ಏಳುಸೀಳು-೨

ಈ ಹೊಳೆಯೊ, ಈ ಕಾನೊ, ಈ ಮಲೆಯೊ, ಈ ಬಾನೊ:
ಬಂಡೆದೋಳಪ್ಪುಗೆಗೆ ಮೊರೆದು ನೊರೆಮುತ್ತೆರಚಿ
ಕುಣಿದು ಬನಗಳನಲೆವ ಈ ಹೊಳೆಯೊ! ರವಿಯ ರುಚಿ
ರಂಜಿಸಿಹ ಚೈತ್ರಪಕ್ಷಿಗಳುಲಿಯ ಈ ಕಾನೊ!
ಮುದ್ದೆಮುದ್ದೆಯೆ ನಿದ್ದೆ ಕನಸುಗೊಂಡೇರಿಳಿದು
ಬಾನ್‌ಕರೆಗಲೆವ ಈ ಮಲೆಯೊ! ಸಾಂತತೆಗೆ ನೋಂತ
ಅನಂತತಾ ಪ್ರತಿಮೆಯೆನಲೀ ಗಿರಿವನ ದಿಗಂತ
ನೇಮಿನಿಷ್ಕೆಯ ಬಾನೊ! ಕವಿ, ಮೌನಮಿರ್ ತಿಳಿದು:
ಕಾಯುತಿದೆ ಮಲೆನಾಡು ತನ್ನ ಸರ್ವಸ್ವಮಂ
ಸೂರೆಗೊಳ್ಳುವ ವರ್ಣಶಿಲ್ಪಿಯಂ: ಕವಿಯಾಗಿ,
ರಸದರ್ಶಿಯಾಗಿ, ರೋರಿಕನಂತೆ ಋಷಿಯಾಗಿ
ಬಣ್ಣದಮೃತದ ಸೆರೆಗೆ ಕಣ್ಣೆದೆಯ ವಿಶ್ವಮಂ
ನೈವೇದ್ಯಗೈವಾತನಂ. ಮುದ್ದು ತೇಜಸ್ವಿ,
ನೀನಪ್ಪೆಯೇನ್ ಆ ವರ್ಣಶಿಲ್ಪದ ತಪಸ್ವಿ?

೧೫-೪-೧೯೪೧