ಬೇಕಿಹುದನಾಡಬೇಕೆಂಬಾಸೆಯಿಹುದೆನಗೆ.
ಬಯಕೆ ನುಡಿಗಳನರಸಿ ದುಡಿದುದನಿತೂ ವ್ಯರ್ಥ:
ನೆಯ್ದ ನುಡಿಗೂ ಅನುಭವಕೆ ಹೊಂದದನ್ಯಾರ್ಥ.
ನುಡಿಸಿರಿಯ ಕಬ್ಬಿಗನ ಹಾಡು ಮೌನವೆ ಕೊನೆಗೆ!
ವಾಕ್‌ಚಪಲೆ ಸಂಚಾರಿ; ಮೌನವೆ ಚಿರಸ್ಥಾಯಿ.
ರುಚಿಗಂತೆ ಸಾಹಿತ್ಯ! ಕಲೆಗಾಗಿ ಕಲೆಯಂತೆ!
ಬೆಳಕಿಗಲ್ಲದ ಎಣ್ಣೆ ಬತ್ತಿಗಳ ಕೃಷಿಯಂತೆ!
ದಿಟಬಯಕೆ ಬಾಯಿಲ್ಲದಿದೆ; ಹುಸಿಗೂ ಹೆಬ್ಬಾಯಿ!
ಮೊದಮೊದಲು ಹೃದಯಸುಖ ತೊದಲಾಗಿ ಹೊರಹೊಮ್ಮೆ
ಸಾಹಿತ್ಯ ಕಲೆಯೆಂದು, ಬರೆದೆನ್ನ ಕವಿಯೆಂದು,
ಮೆಚ್ಚಿದರು ಹೊಗಳಿ. ತರುವಾಯ ಹೆಸರಿನ ಹೆಮ್ಮೆ
‘ಕಲೆಗಾಗಿ ಕಲೆ’ ಎಂದುದದರ ನೈಜವ ಕೊಂದು.
ಕಲೆ ಕನ್ನಡಿಯ ನೆಳಲು; ಅನುಭವವೆ ಮೂಲ ಮುಖ.
ನೆಳಲ ಸಿಂಗಾರದಿಂದೇಂ ಲಾಭವೇನು ಸುಖ?

೨೭-೫-೧೯೩೫