‘ಕೆಂಪಡರುತಿದೆ ಮೂಡಣದ್ರಿಯ ನಭದ ಮೇರೆ;
ಪಗಲಾಣ್ಮನೈತರುವನಿನ್ನೇನು!’ ಎಂದು ಗಿಳಿ
ಮಡಿವಾಳ ಕಾಜಾಣ ಪಿಕಳಾರ ಪಿಕಗಳುಲಿ
ತನ್ನ ಹಗೆಯೈತರವನುಚ್ಚ ತಾನದಿ ಸಾರೆ,
ಬೆಚ್ಚಿ, ಬೇಗನೆ ಕಣಿವೆ ಮಲೆಗಳನಿಳಿಯುತೇರಿ
ಪಶ್ಚಿಮಾಚಲವ ಮರೆಗೊಳ್ವೆನೆಂದಿರದೋಡಿ
ಪೋಪಿರುಳು ದಾರಿಯೊಳಶೋಕವನವನು ನೋಡಿ,
ಸಾಂದ್ರತೆಗಳುಪುತವಿತುಕೊಳೆ ಆಶ್ರಯವ ಕೋರಿ;
ತೀವಿದಾ ಕತ್ತಲೆಗೆ ವನಲಕ್ಷ್ಮಿ ಬೇಸತ್ತು,
ಸಿರಿಗುರುಳಿರುಳ ಮುಡಿಯ ಕಿಡಿತಾರೆಗಳನಾಯ್ದು,
ರಕ್ತಾರುಣನ ಮಿಂಚೊಳದ್ದಿ, ಗೊಂಚಲ ನೆಯ್ದು,
ದೀವಟಿಗೆ ಹಿಡಿರೆಂದು ತರುಹಸ್ತಗಳಿಗಿತ್ತು
ಹೂವಿನ ಹಿಲಾಲುಗಳ ಹೊತ್ತಿಸಿರಲಲ್ಲಲ್ಲಿ
ಜ್ವಲಿಸುತಿವೆ ನೋಡದೊ ಅಶೋಕಹೂ ವೇಷದಲ್ಲಿ!

೨೪-೬-೧೯೩೫