ಶ್ರೀ ರಾಜರಾಜೇಶ್ವರಿಯ ರಾಗ ಭೋಗಾಲಯದ

ಸೌಂದಯಗೋಪುರವೆ ಪುಷ್ಪರೂಪವನಾಂತು
ಡಾಲಿಯಾ ಹೂವಿನಾಕಾರದಲಿ ಬಂದಿಂತು
ನನ್ನನಾಶೀರ್ವದಿಸುತಿಹುದು, ಶತದಲ ದಯದ
ರಸಹಸ್ತದಿಂ! ನಮೋ, ರಾಜರಾಜೇಶ್ವರಿಯೆ:
ನೀಂ ಚಿರಂತನೆಯಾದೊಡಂ ಮಕ್ಕಳೆಮಗಾಗಿ
ಕವಿಮನೋಗೋಚರತೆವೆತ್ತು ಸಹೃದಯರರಿಯೆ
ಮೂಡಿ ರಾಜಿಪೆ ನಶ್ವರಾವತಾರಿಣಿಯಾಗಿ!
ನಿನ್ನನೀ ರೂಪದಲಿ ಗುರುತಿಸುವವೋಲೆನಗೆ
ಪೂರ್ಣದೃಷ್ಟಿಯನಿತ್ತೆ; ಮೇಣ್ ಸವಿವವೋಲೆದೆಗೆ
ಯೋಗರಸನೆಯನಿತ್ತೆ: ಹೇ ಭವ್ಯ ಭವತಾರಿಣಿ,
ಪೂರ್ವಾದೊಡೇಂ? ವಿಭೂತಿವ್ಯಕ್ತೆ ನೀಂ! ನಿನಗೆ,
ಸರ್ವಾವತಾರ ಪುಣ್ಯಕ್ಷೇತ್ರೆ ಶಾರದೆಗೆ,
ಋಷಿಯ ದರ್ಶನ ನಮನವಿದೆಕೊ, ಹೂವವತಾರಿಣಿ!

೧೪-೯-೧೯೫೦

 
* ಮನೆಯ ಮುಂದೆ ಹೂವಿನ ತೋಟದಲ್ಲಿ ಭವ್ಯವಾಗಿ ಬೃಹತ್ತಾಗಿ ಅರಳಿ ರಂಜಿಸುತ್ತಿದ್ದ ಡಾಲಿಯಾ ಹೂವಿನಿಂದ ಉದ್ಭವಿಸಿದ ಕವನ.