ಗರುಡಗಹಿಯೆಂತಂತೆ ದೊರೆಗಳೆಂದರೆ ನನಗೆ!
ನಿನ್ನನಾದರೆ ನೆನೆಯೆ, ಪೆರ್ಮೆಯಿನೆದೆಯ ಶೋಕ,
ದಿವಿಜರ್ಗೆ ಪ್ರಿಯನೆ ಹೇ ಚಕ್ರವರ್ತಿ ಅಶೋಕ,
ಹರಿಯುವುದು ತಾಂ ಕಂಗಳಂಜಲಿಯಾಗಿ ನಿನಗೆ!
ಕಾಲನದಿ ಕೊಚ್ಚಿಬರೆ ಏನುಳಿಯುವುದು ಕೊನೆಗೆ?
ಹೇಳುವರು: ರವಿ ತಣ್ಣಗಾಗಿ ಮಡಿವುದು ಲೋಕ;
ಸಂಸ್ಕೃತಿವೆರಸಿ ನರನಳಿವನೆಂದು! ಅದೆ ನಾಕ?
ತುತ್ತತುದಿಗೆಲ್ಲ ಕತ್ತಲೆಯ ಮೌನದ ಮನೆಗೆ!-
ಇಲ್ಲ! ಆ ನಿರ್ವಾಣದಲ್ಲಿಯೂ ನಿನ್ನ ಎದೆ
ಮೇಣೊಲ್ಮೆ ಬಾಳದಿರೆ, ನಿರ್ವಾಣವದುವೆ ಹುಸಿ!
ಜಯವಿದ್ದು, ಬಲವಿದ್ದು, ಜಯಿಸೆ ದೇಶಗಳಿದ್ದು,
ಮೈತ್ರಿಯಿಂ ಮೃದುವಾಯ್ತು ತವ ವಜ್ರಶಕ್ತಿಗದೆ!
ರಾಜನಾಗಿದ್ದರೇಂ? ನೀಂ ದಿಟದಿ ರಾಜಋಷಿ!
ಯುದ್ಧರುಜೆಗೆಂದೆಂದಿಗೂ ನೀನರಸುಮದ್ದು!

೧೦-೯-೧೯೩೫