ಪಥರಹಿತ ವನರಾಜಿ, ತಣ್ಣೆಳಲು, ತಂಗಾಳಿ:
ನಿಶ್ಯಬ್ದ ಸ್ವಾತಂತ್ರ್ಯ ಸಾಮ್ರಾಜ್ಯವಿದೆ ನೋಡು!
ಹಸುರಿನಲಿ ಬಿಸಿಲು ಸೆರೆ. ಬನಗತ್ತಲೆಯ ಬೀಡು
ಮೌನವಾರಿಧಿಯೊಂದು ಮಡುವಿನಾಳವ ತಾಳಿ
ಗಂಭೀರವಾಗಿಹುದು. ಸುಂದರ ಅಶೋಕವನ
ಧಾಮವಿದು ಹಿಂದಣ ತಪೋವನದ ಶಾಂತಿಯಂ
ಸೂಸುತಿದೆ ಮನಕೆ, ಮೇಣ್ ನಂದನ ಭ್ರಾಂತಿಯಂ.
ಭಾವದಲಿ ವನಲೀನವಾಗುತಿಹುದೆನ್ನ ಮನ!
ಆಪಾದಮಸ್ತಕಂ ರಕ್ತ ಸುಮ ಮಂಜರಿಯ
ಶೃಂಗಾರ ಸಂಭ್ರಮದ ಸಂತೋಷದಲಿ ನಿಂತು
ತರು ಸುಂದರಿಯರಿದೊ ಅಶೋಕವನದೈಸಿರಿಯ
ಮೆರೆದಿಹರ್! ತವಸಿಯಾಗಿಹನಿಲ್ಲಿ ಆ ಕಂತು!
ನಾದಗೈವುದುಮಿಲ್ಲಿ ಪಾತಕವೊ, ಹೇ ಬಂಧು,
ಸ್ವಾಚ್ಛಂದ್ಯ ಸೌಂದರ್ಯ ಶಾಂತಿಗಳಿಗಿದು ಸಿಂಧು!

೧೧-೫-೧೯೩೪* ಕುವೆಂಪು ಅವರ ಹಳ್ಳಿ ಕುಪ್ಪಳಿಯಿಂದ ಎದುರಿಗಿರುವ ಪರ್ವತಶ್ರೇಣಿಯ ಶಿಖರ ಸ್ಥಾನದಲ್ಲಿ, ಹಳ್ಳಿಯಿಂದ ಸುಮಾರು ಎರಡೂವರೆ ಮೈಲಿ ದೂರದಲ್ಲಿರುವ ಅಶೋಕ ವೃಕ್ಷಮಯವಾದ ವನಸ್ಥಲ.