ನೀನೆನ್ನ ನೆನೆಯುತಿಹೆಯೇನು ಈ ಹೊತ್ತಿನಲಿ
ನಾ ನಿನ್ನ ನೆನೆಯುತಿರುವಂತೆ, ಓ ಎದೆಯನ್ನ?
ನಾನರಿಯೆನಾದರೂ ಇಂತು ಚಿತ್ರಿಸಿ ನಿನ್ನ
ನಲಿಯುವೆನು ಮನದಿಂಪಿನಿಂದೆ: ಮಲೆನೆತ್ತಿ ಬಳಿ
ಕಲ್ಲರೆಯ ಮೇಲೆ ಮೊರೆಯುವ ತೊರೆಯ ಮುಕುರದಲಿ
ತಳತಳಿಸಿ ತಿಂಗಳಿರೆ ನುಣ್ಣನೆರಚಿದ ಜೊನ್ನ
ಸಿಂಗಾರದಲಿ ತೆರೆತೆರೆಗೆ ಹಬ್ಬಿ, ನೀನೆನ್ನ
ಕಂಡಲ್ಲಿ ಕೊರಳೆತ್ತೆ: ತುಂಬುಪೆರೆ ಬಾನಿನಲಿ
ಮುಗುಳು ನಗುತಿದೆ ವಿರಳ ನಕ್ಷತ್ರವೃತವಾಗಿ
ಬೆಣ್ಣೆಹತ್ತಿಯ ಹಿಂಜಿದುಣ್ಣೆ ಮುಗಿಲಿನ ಮಧ್ಯೆ,
ಬಿಳಿ ಸೀರೆಯುಟ್ಟೆನ್ನ ತೊಡವಿಟ್ಟ ಮೊಗದಂತೆ!
ತೀಡುವುದು ತಣ್ಣೆಲರು ಇರುಳ ತೊಟ್ಟಿಲ ತೂಗಿ;
ತುಂಬುವುದು ವಿಶ್ವವನು ನಿಶ್ಯಬ್ದತೆಯ ನಿದ್ದೆ;
ಮಲರುವುದು ಕನಸಾಗಿ ಬೇಟದಿನಿಯಳ ಚಿಂತೆ!

೧೬-೧೦-೧೯೩೫