ಜಗತ್ತಿನ ಕೋಟ್ಯಂತರ ಜನರ ಮನಸ್ಸಿನಲ್ಲಿ ಈ ಭಾವನೆ ಇದೆ : ‘ತಮ್ಮ ಮತಚಾರ್ಯರು ಅಥವಾ ಪ್ರವಾದಿಗಳು ಅವತಾರಪುರುಷರು. ಆಜನ್ಮಸಿದ್ದರು, ಪರಿಪೂರ್ಣರು, ಸ್ತ್ರೀಪುರುಷರ ಸಂಪರ್ಕ ಇಲ್ಲದೆಯೇ ಹುಟ್ಟಿದವರು ; ಗಂಡಸರಾದರೆ ಸ್ತ್ರೀ ಸಂಪರ್ಕ ಮಾಡದವರು, ಸ್ತ್ರೀಯರಾದರೆ ಪುರುಷ ಸಂಪಕ ಮಾಡದವರು ಮತ್ತು ನೂರಾರು ರೀತಿಯ ಪವಾಡಗಳನ್ನು ಮಾಡಿದವರು ಇತ್ಯಾದಿ.’

ಇಂಥ ಭಾವನೆಗಳು ಸಾಮಾನ್ಯ ಜನರ ಮನಸ್ಸನ್ನು ತುಂಬಿಕೊಂಡಿದ್ದರೆ ಅದು ಆಶ್ಚರ್ಯಕ್ಕೆ ಕಾರಣವಾಗುವುದಿಲ್ಲ ಆದರೆ ವಿದ್ವಾಂಸರೆನ್ನಿಸಿಕೊಂಡವರು, ಜಗತ್ತಿನ ಅನೇಕ ಮಹಾಪುರುಷರು ಹುಟ್ಟಿ ಬೆಳೆದು ಬಾಳಿನ ರೀತಿಗಳನ್ನು ಅಧ್ಯಯನ ಮಾಡಿದವರು ತಮ್ಮ ಮತದ ಮಹಾಪುರುಷರ ವಿಷಯದಲ್ಲಿ ಮೇಲಿನ ಭಾವನೆಗಳನ್ನು ತಾಳಿ, ಅವುಗಳನ್ನು ಪ್ರಬಲವಾಗಿ ಪ್ರತಿಪಾದಿಸುವುದನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಬುದ್ಧ, ಬಸವ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಅರವಿಂದರು ರಮಣ ಮಹರ್ಷಿಗಳು- ಈ ಎಲ್ಲರೂ ತಂದೆ ತಾಯಿಗಳ ಮಕ್ಕಳು. ಬುದ್ಧ ಮದುವೆಯಾಗಿ, ಒಂದು ಮಗುವನ್ನು ಪಡೆದು ಅನಂತರ ವೈರಾಗ್ಯ ಪಡೆದವನು. ಬಸವಣ್ಣನವರು ಒಬ್ಬರಲ್ಲ. ಇಬ್ಬರು ಹೆಂಡಿರನ್ನು ಮದುವೆಯಾದವರು ಎಂಬ ಐತಿಹ್ಯವಿದೆ. ರಾಮಕೃಷ್ಣರು ಮದುವೆಯಾಗಿಯೂ ಸತಿಯನ್ನು ಕೂಡದೆ ಬಾಳಿದವರು, ಅರವಿಂದರು ಮದುವೆಯಾಗಿ ಸ್ವಲ್ಪ ಕಾಲಕ್ಕಾದರೂ ಗೃಹಸ್ಥರಾಗಿದ್ದವರು. ರಮಣರು ಮದುವೆಯಾಗದೆ ಬ್ರಹ್ಮಚರ್ಯವನ್ನು ಪಾಲಿಸಿದವರು.

ಒಬ್ಬ ವ್ಯಕ್ತಿಯ ಮಹಿಮೆ ಅವನಿಗೆ ತಂದೆತಾಯಿಗಳಿದ್ದರೇ, ಇರಲಿಲ್ಲವೇ ಎಂಬುದನ್ನಾಗಲಿ, ಅವನು ಹೆಣ್ಣಿನೊಡನೆ ಕೂಡಿದ್ದನೇ ಇಲ್ಲವೇ ಎಂಬುದನ್ನಾಗಲಿ ಅವಲಂಬಿಸಿದ್ದಲ್ಲ. ಅವನು ಸಾಧಿಸಿದ್ದೇನು, ಇತರರೊಡನೆ ನಡೆದುಕೊಂಡ ರೀತಿ ಯಾವುದು, ಇತರರಿಗೆ ಅವನಿಂದ ಎಷ್ಟರಮಟ್ಟಿಗೆ ಪ್ರಯೋಜನವಾಯಿತು-ಇವು ಮುಖ್ಯವಾದ ಅಂಶಗಳು. ಈ ಹಿನ್ನೆಲೆಯಲ್ಲಿ ಅಲ್ಲಮನ ಬದುಕು ಯಾವ ರೀತಿ ಇದ್ದಿರಬಹುದು. ಅವನಿಗೂ ಅವನ ಸಮಕಾಲೀನರಿಗೂ ಇದ್ದ ಸಂಬಂಧ ಎಂಥದು. ಜೀವನದ ವಿಷಯದಲ್ಲಿ ಅವನು ತಾಳಿದ ನಿಲುವು ಯಾವುದು ಎಂಬುದನ್ನು ಪರಿಶೀಲಿಸಲು ನಮಗೆ ಇರುವ ಆಧಾರಗಳು ಅಲ್ಲಮನ ವಚನಗಳು ಮಾತ್ರವೇ. ಇತರ ವಚನಕಾರರು ಅವನ ವಿಷಯದಲ್ಲಿ ಹೇಳಿರುವ ಮಾತುಗಳೂ ನಮಗೆ ಕೊಂಚ ನೆರವು ನೀಡಬಹುದು. ಅಲ್ಲಮನನ್ನು ಕುರಿತು ಕಾವ್ಯರಚನೆ ಮಾಡಿರುವವರು ಕವಿಗಳು, ಇತಿಹಾಸಕಾರರಲ್ಲ. ಇತಿಹಾಸಕ್ಕೂ ಅವರಿಗೂ ಅಜಗಜಾಂತರ ವ್ಯತ್ಯಾಸ. ಹೀಗಾಗಿ ಅವರು ಅಲ್ಲಮನ ವಿಷಯಕ್ಕೆ ಬರೆದಿರುವುದನ್ನು ಅಧಿಕೃತ ದಾಖಲೆ ಎಂದು ಸ್ವೀಕರಿಸುವುದು ಕಷ್ಟವಾಗುತ್ತದೆ.

ಅಲ್ಲಮಪ್ರಭುವಿನ ವಚನಗಳನ್ನೂ ಇತರ ವಚನಕಾರರು ಅವನ ವಿಷಯದಲ್ಲಿ ಹೇಳಿರುವುದನ್ನೂ ಅಧ್ಯಯನ ಮಾಡಿದರೆ ಅಲ್ಲಮನು ಜಗತ್ತು ಕಂಡಿರುವ ಬ್ರಹ್ಮಜ್ಞಾನಿಗಳ, ಅನುಭವಿಗಳ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾನೆ ಎಂಬುದು ಸ್ಪಷ್ಟ ಗೋಚರವಾಗುತ್ತದೆ. ಆದರೆ ಅವನು ದೇವರೆಂದೋ, ದೇವರ ಗಂಟೆ, ಜಾಗಟೆ ಅಥವಾ ಯಾವುದೋ ಪ್ರಾಣಿಯ ಅವತಾರವೆಂದೋ ಹೇಳೊಹೊರಟರೆ ಅವನ ಸಾಧನೆಗೆ, ಬುದ್ಧಿಯ ಪ್ರಖರತೆಗೆ, ಹಿಮಾಚಲ ಸದೃಶವಾದ ಅವನ ವ್ಯಕ್ತಿತ್ವಕ್ಕೆ ಅಗೌರವ ತೋರಿಸಿದಂತಾಗುತ್ತದೆ.

ಅಲ್ಲಮಪ್ರಭು ಹುಟ್ಟುವಾಗಲೇ ಸಿದ್ಧನಾಗಿದ್ದನೋ, ಇಲ್ಲವೇ ಸ್ವಲ್ಪಕಾಲದ ಅಥವಾ ದೀರ್ಘಕಾಲದ ಸಾಧನೆಯಿಂದ ಅವನು ಸಿದ್ಧಪಡೆದನೋ, ಒಂದು ವೇಳೆ ಸಾಧನೆ ನಡೆಸಿದ್ದರೆ ಆ ಅವಧಿಯಲ್ಲಿ ಅವನನ್ನು ಕಾಮಕ್ರೋಧಾದಿಗಳು ಕಾಡಿದವೋ-ಎಂಬುದು ಮೊದಲನೆಯ ಗುಂಪಿನ ಪ್ರಶ್ನೆಗಳು. ಅಲ್ಲಮನ ವ್ಯಕ್ತಿತ್ವದ ಮುದ್ರೆಯನ್ನು ಹೊಂದಿವೆ ಎಂದು ನಾವು ಹೇಳಬಹುದಾದ ಕೆಲವು ವಚನಗಳನ್ನು ನೊಡಿದರೆ ಅವನು ಜಗತ್ತಿನ ಸ್ವರೂಪವನ್ನು ಸಾಧನೆಯ ಪಥದ ಜಟಿಲತೆಯನ್ನೂ ಕಂಡು ಕ್ಷಣ ಕಾಲವಾದರೂ ದಿಗ್ಬ್ರಾಂತನಾದ ಎಂದು ಹೇಳುವುದಕ್ಕೆ ಆಧಾರಗಳು ದೊರಕುತ್ತವೆ, ಅಲ್ಲಮನ ಒಂದು ವಚನ ಹೀಗಿದೆ:

ಕಂಗಳ ಮುಂದಣ ಕತ್ತಲೆಯಿದೇನೋ!
ಮನದ ಮುಂದಣ ಮಱವೆಯಿದೇನೋ!
ಒಳಗಣ ರಣರಂಗ, ಹೊಱಗಣ ಶೃಂಗಾರ,
ಬಳಕೆಗೆ ಬಂದ ಬಟ್ಟೆಯಿದೇನೋ ಗುಹೇಶ್ವರ.

ನಮ್ಮ ಸುತ್ತ ಸುತ್ತುತ್ತಿರುವ ಕತ್ತಲೆ, ಸಾಧಕನ ಹೃದಯದಲ್ಲಿ, ಸಾಧನೆಯ ಪ್ರಾರಂಭದ ದಿನಗಳಲ್ಲಿ ನಡೆಯುವ ರಣ ಕೋಲಾಹಲ ಇವುಗಳ ಸೂಚನೆ ಈ ವಚನದಲ್ಲಿದೆ ನಿಜ. ಆದರೆ ವಾಸ್ತವವಾಗಿ ತನ್ನ ಬದುಕಿನ ಯಾವ ಮಟ್ಟದಲ್ಲಿ ಅಲ್ಲಮಪ್ರಭು ಇದನ್ನು ಹೇಳಿದ, ಇದು ತನ್ನನ್ನೇ ಕುರಿತದ್ದೋ ಅಥವಾ ಅಂಥ ಸ್ಥಿತಿಯ ಸಾಮಾನ್ಯೀಕರಣವೋ ಹೇಳುವುದು ಕಷ್ಟ.

ಆದರೆ ಅವನದೇ ಸ್ಥಿತಿಯನ್ನು ವರ್ಣಿಸುವಂತಹವು ಎಂದು ಹೇಳಬಹುದಾದ ಎರಡು ವಚನಗಳುಂಟು. ನಾಲ್ಕನೆಯ ಶೂನ್ಯ ಸಂಪಾದನೆಯಲ್ಲಿಯ ಅಲ್ಲಮನ ಅಚ್ಚಾದ ವಚನಗಳ ಪ್ರತಿಯಲ್ಲಿಯೂ ಇಲ್ಲದ ಈ ವಚನಗಳನ್ನು ಡ. ಎಂ. ಚಿದಾನಂದಮೂರ್ತಿಯವರು ಎರಡನೆಯ ಶೂನ್ಯ ಸಂಪಾದನೆಯಿಂದ ಉದ್ಧರಿಸಿದ್ದಾರೆ. ಗುರುಕೃಪೆಯಿಂದ ಅದ್ವೈತ ಜ್ಞಾನಲಬ್ಧವಾದ ಸ್ಥಿತಿಯಲ್ಲಿ ಅಲ್ಲಮ ಹೇಳಿರಬಹುದಾದ ವಚನ ಇದು:

ಕರ್ಮದ ಗಡಣ ಹಿಂಗಿದವಿಂದು ಪಾಪದ ಬಲೆ ಬಳಸಿಹೋದವು.
ಒಲ್ಲೆನೊಲ್ಲೆನೀ ಸಂಸಾರದಲ್ಲಿನೊಂದು ಬೆಂದೆ.
ನಾರಿ ಮಾಯದ ತಲೆಯ ಮೆಟ್ಟಿಹೋದೇನು.
ಇನ್ನು ಮರಳಿ ಬಾರೆನು ಗೊಗೇಶ್ವರಾ ನಿಮ್ಮಾಣೆ.

ಮೇಲಿನದಕ್ಕಿಂತ ಸುಂದರವಾದ, ಆದರೆ ಮೇಲಿನ ವಚನದ ಅರ್ಥವನ್ನೇ ಉಳ್ಳ, ಮೇಲಿನ ವಚನಕ್ಕೆ ಪ್ರಾಪ್ತವಾದ ಗತಿಯನ್ನೇ- ಎಂದರೆ ಅಜ್ಞಾತವಾಸವನ್ನೇ- ಪಡೆದ ಮತ್ತೊಂದು ವಚನವುಂಟು. ಕಾಮಲತೆಯೆಂಬ ಸ್ತ್ರೀಯನ್ನು ಅಲ್ಲಮ ವರಿಸಿರಬಹುದು. ಅನಂತರ ಅವಳ ಅಕಾಲಮರಣದಿಂದ ಅವರಿಗೆ ವೈರಾಗ್ಯ ಬಂದಿರಬಹುದು ಅಥವಾ ಮೊದಲೇ ಇದ್ದ ವೈರಾಗ್ಯ ತೀವ್ರವಾಗಿರಬಹುದು. ಆ ಸಂದರ್ಭದಲ್ಲಿ ಅರಿವಿಗೆ ಶ್ರೇಷ್ಠ ಗುರುವೊಬ್ಬರ ದರ್ಶನವಾಗಿರಬಹುದು- ಈ ಎಲ್ಲ ಊಹೆಗಳ ಹಿನ್ನೆಲೆಯಲ್ಲಿ ಈ ಮುಂದಿನ ವಚನವನ್ನು ಪರಿಶೀಲಿಸಬೇಕು.

ಅವಳ ನೋಟವೆನ್ನ ಮರ್ತ್ಯಕ್ಕೆ ತಂದುದಯ್ಯಾ,
ಅವಳ ಕೂಟದ ಸವಿಯವಗಡಸಿ ಕಾಡಿತ್ತಯ್ಯಾ.
ಅವಳ ಬೇಟದ ಬೆರಹರುದಲ್ಲಿ ತ್ರಿಪುರ ಹಾಳಾದುದ ಕಂಡೆನು.
ಉರಿಯ ಮೇಲೆ ಉರಿಯೆರಗಿದಡೆ ತಂಪು ಮೂಡಿತ್ತ ಕಂಡೆನು.
ಕರಿಯ ಬೇಡನ ಕಸ್ತೂರಿಯ ಮೃಗ ನುಂಗಿದರೆ
ಹಿರಿಯ ಹೆಂಡತಿ ಓಲೆಗಳೆದುದ ಕಂಡೆನು.
ಕಾರಿರುಳ ಕೋಟೆಯ ಕರಿಯ ಕಾಳೆಗಳಗೆಲಿದು
ಹೂಳಿರ್ದನಿದಾನವ ಕಂಡೆನು, ಕಾಣಾ ಗೊಗೇಶ್ವರಾ.

ವಾಸ್ತವವಾಗಿ ಇದರ ಸಂಪೂರ್ಣ ಅರ್ಥ ಏನು ಎಂದು ನನಗೆ ತಿಳಿಯದು. ಅದರಲ್ಲಿ ಬಳಕೆಯಾಗಿರುವ ಮಾತುಗಳ ಛಾಯೆಯನ್ನು ನೋಡಿದರೆ ಅಲ್ಲಮಪ್ರಭುವಿನ ಬದುಕಿನಲ್ಲೂ ಕತ್ತಲೆಯ ದಿನಗಳಿದ್ದವು. ಅವುಗಳನ್ನು ಅವನು ಸಾಧನೆಯಿಂದ ದಾಟಿದ ಎಂದು ಧ್ವನಿತವಾಗುವಂತೆ ತೋರುತ್ತದೆ.

ಒಟ್ಟಾರೆ, ಸಂಪಾದನೆಗೊಂದು ಮುದ್ರಿತವಾಗಿರುವ ಅಲ್ಲಮನ ವಚನಗಳನ್ನು ನೋಡಿದರೆ ಅವನು ಆಧ್ಯಾತ್ಮಿಕ ಜೀವನದ ಆರಂಭದಲ್ಲಿ ಇಟ್ಟ ಹೆಜ್ಜೆಗಳ ಸ್ಪಷ್ಟವಾದ ಗುರುತುಗಳು ಕಾಣುವುದಿಲ್ಲ. ಆದರೆ ಗುರುವಿನಿಂದ, ಅದೂ ಅಲೌಕಿಕವಾದ ಗುರುವಿನಿಂದ, ಅಲೌಕಿಕವಾದ ರೀತಿಯಲ್ಲಿ ಆತ್ಮಜ್ಞಾನವನ್ನು ಪಡೆದ ಎಂಬುದಂತೂ ಅವನ ವಚನಗಳಿಂದ ನಿಚ್ಚಳವಾಗಿದೆ.

ಗುರು ದೊರಕುವ ಮುನ್ನ ಪ್ರಭುವು ಭಗವಂತನಿಗಾಗಿ ಹಂಬಲಿಸಿ, ಅವನ ವಿರಹದಲ್ಲಿ ನೊಂದು ಬೆಂದಿದ್ದಾನೆ ಎಂಬುದನ್ನು ವಚನ ಒಂದುಂಟು:

ಎಸೆಯದಿರು ಎಸೆಯದಿರು ಕಾಮ, ನಿನ್ನ ಬಾಣ ಎಸೆಯಲೇಕೋ?
ಕಾಮಕ್ರೋಧ ಲೋಭ ಮೋಹ ಮದ ಮತ್ಸರ ಇದು ಸಾಲದೆ ನಿನಗೆ?
ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ ಮರಳಿ ಸುಡಲುಂಟೆ ಮರುಳು ಕಾಮಾ!

ಅಲ್ಲಮನು ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದು ಪರಿತಪಿಸುತ್ತಿದ್ದ ಅವಧಿಯಲ್ಲಿ ಅವನಿಗೆ ಪರಮಗುರು ಅನಿಮಿಷಯ್ಯನವರ ದರ್ಶನವಾಗುತ್ತದೆ. ಅಲ್ಲಮನ ವರ್ಣನೆಯಿಂದ ಹೇಳುವುದಾದರೆ ಅನಿಮಿಷಯ್ಯನವರು ನಿರ್ವಿಕಲ್ಪಸಮಾಧಿಯಲ್ಲಿ ತಮ್ಮ ಮನಸ್ಸು ಲೀನವಾಗಿ ಹೋಗಿ ನಿರಂತರವಾದ ಆನಂದಾನುಭವವನ್ನು ಪಡೆಯುತ್ತಿದ್ದ ಒಬ್ಬ ಯೋಗಿ. ನೆಲದಲ್ಲಿ ಹೂತುಹೋಗಿದ್ದ ದೇಗುಲವೊಂದರಲ್ಲಿ ಅವರು ಅಂಗೈಯ ಲಿಂಗದಲ್ಲಿ ನಟ್ಟ ದೃಷ್ಟಿಯುಳ್ಳವರಾಗಿ ಕುಳಿತಿದ್ದುದನ್ನು ಅಲ್ಲಮಪ್ರಭು ನೋಡಿದೆ ಎಂಬುದು ಎಲ್ಲ ನಿರೂಪಣೆಗಳ ಸಾರಾಂಶ. ಒಳಗು ಹೊರಗು ಬೆಳಗಿನ ಬೆಳಗಾಗಿ, ಬೆಳಕಿನ ಪುಂಜವಾಗಿ ಕುಳಿತ ಅಲೋಕ – ಸಾಮಾನ್ಯ ಗುರುವನ್ನು ಕಂಡು ಅಲ್ಲಮಪ್ರಭು ದಿಗ್ಬ್ರಾಂತನಾದ. ಅವನ ನಿಲುವನ್ನು ಅಲ್ಲಮಪ್ರಭು ವರ್ಣಿಸಿರುವ ರೀತಿ ಇದು:

ಸ್ಫಟಿಕ ಘಟದೀಪದಂತೆ ಒಳಹೊರಗು ಇಲ್ಲ ನೋಡಾ!
ವಿಗಡ ಚರಿತ್ರಕ್ಕೆ ನಾ ಬೆರಗಾದೆನು
ನೋಡುವರೆ ಕಾಣಬರುತ್ತಿದೆ, ಮುಟ್ಟುವರೆ ಕೈಗೆ ನಿಲುಕದು,
ಹೊದ್ದಿದರೆ ಸಮೀಪ, ಹತ್ತೆಸಾರಿದತ್ತತ್ತ ತೋರುತ್ತಿದೆ.
ಆಕಾರ ನಿರಾಕಾರವ ನುಂಗಿ, ಬಯಲು ಸಮಾಧಿಯಲ್ಲಿ ಸಿಲುಕಿತ್ತು ನೋಡಾ!
ದರುಶನದಿಂದ ಅಮೃತಾಹಾರವಾಯಿತ್ತು.
ಬೆರೆಸಿದಡಿನ್ನೆಂತೋ ಗೊಹೇಶ್ವರ.

“ಆಕಾರ ನಿರಾಕಾರವ ನುಂಗಿ, ಬಯಲು ಸಮಾಧಿಯಲ್ಲಿ ಸಿಲುಕಿತ್ತು ನೋಡಾ” ಎಂಬುದು ಸ್ಪಷ್ಟವಾಗಿ ಅಲ್ಲಮಪ್ರಭುವಿನ ಮಾತಿನ ರೀತಿ. ಅಲ್ಲದೆ ಅವನಿಗೆ ಗುರು ದರುಶನವಾದ ಕೂಡಲೇ ಆದ ಅನುಭವವನ್ನೂ ಅವನು ಒಂದೇ ಮಾತಿನಲ್ಲಿ ವರ್ಣಿಸಿದ್ದಾನೆ. ‘ಅಮೃತಾಹಾರವಾಯಿತ್ತು’ ‘ಯಶೋಧರ ಚರಿತೆ’ಯಲ್ಲಿ ಜನ್ನಕವಿ ಗುರು ಸುದತ್ತಾಚಾರ್ಯರ ಮಹಿಮೆಯನ್ನು ವರ್ಣಿಸಿರುವ ರೀತಿ ಇದು: “ಅದರ ಪೆಸರ್ಗೊಂಡ ನಾಲಗೆ ಸವಿದರಿಯದು ಮತ್ತೆ ತಾಯ ಮೊಲೆವಾಲ್‌ಪನಿಯಂ.” ಇದೇ ರೀತಿಯ ವರ್ಣನೆ ಇದು! ದರುಶನಮಾತ್ರದಿಂದಲೇ ಅಮೃತತ್ವ ಪ್ರಾಪ್ತಿ!

ಅಷ್ಟೇ ಅಲ್ಲ, ಜ್ಞಾನವನ್ನು ಹುಡುಕಿಕೊಂಡು ಬಂದವನಿಗೆ ಜ್ಞಾನನಿಧಿ ಹೇಗೆ ಪ್ರಾಪ್ತವಾಗಿದೆ!

ಅರಸುವ ಬಳ್ಳಿ ಕಾಲ ಸುತ್ತಿತೆಂಬಂತೆ, ಬಯಸುವ ಬಯಕೆ ಕೈಸಾರಿದಂತೆ,
ಬಡವ ನಿಧಾನವನೆಡಹಿ ಕಂಡಂತೆ, ನಾನರಸುತ್ತಲರಸುತ್ತ ಬಂದು,
ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ.
ಎನ್ನ ಅರಿವಿನ ಹರುವ ಕಂಡೆ ನೋಡಾ.
ಎನ್ನೊಳ ಹೊರಗ ಎಡೆತೆರಹಿಲ್ಲದೆ ಥಳಥಳಿಸಿ ಹೊಳಪುತಿಪ್ಪ
ಅಖಂಡ ಜ್ಯೋತಿಯ ಕಂಡೆ ನೋಡಾ!
ಕುರುಹಳಿದ ಕರಸ್ಥಳದ ನಿಬ್ಬೆರಗಿನ ನೋಟದ
ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗೊಹೇಶ್ವರ.

ಎಲ್ಲ ಗುರುಗಳಂತಲ್ಲದ, ನಿರಂತರ ಆತ್ಮಾನುಸಂಧಾನಿಯಾದ ಗುರುವಿನ ನಿಲುವನ್ನು ಈ ಶಿಷ್ಯನು ಅರಿತನು. ಎಲ್ಲ ಶಿಷ್ಯರಂತರಲ್ಲದ, ಲೌಕಿಕ ಫಲ ನಿರಪೇಕ್ಷಿಯಾದ, ನಿರಂತರ ಆತ್ಮಾನುಸಂಧಾನದ ಕೀಲಿಕೈಯನ್ನು ಅರಸುತ್ತಲಿದ್ದಶಿಷ್ಯನ ಸತ್ವವನ್ನು ಆ ಗುರು ಅರಿತನು. ಜಗತ್ತಿನ ಅಧ್ಯಾತ್ಮದ ಇತಿಹಾಸದಲ್ಲಿ ಬಹಳ ಸಲ ಕಾಣಸಿಗದ ಗುರು-ಶಿಷ್ಯ ಜೋಡಿ ಇದು. ಶಿಷ್ಯ ಬೇಡಿದ್ದು ಒಂದನ್ನೇ:

ನೀನೆನಗೆ ಗುರುವಪ್ಪಡೆ. ನಾ ನಿನಗೆ ಶಿಷ್ಯನಪ್ಪಡೆ
ಎನ್ನಕರಣಾದಿ ಗುಣಂಗಳ ಕಳೆದು, ಎನ್ನಕಾಯ ಧರ್ಮದ ತೊಡೆದು.
ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ,
ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡು ಗೊಹೇಶ್ವರ.

ತನ್ನ ಇಂದ್ರಿಯಗಳ ಗುಣಗಳನ್ನು ದೇಹದ ಧರ್ಮವನ್ನು ನಾಶಗೊಳಿಸಬೇಕೆಂಬುದು ಶಿಷ್ಯನ ಪ್ರಾರ್ಥನೆ. ಅಷ್ಟೇ ಅಲ್ಲ ಗುರು ತಾನೇ ಶಿಷ್ಯನ ದೇಹ, ಪ್ರಾಣಗಳನ್ನು ತುಂಬಿ, ಭಾವದಲ್ಲಿ ಭಾವವಾಗಿ ನಿಂದು- ಅಷ್ಟು ಸಾಲದೆ ಇಷ್ಟಲಿಂಗವಾಗಿ ಕರಸ್ಥಳದಲ್ಲಿ ನೆಲೆಸುವ ಕೃಪೆ ಮಾಡಬೇಕು ಎಂಬುದು ಅವನ ಅಪೇಕ್ಷೆ. ಇಂಥ ಶುದ್ಧ ಆಧ್ಯಾತ್ಮಿಕ ಬೇಡಿಕೆಯನ್ನು ಸಲ್ಲಿಸುವ ಮತ್ತೊಬ್ಬ ಶಿಷ್ಯ ದೊರೆಯುವುದು ದುಲರ್ಭ ಎಂಬುದು ಅನಿಮಿಷ ದೇವರಿಗೆ ಕ್ಷಣಾರ್ಧದಲ್ಲಿ ಹೊಳೆದಿರುವುದು ಅಸಂಭವವಲ್ಲ. ಲೌಕಿಕತೆಯ ಯಾವ ಸೋಂಕೂ ಇಲ್ಲದ ಸಾಮಾನ್ಯ ದೀಕ್ಷಾವಿಧಿಗಳನ್ನು ಮೀರಿದ ಜ್ಞಾನಧಾರೆಯನ್ನು ಶಿಷ್ಯ ಬೇಡುತ್ತಿದ್ದಾನೆ.

ಕಾಣಬಾರದ ಗುರು ಕಣ್ಗೆ ಗೋಚರವಾದಡೆ, ಹೇಳಲಿಲ್ಲದ ಬಿನ್ನಪ!
ಮುಟ್ಟಲಿಲ್ಲದ ಹಸ್ತಮಸ್ತಕ ಸಂಯೋಗ! ಪೂಸಲಿಲ್ಲದ ವಿಭೂತಿಯ ಪಟ್ಟ!
ಕೇಳಿಲಿಲ್ಲದ ಕರ್ಣಮಂತ್ರ! ತುಂಬಿ ತುಳುಕದ ಕಳಶಾಭಿಷೇಕ!
ಆಗಮವಿಲ್ಲದ ದೀಕ್ಷೆ! ಪೂಜೆಗೆ ಬಾರದ ಲಿಂಗ! ಸಂಗವಿಲ್ಲದ ಸಂಬಂಧ!
ಸ್ವಯಮಪ್ಪನುಗ್ರಹವ ಅನುಗೊಂಬಂತೆ ಮಾಡಾ ಗೊಹೇಶ್ವರಾ.

ಶಿಷ್ಯ ಕೇಳಿದ ಕ್ಷಣವೇ ಗುರು ಅನುಗ್ರಹಿಸಿದ. ಗುರು ಶಿಷ್ಯನಲ್ಲಿ ಲೀನವಾಗಿ ತನ್ನತನವನ್ನು ತಾನು ಅಳಿದುಕೊಂಡು ಅನಾಮಧೇಯನಾದ. ತನ್ನ ಸರ್ವಸ್ವವನ್ನೂ ಶಿಷ್ಯನಿಗೆ ಧಾರೆಯೆರೆದು ತಾನು ವ್ಯಕ್ತಿತ್ವರಹಿತನಾದ. ಇದಕ್ಕೆ ಈಚಿನ ಕಾಲದ ನಿದರ್ಶನವೆಂದರೆ ತೋತಾಪುರಿಯೆಂಬ ಗುರು ಶ್ರೀ ರಾಮಕೃಷ್ಣ ಪರಮಹಂಸರಿಗೆ ಅದ್ವೈತ ದೀಕ್ಷೆಯನ್ನುನೀಡಿ ಜಗತ್ತಿನ ಕಣ್ಣಿನಿಂದ ಮರೆಯಾದದ್ದು.

ಅಲ್ಲಮಪ್ರಭು ತಾನು ಪಡೆದು, ಅನುಭವಕ್ಕೆ ತಂದುಕೊಂಡು, ಜಗತ್ತಿಗೆ ನೀಡಿದ ಜ್ಞಾನ ಸ್ವರೂಪ ಎಂಥದು? ಅದು ಶುದ್ಧಾದ್ವೈತ ಎಂಬುದು ನನ್ನ ಅಭಿಪ್ರಾಯ. ಶ್ರೀ ಗುರುವಿನಿಂದ ತನಗೆ ಜ್ಞಾನ ಪ್ರಾಪ್ತವಾದ ಸಂದರ್ಭದಲ್ಲಿ ಎಂದು ತೋರುತ್ತದೆ, ಅಲ್ಲಮ ಪ್ರಭು ಹೀಗೆ ಹೇಳಿದ್ದಾನೆ:

ನೆನೆಹು ಸತ್ತಿತು, ಭ್ರಾಂತು ಬೆಂದಿತ್ತು, ಅರಿವು ಮರೆಯಿತ್ತು
ಕುರುಹುಗೆಟ್ಟಿತ್ತು. ಗತಿಯನರಸಲುಂಟೆ? ಮತಿಯನರಸಲುಂಟೆ?
ಅಂಗವೆಲ್ಲ ನಷ್ಟವಾಗಿ, ಲಿಂಗ ಲೀಯವಾಯಿತ್ತು. ಕಂಗಳಂಗದ ಕಳೆಯ
ಬೆಳಗಿನ ಭಂಗ ಹಿಂಗಿತ್ತು ಗೊಹೇಶ್ವರ.

ಶ್ರೀರಾಮಕೃಷ್ಣರಿಂದ ಸಮಾಧಿಯ ಅನುಭವವನ್ನು ಪಡೆದ ಸ್ವಾಮಿ ವಿವೇಕಾನಂದರು ಸ್ವಲ್ಪ ಪ್ರಜ್ಞೆ ಮರಳಿದೊಡನೆಯೇ, ನನ್ನ ದೇಹವೆಲ್ಲಿ? ನನ್ನ ಕೈಕಾಲುಗಳೆಲ್ಲಿ? ಎಂದು ಹುಡುಕೊಂಡದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಅಲ್ಲದೆ ಈ ಕೆಳಗಿನ ವಚನಗಳನ್ನು ನೋಡಬಹುದು.

ಅಲ್ಲಮಪ್ರಭುವಿನ ಸಾಧನೆ ಮತ್ತು ವ್ಯಕ್ತಿತ್ವ
ಶಬ್ದವೆಂಬೆನೆ ಶ್ರೋತ್ರದೆಂಜಲು
ಸ್ಪಶವೆಂಬೆನೆ ತ್ವಕ್ಕಿನೆಂಜಲು,
ರೂಪೆಂಬೆನೆ ನೇತ್ರದೆಂಜಲು,
ರುಚಿಯೆಂಬೆನೆ ಜಿಹ್ವೆಯೆಂಜಲು,
ಪರಿಮಳವೆಂಬೆನೆ ಘ್ರಾಣದೆಂಜಲು,
ನಾನೆಂಬೆನೆ ಅರಿವಿನೆಂಜಲು,
ಎಂಜಲೆಂಬ ಭಿನ್ನವಳಿದ ಬೆಳಗಿನೊಳಗಣ ಬೆಳಗು ಗುಹೇಶ್ವರ ಲಿಂಗವು.

ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ
ಆಕಾಶಗಂಗೆಯಲ್ಲಿ ಮಜ್ಜನ,
ಹೂವಿಲ್ಲದ ಪರಿಮಳದ ಪೂಜೆ,
ಹೃದಯ ಕಮಲದಲ್ಲಿ ಶಿವಶಿವಾ ಎಂಬ ಶಬ್ದ,
ಇದು ಅದ್ವೈತಕಾಣಾ ಗುಹೇಶ್ವರ.
ನೆನೆನೆನೆಯೆಂದಡೆ ಏನ ನೆನೆವೆನಯ್ಯ?
ಎನ್ನ ಕಾಯವೇ ಕೈಲಾಸವಾಯಿತ್ತು, ಮನವೆ ಲಿಂಗವಾಯಿತ್ತು.
ತನುವೆ ಸೆಜ್ಜೆಯಾಯಿತು.
ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ?
ಗುಹೇಶ್ವರಲಿಂಗ ಲೀಯವಾಯಿತ್ತು.

ಅದ್ವೈತದಿಂದ ದ್ವೈತಕ್ಕೆ, ದ್ವೈತದಿಂದ ಅದ್ವೈತಕ್ಕೆ ಲಾಳಿಯಾಡುವ ಮನಸ್ಸಿಗಾದರೆ ದ್ವೈತದ ವಿಷಯದಲ್ಲಿ, ಜೀವ-ಶಿವರ ಭಿನ್ನತೆಯ ವಿಷಯದಲ್ಲಿ ಗೌರವವಿಲ್ಲದೆ ಹೋದರೆ ಹೋಗಲಿ, ಕರುಣೆಯಾದರೂ ಇರುವ ಸಂಭವವಿತ್ತು. ಅಲ್ಲಮಪ್ರಭುವಿಗೆ ಅಂಥ ಯಾವ ಭಾವನೆಯೂ ಇಲ್ಲ.

ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನಾದ ಪರಮಾತ್ಮನ ಕಲ್ಪನೆಯಲ್ಲಾದರೂ ಅಲ್ಲಮನಿಗೆ ಗೌರವವಿದೆಯೇ ಎಂದರೆ ಅವನ ಮಾತುಗಳು ಇವು:

ನಾ ದೇವನಲ್ಲದೆ ನೀ ದೇವನೇ? ನೀ ದೇವನಾದರೆ ಎನ್ನನೇಕೆ
ಸಲಹೆ? ಆರೈದು ಒಂದು ಕುಡಿತೆ ಉದಕವನೆರೆವೆ.
ಹಸಿದಾಗ ಒಂದು ತುತ್ತು ಓದಗರವನಿಕ್ಕುವೆ. ನಾ ದೇವ ಕಾಣಾ ಗುಹೇಶ್ವರಾ.

ಭಕ್ತಿ, ಭಕ್ತ, ಕರ್ಮ ಇವುಗಳ ವಿಷಯದಲ್ಲೂ ಅಲ್ಲಮನ ನಿಲುವು ಇದು:

ಭಕ್ತನೆಂಬುವ ಸೂತಕಿ, ಲಿಂಗೈಕ್ಯನೆಂಬವ ವ್ರತಗೇಡಿ.
ಶರಣಸತಿ ಲಿಂಗಪತಿಯೆಂಬ ಶಬ್ದ ಸರ್ವಗುಣ ಸಾಹಿತ್ಯನೆಂಬಾತ
ಕಮೇಂದ್ರಿಯ ಭೋಗಕ್ಕೆ ಬಾರದ ಭೋಗಿ
ಗುಹೇಶ್ವರ ನಿಮ್ಮಶರಣ ಆವ ಭೀತನೂ ಅಲ್ಲ,
ಆವ ಕರ್ಮಿಯೂ ಅಲ್ಲ.

ಇನ್ನು ತೀರ್ಥಯಾತ್ರೆ, ಪವಿತ್ರ ಜಲಸ್ನಾನ, ಈ ಯಾವುದರಿಂದಲೂ ಅದ್ವೈತ ಸ್ಥಿತಿ ಸಾಧ್ಯವಿಲ್ಲ ಎಂಬುದು ಅಲ್ಲಮನ ಸ್ಪಷ್ಟೋಕ್ತಿ. ಮನಸ್ಸು ಚಿತ್ತಿನಲ್ಲಿ ಲೀನವಾಗುವುದು ಸಾಧ್ಯವಾದರೆ ದೊರೆಯಬಹುದಾದದ್ದು ಬೆಳಕಿನ ಮೀಹ.

ಸುತ್ತಿ ಸುತ್ತಿ ಬಂದಡಿಲ್ಲ ಲಕ್ಷಗಂಗೆಯ ಮಿಂದಡಿಲ್ಲ
ತುಟ್ಟತುದಿಯ ಮೇಲುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕೆ ನಿಚ್ಚನೆನೆವ ಮನವ ಅಂದಂದಿಗೆ ಅತ್ತಲಿತ್ತ ಹರಿವ ಮನವ
ಚಿತ್ತದಲ್ಲಿ ನಿಲಿಸಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರ ಲಿಂಗವು.

ಅಲ್ಲಮಪ್ರಭು ಸಾಧಿಸಿದ್ದೇನು? ಅವನು ಲೋಕಕ್ಕೆ ಬಿಟ್ಟ ಸಂದೇಶದ ಸ್ವರೂಪ ಎಂಥದು ಎಂಬುದನ್ನು ವಿವರವಾಗಿ ನೋಡಿದರೆ ಅವನ ಒಟ್ಟಾರೆ ವ್ಯಕ್ತಿತ್ವದ ಚಿತ್ರ ನಮ್ಮ ಮುಂದೆ ಮೂಡಿ ನಿಲ್ಲುವುದು ಸಾಧ್ಯವಾಗುತ್ತದೆ.

ಪ್ರಭು ಉದ್ದಕ್ಕೂ ನಮಗೆ ಕಾಣುವುದು ಒಬ್ಬ ಲೋಕಗುರುವಾಗಿ ಅವನ ವೈಯಕ್ತಿಕ ಜೀವನದ ಸಾಧನೆಯ ಚಿತ್ರಗಳು ತೀರ ಮುಸುಕಾಗಿದ್ದರೂ ಅವನ ಗುರುಪಾತ್ರದ ಚಿತ್ರಗಳು ಉಜ್ವಲವಾಗಿದೆ.

ಇಡೀ ಜಗತ್ತಿಗೆ ಒಂದೇ ಮಂತ್ರ ಎಂಬುದು ಅಲ್ಲಮನ ನಂಬಿಕೆಯಾಗಿದ್ದಂತೆ ತೋರುವುದಿಲ್ಲ. ಗುರುವಾದವನು ಉಪದೇಶ ನೀಡುವುದಕ್ಕೆ ಮುಂಚೆ ಶಿಷ್ಯನ ವ್ಯಕ್ತಿತ್ವದ ಒಳಪದರಗಳ ಪರಿಚಯ ಮಾಡಿಕೊಳ್ಳುವುದು ಅತ್ಯಗತ್ಯ. ಈ ನೆಲ ಯಾವ ಬೆಳೆಯ ಬೀಜದ ಬಿತ್ತನೆಗೆ ಅನುಕೂಲವಾದದ್ದೂ, ಅದು ಈಗ ಬಿತ್ತನೆಗೆ ಹಸನಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯದವನು ಹೇಗೆ ಸರಿಯಾದ ಬೇಸಾಯಗಾರನಲ್ಲವೋ ಹಾಗೆಯೇ ಶಿಷ್ಯನ ಸಿದ್ಧತೆ, ಅವನ ಪ್ರವೃತ್ತಿ ಮುಂತಾದವುಗಳನ್ನು ತಿಳಿಯದೇ ಉಪದೇಶ ನೀಡಲು ಹೊರಟವನು ಉತ್ತಮ ಗುರುವಾಗಲಾರ. ಪ್ರಭು ಉತ್ತಮ ಗುರು ಪ್ರತಿಯೊಬ್ಬ ಶಿಷ್ಯನ ನಿಲುವನ್ನೂ ತಿಳಿದುಕೊಂಡು ಅವರನ್ನು ನಿಂತಲ್ಲಿಂದ ಮುಂದೆ ಹೋಗಲು ಮಾರ್ಗದರ್ಶನ ನೀಡುತ್ತಿದ್ದಂತೆ ತೋರುತ್ತದೆ.

ಜ್ಞಾನದ ಹಸಿವಿದ್ದು, ವೃತ್ತಿಯಾಗಿ ವ್ಯವಸಾಯವನ್ನು ಆರಿಸಿಕೊಂಡಿದ್ದ ಗೊಗ್ಗಯ್ಯನನ್ನು ಅಲ್ಲಮನು ಸಂಧಿಸಿದನೆಂದು ನಂಬಿಕೆಯಿದೆ. ಹೊರಗಿನ ಕೃಷಿ ಒಳಗಿನ ಕೃಷಿಯಾಗಬೇಕು. ಅಂಥ ಕೃಷಿಯನ್ನು ತಾನು ಮಾಡಿದ್ದೇನೆ. ಹಾಗೆ ಮಾಡಿ ಅಂತರಂಗದಲ್ಲೇ ಒಂದು ಸುಂದರವಾದ ತೋಟವನ್ನು ಮಾಡಿಕೊಂಡಿದ್ದೇನೆ ಎಂದು ಅಲ್ಲಮಪ್ರಭು ಈ ಮುಂದಿನ ವನಚಲ್ಲಿ ಸೂಚಿಸಿರುವಂತೆ ತೋರುತ್ತದೆ.

ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ,
ಅಗೆದು ಕಳೆದೆನಯ್ಯ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ, ಬಗಿದು ಬಿತ್ತಿದೆನಯ್ಯ ಬ್ರಹ್ಮಬೀಜವ,
ಅಖಂಡ ಮಂಡಲವೆಂಬ ಭಾವಿ, ಪವನವೆ ಱೂಟಾಳ.
ಸುಷುಮ್ನನಾಳದಿಂದವೆ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹರೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,
ಆವಾಗಳೂ ತೋಟದೊಳಗೆ ಜಾಗರವಿದ್ದು
ಸಸಿಯ ಸಲಹಿದೆ ಕಾಣಾ ಗೊಹೇಶ್ವರ.

ಪ್ರತಿಯೊಬ್ಬ ವ್ಯಕ್ತಿಯೊಡನೆ ಮಾತನಾಡುವಾಗಲೂ ಅವನಿಗೆ ಅರ್ಥವಾಗುವ ಪರಿಭಾಷೆಯಲ್ಲಿ ಪ್ರಭು-ಮಾತನಾಡುತ್ತಾನೆ ಎಂಬುದನ್ನು ಗಮನಿಸಬೇಕು.

ಸಿದ್ಧರಾಮನ ಕರ್ಮಯೋಗಕ್ಕೆ ಜ್ಞಾನದ ಮೆರುಗನ್ನು ಪ್ರಭುದೇವರು ನೀಡಿದ ಪ್ರಸಂಗವನ್ನು ಪರಿಶೀಲಿಸಿದರೆ ಲೋಕಸಂಗ್ರಹದ ವಿಷಯದಲ್ಲಿ ಅವರ ನಿಲುವು ಏನು ಎಂಬುದು ಸ್ಪಷ್ಟವಾಗುತ್ತದೆ. ಶೂನ್ಯಸಂಪಾದನೆಯಲ್ಲಿ ಗುಮ್ಮಳಾಪುರದ ಸಿದ್ಧಲಿಂಗ ದೇವರು ಪ್ರಭು ಸಿದ್ಧರಾಮರ ಪ್ರಥಮ ಸಮಾಗಮಕ್ಕೆ ಪೀಠಿಕೆಯಾಗಿ ಹೇಳಿರುವ ಮಾತುಗಳು ಧ್ವನಿಪೂರ್ಣವಾಗಿದೆ:

“ಪ್ರಭುದೇವರು ಅಲ್ಲಿಂದ ಸಿದ್ಧರಾಮಯ್ಯದೇವರ ದರುಶನವಾಗಬೇಕೆಂಬ ಕೃಪೆಯಿಂಸೊನ್ನಲಿಗೆಯುಪುರಕ್ಕೆ ಬಿಜಯಂಗೈದಲ್ಲಿ”- ಈ ಹೇಳಿಕೆಯಲ್ಲಿ ಪ್ರಭು-ಸಿದ್ಧರಾಮ ಇಬ್ಬರ ವಿಷಯಕ್ಕೂ ಗೌರವ ಮೂಡುತ್ತದೆ.

ಪ್ರಭು, ಸಿದ್ಧರಾಮನ ಲೋಕಾನುಕಂಪೆಯ ದೃಷ್ಟಿಯನ್ನು ಮೆಚ್ಚಿದಂತೆ ತೋರುವುದಿಲ್ಲ. ಬದಲಿಗೆ, ಅವನ ಕೆರೆ ದೇಗುಲಗಳ ನಿರ್ಮಾಣಕಾರ್ಯವನ್ನು ಅವನ ಶಿಷ್ಯರ ಮುಂದೆಯೇ ಪರಿಹಾಸ್ಯ ಮಾಡುತ್ತಾನೆ.

ಕಲ್ಲಮನೆಯ ಮಾಡಿ, ಕಲ್ಲದೇವರ ಮಾಡಿ
ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತಹೋದರೋ?
ಲಿಂಗಪ್ರತಿಷ್ಠೆಯ ಮಾಡಿದವರಿಗೆ
ನಾಯಕ ನರಕ ಗುಹೇಶ್ವರಾ!

ದೇಹವೆ ದೇಗುಲವಾಗಿರಲು ಬೇರೆ ಮತ್ತೆ ದೇವಾಲಯವೇಕಯ್ಯಾ?
ಪ್ರಾಣವೇ ಲಿಂಗವಾಗಿರಲು ಬೇರೆ ಮತ್ತೆ ಲಿಂಗವೇಕಯ್ಯ?
ಹೇಳಿಲ್ಲ, ಕೇಳಲಿಲ್ಲ.
ಗುಹೇಶ್ವರಾ ನೀನು ಕಲ್ಲಾದಡೆ ನಾನೇಪ್ಪನೆಯ್ಯಾ?

ಅನ್ನವನಿಕ್ಕಿ ನನ್ನಿಯ ನುಡಿದು, ಅರವಟಿಗೆಯನಿಕ್ಕಿ ಕೆರೆಯ ಕಟ್ಟಿಸಿದೊಡೆ,
ಮರಣದಿಂದ ಮೇಲೆ ಸ್ವರ್ಗವುಂಟಲ್ಲದೆ
ಶಿವನ ನಿಜವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ.

ತನುವೆಂಬ ಏರಿಗೆ ಮನವೆಂಬ ಕಟ್ಟೆ
ಆಚಾರವೆಂಬ ಸೋಪಾನ:
ಪರಮಾನಂದವೆಂಬ ಜಲವ ತುಂಬಿ
ಕೆರೆಯ ಕಟ್ಟಬಲ್ಲವನಾರನೂ ಕಾಣೆ.
ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು : ಗುಹೇಶ್ವರಾ ನಿಮ್ಮಾಣೆ.

ಇದು ಪ್ರಭುದೇವರ ನಿಲುವು. ಅವರೇನೋ ‘ಲೋಕದ ಸ್ಥಿತಿಗತಿಯನ್ನು ಮರೆತು’ ನಿರ್ವಾಣದಲ್ಲಿ ನಿಂತವರು. ಹಾಗೆಂದು ಬಾಯಿ ಬಿಟ್ಟು ಹೇಳುವ ಅವರ ವಚನವೊಂದುಂಟು.

ತಾಪತ್ರಯದಲ್ಲಿ ಬೆಂದ ಒಡಲ ಹಿಡಿದು ತಂದು
ಜ್ಞಾನವೆಂಬ ಉರಿಗೆ ಆಹುತಿಯ ಕೊಟ್ಟವನ
ಜ್ಞಾನವೆಂಬ ಕಾಯವ ಹಿಡಿದು ನಿಶ್ಯೂನ್ಯವೆಂಬ ತೇಜದಲ್ಲಿ ಸುಟ್ಟವನ,
ನಿಶ್ಯೂನ್ಯವೆಂಬ ಶಬ್ದವ ಸುಟ್ಟು ಭಸ್ಮವ ಧರಿಸಿದ ಲಿಂಗೈಕ್ಯನ.
ಲೋಕದ ಸ್ಥಿತಿಗತಿಯ ಮರೆದು ನಿರ್ವಾಣದಲ್ಲಿ ನಿಂದವನ,
ಗುಹೇಶ್ವರ ಲಿಂಗದಲ್ಲಿ ತನ್ನ ಮರೆದ ಅಲ್ಲಯ್ಯನ
ಕೋಪದ ಕಿಚ್ಚಿನಲ್ಲಿ ಸುಟ್ಟಿಹನೆಂಬ ಸಿದ್ಧರಾಮಯ್ಯನನೇನೆಂದೆನು.

ಈಶಾವಾಸ್ಯೋಪನಿಷತ್ತಿನಲ್ಲಿ

ಕುರ್ವನ್ನೇವೇಹ ಕರ್ಮಾಣಿ
ಜಜೀವಿಷೇತ್ಶತಂ ಸಮಾಃ |
ಏವಂ ತ್ವಯಿ ನಾನ್ಯಥೇತೋsಸ್ತಿ
ಕರ್ಮ ಲಿಪ್ಯತೇ ನರೆ ||

ಎಂಬ ಪ್ರಸಿದ್ಧ ಮಂತ್ರವೊಂದಿದೆಯಷ್ಟೆ “ಕರ್ಮ ಮಾಡುತ್ತಲೇ ಇಲ್ಲಿ, ನೂರು ವರ್ಷ ಬಾಳತಕ್ಕದ್ದು ಇದಲ್ಲದೆ ಬೇರೆ ದಾರಿಯಿಲ್ಲ. ಕರ್ಮವು ಮನುಷ್ಯರಿಗೆ ಲೇಪಿಸುವುದಿಲ್ಲ” ಎನ್ನುವಾಗ ಕರ್ಮ ಮಾಡಲೇಬೇಕು ತಾನೆ ಎಂದು ಕೇಳಿದರೆ ಶಂಕರಾಚಾರ್ಯರು ಅದಕ್ಕೆ ವ್ಯಾಖ್ಯಾನ ಮಾಡುತ್ತಾ ಇಲ್ಲಿ “ಕರ್ಮಾಣಿ” ಎನ್ನುವುದಕ್ಕೆ ಅರ್ಥ ‘ಹೋಮಾದಿ ನಿತ್ಯ ಕರ್ಮಗಳು” ಎನ್ನುತ್ತಾರೆ. (ಬ್ರಹ್ಮಸೂತ್ರ ಭಾಷ್ಯ, ಅಧಿಕರಣ ೩, ಪಾದ ೪, ಸೂತ್ರ ೧೪ ನೋಡಿ)ಮಂತ್ರಕಾರರ ಅರ್ಥ ಅದಲ್ಲ ಎಂದು ಸಾಮಾನ್ಯಮತಿಗೂ ಹೊಳೆಯುತ್ತದೆ. ಏಕೆಂದರೆ ಈಶಾವಾಸ್ಯದ ಕಾಲದಲ್ಲೇ ಹೋಮಾದಿ ನಿತ್ಯಕರ್ಮಗಳಲ್ಲಿ ತೊಡಗಿರುವಂಥ ಜನಸಮುದಾಯ ಮಾತ್ರ ಇರಲಿಲ್ಲ. ಆ ಪ್ರಶ್ನೆಯನ್ನು ಬಿಟ್ಟರೂ ಶಂಕರರು ಗೀತಾಭಾಷ್ಯದಲ್ಲಿ ‘ಜ್ಞಾನಿಯು ಸರ್ವಕರ್ಮಗಳನ್ನೂ ತ್ಯಜಿಸುತ್ತಾನೆ. ಎನ್ನುತ್ತಾರೆ. “ತಥಾ ಚ ಸರ್ವ ಕರ್ಮಸನ್ಯಾಸಂ ವಕ್ಪ್ಯತಿ.” ಅಲ್ಲದೆ “ತಸ್ಮಾತ್‌ಗೀತಾಶಾಸ್ತ್ರೇ ಆತ್ಮಜ್ಞಾನವತಃ ಸನ್ಯಾಸೇ ಏವಾಧಿಕಾರಃ ನ ಕರ್ಮಣಿ ಇತಿ”- ಆದ್ದರಿಂದ ಗೀತಾಶಾಸ್ತ್ರದಲ್ಲಿ ಆತ್ಮಜ್ಞಾನಿಗೆ ಸನ್ಯಾಸದಲ್ಲಿ ಅಧಿಕಾರವೇ ಹೊರತು ಕರ್ಮದಲ್ಲಲ್ಲ. (೨-೨೧)