ನಾಗರಿಕತೆಯನೆಲ್ಲ ತಳ್ಳಿ, ಹೊರೆಹೊಣೆಗಳಂ
ನೂಂಕಿ, ನಿರ್ಭಾರ ನಗ್ನಾತ್ಮರಾಗಿಯೆ ತೇಲಿ
ಬನ್ನಿ ಈ ಎಡೆಗೆ, ಹಕ್ಕಿಯ ಪುಕ್ಕವನು ಹೋಲಿ
ನೀರವ ನಿರುದ್ದೇಶದಿಂದೆ. ನಿಮ್ಮೆಣೆಗಳಂ
ಹೃದಯಮುಳ್ಳರ್ಗಳಂ ಕರೆತನ್ನಿ. ರಸದೃಷ್ಟಿ
ಹೊರತು ಮತ್ತಾವುದೂ ಬೇಡವಿಲ್ಲಿಗೆ ವಿದ್ಯೆ:-
ಸುಖವೆ ಸಲಿಲದ ರೂಪದಲಿ ಹರಿವ ಹೊಳೆಮಧ್ಯೆ
ದುಮ್ಮಿಕ್ಕಿ ನೀರಾಡಿದರೆ, ಮರ್ತ್ಯದೀ ಸೃಷ್ಟಿ
ನಾಕನಂದನವಾಗಿ, ದೇವತೆಗಳಾಗುವಿರಿ.
ವಿಸ್ಮೃತಿಯ ವೈತರಣಿ ತೀರ್ಥರಸದಲಿ ಕೊಚ್ಚಿ
ಹೋಹವೈ ಕೊರಗು ಕೊಂಕುಗಳೆಲ್ಲ; ಸಗ್ಗಸಿರಿ
ನಾಣ್ಚಿದಪುದೇಳುಸೀಳಿಗೆ ಕರುಬಿ. ತಿರೆ ಮೆಚ್ಚಿ
ಕಬ್ಬವುಟ್ಟಿಯ ಹಿಂಡುತಿಹುದಾಲಿಸಾ: ಜೇನು
ತುಂಬಿದಂಬುಧಿ ಬದುಕು; ದೋಣಿನಾಲಗೆ ನಾನು!

೨೧-೪-೧೯೩೬

 * ಶಿವಮೊಗ್ಗೆ ತೀರ್ಥಹಳ್ಳಿಯ ರಸ್ತೆಯಲ್ಲಿ. ಶಿವಮೊಗ್ಗೆಯಿಂದ ಸುಮಾರು ಎಂಟು ಮೈಲಿಗಳ ದೂರದಲ್ಲಿ ಸಕ್ಕರೆಬಯಲಿನ ಕಾನಿನಲ್ಲಿ ತುಂಗಾನದಿ ಏಳುಸೀಳಾಗಿ ಒಡೆದು ತಕ್ಕಷ್ಟು ದೂರ ಹರಿದು, ಪುನಃ ಒಂದಾಗುತ್ತದೆ. ಒಂದೊಂದು ಸೀಳೂ ಒಂದು ನದಿಯೆ-ಬರಿಯ ಕಾಲುವೆಯಲ್ಲ. ಸೀಳುಸೀಳಿನ ಮಧ್ಯೆ ಮಳಲು ಮರ ಗಿಡ ಬಂಡೆಗಳ ದ್ವೀಪ, ಸ್ನೇಹಿತರನ್ನು ಕೂಡಿ ಕೊಂಡು ವಿಹಾರ ಹೋಗಲು ಸೊಗಸಾದ ಸ್ಥಳ.