ಅಲ್ಲಮ ಪ್ರಭು ಬದುಕಿದ್ದದ್ದು ಭರತ ಖಂಡವು ಹಿಂದೆಂದೂ ಕಂಡರಿಯದಿದ್ದ ಸ್ವರೂಪದ ಸಾಮಾಜಿಕ ಕ್ರಾಂತಿ ನಡೆಯುತ್ತಿದ್ದ ಒಂದು ಅವಧಿಯಲ್ಲಿ. ಕಾಲದ ದೃಷ್ಟಿಯಿಂದ ಅದು ತೀರ ಹ್ರಸ್ವವಾದ ಒಂದು ಅವಧಿ. ಅದುವರೆಗೆ ಹಿಂದೂ ಧರ್ಮದಲ್ಲಿ ಆಳವಾಗಿ ಬೇರು ಬಿಟ್ಟಿದ್ದ, ಹಿಂದೂ ಧರ್ಮ ಇದುವರೆಗೂ ಕಿತ್ತೊಗೆಯಲು ಸಾಧ್ಯವಾಗದಿರುವ, ಆ ಧರ್ಮಕ್ಕೆ ಶಾಪರೂಪಿಯಾಗಿರುವ ಜಾತೀಯತೆಯನ್ನೂ ಮೂಲೋತ್ಪಾಟನೆ ಮಾಡಲು ಬಸವಣ್ಣನವರ ನೇತೃತ್ವದಲ್ಲಿ ಒಂದು ಚಳುವಳಿ ನಡೆಯುತ್ತಿದ್ದುದು ಒಂದು ಕಡೆ. ಸ್ತ್ರೀಯರಿಗೆ ಪುರುಷರೊಂದಿಗೆ ಸಮಾನತೆಯನ್ನು ಸಾಧಿಸಿಕೊಡುವ ಪ್ರಯತ್ನ ಮತ್ತೊಂದು ಕಡೆ. ಪ್ರತಿಯೊಬ್ಬನೂ- ಆಳಾಗಲೀ ಅರಸಾಗಲಿ ದುಡಿದೇ ತಿನ್ನಬೇಕೆನ್ನುವ ಕಾಯಕ ತತ್ವವನ್ನು ಅನುಷ್ಟಾನಕ್ಕೆ ತರುವ ಪ್ರಯತ್ನ ಇನ್ನೊಂದು ಕಡೆ ಇವುಗಳಲ್ಲಿ ಒಂದೊಂದೂ ಅಸಾಧಾರಣವಾದ ಗೊಂದಲವನ್ನೂ ಉಂಟುಮಾಡುತ್ತಿತ್ತು ಎಂಬುದನ್ನು ಅಂದಿನ ಸಮಕಾಲೀನ ಇತಿಹಾಸ ಸ್ಪಷ್ಟವಾಗಿ ತೋರಿಸುತ್ತಿದೆ.

ಇದಕ್ಕೆ ಸಮಾನಾಂತರವಾಗಿ ಹರಿಯುತ್ತಿದ್ದ ಮತ್ತೊಂದು ಪ್ರವಾಹವೆಂದರೆ ಆಧ್ಯಾತ್ಮ ಭಕ್ತಿ, ಜ್ಞಾನ, ವೈರಾಗ್ಯ ಆ ಪ್ರವಾಹದ ಜಲರೂಪೀ ಶಕ್ತಿಗಳು. ಬಸವಣ್ಣನವರು ಸಾಮಾಜಿಕ ಕ್ರಾಂತಿಯ ನೇತಾರರು ಮಾತ್ರವಲ್ಲದೆ ಅಗ್ರಗಣ್ಯವಾದ ಆಧ್ಯಾತ್ಮಿಕ ಸಾಧಕರೂ ಆಗಿದ್ದವರು. ಈ ದೇಶದ ನೆಲದಲ್ಲಿ ಯಾವುದೇ ಕ್ರಾಂತಿ ನಡೆಯಬೇಕಾದರೂ ಅದು ಆಧ್ಯಾತ್ಮ ಮಿಶ್ರಿತನಾಗಿರಬೇಕಾದದ್ದು ಅನಿವಾರ್ಯ ಎಂಬುದನ್ನು ಇಂದಿನ ಕಾಲದ ಸ್ವಾಮಿ ವಿವೇಕಾನಂದರಂತೆ ಅಂದೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಪ್ರತಿಭಾಶಾಲಿ ಅವರು. ಆಧ್ಯಾತ್ಮವು ಸತ್ವ ಸೀಮೆಯಲ್ಲಿ ಸಲ್ಲುವ ನಾಣ್ಯ ತಾನೇ ಅಲ್ಲವೇ ಎಂಬ ಪ್ರಶ್ನೆ ಇಲ್ಲಿಗೆ ಅಪ್ರಸ್ತುತ. ಸಾವಿರಾರು ವರ್ಷಗಳಿಂದ ಲಕ್ಷಾಂತರ ಏಕೆ ಕೋಟ್ಯಂತರ ಭಾರತೀಯರು ದೃಢವಾಗಿ ನಂಬುತ್ತಾ ಬಂದಿರುವ ತತ್ವವದು. ಕಣ್ಣಿಗೆ ಕಾಣುವಂತೆ ಆ ನಂಬಿಕೆಯಿಂದ ಆಗಿರುವ, ಪ್ರಯೋಜನವೆಂದರೆ ಸಹಿಸಲು ಸಾಧ್ಯವೇ ಇಲ್ಲದ ಕಷ್ಟಪರಂಪರೆಗಳನ್ನು ಸಾಧ್ಯವೇ ಇಲ್ಲದ ಕಷ್ಟಪರಂಪರೆಗಳನ್ನು ಧೈರ್ಯವಾಗಿ ಎದುರಿಸಲು, ಕಷ್ಟಗಳ ಕಲುಮೆಯಲ್ಲಿ ಎಂದೂ ಬಾಳಲಿ ಈ ದೇಶದ ಜನಕ್ಕೆ ದುಃಶಕ್ತಿ ನೀಡಿದೆ ಎಂಬುದು.

ಆಧುನಿಕ ವಿಜ್ಞಾನವೂ, ತಾಂತ್ರಿಕ ಸಂಪತ್ತೂ ಒದಗಿಸಿರುವ ಅನೇಕಾನೇಕ ಸೌಲಭ್ಯಗಳು ಇರಲಿಲ್ಲ ಎಂಬುದನ್ನು ಬಿಟ್ಟರೆ ಹನ್ನೆರಡನೆಯ ಶತಮಾನವು ಇಪ್ಪತ್ತನೆಯ ಶತಮಾನಕ್ಕಿಂತ ಹೆಚ್ಚಿನ ರೀತಿಯಲ್ಲಿ ಭಿನ್ನವಾಗೇನೂ ಭಾವನೆ, ಸ್ತ್ರೀಪುರುಷರ ನಡುವೆ ಅಸಮಾನತೆ, ಉಳ್ಳವರೆ- ಇಲ್ಲದವರ ನಡುವಣ ತಿರಸ್ಕಾರ, ಅಸೂಯೆ, ಅಸಹನೆ ಮುಂತಾದ ಸಮಸ್ತ ಸಾಮಾಜಿಕ ರೋಗರುಜಿನಗಳು ಇಂದಿರುವಂತೆಯೇ ಅಂತೂ ಇದ್ದುವು. ಅವನು ಹೋಗಲಾಡಿಸಲು ಬಸವಾದಿ ಪ್ರಮಥರು ಪಟ್ಟಶ್ರಮ ಬಹುಪಾಲು ವ್ಯರ್ಥವಾಯಿತು ಎಂಬುದು ಇಂದಿನ ಸಮಾಜವನ್ನು ನೋಡುವ ಯಾರಿಗೇ ಆದರೂ ಮೇಲು ನೋಟಕ್ಕೇ ಎದ್ದು ಕಾಣುತ್ತದೆ. ಆದರೆ ಅವರು ತಾಳಿದ್ದ ಆಶಾಭಾವನೆ, ಕೆಟ್ಟುದ್ದನ್ನು ಹೋಗಲಾಡಿಸಲು ಅವರು ಮಾಡಿದ ಪ್ರಯತ್ನದ ಪ್ರಾಮಾಣಿಕತೆ ಇವನ್ನು ಶಂಕಿಸುವುದು ಸಾಧ್ಯವೇ ಇಲ್ಲದ್ದು.

ಈ ಎಲ್ಲ ಲೌಕಿಕ- ಆಧ್ಯಾತ್ಮಿಕ ಕೋಲಾಹಲಗಳ ನಡುವೆಯೇ ಇದ್ದ ಅಲ್ಲಮ ಪ್ರಭುಗಳು ತಾಳಿದ್ದ ನಿಲುವು ಎಂಥದು? ಅವರ ಎಲ್ಲ ವಚನಗಳನ್ನೂ ಗಮನಕ್ಕೆ ತೆಗೆದುಕೊಂಡರೆ ಅವರಿಗಿದ್ದ ಸಾಮಾಜಿಕ ಕಳಕಳಿ ತೀರ ಅಲ್ಪ ಪ್ರಮಾಣದ್ದು ಎಂಬುದು ಕಾಣುತ್ತದೆ. ಅವರ ಸರಿಸುಮಾರು ಒಂದೂವರೆ ಸಾವಿರ ವಚನಗಳಲ್ಲಿ ಮೇಲೆ ಹೇಳಿದ ಸಮಾಜ ಪರಿವರ್ತನೆಯ ಪ್ರಯತ್ನದ ಅಂಶಗಳು ಇಲ್ಲವೇ ಇಲ್ಲ ಎಂದು ಹೇಳಿದರೆ ಸತ್ಯಕ್ಕೆ ದೂರನಾದ ಮಾತನ್ನು ಹೇಳಿದಂತೆ ಆಗುವುದಿಲ್ಲ. ಅನ್ನ, ಬಟ್ಟೆ ವಸತಿ ಇವುಗಳ ಕಕ್ಕುಲತೆಯಲ್ಲಿ ದಿನ ನೂಕಬೇಕಾದವರನ್ನು ಪ್ರಭುಗಮನಕ್ಕೆ ತಂದುಕೊಳ್ಳಲಿಲ್ಲ. ಅವನ್ನೆಲ್ಲ ಕುರಿತು ಮಾತನಾಡುವವರು ಬೇರೆಯವರು ಇದ್ದಾರೆಂದು ಅವರು ಭಾವಿಸಿರಬಹುದು. ಆತ್ಮಸಾಧನೆಯೇ ಜೀವನದ ಪರಮ ಪುರುರ್ಷಾ ಎಂದು ಪ್ರಭುದೇವರು ದೃಢವಾಗಿ ನಂಬಿದವರು. ಆ ದಾರಿಯಲ್ಲೂ ಖೋಟಾ ಸನ್ಯಾಸ ಊಟ, ಜನ ಗೌರವ ಮುಂತಾದವುಗಳ ಸಂಪಾದನೆಯೇ ಗುರಿಯಾಗುಳ್ಳ ಕ್ಷೇತ್ರ ಪರ್ಯಟನ ಮುಂತಾದುವು ಪ್ರಭುದೇವರ ತಿರಸ್ಕಾರಕ್ಕೆ ಪಾತ್ರವಾಗಿದವೆ. ಅವರ ಈ ವಚನವನ್ನು ಗಮನಿಸಿ:

ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು.
ಕಂಡವರ ಕಂಡು ಮಂಡೆಯ ಬೋಳಿಸಿಕೊಂಬವರು
ಉಂಬವರ ಕಂಡು ಉಂಬುವರು
ಪುಣ್ಯಕ್ಷೇತ್ರ ಪುರುಷಕ್ಷೇತ್ರ
ಅಷ್ಟ ವಿಧಾರ್ಚನೆ ಷೋಡಶೋಪಚಾರವೆಂಬುದಲ್ಲದೆ
ತಮ್ಮ ನಿಧಾನದ ಸಾಧಿಸುವ ಭೇದವನರಿಯದೆ
ಷಡುಸ್ಥಲ ಜ್ಞಾನಿಗಳೆಲ್ಲಾ ಸತ್ತರಲ್ಲಾ ಗುಹೇಶ್ವರ (೧೬೧೨)

ಸಂಸಾರದಲ್ಲಿ- ಎಂದರೆ ಜಗತ್ತಿನಲ್ಲಿ –ಹುಟ್ಟಿರುವವರು ತಮ್ಮ ಸ್ವಂತ ಇಚ್ಛೆಯಿಂದ ಇಲ್ಲಿಗೆ ಬಂದವರಲ್ಲ, ಕರ್ಮ ಸಿದ್ಧಾಂತ ನಿಜವೋ ಸುಳ್ಳೋ ಜನ ಕೋಟಿ ದುಃಖಪಡುತ್ತಿರುವುದು ಹೌದು, ಅವರಿಗೆ ಕನಿಕರ ತೋರಿಸಬೇಕು, ಅವರಿಗೆ ಸಾಧ್ಯವಾದಷ್ಟೂ ನೆರವು ನೀಡಬೇಕು ಎಂಬ ಭಾವನೆ ಅಲ್ಲಮಪ್ರಭುವಿನದಲ್ಲ, ಹುಟ್ಟು-ಸಾವುಗಳ ನೋವು ನಲಿವುಗಳ ಕರಗಸದ ಹಲ್ಲುಗಳಿಗೆ ಅನಿವಾರ್ಯವಾಗಿ ಕೊರಳೊಡ್ಡಿರುವವರ ವಿಷಯದಲ್ಲಿ ಕನಿಕರವೂ ಅವರಿಗಿಲ್ಲ. ಗಿರಿಶಿಖರವನ್ನೇರಿ ನಿಂತವನು ಕಣಿವೆಯ ಆಶಯದಲ್ಲಿರುವವರನ್ನು ನೋಡುವಂತೆಯೇ ಪ್ರಭು ಸಂಸಾರದ ದಂದುಗದಲ್ಲಿ ಸಾಕ್ಷಿರುವವರನ್ನು ಕಾಣುತ್ತಾನೆ. ಅವರ ವಿಷಯದಲ್ಲಿ ಪ್ರಭುವಿಗೆ ತಿರಸ್ಕಾರವೇ ಹೊರತು ಸಹಾನುಭುತಿಯಿಲ್ಲ, ಈ ವಚನವನ್ನು ನೋಡಿ:

ಸಂಸಾರವೆಂಬ ಹೆಣ ಬಿದ್ದಿದ್ದಡೆ ತಿನ ಬಂದ ನಾಯ ಜಗಳವ ನೋಡಿದೆ!
ನಾಯ ಜಗಳದ ನೋಡಿ ಹೆಣ (ನೆದ್ದು) ನಗುತ್ತಿದೆ.
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿಡೆ. (೪೬)

ಅಲ್ಲಮ ಪ್ರಭುವಿನ ಲೌಕಿಕಾಸಕ್ತಿ ಮುಟ್ಟಬಹುದಾದ ಒಂದು ಎಲ್ಲೆಯಿದೆ. ಅದು ಲೌಕಿಕರು ಭಕ್ತಿಯ ಹೆಸರಿನಲ್ಲಿ ಆಧ್ಯಾತ್ಮದ ಹೆಸರಿನಲ್ಲಿ ಸಲ್ಲದ್ದನ್ನು ಆಚರಿಸುವುದನ್ನು ಖಂಡಿಸುವವರೆಗೆ ಮಾತ್ರ ತನ್ನ ವ್ಯಾಪ್ತಿಯನ್ನು ಉಳ್ಳದ್ದು.

ಅಲ್ಲಮನ ದೃಷ್ಟಿಯಲ್ಲಿ ದೇವರು ಆಕಾರವಿಲ್ಲದವನು, ಉಪನಿಷತ್ತುಗಳ್ಲಲಿ ಹೇಳಿರುವಂತೆ ಅವನು ಅಥವಾ ಅದು ಮಾತು ಮನಸ್ಸುಗಳನ್ನು ಮೀರಿದ್ದು. ಹಾಗಲ್ಲದೆ ಉಳಿ ಹಿಡಿದು ಕೆತ್ತಿದ ಲಿಂಗದ ಪೂಜೆ ಅವರಿಗೆ ಒಗ್ಗದ್ದು, ಹೇಳುತ್ತಾರೆ:

ಎನಗೊಂದು ಲಿಂಗ, ನಿನಗೊಂದು ಲಿಂಗ, ಮನೆಗೊಂದು ಲಿಂಗವಾಯಿತ್ತು.
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ.
ಉಳಿಮುಟ್ಟದ [1] ಲಿಂಗವ ಮನಮುಟ್ಟಬಲ್ಲದೆ ಗುಜೇಶ್ವರಾ? (೩೪)

ಇಲ್ಲಿ ಎರಡು ಅಂಶಗಳನ್ನು ಗಮನಿದಬೇಕು. ಒಂದು ಭಕ್ತಿಯ ಬಾಹ್ಯಾಚರಣೆಯ ಗತಿ ಏನಾಗುತ್ತದೆ ಎಂಬುದು. ದಿನವೂ ಲಿಂಗಕ್ಕೆ ನೀರೆರದು ಅಭಿಷೇಕ ಮಾಡಿದೆ ಎಂದು ಹಿಗ್ಗುವವರ ಭಕ್ತಿಯ ಗತಿ ಎಲ್ಲಿಗೆ ತಲುಪುತ್ತದೆ? ಅದು ತಾನು ಎರೆಯುತ್ತಿರುವ ನೀರಿನ ಜೊತೆಯಲ್ಲೇ ಹರಿದು ಹೋಗುತ್ತದೆ. ಎರಡನೆಯದು ಉಳಿಮುಟ್ಟದ-ಮುಟ್ಟಿದ ಎಂಬುದೇ ಅಲ್ಲಮನು ಬಳಸಿರಬಹುದಾದ ರೂಪ ಎಂಬುದು ನನ್ನ ನಂಬಿಕೆ- ಲಿಂಗವನ್ನು ಮನಸ್ಸು ಮುಟ್ಟುವುದು ಹೇಗೆ? ಶುದ್ಧ ಅದ್ವೈತಿಯ ನಿಲುವು ಇದು.

ಬ್ಯಾಹ್ಯ ಪೂಜೆಯನ್ನು ಆಚರಿಸುವವರನ್ನು ‘ಕರ್ಮಿ’ ಎಂದು ಕಟುವಾಗಿ ಸಂಬೋಧೀಸುವುದಕ್ಕೂ ಅಲ್ಲಮ ಪ್ರಭುಗಳು ಹಿಂಜರಿಯುವುದಿಲ್ಲ. ಅವನು ನಿಂತಿರುವ ನಿಲುವು, ಅವರು ಸದಾ ಸ್ಥಾಫಿತವಾಗಿರುವ ಆಧ್ಯಾತ್ಮಕ ಸ್ಥಿತಿ ಅವನಿಗೆ ಹಾಗೆ ನಿಂದಿಸುವ ಧೈರ್ಯವನ್ನು ಅಧಿಕಾರವನ್ನೂ ನೀಡಿದೆ:

ಮಹಾ ಮೇರುವಿನ ಮರೆಯಲ್ಲಿರ್ದು
ಭೂತದ ನೆಳಲನಾಚರಿಸುವ ಕರ್ಮಿ, ನೀಕೇಳಾ,
ಮಹಾಲಿಂಗಕ್ಕೆ ಮಜ್ಜನ ವೆಂದೇನೋ?
ಪರಿಮಳ ಲಿಂಗಕ್ಕೆ ಪುತ್ರ ಪುಷ್ಟಗಳಂದೇನೋ?
ಜಗಜ್ಯೋತಿಲಿಂಗಕ್ಕೆ ಧೂಪ ದೀಪಾರತಿಗಳೆಂದನೋ?
ಅಮೃತಲಿಂಗಕ್ಕೆ ಆರೋಗಣೆಯಂದೇನೋ?
ಗುಹೇಶ್ವರ ಲಿಂಗದಂತವ ಬಲ್ಲವರಾರೇ?

ಅದ್ವೈತದ ಶಿಖರದಿಂದ ಮೊಳಗಿದ ಈ ಧ್ವನಿ ಲಿಂಗಪೂಜೆ, ದಾಸೋಹಗಳ ಗೊಂದಲದಲ್ಲಿದ್ದು ಯಾರ ಎದೆಯಲ್ಲಾದರೂ ಪ್ರತಿಧ್ವನಿಸಿತೆ?- ಕೊನೆಗೆ ಭಕ್ತಿ ಭಂಡಾರಿಗಳ ಎದೆಯಲ್ಲಾದರೂ? ಅಂದಿನ ಘಟನಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಯಾರಿಗೂ ಲಿಂಗಪೂಜಾವಿಧಿಯಿಂದ ದೂರ ಸರಿಯುವ ಧೈರ್ಯ ಬಂದಂತೆ ಕಾಣುವುದಿಲ್ಲ. ಈ ವಿಧಿ ವಿಧಾನಗಳನ್ನೂ ಸಂಕಲ್ಪಿಸಿ, ಕ್ರಮಬದ್ಧಗೊಳಿಸಿದ ಬಸವಣ್ಣನವರೂ, ಅಲ್ಲಮ ಪ್ರಬುವಿನ ಎತ್ತರದ ವ್ಯಕ್ತಿತ್ವವನ್ನು ಗೌರವಿಸಿದರೂ ಅವನ ಮಾತಿನ ಒಳತತ್ವವನ್ನು ಆಚರಣೆಗೆ ತರಬೇಕಾದ ಸಂದಿಗ್ಧಸ್ಥಿತಿಯಲ್ಲಿ ಅವರ ವ್ಯಕ್ತಿತ್ವ ಬಾಗಿ ಬಳುಕಿ ‘ದಯಮಾಡಿ ಕ್ಷಮಿಸಿ’ ಎನ್ನುತ್ತಿತ್ತು ಎಂದೇ ಊಹಿಸಬೇಕಾಗುತ್ತದೆ.

ಗುಹೇಶ್ವರ ಲಿಂಗವನ್ನು ಕಾಣುವುದು- ನಿಜವಾಗಿ ಸಾಕ್ಷಾತ್ಕರಿಸಿಕೊಳ್ಳುವುದು ಯಾವಾಗ ಎಂಬುದನ್ನು ಭವ್ಯವಾದ ಒಂದು ರೂಪಕದ ಮೂಲಕ ಪ್ರಭು ಹೇಳಿದ್ದಾರೆ:

ಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣಕಟ್ಟಿ
ಹಿಡಿದು ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು, ನೇಣು ಹರಿದು, ಜೋಗುಳ ನಿಂದಗ್ಗಲ್ಲದೆ
ಗುಹೇಶ್ವರನೆಂಬ ಲಿಂಗದ ಕಾಣಬಾರದು! (೪೬೦)

ಅಲ್ಲಮ ಪ್ರಭುಗಳ ನಾಲಿಗೆ ಸಕಲ ವೇದಶಾಸ್ತ್ರಗಳೆಂಬ ಹಗ್ಗ ಹರಿದು ಹೋಗಿದೆ. ಉಳಿದ ಶರಣರ ಪಾಲಿಗೂ ವೇದಶಾಸ್ತ್ರಾದಿಗಳ ಹಗ್ಗ-ನೇಣುಹಗ್ಗ-ಹರಿದಿದೆ ಎಂದು ತಾತ್ಪೂರ್ತಿಕವಾಗಿ ಒಪ್ಪಬಹುದು. ಆದರೆ ಪೂಜೆಯ ಗಂಟೆಯ ಜೋಗುಳ ಅವರ ಪಾಲಿಗೆ ನಿಂತಿಲ್ಲ. ಅವರಲ್ಲಿ ಬಹುಮಂದಿ ಪೂಜಾ ಕೋಲಾಹಲದ ಭ್ರಾಂತಿಯಲ್ಲೇ ಇದ್ದಾರೆ. ಗಂಟೆಯ ಜೋಗುಳ ಅವರ ಪಾಲಿಗೆ ನಿಂತಿಲ್ಲ. ಅವರಲ್ಲಿ ಬಹುಮಂದಿ ಪೂಜಾ ಕೋಲಾಹಲದ ಭ್ರಾಂತಿಯಲ್ಲೇ ಇದ್ದಾರೆ. ಗಂಟೆಗಳ ದನಿಯ ನಡುವೆ ಅವರಿಗೆ ಅಲ್ಲಮ ಪ್ರಭುಗಳ ಈ ಮಾತೂ ಕೇಳುತ್ತಿಲ್ಲ. ಅಲ್ಲದೆ ಪ್ರಭು ಇನ್ನೂ ಕಠಿಣವಾದ ಮಾತುಗಳಲ್ಲಿ ದೇವಾಲಯವೇ ಮುಂತಾದವುಗಳ ಟೊಳ್ಳು ಬುನಾದಿಗಳನ್ನು ನೇರವಾದ ಮಾತುಗಳಲ್ಲೇ ಬಯಲುಗೊಳಿಸುತ್ತಿದ್ದಾರೆ.

ಕಲ್ಲಮನೆಯ ಮಾಡಿ, ಕಲ್ಲದೇವರ ಮಾಡಿ,
ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ?
ಲಿಂಗ ಪ್ರತಿಷ್ಠೆಯ ಮಾಡಿದವರಿಗೆ ನಾಯಕನರಕ ಗುಹೇಶ್ವರಾ!
ಮತ್ತೊಂದು ವಚನದ ಮಾತುಗುಹೇಶ್ವರಾ, ನೀನು ಕಲ್ಲಾದರೆ ನಾನೇನಪ್ಪನಯ್ಯ?”

ಹಾಗಾದರೆ ಜೀವಿಗಳ ನೆರವಿಗೆಂದು ಕೆರೆಯನ್ನು ತೋಡಿಸಬಾರದೆ? ಆಹಾರ ನೀಡಬಾರದೆ? ಸತ್ಯವನ್ನೇ ಹೇಳುತ್ತಾ ಇರಬಾರದೆ? ಬೇಕು, ಎಲ್ಲವನ್ನೂ ಮಾಡಬೇಕು, ಆದರೆ ಅವು ನೀಡಬಹುದಾದ ಫಲದ ಸ್ವರೂಪವನ್ನು ಅರಿತು ಮಾಡಬೇಕು ಅವು ಪೂರ್ತಿ ನಿಷ್ಪಲವೂ ಅಲ್ಲ, ಪೂರ್ಣಫಲಪ್ರದವೂ ಅಲ್ಲ, ಪ್ರಭುಗಳ ಮಾತಿನಲ್ಲಿ:

ಅನ್ನವನಿಕ್ಕಿ, ನನ್ನಿಯ ನುಡಿದು,
ಅರವಟಿಗೆಯನಿಕ್ಕಿ ಕೆರೆಯ ಕಟ್ಟಿಸಿದರೆ
ಮರಣದ ಮೇಲೆ ಸ್ವರ್ಗವುಂಟಲ್ಲದೆ
ಶಿವನ ನಿಜವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ.

ಸ್ವರ್ಗ ನರಕಗಳನ್ನು ನಂಬುವವರು ಈ ಮಾತನ್ನೂ ನಂಬಬೇಕು, ಕ್ಷೀಣೇ ಪುಣ್ಯೆ ಮರ್ತ್ಯಲೋಕೇ ವಿಶಂತಿ-ಪುಣ್ಯಕ್ಷಯಿಸಿದ ಮೇಲೆ ಮತ್ತೆ ಆ ಲೋಕಕ್ಕೇ ಬರಬೇಕು.

ಅಲ್ಲಮ ಪ್ರಭು ಸ್ಥಾಯಿಯಾಗಿದ್ದುದ್ದು ಜ್ಞಾನ ಗಿರಿಯ ಉತ್ತುಂಗ ಶಿಖರ ಪ್ರದೇಶದಲ್ಲಿ ಅಲ್ಲಿಂದ ಅವರು ಲೋಕದ ಸುಖ-ದುಃಖಗಳನ್ನು ಜನನ-ಮರಣಗಳನ್ನು ಏಳು-ಬೀಳುಗಳನ್ನು ಜೀವನ-ಮರಣಗಳನ್ನು ಒಂದು ಮಾತಿನಲ್ಲಿ ಹೇಳುವುದಾದರೆ ಎಲ್ಲ ದ್ವಂದ್ವಗಳನ್ನು ದ್ವಂದ್ವಾತೀತ ನೆಲೆಯಲ್ಲಿ ನಿಂತು ಕಾಣಬಲ್ಲವರಾಗಿದ್ದರು.

ಮೃತ್ಯು ಮುಖದಲ್ಲಿ ಅವರು ಪ್ರತಿಕ್ರಿಯಿಸಿದ್ದು ಹೇಗೆ? ಜ್ಞಾನಿಯಾಗಿದ್ದ ತನ್ನ ಸೋದರ ಅಜಗಣ್ಣನನ್ನು ಕಳೆದುಕೊಂಡು ಮುಕ್ತಾಯಕ್ಕ ಎಂಬ ಮಹಿಳೆ ದುಃಖಿಸುತ್ತಿದ್ದಾರೆ. ಕಾವ್ಯಮಯವಾದ ಆಧ್ಯಾತ್ಮಿಕ ಪರಿಭಾಷೆಯಲ್ಲಿ ಪ್ರಭುದೇವರು ಆಕೆಯನ್ನು ಪ್ರಶ್ನಿಸುತ್ತಾರೆ.

ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು
ಕಂಗಳ ಮುತ್ತು ಪವಣಿಸುವಾಕೆ ನೀನಾರು? ಹೇಳಾ
ಸಂದ ಸಂಪಗೆಯರಳ ತುಂಬಿ ಬಂಡುಂಬ ಭೇದವನರಿಯದೆ
ಹಂಬಲಿಸುವ ಪರಿತಾಪವೇನು ಹೇಳಾ.

ಒಂದೆಂಬೆನೆ ಎರಡಾಗಿದೆ. ಎರಡೆಂಬೆನೆ ಒಂದಾಗಿದೆ.
ಅೞುವನೊಳಗಣ ಮಱಹಿದೇನು? ಹೇಳಾ
ದುಃಖವಿಲ್ಲದ ಅಕ್ಕ (ಅಳುವಿಕೆ), ಅಕ್ಕಿಯಿಲ್ಲದ ಅನುತಾಪ
ನಮ್ಮ ಗುಹೇಶ್ವರ ಲಿಂಗದಲ್ಲಿ ತೋರುತ್ತಿದೆ.
ನೀನಾರೆಂದು ಹೇಳಾಎಲೆ ಅವ್ವಾ.

ಆಕೆ ನೀಡುವ ಉತ್ತರ. ಆಕೆ ಬಳಸುವ ಆಧ್ಯಾತ್ಮಕ ಪರಿಭಾಷೆ ಅಲ್ಲಮ ಪ್ರಭುಗಳಂಥವರನ್ನು ಕ್ಷಣಕಾಲ ದಿಗ್ಭ್ರಾಂತಿಗೊಳಿರಲಿಕ್ಕೆ ಸಾಕು. ಪ್ರಭುಗಳು ದಿಗ್ಭ್ರಾಂತರಾದರೋ ಇಲ್ಲವೋ ತಿಳಿಯಲು ಸಾಧನಗಳಿಲ್ಲ. ಆದರೆ ಆಕೆ ಅವರನ್ನು ಸ್ವಲ್ಪಕಾಲವಾದರೂ ಮಾತಿಲಿಯಾಗಿ (ಮಾತಿಲ್ಲದವರಾಗಿ) ಮಾಡಿದ್ದಂತೂ ಹೌದು.

ಅದ್ವೈತವ ನೆಲೆಗೊಳಿಸಿ ಎರಡನಳಿದೆನೆಂಬವರು
ಶಿಶುಕಂಡ ಕನಸಿನಂತಿರಬೇಕಲ್ಲದೆ
ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳು?
ಆಯಿವೞತು, ಮಱಹು ನಷ್ಟವಾಗಿ
ಗುರುಹ
ತೇಱುದೆನೆಂಬವರು

ಇದಿರಿಂಗೆ ಕರುಳ ಕಲೆಯ ನರಿಹುವ ಪರಿ ಎಂತು ಹೇಳಿ?
ಮನವ ಕೊನೆಯ ಮೊನೆಯ ಮೇಯಿಣ ಅಱುಹಿನ ಕಣ್ಣಮುಂದೆ
ಸ್ವಯಂ ಪ್ರಕಾಶ ತೋರುತ್ತಿರ್ದಡೆ ತಾನಾಗಬಲ್ಲನೆ?
ನೆಱೆಯೞುತುಮ ಱಿಯಬಲ್ಲರೆ ಎನ್ನ ಅಜಗಣ್ಣನಂತೆ
ಶಬ್ದಮುಗ್ಧವಾಗಿರಬೇಕಲ್ಲದ ಶಬ್ದ ಸಂದಣಿದು ಮಾತು ಸಯವಲ್ಲ ನೋಡಾ ಪ್ರಭುವೆ.

ಹೊಸಗನ್ನಡದಲ್ಲಿ ಈ ವಚನದ ಅರ್ಥ ಹೀಗಾಗುತ್ತದೆ:

ಅದ್ವೈತವನ್ನು ನೆಲೆಗೊಳಿಸಿಕೊಂಡ. ಎರಡು ಎಂದರೆ ದ್ವೈತವನ್ನು ನಾಶಮಾಡಿಕೊಂಡಿದ್ದೇನೆ ಎನ್ನುವವರು ಕನಸನ್ನು ಶಿಶು ಕಂಡಂತೆ- ಎಂದರೆ ತಾನು ಕನಸನ್ನು ಹೇಳಲಾರದ ಶಿಶುವಿನಂತೆ ಇದಬೇಕಲ್ಲದೆ ತಾನು ಅಣುಭವಿಸುತ್ತಿರುವ ಅದ್ವೈತವನ್ನು ಹೇಳ ಹೊರಟರೆ ಆಗ ಅದು ಭಿನ್ನವಾಗುವುದಿಲ್ಲವೆ ಎಂದರೆ ಒಡೆದು ದ್ವೈತವಾಗುವುದಿಲ್ಲವೆ? ಪ್ರಜ್ಞೆ, ಅಜ್ಞಾನಗಳು ತಮಗೆ ನಾಶವಾಗಿದೆ. ಈಗ ಗುರುವನ್ನು ತೋರಿಸಿಕೊಡಬಲ್ಲೆವು ಎನ್ನುವವರು ಇತರರಿಗೆ ಅಂತರಂಗ ವಿಜ್ಞಾನವನ್ನು ತೋರಿಸಿ ಕೊಡುವ ರೀತಿಯಾವುದು? ಮನಸ್ಸಿನ ತುಟಿಯ ಮೇಲೆ ಜ್ಞಾನ ಎದುರು ಎದುರೇ ಆ ಸ್ವಯಂ ಪ್ರಕಾಶವುಳ್ಳ (ಬ್ರಹ್ಮ)ವಸ್ತು ತೋರುತ್ತಿದ್ದರೂ, ಅದನ್ನು ಕಾಣುತ್ತಿರುವ ವ್ಯಕ್ತಿ ತಾನೇ ಆ ವಸ್ತುವಾಗಬಲ್ಲನೆ? ತಾನು ಪಡೆದ ಜ್ಞಾನವನ್ನೇ ಮರೆಯಲು ಶಕ್ತನಾದವನು ಶಬ್ದದ ವಿಷಯದಲ್ಲಿ ಮುಗ್ಧನಾಗಿರಬೇಕು- ಎಂದರೆ ಮೌನವಾಗಿರಬೇಕು-ನನ್ನ ಅಣ್ಣ ಅಜಗಣ್ಣನಂತೆ ಶಬ್ದಗಳ ಸಮೂಹದ ಮಾತು ಸರಿಯಾದುದಲ್ಲ.

ಅಲ್ಲಮ ಪ್ರಭುದೇವರ ಅದ್ವೈತದ ‘ಅಹಂ’ಗೆ ಇದಕ್ಕಿಂತ ದೊಡ್ಡ ಪೆಟ್ಟನ್ನು ಯಾರೂ ಕೊಟ್ಟಿರಲಾರರು. ಅದೂ ಹೊಡೆತ ಬಿದ್ದುದ್ದು ಹೆಣ್ಣೊಬ್ಬಳಿಂದ- ಹೆಣ್ಣು ಆಧ್ಯಾತ್ಮವನ್ನು ನುಡಿಯಲಾಗದು ಎಂಬ ‘ಸಮಯ’ ಜಾರಿಯಲ್ಲಿದ್ದ ಹನ್ನೆರಡನೆಯ ಶತಮಾನದಲ್ಲಿ, ಅವಳ ಮಾತಿನಲ್ಲಿ ಬಂದ ‘ಶಬ್ಧ ಮುಗ್ಧ’ ‘ಶಬ್ದಸಂದಣಿ’ ಎಂಬ ಪದಗಳನ್ನು ಗಮನಿಸಿ.

ಈ ನಿಚ್ಚಳವಾದ ಮಾತಿನ ಆಘಾತವನ್ನು ತಡೆದುಕೊಳ್ಳುವುದು ಕಷ್ಟವಾಗಿ ಪ್ರಭುದೇವರು ಶಬ್ದಾರಣ್ಯವನ್ನು ಸೃಷ್ಟಿಸಿ ಪ್ರತಿವಾದವನ್ನು ಹೂಡಲು ಪ್ರಯತ್ನಿಸಿದ್ದಾರೆ. ವಾದ ದುರ್ಬಲವಾದಾಗ ದನಿ ಎತ್ತರವಾಗುವುದನ್ನು ಇದಿರನ್ನು ಹಳಿಯುವುದನ್ನು ಮುಂದಿನ ವಚನದಲ್ಲಿ ಕಾಣಬಹುದು:

ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ
ತಾಳೋಷ್ಪ್ರಸಂಪುಟವೆಂಬುದು ನಾದಬಿಂದು ಕಳಾತೀತ
ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ, ಮರುಳ

ಅಂತಹ ಜ್ಞಾನದ ಬೆಳಕನ್ನು ಸೂಸುವ ಮಾತುಗಳನ್ನಾಡಿ ತನ್ನನ್ನು ಝಂಕಿಸುವ ಮಹಿಳೆಯನ್ನು ಮರುಳೆ ಎಂದು ಪ್ರಭು ಸಂಬೋಧಿಸಿದ್ದು ಅವರ ಘನತೆಗೆ ತಕ್ಕುದಲ್ಲ ಎಂದೇ ತೋರುತ್ತದೆ. ‘ಮಾತು ಜ್ಯೋತಿರ್ಲಿಂಗ’ ಎಂದು ಪ್ರಭು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಪ್ರಯತ್ನಿಸುವಾಗ ‘ಯತೋ ವಾಚೋ ವಿವರ್ತಂತೇ ಅಪ್ರಾಪ್ಯ ಮನಸಾ ಸಃ’ ಎಂಬ ಉಪನಿಷತ್ತಿನ ಮಾತು ಪ್ರಭುದೇವರಿಗೆ ಮರೆತುಹೋಯಿತೆ? ಆ ಪರಮವಸ್ತುವನ್ನು ಮುಟ್ಟಲಾರದೆ ಮಾತು ಹಿಂದಿರುಗುತ್ತದೆ; ಮನಸ್ಸಿಗೂ ನಿಲುಕದ್ದು ಅದು ಜಗತ್ತಿನಲ್ಲಿ ಎಲ್ಲವೂ ಉಚ್ಚಿಷ್ಟ-ಎಂಜಲು- ಆಗಿದೆ; ಆದರೆ ಪರಬ್ರಹ್ಮ ಮಾತ್ರ ಎಂಜಲಾಗಿಲ್ಲ, ಏಕೆಂದರೆ ಅದನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಬ್ರಹ್ಮವು ಅವಾಙ್ಮನಸಗೋಚರ ಎಂಬ ತತ್ವವನ್ನು ಈ ಯುಗದ ಪರಮಜ್ಞಾನಿಯೆಂದು ಪರಿಗಣಿತವಾಗಿರುವ ಶ್ರೀರಾಮಕೃಷ್ಣ ಪರಮಹಂಸರು ಸುಲಭವಾದ ಮಾತುಗಳಲ್ಲಿ ಹೇಳಿದರು. ಏಕೆ ಅಲ್ಲಮ ಪ್ರಭುಗಳೇ ಆ ಮಾತನ್ನು ಹಿಂದೆ ಹೇಳಿದ್ದರು-ಅಥವಾ ಮುಕ್ತಾಯಕ್ಕನ ಪ್ರಸಂಗ ನಡೆದ ಮೇಲೆ ಹೇಳಿದರೋ?

ಶಬ್ದವಂಬೆನೆ? ಶ್ರೋತ್ರದೆಂಜಲು
ಸ್ಪರ್ಶವಂಬೆನೆ? ತ್ವಕ್ಕಿನೆಂಜಲು
ರೂಪೆಂಬೆನ? ನೇತ್ರನೆಂಜಲು
ರುಚಿಯಂಬೆನೆ? ಜಿಹ್ವೆ ಯಂಜಲು
ಪರಿಮಳವಂಬೆನೆ? ಘ್ರಾಣದೆಂಜಲು
ನಾನೆಂಬೆನೆ? ಅರಿವಿನೆಂಜಲು
ಎಂಜಲೆಂಬ
ಭಿನ್ನವಳಿದ ಬೆಳಗಿನೊಳಗಣ
ಬೆಳಗು ಗುಹೇಶ್ವರ ಲಿಂಗವು.

ಅಲ್ಲಮ ಪ್ರಭುದೇವರ ಮಾತಿನಬ್ಬರಕ್ಕೆ ಹೆದರುವವರಲ್ಲ ತಾಯಿ ಮುಕ್ತಾಯಕ್ಕ. ಪ್ರಭುವಿನ ಅನುಭಾವದ ಅಸಲಿತನವನ್ನೇ ಆಕೆ ಪ್ರಶ್ನಿಸುತ್ತಾರೆ!

ನಡೆದು ನಡೆದು ಕಡೆಯ ಕಂಡವರು
ನುಡಿದು ನುಡಿದು ಹೇಳುತ್ತಿಹರೆ?
ನುಡಿದು ನುಡಿದು ಹೇಳುವನಕ್ಕರ
ನಡೆದುದೆಲ್ಲಾ ಹುಸಿಯಂಜನು!

ಅಷ್ಟೇ ಅಲ್ಲದೆ, ಅದೇ ವಚನದಲ್ಲಿ “ಇದಿರ ಗೆಲಬೇಕೆಂದು ನುಡಿದುಕೊಂಡರೇನು?” ಎಂದು ಝಂಕಿಸುತ್ತಾರೆ, ಆಕೆ. ತನ್ನ ಅಣ್ಣ ಹೇಗೆ ದೊಡ್ಡವರಾಗಿದ್ದರೂ ಎಂಬುದನ್ನು ಸೊಗಸಾಗಿ ನಿರೂಪಿಸಿದ್ದಾರೆ, ಆಕೆ ಎನ್ನ ಅಜಗಣ್ಣ ತಂದೆ ಶಬುದತ್ತ ಹೇಸಿ ಮುಗುದನಾದನು.” ಇದರಿಂದ ಸ್ವಲ್ಪ ಮೃದುವಾದ ಅಲ್ಲಮರು “ನಿನ್ನ ಮನದ ಕಳವಳದ ತಿಳುಹಲೆಂದು ಮಾತನಾಡಿಸಿ ನೋಡಿದಡೆ, ಎನ್ನ ಮನದೊಳಗೆ ತಂದು ಕಲೆಯೆಂಬುದಿಲ್ಲ ನೋಡಾ”- ಹೀಗೆ ಸಮಾಧಾನದ ಮಾತನ್ನಾಡಿ ನುಣುಚಿಕೊಳ್ಳಲು ನೋಡಿದರೂ

ಅಲ್ಲಮನ ಮಾತಿನಲ್ಲಿ ಸತ್ಯದ ಮಿಡಿತ ಮುಕ್ತಾಯಕ್ಕನಿಗೆ ಕೇಳಲಿಲ್ಲ. ಆಕೆ ತನ್ನ ಮನಸ್ಸಿನ ಅನಿಸಿಕೆಯನ್ನು ಮುಚ್ಚುಮರೆಯಿಲ್ಲದೆ ಅವರ ಮುಂದೆ ತೆರೆದಿಟ್ಟರು.

ನುಡಿಯ ಹಂಗಿನ್ನೂ ನಿಮಗೆ ಹಿಂಗದು;
ನಡೆಯನೆಂತು ಪರರಿಗೆ ಹೇಳುವಿರಿ?
ಒಡಲ ಹಂಗಿನ ಸುಳುಹು ಬಿಡದು;
ಎನ್ನೊಡನೆ ಮತ್ತೇತಱನುಭಾವವಣ್ಣಾ?
ತಾನಾದಲ್ಲದೆ ಇದಿರಿಂಗೆ ಹೇಳಬಹುದೆ?

ಇದಕ್ಕೆ ಉತ್ತರವಾಗಿ ಪ್ರಭುಗಳು ಹೇಳುವ ಸಮಾಧಾನದ ಮಾತುಗಳು- ಶರಣ ನಡೆದರೆ ನಿರ್ಗಮನ, ನುಡಿದರೆ ನಿಶ್ಯಬ್ದ-ಮುಂತಾದುವು ಮುಕ್ತಾಯಕ್ಕನಿಗಿರಲಿ, ನಮ್ಮಂತಹವರ ಮನಸ್ಸನ್ನು ಒಪ್ಪಿಸುವಂಥವಲ್ಲ. ಮುಂದೆ ಸುಮ್ಮನೆ ಉತ್ತರ ಪ್ರತ್ಯುತ್ತರಗಳು ನಡೆದುವ ಅಷ್ಟೆ ಎಲ್ಲಮಾತು, ಮಾತು, ಮಾತು. “ನಿಮಗಿದೋ ನಮಸ್ಕಾರ-ಎನ್ನ ಅಜಗಣ್ಣ ದೆಯನೊಳಕೊಂಡಪ್ಪ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದನು” ಎಂದು ಸಂಭಾಷಣೆಯನ್ನು ಹೆಚ್ಚು ಕಡಿಮೆ ಮುಗಿಸುತ್ತಾರೆ, ಮುಕ್ತಾಯಕ್ಕ.

ಇಷ್ಟಾದರೂ ಅಲ್ಲಮ ಪ್ರಭುದೇವರು ಅದ್ವೈತದ –ಅನುಭಾವದ ಉತ್ತುಂಗ ಶಿಖರದಲ್ಲಿ ಇದ್ದುದಂತೂ ಹೌದು. ಒಂದೇ ತೊಂದರೆಯೆಂದರೆ ಅವರ ಹಾಗೆ ನೋಡಿದರೆ ಅವರ ಯಾವ ಸಮಕಾಲೀನತೆ ಅಧ್ಯಾತ್ಮ ಜೀವನದ ಪ್ರಗತಿಯ ಹೆಜ್ಜೆಗಳು, ಅವರು ಶಿಖರದಿಂದ ಶಿಖರಕ್ಕೆ ಏರಿದ ಪರಿಗಳು ಕಾಲದ ದೃಷ್ಟಿಯಿಂದ ಘಟ್ಟ ಘಟ್ಟವಾಗಿ ದಾಖಲಾಗಿಲ್ಲ. ಹಾಗಿದ್ದಿದ್ದರೆ ಮುಕ್ತಾಯಕ್ಕನೊಡನೆ ಮಾತನಾಡುವಾಗ ಪ್ರಭುಗಳು ಆಗಲೇ ಅದ್ವೈತದ ಶಿಖರದಲ್ಲಿ ಸ್ಥಾಪಿತನಾಗಿದ್ದರೋ ಇಲ್ಲವೇ ಹಾಗೆ ಇದ್ದೇನೆಂಬ ಭ್ರಾಂತಿಯಲ್ಲಿದ್ದರೋ ಎಂಬುದನ್ನು ಖಚಿತವಾಗಿ ಹೇಳಬಹುದಿತ್ತು. ಶಿಖರವು ಒಬ್ಬ ವ್ಯಕ್ತಿ ಏರಿದ ಎತ್ತರವನ್ನು ಮಾತ್ರವಲ್ಲದೆ ಆ ವ್ಯಕ್ತಿಯು ಉರುಳಬಹುದಾದ ಪ್ರಪಾತದ ಆಳವನ್ನೂ ಸೂಚಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಈಗ ಪ್ರಭುಗಳು ಏರಿದ್ದ ಉನ್ನತಿಯನ್ನು ಸೂಚಿಸುವ ವಚನಗಳತ್ತ ಗಮನ ಹರಿಸೋಣ. ಶಬ್ದವು ಆ ಸ್ಥಿತಿಯನ್ನು ಸೂಚಿಸುವುದಿಲ್ಲ ಎನ್ನುತ್ತಾರೆ ಪ್ರಭು.

ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ ಹೆಸರಿಟ್ಟು ಕರೆದವರಾರೋ?
ಅಕಟಕಟಾ ಶಬ್ದದ ಲಜ್ಜೆಯ ನೋಡಾ!

ಗುಹೇಶ್ವರನನರಿಯದ ಅನುಭಾವಿಗಳೆಲ್ಲರ ತರಕಟ (ಅತಿಯಾದ ಬಾಧೆ, ತೊಂದರೆ) ಕಾಡಿತ್ತು! ಮತ್ತೊಂದು ವಚನ ಶಬ್ದಬ್ರಹ್ಮದ ಸ್ವರೂಪವನ್ನು ಸೂಚಿಸುವಂಥದು.

ಶಬ್ದ ಸೂತಕವೆಂಬರು, ಶಬ್ದಕ್ಕೆ ಸೂತಕವುಂಟೇ
ತನ್ನಯ ಸಂದೇಹವಲ್ಲದೆ?
ಗಾಳಿಗೆ ಧೂಳಿ ಲೇಫನಹುದೆ?
ಗುಹೇಶ್ವರ ಲಿಂಗಕ್ಕೆ ಭಾವವಿಲ್ಲ.

ಸ್ಪಂದಕಾರಿಕೆಯೊಂದನ್ನು ನೆನಪಿಗೆ ತರುವ-ಇಹ ಶಿಷ್ಯೆ ಭೂತ್ವಾ ಶಿವಂಯಜೇತ್- (ಇಲ್ಲಿ ಶಿವನೇ ಆಗಿ ಶಿವನನ್ನು ಯಜಿಸತಕ್ಕದ್ದು)- ಈ ಮಾತುಗಳು ಪ್ರಭುಗಳು ತಲುಪಿದ ಸ್ಥಿತಿಯನ್ನೇ ಸೂಚಿಸುತ್ತವೆ:

ಮನವೆ ಲಿಂಗವಾದ ಬಳಿಕ ನೆನವುದಿನ್ನಾರನಯ್ಯ?
ಭಾವನೆ ಐಕ್ಯವಾದ ಬಳಿಕ ಬೆರೆಸುವುದು ಇನ್ನಾರನಯ್ಯ?
ಭ್ರಮೆಯಳಿನು ನಿಜವು ಸಾಧ್ಯವಾದ ಬಳಿಕ
ಅರಿವುದಿನ್ನಾರನು ಗುಹೇಶ್ವರಾ?

ಕೊನೆಯದಾಗಿ ಮತ್ತೊಂದು ಭವ್ಯವೂ, ಸಾಮಾನ್ಯ ಹೃದಯವನ್ನು ಭೇದಿಸುವಂಥಹ, ಆದ ಈ ವಚನವನ್ನು ಪರಿಭಾವಿಸಬೇಕು?

ನಾನು ಭಕ್ತನಾದೊಡೆ, ನೀನು ದೈವವಾದೊಡೆ,
ನೋಡುವವ ಇಬ್ಬರ ಸಮರಸವನೊಂದುಮಾಡಿ;
ಭೂಮಿಯಾಕಾಶವನೊಂದು ಮಾಡಿ,
ಚಂದ್ರಸೂರ್ಯರಿಬ್ಬರ ತಾಳವಮಾಡಿ ಆಡುವನೆ
ಒಡೆಯ ಮೇಲಣಗಂಗೆ ನೀನು ಕೇಳಾ,
ತೊಡೆಯ ಮೇಲಣ ಗೌರಿ ನೀನು ಕೇಳಾ
ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ
ರಂಡೆಗೊಳನುಂಬುದು ನಿಮಗೆ ಲೇಸೆ?

ತನ್ನ ಆರಾಧ್ಯ ದೈವ- ತನ್ನ ಅಂಗೈಯಲ್ಲಿ ಪೂಜೆಗೊಳ್ಳಬೇಕಾದದ್ದು ಅಲ್ಲೇ ಸಾಯುತ್ತದೆ ಎಂಬುದು ಸಾಧಾರಣ ಜ್ಞಾನಿಯ ಮಾತಲ್ಲ, ಅಸಾಧಾರಣ ಅನುಭಾವಿಯ ಮಾತು. ದಿವಂಗತ ಡಿ. ಆರ್‌. ನಾಗರಾಜ್‌ತಮ್ಮ “ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ” ಎಂಬ ಗ್ರಂಥದಲ್ಲಿ ಈ ವಚನವನ್ನು ಮಾಡಿರುವ ವ್ಯಾಖ್ಯೆ ಚಿಂತನೀಯವಾಗಿದೆ (ಪು. ೨೧):

“ಈ ಇಡೀ ವಚನಕ್ಕೆ ಬೇರೆಯದೇ ಆದ ಅಲೌಕಿಕ ಎನ್ನಬಹುದಾದ ಉದ್ವಿಗ್ನತೆ ಇದೆ.

ಈ ವಚನದಲ್ಲಿ ಎರಡು ರೀತಿಯ ಪ್ರತಿಮಾಸ್ತರಗಳ ಮುಖಾಮುಖಿಯಾಗುತ್ತದೆ. ಸಾಮಾನ್ಯ ಜಗತ್ತಿನ ಪ್ರತಿಮೆಗಳು ಕೂಡಾ ಒಂದು ಅಸಾಮಾನ್ಯ ಅನುಭವದ ಶೋಧನೆಗೆ ಬಳಕೆಯಾದಾಗ ತಮ್ಮ ಚಹರೆ, ಬಿಸಿಯ ಮಟ್ಟ ಲಯಗಳನ್ನು ಬದಲಾಯಿಸಿಕೊಳ್ಳುತ್ತವೆ. ಈ ಪದ್ಯದಲ್ಲಿ ಬರುವ ಚಂದ್ರ ಸಾಮಾನ್ಯ ಚಂದ್ರನಲ್ಲ, ಸೂರ್ಯ ಸಾಮಾನ್ಯ ಸೂರ್ಯನಲ್ಲ ಅಂದರೆ ಇಲ್ಲಿ ಮುಖಾಮುಖಿಯಾಗುವ ನೈಸರ್ಗಿಕಸ್ತರ – ಪೌರಾಣಿಕ ಸ್ತರಗಳಲ್ಲಿ ಮೊದಲನೆಯದರ ವರ್ತನೆ ಭಿನ್ನವಾಗಿದೆ ಎಂಬುದು ಎರಡನೆಯದರ ಅಸಾಧಾರಣ ಭಯದ ಮೂಲ ನೋಡಿದಾಗ ತಿಳಿಯುತ್ತದೆ.

[1] ಇಲ್ಲಿ ಮುಟ್ಟಿದ ಎಂಬುದೇ ಸರಿಯಾದ ಪಾಠವಿರಬೇಕು. ಅಲ್ಲಮನ ಈ ಮತಗಳೊಡನೆ ಹೋಲಿಸಿ : “ಲಿಂಗ ಘನನೆಂಜನೆ? ಕಲುಕುಟಿಗನಕೈಯಲ್ಲಿ ಮೂಡಿಸಿಕೊಂಡು ಕಿರಿದಾಯಿತ್ತು (೪೮೦)