ನೀನೊಬ್ಬನೆಯೆ ಅಲ್ಲ, ಸಾವಿನಳುಕಿಗೆ ಸಿಕ್ಕಿ,

ಮುದ್ದಾಡಲರ್ಹವಹ ಶಿಶುಗಳೇಳನು ಶಿಲೆಗೆ
ಬಡಿದು ಕೊಂದೆಂಟನೆಯದರ ಕೈಲಿ ಸೀಳ್ಗೊಲೆಗೆ
ತುತ್ತಾದವನು, ಕಂಸ: ನಮ್ಮೆದೆಗಳನು ಕುಕ್ಕಿ
ನೋಡಿದರೆ ಕಾಣುವುದು ಮಕ್ಕಳೆಲುಬಿನ ರಾಶಿ!
ಒಂದೊಂದು ಹೃದಯವೂ ಕಂಸಶಿಲೆ: ನೂರಾರು
ಹೊಂಗನಸಿನಾದರ್ಶಶಿಶುಗಳಾಯೆಡೆ ಚೂರು.
ಚೂರಾದರೇನ್? ತುದಿಗೆ ಗೆಲುವನಸುರದ್ವೇಷಿ
ಧ್ವಂಸಗೈದಾ ದೇವವೈರಿಯಂ. – ಬಾಲ್ಯದಿಂ
ಕಟ್ಟುವೆವು, ಕೆಡಹುವೆವು; ಹಳಿವೆವೊಲಿವೆವು ಮತ್ತೆ;
ಕಿಚ್ಚಿಟ್ಟೊಲುಮೆ ಬೂದಿಯಾಗೆ ಮತ್ತೊಂದೊಲುಮೆ
ಮೋಹಿಪುದು ಬಿಗಿದಪ್ಪಿ. ರುಚಿಯ ಚಾಪಲ್ಯದಿಂ
ತುಟಿಯಿಡುವೆವಾ ಕೊಳಕೆ ಈ ಕೊಳದ ನೀರ್ ಬತ್ತೆ. –
ಕೃಷ್ಣನೈತರ್ಪನ್ನೆಗಂ ಕಂಸನೆದೆ ಕುಲುಮೆ!

೮-೩-೧೯೩೮