ಕರ್ಮ-ಜ್ಞಾನಗಳಲ್ಲಿ ಯಾವುದು ಮೇಲು ಯಾವುದು ಕೀಳು ಎಂಬುದು ಶತಶತಮಾನಗಳಿಂದ ಬಗೆಹರಿಯದೆ ನಿಂತಿರುವ ಪ್ರಶ್ನೆ ಆದರೆ ಶಾಸ್ತ್ರಗಳು ಜ್ಞಾನದಂತೆಯೇ ಕರ್ಮವನ್ನೂ ಯೋಗ ಎಂದೇ ಕರೆದಿವೆ ಎಂಬುದನ್ನು ಗಮನಿಸಬೇಕು. ಆ ಪ್ರಶ್ನೆ ಇರಲಿ, ಇಲ್ಲಿ ಮಾತ್ರ ಸಿದ್ಧರಾಮಯ್ಯ ಅಲ್ಲಮಪ್ರಭುವನ್ನು ಕುರಿತು ಹೀಗೆ ಬೇಡಿದರು:

ನಿಮ್ಮನೊಂದ ಬೇಡುವೆ:
ಎನ್ನಕರ್ಮಬಂಧನ ಬಿಡುವಂತೆ ಮಾಡಯ್ಯಾ
ಕಪಿಲಸಿದ್ಧ ಮಲ್ಲಿಕಾರ್ಜುನಾ

ಸಿದ್ಧರಾಮನು ಕರ್ಮದಲ್ಲಿ ನಿರತನಾಗಿದ್ದಾನೆ; ಇದೇ ಸಾಧನೆಯ ಕೊನೆಯಲ್ಲ, ಸಿದ್ಧಿಯೂ ಅಲ್ಲ ಎಂಬುದು ಪ್ರಭುದೇವರ ನಿಲುವಾದರೂ ಸಿದ್ಧರಾಮನು ನಿಜವಾದ ಯೋಗಿ ಎಂಬುದನ್ನು ಅವನು ಕಾಣದೆ ಹೋಗಲಿಲ್ಲ.

ಮನ ಮನ ಬೆರಸಿದವರೆಂತಿಪ್ಪರಂತಿಪ್ಪರವರ
ಪರಿಯನಱಿಯಬಾರದು ಕೇಳಾ
ಇದಿರಿಂಗೆ ಇಚ್ಛೆಯಱಿಯದಿಪ್ಪರು
ಒಳಗೆ ನೋಡಿದಡೆ ಬಟ್ಟಬಯಲಲಿಪ್ಪರು
ಗುಹೇಶ್ವರನ ಶರಣರು ತಾವಿಲ್ಲದ ಮಹಿಮರೆಂಬುದ
ನಿನ್ನಿಂದಲೞಿದೆ ನೋಡಾ ಸಿದ್ಧರಾಮಯ್ಯಾ.

ಮುಂದೆ ಸಿದ್ಧರಾಮನನ್ನು ಪ್ರಭು ಕಲ್ಯಾಣಕ್ಕೆ ಕರೆದುಕೊಂಡು ಹೋದರು ಎಂದು ವರ್ಣನೆಯಿದೆ. ಎಂದರೆ ಅಲ್ಲಿಗೆ ಸಿದ್ಧರಾಮನ ಜೀವಸೇವೆಯ ಕಾರ್ಯ ಕೊನೆಗೊಂಡಿತು ಎಂಬ ಸೂಚನೆಯಿದೆ.

ಇಲ್ಲಿ ಒಂದು ಪ್ರಶ್ನೆ ಉದ್ಭವವಾಗುತ್ತದೆ: ಒಬ್ಬ ವ್ಯಕ್ತಿ ಮೋಕ್ಷಾಪೇಕ್ಷಿಯಾಗಿ ತಾನು ತನ್ನ ಸ್ವಂತ ಆನಂದದಲ್ಲಿ ಮಗ್ನನಾಗಿರಬೇಕೇ ಅಥವಾ ಲೋಕಸಂಗ್ರಹ ಕಾರ್ಯವೂ ಅವನ ಸಿದ್ಧಿ, ಸಾಕ್ಷಾತ್ಕಾರಗಳ ಪರಿಣಾಮವಾಗಿ ಪ್ರವರ್ತನಗೊಳ್ಳಬೇಕೇ?

ಸಿದ್ಧರಾಮ ಸಾಧಾರಣ ವ್ಯಕ್ತಿಯಲ್ಲ. ಪ್ರಭುವಿನ ಸಂಪರ್ಕಕ್ಕೆ ಬರುವ ಮೊದಲೇ ಯೋಗಿಯೆಂದು ಕೀರ್ತಿತನಾದವನು. ಮಾತನಾಡಲು ಬಾರದ ಪಶುಪಕ್ಷಿಗಳೂ ಇದರ ನೀರನ್ನು ಕುಡಿದು ಮೋಕ್ಷ ಪಡೆಯಲಿ ಎಂದು ಕೆರೆಯನ್ನು ಕಟ್ಟಿಸಿದವನು. ಅಂಥವನೂ ಪ್ರಭುವಿನ ನಿಲುವನ್ನೂ- ಜ್ಞಾನಪಾರಮ್ಯವನ್ನೂ, ಕರ್ಮ ಬಂಧನಕಾರಿ ಎಂಬುದನ್ನೂ – ಒಪ್ಪಿ ಅವನ ಹಿಂದೆ ನಡೆದ. ಇದರ ತಾತ್ಪರ್ಯವೇನು?

ಜ್ಞಾನ ಎಲ್ಲದಕ್ಕಿಂತ ಶ್ರೇಷ್ಠವಾಗಿರಬಹುದು, ಅದೇ ಬದುಕಿನ ಪರಮಗುರಿಯೂ ಆಗಿರಬಹುದು-ಆದರೆ ಲೋಕಾನುಕಂಪೆ ಅದಕ್ಕಿಂತ ಕಡಿಮೆಯಾದದ್ದಲ್ಲ ಎಂದು ತೋರುತ್ತದೆ. ಪಕ್ಕದಲ್ಲಿ ಸಾವಿರಾರು ಜೀವಿಗಳು ದುಃಖದಲ್ಲಿರುವಾಗ ನಾನು ಮಾತ್ರ ಆತ್ಮಾನಂದದಲ್ಲಿ ಮಗ್ನನಾಗಿರುತ್ತೇನೆ ಎನ್ನುವುದು ಜಗತ್ತಿನ ಅತ್ಯುನ್ನತ ಆದರ್ಶ ಎಂಬುದನ್ನು ಒಪ್ಪುವುದು ಕಷ್ಟವಾಗುತ್ತದೆ. ಸದಾ ಸಮಾಧಿಸ್ಥರಾಗಿರುತ್ತಿದ್ದ ಶ್ರೀ ರಾಮಕೃಷ್ಣ ಪರಮಹಂಸರು ಸೇವೆಯ ಆದರ್ಶವನ್ನು ಎತ್ತಿಹಿಡಿದು ತಮ್ಮ ಶಿಷ್ಯರು ಅದನ್ನು ಅನುಸರಿಸುವಂತೆ ಹೇಳಿದರು.

ಒಮ್ಮೆ ಕಾಶಿಗೆಂದು ಹೊರಟವರು ದೇವಘರದ ಬಳಿ ಹಸಿವಿನಿಂದ ಬೆನ್ನಿಗೆ ಹತ್ತಿದ ಹೊಟ್ಟೆಯ, ಜಡೆಗಟ್ಟಿದ ಕೂದಲಿನ, ಚಿಂದಿಬಟ್ಟೆಯ ಉಡುಪಿನ ಜನರನ್ನು ಕಂಡು, ತಾವೂ ಅವರ ಮಧ್ಯೆ ಕುಳಿತುಬಿಟ್ಟರು. ತಮ್ಮ ಶ್ರೀಮಂತ ಶಿಷ್ಯನಾದ ಮಧುರಬಾಬುವಿಗೆ ಹೇಳಿದರು – “ಇವರಿಗೆಲ್ಲ ಊಟ ಹಾಕಿಸು, ತಲೆಗೆ ಹಚ್ಚಿಕೊಳ್ಳಲು ಎಣ್ಣೆ ಕೊಡು, ಬಟ್ಟೆ ಕೊಂಡುಕೊಡು.” ಆತ ಹೇಳಿದ : ‘‘ಅಷ್ಟೆಲ್ಲ ಮಾಡಿದರೆ ಮುಂದೆ ತೀರ್ಥಯಾತ್ರೆ ಮುಂದುವರಿಸಲು ಸಾಧ್ಯವಿಲ್ಲ” ಪರಮ ಹಂಸರು ಹೇಳಿದರು, “ಇವರಿಗೆ ಸೇವೆ ಸಲ್ಲಿಸುವುದಕ್ಕಿಂತ ದೊಡ್ಡ ತೀರ್ಥಯಾತ್ರೆ ಯಾವುದಿದೆ?” ಮರುಮಾತಿಲ್ಲದೆ ಮಧುರಬಾಬು ಆ ಬಡವರಿಗೆ ಅನ್ನ ಎಣ್ಣೆ, ಬಟ್ಟೆ ಒದಗಿಸಿದ. ಈ ಹಿನ್ನೆಲೆಯಲ್ಲಿ “ಅನ್ನವನಿಕ್ಕಿ, ನನ್ನಿಯ ನುಡಿದು ಅರವಟಿಗೆಯನ್ನಿಕ್ಕಿಕೆರೆಯ ಕಟ್ಟಿಸಿದೊಡೆ ಮರಣದಿಂ ಮೇಲೆ ಸ್ವರ್ಗವುಂಟಲ್ಲದೆ ಶಿವನ ನಿಜವು ಸಾಧ್ಯವಾಗದು” ಎಂಬುದನ್ನು ಮತ್ತೆ ಪರಿಶೀಲಿಸೋಣ. “ಶಿವನ ನಿಜ” ಯಾವುದು? ಅದು ಇಂಥದೇ ಎಂದು ಕಂಡವರಾರು? ಒಂದು ವೇಳೆ ಅದು ಇಂಥದು ಎಂದು ಪ್ರಭು ವರ್ಣಿಸಿರುವಂತೆಯೇ ಅದು ಇದ್ದರೂ ಲೋಕದ ಎಲ್ಲ ಪ್ರವೃತ್ತಿಯ ಜನರೂ ಅದನ್ನು ಸಾಧಿಸಿಯಾರೆ?- ನೂರಾರು ಜೀವಿಗಳು ಕಷ್ಟದಲ್ಲಿದ್ದರೂ ಅವುಗಳನ್ನು ಉಪೇಕ್ಷಿಸಿ ‘ಶಿವನ ನಿಜವನ್ನು ಸಾಧ್ಯಗೊಳಿಸಲು ಧಾವಿಸತಕ್ಕದ್ದೆ? ಇದಕ್ಕೆ ಅಂತಿಮವಾದ ಉತ್ತರ ನನಗೂ ತಿಳಿಯದು. ವಿಚಾರಶೀಲರು ತಮಗೆ ಸೂಕ್ತ ಎಂದು ತೋರುವ ಉತ್ತರವನ್ನು ಒಪ್ಪಿಕೊಳ್ಳಬಹುದು.

ಪ್ರಭುವಿನ ಜೀವನದಲ್ಲಿ ಗೊಂದಲವನ್ನುಂಟುಮಾಡಿರುವ ಅಂಶ ಒಂದುಂಟು. ಎಲ್ಲ ಉಪಾಧಿಗಳಿಂದಲೂ ಪಾರಾಗಿ ನಡೆಯುತ್ತಿರುವಂತೆ ಕಾಣುವ ಈ ವ್ಯಕ್ತಿ ಇಷ್ಟಲಿಂಗದ ಉಪಾಧಿಗೆ ಸಿಕ್ಕಿಕೊಂಡು ಅದರಿಂದ ತಾನೂ ಪಾರಾಗದೆ, ಇತರರನ್ನೂ ಪಾರುಮಾಡದೆ ಒಂಟಿಯಾಗಿದ್ದಾನೆ. ಸಿದ್ಧರಾಮನಿಗೆ ಲಿಂಗವನ್ನು ಕಟ್ಟಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಅಲ್ಲಮ ಈ ಮಾತುಗಳನ್ನು ಹೇಳುತ್ತಾನೆ:

ರತ್ನದೀಪ್ತಿಯಾದಡೇನು? ಬಂಧಿಸಿದ ಕುಂದಣದಲ್ಲಿಯೇ ಸಂದಿರಬೇಕು.
ಸ್ವಾದುರಸದ ರುಚಿಯನೀವ ಫಲವೆಂದಡೇನು, ವೃಕ್ಷವಿಲ್ಲದನ್ನಕ್ಕರ?
ಚಿತ್ರ ಸೌಂದರ್ಯ ನೋಟಕ್ಕೆ ಸುಖವೆಂದಡೇನು,
ಭಕ್ತಿಪಟ ಮುಖ್ಯ ಸ್ಥಾನವಿಲ್ಲದನ್ನಕ್ಕರ?
ಅಂಜನಸಿದ್ಧಿಯ ನಿಧಾನವ ಕಂಡಡೇನು,
ಸಾಧನ ಕ್ರೀಯಿಂದ ಸಾಧ್ಯವ ಮಾಡಿಕೊಳ್ಳದನ್ನಕ್ಕರ?
ಇದು ಕಾರಣ, ಕಾಯದ ಕರಸ್ಥಳಕ್ಕೆ ಇಷ್ಟಲಿಂಗ ಸಾಹಿತ್ಯವಿಲ್ಲದನ್ನಕ್ಕರ
ನಿರವಯವಾದ
ಜ್ಞಾನಯೋಗದ ಕೂಟ ಸಾಧ್ಯವಾಗದು.
ಇದು
ಕಾರಣ ಕ್ರಿಯಾಲಿಂಗ ಸಂಬಂಧವೇ ಭಕ್ತಂಗೆ ಮತವು,
ಇದೆಲ್ಲ ದೇಹ ಶೌಚವು.
ನಮ್ಮ ಗುಹೇಶ್ವರನ ಶರಣರ ಮನವೊಪ್ಪುವಂತೆ
ಸಿದ್ಧರಾಮಯ್ಯಂಗೆ ಲಿಂಗ ಸಾಹಿತ್ಯವ ಮಾಡಾ ಚನ್ನಬಸವಣ್ಣ

ನಿಜವಾಗಿ ಅಲ್ಲಮನ ಜೀವನದ ವಿಕಾಸದ ಕ್ರಮ ತಿಳಿದಿದ್ದರೆ ಮೇಲಿನ ವಚನವನ್ನು ಅಲ್ಲಮ ತನ್ನ ಜೀವನದ ಯಾವ ಘಟ್ಟದಲ್ಲಿ ಹೇಳಿದ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿತ್ತು. ಹಾಗೆ ತಿಳಿಯದಿರುವಾಗ ಶೂನ್ಯಸಂಪಾದನಕಾರರೋ, ಜೀವನ ಚರಿತ್ರೆಯನ್ನು ಕಾವ್ಯವಾಗಿಸಿರುವ ಕವಿಗಳೋ ಹೇಳಿದ ಅನುಕ್ರಮವನ್ನೂ ನಂಬುವುದು ಒಂದು ದಾರಿ. ಆ ದಾರಿಯಲ್ಲಿ ಹೋಗಿ ನೋಡಿದರೆ ಅಲ್ಲಮ ತನ್ನ ಅವಧೂತ ಸ್ಥಿತಿಯಿಂದ ಉಪಾಧಿಬದ್ಧ ಸ್ಥಿತಿಗೆ ಇಳಿದಂತೆ ತೋರುತ್ತದೆ ಅಥವಾ ಕಲ್ಯಾಣದ ಆವರಣ, ಅವರು ಸುತ್ತ ಕಂಡ ಇಷ್ಟಲಿಂಗಧಾರಿಗಳ ದೃಶ್ಯ ಅವನಿಂದ ಈ ಮಾತನ್ನು ಹೇಳಿಸಿತೇ ಅಥವಾ ಸಿದ್ಧರಾಮನಿಗೆ ಇದು ಅಗತ್ಯ ಎಂದು ಪ್ರಭುವಿಗೆ ತೋರಿತೋ.

ಈ ಪ್ರಶ್ನೆಯನ್ನು ನಾನು ಎತ್ತಿದ್ದಕ್ಕೆ ಕಾರಣ ಪ್ರಭು ಮನಸ್ಸಿನ ಅಸ್ತಿತ್ವವನ್ನೇ ಅಲ್ಲಗಳೆದವನು ಎಂಬುದು. ಮನಸ್ಸಿದ್ದರೆ ತಾನೆ ಅದನ್ನ ಇಷ್ಟಲಿಂಗದಲ್ಲಿ ಕೇಂದ್ರೀಕರಿಸುವುದು. ಅವನ ಒಂದು ವಚನ ಹೀಗುಂಟು:

ಮನ ಉಂಟೆ ಮರುಳೆ ಶಿವಯೋಗಿಗೆ?
ಮತ್ತೊಮ್ಮೆ ಮನ ಮಗ್ನ ಉಂಟೆ ಶಿವಯೋಗಿಗೆ?
ಇಲ್ಲದ ಮನವನುಂಟೆಂದು ನುಡಿದು,
ಅಡಗಿಸಿದೆನೆಂಬ ಮಾತು ಮನವ ನೆಲೆಮಾಡಿ ತೋರುತ್ತದೆ
ಗುಹೇಶ್ವರನನಱಿದ ಶರಣಂಗೆ ತೋಱಲಿಲ್ಲ ಅಡಗಲಿಲ್ಲ ಕೇಳಾ!

ಮತ್ತು ಮುಂದಿನ ಈ ಎರಡು ವಚನಗಳನ್ನು ನೋಡಿ:

ಎನಗೊಂದು ಲಿಂಗ, ನಿನಗೊಂದು ಲಿಂಗ,
ಮನೆಗೊಂದು ಲಿಂಗವಾಯಿತ್ತು. ಹೋಯಿತ್ತಲ್ಲಾ ಭಕ್ತಿಜಲವ ಕೂಡಿ.
ಉಳಿಮುಟ್ಟಿದ ಲಿಂಗವ ಮನ ಮುಟ್ಟಬಲ್ಲುದೆ? ಗುಹೇಶ್ವರ

ಇದೇನೋ ಸ್ಥಾವರ ಲಿಂಗವನ್ನು ಕುರಿತು ಆಡಿದ ಮಾತು ಎಂದು ಭಾವಿಸಬಹುದು. ಆದರೆ ಮುಂದಿನದೋ?

ಪೃಥ್ವಿಗೆ ಹುಟ್ಟಿದ ಶಿಲೆ ಕಲ್ಲುಕುಟಿಗಂಗೆ ಹುಟ್ಟಿದ ಮೂರುತಿ
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ! ಮೂವರಿಗೆ ಹುಟ್ಟಿದ ಮಗನ
ಲಿಂಗವೆಂದು ಕೈವಿಡಿವ ಅಚ್ಚವ್ರತಗೇಡಿಗಳೇನೆಂಬೆ, ಗುಹೇಶ್ವರ.

ಇನ್ನು ಪೂಜಾದಿಗಳನ್ನು ಮಾಡುವವರನ್ನು ಅಲ್ಲಮಪ್ರಭು ವಿಡಂಬಿಸಿರುವ ರೀತಿಯನ್ನು ಕೇಳಿ:

ಮಹಾಮೇರುವಿನ ಮರೆಯಲ್ಲಿದ್ದು
ಭೂತದ ನೆಳಲನಾಚರಿಸುವ ಕರ್ಮಿ ನೀ ಕೇಳಾ!
ಮಹಾಲಿಂಗಕ್ಕೆ ಮಜ್ಜನವೆಂದೇನೋ?
ಪರಿಮಳಲಿಂಗಕ್ಕೆ ಪತ್ರಪುಷ್ಟವೆಂದೇನೋ?
ಜಗಜ್ಯೋತಿ ಲಿಂಗಕ್ಕೆ ಧೂಪ ದೀಪಾರತಿಯೆಂದೇನೋ?
ಗುಹೇಶ್ವರ ಲಿಂಗದಂತುವ ಬಲ್ಲವರಾರೋ?

ಪ್ರಭುವಿನದು ಬಾಹ್ಯ ಪರಿಕರಗಳ ಅವಶ್ಯಕತೆ ಇಲ್ಲದ ಪೂಜೆ.

ಅಗ್ಭವಣಿಯ ತಂದು ಮಜ್ಜನವ ಮರೆದವನ,
ಪುಷ್ಪವ ತಂದು ಪೂಜೆಯ ಮರೆದವನ
ಲಿಂಗವ ಕಂಡು ತನ್ನ ಮರೆದವನ
ಮಹಾಘನ ಒಳಕೊಂಡಿತ್ತು ಗುಹೇಶ್ವರ.

ಅಲ್ಲಮನ ಬದುಕಿನಲ್ಲಿ ಅವನಿಗೆ ಸಮಸಮನಾಗಿ ಮಾತನಾಡಿ, ಅವನ ಮಿತಿಯನ್ನು ಅವನಿಗೆ ತೋರಿಸಿ ಅವನನ್ನು “ಶಬ್ದದೊಳಗಣ ನಿಶ್ಯಬ್ದದಂತೆ” ನಿಲ್ಲಿಸಿದವಳು ಬಹುಶಃ ಮುಕ್ತಾಯುಕ್ತ ಒಬ್ಬಳೇ ಎಂದು ತೋರುತ್ತದೆ. ಅವಳ ವಚನರಚನಾಶೈಲಿಯೂ ಅಲ್ಲಮಪ್ರಭುವಿನಂಥದೇ. ಅಣ್ಣನಾದ ಯೋಗಿ ಅಜಗಣ್ಣ ತೀರಿಕೊಂಡಿದ್ದಾನೆ ಎಂದು ದುಃಖಿಸುತ್ತಾ ಅವಳು ಹೇಳುವ ಮಾತುಗಳು ಇವು:

ಅರಿವನಣಲೊಳಗಿಕ್ಕಿ ಆಗಿರುವುತ್ತಿದೆ ಮರ್ತ್ಯಲೋಕವೆಲ್ಲವು
ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು
ನಾನೆಂತು ಬದುಕುವೆನಣ್ಣಾ?
ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು.
ಎನ್ನಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ
ಅಜಗಣ್ಣಾ ನಿನ್ನ ಯೋಗ!

ಇಲ್ಲಿನ ಮಾತುಗಳೇ ಮುಕ್ತಾಯಕ್ಕೆ ಎಂಥ ಪಕ್ವಬುದ್ಧಿಯ ಮಹಿಳೆ ಎಂಬುದನ್ನು ತೋರಿಸುತ್ತದೆ. ಅವಳನ್ನು ನೋಡಿ, ಅವಳಾಡುತ್ತಿದ್ದ ಮಾತುಗಳನ್ನು ಕೇಳಿ ಅಲ್ಲಮ ಪ್ರಭು ಆಶ್ಚರ್ಯಚಕಿತನಾದದ್ದು ಸಹಜವಾಗಿಯೇ ಇದೆ. ತುಂಬ ಕಾವ್ಯಮಯವಾದ ಮಾತುಗಳಲ್ಲಿ ಪ್ರಭು ಅವಳ ಪೂರ್ವಾಪರಗಳನ್ನು ವಿಚಾರಿಸುತ್ತಾನೆ:

ಅಂಗೈಯೊಳಗೊಂದು ಅರಳ್ದತಲೆಯ ಹಿಡಿದುಕೊಂಡು
ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ?
ಸಂದ ಸಂಪಗೆಯರಳ ತುಂಬಿ ಬಂದುಂಬ ಭೇದವನಱಿಯದೆ
ಹಂಬಲಿಸುವ ಪರಿತಾಪವೇನು ಹೇಳಾ?
ಒಂದೆಂಬೆನೆ ಎರಡಾಗಿ ಇದೆ. ಎರಡೆಂಬೆನೆ? ಒಂದಾಗಿ ಇದೆ.
ಅರುಹಿನೊಳಗಣ ಮಱಹಿದೇನು ಹೇಳಾ?
ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ
ನಮ್ಮ ಗುಹೇಶ್ವರ ಲಿಂಗದಲ್ಲಿ ತೋಱುತ್ತಿದೆ.
ನೀನಾರೆಂದು ಹೇಳಾ, ಎಲೆ ಅವ್ವಾ?

ಅವಳು ಹೇಳುವ ಉತ್ತರವೂ ಅವಳ ಜ್ಞಾನದ ಎತ್ತರ ಬಿತ್ತರಗಳನ್ನು ಸೂಚಿಸುತ್ತದೆ:

ಆರೆಂದು ಕುರುಹ ಬೆಸಗೊಳ್ಳಲು ಏನೆಂದು ಹೇಳುವೆನಯ್ಯಾ?
ಕಾಯದೊಳಗೆ ಮಾಯವಿಲ್ಲ, ಭಾವದೊಳಗೆ ಭ್ರಮೆಯಿಲ್ಲ
ಕರೆದು ಬೆಸಗೊಂಬಡೆ ಕುರುಹಿಲ್ಲ
ಒಬ್ಬರಿಗೂ ಹುಟ್ಟದೆ ಅಯೋನಿಯಲ್ಲಿ ಬಂದು
ನಿರ್ಬುದ್ಧಿಯಾದವಳನೇನೆಂಬೆ ಅಣ್ಣಾ?
ತಲೆಯಳಿದು ಸೆಲೆಗೆಟ್ಟು ಬೆಳಗುವ ಜ್ಯೋತಿ
ಎನ್ನ ಅಜಗಣ್ಣ ತಂದೆಯ ಬೆನ್ನಬಳಿಯುವಳಾನಯ್ಯಾ.

ಪ್ರಭುವಿಗೆ ಮುಕ್ತಾಯಕ್ಕನ ನೆಲೆ ತಿಳಿದಂತೆ ಅಜಗಣ್ಣನ ಮಹಿಮೆಯೂ ತಿಳಿಯಿತು. “ಗುಹೇಶ್ವರಾ, ನಿಮ್ಮ ಶರಣ ಅಜಗಣ್ಣಂಗೆ ಶರಣೆಂದು ಬದುಕಿದೆನು” ಎಂದ. ಅಷ್ಟಕ್ಕೆ ನಿಲ್ಲದೆ ಉಚ್ಚವಾದ ಜ್ಞಾನದ ನಿಲುವಿನಲ್ಲಿ ನಿಂತು ಮಾತ್ರ ಆಡಬಹುದಾದ ಮಾತುಗಳಲ್ಲಿ ಆಕೆಯು ದುಃಖಿಸುವುದು ಸಲ್ಲದು ಎಂದು ಹೇಳಿದ :

ಅಱಿವಱತು ಮಱಹುಗೆಟ್ಟು ತನ್ನಲ್ಲಿ ತಾನು ಸನ್ನಿಹಿತನಾದಂಗೆ
ದುಃಖಿಸುವರೆ ಹೇಳಾ?
ಒಡಲಿಲ್ಲದಾತಂಗೆ ಎಡೆಯಲೊಂದು ಆಳುವುಂಟೆಂದು
ನುಡಿದು ಹೇಳುವ ಮಾತು ಭ್ರಾಂತು ನೋಡಾ!
ಎರಡಿಲ್ಲ ಐಕ್ಯಂಗೆ, ಒಳಹೊರಗಿಲ್ಲ ನೋಡಾ,
ಗುಹೇಶ್ವರನ ಶರಣ ಅಜಗಣ್ಣಂಗೆ

ಮುಕ್ತಾಯಕ್ಕನಿಗೆ ಆತ್ಮದ ಸ್ವರೂಪವಾಗಲಿ, ಐಕ್ಯದ ಸ್ವರೂಪವಾಗಲಿ ತಿಳಿಯದು ಎಂದಲ್ಲ. ಅಜಗಣ್ಣ ತನ್ನಲ್ಲಿ ತಾನು ಐಕ್ಯನಾಗಿದ್ದಾನೆ ಎಂಬ ಸಂಗತಿಯೂ ಅವಳ ಅರಿವಿನ ನಿಲುವನ್ನು ಮೀರಿದ್ದಲ್ಲ. ಪ್ರಭುವಾದರೂ ಆತ್ಮ-ದೇಹಗಳ ನಡುವೆ ಗೊಂದಲವುಂಟು ಮಾಡುತ್ತಿದ್ದಾನೆ ಎಂಬುದನ್ನು ತಿಳಿಯಲು ಅವಳಿಗೆ ಬಹಳ ಸಮಯ ಬೇಕಾಗಲಿಲ್ಲ. ಈಗ ಅಳಿದಿರುವುದು ಅಜಗಣ್ಣನ ದೇಹ. ಅಜಗಣ್ಣ ಜ್ಞಾನಿ ನಿಜ. ಆದರೆ ಅಂಥ ಜ್ಞಾನಿಯ ದೇಹ ಅಳಿದಿದೆ. ಅದಕ್ಕಾಗಿ ಅವನಲ್ಲದೆ ಅನ್ಯಾಶ್ರಯವಿಲ್ಲದಿದ್ದ ತಂಗಿ ದುಃಖಿಸುವುದು ಅಸಹಜವಲ್ಲ, ಸಿದ್ಧರಾಮನ ಕರ್ಮಾತಿರೇಕವನ್ನಾಗಲಿ, ಬಸವಣ್ಣನವರ ಭಕ್ತಿಯ ಅತಿರೇಕವನ್ನಾಗಲಿ ವಿಡಂಬಿಸುವ ರೀತಿಯದಲ್ಲ ಇದು. ಇದೊಂದು ಸಂಪೂರ್ಣ ಮಾನವ ಸನ್ನಿವೇಶ. ತೀರ ಮಾನವೀತೆಯ ಸಂತೈಕೆಯನ್ನು ಅಪೇಕ್ಷಿಸುವ ದುಃಖಿ ಮುಕ್ತಾಯಕ್ಕ. ಪ್ರಭುವಾದರೋ ಜ್ಞಾನದ ಎತ್ತರದಲ್ಲಿ ನಿಂತು ಮಾತನಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಅವನು ಹೇಳಿದ ಎಂದು ಊಹಿಸಬಹುದಾದ ಒಂದು ವಚನ ಅಲ್ಲಮನ ಶುದ್ಧಾದ್ವೈತ ಅನುಭೂತಿಯನ್ನು ಅರಿಯಲು ಸಾಧ್ಯವಾಗಬಹುದಾದ ಗವಾಕ್ಷದಂತಿದೆ:

ಗುರುವಿಂಗೂ ಶಿಷ್ಯಂಗೂ ಆವುದು ದೂರ,
ಆವುದು ಸಾರೆ ಎಂಬುದನಾರು ಬಲ್ಲರು?
ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ
ಶಿಷ್ಯನೇ ಗುರುವಾದ ತನ್ನ ವಿನೋದಕ್ಕೆ
ಕರ್ಮಕೌಟಿಲ್ಯ ಎಡೆವೊಕ್ಕ ಕಾರಣ
ಭಿನ್ನವಾಗಿ ಇದ್ದಿತ್ತೆಂದೊಡೆ ಅದು ನಿಶ್ಚಯವಹುದೆ?
ಆದಿ ಅನಾದಿಯಿಂದಲತ್ತತ್ತ ಮುನ್ನಲಾದ
ಪರತತ್ವಮಂ ತಿಳಿದು ನೋಡಲು,
ನೀನೆ ಸ್ವಯಂಜ್ಯೋತಿಃ ಪ್ರಕಾಶನೆಂದರಿಯಲು
ನಿನಗೆ ನೀನೆ ಗುರುವಲ್ಲದೆ ನಿನ್ನಿಂದಧಿಕಮಪ್ಪ ಗುರುವುಂಟೆ?
ಇದು ಕಾರಣ. ಗುಹೇಶ್ವರ ಲಿಂಗವು ತಾನೆ ಎಂಬುದನು
ತನ್ನಿಂದ ತಾನೆ ಅಱಿಯಬೇಕು ನೋಡಾ.

ಅಲ್ಲಮಪ್ರಭು ಜ್ಞಾನಿಯಾದರೆ ಇಷ್ಟೊಂದು ಮಾತುಗಳನ್ನು ಏಕೆ ಹೇಳುತ್ತಾನೆ ಎಂದು ಮುಕ್ತಾಯಕ್ಕ ಆಶ್ಚರ್ಯಪಟ್ಟಂತೆ ತೋರುತ್ತದೆ. ಸರ್ವಜ್ಞನ ವಚನ ಒಂದುಂಟು:

ಬೊಮ್ಮವನು ಅರಿದಿಹರೆ ಸುಮ್ಮನಿದ್ದಿರಬೇಕು
ಬೊಮ್ಮವನು ಅರಿದು ಉಸುರಿದರೆ ಕಳಹೋಗಿ
ಕೆಮ್ಮಿದಂತಕ್ಕು ಸರ್ವಜ್ಞ
ಅದೇ ಅರ್ಥದ ಮಾತನ್ನು ಮುಕ್ತಾಯಕ್ಕ ಪ್ರಭುವಿನ ಮುಖಕ್ಕೆ ರಾಚಿ ಹೇಳಿದಳು:
ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು
ಶಿಶು ಕಂಡ ಕನಸಿನಂತಿರಬೇಕಲ್ಲದೆ
ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ?
ಅಱಿಅಱತು ಮಱಹು ನಷ್ಟವಾಗಿ ಗುರುವ ತೊಱಿದೆನೆಂಬವರು
ಇದಿರಿಂಗೆ ಕರುಳ ಕಲೆಯನಱುಹುವ ಪರಿಯೆಂತು ಹೇಳಾ?
ಮನದ ಕೊನೆಯ ಮೊನೆಯ ಮೇಲನ ಅಱಿವಿನ ಕಣ್ಣಮುಂದೆ
ಸ್ವಯಂಪ್ರಕಾಶ ತೋರುತ್ತಿರ್ದಡೆ ತಾನಾಗಬಲ್ಲನೆ?
ನೆಱಿಯರಿತು ಮಱಾಯಬಲ್ಲಡೆ
ಎನ್ನ ಅಜಗಣ್ಣನಂತೆ ಶಬ್ದಮುಗ್ಧವಾಗಿರಬೇಕಲ್ಲದೆ,
ಶಬ್ದ ಸಂದಣಿಯ ಮಾತು ಸಯವಲ್ಲ, ನೋಡಾ ಪ್ರಭುವೆ?

ಗುಹೇಶ್ವರನ ಶರಣರು ಶಬ್ದಸೂತಕಿಗಳಲ್ಲ ಎಂದರೂ ಬಿಡಲಿಲ್ಲ ಮುಕ್ತಾಯಕ್ಕ:

ನುಡಿಯ ಹಂಗಿನ್ನೂ ನಿಮಗೆ ಹಿಂಗದು,
ನಡೆಯನೆಂತು ಪರರಿಗೆ ಹೇಳುವಿರಿ?
ಒಡಲ ಹಂಗಿನ ಸುಳುಹು ಬಿಡದು.
ಎನ್ನೊಡನೆ ಮತ್ತೇತರ ಅನುಭವವಣ್ಣಾ!
ತಾನಾದಲ್ಲದೆ ಇದಿರಿಂಗೆ ಹೇಳಬಹುದೆ?
ಅಱಿವ ತೋರಬಲ್ಲಡೆ
ತನ್ನನರುಹದೆ ಅಱಿವನು ಕಾಣಾ ಎನ್ನ ಅಜಗಣ್ಣ ತಂದೆ!
ನಡೆದು ನಡೆದು ನಡೆಯ ಕಂಡವರು ನುಡಿನುಡಿದು ಹೇಳುತ್ತಿಹರೆ?
ನುಡಿನುಡಿದು ಹೇಳುವನ್ನಕ್ಕರ ನಡೆದುದೆಲ್ಲಾಹುಸಿ ಎಂಬೆನು.

ಅಲ್ಲಮಪ್ರಭುವಿನ ಪರಮಭಕ್ತರು ಏನಾದರೂ ಹೇಳಲಿ, ವಸ್ತುನಿಷ್ಠವಾಗಿ ನೋಡಿದರೆ ಎಲ್ಲರಿಗೂ ಬುದ್ಧಿ ಹೇಳಲು ತವಕಪಡುತ್ತಿದ್ದ ಅಲ್ಲಮಪ್ರಭುವಿನ ಬಾಯನ್ನು ಯಾರಾದರೂ ಒಮ್ಮೆಯಾದರೂ ತತ್ಕಾಲಕ್ಕಾದರೂ ಮುಚ್ಚಿಸಿದ್ದರೆ ಅದು ಮುಕ್ತಾಯಕ್ಕನೇ ಎನ್ನಬಹುದು!

ಅಲ್ಲಮನ ವಚನಗಳನ್ನು ನೋಡಿದರೆ ಅವನ ಮನಸ್ಸು ಹೆಚ್ಚಾಗಿ ಅದ್ವೈತದ ಕಡೆಗೆ ಒಲಿಯುತ್ತಿತ್ತು ಎಂದು ಹೇಳಬಹುದು. ಅದ್ವೈತಾನುಭೂತಿಯ ಸ್ಥಿತಿಯಲ್ಲಿ ಅವನು ಹೇಳಿರುವ ಮಾತುಗಳು ಅವನಿಗೆ ವಿಶಿಷ್ಟವಾದವು.

ಓಂ ನಮಶಿವಾಯ ಎಂಬ ದೇವನಿರಲು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೇ!
ಶರೀರ ರೂಪಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ
ಅಂಗಸಂಗಿಗಳೆಲ್ಲರೂ ಮಹಾಘನವನಱಿಯದೇ ಹೋದಿರೋ?
ಹುಸಿಯನೇ ಕೊಯ್ದು ಹುಸಿಯನೇ ಪೂಜಿಸೆ ನೇಮದೊಳಗಿದು ಸಲ್ಲದು.
ಗುಹೇಶ್ವರ, ನಿಮ್ಮ ಶರಣ ಸಂಬಂಧವು
ತೋಱಿದು ತೋಱದು ಬಹುಮುಖಿಗಳಿಗೆ.
ಘನತರ ಚಿತ್ರದ ರೂಹ ಬರೆಯಬಹುದಲ್ಲದೆ ಪ್ರಾಣವ ಬರೆಯಬಹುದೆ?”
ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸುತ್ತುದು ಕೋಟಿ
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ,
ಗುಹೇಶ್ವರ ನಿಮಗಾಗಿ ಸತ್ತವರನಾರನೂ ಕಾಣೆ!
ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ?’
ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ!’
ದೇಹಭಾವವಳಿದಲ್ಲದೆ ಜೀವಭಾವವಳಿಯದು
ಗುಹೇಶ್ವರನೆಂಬ ಲಿಂಗವನಱಯಬೇಕಾದಡೆ
ನಿನ್ನ ಒಳಗೆ ತೊಳೆದು ನೋಡಾ ಸಿದ್ಧರಾಮಯ್ಯ.

ನಿಷ್ಠೆ ಸಾಲದ ಸಾಧಕರನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಾನೆ. ಅಲ್ಲಮ :

ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ;
ಎಂತಯ್ಯ ನಿನ್ನ ಪ್ರಾಣಲಿಂಗವೆಂಬೆ?
ಸಂಸಾರವೆಂಬ ಹೆಣಬಿದ್ದರೆ ತಿನಬಂದ ನಾಯ ಜಗಳವ ನೋಡಿರೋ?
ನಾಯ ಜಗಳವ ನೋಡಿ ಹೆಣನೆದ್ದುನಗುತ್ತಿದೆ.
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೊ!
ಸತ್ತು ಮುಂದೆ ದೇವರ ಕೂಡಿಹೆವೆಂಬಿರಿ
ಸಾಯುವ ಮುನ್ನು ಸತ್ತಿಪ್ಪಿರಿ
ಎಂತಯ್ಯ ನಿಮ್ಮ ಲಿಂಗೈಕ್ಯದ ಪರಿ
ಎಂತಯ್ಯ ನಿಮ್ಮ ಪ್ರಮಥರ ಪರಿ
ಅಂಗದ ಅವಸ್ಥೆಯಿಲ್ಲದೆ ಲಿಂಗಾವಸ್ಥೆ ಆರಿಗೂ ಇಲ್ಲ ಗುಹೇಶ್ವರ.

ಅಲ್ಲಮಪ್ರಭುವನ್ನು ಸಮಕಾಲೀನ ವಚನಕಾರರೂ, ಅನುಭವಿಗಳೂ, ಸಾಧಕರೂ ತುಂಬ ಗೌರವ ಸ್ಥಾನದಲ್ಲಿರಿಸಿ ನೋಡಿದರು ಎಂಬುದು ಅವರಲ್ಲಿ ಕೆಲವರ ವಚನಗಳಿಂದ ಸ್ಪಷಟವಾಗುತ್ತದೆ. ಸಿದ್ಧರಾಮನನ್ನು ಅಲ್ಲಮಪ್ರಭು ಕರ್ಮದ ಹಾದಿಯಿಂದ ಜ್ಞಾನದ ಹಾದಿಗೆ ತಂದನು ಎಂದು ಹೇಳಿತಷ್ಟೆ ಅಂಥ ಅಲ್ಲಮನನ್ನು ಕುರಿತು ಸಿದ್ಧರಾಮ ಹೇಳಿದ ಮಾತುಗಳು ಇವು : “ನಿನ್ನ ಕಂಡ ಬಳಿಕ ಕರ್ಮವುಂಟೆ ಕಪಿಲ ಸಿದ್ಧ ಮಲ್ಲಿಕಾರ್ಜುನಾ?” ಬಸವಣ್ಣನವರಿಗಂತೂ ಅಲ್ಲಮನ ವಿಷಯದಲ್ಲಿರುವ ಗೌರವ ಅಪಾರವಾದದ್ದು ಹೇಳುತ್ತಾರೆ:

ಎನ್ನಗತಿ ಮತಿ ನೀನೆ ಕಂಡಯ್ಯಾ.
ಎನ್ನ ಗುರು ಪರಮಗುರು ನೀನೆ ಕಂಡಯ್ಯಾ
ಎನ್ನ ಅಂತರಂಗ ಜ್ಯೋತಿ ನೀನೆ ಕಂಡಯ್ಯಾ
ಕೂಡಲ
ಸಂಗಮದೇವಾ
ನೀವೆ ಎನಗೆ ಗುರು, ನಾ ನಿಮ್ಮ ಶಿಷ್ಯರೆಂಬುದ
ನಿಮ್ಮಶರಣ ಸಿದ್ಧರಾಮಯ್ಯ ದೇವರು ಬಲ್ಲರು
ಕೃಪೆ ಮಾಡಾ ಪ್ರಭುವೆ.

ಡೋಹರ ಕಕ್ಕಯ್ಯ ತಮ್ಮ ಕೃತಜ್ಞತೆಗಳನ್ನು ತಿಳಿಸಿದ್ದು ಈ ಮಾತುಗಳಲ್ಲಿ:

ಕಷ್ಟಕುಲದಲ್ಲಿ ಹುಟ್ಟಿದ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ.
ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯ
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ
ಎನ್ನ ಅರುವಿನಲ್ಲಿ ಪ್ರಸಾದವ ನೆಲೆಗೊಳಿಸಿದ
ಇಂತೀ ತ್ರಿವಿಧ ಸ್ಥಾನವ ಶುದ್ಧ ಮಾಡಿದ ಬಸವಣ್ಣನ ಕರುಣದಿಂದ
ಪ್ರಭುವಿನ ಶ್ರೀಪಾದವ ಕಂಡು ಬದುಕಿದೆನು ಕಾಣಾ
ಅಭಿನವ ಮಲ್ಲಿಕಾರ್ಜುನಾ

ಹೀಗೆ ಸಾಮಾನ್ಯರು ಎಂದು ತೋರುವದರಿಂದ ಅಸಾಮಾನ್ಯರವರೆಗೂ ಅಲ್ಲಮ ಪ್ರಭು ಆದರ್ಶವಾಗಿ, ಬೆಳಕಿನ ಪುಂಜವಾಗಿ ತೋರಿದ್ದನ್ನು ನೆನೆಯುವುದೇ ಎಂಟುನೂರು ವರ್ಷಗಳ ಈಚೆಗೆ ನಿಂತು ನೋಡುವ ನಮಗೆ ರೋಮಾಂಚನಕಾರಿಯಾದ ಅನುಭವವನ್ನು ನೀಡುತ್ತದೆ.

ಎಷ್ಟು ಹೇಳಿದರೂ ಕೊನೆಯಲ್ಲಿ ಒಂದು ಪ್ರಶ್ನೆ ಉಳಿದೇ ಉಳಿಯುತ್ತದೆ. ಅದು ಅಲ್ಲಮಪ್ರಭುವಿನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆ. ಸಂಸಾರ, ವಿರಕ್ತಿ, ಕರ್ಮ, ಜ್ಞಾನ, ಭಕ್ತಿ, ಮೂರ್ತಿಪೂಜೆ, ನಿರಾಕಾರದ ಅನುಸಂಧಾನ, ಇಷ್ಟಲಿಂಗಧಾರಣೆ, ಜಾದ-ಬಿಂದು, ಕಲೆಗಳಿಗೆ ಆತೀತವಾದ ನಿಲವು, ಲೋಕಾನುಕಂಪ-ಲೋಕವ್ಯವಹಾರಗಳ ವಿಷಯದಲ್ಲಿ ತೀವ್ರ ನಿರಾಸಕ್ತಿ ಇವುಗಳಲ್ಲಿ ಯಾವ ಒಂದು ಅಥವಾ ಹೆಚ್ಚಿನ ನಾಮರೂಪಗಳ ಚೌಕಟ್ಟಿನಲ್ಲಿ ಅವನ ವ್ಯಕ್ತಿತ್ವವನ್ನು ಹಿಡಿದಿಡಬಹುದು? ನಮಗೆ ಈಗ ಇರುವ ಯಾವ ಸಾಧನಗಳಿಂದಲೂ ಅವನ ಪಾದಗಳು ಎಲ್ಲಿ ಹಸ್ತಗಳು, ಬಾಹುಗಳು ಎಲ್ಲಿ, ಮನಸ್ಸು ಎಲ್ಲಿ, ಶಿರಸ್ಸು ಎಲ್ಲಿ ಎಂದು ನಿರ್ದೇಶಿಸುವುದು ಸಾಧ್ಯವಿಲ್ಲ. ಅವನ ವ್ಯಕ್ತಿತ್ವವನ್ನು ಸಮಗ್ರವಾಗಿ ಗ್ರಹಿಸುವುದು ಸುಲಭವಲ್ಲ.

ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು : “ಇನ್ನೊಬ್ಬ ವಿವೇಕಾನಂದ ಇದ್ದಿದ್ದರೆ ನಾನು ಏನು ಎಂಬುದು, ನಾನು ಮಾಡಿದ ಕೆಲಸ ಎಂಥದು ಎಂಬುದು ಅವನಿಗೆ ಅರ್ಥವಾಗುತ್ತಿತ್ತು” ಅಲ್ಲಮಪ್ರಭುವಿನ ವಿಷಯದಲ್ಲೂ ಅದೇ ಮಾತು ಹೇಳಬಹುದು. ಆತ ನಮ್ಮ ಮುಂದೆ ಎಂದೆಂದಿಗೂ ಬೆಳಕಿನ ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿ ನಿಲ್ಲುತ್ತಾನೆ; ಆಶ್ಚರ್ಯದ ಚಿಹ್ನೆ ಎಂದೂ ಹೇಳಬಹುದು.

ಪುಣ್ಯ ಪಾಪಂಗಳನಱಿಯದ ಮುನ್ನ
ಅಲ್ಲಿ ಅನೇಕ ಭವ ಭವಂಗಳಲ್ಲಿ ಬಂದೆ ನಾನಯ್ಯಾ.
ನಂಬಿ ಶರಣುಹೊಕ್ಕೆನಯ್ಯಾ
ನಿಮ್ಮನೆಂದೂ ಅಗಲದಂತೆ ಎನ್ನ ನಡಸಯ್ಯಾ
ನಿಮ್ಮ ಧರ್ಮವು.
ನಿಮ್ಮನೊಂದು ಬೇಡುವೆನು
ಎನ್ನ ಕರ್ಮಬಂಧವ ಬಿಡಿಸುವಂತೆ ಮಾಡಯ್ಯಾ
ಶ್ರೀ ಮಲ್ಲಿಕಾರ್ಜುನಾ