ಯಂತ್ರದ ದಯೆಯು ಮೃಗದ ನಿಷ್ಕರುಣೆಗಿಂತಲೂ
ಕ್ರೂರತರವಾದುದೈ! ಎದೆಯಿಲ್ಲದುಪಕಾರ,
ಕತ್ತಲೆಯ ಭಯದಂತೆ, ಭೀಷಣ, ನಿರಾಕಾರ!
ಕ್ರೌರ್ಯಮೇ ಲೇಸು ಔದಾಸೀನ್ಯಕಿಂತಲೂ!
ಆಸ್ಪತ್ರೆಯೇನು ಯಂತ್ರಾಲಯವೆ? ನೀವೇನು
ಯಂತ್ರಗಳೆ, ವೈದ್ಯರಿರ? ಬರುವ ರೋಗಿಗಳೆಲ್ಲ
ಮುರಿದ ಮೋಟಾರುಗಳೆ? ಅವರು ಜೀವಗಳಲ್ಲ?
ಅವರಿಗೆ ಹೃದಯವಿಲ್ಲ? – ವೈದ್ಯವರ್ಯನೆ, ನೀನು
ಪ್ರಿಯನಲ್ಲವೇನಯ್ಯ ಸೌಂದರ್ಯವತಿ ಸತಿಗೆ?
ಪಿತನಲ್ಲವೇನಯ್ಯ ಪ್ರೀತಿಯ ಕುಮಾರನಿಗೆ?
ಹೆತ್ತತಾಯಿಗೆ ಮುದ್ದು ಮಗನಲ್ಲವೇನಯ್ಯ?
ಮೂವರಿರಲೊಬ್ಬನೊಳೆ, ನಿನ್ನ ರೋಗಿಯ ಗತಿಗೆ,
ತಾಯ್ತಂದೆ ಸತಿಸುತರು ಕರೆವ ಬಿಸುಗಂಬನಿಗೆ,
ಮನಮರುಗಿ ನರನಾಗಿ ನರನನುಪಚರಿಸಯ್ಯ!

೧೨-೩-೧೯೩೪