ರಾಮಾಯಣದ ಮಹಾ ರತ್ನವೇದಿಯ ಮೇಲೆ,
ಮೂಲೆಯಲಿ, ನಿಂತಿರುವುದೊಂದಮೃತ ಶಿಲ್ಪಕೃತಿ,
ನಾಣ್ಚಿ, ಕಾಣದೆ ಸಂತೆಗಣ್ಗಳಿಗೆ: ಪೂರ್ಣಸತಿ,
ಊರ್ಮಿಳಾದೇವಿ, ಲಕ್ಷ್ಮಣ ಚಿರ ತಪಶ್ಯೀಲೆ!
ತ್ರೈಭುವನ ವಂದಿತ ಬೃಹನ್ಮೂರ್ತಿಗಳ ಛಾಯೆ
ಮುಚ್ಚಿ ಮರೆಸಿದೆ ನಿನ್ನನೆಲೆ ಸಾಧ್ವಿ: ಅದರಿಂದೆ
ಈ ಮಂದಿ ಹೂವು ಹಣ್ಗಳ ಪೂಜೆಯನು ಮುಂದೆ
ಕಣ್‌ಸೆಳೆವ ಜಸಕೀಯುತಿದೆ. ಕೀರ್ತಿಯಾ ಮಾಯೆ,
ಪೊನ್ನ ಪೊಳಪೊಲ್, ಸುಲಭವೇದ್ಯ; ಮಹಿಮಾ ಜ್ಯೋತಿ,
ಸಂಯಮದ ಸಂಪತ್ತಿನೊಲ್, ಸಂಸ್ಕೃತಿಗೆ ಮಾತ್ರ
ಗೋಚರಂ. – ಹನುಮಂತ ರಾಮ ಲಕ್ಷ್ಮಣ ಸೀತೆ
ಕೈಕೊಳಲಿ ಜನಪೂಜೆಯಂ; ನಿನಗೆ ಸಂಪ್ರೀತಿ
ನನ್ನದಿದೆಕೋ, ಜನನಿ: ನನ್ನ ಜೀವನ ನೇತ್ರ
ನಿನ್ನ ಬಾಳಂತಿರ್ಕೆ, ಹೇ ಗೋಚರಾತೀತೆ!

೧೩-೯-೧೯೩೬