ಕುಳಿತಿರುವೆನೇಕಾಂಗಿ ಹಾಸುಬಂಡೆಯ ಮೇಲೆ:
ನೆತ್ತಿಯೆಡೆ ತಿಳಿಬಾನು, ಸುತ್ತಲೂ ವನಧಾತ್ರಿ;
ಮೊರೆಯುತಿಹುದೆನ್ನ ಕರೆಯುತೆ ಅನವರತ ಯಾತ್ರಿ
ಮಂಜುಲ ತರಂಗಿಣಿಯ ಜಲಶಿಲಾ ಕಲಲೀಲೆ.
ಭೂತಕಾಲದ ಗರ್ಭದಲಿ ನಾನು ಕನಸಾಗಿ
ಕನವರಿಸುತಿದ್ದಂದು ನೀನಿಂತ ಹರಿದಿದ್ದೆ;
ಬರುವ ಶತಮಾನ ಯುಗಕಲ್ಪಗಳ ಜವನಿದ್ದೆ
ಮತ್ತೆನ್ನ ತುತ್ತುಗೊಳೆ, ಬೇರೆ ಯಾರನೊ ಕೂಗಿ
ನೊರೆಚೆಲ್ಲಿ ಮೊರೆದು ಹರಿಯುವೆ ಮುಂದೆ ನೀನಿಂತೆ,
ಓ ತೊರೆಯೆ! – ಮನಕಿನಿಸು ನೋವು ತರುವಾ ಚಿಂತೆ
ಅಂತಿರಲಿ. – ಮುಂದೆ ಎಂತೋ ಏನೊ? ನಾನಿಂದು
ಬಿಸಿಲು ಬೇಗೆಯ ಕಳೆಯೆ ನಿನ್ನ ತಡಿಗೈತಂದು
ಮಲಗಿಹೆನು ಮರದ ತಣ್ಣೆಳಲಿನಲಿ ಮೈಚಾಚಿ:
ಗಾನಗೈಯಲಿ ನಿನ್ನ ಗೇಯಲೋಲುಪ ವೀಚಿ!

೪-೬-೧೯೩೪* ಕುಪ್ಪಳಿಯಿಂದ ಸುಮಾರು ಒಂದೂವರೆ ಮೈಲಿ ದೂರದಲ್ಲಿ ಕಾಡುದಾರಿಯ ನಡುವೆ ಇರುವ ಹಳ್ಳದ ಹಾಸು ಬಂಡೆಗಳು.