಲದೆ? ಗಾಳಿಗೆ ಧೂಳಿ ಲೇಪದಪ್ಪುದೆ? ಗೊಹೇಶ್ವರ ಲಿಂಗಕ್ಕೆ ಆ ಭಾವವಿಲ್ಲ ಸಂಗನ ಬಸವಣ್ಣ!

ಮಾತು ಅನಾದಿಯಾದದ್ದು, ಶಬ್ದವೇ ಬ್ರಹ್ಮವಾದ ಕಾರಣ, ಮಾತೇ ಜ್ಯೋತಿರ್ಲಿಂಗವಾದ ಕಾರಣ. ಅಂಥ ಮಾತಿನ ಮೂಲವನ್ನು ಬಲ್ಲವರು ಯಾರಾದರೂ ಇದ್ದರೆ ತೋರಿಸು ಎಂದು ಗುಹೇಶ್ವರನನ್ನು ಕೇಳುತ್ತಿದ್ದಾನೆ, ಅಲ್ಲಮಪ್ರಭು. ಅದು ವಿನಯದ ಪ್ರಶ್ನೆಯಲ್ಲ, ತಿಳಿವಿನ ಸವಾಲು, “ಮಾತಿನ ಮೊದಲ ಬಲ್ಲವರನು ಎನಗೊಮ್ಮೆ ತೋರಾ ಗೊಹೇಶ್ವರಾ? ಒಂದು ವೇಳೆ ಅಂಥವರು ಇರುವುದಾದರೆ, ಅಂಥವರು ಇರುವುದು ಸಾಧ್ಯ. ಅವರು ಆ ಅರಿವನ್ನು ಪಡೆಯುವ ಮುನ್ನ ಏನನ್ನು ಮಾಡಿರಬೇಕು ಎಂಬುದನ್ನು ತಿಳಿಸುತ್ತ ಅಲ್ಲಮನ ಎರಡು ಪಂಕ್ತಿಗಳು ಆಧ್ಯಾತ್ಮಕಾವ್ಯದ ಅದ್ಭುತ ರಸ ಪ್ರತಿಪಾದಕಗಳು: “ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ, ಮಾತಿನ ಮೊದಲ ಬಲ್ಲವರ ಎನಗೊಮ್ಮೆ ತೋರಾ ಗುಹೇಶ್ವರಾ!

ಕಣ್ಣು ಹತ್ತು ಕಡೆ ಸುತ್ತುವಂಥದು. ಅಂತರಂಗದ ಬೆಳಗಿನ ಸೊಬಗನ್ನು ನೋಡುವುದಕ್ಕಂತೂ ಅದು ಅನುಪಯುಕ್ತವಾದದ್ದು. ಆದ್ದರಿಂದ ಆ ಕಣ್ಣಿನ ಕರುಳು ಬಳ್ಳಿಯನ್ನೇ ಅನುಭಾವಿ ಕತ್ತರಿಸಿಹಾಕಿರಬೇಕು. ಇನ್ನು ಮನಸ್ಸು ಸಾಧನೆಯ ಮಾರ್ಗದಲ್ಲಿ ಅದಕ್ಕಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ. ಆದ್ದರಿಂದಲೇ ಮಹಾದೇವಿಯಕ್ಕ ಹೇಳಿದ್ದು.” ಅತ್ತಲಿತ್ತ ಹರಿವ ಮನದ ಶಿರವನರಿದಡೆ-ಎಂದರೆ ಅತ್ತ ಇತ್ತ ಹರಿಯುವ ಮನಸ್ಸಿನ ಕತ್ತನ್ನೇ ಕತ್ತರಿಸಿ ಹಾಕಿದರೆ- ಇನ್ನೇನಿದೆ? –ಬಚ್ಚ ಬರಿಯ ಬಯಲು ಚನ್ನಮಲ್ಲಿಕಾರ್ಜುನ!” ಆದ್ದರಿಂದ ಅಂಥ ಮನಸ್ಸಿನ ತಿರುಳನ್ನು ಹುರಿದು ಇನ್ನು ಬಿತ್ತಿದರೂ ಅದು ಮೊಳೆಯುವಂತೆ ಮಾಡಬೇಕು! ಹಾಗೆ ಮಾಡಿದವನೇ, ಅಂತಹ ಸಿದ್ಧಿಯ ಸ್ಥಿತಿಯನ್ನು ತಲುಪಿದವನೇ ಮಾತಿನ ಮೊದಲನ್ನು ಬಲ್ಲವನಾಗುತ್ತಾನೆ.

“ಶಬ್ದಜಾಲಂ ಮಹಾರಣ್ಯಾಂ, ಚಿತ್ರಭ್ರಮಣಕಾರಣಂ” –ಇದು ಶಾಸ್ತ್ರಕಾರರ ಮಾತು. ಇದನ್ನು ಅನುಭವದಿಂದ ತಿಳಿದವರು ಶರಣರು. ಅನುಭವ ಉಕ್ತಲೇಖನಗೊಳಿಸಿದ್ದನ್ನು ಮಾತೇ ಅವಿಕಾರನಾಗಿ ಬರೆದುಕೊಳ್ಳಬೇಕಾಯಿತು. ಹಾಗೆ ಬರೆದುಕೊಂಡವು ಇವು: “ಶಬ್ದ ಸಂಭ್ರಮದಲ್ಲಿ ಹಿಂದುಗಾಣರು, ಮುಂದುಗಾಣರು ತಮ್ಮ ತಾವರಿಯರು ಇದು ಕಾರಣ ಮೂರು ಲೋಕವಲ್ಲವು ಬರುಸುರೆವೋಯಿತ್ತು ಗುಹೇಶ್ವರಾ!” ಹಾಗೆಯೇ! “ಭಾವದಲ್ಲಿ ಭ್ರಮಿತರಾದವರ ಸೀಮೆಯೇನು, ನಿಸ್ಸೀಮೆಯೇನು? ವಚನದ ರಚನೆಯ ರಂಜನೆಯ ಲೀಲೆಯ ನಾಡುವರು ಗುಹೇಶ್ವರ ನಿಪ್ಪ ಗುಪ್ತವೆಂತಂದರಿಯರು.”

ಮಾತು ಕೃತಿ, ನುಡಿ-ನಡೆ ಒಂದೇ ಆಗಿರಬೇಕು ಎಂಬ ಮಾತನ್ನು ಬಹಳ ಸಲ ಬಹಳ ಸಂದರ್ಭಗಳಲ್ಲಿ ಕೇಳಿದ್ದೇವೆ. ಒಂದು ಮತ್ತೊಂದನ್ನು ತುಂಬುವುದು, ಎರಡೂ ಅಭಿನ್ನ ಅದ್ವೈತವಾಗುವುದು ಕಣ್ಣನ್ನು ತುಂಬುವ ಪ್ರತಿಮೆಯಾಗುತ್ತದೆ ಶರಣರಲ್ಲ. ಷಣ್ಮುಖ ಸ್ವಾಮಿಯವರ ಒಂದು ವಚನ ಹೀಗಿದೆ: “ನಡೆಯೊಳಗೆ ನುಡಿ ತುಂಬಿ, ನುಡಿಯೊಳಗೆ ನಡೆ ತುಂಬಿ, ನಡೆ ನುಡಿ ಎರಡನು ಪರಿಪೂರ್ಣ ತುಂಬಿ, ಲಿಂಗವ ಕೊಡ ಬಲ್ಲಾತನೇ ಶರಣ ನೋಡಾ ಅಖಂಡೇಶ್ವರಾ.”

ಮಾತು ಪಾತವಾದರೆ? ಎಂದರೆ ಮಾತು ಪಕ್ವವಾದರೆ? ಅದು ಅಗ್ನಿಯೇ ಆದ್ದರಿಂದ, ಜ್ಯೋತಿಯೇ ಆದ್ದರಿಂದ ಅದೇ ಅಗ್ನಿಶುದ್ಧವಾದರೆ? ಅದೇ ಮಹಾಂತ ಸ್ಥಿತಿಯೇ-ಅಲ್ಲ ಎನ್ನುತ್ತಾನೆ, ಯಾವುದರಿಂದಲೂ ತೃಪ್ತಿಯನ್ನೇ ಪಡೆಯದ ಅಲ್ಲಮ ಮತ್ತೆ? “ಗುಹೇಶ್ವರ ಲಿಂಗದಲ್ಲಿ ವಾಕು ಪಾಕವಾದಡೇನು? ಮನ ಪಾಕವಾಗದನ್ನಕ್ಕರ?

ಅನುಭಾವಿಯ ಅಂಥ ಮಾತು ಆತ್ಮಲಿಂಗವನ್ನು ತೆರೆದು ತೋರಿಸಬಲ್ಲದು ಎನ್ನುತ್ತಾರೆ, ಬಸವಣ್ಣನವರು ಒಂದು ಸೊಗಸಾದ ವಚನದಲ್ಲಿ:

ಕೆರೆ ಹಳ್ಳ ಬಾವಿಗಳು ಮೈದೆಗೆದರೆ
ಗೊಳ್ಳಗೊರಚೆ ಚಿಪ್ಪುಗಳು ಕಾಣಬಹುದು.
ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು.
ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವೆ ಕಾಣಬಹುದು!

ಶಬ್ದ ಇನ್ನೂ ಮೂರ್ತವಾಗಿ, ಸೋಪಾನ ಪಂಕ್ತಿಗಳನ್ನು ನಿರ್ಮಿಸಲು ಬೇಕಾದ ಅಮೃತ ಶಿಲೆಯುಹಾಸು-ಗಲ್ಲಾಗಿ ಕಂಡಿದೆ ಚೆನ್ನಬಸವಣ್ಣನವರ ಅನುಭಾವನದ ಕಣ್ಣಿಗೆ:

ಪಾತಾಳ ದಗ್ಗವಣಿಯ ನೇಣಿಲ್ಲದೆ, ಸೋಪಾನದ ಬಲದಿಂದಲ್ಲದೆ ತೆಗೆಯಬಹುದೆ?
ಶಬ್ದ ಸೋಪಾನವ ಕಟ್ಟಿ ನಡೆಸಿದವರು ಪುರಾತನರು.
ದೇವ ಲೋಕಕ್ಕೆ ಬಟ್ಟೆಕಾಣಿರೋ.
ಮರ್ತ್ಯ ಲೋಕದವರ ಮನ ಮೈಲಿಗೆಯ ಕಳೆಯಲೆಂದು
ಗೀತವುಂತೆಂಬ ಜ್ಯೋತಿಯ ಬೆಳಗಿಕೊಟ್ಟರು
ಮೊದಲ ಚೆನ್ನಸಂಗನ ಶರಣರು

ಶರಣರು ಮಾತನ್ನು ಮಾತ್ರವೇ ಹೀಗೆ ಮಾತನಾಡಿಸಿದ್ದಲ್ಲ. ಇನ್ನು ಹೀಗೆಯೇ ಅಮೂರ್ತವಾದ ಇತರ ಅನೇಕ ಭಾವ, ಭಾವನೆಗಳಿಗೂ ಅವರು ರೂಪ ಕೊಟ್ಟಿದ್ದಾರೆ. ಅಲ್ಲಮನ ಈ ವಚನ ಅಂಥದಕ್ಕೆ ಇನ್ನೊಂದು ಉಜ್ವಲ ಉದಾಹರಣೆ:

ಅಜ್ಞಾನವೆಂಬ ತೊಟಿಟ್ಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲವೇದಶಾಸ್ತ್ರವೆಂಬ ನೇಣಕಟ್ಟ ಹಿಡಿದು ತೂಗಿ
ಜೋಗುಳ ವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು, ನೇಣು ಹರಿದು, ಜೋಗುಳ ನಿಂದಲ್ಲದೆ
ಗೊಹೇಶ್ವರನೆಂಬ ಲಿಂಗನ ಕಾಣಬಾರದು.

ಅಜ್ಞಾನ ಎಂಬುದೇ ಅಸ್ಪಷ್ಟವಾದದ್ದು, ಅಪರೂಪವಾದದ್ದು ತಾನು “ಅಜ್ಞಾನ” ಎಂಬುದು ಇತರರಿಗೆ ತಿಳಿಯಲು ಕೂಡ ಸಾಧ್ಯವಿಲ್ಲದ ಸ್ವರೂಪದ್ದು ಅದು. ಅಲ್ಲಮಪ್ರಭು ಅದನ್ನು ತೊಟ್ಟಿಲಾಗಿಸಿದ್ದಾನೆ. ಇನ್ನು ಜ್ಞಾನ. ಅದರ ಸ್ವರೂಪ ಇಂಥದು ಎಂದು ವೇದಾಗಮ ಪುರಾಣಗಳೇ ತಿಳಿಸಲು ಅಸಮರ್ಥವಾಗಿದೆ. ಅಂಥದನ್ನು ಪ್ರಭು ಲೀಲಾಜಾಲವಾಗಿ ಒಂದು ಶಿಶುವಾಗಿ ಮಾಡಿ ಅಜ್ಞಾದ ತೊಟ್ಟಿಲಲ್ಲಿ ಮಲಗಿಸಿ ಬಿಟ್ಟಿದ್ದಾನೆ! ಆ ತೊಟ್ಟಲಿಗೆ ಕಟ್ಟಿರುವ ಹಗ್ಗ ಎಲ್ಲ ವೇದಶಾಸ್ತ್ರಗಳು. ಅವುಗಳಿಂದ ಜ್ಞಾನ ಸಾಧನೆ ಸಾಧ್ಯವೇ ಇಲ್ಲ ಎಂಬುದು ಆಧುನಿಕ ಅನುಭಾವಿ ಶ್ರೀ ರಾಮಕೃಷ್ಣಪರಮ ಹಂಸರು ವಾಣಿ ಕೂಡ. ಮಹಾದೇವಿಯಕ್ಕ ಅವುಗಳಿಗೆ ಇಂಥದೇ ಸ್ಪಷ್ಟ ರೂಪಕೊಟ್ಟಿರುವುದು ಉಂಟು. “ವೇದಶಾಸ್ತ್ರ ಪುರಾಣಾಗಮಂಗಳಲ್ಲಿ ತಿಳಿವಳಿಕೆಯುಳ್ಳವರಿಗೆ ನಿಲುಕ ರೂಪಕವನ್ನಾಗಿ ಮಾಡಿದ್ದಾನೋ ಅದನ್ನು ಮಹಾದೇವಿಯಕ್ಕ. ಮನೆಯಲ್ಲಿದ್ದು ಕೊಟ್ಟಣಕುಟ್ಟುವ ಹೆಣ್ಣುಗಳಿಗೂ ತಿಳಿಯುವಂಥ ರೂಪಕವನ್ನಾಗಿ ಮಾಡಿದ್ದಾಳೆ. ಪ್ರಭುವಿನ ರೂಪಕಸಂಪತ್ತನ್ನು ಮುಂದುವರಿಸಿದರೆ ಕಾಣುತ್ತದೆ ತಾಯಿಯೊಬ್ಬಳು ನಿಂತು, ಜ್ಞಾನದ ಶಿಶು ಮಲಗಿರುವ ಅಜ್ಞಾನದ ತೊಟ್ಟಿನಲ್ಲಿ ತೂಗುತ್ತಿರುವ ದೃಶ್ಯ. ಆಕೆ ಭ್ರಾಂತಿ ಎಂಬ ತಾಯಿ. ಅವಳು ತೊಟ್ಟಿಲು ತೂಗುತ್ತಿರುವವರೆಗೂ ಜ್ಞಾನ ಎಂಬ ಶಿಶು ನಿದ್ರೆಯಿಂದ ಏಳುವುದೇ ಇಲ್ಲ. ಅವಿದ್ಯೆಯ ಹಗ್ಗ ಕತ್ತರಿಸಬೇಕು, ಅಜ್ಞಾನ ಎನ್ನುವ ತೊಟ್ಟಿಲು ಮುರಿಯಬೇಕು, ಮಾಯೆ ಹಾಡುತ್ತಿರುವ ಜೋಗುಳ ನಿಲ್ಲಬೇಕು. ಆಗಲೀಗ ಗುಹೇಶ್ವರನೆಂಬ ಲಿಂಗವನ್ನು ಕಾಣುವುದು ಸಾಧ್ಯವಾಗುತ್ತದೆ.

ಮುಕ್ತಾಯಕ್ಕ ಒಬ್ಬ ಶರಣೆ. ಅವಳ ಅಣ್ಣ ಜ್ಞಾನಿಯಾದ ಅಜಗಣ್ಣ. ಆತ ತೀರಿಕೊಂಡಿದ್ದಾನೆ. ಮುಕ್ತಾಯಕ್ಕ ಅವನು ಬಯಲಾದುದನ್ನು ಕುರಿತು ದುಃಖಿಸುತ್ತಾ ತನ್ನ ಅಣ್ಣನ ನಿಲುವನ್ನು ವಿವರಿಸುವ ರೀತಿ ಇದು:

ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ
ಬಯಲ ಬೊಂಬೆಯ ಕೈಯಲ್ಲಿ ಕೊಟ್ಟು ಮದ್ದಾನಿಸುತ್ತಿರ್ದ್ದನಯ್ಯಾ
ಕರ್ಪೂರದ ಪುತ್ತಲಿಗೆ ಅಗ್ನಿಯ ಸಿಂಹಾಸನವನಿಕ್ಕಿ
ಅಗ್ನಿಕರಗಿ ಕರ್ಪೂರ ಉಳಿದುದಕ್ಕೆ ಬೆಱಗಾದೆನಯ್ಯಾ
ಎನ ಅಜಗಣ್ಣನ ಯೋಗಕ್ಕೆ

ನಿಕಾರವಾದ ಎಷ್ಟೊಂದತ್ತ ಇಲ್ಲ ಆಕಾರದಾನವಾಗಿದೆ! ದೇಹ ಅನಿತ್ಯವಾದದ್ದು. ಆದ್ದರಿಂದ ಅಸು ನೀರಬೊಂಬೆ ಆಗಬಹುದು. ಆದರೆ ಆ ದೇಹವೇ ಶೂನ್ಯ ಸಂಪಾದನೆಗೆ- ಆತ್ಮಜ್ಞಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು. ಆದ್ದರಿಂದ ಅದಕ್ಕೇ ದಿವ್ಯತೆಯ ಸ್ಪರ್ಶವಾಗಿದೆ. ಅಂಗವೇ ತಾನೆ ಲಿಂಗವಾದದ್ದು. ಆದ್ದರಿಂದ ಅದಕ್ಕೆ ನಿರಾಳದ ಗೆಜ್ಜೆಯನ್ನು ಅಜಗಣ್ಣ ಕಟ್ಟಿದ ಎಂದು ಮುಕ್ತಾಯಕ್ಕ ಹೇಳುತ್ತಿದ್ದಾಳೆ. ಈಗ ಅಂಥದೇಹದ ಅವಸಾನವಾಗಿದೆ. ಅದನ್ನು ಬಯಲಿಗೆ ಎಂದರೆ ಪರಬ್ರಹ್ಮಕ್ಕೆ ಅರ್ಪಿಸಿದ್ದಾಯಿತು. ಆ ಅರ್ಪಿಸಿದ ಕ್ರಿಯೆಯನ್ನೂ ಮುಕ್ತಾಯಕ್ಕ ಎಷ್ಟು ಸೊಗಸಾಗಿ ಹೇಳುತ್ತಿದ್ದಾಳೆ?” ಬಯಲ ಬೊಂಬೆಯ ಕೈಯಲ್ಲಿ ಕೊಟ್ಟು ಮದ್ದಾಡಿಸುತ್ತಿರ್ದನಯ್ಯ! ಆ ಬಯಲ ಬೊಂಬೆ ಈ ನೀರ ಬೊಂಬೆಯನ್ನು ಹಿಡಿದು ಆಡವಾಡುತ್ತಿದೆ! ನಿರಾಳದ ಗೆಜ್ಜೆ ಘುಲುಘುಲಿಸುತ್ತಿದೆ! ಈ ಸ್ಥಿತಿಯನ್ನೇ ಮನಸ್ಸಿಗೆ ಮುಟ್ಟಿಸುವ ಮತ್ತೊಂದು ರೂಪಕವೂ ಉಂಟು. ಕರ್ಪೂರದ ಪ್ರತಿಮೆ, ಅದಕ್ಕೆ ಅಗ್ನಿಯ ಸಿಂಹಾಸನ. ದೇಹ ಪಂಚಭೂತಗಳಿಂದಾದದ್ದು. ಅದು ಕರ್ಪೂರದ ಗೊಂಬೆ. ಅದಕ್ಕೆ ಜ್ಞಾನದ ಅಗ್ನಿಯ ಸಿಂಹಾಸನ. ಈಗ ಒಂದು ವಿಚಿತ್ರ ನಡೆದಿದೆ. ಅಗ್ನಿ ಕರಗಿ ಹೋಗಿದೆ. ಕರ್ಪೂರದ ಗೊಂದೆ ಉಳಿದಿದೆ. ಮುಕ್ತಾಯಕ್ಕನ ಮನಸ್ಸನ್ನು ಜ್ಞಾನ ತುಂಬಬೇಕು, ಅಲ್ಲಿಂದ ಅಜಗಣ್ಣನ ನೆನಪು ಅಳಿಯಬೇಕು. ಅದು ಜ್ಞಾನಿಯಾದವಳ, ಅನುಭಾವಿಯಾದವಳ ಲಕ್ಷಣ. ಆದರೆ ಹಾಗಾಗಿಲ್ಲ. ಅವಳಲ್ಲಿ ಅಣ್ಣನ ವಿಷಯಕ್ಕೆ ಮೋಹ ಉಳಿದಿದೆ. ಅವನು ಯೋಗಿಯಾಗಿದ್ದರಿಂದ, ತನ್ನನ್ನು ಯೋಗದ ಬೆಳಕನ್ನು ನಡೆಸುತ್ತಾ ಇದ್ದುದರಿಂದ ಆ ಮೋಹ ಇನ್ನು ದಟ್ಟವಾಗಿದೆ. ಪುಣ್ಯದ ವಿಷಯ ಎಂದರೆ ತನಗೆ ಅಂಥ ಮೋಹ ಉಂಟು ಎಂಬ ಅರಿವೂ ಅವರಿಗೆ ಇದೆ! ಆದ್ದರಿಂದಲೇ ಅಗ್ನಿ ಕರಗಿತು, ಕರ್ಪೂರದ ಗೊಂಬೆ ಉಳಿಯಿತು ಎಂಬುದು ಅವಳ ಅನುಭವ. ಅವಳ ಅನುಭವಕ್ಕೆ ಅವಳು ಮಾತನ್ನು ಕೊಟ್ಟ ರೀತಿ ಅದು.

ವಚನಕಾರರು ಸಮಾಜದ ಬೇರೆ ಬೇರೆ ವರ್ಗಗಳಿಂದ ಬಂದವರು. ತಮ್ಮ ವಚನಗಳಲ್ಲಿ ತಮ್ಮ ವರ್ಗದ, ತಮ್ಮ ಕಸುಬಿನ ಪಾರಿಭಾಷಿಕ ಪದಗಳನ್ನು ಬಳಸಿ ತಮ್ಮ ವ್ಯಕ್ತಿತ್ವ ವಿಶಿಷ್ಟತೆಯನ್ನು ಅವುಗಳಲ್ಲಿ ಉಳಿಸಿದ್ದಾರೆ. ಅಂಬಿಗರ ಚೌಡಯ್ಯ, ಅವನ ಹೆಸರೇ ಹೇಳುವಂತೆ ದೋಣಿ ನಡೆಸುವ ಕಾಯಕವನ್ನು ಮಾಡುತ್ತಿದ್ದವನು. ಅವನೇ ತನ್ನ ದೋಣಿ ನಡೆಸುವ ಕಾಯಕವನ್ನೂ ಆಧ್ಯಾತ್ಮವನ್ನು ಬೆರೆಸಿ ರಚಿಸಿರುವ ವಚನ ಇದು.

ತಡೆ ನೆಲೆ ಇಲ್ಲದ ಮಹಾಗವಿಯಲ್ಲಿ
ಒಡಲಿಲ್ಲದ ಅಂಬಿಗ ಬಂದಿದ್ದೇನೆ.
ಹಿಡುವ ಬಿಡುವ ಮನವ ಬೆಲೆಗೊಟ್ಟದೆ
ಕಡೆಗಾಣಿಸಿ ಹಾಯಿಸುವ ಮಹಾ ಹೊಳೆಯ
ನುಡಿ ಇಲ್ಲದ ನಿಸ್ಸೀಮ ಗ್ರಾಮದಲ್ಲಿರುವೆನೆಂದಾತನು ಅಂಬಿಗ ಚೌಡಯ್ಯ.

“ಹಿಡಿವ ಬಿಡುವ ಮನ” ಇಂಥ ಉಕ್ತಿ- ಅಂಬಿಗನಿಂದ ಹೇಗೆ ಬಂತು ಎಂದು ಆಶ್ಚರ್ಯಪಡುವಷ್ಟರಲ್ಲಿಯೇ ಅವನಿಗೆ ತಾನು “ಒಡಲಿಲ್ಲದವನು” ಎಂಬ ಅರಿವು ಬಂದಿದೆ ಎಂಬುದು ನೆನಪಾಗುತ್ತದೆ. ಅಲ್ಲದೆ ತಾನು ಜನರನ್ನು ಕರೆದೊಯ್ಯುತ್ತಿರುವುದು ‘ನುಡಿ ಇಲ್ಲದೆ ನಿಸ್ಸೀಮ ಗ್ರಾಮಕ್ಕೆ’ ಎಂಬ ಅರಿವೂ ಅವನಿಗುಂಟು. ಈ ಎಲ್ಲವೂ ಅನುಭಾವದ ಆಳದಿಂದ ಮೂಡಿ ಬಂದ ಮಾತುಗಳು.

ಚರ್ಮಹದಮಾಡಿ ಚಪ್ಪಲಿ ಹೊಲಿಯುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದ ಮಾದಾರ ದೂಳಯ್ಯನೂ ತನ್ನ ಕಾಯಕದ ಪರಿಭಾಷೆಯನ್ನು ಬಳಸಿ ವಚನಗಳನ್ನು ರಚಿಸಿದ್ದಾನೆ. ಒಂದು ವಚನ ಹೀಗಿದೆ.

ಅಱುದು ಚುಚ್ಚುವರೆಲ್ಲರೂ ದನದಟ್ಟಿ
ಮಱೆದು ಚುಚ್ಚುವರಲ್ಲರೂ ದನದಟ್ಟೆ
ನಾ ಚುಚ್ಚುವುದೆಲ್ಲವೂ ಸತ್ತ ಜೀವ ದನದಟ್ಟೆ
ಅಟ್ಟೆಯ ಕೊಯ್ದು ಮೆಟ್ಟಿಸಿದೆ ಸತ್ಯರಿಗಲ್ಲಕ್ಕೂ
ಎದೆಗೆ ಬಟ್ಟ ಬಯಲು ತೋಱ ಬೇಕೆಂದು
ನಿಮ್ಮ ಬಟ್ಟೆಯಲ್ಲಿ ನೀವೇ ಹೋಗಿ
ಎನ್ನ ಬಟ್ಟೆ ಕಾಮಧೂಮ ಧೂಳೇಶ್ವರನ ಬಟ್ಟೆಯ ಸಾಕು.

ಬುಟ್ಟಿ ಹಣಿಯುವ ಕಾಯಕದ ಮೇದರ ಕೇತಯ್ಯನ ಒಂದು ಸೊಗಸಾದ ವಚನವುಂಟು. ಕಾವ್ಯಗುಣವೂ ಅನುಭಾವದ ಸಾಂದ್ರತೆಯೂ ಹದವಾಗಿ ಎರಕಗೊಡಿರುವುದಕ್ಕೆ ಅವನ ಈ ವಚನ ಒಳ್ಳೆಯ ನಿದರ್ಶನ:

ಒಂದು ಬಿದಿರಿಗೆ ಕವೆ ಮೂಱು
ಕವೆಯ ಒಳಗೆ ಲಕ್ಷ ಸಿಬಿಱು
ಮೂಱು ಕವೆಯ ಕೊಚ್ಚಿಸಿ ಲಕ್ಷ ಸಿಬಿಱು ಬಿಡಿಸಿ
ಸೀಳಿದ ಬಿದಿರ ಹೊರಹೊರೆಯಲ್ಲಿ ನೆಯ್ದಡೆ
ತೊಟ್ಟಿಲ ಸಂದ ಕಾಮದಂತೆ ನಾಲ್ಕು ಕಾಲನಿಕ್ಕಿ
ಅಂದು ಅಂದರಾದ ತೊಟ್ಟಿಲ ದಂಡೆಯನಿಕ್ಕಿ
ಕಟ್ಟುವುದಕ್ಕೆ ಶ್ರುತ ದೃಷ್ಟವಂಜೆರಡು ದಾರದಲ್ಲಿ ತೊಟ್ಟಿಲ ಕಟ್ಟಿ
ಗುಹೇಶ್ವರ ಲಿಂಗಕ್ಕೆ ಹುಟ್ಟು ಹೇಗೋ ಎಂದು ಜೋಗುಳ ವಾಡಿದೆ.

ಇಂದ್ರಿಯಂಗಳ ಕೊಂದಿಹೆನೆಂದೊಡೆ ಅವು ಕಂದರ್ಪನ ಹಂಗು
ಕಂದರ್ಪನ ಕೊಂದಿರುಗೆಂದಡೆ ಅವು ಕಂಗಳ ಲಾಭ
ಕಂಗಳ ಮುಚ್ಚಿಯಲ್ಲದೆ ಲಿಂಗವ ಕಾಣಬಾರದು
ಅದು ನಿರಂಗಂಗಲ್ಲದೆ ಜಗದ ಹಂದಿನವರಿಗಿಲ್ಲ ಎಂದು ಗುಹೇಶ್ವರಾ.

ಸೂಳೆ ಸಂಕವ್ವೆಯ ಒಂದೇ ಒಂದು ವಚನ ದೊರೆತಿದೆ. ಅದೂ ಅವಳ ಕಾಯಕದಲ್ಲಿ ಎಂತಹ ಕಠಿಣವಾದ ನಿಷ್ಠೆಯ ಅವಶ್ಯಕತೆಯಿದೆ ಎಂಬುದನ್ನು ತೋರಿಸುತ್ತದೆ.

ಒತ್ತೆಯ ಹಿಡಿದು ಮತೊತ್ತೆಯ ಹಿಡಿಯೆ
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ
ವ್ರತಹೀನನಱುದು ಬೆರೆದಡೆ
ಕಾದಕತ್ತಿಯಲ್ಲಿ ಕೈಕಿವಿ ಮೂಗ ಕೊಯ್ವರಯ್ಯಾ
ಒಲ್ಲೆಗೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ.
ನಿರ್ಲಜ್ಜೇಶ್ವರಾಎಂಬುದು ಅವಳ ಅಂಕಿತ. ಅದೂ ಎಷ್ಟು ಧ್ವನಿಪೂರ್ಣ!

ವಚನ ಸಾಹಿತ್ಯ ಅಪಾರವಾದದ್ದು ಅದರ ಕೆಲವು ಮುಖಗಳನ್ನು ಮಾತ್ರ ಇಲ್ಲ ಪರಿಚಯಿಸುವ ಪ್ರಯತ್ನ ನಡೆದಿದೆ.