. ಬೃಂದಾವನ

ಮಲೆನಾಡಿನೊಂದಿರುಳು ಮುಂಗಾರು ಮಳೆ ಹುಯ್ದು
ಬಿಟ್ಟಂದಡವಿಗೆಯ್ದಿದೆನು ಕವಿದು ದಟ್ಟೈಸಿ
ಕಗ್ಗಲ್ಲಿನಂತಿದ್ದ ಕತ್ತಲ್ಗಡಲನೀಸಿ.
ವನಮಧ್ಯೆ ಹಾಸುಹೊಕ್ಕಾಗಿ ಕಿಡಿಗಳ ನೆಯ್ದು
ಕಂಗೊಳಿಸಿತದ್ಭುತಂ ಮಿಣುಕು ಹುಳುಗಳ ಸೇನೆ,
ಕತ್ತಲೆಗೆ ಕಾಂತಿ ರೋಮಾಂಚವೆನೆ ಹೊಳೆಯುತ್ತೆ,
ಮೇಣಳಿದು ಕಣ್ಗೆ ಕಾಡಿಗೆ ಮೆತ್ತಿತೆನೆ ಮತ್ತೆ:
ಒರ್ಮೆ ತಿಮಿರಂ, ಜ್ಯೋತಿಯೊರ್ಮೆ, ಮಿಣುಕಿದೆ ನಾನೆ!
ನಿನ್ನೆಲ್ಲ ಸಿರಿಯುಮಾ ಮಿಂಚುಹುಳುವೊಂದಕ್ಕೆ
ದೊರೆಯಲ್ಲ, ವೈಯಾರಿಯಂತೆ, ಕನ್ನಂಬಾಡಿ,
ಚೆಲುವೆ ನೀನಪ್ಪೊಡೇನ್? ಇದು ಪಾಣ್ಬೆಯರ ಗಾಡಿ.
ಗರತಿ ಗೌರವವಿಲ್ಲದಿದು ರುಚಿ ಲಘುತ್ವಕ್ಕೆ.
ಕಲೆಯ ಪಾಂಗಿನಿತಿಲ್ಲವಿಲ್ಲಿ: ತಿರುಗತ್ತಕಡೆ;
ನೋಡುವಂ ನೀರು ನಿಂತಾ ಗಭೀರವನು; ನಡೆ!

೮-೯-೧೯೩೫

 

. ನೀರಾಕರ

ಪ್ರತಿನಿಧಿ ಮಹಾಪುರುಷನೆಂತು ದೇವರಿಗಂತು
ನಮಗಿದು ಪಯೋನಿಧಿಗೆ ಪ್ರತಿಮೆ, ವಿಸ್ತಾರದಲಿ,
ಸಂಭ್ರಮ ತರಂಗ ತಾಂಡವದ ಗಂಭೀರದಲಿ,
ಫೇನ ರಚನಾಸ್ಫಾಲನಾ ಶೈಲಿಯಲಿ! ನಿಂತು
ನೋಡಯ್ಯ, ಬೃಂದೆಯಾ ಶಿಶುರುಚಿ ಕಲೆಯ ಮರೆತು,
ಮೇಣಿದರ ಋಷಿಕಲಾ ಭವ್ಯತೆಯನೆದೆಮುಟ್ಟಿ
ಸವಿದು ಸಾಕ್ಷಾತ್ಕರಿಸಿ: ಹೋಹನ್ನೆಗಂ ದಿಟ್ಟಿ
ನಿನ್ನಾತ್ಮವನು ತೇಲಿಬಿಡು ನೀರಿನಲಿ ಬೆರೆತು!
ಭ್ರಮಿಸುತಿರೆ ಮಾಯಾ ಜಗತ್ತಿನಲಿ ದೇವನಂ
ಮರೆವಂತೆ, ತಿರುಗುತಿರಲಲ್ಲಿ ಬೃಂದಾವನಂ
ಮರೆಯಿಸಿತು ನಿನ್ನನೆಲೆ ಕೃಷ್ಣನೀರಾಕರವೆ,
ಕಿರಿದೊಂದಿನಿತು ಪೊಳ್ತು: ನಿಮ್ನತೆಗಿಳಿಯೆ ಮರೆವೆ;
ಏರಲುನ್ನತಿಗರಿವೆ! ಬೃಂದೆಗಿಳಿದಂದಾನು
ಮರೆಯದೊಲೆ ನಿನ್ನಿರವನೆದೆಗುಲಿಯುತಿರು ನೀನು!

೮-೯-೧೯೩೫

 

. ನೀರ್ಬಾಗಿಲೆಡೆ

ನೋಡಿದಷ್ಟೂ ಸಾಲದಿದೆ. ನೋಡೆ, ತನ್ನಂತೆ
ನನ್ನನೂ ಮುತ್ತುಮುತ್ತಾಗಿ, ನೊರೆನೊರೆಯಾಗಿ,
ತೂಗಿ, ಬಂಡೆಗೆ ಬೀಸಿ, ಬಡಿದವ್ವಳಿಸಿ, ಕೂಗಿ,
ಭೋರ್ಗರೆದು, ದುಮುಕಿ, ಮುಂದಕೆ ನುಗ್ಗುತಿದೆ (ಚಿಂತೆ
ತತ್ತರಿಸುವಂತೆ) ಕಾವೇರಿ, ಭೀಕರ ಕಾಳಿ
ತಾನಾಗಿ! ಮೇಲಲ್ಲಿ ಸೇರಿದ ತಪಶ್ಯಕ್ತಿ
ಕರ್ಮಮಯವಾಗಿರುವುದಿಲ್ಲಿ. ತಪದಿಂ ವ್ಯಕ್ತಿ
ಗಳಿಸಿ ಸತ್ವವನಿಳಿಯೆ ಕಾರ್ಯಕೆ, ರಜಶ್ಯಾಲಿ
ತಾನಾಗಿ, ತಡೆವರಾರಾತನಂ? ಕಗ್ಗಲ್ಲು
ಕೂಡ ಕೆಲಸಾರುವುದು ಸೆಡೆತು ದಾರಿಯನಿತ್ತು;
ಮುರಿವುದಾತನ ವೇಗಕೆಡರುವಾಯಿಯ ಹಲ್ಲು,
ಬಿಸಿಗೈಕಿಲಂತೆ. ಮುಟ್ಟಿದರೆ ಜಡವೂ ಮುತ್ತು
ಮುತ್ತಾಗಿ ರಾರಾಜಿಪುದು. ಮೇಣವನ ಸೊಲ್ಲು
ನಿತ್ಯವಹುದದಕಿಲ್ಲದೆಯೆ ಮುದಿತನಂ ಮಿತ್ತು!

೮-೯-೧೯೩೫

 

. ಕಟ್ಟೆ

ಭವ್ಯವೈಸಲೆ ಮಾನವನ ಮನಂ ಮೇಣ್ ಬಲಂ,
ಸ್ವಚ್ಛಂದ ವಾಹಿನಿಯನುರದೆ ಬಂಧಿಸಿ ಕಟ್ಟಿ,
ಬಾಯ್ಕೇಳುವಂತೆಸಗಿ! “ತೆಂಗುಗಿಂಗನು ಕುಟ್ಟಿ,
ಪೂಜೆಗೀಜೆಯ ಮಾಡಿ, ಬೇಡೆ, ಬಂಜರು ನೆಲಂ
ಫಲವತ್ತಹುದೆ? ಸೃಷ್ಟಿ ನಿಯಮದೊಳಗುಟ್ಟನರಿ,
ನಖಮುಖಾರಕ್ತಮಯೀ ಪ್ರಕೃತಿಮಾರಿಯ ಜುಟ್ಟು
ಹಿಡಿದಡಸಿ ನಿನ್ನೆದೆಯ ಬಯಕೆಯ ನೊಗಕೆ ಕಟ್ಟು!”
ಎಂಬ ಮಾನವ ಮತಿಗೆ ಎತ್ತಣರಿ? ಯಾರು ಸರಿ
ಕೋಟಿ ದೇವರ್ಕಳಲಿ? ಬುದ್ಧಿಯ ತಪೋವಹ್ನಿ
ಮೈವೆತ್ತವೋಲಿರುವ ಮನುಜಸಾಹಸದೇವಿ,
ಧನ್ಯೆ, ಓ ವಿಜ್ಞಾನವಿದ್ಯೆ! – ನಿನ್ನೀ ಕಾಣ್ಕೆ,
ಯಂತ್ರರ್ಷಿ, ಕನ್ನಡ ಸಿರಿಯ ಶ್ರೇಯಸಿಯ ಪೂಣ್ಕೆ!
ಬರಗಾಲದೆದೆಗೆ ಗುರಿಯಿಟ್ಟು ಕಟ್ಟೆಯ ಕೋವಿ
ಕಟ್ಟಿದಂತಿದೆ! ಪೆರ್ಮೆಯಿಂ ನೋಳ್ಪಮೈತನ್ನಿ!

೮-೯-೧೯೩೫

 

. ಪ್ರೇಕ್ಷಕನೊಬ್ಬನಿಗೆ

ನೀನು, ಒಬ್ಬನೆ ನಿಂತು ನಭದಿ ತಾರೆಯ ರಾಶಿ
ರಂಜಿಸುವ ರಜನಿಯಲಿ ಮೈಮರೆಯದಿಹ ನೀನು,
ಹೊತ್ತಾರೆ ಹಸುರು ಹಸಲೆಯಲಿ ಹಿಮಮಣಿ ತಾನು
ಮಿರುಗುತಿರೆ ಕಂಡು ಮಿರುಗದ ನೀನು, ಮಳೆಸೂಸಿ
ಮುಂಗಾರು ಬಿರುಗಾಳಿ ಸಿಡಿಲು ಮಿಂಚನು ಬೀಸಿ
ನುಗ್ಗಿಬರೆ ನಿರ್ಲಕ್ಷಿಸಿದ ಜಡನೆಲವೊ ನೀನು,
ಸೌಂದರ್ಯದಾರಾಧನೆಗೆ ಬಂದಿರುವೆಯೇನು?
ಅಂತರಿತರದು ಆತ್ಮವಂಚನೆ, ರಸಿಕವೇಷಿ?
ಕಲೆಯೊಲ್ಮೆಗಲ್ಲ, ಪೇಟೆಯ ಬೇಸರನು ಕಳೆಯೆ
ಬಂದಿರುವೆಯಿಲ್ಲಿಗಿಂದ್ರಿಯ ರುಚಿಗೆ: ನಾ ಬಲ್ಲೆ,
ನೀನೊಬ್ಬನೆಯೆ ಇಲ್ಲಿ ಬಹುಕಾಲವಿರಲಾರೆ,
ನಿನ್ನಂಥ ಇತರರಿಲ್ಲಿಗೆ ಬಾರದಿರೆ! – ಕಲೆಯೆ?
ಕುಣಿವ ಬಣ್ಣದ ಮೊಹರಮಿದು! ನಿನ್ನ ಎದೆಗೆಲ್ಲೆ
ಕಣ್ಣು: ನಿನ್ನಾಸೆ ಕಲೆಯಲ್ಲವೊ, ಕಲೆಯ ಜಾರೆ!

೧೦-೯-೧೯೩೫

 

. ದಾರಿಯ ಹಳ್ಳಿ

ಇದು ಇರಲಿ! ಅದನು ನೆನೆ: ದಾರಿಯಲಿ ಮಂದೆಕುರಿ
ಒಂದರಡಿಯೊಂದು ತಲೆ ತೂರಿ ನಿಲುವಂತಲ್ಲಿ
ಮುರುಕುಮನೆ ಹಿಂಡು ಕಿಕ್ಕಿರಿದಿದ್ದ ಬಡಹಳ್ಳಿ,
ಅದನು ನೆನೆ! ಮೈಯೆಲ್ಲ ಕಜ್ಜಿಯಿರೆ ಮೊಗದ ಸಿರಿ
ಸೊಗಸುವುದೆ? ಸಿಂಗರಿಸೆ ಬಣ್ಣದ ಹುಡಿಯನೆರಚಿ
ಕೆನ್ನೆಗೆ, ತುಟಿಗೆ ಕೆಂಪುರಂಗನು ಬಳಿದುಹಚ್ಚಿ,
ಮುಡಿಗೆ ಹೂ ಮುಡಿಸಿ, ಸುಕ್ಕಿನ ತೆರೆಗಳನು ಮುಚ್ಚಿ,
ಬಂದೀತೆ ನೈಜಸೌಂದರ್ಯದ ಸಹಜ ಸುರುಚಿ?
ಸರಸ ಸಲ್ಲಾಪದಿಂ ಬೃಂದಾವನವನಲೆವ
ಓ ಧನಿಯೆ, ನಿನ್ನ ಮನದಿಂ ಮರೆಯಬಿಡೆನಯ್ಯ
ಆ ಮುರುಕು ಬಡಹಳ್ಳಿಯಂ. ಅದರ ಪೊಲೆ ಕೀವು
ನಿನ್ನ ಸಂತೋಷದೊಡಲಿನಲಿ! ನೀನಿದೊ ಕಳೆವ
ಹೊತ್ತಿನಲಿ ಹನಿಹನಿಯುಮಾ ಬಡವರೊಣಮೆಯ್ಯ
ಬಸಿವ ಪಸಿನೆತ್ತರೆನೆ, ನೀಂ ನಾಡಿನೆದೆಬಾವು!

೨೪-೯-೧೯೩೫